ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಾವಾದರೋ ನಮ್ಮ ದೇವರಾದ ಯೆಹೋವನ ಹೆಸರಿನಲ್ಲಿ ನಡೆಯೋಣ

ನಾವಾದರೋ ನಮ್ಮ ದೇವರಾದ ಯೆಹೋವನ ಹೆಸರಿನಲ್ಲಿ ನಡೆಯೋಣ

ನಾವಾದರೋ ನಮ್ಮ ದೇವರಾದ ಯೆಹೋವನ ಹೆಸರಿನಲ್ಲಿ ನಡೆಯೋಣ

“ನಾವಾದರೋ ನಮ್ಮ ದೇವರಾದ ಯೆಹೋವನ ಹೆಸರಿನಲ್ಲಿ ಯುಗಯುಗಾಂತರಗಳಲ್ಲಿ ನಡೆಯುವೆವು.”​—⁠ಮೀಕ 4:⁠5.

ಬೈಬಲಿನಲ್ಲಿ ದೇವರೊಂದಿಗೆ ನಡೆದವನಾಗಿ ಉಲ್ಲೇಖಿಸಲ್ಪಟ್ಟಿರುವ ಪ್ರಥಮ ವ್ಯಕ್ತಿಯು ಹನೋಕನಾಗಿದ್ದಾನೆ. ದ್ವಿತೀಯ ವ್ಯಕ್ತಿಯು ನೋಹನಾಗಿದ್ದಾನೆ. ದಾಖಲೆಯು ನಮಗೆ ತಿಳಿಸುವುದು: “ನೋಹನು ನೀತಿವಂತನೂ ತನ್ನ ಕಾಲದವರಲ್ಲಿ ತಪ್ಪಿಲ್ಲದವನೂ ಆಗಿದ್ದನು; ಅವನು ದೇವರೊಂದಿಗೆ ಅನ್ಯೋನ್ಯವಾಗಿ ನಡೆದುಕೊಂಡನು [“ನಡೆಯುತ್ತಿದ್ದನು,” NIBV].” (ಆದಿಕಾಂಡ 6:9) ನೋಹನ ಕಾಲದಷ್ಟಕ್ಕೆ, ಸರ್ವ ಮಾನವಕುಲವು ಶುದ್ಧ ಆರಾಧನೆಯಿಂದ ವಿಮುಖಗೊಂಡಿತ್ತು. ಸ್ತ್ರೀಯರೊಂದಿಗೆ ಅಸ್ವಾಭಾವಿಕ ಸಂಬಂಧಗಳನ್ನು ಬೆಳೆಸಿ, ನೆಫಿಲೀಯರೆಂದು ಕರೆಯಲ್ಪಟ್ಟ ಆ ದಿನಗಳ “ಮಹಾಶರೀರಿಗಳು” ಅಥವಾ “ಪರಾಕ್ರಮಶಾಲಿಗಳ” ಸಂತತಿಯನ್ನು ಉಂಟುಮಾಡಿದ ಅಪನಂಬಿಗಸ್ತ ದೇವದೂತರಿಂದ ಈ ಕೆಟ್ಟ ಸನ್ನಿವೇಶವು ಇನ್ನಷ್ಟು ಹದಗೆಟ್ಟಿತು. ಆದುದರಿಂದ, ಭೂಮಿಯು ಹಿಂಸಾಚಾರದಿಂದ ತುಂಬಿದ್ದರಲ್ಲಿ ಆಶ್ಚರ್ಯವೇನಿಲ್ಲ! (ಆದಿಕಾಂಡ 6:2, 4, 11) ಆದರೂ, ನೋಹನು ತನ್ನನ್ನು ತಪ್ಪಿಲ್ಲದವನಾಗಿ ರುಜುಪಡಿಸಿಕೊಂಡನು ಮತ್ತು ಅವನು ‘ಸುನೀತಿಯನ್ನು ಸಾರುವವನಾಗಿದ್ದನು.’ (2 ಪೇತ್ರ 2:5) ಜೀವಸಂರಕ್ಷಣೆಗಾಗಿ ಒಂದು ನಾವೆಯನ್ನು ಕಟ್ಟುವಂತೆ ದೇವರು ನೋಹನಿಗೆ ಆಜ್ಞಾಪಿಸಿದಾಗ, ಅವನು ವಿಧೇಯತೆಯಿಂದ ‘ದೇವರು ಅಪ್ಪಣೆಕೊಟ್ಟ ಪ್ರಕಾರವೇ ಮಾಡಿದನು.’ (ಆದಿಕಾಂಡ 6:22) ನಿಜವಾಗಿಯೂ ನೋಹನು ದೇವರೊಂದಿಗೆ ನಡೆದನು.

2 ನಂಬಿಗಸ್ತ ಸಾಕ್ಷಿಗಳ ಕುರಿತಾದ ತನ್ನ ಪಟ್ಟಿಯಲ್ಲಿ ನೋಹನ ಹೆಸರನ್ನು ಒಳಗೂಡಿಸಿದ ಪೌಲನು ಬರೆದುದು: “ನಂಬಿಕೆಯಿಂದಲೇ ನೋಹನು ಅದು ವರೆಗೆ ಕಾಣದಿದ್ದ ಸಂಗತಿಗಳ ವಿಷಯವಾಗಿ ದೈವೋಕ್ತಿಯನ್ನು ಹೊಂದಿ ಭಯಭಕ್ತಿಯುಳ್ಳವನಾಗಿ ತನ್ನ ಮನೆಯವರ ಸಂರಕ್ಷಣೆಗೋಸ್ಕರ ನಾವೆಯನ್ನು ಕಟ್ಟಿ ಸಿದ್ಧಮಾಡಿದನು. ಅದರಿಂದ ಅವನು ಲೋಕದವರನ್ನು ದಂಡನೆಗೆ ಪಾತ್ರರೆಂದು ನಿರ್ಣಯಿಸಿಕೊಂಡು ನಂಬಿಕೆಯ ಫಲವಾದ ನೀತಿಗೆ ಬಾಧ್ಯನಾದನು.” (ಇಬ್ರಿಯ 11:7) ಎಷ್ಟು ಅತ್ಯುತ್ತಮ ಮಾದರಿಯಿದು! ಯೆಹೋವನ ಮಾತುಗಳು ನಿಜವಾಗಿಯೂ ನೆರವೇರುತ್ತವೆ ಎಂಬ ದೃಢಭರವಸೆಯಿಂದ, ಆತನ ಆಜ್ಞೆಗಳನ್ನು ಪೂರೈಸಲಿಕ್ಕಾಗಿ ನೋಹನು ಸಮಯ, ಶಕ್ತಿ ಮತ್ತು ಸಂಪನ್ಮೂಲಗಳನ್ನು ವ್ಯಯಿಸಿದನು. ತದ್ರೀತಿಯಲ್ಲಿ, ಇಂದು ಸಹ ಅನೇಕರು ಲೋಕದಲ್ಲಿರುವ ಐಹಿಕ ಸದವಕಾಶಗಳಿಗೆ ಬೆನ್ನುಹಾಕಿ, ತಮ್ಮ ಸಮಯ, ಶಕ್ತಿ ಮತ್ತು ಸಂಪನ್ಮೂಲಗಳನ್ನು ಯೆಹೋವನ ಆಜ್ಞೆಗಳಿಗೆ ವಿಧೇಯರಾಗುವುದರಲ್ಲಿ ವ್ಯಯಿಸುತ್ತಾರೆ. ಅವರ ನಂಬಿಕೆಯು ಗಮನಾರ್ಹವಾದದ್ದಾಗಿದೆ ಮತ್ತು ಇದು ಸ್ವತಃ ಅವರ ಹಾಗೂ ಇತರರ ರಕ್ಷಣೆಯಲ್ಲಿ ಫಲಿಸುವುದು.​—⁠ಲೂಕ 16:9; 1 ತಿಮೊಥೆಯ 4:16.

3 ಹಿಂದಿನ ಲೇಖನದಲ್ಲಿ ಚರ್ಚಿಸಲ್ಪಟ್ಟ ನೋಹನ ಮುತ್ತಜ್ಜನಾದ ಹನೋಕನಿಗೆ ನಂಬಿಕೆಯನ್ನು ಅಭ್ಯಾಸಿಸುವುದು ಹೇಗೆ ಕಷ್ಟಕರವಾಗಿತ್ತೋ ಹಾಗೆಯೇ ನೋಹನಿಗೂ ಅವನ ಕುಟುಂಬಕ್ಕೂ ಕಷ್ಟಕರವಾಗಿದ್ದಿರಬೇಕು. ಹನೋಕನ ದಿನದಲ್ಲಿದ್ದಂತೆ ನೋಹನ ದಿನದಲ್ಲಿಯೂ ಸತ್ಯಾರಾಧಕರು ಅಲ್ಪ ಸಂಖ್ಯೆಯಲ್ಲಿದ್ದರು; ಎಂಟು ಮಂದಿ ಮಾತ್ರ ನಂಬಿಗಸ್ತರಾಗಿದ್ದರು ಮತ್ತು ಜಲಪ್ರಳಯದಿಂದ ಪಾರುಗೊಳಿಸಲ್ಪಟ್ಟರು. ಹಿಂಸಾತ್ಮಕವಾದ ಅನೈತಿಕ ಲೋಕವೊಂದರಲ್ಲಿ ನೋಹನು ಸುನೀತಿಯನ್ನು ಸಾರಿದನು. ಅಷ್ಟುಮಾತ್ರವಲ್ಲ, ಈ ಮುಂಚೆ ಯಾರೊಬ್ಬರೂ ಇಂಥ ಒಂದು ಪ್ರಳಯವನ್ನು ನೋಡಿರಲಿಲ್ಲವಾದರೂ, ಲೋಕವ್ಯಾಪಕವಾದ ಒಂದು ಜಲಪ್ರಳಯಕ್ಕೆ ಸಿದ್ಧತೆಯಲ್ಲಿ ಅವನು ಮತ್ತು ಅವನ ಕುಟುಂಬದವರು ಮರದ ಒಂದು ದೊಡ್ಡ ನಾವೆಯನ್ನು ಕಟ್ಟಿದರು. ಅವರ ಕೆಲಸವನ್ನು ಗಮನಿಸುತ್ತಿದ್ದವರಿಗೆ ಇದು ತುಂಬ ವಿಚಿತ್ರವಾಗಿ ಕಂಡುಬಂದಿರಬೇಕು.

4 ಆಸಕ್ತಿಕರವಾಗಿಯೇ, ಯೇಸು ನೋಹನ ದಿನಗಳಿಗೆ ಸೂಚಿಸಿ ಮಾತಾಡಿದಾಗ, ಹಿಂಸಾಚಾರ, ಸುಳ್ಳು ಧರ್ಮ ಅಥವಾ ಅನೈತಿಕತೆಯ ಕುರಿತಾಗಿ ಮಾತಾಡಲಿಲ್ಲ; ವಾಸ್ತವದಲ್ಲಿ ಇವು ತುಂಬ ಗಂಭೀರವಾದ ವಿಷಯಗಳಾಗಿದ್ದವು. ಯೇಸು ಎತ್ತಿತೋರಿಸಿದ ತಪ್ಪು, ಕೊಡಲ್ಪಟ್ಟ ಎಚ್ಚರಿಕೆಗೆ ಜನರು ತೋರಿಸಿದ ತಿರಸ್ಕಾರವೇ ಆಗಿತ್ತು. “ಜಲಪ್ರಳಯಕ್ಕೆ ಮುಂಚಿನ ದಿನಗಳಲ್ಲಿ ನೋಹನು ನಾವೆಯಲ್ಲಿ ಸೇರಿದ ದಿನದ ತನಕ ಜನರು ಉಣ್ಣುತ್ತಾ ಕುಡಿಯುತ್ತಾ ಮದುವೆಮಾಡಿಕೊಳ್ಳುತ್ತಾ ಮಾಡಿಕೊಡುತ್ತಾ” ಇದ್ದರು ಎಂದು ಅವನು ಹೇಳಿದನು. ಉಣ್ಣುವುದು, ಕುಡಿಯುವುದು, ಮದುವೆಮಾಡಿಕೊಳ್ಳುವುದು, ಮದುವೆಮಾಡಿಕೊಡುವುದರಲ್ಲಿ ತಪ್ಪೇನಿತ್ತು? ಅವರು “ಸಾಮಾನ್ಯ” ಜೀವನವನ್ನು ನಡೆಸುತ್ತಿದ್ದರು! ಆದರೆ ಜಲಪ್ರಳಯವು ಬರಲಿಕ್ಕಿತ್ತು ಮತ್ತು ನೋಹನು ಸುನೀತಿಯನ್ನು ಸಾರುತ್ತಾ ಇದ್ದನು. ಅವನ ಮಾತುಗಳು ಮತ್ತು ನಡತೆಯಿಂದ ಅವರು ಎಚ್ಚರಿಕೆಯನ್ನು ಪಡೆದುಕೊಳ್ಳಬೇಕಾಗಿತ್ತು. ಆದರೂ, ಅವರು “ಪ್ರಳಯದ ನೀರು ಬಂದು ಎಲ್ಲರನ್ನು ಬಡುಕೊಂಡುಹೋಗುವ ತನಕ ಏನೂ ತಿಳಿಯದೇ ಇದ್ದರು.”​—⁠ಮತ್ತಾಯ 24:38, 39.

5 ಆ ಸಮಯಗಳ ಮೇಲೆ ಹಿನ್ನೋಟ ಬೀರುವಾಗ, ನೋಹನ ಮಾರ್ಗಕ್ರಮದಲ್ಲಿದ್ದ ವಿವೇಕವನ್ನು ನಾವು ಮನಗಾಣುತ್ತೇವೆ. ಜಲಪ್ರಳಯಕ್ಕೆ ಮುಂಚಿನ ದಿನಗಳಲ್ಲಿ, ಬೇರೆ ಎಲ್ಲರಿಗಿಂತಲೂ ಭಿನ್ನರಾಗಿ ಉಳಿಯಲು ಧೈರ್ಯವು ಬೇಕಾಗಿತ್ತು. ದೊಡ್ಡದಾದ ನಾವೆಯನ್ನು ಕಟ್ಟಲು ಮತ್ತು ಪ್ರತಿ ಜಾತಿಯ ಪ್ರಾಣಿಗಳ ಜೊತೆಯನ್ನು ಅದರಲ್ಲಿ ಸೇರಿಸಲು ನೋಹನಿಗೆ ಹಾಗೂ ಅವನ ಕುಟುಂಬಕ್ಕೆ ಬಲವಾದ ನಿಶ್ಚಿತಾಭಿಪ್ರಾಯದ ಅಗತ್ಯವಿತ್ತು. ಆ ಕೆಲವೇ ನಂಬಿಗಸ್ತ ವ್ಯಕ್ತಿಗಳಲ್ಲಿ ಯಾರಾದರೊಬ್ಬರು, ತಾವು ಯಾರ ಕಣ್ಣಿಗೂ ಹೆಚ್ಚು ಬೀಳಬಾರದು ಮತ್ತು ಎಲ್ಲರಂತೆ “ಸಾಮಾನ್ಯ” ಜೀವನವನ್ನು ನಡೆಸಬೇಕು ಎಂದು ಕೆಲವೊಮ್ಮೆ ಹಾರೈಸಿದರೋ? ಕ್ಷಣಿಕವಾಗಿ ಇಂಥ ಆಲೋಚನೆಗಳು ಅವರ ಮನಸ್ಸಿನಲ್ಲಿ ಬಂದಿರಬಹುದಾದರೂ, ಅವರು ತಮ್ಮ ಸಮಗ್ರತೆಯನ್ನು ದುರ್ಬಲಗೊಳಿಸಲಿಲ್ಲ. ಅನೇಕಾನೇಕ ವರ್ಷಗಳ ಬಳಿಕ, ಅಂದರೆ ಈ ವಿಷಯಗಳ ವ್ಯವಸ್ಥೆಯಲ್ಲಿ ನಮ್ಮಲ್ಲಿ ಯಾರೇ ಆಗಲಿ ತಾಳಿಕೊಳ್ಳಬೇಕಾಗಿರುವುದಕ್ಕಿಂತಲೂ ದೀರ್ಘ ವರ್ಷಗಳ ಬಳಿಕ, ನೋಹನ ನಂಬಿಕೆಯು ಜಲಪ್ರಳಯದಿಂದ ಅವನು ರಕ್ಷಿಸಲ್ಪಡುವುದಕ್ಕೆ ನಡೆಸಿತು. ಆದರೆ, “ಸಾಮಾನ್ಯ” ಜೀವನವನ್ನು ನಡೆಸುತ್ತಿದ್ದ ಮತ್ತು ತಾವು ಜೀವಿಸುತ್ತಿದ್ದ ಕಾಲಗಳ ಅರ್ಥವನ್ನು ಮನಗಾಣದಿದ್ದವರೆಲ್ಲರ ಮೇಲೆ ಯೆಹೋವನು ನ್ಯಾಯತೀರ್ಪನ್ನು ಬರಮಾಡಿದನು.

ಪುನಃ ಒಮ್ಮೆ ಹಿಂಸಾಚಾರವು ಮಾನವಕುಲವನ್ನು ಬಾಧಿಸಿತು

6 ಪ್ರಳಯದ ನೀರು ಕಡಿಮೆಯಾದ ಬಳಿಕ ಮಾನವಕುಲಕ್ಕೆ ಒಂದು ಹೊಸ ಆರಂಭ ಸಿಕ್ಕಿತು. ಆದರೆ, ಆಗಲೂ ಜನರು ಅಪರಿಪೂರ್ಣರಾಗಿದ್ದರು ಮತ್ತು ‘ಮನುಷ್ಯರ ಮನಸ್ಸಂಕಲ್ಪವು ಚಿಕ್ಕಂದಿನಿಂದಲೂ ಕೆಟ್ಟದ್ದಾಗಿತ್ತು.’ (ಆದಿಕಾಂಡ 8:21) ಅಷ್ಟುಮಾತ್ರವಲ್ಲ, ದೆವ್ವಗಳು ಇನ್ನೆಂದಿಗೂ ಮಾನವ ದೇಹಧಾರಣೆಮಾಡುವ ಸಾಮರ್ಥ್ಯವನ್ನು ಹೊಂದಿರಲಿಲ್ಲವಾದರೂ ತುಂಬ ಕಾರ್ಯನಿರತವಾಗಿದ್ದವು. ಭಕ್ತಿರಹಿತ ಮಾನವಕುಲದ ಲೋಕವು “ಕೆಡುಕನ ವಶದಲ್ಲಿ ಬಿದ್ದಿದೆ” ಎಂಬುದನ್ನು ಅದು ಆ ಕೂಡಲೆ ತೋರಿಸಿಕೊಟ್ಟಿತು, ಮತ್ತು ಇಂದಿನಂತೆಯೇ ಆಗಲೂ ಸತ್ಯಾರಾಧಕರು “ಸೈತಾನನ ತಂತ್ರೋಪಾಯಗಳ” ವಿರುದ್ಧ ಹೋರಾಡಬೇಕಾಗಿತ್ತು.​—⁠1 ಯೋಹಾನ 5:19; ಎಫೆಸ 6:11, 12.

7 ಜಲಪ್ರಳಯಾನಂತರದ ಭೂಮಿಯು ಕಡಿಮೆಪಕ್ಷ ನಿಮ್ರೋದನ ಸಮಯದಂದಿನಿಂದ ಪುನಃ ಒಮ್ಮೆ ಮಾನವರ ಹಿಂಸಾಕೃತ್ಯಗಳಿಂದ ತುಂಬಿಹೋಯಿತು. ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ತಾಂತ್ರಿಕತೆಯ ಪ್ರಗತಿಯ ಫಲಿತಾಂಶವಾಗಿ, ಕಾಲವು ಗತಿಸಿದಂತೆ ಆ ಹಿಂಸಾಚಾರವು ಹೆಚ್ಚೆಚ್ಚು ಉಲ್ಬಣಗೊಂಡಿದೆ. ಆರಂಭದ ವರ್ಷಗಳಲ್ಲಿ ಕತ್ತಿ, ಈಟಿ, ಬಿಲ್ಲುಬಾಣ ಮತ್ತು ರಥಗಳು ಇದ್ದವು. ಇತ್ತೀಚಿನ ಸಮಯಗಳಲ್ಲಿ ಮಸ್ಕೆಟ್‌ ಬಂದೂಕು ಮತ್ತು ಫಿರಂಗಿಗಳು ಬಂದವು, ತದನಂತರ 20ನೆಯ ಶತಮಾನದ ಆರಂಭದ ರೈಫಲ್‌ ಹಾಗೂ ಅತ್ಯಾಧುನಿಕ ಗನ್‌ಗಳು ಕಂಡುಬಂದವು. ಒಂದನೇ ಲೋಕ ಯುದ್ಧವು ವಿಮಾನ, ಟ್ಯಾಂಕರ್‌, ಸಬ್ಮರೀನ್‌ ಮತ್ತು ವಿಷಾನಿಲಗಳಂಥ ಹೆಚ್ಚು ಭೀಕರವಾದ ಆಯುಧಗಳನ್ನು ಪರಿಚಯಿಸಿತು. ಆ ಯುದ್ಧದಲ್ಲಿ ಈ ಆಯುಧಗಳು ಕೋಟ್ಯಂತರ ಜೀವಗಳನ್ನು ಬಲಿತೆಗೆದುಕೊಂಡವು. ಇದು ಅನಿರೀಕ್ಷಿತವಾಗಿತ್ತೋ? ಇಲ್ಲ.

8 ಇಸವಿ 1914ರಲ್ಲಿ ಯೇಸು ದೇವರ ಸ್ವರ್ಗೀಯ ರಾಜ್ಯದ ರಾಜನಾಗಿ ಸಿಂಹಾಸನಾರೂಢನಾದನು ಮತ್ತು ‘ಕರ್ತನ ದಿನವು’ ಆರಂಭಗೊಂಡಿತು. (ಪ್ರಕಟನೆ 1:10) ಪ್ರಕಟನೆ ಪುಸ್ತಕದಲ್ಲಿ ದಾಖಲಿಸಲ್ಪಟ್ಟಿರುವ ದರ್ಶನವೊಂದರಲ್ಲಿ, ಯೇಸು ಒಂದು ಬಿಳಿ ಕುದುರೆಯ ಮೇಲೆ ವಿಜಯೋತ್ಸಾಹದಿಂದ ಸವಾರಿಮಾಡುತ್ತಿರುವ ಒಬ್ಬ ರಾಜನಾಗಿ ಕಂಡುಬರುತ್ತಾನೆ. ಬೇರೆ ಕುದುರೆ ಸವಾರರು ಸಹ ಅವನನ್ನು ಹಿಂಬಾಲಿಸುತ್ತಿದ್ದು, ಅವರಲ್ಲಿ ಪ್ರತಿಯೊಬ್ಬನು ಮಾನವಕುಲದ ಮೇಲೆ ಬರಲಿಕ್ಕಿದ್ದ ಭಿನ್ನ ವಿಪತ್ತುಗಳನ್ನು ಪ್ರತಿನಿಧಿಸುತ್ತಾನೆ. ಅವರಲ್ಲಿ ಒಬ್ಬನು ಕೆಂಪು ಕುದುರೆಯ ಮೇಲೆ ಸವಾರಿ ಮಾಡುತ್ತಾನೆ. ಈ ಸವಾರನಿಗೆ “ಭೂಮಿಯಿಂದ ಸಮಾಧಾನವನ್ನು ತೆಗೆದುಬಿಡುವದಕ್ಕೂ ಮನುಷ್ಯರು ಒಬ್ಬರನ್ನೊಬ್ಬರು ಕೊಲ್ಲುವವರಾಗುವಂತೆ ಮಾಡುವದಕ್ಕೂ ಅಧಿಕಾರವು ಕೊಡಲ್ಪಟ್ಟಿತು; ಅವನಿಗೆ ದೊಡ್ಡ ಕತ್ತಿಯು ಕೊಡಲ್ಪಟ್ಟಿತು.” (ಪ್ರಕಟನೆ 6:1-4) ಈ ಕುದುರೆ ಮತ್ತು ಅದರ ಸವಾರನು ಯುದ್ಧವನ್ನು ಚಿತ್ರಿಸುತ್ತಾರೆ, ಹಾಗೂ ಆ ದೊಡ್ಡ ಕತ್ತಿಯು ಆಧುನಿಕ ಯುದ್ಧೋದ್ಯಮದ ಜೊತೆಗೆ ಅದರ ಶಕ್ತಿಯುತ ಆಯುಧಗಳ ವಿಸ್ತಾರವಾದ ಹಾಳುಗೆಡವುವಿಕೆಯನ್ನು ಪ್ರತಿನಿಧಿಸುತ್ತದೆ. ಇಂದು ಆ ಆಯುಧಗಳಲ್ಲಿ, ಲಕ್ಷಾಂತರ ಮಂದಿಯನ್ನು ಕೊಲ್ಲಲು ಸಾಧ್ಯವಿರುವಂಥ ನ್ಯೂಕ್ಲಿಯರ್‌ ಉಪಕರಣಗಳು ಮತ್ತು ಈ ಉಪಕರಣಗಳನ್ನು ಸಾವಿರಾರು ಕಿಲೊಮೀಟರುಗಳಷ್ಟು ದೂರದಲ್ಲಿರುವ ಗುರಿಗಳಿಗೆ ಹೋಗಿ ತಲಪಿಸುವ ಸಾಮರ್ಥ್ಯವುಳ್ಳ ರಾಕೆಟ್‌ಗಳು, ಹಾಗೂ ಸಾಮೂಹಿಕ ಹತ್ಯೆಗಾಗಿ ಸಿದ್ಧಪಡಿಸಲ್ಪಟ್ಟಿರುವ ಜಟಿಲವಾದ ರಾಸಾಯನಿಕ ಮತ್ತು ಜೈವಿಕ ಅಸ್ತ್ರಗಳು ಸೇರಿವೆ.

ನಾವು ಯೆಹೋವನ ಎಚ್ಚರಿಕೆಗಳಿಗೆ ಗಮನಕೊಡುತ್ತೇವೆ

9 ನೋಹನ ದಿನಗಳಲ್ಲಿ, ನೆಫಿಲೀಯರ ಸಹಾಯದಿಂದ ದುಷ್ಟ ಮಾನವರು ಗೈದ ವಿಪರೀತ ಹಿಂಸಾಚಾರದಿಂದಾಗಿ ಯೆಹೋವನು ಮಾನವಕುಲದ ಮೇಲೆ ನಾಶನವನ್ನು ತಂದನು. ಇಂದಿನ ಕುರಿತಾಗಿ ಏನು? ಭೂಮಿಯು ಆಗ ಇದ್ದುದಕ್ಕಿಂತ ಈಗ ಯಾವುದೇ ರೀತಿಯಲ್ಲಿ ಕಡಿಮೆ ಹಿಂಸಾತ್ಮಕವಾಗಿದೆಯೋ? ಖಂಡಿತವಾಗಿಯೂ ಇಲ್ಲ! ಅಷ್ಟುಮಾತ್ರವಲ್ಲದೆ, ನೋಹನ ದಿನಗಳಲ್ಲಿ ಮಾಡುತ್ತಿದ್ದಂತೆಯೇ ಇಂದು ಸಹ ಜನರು ತಮ್ಮ ದೈನಂದಿನ ವ್ಯವಹಾರಗಳನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ, “ಸಾಮಾನ್ಯ” ರೀತಿಯಲ್ಲಿ ಜೀವನ ನಡೆಸಲು ಪ್ರಯತ್ನಿಸುತ್ತಿದ್ದಾರೆ, ಕೊಡಲ್ಪಡುತ್ತಿರುವ ಎಚ್ಚರಿಕೆಗೆ ಕಿವಿಗೊಡಲು ನಿರಾಕರಿಸುತ್ತಿದ್ದಾರೆ. (ಲೂಕ 17:26, 27) ಹೀಗಿರುವಾಗ, ಯೆಹೋವನು ಮಾನವಕುಲದ ಮೇಲೆ ಪುನಃ ಒಮ್ಮೆ ನಾಶನವನ್ನು ತರುವನು ಎಂಬುದರ ಕುರಿತು ಸಂದೇಹಪಡಲು ಯಾವುದಾದರೂ ಕಾರಣವಿದೆಯೆ? ಇಲ್ಲ.

10 ಜಲಪ್ರಳಯಕ್ಕೆ ನೂರಾರು ವರ್ಷಗಳಿಗೆ ಮುಂಚೆ, ನಮ್ಮ ದಿನಗಳಲ್ಲಿ ಬರಲಿಕ್ಕಿದ್ದ ನಾಶನದ ಕುರಿತು ಹನೋಕನು ಪ್ರವಾದಿಸಿದನು. (ಯೂದ 14, 15) ಬರಲಿಕ್ಕಿರುವ “ಮಹಾಸಂಕಟ”ದ ಕುರಿತು ಯೇಸು ಮಾತಾಡಿದನು. (ಮತ್ತಾಯ 24:​21, NIBV) ಇತರ ಪ್ರವಾದಿಗಳು ಸಹ ಈ ಕಾಲದ ಕುರಿತು ಎಚ್ಚರಿಕೆ ನೀಡಿದರು. (ಯೆಹೆಜ್ಕೇಲ 38:18-23; ದಾನಿಯೇಲ 12:1; ಯೋವೇಲ 2:31, 32) ಮತ್ತು ಪ್ರಕಟನೆ ಪುಸ್ತಕದಲ್ಲಿ ನಾವು ಆ ಅಂತಿಮ ನಾಶನದ ಕುರಿತಾದ ಸುಸ್ಪಷ್ಟ ವರ್ಣನೆಯನ್ನು ಓದುತ್ತೇವೆ. (ಪ್ರಕಟನೆ 19:11-21) ವ್ಯಕ್ತಿಗತವಾಗಿ ನಾವು ನೋಹನನ್ನು ಅನುಕರಿಸುತ್ತೇವೆ ಮತ್ತು ಸುನೀತಿಯನ್ನು ಸಾರುವವರಾಗಿ ಕ್ರಿಯಾಶೀಲರಾಗಿದ್ದೇವೆ. ನಾವು ಯೆಹೋವನ ಎಚ್ಚರಿಕೆಗಳಿಗೆ ಗಮನಕೊಡುತ್ತೇವೆ ಮತ್ತು ನಮ್ಮ ನೆರೆಯವರು ಸಹ ಇದನ್ನೇ ಮಾಡುವಂತೆ ಅವರಿಗೆ ಪ್ರೀತಿಯಿಂದ ಸಹಾಯಮಾಡುತ್ತೇವೆ. ಆದುದರಿಂದ, ನೋಹನಂತೆ ನಾವು ದೇವರೊಂದಿಗೆ ನಡೆಯುತ್ತೇವೆ. ವಾಸ್ತವದಲ್ಲಿ, ಜೀವವನ್ನು ಅಪೇಕ್ಷಿಸುವಂಥ ಯಾರೇ ಆಗಲಿ ದೇವರೊಂದಿಗೆ ನಡೆಯುತ್ತಾ ಇರುವುದು ಅತ್ಯಾವಶ್ಯಕವಾದದ್ದಾಗಿದೆ. ಪ್ರತಿ ದಿನ ನಾವು ಎದುರಿಸುವ ಒತ್ತಗಳನ್ನು ಪರಿಗಣಿಸುವಾಗ ನಾವಿದನ್ನು ಹೇಗೆ ಮಾಡಸಾಧ್ಯವಿದೆ? ನಾವು ದೇವರ ಉದ್ದೇಶಗಳ ನೆರವೇರಿಕೆಯಲ್ಲಿ ಬಲವಾದ ನಂಬಿಕೆಯನ್ನು ಬೆಳೆಸಿಕೊಳ್ಳುವ ಅಗತ್ಯವಿದೆ.​—⁠ಇಬ್ರಿಯ 11:⁠6.

ಗೊಂದಲಮಯ ಸಮಯಗಳಲ್ಲಿ ದೇವರೊಂದಿಗೆ ನಡೆಯುತ್ತಾ ಇರಿ

11 ಪ್ರಥಮ ಶತಮಾನದಲ್ಲಿ, ‘ಆ ಮಾರ್ಗಕ್ಕೆ’ ಸೇರಿದವರು ಎಂದು ಅಭಿಷಿಕ್ತ ಕ್ರೈಸ್ತರ ಕುರಿತು ತಿಳಿಸಲಾಗಿತ್ತು. (ಅ. ಕೃತ್ಯಗಳು 9:2) ಅವರ ಇಡೀ ಜೀವನ ರೀತಿಯು ಯೆಹೋವನ ಮತ್ತು ಯೇಸು ಕ್ರಿಸ್ತನಲ್ಲಿನ ನಂಬಿಕೆಯ ಮೇಲೆ ಕೇಂದ್ರೀಕೃತವಾಗಿತ್ತು. ಅವರು ತಮ್ಮ ಗುರುವಿನ ಹೆಜ್ಜೆಜಾಡನ್ನು ಅನುಸರಿಸಿದರು. ಇಂದು, ನಂಬಿಗಸ್ತ ಕ್ರೈಸ್ತರು ಸಹ ಇದನ್ನೇ ಮಾಡುತ್ತಾರೆ.

12 ನಂಬಿಕೆಯ ಪ್ರಮುಖತೆಯು, ಯೇಸುವಿನ ಶುಶ್ರೂಷೆಯ ಸಮಯದಲ್ಲಿ ನಡೆದ ಒಂದು ಘಟನೆಯಲ್ಲಿ ಕಂಡುಬರುತ್ತದೆ. ಒಂದು ಸಂದರ್ಭದಲ್ಲಿ ಯೇಸು ಸುಮಾರು 5,000 ಪುರುಷರಿದ್ದ ಒಂದು ಜನಸಮೂಹಕ್ಕೆ ಅದ್ಭುತಕರವಾಗಿ ಆಹಾರವನ್ನು ಒದಗಿಸಿದನು. ಜನರು ಆಶ್ಚರ್ಯಪಟ್ಟರು ಮತ್ತು ಆನಂದಪಟ್ಟರು. ಆದರೂ, ತದನಂತರ ಏನು ಸಂಭವಿಸಿತು ಎಂಬುದನ್ನು ಗಮನಿಸಿರಿ. ನಾವು ಓದುವುದು: “ಆತನು ಮಾಡಿದ ಈ ಸೂಚಕಕಾರ್ಯವನ್ನು ಆ ಜನರು ನೋಡಿ​—⁠ಲೋಕಕ್ಕೆ ಬರಬೇಕಾದ ಪ್ರವಾದಿ ಈತನೇ ನಿಜ ಎಂದು ಹೇಳಿಕೊಂಡರು. ಆಗ ಯೇಸು​—⁠ಅವರು ಬಂದು ತನ್ನನ್ನು ಹಿಡುಕೊಂಡುಹೋಗಿ ಅರಸನನ್ನಾಗಿ ಮಾಡಬೇಕೆಂಬ ಯೋಚನೆಯಲ್ಲಿದ್ದಾರೆಂದು ತಿಳಿದುಕೊಂಡು ತಿರಿಗಿ ತಾನೊಬ್ಬನೇ ಒಂಟಿಗನಾಗಿ ಬೆಟ್ಟಕ್ಕೆ ಹೋಗಿಬಿಟ್ಟನು.” (ಯೋಹಾನ 6:10-15) ಆ ರಾತ್ರಿ ಅವನು ಮತ್ತೊಂದು ಸ್ಥಳಕ್ಕೆ ಪ್ರಯಾಣಿಸಿದನು. ಯೇಸು ರಾಜಾಧಿಕಾರವನ್ನು ಅಂಗೀಕರಿಸಲು ನಿರಾಕರಿಸಿದ್ದು ಅನೇಕರಿಗೆ ಆಶಾಭಂಗವನ್ನು ಉಂಟುಮಾಡಿದ್ದಿರಬಹುದು. ಎಷ್ಟೆಂದರೂ, ಒಬ್ಬ ಅರಸನಾಗಲು ಅಗತ್ಯವಿರುವಷ್ಟು ವಿವೇಕ ತನಗಿದೆ ಮತ್ತು ಜನರ ಶಾರೀರಿಕ ಆವಶ್ಯಕತೆಗಳನ್ನು ತೃಪ್ತಿಪಡಿಸುವ ಶಕ್ತಿ ತನಗಿದೆ ಎಂಬುದನ್ನು ಯೇಸು ತೋರಿಸಿಕೊಟ್ಟಿದ್ದನು. ಆದರೆ, ಯೆಹೋವನ ಕಾಲತಖ್ತೆಯ ಪ್ರಕಾರ ಯೇಸು ರಾಜನಾಗಿ ಆಳುವ ಸಮಯ ಇನ್ನೂ ಬಂದಿರಲಿಲ್ಲ. ಮಾತ್ರವಲ್ಲದೆ, ಯೇಸುವಿನ ರಾಜ್ಯವು ಭೂಲೋಕದ್ದಲ್ಲ ಪರಲೋಕದ್ದಾಗಿತ್ತು.

13 ಹಾಗಿದ್ದರೂ, ಯೋಹಾನನು ತಿಳಿಸುವಂತೆ ಜನರ ಗುಂಪು ಯೇಸುವಿಗಾಗಿ ಹುಡುಕಿ “ಸಮುದ್ರದ ಆಚೇ ಕಡೆಯಲ್ಲಿ” ಅವನನ್ನು ಕಂಡುಕೊಂಡಿತು. ಒಬ್ಬ ಅರಸನನ್ನಾಗಿ ಮಾಡುವ ಅವರ ಪ್ರಯತ್ನಗಳನ್ನು ಅವನು ನಿರಾಕರಿಸಿದರೂ ಅವರು ಅವನ ಹಿಂದೆ ಬಂದದ್ದೇಕೆ? ಶಾರೀರಿಕ ದೃಷ್ಟಿಕೋನವಿದ್ದ ಅನೇಕರು ಮೋಶೆಯ ದಿನದಲ್ಲಿ ಯೆಹೋವನು ಅರಣ್ಯದಲ್ಲಿ ಮಾಡಿದ್ದ ಭೌತಿಕ ಒದಗಿಸುವಿಕೆಗಳಿಗೇ ಹೆಚ್ಚು ಒತ್ತನ್ನು ನೀಡಿದರು. ಇದರ ಅರ್ಥ, ಯೇಸು ಅವರಿಗೆ ಭೌತಿಕ ಒದಗಿಸುವಿಕೆಗಳನ್ನು ಮಾಡುತ್ತಾ ಮುಂದುವರಿಯಬೇಕು ಎಂಬುದೇ ಆಗಿತ್ತು. ಅವರ ತಪ್ಪು ಹೇತುಗಳನ್ನು ಮನಗಂಡ ಯೇಸು, ಅವರು ತಮ್ಮ ಆಲೋಚನೆಯನ್ನು ತಿದ್ದಿಕೊಳ್ಳಲು ಸಾಧ್ಯವಾಗುವಂತೆ ಅವರಿಗೆ ಆಧ್ಯಾತ್ಮಿಕ ಸತ್ಯಗಳನ್ನು ಬೋಧಿಸಲು ಆರಂಭಿಸಿದನು. (ಯೋಹಾನ 6:17, 24, 25, 30, 31, 35-40) ಇದಕ್ಕೆ ಪ್ರತಿಕ್ರಿಯೆಯಲ್ಲಿ, ಕೆಲವರು ಅವನ ವಿರುದ್ಧ ಗುಣುಗುಟ್ಟಿದರು; ವಿಶೇಷವಾಗಿ ಈ ಮುಂದಿನ ದೃಷ್ಟಾಂತವನ್ನು ಯೇಸು ಕೊಟ್ಟಾಗ ಅವರು ಹಾಗೆ ಮಾಡಿದರು: “ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನೀವು ಮನುಷ್ಯಕುಮಾರನ ಮಾಂಸವನ್ನು ತಿನ್ನದೆ ಅವನ ರಕ್ತವನ್ನು ಕುಡಿಯದೆ ಹೋದರೆ ನಿಮ್ಮೊಳಗೆ ಜೀವವಿಲ್ಲ; ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯುವವನು ನಿತ್ಯಜೀವವನ್ನು ಹೊಂದಿದ್ದಾನೆ; ಮತ್ತು ನಾನು ಅವನನ್ನು ಕಡೇದಿನದಲ್ಲಿ ಎಬ್ಬಿಸುವೆನು.”​—⁠ಯೋಹಾನ 6:53, 54.

14 ಅನೇಕವೇಳೆ ಯೇಸುವಿನ ದೃಷ್ಟಾಂತಗಳು, ಜನರು ನಿಜವಾಗಿಯೂ ದೇವರೊಂದಿಗೆ ನಡೆಯಲು ಬಯಸುತ್ತಿದ್ದಾರೋ ಎಂಬುದನ್ನು ತೋರಿಸುವಂತೆ ಅವರನ್ನು ಪ್ರಚೋದಿಸಿದವು. ಈ ದೃಷ್ಟಾಂತದ ವಿಷಯದಲ್ಲಿಯೂ ಇದು ನಿಜವಾಗಿತ್ತು. ಇದು ಬಲವಾದ ಪ್ರತಿಕ್ರಿಯೆಗಳನ್ನು ಉಂಟುಮಾಡಿತು. ನಾವು ಓದುವುದು: “ಆತನ ಶಿಷ್ಯರಲ್ಲಿ ಅನೇಕರು ಇದನ್ನು ಕೇಳಿ​—⁠ಇದು ಕಠಿಣವಾದ ಮಾತು, ಇದನ್ನು ಯಾರು ಕೇಳಾರು? ಅಂದುಕೊಂಡರು.” ಅವರು ತನ್ನ ಮಾತುಗಳ ಆಧ್ಯಾತ್ಮಿಕ ಅರ್ಥವನ್ನು ಕಂಡುಕೊಳ್ಳಲು ಪ್ರಯತ್ನಿಸಬೇಕು ಎಂದು ಯೇಸು ಅವರಿಗೆ ವಿವರಿಸುತ್ತಾ ಹೋದನು. ಅವನಂದದ್ದು: “ಬದುಕಿಸುವಂಥದು ಆತ್ಮವೇ; ಮಾಂಸವು ಯಾವದಕ್ಕೂ ಬರುವದಿಲ್ಲ. ನಾನು ನಿಮಗೆ ಹೇಳಿರುವ ಮಾತುಗಳೇ ಆತ್ಮವಾಗಿಯೂ ಜೀವವಾಗಿಯೂ ಅವೆ.” ಆದರೆ ಅನೇಕರು ಇದಕ್ಕೆ ಕಿವಿಗೊಡಲಿಲ್ಲ ಮತ್ತು ವೃತ್ತಾಂತವು ಹೀಗೆ ವರದಿಸುತ್ತದೆ: “ಅಂದಿನಿಂದ ಆತನ ಶಿಷ್ಯರಲ್ಲಿ ಅನೇಕರು ಹಿಂಜರಿದು ಆತನ ಕೂಡ ಸಂಚಾರಮಾಡುವದನ್ನು ಬಿಟ್ಟರು.”​—⁠ಯೋಹಾನ 6:60, 63, 66.

15 ಆದರೂ, ಯೇಸುವಿನ ಶಿಷ್ಯರಲ್ಲಿ ಎಲ್ಲರೂ ಈ ರೀತಿಯಲ್ಲಿ ಪ್ರತಿಕ್ರಿಯಿಸಲಿಲ್ಲ. ಯೇಸು ಏನು ಹೇಳಿದನೋ ಅದನ್ನು ನಿಷ್ಠಾವಂತ ಶಿಷ್ಯರು ಪೂರ್ಣವಾಗಿ ಅರ್ಥಮಾಡಿಕೊಳ್ಳಲಿಲ್ಲ ಎಂಬುದು ನಿಜ. ಆದರೂ, ಅವನಲ್ಲಿ ಅವರಿಗಿದ್ದ ಭರವಸೆಯು ದೃಢವಾಗಿಯೇ ಉಳಿಯಿತು. ಆ ನಿಷ್ಠಾವಂತ ಶಿಷ್ಯರಲ್ಲಿ ಒಬ್ಬನಾಗಿದ್ದ ಪೇತ್ರನು, ಯೇಸುವಿನೊಂದಿಗೆ ಉಳಿದಂಥವರೆಲ್ಲರ ಭಾವನೆಗಳನ್ನು ವ್ಯಕ್ತಪಡಿಸುತ್ತಾ ಹೇಳಿದ್ದು: “ಸ್ವಾಮೀ, ನಿನ್ನನ್ನು ಬಿಟ್ಟು ನಾವು ಇನ್ನಾರ ಬಳಿಗೆ ಹೋಗೋಣ? ನಿನ್ನಲ್ಲಿ ನಿತ್ಯಜೀವವನ್ನು ಉಂಟುಮಾಡುವ ವಾಕ್ಯಗಳುಂಟು.” (ಯೋಹಾನ 6:68) ಎಷ್ಟು ಅತ್ಯುತ್ತಮ ಮನೋಭಾವ ಮತ್ತು ಎಂತಹ ಉತ್ತಮ ಮಾದರಿ!

16 ಆ ಆರಂಭದ ಶಿಷ್ಯರು ಪರೀಕ್ಷಿಸಲ್ಪಟ್ಟ ಹಾಗೆಯೇ ನಾವೂ ಇಂದು ಪರೀಕ್ಷಿಸಲ್ಪಡಬಹುದು. ನಮ್ಮ ವಿಷಯದಲ್ಲಿ ಹೇಳುವುದಾದರೆ, ನಾವು ವೈಯಕ್ತಿಕವಾಗಿ ಬಯಸಿದಷ್ಟು ಶೀಘ್ರವಾಗಿ ಯೆಹೋವನ ವಾಗ್ದಾನಗಳು ನೆರವೇರಿಸಲ್ಪಡುತ್ತಿಲ್ಲ ಎಂಬ ಕಾರಣದಿಂದ ನಾವು ಆಶಾಭಂಗಗೊಳ್ಳಬಹುದು. ಶಾಸ್ತ್ರವಚನಗಳ ಕುರಿತು ನಮ್ಮ ಬೈಬಲ್‌ ಆಧಾರಿತ ಪ್ರಕಾಶನಗಳಲ್ಲಿ ಕೊಡಲ್ಪಡುವ ವಿವರಣೆಗಳನ್ನು ಅರ್ಥಮಾಡಿಕೊಳ್ಳುವುದು ತುಂಬ ಕಷ್ಟಕರ ಎಂದು ನಾವು ನೆನಸಬಹುದು. ಜೊತೆ ಕ್ರೈಸ್ತನೊಬ್ಬನ ನಡತೆಯು ನಮ್ಮನ್ನು ನಿರುತ್ತೇಜಿಸಬಹುದು. ಈ ಕಾರಣಗಳಿಗಾಗಿ ಅಥವಾ ತದ್ರೀತಿಯ ಇತರ ಕಾರಣಗಳಿಗಾಗಿ ದೇವರೊಂದಿಗೆ ನಡೆಯುವುದನ್ನು ನಿಲ್ಲಿಸಿಬಿಡುವುದು ಸೂಕ್ತವಾಗಿರುವುದೋ? ಖಂಡಿತವಾಗಿಯೂ ಇಲ್ಲ! ಯೇಸುವನ್ನು ತೊರೆದುಹೋದ ಆ ಶಿಷ್ಯರು ಶಾರೀರಿಕವಾದ ಆಲೋಚನಾ ರೀತಿಯನ್ನು ತೋರಿಸಿದರು. ನಾವು ಹೀಗೆ ಮಾಡುವುದರಿಂದ ದೂರವಿರಬೇಕು.

“ನಾವಾದರೋ ಹಿಂದೆಗೆದವರಾಗಿ ನಾಶವಾಗುವವರಲ್ಲ”

17 ‘ಪ್ರತಿಯೊಂದು ಶಾಸ್ತ್ರವು ದೈವಪ್ರೇರಿತವಾಗಿದೆ’ ಎಂದು ಅಪೊಸ್ತಲ ಪೌಲನು ಬರೆದನು. (2 ತಿಮೊಥೆಯ 3:16) ಬೈಬಲಿನ ಪುಟಗಳ ಮೂಲಕ ಯೆಹೋವನು ನಮಗೆ ಸ್ಪಷ್ಟವಾಗಿ ಹೇಳುವುದು: “ಇದೇ ಮಾರ್ಗ, ಇದರಲ್ಲೇ ನಡೆಯಿರಿ.” (ಯೆಶಾಯ 30:21) ದೇವರ ವಾಕ್ಯಕ್ಕೆ ವಿಧೇಯರಾಗುವುದು, ‘ನಾವು ನಡಕೊಳ್ಳುವ ರೀತಿಯನ್ನು ಕುರಿತು ಚೆನ್ನಾಗಿ ನೋಡಿಕೊಳ್ಳಲು’ ನಮಗೆ ಸಹಾಯಮಾಡುತ್ತದೆ. (ಎಫೆಸ 5:15) ಬೈಬಲನ್ನು ಅಧ್ಯಯನ ಮಾಡುವುದು ಮತ್ತು ನಾವು ಕಲಿಯುವಂಥ ವಿಷಯಗಳ ಕುರಿತು ಧ್ಯಾನಿಸುವುದು, “ಸತ್ಯದಲ್ಲಿ ನಡೆಯುತ್ತಾ ಮುಂದುವರಿಯುವಂತೆ” ನಮಗೆ ಸಹಾಯಮಾಡುವುದು. (3 ಯೋಹಾನ 3, NW) ನಿಶ್ಚಯವಾಗಿಯೂ, ಯೇಸು ಹೇಳಿದಂತೆ, “ಬದುಕಿಸುವಂಥದು ಆತ್ಮವೇ; ಮಾಂಸವು ಯಾವದಕ್ಕೂ ಬರುವದಿಲ್ಲ.” ನಮ್ಮ ಹೆಜ್ಜೆಗಳನ್ನು ನಿರ್ದೇಶಿಸಬಲ್ಲ ಏಕಮಾತ್ರ ಭರವಸಾರ್ಹ ಮಾರ್ಗದರ್ಶನವು ಆಧ್ಯಾತ್ಮಿಕ ಮಾರ್ಗದರ್ಶನವಾಗಿದೆ, ಮತ್ತು ಇದು ಯೆಹೋವನ ವಾಕ್ಯ, ಆತನ ಆತ್ಮ ಮತ್ತು ಆತನ ಸಂಘಟನೆಯ ಮೂಲಕ ಬರುತ್ತದೆ.

18 ಇಂದು, ಶಾರೀರಿಕ ಆಲೋಚನೆ ಅಥವಾ ಪೂರೈಸಲ್ಪಡದ ನಿರೀಕ್ಷೆಗಳ ಕಾರಣದಿಂದಾಗಿ ಅಸಮಾಧಾನಗೊಂಡಿರುವವರು, ಅನೇಕಾವರ್ತಿ ಈ ಲೋಕವು ಏನನ್ನು ಒದಗಿಸುತ್ತದೋ ಅದರಿಂದ ಹೆಚ್ಚೆಚ್ಚು ಪ್ರಯೋಜನವನ್ನು ಪಡೆಯಲು ಹೋಗುತ್ತಾರೆ. ಅವರು ತಮ್ಮ ತುರ್ತುಪ್ರಜ್ಞೆಯನ್ನು ಕಳೆದುಕೊಂಡವರಾಗಿದ್ದು, ‘ಎಚ್ಚರದಿಂದಿರುವ’ ಅಗತ್ಯವನ್ನು ಮನಗಾಣುವುದಿಲ್ಲ, ಮತ್ತು ರಾಜ್ಯದ ಅಭಿರುಚಿಗಳಿಗೆ ಪ್ರಥಮ ಸ್ಥಾನವನ್ನು ಕೊಡುವ ಬದಲಿಗೆ ಸ್ವಾರ್ಥಪರ ಗುರಿಗಳನ್ನು ಬೆನ್ನಟ್ಟುವ ಆಯ್ಕೆಯನ್ನು ಮಾಡುತ್ತಾರೆ. (ಮತ್ತಾಯ 24:42) ಆ ಮಾರ್ಗದಲ್ಲಿ ನಡೆಯುವುದು ಅತಿ ಅವಿವೇಕಯುತವಾದದ್ದಾಗಿದೆ. ಅಪೊಸ್ತಲ ಪೌಲನ ಮಾತುಗಳನ್ನು ಗಮನಿಸಿರಿ: “ನಾವಾದರೋ ಹಿಂದೆಗೆದವರಾಗಿ ನಾಶವಾಗುವವರಲ್ಲ, ನಂಬುವವರಾಗಿ ಪ್ರಾಣರಕ್ಷಣೆಯನ್ನು ಹೊಂದುವವರಾಗಿದ್ದೇವೆ.” (ಇಬ್ರಿಯ 10:39) ಹನೋಕನೋಹರಂತೆ ನಾವು ಗೊಂದಲಮಯ ಸಮಯಗಳಲ್ಲಿ ಜೀವಿಸುತ್ತಿದ್ದೇವೆ, ಆದರೂ ಅವರಂತೆಯೇ ದೇವರೊಂದಿಗೆ ನಡೆಯುವ ಸುಯೋಗ ನಮಗಿದೆ. ಹೀಗೆ ಮಾಡುವುದರಿಂದ, ಯೆಹೋವನ ವಾಗ್ದಾನಗಳು ನೆರವೇರುವುದನ್ನು, ದುಷ್ಟತನವು ನಾಶಗೊಳಿಸಲ್ಪಡುವುದನ್ನು ಮತ್ತು ಒಂದು ನೀತಿಯ ಹೊಸ ಲೋಕವು ಸ್ಥಾಪಿಸಲ್ಪಡುವುದನ್ನು ನಾವು ನೋಡುವೆವು ಎಂಬ ನಿಶ್ಚಿತ ನಿರೀಕ್ಷೆ ನಮಗಿದೆ. ಇದು ಎಂತಹ ಅದ್ಭುತಕರ ಪ್ರತೀಕ್ಷೆ!

19 ಪ್ರೇರಿತ ಪ್ರವಾದಿಯಾದ ಮೀಕನು ಲೋಕದ ಜನರ ಕುರಿತು ಮಾತಾಡುತ್ತಾ, ಅವರು ‘ತಮ್ಮ ತಮ್ಮ ದೇವರುಗಳ ಹೆಸರಿನಲ್ಲಿ ನಡೆಯುತ್ತಾರೆ’ ಎಂದು ತಿಳಿಸಿದನು. ತದನಂತರ ಸ್ವತಃ ಅವನ ಕುರಿತು ಮತ್ತು ಇತರ ನಂಬಿಗಸ್ತ ಆರಾಧಕರ ಕುರಿತು ಮಾತಾಡುತ್ತಾ ಅವನು ಹೇಳಿದ್ದು: “ನಾವಾದರೋ ನಮ್ಮ ದೇವರಾದ ಯೆಹೋವನ ಹೆಸರಿನಲ್ಲಿ ಯುಗಯುಗಾಂತರಗಳಲ್ಲಿ ನಡೆಯುವೆವು.” (ಮೀಕ 4:5) ಮೀಕನಿಗೆ ಇದ್ದಂಥದ್ದೇ ದೃಢನಿರ್ಧಾರವು ನಿಮಗಿರುವಲ್ಲಿ, ಸಮಯಗಳು ಎಷ್ಟೇ ಗೊಂದಲಮಯವಾಗಿ ಪರಿಣಮಿಸುವುದಾದರೂ ಯೆಹೋವನಿಗೆ ನಿಕಟವಾಗಿ ಉಳಿಯಿರಿ. (ಯಾಕೋಬ 4:⁠8) ನಮ್ಮಲ್ಲಿ ಪ್ರತಿಯೊಬ್ಬರ ಹೃತ್ಪೂರ್ವಕ ಬಯಕೆಯು, ನಮ್ಮ ದೇವರಾಗಿರುವ ಯೆಹೋವನೊಂದಿಗೆ ಯುಗಯುಗಾಂತರಗಳಲ್ಲಿಯೂ ನಡೆಯುವುದಾಗಿರಲಿ!

ನೀವು ಹೇಗೆ ಉತ್ತರಿಸುವಿರಿ?

• ನೋಹನ ಮತ್ತು ನಮ್ಮ ದಿನಗಳ ನಡುವೆ ಯಾವ ಹೋಲಿಕೆಗಳಿವೆ?

• ನೋಹನು ಮತ್ತು ಅವನ ಕುಟುಂಬವು ಯಾವ ಮಾರ್ಗಕ್ರಮವನ್ನು ಅನುಸರಿಸಿತು, ಹಾಗೂ ಅವರ ನಂಬಿಕೆಯನ್ನು ನಾವು ಹೇಗೆ ಅನುಕರಿಸಬಲ್ಲೆವು?

• ಯೇಸುವಿನ ಹಿಂಬಾಲಕರಲ್ಲಿ ಕೆಲವರಿಂದ ಯಾವ ತಪ್ಪು ದೃಷ್ಟಿಕೋನವು ತೋರಿಸಲ್ಪಟ್ಟಿತು?

• ನಿಜ ಕ್ರೈಸ್ತರು ಏನು ಮಾಡುವ ನಿರ್ಧಾರವನ್ನು ಮಾಡಬೇಕು?

[ಅಧ್ಯಯನ ಪ್ರಶ್ನೆಗಳು]

1. ನೈತಿಕತೆಯ ವಿಷಯದಲ್ಲಿ ನೋಹನ ದಿನದಲ್ಲಿ ಯಾವ ಸನ್ನಿವೇಶವಿತ್ತು, ಮತ್ತು ನೋಹನು ಹೇಗೆ ಭಿನ್ನನಾಗಿದ್ದನು?

2, 3. ಇಂದು ನಮಗಾಗಿ ನೋಹನು ಯಾವ ಅತ್ಯುತ್ತಮ ಮಾದರಿಯನ್ನು ಒದಗಿಸುತ್ತಾನೆ?

4. ನೋಹನ ಸಮಕಾಲೀನರ ಯಾವ ತಪ್ಪನ್ನು ಯೇಸು ಎತ್ತಿತೋರಿಸಿದನು?

5. ನೋಹನಿಗೆ ಮತ್ತು ಅವನ ಕುಟುಂಬಕ್ಕೆ ಯಾವ ಗುಣಗಳು ಅಗತ್ಯವಾಗಿದ್ದವು?

6. ಪ್ರಳಯದ ಬಳಿಕ ಯಾವ ಸನ್ನಿವೇಶವು ಇನ್ನೂ ಅಸ್ತಿತ್ವದಲ್ಲಿತ್ತು?

7. ಜಲಪ್ರಳಯಾನಂತರದ ಲೋಕದಲ್ಲಿ ಹಿಂಸಾಚಾರವು ಹೇಗೆ ಉಲ್ಬಣಗೊಂಡಿತು?

8. ಪ್ರಕಟನೆ 6:​1-4 ಹೇಗೆ ನೆರವೇರಿದೆ?

9. ಜಲಪ್ರಳಯಕ್ಕೆ ಮುಂಚೆ ಇದ್ದ ಲೋಕಕ್ಕೆ ಹೋಲಿಸುವಾಗ ಇಂದಿನ ಲೋಕವು ಹೇಗಿದೆ?

10. (ಎ) ಬೈಬಲ್‌ ಪ್ರವಾದನೆಯಲ್ಲಿ ಯಾವ ಎಚ್ಚರಿಕೆಯನ್ನು ಪದೇ ಪದೇ ಕೊಡಲಾಗಿದೆ? (ಬಿ) ಇಂದು ಯಾವುದು ಮಾತ್ರವೇ ವಿವೇಕಯುತ ಮಾರ್ಗಕ್ರಮವಾಗಿದೆ?

11. ಯಾವ ವಿಧದಲ್ಲಿ ನಾವು ಪ್ರಥಮ ಶತಮಾನದ ಕ್ರೈಸ್ತರನ್ನು ಅನುಕರಿಸುತ್ತೇವೆ?

12. ಒಂದು ಜನಸಮೂಹಕ್ಕೆ ಯೇಸು ಅದ್ಭುತಕರವಾಗಿ ಆಹಾರವನ್ನು ಒದಗಿಸಿದ ಬಳಿಕ ಏನು ಸಂಭವಿಸಿತು?

13, 14. ಅನೇಕರು ಯಾವ ದೃಷ್ಟಿಕೋನವನ್ನು ತೋರಿಸಿದರು, ಮತ್ತು ಅವರ ನಂಬಿಕೆಯು ಹೇಗೆ ಪರೀಕ್ಷಿಸಲ್ಪಟ್ಟಿತು?

15. ಯೇಸುವಿನ ಹಿಂಬಾಲಕರಲ್ಲಿ ಕೆಲವರಿಗೆ ಯಾವ ಯೋಗ್ಯ ದೃಷ್ಟಿಕೋನವಿತ್ತು?

16. ನಾವು ಹೇಗೆ ಪರೀಕ್ಷಿಸಲ್ಪಡಬಹುದು, ಮತ್ತು ನಾವು ಯಾವ ಯೋಗ್ಯ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕು?

17. ದೇವರೊಂದಿಗೆ ನಡೆಯುತ್ತಾ ಇರಲಿಕ್ಕಾಗಿ ನಮಗೆ ಹೇಗೆ ಸಹಾಯವು ದೊರಕಸಾಧ್ಯವಿದೆ?

18. (ಎ) ಕೆಲವರು ಅವಿವೇಕತನದಿಂದ ಏನು ಮಾಡುತ್ತಾರೆ? (ಬಿ) ನಾವು ಯಾವ ರೀತಿಯ ನಂಬಿಕೆಯನ್ನು ಬೆಳೆಸಿಕೊಳ್ಳುತ್ತೇವೆ?

19. ಸತ್ಯಾರಾಧಕರ ಮಾರ್ಗಕ್ರಮವನ್ನು ಮೀಕನು ಹೇಗೆ ವರ್ಣಿಸಿದನು?

[ಪುಟ 20ರಲ್ಲಿರುವ ಚಿತ್ರಗಳು]

ನೋಹನ ದಿನದಂತೆಯೇ ಜನರು ಇಂದು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಮುಳುಗಿಹೋಗಿದ್ದಾರೆ

[ಪುಟ 21ರಲ್ಲಿರುವ ಚಿತ್ರ]

ರಾಜ್ಯದ ಕುರಿತು ಸಾರುವವರಾಗಿರುವ ನಾವು “ಹಿಂದೆಗೆದವರಾಗಿ ನಾಶವಾಗುವವರಲ್ಲ”