ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹೃದಯಗಳಲ್ಲಿರುವ ಪ್ರೀತಿಯ ಆಜ್ಞೆ

ಹೃದಯಗಳಲ್ಲಿರುವ ಪ್ರೀತಿಯ ಆಜ್ಞೆ

ಹೃದಯಗಳಲ್ಲಿರುವ ಪ್ರೀತಿಯ ಆಜ್ಞೆ

“ನನ್ನ ಧರ್ಮೋಪದೇಶವನ್ನು ಅವರ ಅಂತರಂಗದಲ್ಲಿ ಇಡುವೆನು, ಅವರ ಹೃದಯದೊಳಗೆ ಅದನ್ನು ಬರೆಯುವೆನು.”​—⁠ಯೆರೆಮೀಯ 31:⁠33.

ಹಿಂದಿನ ಎರಡು ಲೇಖನಗಳಲ್ಲಿ, ಮೋಶೆಯು ಸೀನಾಯಿಬೆಟ್ಟದಿಂದ ಕೆಳಗಿಳಿದು ಬಂದಾಗ ಅವನ ಮುಖವು ಯೆಹೋವನ ಮಹಿಮೆಯನ್ನು ಪ್ರತಿಬಿಂಬಿಸುವ ಕಿರಣಗಳನ್ನು ಹೊರಸೂಸುತ್ತಿದ್ದವೆಂದು ನಾವು ಕಲಿತೆವು. ಮೋಶೆಯು ಧರಿಸಿದಂಥ ಮುಸುಕಿನ ಕುರಿತಾಗಿಯೂ ಚರ್ಚಿಸಿದೆವು. ಈಗ ನಾವು, ಇಂದು ಕ್ರೈಸ್ತರಿಗೆ ಮಹತ್ವಪೂರ್ಣವಾಗಿರುವ ಒಂದು ಸಂಬಂಧಿತ ವಿಷಯವನ್ನು ಪರಿಗಣಿಸೋಣ.

2 ಮೋಶೆಯು ಬೆಟ್ಟದ ಮೇಲಿದ್ದಾಗ, ಅವನು ಯೆಹೋವನಿಂದ ಅಪ್ಪಣೆಗಳನ್ನು ಪಡೆದನು. ಸೀನಾಯಿಬೆಟ್ಟದ ಮುಂದೆ ಸೇರಿಬಂದಿದ್ದ ಇಸ್ರಾಯೇಲ್ಯರು, ದೇವರು ದಂಗುಬಡಿಸುವಂಥ ರೀತಿಯಲ್ಲಿ ತನ್ನನ್ನು ತೋರ್ಪಡಿಸಿಕೊಂಡದ್ದನ್ನು ಕಣ್ಣಾರೆ ನೋಡಿದರು. “ಗುಡುಗು ಮಿಂಚೂ ಕಾರ್ಮುಗಿಲೂ ತುತೂರಿಯ ಮಹಾಧ್ವನಿಯೂ ಉಂಟಾಗಲು ಪಾಳೆಯದಲ್ಲಿದ್ದ ಜನರೆಲ್ಲರೂ ನಡುಗಿದರು. . . . ಯೆಹೋವನು ಬೆಂಕಿಯೊಳಗೆ ಸೀನಾಯಿಬೆಟ್ಟದ ಮೇಲಕ್ಕೆ ಇಳಿದುಬಂದದರಿಂದ ಆ ಬೆಟ್ಟವೆಲ್ಲಾ ಹೊಗೆಯಿಂದ ಆವರಿಸಿಕೊಂಡಿತು. ಆ ಹೊಗೆ ಆವಿಗೆಯ ಹೊಗೆಯಂತೆ ಏರಿತು; ಅದಲ್ಲದೆ ಬೆಟ್ಟವೆಲ್ಲಾ ಬಹಳವಾಗಿ ಕಂಪಿಸಿತು.”​—⁠ವಿಮೋಚನಕಾಂಡ 19:16-18.

3 ಯೆಹೋವನು ಜನರೊಂದಿಗೆ ಒಬ್ಬ ದೇವದೂತನ ಮುಖಾಂತರ ಮಾತಾಡಿ, ದಶಾಜ್ಞೆಗಳು ಎಂದು ಪ್ರಸಿದ್ಧವಾಗಿಬಿಟ್ಟಿರುವ ಆಜ್ಞೆಗಳನ್ನು ಕೊಟ್ಟನು. (ವಿಮೋಚನಕಾಂಡ 20:​1-17) ಹೀಗಿರುವುದರಿಂದ ಆ ಆಜ್ಞೆಗಳು ಸರ್ವಶಕ್ತನಿಂದ ಬಂದವುಗಳು ಎಂಬ ವಿಷಯದಲ್ಲಿ ಯಾವುದೇ ಸಂದೇಹವಿರಲು ಸಾಧ್ಯವಿರಲಿಲ್ಲ. ಯೆಹೋವನು ಆ ಆಜ್ಞೆಗಳನ್ನು ಕಲ್ಲಿನ ಹಲಗೆಗಳ ಮೇಲೆ ಬರೆದನು. ಈ ಹಲಗೆಗಳನ್ನೇ ತದನಂತರ ಮೋಶೆಯು, ಇಸ್ರಾಯೇಲ್ಯರು ಚಿನ್ನದ ಬಸವನನ್ನು ಆರಾಧಿಸುತ್ತಿರುವುದನ್ನು ನೋಡಿ ಚೂರುಚೂರುಗೊಳಿಸಿದನು. ಆದುದರಿಂದ ಯೆಹೋವನು ಪುನಃ ಕಲ್ಲಿನ ಹಲಗೆಗಳ ಮೇಲೆ ಆ ಆಜ್ಞೆಗಳನ್ನು ಬರೆದನು. ಈ ಸಲ ಮೋಶೆ ಅವುಗಳನ್ನು ಹೊತ್ತುಕೊಂಡು ಕೆಳಗಿಳಿದು ಬರುತ್ತಿದ್ದಾಗ ಅವನ ಮುಖವು ಪ್ರಕಾಶಮಾನವಾಗಿತ್ತು, ಅಂದರೆ ಕಿರಣಗಳನ್ನು ಹೊರಸೂಸುತ್ತಿತ್ತು. ಆ ಆಜ್ಞೆಗಳು ತುಂಬ ಮಹತ್ವಪೂರ್ಣವಾಗಿವೆ ಎಂದು ಆ ಸಮಯದಷ್ಟಕ್ಕೆ ಎಲ್ಲರೂ ಗ್ರಹಿಸಿದ್ದರು.​—⁠ವಿಮೋಚನಕಾಂಡ 32:​15-19; 34:​1, 4, 29, 30.

4 ದಶಾಜ್ಞೆಗಳು ಬರೆಯಲ್ಪಟ್ಟಿದ್ದ ಆ ಎರಡು ಹಲಗೆಗಳನ್ನು ಒಡಂಬಡಿಕೆಯ ಮಂಜೂಷದೊಳಗೆ ಇಡಲಾಗಿತ್ತು, ಮತ್ತು ಈ ಮಂಜೂಷವನ್ನು ದೇವದರ್ಶನಗುಡಾರದಲ್ಲಿದ್ದ ಹಾಗೂ ತದನಂತರ ಆಲಯದಲ್ಲಿದ್ದ ಮಹಾಪವಿತ್ರಸ್ಥಾನದಲ್ಲಿ ಇರಿಸಲಾಗಿತ್ತು. ಆ ಕಲ್ಲಿನ ಹಲಗೆಗಳಲ್ಲಿದ್ದ ಆಜ್ಞೆಗಳು, ಮೋಶೆಯ ಧರ್ಮಶಾಸ್ತ್ರ ಒಡಂಬಡಿಕೆಯ ಮುಖ್ಯ ಮೂಲತತ್ತ್ವಗಳನ್ನು ತಿಳಿಸಿದವು, ಮತ್ತು ಇಸ್ರಾಯೇಲ್‌ ಜನಾಂಗವನ್ನು ದೇವರು ಆಳುವ ವಿಧಕ್ಕಾಗಿ ಆಧಾರವನ್ನು ಒದಗಿಸಿತು. ಯೆಹೋವನು ಒಂದು ನಿರ್ದಿಷ್ಟ ಜನಾಂಗದೊಂದಿಗೆ, ಆಯ್ಕೆಮಾಡಲ್ಪಟ್ಟ ಜನರೊಂದಿಗೆ ವ್ಯವಹರಿಸುತ್ತಿದ್ದನು ಎಂಬುದಕ್ಕೆ ಆ ಆಜ್ಞೆಗಳು ಸಾಕ್ಷ್ಯವಾಗಿದ್ದವು.

5 ಆ ಆಜ್ಞೆಗಳು ಯೆಹೋವನ ಕುರಿತಾಗಿ ಮತ್ತು ವಿಶೇಷವಾಗಿ ಆತನಿಗೆ ತನ್ನ ಜನರೆಡೆಗಿರುವ ಪ್ರೀತಿಯ ಕುರಿತಾಗಿ ಬಹಳಷ್ಟನ್ನು ಪ್ರಕಟಪಡಿಸಿದವು. ಅವುಗಳಿಗೆ ವಿಧೇಯರಾದವರಿಗೆ ಅದೆಂಥ ಅಮೂಲ್ಯ ವರದಾನವಾಗಿ ಪರಿಣಮಿಸಿತು! ಒಬ್ಬ ವಿದ್ವಾಂಸನು ಬರೆದುದು: “ಈ ಹಿಂದೆ ಅಥವಾ ಅಂದಿನಿಂದ ಮನುಷ್ಯನು ರಚಿಸಿರುವ ಯಾವುದೇ ನೈತಿಕ ಪದ್ಧತಿಯು . . . ದೇವರ ಆ ಹತ್ತು ಶಾಸನಗಳಿಗೆ ಸಮಾನವಾಗುವ ಅಥವಾ ಅವುಗಳನ್ನು ಮೀರಿಸುವ ಮಾತಂತೂ ಬಿಡಿ, ಅವುಗಳ ಹತ್ತಿರವೂ ಬರಲಾರದು.” ಮೋಶೆಯ ಆ ಇಡೀ ಧರ್ಮಶಾಸ್ತ್ರದ ಕುರಿತಾಗಿ ಯೆಹೋವನು ಹೇಳಿದ್ದು: “ನೀವು ನನ್ನ ಮಾತನ್ನು ಶ್ರದ್ಧೆಯಿಂದ ಕೇಳಿ ನಾನು ಮಾಡುವ ನಿಬಂಧನೆಯನ್ನು [“ಒಡಂಬಡಿಕೆಯನ್ನು,” NIBV] ಅನುಸರಿಸಿ ನಡೆದರೆ ನೀವು ಎಲ್ಲಾ ಜನಾಂಗಗಳಲ್ಲಿ ನನಗೆ ಸ್ವಕೀಯಜನರಾಗುವಿರಿ; ಸಮಸ್ತ ಭೂಮಿಯೂ ನನ್ನದಷ್ಟೆ. ನೀವು ನನಗೆ ಯಾಜಕರಾಜ್ಯವೂ ಪರಿಶುದ್ಧಜನವೂ ಆಗಿರುವಿರಿ.”​—⁠ವಿಮೋಚನಕಾಂಡ 19:5, 6.

ಹೃದಯದಲ್ಲಿ ಬರೆಯಲ್ಪಟ್ಟಿರುವ ಆಜ್ಞೆ

6 ಹೌದು, ಆ ದೈವಿಕ ಆಜ್ಞೆಗಳಿಗೆ ತುಂಬ ಮೌಲ್ಯವಿತ್ತು. ಅಭಿಷಿಕ್ತ ಕ್ರೈಸ್ತರ ಬಳಿಯಾದರೊ, ಕಲ್ಲಿನ ಮೇಲೆ ಬರೆಯಲ್ಪಟ್ಟಿರುವ ಆಜ್ಞೆಗಳಿಗಿಂತಲೂ ಎಷ್ಟೋ ಹೆಚ್ಚು ಮೌಲ್ಯವುಳ್ಳದ್ದೇನೊ ಇದೆಯೆಂದು ನಿಮಗೆ ತಿಳಿದಿದೆಯೊ? ಇಸ್ರಾಯೇಲ್‌ ಜನಾಂಗದೊಂದಿಗೆ ಮಾಡಲ್ಪಟ್ಟ ಧರ್ಮಶಾಸ್ತ್ರ ಒಡಂಬಡಿಕೆಗಿಂತ ಭಿನ್ನವಾಗಿರಲಿರುವ ಒಂದು ಹೊಸ ಒಡಂಬಡಿಕೆಯನ್ನು ರಚಿಸುವುದರ ಕುರಿತಾಗಿ ಯೆಹೋವನು ಮುಂತಿಳಿಸಿದ್ದು: “ನನ್ನ ಧರ್ಮೋಪದೇಶವನ್ನು ಅವರ ಅಂತರಂಗದಲ್ಲಿ ಇಡುವೆನು, ಅವರ ಹೃದಯದೊಳಗೆ ಅದನ್ನು ಬರೆಯುವೆನು.” (ಯೆರೆಮೀಯ 31:31-34) ಹೊಸ ಒಡಂಬಡಿಕೆಯ ಮದ್ಯಸ್ಥನಾಗಿರುವ ಯೇಸು, ತನ್ನ ಹಿಂಬಾಲಕರಿಗೆ ಒಂದು ನಿಯಮಾವಳಿಯನ್ನು ವೈಯಕ್ತಿಕವಾಗಿ ಕೊಡಲಿಲ್ಲ. ತಾನು ಹೇಳಿದ ಮತ್ತು ಮಾಡಿದ ವಿಷಯಗಳ ಮೂಲಕ ಅವನು ಯೆಹೋವನ ಆಜ್ಞೆಗಳನ್ನು ತನ್ನ ಶಿಷ್ಯರ ಹೃದಮನಗಳಲ್ಲಿ ನಾಟಿಸಿದನು.

7 ಈ ಆಜ್ಞೆಗಳನ್ನು “ಕ್ರಿಸ್ತನ ಧರ್ಮಶಾಸ್ತ್ರ” ಅಥವಾ ನಿಯಮ ಎಂದು ಕರೆಯಲಾಗಿದೆ. ಇದನ್ನು ಮೊದಲಾಗಿ, ಯಾಕೋಬನ ವಂಶಸ್ಥರಾದ ನೈಸರ್ಗಿಕ ಇಸ್ರಾಯೇಲ್‌ ಜನಾಂಗಕ್ಕಲ್ಲ ಬದಲಾಗಿ, ‘ದೇವರ ಇಸ್ರಾಯೇಲ್‌’ ಆಗಿರುವ ಒಂದು ಆಧ್ಯಾತ್ಮಿಕ ಜನಾಂಗಕ್ಕೆ ಕೊಡಲಾಯಿತು. (ಗಲಾತ್ಯ 6:​2, 16, NIBV; ರೋಮಾಪುರ 2: 28, 29) ದೇವರ ಇಸ್ರಾಯೇಲ್‌ ಆತ್ಮಾಭಿಷಿಕ್ತ ಕ್ರೈಸ್ತರಿಂದ ರಚಿತವಾಗಿದೆ. ಕಾಲಾನಂತರ, ಎಲ್ಲ ಜನಾಂಗಗಳಿಂದ ಬಂದ ‘ಮಹಾ ಸಮೂಹ’ದವರು ಅವರನ್ನು ಜೊತೆಗೂಡಿದರು, ಮತ್ತು ಇವರು ಸಹ ಯೆಹೋವನನ್ನು ಆರಾಧಿಸಲು ಪ್ರಯತ್ನಿಸುತ್ತಾರೆ. (ಪ್ರಕಟನೆ 7:​9, 10; ಜೆಕರ್ಯ 8:23) ‘ಒಬ್ಬನೇ ಕುರುಬನ’ ಕೆಳಗಿರುವ ‘ಒಂದೇ ಹಿಂಡಾಗಿ’ ಈ ಎರಡೂ ಗುಂಪುಗಳವರು “ಕ್ರಿಸ್ತನ ಧರ್ಮಶಾಸ್ತ್ರ”ವನ್ನು ಅಂಗೀಕರಿಸುತ್ತಾ, ಅವರು ಮಾಡುವ ಎಲ್ಲ ಕೆಲಸವನ್ನು ಅದು ನಿಯಂತ್ರಿಸುವಂತೆ ಅನುಮತಿಸುತ್ತಾರೆ.​—⁠ಯೋಹಾನ 10:⁠16.

8 ಹುಟ್ಟಿನಿಂದಲೇ ಮೋಶೆಯ ಧರ್ಮಶಾಸ್ತ್ರಕ್ಕೆ ಒಳಗಾಗುತ್ತಿದ್ದ ನೈಸರ್ಗಿಕ ಇಸ್ರಾಯೇಲ್ಯರಂತಿರದೆ, ಕ್ರೈಸ್ತರು ತಮ್ಮ ಸ್ವಂತ ಆಯ್ಕೆಯಿಂದ ಕ್ರಿಸ್ತನ ಧರ್ಮಶಾಸ್ತ್ರದ ಕೆಳಗೆ ಉಳಿಯುತ್ತಾರೆ. ಇದಕ್ಕೆ ಒಬ್ಬನ ಜಾತಿ ಮತ್ತು ಹುಟ್ಟಿರುವ ಸ್ಥಳ ಯಾವುದೇ ಸಂಬಂಧವನ್ನು ಹೊಂದಿರುವುದಿಲ್ಲ. ಅವರು ಯೆಹೋವನ ಮತ್ತು ಆತನ ಮಾರ್ಗಗಳ ಕುರಿತಾಗಿ ಕಲಿಯುತ್ತಾರೆ ಮತ್ತು ಆತನ ಚಿತ್ತವನ್ನು ಮಾಡಲು ಹಂಬಲಿಸುತ್ತಾರೆ. ಧರ್ಮಶಾಸ್ತ್ರವು ಅವರ “ಅಂತರಂಗದಲ್ಲಿ,” ಅಂದರೆ “ಅವರ ಹೃದಯದಲ್ಲಿ” ಬರೆಯಲ್ಪಟ್ಟಿದೆಯೊ ಎಂಬಂತಿರುವುದರಿಂದ, ದೇವರು ತನಗೆ ಅವಿಧೇಯರಾಗುವವರನ್ನು ಶಿಕ್ಷಿಸಬಲ್ಲನು ಇಲ್ಲವೆ ಕೇವಲ ಒಂದು ಹಂಗನ್ನು ಪೂರೈಸಬೇಕೆಂಬ ಕಾರಣಕ್ಕಾಗಿ ಮಾತ್ರ ಅವರು ಆತನಿಗೆ ವಿಧೇಯರಾಗುವುದಿಲ್ಲ. ಅವರು ತೋರಿಸುವ ವಿಧೇಯತೆಯು ಹೆಚ್ಚು ಗಹನವಾದ ಮತ್ತು ಎಷ್ಟೋ ಹೆಚ್ಚು ಶಕ್ತಿಯುತವಾದ ಒಂದು ವಿಷಯದಲ್ಲಿ ಬೇರೂರಿರುತ್ತದೆ. ಬೇರೆ ಕುರಿಗಳವರು ಸಹ, ಧರ್ಮಶಾಸ್ತ್ರವು ಅವರ ಹೃದಯಗಳಲ್ಲಿರುವುದರಿಂದ ಅದೇ ರೀತಿಯಲ್ಲಿ ವಿಧೇಯತೆಯನ್ನು ತೋರಿಸುತ್ತಾರೆ.

ಪ್ರೀತಿಯ ಮೇಲಾಧಾರಿತವಾದ ಆಜ್ಞೆಗಳು

9 ಯೆಹೋವನ ಎಲ್ಲ ಆಜ್ಞೆಗಳು ಮತ್ತು ಕಟ್ಟಳೆಗಳ ಸಾರವನ್ನು, ಪ್ರೀತಿ ಎಂಬ ಒಂದೇ ಪದದಲ್ಲಿ ಸಾರಾಂಶಿಸಬಹುದು. ಇದು ಯಾವಾಗಲೂ ಶುದ್ಧಾರಾಧನೆಯ ಭಾಗವಾಗಿತ್ತು ಮತ್ತು ಮುಂದಕ್ಕೂ ಆಗಿರುವುದು. ಧರ್ಮಶಾಸ್ತ್ರದಲ್ಲಿ ಮುಖ್ಯವಾದ ಆಜ್ಞೆ ಯಾವುದೆಂದು ಕೇಳಲ್ಪಟ್ಟಾಗ ಯೇಸು, “ನಿನ್ನ ದೇವರಾಗಿರುವ ಕರ್ತನನ್ನು [“ಯೆಹೋವನನ್ನು,” NW] ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ನಿನ್ನ ಪೂರ್ಣಬುದ್ಧಿಯಿಂದಲೂ ಪ್ರೀತಿಸಬೇಕು” ಎಂದು ಉತ್ತರಿಸಿದನು. ಎರಡನೆಯದ್ದು, “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು” ಎಂದಾಗಿತ್ತು. ಬಳಿಕ ಅವನು ಹೇಳಿದ್ದು: “ಈ ಎರಡು ಆಜ್ಞೆಗಳು ಎಲ್ಲಾ ಧರ್ಮಶಾಸ್ತ್ರಕ್ಕೂ ಪ್ರವಾದನಗ್ರಂಥಕ್ಕೂ ಆಧಾರವಾಗಿವೆ.” (ಮತ್ತಾಯ 22:35-40) ಹೀಗೆ, ದಶಾಜ್ಞೆಗಳಿದ್ದ ಧರ್ಮಶಾಸ್ತ್ರವು ಮಾತ್ರವಲ್ಲ, ಇಡೀ ಹೀಬ್ರು ಶಾಸ್ತ್ರವಚನಗಳು ಪ್ರೀತಿಯ ಮೇಲಾಧಾರಿತವಾಗಿವೆ ಎಂದು ಯೇಸು ಸೂಚಿಸಿದನು.

10 ಕ್ರೈಸ್ತರ ಹೃದಯಗಳಲ್ಲಿರುವ ಆಜ್ಞೆಗೂ, ದೇವರ ಹಾಗೂ ನೆರೆಯವನ ಮೇಲಣ ಪ್ರೀತಿಯೇ ಆಧಾರವಾಗಿದೆಯೊ? ಖಂಡಿತವಾಗಿಯೂ ಹೌದು! ಕ್ರಿಸ್ತನ ಧರ್ಮಶಾಸ್ತ್ರದಲ್ಲಿ, ದೇವರ ಮೇಲಣ ಹೃತ್ಪೂರ್ವಕವಾದ ಪ್ರೀತಿ ಮತ್ತು ಒಂದು ಹೊಸ ಆಜ್ಞೆಯೂ ಸೇರಿರುತ್ತದೆ. ಅದೇನೆಂದರೆ ಕ್ರೈಸ್ತರಲ್ಲಿ ಪರಸ್ಪರರಿಗಾಗಿ ಸ್ವತ್ಯಾಗದ ಪ್ರೀತಿಯಿರಬೇಕೆಂಬುದೇ. ಯೇಸು ಪ್ರೀತಿಸಿದಂತೆಯೇ ಅವರು ಪ್ರೀತಿಸಬೇಕು. ಅವನು ತನ್ನ ಸ್ನೇಹಿತರಿಗಾಗಿ ಸಿದ್ಧಮನಸ್ಸಿನಿಂದ ಜೀವವನ್ನೂ ತ್ಯಾಗಮಾಡಿದನು. ಅವನು ತನ್ನ ಶಿಷ್ಯರಿಗೆ ದೇವರನ್ನು ಪ್ರೀತಿಸುವಂತೆ ಕಲಿಸಿದನು ಮತ್ತು ತಾನು ಅವರನ್ನು ಪ್ರೀತಿಸಿದಂತೆಯೇ ಅವರು ಪರಸ್ಪರರನ್ನು ಪ್ರೀತಿಸುವಂತೆ ಕಲಿಸಿದನು. ಕ್ರೈಸ್ತರು ಪರಸ್ಪರರಿಗಾಗಿ ತೋರಿಸುವಂಥ ಈ ಎದ್ದುಕಾಣುವಂಥ ಪ್ರೀತಿಯು, ನಿಜ ಕ್ರೈಸ್ತರನ್ನು ಗುರುತಿಸಸಾಧ್ಯವಿರುವ ಪ್ರಧಾನ ಗುಣವಾಗಿದೆ. (ಯೋಹಾನ 13:​34, 35; 15:​12, 13) ಅವರು ತಮ್ಮ ಶತ್ರುಗಳನ್ನು ಪ್ರೀತಿಸುವಂತೆಯೂ ಯೇಸು ಅವರಿಗೆ ಅಪ್ಪಣೆಕೊಟ್ಟನು.​—⁠ಮತ್ತಾಯ 5:⁠44.

11 ಪ್ರೀತಿಯನ್ನು ತೋರಿಸುವುದರಲ್ಲಿ ಯೇಸು ಪರಿಪೂರ್ಣ ಮಾದರಿಯನ್ನಿಟ್ಟನು. ಪರಲೋಕದಲ್ಲಿ ಒಬ್ಬ ಶಕ್ತಿಶಾಲಿ ಆತ್ಮಜೀವಿಯಾಗಿದ್ದ ಅವನಿಗೆ, ತನ್ನ ತಂದೆಯ ಅಭಿರುಚಿಗಳನ್ನು ಭೂಮಿಯ ಮೇಲೆ ಮುಂದುವರಿಸಲು ಅವಕಾಶವು ಕೊಡಲ್ಪಟ್ಟಾಗ ಅವನದನ್ನು ಸಂತೋಷದಿಂದ ಸ್ವೀಕರಿಸಿದನು. ಇತರರು ನಿತ್ಯನಿರಂತರಕ್ಕೂ ಜೀವಿಸುವಂತೆ ಸಾಧ್ಯವಾಗಲು ತನ್ನ ಮಾನವ ಜೀವವನ್ನು ತ್ಯಾಗಮಾಡಿದನಲ್ಲದೆ, ಜನರು ಹೇಗೆ ಬಾಳಬೇಕೆಂಬುದನ್ನು ಅವನು ತೋರಿಸಿಕೊಟ್ಟನು. ಅವನು ದೀನನು, ದಯಾಪರನು ಮತ್ತು ವಿಚಾರಪರನಾಗಿದ್ದು, ಹೊರೆಹೊತ್ತ ಮತ್ತು ಪೀಡಿಸಲ್ಪಟ್ಟಿದ್ದ ಜನರಿಗೆ ಸಹಾಯಮಾಡಿದನು. ಇತರರು ಯೆಹೋವನ ಬಗ್ಗೆ ತಿಳಿದುಕೊಳ್ಳುವಂತೆ ಅವಿರತವಾಗಿ ಸಹಾಯಮಾಡುತ್ತಾ, ‘ನಿತ್ಯಜೀವದ ವಾಕ್ಯಗಳನ್ನು’ ಸಹ ಹಂಚಿದನು.​—⁠ಯೋಹಾನ 6:⁠68.

12 ವಾಸ್ತವದಲ್ಲಿ ದೇವರ ಮತ್ತು ನೆರೆಯವನ ಮೇಲಣ ಪ್ರೀತಿಯು, ಒಂದಕ್ಕೊಂದು ಹೆಣೆಯಲ್ಪಟ್ಟಿದೆ. ಅಪೊಸ್ತಲ ಯೋಹಾನನು ಹೇಳಿದ್ದು: “ಪ್ರೀತಿಯು ದೇವರಿಂದಾಗಿದೆ, . . . ಒಬ್ಬನು ತಾನು ದೇವರನ್ನು ಪ್ರೀತಿಸುತ್ತೇನೆಂದು ಹೇಳಿ ತನ್ನ ಸಹೋದರನನ್ನು ದ್ವೇಷಿಸಿದರೆ ಅವನು ಸುಳ್ಳುಗಾರನಾಗಿದ್ದಾನೆ. ತಾನು ಕಂಡಿರುವ ತನ್ನ ಸಹೋದರನನ್ನು ಪ್ರೀತಿಸದವನು ತಾನು ಕಾಣದಿರುವ ದೇವರನ್ನು ಪ್ರೀತಿಸಲಾರನು.” (1 ಯೋಹಾನ 4:7, 20) ಯೆಹೋವನು ಪ್ರೀತಿಯ ಉಗಮನು ಮಾತ್ರವಲ್ಲ, ಅದರ ಸಾಕಾರರೂಪವೇ ಆಗಿದ್ದಾನೆ. ಆತನು ಮಾಡುವಂಥದ್ದೆಲ್ಲವೂ ಪ್ರೀತಿಯಿಂದ ಪ್ರಭಾವಿಸಲ್ಪಟ್ಟಿದೆ. ನಾವಾತನ ಸ್ವರೂಪದಲ್ಲಿ ಉಂಟುಮಾಡಲ್ಪಟ್ಟಿರುವುದರಿಂದ ನಾವು ಸಹ ಪ್ರೀತಿಸಲು ಶಕ್ತರು. (ಆದಿಕಾಂಡ 1:27) ನಮ್ಮ ನೆರೆಯವನಿಗೆ ಪ್ರೀತಿಯನ್ನು ತೋರಿಸುವ ಮೂಲಕ, ದೇವರ ಮೇಲಣ ನಮ್ಮ ಪ್ರೀತಿಯನ್ನು ನಾವು ಪ್ರದರ್ಶಿಸುತ್ತೇವೆ.

ಪ್ರೀತಿಸುವುದರ ಅರ್ಥ ವಿಧೇಯರಾಗುವುದೇ ಆಗಿದೆ

13 ನಾವು ಕಾಣದ ದೇವರನ್ನು ಹೇಗೆ ಪ್ರೀತಿಸಬಲ್ಲೆವು? ಅತ್ಯಾವಶ್ಯಕವಾದ ಪ್ರಥಮ ಹೆಜ್ಜೆಯು ಆತನನ್ನು ತಿಳಿದುಕೊಳ್ಳುವುದೇ ಆಗಿದೆ. ಏಕೆಂದರೆ ಒಬ್ಬ ಅಪರಿಚಿತ ವ್ಯಕ್ತಿಯನ್ನು ನಾವು ನಿಜವಾಗಿ ಪ್ರೀತಿಸಲಾರೆವು ಇಲ್ಲವೆ ಅವನಲ್ಲಿ ಭರವಸೆಯಿಡಲಾರೆವು. ಈ ಕಾರಣದಿಂದಲೇ, ದೇವರನ್ನು ತಿಳಿದುಕೊಳ್ಳಲಿಕ್ಕಾಗಿ ನಾವು ಬೈಬಲನ್ನು ಓದುವಂತೆ, ಪ್ರಾರ್ಥನೆ ಮಾಡುವಂತೆ ಮತ್ತು ಈಗಾಗಲೇ ಆತನನ್ನು ತಿಳಿದುಕೊಂಡಿದ್ದು ಆತನನ್ನು ಪ್ರೀತಿಸುವವರೊಂದಿಗೆ ಸಹವಾಸಿಸುವಂತೆ ಆತನ ವಾಕ್ಯವು ಉತ್ತೇಜಿಸುತ್ತದೆ. (ಕೀರ್ತನೆ 1:​1, 2; ಫಿಲಿಪ್ಪಿ 4:6; ಇಬ್ರಿಯ 10:25) ನಾಲ್ಕು ಸುವಾರ್ತಾ ಪುಸ್ತಕಗಳು ವಿಶೇಷವಾಗಿ ಅತ್ಯಮೂಲ್ಯವಾಗಿವೆ, ಏಕೆಂದರೆ ಅವು ಯೇಸು ಕ್ರಿಸ್ತನ ಜೀವನ ಹಾಗೂ ಶುಶ್ರೂಷೆಯಲ್ಲಿ ಪ್ರತಿಬಿಂಬಿಸಲ್ಪಟ್ಟಿರುವ ಯೆಹೋವನ ವ್ಯಕ್ತಿತ್ವವನ್ನು ಪ್ರಕಟಪಡಿಸುತ್ತವೆ. ಹೀಗೆ ನಾವು ಆತನನ್ನು ತಿಳಿದುಕೊಂಡು ಆತನು ನಮಗಾಗಿ ತೋರಿಸಿರುವ ಪ್ರೀತಿಯನ್ನು ಗಣ್ಯಮಾಡುವಾಗ, ದೇವರಿಗೆ ವಿಧೇಯರಾಗಬೇಕು ಮತ್ತು ಆತನ ವ್ಯಕ್ತಿತ್ವವನ್ನು ಅನುಕರಿಸಬೇಕೆಂಬ ನಮ್ಮ ಆಸೆಯು ಹೆಚ್ಚು ಬಲವಾಗುತ್ತಾ ಹೋಗುತ್ತದೆ. ಹೌದು, ದೇವರನ್ನು ಪ್ರೀತಿಸುವುದರಲ್ಲಿ ವಿಧೇಯತೆಯು ಒಳಗೂಡಿದೆ.

14 ನಾವು ವ್ಯಕ್ತಿಗತವಾಗಿ ಒಬ್ಬೊಬ್ಬರನ್ನು ಪ್ರೀತಿಸುವಾಗ, ಅವರ ಇಷ್ಟಾನಿಷ್ಟಗಳು ಏನೆಂದು ನಮಗೆ ತಿಳಿದಿದ್ದು, ಅದಕ್ಕೆ ತಕ್ಕಂತೆ ನಡೆದುಕೊಳ್ಳುತ್ತೇವೆ. ನಾವು ಯಾರನ್ನು ಪ್ರೀತಿಸುತ್ತೇವೊ ಅವರನ್ನು ಅಸಂತೋಷಪಡಿಸಲು ಬಯಸುವುದಿಲ್ಲ. ಅಪೊಸ್ತಲ ಯೋಹಾನನು ಬರೆದುದು: “ದೇವರ ಮೇಲಣ ಪ್ರೀತಿ ಏನಂದರೆ ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವದೇ. ಆತನ ಆಜ್ಞೆಗಳು ಭಾರವಾದವುಗಳಲ್ಲ.” (1 ಯೋಹಾನ 5:3) ಅವು ಭಾರವಾದವೂ ಅಲ್ಲ, ಅಸಂಖ್ಯಾತವೂ ಆಗಿಲ್ಲ. ಪ್ರೀತಿಯು ನಮ್ಮ ಮಾರ್ಗವನ್ನು ನಿರ್ದೇಶಿಸುತ್ತದೆ. ನಾವು ಮಾಡುವ ಪ್ರತಿಯೊಂದು ಕಾರ್ಯಕ್ಕಾಗಿ ಆಜ್ಞೆಗಳ ಒಂದು ದೊಡ್ಡ ಪಟ್ಟಿಯನ್ನು ಬಾಯಿಪಾಠ ಮಾಡಬೇಕಾಗಿರುವುದಿಲ್ಲ. ದೇವರ ಮೇಲಣ ನಮ್ಮ ಪ್ರೀತಿಯೇ ನಮ್ಮನ್ನು ಮಾರ್ಗದರ್ಶಿಸುತ್ತದೆ. ನಾವು ದೇವರನ್ನು ಪ್ರೀತಿಸುವುದಾದರೆ, ಆತನ ಚಿತ್ತವನ್ನು ಮಾಡುವುದು ನಮಗೆ ಹರ್ಷದಾಯಕವಾಗಿರುತ್ತದೆ. ಹೀಗೆ ನಾವು ದೇವರ ಮೆಚ್ಚಿಗೆಯನ್ನು ಪಡೆಯಬಲ್ಲೆವು, ಮತ್ತು ನಮಗೆ ಸ್ವತಃ ಪ್ರಯೋಜನವನ್ನು ತಂದುಕೊಳ್ಳುವೆವು ಏಕೆಂದರೆ ಆತನ ನಿರ್ದೇಶನವು ಯಾವಾಗಲೂ ನಮ್ಮ ಒಳಿತಿಗಾಗಿರುತ್ತದೆ.​—⁠ಯೆಶಾಯ 48:⁠17.

15 ದೇವರ ಮೇಲಣ ಪ್ರೀತಿಯು, ನಾವಾತನ ಗುಣಗಳನ್ನು ಅನುಕರಿಸುವಂತೆ ಪ್ರಚೋದಿಸುತ್ತದೆ. ನಾವು ಒಬ್ಬ ವ್ಯಕ್ತಿಯನ್ನು ಪ್ರೀತಿಸುವಾಗ, ಅವನ ಗುಣಗಳನ್ನು ಮೆಚ್ಚುತ್ತೇವೆ ಮತ್ತು ಅವನಂತಾಗಲು ಪ್ರಯತ್ನಿಸುತ್ತೇವೆ. ಯೆಹೋವ ಹಾಗೂ ಯೇಸುವಿನ ನಡುವಣ ಸಂಬಂಧವನ್ನು ಪರಿಗಣಿಸಿರಿ. ಅವರು ಬಹುಶಃ ಕೋಟ್ಯನುಕೋಟಿ ವರ್ಷಗಳ ವರೆಗೆ ಪರಲೋಕದಲ್ಲಿ ಜೊತೆಯಾಗಿದ್ದರು. ಅವರ ನಡುವೆ ಗಾಢವಾದ, ಶುದ್ಧವಾದ ಪ್ರೀತಿಯಿತ್ತು. ಯೇಸು ತನ್ನ ಸ್ವರ್ಗೀಯ ತಂದೆಯನ್ನು ಎಷ್ಟು ಪರಿಪೂರ್ಣವಾಗಿ ಹೋಲುತ್ತಿದ್ದನೆಂದರೆ ಅವನು ತನ್ನ ಶಿಷ್ಯರಿಗೆ ಹೀಗೆ ಹೇಳಶಕ್ತನಾದನು: “ನನ್ನನ್ನು ನೋಡಿದವನು ತಂದೆಯನ್ನು ನೋಡಿದ್ದಾನೆ.” (ಯೋಹಾನ 14:9) ಯೆಹೋವನ ಮತ್ತು ಆತನ ಪುತ್ರನ ವಿಷಯದಲ್ಲಿ ನಾವು ಜ್ಞಾನವನ್ನು ಪಡೆಯುತ್ತಾ ಹೋದಂತೆ ಹಾಗೂ ಗಣ್ಯತೆಯು ಬೆಳೆಯುತ್ತಾ ಹೋದಂತೆ ನಾವು ಅವರಂತಾಗಲು ಪ್ರಚೋದಿಸಲ್ಪಡುತ್ತೇವೆ. ಯೆಹೋವನ ಮೇಲಿರುವ ನಮ್ಮ ಪ್ರೀತಿಯೊಂದಿಗೆ ಆತನ ಪವಿತ್ರಾತ್ಮದ ಸಹಾಯವು ನಾವು “ಪೂರ್ವಸ್ವಭಾವವನ್ನು ಅದರ ಕೃತ್ಯಗಳ ಕೂಡ ತೆಗೆದಿಟ್ಟು ನೂತನಸ್ವಭಾವವನ್ನು ಧರಿಸಿ”ಕೊಳ್ಳಲು ಶಕ್ತಗೊಳಿಸುವುದು.​—⁠ಕೊಲೊಸ್ಸೆ 3:9, 10; ಗಲಾತ್ಯ 5:22, 23.

ಕ್ರಿಯೆಯಲ್ಲಿ ಪ್ರೀತಿ

16 ಕ್ರೈಸ್ತರಾದ ನಮಗೆ ದೇವರ ಮತ್ತು ನೆರೆಯವನ ಮೇಲಣ ಪ್ರೀತಿಯು, ರಾಜ್ಯ ಸಾರುವಿಕೆ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಪಾಲ್ಗೊಳ್ಳುವಂತೆ ನಮ್ಮನ್ನು ಪ್ರಚೋದಿಸುವುದು. ಹೀಗೆ ಮಾಡುವ ಮೂಲಕ ನಾವು ಯೆಹೋವ ದೇವರಿಗೆ ಸಂತೋಷವನ್ನು ತರುತ್ತೇವೆ ಯಾಕೆಂದರೆ, “ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಬೇಕೆಂಬದು ಆತನ ಚಿತ್ತವಾಗಿದೆ.” (1 ತಿಮೊಥೆಯ 2:3, 4) ಈ ರೀತಿಯಲ್ಲಿ, ಇತರರ ಹೃದಯಗಳಲ್ಲಿ ಕ್ರಿಸ್ತನ ಧರ್ಮಶಾಸ್ತ್ರವು ಬರೆಯಲ್ಪಡುವಂತೆ ಅವರಿಗೆ ಸಹಾಯಮಾಡುವ ಆನಂದವನ್ನು ನಾವು ಪಡೆಯಬಲ್ಲೆವು. ಮತ್ತು ಅವರ ವ್ಯಕ್ತಿತ್ವಗಳು ಪರಿವರ್ತನೆಯಾಗುತ್ತಾ, ಯೆಹೋವನ ದೈವಿಕ ಗುಣಗಳನ್ನು ಪ್ರತಿಬಿಂಬಿಸುವುದನ್ನು ಗಮನಿಸುವಾಗ ನಾವು ಹರ್ಷಿಸುತ್ತೇವೆ. (2 ಕೊರಿಂಥ 3:18) ನಿಜವಾಗಿಯೂ, ಇತರರು ದೇವರ ಬಗ್ಗೆ ತಿಳಿದುಕೊಳ್ಳುವಂತೆ ಸಹಾಯಮಾಡುವುದು, ನಾವು ಅವರಿಗೆ ಕೊಡಬಲ್ಲ ಅತ್ಯಮೂಲ್ಯವಾದ ಉಡುಗೊರೆಯಾಗಿದೆ. ಯೆಹೋವನ ಸ್ನೇಹವನ್ನು ಸ್ವೀಕರಿಸುವವರು ಅದರಲ್ಲಿ ನಿತ್ಯನಿರಂತರಕ್ಕೂ ಆನಂದಿಸಬಲ್ಲರು.

17 ನಾವು ಜೀವಿಸುತ್ತಿರುವ ಲೋಕವು ಭೌತಿಕ ವಸ್ತುಗಳಿಗೆ ಬಹಳಷ್ಟು ಮೌಲ್ಯವನ್ನು ಕೊಡುತ್ತದೆ ಮತ್ತು ಅವುಗಳನ್ನು ಪ್ರೀತಿಸುತ್ತದೆ ಸಹ. ಆದರೆ ಭೌತಿಕ ವಸ್ತುಗಳು ನಿತ್ಯಕ್ಕೂ ಉಳಿಯುವುದಿಲ್ಲ. ಅವುಗಳನ್ನು ಯಾರಾದರೂ ಕದಿಯಬಹುದು ಇಲ್ಲವೆ ಅದು ಕ್ಷಯಿಸಿ ನಶಿಸಿಹೋಗಬಹುದು. (ಮತ್ತಾಯ 6:19) ಬೈಬಲ್‌ ನಮ್ಮನ್ನು ಎಚ್ಚರಿಸುವುದು: “ಲೋಕವೂ ಅದರ ಆಶೆಯೂ ಗತಿಸಿಹೋಗುತ್ತವೆ; ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು.” (1 ಯೋಹಾನ 2:​16, 17) ಹೌದು, ಯೆಹೋವನು ಎಂದೆಂದಿಗೂ ಇರುತ್ತಾನೆ, ಮತ್ತು ಆತನನ್ನು ಪ್ರೀತಿಸಿ ಸೇವಿಸುವವರು ಸಹ ಹಾಗೆಯೇ ಎಂದೆಂದಿಗೂ ಇರುವರು. ಹೀಗಿರುವಾಗ, ಹೆಚ್ಚೆಂದರೆ ತಾತ್ಕಾಲಿಕವಾಗಿ ಇರಲಿರುವ ಲೋಕದ ವಸ್ತುಗಳನ್ನು ಬೆನ್ನಟ್ಟುವ ಬದಲಿಗೆ ದೇವರ ಮತ್ತು ಜನರ ಮೇಲಣ ಪ್ರೀತಿಯನ್ನು ಬೆಳೆಸಿಕೊಳ್ಳುವುದು ಹೆಚ್ಚು ವಿವೇಕಯುತವಲ್ಲವೊ?

18 ಪ್ರೀತಿಯನ್ನು ಬೆನ್ನಟ್ಟುವವರು ಯೆಹೋವನಿಗೆ ಸ್ತುತಿಯನ್ನು ತರುತ್ತಾರೆ. ಸೆನೆಗಲ್‌ನಲ್ಲಿ ಒಬ್ಬ ಮಿಷನೆರಿಯಾಗಿರುವ ಸೋನ್ಯ ಎಂಬವಳನ್ನು ಪರಿಗಣಿಸಿರಿ. ಆಕೆ ಹೈಡೀ ಎಂಬ ಸ್ತ್ರೀಯೊಂದಿಗೆ ಬೈಬಲ್‌ ಅಧ್ಯಯನಮಾಡಿದಳು. ಈ ಸ್ತ್ರೀ ಅವಳ ಅವಿಶ್ವಾಸಿ ಗಂಡನಿಂದ ಎಚ್‌.ಐ.ವಿ. ರೋಗಾಣುವನ್ನು ಸೋಂಕಿಸಿಕೊಂಡಿದ್ದಳು. ಅವಳ ಗಂಡ ತೀರಿಹೋದ ನಂತರ ಹೈಡೀ ದೀಕ್ಷಾಸ್ನಾನಪಡೆದಳು. ಆದರೆ ಅವಳ ಆರೋಗ್ಯ ಹದಗೆಟ್ಟಿತು ಮತ್ತು ಏಡ್ಸ್‌ ರೋಗಿಯಾಗಿ ಅವಳನ್ನು ಆಸ್ಪತ್ರೆಗೆ ಸೇರಿಸಲಾಯಿತು. ಸೋನ್ಯ ಹೇಳುವುದು: “ಆಸ್ಪತ್ರೆ ಸಿಬ್ಬಂದಿ ತಮ್ಮಿಂದಾಗುತ್ತಿದ್ದ ಕೆಲಸಗಳನ್ನು ಮಾಡಿದರು, ಆದರೆ ಅವರು ಕಡಿಮೆ ಜನರು ಇದ್ದರು. ಆದುದರಿಂದ ಆಸ್ಪತ್ರೆಯಲ್ಲಿ ಅವಳ ಅಗತ್ಯಗಳನ್ನು ನೋಡಿಕೊಳ್ಳುವಂತೆ ಸಭೆಯಿಂದ ಸ್ವಯಂಸೇವಕರನ್ನು ಕೇಳಿಕೊಳ್ಳಲಾಯಿತು. ಎರಡನೆಯ ರಾತ್ರಿಯಿಂದ ಹಿಡಿದು ಅವಳ ಮರಣದ ವರೆಗೆ ಅವಳ ಮಂಚದ ಪಕ್ಕದಲ್ಲಿನ ಚಾಪೆಯಲ್ಲಿದ್ದುಕೊಂಡು ನಾನು ಅವಳ ಆರೈಕೆಯಲ್ಲಿ ಸಹಾಯಮಾಡಿದೆ. ಉಸ್ತುವಾರಿವಹಿಸುತ್ತಿದ್ದ ಒಬ್ಬ ಡಾಕ್ಟರರು, ‘ನಮಗಿರುವ ಅತಿ ದೊಡ್ಡ ಸಮಸ್ಯೆಯೇನೆಂದರೆ, ರೋಗಿಗೆ ಏಡ್ಸ್‌ ಇದೆಯೆಂದು ತಿಳಿದುಬಂದ ಕೂಡಲೇ ಸಂಬಂಧಿಕರು ಸಹ ಆ ಕುಟುಂಬ ಸದಸ್ಯನನ್ನು ಬಿಟ್ಟುಹೋಗುತ್ತಾರೆ. ಹೀಗಿರುವಾಗ, ಈ ವ್ಯಕ್ತಿಯ ಸಂಬಂಧಿಕಳಾಗಿರದ, ಬೇರೊಂದು ದೇಶದವಳಾಗಿದ್ದು, ಇವರ ಜಾತಿಗೂ ಸೇರಿಲ್ಲದವರಾಗಿರುವ ನೀವು ನಿಮ್ಮನ್ನೇ ಅಪಾಯಕ್ಕೊಡ್ಡಲು ಒಪ್ಪಿಕೊಂಡಿರುವುದೇಕೆ?’ ಎಂದು ಕೇಳಿದರು. ನಾನು ಅವರಿಗೆ ವಿವರಿಸಿಹೇಳಿದ್ದೇನೆಂದರೆ, ಹೈಡೀ ನಿಜವಾಗಿ ನನ್ನ ಸಹೋದರಿಯಾಗಿದ್ದಾಳೆ, ನಾವು ಒಡಹುಟ್ಟಿದವರಾಗಿರುವಷ್ಟು ಆಪ್ತರಾಗಿದ್ದೇವೆ. ನಾನು ಈ ಹೊಸ ಸಹೋದರಿಯನ್ನು ಪಡೆದಿರುವುದರಿಂದ ನನಗೆ ಅವಳ ಆರೈಕೆಮಾಡುವುದರಿಂದ ಸಂತೋಷ ಸಿಗುತ್ತದೆ.” ಹೈಡೀಯ ಆರೈಕೆಮಾಡಲಿಕ್ಕಾಗಿ ಸೋನ್ಯ ಮಾಡಿದಂಥ ಪ್ರೀತಿಪರ ಪ್ರಯತ್ನಗಳಿಂದ ಸೋನ್ಯಳಿಗೆ ಯಾವುದೇ ಕೆಟ್ಟ ಪರಿಣಾಮಗಳಾಗಲಿಲ್ಲ.

19 ಯೆಹೋವನ ಸೇವಕರ ನಡುವೆ ಸ್ವತ್ಯಾಗದ ಪ್ರೀತಿಯ ಅನೇಕ ಉದಾಹರಣೆಗಳನ್ನು ಕಂಡುಕೊಳ್ಳಬಹುದು. ಇಂದು ದೇವಜನರಿಗೆ ಯಾವುದೇ ಲಿಖಿತ ನಿಯಮಾವಳಿಯಿಲ್ಲ. ಅದರ ಬದಲು, ಇಬ್ರಿಯ 8:10ರಲ್ಲಿ ಬರೆಯಲ್ಪಟ್ಟ ಮಾತುಗಳ ನೆರವೇರಿಕೆಯನ್ನು ನಾವು ನೋಡುತ್ತೇವೆ: “ಆ ದಿನಗಳು ಬಂದ ಮೇಲೆ ನಾನು ಇಸ್ರಾಯೇಲ್‌ವಂಶದವರೊಂದಿಗೆ ಮಾಡಿಕೊಳ್ಳುವ ಒಡಂಬಡಿಕೆಯು ಹೀಗಿರುವದು​—⁠ನನ್ನ ಆಜ್ಞೆಗಳನ್ನು ಅವರ ಮನಸ್ಸಿನಲ್ಲಿ ಇಡುವೆನು, ಅವರ ಹೃದಯದ ಮೇಲೆ ಅವುಗಳನ್ನು ಬರೆಯುವೆನು; ನಾನು ಅವರಿಗೆ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು.” ಯೆಹೋವನು ನಮ್ಮ ಹೃದಯಗಳಲ್ಲಿ ಬರೆದಿರುವ ಆ ಪ್ರೀತಿಯ ಆಜ್ಞೆಯನ್ನು ನಾವು ಯಾವಾಗಲೂ ನೆಚ್ಚಿಕೊಂಡು, ಪ್ರೀತಿಯನ್ನು ಪ್ರದರ್ಶಿಸುವ ಪ್ರತಿಯೊಂದು ಅವಕಾಶವನ್ನು ಸದುಪಯೋಗಿಸೋಣ.

20 ಅಂಥ ಪ್ರೀತಿಯನ್ನು ತೋರಿಸುವ ಲೋಕವ್ಯಾಪಕ ಸಹೋದರತ್ವದೊಂದಿಗೆ ದೇವರನ್ನು ಸೇವಿಸುವುದು ಎಂಥ ಆನಂದವಾಗಿದೆ! ಹೃದಯದಲ್ಲಿ ಕ್ರಿಸ್ತನ ಧರ್ಮಶಾಸ್ತ್ರವನ್ನು ಹೊಂದಿರುವವರು, ಈ ಪ್ರೀತಿರಹಿತ ಲೋಕದಲ್ಲಿ ಒಂದು ಬೆಲೆಬಾಳುವ ಸ್ವತ್ತನ್ನು ಹೊಂದಿರುತ್ತಾರೆ. ಅವರು ಯೆಹೋವನ ಪ್ರೀತಿಯಲ್ಲಿ ಆನಂದಿಸುತ್ತಾರೆ ಮಾತ್ರವಲ್ಲ, ಸಹೋದರತ್ವದ ಬಲವಾದ ಬಂಧದಲ್ಲಿ ಹರ್ಷಿಸುತ್ತಾರೆ ಸಹ. “ಆಹಾ, ಸಹೋದರರು ಒಂದಾಗಿರುವದು ಎಷ್ಟೋ ಒಳ್ಳೇದು, ಎಷ್ಟೋ ರಮ್ಯವಾದದ್ದು!” ಯೆಹೋವನ ಸಾಕ್ಷಿಗಳು ಅನೇಕ ದೇಶಗಳಲ್ಲಿ ವಾಸಿಸುತ್ತಾರಾದರೂ, ಅನೇಕ ಭಾಷೆಗಳನ್ನು ಆಡುತ್ತಾರಾದರೂ, ಅನೇಕ ಸಂಸ್ಕೃತಿಗಳಿಂದ ಬಂದವರಾಗಿದ್ದರೂ ಸರಿಸಾಟಿಯಿಲ್ಲದಂಥ ಧಾರ್ಮಿಕ ಐಕ್ಯ ಅವರಲ್ಲಿದೆ. ಈ ಐಕ್ಯವು ಯೆಹೋವನ ಅನುಗ್ರಹವನ್ನು ತರುತ್ತದೆ. ಕೀರ್ತನೆಗಾರನು ಬರೆದುದು: “ಅಲ್ಲಿ [ಪ್ರೀತಿಯಿಂದ ಐಕ್ಯರಾಗಿರುವ ಜನರ ನಡುವೆ] ಆಶೀರ್ವಾದವೂ ಜೀವವೂ ಸದಾಕಾಲ ಇರಬೇಕೆಂದು ಯೆಹೋವನು ಆಜ್ಞಾಪಿಸಿದ್ದಾನೆ.”​—⁠ಕೀರ್ತನೆ 133:1-3.

ನೀವು ಉತ್ತರಿಸಬಲ್ಲಿರೊ?

• ದಶಾಜ್ಞೆಗಳು ಎಷ್ಟು ಮಹತ್ವಪೂರ್ಣವಾಗಿದ್ದವು?

• ಹೃದಯಗಳಲ್ಲಿ ಬರೆಯಲ್ಪಟ್ಟಿರುವ ಆಜ್ಞೆಯು ಏನಾಗಿದೆ?

• “ಕ್ರಿಸ್ತನ ಧರ್ಮಶಾಸ್ತ್ರ”ದಲ್ಲಿ ಪ್ರೀತಿಯ ಪಾತ್ರವೇನು?

• ದೇವರ ಮತ್ತು ನೆರೆಯವನ ಮೇಲಣ ನಮ್ಮ ಪ್ರೀತಿಯನ್ನು ತೋರಿಸಬಹುದಾದ ವಿಧಗಳಾವುವು?

[ಅಧ್ಯಯನ ಪ್ರಶ್ನೆಗಳು]

1, 2. (ಎ) ನಾವೀಗ ಏನನ್ನು ಪರಿಗಣಿಸುವೆವು? (ಬಿ) ಸೀನಾಯಿಬೆಟ್ಟದಲ್ಲಿ ಯೆಹೋವನು ತನ್ನನ್ನೇ ಹೇಗೆ ತೋರ್ಪಡಿಸಿಕೊಂಡನು?

3. ಯೆಹೋವನು ಇಸ್ರಾಯೇಲ್ಯರಿಗೆ ಯಾವ ರೀತಿಯಲ್ಲಿ ದಶಾಜ್ಞೆಗಳನ್ನು ಕೊಟ್ಟನು, ಮತ್ತು ಆ ಜನಾಂಗವು ಏನನ್ನು ಗ್ರಹಿಸಿತು?

4. ದಶಾಜ್ಞೆಗಳು ಏಕೆ ತುಂಬ ಮಹತ್ವಪೂರ್ಣವಾಗಿದ್ದವು?

5. ದೇವರು ಇಸ್ರಾಯೇಲ್ಯರಿಗೆ ಕೊಟ್ಟ ಆಜ್ಞೆಗಳು ಯಾವ ವಿಧಗಳಲ್ಲಿ ಆತನ ಪ್ರೀತಿಯನ್ನು ಪ್ರತಿಬಿಂಬಿಸಿದವು?

6. ಕಲ್ಲಿನ ಮೇಲೆ ಬರೆಯಲ್ಪಟ್ಟ ಆಜ್ಞೆಗಳಿಗಿಂತಲೂ ಯಾವ ಆಜ್ಞೆಯು ಹೆಚ್ಚು ಮೌಲ್ಯವುಳ್ಳದ್ದಾಗಿ ಪರಿಣಮಿಸಿದೆ?

7. “ಕ್ರಿಸ್ತನ ಧರ್ಮಶಾಸ್ತ್ರ”ವನ್ನು ಮೊದಲು ಯಾರಿಗೆ ಕೊಡಲಾಗಿತ್ತು, ಮತ್ತು ಅನಂತರ ಅದನ್ನು ಯಾರು ಸ್ವೀಕರಿಸಿದರು?

8. ಮೋಶೆಯ ಧರ್ಮಶಾಸ್ತ್ರ ಮತ್ತು ಕ್ರಿಸ್ತನ ಧರ್ಮಶಾಸ್ತ್ರದ ನಡುವಣ ಒಂದು ವ್ಯತ್ಯಾಸವೇನಾಗಿತ್ತು?

9. ಪ್ರೀತಿಯೇ ಯೆಹೋವನ ಆಜ್ಞೆಗಳ ಸಾರವಾಗಿತ್ತೆಂದು ಯೇಸು ಹೇಗೆ ಸೂಚಿಸಿದನು?

10. ಪ್ರೀತಿಯು ಕ್ರಿಸ್ತನ ಧರ್ಮಶಾಸ್ತ್ರಕ್ಕೆ ಆಧಾರವಾಗಿದೆಯೆಂದು ನಮಗೆ ಹೇಗೆ ತಿಳಿದಿದೆ?

11. ಯೇಸು ದೇವರಿಗಾಗಿಯೂ ಮಾನವಕುಲಕ್ಕಾಗಿಯೂ ಪ್ರೀತಿಯನ್ನು ತೋರಿಸಿದ್ದು ಹೇಗೆ?

12. ದೇವರ ಮತ್ತು ನೆರೆಯವನ ಮೇಲಣ ಪ್ರೀತಿಯು ಒಂದಕ್ಕೊಂದು ಹೆಣೆಯಲ್ಪಟ್ಟಿದೆಯೆಂದು ಏಕೆ ಹೇಳಸಾಧ್ಯವಿದೆ?

13. ನಾವು ದೇವರನ್ನು ಪ್ರೀತಿಸಬೇಕಾದರೆ ಪ್ರಥಮವಾಗಿ ಏನು ಮಾಡಬೇಕು?

14. ದೇವರ ಆಜ್ಞೆಗಳು ಭಾರವಾದವುಗಳಲ್ಲವೆಂದು ಏಕೆ ಹೇಳಸಾಧ್ಯವಿದೆ?

15. ಯೆಹೋವನನ್ನು ಅನುಕರಿಸುವಂತೆ ನಮ್ಮನ್ನು ಯಾವುದು ಪ್ರಚೋದಿಸುವುದು? ವಿವರಿಸಿ.

16. ದೇವರ ಮತ್ತು ನೆರೆಯವನ ಮೇಲಣ ಪ್ರೀತಿಯು ನಮ್ಮ ಸಾರುವ ಹಾಗೂ ಕಲಿಸುವ ಚಟುವಟಿಕೆಯ ಮೂಲಕ ಹೇಗೆ ಪ್ರದರ್ಶಿಸಲ್ಪಡುತ್ತದೆ?

17. ಭೌತಿಕ ವಸ್ತುಗಳ ಬದಲಿಗೆ ದೇವರ ಮತ್ತು ನೆರೆಯವನ ಮೇಲಣ ಪ್ರೀತಿಯನ್ನು ಬೆಳೆಸಿಕೊಳ್ಳುವುದು ಏಕೆ ವಿವೇಕಯುತವಾಗಿದೆ?

18. ಒಬ್ಬ ಮಿಷನೆರಿಯು ಸ್ವತ್ಯಾಗದ ಪ್ರೀತಿಯನ್ನು ತೋರಿಸಿದ್ದು ಹೇಗೆ?

19. ನಮ್ಮ ಹೃದಯದಲ್ಲಿ ದೇವರ ಆಜ್ಞೆಗಳುಳ್ಳವರಾಗಿದ್ದು, ನಾವು ಯಾವುದರ ಸದುಪಯೋಗವನ್ನು ಮಾಡಬೇಕು?

20. ಕ್ರಿಸ್ತನ ಧರ್ಮಶಾಸ್ತ್ರವು ಏಕೆ ಬೆಲೆಬಾಳುವ ಸ್ವತ್ತಾಗಿದೆ?

[ಪುಟ 25ರಲ್ಲಿರುವ ಚಿತ್ರ]

ಇಸ್ರಾಯೇಲ್ಯರಿಗೆ ಕಲ್ಲಿನ ಹಲಗೆಗಳ ಮೇಲೆ ಬರೆಯಲ್ಪಟ್ಟ ಆಜ್ಞೆಗಳಿದ್ದವು

[ಪುಟ 26ರಲ್ಲಿರುವ ಚಿತ್ರಗಳು]

ಕ್ರೈಸ್ತರಿಗೆ, ಅವರ ಹೃದಯಗಳಲ್ಲಿ ದೇವರ ಆಜ್ಞೆಗಳಿವೆ

[ಪುಟ 28ರಲ್ಲಿರುವ ಚಿತ್ರ]

ಇಸವಿ 2004ರ ಜಿಲ್ಲಾ ಅಧಿವೇಶನದಲ್ಲಿ ಸೋನ್ಯಾ, ಸೆನೆಗಲ್‌ನ ಒಬ್ಬ ಹುಡುಗಿಯೊಂದಿಗೆ