ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜನಸಮೂಹಗಳು ಯೆಹೋವನ ಆರಾಧನೆಯನ್ನು ಸ್ವೀಕರಿಸುತ್ತವೆ

ಜನಸಮೂಹಗಳು ಯೆಹೋವನ ಆರಾಧನೆಯನ್ನು ಸ್ವೀಕರಿಸುತ್ತವೆ

“ಯೆಹೋವನಿಂದಲೇ ನನ್ನ ಸಹಾಯವು ಬರುತ್ತದೆ”

ಜನಸಮೂಹಗಳು ಯೆಹೋವನ ಆರಾಧನೆಯನ್ನು ಸ್ವೀಕರಿಸುತ್ತವೆ

ನಮ್ಮ ದಿನಗಳಿಗೆ ಸೂಚಿಸುವ ಬೈಬಲ್‌ ಪ್ರವಾದನೆಗಳು, ಯೆಹೋವನ ಉನ್ನತ ಆರಾಧನೆಗೆ ಎಲ್ಲ ಜನಾಂಗಗಳಿಂದ ಜನರು ಪ್ರವಾಹದಂತೆ ಬರುವರು ಎಂಬುದಾಗಿ ತಿಳಿಸುತ್ತವೆ. ಉದಾಹರಣೆಗೆ, ಪ್ರವಾದಿಯಾದ ಹಗ್ಗಾಯನ ಮೂಲಕ ಯೆಹೋವನು ಘೋಷಿಸಿದ್ದು: “ಸಕಲಜನಾಂಗಗಳನ್ನು ನಡುಗಿಸುವೆನು; ಆಗ ಸಮಸ್ತಜನಾಂಗಗಳ ಇಷ್ಟವಸ್ತುಗಳು ಬಂದು ಒದಗಲು ಈ ಆಲಯವನ್ನು ವೈಭವದಿಂದ ತುಂಬಿಸುವೆನು.” (ಹಗ್ಗಾಯ 2:7) ನಮ್ಮ ಸಮಯಗಳಲ್ಲಿ, ಅಂದರೆ ಅಂತ್ಯಕಾಲದಲ್ಲಿ ಸಕಲದೇಶಗಳ ಜನರು ಯೆಹೋವನನ್ನು ಆತನು ಮೆಚ್ಚುವಂಥ ರೀತಿಯಲ್ಲಿ ಆರಾಧಿಸುವರು ಎಂಬುದಾಗಿ ಯೆಶಾಯ ಮತ್ತು ಮೀಕ ಇವರಿಬ್ಬರೂ ಪ್ರವಾದಿಸಿದ್ದಾರೆ.​—⁠ಯೆಶಾಯ 2:​2-4; ಮೀಕ 4:​1-4.

ಅಂಥ ಪ್ರವಾದನೆಗಳು ಇಂದು ನಿಜವಾಗಿಯೂ ನೆರವೇರುತ್ತಿವೆಯೊ? ನಾವು ವಾಸ್ತವಾಂಶಗಳನ್ನು ಪರೀಕ್ಷಿಸೋಣ. ಕಳೆದ ಕೇವಲ ಹತ್ತು ವರುಷಗಳಲ್ಲಿಯೇ, 230ಕ್ಕಿಂತಲೂ ಹೆಚ್ಚಿನ ದೇಶಗಳಲ್ಲಿ 31,10,000 ಮಂದಿ ಹೊಸಬರು ಯೆಹೋವನಿಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ಸದ್ಯಕ್ಕೆ ಲೋಕವ್ಯಾಪಕವಾಗಿ ಯೆಹೋವನನ್ನು ಸೇವಿಸುತ್ತಿರುವ ಪ್ರತಿ 10 ಮಂದಿ ಯೆಹೋವನ ಸಾಕ್ಷಿಗಳಲ್ಲಿ 6 ಮಂದಿ, ಕಳೆದ ದಶಕದಲ್ಲಿಯೇ ದೀಕ್ಷಾಸ್ನಾನವನ್ನು ಪಡೆದುಕೊಂಡವರು. 2004ರಲ್ಲಿ, ಪ್ರತಿ ಎರಡು ನಿಮಿಷಕ್ಕೆ ಸರಾಸರಿ ಒಬ್ಬ ವ್ಯಕ್ತಿಯು ದೇವರ ಹೊಸ ಸಮರ್ಪಿತ ಸೇವಕನಾಗಿ ಕ್ರೈಸ್ತ ಸಭೆಗೆ ಸೇರಿಸಲ್ಪಟ್ಟನು! *

ಪ್ರಥಮ ಶತಮಾನದಂತೆಯೇ, ಇಂದು ಸಹ ‘ಬಹು ಜನರು ನಂಬಿದ್ದಾರೆ [“ವಿಶ್ವಾಸಿಗಳಾಗಿದ್ದಾರೆ,” NW] ಮತ್ತು ಕರ್ತನ ಕಡೆಗೆ ತಿರುಗಿಕೊಂಡಿದ್ದಾರೆ.’ ದೇವರ ಆಶೀರ್ವಾದಕ್ಕೆ ಅಂಕೆಸಂಖ್ಯೆಯ ಹೆಚ್ಚಳವೇ ಒಂದು ರುಜುವಾತಾಗಿರದಿದ್ದರೂ, “ಕರ್ತನ [ಯೆಹೋವನ] ಹಸ್ತವು” ಆತನ ಜನರ ಮೇಲಿದೆ ಎಂಬುದಕ್ಕೆ ಅದು ಸಾಕ್ಷ್ಯವನ್ನು ಒದಗಿಸುತ್ತದೆ. (ಅ. ಕೃತ್ಯಗಳು 11:21) ಲಕ್ಷಾಂತರ ಜನರನ್ನು ಯೆಹೋವನ ಆರಾಧನೆಯ ಕಡೆಗೆ ಯಾವುದು ನಡೆಸುತ್ತಿದೆ? ಈ ಪ್ರಗತಿಯಿಂದ ವೈಯಕ್ತಿಕವಾಗಿ ನೀವು ಹೇಗೆ ಪ್ರಭಾವಿತರಾಗಿದ್ದೀರಿ?

ಸಹೃದಯದ ಜನರು ಆಕರ್ಷಿತರಾಗುತ್ತಾರೆ

ನೇರವಾದ ರೀತಿಯಲ್ಲಿ ಯೇಸು ಹೇಳಿದ್ದು: “ನನ್ನನ್ನು ಕಳುಹಿಸಿಕೊಟ್ಟಂಥ ತಂದೆಯು ಎಳೆದ ಹೊರತು ಯಾವನೂ ನನ್ನ ಬಳಿಗೆ ಬರಲಾರನು.” (ಯೋಹಾನ 6:44) ಆದುದರಿಂದ, ಅಂತಿಮವಾಗಿ ‘ನಿತ್ಯಜೀವಕ್ಕೆ ನೇಮಿಸಲ್ಪಟ್ಟವರನ್ನು’ ತನ್ನ ಕಡೆಗೆ ಎಳೆಯಲು ಯೆಹೋವನೇ ಜವಾಬ್ದಾರನಾಗಿದ್ದಾನೆ. (ಅ. ಕೃತ್ಯಗಳು 13:48) ದೇವರ ಆತ್ಮವು ಜನರಲ್ಲಿ ಆಧ್ಯಾತ್ಮಿಕ ಅಗತ್ಯದ ಅರುಹನ್ನು ಮೂಡಿಸಬಲ್ಲದು. (ಮತ್ತಾಯ 5:​3, NW) ಗಲಿಬಿಲಿಗೊಂಡಿರುವ ಮನಸ್ಸಾಕ್ಷಿ, ನಿರೀಕ್ಷೆಗಾಗಿ ಹತಾಶೆಯಿಂದ ಕೂಡಿದ ಹುಡುಕಾಟ, ಇಲ್ಲವೆ ತಪ್ಪಿಸಲಸಾಧ್ಯವಾಗಿ ತೋರುವ ಬಿಕ್ಕಟ್ಟು, ಈ ಮುಂತಾದವುಗಳು ಜನರು ದೇವರನ್ನು ಹುಡುಕುವಂತೆ ಮಾಡಬಹುದು ಮತ್ತು ಈ ರೀತಿಯಲ್ಲಿ ಅವರು ಮಾನವಕುಲಕ್ಕಾಗಿರುವ ದೇವರ ಉದ್ದೇಶವನ್ನು ತಿಳಿದುಕೊಳ್ಳುವರು.​—⁠ಮಾರ್ಕ 7:​26-30; ಲೂಕ 19:​2-10.

ಅನೇಕ ವ್ಯಕ್ತಿಗಳು ಯೆಹೋವನ ಆರಾಧನೆಯ ಕಡೆಗೆ ಆಕರ್ಷಿತರಾಗುತ್ತಾರೆ, ಏಕೆಂದರೆ ಬಹಳ ಸಮಯದಿಂದ ಅವರನ್ನು ಪೀಡಿಸುತ್ತಿದ್ದ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಲು ಕ್ರೈಸ್ತ ಸಭೆಯ ಬೈಬಲ್‌ ಶಿಕ್ಷಣ ಕಾರ್ಯಕ್ರಮವು ಅವರಿಗೆ ಸಹಾಯಮಾಡುತ್ತದೆ.

“ದೇವರಿರುವುದಾದರೆ ಜನರು ಏಕೆ ಅನ್ಯಾಯವನ್ನು ಅನುಭವಿಸುತ್ತಾ ಇದ್ದಾರೆ?” ಈ ಪ್ರಶ್ನೆಯು, ಇಟಲಿಯ ಮಾದಕಪದಾರ್ಥಗಳ ವ್ಯಾಪಾರಿಯಾಗಿದ್ದ ಡಾವೀಡ್‌ನನ್ನು ಕಾಡಿಸುತ್ತಾ ಇತ್ತು. ಅವನಿಗೆ ಧಾರ್ಮಿಕ ವಿಚಾರಗಳಲ್ಲಿ ನಿರ್ದಿಷ್ಟವಾಗಿ ಆಸಕ್ತಿ ಇರಲಿಲ್ಲ. ಆದುದರಿಂದ, ಕೋಪವನ್ನೆಬ್ಬಿಸುವ ಸಲುವಾಗಿ ಅವನು ಯಾವಾಗಲೂ ಈ ಪಂಥಾಹ್ವಾನಕರ ಪ್ರಶ್ನೆಯನ್ನು ಕೇಳುತ್ತಿದ್ದನು. ಅವನು ಹೇಳಿದ್ದು: “ತರ್ಕಬದ್ಧವಾದ ಮತ್ತು ತೃಪ್ತಿಕರವಾದ ಉತ್ತರವು ನನಗೆ ದೊರಕಲಿದೆ ಎಂದು ನಾನು ನೆನಸಿರಲಿಲ್ಲ. ಆದರೆ ನನ್ನೊಂದಿಗೆ ಮಾತಾಡಿದ ಸಾಕ್ಷಿಯು ಬಹಳ ತಾಳ್ಮೆಯಿಂದಿದ್ದನು ಮತ್ತು ತಾನೇನು ಹೇಳಿದನೊ ಅದಕ್ಕೆ ಬೈಬಲಿನಿಂದ ಆಧಾರವನ್ನು ತೋರಿಸಿದನು. ಆ ಸಂಭಾಷಣೆಯು ನನ್ನ ಮೇಲೆ ಅಗಾಧವಾದ ಪರಿಣಾಮವನ್ನು ಬೀರಿತು.” ಇಂದು, ಡಾವೀಡ್‌ ತನ್ನ ಜೀವನವನ್ನು ಸರಿಪಡಿಸಿಕೊಂಡು, ಯೆಹೋವನನ್ನು ಸೇವಿಸುತ್ತಿದ್ದಾನೆ.

ಇತರರು, ಜೀವಿತದ ಅರ್ಥ ಮತ್ತು ಉದ್ದೇಶವೇನು ಎಂಬುದನ್ನು ಹುಡುಕುತ್ತಾ ಇದ್ದ ಕಾರಣ ಯೆಹೋವನ ಭೂಸಂಘಟನೆಯ ಕಡೆಗೆ ಬಂದಿದ್ದಾರೆ. ಕ್ರೊಏಷಿಯದ ಸಾಗ್ರೆಬ್‌ನಲ್ಲಿರುವ ಒಬ್ಬ ಮನೋವೈದ್ಯೆ ತನ್ನ ಸ್ವಂತ ಮಾನಸಿಕ ಸಮಸ್ಯೆಗಳಿಗೆ ಚಿಕಿತ್ಸೆಯನ್ನು ಪಡೆದುಕೊಳ್ಳಲು ಒಬ್ಬ ಪ್ರಸಿದ್ಧ ಸಹೋದ್ಯೋಗಿಯನ್ನು ಭೇಟಿಯಾದಳು. ಆ ವೈದ್ಯನು ಅವಳಿಗೆ ಸಾಗ್ರೆಬ್‌ನ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸಿನ ವಿಳಾಸವನ್ನು ಮತ್ತು ಅವನಿಗೆ ತಿಳಿದಿದ್ದ ಒಬ್ಬ ಸಾಕ್ಷಿಯ ಹೆಸರನ್ನು ನೀಡಿದನು. ವೈದ್ಯನು ಹೇಳಿದ್ದು: “ಈ ಜನರು ನಿನಗೆ ಸಹಾಯಮಾಡಬಲ್ಲರು ಎಂದು ನಾನು ನೆನಸುತ್ತೇನೆ. ನಿನ್ನನ್ನು ನಾನು ಚರ್ಚಿಗೆ ಕಳುಹಿಸಿದರೆ ಅಲ್ಲಿ ಕೇವಲ ನಿರ್ಜೀವ ವಿಗ್ರಹಗಳನ್ನು ನೀನು ಕಾಣುವಿ. ಅಲ್ಲಿ ಯಾರೂ ಮಾತಾಡುವುದಿಲ್ಲ ಮತ್ತು ಎಲ್ಲ ಕಡೆ ಕತ್ತಲೆಯಾಗಿರುತ್ತದೆ. ಆದುದರಿಂದ ಚರ್ಚ್‌ ನಿನಗೆ ಸಹಾಯಮಾಡಬಲ್ಲದೆಂದು ನಾನು ನೆನಸುವುದಿಲ್ಲ. ಇತರ ರೋಗಿಗಳನ್ನು ಸಹ ನಾನು ಯೆಹೋವನ ಸಾಕ್ಷಿಗಳ ಬಳಿಗೆ ಕಳುಹಿಸಿದ್ದೇನೆ ಮತ್ತು ನಿನಗೂ ಅದೇ ಸರಿಯಾದ ಸ್ಥಳ ಎಂದು ನಾನು ನೆನಸುತ್ತೇನೆ.” ದಯಾಭಾವದಿಂದ ಒಬ್ಬ ಸಾಕ್ಷಿ ದಂಪತಿ ಅವಳನ್ನು ಭೇಟಿಯಾದರು ಮತ್ತು ಬೇಗನೆ ಅವಳೊಂದಿಗೆ ಒಂದು ಬೈಬಲ್‌ ಅಧ್ಯಯನವು ಆರಂಭಗೊಂಡಿತು. ದೇವರ ಉದ್ದೇಶದ ಕುರಿತಾದ ಜ್ಞಾನವು ತನ್ನ ಜೀವಿತಕ್ಕೆ ಅರ್ಥವನ್ನು ಕೊಟ್ಟಿತು ಎಂಬುದಾಗಿ ಕೆಲವೇ ವಾರಗಳಲ್ಲಿ ಆ ಮನೋವೈದ್ಯೆ ಆನಂದದಿಂದ ತಿಳಿಸಿದಳು.​—⁠ಪ್ರಸಂಗಿ 12:13.

ಒಂದು ವೈಯಕ್ತಿಕ ಬಿಕ್ಕಟ್ಟು ಬಂದೆರಗಿದಾಗ, ಬೈಬಲ್‌ ಸತ್ಯ ಮಾತ್ರವೇ ನಿಜವಾದ ಸಾಂತ್ವನವನ್ನು ನೀಡಬಲ್ಲದು ಎಂದು ಅನೇಕರು ಕಂಡುಕೊಂಡಿದ್ದಾರೆ. ಗ್ರೀಸ್‌ನಲ್ಲಿ ಒಬ್ಬ ಏಳು ವರುಷದ ಹುಡುಗನು ತನ್ನ ಶಾಲೆಯ ಮಹಡಿಯಿಂದ ಕೆಳಗೆ ಬಿದ್ದು ಸತ್ತನು. ಕೆಲವು ತಿಂಗಳುಗಳ ಅನಂತರ ಇಬ್ಬರು ಸಾಕ್ಷಿಗಳು ಅವನ ತಾಯಿಯನ್ನು ಭೇಟಿಯಾದರು ಮತ್ತು ಪುನರುತ್ಥಾನದ ನಿರೀಕ್ಷೆಯ ಕುರಿತು ಚರ್ಚಿಸುವ ಮೂಲಕ ಆಕೆಯನ್ನು ಸಂತೈಸಲು ಪ್ರಯತ್ನಿಸಿದರು. (ಯೋಹಾನ 5:​28, 29) ಆ ಸ್ತ್ರೀಯು ಅಳಲಾರಂಭಿಸಿದಳು. ಸಹೋದರಿಯು ಅವಳಿಗೆ, “ನೀವು ಬೈಬಲಿನ ಕುರಿತು ಹೆಚ್ಚನ್ನು ತಿಳಿಯಬಯಸುವುದಾದರೆ, ನಾವು ನಿಮ್ಮನ್ನು ಯಾವಾಗ ಭೇಟಿಯಾಗಸಾಧ್ಯವಿದೆ?” ಎಂದು ಕೇಳಿದಳು. “ಈಗಲೇ,” ಎಂಬುದಾಗಿ ಆ ಸ್ತ್ರೀಯು ಉತ್ತರಿಸಿ, ಸಹೋದರಿಯರನ್ನು ತನ್ನ ಮನೆಗೆ ಕರೆದೊಯ್ದಳು ಮತ್ತು ಒಂದು ಬೈಬಲ್‌ ಅಧ್ಯಯನವು ಆರಂಭವಾಯಿತು. ಇಂದು ಆ ಸ್ತ್ರೀಯ ಇಡೀ ಕುಟುಂಬವು ಯೆಹೋವನನ್ನು ಸೇವಿಸುತ್ತಿದೆ.

ನೀವೂ ಭಾಗವಹಿಸುತ್ತಿದ್ದೀರೊ?

ಲೋಕದ ಸುತ್ತಲೂ ಏನು ಸಂಭವಿಸುತ್ತಿದೆ ಎಂಬುದನ್ನು ಈ ಅನುಭವಗಳು ಸೂಚಿಸುತ್ತವೆ. ಸತ್ಯಾರಾಧಕರ ಬಹು ಜನಾಂಗೀಯ ಮಹಾ ಸಮೂಹವನ್ನು ಯೆಹೋವನು ಒಟ್ಟುಗೂಡಿಸುತ್ತಾ ತರಬೇತುಗೊಳಿಸುತ್ತಾ ಇದ್ದಾನೆ. ಈ ಅಂತಾರಾಷ್ಟ್ರೀಯ ಗುಂಪಿಗೆ, ಈ ದುಷ್ಟ ವಿಷಯಗಳ ವ್ಯವಸ್ಥೆಗೆ ಸಮೀಪಿಸುತ್ತಿರುವ ನಾಶನವನ್ನು ಪಾರಾಗಿ, ನೀತಿಯ ನೂತನ ಲೋಕದಲ್ಲಿ ಜೀವಿಸುವ ಸಂತೋಷಕರ ಪ್ರತೀಕ್ಷೆ ಇದೆ.​—⁠2 ಪೇತ್ರ 3:13.

ಯೆಹೋವನ ಆಶೀರ್ವಾದದ ಫಲಿತಾಂಶವಾಗಿ, ಒಟ್ಟುಗೂಡಿಸುವ ಈ ಅಭೂತಪೂರ್ವ ಕೆಲಸವು ಅದರ ಯಶಸ್ವಿಕರ ಸಮಾಪ್ತಿಯ ಕಡೆಗೆ ವೇಗವಾಗಿ ಮುಂದೆ ಸಾಗುತ್ತಿದೆ. (ಯೆಶಾಯ 55:​10, 11; ಮತ್ತಾಯ 24:​3, 14) ರಾಜ್ಯದ ಕುರಿತು ಸಾರುವ ಈ ಚಟುವಟಿಕೆಯಲ್ಲಿ ನೀವು ಹುರುಪಿನಿಂದ ಭಾಗವಹಿಸುತ್ತಿದ್ದೀರೊ? ಭಾಗವಹಿಸುತ್ತಿರುವುದಾದರೆ, ನೀವು ದೈವಿಕ ಬೆಂಬಲದ ಖಾತ್ರಿಯಿಂದಿರಬಲ್ಲಿರಿ ಮತ್ತು “ಯೆಹೋವನಿಂದಲೇ ನನ್ನ ಸಹಾಯವು ಬರುತ್ತದೆ” ಎಂಬ ಕೀರ್ತನೆಗಾರನ ಇದೇ ಮಾತುಗಳನ್ನು ನೀವೂ ಪ್ರತಿಧ್ವನಿಸಬಲ್ಲಿರಿ.​—⁠ಕೀರ್ತನೆ 121:⁠2.

[ಪಾದಟಿಪ್ಪಣಿ]

^ ಪ್ಯಾರ. 4 ಇಸವಿ 2005ರ ಯೆಹೋವನ ಸಾಕ್ಷಿಗಳ ಕ್ಯಾಲೆಂಡರ್‌ನ (ಇಂಗ್ಲಿಷ್‌) ಸೆಪ್ಟೆಂಬರ್‌/ಅಕ್ಟೋಬರ್‌ ತಿಂಗಳುಗಳನ್ನು ನೋಡಿ.

[ಪುಟ 9ರಲ್ಲಿರುವ ಸಂಕ್ಷಿಪ್ತ ವಿವರಣೆ]

“ನನ್ನನ್ನು ಕಳುಹಿಸಿಕೊಟ್ಟಂಥ ತಂದೆಯು ಎಳೆದ ಹೊರತು ಯಾವನೂ ನನ್ನ ಬಳಿಗೆ ಬರಲಾರನು.”​—⁠ಯೋಹಾನ 6:44

[ಪುಟ 8ರಲ್ಲಿರುವ ಚೌಕ]

ಈ ಅಭಿವೃದ್ಧಿಗೆ ಯಾರು ಕಾರಣ?

“ಯೆಹೋವನು ಮನೇ ಕಟ್ಟದಿದ್ದರೆ ಅದನ್ನು ಕಟ್ಟುವವರು ಕಷ್ಟಪಡುವದು ವ್ಯರ್ಥ.” ​—⁠ಕೀರ್ತನೆ 127:⁠1.

“[ಅದನ್ನು] ಬೆಳಿಸುತ್ತಾ ಬಂದವನು ದೇವರು. ಹೀಗಿರಲಾಗಿ ನೆಡುವವನಾಗಲಿ ನೀರುಹೊಯ್ಯುವವನಾಗಲಿ ವಿಶೇಷವಾದವನಲ್ಲ, ಬೆಳಿಸುವ ದೇವರೇ ವಿಶೇಷವಾದವನು.”​—⁠1 ಕೊರಿಂಥ 3:​6, 7.