ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲ್‌ ಸತ್ಯಕ್ಕಾಗಿ ಮೆನನೈಟರ ಅನ್ವೇಷಣೆ

ಬೈಬಲ್‌ ಸತ್ಯಕ್ಕಾಗಿ ಮೆನನೈಟರ ಅನ್ವೇಷಣೆ

ಬೈಬಲ್‌ ಸತ್ಯಕ್ಕಾಗಿ ಮೆನನೈಟರ ಅನ್ವೇಷಣೆ

ಇಸವಿ 2000ದ ನವೆಂಬರ್‌ ತಿಂಗಳ ಒಂದು ಬೆಳಗ್ಗೆ, ಬೊಲಿವಿಯದಲ್ಲಿನ ಯೆಹೋವನ ಸಾಕ್ಷಿಗಳ ಕೆಲವು ಮಿಷನೆರಿಗಳು ತಮ್ಮ ಚಿಕ್ಕ ಮನೆಯ ಕಿಟಕಿಯಿಂದ ಹೊರಗೆ ಕಣ್ಣುಹಾಯಿಸಿದಾಗ, ಸಾಧಾರಣವಾದ ಉಡುಪನ್ನು ಧರಿಸಿಕೊಂಡಿದ್ದ ಸ್ತ್ರೀಪುರುಷರ ಒಂದು ಗುಂಪು ಸ್ವಲ್ಪ ಭಯದಿಂದ ಗೇಟಿನ ಬಳಿ ನಿಂತಿರುವುದನ್ನು ಕಂಡರು. ಮಿಷನೆರಿಗಳು ಹೋಗಿ ಗೇಟನ್ನು ತೆರೆದಾಗ, ಆ ಸಂದರ್ಶಕರ ಬಾಯಿಂದ ಹೊರಬಂದ ಮೊದಲ ನುಡಿ ಹೀಗಿತ್ತು: “ನಾವು ಬೈಬಲಿನಿಂದ ಸತ್ಯವನ್ನು ಕಂಡುಕೊಳ್ಳಲು ಬಯಸುತ್ತೇವೆ.” ಆ ಸಂದರ್ಶಕರು ಮೆನನೈಟರಾಗಿದ್ದರು. ಆ ಪುರುಷರು ಮೇಲುಡುಪುಗಳನ್ನು ಧರಿಸಿದ್ದರು, ಸ್ತ್ರೀಯರು ಗಾಢವರ್ಣದ ಏಪ್ರನ್‌ (ಧೂಳುಪಾವುಡ)ಗಳನ್ನು ಹಾಕಿಕೊಂಡಿದ್ದರು, ಮತ್ತು ಅವರು ಪರಸ್ಪರ ಸಂವಾದಿಸುವಾಗ ಒಂದು ಜರ್ಮನ್‌ ಭಾಷಾರೂಪವನ್ನು ಉಪಯೋಗಿಸುತ್ತಿದ್ದರು. ಅವರ ಕಣ್ಣುಗಳಲ್ಲಿ ಏನೋ ಭಯವಿತ್ತು. ತಮ್ಮನ್ನು ಹಿಂಬಾಲಿಸಿಕೊಂಡು ಯಾರಾದರೂ ಬಂದಿದ್ದಾರೋ ಎಂದು ತಿಳಿದುಕೊಳ್ಳಲಿಕ್ಕಾಗಿ ಅವರು ಆಚೀಚೆ ನೋಡುತ್ತಾ ಇದ್ದರು. ಆದರೂ, ಮಿಷನೆರಿಗಳ ಮನೆಯೊಳಕ್ಕೆ ಹೋಗಲಿಕ್ಕಾಗಿ ಅವರು ಮೆಟ್ಟಿಲುಗಳನ್ನು ಹತ್ತುತ್ತಿರುವಾಗಲೂ, ಆ ಯೌವನಸ್ಥರಲ್ಲಿ ಒಬ್ಬನು ಹೇಳಿದ್ದು: “ನಾನು ದೇವರ ಹೆಸರನ್ನು ಉಪಯೋಗಿಸುವಂಥ ಜನರ ಬಗ್ಗೆ ತಿಳಿದುಕೊಳ್ಳಲು ಬಯಸುತ್ತೇನೆ.”

ಒಳಗೆ ಬಂದ ಸಂದರ್ಶಕರು ವಿರಮಿಸತೊಡಗಿದರು ಮತ್ತು ಅವರಿಗೆ ಸ್ವಲ್ಪ ಉಪಾಹಾರವನ್ನು ನೀಡಲಾಯಿತು. ಅವರು ತುಂಬ ದೂರದಲ್ಲಿದ್ದ, ಪ್ರತ್ಯೇಕ ಜಮೀನು ಪ್ರಾಂತದಿಂದ ಬಂದಿದ್ದರು. ಅಲ್ಲಿ ಅವರು ಆರು ವರ್ಷಗಳಿಂದ ಅಂಚೆಯ ಮೂಲಕ ಕಾವಲಿನಬುರುಜು ಪತ್ರಿಕೆಯನ್ನು ಪಡೆದುಕೊಳ್ಳುತ್ತಿದ್ದರು. “ಭೂಮಿಯ ಮೇಲೆ ಒಂದು ಪರದೈಸ್‌ ಇರುವುದು ಎಂದು ನಾವು ಓದಿದ್ದೇವೆ. ಅದು ನಿಜವೋ?” ಎಂದು ಅವರು ಕೇಳಿದರು. ಸಾಕ್ಷಿಗಳು ಅವರಿಗೆ ಬೈಬಲಿನಿಂದ ಉತ್ತರವನ್ನು ತೋರಿಸಿದರು. (ಯೆಶಾಯ 11:9; ಲೂಕ 23:43; 2 ಪೇತ್ರ 3:7, 13; ಪ್ರಕಟನೆ 21:3, 4) ಒಬ್ಬ ರೈತನು ಇತರರಿಗೆ ಹೇಳಿದ್ದು: “ನೋಡಿದ್ರಾ, ಇದು ನಿಜ. ಭೂಮಿಯ ಮೇಲೆ ಒಂದು ಪರದೈಸ್‌ ಇರುವುದು.” ಆಗ ಇತರರು, “ನಾವು ಸತ್ಯವನ್ನು ಕಂಡುಕೊಂಡಿದ್ದೇವೆ ಎಂದು ಅನಿಸುತ್ತಿದೆ” ಎಂದು ಹೇಳುತ್ತಿದ್ದರು.

ಮೆನನೈಟರು ಯಾರು? ಅವರ ನಂಬಿಕೆ ಏನು? ಈ ಪ್ರಶ್ನೆಗಳನ್ನು ಉತ್ತರಿಸಲಿಕ್ಕಾಗಿ ನಾವು 16ನೇ ಶತಮಾನದಷ್ಟು ಹಿಂದಕ್ಕೆ ಹೋಗಬೇಕಾಗಿದೆ.

ಮೆನನೈಟರು ಯಾರು?

ಇಸವಿ 1500ಗಳಲ್ಲಿ, ಯೂರೋಪಿನ ಸಾಮಾನ್ಯ ಭಾಷೆಗಳಲ್ಲಿ ಬೈಬಲ್‌ ಭಾಷಾಂತರ ಮತ್ತು ಮುದ್ರಣದಲ್ಲಾದ ಅನಿರೀಕ್ಷಿತ ಹೆಚ್ಚಳವು, ಯೂರೋಪಿನಲ್ಲಿ ಬೈಬಲ್‌ ಅಧ್ಯಯನದಲ್ಲಿ ನವೀಕೃತ ಆಸಕ್ತಿಯನ್ನು ಉಂಟುಮಾಡಿತು. ಮಾರ್ಟಿನ್‌ ಲೂತರ್‌ ಹಾಗೂ ಇತರ ಸುಧಾರಕರು, ಕ್ಯಾಥೊಲಿಕ್‌ ಚರ್ಚಿನ ಅನೇಕ ಬೋಧನೆಗಳನ್ನು ತಿರಸ್ಕರಿಸಿದರು. ಆದರೂ, ಹೊಸದಾಗಿ ರಚಿಸಲ್ಪಟ್ಟ ಪ್ರಾಟೆಸ್ಟೆಂಟ್‌ ಚರ್ಚುಗಳು ಅನೇಕ ಬೈಬಲೇತರ ರೂಢಿಗಳನ್ನು ಉಳಿಸಿಕೊಂಡಿದ್ದವು. ಉದಾಹರಣೆಗೆ, ಹೊಸದಾಗಿ ಜನಿಸುವಂಥ ಪ್ರತಿಯೊಂದು ಶಿಶುವು ಚರ್ಚಿನ ಸದಸ್ಯನಾಗಿ ದೀಕ್ಷಾಸ್ನಾನ ಪಡೆದುಕೊಳ್ಳಬೇಕೆಂದು ಅಧಿಕಾಂಶ ಮಂದಿ ನಿರೀಕ್ಷಿಸುತ್ತಿದ್ದರು. ಆದರೆ, ಸತ್ಯವನ್ನು ಕಂಡುಕೊಳ್ಳುವ ಉದ್ದೇಶದಿಂದ ಬೈಬಲ್‌ ಅಧ್ಯಯನಮಾಡುತ್ತಿದ್ದ ಕೆಲವರು, ದೀಕ್ಷಾಸ್ನಾನ ಪಡೆದುಕೊಳ್ಳುವುದಕ್ಕೆ ಮೊದಲು ತಿಳಿವಳಿಕೆಭರಿತ ನಿರ್ಣಯವನ್ನು ಮಾಡುವ ಮೂಲಕ ಮಾತ್ರವೇ ವ್ಯಕ್ತಿಯೊಬ್ಬನು ಕ್ರೈಸ್ತ ಸಭೆಯ ಸದಸ್ಯನಾಗುತ್ತಾನೆ ಎಂಬುದನ್ನು ಮನಗಂಡರು. (ಮತ್ತಾಯ 28:19, 20) ಈ ನಂಬಿಕೆಯನ್ನು ಅಂಗೀಕರಿಸಿದಂಥ ಹುರುಪಿನ ಪ್ರಚಾರಕರು, ಬೇರೆ ಬೇರೆ ಊರುಗಳಿಗೂ ಹಳ್ಳಿಗಳಿಗೂ ಹೋಗಿ ಬೈಬಲಿನ ಕುರಿತು ಕಲಿಸಿ, ವಯಸ್ಕರಿಗೆ ದೀಕ್ಷಾಸ್ನಾನ ನೀಡಲಾರಂಭಿಸಿದರು. ಆದುದರಿಂದ ಅವರನ್ನು ಆ್ಯನಬ್ಯಾಪ್ಟಿಸ್ಟರು ಅಂದರೆ “ಪುನಃ ದೀಕ್ಷಾಸ್ನಾನ ಮಾಡಿಸುವವರು” ಎಂದು ಕರೆಯಲಾಯಿತು.

ಸತ್ಯಕ್ಕಾಗಿರುವ ಅನ್ವೇಷಣೆಯಲ್ಲಿ ಆ್ಯನಬ್ಯಾಪ್ಟಿಸ್ಟರ ಸಹಾಯವನ್ನು ಪಡೆದುಕೊಂಡ ವ್ಯಕ್ತಿಯು ಮೆನೋ ಸೈಮನ್ಸ್‌ ಆಗಿದ್ದನು. ಅವನು ನೆದರ್ಲೆಂಡ್ಸ್‌ನ ಉತ್ತರ ಭಾಗದಲ್ಲಿರುವ ವಿಟ್‌ಮಾರ್ಸಮ್‌ನ ಹಳ್ಳಿಯ ಒಬ್ಬ ಕ್ಯಾಥೊಲಿಕ್‌ ಪಾದ್ರಿಯಾಗಿದ್ದನು. 1536ರಷ್ಟಕ್ಕೆ ಅವನು ಚರ್ಚಿನೊಂದಿಗಿನ ತನ್ನ ಸಂಪೂರ್ಣ ಸಂಬಂಧವನ್ನು ಕಡಿದುಹಾಕಿದ್ದನು. ಮತ್ತು ಚರ್ಚಿನ ಅಧಿಕಾರಿಗಳು ಅವನಿಗಾಗಿ ಬೇಟೆಯಾಡುತ್ತಿದ್ದರು. 1542ರಲ್ಲಿ ಪವಿತ್ರ ರೋಮನ್‌ ಚಕ್ರವರ್ತಿಯಾಗಿದ್ದ Vನೆಯ ಚಾರ್ಲ್ಸ್‌, ಮೆನೋನನ್ನು ಹಿಡಿದುಕೊಡುವವರಿಗೆ 100 ಗಿಲ್ಡರ್‌ ನಾಣ್ಯಗಳನ್ನು ಕೊಡುವೆನೆಂದು ಮಾತುಕೊಟ್ಟನು. ಆದರೂ, ಆ್ಯನಬ್ಯಾಪ್ಟಿಸ್ಟರಲ್ಲಿ ಕೆಲವರನ್ನು ಮೆನೋ ಸಭೆಗಳಲ್ಲಿ ಒಟ್ಟುಗೂಡಿಸಿದನು. ಸ್ವಲ್ಪದರಲ್ಲೇ ಅವನು ಮತ್ತು ಅವನ ಹಿಂಬಾಲಕರು ಮೆನನೈಟರೆಂದು ಕರೆಸಿಕೊಳ್ಳಲಾರಂಭಿಸಿದರು.

ಇಂದು ಮೆನನೈಟರು

ಸಮಯ ಕಳೆದಂತೆ, ಹಿಂಸೆಯು ಸಾವಿರಾರು ಮಂದಿ ಮೆನನೈಟರನ್ನು ಪಶ್ಚಿಮ ಯೂರೋಪ್‌ನಿಂದ ಉತ್ತರ ಅಮೆರಿಕಕ್ಕೆ ಸ್ಥಳಾಂತರಿಸುವಂತೆ ಮಾಡಿತು. ಅಲ್ಲಿ ಅವರಿಗೆ ಸತ್ಯಕ್ಕಾಗಿರುವ ತಮ್ಮ ಅನ್ವೇಷಣೆಯನ್ನು ಮುಂದುವರಿಸಲು ಮತ್ತು ಇನ್ನೂ ಅನೇಕರಿಗೆ ತಮ್ಮ ಸಂದೇಶವನ್ನು ಹಬ್ಬಿಸಲು ಅವಕಾಶ ಸಿಕ್ಕಿತು. ಆದರೆ ಪ್ರಗತಿಪರವಾದ ಬೈಬಲ್‌ ಅಧ್ಯಯನ ಮತ್ತು ಸಾರ್ವಜನಿಕ ಸಾರುವಿಕೆಯ ವಿಷಯದಲ್ಲಿ ಅವರ ಪೂರ್ವಿಕರಿಗಿದ್ದ ಅತ್ಯುತ್ಸಾಹವು ಬಹುಮಟ್ಟಿಗೆ ಕಾಣೆಯಾಗಿತ್ತು. ಅಧಿಕಾಂಶ ಮಂದಿ ತ್ರಯೈಕ್ಯ, ಮಾನವ ಆತ್ಮದ ಅಮರತ್ವ ಹಾಗೂ ನರಕಾಗ್ನಿಯಂಥ ಬೈಬಲೇತರ ಬೋಧನೆಗಳಿಗೆ ಅಂಟಿಕೊಂಡರು. (ಪ್ರಸಂಗಿ 9:5; ಮಾರ್ಕ 12:29) ಇಂದು, ಮೆನನೈಟರ ಮಿಷನೆರಿ ಕೆಲಸಗಳು ಸೌವಾರ್ತಿಕ ಕೆಲಸಕ್ಕಿಂತಲೂ ಹೆಚ್ಚಾಗಿ ವೈದ್ಯಕೀಯ ಹಾಗೂ ಸಾಮಾಜಿಕ ಸೇವೆಗಳ ಮೇಲೆ ಗಮನವನ್ನು ಕೇಂದ್ರೀಕರಿಸುತ್ತವೆ.

ಈಗ 65 ದೇಶಗಳಲ್ಲಿ ಸುಮಾರು 13,00,000 ಮೆನನೈಟರು ಜೀವಿಸುತ್ತಿದ್ದಾರೆ ಎಂದು ಅಂದಾಜುಮಾಡಲಾಗಿದೆ. ಆದರೂ, ಶತಮಾನಗಳ ಹಿಂದೆ ಮೆನೋ ಸೈಮನ್ಸ್‌ ಪ್ರಲಾಪಿಸಿದಂತೆಯೇ ಪ್ರಸ್ತುತ ದಿನದ ಮೆನನೈಟರು ಸಹ ಐಕ್ಯಭಾವದ ಕೊರತೆಯ ವಿಷಯದಲ್ಲಿ ಪ್ರಲಾಪಿಸುತ್ತಾರೆ. ಒಂದನೆಯ ಲೋಕ ಯುದ್ಧದ ಸಮಯದಲ್ಲಿ, ಲೋಕದ ಹೋರಾಟಗಳ ಕುರಿತಾದ ಭಿನ್ನಾಭಿಪ್ರಾಯವು ದೊಡ್ಡ ವಿಭಜನೆಗಳನ್ನು ಉಂಟುಮಾಡಿತು. ಉತ್ತರ ಅಮೆರಿಕದಲ್ಲಿದ್ದ ಅನೇಕರು ಬೈಬಲ್‌ ಆಧಾರದಿಂದ ಮಿಲಿಟರಿ ಸೇವೆಯನ್ನು ನಿರಾಕರಿಸಿದರು. ಆದರೆ, ಮೆನನೈಟರ ಇತಿಹಾಸದ ಪೀಠಿಕೆ (ಇಂಗ್ಲಿಷ್‌) ಎಂಬ ಪುಸ್ತಕವು ಹೇಳುವುದು: “1914ರಷ್ಟಕ್ಕೆ, ಪಾಶ್ಚಾತ್ಯ ಯೂರೋಪಿನಲ್ಲಿದ್ದ ಮೆನನೈಟರ ಚರ್ಚುಗಳಿಗೆ ಮಿಲಿಟರಿ ಸೇವೆಯನ್ನು ನಿರಾಕರಿಸುವುದು ಬಹುತೇಕವಾಗಿ ಒಂದು ಐತಿಹಾಸಿಕ ಸ್ಮರಣೆಯಾಗಿಹೋಗಿತ್ತು.” ಇಂದು, ಮೆನನೈಟರ ಕೆಲವು ಗುಂಪುಗಳು, ಬಹಳಷ್ಟು ಮಟ್ಟಿಗೆ ಅಥವಾ ಕಡಿಮೆ ಮಟ್ಟಿಗೆ ಆಧುನಿಕ ವಿಧಗಳಿಗೆ ಹೊಂದಿಕೊಂಡಿವೆ. ಇನ್ನಿತರರು ಈಗಲೂ ತಮ್ಮ ಬಟ್ಟೆಗಳಿಗೆ ಗುಂಡಿಗಳನ್ನು ಉಪಯೋಗಿಸುವುದಕ್ಕೆ ಬದಲಾಗಿ ಹುಕ್‌ಗಳು ಮತ್ತು ಕುಣಿಕೆಗಳನ್ನು ಉಪಯೋಗಿಸುತ್ತಾರೆ ಹಾಗೂ ಪುರುಷರು ತಮ್ಮ ಗಡ್ಡಗಳನ್ನು ಬೋಳಿಸಬಾರದು ಎಂದು ನಂಬುತ್ತಾರೆ.

ಆಧುನಿಕ ಲೋಕದಿಂದ ಪ್ರತ್ಯೇಕವಾಗಿ ಇರುವ ನಿರ್ಧಾರವನ್ನು ಮಾಡಿದಂಥ ಮೆನನೈಟರ ಕೆಲವು ಗುಂಪುಗಳು, ಯಾವುದೇ ಅಡಚಣೆಯಿಲ್ಲದೆ ಜೀವಿಸುವಂತೆ ಸ್ಥಳಿಕ ಸರಕಾರಗಳು ಅನುಮತಿ ನೀಡಿರುವ ಸ್ಥಳಗಳಿಗೆ ತಮ್ಮ ಸಮುದಾಯಗಳನ್ನು ಸ್ಥಳಾಂತರಿಸಿವೆ. ಉದಾಹರಣೆಗೆ, ಬೊಲಿವಿಯದಲ್ಲಿ ಅಂದಾಜಿಗನುಸಾರ ಸುಮಾರು 38,000 ವಯಸ್ಕ ಮೆನನೈಟರು ದೂರ ದೂರದ ಅಸಂಖ್ಯಾತ ವಸಾಹತುಗಳಲ್ಲಿ ವಾಸಿಸುತ್ತಿದ್ದು, ನಡವಳಿಕೆಗೆ ಸಂಬಂಧಿಸಿದ ಬೇರೆ ಬೇರೆ ನಿಯಮಗಳನ್ನು ಪಾಲಿಸುತ್ತಾರೆ. ಕೆಲವು ವಸಾಹತುಗಳು ಮೋಟಾರು ವಾಹನಗಳನ್ನು ನಿಷೇಧಿಸುತ್ತವೆ, ಕೇವಲ ಕುದುರೆಗಳನ್ನು ಮತ್ತು ಗಾಡಿಗಳನ್ನು ಅನುಮತಿಸುತ್ತವೆ. ನಿರ್ದಿಷ್ಟ ವಸಾಹತುಗಳು ರೇಡಿಯೊ, ಟಿವಿ ಮತ್ತು ಸಂಗೀತವನ್ನು ನಿಷೇಧಿಸುತ್ತವೆ. ಕೆಲವು ವಸಾಹತುಗಳು ತಾವು ಜೀವಿಸುತ್ತಿರುವಂಥ ದೇಶದ ಭಾಷೆಯನ್ನು ಕಲಿಯುವುದನ್ನು ಸಹ ನಿಷೇಧಿಸುತ್ತವೆ. “ಉಪದೇಶಿಗಳು ನಮ್ಮನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವ ಕಾರಣಕ್ಕಾಗಿ ಅವರು ನಮಗೆ ಸ್ಪ್ಯಾನಿಷ್‌ ಭಾಷೆಯನ್ನು ಕಲಿಯಲು ಬಿಡುವುದಿಲ್ಲ” ಎಂದನು ಒಂದು ವಸಾಹತುವಿನ ನಿವಾಸಿಯೊಬ್ಬನು. ಅನೇಕರಿಗೆ ದಬ್ಬಾಳಿಕೆಗೆ ಒಳಗಾದ ಅನಿಸಿಕೆಯಾಗುತ್ತದೆ ಮತ್ತು ಅವರು ಸಮುದಾಯದಿಂದ ಬಹಿಷ್ಕರಿಸಲ್ಪಡುವ ಭಯದಿಂದ ಬದುಕುತ್ತಾರೆ. ಮೆನನೈಟರ ಸಮುದಾಯದ ಹೊರಗಿನ ಜೀವನವನ್ನು ಎಂದೂ ಅನುಭವಿಸಿರದಂಥ ಒಬ್ಬ ವ್ಯಕ್ತಿಗೆ ಬಹಿಷ್ಕಾರವು ಒಂದು ಭೀಕರ ಸಂಗತಿಯಾಗಿದೆ.

ಸತ್ಯದ ಬೀಜವು ಬಿತ್ತಲ್ಪಟ್ಟ ವಿಧ

ಇಂಥ ಸನ್ನಿವೇಶಗಳ ಕೆಳಗೆ, ಯೋಹಾನ್‌ ಎಂಬ ಹೆಸರಿನ ಒಬ್ಬ ಮೆನನೈಟ್‌ ರೈತನು ತನ್ನ ಪಕ್ಕದ ಮನೆಯವನ ಬಳಿ ಕಾವಲಿನಬುರುಜು ಪತ್ರಿಕೆಯ ಒಂದು ಪ್ರತಿಯನ್ನು ನೋಡಿದನು. ಯೋಹಾನ್‌ನ ಕುಟುಂಬವು ಕೆನಡದಿಂದ ಮೆಕ್ಸಿಕೋಗೆ ಮತ್ತು ಸಮಯಾನಂತರ ಬೊಲಿವಿಯಕ್ಕೆ ವಲಸೆ ಬಂದಿತ್ತು. ಆದರೆ ಯೋಹಾನ್‌ ಬೈಬಲ್‌ ಸತ್ಯಕ್ಕಾಗಿರುವ ತನ್ನ ಅನ್ವೇಷಣೆಯಲ್ಲಿ ಯಾವಾಗಲೂ ಸಹಾಯವನ್ನು ಬಯಸಿದ್ದನು. ಅವನು ಪಕ್ಕದ ಮನೆಯವನಿಂದ ಆ ಪತ್ರಿಕೆಯನ್ನು ಓದಲಿಕ್ಕಾಗಿ ಪಡೆದುಕೊಂಡನು.

ಸಮಯಾನಂತರ, ತನ್ನ ಜಮೀನಿನ ಉತ್ಪನ್ನಗಳನ್ನು ಮಾರಲಿಕ್ಕಾಗಿ ನಗರಕ್ಕೆ ಬಂದಿದ್ದಾಗ, ಮಾರುಕಟ್ಟೆಯಲ್ಲಿ ಕಾವಲಿನಬುರುಜು ಪತ್ರಿಕೆಯನ್ನು ನೀಡುತ್ತಿದ್ದ ಒಬ್ಬ ಸಾಕ್ಷಿಯನ್ನು ಯೋಹಾನ್‌ ಕಂಡನು. ಅವಳು ಜರ್ಮನ್‌ ಭಾಷೆಯನ್ನು ಮಾತಾಡುತ್ತಿದ್ದ ಒಬ್ಬ ಮಿಷನೆರಿಯ ಬಳಿಗೆ ಅವನನ್ನು ಕಳುಹಿಸಿದಳು, ಮತ್ತು ಸ್ವಲ್ಪದರಲ್ಲೇ ಯೋಹಾನ್‌ ಜರ್ಮನ್‌ ಭಾಷೆಯಲ್ಲಿ ಅಂಚೆಯ ಮೂಲಕ ಕಾವಲಿನಬುರುಜು ಪತ್ರಿಕೆಯನ್ನು ಪಡೆದುಕೊಳ್ಳತೊಡಗಿದನು. ಪ್ರತಿಯೊಂದು ಸಂಚಿಕೆಯನ್ನು ಜಾಗರೂಕತೆಯಿಂದ ಅಧ್ಯಯನಮಾಡಲಾಗುತ್ತಿತ್ತು ಮತ್ತು ಅವನ ವಸಾಹತುವಿನಲ್ಲಿದ್ದ ಒಂದು ಕುಟುಂಬದಿಂದ ಇನ್ನೊಂದು ಕುಟುಂಬಕ್ಕೆ ಅದನ್ನು ದಾಟಿಸಲಾಗುತ್ತಿತ್ತು; ಇಷ್ಟೆಲ್ಲ ಆಗುವುದರೊಳಗೆ ಆ ಪತ್ರಿಕೆಯು ಹರಿದುಹೋಗಿರುತ್ತಿತ್ತು. ಕೆಲವೊಮ್ಮೆ ಕುಟುಂಬಗಳು ಒಟ್ಟುಗೂಡಿ, ಮಧ್ಯರಾತ್ರಿಯ ವರೆಗೆ ಕಾವಲಿನಬುರುಜು ಪತ್ರಿಕೆಯ ಅಧ್ಯಯನಮಾಡುತ್ತಿದ್ದವು ಮತ್ತು ಕೊಡಲ್ಪಟ್ಟಿರುವ ಬೈಬಲ್‌ ವಚನಗಳನ್ನು ತೆರೆದುನೋಡುತ್ತಿದ್ದವು. ಲೋಕವ್ಯಾಪಕವಾಗಿ ದೇವರ ಚಿತ್ತವನ್ನು ಐಕ್ಯಭಾವದಿಂದ ಮಾಡುತ್ತಿರುವ ಏಕಮಾತ್ರ ಜನರು ಯೆಹೋವನ ಸಾಕ್ಷಿಗಳೇ ಆಗಿರಬೇಕೆಂದು ಯೋಹಾನ್‌ಗೆ ಮನದಟ್ಟಾಯಿತು. ಯೋಹಾನ್‌ ತೀರಿಹೋಗುವುದಕ್ಕೆ ಮುಂಚೆ ತನ್ನ ಹೆಂಡತಿ ಮಕ್ಕಳಿಗೆ ಹೇಳಿದ್ದು: “ನೀವು ಯಾವಾಗಲೂ ಕಾವಲಿನಬುರುಜು ಪತ್ರಿಕೆಯನ್ನು ಓದಬೇಕು. ಅದು ನಿಮಗೆ ಬೈಬಲನ್ನು ಅರ್ಥಮಾಡಿಕೊಳ್ಳಲು ಸಹಾಯಮಾಡುವುದು.”

ಯೋಹಾನ್‌ನ ಕುಟುಂಬದಲ್ಲಿ ಕೆಲವರು, ಬೈಬಲಿನಿಂದ ತಾವು ಕಲಿಯುತ್ತಿದ್ದ ವಿಷಯಗಳ ಕುರಿತು ತಮ್ಮ ನೆರೆಯವರೊಂದಿಗೆ ಮಾತಾಡಲಾರಂಭಿಸಿದರು. “ಈ ಭೂಮಿಯು ನಾಶಮಾಡಲ್ಪಡುವುದಿಲ್ಲ, ಬದಲಾಗಿ ದೇವರು ಅದನ್ನು ಪರದೈಸಾಗಿ ಮಾಡುವನು. ಮತ್ತು ದೇವರು ನರಕದಲ್ಲಿ ಜನರಿಗೆ ಚಿತ್ರಹಿಂಸೆ ನೀಡುವುದಿಲ್ಲ” ಎಂದು ಅವರು ಹೇಳುತ್ತಿದ್ದರು. ಈ ಸಂಭಾಷಣೆಗಳ ಕುರಿತಾದ ಸುದ್ದಿಯು ಚರ್ಚಿನ ಉಪದೇಶಿಗಳ ತನಕವೂ ತಲಪಿತು; ಅವರು ಯೋಹಾನ್‌ನ ಕುಟುಂಬಕ್ಕೆ ಬೆದರಿಕೆ ಹಾಕುತ್ತಾ, ಅವರು ಈ ರೀತಿಯ ಸಂಭಾಷಣೆಗಳನ್ನು ನಿಲ್ಲಿಸದಿರುವಲ್ಲಿ ಅವರನ್ನು ಬಹಿಷ್ಕರಿಸಬೇಕಾಗುತ್ತದೆಂದು ಹೇಳಿದರು. ಸಮಯಾನಂತರ, ಮೆನನೈಟ್‌ ಹಿರಿಯರು ತಮ್ಮ ಮೇಲೆ ಹೇರುತ್ತಿದ್ದ ಒತ್ತಡದ ಕುರಿತು ನಡೆಸಲ್ಪಡುತ್ತಿದ್ದ ಒಂದು ಕುಟುಂಬ ಚರ್ಚೆಯ ಸಮಯದಲ್ಲಿ ಒಬ್ಬ ಯೌವನಸ್ಥನು ತನ್ನ ಅಭಿಪ್ರಾಯವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದನು. ಅವನಂದದ್ದು: “ನಮ್ಮ ಚರ್ಚ್‌ ಹಿರಿಯರ ಬಗ್ಗೆ ನಾವು ಏಕೆ ದೂರುಹೊರಿಸುತ್ತೇವೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಸತ್ಯ ಧರ್ಮ ಯಾವುದು ಎಂಬುದು ನಮಗೆಲ್ಲರಿಗೂ ತಿಳಿದಿದೆ, ಆದರೆ ನಾವು ಅದರ ಕುರಿತು ಏನನ್ನೂ ಮಾಡಿಲ್ಲ.” ಈ ಮಾತುಗಳು ಆ ಯೌವನಸ್ಥನ ತಂದೆಯ ಹೃದಯದ ಮೇಲೆ ಪರಿಣಾಮ ಬೀರಿದವು. ಸ್ವಲ್ಪದರಲ್ಲೇ ಆ ಕುಟುಂಬದ ಹತ್ತು ಮಂದಿ, ಯೆಹೋವನ ಸಾಕ್ಷಿಗಳನ್ನು ಹುಡುಕಲಿಕ್ಕಾಗಿ ಗುಪ್ತವಾದ ಪ್ರಯಾಣವನ್ನು ಆರಂಭಿಸಿದರು ಮತ್ತು ಆರಂಭದಲ್ಲಿ ತಿಳಿಸಲ್ಪಟ್ಟಂತೆ ಮಿಷನೆರಿಗಳ ಮನೆಗೆ ಬಂದು ತಲಪಿದರು.

ಮರುದಿನ, ವಸಾಹತುವಿನಲ್ಲಿರುವ ತಮ್ಮ ಹೊಸ ಸ್ನೇಹಿತರನ್ನು ಸಂದರ್ಶಿಸಲಿಕ್ಕಾಗಿ ಮಿಷನೆರಿಗಳು ಅಲ್ಲಿಗೆ ಹೋದರು. ರಸ್ತೆಯಲ್ಲಿದ್ದ ಏಕಮಾತ್ರ ಮೋಟಾರು ವಾಹನ ಈ ಮಿಷನೆರಿಗಳದ್ದಾಗಿತ್ತು. ಕುದುರೆಗಾಡಿಗಳನ್ನು ಹಿಂದೆಹಾಕುತ್ತಾ ಅವರು ನಿಧಾನವಾಗಿ ಪ್ರಯಾಣಿಸುತ್ತಿದ್ದಾಗ, ಸ್ಥಳಿಕ ನಿವಾಸಿಗಳನ್ನು ನೋಡುವುದು ಮಿಷನೆರಿಗಳಿಗೆ ಆಸಕ್ತಿದಾಯಕವಾಗಿತ್ತು ಮತ್ತು ಮಿಷನೆರಿಗಳನ್ನು ನೋಡುವುದು ಸ್ಥಳಿಕ ನಿವಾಸಿಗಳಿಗೆ ಆಸಕ್ತಿದಾಯಕವಾಗಿತ್ತು. ತದನಂತರ ಅವರು ಎರಡು ಕುಟುಂಬಗಳನ್ನು ಪ್ರತಿನಿಧಿಸುತ್ತಿದ್ದ ಹತ್ತು ಮಂದಿ ಮೆನನೈಟರೊಂದಿಗೆ ಒಂದು ಮೇಜಿನ ಬಳಿ ಕುಳಿತುಕೊಂಡರು.

ಆ ದಿನ, ನಿತ್ಯಜೀವಕ್ಕೆ ನಡೆಸುವ ಜ್ಞಾನ ಪುಸ್ತಕದ 1ನೆಯ ಅಧ್ಯಾಯವನ್ನು ಅಧ್ಯಯನಮಾಡಲು ನಾಲ್ಕು ತಾಸುಗಳು ಹಿಡಿದವು. * ಪ್ರತಿಯೊಂದು ಪ್ಯಾರಗ್ರಾಫ್‌ನಲ್ಲಿ ಕೊಡಲ್ಪಟ್ಟಿರುವ ಹೆಚ್ಚಿನ ಬೈಬಲ್‌ ವಚನಗಳನ್ನು ರೈತರು ತೆರೆದುನೋಡಿದ್ದರು ಮತ್ತು ತಾವು ಸರಿಯಾದ ರೀತಿಯಲ್ಲಿ ವಚನಗಳನ್ನು ಅರ್ಥಮಾಡಿಕೊಳ್ಳುತ್ತಿದ್ದೇವೋ ಎಂಬುದನ್ನು ತಿಳಿಯಲು ಬಯಸಿದರು. ಪ್ರತಿಯೊಂದು ಅಧ್ಯಯನ ಪ್ರಶ್ನೆಯ ಬಳಿಕ, ಕೆಲವು ನಿಮಿಷಗಳ ಮೌನವಿರುತ್ತಿತ್ತು, ಈ ಮಧ್ಯೆ ಲೊ ಜರ್ಮನ್‌ ಭಾಷೆಯಲ್ಲಿ ರೈತರು ಪರಸ್ಪರ ಮಾತಾಡಿಕೊಳ್ಳುತ್ತಿದ್ದರು ಮತ್ತು ಕೊನೆಯದಾಗಿ ಒಬ್ಬ ಪ್ರತಿನಿಧಿಯು ಸ್ಪ್ಯಾನಿಷ್‌ ಭಾಷೆಯಲ್ಲಿ ಈ ಗುಂಪಿನ ಪರವಾಗಿ ಉತ್ತರಿಸುತ್ತಿದ್ದನು. ಅದು ಒಂದು ಸ್ಮರಣೀಯ ದಿನವಾಗಿತ್ತಾದರೂ, ತೊಂದರೆಯ ಅಲೆಯೊಂದು ಸನ್ನಿಹಿತವಾಗಿತ್ತು. ಸುಮಾರು ಐದು ಶತಮಾನಗಳ ಹಿಂದೆ ಬೈಬಲ್‌ ಸತ್ಯಕ್ಕಾಗಿರುವ ತನ್ನ ಅನ್ವೇಷಣೆಯನ್ನು ಮೆನೋ ಸೈಮನ್ಸ್‌ ಆರಂಭಿಸಿದಾಗ ಹೇಗೆ ಪರೀಕ್ಷೆಗಳನ್ನು ಎದುರಿಸಿದ್ದನೋ ಹಾಗೆಯೇ ಇವರು ಸಹ ಪರೀಕ್ಷೆಗಳನ್ನು ಎದುರಿಸಲಿಕ್ಕಿದ್ದರು.

ಸತ್ಯಕ್ಕೋಸ್ಕರ ಪರೀಕ್ಷೆಗಳನ್ನು ಎದುರಿಸುವುದು

ಕೆಲವು ದಿನಗಳ ಬಳಿಕ, ಚರ್ಚಿನ ಹಿರಿಯರು ಯೋಹಾನ್‌ನ ಕುಟುಂಬದ ಮನೆಗೆ ಬಂದು, ಆಸಕ್ತ ಜನರ ವಿಷಯದಲ್ಲಿ ಈ ಬೆದರಿಕೆಯನ್ನೊಡ್ಡಿದರು: “ಯೆಹೋವನ ಸಾಕ್ಷಿಗಳು ನಿಮ್ಮನ್ನು ಸಂದರ್ಶಿಸಿದ್ದಾರೆ ಎಂಬುದು ನಮ್ಮ ಕಿವಿಗೆ ಬಿದ್ದಿದೆ. ಅವರು ಪುನಃ ಬರುವುದು ಬೇಡವೆಂದು ನೀವು ಅವರಿಗೆ ಹೇಳಬೇಕು, ಮತ್ತು ಅವರ ಸಾಹಿತ್ಯವನ್ನು ಸುಟ್ಟುಹಾಕಲಿಕ್ಕಾಗಿ ಅವುಗಳನ್ನು ನೀವು ನಮ್ಮ ವಶಕ್ಕೆ ಒಪ್ಪಿಸದೆ ಹೋದರೆ ನಿಮ್ಮನ್ನು ಬಹಿಷ್ಕರಿಸಬೇಕಾಗುತ್ತದೆ.” ಅವರು ಸಾಕ್ಷಿಗಳೊಂದಿಗೆ ಕೇವಲ ಒಂದು ಬೈಬಲ್‌ ಅಧ್ಯಯನವನ್ನು ನಡೆಸಿದ್ದರಷ್ಟೆ. ಆದರೆ ಇದು ತಾನೇ ಭೀಕರ ಪರೀಕ್ಷೆಯನ್ನು ತಂದೊಡ್ಡಿತು.

ಇದಕ್ಕೆ ಕುಟುಂಬದ ಹಿರಿಯರಲ್ಲಿ ಒಬ್ಬನು ಉತ್ತರಿಸಿದ್ದು: “ನೀವು ಹೇಳಿದಂತೆ ನಾವು ಮಾಡಲು ಸಾಧ್ಯವಿಲ್ಲ. ಆ ಜನರು ನಮ್ಮ ಬಳಿಗೆ ಬಂದದ್ದು ಬೈಬಲಿನ ಕುರಿತು ಕಲಿಸಲಿಕ್ಕಾಗಿಯೇ.” ಚರ್ಚಿನ ಹಿರಿಯರು ಹೇಗೆ ಪ್ರತಿಕ್ರಿಯಿಸಿದರು? ಬೈಬಲ್‌ ಅಧ್ಯಯನಮಾಡಿದ್ದಕ್ಕಾಗಿ ಅವರನ್ನು ಬಹಿಷ್ಕರಿಸಿದರು! ನಿಜವಾಗಿಯೂ ಇದು ಒಂದು ಗಂಭೀರ ಹೊಡೆತವಾಗಿತ್ತು. ವಸಾಹತುವಿಗೆ ಸೇರಿದ್ದ ಚೀಸ್‌ ಫ್ಯಾಕ್ಟರಿಯ ಬಂಡಿಯು ಒಂದು ಕುಟುಂಬದ ಮನೆಯ ಮುಂದಿನಿಂದ ಹಾದುಹೋಯಿತು, ಆದರೆ ಆ ಮನೆಯಿಂದ ಹಾಲನ್ನು ಸ್ವೀಕರಿಸಲಿಲ್ಲ. ಇದು ಅವರ ಆದಾಯದ ಏಕಮಾತ್ರ ಮೂಲವು ಕೈತಪ್ಪಿಹೋಗುವಂತೆ ಮಾಡಿತು. ಒಂದು ಕುಟುಂಬದ ಯಜಮಾನನನ್ನು ಕೆಲಸದಿಂದ ತೆಗೆದುಹಾಕಲಾಯಿತು. ಇನ್ನೊಬ್ಬನಿಗೆ ವಸಾಹತುವಿನ ಅಂಗಡಿಯಲ್ಲಿ ಸಾಮಾನುಗಳನ್ನು ಕೊಂಡುಕೊಳ್ಳುವ ಅನುಮತಿಯು ರದ್ದುಗೊಳಿಸಲ್ಪಟ್ಟಿತು ಮತ್ತು ಅವನ ಹತ್ತು ವರ್ಷದ ಮಗಳನ್ನು ಶಾಲೆಯಿಂದ ಹೊರಹಾಕಲಾಯಿತು. ಒಬ್ಬ ಯೌವನಸ್ಥನ ಪತ್ನಿಯನ್ನು ಪತಿಯಿಂದ ದೂರಮಾಡಲಿಕ್ಕಾಗಿ ಪ್ರಯತ್ನಿಸುತ್ತಾ ನೆರೆಹೊರೆಯವರು ಆ ಮನೆಯನ್ನು ಮುತ್ತಿದ್ದರು. ತನ್ನ ಬಹಿಷ್ಕೃತ ಗಂಡನೊಂದಿಗೆ ಅವಳು ಜೀವಿಸಬಾರದು ಎಂಬುದು ಅವರ ವಾದವಾಗಿತ್ತು. ಇಷ್ಟೆಲ್ಲ ಕಷ್ಟಹಿಂಸೆಗಳ ಮಧ್ಯೆಯೂ, ಬೈಬಲ್‌ ಅಧ್ಯಯನಮಾಡುತ್ತಿದ್ದ ಕುಟುಂಬಗಳವರು ಸತ್ಯಕ್ಕಾಗಿರುವ ತಮ್ಮ ಅನ್ವೇಷಣೆಯನ್ನು ನಿಲ್ಲಿಸಲಿಲ್ಲ.

ಮಿಷನೆರಿಗಳು ಅವರೊಂದಿಗೆ ಬೈಬಲ್‌ ಅಧ್ಯಯನಮಾಡಲಿಕ್ಕಾಗಿ ವಾರಕ್ಕೆ ಒಮ್ಮೆ ದೀರ್ಘ ಪ್ರಯಾಣಮಾಡುವುದನ್ನು ಮುಂದುವರಿಸಿದರು. ಆ ಕುಟುಂಬಗಳು ಈ ಅಧ್ಯಯನಗಳನ್ನು ಆಧ್ಯಾತ್ಮಿಕವಾಗಿ ಎಷ್ಟು ಬಲದಾಯಕವಾದದ್ದಾಗಿ ಕಂಡುಕೊಂಡರು! ಅಧ್ಯಯನಕ್ಕೆ ಹಾಜರಾಗಲಿಕ್ಕಾಗಿ ಕೆಲವು ಕುಟುಂಬದ ಸದಸ್ಯರು ಕುದುರೆ ಮತ್ತು ಗಾಡಿಯಲ್ಲಿ ಎರಡು ತಾಸುಗಳಷ್ಟು ಪ್ರಯಾಣಿಸುತ್ತಿದ್ದರು. ಒಂದು ಸಂದರ್ಭದಲ್ಲಿ ಮಿಷನೆರಿಗಳಲ್ಲಿ ಒಬ್ಬರು ಪ್ರಾರ್ಥಿಸುವಂತೆ ಆ ಕುಟುಂಬಗಳು ಪ್ರಥಮ ಬಾರಿಗೆ ಕೇಳಿಕೊಂಡಾಗ ಅದು ನಿಜವಾಗಿಯೂ ಹೃದಯಪ್ರಚೋದಕ ಸನ್ನಿವೇಶವಾಗಿತ್ತು. ಈ ವಸಾಹತುಗಳಲ್ಲಿ ಮೆನನೈಟರು ಎಂದೂ ಗಟ್ಟಿಯಾಗಿ ಪ್ರಾರ್ಥಿಸುತ್ತಿರಲಿಲ್ಲ, ಆದುದರಿಂದ ಬೇರೊಬ್ಬರು ತಮ್ಮ ಪರವಾಗಿ ಪ್ರಾರ್ಥಿಸುವುದನ್ನು ಅವರು ಈ ಮುಂಚೆ ಎಂದೂ ಕೇಳಿಸಿಕೊಂಡಿರಲಿಲ್ಲ. ಪುರುಷರ ಕಣ್ಣುಗಳಲ್ಲಿ ಕಂಬನಿ ತುಂಬಿತ್ತು. ಮತ್ತು ಮಿಷನೆರಿಗಳು ತಮ್ಮೊಂದಿಗೆ ಒಂದು ಟೇಪ್‌ರೆಕಾರ್ಡರ್‌ ತೆಗೆದುಕೊಂಡು ಹೋದಾಗ ಅವರಿಗಾದ ಕುತೂಹಲವನ್ನು ನೀವು ಊಹಿಸಿಕೊಳ್ಳಬಲ್ಲಿರೊ? ಅವರ ವಸಾಹತುವಿನಲ್ಲಿ ಸಂಗೀತವು ಎಂದೂ ಅನುಮತಿಸಲ್ಪಟ್ಟಿರಲಿಲ್ಲ. ಇಂಪಾದ ರಾಜ್ಯ ಸಂಗೀತದಿಂದ ಅವರೆಷ್ಟು ಹರ್ಷಗೊಂಡರೆಂದರೆ, ಅವರು ಪ್ರತಿಯೊಂದು ಅಧ್ಯಯನದ ಬಳಿಕ ರಾಜ್ಯ ಗೀತೆಗಳನ್ನು ಹಾಡಲು ನಿರ್ಧರಿಸಿದರು! ಆದರೂ, ತಮ್ಮ ಹೊಸ ಸನ್ನಿವೇಶಗಳಲ್ಲಿ ಅವರು ಹೇಗೆ ಬದುಕುತ್ತಾರೆ? ಎಂಬ ಪ್ರಶ್ನೆಯು ಹಾಗೆಯೇ ಉಳಿಯಿತು.

ಪ್ರೀತಿಭರಿತ ಸಹೋದರರ ಬಳಗವನ್ನು ಕಂಡುಕೊಳ್ಳುವುದು

ಸಮುದಾಯದಿಂದ ಪ್ರತ್ಯೇಕಗೊಂಡ ಕುಟುಂಬಗಳು, ತಮ್ಮ ಸ್ವಂತ ಚೀಸನ್ನು ತಯಾರಿಸತೊಡಗಿದವು. ಅವರು ಗಿರಾಕಿಗಳನ್ನು ಕಂಡುಕೊಳ್ಳುವಂತೆ ಮಿಷನೆರಿಗಳು ಸಹಾಯಮಾಡಿದರು. ದಕ್ಷಿಣ ಅಮೆರಿಕದ ಮೆನನೈಟರ ವಸಾಹತುವಿನಲ್ಲಿ ಬೆಳೆಸಲ್ಪಟ್ಟಿದ್ದು, ಉತ್ತರ ಅಮೆರಿಕದಲ್ಲಿ ದೀರ್ಘ ಸಮಯದಿಂದ ಸಾಕ್ಷಿಯಾಗಿದ್ದ ಒಬ್ಬನಿಗೆ ಈ ಕುಟುಂಬಗಳ ದುರವಸ್ಥೆಯ ವಿಷಯವು ಕಿವಿಗೆ ಬಿತ್ತು. ಇವರಿಗೆ ಸಹಾಯಮಾಡುವ ವಿಶೇಷ ಬಯಕೆ ಅವನಿಗಿತ್ತು. ಒಂದೇ ವಾರದೊಳಗೆ, ಇವರನ್ನು ಸಂದರ್ಶಿಸಲಿಕ್ಕಾಗಿ ಅವನು ವಿಮಾನದಲ್ಲಿ ಬೊಲಿವಿಯಕ್ಕೆ ಆಗಮಿಸಿದನು. ಈ ಕುಟುಂಬಗಳವರಿಗೆ ಹೆಚ್ಚಿನ ಆಧ್ಯಾತ್ಮಿಕ ಉತ್ತೇಜನವನ್ನು ಒದಗಿಸುವುದರೊಂದಿಗೆ, ಅವರು ತಮ್ಮ ಸ್ವಂತ ಟ್ರಕ್ಕನ್ನು ಖರೀದಿಸುವಂತೆ ಸಹಾಯಮಾಡಿದನು. ಇದರಿಂದಾಗಿ ಅವರು ರಾಜ್ಯ ಸಭಾಗೃಹದಲ್ಲಿನ ಕೂಟಗಳಿಗೆ ಹೋಗಲು ಮತ್ತು ತಮ್ಮ ಜಮೀನಿನ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು ಸಾಧ್ಯವಾಯಿತು.

ಒಂದು ಕುಟುಂಬದ ಸದಸ್ಯನೊಬ್ಬನು ಜ್ಞಾಪಿಸಿಕೊಳ್ಳುವುದು: “ಸಮುದಾಯದಿಂದ ಬಹಿಷ್ಕರಿಸಲ್ಪಟ್ಟ ಬಳಿಕ ಜೀವನ ತುಂಬ ಕಷ್ಟಕರವಾಗಿತ್ತು. ನಾವು ದುಃಖಭರಿತ ಮುಖಗಳೊಂದಿಗೆ ರಾಜ್ಯ ಸಭಾಗೃಹಕ್ಕೆ ಪ್ರಯಾಣಿಸುತ್ತಿದ್ದೆವು, ಆದರೆ ಆನಂದಭರಿತರಾಗಿ ಹಿಂದಿರುಗುತ್ತಿದ್ದೆವು.” ವಾಸ್ತವದಲ್ಲಿ, ಸ್ಥಳಿಕ ಸಾಕ್ಷಿಗಳು ಬೆಂಬಲ ನೀಡಲು ಸಜ್ಜಾದರು ಮತ್ತು ಸಹಾಯವನ್ನು ಒದಗಿಸಿದರು. ಕೆಲವರು ಜರ್ಮನ್‌ ಭಾಷೆಯನ್ನು ಕಲಿತರು ಮತ್ತು ಜರ್ಮನ್‌ ಭಾಷೆಯನ್ನು ಮಾತಾಡುವಂಥ ಅನೇಕ ಸಾಕ್ಷಿಗಳು ಯೂರೋಪ್‌ನಿಂದ ಬೊಲಿವಿಯಕ್ಕೆ ಬಂದರು ಹಾಗೂ ಜರ್ಮನ್‌ ಭಾಷೆಯಲ್ಲಿ ಕ್ರೈಸ್ತ ಕೂಟಗಳನ್ನು ನಡೆಸಲು ನೆರವು ನೀಡಿದರು. ಸ್ವಲ್ಪದರಲ್ಲೇ, ಮೆನನೈಟರ ಸಮುದಾಯದ 14 ಮಂದಿ ಇತರರಿಗೆ ರಾಜ್ಯದ ಸುವಾರ್ತೆಯನ್ನು ಸಾರತೊಡಗಿದರು.

ಇಸವಿ 2001ರ ಅಕ್ಟೋಬರ್‌ 12ರಂದು, ಅಂದರೆ ಮಿಷನೆರಿಗಳ ಮನೆಗೆ ಆ್ಯನಬ್ಯಾಪ್ಟಿಸ್ಟರು ಪ್ರಥಮವಾಗಿ ಭೇಟಿ ನೀಡಿದ ಒಂದು ವರ್ಷಕ್ಕಿಂತ ಕಡಿಮೆ ಸಮಾಯವಧಿಯ ಬಳಿಕ, ಈ ಮಾಜಿ ಆ್ಯನಬ್ಯಾಪ್ಟಿಸ್ಟರಲ್ಲಿ 11 ಮಂದಿ ಪುನಃ ದೀಕ್ಷಾಸ್ನಾನ ಪಡೆದುಕೊಂಡರು​—⁠ಆದರೆ ಈ ಬಾರಿ ಯೆಹೋವನಿಗೆ ತಮ್ಮ ಸಮರ್ಪಣೆಯ ಸಂಕೇತವಾಗಿ. ಅಂದಿನಿಂದ, ಇನ್ನೂ ಹೆಚ್ಚಿನವರು ದೀಕ್ಷಾಸ್ನಾನ ಪಡೆದುಕೊಂಡಿದ್ದಾರೆ. ಸಮಯಾನಂತರ ಒಬ್ಬನು ಹೇಳಿದ್ದು: “ನಾವು ಬೈಬಲಿನಿಂದ ಸತ್ಯವನ್ನು ಕಲಿತಿರುವುದರಿಂದ, ಬಿಡುಗಡೆಯನ್ನು ಪಡೆದ ದಾಸರಂಥ ಅನಿಸಿಕೆ ನಮಗಾಗಿದೆ.” ಇನ್ನೊಬ್ಬನು ಹೇಳಿದ್ದು: “ತಮ್ಮ ಸಮುದಾಯದಲ್ಲಿ ಪ್ರೀತಿಯ ಕೊರತೆಯಿದೆ ಎಂದು ಅನೇಕ ಮೆನನೈಟರು ದೂರುತ್ತಾರೆ. ಆದರೆ ಯೆಹೋವನ ಸಾಕ್ಷಿಗಳು ಪರಸ್ಪರರಲ್ಲಿ ಆಸಕ್ತಿ ತೋರಿಸುತ್ತಾರೆ. ಅವರ ನಡುವೆ ನನಗೆ ಸುರಕ್ಷಿತವಾದ ಅನಿಸಿಕೆಯಾಗುತ್ತದೆ.” ನೀವು ಬೈಬಲಿನಿಂದ ಸತ್ಯದ ಹೆಚ್ಚು ಉತ್ತಮವಾದ ತಿಳಿವಳಿಕೆಯ ಅನ್ವೇಷಣೆಯನ್ನು ಮಾಡುತ್ತಿರುವಲ್ಲಿ, ನೀವು ಸಹ ಕಷ್ಟಗಳನ್ನು ಎದುರಿಸಬಹುದು. ಆದರೆ ನೀವು ಯೆಹೋವನ ಸಹಾಯವನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಾ, ಈ ಕುಟುಂಬಗಳಂತೆ ನಂಬಿಕೆ ಮತ್ತು ಧೈರ್ಯವನ್ನು ತೋರಿಸುವಲ್ಲಿ ನೀವು ಸಹ ಯಶಸ್ಸನ್ನು ಪಡೆದುಕೊಳ್ಳುವಿರಿ ಹಾಗೂ ಸಂತೋಷವನ್ನು ಕಂಡುಕೊಳ್ಳುವಿರಿ.

[ಪಾದಟಿಪ್ಪಣಿ]

^ ಪ್ಯಾರ. 17 ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟದ್ದು.

[ಪುಟ 25ರಲ್ಲಿರುವ ಚಿತ್ರ]

ಜರ್ಮನ್‌ ಭಾಷೆಯಲ್ಲಿ ಬೈಬಲ್‌ ಸಾಹಿತ್ಯವನ್ನು ಪಡೆದುಕೊಳ್ಳುತ್ತಿರುವುದಕ್ಕೆ ಸಂತೋಷಭರಿತ ಪ್ರತಿಕ್ರಿಯೆ

[ಪುಟ 26ರಲ್ಲಿರುವ ಚಿತ್ರ]

ಸಂಗೀತವು ಯಾವಾಗಲೂ ನಿಷೇಧಿಸಲ್ಪಟ್ಟಿತ್ತಾದರೂ, ಈಗ ಅವರು ಪ್ರತಿಯೊಂದು ಬೈಬಲ್‌ ಅಧ್ಯಯನದ ಬಳಿಕ ಹಾಡುತ್ತಾರೆ