ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

‘ತಾನೊಬ್ಬನೇ ಅಮರತ್ವವುಳ್ಳವನು’ “ಮನುಷ್ಯರಲ್ಲಿ ಯಾರೂ ಆತನನ್ನು ಕಾಣಲಿಲ್ಲ, ಯಾರೂ ಕಾಣಲಾರರು” ಎಂಬಂಥ ವಾಕ್ಸರಣಿಗಳು ಯೆಹೋವ ದೇವರಿಗೆ ಬದಲಾಗಿ ಯೇಸುವಿಗೆ ಸೂಚಿಸುತ್ತವೆ ಎಂದು ಹೇಳಲು ಯಾವ ಆಧಾರವಿದೆ?

ಅಪೊಸ್ತಲ ಪೌಲನು ಬರೆದದ್ದು: “ಆ ಏಕಾಧಿಪತಿಯು ರಾಜಾಧಿರಾಜನೂ ಕರ್ತರ ಕರ್ತನೂ ತಾನೊಬ್ಬನೇ ಅಮರತ್ವವುಳ್ಳವನೂ ಅಗಮ್ಯವಾದ ಬೆಳಕಿನಲ್ಲಿ ವಾಸಮಾಡುವವನೂ ಆಗಿದ್ದಾನೆ; ಮನುಷ್ಯರಲ್ಲಿ ಯಾರೂ ಆತನನ್ನು ಕಾಣಲಿಲ್ಲ, ಯಾರೂ ಕಾಣಲಾರರು.”​—⁠1 ತಿಮೊಥೆಯ 6:16.

ಬೈಬಲ್‌ ವ್ಯಾಖ್ಯಾನಕಾರರು ಸಾಮಾನ್ಯವಾಗಿ ಹೀಗೆ ತರ್ಕಿಸುತ್ತಾರೆ: ‘“ತಾನೊಬ್ಬನೇ ಅಮರತ್ವವುಳ್ಳವನು,” “ಏಕಾಧಿಪತಿ” ಮತ್ತು “ಮನುಷ್ಯರಲ್ಲಿ ಯಾರೂ ಆತನನ್ನು ಕಾಣಲಿಲ್ಲ, ಯಾರೂ ಕಾಣಲಾರರು” ಎಂಬ ವಾಕ್ಸರಣಿಗಳು ಸರ್ವಶಕ್ತನಿಗಲ್ಲದೆ ಇನ್ನಾರಿಗೆ ಸೂಚಿಸಬಲ್ಲವು?’ ಇಂತಹ ವಾಕ್ಸರಣಿಗಳು ಯೆಹೋವನನ್ನು ವರ್ಣಿಸಲಿಕ್ಕಾಗಿ ಉಪಯೋಗಿಸಲ್ಪಡಸಾಧ್ಯವಿದೆ ಎಂಬುದು ಒಪ್ಪಿಕೊಳ್ಳತಕ್ಕ ಮಾತು. ಆದರೆ, 1 ತಿಮೊಥೆಯ 6:16ರಲ್ಲಿ ಪೌಲನು ನಿರ್ದಿಷ್ಟವಾಗಿ ಯೇಸುವಿನ ವಿಷಯವಾಗಿ ಮಾತಾಡುತ್ತಿದ್ದನು ಎಂಬುದಕ್ಕೆ ಆ ವಚನದ ನಿಷ್ಕೃಷ್ಟವಾಗಿ ನಿರೂಪಿಸಲ್ಪಟ್ಟ ಪೂರ್ವಾಪರವು ಕೈತೋರಿಸುತ್ತದೆ.

ಹದಿನಾಲ್ಕನೆಯ ವಚನದ ಆರಂಭದಲ್ಲಿ ಪೌಲನು, “ನಮ್ಮ ಕರ್ತನಾದ ಯೇಸುಕ್ರಿಸ್ತನು ಪ್ರತ್ಯಕ್ಷನಾಗುವ” ವಿಷಯದ ಕುರಿತು ಮಾತಾಡುತ್ತಾನೆ. (1 ತಿಮೊಥೆಯ 6:14) ಸತ್ಯವೇದವು 15ನೆಯ ವಚನವನ್ನು, “ಭಾಗ್ಯವಂತನಾದ ಏಕಾಧಿಪತಿಯು ತನ್ನ ಕ್ಲುಪ್ತ ಸಮಯದಲ್ಲೇ ಆತನನ್ನು ಪ್ರತ್ಯಕ್ಷಪಡಿಸುವನು” ಎಂದು ಹೇಳುವ ಮೂಲಕ ಇಬ್ಬರು ವ್ಯಕ್ತಿಗಳನ್ನು ಪರಿಚಯಪಡಿಸುವಂತೆ ತೋರುತ್ತದೆ. ಹೀಗೆ 16ನೆಯ ವಚನದಲ್ಲಿ ಕಂಡುಬರುವ ವಾಕ್ಸರಣಿಗಳು ದೇವರಿಗೆ ಸೂಚಿಸುವಂತಿವೆ. ಆದರೆ ಮೂಲ ಗ್ರಂಥಪಾಠವು ದೇವರನ್ನು ಚಿತ್ರಣದಲ್ಲಿ ತರುವುದೇ ಇಲ್ಲ; ಬದಲಿಗೆ ಯೇಸು ಕ್ರಿಸ್ತನ ಕುರಿತಾಗಿ ಮಾತ್ರ ಮಾತಾಡುತ್ತದೆ. ಹಾಗಾದರೆ ಪ್ರತ್ಯಕ್ಷವಾಗಲಿರುವ ಈ “ಏಕಾಧಿಪತಿಯು” ಯಾರು? ಪೌಲನು ಇಲ್ಲಿ ಸೂಚಿಸುತ್ತಿರುವ ಏಕಾಧಿಪತಿಯು ಯೇಸುವೇ ಆಗಿದ್ದಾನೆ ಎಂದು ಹೇಳುವುದು ನ್ಯಾಯಸಮ್ಮತವಾಗಿ ತೋರುತ್ತದೆ. ಏಕೆ? ಪೌಲನು ಯೇಸುವನ್ನು ಮಾನವ ಅರಸರೊಂದಿಗೆ ಹೋಲಿಸಿ ಮಾತಾಡುತ್ತಿದ್ದಾನೆ ಎಂಬುದು ಪೂರ್ವಾಪರದಿಂದ ವ್ಯಕ್ತವಾಗುತ್ತದೆ. ಪೌಲನು ಬರೆದಂತೆ, ಯೇಸು ವಾಸ್ತವದಲ್ಲಿ ಆಳುವ ಮನುಷ್ಯರ “ರಾಜಾಧಿರಾಜನೂ ಕರ್ತರ ಕರ್ತನೂ” ಆಗಿದ್ದಾನೆ. * ಹೌದು, ಅವರಿಗೆ ಹೋಲಿಸುವಾಗ ಯೇಸು “ಏಕಾಧಿಪತಿ”ಯಾಗಿದ್ದಾನೆ. ಯೇಸುವನ್ನು “ಸಕಲಜನಾಂಗ ಕುಲಭಾಷೆಗಳವರು . . . ಸೇವಿಸಲೆಂದು ಅವನಿಗೆ ದೊರೆತನವೂ ಘನತೆಯೂ ರಾಜ್ಯವೂ” ಕೊಡಲ್ಪಟ್ಟಿದೆ. (ದಾನಿಯೇಲ 7:14) ಯಾವ ಮಾನವ ಅಧಿಪತಿಯೂ ತನಗೆ ಆ ಕೀರ್ತಿ ಸಲ್ಲುತ್ತದೆಂದು ಹೇಳಸಾಧ್ಯವಿಲ್ಲ!

‘ತಾನೊಬ್ಬನೇ ಅಮರತ್ವವುಳ್ಳವನು’ ಎಂಬ ವಾಕ್ಸರಣಿಯ ಕುರಿತಾಗಿ ಏನು? ಇದು ಕೂಡ, ಯೇಸು ಮತ್ತು ಮಾನವ ರಾಜರುಗಳ ಮಧ್ಯೆ ಮಾಡಲ್ಪಟ್ಟಿರುವ ಒಂದು ಹೋಲಿಕೆಯಾಗಿದೆ. ಇಹಲೋಕದ ಯಾವ ನಾಯಕನೂ ತನಗೆ ಅಮರತ್ವವು ಕೊಡಲ್ಪಟ್ಟಿದೆ ಎಂದು ಹೇಳಲಾರನು, ಆದರೆ ಯೇಸುವಿಗೆ ಅದು ಕೊಡಲ್ಪಟ್ಟಿದೆ. ಪೌಲನು ಬರೆದುದು: “ಕ್ರಿಸ್ತನು ಸತ್ತ ಮೇಲೆ ಜೀವಿತನಾಗಿ ಎದ್ದು ಬಂದದರಿಂದ ಆತನು ಇನ್ನು ಮುಂದೆ ಸಾಯತಕ್ಕವನಲ್ಲ, ಮರಣವು ಇನ್ನೂ ಆತನನ್ನು ಆಳುವದಿಲ್ಲವೆಂದು ನಮಗೆ ತಿಳಿದದೆ.” (ರೋಮಾಪುರ 6:9) ಹೀಗೆ, ಬೈಬಲಿನಲ್ಲಿ ಅಮರತ್ವದ ಉಡುಗೊರೆಯನ್ನು ಪಡೆದುಕೊಂಡಿರುವ ವ್ಯಕ್ತಿ ಎಂದು ವರ್ಣಿಸಲ್ಪಟ್ಟಿರುವವರಲ್ಲಿ ಯೇಸು ಮೊದಲಿಗನಾಗಿದ್ದಾನೆ. ವಾಸ್ತವದಲ್ಲಿ, ಪೌಲನು ಈ ಪದಗಳನ್ನು ಬರೆದ ಸಮಯದಲ್ಲಿ, ಅನಶ್ವರ ಜೀವವನ್ನು ಪಡೆದುಕೊಂಡಿದ್ದ ಏಕಮಾತ್ರ ವ್ಯಕ್ತಿ ಯೇಸುವಾಗಿದ್ದನು.

ಯೆಹೋವನೊಬ್ಬನೇ ಅಮರತ್ವವುಳ್ಳವನು ಎಂದು ಪೌಲನು ಹೇಳುವುದು ತಪ್ಪಾಗಿರುತ್ತಿತ್ತು ಎಂಬುದನ್ನು ಮನಸ್ಸಿನಲ್ಲಿಡತಕ್ಕದ್ದು; ಏಕೆಂದರೆ ಈ ಪದಗಳನ್ನು ಅವನು ಬರೆದಾಗ ಯೇಸು ಸಹ ಅಮರತ್ವವುಳ್ಳವನಾಗಿದ್ದನು. ಆದರೆ ಮಾನವ ಅರಸರಿಗೆ ಹೋಲಿಸುವಾಗ ಯೇಸು ಒಬ್ಬನೇ ಅಮರತ್ವವುಳ್ಳವನು ಎಂದು ಪೌಲನು ಹೇಳಸಾಧ್ಯವಿತ್ತು.

ಮಾತ್ರವಲ್ಲದೆ, ಯೇಸು ಪುನರುತ್ಥಾನಗೊಳಿಸಲ್ಪಟ್ಟು ಸ್ವರ್ಗಕ್ಕೆ ಏರಿಹೋದ ಮೇಲೆ “ಮನುಷ್ಯರಲ್ಲಿ ಯಾರೂ ಆತನನ್ನು ಕಾಣಲಿಲ್ಲ, ಯಾರೂ ಕಾಣಲಾರರು” ಎಂದು ಅವನ ಕುರಿತಾಗಿ ಹೇಳುವುದು ಖಂಡಿತವಾಗಿಯೂ ಸತ್ಯವಾಗಿದೆ. ಯೇಸುವಿನ ಅಭಿಷಿಕ್ತ ಶಿಷ್ಯರು ಮರಣಪಟ್ಟು ಆತ್ಮಜೀವಿಗಳಾಗಿ ಸ್ವರ್ಗಕ್ಕೆ ಪುನರುತ್ಥಾನಗೊಳಿಸಲ್ಪಡುವಾಗ ಅವನನ್ನು ನೋಡುವರು ಎಂಬುದು ನಿಜವೇ. (ಯೋಹಾನ 17:24) ಆದರೆ ಭೂಮಿಯ ಮೇಲಿರುವ ಯಾವ ಮಾನವನೂ ಯೇಸುವನ್ನು ಅವನ ಮಹಿಮಾನ್ವಿತ ಸ್ಥಿತಿಯಲ್ಲಿ ನೋಡಲು ಸಾಧ್ಯವಿರುವುದಿಲ್ಲ. ಆದುದರಿಂದ, ಯೇಸುವಿನ ಪುನರುತ್ಥಾನ ಮತ್ತು ಸ್ವರ್ಗಾರೋಹಣದ ನಂತರ “ಮನುಷ್ಯರಲ್ಲಿ ಯಾರೂ” ಅವನನ್ನು ಕಂಡಿರುವುದಿಲ್ಲ ಎಂದು ಸತ್ಯವಾಗಿ ಹೇಳಸಾಧ್ಯವಿದೆ.

ಹೌದು, ಮೇಲ್ನೋಟಕ್ಕೆ 1 ತಿಮೊಥೆಯ 6:16ರಲ್ಲಿ ಕೊಡಲ್ಪಟ್ಟಿರುವ ವರ್ಣನೆಗಳು ದೇವರಿಗೆ ಅನ್ವಯಿಸುವಂತೆ ತೋರಬಹುದು. ಆದರೆ ಪೌಲನ ಮಾತುಗಳ ಪೂರ್ವಾಪರವು​—⁠ಮತ್ತು ಇತರ ವಚನಗಳ ದೃಢೀಕರಣಗಳು​—⁠ಪೌಲನು ಯೇಸುವಿಗೆ ಸೂಚಿಸಿ ಮಾತಾಡುತ್ತಿದ್ದನು ಎಂದು ತೋರಿಸುತ್ತದೆ.

[ಪಾದಟಿಪ್ಪಣಿ]

^ ಪ್ಯಾರ. 5 ಒಂದನೇ ಕೊರಿಂಥ 8:5, 6; ಪ್ರಕಟನೆ 17:12, 14; 19:16ರಲ್ಲಿ ತದ್ರೀತಿಯ ಅಭಿವ್ಯಕ್ತಿಗಳು ಯೇಸುವಿಗೆ ಅನ್ವಯಿಸಲ್ಪಟ್ಟಿವೆ.