ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆದಿ ಜರ್ಮನ್‌ ಬೈಬಲ್‌ ದೇವರ ಹೆಸರನ್ನು ಉಪಯೋಗಿಸುತ್ತದೆ

ಆದಿ ಜರ್ಮನ್‌ ಬೈಬಲ್‌ ದೇವರ ಹೆಸರನ್ನು ಉಪಯೋಗಿಸುತ್ತದೆ

ಆದಿ ಜರ್ಮನ್‌ ಬೈಬಲ್‌ ದೇವರ ಹೆಸರನ್ನು ಉಪಯೋಗಿಸುತ್ತದೆ

ಇಸವಿ 1971ರಲ್ಲಿ ಜರ್ಮನ್‌ ಭಾಷೆಯಲ್ಲಿ ಪ್ರಕಟಿಸಲ್ಪಟ್ಟ ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರದಲ್ಲಿ ಯೆಹೋವ ಎಂಬ ದೇವರ ವೈಯಕ್ತಿಕ ಹೆಸರು ಸಾವಿರಾರು ಬಾರಿ ಕಂಡುಬರುತ್ತದೆ. * ಆದರೆ, ದೈವಿಕ ನಾಮವನ್ನು ಉಪಯೋಗಿಸಿದ ಮೊದಲ ಜರ್ಮನ್‌ ಬೈಬಲ್‌ ಇದಾಗಿರಲಿಲ್ಲ. ಸುಮಾರು 500 ವರ್ಷಗಳಿಗೆ ಮುಂಚೆ, ಯೆಹೋವನ ಹೆಸರನ್ನು ಉಪಯೋಗಿಸಿದ ಮೊದಲ ಜರ್ಮನ್‌ ಬೈಬಲ್‌ ಪ್ರಕಟಿಸಲ್ಪಟ್ಟಿತು ಎಂದು ತೋರುತ್ತದೆ. ಇದನ್ನು ಯೋಹಾನ್‌ ಎಕ್‌ ಎಂಬ ಪ್ರಸಿದ್ಧ ರೋಮನ್‌ ಕ್ಯಾಥೊಲಿಕ್‌ ದೇವತಾಶಾಸ್ತ್ರಜ್ಞನು ಪ್ರಕಟಿಸಿದನು.

ಯೋಹಾನ್‌ ಎಕ್‌ 1486ರಲ್ಲಿ ದಕ್ಷಿಣ ಜರ್ಮನಿಯಲ್ಲಿ ಜನಿಸಿದನು. ಅವನು 24 ವರ್ಷ ಪ್ರಾಯದವನಾಗಿದ್ದಾಗ ಇನ್‌ಗಲ್‌ಶ್ಟಾಟ್‌ನ ವಿಶ್ವವಿದ್ಯಾನಿಲಯದ ಪ್ರೊಫೆಸರ್‌ ಆದನು ಮತ್ತು 1543ರಲ್ಲಿ ಅವನು ಸಾಯುವ ತನಕ ಈ ಹುದ್ದೆಯಲ್ಲೇ ಉಳಿದನು. ಎಕ್‌, ಮಾರ್ಟಿನ್‌ ಲೂತರನ ಸಮಯದ ವ್ಯಕ್ತಿಯಾಗಿದ್ದನು, ಮತ್ತು ಇವರಿಬ್ಬರೂ ಸ್ವಲ್ಪಕಾಲ ಸ್ನೇಹಿತರಾಗಿದ್ದರು. ನಂತರವಾದರೋ, ಲೂತರ್‌ ‘ಮತಸುಧಾರಣೆ’ಯಲ್ಲಿ ಪ್ರಮುಖ ಪಾತ್ರವನ್ನು ವಹಿಸಲಾರಂಭಿಸಿದನು, ಆದರೆ ಎಕ್‌ ಕ್ಯಾಥೊಲಿಕ್‌ ಚರ್ಚಿನ ಸಮರ್ಥಕನಾಗಿ ಉಳಿದನು.

ಬವೆರೀಯದ ಡ್ಯೂಕ್‌ ದೊರೆಯು ಬೈಬಲನ್ನು ಜರ್ಮನ್‌ ಭಾಷೆಗೆ ಭಾಷಾಂತರಿಸುವಂತೆ ಎಕ್‌ಗೆ ನೇಮಕವಿತ್ತನು, ಮತ್ತು ಆ ಭಾಷಾಂತರವು 1537ರಲ್ಲಿ ಪ್ರಕಟಿಸಲ್ಪಟ್ಟಿತು. ಕಿರ್ಚ್‌ಲಿಚೆಸ್‌ ಹಾಂಟ್‌ಲೆಕ್ಸಿಕಾನ್‌ಗನುಸಾರ, ಅವನ ಭಾಷಾಂತರವು ಮೂಲಪಾಠವನ್ನು ನಿಕಟವಾಗಿ ಹಿಂಬಾಲಿಸಿತು ಮತ್ತು ಅದು “ಈವರೆಗೆ ಪಡೆದಿರುವುದಕ್ಕಿಂತಲೂ ಹೆಚ್ಚಿನ ಮಾನ್ಯತೆಗೆ ಅರ್ಹವಾಗಿದೆ.” ಎಕ್‌ನ ಭಾಷಾಂತರಕ್ಕನುಸಾರ ವಿಮೋಚನಕಾಂಡ 6:3 ಹೀಗೆ ಓದುತ್ತದೆ: “ನಾನು ಕರ್ತನು/ಅಬ್ರಾಮ/ಇಸಾಕ/ಮತ್ತು ಯಾಕೋಬರಿಗೆ ಸರ್ವಶಕ್ತ ದೇವರು ಎಂದು ಪ್ರತ್ಯಕ್ಷನಾದೆನು: ಆ್ಯಡೊನೈ ಎಂಬ ನನ್ನ ಹೆಸರಿನಿಂದ/ನಾನು ಅವರಿಗೆ ಪ್ರತ್ಯಕ್ಷನಾಗಲಿಲ್ಲ.” ಎಕ್‌ ಆ ವಚನಕ್ಕೆ ಈ ಅಂಚು ಉಲ್ಲೇಖವನ್ನು ಸೇರಿಸಿದನು: “ಆ್ಯಡೊನೈ ಯೆಹೋವ ಎಂಬ ಹೆಸರು.” ದೇವರ ವೈಯಕ್ತಿಕ ಹೆಸರು ಒಂದು ಜರ್ಮನ್‌ ಬೈಬಲ್‌ನಲ್ಲಿ ಉಪಯೋಗಿಸಲ್ಪಟ್ಟಿರುವುದು ಇದೇ ಪ್ರಪ್ರಥಮ ಬಾರಿ ಎಂದು ಅನೇಕ ಬೈಬಲ್‌ ವಿದ್ವಾಂಸರು ನಂಬುತ್ತಾರೆ.

ಆದರೂ, ದೇವರ ವೈಯಕ್ತಿಕ ಹೆಸರು ಜ್ಞಾತವಾಗಿದ್ದು ಸಾವಿರಾರು ವರ್ಷಗಳಿಂದ ಉಪಯೋಗದಲ್ಲಿದೆ. ಅದರ ಅತಿ ಆದಿ ದಾಖಲೆಯು ಹೀಬ್ರು ಭಾಷೆಯಲ್ಲಿದ್ದು, ಒಬ್ಬನೇ ಸತ್ಯ ದೇವರನ್ನು ಗುರುತಿಸಲು “ಯೆಹೋವ” ಎಂಬ ಹೆಸರನ್ನು ಅದರಲ್ಲಿ ಉಪಯೋಗಿಸಲಾಗಿದೆ. (ಧರ್ಮೋಪದೇಶಕಾಂಡ 6:4) ಸುಮಾರು 2,000 ವರ್ಷಗಳ ಮುಂಚೆ, ಯೇಸು ದೇವರ ಹೆಸರನ್ನು ತಿಳಿಯಪಡಿಸಿದನೆಂಬ ಅವನ ಹೇಳಿಕೆಯು ಗ್ರೀಕ್‌ ಭಾಷೆಯಲ್ಲಿ ದಾಖಲಿಸಲ್ಪಟ್ಟಿದೆ. (ಯೋಹಾನ 17:6) ಅಂದಿನಿಂದ, ಆ ಹೆಸರು ಅನೇಕಾನೇಕ ಭಾಷೆಗಳಲ್ಲಿ ಪ್ರಕಟಿಸಲ್ಪಡುತ್ತಿದೆ ಮತ್ತು ಶೀಘ್ರವೇ, ಕೀರ್ತನೆ 83:18ರ ನೆರವೇರಿಕೆಯಲ್ಲಿ ಯೆಹೋವನಾಮದಿಂದ ಪ್ರಸಿದ್ಧನಾದವನೇ ಭೂಲೋಕದಲ್ಲೆಲ್ಲಾ ಸರ್ವೋನ್ನತನೆಂದು ಎಲ್ಲರೂ ತಿಳಿದುಕೊಳ್ಳುವರು.

[ಪಾದಟಿಪ್ಪಣಿ]

^ ಪ್ಯಾರ. 2 ಯೆಹೋವನ ಸಾಕ್ಷಿಗಳಿಂದ ಪ್ರಥಮವಾಗಿ ಇಂಗ್ಲಿಷ್‌ನಲ್ಲಿ 1961ರಲ್ಲಿ ಪ್ರಕಟಿಸಲ್ಪಟ್ಟಿತು. ಈಗ ಪೂರ್ತಿಯಾಗಿ ಅಥವಾ ಭಾಗಶಃ 50ಕ್ಕಿಂತಲೂ ಹೆಚ್ಚು ಭಾಷೆಗಳಲ್ಲಿ ಲಭ್ಯವಿದೆ.

[ಪುಟ 32ರಲ್ಲಿರುವ ಚಿತ್ರ]

ಎಕ್‌ ಪ್ರಕಟಿಸಿದ ಬೈಬಲಿನ 1558ರ ಆವೃತ್ತಿ​—⁠ವಿಮೋಚನಕಾಂಡ 6:3ರಲ್ಲಿರುವ ಯೆಹೋವ ಎಂಬ ಹೆಸರಿಗೆ ಅಂಚು ಉಲ್ಲೇಖವನ್ನು ಹೊಂದಿದೆ