ಕ್ರಿಸ್ತನ ಸೈನಿಕನಾಗಿ ತಾಳಿಕೊಳ್ಳುವುದು
ಜೀವನ ಕಥೆ
ಕ್ರಿಸ್ತನ ಸೈನಿಕನಾಗಿ ತಾಳಿಕೊಳ್ಳುವುದು
ಯೂರೀ ಕಾಪ್ಟಾಲಾ ಅವರು ಹೇಳಿದಂತೆ
“ನಿನ್ನಲ್ಲಿ ನಿಜವಾಗಿಯೂ ನಂಬಿಕೆ ಇದೆ ಎಂದು ನಾನು ಈಗ ಒಪ್ಪುತ್ತೇನೆ!” ನಂಬಲಸಾಧ್ಯವಾದ ಮೂಲದಿಂದ, ಅಂದರೆ ಸೋವಿಯಟ್ ಸೈನ್ಯದ ಒಬ್ಬ ಅಧಿಕಾರಿಯ ಬಾಯಿಂದ ಆ ಮಾತುಗಳು ಬಂದವು. ಅತ್ಯಾವಶ್ಯಕವಾಗಿದ್ದ ಸಮಯದಲ್ಲಿ ಆ ಮಾತುಗಳು ನನಗೆ ಉತ್ತೇಜನವನ್ನು ನೀಡಿದವು. ನಾನು ದೀರ್ಘಕಾಲ ಸೆರೆವಾಸದ ದಂಡನೆಯನ್ನು ಎದುರಿಸುತ್ತಿದ್ದೆ ಮತ್ತು ಬೆಂಬಲವನ್ನು ನೀಡುವಂತೆ ಯೆಹೋವನಲ್ಲಿ ಶ್ರದ್ಧಾಪೂರ್ವಕವಾಗಿ ಬೇಡಿಕೊಂಡಿದ್ದೆ. ತಾಳ್ಮೆ ಮತ್ತು ದೃಢಚಿತ್ತತೆಯನ್ನು ಅವಶ್ಯಪಡಿಸುವ ದೀರ್ಘವಾದ ಹೋರಾಟವನ್ನು ನಾನು ಎದುರಿಸುತ್ತಿದ್ದೆ.
ನಾನು 1962ರ ಅಕ್ಟೋಬರ್ 19ರಂದು ಜನಿಸಿದೆ, ಮತ್ತು ಯೂಕ್ರೇನಿನ ಪಾಶ್ಚಾತ್ಯ ಭಾಗದಲ್ಲಿ ಬೆಳೆಸಲ್ಪಟ್ಟೆ. ಅದೇ ವರ್ಷದಲ್ಲಿ, ನನ್ನ ತಂದೆಗೆ—ಅವರ ಹೆಸರು ಸಹ ಯೂರೀ ಎಂದಾಗಿತ್ತು—ಯೆಹೋವನ ಸಾಕ್ಷಿಗಳ ಸಂಪರ್ಕವಾಯಿತು. ಶೀಘ್ರವೇ ಅವರು, ನಮ್ಮ ಗ್ರಾಮದಲ್ಲಿ ಯೆಹೋವನ ಆರಾಧಕರಾದವರಲ್ಲಿ ಮೊದಲಿಗರಾದರು. ಅವರ ಚಟುವಟಿಕೆಯು, ಯೆಹೋವನ ಸಾಕ್ಷಿಗಳನ್ನು ವಿರೋಧಿಸುತ್ತಿದ್ದ ಅಧಿಕಾರಿಗಳ ಕಣ್ಣಿಗೆ ಬೀಳದೆ ಹೋಗಲಿಲ್ಲ.
ನಮ್ಮ ನೆರೆಯವರಲ್ಲಿ ಹೆಚ್ಚಿನವರಾದರೋ, ನನ್ನ ಹೆತ್ತವರ ಕ್ರೈಸ್ತ ಗುಣಗಳು ಮತ್ತು ಇತರರಿಗೆ ಅವರು ತೋರಿಸುತ್ತಿದ್ದ ಕಾಳಜಿಯಿಂದಾಗಿ ಅವರನ್ನು ಗೌರವಿಸಿದರು. ನನ್ನ ಹೆತ್ತವರು, ನನ್ನಲ್ಲಿ ಮತ್ತು ನನ್ನ ಮೂರು ಮಂದಿ ಸಹೋದರಿಯರಲ್ಲಿ ಚಿಕ್ಕ ವಯಸ್ಸಿನಿಂದಲೇ ದೇವರಿಗಾಗಿರುವ ಪ್ರೀತಿಯನ್ನು ಬೆಳೆಸಲು ಪ್ರತಿಯೊಂದು ಸಂದರ್ಭವನ್ನು ಸದುಪಯೋಗಿಸಿದರು. ಶಾಲೆಯಲ್ಲಿ ನಾನು ಎದುರಿಸಿದ ಅನೇಕ ಪಂಥಾಹ್ವಾನಗಳನ್ನು ನಿಭಾಯಿಸಲು ಇದು ನನಗೆ ಸಹಾಯಮಾಡಿತು. ಇಂತಹ ಒಂದು ಪಂಥಾಹ್ವಾನವು, ‘ಲೆನಿನ್‌ನ ಅಕ್ಟೋಬರ್ ಮಕ್ಕಳು’ ಎಂದು ಗುರುತಿಸುವಂಥ ಒಂದು ಬ್ಯಾಡ್ಜನ್ನು ಧರಿಸುವಂತೆ ಪ್ರತಿಯೊಬ್ಬ ವಿದ್ಯಾರ್ಥಿಯು ಕೇಳಲ್ಪಟ್ಟಾಗ ಎದುರಾಯಿತು. ನನ್ನ ಕ್ರೈಸ್ತ ತಾಟಸ್ಥ್ಯದ ಕಾರಣ, ನಾನು ಆ ಬ್ಯಾಡ್ಜನ್ನು ಧರಿಸಲಿಲ್ಲ ಮತ್ತು ಇದರಿಂದಾಗಿ ಇತರರಿಗಿಂತ ಭಿನ್ನನಾಗಿದ್ದೆ.—ಯೋಹಾನ 6:15; 17:16.
ಅನಂತರ, ನಾನು ಮೂರನೇ ತರಗತಿಯಲ್ಲಿ ಓದುತ್ತಿದ್ದಾಗ, ‘ಯುವ ಪಯನೀಯರರು’ ಎಂದು ಕರೆಯಲ್ಪಟ್ಟ ಒಂದು ಕಮ್ಯೂನಿಸ್ಟ್ ಯುವ ಸಂಘಕ್ಕೆ ಸೇರುವಂತೆ ಪ್ರತಿಯೊಬ್ಬ ವಿದ್ಯಾರ್ಥಿಯಿಂದ ಅವಶ್ಯಪಡಿಸಲಾಯಿತು. ಒಂದು ದಿನ, ಈ ಸಂಘದ
ಸದಸ್ಯರಾಗಿ ಹೆಸರನ್ನು ದಾಖಲುಮಾಡುವ ಸಮಾರಂಭಕ್ಕಾಗಿ ನಮ್ಮ ತರಗತಿಯನ್ನು ಶಾಲಾ ಮೈದಾನಕ್ಕೆ ಕರೆತರಲಾಯಿತು. ನನ್ನನ್ನು ಇತರರು ಗೇಲಿಮಾಡಬಹುದು ಅಥವಾ ಬೈಯಬಹುದು ಎಂದು ಯೋಚಿಸುತ್ತಾ ನಾನು ಹೆದರಿಹೋಗಿದ್ದೆ. ನನ್ನನ್ನು ಬಿಟ್ಟು ಬೇರೆಲ್ಲರೂ ಮನೆಯಿಂದ ತಮ್ಮ ಕೆಂಬಣ್ಣದ ಪಯನೀಯರ್ ಸ್ಕಾರ್ಫ್ ಅನ್ನು ತಂದಿದ್ದರು. ಶಾಲಾ ಪ್ರಾಂಶುಪಾಲರು, ಶಿಕ್ಷಕರು ಮತ್ತು ಹಿರಿಯ ತರಗತಿಯ ವಿದ್ಯಾರ್ಥಿಗಳ ಮುಂದೆ ನಾವೆಲ್ಲರೂ ಒಂದು ಉದ್ದವಾದ ಸಾಲಿನಲ್ಲಿ ನಿಂತೆವು. ನಮ್ಮ ಕತ್ತಿಗೆ ಸ್ಕಾರ್ಫ್‌ಗಳನ್ನು ಕಟ್ಟುವಂತೆ ಹಿರಿಯ ತರಗತಿಯ ವಿದ್ಯಾರ್ಥಿಗಳಿಗೆ ಹೇಳಲ್ಪಟ್ಟಾಗ, ಯಾರೂ ನನ್ನ ಕಡೆ ಗಮನಹರಿಸದಂತೆ ಮಾಡಲಿಕ್ಕಾಗಿ, ನಾನು ನನ್ನ ತಲೆ ಬಗ್ಗಿಸಿ ಕೆಳಗೆ ನೋಡುತ್ತಾ ನಿಂತುಕೊಂಡೆ.ದೂರದೂರದ ಸೆರೆಮನೆಗಳಿಗೆ ಕೊಂಡೊಯ್ಯಲ್ಪಟ್ಟದ್ದು
ನಾನು 18 ವರ್ಷ ಪ್ರಾಯದವನಾಗಿದ್ದಾಗ, ಕ್ರೈಸ್ತ ತಾಟಸ್ಥ್ಯವನ್ನು ಕಾಪಾಡಿಕೊಂಡದ್ದಕ್ಕಾಗಿ ನನ್ನನ್ನು ಮೂರು ವರ್ಷಗಳ ಸೆರೆವಾಸವನ್ನು ವಿಧಿಸಲಾಯಿತು. (ಯೆಶಾಯ 2:4) ನಾನು ನನ್ನ ಸೆರೆವಾಸದ ಮೊದಲ ವರ್ಷವನ್ನು, ಯೂಕ್ರೇನ್ ಜಿಲ್ಲೆಯ ವಿನ್‌ನಿಟ್ಸ್ಕಾಯದ ಟ್ರುಡೊವೊಯೆ ಪಟ್ಟಣದಲ್ಲಿ ಕಳೆದೆ. ಅಲ್ಲಿದ್ದಾಗ, ನಾನು 30 ಮಂದಿ ಇತರ ಯೆಹೋವನ ಸಾಕ್ಷಿಗಳನ್ನು ಭೇಟಿಮಾಡಿದೆ. ನಾವು ಒಟ್ಟಿಗೆ ಸಹವಾಸಮಾಡುವುದನ್ನು ತಡೆಗಟ್ಟುವ ಪ್ರಯತ್ನದಲ್ಲಿ, ಅಧಿಕಾರಿಗಳು ನಮ್ಮನ್ನು ಇಬ್ಬಿಬ್ಬರನ್ನಾಗಿ ಬೇರೆ ಬೇರೆ ಕೆಲಸಗಳಿಗೆ ನೇಮಿಸುತ್ತಿದ್ದರು.
ಇಸವಿ 1982ರ ಆಗಸ್ಟ್ ತಿಂಗಳಿನಲ್ಲಿ, ನನ್ನನ್ನು ಮತ್ತು ಇಡೂಆರ್ಟ್ ಎಂಬ ಮತ್ತೊಬ್ಬ ಸಾಕ್ಷಿಯನ್ನು, ಇತರ ಕೈದಿಗಳ ಒಂದು ಗುಂಪಿನೊಂದಿಗೆ ಉತ್ತರ ದಿಕ್ಕಿನಲ್ಲಿದ್ದ ಯುರಲ್ ಪರ್ವತಗಳಿಗೆ ರೈಲಿನ ಸೆರೆ-ಕಂಪಾರ್ಟ್‌ಮೆಂಟ್‌ಗಳಲ್ಲಿ ಕಳುಹಿಸಲಾಯಿತು. ಎಂಟು ದಿವಸ ವಿಪರೀತ ಸೆಕೆ ಮತ್ತು ಇಕ್ಕಟ್ಟಾದ ಸ್ಥಳದಲ್ಲಿ ತೊಳಲಾಡಿದ ಬಳಿಕ, ಪೆರ್ಮ್‌ಸ್ಕಾಯಾ ಜಿಲ್ಲೆಯಲ್ಲಿದ್ದ ಸಾಲ್ಯೀಕಾಮ್ಸ್ಕ್ ಸೆರೆಗೆ ನಾವು ಬಂದು ತಲಪಿದೆವು. ನನ್ನನ್ನು ಮತ್ತು ಇಡೂಆರ್ಟ್‌ನನ್ನು ಬೇರೆ ಬೇರೆ ಸೆರೆಕೋಣೆಗಳಿಗೆ ನೇಮಿಸಲಾಯಿತು. ಎರಡು ವಾರಗಳ ಅನಂತರ, ನನ್ನನ್ನು ಇನ್ನೂ ಉತ್ತರಕ್ಕಿದ್ದ ಕ್ರಾಸ್ನೋವೀಶೆರ್‌ಸ್ಕೀ ಪ್ರದೇಶದ ವ್ಯೋಲ್ಸ್ ಗ್ರಾಮಕ್ಕೆ ಕೊಂಡೊಯ್ಯಲಾಯಿತು.
ನಮ್ಮ ವಾಹನವು ಮಧ್ಯರಾತ್ರಿಯಲ್ಲಿ ಅಲ್ಲಿಗೆ ತಲಪಿತು ಮತ್ತು ಕಗ್ಗತ್ತಲೆಯು ಕವಿದಿತ್ತು. ಅಷ್ಟು ಕತ್ತಲಿದ್ದರೂ, ದೋಣಿಯನ್ನು ಹತ್ತಿ ಒಂದು ನದಿಯನ್ನು ದಾಟುವಂತೆ ಒಬ್ಬ ಅಧಿಕಾರಿ ಅಪ್ಪಣೆ ಕೊಟ್ಟನು. ನಮಗೆ ಆ ನದಿಯೂ ಕಾಣುತ್ತಿರಲಿಲ್ಲ, ದೋಣಿಯೂ ಕಣ್ಣಿಗೆ ಬೀಳಲಿಲ್ಲ! ಆದರೂ, ನಾವು ಕತ್ತಲೆಯಲ್ಲೇ ತಡಕಾಡಿ ದೋಣಿಯನ್ನು ಕಂಡುಕೊಂಡೆವು ಮತ್ತು ಭಯಭೀತರಾಗಿದ್ದರೂ ನದಿಯನ್ನು ದಾಟುವ ಸಾಹಸವನ್ನು ಮಾಡಿದೆವು. ದಡವನ್ನು ಮುಟ್ಟಿದ ಮೇಲೆ, ಒಂದು ಗುಡ್ಡದ ಮೇಲೆ ಕಂಡುಬಂದ ಒಂದು ಬೆಳಕಿನತ್ತ ಹೆಜ್ಜೆಹಾಕಿದೆವು ಮತ್ತು ಅಲ್ಲಿ ತಲಪಿದಾಗ ಕೆಲವು ಡೇರೆಗಳನ್ನು ಕಂಡುಕೊಂಡೆವು. ಇದು ನಮ್ಮ ಹೊಸ ಮನೆಯಾಗಿರಲಿತ್ತು. ನಾನು ಸಾಕಷ್ಟು ದೊಡ್ಡದಾಗಿದ್ದ ಒಂದು ಡೇರೆಯಲ್ಲಿ, 30 ಮಂದಿ ಇತರ ಕೈದಿಗಳೊಂದಿಗೆ ಉಳಿಯುತ್ತಿದ್ದೆ. ಚಳಿಗಾಲದಲ್ಲಿ, ಕೆಲವೊಮ್ಮೆ ಮೈನಸ್ 40 ಡಿಗ್ರೀ ಫ್ಯಾರನ್‌ಹೈಟ್‌ನಷ್ಟು ತಾಪಮಾನವನ್ನು ನಾವು ಸಹಿಸಿಕೊಳ್ಳಬೇಕಾಯಿತು. ಇಂತಹ ಸಮಯದಲ್ಲಿ ನಮ್ಮ ಡೇರೆಯು ಅಷ್ಟು ಆಶ್ರಯವನ್ನು ನೀಡಲಿಲ್ಲ. ಸೆರೆವಾಸಿಗಳ ಪ್ರಮುಖ ಕೆಲಸವು ಮರಗಳನ್ನು ಕಡಿಯುವುದಾಗಿತ್ತು, ಆದರೆ ನಾನು ಕೈದಿಗಳಿಗೆ ಗುಡಿಸಲುಗಳನ್ನು ಕಟ್ಟುವ ಕೆಲಸವನ್ನು ಮಾಡಿದೆ.
ಆಧ್ಯಾತ್ಮಿಕ ಆಹಾರವು ನಮ್ಮ ಏಕಾಂತ ವಸಾಹತನ್ನು ತಲಪುತ್ತದೆ
ಆ ವಸಾಹತಿನಲ್ಲಿ ನಾನೊಬ್ಬನೇ ಸಾಕ್ಷಿಯಾಗಿದ್ದೆ; ಆದರೂ ಯೆಹೋವನು ನನ್ನನ್ನು ತೊರೆದುಬಿಡಲಿಲ್ಲ. ಒಂದು ದಿನ ನನ್ನ ತಾಯಿಯಿಂದ ನಾನು ಒಂದು ಪಾರ್ಸಲ್ ಅನ್ನು ಪಡೆದುಕೊಂಡೆ. ಅವರಿನ್ನೂ ಪಾಶ್ಚಾತ್ ಯೂಕ್ರೇನ್‌ನಲ್ಲೇ ವಾಸಿಸುತ್ತಿದ್ದರು. ಒಬ್ಬ ಕಾವಲುಗಾರನು ಪಾರ್ಸಲ್ ಅನ್ನು ತೆರೆದಾಗ, ಮೊದಲು ಅವನ ಕಣ್ಣಿಗೆ ಬಿದ್ದದ್ದು ಒಂದು ಸಣ್ಣ ಬೈಬಲ್. ಅದನ್ನು ತೆಗೆದುಕೊಂಡು ಅವನು ಅದರ ಪುಟಗಳನ್ನು ಹಿಂದೆ ಮುಂದೆ ತಿರುಗಿಸಿ ನೋಡಿದ. ಈ ಆಧ್ಯಾತ್ಮಿಕ ಸ್ವತ್ತನ್ನು ಅವನು ವಶಪಡಿಸಿಕೊಳ್ಳುವುದನ್ನು ತಡೆಯುವಂತೆ ಮಾಡಲಿಕ್ಕಾಗಿ ಏನು ಹೇಳುವುದು ಎಂದು ಯೋಚಿಸುತ್ತಿರುವಾಗಲೇ, “ಏನಿದು?” ಎಂದು ಅವನು ಹಠಾತ್ತಾಗಿ ಕೇಳಿದನು. ನಾನು ಒಂದು ಉತ್ತರಕ್ಕಾಗಿ ಹುಡುಕುವ ಮೊದಲೇ, ಹತ್ತಿರದಲ್ಲಿದ್ದ ಒಬ್ಬ ಇನ್‌ಸ್ಪೆಕ್ಟರ್ ಹೇಳಿದ್ದು: “ಓ! ಅದೊಂದು ಶಬ್ದಕೋಶ.” ನಾನೇನೂ ಹೇಳಲಿಲ್ಲ. (ಪ್ರಸಂಗಿ 3:7) ಆ ಇನ್‌ಸ್ಪೆಕ್ಟರ್ ಪಾರ್ಸಲ್‌ನಲ್ಲಿ ಉಳಿದಿದ್ದ ಬೇರೆಲ್ಲವನ್ನೂ ಪರೀಕ್ಷಿಸಿದ ಮೇಲೆ, ಪಾರ್ಸಲ್‌ನೊಂದಿಗೆ ಅಮೂಲ್ಯವಾದ ಆ ಬೈಬಲನ್ನೂ ನನಗೆ ಕೊಟ್ಟನು. ನನಗೆಷ್ಟು ಖುಷಿಯಾಯಿತೆಂದರೆ, ನಾನು ನನ್ನ ಪಾರ್ಸಲ್‌ನಿಂದ ಕೆಲವು ಕರಟಕಾಯಿಗಳನ್ನು ಅವನಿಗೆ ನೀಡಿದೆ. ಈ ಪಾರ್ಸಲ್ ಅನ್ನು ಪಡೆದುಕೊಂಡಾಗ, ಯೆಹೋವನು ನನ್ನನ್ನು ಮರೆತುಬಿಟ್ಟಿಲ್ಲ ಎಂಬ ಮನವರಿಕೆ ನನಗಾಯಿತು. ಆತನು ತನ್ನ ಸಹಾಯಹಸ್ತವನ್ನು ನೀಡಿ ನನ್ನ ಆಧ್ಯಾತ್ಮಿಕ ಅಗತ್ಯಗಳನ್ನು ಪೂರೈಸಿದನು.—ಇಬ್ರಿಯ 13:5.
ಎಡೆಬಿಡದ ಸಾರುವಿಕೆ
ಕೆಲವು ತಿಂಗಳುಗಳ ಬಳಿಕ, ಸುಮಾರು 400 ಕಿಲೊಮೀಟರ್ ದೂರದಲ್ಲಿ ಬಂದಿವಾಸಿಯಾಗಿದ್ದ ಒಬ್ಬ ಕ್ರೈಸ್ತ ಸಹೋದರನಿಂದ ಒಂದು ಪತ್ರವನ್ನು ಪಡೆದುಕೊಂಡಾಗ ನಾನು ಆಶ್ಚರ್ಯಚಕಿತನಾದೆ. ಆಸಕ್ತಿಯನ್ನು ತೋರಿಸಿದ್ದ ಒಬ್ಬ ವ್ಯಕ್ತಿಗಾಗಿ ಹುಡುಕುವಂತೆಯೂ, ಈಗ ಆ ವ್ಯಕ್ತಿ ನನ್ನ ಶಿಬಿರದಲ್ಲೇ ಇರಬಹುದೆಂತಲೂ ಆ ಪತ್ರದಲ್ಲಿ ಬರೆದಿತ್ತು. ಈ ರೀತಿಯಲ್ಲಿ ನೇರವಾದ ಮಾತುಗಳಲ್ಲಿ ಪತ್ರವನ್ನು ಬರೆಯುವುದು ವಿವೇಕಯುತವಾಗಿರಲಿಲ್ಲ, ಏಕೆಂದರೆ ನಮ್ಮ ಪತ್ರಗಳು ಪರೀಕ್ಷಿಸಲ್ಪಡುತ್ತಿದ್ದವು. ನಾನು ನೆನಸಿದಂತೆಯೇ, ಒಬ್ಬ ಅಧಿಕಾರಿ ನನ್ನನ್ನು ತನ್ನ ಕಚೇರಿಗೆ ಕರೆಕಳುಹಿಸಿ ಸಾರಬಾರದು ಎಂದು ಖಡಾಖಂಡಿತವಾಗಿ ಎಚ್ಚರಿಸಿದನು ಮತ್ತು ನಾನು ನನ್ನ ನಂಬಿಕೆಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದನ್ನು ನಿಲ್ಲಿಸುತ್ತೇನೆ ಎಂದು ತಿಳಿಸುವ ಒಂದು ಪ್ರಮಾಣಪತ್ರಕ್ಕೆ ಸಹಿ ಹಾಕುವಂತೆ ನನಗೆ ಅಪ್ಪಣೆ ಕೊಟ್ಟನು. ನಾನೊಬ್ಬ ಯೆಹೋವನ ಸಾಕ್ಷಿ ಎಂಬುದು ಎಲ್ಲರಿಗೂ ಈಗಾಗಲೇ ತಿಳಿದಿರುವುದರಿಂದ ಇಂತಹ ಒಂದು ಹೇಳಿಕೆಗೆ ಅ. ಕೃತ್ಯಗಳು 4:20) ನನ್ನಲ್ಲಿ ಭಯ ಹುಟ್ಟಿಸಲು ಆಗಲಿಲ್ಲ ಎಂಬುದನ್ನು ಅಧಿಕಾರಿಯು ಮನಗಂಡನು. ಆದುದರಿಂದ ನನ್ನನ್ನು ಅಲ್ಲಿಂದ ಕಳುಹಿಸಿಬಿಡಲು ತೀರ್ಮಾನಿಸಿದನು. ನನ್ನನ್ನು ಬೇರೊಂದು ಶಿಬಿರಕ್ಕೆ ಕಳುಹಿಸಲಾಯಿತು.
ಏಕೆ ಸಹಿಹಾಕಬೇಕು ಎಂಬುದು ನನಗೆ ತಿಳಿಯುತ್ತಿಲ್ಲ ಎಂದು ನಾನು ಉತ್ತರಕೊಟ್ಟೆ. ನಾನು ಏಕೆ ಸೆರೆವಾಸವನ್ನು ಅನುಭವಿಸುತ್ತಿದ್ದೇನೆ ಎಂದು ಇತರರು ತಿಳಿದುಕೊಳ್ಳಲು ಬಯಸುತ್ತಾರೆ, ನಾನು ಅವರಿಗೆ ಯಾವ ಉತ್ತರ ಕೊಡಲಿ ಎಂದು ನಾನು ಕೇಳಿದೆ. (ನಾನು 200 ಕಿಲೊಮೀಟರ್ ದೂರದಲ್ಲಿದ್ದ ವಾಯಾ ಗ್ರಾಮಕ್ಕೆ ಸ್ಥಳಾಂತರಿಸಲ್ಪಟ್ಟೆ. ಅಲ್ಲಿ ಉಸ್ತುವಾರಿ ಮಾಡುತ್ತಿದ್ದವರು ನನ್ನ ಕ್ರೈಸ್ತ ನಿಲುವನ್ನು ಗೌರವಿಸಿದರು ಮತ್ತು ನನಗೆ ಮಿಲಿಟರಿಗೆ ಸಂಬಂಧಪಡದ ಕೆಲಸವನ್ನು ನೇಮಿಸಿದರು—ಹೀಗೆ ನಾನು ಮೊದಲು ಒಬ್ಬ ಕಾರ್ಪೆಂಟರನಾಗಿ, ಅನಂತರ ಒಬ್ಬ ಇಲೆಕ್ಟ್ರಿಷನ್ ಆಗಿ ನೇಮಿಸಲ್ಪಟ್ಟೆ. ಆದರೆ ಈ ಕೆಲಸಗಳು ತಮ್ಮದೇ ಆದ ಪಂಥಾಹ್ವಾನಗಳನ್ನು ತಂದೊಡ್ಡಿದವು. ಒಂದು ಸಂದರ್ಭದಲ್ಲಿ, ನನ್ನ ಉಪಕರಣಗಳನ್ನು ತೆಗೆದುಕೊಂಡು ಗ್ರಾಮದ ಕ್ಲಬ್‌ಗೆ ಹೋಗುವಂತೆ ನನಗೆ ಹೇಳಲಾಯಿತು. ನಾನಲ್ಲಿ ತಲಪಿದಾಗ, ಕ್ಲಬ್‌ನಲ್ಲಿದ್ದ ಸೈನಿಕರಿಗೆ ಸಂತೋಷವಾಯಿತು. ವಿಭಿನ್ನವಾದ ಮಿಲಿಟರಿ ಚಿಹ್ನೆಗಳನ್ನು ಅಲಂಕರಿಸುವ ದೀಪಗಳನ್ನು ಸರಿಯಾಗಿ ಕಾರ್ಯವೆಸಗುವಂತೆ ಮಾಡುವುದರಲ್ಲಿ ಅವರಿಗೆ ಸ್ವಲ್ಪ ಸಮಸ್ಯೆಯಿತ್ತು. ಅದನ್ನು ನಾನು ಸರಿಪಡಿಸಬೇಕೆಂದು ಅವರು ಬಯಸಿದರು, ಏಕೆಂದರೆ ಅವರು ‘ಕೆಂಪು ಸೈನ್ಯ ದಿನ’ದ ವಾರ್ಷಿಕ ಆಚರಣೆಗಾಗಿ ತಯಾರಿಯನ್ನು ಮಾಡುತ್ತಿದ್ದರು. ಏನು ಮಾಡುವುದು ಎಂದು ಪ್ರಾರ್ಥನಾಪೂರ್ವಕವಾಗಿ ಆಲೋಚಿಸಿದ ತರುವಾಯ, ನನ್ನಿಂದ ಆ ರೀತಿಯ ಕೆಲಸವನ್ನು ಮಾಡಲಿಕ್ಕಾಗದು ಎಂದು ನಾನು ಹೇಳಿದೆ. ನಾನು ನನ್ನ ಉಪಕರಣಗಳನ್ನು ಅವರಿಗೆ ಕೊಟ್ಟು ಅಲ್ಲಿಂದ ಹೊರಟುಬಿಟ್ಟೆ. ಉಪನಿರ್ದೇಶಕನಿಗೆ ನನ್ನ ಬಗ್ಗೆ ದೂರು ಕಳುಹಿಸಲಾಯಿತು ಮತ್ತು ನನ್ನ ಆಶ್ಚರ್ಯಕ್ಕೆ ಅವರು ನನ್ನ ವಿರುದ್ಧವಾದ ದೂರುಗಳನ್ನು ಕೇಳಿಸಿಕೊಂಡು, “ಅವನು ತತ್ತ್ವಕ್ಕೆ ಅಂಟಿಕೊಳ್ಳುವ ವ್ಯಕ್ತಿಯಾಗಿರುವದರಿಂದ ನಾನು ಅವನನ್ನು ಗೌರವಿಸುತ್ತೇನೆ” ಎಂದು ಉತ್ತರಕೊಟ್ಟರು.
ನಂಬಲಸಾಧ್ಯವಾದ ಮೂಲದಿಂದ ಉತ್ತೇಜನ
ಇಸವಿ 1984ರ ಜೂನ್ 8ರಂದು, ಬಂಧಿಸಲ್ಪಟ್ಟು ಸರಿಯಾಗಿ ಮೂರು ವರ್ಷಗಳು ಕಳೆದಿದ್ದಾಗ ನನ್ನನ್ನು ಬಿಡುಗಡೆಮಾಡಲಾಯಿತು. ನಾನು ಯೂಕ್ರೇನ್‌ಗೆ ಹಿಂದಿರುಗಿದಾಗ, ಪೌರಸೈನ್ಯದ ಬಳಿ ಹೋಗಿ ಒಬ್ಬ ಮಾಜಿ ಕೈದಿ ಎಂದು ನೋಂದಾಯಿಸಿಕೊಳ್ಳಬೇಕಿತ್ತು. ಆರು ತಿಂಗಳುಗಳಲ್ಲಿ ನನ್ನನ್ನು ಪುನಃ ವಿಚಾರಣೆಗೆ ಒಳಪಡಿಸಲ್ಪಡಲು ಸಾಧ್ಯವಿರುವುದರಿಂದ ನಾನು ಜಿಲ್ಲೆಯನ್ನೇ ಬಿಟ್ಟುಹೋಗುವುದು ಒಳ್ಳೇದಾಗಿರುವುದು ಎಂದು ಅಧಿಕಾರಿಗಳು ತಿಳಿಸಿದರು. ಆದುದರಿಂದ, ನಾನು ಯೂಕ್ರೇನ್ ಅನ್ನು ಬಿಟ್ಟು ಹೊರಟೆ ಮತ್ತು ಕೊನೆಗೆ ಲ್ಯಾಟ್ವಿಯದಲ್ಲಿ ಕೆಲಸವನ್ನು ಕಂಡುಕೊಂಡೆ. ಸ್ವಲ್ಪ ಸಮಯದ ವರೆಗೆ ಲ್ಯಾಟ್ವಿಯದ ಪ್ರಧಾನ ಪಟ್ಟಣವಾದ ರೀಗದಲ್ಲಿ ಮತ್ತು ಅದರ ಸುತ್ತಮುತ್ತಲಿನಲ್ಲಿ ಜೀವಿಸುತ್ತಿದ್ದ ಚಿಕ್ಕ ಗುಂಪಿನ ಯೆಹೋವನ ಸಾಕ್ಷಿಗಳೊಂದಿಗೆ ಸೇರಿ ಸಾರಲು ಹಾಗೂ ಸಹವಾಸಮಾಡಲು ನನ್ನಿಂದ ಸಾಧ್ಯವಾಯಿತು. ಆದರೆ, ಕೇವಲ ಒಂದು ವರ್ಷ ಗತಿಸಿದ ಬಳಿಕ, ಮಿಲಿಟರಿ ಸೇವೆಗೆ ನೋಂದಾಯಿಕೊಳ್ಳುವಂತೆ ನನಗೆ ಪುನಃ ಕರೆಬಂತು. ನೋಂದಣಿಮಾಡುವ ಕಚೇರಿಯಲ್ಲಿ, ನಾನು ಈ ಹಿಂದೆ ಮಿಲಿಟರಿ ಸೇವೆಯನ್ನು ನಿರಾಕರಿಸಿದ್ದೆ ಎಂದು ಅಧಿಕಾರಿಗೆ ತಿಳಿಸಿದೆ. ಅದಕ್ಕೆ ಪ್ರತಿಕ್ರಿಯಿಸುತ್ತಾ, “ನೀನು ಏನು ಮಾಡುತ್ತಿದ್ದೀ ಎಂದು ನಿನಗೆ ಗೊತ್ತೋ? ಲೆಫ್ಟೆನಂಟ್ ಕರ್ನಲ್‌ಗೆ ಏನು ಹೇಳುತ್ತೀ ಎಂದು ನೋಡೋಣ!” ಎಂದವನು ಕಿರಿಚಿದನು.
ಅವನು ನನ್ನನ್ನು ಎರಡನೇ ಮಹಡಿಯಲ್ಲಿದ್ದ ಒಂದು ಕೋಣೆಗೆ ಕರೆದೊಯ್ದನು ಮತ್ತು ಅಲ್ಲಿ ಲೆಫ್ಟೆನಂಟ್ ಕರ್ನಲ್ ಒಂದು ಉದ್ದವಾದ ಮೇಜಿನ ಆಚೆಬದಿ ಕುಳಿತಿದ್ದರು. ನಾನು ನನ್ನ ನಿಲುವನ್ನು ವಿವರಿಸಿದಾಗ ಅವರು ನನಗೆ ನಿಕಟ ಗಮನವನ್ನು ಕೊಟ್ಟರು. ಅನಂತರ, ನೋಂದಾಯಿಸುವ ಕಮಿಟಿಯನ್ನು ಎದುರಿಸುವ ಮುಂಚೆ ನನ್ನ ನಿರ್ಣಯವನ್ನು ಮರುಪರಿಶೀಲಿಸಲು ನನಗಿನ್ನೂ ಸಮಯವಿದೆ ಎಂದವರು ಹೇಳಿದರು. ನಾವು ಲೆಫ್ಟೆನಂಟ್ ಕರ್ನಲ್‌ರ ಕಚೇರಿಯನ್ನು ಬಿಟ್ಟು ಹೊರಟಾಗ, ಆರಂಭದಲ್ಲಿ ನನ್ನ ಮೇಲೆ ಕೂಗಾಡಿದ ಅಧಿಕಾರಿಯು ನಿವೇದಿಸಿದ್ದು: “ನಿನ್ನಲ್ಲಿ ನಿಜವಾಗಿಯೂ ನಂಬಿಕೆ ಇದೆ ಎಂದು ನಾನು ಈಗ ಒಪ್ಪುತ್ತೇನೆ!” ನಾನು ಒಂದು ಮಿಲಿಟರಿ ಕಮಿಟಿಯ ಮುಂದೆ ತರಲ್ಪಟ್ಟಾಗ ನನ್ನ ತಟಸ್ಥ ನಿಲುವನ್ನು ಪುನಃ ವಿವರಿಸಿದೆ, ಮತ್ತು ಆ ಸಮಯಕ್ಕೆ ಅವರು ನನ್ನನ್ನು ಬಿಟ್ಟುಬಿಟ್ಟರು.
ಆ ಸಮಯದಲ್ಲಿ ನಾನು ಒಂದು ಹಾಸ್ಟಲ್‌ನಲ್ಲಿ ವಾಸಿಸುತ್ತಿದ್ದೆ. ಒಂದು ದಿನ ಸಾಯಂಕಾಲ, ಯಾರೋ ನನ್ನ ಬಾಗಿಲನ್ನು ಮೆಲ್ಲನೆ ತಟ್ಟುತ್ತಿರುವುದು ನನ್ನ ಕಿವಿಗೆ ಬಿತ್ತು. ನಾನು ಬಾಗಿಲನ್ನು ತೆರೆದಾಗ ಸೂಟ್ ಧರಿಸಿದ್ದು ಕೈಯಲ್ಲಿ ಬ್ರೀಫ್‌ಕೇಸನ್ನು ಹಿಡಿದುಕೊಂಡಿದ್ದ
ಒಬ್ಬ ವ್ಯಕ್ತಿಯನ್ನು ನಾನು ನೋಡಿದೆ. ಅವನು ತನ್ನನ್ನು ಪರಿಚಯಿಸುತ್ತಾ, “ನಾನು ‘ಸ್ಟೇಟ್ ಸೆಕ್ಯೂರಿಟಿ’ಯಿಂದ ಬಂದಿದ್ದೇನೆ. ನೀವು ತೊಂದರೆಗಳನ್ನು ಎದುರಿಸುತ್ತಿದ್ದೀರಿ ಮತ್ತು ನಿಮ್ಮನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಿದ್ದಾರೆ ಎಂಬುದು ನನಗೆ ಗೊತ್ತು” ಎಂದು ಹೇಳಿದನು. “ನೀವು ಹೇಳಿದ್ದು ಸರಿ” ಎಂದು ನಾನು ಉತ್ತರ ಕೊಟ್ಟೆ. ಆ ವ್ಯಕ್ತಿ ಮುಂದುವರಿಸುತ್ತಾ, “ನೀವು ನಮಗಾಗಿ ಕೆಲಸಮಾಡಲು ಸಮ್ಮತಿಸುವುದಾದರೆ, ನಾವು ನಿಮಗೆ ಸಹಾಯಮಾಡಲು ಬಯಸುತ್ತೇವೆ” ಎಂದು ಹೇಳಿದನು. ಅದಕ್ಕೆ ನಾನು, “ಇಲ್ಲ, ಅದು ಸಾಧ್ಯವಿಲ್ಲ. ನಾನು ನನ್ನ ಕ್ರೈಸ್ತ ನಂಬಿಕೆಗಳಿಗೆ ನಿಷ್ಠಾವಂತನಾಗಿ ಉಳಿಯಲು ಬಯಸುತ್ತೇನೆ” ಎಂದು ಹೇಳಿದೆ. ನನ್ನ ಮನವೊಲಿಸಲು ಹೆಚ್ಚಿನ ಪ್ರಯತ್ನವನ್ನು ಮಾಡದೆ ಅವನು ಅಲ್ಲಿಂದ ಹೊರಟುಹೋದನು.ಮರಳಿ ಸೆರೆವಾಸಕ್ಕೆ, ಮರಳಿ ಸಾರುವಿಕೆಗೆ
ಇಸವಿ 1986ರ ಆಗಸ್ಟ್ 26ರಂದು, ರೀಗದ ರಾಷ್ಟ್ರೀಯ ನ್ಯಾಯಾಲಯ ನನಗೆ ನಾಲ್ಕು ವರ್ಷದ ಕಡ್ಡಾಯ ದುಡಿಮೆಯನ್ನು ವಿಧಿಸಿತು ಮತ್ತು ನನ್ನನ್ನು ರೀಗದ ಕೇಂದ್ರೀಯ ಕಾರಾಗೃಹಕ್ಕೆ ಕೊಂಡೊಯ್ಯಲಾಯಿತು. ನನ್ನನ್ನು 40 ಮಂದಿ ಕೈದಿಗಳಿದ್ದ ದೊಡ್ಡ ಸೆರೆಕೋಣೆಯಲ್ಲಿ ಹಾಕಿದರು, ಮತ್ತು ಅಲ್ಲಿದ್ದ ಪ್ರತಿಯೊಬ್ಬ ವ್ಯಕ್ತಿಗೆ ನಾನು ಸಾರಲು ಪ್ರಯತ್ನಿಸಿದೆ. ಕೆಲವರು ದೇವರಲ್ಲಿ ನಂಬಿಕೆಯಿದೆ ಎಂದು ಹೇಳುತ್ತಿದ್ದರು, ಇತರರು ಹೀಯಾಳಿಸುವ ರೀತಿಯಲ್ಲಿ ನಕ್ಕರು ಅಷ್ಟೆ. ಅಲ್ಲಿನ ಪುರುಷರು ತಮ್ಮ ತಮ್ಮೊಳಗೆ ಗುಂಪುಗಳನ್ನು ಮಾಡಿಕೊಂಡಿದ್ದರು ಎಂಬುದನ್ನು ನಾನು ಗಮನಿಸಿದೆ, ಮತ್ತು ಎರಡು ವಾರಗಳ ಅನಂತರ ಆ ಗುಂಪುಗಳ ನಾಯಕರು ಬಂದು ನಾನು ಅವರ ಬರೆಯಲ್ಪಡದ ನಿಯಮಗಳಿಗೆ ವಿಧೇಯನಾಗಿಲ್ಲವಾದ್ದರಿಂದ ನನಗೆ ಸಾರಲು ಅನುಮತಿ ಇಲ್ಲ ಎಂದು ಹೇಳಿದರು. ನಾನು ಅದೇ ಕಾರಣಕ್ಕಾಗಿ ಬಂಧಿಸಲ್ಪಟ್ಟಿದ್ದೇನೆ, ಅಂದರೆ ನಾನು ಭಿನ್ನವಾದ ಆಜ್ಞೆಗಳನ್ನು ಪಾಲಿಸುತ್ತೇನೆ ಎಂದು ವಿವರಿಸಿದೆ.
ನಾನು ಜಾಗರೂಕವಾಗಿ ನನ್ನ ಸಾರುವಿಕೆಯನ್ನು ಮುಂದುವರಿಸಿದೆ, ಮತ್ತು ಆಧ್ಯಾತ್ಮಿಕ ವಿಷಯಗಳ ಕಡೆಗೆ ಒಲವಿದ್ದ ಕೆಲವರನ್ನು ನಾನು ಕಂಡುಕೊಂಡಾಗ ನಾಲ್ಕು ಮಂದಿಯೊಂದಿಗೆ ಬೈಬಲ್ ಅಧ್ಯಯನವನ್ನು ಆರಂಭಿಸಲು ಶಕ್ತನಾದೆ. ನಮ್ಮ ಚರ್ಚೆಗಳ ಸಮಯದಲ್ಲಿ, ಅವರು ಮೂಲಭೂತ ಬೈಬಲ್ ಬೋಧನೆಗಳನ್ನು ಒಂದು ಸಣ್ಣ ಪುಸ್ತಕದಲ್ಲಿ ಬರೆದುಕೊಂಡರು. ಕೆಲವು ತಿಂಗಳುಗಳ ಅನಂತರ, ನನ್ನನ್ನು ವಾಲ್‌ಮಯೆರಾದಲ್ಲಿದ್ದ ಒಂದು ಬಿಗಿಭದ್ರತಾ ಶಿಬಿರಕ್ಕೆ ಕಳುಹಿಸಲಾಯಿತು. ನಾನು ಅಲ್ಲಿ ಒಬ್ಬ ಇಲೆಕ್ಟ್ರಿಷನ್ ಆಗಿ ಕೆಲಸಮಾಡಿದೆ. ಅಲ್ಲಿ ಮತ್ತೊಬ್ಬ ಇಲೆಕ್ಟ್ರಿಷನ್‌ನೊಂದಿಗೆ ಬೈಬಲ್ ಅಧ್ಯಯನವನ್ನು ನಡೆಸಲು ಶಕ್ತನಾದೆ ಮತ್ತು ನಾಲ್ಕು ವರ್ಷಗಳ ಬಳಿಕ ಆ ವ್ಯಕ್ತಿ ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾದನು.
ಇಸವಿ 1988ರ ಮಾರ್ಚ್ 24ರಂದು, ನನ್ನನ್ನು ಆ ಬಿಗಿಭದ್ರತಾ ಶಿಬಿರದಿಂದ ಹತ್ತಿರದಲ್ಲಿದ್ದ ಒಂದು ವಸಾಹತು ಶಿಬಿರಕ್ಕೆ ಸ್ಥಳಾಂತರಿಸಲಾಯಿತು. ಇದು ನಿಜವಾಗಿಯೂ ಒಂದು ಆಶೀರ್ವಾದದಂತಿತ್ತು, ಏಕೆಂದರೆ ಇದರಿಂದ ನನಗೆ ಹೆಚ್ಚು ಸ್ವಾತಂತ್ರ್ಯ ಸಿಕ್ಕಿತು. ನನ್ನನ್ನು ಬೇರೆ ಬೇರೆ ನಿರ್ಮಾಣಕಾರ್ಯ ನಿವೇಶನಗಳಲ್ಲಿ ಕೆಲಸಮಾಡುವಂತೆ ನೇಮಿಸಲಾಗುತ್ತಿತ್ತು, ಮತ್ತು ನಾನು ಸಾರಲಿಕ್ಕಾಗಿರುವ ಅವಕಾಶಗಳಿಗಾಗಿ ಸದಾ ಹುಡುಕುತ್ತಿದ್ದೆ. ಹೆಚ್ಚಾಗಿ ನಾನು ಶಿಬಿರದ ಹೊರಗೆ ಉಳಿಯುತ್ತಿದ್ದೆ ಮತ್ತು ಸಾಯಂಕಾಲದ ವರೆಗೆ ಸಾರುತ್ತಾ ತಡವಾಗಿದ್ದರೂ ನನಗೆ ವಸಾಹತಿಗೆ ಬಂದು ಸೇರಿಕೊಳ್ಳುವುದರಲ್ಲಿ ಯಾವುದೇ ಸಮಸ್ಯೆ ಇರುತ್ತಿರಲಿಲ್ಲ.
ಯೆಹೋವನು ನನ್ನ ಪ್ರಯತ್ನಗಳನ್ನು ಆಶೀರ್ವದಿಸಿದನು. ಈ ವಸಾಹತಿನ ಆಸುಪಾಸಿನಲ್ಲಿ ಕೆಲವು ಸಾಕ್ಷಿಗಳು ವಾಸಿಸುತ್ತಿದ್ದರು, ಆದರೆ ಪಟ್ಟಣದಲ್ಲಿ ಕೇವಲ ಒಬ್ಬ ವೃದ್ಧ ಸಹೋದರಿ ಮಾತ್ರ ಇದ್ದರು. ಅವರ ಹೆಸರು ವಿಲ್ಮಾ ಕ್ರೂಮಿನ್ಯಾ ಎಂದಾಗಿತ್ತು. ನಾನು ಮತ್ತು ಸಹೋದರಿ ಕ್ರೂಮಿನ್ಯಾ ಅನೇಕ ಯುವ ಜನರೊಂದಿಗೆ ಬೈಬಲ್ ಅಧ್ಯಯನಗಳನ್ನು ನಡೆಸಲಾರಂಭಿಸಿದೆವು. ಆಗಿಂದಾಗ್ಗೆ, ಶುಶ್ರೂಷೆಯಲ್ಲಿ ಭಾಗವಹಿಸಲಿಕ್ಕಾಗಿ ಸಹೋದರ ಸಹೋದರಿಯರು ರೀಗದಿಂದ ಬರುತ್ತಿದ್ದರು, ಮತ್ತು ಕೆಲವು ರೆಗ್ಯುಲರ್ ಪಯನೀಯರರು ಲೆನನ್‌ಗ್ರಾಡ್ (ಈಗ ಸೈಂಟ್ ಪೀಟರ್ಸ್‌ಬರ್ಗ್)ನಿಂದ ಬಂದರು. ಯೆಹೋವನ ಸಹಾಯದಿಂದ ನಾವು ಅನೇಕ ಬೈಬಲ್ ಅಧ್ಯಯನಗಳನ್ನು ಆರಂಭಿಸಿದೆವು, ಮತ್ತು ಶೀಘ್ರವೇ ನಾನು ಪಯನೀಯರ್ ಸೇವೆಯನ್ನು ಆರಂಭಿಸುತ್ತಾ ತಿಂಗಳಲ್ಲಿ 90 ತಾಸುಗಳನ್ನು ಸಾರುವ ಕೆಲಸದಲ್ಲಿ ವ್ಯಯಿಸಿದೆ.
ಇಸವಿ 1990ರ ಏಪ್ರಿಲ್ 7ರಂದು, ವಾಲ್‌ಮಯೆರಾದಲ್ಲಿದ್ದ ಪೀಪಲ್ಸ್ ಕೋರ್ಟ್‌ನಲ್ಲಿ ನನ್ನ ಕೇಸ್ ಮರುಪರಿಶೀಲನೆಗೆ ಬಂತು. ವಿಚಾರಣೆಯು ಆರಂಭಿಸಿದಾಗ, ನನಗೆ ಪ್ರಾಸಿಕ್ಯೂಟರನ ಗುರುತು ಸಿಕ್ಕಿತು. ಅವನೊಬ್ಬ ಯುವ ವ್ಯಕ್ತಿಯಾಗಿದ್ದು, ಅವನೊಂದಿಗೆ ನಾನು ಈ ಹಿಂದೆ ಬೈಬಲಿನ ಕುರಿತು ಚರ್ಚಿಸಿದ್ದೆ! ಅವನಿಗೆ ಸಹ ನನ್ನ ಗುರುತು ಸಿಕ್ಕಿತು. ನನ್ನನ್ನು ನೋಡಿದಾಗ ಅವನ ಮುಖದಲ್ಲಿ ಮುಗುಳ್ನಗೆ ಇತ್ತಾದರೂ ಅವನೇನೂ ಮಾತಾಡಲಿಲ್ಲ. ಆ ದಿನ ವಿಚಾರಣೆಯ ಸಮಯದಲ್ಲಿ ನ್ಯಾಯಾಧೀಶನು ಹೇಳಿದ ಮಾತುಗಳು ಈಗಲೂ ನನ್ನ ನೆಪಿನಲ್ಲಿ ಉಳಿದಿವೆ: “ಯೂರೀ, ನಾಲ್ಕು ವರ್ಷಗಳ ಮುಂಚೆ ನಿಮ್ಮನ್ನು ಬಂಧಿಸಬೇಕು ಎಂದು ಹೊರಡಿಸಲ್ಪಟ್ಟ ತೀರ್ಪು ಕಾನೂನು ಬಾಹಿರವಾಗಿತ್ತು. ಅವರು ನಿಮ್ಮನ್ನು ದಂಡನೆಗೆ ಒಳಪಡಿಸಬಾರದಿತ್ತು.” ಅನಿರೀಕ್ಷಿತವಾಗಿ, ನಾನು ಒಬ್ಬ ಸ್ವತಂತ್ರ ಮನುಷ್ಯನಾದೆ!
ಕ್ರಿಸ್ತನ ಸೈನಿಕ
ಇಸವಿ 1990ರ ಜೂನ್ ತಿಂಗಳಲ್ಲಿ, ರೀಗದಲ್ಲಿ ವಾಸಿಸಲು ಅನುಮತಿಯನ್ನು ಪಡೆಯಲಿಕ್ಕಾಗಿ ನಾನು ಪುನಃ ಒಮ್ಮೆ ಸೈನ್ಯಾಧಿಕಾರಿಗಳ ಕಚೇರಿಗೆ ಹೋಗಬೇಕಾಯಿತು. ನಾಲ್ಕು ವರ್ಷಗಳ ಮುಂಚೆ ನಾನು ಯಾವ ಕಚೇರಿಯಲ್ಲಿ ಯಾವ ಉದ್ದ ಮೇಜಿನ ಮುಂದೆ ನಿಂತು ಮಿಲಿಟರಿಯಲ್ಲಿ ಸೇರುವುದಿಲ್ಲ ಎಂದು ಲೆಫ್ಟೆನಂಟ್ ಕರ್ನಲ್‌ಗೆ ಹೇಳಿದ್ದೆನೋ ಅದೇ ಕಚೇರಿಗೆ ಪುನಃ ಹೋದೆ. ಈ ಸಲ ಅವರು ಎದ್ದುನಿಂತು ನನ್ನ ಕೈಹಿಡಿದು ಕುಲುಕುತ್ತಾ, “ನೀವು ಇಷ್ಟೆಲ್ಲಾ ಅನುಭವಿಸಬೇಕಾಯಿತು ಎಂಬುದರ ಕುರಿತು ಯೋಚಿಸುವಾಗ ನನಗೆ ಬೇಸರವಾಗುತ್ತದೆ. ಏನು ನಡೆಯಿತೋ ಅದರ ಬಗ್ಗೆ ನನಗೆ ವಿಷಾದವಿದೆ.”
2 ತಿಮೊಥೆಯ 2:3, 4) ಅದಕ್ಕೆ ಕರ್ನಲ್, “ಸ್ವಲ್ಪ ಸಮಯದ ಹಿಂದೆ ನಾನು ಒಂದು ಬೈಬಲನ್ನು ಖರೀದಿಸಿದೆ, ಮತ್ತು ಅದನ್ನು ಈಗ ಓದುತ್ತಿದ್ದೇನೆ” ಎಂದು ಉತ್ತರ ಕೊಟ್ಟರು. ನನ್ನ ಬಳಿ, ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂಬ ಪುಸ್ತಕವಿತ್ತು. * ಕಡೇ ದಿವಸಗಳ ಚಿಹ್ನೆಗಳ ಕುರಿತು ಮಾತಾಡುವ ಅಧ್ಯಾಯಕ್ಕೆ ತೆರೆದು, ಬೈಬಲ್ ಪ್ರವಾದನೆಯು ಹೇಗೆ ನಮ್ಮ ದಿನಗಳಿಗೆ ಕೈತೋರಿಸುತ್ತದೆ ಎಂದು ನಾನು ಅವರಿಗೆ ತೋರಿಸಿದೆ. ಆಳವಾದ ಗಣ್ಯತೆಯೊಂದಿಗೆ ಕರ್ನಲ್ ಪುನಃ ನನ್ನ ಕೈಕುಲುಕಿದರು ಮತ್ತು ನಿಮ್ಮ ಕೆಲಸವು ಸಫಲವಾಗಲಿ ಎಂದು ಹಾರೈಸಿದರು.
ನಾನು ಪ್ರತಿಕ್ರಿಯಿಸುತ್ತಾ ಹೇಳಿದ್ದು: “ನಾನು ಕ್ರಿಸ್ತನ ಸೈನಿಕ, ಮತ್ತು ನಾನು ನನ್ನ ನೇಮಕವನ್ನು ಪೂರೈಸಬೇಕು. ಬೈಬಲಿನ ಸಹಾಯದಿಂದ ನೀವು ಸಹ ಕ್ರಿಸ್ತನು ತನ್ನ ಹಿಂಬಾಲಕರಿಗೆ ಏನನ್ನು ವಾಗ್ದಾನಿಸಿದ್ದಾನೋ ಆ ಸಂತೋಷಭರಿತ ಜೀವನ ಮತ್ತು ನಿತ್ಯವಾದ ಭವಿಷ್ಯತ್ತನ್ನು ಪಡೆಯಬಲ್ಲಿರಿ.” (ಈ ಸಮಯದಷ್ಟಕ್ಕೆ ಲ್ಯಾಟ್ವಿಯದಲ್ಲಿನ ಹೊಲವು ಬೆಳ್ಳಗಾಗಿ ಕೊಯ್ಲಿಗೆ ಬಂದಿತ್ತು. (ಯೋಹಾನ 4:35) 1991ರಲ್ಲಿ ನಾನೊಬ್ಬ ಸಭಾ ಹಿರಿಯನಾಗಿ ಸೇವೆಸಲ್ಲಿಸಲು ಆರಂಭಿಸಿದೆ. ಇಡೀ ದೇಶದಲ್ಲಿ ಕೇವಲ ಇಬ್ಬರು ನೇಮಿತ ಹಿರಿಯರು ಮಾತ್ರ ಇದ್ದರು! ಒಂದು ವರ್ಷ ಗತಿಸಿದ ಮೇಲೆ, ಲ್ಯಾಟ್ವಿಯದಲ್ಲಿದ್ದ ಏಕಮಾತ್ರ ಸಭೆಯು ಎರಡಾಗಿ ಬೇರ್ಪಟ್ಟಿತು—ಒಂದು ಲ್ಯಾಟ್ವಿಯನ್ ಭಾಷೆಯದ್ದು ಮತ್ತು ಇನ್ನೊಂದು ರಷ್ಯನ್ ಭಾಷೆಯದ್ದು. ನನಗೆ ರಷ್ಯನ್ ಭಾಷೆಯ ಸಭೆಯಲ್ಲಿ ಸೇವೆಮಾಡುವ ಸದವಕಾಶ ಸಿಕ್ಕಿತು. ಬೆಳವಣಿಗೆಯು ಎಷ್ಟು ವೇಗವಾಗಿತ್ತೆಂದರೆ, ನಂತರದ ವರ್ಷ ನಮ್ಮ ಸಭೆಯು ಮೂರು ಸಭೆಗಳಾಗಿ ಬೇರ್ಪಟ್ಟಿತು! ನಾನು ಹಿನ್ನೋಟ ಬೀರುವಾಗ, ಯೆಹೋವನು ತಾನೇ ತನ್ನ ಕುರಿಗಳನ್ನು ಸಂಘಟನೆಯತ್ತ ನಡೆಸುತ್ತಿದ್ದಾನೆ ಎಂಬುದು ವ್ಯಕ್ತವಾಗುತ್ತದೆ.
ಇಸವಿ 1998ರಲ್ಲಿ, ರೀಗದ ಆಗ್ನೇಯ ದಿಕ್ಕಿಗೆ 40 ಕಿಲೊಮೀಟರ್ ದೂರದಲ್ಲಿದ್ದ ಯೆಲ್‌ಗಾವಾ ಎಂಬ ಪಟ್ಟಣಕ್ಕೆ ನನ್ನನ್ನು ಒಬ್ಬ ಸ್ಪೆಶಲ್ ಪಯನೀಯರನಾಗಿ ನೇಮಿಸಲಾಯಿತು. ಅದೇ ವರ್ಷದಲ್ಲಿ, ಶುಶ್ರೂಷಾ ತರಬೇತಿ ಶಾಲೆಗೆ ಹಾಜರಾಗುವಂತೆ ಲ್ಯಾಟ್ವಿಯದಿಂದ ಮೊದಲು ಯಾರನ್ನು ಕರೆಯಲಾಯಿತೋ ಅವರಲ್ಲಿ ನಾನು ಒಬ್ಬನಾಗಿದ್ದೆ. ಈ ಶಾಲೆಯು ರಷ್ಯದಲ್ಲಿದ್ದ ಸೈಂಟ್ ಪೀಟರ್ಸ್‌ಬರ್ಗ್‌ನ ಸೋಲ್‌ನೈಯಕ್‌ನಾಎ ಎಂಬಲ್ಲಿ ರಷ್ಯನ್ ಭಾಷೆಯಲ್ಲಿ ನಡೆಸಲ್ಪಟ್ಟಿತು. ಈ ಶಾಲೆಯ ವ್ಯಾಸಂಗದ ಸಮಯದಲ್ಲಿ, ಶುಶ್ರೂಷೆಯಲ್ಲಿ ಯಶಸ್ಸನ್ನು ಗಳಿಸಬೇಕಾದರೆ ಜನರ ಕಡೆಗೆ ಪ್ರೀತಿಭರಿತ ಮನೋಭಾವವನ್ನು ಹೊಂದಿರುವುದು ಎಷ್ಟು ಪ್ರಾಮುಖ್ಯ ಎಂಬುದನ್ನು ನಾನು ಅರ್ಥಮಾಡಿಕೊಂಡೆ. ನಮಗೆ ಶಾಲೆಯಲ್ಲಿ ಬೋಧಿಸಲ್ಪಟ್ಟ ವಿಷಯಗಳಿಗಿಂತ, ಬೆತೆಲ್ ಕುಟುಂಬದವರಿಂದ ಮತ್ತು ಶಾಲಾ ಉಪದೇಶಕರಿಂದ ತೋರಿಸಲ್ಪಟ್ಟ ಪ್ರೀತಿ ಹಾಗೂ ಕಾಳಜಿಯು ನನ್ನ ಮೇಲೆ ವಿಶೇಷವಾಗಿ ಹೆಚ್ಚು ಪ್ರಭಾವವನ್ನು ಬೀರಿತು.
ನಾನು ಕಾರೈನಾ ಎಂಬ ಸುಂದರ ಕ್ರೈಸ್ತ ಸ್ತ್ರೀಯನ್ನು 2001ರಲ್ಲಿ ಮದುವೆಮಾಡಿಕೊಂಡಾಗ ನನ್ನ ಜೀವನದ ಮತ್ತೊಂದು ಮೈಲಿಗಲ್ಲನ್ನು ಮುಟ್ಟಿದೆ. ಕಾರೈನಾ ವಿಶೇಷ ಪೂರ್ಣ ಸಮಯದ ಸೇವೆಯಲ್ಲಿ ನನ್ನನ್ನು ಜೊತೆಗೂಡಿದಳು, ಮತ್ತು ಪ್ರತಿ ದಿನ ಕ್ಷೇತ್ರ ಸೇವೆಯಿಂದ ಹಿಂದಿರುಗುವಾಗ ಸಂತೋಷದಿಂದ ಬರುವ ನನ್ನ ಹೆಂಡತಿಯ ಮುಖವನ್ನು ನೋಡುವುದು ನನ್ನಲ್ಲಿ ಪ್ರೋತ್ಸಾಹವನ್ನು ತುಂಬಿಸುತ್ತದೆ. ಯೆಹೋವನ ಸೇವೆ ಮಾಡುವುದರಲ್ಲಿ ಮಹಾ ಸಂತೋಷವಿದೆ ಎಂಬುದು ಖಂಡಿತ. ಕಮ್ಯೂನಿಸ್ಟ್ ಆಳ್ವಿಕೆಯ ಕೆಳಗೆ ನಾನು ಅನುಭವಿಸಿದ ಕರಾಳ ಸಂಗತಿಗಳು ಯೆಹೋವನ ಮೇಲೆ ಸಂಪೂರ್ಣವಾಗಿ ಭರವಸೆಯಿಡುವಂತೆ ನನಗೆ ಕಲಿಸಿವೆ. ಯೆಹೋವನ ಸ್ನೇಹವನ್ನು ಕಾಪಾಡಿಕೊಳ್ಳಲು ಮತ್ತು ಆತನ ಪರಮಾಧಿಕಾರವನ್ನು ಬೆಂಬಲಿಸಲು ಬಯಸುವವನಿಗೆ ಯಾವ ತ್ಯಾಗವೂ ದೊಡ್ಡದಾಗಿರುವುದಿಲ್ಲ. ಯೆಹೋವನ ಕುರಿತು ಕಲಿಯುವಂತೆ ಇತರರಿಗೆ ಸಹಾಯಮಾಡುವುದು ನನ್ನ ಜೀವನದಲ್ಲಿ ಉದ್ದೇಶವನ್ನು ಕಂಡುಕೊಳ್ಳುವಂತೆ ಮಾಡಿದೆ. ‘ಕ್ರಿಸ್ತನ ಒಳ್ಳೇ ಸೈನಿಕನಂತೆ’ ಯೆಹೋವನ ಸೇವೆಮಾಡುವುದು ನನಗೆ ಒಂದು ದೊಡ್ಡ ಗೌರವವಾಗಿದೆ.—2 ತಿಮೊಥೆಯ 2:3.
[ಪಾದಟಿಪ್ಪಣಿ]
^ ಪ್ಯಾರ. 29 ಯೆಹೋವನ ಸಾಕ್ಷಿಗಳ ಪ್ರಕಾಶನ, ಆದರೆ ಈಗ ಮುದ್ರಿಸಲ್ಪಡುತ್ತಿಲ್ಲ.
[ಪುಟ 10ರಲ್ಲಿರುವ ಚಿತ್ರ]
ನನಗೆ ನಾಲ್ಕು ವರ್ಷಗಳ ಕಡ್ಡಾಯ ದುಡಿಮೆಯ ಶಿಕ್ಷೆ ವಿಧಿಸಲ್ಪಟ್ಟಿತು ಮತ್ತು ರೀಗದ ಕೇಂದ್ರೀಯ ಕಾರಾಗೃಹದಲ್ಲಿ ನನ್ನನ್ನು ಹಾಕಲಾಯಿತು
[ಪುಟ 12ರಲ್ಲಿರುವ ಚಿತ್ರ]
ಕಾರೈನಾಳೊಂದಿಗೆ ಶುಶ್ರೂಷೆಯಲ್ಲಿ ತೊಡಗಿರುವುದು