ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಈ ಗೊಂದಲಮಯ ಸಮಯಗಳಲ್ಲಿ ದೇವರೊಂದಿಗೆ ನಡೆಯಿರಿ

ಈ ಗೊಂದಲಮಯ ಸಮಯಗಳಲ್ಲಿ ದೇವರೊಂದಿಗೆ ನಡೆಯಿರಿ

ಈ ಗೊಂದಲಮಯ ಸಮಯಗಳಲ್ಲಿ ದೇವರೊಂದಿಗೆ ನಡೆಯಿರಿ

“ಹನೋಕನು ದೇವರೊಂದಿಗೆ ಅನ್ಯೋನ್ಯವಾಗಿ ನಡೆದುಕೊಳ್ಳುತ್ತಾ [‘ನಡೆಯುತ್ತಾ,’ Nibv] ಇರುವಾಗ ದೇವರು ಅವನನ್ನು ಕರೆದುಕೊಂಡದ್ದರಿಂದ ಕಾಣದೆಹೋದನು.”​—⁠ಆದಿಕಾಂಡ 5:⁠24.

ಗೊಂದಲಮಯ ಸಮಯಗಳು! ಈ ಪದಗಳು, 1914ರಲ್ಲಿ ಮೆಸ್ಸೀಯ ರಾಜ್ಯವು ಜನ್ಮತಾಳಿದಂದಿನಿಂದ ಮಾನವಕುಲವು ಅನುಭವಿಸಿರುವ ಅಶಾಂತಿ ಮತ್ತು ಹಿಂಸಾಚಾರದ ವರ್ಷಗಳನ್ನು ಚೆನ್ನಾಗಿ ವರ್ಣಿಸುತ್ತವೆ. ಈ ಎಲ್ಲ ಸಮಯಾವಧಿಯಲ್ಲಿ ಮಾನವರು “ಕಡೇ ದಿವಸಗಳಲ್ಲಿ” ಜೀವಿಸುತ್ತ ಬಂದಿದ್ದಾರೆ. ಕ್ಷಾಮಗಳು, ರೋಗಗಳು, ಭೂಕಂಪಗಳು ಮತ್ತು ಯುದ್ಧಗಳಂಥ ವಿಪತ್ತುಗಳು ಮಾನವರನ್ನು ಅಸೀಮಿತ ಪ್ರಮಾಣದಲ್ಲಿ ಪೀಡಿಸಿವೆ. (2 ತಿಮೊಥೆಯ 3:1; ಪ್ರಕಟನೆ 6:1-8) ಯೆಹೋವನನ್ನು ಆರಾಧಿಸುವವರು ಸಹ ಈ ಸನ್ನಿವೇಶಗಳಿಂದ ಮುಕ್ತರಲ್ಲ. ಹೆಚ್ಚಿನಮಟ್ಟಿಗೆ ಇಲ್ಲವೆ ಸ್ವಲ್ಪಮಟ್ಟಿಗೆ ನಾವೆಲ್ಲರೂ ಈ ಕಾಲಾವಧಿಯ ಸಂಕಷ್ಟಗಳು ಮತ್ತು ಅನಿಶ್ಚಿತತೆಯೊಂದಿಗೆ ಹೆಣಗಾಡಲೇಬೇಕಾಗಿದೆ. ಜೀವನವನ್ನು ತುಂಬ ಕಷ್ಟಕರವಾಗಿ ಮಾಡುವಂಥ ವಿಷಯಗಳಲ್ಲಿ ಆರ್ಥಿಕ ಒತ್ತಡಗಳು, ರಾಜಕೀಯ ಅಶಾಂತಿ, ದುಷ್ಕೃತ್ಯ ಮತ್ತು ಅನಾರೋಗ್ಯಗಳು ಸೇರಿವೆ.

2 ಇದಕ್ಕೆ ಕೂಡಿಸಿ, “ದೇವರ ಆಜ್ಞೆಗಳನ್ನು ಕೈಕೊಂಡು ನಡೆದು ಯೇಸುವಿನ ವಿಷಯವಾದ ಸಾಕ್ಷಿಯನ್ನು” ಹೇಳುವವರ ವಿರುದ್ಧ ಸೈತಾನನು ಯುದ್ಧ ನಡೆಸುತ್ತಾ ಇರುವಾಗ, ಯೆಹೋವನ ಸೇವಕರಲ್ಲಿ ಅನೇಕರು ಅವನ ತೀವ್ರವಾದ ಹಿಂಸೆಯ ದಾಳಿಗಳನ್ನು ತಾಳಿಕೊಂಡಿದ್ದಾರೆ. (ಪ್ರಕಟನೆ 12:17) ನಮ್ಮಲ್ಲಿ ಎಲ್ಲರೂ ನೇರವಾದ ಹಿಂಸೆಯನ್ನು ಅನುಭವಿಸಿರುವುದಿಲ್ಲವಾದರೂ, ಪಿಶಾಚನಾದ ಸೈತಾನನ ಮತ್ತು ಅವನು ಮಾನವಕುಲದ ನಡುವೆ ಪ್ರೇರಿಸಿರುವ ಆತ್ಮದ ವಿರುದ್ಧ ಸತ್ಕ್ರೈಸ್ತರೆಲ್ಲರು ಹೋರಾಟ ನಡೆಸಬೇಕಾಗಿದೆ. (ಎಫೆಸ 2:2; 6:12) ಕೆಲಸದ ಸ್ಥಳದಲ್ಲಿ, ಶಾಲೆಯಲ್ಲಿ ಮತ್ತು ಬೇರೆ ಸ್ಥಳಗಳಲ್ಲಿ, ಶುದ್ಧ ಆರಾಧನೆಯಲ್ಲಿ ಯಾವುದೇ ಆಸಕ್ತಿಯಿಲ್ಲದವರೊಂದಿಗೆ ನಾವು ಸಂಪರ್ಕಕ್ಕೆ ಬರುತ್ತೇವಾದ್ದರಿಂದ ಆ ಆತ್ಮದಿಂದ ಪ್ರಭಾವಿಸಲ್ಪಡದೇ ಇರಲಿಕ್ಕಾಗಿ ನಾವು ಯಾವಾಗಲೂ ಎಚ್ಚರವಾಗಿರುವ ಅಗತ್ಯವಿದೆ.

ಅನ್ಯಜನರೊಂದಿಗಲ್ಲ, ದೇವರೊಂದಿಗೆ ನಡೆಯಿರಿ

3 ಪ್ರಥಮ ಶತಮಾನದಲ್ಲಿ ಕ್ರೈಸ್ತರು ಸಹ ಈ ಲೋಕದ ಆತ್ಮದ ವಿರುದ್ಧ ಸತತವಾಗಿ ಹೋರಾಟ ನಡೆಸಿದರು. ಮತ್ತು ಇದು ಅವರನ್ನು ಕ್ರೈಸ್ತ ಸಭೆಯ ಹೊರಗೆ ಇದ್ದವರಿಗಿಂತ ಹೆಚ್ಚು ಭಿನ್ನರನ್ನಾಗಿ ಮಾಡಿತು. ಆ ಭಿನ್ನತೆಯನ್ನು ಪೌಲನು ಈ ಮಾತುಗಳಲ್ಲಿ ವರ್ಣಿಸಿದನು: “ಆದದರಿಂದ ಅನ್ಯಜನರು ನಡೆದುಕೊಳ್ಳುವ [“ನಡೆಯುವ,” NW] ಪ್ರಕಾರ ನೀವು ಇನ್ನು ಮೇಲೆ ನಡೆದುಕೊಳ್ಳಬಾರದೆಂದು [“ನಡೆಯಬಾರದೆಂದು,” NW] ಕರ್ತನಲ್ಲಿರುವವನಾಗಿ ನಿಮಗೆ ಖಂಡಿತವಾಗಿ ಹೇಳುತ್ತೇನೆ. ಅವರು ನಿಷ್ಪ್ರಯೋಜನವಾದ ಬುದ್ಧಿಯುಳ್ಳವರಾಗಿ ನಡೆದುಕೊಳ್ಳುತ್ತಾರೆ [“ನಡೆಯುತ್ತಾರೆ,” NW]; ಅವರ ಮನಸ್ಸು ಮೊಬ್ಬಾಗಿ ಹೋಗಿದೆ, ಅವರು ತಮ್ಮ ಹೃದಯದ ಕಾಠಿಣ್ಯದ ನಿಮಿತ್ತದಿಂದಲೂ ತಮ್ಮಲ್ಲಿರುವ ಅಜ್ಞಾನದ ನಿಮಿತ್ತದಿಂದಲೂ ದೇವರಿಂದಾಗುವ ಜೀವಕ್ಕೆ ಅನ್ಯರಾಗಿದ್ದಾರೆ. ಅವರು ತಮ್ಮ ದುಸ್ಥಿತಿಗಾಗಿ ಸ್ವಲ್ಪವೂ ಚಿಂತಿಸದೆ ತಮ್ಮನ್ನು ಬಂಡುತನಕ್ಕೆ ಒಪ್ಪಿಸಿಕೊಟ್ಟು ಎಲ್ಲಾ ವಿಧವಾದ ಅಶುದ್ಧಕೃತ್ಯಗಳನ್ನು ಅತ್ಯಾಶೆಯಿಂದ ನಡಿಸುವವರಾಗಿದ್ದಾರೆ.”​—⁠ಎಫೆಸ 4:17-19.

4 ಈ ಮಾತುಗಳು, ಪೌಲನ ಮತ್ತು ನಮ್ಮ ದಿನದಲ್ಲಿನ ಈ ಲೋಕದ ಆಧ್ಯಾತ್ಮಿಕ ಹಾಗೂ ನೈತಿಕ ಗಾಢಾಂಧಕಾರವನ್ನು ಎಷ್ಟು ಸ್ಪಷ್ಟವಾಗಿ ವರ್ಣಿಸುತ್ತವೆ! ಪ್ರಥಮ ಶತಮಾನದಲ್ಲಿದ್ದಂತೆಯೇ, ಕ್ರೈಸ್ತರು ಇಂದು ‘ಅನ್ಯಜನರು ನಡೆಯುವ ಪ್ರಕಾರ ನಡೆಯುವುದಿಲ್ಲ.’ ಬದಲಾಗಿ, ಅವರು ದೇವರೊಂದಿಗೆ ನಡೆಯುವ ಅದ್ಭುತಕರ ಸುಯೋಗದಲ್ಲಿ ಆನಂದಿಸುತ್ತಾರೆ. ದೀನಸ್ಥಿತಿಯಲ್ಲಿರುವ ಅಪರಿಪೂರ್ಣ ಮಾನವರು ಯೆಹೋವನೊಂದಿಗೆ ನಡೆಯುತ್ತಾರೆ ಎಂದು ಹೇಳುವುದು ಸಮಂಜಸವಾದದ್ದಾಗಿದೆಯೋ ಎಂದು ಕೆಲವರು ಪ್ರಶ್ನಿಸಬಹುದು ಎಂಬುದು ನಿಜ. ಆದರೆ, ಅಪರಿಪೂರ್ಣ ಮಾನವರು ದೇವರೊಂದಿಗೆ ನಡೆಯಸಾಧ್ಯವಿದೆ ಎಂದು ಬೈಬಲು ತೋರಿಸುತ್ತದೆ. ಅಷ್ಟುಮಾತ್ರವಲ್ಲ, ಮಾನವರು ಹಾಗೆ ನಡೆಯುವಂತೆ ಯೆಹೋವನು ನಿರೀಕ್ಷಿಸುತ್ತಾನೆ. ಸಾಮಾನ್ಯ ಶಕ ಪೂರ್ವ ಎಂಟನೆಯ ಶತಮಾನದಲ್ಲಿ, ಪ್ರವಾದಿಯಾದ ಮೀಕನು ಈ ಪ್ರೇರಿತ ಮಾತುಗಳನ್ನು ಬರೆದನು: “ನ್ಯಾಯವನ್ನು ಆಚರಿಸುವದು, ಕರುಣೆಯಲ್ಲಿ ಆಸಕ್ತನಾಗಿರುವದು, ನಿನ್ನ ದೇವರಿಗೆ ನಮ್ರವಾಗಿ ನಡೆದುಕೊಳ್ಳುವದು [“ನಡೆಯುವುದು,” NW], ಇಷ್ಟನ್ನೇ ಹೊರತು ಯೆಹೋವನು ನಿನ್ನಿಂದ ಇನ್ನೇನು ಅಪೇಕ್ಷಿಸುವನು?”​—⁠ಮೀಕ 6:⁠8.

ಹೇಗೆ ಮತ್ತು ಏಕೆ ದೇವರೊಂದಿಗೆ ನಡೆಯಬೇಕು?

5 ಸರ್ವಶಕ್ತನಾಗಿರುವ ಅದೃಶ್ಯ ದೇವರೊಂದಿಗೆ ನಾವು ಹೇಗೆ ನಡೆಯಸಾಧ್ಯವಿದೆ? ಜೊತೆ ಮಾನವರೊಂದಿಗೆ ನಾವು ನಡೆಯುವಂಥ ರೀತಿಯಲ್ಲಿ ಅಲ್ಲ ಎಂಬುದಂತೂ ಸ್ಪಷ್ಟ. ಬೈಬಲಿನಲ್ಲಿ “ನಡೆಯುವುದು” ಎಂಬ ಅಭಿವ್ಯಕ್ತಿಯ ಅರ್ಥ, “ಒಂದು ನಿರ್ದಿಷ್ಟ ಮಾರ್ಗಕ್ರಮವನ್ನು ಹಿಂಬಾಲಿಸುವುದು” ಎಂದಾಗಿರಸಾಧ್ಯವಿದೆ. * ನಾವು ಇದನ್ನು ಮನಸ್ಸಿನಲ್ಲಿಟ್ಟವರಾಗಿ, ದೇವರೊಂದಿಗೆ ನಡೆಯುವಂಥ ಒಬ್ಬ ವ್ಯಕ್ತಿಯು ದೇವರಿಂದ ತಿಳಿಸಲ್ಪಟ್ಟ ಮತ್ತು ಆತನಿಗೆ ಮೆಚ್ಚಿಗೆಯಾಗಿರುವ ಮಾರ್ಗಕ್ರಮವನ್ನೇ ಅನುಸರಿಸುತ್ತಾನೆ ಎಂಬುದನ್ನು ಅರ್ಥಮಾಡಿಕೊಳ್ಳುತ್ತೇವೆ. ಇಂಥ ಒಂದು ಮಾರ್ಗವನ್ನು ಬೆನ್ನಟ್ಟುವುದು ನಮ್ಮ ಸುತ್ತಲೂ ಇರುವ ಅಧಿಕಾಂಶ ಜನರಿಂದ ನಮ್ಮನ್ನು ಭಿನ್ನರನ್ನಾಗಿ ಮಾಡುತ್ತದೆ. ಆದರೂ, ಒಬ್ಬ ಕ್ರೈಸ್ತನಿಗೆ ಇರುವ ಏಕಮಾತ್ರ ಯೋಗ್ಯ ಆಯ್ಕೆ ಇದೇ ಆಗಿದೆ. ಏಕೆ? ಇದಕ್ಕೆ ಅನೇಕ ಕಾರಣಗಳಿವೆ.

6 ಮೊದಲನೆಯದಾಗಿ, ಯೆಹೋವನು ನಮ್ಮ ಸೃಷ್ಟಿಕರ್ತನಾಗಿದ್ದಾನೆ, ನಮ್ಮ ಜೀವದ ಬುಗ್ಗೆಯಾಗಿದ್ದಾನೆ ಮತ್ತು ಜೀವಪೋಷಣೆಗೆ ಅಗತ್ಯವಿರುವುದನ್ನೆಲ್ಲ ಆತನು ನಮಗೆ ಒದಗಿಸುತ್ತಾನೆ. (ಪ್ರಕಟನೆ 4:11) ಈ ಕಾರಣದಿಂದಾಗಿ, ಹೇಗೆ ನಡೆಯಬೇಕು ಎಂಬುದನ್ನು ನಮಗೆ ಹೇಳುವ ಹಕ್ಕು ಆತನಿಗೆ ಮಾತ್ರ ಇದೆ. ಇದಕ್ಕೆ ಕೂಡಿಸಿ, ದೇವರೊಂದಿಗೆ ನಡೆಯುವುದು, ಸಾಧ್ಯವಿರುವುದರಲ್ಲೇ ಅತ್ಯಂತ ಪ್ರಯೋಜನಕರವಾದ ಜೀವನಮಾರ್ಗವಾಗಿದೆ. ಯಾರು ಯೆಹೋವನೊಂದಿಗೆ ನಡೆಯುತ್ತಾರೋ ಅವರಿಗಾಗಿ ಆತನು ಪಾಪಕ್ಷಮಾಪಣೆಯ ಒದಗಿಸುವಿಕೆಯನ್ನು ಮಾಡಿದ್ದಾನೆ ಮತ್ತು ಅವರಿಗೆ ನಿತ್ಯಜೀವದ ನಿಶ್ಚಿತ ನಿರೀಕ್ಷೆಯನ್ನು ನೀಡುತ್ತಾನೆ. ಪ್ರೀತಿಪೂರ್ಣನಾದ ನಮ್ಮ ಸ್ವರ್ಗೀಯ ತಂದೆಯು ವಿವೇಕಯುತವಾದ ಸಲಹೆಯನ್ನು ಸಹ ನೀಡುತ್ತಾನೆ; ಇದು ಯಾರು ಆತನೊಂದಿಗೆ ನಡೆಯುತ್ತಾರೋ ಅವರು ಅಪರಿಪೂರ್ಣರಾಗಿದ್ದು ಸೈತಾನನ ವಶದಲ್ಲಿ ಬಿದ್ದಿರುವಂಥ ಒಂದು ಲೋಕದಲ್ಲಿ ಜೀವಿಸುತ್ತಿರುವುದಾದರೂ ಜೀವನದಲ್ಲಿ ಯಶಸ್ಸನ್ನು ಕಂಡುಕೊಳ್ಳುವಂತೆ ಸಹಾಯಮಾಡುತ್ತದೆ. (ಯೋಹಾನ 3:16; 2 ತಿಮೊಥೆಯ 3:15, 16; 1 ಯೋಹಾನ 1:8; 2:25; 5:19) ದೇವರೊಂದಿಗೆ ನಡೆಯಲಿಕ್ಕಾಗಿರುವ ಇನ್ನೊಂದು ಕಾರಣವು ಯಾವುದೆಂದರೆ, ಹೀಗೆ ಮಾಡಲು ನಾವು ಮನಃಪೂರ್ವಕವಾಗಿ ಸಿದ್ಧರಾಗಿರುವುದು ಸಭೆಯ ಶಾಂತಿ ಮತ್ತು ಐಕ್ಯಭಾವಕ್ಕೆ ನೆರವು ನೀಡುತ್ತದೆ.​—⁠ಕೊಲೊಸ್ಸೆ 3:​15, 16.

7 ಕೊನೆಯ ಮತ್ತು ಅತಿ ಪ್ರಾಮುಖ್ಯ ಕಾರಣವು, ನಾವು ದೇವರೊಂದಿಗೆ ನಡೆಯುವಾಗ, ಹಿಂದೆ ಏದೆನ್‌ ತೋಟದಲ್ಲಿ ಎಬ್ಬಿಸಲ್ಪಟ್ಟ ಪರಮಾಧಿಕಾರದ ಭಾರಿ ದೊಡ್ಡ ವಿವಾದಾಂಶದ ವಿಷಯದಲ್ಲಿ ನಮ್ಮ ನಿಲುವೇನು ಎಂಬುದನ್ನು ತೋರಿಸುತ್ತೇವೆ. (ಆದಿಕಾಂಡ 3:​1-6) ನಮ್ಮ ಜೀವನಮಾರ್ಗದ ಮೂಲಕ ನಾವು ಸಂಪೂರ್ಣವಾಗಿ ಯೆಹೋವನ ಪಕ್ಷದಲ್ಲಿದ್ದೇವೆ ಎಂಬುದನ್ನು ತೋರಿಸಿಕೊಡುತ್ತೇವೆ ಮತ್ತು ಆತನೊಬ್ಬನೇ ಹಕ್ಕುಬದ್ಧ ಪರಮಾಧಿಕಾರಿಯಾಗಿದ್ದಾನೆ ಎಂಬುದನ್ನು ನಿರ್ಭಯವಾಗಿ ಸಾರುತ್ತೇವೆ. (ಕೀರ್ತನೆ 83:18) ಹೀಗೆ, ದೇವರ ನಾಮವು ಪವಿತ್ರೀಕರಿಸಲ್ಪಡಲಿ ಮತ್ತು ಆತನ ಚಿತ್ತವು ನೆರವೇರಲಿ ಎಂಬ ನಮ್ಮ ಪ್ರಾರ್ಥನೆಗೆ ಹೊಂದಿಕೆಯಲ್ಲಿ ಕ್ರಿಯೆಗೈಯುತ್ತೇವೆ. (ಮತ್ತಾಯ 6:9, 10) ಯಾರು ದೇವರೊಂದಿಗೆ ನಡೆಯುವ ಆಯ್ಕೆಮಾಡಿದ್ದಾರೋ ಅವರು ಎಷ್ಟು ವಿವೇಕಯುತರಾಗಿದ್ದಾರೆ! ಯೆಹೋವನು “ಮಾತ್ರವೇ ವಿವೇಕಿ”ಯಾಗಿರುವುದರಿಂದ, ತಾವು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ದೇವೆ ಎಂಬ ದೃಢನಿಶ್ಚಿತತೆ ಅವರಿಗಿರಸಾಧ್ಯವಿದೆ. ಆತನೆಂದೂ ತಪ್ಪು ಮಾಡುವುದಿಲ್ಲ.​—⁠ರೋಮಾಪುರ 16:27.

8 ಹಾಗಾದರೆ, ಲೋಕದಲ್ಲಿನ ಸನ್ನಿವೇಶವು ಇಷ್ಟೊಂದು ಗೊಂದಲಮಯವಾಗಿದ್ದು, ಅಧಿಕಾಂಶ ಜನರಿಗೆ ಯೆಹೋವನ ಸೇವೆಮಾಡುವುದರಲ್ಲಿ ಆಸಕ್ತಿಯಿಲ್ಲದಿರುವಂಥ ಪರಿಸ್ಥಿತಿಯಲ್ಲಿ ಕ್ರೈಸ್ತರು ಯಾವ ರೀತಿಯಲ್ಲಿ ಜೀವಿಸಬೇಕಾಗಿದೆಯೋ ಆ ರೀತಿಯಲ್ಲಿ ಜೀವಿಸುವುದು ಹೇಗೆ ಸಾಧ್ಯ? ತುಂಬ ಕಷ್ಟಕರವಾದ ಸಮಯಗಳಲ್ಲಿ ತಮ್ಮ ಸಮಗ್ರತೆಯನ್ನು ಕಾಪಾಡಿಕೊಂಡ ಪುರಾತನಕಾಲದ ನಂಬಿಗಸ್ತ ಪುರುಷರನ್ನು ಪರಿಗಣಿಸುವಾಗ ನಾವು ಇದಕ್ಕೆ ಉತ್ತರವನ್ನು ಕಂಡುಕೊಳ್ಳುವೆವು. ಇವರಲ್ಲಿ ಇಬ್ಬರು ಹನೋಕ ಮತ್ತು ನೋಹರಾಗಿದ್ದಾರೆ. ಅವರಿಬ್ಬರೂ ನಾವು ಇಂದು ಜೀವಿಸುತ್ತಿರುವಂಥದ್ದೇ ರೀತಿಯ ಗೊಂದಲಮಯ ಸಮಯಗಳಲ್ಲಿ ಜೀವಿಸುತ್ತಿದ್ದರು. ಆಗ ದುಷ್ಟತನವು ವ್ಯಾಪಕವಾಗಿ ಹಬ್ಬಿತ್ತು. ನೋಹನ ದಿನಗಳಲ್ಲಿ ಭೂಮಿಯು ಹಿಂಸಾಚಾರ ಮತ್ತು ಅನೈತಿಕತೆಯಿಂದ ತುಂಬಿತ್ತು. ಆದರೂ, ಹನೋಕ ಮತ್ತು ನೋಹ ತಮ್ಮ ಕಾಲದ ಲೋಕದ ಆತ್ಮವನ್ನು ಪ್ರತಿರೋಧಿಸಿ ಯೆಹೋವನೊಂದಿಗೆ ನಡೆದರು. ಇದನ್ನು ಮಾಡಲು ಅವರು ಹೇಗೆ ಶಕ್ತರಾದರು? ಈ ಪ್ರಶ್ನೆಯನ್ನು ಉತ್ತರಿಸಲಿಕ್ಕಾಗಿ, ಈ ಲೇಖನದಲ್ಲಿ ನಾವು ಹನೋಕನ ಉದಾಹರಣೆಯ ಕುರಿತು ಚರ್ಚಿಸುವೆವು. ಮುಂದಿನ ಲೇಖನದಲ್ಲಿ ನೋಹನ ಕುರಿತು ಪರಿಗಣಿಸುವೆವು.

ಗೊಂದಲಮಯ ಸಮಯಗಳಲ್ಲಿ ಹನೋಕನು ದೇವರೊಂದಿಗೆ ನಡೆದನು

9 ದೇವರೊಂದಿಗೆ ನಡೆದವನೆಂದು ಶಾಸ್ತ್ರವಚನಗಳಲ್ಲಿ ವರ್ಣಿಸಲ್ಪಟ್ಟಿರುವ ಪ್ರಥಮ ವ್ಯಕ್ತಿ ಹನೋಕನಾಗಿದ್ದಾನೆ. ಬೈಬಲ್‌ ದಾಖಲೆಯು ಹೇಳುವುದು: “ಮೆತೂಷೆಲಹನು ಹುಟ್ಟಿದ ತರುವಾಯ [ಹನೋಕನು] . . . ದೇವರೊಂದಿಗೆ ನಡೆದನು.” (ಆದಿಕಾಂಡ 5:​22, NIBV) ತದನಂತರ, ಹನೋಕನು ಎಷ್ಟು ವರುಷ ಬದುಕಿದನು ಎಂಬುದನ್ನು ದಾಖಲೆಯು ತಿಳಿಸುತ್ತದೆ. ಅದು, ನಮ್ಮ ಜೀವನಾಯುಷ್ಯಕ್ಕೆ ಹೋಲಿಸುವಾಗ ಬಹಳ ದೀರ್ಘವಾದದ್ದಾಗಿ ಕಂಡುಬರುವುದಾದರೂ, ಆಗಿನ ಕಾಲಕ್ಕೆ ಹೋಲಿಸುವಾಗ ಅಲ್ಪಾಯುಷ್ಯವಾಗಿತ್ತು. ದಾಖಲೆಯು ಮುಂದುವರಿಸಿ ಹೀಗೆ ಹೇಳುತ್ತದೆ: “ಹನೋಕನು ದೇವರೊಂದಿಗೆ ಅನ್ಯೋನ್ಯವಾಗಿ ನಡೆದುಕೊಳ್ಳುತ್ತಾ [‘ನಡೆಯುತ್ತಾ,’ NIBV] ಇರುವಾಗ ದೇವರು ಅವನನ್ನು ಕರೆದುಕೊಂಡದ್ದರಿಂದ ಕಾಣದೆಹೋದನು.” (ಆದಿಕಾಂಡ 5:24) ವಿರೋಧಿಗಳು ಹನೋಕನ ಮೇಲೆ ಕೈಮಾಡುವ ಮೊದಲು ಯೆಹೋವನು ಅವನನ್ನು ಜೀವಿತರ ಲೋಕದಿಂದ ಮರಣದ ನಿದ್ರಾವಸ್ಥೆಗೆ ಸ್ಥಳಾಂತರಿಸಿದನು ಎಂಬುದು ಸುವ್ಯಕ್ತ. (ಇಬ್ರಿಯ 11:​5, 13) ಈ ಚುಟುಕಾದ ವಚನಗಳು ಮಾತ್ರವಲ್ಲದೆ, ಬೈಬಲಿನ ಇನ್ನು ಕೆಲವು ಸ್ಥಳಗಳಲ್ಲಿ ಹನೋಕನ ಬಗ್ಗೆ ತಿಳಿಸಲಾಗಿದೆ. ಆದರೂ, ನಮಗಿರುವ ಈ ಮಾಹಿತಿಯಿಂದ ಮತ್ತು ಇತರ ಸೂಚನೆಗಳಿಂದ, ಹನೋಕನ ಕಾಲವು ಗೊಂದಲಮಯವಾಗಿತ್ತು ಎಂದು ಹೇಳಲು ನಮಗೆ ಸಕಾರಣವಿದೆ.

10 ಉದಾಹರಣೆಗೆ, ಆದಾಮನು ಪಾಪಗೈದ ಬಳಿಕ ಮಾನವಕುಲದಲ್ಲಿ ಭ್ರಷ್ಟತೆಯು ಎಷ್ಟು ಬೇಗನೆ ಹಬ್ಬಿತು ಎಂಬುದನ್ನು ಪರಿಗಣಿಸಿರಿ. ಆದಾಮನ ಚೊಚ್ಚಲಮಗನಾದ ಕಾಯಿನನು ತನ್ನ ತಮ್ಮನಾದ ಹೇಬೆಲನನ್ನು ಕೊಂದಾಗ, ಅವನು ಪ್ರಥಮ ಮಾನವ ಕೊಲೆಗಾರನಾಗಿ ಪರಿಣಮಿಸಿದನು ಎಂದು ಬೈಬಲು ನಮಗೆ ತಿಳಿಸುತ್ತದೆ. (ಆದಿಕಾಂಡ 4:8-10) ಹೇಬೆಲನ ಹಿಂಸಾತ್ಮಕ ಮರಣದ ಬಳಿಕ, ಆದಾಮಹವ್ವರಿಗೆ ಇನ್ನೊಬ್ಬ ಮಗನು ಹುಟ್ಟಿದನು ಮತ್ತು ಅವರು ಅವನಿಗೆ ಸೇತನೆಂದು ಹೆಸರಿಟ್ಟರು. ಅವನ ಕುರಿತು ನಾವು ಓದುವುದು: “ಸೇತನಿಗೆ ಒಬ್ಬ ಮಗನು ಹುಟ್ಟಿದನು. ಅವನಿಗೆ, ‘ಎನೋಷ್‌,’ ಎಂದು ಹೆಸರಿಟ್ಟನು. ಆ ಕಾಲದಲ್ಲಿ ಜನರು, ‘ಯೆಹೋವ,’ ಎಂಬ ಹೆಸರನ್ನು ಕರೆಯುವುದಕ್ಕೆ ಆರಂಭಿಸಿದರು.” (ಆದಿಕಾಂಡ 4:​25, 26, NIBV) ದುಃಖಕರವಾಗಿಯೇ, ‘ಯೆಹೋವ ಎಂಬ ಹೆಸರನ್ನು ಕರೆಯುವುದು’ ಧರ್ಮಭ್ರಷ್ಟ ರೀತಿಯಲ್ಲಾಗಿತ್ತು. * ಎನೋಷನು ಹುಟ್ಟಿ ಅನೇಕ ವರ್ಷಗಳು ಕಳೆದ ಬಳಿಕ, ಕಾಯಿನನ ವಂಶದವನಾಗಿದ್ದ ಲೆಮೆಕನೆಂಬ ವ್ಯಕ್ತಿಯು ತನ್ನ ಇಬ್ಬರು ಪತ್ನಿಯರಿಗಾಗಿ ರಚಿಸಿದ ಗೀತೆಯಲ್ಲಿ ತನ್ನನ್ನು ಗಾಯಗೊಳಿಸಿದಂಥ ಒಬ್ಬ ಯೌವನಸ್ಥನನ್ನು ತಾನು ಕೊಂದೆನೆಂದು ತಿಳಿಸಿದನು. ಅವನು ಹೀಗೂ ಎಚ್ಚರಿಕೆ ನೀಡಿದನು: “ಕಾಯಿನನನ್ನು ಕೊಂದವನಿಗೆ ಏಳರಷ್ಟು ಪ್ರತಿದಂಡನೆ ಬರುವದಾದರೆ ಲೆಮೆಕನನ್ನು ಹೊಡೆಯುವವನಿಗೆ ಎಪ್ಪತ್ತೇಳರಷ್ಟಾಗುವದಲ್ಲವೇ.”​—⁠ಆದಿಕಾಂಡ 4:10, 19, 23, 24.

11 ಇಷ್ಟರ ತನಕ ಕೊಡಲ್ಪಟ್ಟಿರುವ ಸಂಕ್ಷಿಪ್ತ ವಾಸ್ತವಾಂಶಗಳು, ಏದೆನ್‌ ತೋಟದಲ್ಲಿ ಸೈತಾನನಿಂದ ಪರಿಚಯಿಸಲ್ಪಟ್ಟ ಭ್ರಷ್ಟತೆಯು ಆದಾಮನ ಸಂತತಿಯವರ ನಡುವೆ ದುಷ್ಟತನವು ತೀವ್ರಗತಿಯಲ್ಲಿ ಹಬ್ಬುವಂತೆ ಮಾಡಿತು ಎಂಬುದನ್ನು ಸೂಚಿಸುತ್ತವೆ. ಅಂಥ ಒಂದು ಲೋಕದಲ್ಲಿ ಹನೋಕನು, ಯಾರ ಪ್ರಬಲವಾದ ಪ್ರೇರಿತ ಮಾತುಗಳು ಇಂದಿನ ವರೆಗೂ ಅನ್ವಯಯೋಗ್ಯವಾಗಿವೆಯೋ ಆ ಯೆಹೋವನ ಪ್ರವಾದಿಯಾಗಿದ್ದನು. ಹನೋಕನು ಹೀಗೆ ಪ್ರವಾದಿಸಿದನು ಎಂದು ಯೂದನು ವರದಿಸುತ್ತಾನೆ: “ಇಗೋ ಕರ್ತನು [“ಯೆಹೋವನು,” NW] ಲಕ್ಷಾಂತರ ಪರಿಶುದ್ಧದೂತರನ್ನು ಕೂಡಿಕೊಂಡು ಎಲ್ಲರಿಗೆ ನ್ಯಾಯತೀರಿಸುವದಕ್ಕೂ ಭಕ್ತಿಹೀನರೆಲ್ಲರು ಮಾಡಿದ ಭಕ್ತಿಯಿಲ್ಲದ ಎಲ್ಲಾ ಕೃತ್ಯಗಳ ವಿಷಯವಾಗಿ ಮತ್ತು ಭಕ್ತಿಯಿಲ್ಲದ ಪಾಪಿಷ್ಠರು ತನ್ನ ಮೇಲೆ ಹೇಳಿದ ಎಲ್ಲಾ ಕಠಿನವಾದ ಮಾತುಗಳ ವಿಷಯವಾಗಿ ಅವರನ್ನು ಖಂಡಿಸುವದಕ್ಕೂ ಬಂದನು.” (ಯೂದ 14, 15) ಈ ಮಾತುಗಳು ಅರ್ಮಗೆದೋನಿನಲ್ಲಿ ತಮ್ಮ ಅಂತಿಮ ನೆರವೇರಿಕೆಯನ್ನು ಪಡೆದುಕೊಳ್ಳುವವು. (ಪ್ರಕಟನೆ 16:​14, 16) ಆದರೂ, ಹನೋಕನ ದಿನದಲ್ಲಿಯೂ “ಭಕ್ತಿಯಿಲ್ಲದ ಪಾಪಿಷ್ಠರು” ಅನೇಕರಿದ್ದರು ಮತ್ತು ಅವರು ಹನೋಕನ ಪ್ರವಾದನೆಯನ್ನು ಕೇಳಿಸಿಕೊಂಡು ಕಿರಿಕಿರಿಗೊಂಡರು ಎಂಬ ವಿಷಯದಲ್ಲಿ ನಾವು ಖಾತ್ರಿಯಿಂದಿರಸಾಧ್ಯವಿದೆ. ಯೆಹೋವನು ಆ ಪ್ರವಾದಿಯನ್ನು ಅವರ ಹಿಡಿತಕ್ಕೆ ಸಿಗದಂತೆ ಕೊಂಡೊಯ್ದದ್ದು ಎಷ್ಟು ಪ್ರೀತಿಪರವಾದದ್ದಾಗಿತ್ತು!

ದೇವರೊಂದಿಗೆ ನಡೆಯುವಂತೆ ಹನೋಕನನ್ನು ಯಾವುದು ಬಲಪಡಿಸಿತು?

12 ಹಿಂದೆ ಏದೆನ್‌ ತೋಟದಲ್ಲಿ ಆದಾಮಹವ್ವರು ಸೈತಾನನ ಮಾತಿಗೆ ಮರುಳಾದರು ಮತ್ತು ಆದಾಮನು ಯೆಹೋವನ ವಿರುದ್ಧ ದಂಗೆಯೆದ್ದನು. (ಆದಿಕಾಂಡ 3:1-6) ಅವರ ಮಗನಾದ ಹೇಬೆಲನಾದರೋ ಭಿನ್ನವಾದ ಮಾರ್ಗಕ್ರಮವನ್ನು ಅನುಸರಿಸಿ, ಯೆಹೋವನ ಅನುಗ್ರಹಕ್ಕೆ ಪಾತ್ರನಾದನು. (ಆದಿಕಾಂಡ 4:3, 4) ಅಸಂತೋಷಕರವಾಗಿ, ಆದಾಮನ ಸಂತತಿಯವರಲ್ಲಿ ಹೆಚ್ಚಿನವರು ಹೇಬೆಲನಂತೆ ಇರಲಿಲ್ಲ. ಆದರೂ, ನೂರಾರು ವರ್ಷಗಳ ತರುವಾಯ ಜನಿಸಿದ ಹನೋಕನು ಹೇಬೆಲನಂತಿದ್ದನು. ಆದಾಮನ ಸಂತತಿಯವರಾದ ಇತರ ಅನೇಕರು ಮತ್ತು ಹನೋಕನ ನಡುವೆ ಯಾವ ಭಿನ್ನತೆಯಿತ್ತು? ಅಪೊಸ್ತಲ ಪೌಲನು ಮುಂದಿನ ಮಾತುಗಳನ್ನು ಬರೆದಾಗ ಈ ಪ್ರಶ್ನೆಯನ್ನು ಉತ್ತರಿಸಿದನು: “ಹನೋಕನು ಮರಣವನ್ನು ಅನುಭವಿಸದೆ ಒಯ್ಯಲ್ಪಟ್ಟದ್ದು ನಂಬಿಕೆಯಿಂದಲೇ; ಅವನನ್ನು ದೇವರು ತೆಗೆದುಕೊಂಡುಹೋದದರಿಂದ ಅವನು ಯಾರಿಗೂ ಸಿಕ್ಕಲಿಲ್ಲ; ಅವನು ಒಯ್ಯಲ್ಪಡುವದಕ್ಕಿಂತ ಮೊದಲು ದೇವರಿಗೆ ಮೆಚ್ಚಿಕೆಯಾದವನಾಗಿದ್ದನೆಂದು ಸಾಕ್ಷಿ ಉಂಟು.” (ಇಬ್ರಿಯ 11:5) ಹನೋಕನು, ನಂಬಿಕೆಯ ಅತ್ಯುತ್ತಮ ಮಾದರಿಗಳಾಗಿದ್ದ ದೊಡ್ಡ ‘ಮೇಘದೋಪಾದಿ ಇರುವ [ಕ್ರೈಸ್ತಪೂರ್ವ] ಸಾಕ್ಷಿಗಳ’ ಭಾಗವಾಗಿದ್ದನು. (ಇಬ್ರಿಯ 12:1) ಇಂದು ನಮ್ಮಲ್ಲಿ ಹೆಚ್ಚಿನವರ ಜೀವನಾಯುಷ್ಯಕ್ಕಿಂತ ಮೂರುಪಟ್ಟು ಹೆಚ್ಚಾಗಿದ್ದ ಅವನ ಜೀವಮಾನಕಾಲದ ಮುನ್ನೂರು ವರ್ಷಗಳಾದ್ಯಂತ ಒಳ್ಳೇ ನಡತೆಯನ್ನು ಕಾಪಾಡಿಕೊಳ್ಳುತ್ತಾ ತಾಳಿಕೊಳ್ಳುವಂತೆ ಹನೋಕನಿಗೆ ಸಹಾಯಮಾಡಿದ್ದು ನಂಬಿಕೆಯೇ ಆಗಿತ್ತು!

13 “ನಂಬಿಕೆಯೋ ನಾವು ನಿರೀಕ್ಷಿಸುವವುಗಳ ವಿಷಯವಾಗಿ ಭರವಸದಿಂದಿರುವದೂ ಕಣ್ಣಿಗೆ ಕಾಣದವುಗಳನ್ನು ನಿಜವೆಂದು ತಿಳುಕೊಳ್ಳುವದೂ ಆಗಿದೆ” ಎಂದು ಪೌಲನು ಬರೆದಾಗ, ಅವನು ಹನೋಕನ ಹಾಗೂ ಇತರ ಸಾಕ್ಷಿಗಳ ನಂಬಿಕೆಯನ್ನು ವರ್ಣಿಸಿದನು. (ಇಬ್ರಿಯ 11:1) ಹೌದು, ನಂಬಿಕೆಯು ಭರವಸೆಯಿಂದ ಕೂಡಿದ ನಿರೀಕ್ಷೆಯಾಗಿದ್ದು, ನಾವು ನಿರೀಕ್ಷಿಸುವ ವಿಷಯಗಳು ಖಂಡಿತವಾಗಿಯೂ ನೆರವೇರುತ್ತವೆ ಎಂಬ ಆಶ್ವಾಸನೆಗಳ ಮೇಲಾಧಾರಿತವಾಗಿದೆ. ಇದೆಷ್ಟು ಬಲವಾದ ನಿರೀಕ್ಷೆಯನ್ನು ಒಳಗೂಡಿದೆಯೆಂದರೆ, ನಮ್ಮ ಜೀವನದಲ್ಲಿ ನಾವು ಯಾವುದನ್ನು ಅತಿ ಪ್ರಾಮುಖ್ಯವಾದದ್ದೆಂದು ಪರಿಗಣಿಸುತ್ತೇವೋ ಅದನ್ನು ಇದು ಪ್ರಭಾವಿಸುತ್ತದೆ. ಹನೋಕನ ಸುತ್ತಲೂ ಇದ್ದ ಲೋಕವು ದೇವರೊಂದಿಗೆ ನಡೆಯಲಿಲ್ಲವಾದರೂ, ಈ ರೀತಿಯ ನಂಬಿಕೆಯೇ ದೇವರೊಂದಿಗೆ ನಡೆಯುವಂತೆ ಹನೋಕನನ್ನು ಶಕ್ತನನ್ನಾಗಿ ಮಾಡಿತು.

14 ನಿಜವಾದ ನಂಬಿಕೆಯು ನಿಷ್ಕೃಷ್ಟವಾದ ಜ್ಞಾನದ ಮೇಲಾಧಾರಿತವಾಗಿದೆ. ಹನೋಕನಿಗೆ ಯಾವ ಜ್ಞಾನವಿತ್ತು? (ರೋಮಾಪುರ 10:14, 17; 1 ತಿಮೊಥೆಯ 2:4) ಏದೆನಿನಲ್ಲಿ ನಡೆದ ಘಟನೆಗಳ ಕುರಿತು ಅವನು ತಿಳಿದವನಾಗಿದ್ದನು ಎಂಬುದರಲ್ಲಿ ಸಂಶಯವೇ ಇಲ್ಲ. ಆಗಿನ್ನೂ ಅಸ್ತಿತ್ವದಲ್ಲಿದ್ದು, ಮಾನವರಿಗೆ ಪ್ರವೇಶ ನಿಷೇಧವಿದ್ದ ಏದೆನ್‌ ತೋಟದಲ್ಲಿ ಜೀವನವು ಹೇಗಿತ್ತು ಎಂಬುದರ ಕುರಿತು ಸಹ ಅವನು ಕೇಳಿಸಿಕೊಂಡಿದ್ದಿರಬಹುದು. (ಆದಿಕಾಂಡ 3:23, 24) ಅಷ್ಟುಮಾತ್ರವಲ್ಲ, ಆದಾಮನ ಸಂತಾನದವರು ಭೂಮಿಯನ್ನು ತುಂಬಿಕೊಂಡು, ಇಡೀ ಭೂಗ್ರಹವನ್ನು ಮೂಲ ಪರದೈಸ್‌ನಂತೆ ಮಾಡಬೇಕೆಂಬ ದೇವರ ಉದ್ದೇಶವನ್ನೂ ಹನೋಕನು ಅರಿತವನಾಗಿದ್ದನು. (ಆದಿಕಾಂಡ 1:28) ಇದಕ್ಕೆ ಕೂಡಿಸಿ, ಸೈತಾನನ ತಲೆಯನ್ನು ಜಜ್ಜುವ ಮತ್ತು ಸೈತಾನನ ವಂಚನೆಯ ಕೆಟ್ಟ ಪರಿಣಾಮಗಳನ್ನು ಸರಿಪಡಿಸುವಂಥ ಒಂದು ಸಂತಾನವನ್ನು ಉಂಟುಮಾಡುವ ಯೆಹೋವನ ವಾಗ್ದಾನವನ್ನು ಸಹ ಅವನು ಖಂಡಿತವಾಗಿಯೂ ಅಮೂಲ್ಯವಾಗಿ ಪರಿಗಣಿಸಿದ್ದನು. (ಆದಿಕಾಂಡ 3:15) ವಾಸ್ತವದಲ್ಲಿ, ಯೂದನ ಪುಸ್ತಕದಲ್ಲಿ ಜೋಪಾನವಾಗಿ ಸಂರಕ್ಷಿಸಲ್ಪಟ್ಟಿರುವ ಹನೋಕನ ಸ್ವಪ್ರೇರಿತ ಪ್ರವಾದನೆಯು, ಸೈತಾನನ ಸಂತಾನದ ವಿನಾಶವನ್ನು ಮುಂತಿಳಿಸುತ್ತದೆ. ಹನೋಕನಿಗೆ ನಂಬಿಕೆಯಿದ್ದ ಕಾರಣವೇ, ‘ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುವವನಾಗಿರುವ’ ಯೆಹೋವನನ್ನು ಅವನು ಆರಾಧಿಸಿದನು ಎಂಬುದು ನಮಗೆ ತಿಳಿದಿದೆ. (ಇಬ್ರಿಯ 11:6) ಆದುದರಿಂದ, ನಾವು ಪಡೆದುಕೊಂಡಿರುವಷ್ಟು ಜ್ಞಾನವು ಹನೋಕನಲ್ಲಿ ಇರಲಿಲ್ಲವಾದರೂ, ಬಲವಾದ ನಂಬಿಕೆಗಾಗಿ ತಳಪಾಯವನ್ನು ಹಾಕಲು ಅಗತ್ಯವಿರುವಷ್ಟು ಜ್ಞಾನವು ಅವನಲ್ಲಿತ್ತು. ಇಂಥ ನಂಬಿಕೆಯ ಸಹಾಯದಿಂದ ಅವನು ಆ ಗೊಂದಲಮಯ ಸಮಯಗಳಲ್ಲೆಲ್ಲ ತನ್ನ ಸಮಗ್ರತೆಯನ್ನು ಕಾಪಾಡಿಕೊಂಡನು.

ಹನೋಕನ ಮಾದರಿಯನ್ನು ಅನುಕರಿಸಿರಿ

15 ಹನೋಕನಂತೆಯೇ ನಾವು ಸಹ ಇಂದು ಅಸ್ತಿತ್ವದಲ್ಲಿರುವ ಗೊಂದಲಮಯ ಸಮಯಗಳಲ್ಲಿ ಯೆಹೋವನನ್ನು ಸಂತೋಷಪಡಿಸಲು ಬಯಸುವುದರಿಂದ, ಅವನ ಮಾದರಿಯನ್ನು ಅನುಸರಿಸುವುದು ಒಳ್ಳೇದು. ಯೆಹೋವನ ಮತ್ತು ಆತನ ಉದ್ದೇಶದ ನಿಷ್ಕೃಷ್ಟ ಜ್ಞಾನವನ್ನು ನಾವು ಪಡೆದುಕೊಂಡು ಅದನ್ನು ಕಾಪಾಡಿಕೊಳ್ಳಬೇಕು. ಆದರೆ ಇದಕ್ಕಿಂತಲೂ ಹೆಚ್ಚಿನದ್ದರ ಅಗತ್ಯವಿದೆ. ಆ ನಿಷ್ಕೃಷ್ಟ ಜ್ಞಾನವು ನಮ್ಮ ಜೀವನಮಾರ್ಗವನ್ನು ನಿರ್ದೇಶಿಸುವಂತೆ ಬಿಡುವ ಅಗತ್ಯವಿದೆ. (ಕೀರ್ತನೆ 119:101; 2 ಪೇತ್ರ 1:19) ನಮ್ಮ ಎಲ್ಲ ಆಲೋಚನೆಗಳು ಮತ್ತು ಕೃತ್ಯಗಳಲ್ಲಿ ಯಾವಾಗಲೂ ದೇವರನ್ನು ಮೆಚ್ಚಿಸಲು ಪ್ರಯತ್ನಿಸುತ್ತಾ, ಆತನ ಆಲೋಚನೆಯಿಂದ ಮಾರ್ಗದರ್ಶಿಸಲ್ಪಡುವ ಅಗತ್ಯವಿದೆ.

16 ಹನೋಕನ ಸಮಯದಲ್ಲಿ ಬೇರೆ ಯಾರು ಯೆಹೋವನ ಸೇವೆಮಾಡುತ್ತಿದ್ದರು ಎಂಬುದರ ಕುರಿತಾದ ದಾಖಲೆ ನಮಗಿಲ್ಲವಾದರೂ, ಅವನು ಮಾತ್ರವೇ ದೇವರ ಸೇವಕನಾಗಿದ್ದನು ಅಥವಾ ಒಂದು ಚಿಕ್ಕ ಗುಂಪಿನ ಭಾಗವಾಗಿದ್ದನು ಎಂಬುದಂತೂ ಸ್ಪಷ್ಟ. ಈ ಲೋಕದಲ್ಲಿ ನಾವು ಸಹ ಒಂದು ಚಿಕ್ಕ ಗುಂಪಾಗಿದ್ದೇವೆ, ಆದರೆ ಇದು ನಮ್ಮನ್ನು ನಿರುತ್ತೇಜಿಸುವುದಿಲ್ಲ. ನಮ್ಮ ವಿರುದ್ಧ ಯಾರೇ ಇರುವುದಾದರೂ ಯೆಹೋವನು ನಮ್ಮನ್ನು ಬೆಂಬಲಿಸುವನು. (ರೋಮಾಪುರ 8:31) ಹನೋಕನು ಭಕ್ತಿರಹಿತ ಜನರ ಮೇಲೆ ಬರಲಿಕ್ಕಿದ್ದ ವಿನಾಶದ ಕುರಿತು ಧೈರ್ಯದಿಂದ ಎಚ್ಚರಿಕೆ ನೀಡಿದನು. ಅಪಹಾಸ್ಯ, ವಿರೋಧ ಮತ್ತು ಹಿಂಸೆಯ ಮಧ್ಯೆಯೂ “ರಾಜ್ಯದ ಈ ಸುವಾರ್ತೆ”ಯನ್ನು ಸಾರುವಾಗ ನಾವು ಸಹ ಧೈರ್ಯವನ್ನು ತೋರಿಸುವವರಾಗಿದ್ದೇವೆ. (ಮತ್ತಾಯ 24:14) ಹನೋಕನು ತನ್ನ ಸಮಕಾಲೀನರಲ್ಲಿ ಹೆಚ್ಚಿನವರು ಜೀವಿಸಿದಷ್ಟು ದೀರ್ಘ ಕಾಲದ ವರೆಗೆ ಬದುಕಿರಲಿಲ್ಲ. ಆದರೂ, ಅವನ ನಿರೀಕ್ಷೆಯು ಆ ಲೋಕದಲ್ಲಿರಲಿಲ್ಲ. ಅದಕ್ಕಿಂತಲೂ ಎಷ್ಟೋ ಶ್ರೇಷ್ಠವಾದದ್ದರ ಮೇಲೆ ಅವನು ದೃಷ್ಟಿಯನ್ನು ನೆಟ್ಟಿದ್ದನು. (ಇಬ್ರಿಯ 11:10, 35) ನಾವು ಸಹ ಯೆಹೋವನ ಉದ್ದೇಶದ ನೆರವೇರಿಕೆಯ ಮೇಲೆ ನಮ್ಮ ದೃಷ್ಟಿಯನ್ನು ನೆಟ್ಟವರಾಗಿದ್ದೇವೆ. ಆದುದರಿಂದಲೇ ನಾವು ಈ ಲೋಕವನ್ನು ಪರಿಪೂರ್ಣವಾಗಿ ಅನುಭೋಗಿಸುವುದಿಲ್ಲ. (1 ಕೊರಿಂಥ 7:31) ಅದಕ್ಕೆ ಬದಲಾಗಿ, ನಮ್ಮ ಶಕ್ತಿ ಮತ್ತು ಸಂಪನ್ಮೂಲಗಳನ್ನು ಮುಖ್ಯವಾಗಿ ಯೆಹೋವನ ಸೇವೆಯಲ್ಲಿ ವಿನಿಯೋಗಿಸುತ್ತೇವೆ.

17 ಯೆಹೋವ ದೇವರಿಂದ ವಾಗ್ದಾನಿಸಲ್ಪಟ್ಟ ಸಂತಾನವು ಆತನ ನೇಮಿತ ಸಮಯದಲ್ಲಿ ಕಂಡುಬರುವುದು ಎಂಬ ನಂಬಿಕೆ ಹನೋಕನಿಗಿತ್ತು. ಆ ಸಂತಾನವಾದ ಯೇಸು ಕ್ರಿಸ್ತನು ಗೋಚರವಾಗಿ, ವಿಮೋಚನಾ ಮೌಲ್ಯದ ಯಜ್ಞವನ್ನು ಒದಗಿಸಿ, ನಮಗೋಸ್ಕರ ಹಾಗೂ ಹನೋಕನಂಥ ನಂಬಿಗಸ್ತ ಪುರಾತನ ಸಾಕ್ಷಿಗಳಿಗೋಸ್ಕರ ನಿತ್ಯಜೀವವನ್ನು ಪಡೆಯುವ ಮಾರ್ಗವನ್ನು ತೆರೆದು ಇಂದಿಗೆ ಸುಮಾರು 2,000 ವರ್ಷಗಳು ಕಳೆದಿವೆ. ದೇವರ ರಾಜ್ಯದ ರಾಜನಾಗಿ ಸಿಂಹಾಸನಾರೂಢನಾಗಿರುವ ಆ ಸಂತಾನವಾದಾತನು, ಸೈತಾನನನ್ನು ಪರಲೋಕದಿಂದ ಭೂಮಿಗೆ ದೊಬ್ಬಿದನು. ಇದರ ಪರಿಣಾಮವಾಗಿ ಉಂಟಾಗಿರುವ ಸಂಕಟವನ್ನು ನಾವು ನಮ್ಮ ಸುತ್ತಲೂ ನೋಡುತ್ತಿದ್ದೇವೆ. (ಪ್ರಕಟನೆ 12:12) ಹೌದು, ಹನೋಕನಿಗೆ ಲಭ್ಯವಿದ್ದುದಕ್ಕಿಂತಲೂ ಎಷ್ಟೋ ಹೆಚ್ಚು ಜ್ಞಾನವು ನಮಗೆ ಲಭ್ಯಗೊಳಿಸಲ್ಪಟ್ಟಿದೆ. ಹೀಗಿರುವುದರಿಂದ, ಅವನಂತೆಯೇ ನಾವು ಸಹ ಬಲವಾದ ನಂಬಿಕೆಯನ್ನು ಹೊಂದಿರೋಣ. ದೇವರ ವಾಗ್ದಾನಗಳ ನೆರವೇರಿಕೆಯಲ್ಲಿನ ನಮ್ಮ ದೃಢಭರವಸೆಯು, ನಾವು ಮಾಡುವ ಪ್ರತಿಯೊಂದು ವಿಷಯವನ್ನು ಪ್ರಭಾವಿಸಲಿ. ಗೊಂದಲಮಯ ಸಮಯಗಳಲ್ಲಿ ಜೀವಿಸುತ್ತಿರುವುದಾದರೂ, ಹನೋಕನಂತೆ ನಾವು ಸಹ ದೇವರೊಂದಿಗೆ ನಡೆಯೋಣ.

[ಪಾದಟಿಪ್ಪಣಿಗಳು]

^ ಪ್ಯಾರ. 9 ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟಿರುವ ಶಾಸ್ತ್ರಗಳ ಕುರಿತಾದ ಒಳನೋಟ (ಇಂಗ್ಲಿಷ್‌) ಪುಸ್ತಕದ ಸಂಪುಟ 1, ಪುಟ 220, ಪ್ಯಾರಗ್ರಾಫ್‌ 6ನ್ನು ನೋಡಿರಿ.

^ ಪ್ಯಾರ. 15 ಎನೋಷನ ದಿನಗಳಿಗೆ ಮುಂಚೆ, ಯೆಹೋವನು ಆದಾಮನೊಂದಿಗೆ ಮಾತಾಡಿದನು. ಹೇಬೆಲನು ಯೆಹೋವನಿಗೆ ಸ್ವೀಕಾರಾರ್ಹವಾದ ಯಜ್ಞವನ್ನು ಅರ್ಪಿಸಿದನು. ಈರ್ಷ್ಯೆಭರಿತ ಕೋಪವು ಕೊಲೆಮಾಡುವಂತೆ ಕಾಯಿನನ್ನು ಪ್ರಚೋದಿಸುವ ಮುಂಚೆ ದೇವರು ಅವನೊಂದಿಗೂ ಸಂವಾದಿಸಿದನು. ಆದುದರಿಂದ, ‘ಯೆಹೋವ ಎಂಬ ಹೆಸರನ್ನು ಕರೆಯಲು’ ಆರಂಭವಾದದ್ದು, ಶುದ್ಧ ಆರಾಧನೆಯಿಂದಲ್ಲ ಬದಲಾಗಿ ತೀರ ಭಿನ್ನವಾದ ರೀತಿಯಲ್ಲೇ ಆಗಿರಬೇಕು.

ನೀವು ಹೇಗೆ ಉತ್ತರಿಸುವಿರಿ?

• ದೇವರೊಂದಿಗೆ ನಡೆಯುವುದರ ಅರ್ಥವೇನು?

• ದೇವರೊಂದಿಗೆ ನಡೆಯುವುದು ಅತ್ಯುತ್ತಮ ಮಾರ್ಗಕ್ರಮವಾಗಿದೆ ಏಕೆ?

• ಗೊಂದಲಮಯ ಸಮಯಗಳಲ್ಲಿಯೂ ದೇವರೊಂದಿಗೆ ನಡೆಯುವಂತೆ ಹನೋಕನನ್ನು ಯಾವುದು ಶಕ್ತನನ್ನಾಗಿ ಮಾಡಿತು?

• ನಾವು ಹನೋಕನನ್ನು ಹೇಗೆ ಅನುಕರಿಸಸಾಧ್ಯವಿದೆ?

[ಅಧ್ಯಯನ ಪ್ರಶ್ನೆಗಳು]

1. ನಮ್ಮ ದಿನಗಳನ್ನು ವಿಪತ್ಕಾರಕವಾಗಿ ಮಾಡುವಂಥ ವೈಶಿಷ್ಟ್ಯಗಳಲ್ಲಿ ಕೆಲವು ಯಾವುವು?

2. ಯೆಹೋವನ ಸೇವಕರು ಯಾವ ಪಂಥಾಹ್ವಾನಗಳನ್ನು ಎದುರಿಸಿದ್ದಾರೆ?

3, 4. ಯಾವ ವಿಧದಲ್ಲಿ ಕ್ರೈಸ್ತರು ಲೋಕದಿಂದ ಭಿನ್ನರಾಗಿದ್ದಾರೆ?

5. ಒಬ್ಬ ಅಪರಿಪೂರ್ಣ ಮಾನವನು ದೇವರೊಂದಿಗೆ ಹೇಗೆ ನಡೆಯಸಾಧ್ಯವಿದೆ?

6, 7. ದೇವರೊಂದಿಗೆ ನಡೆಯುವುದು ಅತ್ಯುತ್ತಮ ಮಾರ್ಗಕ್ರಮವಾಗಿದೆ ಏಕೆ?

8. ಹನೋಕ ಮತ್ತು ನೋಹನ ಸಮಯಗಳು ನಮ್ಮ ಕಾಲದಂತೆಯೇ ಇದ್ದದ್ದು ಹೇಗೆ?

9. ಹನೋಕನ ವಿಷಯದಲ್ಲಿ ನಮಗೆ ಯಾವ ಮಾಹಿತಿಯಿದೆ?

10, 11. (ಎ) ಆದಾಮಹವ್ವರ ದಂಗೆಯ ಬಳಿಕ ಭ್ರಷ್ಟತೆಯು ಹೇಗೆ ಹಬ್ಬಿತು? (ಬಿ) ಹನೋಕನು ಯಾವ ಪ್ರವಾದನಾ ಸಂದೇಶವನ್ನು ಸಾರಿದನು, ಮತ್ತು ಅವನಿಗೆ ಯಾವ ಪ್ರತಿಕ್ರಿಯೆ ಸಿಕ್ಕಿತು?

12. ಯಾವುದು ಹನೋಕನನ್ನು ಅವನ ಸಮಕಾಲೀನರಿಗಿಂತ ಭಿನ್ನವಾಗಿ ಮಾಡಿತು?

13. ಹನೋಕನಲ್ಲಿ ಯಾವ ರೀತಿಯ ನಂಬಿಕೆಯಿತ್ತು?

14. ಹನೋಕನ ನಂಬಿಕೆಯು ಯಾವ ನಿಷ್ಕೃಷ್ಟ ಜ್ಞಾನದ ಮೇಲೆ ಆಧಾರಿತವಾಗಿದ್ದಿರಬಹುದು?

15, 16. ನಾವು ಹನೋಕನ ಧೈರ್ಯವನ್ನು ಹೇಗೆ ಅನುಸರಿಸಬಲ್ಲೆವು?

17. ಹನೋಕನಿಗೆ ಇಲ್ಲದಿದ್ದಂಥ ಯಾವ ಜ್ಞಾನ ನಮಗಿದೆ, ಮತ್ತು ನಾವೇನು ಮಾಡಬೇಕು?

[ಪುಟ 15ರಲ್ಲಿರುವ ಚಿತ್ರ]

ನಂಬಿಕೆಯಿಂದಲೇ ‘ಹನೋಕನು ದೇವರೊಂದಿಗೆ ಅನ್ಯೋನ್ಯವಾಗಿ ನಡೆಯುತ್ತಾ ಹೋದನು’

[ಪುಟ 17ರಲ್ಲಿರುವ ಚಿತ್ರ]

ಯೆಹೋವನ ವಾಗ್ದಾನಗಳು ಖಂಡಿತವಾಗಿಯೂ ನೆರವೇರುವವು ಎಂದು ನಾವು ದೃಢವಾಗಿ ನಂಬುತ್ತೇವೆ

[ಪುಟ 13ರಲ್ಲಿರುವ ಚಿತ್ರ ಕೃಪೆ]

ಬಲಭಾಗದಲ್ಲಿರುವ ಸ್ತ್ರೀ: FAO photo/B. Imevbore; ಕುಸಿಯುತ್ತಿರುವ ಕಟ್ಟಡ: San Hong R-C Picture Company