ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಷ್ಠಾವಂತರಾಗಿರುವುದರಿಂದ ಪ್ರಯೋಜನವಿದೆ

ನಿಷ್ಠಾವಂತರಾಗಿರುವುದರಿಂದ ಪ್ರಯೋಜನವಿದೆ

ನಿಷ್ಠಾವಂತರಾಗಿರುವುದರಿಂದ ಪ್ರಯೋಜನವಿದೆ

ಕೆಲವು ದೇಶಗಳಲ್ಲಿ, ಮಕ್ಕಳಿಗೆ ತಮ್ಮ ಜೊತೆ ಆಟವಾಡುತ್ತಿರುವ ಹುಡುಗನ ಸ್ವೆಟರಿಗೆ ಅಂಟುಪುರುಳೆಗಳನ್ನು ಸಿಕ್ಕಿಸಿ ಆಟವಾಡುವುದೆಂದರೆ ಭಾರೀ ಖುಷಿ. ಆ ಹುಡುಗನು ನಡೆಯಲಿ, ಓಡಲಿ, ಆಡಲಿ, ಕುಣಿಯಲಿ ಅವನ ಸ್ವೆಟರಿನ ಉಣ್ಣೆಗೆ ಸಿಕ್ಕಿಕೊಂಡಿರುವ ಅಂಟುಪುರುಳೆಗಳಂತೂ ಬೀಳುವುದಿಲ್ಲ. ಅವನ್ನು ಒಂದೊಂದಾಗಿ ಕಿತ್ತುತೆಗೆದರೆ ಮಾತ್ರ ವಿಮುಕ್ತಿ ಸಿಗುವುದು. ಎಳೆಯರಿಗೆ ಅದು ಗಮ್ಮತ್ತುಮಾಡುವ ವಿಷಯ.

ವಾಸ್ತವದಲ್ಲಿ, ತಮ್ಮ ಬಟ್ಟೆಗೆ ಅಂಟುಪುರುಳೆಗಳು ಅಂಟಿಕೊಂಡಿರುವುದನ್ನು ಹೆಚ್ಚು ಜನರು ಇಷ್ಟಪಡಲಿಕ್ಕಿಲ್ಲವಾದರೂ, ಅವುಗಳ ಅಂಟಿಕೊಳ್ಳುವ ಸಾಮರ್ಥ್ಯವನ್ನು ನೋಡಿ ಎಲ್ಲರೂ ವಿಸ್ಮಯಗೊಳ್ಳುತ್ತಾರೆ. ನಿಷ್ಠಾವಂತನಾಗಿರುವ ಒಬ್ಬ ವ್ಯಕ್ತಿಯಲ್ಲಿ ಇಂಥದ್ದೇ ಗುಣವಿರುತ್ತದೆ. ನಿಷ್ಠಾವಂತನಾದ ವ್ಯಕ್ತಿಯು ಇತರರೊಂದಿಗೆ ಬಾಳುವ ಸಂಬಂಧವನ್ನು ಕಾಪಾಡಿಕೊಳ್ಳುತ್ತಾನೆ. ಸನ್ನಿವೇಶಗಳು ಕಷ್ಟಕರವಾಗಿರುವಾಗಲೂ, ಅವನು ಆ ಸಂಬಂಧದಲ್ಲಿ ಒಳಗೂಡಿರುವ ಕರ್ತವ್ಯಗಳು ಮತ್ತು ಕರಾರುಗಳಿಗೆ ನಂಬಿಗಸ್ತಿಕೆಯಿಂದ ಅಂಟಿಕೊಳ್ಳುತ್ತಾನೆ. “ನಿಷ್ಠೆ” ಎಂಬ ಶಬ್ದವು ಸತ್ಯತೆ, ನಿಯತ್ತು ಮತ್ತು ಅರ್ಪಿತಭಾವ ಎಂಬ ಸದ್ಗುಣಗಳನ್ನು ನಮ್ಮ ಮನಸ್ಸಿಗೆ ತರುತ್ತದೆ. ಜನರು ನಿಮಗೆ ನಿಷ್ಠಾವಂತರಾಗಿರುವುದನ್ನು ನೀವು ಗಣ್ಯಮಾಡುವಾಗ, ಇತರರಿಗೆ ನಿಷ್ಠೆಯನ್ನು ತೋರಿಸುವ ದೃಢಮನಸ್ಸು ನಿಮ್ಮಲ್ಲಿದೆಯೋ? ಹಾಗಿರುವುದಾದರೆ, ನೀವು ಯಾರಿಗೆ ನಿಷ್ಠಾವಂತರಾಗಿರಬೇಕು?

ವಿವಾಹದಲ್ಲಿ ನಿಷ್ಠೆ​—⁠ಒಂದು ಮೂಲ ಆವಶ್ಯಕತೆ

ನಿಷ್ಠೆಯು ತೋರಿಸಲ್ಪಡಬೇಕಾದ ಪ್ರಮುಖ ಕ್ಷೇತ್ರಗಳಲ್ಲಿ ವಿವಾಹವು ಒಂದಾಗಿದೆ. ಆದರೆ ವಿವಾಹದಲ್ಲಿ ಅದು ಹೆಚ್ಚಾಗಿ ತೋರಿಸಲ್ಪಡುವುದಿಲ್ಲ ಎಂಬುದು ಶೋಚನೀಯ ಸಂಗತಿಯಾಗಿದೆ. ತಮ್ಮ ವಿವಾಹದ ಪ್ರತಿಜ್ಞೆಗಳಿಗೆ ನಂಬಿಗಸ್ತರಾಗಿ ಉಳಿಯುವ, ಅಂದರೆ ಇಬ್ಬರೂ ಒಟ್ಟಿಗೆ ಉಳಿದು ಪರಸ್ಪರರ ಒಳಿತಿಗಾಗಿ ಶ್ರಮಪಡುವ ಗಂಡಹೆಂಡತಿಯರು, ಸಂತೋಷ ಮತ್ತು ಭದ್ರತೆಯನ್ನು ಕಂಡುಕೊಳ್ಳುವುದು ಹೆಚ್ಚು ಸಂಭವನೀಯ. ಏಕೆ? ಏಕೆಂದರೆ, ಮಾನವರು ನಿಷ್ಠೆಯನ್ನು ತೋರಿಸುವ ಮತ್ತು ನಿಷ್ಠೆಯನ್ನು ಪಡೆದುಕೊಳ್ಳುವ ಆವಶ್ಯಕತೆಯೊಂದಿಗೆ ಸೃಷ್ಟಿಸಲ್ಪಟ್ಟಿದ್ದಾರೆ. ಏದೆನ್‌ ತೋಟದಲ್ಲಿ ಆದಾಮಹವ್ವರ ವಿವಾಹವು ನಡೆಸಲ್ಪಟ್ಟಾಗ, ದೇವರು ಘೋಷಿಸಿದ್ದು: “ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು.” ಹೆಂಡತಿಯ ವಿಷಯದಲ್ಲೂ ಇದು ಸತ್ಯವಾಗಿರಬೇಕಿತ್ತು; ಅವಳು ತನ್ನ ಗಂಡನೊಂದಿಗೆ ಒಂದೇ ಶರೀರದಂತೆ ಉಳಿಯಬೇಕಿತ್ತು. ಗಂಡ ಮತ್ತು ಹೆಂಡತಿ ಒಬ್ಬರಿಗೊಬ್ಬರು ನಂಬಿಗಸ್ತರಾಗಿದ್ದು ಪರಸ್ಪರ ಸಹಕರಿಸಬೇಕಾಗಿತ್ತು.​—⁠ಆದಿಕಾಂಡ 2:24; ಮತ್ತಾಯ 19:3-9.

ಅದು ಸಾವಿರಾರು ವರ್ಷಗಳಿಗೆ ಮುಂಚೆ ನುಡಿಯಲ್ಪಟ್ಟ ಮಾತು ಎಂಬುದಂತೂ ಸತ್ಯ. ಹಾಗಾದರೆ ವಿವಾಹದಲ್ಲಿ ನಿಷ್ಠೆ ತೋರಿಸುವುದು ಹಳೆಯ ಕಾಲದ ಸಂಗತಿಯಾಗಿದೆಯೋ? ಹೆಚ್ಚಿನವರು ಇಲ್ಲ ಎಂದು ಉತ್ತರ ಕೊಡುವರು. ಜರ್ಮನಿಯಲ್ಲಿರುವ ಸಂಶೋಧಕರು, ವಿವಾಹದಲ್ಲಿ ನಂಬಿಗಸ್ತಿಕೆಯನ್ನು ತೋರಿಸುವುದು ಪ್ರಾಮುಖ್ಯವೆಂದು 80 ಪ್ರತಿಶತ ಮಂದಿ ಪರಿಗಣಿಸುತ್ತಾರೆ ಎಂಬುದನ್ನು ಕಂಡುಕೊಂಡರು. ಸ್ತ್ರೀಪುರುಷರಲ್ಲಿನ ಅತಿ ಅಪೇಕ್ಷಣೀಯ ಗುಣಲಕ್ಷಣಗಳನ್ನು ಕಂಡುಕೊಳ್ಳಲು ಮತ್ತೊಂದು ಸಮೀಕ್ಷೆಯು ನಡೆಸಲ್ಪಟ್ಟಿತು. ಸ್ತ್ರೀಯರಲ್ಲಿ ಯಾವ ಐದು ಗುಣಗಳನ್ನು ತಾವು ಹೆಚ್ಚಾಗಿ ಮೆಚ್ಚುತ್ತಾರೆ ಎಂಬುದನ್ನು ತಿಳಿಸುವಂತೆ ಒಂದು ಗುಂಪಿನ ಪುರುಷರಿಗೆ ಕೇಳಲಾಯಿತು, ಮತ್ತು ಪುರುಷರಲ್ಲಿ ತಾವು ಯಾವ ಐದು ಗುಣಗಳನ್ನು ಹೆಚ್ಚಾಗಿ ಮೆಚ್ಚುತ್ತೇವೆ ಎಂಬುದನ್ನು ಒಂದು ಗುಂಪಿನ ಸ್ತ್ರೀಯರು ಪಟ್ಟಿಮಾಡಿದರು. ಪುರುಷರಿಂದಲೂ ಸ್ತ್ರೀಯರಿಂದಲೂ ಹೆಚ್ಚಾಗಿ ಗಣ್ಯಮಾಡಲ್ಪಟ್ಟ ಸದ್ಗುಣವು ನಂಬಿಗಸ್ತಿಕೆಯೇ ಆಗಿತ್ತು.

ಹೌದು, ಯಶಸ್ವಿದಾಯಕ ವಿವಾಹವನ್ನು ಕಟ್ಟಲು ನಿಷ್ಠೆ ಬೇಕೇ ಬೇಕು. ಆದರೂ, ನಾವು ಹಿಂದಿನ ಲೇಖನದಲ್ಲಿ ಗಮನಿಸಿದಂತೆ, ನಿಷ್ಠೆಯನ್ನು ಜನರು ಅನೇಕವೇಳೆ ಹೊಗಳುವುದಾದರೂ ಕ್ರಿಯೆಯಲ್ಲಿ ತೋರಿಸುವುದು ವಿರಳ. ಉದಾಹರಣೆಗೆ, ಅನೇಕ ದೇಶಗಳಲ್ಲಿ ಹೆಚ್ಚುತ್ತಿರುವ ವಿವಾಹ ವಿಚ್ಛೇದದ ಪ್ರಮಾಣವು ಎಲ್ಲೆಲ್ಲೂ ವ್ಯಾಪಕವಾಗಿರುವ ಅಪನಂಬಿಗಸ್ತಿಕೆಗೆ ಸಾಕ್ಷ್ಯವನ್ನು ನೀಡುತ್ತದೆ. ವಿವಾಹಿತ ದಂಪತಿಗಳು ಈ ಪ್ರವೃತ್ತಿಯನ್ನು ಪ್ರತಿರೋಧಿಸಿ ಒಬ್ಬರಿಗೊಬ್ಬರು ನಿಷ್ಠಾವಂತರಾಗಿ ಉಳಿಯುವುದು ಹೇಗೆ?

ನಿಷ್ಠೆಯು ವಿವಾಹವನ್ನು ಬಾಳುವಂಥದ್ದಾಗಿ ಮಾಡುತ್ತದೆ

ವಿವಾಹಿತ ದಂಪತಿಗಳು ಒಬ್ಬರಿಗೊಬ್ಬರು ಹೊಂದಿರುವ ಅರ್ಪಿತಭಾವವನ್ನು ದೃಢಪಡಿಸುವ ಅವಕಾಶಗಳಿಗಾಗಿ ಹುಡುಕುವಾಗ ನಿಷ್ಠೆಯನ್ನು ತೋರಿಸಲಾಗುತ್ತದೆ. ಉದಾಹರಣೆಗೆ, “ನನ್ನ” ಎಂದು ಹೇಳುವ ಬದಲಿಗೆ “ನಮ್ಮ ಸ್ನೇಹಿತರು,” “ನಮ್ಮ ಮಕ್ಕಳು,” “ನಮ್ಮ ಮನೆ,” “ನಮ್ಮ ಅನುಭವಗಳು” ಎಂದು ಹೇಳುವುದು ಉತ್ತಮ. ವಸತಿ, ಉದ್ಯೋಗ, ಮಕ್ಕಳ ಬೆಳವಣಿಗೆ, ಮನೋರಂಜನೆ, ಪ್ರವಾಸಗಳು, ಅಥವಾ ಧಾರ್ಮಿಕ ಚಟುವಟಿಕೆಗಳ ಬಗ್ಗೆ ಯೋಜನೆಗಳು ಮತ್ತು ನಿರ್ಣಯಗಳನ್ನು ಮಾಡಲಿಕ್ಕಿರುವಾಗ, ಗಂಡಹೆಂಡತಿಯರಿಬ್ಬರೂ ಪರಸ್ಪರರ ಭಾವನೆಗಳನ್ನು ಹಾಗೂ ಅನಿಸಿಕೆಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದು ಒಳ್ಳೇದು.​—⁠ಜ್ಞಾನೋಕ್ತಿ 11:14; 15:⁠22.

ಸಂಗಾತಿಗಳಿಬ್ಬರೂ, ತನ್ನ ಸಂಗಾತಿ ಬೇಕಾಗಿದ್ದಾರೆ ಮತ್ತು ಪ್ರೀತಿಪಾತ್ರರಾಗಿದ್ದಾರೆ ಎಂದು ಭಾವಿಸುವಂತೆ ಮಾಡುವಾಗ ನಿಷ್ಠೆಯು ತೋರಿಸಲ್ಪಡುತ್ತದೆ. ಒಬ್ಬ ವಿವಾಹಿತ ವ್ಯಕ್ತಿಗೆ ತನ್ನ ಸಂಗಾತಿಯು ವಿರುದ್ಧಲಿಂಗದ ಯಾರೊಂದಿಗಾದರೂ ತೀರ ಸಲಿಗೆಯಿಂದ ವರ್ತಿಸುವಾಗ ಅಭದ್ರತೆಯ ಅನಿಸಿಕೆಯಾಗುತ್ತದೆ. ಪುರುಷರು “[ತಮ್ಮ] ಯೌವನಕಾಲದ ಪತ್ನಿ”ಯೊಂದಿಗೆ ಅಂಟಿಕೊಂಡಿರಬೇಕು ಎಂದು ಬೈಬಲ್‌ ಬುದ್ಧಿಹೇಳುತ್ತದೆ. ಒಬ್ಬ ಗಂಡನು, ತನ್ನ ಹೆಂಡತಿಯಲ್ಲದೆ ಬೇರೊಬ್ಬ ಸ್ತ್ರೀಯು ಕೊಡುವ ಅಪೇಕ್ಷಣೀಯ ಆಕರ್ಷಣೆಯನ್ನು ತನ್ನ ಹೃದಯವು ಬಯಸುವಂತೆ ಅನುಮತಿಸಬಾರದು. ಬೇರೊಬ್ಬ ಸ್ತ್ರೀಯೊಂದಿಗೆ ಶಾರೀರಿಕವಾಗಿ ಸಂಬಂಧವನ್ನಿಟ್ಟುಕೊಳ್ಳುವುದನ್ನು ಅವನು ಖಂಡಿತವಾಗಿಯೂ ತ್ಯಜಿಸಬೇಕು. “ವ್ಯಭಿಚಾರಿಯೋ ಕೇವಲ ಬುದ್ಧಿಶೂನ್ಯನು, ಇಂಥಾ ಕಾರ್ಯವನ್ನು ಮಾಡುವವನು ತನ್ನನ್ನೇ ನಾಶಪಡಿಸಿಕೊಳ್ಳುವನು” ಎಂದು ಬೈಬಲ್‌ ಎಚ್ಚರಿಸುತ್ತದೆ. ಹೆಂಡತಿಯಿಂದಲೂ ನಂಬಿಗಸ್ತಿಕೆಯ ಇದೇ ಉನ್ನತ ಮಟ್ಟವು ಅವಶ್ಯಪಡಿಸಲ್ಪಟ್ಟಿದೆ.​—⁠ಜ್ಞಾನೋಕ್ತಿ 5:18; 6:⁠32.

ವಿವಾಹದಲ್ಲಿ ನಂಬಿಗಸ್ತಿಕೆಯನ್ನು ತೋರಿಸುವುದು ಪ್ರಯೋಜನವನ್ನು ತರುತ್ತದೋ? ಖಂಡಿತವಾಗಿಯೂ ತರುತ್ತದೆ. ಅದು ವಿವಾಹವನ್ನು ಹೆಚ್ಚು ಸ್ಥಿರವಾದದ್ದಾಗಿಯೂ ಬಾಳುವಂಥದ್ದಾಗಿಯೂ ಮಾಡುತ್ತದೆ, ಮತ್ತು ಸಂಗಾತಿಗಳಿಬ್ಬರೂ ವೈಯಕ್ತಿಕ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಾರೆ. ಉದಾಹರಣೆಗೆ, ತನ್ನ ಹೆಂಡತಿಯ ಹಿತಕ್ಷೇಮವನ್ನು ನಂಬಿಗಸ್ತಿಕೆಯಿಂದ ನೋಡಿಕೊಳ್ಳುವ ಒಬ್ಬ ಗಂಡನು, ಅವಳಲ್ಲಿ ಭದ್ರತೆಯ ಅನಿಸಿಕೆಯನ್ನು ಮೂಡಿಸುತ್ತಾನೆ ಮತ್ತು ಇದು ಅವಳಲ್ಲಿನ ಉತ್ತಮ ಗುಣಗಳನ್ನು ಹೊರತರುತ್ತದೆ. ಗಂಡನ ವಿಷಯದಲ್ಲೂ ಇದು ಸತ್ಯವಾಗಿದೆ. ತನ್ನ ಹೆಂಡತಿಗೆ ನಿಷ್ಠಾವಂತನಾಗಿ ಉಳಿಯುವ ಅವನ ದೃಢಸಂಕಲ್ಪವು, ಜೀವನದ ಎಲ್ಲ ಕ್ಷೇತ್ರಗಳಲ್ಲೂ ನೀತಿಯುತ ಮೂಲತತ್ತ್ವಗಳಿಗೆ ನಂಬಿಗಸ್ತನಾಗಿ ಅಂಟಿಕೊಳ್ಳುವಂತೆ ಅವನಿಗೆ ಸಹಾಯಮಾಡುತ್ತದೆ.

ಒಂದು ದಂಪತಿ ಕಷ್ಟಕರ ಅವಧಿಯೊಂದನ್ನು ಅನುಭವಿಸುವಾಗ, ನಿಷ್ಠೆಯು ಅವರಲ್ಲಿ ಸುಭದ್ರ ಅನಿಸಿಕೆಯನ್ನು ಮೂಡಿಸುವುದು. ಮತ್ತೊಂದು ಬದಿಯಲ್ಲಿ, ನಿಷ್ಠೆಯು ಇಲ್ಲದಿರುವ ಒಂದು ವಿವಾಹದಲ್ಲಿಯಾದರೋ ಸಮಸ್ಯೆಗಳು ತಲೆದೋರುವಾಗ ಜನರು ಹೆಚ್ಚಾಗಿ ಪ್ರತ್ಯೇಕವಾಸ ಇಲ್ಲವೆ ವಿವಾಹ ವಿಚ್ಛೇದದ ಪ್ರಸ್ತಾಪವನ್ನು ಮಾಡಬಹುದು. ಇಂತಹ ಹೆಜ್ಜೆಯು ಸಮಸ್ಯೆಗಳನ್ನು ಪರಿಹರಿಸುವ ಬದಲಿಗೆ, ಒಂದು ಸಮಸ್ಯೆಗೆ ವಿದಾಯ ಹೇಳಿ ಮತ್ತೊಂದನ್ನು ಬರಮಾಡಿಕೊಂಡಂತಿರುತ್ತದೆ. ಹಿಂದೆ 1980ಗಳಲ್ಲಿ, ಪ್ರಖ್ಯಾತನಾಗಿದ್ದ ಒಬ್ಬ ಫ್ಯಾಶನ್‌ ಸಲಹಾಕಾರನು ತನ್ನ ಹೆಂಡತಿ ಮತ್ತು ಕುಟುಂಬವನ್ನು ತೊರೆದುಬಿಟ್ಟನು. ಒಂಟಿ ವ್ಯಕ್ತಿಯಾಗಿ ಅವನು ಸಂತೋಷವನ್ನು ಕಂಡುಕೊಂಡನೋ? ಇಪ್ಪತ್ತು ವರ್ಷಗಳ ತರುವಾಯ ಅವನು ಒಪ್ಪಿಕೊಂಡದ್ದು: “[ನನ್ನ ಕುಟುಂಬವನ್ನು ಬಿಟ್ಟುಬಂದದ್ದು] ನನ್ನಲ್ಲಿ ಏಕಾಂಗಿತನ ಮತ್ತು ಕ್ಷೋಭೆಯನ್ನು ಉಂಟುಮಾಡಿತು. ನಾನು ನನ್ನ ಮಕ್ಕಳಿಗೆ ‘ಗುಡ್‌ನೈಟ್‌’ ಹೇಳುವ ಬಯಕೆಯೊಂದಿಗೆ ರಾತ್ರಿಯಲ್ಲಿ ಎಚ್ಚರವಾಗಿ ಉಳಿಯುತ್ತಿದ್ದೆ.”

ಹೆತ್ತವರ ಮತ್ತು ಮಕ್ಕಳ ಮಧ್ಯೆ ನಿಷ್ಠೆ

ಹೆತ್ತವರು ಒಬ್ಬರಿಗೊಬ್ಬರು ನಿಷ್ಠಾವಂತರಾಗಿರುವಾಗ, ಈ ಗುಣವು ಮಕ್ಕಳಲ್ಲಿ ಕಂಡುಬರುವುದು ಹೆಚ್ಚು ಸಂಭವನೀಯ. ನಿಷ್ಠಾವಂತ ಪ್ರೀತಿಭರಿತ ಕುಟುಂಬಗಳಲ್ಲಿ ಬೆಳೆಸಲ್ಪಟ್ಟ ಮಕ್ಕಳಿಗೆ, ಮುಂದಕ್ಕೆ ಜೀವನದಲ್ಲಿ ತಮ್ಮ ಸಂಗಾತಿಗಳ ವಿಷಯದಲ್ಲಿ ಮತ್ತು ತಮ್ಮ ಹೆತ್ತವರು ವೃದ್ಧಾಪ್ಯದ ತೊಂದರೆಗಳನ್ನು ಎದುರಿಸುವಾಗ ಅವರ ವಿಷಯದಲ್ಲಿ ಜವಾಬ್ದಾರಿಯುತವಾಗಿ ವರ್ತಿಸಲು ಸುಲಭವಾಗಿರುವುದು.​—⁠1 ತಿಮೊಥೆಯ 5:4, 8.

ವಾಸ್ತವದಲ್ಲಿ, ಯಾವಾಗಲೂ ಹೆತ್ತವರೇ ಮೊದಲು ನಿರ್ಬಲ ಸ್ಥಿತಿಯನ್ನು ತಲಪುತ್ತಾರೆ ಎಂದೇನಿಲ್ಲ. ಕೆಲವೊಮ್ಮೆ ಒಂದು ಮಗುವಿಗೆ ಸತತವಾದ ಆರೈಕೆಯ ಅಗತ್ಯವಿರುತ್ತದೆ. 40ಕ್ಕಿಂತಲೂ ಹೆಚ್ಚು ವರ್ಷಕಾಲ ಯೆಹೋವನ ಸಾಕ್ಷಿಗಳಾಗಿರುವ ಹರ್‌ಬರ್ಟ್‌ ಮತ್ತು ಗರ್‌ಟ್ರೂಟ್‌ನ ವಿಷಯದಲ್ಲಿ ಇದು ಸತ್ಯವಾಗಿತ್ತು. ಅವರ ಮಗನಾದ ಡೀಟ್‌ಮಾರ್‌, ತಾನು ಬದುಕಿದ್ದ ಕಾಲವೆಲ್ಲಾ ಸ್ನಾಯುಗಳ ಆಕಾರ ಕೆಡುವ ಕಾಯಿಲೆಯಿಂದ ನರಳಿದನು. 2002ರ ನವೆಂಬರ್‌ ತಿಂಗಳಿನಲ್ಲಿ ಅವನು ಮೃತಪಡುವುದಕ್ಕೆ ಮುಂಚೆ ಏಳು ವರ್ಷಕಾಲ, ಡೀಟ್‌ಮಾರ್‌ನಿಗೆ ಹಗಲೂರಾತ್ರಿ ಆರೈಕೆ ಮತ್ತು ಗಮನದ ಅಗತ್ಯವಿತ್ತು. ಅವನ ಹೆತ್ತವರು ಅವನ ಅಗತ್ಯಗಳನ್ನು ಪ್ರೀತಿಯಿಂದ ಪೂರೈಸಿದರು. ಅವರು ತಮ್ಮ ಮನೆಯಲ್ಲಿ ವೈದ್ಯಕೀಯ ಉಪಕರಣವನ್ನು ಸಹ ಅಳವಡಿಸಿದರು ಮತ್ತು ವೈದ್ಯಕೀಯ ತರಬೇತಿಯನ್ನು ಪಡೆದುಕೊಂಡರು. ಇದು ಕೌಟುಂಬಿಕ ನಿಷ್ಠೆಗೆ ಒಂದು ಉತ್ತಮ ಮಾದರಿ!

ಸ್ನೇಹದಲ್ಲಿ ನಿಷ್ಠೆ ಅವಶ್ಯ ಇರಬೇಕು

“ಒಬ್ಬ ವ್ಯಕ್ತಿ ವಿವಾಹ ಸಂಗಾತಿಯಿಲ್ಲದೆ ಸಂತೋಷಿತನಾಗಿರಬಲ್ಲನು, ಆದರೆ ಒಬ್ಬ ಸ್ನೇಹಿತನಿಲ್ಲದೆ ಸಂತೋಷಿತನಾಗಿರುವುದು ಕಷ್ಟ” ಎಂದು ಬಿರ್‌ಜಿಟ್‌ ಅವಲೋಕಿಸುತ್ತಾಳೆ. ಇದನ್ನು ನೀವು ಸಹ ಒಪ್ಪಬಹುದು. ನೀವು ವಿವಾಹಿತರಾಗಿರಲಿ ಅವಿವಾಹಿತರಾಗಿರಲಿ, ಒಬ್ಬ ಒಳ್ಳೇ ಸ್ನೇಹಿತನ ನಿಷ್ಠೆಯು ನಿಮ್ಮ ಮನಸ್ಸಿಗೆ ಮುದ ನೀಡಿ ನಿಮ್ಮ ಜೀವನದ ಗುಣಮಟ್ಟವನ್ನು ಉತ್ತಮಗೊಳಿಸಬಲ್ಲದು. ವಾಸ್ತವದಲ್ಲಿ, ನೀವು ವಿವಾಹಿತರಾಗಿರುವುದಾದರೆ, ನಿಮ್ಮ ಅತಿ ಆಪ್ತ “ಸ್ನೇಹಿತ” ನಿಮ್ಮ ವಿವಾಹ ಸಂಗಾತಿಯಾಗಿರಬೇಕು.

ಒಬ್ಬ ಸ್ನೇಹಿತ ಕೇವಲ ಒಬ್ಬ ಪರಿಚಯಸ್ಥನಾಗಿರುವುದಿಲ್ಲ. ನೆರೆಯವರು, ಸಹೋದ್ಯೋಗಿಗಳು, ಮತ್ತು ಆಗೊಮ್ಮೆ ಈಗೊಮ್ಮೆ ಭೇಟಿಯಾಗುವ ಅನೇಕ ಜನ ಪರಿಚಯಸ್ಥರು ನಮಗಿರಬಹುದು. ನಿಜ ಸ್ನೇಹದಲ್ಲಿಯಾದರೋ ನಾವು ನಮ್ಮ ಸಮಯ, ಶಕ್ತಿ ಮತ್ತು ಭಾವನಾತ್ಮಕ ಒಪ್ಪಂದಗಳನ್ನು ಬಂಡವಾಳವಾಗಿ ಹೂಡಬೇಕಾಗಿರುತ್ತದೆ. ಇಂಥವರ ಸ್ನೇಹಿತ ಎಂದು ಹೇಳಿಕೊಳ್ಳುವುದರಲ್ಲಿ ಹೆಮ್ಮೆ ಉಂಟು. ಸ್ನೇಹವು ಪ್ರಯೋಜನಗಳನ್ನು ತರುತ್ತದೆ, ಆದರೆ ಅದರಲ್ಲಿ ಜವಾಬ್ದಾರಿಗಳೂ ಒಳಗೂಡಿವೆ.

ನಮ್ಮ ಸ್ನೇಹಿತರೊಂದಿಗೆ ಒಳ್ಳೆಯ ಸಂವಾದವನ್ನು ಇಟ್ಟುಕೊಳ್ಳುವುದು ಪ್ರಾಮುಖ್ಯ. ಕೆಲವೊಮ್ಮೆ ಸನ್ನಿವೇಶಗಳಿಂದಾಗಿ ನಮ್ಮ ಸ್ನೇಹಿತರೊಂದಿಗೆ ನಮ್ಮ ಮನಸ್ಸನ್ನು ತೋಡಿಕೊಳ್ಳಬೇಕಾಗಿ ಬರಬಹುದು. “ನಮ್ಮಲ್ಲಿ ಒಬ್ಬರಿಗೆ ಏನಾದರೂ ಸಮಸ್ಯೆ ಇದ್ದರೆ, ನಾನು ಮತ್ತು ನನ್ನ ಸ್ನೇಹಿತೆ ವಾರದಲ್ಲಿ ಒಂದೆರಡು ಸಲ ಫೋನ್‌ ಮಾಡಿ ಮಾತಾಡುತ್ತೇವೆ. ಅವಳಿದ್ದಾಳೆ ಮತ್ತು ನನಗೆ ಕಿವಿಗೊಡಲು ಬಯಸುತ್ತಾಳೆ ಎಂಬುದು ನನ್ನಲ್ಲಿ ಸಾಂತ್ವನವನ್ನು ಮೂಡಿಸುತ್ತದೆ” ಎಂದು ಬಿರ್‌ಜಿಟ್‌ ವಿವರಿಸುತ್ತಾಳೆ. ಅಂತರವು ಒಂದು ಸ್ನೇಹಕ್ಕೆ ತಡೆಗೋಡೆಯಾಗಿ ಇರಲಾರದು. ಗೆರ್‌ಡಾ ಮತ್ತು ಹೆಲ್ಗಾ ಸಾವಿರಾರು ಕಿಲೊಮೀಟರ್‌ ದೂರದಲ್ಲಿ ವಾಸಿಸುತ್ತಾರೆ, ಆದರೆ 35ಕ್ಕಿಂತಲೂ ಹೆಚ್ಚು ವರ್ಷಗಳಿಂದ ಅವರು ಒಳ್ಳೇ ಸ್ನೇಹಿತರಾಗಿದ್ದಾರೆ. ಗೆರ್‌ಡಾ ವಿವರಿಸುವುದು: “ನಾವು ಕ್ರಮವಾಗಿ ಪತ್ರಗಳನ್ನು ಬರೆಯುತ್ತೇವೆ. ಅದರಲ್ಲಿ ಅನುಭವಗಳಿರುತ್ತೆ ಮತ್ತು ನಾವು ನಮ್ಮ ಸುಖದುಃಖಗಳನ್ನು ಸಹ ಹಂಚಿಕೊಳ್ಳುತ್ತೇವೆ. ಹೆಲ್ಗಾಳಿಂದ ಪತ್ರ ಬಂತೆಂದರೆ ನನ್ನ ಸಂತೋಷಕ್ಕೆ ಮಿತಿಯೇ ಇರುವುದಿಲ್ಲ. ನಮ್ಮ ಯೋಚನೆಯಲ್ಲಿ ಹೊಂದಾಣಿಕೆಯಿರುತ್ತದೆ.”

ಸ್ನೇಹದಲ್ಲಿ ನಿಷ್ಠೆ ಅವಶ್ಯ ಇರಬೇಕು. ಅಪನಂಬಿಗಸ್ತಿಕೆಯ ಒಂದು ಕೃತ್ಯವು, ದೀರ್ಘಕಾಲದ ಸಂಬಂಧಗಳನ್ನೂ ಕೆಡವಿಹಾಕಬಲ್ಲದು. ಸ್ನೇಹಿತರು, ಕೆಲವೊಮ್ಮೆ ಗುಪ್ತವಾದ ವಿಚಾರಗಳ ಬಗ್ಗೆಯೂ ಒಬ್ಬರಿಗೊಬ್ಬರು ಸಲಹೆಯನ್ನು ನೀಡುವುದು ಸರ್ವಸಾಮಾನ್ಯ. ಸ್ನೇಹಿತರು ಕೀಳುಮಾಡಲ್ಪಡುವ ಇಲ್ಲವೆ ತಮ್ಮ ಗುಪ್ತ ವಿಚಾರಗಳು ಬಯಲುಮಾಡಲ್ಪಡುವ ಯಾವ ಭಯವಿಲ್ಲದೆ ತಮ್ಮ ಹೃದಯದಾಳದಿಂದ ಮಾತಾಡುತ್ತಾರೆ. ಬೈಬಲ್‌ ಹೇಳುವುದು: “ನಿಜ ಸಂಗಾತಿಯು ಸದಾ ಪ್ರೀತಿಸುತ್ತಿರುವವನೂ ಆಪತ್ತಿನ ಸಮಯಕ್ಕಾಗಿ ಜನ್ಮವೆತ್ತಿದ ಸಹೋದರನೂ ಆಗಿದ್ದಾನೆ.”​—⁠ಜ್ಞಾನೋಕ್ತಿ 17:⁠17, NW.

ನಮ್ಮ ಸ್ನೇಹಿತರು ನಾವು ಯೋಚಿಸುವ, ಭಾವಿಸುವ ಮತ್ತು ಕ್ರಿಯೆಗೈಯುವ ರೀತಿಯ ಮೇಲೆ ಪ್ರಭಾವ ಬೀರುವುದರಿಂದ, ನಾವು ನಮ್ಮ ಜೀವನರೀತಿಯೊಂದಿಗೆ ಸಹಮತದಲ್ಲಿರುವ ವ್ಯಕ್ತಿಗಳೊಂದಿಗೆ ಸ್ನೇಹವನ್ನು ಬೆಳೆಸುವುದು ಪ್ರಾಮುಖ್ಯ. ಉದಾಹರಣೆಗೆ, ನಿಮ್ಮ ಸ್ವಂತ ನಂಬಿಕೆಗಳು, ನಿಮ್ಮ ಸ್ವಂತ ನೈತಿಕ ದೃಷ್ಟಿಕೋನ, ಸರಿ ತಪ್ಪಿನ ವಿಷಯದಲ್ಲಿ ನಿಮ್ಮ ಸ್ವಂತ ಮಟ್ಟಗಳನ್ನು ಹೊಂದಿರುವ ವ್ಯಕ್ತಿಗಳೊಂದಿಗೆ ಸ್ನೇಹವನ್ನು ಬೆಳೆಸುವುದನ್ನು ಖಚಿತಪಡಿಸಿಕೊಳ್ಳಿ. ಇಂತಹ ಸ್ನೇಹಿತರು ನಿಮ್ಮ ಗುರಿಗಳನ್ನು ಮುಟ್ಟುವಂತೆ ನಿಮಗೆ ಸಹಾಯಮಾಡುವರು. ನಿಮ್ಮ ಮಟ್ಟಗಳು ಮತ್ತು ನೈತಿಕ ಮೌಲ್ಯಗಳನ್ನು ಹೊಂದಿರದ ಒಬ್ಬ ವ್ಯಕ್ತಿಯೊಂದಿಗೆ ಆಪ್ತತೆಯನ್ನು ಬೆಳೆಸಿಕೊಳ್ಳುವುದರಿಂದ ಪ್ರಯೋಜನವಾದರೂ ಏನಿದೆ? ಸರಿಯಾದ ಸ್ನೇಹಿತರನ್ನು ಆರಿಸಿಕೊಳ್ಳುವ ಪ್ರಮುಖತೆಯನ್ನು ತೋರಿಸುತ್ತಾ ಬೈಬಲ್‌ ಹೇಳುವುದು: “ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು; ಜ್ಞಾನಹೀನರ ಒಡನಾಡಿ ಸಂಕಟಪಡುವನು.”​—⁠ಜ್ಞಾನೋಕ್ತಿ 13:⁠20.

ನಿಷ್ಠೆಯನ್ನು ಕಲಿಯಬಹುದು

ಒಬ್ಬ ಹುಡುಗನು ಮತ್ತೊಬ್ಬರ ಬಟ್ಟೆಗೆ ಅಂಟುಪುರುಳೆಗಳನ್ನು ಸಿಕ್ಕಿಸಲು ಕಲಿಯುವಾಗ, ಅವನು ಆ ಆಟವನ್ನು ಪುನಃ ಪುನಃ ಆಡಲು ಬಯಸುವನು. ನಿಷ್ಠಾವಂತನಾಗಿರುವ ಒಬ್ಬ ವ್ಯಕ್ತಿಯ ವಿಷಯದಲ್ಲೂ ಇದನ್ನೇ ಹೇಳಸಾಧ್ಯವಿದೆ. ಏಕೆ? ಏಕೆಂದರೆ, ‘ಅಭ್ಯಾಸವೇ ಪರಿಪೂರ್ಣತೆಗೆ ಸಾಧನ’ ಎನ್ನುವ ಹಾಗೆ, ಪ್ರಯತ್ನಿಸಿದಷ್ಟು ನಿಷ್ಠೆಯನ್ನು ತೋರಿಸುವುದು ಸುಲಭವಾಗುತ್ತದೆ. ಒಬ್ಬ ವ್ಯಕ್ತಿ ಚಿಕ್ಕವನಿರುವಾಗಲೇ ನಿಷ್ಠಾವಂತನಾಗಿರಲು ಕಲಿಯುವುದಾದರೆ, ಮುಂದಕ್ಕೆ ನಿಷ್ಠೆಯ ಮೇಲಾಧಾರಿಸಿರುವ ಸ್ನೇಹಗಳನ್ನು ಬೆಳೆಸುವುದು ಸುಲಭವಾಗಿರುವುದು. ಕಾಲಕ್ರಮೇಣ, ಇಂತಹ ಬಲವಾದ ಬಾಳುವ ಸ್ನೇಹಗಳು ವಿವಾಹದಲ್ಲಿ ನಿಷ್ಠೆಯನ್ನು ತೋರಿಸಲು ದಾರಿಮಾಡಿಕೊಡಬಹುದು. ಮಾತ್ರವಲ್ಲದೆ, ಇರುವವುಗಳಲ್ಲೇ ಅತಿ ಪ್ರಾಮುಖ್ಯವಾದ ಸ್ನೇಹದಲ್ಲಿ ನಿಷ್ಠಾವಂತನಾಗಿರಲು ಇದು ಅವನಿಗೆ ಸಹಾಯಮಾಡುವುದು.

ಯೆಹೋವ ದೇವರನ್ನು ನಮ್ಮ ಪೂರ್ಣಹೃದಯ, ಪ್ರಾಣ, ಬುದ್ಧಿ ಮತ್ತು ಶಕ್ತಿಯಿಂದ ಪ್ರೀತಿಸುವುದೇ ಅತಿ ಪ್ರಾಮುಖ್ಯ ಆಜ್ಞೆಯಾಗಿದೆ ಎಂದು ಯೇಸು ಹೇಳಿದನು. (ಮಾರ್ಕ 12:30) ಇದರರ್ಥ, ನಾವು ದೇವರಿಗೆ ನಮ್ಮ ಸಂಪೂರ್ಣ ನಿಷ್ಠೆಯನ್ನು ತೋರಿಸಬೇಕಾಗಿದೆ. ಯೆಹೋವ ದೇವರಿಗೆ ನಿಷ್ಠಾವಂತರಾಗಿರುವುದು ಸಮೃದ್ಧವಾದ ಆಶೀರ್ವಾದಗಳನ್ನು ತರುತ್ತದೆ. ಆತನು ನಮ್ಮನ್ನೆಂದೂ ಮೋಸಗೊಳಿಸನು ಅಥವಾ ಆಶಾಭಂಗಪಡಿಸನು; ಏಕೆಂದರೆ, “ನಾನು ನಿಷ್ಠಾವಂತನು” ಎಂದು ಆತನು ಸ್ವತಃ ಹೇಳುತ್ತಾನೆ. (ಯೆರೆಮೀಯ 3:​12, NW) ವಾಸ್ತವದಲ್ಲಿ, ದೇವರಿಗೆ ತೋರಿಸಲ್ಪಡುವ ನಿಷ್ಠೆ ಅಥವಾ ನಂಬಿಗಸ್ತಿಕೆಯು ನಿತ್ಯವಾದ ಆಶೀರ್ವಾದಗಳನ್ನು ತರುತ್ತದೆ.​—⁠1 ಯೋಹಾನ 2:⁠17.

[ಪುಟ 6ರಲ್ಲಿರುವ ಸಂಕ್ಷಿಪ್ತ ವಿವರಣೆ]

ಒಬ್ಬ ಒಳ್ಳೇ ಸ್ನೇಹಿತನ ನಿಷ್ಠೆಯು ನಿಮ್ಮ ಮನಸ್ಸಿಗೆ ಮುದ ನೀಡುವುದು

[ಪುಟ 5ರಲ್ಲಿರುವ ಚಿತ್ರ]

ನಿಷ್ಠಾವಂತ ಕುಟುಂಬ ಸದಸ್ಯರು, ಒಬ್ಬರು ಮತ್ತೊಬ್ಬರ ಅಗತ್ಯಗಳನ್ನು ಪೂರೈಸುತ್ತಾರೆ