ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಇತರರು ನಮ್ಮ ಬಗ್ಗೆ ಏನು ನೆನಸುತ್ತಾರೆ ಎಂಬುದು ಪ್ರಾಮುಖ್ಯವಾಗಿದೆಯೊ?

ಇತರರು ನಮ್ಮ ಬಗ್ಗೆ ಏನು ನೆನಸುತ್ತಾರೆ ಎಂಬುದು ಪ್ರಾಮುಖ್ಯವಾಗಿದೆಯೊ?

ಇತರರು ನಮ್ಮ ಬಗ್ಗೆ ಏನು ನೆನಸುತ್ತಾರೆ ಎಂಬುದು ಪ್ರಾಮುಖ್ಯವಾಗಿದೆಯೊ?

ಹೆಚ್ಚುಕಡಿಮೆ ಎಲ್ಲರೂ ಇತರರಿಂದ ಹೊಗಳಿಕೆಯನ್ನು ಪಡೆಯಲು ಬಯಸುತ್ತಾರೆ. ಹೊಗಳಿಕೆಯು ನಮ್ಮನ್ನು ಸಂತೋಷಗೊಳಿಸುತ್ತದೆ, ನಮ್ಮಲ್ಲಿ ಸಾಧನೆಯ ಭಾವನೆಯನ್ನು ಮೂಡಿಸುತ್ತದೆ. ನಮ್ಮ ಸಾಧನೆಗಾಗಿ ಮೆಚ್ಚಿಗೆಯು ದೊರೆತಾಗ ಇನ್ನಷ್ಟು ಪ್ರಗತಿಯನ್ನು ಮಾಡಬೇಕು ಎಂಬುದಾಗಿಯೂ ನಮಗನಿಸುತ್ತದೆ. ಆದರೆ ಯಾರಾದರೂ ನಮ್ಮನ್ನು ಅಸಮ್ಮತಿಸಿದರೆ, ತದ್ವಿರುದ್ಧವಾದ ಭಾವನೆಯು ಮೂಡಿಬರುತ್ತದೆ. ನಿರುತ್ಸಾಹದ ಪ್ರತಿಕ್ರಿಯೆ ಇಲ್ಲವೆ ಹೀನೈಸುವಿಕೆ ನಮ್ಮ ಮನಮುರಿಯುವಂತೆ ಮಾಡುತ್ತದೆ. ಇತರರು ನಮ್ಮ ಬಗ್ಗೆ ಏನು ನೆನಸುತ್ತಾರೊ ಅದು, ಸ್ವತಃ ನಮ್ಮ ಕುರಿತು ನಾವು ನೆನಸುವ ವಿಷಯಗಳ ಮೇಲೆ ಬಹಳ ಪ್ರಭಾವವನ್ನು ಬೀರಬಹುದು.

ಇತರರು ನಮ್ಮನ್ನು ಹೇಗೆ ವೀಕ್ಷಿಸುತ್ತಾರೆ ಎಂಬ ವಿಷಯವನ್ನು ಅಲಕ್ಷ್ಯಮಾಡುವುದು ತಪ್ಪಾಗಿದೆ. ನಮ್ಮ ನಡತೆಯನ್ನು ಇತರರು ಗಮನಿಸುವುದು ನಮಗೆ ನಿಜವಾಗಿಯೂ ಪ್ರಯೋಜನಕರವಾಗಿರಬಲ್ಲದು. ಇತರರ ಅಭಿಪ್ರಾಯಗಳು ಉನ್ನತ ನೈತಿಕ ಮೂಲತತ್ತ್ವಗಳಿಗೆ ಹೊಂದಿಕೆಯಲ್ಲಿರುವಾಗ, ಅವು ನಮ್ಮ ಪ್ರಯೋಜನಾರ್ಥವಾಗಿರುವವು ಮತ್ತು ನಾವು ಯೋಗ್ಯರಾಗಿ ನಡೆದುಕೊಳ್ಳುವಂತೆ ನಮ್ಮನ್ನು ಪ್ರೋತ್ಸಾಹಿಸುವವು. (1 ಕೊರಿಂಥ 10:​31-33) ಆದರೆ, ಅನೇಕವೇಳೆ ಸಾರ್ವಜನಿಕ ಅಭಿಪ್ರಾಯವು ತೀರ ತಪ್ಪಾಗಿರುತ್ತದೆ. ಉದಾಹರಣೆಗೆ, ಮಹಾಯಾಜಕರು ಮತ್ತು ಇತರರು ‘ಅವನನ್ನು ಶಿಲುಬೆಗೆ ಹಾಕಿಸು, ಶಿಲುಬೆಗೆ ಹಾಕಿಸು ಎಂದು ಕೂಗುತ್ತಿದ್ದಾಗ’ ಯೇಸು ಕ್ರಿಸ್ತನ ಕುರಿತು ಅವರಿಗಿದ್ದ ತಿರುಚಲ್ಪಟ್ಟ ದೃಷ್ಟಿಕೋನದ ಬಗ್ಗೆ ಆಲೋಚಿಸಿರಿ. (ಲೂಕ 23:​13, 21-25) ಸುಳ್ಳು ಮಾಹಿತಿಯ ಮೇಲಾಧಾರಿತವಾದ ಇಲ್ಲವೆ ಹೊಟ್ಟೆಕಿಚ್ಚು ಅಥವಾ ಪೂರ್ವಕಲ್ಪಿತ ಅಭಿಪ್ರಾಯದಿಂದ ಪ್ರಭಾವಿತವಾದ ದೃಷ್ಟಿಕೋನಗಳನ್ನು ಎರಡು ಮಾತಿಲ್ಲದೆ ತ್ಯಜಿಸಿಬಿಡಲೇ ಬೇಕಾದೀತು. ಆದುದರಿಂದ, ನಾವು ಉತ್ತಮ ವಿವೇಚನೆಯನ್ನು ಉಪಯೋಗಿಸಿ ಇತರರ ಅಭಿಪ್ರಾಯಗಳಿಗೆ ವಿವೇಕದಿಂದ ಪ್ರತಿಕ್ರಿಯಿಸಬೇಕು.

ಯಾರ ಅಭಿಪ್ರಾಯವು ಪ್ರಾಮುಖ್ಯವಾಗಿದೆ?

ಸತ್ಯಾರಾಧನೆಯಲ್ಲಿ ನಮಗೆ ಆಪ್ತರಾಗಿರುವವರ ಅಂಗೀಕಾರವು ನಮಗೆ ಬೇಕಾಗಿದೆ. ಇವರಲ್ಲಿ, ನಂಬಿಕೆಯಲ್ಲಿರುವ ನಮ್ಮ ಕುಟುಂಬ ಸದಸ್ಯರು ಮತ್ತು ಕ್ರೈಸ್ತ ಸಹೋದರ ಸಹೋದರಿಯರು ಒಳಗೂಡಿದ್ದಾರೆ. (ರೋಮಾಪುರ 15:2; ಕೊಲೊಸ್ಸೆ 3:​18-21) ಜೊತೆ ವಿಶ್ವಾಸಿಗಳ ಪ್ರೀತಿ ಮತ್ತು ಗೌರವವು ಹಾಗೂ ಅವರೊಂದಿಗೆ ‘ಪರಸ್ಪರ ಪ್ರೋತ್ಸಾಹಗೊಳ್ಳುವುದು’ ನಮಗೆ ಬಹಳ ಪ್ರಯೋಜನಕರವಾಗಿದೆ. (ರೋಮಾಪುರ 1:​11, 12, NIBV) ನಾವು ‘ದೀನಭಾವದಿಂದ ಮತ್ತೊಬ್ಬರನ್ನು ನಮಗಿಂತಲೂ ಶ್ರೇಷ್ಠರೆಂದು ಎಣಿಸುತ್ತೇವೆ.’ (ಫಿಲಿಪ್ಪ 2:​2-4) ಅಷ್ಟುಮಾತ್ರವಲ್ಲದೆ, ಸಭೆಯಲ್ಲಿರುವ ಹಿರಿಯರ ಅಂದರೆ ನಮ್ಮ “ಸಭಾನಾಯಕರ” ಅಂಗೀಕಾರವನ್ನು ನಾವು ಬಯಸುತ್ತೇವೆ ಮತ್ತು ಅದನ್ನು ಬೆಲೆಯುಳ್ಳದ್ದಾಗಿ ಕಾಣುತ್ತೇವೆ.​—⁠ಇಬ್ರಿಯ 13:17.

ಮಾತ್ರವಲ್ಲದೆ, “ಹೊರಗಣವರಿಂದ ಒಳ್ಳೆಯವನೆನಿಸಿಕೊಂಡಿರಬೇಕು.” ಇದೂ ಅತಿ ಪ್ರಾಮುಖ್ಯವಾಗಿದೆ. (1 ತಿಮೊಥೆಯ 3:⁠7) ಅವಿಶ್ವಾಸಿ ಸಂಬಂಧಿಕರು, ಜೊತೆ ಕೆಲಸಗಾರರು ಮತ್ತು ನೆರೆಯವರು ನಮ್ಮನ್ನು ಗೌರವಿಸುವಾಗ ಅದೆಷ್ಟು ಸಂತೋಷದ ಸಂಗತಿಯಾಗಿರುತ್ತದೆ! ಜನರು ರಾಜ್ಯದ ಸಂದೇಶಕ್ಕೆ ಯೋಗ್ಯವಾಗಿ ಪ್ರತಿಕ್ರಿಯಿಸುವಂತೆ, ನಾವು ಯಾರಿಗೆ ಸಾರುತ್ತೇವೊ ಅವರಲ್ಲಿ ನಮ್ಮ ಕುರಿತು ಒಳ್ಳೇ ಅಭಿಪ್ರಾಯವನ್ನು ಮೂಡಿಸಲು ನಾವು ಪ್ರಯತ್ನಿಸುವುದಿಲ್ಲವೊ? ನಾವು ನೈತಿಕವಾಗಿ ಶುದ್ಧರೂ, ಸತ್ಯವಂತರೂ ಮತ್ತು ಪ್ರಾಮಾಣಿಕರೂ ಆದ ಜನರೆಂದು ನಮ್ಮ ಸಮುದಾಯದಲ್ಲಿ ಸತ್ಕೀರ್ತಿಯನ್ನು ಪಡೆಯುವುದು ದೇವರಿಗೆ ಘನತೆಯನ್ನು ತರುತ್ತದೆ. (1 ಪೇತ್ರ 2:12) ಹಾಗಿದ್ದರೂ, ನಾವು ಇತರರ ಮೆಚ್ಚಿಗೆಯನ್ನು ಪಡೆಯುವ ಸಲುವಾಗಿ ಬೈಬಲ್‌ ಮೂಲತತ್ತ್ವಗಳ ವಿಷಯದಲ್ಲಿ ಎಂದಿಗೂ ರಾಜಿಮಾಡಿಕೊಳ್ಳುವುದಿಲ್ಲ. ಅಥವಾ ಇತರರನ್ನು ಮೆಚ್ಚಿಸಲು ನಾವು ಕಪಟ ಮುಖವಾಡವನ್ನು ಹಾಕಿಕೊಳ್ಳುವುದೂ ಇಲ್ಲ. ಎಲ್ಲರನ್ನೂ ಮೆಚ್ಚಿಸಲು ಅಸಾಧ್ಯ ಎಂಬ ವಿಷಯವನ್ನು ನಾವು ನೆನಪಿನಲ್ಲಿಡಬೇಕು. ಯೇಸು ಹೇಳಿದ್ದು: “ನೀವು ಲೋಕದ ಕಡೆಯವರಾಗಿರುತ್ತಿದ್ದರೆ ಲೋಕವು ನಿಮ್ಮ ಮೇಲೆ ತನ್ನವರೆಂದು ಮಮತೆ ಇಡುತ್ತಿತ್ತು; ಆದರೆ ನೀವು ಲೋಕದ ಕಡೆಯವರಲ್ಲದೆ ಇರುವದರಿಂದಲೂ ನಾನು ನಿಮ್ಮನ್ನು ಲೋಕದೊಳಗಿಂದ ಆರಿಸಿ ತೆಗೆದುಕೊಂಡಿರುವದರಿಂದಲೂ ಲೋಕವು ನಿಮ್ಮ ಮೇಲೆ ದ್ವೇಷಮಾಡುತ್ತದೆ.” (ಯೋಹಾನ 15:19) ನಮ್ಮನ್ನು ವಿರೋಧಿಸುವವರ ಗೌರವವನ್ನು ಗಳಿಸಲು ನಾವೇನಾದರೂ ಮಾಡಸಾಧ್ಯವಿದೆಯೆ?

ವಿರೋಧಿಗಳ ಗೌರವವನ್ನು ಸಂಪಾದಿಸುವುದು

“ನನ್ನ ಹೆಸರಿನ ನಿಮಿತ್ತ ನಿಮ್ಮನ್ನು ಎಲ್ಲರೂ ಹಗೆಮಾಡುವರು. ಆದರೆ ಕಡೇ ವರೆಗೂ ತಾಳುವವನು ರಕ್ಷಣೆ ಹೊಂದುವನು” ಎಂದು ಯೇಸು ಎಚ್ಚರಿಸಿದನು. (ಮತ್ತಾಯ 10:22) ಈ ಹಗೆಯು ಕೆಲವೊಮ್ಮೆ ಕೆಟ್ಟ ಆಪಾದನೆಗಳನ್ನು ಬರಮಾಡುತ್ತದೆ. ಪೂರ್ವಾಭಿಪ್ರಾಯವುಳ್ಳ ಸರಕಾರಿ ಅಧಿಕಾರಿಗಳು ನಮಗೆ, “ರಾಜದ್ರೋಹಿಗಳು” ಇಲ್ಲವೆ “ವಿಧ್ವಂಸಕರು” ಎಂಬ ನಾಮಪಟ್ಟಿಯನ್ನು ಅಂಟಿಸಬಹುದು. ಮುಚ್ಚುಮರೆಯಿಲ್ಲದೆ ಮಾತಾಡುವ ವಿರೋಧಿಗಳು ನಮ್ಮನ್ನು, ಸಮಸ್ಯೆಯನ್ನುಂಟುಮಾಡುವ ಗುಂಪು ಎಂದು ಕರೆದು, ನಮ್ಮನ್ನು ನಿಗ್ರಹಿಸಲು ಪ್ರಯತ್ನಿಸಬಹುದು. (ಅ. ಕೃತ್ಯಗಳು 28:22) ಈ ಎಲ್ಲ ಸುಳ್ಳು ಆಪಾದನೆಗಳು ಕೆಲವೊಮ್ಮೆ ಅವರಿಗೇ ಹಿಂದೇಟುಹಾಕಬಹುದು. ಹೇಗೆ? ಅಪೊಸ್ತಲ ಪೇತ್ರನ ಸಲಹೆಯನ್ನು ಅನುಕರಿಸುವ ಮೂಲಕವೇ ಆಗಿದೆ. ಅವನಂದದ್ದು: “ನಿಮ್ಮಲ್ಲಿರುವ ನಿರೀಕ್ಷೆಗೆ ಆಧಾರವೇನೆಂದು ಕೇಳುವವರೆಲ್ಲರಿಗೆ ಉತ್ತರ ಹೇಳುವದಕ್ಕೆ ಯಾವಾಗಲೂ ಸಿದ್ಧವಾಗಿರಿ; ಆದರೆ ಅದನ್ನು ಸಾತ್ವಿಕತ್ವದಿಂದಲೂ ಮನೋಭೀತಿಯಿಂದಲೂ ಹೇಳಿರಿ.” (1 ಪೇತ್ರ 3:15) ಮಾತ್ರವಲ್ಲದೆ, ನಾವು ‘ನಿಂದೆಗೆ ಹೊರತಾದ ಸ್ವಸ್ಥ ಮಾತುಗಳನ್ನಾಡುವವರಾಗಿರಬೇಕು. ಇದರಿಂದ ವಿರೋಧಿಸುವವನು ನಮ್ಮ ವಿಷಯದಲ್ಲಿ ಕೆಟ್ಟದ್ದೇನೂ ಹೇಳುವುದಕ್ಕಾಗದೆ ನಾಚಿಕೆಪಡುವನು.’​—⁠ತೀತ 2:⁠8.

ನಾವು ನಮ್ಮ ಹೆಸರನ್ನು ನಿಂದಾರಹಿತವಾಗಿಡಲು ಪ್ರಯತ್ನಿಸುತ್ತೇವಾದರೂ, ಅನ್ಯಾಯವಾಗಿ ನಮ್ಮ ಹೆಸರನ್ನು ಕೆಡಿಸಿದರೆ ಅದರಿಂದ ನಾವು ನಿರುತ್ತೇಜನಗೊಳ್ಳುವ ಅಥವಾ ವಿಪರೀತವಾಗಿ ಚಿಂತಿತರಾಗುವ ಅಗತ್ಯವಿಲ್ಲ. ದೇವರ ಪರಿಪೂರ್ಣ ಮಗನಾಗಿರುವ ಯೇಸುವಿನ ಮೇಲೆ ದೇವದೂಷಕನು, ರಾಜದ್ರೋಹಿ ಮತ್ತು ಪ್ರೇತವ್ಯವಹಾರದಲ್ಲಿ ಭಾಗವಹಿಸುವವನು ಎಂದೆಲ್ಲ ಆಪಾದನೆಯನ್ನು ಹೊರಿಸಿದನು. (ಮತ್ತಾಯ 9:3; ಮಾರ್ಕ 3:22; ಯೋಹಾನ 19:12) ಅಪೊಸ್ತಲ ಪೌಲನೂ ನಿಂದೆಗೊಳಗಾದನು. (1 ಕೊರಿಂಥ 4:13) ಯೇಸು ಮತ್ತು ಪೌಲರಿಬ್ಬರೂ ಅಂಥ ಟೀಕೆಗಳನ್ನು ಅಗಣ್ಯಮಾಡಿ ತಮ್ಮ ಕೆಲಸದಲ್ಲಿ ಮಗ್ನರಾದರು. (ಮತ್ತಾಯ 15:14) “ಲೋಕವೆಲ್ಲವು ಕೆಡುಕನ ವಶದಲ್ಲಿ ಬಿದ್ದಿ”ರುವುದರಿಂದ ತಮ್ಮ ವೈರಿಗಳ ಮೆಚ್ಚಿಗೆಯನ್ನು ಪಡೆಯುವುದು ಅಸಾಧ್ಯ ಎಂಬುದು ಅವರಿಗೆ ತಿಳಿದಿತ್ತು. (1 ಯೋಹಾನ 5:19) ಇಂದು, ನಾವು ಅದೇ ಪಂಥಾಹ್ವಾನವನ್ನು ಎದುರಿಸುತ್ತಿದ್ದೇವೆ. ನಮ್ಮ ಕುರಿತು ಹಗೆತನದಿಂದ ವಿರೋಧಿಗಳು ಸುಳ್ಳನ್ನು ಹರಡಿಸುವಾಗ ನಾವು ಭಯಪಡುವ ಅಗತ್ಯವಿಲ್ಲ.​—⁠ಮತ್ತಾಯ 5:11.

ನಿಜವಾಗಿಯೂ ಬೆಲೆಬಾಳುವ ಅಭಿಪ್ರಾಯಗಳು

ಜನರ ಹೇತುಗಳಿಗೆ ಮತ್ತು ಅವರು ನಮ್ಮ ಕುರಿತು ಏನನ್ನು ಕೇಳಿಸಿಕೊಂಡಿದ್ದಾರೆ ಅದಕ್ಕೆ ಹೊಂದಿಕೆಯಲ್ಲಿ ಅವರು ನಮ್ಮ ಬಗ್ಗೆ ನೆನಸುವ ವಿಷಯಗಳು ತೀರ ವಿಭಿನ್ನವಾಗಿರುತ್ತವೆ. ಕೆಲವರು ನಮ್ಮನ್ನು ಹೊಗಳುತ್ತಾರೆ ಮತ್ತು ಗೌರವಿಸುತ್ತಾರೆ. ಅದೇ ಸಮಯದಲ್ಲಿ, ಇತರರು ನಮ್ಮನ್ನು ಬೈಯುತ್ತಾರೆ ಮತ್ತು ಹಗೆಮಾಡುತ್ತಾರೆ. ಆದರೆ ಎಷ್ಟರ ತನಕ ನಾವು ಬೈಬಲ್‌ ಮೂಲತತ್ತ್ವಗಳಿಂದ ಮಾರ್ಗದರ್ಶಿಸಲ್ಪಡುತ್ತೇವೊ ಅಷ್ಟರ ತನಕ ಸಂತೋಷದಿಂದ ಮತ್ತು ಶಾಂತಿಯಿಂದಿರಲು ನಮಗೆ ಸಕಾರಣವಿದೆ.

ಅಪೊಸ್ತಲ ಪೌಲನು ಬರೆದದ್ದು: “ದೈವಪ್ರೇರಿತವಾದ ಪ್ರತಿಯೊಂದು ಶಾಸ್ತ್ರವು ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಶಿಕ್ಷೆಗೂ ಉಪಯುಕ್ತವಾಗಿದೆ. ಅದರಿಂದ ದೇವರ ಮನುಷ್ಯನು ಪ್ರವೀಣನಾಗಿ ಸಕಲಸತ್ಕಾರ್ಯಕ್ಕೆ ಸನ್ನದ್ಧನಾಗುವನು.” (2 ತಿಮೊಥೆಯ 3:16, 17) ಎಲ್ಲ ವಿಷಯಗಳಲ್ಲಿ ದೇವರ ವಾಕ್ಯವನ್ನು ನಮ್ಮ ಮಾರ್ಗದರ್ಶಿಯಾಗಿ ಗಣ್ಯತಾಭಾವದಿಂದ ಸ್ವೀಕರಿಸುವ ಮೂಲಕ ನಾವು ಯೆಹೋವ ದೇವರ ಮತ್ತು ಆತನ ಮಗನಾದ ಯೇಸು ಕ್ರಿಸ್ತನ ಮೆಚ್ಚಿಕೆಯನ್ನು ಪಡೆಯುತ್ತೇವೆ. ವಾಸ್ತವದಲ್ಲಿ, ಯೆಹೋವನು ಮತ್ತು ಆತನ ಮಗನು ನಮ್ಮ ಕುರಿತು ಯಾವ ಅಭಿಪ್ರಾಯಗಳನ್ನು ಹೊಂದಿದ್ದಾರೆ ಎಂಬುದು ಅತಿ ಪ್ರಾಮುಖ್ಯವಾಗಿದೆ. ಅಂತಿಮವಾಗಿ, ನಮ್ಮ ಜೀವವು ಅವರ ಮೆಚ್ಚಿಕೆಯ ಮೇಲೆ ಅವಲಂಬಿಸಿದೆ.​—⁠ಯೋಹಾನ 5:27; ಯಾಕೋಬ 1:12.

[ಪುಟ 30ರಲ್ಲಿರುವ ಸಂಕ್ಷಿಪ್ತ ವಿವರಣೆ]

“ನನ್ನನ್ನು ಹೊಗಳಿದಾಗ ನನಗೆ ಮುಜುಗರವಾಗುತ್ತದೆ. ಆದರೆ, ಮನಸ್ಸಿನಾಳದಲ್ಲಿ ನಾನು ಹೊಗಳಿಕೆಯನ್ನು ಬಯಸುತ್ತೇನೆ.”​—⁠ಭಾರತದ ಕವಿ ರಬೀಂದ್ರನಾಥ್‌ ಟಗೋರ್‌

[ಪುಟ 31ರಲ್ಲಿರುವ ಚಿತ್ರಗಳು]

ನಮ್ಮ ಜೊತೆ ವಿಶ್ವಾಸಿಗಳ ಅಭಿಪ್ರಾಯಗಳು ಪ್ರಾಮುಖ್ಯವಾಗಿವೆ

[ಪುಟ 30ರಲ್ಲಿರುವ ಚಿತ್ರ ಕೃಪೆ]

Culver Pictures