ನಮ್ಮ ಭಾವನೆಗಳನ್ನು ಹತೋಟಿಯಲ್ಲಿಡಲು ಸಹಾಯ
ನಮ್ಮ ಭಾವನೆಗಳನ್ನು ಹತೋಟಿಯಲ್ಲಿಡಲು ಸಹಾಯ
ನಕಾರಾತ್ಮಕ ಭಾವನೆಗಳು ಕೆಲವೊಮ್ಮೆ ನಿಮ್ಮನ್ನು ತಮ್ಮ ಹತೋಟಿಯಲ್ಲಿಡುತ್ತವೆಯೊ? ನೀವು ಸುಲಭವಾಗಿ ರೇಗುತ್ತೀರೊ, ಕೋಪಗೊಳ್ಳುತ್ತೀರೊ ಇಲ್ಲವೆ ಆಶಾಭಂಗಪಡುತ್ತೀರೊ? ಜೀವನದ ಚಿಂತೆಗಳು ನಿಮ್ಮನ್ನು ಮುಳುಗಿಸಿಬಿಡುತ್ತವೊ? ಹಾಗಿರುವಲ್ಲಿ, ಯಾವುದು ನಿಮಗೆ ಸಹಾಯಮಾಡಬಲ್ಲದು?
ಭಾವನಾತ್ಮಕವಾಗಿ ಪ್ರತಿಕ್ರಿಯಿಸುವುದು ಮಾನವ ಅನುಭವದ ಅವಿಭಾಜ್ಯ ಅಂಗವಾಗಿದೆ. ಸರಿಯಾಗಿ ಹತೋಟಿಯಲ್ಲಿಟ್ಟುಕೊಂಡಾಗ, ಅದು ಜೀವನಕ್ಕೆ ಸೊಬಗನ್ನು ಕೂಡಿಸುತ್ತದೆ. ಆದರೆ, ‘ಬಲಾತ್ಕಾರವು ಜ್ಞಾನಿಯನ್ನು ಹುಚ್ಚನನ್ನಾಗಿ ಮಾಡುತ್ತದೆ’ ಎಂದು ಬೈಬಲ್ ಒಪ್ಪಿಕೊಳ್ಳುತ್ತದೆ. (ಪ್ರಸಂಗಿ 7:7, NIBV) ಹಿಂಸಾಚಾರ ಮತ್ತು ಅಪಘಾತಗಳು ಸರ್ವಸಾಮಾನ್ಯವಾಗಿರುವ ಈ ಲೋಕದಲ್ಲಿ, ತಮ್ಮ ಸುತ್ತಲೂ ಸಂಭವಿಸುವ ಸಂಗತಿಯಿಂದಾಗಿ ಯಾರು ತಾನೇ ಭಾವನಾತ್ಮಕವಾಗಿ ಬಾಧಿತರಾಗುವುದಿಲ್ಲ? ಹಾಗಿದ್ದರೂ, ಶಾಸ್ತ್ರವಚನವು ನಮಗೆ ಹೀಗೂ ಹೇಳುತ್ತದೆ: “ಮನುಷ್ಯನು ತನ್ನ ಕಾರ್ಯಗಳಲ್ಲಿ ಉಲ್ಲಾಸಗೊಳ್ಳುವದಕ್ಕಿಂತ ಅವನಿಗೆ ಯಾವ ಮೇಲೂ ಇಲ್ಲ.” (ಪ್ರಸಂಗಿ 3:22) ಆದುದರಿಂದ ಜೀವನವನ್ನು ಹೆಚ್ಚು ಆನಂದದಾಯಕವನ್ನಾಗಿ ಮಾಡಲು, ನಾವು ಸಕಾರಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳುವ ಮೂಲಕ ಸಂತೋಷಿಸಲು ಕಲಿಯಬೇಕಾಗಿದೆ. ನಾವು ಪ್ರಯೋಜನಕರವಾದ ಭಾವನೆಗಳನ್ನು ಪೋಷಿಸಿ, ಹಾನಿಕರವಾದ ಭಾವನೆಗಳನ್ನು ಹೇಗೆ ನಿಗ್ರಹಿಸಬಲ್ಲೆವು?
ಪ್ರಾಯೋಗಿಕ ಹೆಜ್ಜೆಗಳನ್ನು ತೆಗೆದುಕೊಳ್ಳುವುದು ಅನೇಕವೇಳೆ ನಮ್ಮ ನಕಾರಾತ್ಮಕ ಭಾವನೆಗಳನ್ನು ಕಡಿಮೆಗೊಳಿಸುತ್ತದೆ. ಉದಾಹರಣೆಗೆ, ನಮ್ಮ ಹತೋಟಿಗೆ ಮೀರಿದ ವಿಷಯಗಳಿಂದಾಗಿ ನಮಗೆ ಆತಂಕ ಉಂಟಾಗಿರುವಲ್ಲಿ, ಅದರ ಕುರಿತು ಚಿಂತಿಸುತ್ತಾ ಇರುವ ಬದಲು ನಮ್ಮ ದಿನಚರಿಯನ್ನು ಬದಲಾಯಿಸುವುದು ಇಲ್ಲವೆ ಆ ಸ್ಥಳವನ್ನು ಬಿಟ್ಟುಹೋಗುವುದು ಅತ್ಯುತ್ತಮವಾಗಿದೆ, ಅಲ್ಲವೆ? ಒಂದು ಆರಾಮದ ನಡಿಗೆಯನ್ನು ಮಾಡುವುದು, ಹಿತಕರವಾದ ಸಂಗೀತವನ್ನು ಆಲಿಸುವುದು, ಬಿರುಸಿನ ವ್ಯಾಯಾಮವನ್ನು ಮಾಡುವುದು ಇಲ್ಲವೆ ಅಗತ್ಯದಲ್ಲಿರುವ ಯಾರಿಗಾದರು ದಯೆಯ ಒಂದು ಕೃತ್ಯವನ್ನು ಮಾಡುವುದು ನಿಮಗೆ ತಕ್ಕಮಟ್ಟಿಗಿನ ಉಪಶಮನವನ್ನು ನೀಡಬಹುದು ಮತ್ತು ಸಂತೋಷವನ್ನೂ ತರಬಹುದು.—ಅ. ಕೃತ್ಯಗಳು 20:35.
ಹಾಗಿದ್ದರೂ, ನಕಾರಾತ್ಮಕ ಭಾವನೆಗಳನ್ನು ತೆಗೆದುಹಾಕುವ ಅತ್ಯುತ್ತಮ ವಿಧಾನವು, ಸೃಷ್ಟಿಕರ್ತನಲ್ಲಿ ನಮ್ಮ ಭರವಸೆಯನ್ನಿಡುವ ಮೂಲಕವೇ ಆಗಿದೆ. ನಕಾರಾತ್ಮಕ ಭಾವನೆಗಳು ಮುಂದುವರಿಯುವಲ್ಲಿ, ನಾವು ಪ್ರಾರ್ಥನೆಯ ಮೂಲಕ ನಮ್ಮ ‘ಚಿಂತೆಯನ್ನೆಲ್ಲಾ ದೇವರ ಮೇಲೆ ಹಾಕಬೇಕು.’ (1 ಪೇತ್ರ 5:6, 7) ಬೈಬಲ್ ನಮಗೆ ಆಶ್ವಾಸನೆ ನೀಡುವುದು: “ಮುರಿದ ಮನಸ್ಸುಳ್ಳವರಿಗೆ ಯೆಹೋವನು ನೆರವಾಗುತ್ತಾನೆ; . . . ನೀತಿವಂತನಿಗೆ ಸಂಭವಿಸುವ ಕಷ್ಟಗಳು ಅನೇಕವಿದ್ದರೂ ಯೆಹೋವನು ಅವೆಲ್ಲವುಗಳಿಂದ ಅವನನ್ನು ಬಿಡಿಸುತ್ತಾನೆ.” (ಕೀರ್ತನೆ 34:18, 19) ದೇವರು ನಮ್ಮ “ಸಹಾಯಕನೂ ರಕ್ಷಕನೂ” ಆಗಿರಬಲ್ಲನೆಂದು ನಾವು ಹೇಗೆ ಭರವಸೆಯಿಂದಿರಬಲ್ಲೆವು? (ಕೀರ್ತನೆ 40:17) ಬೈಬಲನ್ನು ಅಧ್ಯಯನಮಾಡುವ ಮತ್ತು ದೇವರು ತನ್ನ ಸೇವಕರ ಹಿತಕ್ಷೇಮದ ಬಗ್ಗೆ ವೈಯಕ್ತಿಕವಾಗಿ ತೋರಿಸಿದ ಕಾಳಜಿಯ ಕುರಿತು ತಿಳಿಸುವಂಥ ಬೈಬಲಿನ ನಿಜ ಜೀವನದ ಉದಾಹರಣೆಗಳ ಬಗ್ಗೆ ಮನನಮಾಡುವ ಮೂಲಕ ನಾವು ಇದನ್ನು ಮಾಡಬಲ್ಲೆವು.