ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪೊಂತ್ಯ ಪಿಲಾತನು ಯಾರಾಗಿದ್ದನು?

ಪೊಂತ್ಯ ಪಿಲಾತನು ಯಾರಾಗಿದ್ದನು?

ಪೊಂತ್ಯ ಪಿಲಾತನು ಯಾರಾಗಿದ್ದನು?

“ಐತಿಹಾಸಿಕ ವ್ಯಕ್ತಿಯಾದ ಪಿಲಾತನ ಕುರಿತು ಯೋಚಿಸುವಾಗ, ಅವನು ಗೇಲಿಮಾಡುವವ, ಸಂಶಯವಾದಿ ಎಂಬ ಭಾವನೆ ಮನಸ್ಸಿನಲ್ಲಿ ಸುಳಿದಾಡುತ್ತದೆ. ಕೆಲವರಿಗೆ ಅವನೊಬ್ಬ ಸಂತನಾಗಿರುವಾಗ ಇನ್ನು ಕೆಲವರಿಗೆ ಅವನು ಮಾನವ ಬಲಹೀನತೆಯ ಸಾಕಾರರೂಪ, ಅಂದರೆ ಸ್ಥಿರತೆಯನ್ನು ಕಾಪಾಡುವ ಸಲುವಾಗಿ ಒಬ್ಬ ಮನುಷ್ಯನನ್ನು ಬಲಿಕೊಡಲು ಸಹ ಸಿದ್ಧನಿರುವ ರಾಜಕಾರಣಿಯ ಒಂದು ಪರಿಪೂರ್ಣ ಮಾದರಿಯಾಗಿದ್ದಾನೆ.”​—⁠ಪೊಂತ್ಯ ಪಿಲಾತ (ಇಂಗ್ಲಿಷ್‌), ಆ್ಯನ್‌ ರೋ ಅವರಿಂದ.

ಈ ದೃಷ್ಟಿಕೋನಗಳಲ್ಲಿ ಯಾವುದೇ ಒಂದನ್ನು ನೀವು ಒಪ್ಪಿದರೂ ಒಪ್ಪದಿದ್ದರೂ, ಯೇಸು ಕ್ರಿಸ್ತನನ್ನು ಉಪಚರಿಸಿದ ರೀತಿಯಿಂದ ಪೊಂತ್ಯ ಪಿಲಾತನು ತನಗಾಗಿ ಒಂದು ಹೆಸರನ್ನು ಮಾಡಿಕೊಂಡನು ಎಂಬುದು ನಿಜ. ಪಿಲಾತನು ಯಾರಾಗಿದ್ದನು? ಅವನ ಕುರಿತು ಏನು ತಿಳಿದಿದೆ? ಅವನ ಸ್ಥಾನದ ಕುರಿತು ಹೆಚ್ಚನ್ನು ಅರ್ಥಮಾಡಿಕೊಳ್ಳುವುದು, ಭೂಮಿಯಲ್ಲಿ ಸಂಭವಿಸಿರುವುದರಲ್ಲಿಯೇ ಅತ್ಯಂತ ಪ್ರಾಮುಖ್ಯ ಘಟನೆಯ ಕುರಿತಾದ ನಮ್ಮ ತಿಳಿವಳಿಕೆಯನ್ನು ಹೆಚ್ಚಿಸುತ್ತದೆ.

ಸ್ಥಾನ, ಕರ್ತವ್ಯಗಳು ಮತ್ತು ಅಧಿಕಾರ

ರೋಮನ್‌ ಚಕ್ರವರ್ತಿಯಾದ ತಿಬೇರಿಯನು ಸಾ.ಶ. 26ರಲ್ಲಿ ಪಿಲಾತನನ್ನು ಯೂದಾಯ ಪ್ರಾಂತದ ದೇಶಾಧಿಪತಿಯನ್ನಾಗಿ ಅಥವಾ ರಾಜ್ಯಪಾಲನನ್ನಾಗಿ ನೇಮಿಸಿದನು. ಅಂಥ ಹುದ್ದೆಯಲ್ಲಿದ್ದವರು ಅಶ್ವಾರೋಹಣದಲ್ಲಿ ನೈಪುಣ್ಯ ಪಡೆದವರು ಎಂಬುದಾಗಿ ಹೇಳಲಾಗುತ್ತಿದ್ದ ವರ್ಗದವರಾಗಿದ್ದರು. ಇವರು ಸೆನೆಟ್‌ ಸದಸ್ಯರ ಸ್ಥಾನವನ್ನು ಹೊಂದಿದ್ದ ಶ್ರೀಮಂತ ವರ್ಗದವರಿಗೆ ವ್ಯತಿರಿಕ್ತವಾಗಿ ಕಡಿಮೆ ಶ್ರೀಮಂತ ವರ್ಗದವರಾಗಿದ್ದರು. ಪ್ರಾಯಶಃ ಪಿಲಾತನು ಆರಂಭದಲ್ಲಿ, ಎರಡು ತಿಂಗಳ ಕಾಲ ಅಧಿಕಾರ ನಡೆಸುತ್ತಿದ್ದ ರೋಮನ್‌ ಸೈನಿಕದಳದ ಸೈನ್ಯಾಧಿಕಾರಿ ಇಲ್ಲವೆ ಕಿರಿಯ ದಳಪತಿಯಾಗಿ ಸೇನೆಗೆ ಸೇರಿ, ಕೆಲಸದ ಅನೇಕ ಸರದಿಗಳನ್ನು ಯಶಸ್ವಿಕರವಾಗಿ ಮುಗಿಸಿದ ಅನಂತರ, ಅಂದರೆ 30 ವರುಷದವನಾಗುವ ಮುಂಚೆಯೇ ಅವನು ರಾಜ್ಯಪಾಲನಾಗಿ ನೇಮಿಸಲ್ಪಟ್ಟಿದ್ದಿರಬೇಕು.

ಪಿಲಾತನು ಮಿಲಿಟರಿ ಉಡುಗೆಯಲ್ಲಿದ್ದಾಗ, ಚರ್ಮದ ಜುಬ್ಬ ಮತ್ತು ಲೋಹದ ಎದೆಕವಚವನ್ನು ಧರಿಸಿ, ಸಾರ್ವಜನಿಕರ ಮಧ್ಯೆಯಿದ್ದಾಗ ಕೆನ್ನೀಲಿ ಬಣ್ಣದ ಅಂಚನ್ನು ಹೊಂದಿದ್ದ ಬಿಳಿಯ ಹಚ್ಚಡವನ್ನು ಧರಿಸುತ್ತಿದ್ದಿರಬೇಕು. ಅವನಿಗೆ ಗಿಡ್ಡ ತಲೆಗೂದಲು ಇದ್ದಿರಬೇಕು ಮತ್ತು ಅವನು ತನ್ನ ಗಡ್ಡವನ್ನು ಬೋಳಿಸುತ್ತಿದ್ದಿರಬೇಕು. ಅವನು ಸ್ಪೆಯಿನ್‌ನಿಂದ ಬಂದವನೆಂದು ಕೆಲವರು ನಂಬಿದ್ದರಾದರೂ, ಅವನು ದಕ್ಷಿಣ ಇಟಲಿಯ ಸಾಮ್ನಿಯ ಪ್ರಾಂತದ ಪಾನ್ಟೀ ಕುಲಕ್ಕೆ ಸೇರಿದವನು ಎಂಬುದನ್ನು ಅವನ ಹೆಸರೇ ಸೂಚಿಸುತ್ತದೆ.

ಅಶ್ವಾರೋಹಣದಲ್ಲಿ ನೈಪುಣ್ಯ ಪಡೆದಿರುವ ವರ್ಗಕ್ಕೆ ಸೇರಿದ ಉನ್ನತ ಅಧಿಕಾರಿಗಳನ್ನು ಸಾಮಾನ್ಯವಾಗಿ ಅನಾಗರಿಕ ಸ್ಥಳಗಳಿಗೆ ಕಳುಹಿಸಲಾಗುತ್ತಿತ್ತು. ರೋಮನರು ಯೂದಾಯವನ್ನು ಅಂಥ ಒಂದು ಸ್ಥಳವಾಗಿ ಪರಿಗಣಿಸುತ್ತಿದ್ದರು. ಸುವ್ಯವಸ್ಥೆಯನ್ನು ಕಾಪಾಡುವುದರ ಜೊತೆಗೆ, ಪರೋಕ್ಷ ತೆರಿಗೆಗಳು ಮತ್ತು ತಲೆಗಂದಾಯದ ಸಂಗ್ರಹವನ್ನು ಸಹ ಪಿಲಾತನು ಮೇಲ್ವಿಚಾರಣೆಮಾಡುತ್ತಿದ್ದನು. ದೈನಂದಿನ ನ್ಯಾಯವಿಚಾರಣೆಯನ್ನು ಯೆಹೂದಿ ನ್ಯಾಯಾಲಯವು ಮಾಡುತ್ತಿತ್ತು, ಆದರೆ ನ್ಯಾಯಸ್ಥಾನದ ಪರಮೋಚ್ಚ ಅಧಿಕಾರಿಯು ರಾಜ್ಯಪಾಲನೇ ಆಗಿದ್ದ ಕಾರಣ ಮರಣದಂಡನೆಯು ಅಗತ್ಯವಿದ್ದ ಮೊಕದ್ದಮೆಯನ್ನು ಅವನಲ್ಲಿಗೆ ಕಳುಹಿಸಲಾಗುತ್ತಿತ್ತು.

ಶಾಸ್ತ್ರಿಗಳು, ಸಂಗಡಿಗರು ಮತ್ತು ಸಂದೇಶವಾಹಕರಿಂದ ಕೂಡಿದ ಸಿಬ್ಬಂದಿಗಳ ಒಂದು ಸಣ್ಣ ಗುಂಪಿನೊಂದಿಗೆ ಕೈಸರೈಯದ ರೇವು ಪಟ್ಟಣದಲ್ಲಿ ಪಿಲಾತನೂ ಅವನ ಪತ್ನಿಯೂ ವಾಸಿಸುತ್ತಿದ್ದರು. ಪಿಲಾತನು, ಪ್ರತಿಯೊಂದು ಪಡೆಯಲ್ಲಿ 500ರಿಂದ 1,000 ಮಂದಿ ಪುರುಷರನ್ನು ಒಳಗೂಡಿದ್ದ ಐದು ಕಾಲಾಳು ಪಡೆಗಳ ಮತ್ತು 500 ಮಂದಿಯನ್ನೊಳಗೂಡಿದ್ದ ಅಶ್ವಸೈನ್ಯದ ಆಧಿಪತ್ಯವನ್ನು ನಡೆಸುತ್ತಿದ್ದನು. ನಿಯಮೋಲ್ಲಂಘನೆ ಮಾಡಿದವರನ್ನು ಅವನ ಸೈನಿಕರು ಆಗಾಗ ಗಲ್ಲಿಗೇರಿಸುತ್ತಿದ್ದರು. ಶಾಂತಿಯ ಸಮಯಾವಧಿಯಲ್ಲಿ ಸಂಕ್ಷಿಪ್ತ ವಿಚಾರಣೆಯನ್ನು ನಡೆಸಿ ಆಮೇಲೆ ಮರಣದಂಡನೆಯನ್ನು ವಿಧಿಸಲಾಗುತ್ತಿತ್ತು, ಆದರೆ ಗೊಂದಲಮಯ ಸಮಯಾವಧಿಯಲ್ಲಿ ದಂಗೆಕೋರರನ್ನು ಕೂಡಲೇ ಆ ಸ್ಥಳದಲ್ಲಿಯೇ ಸಾಮೂಹಿಕವಾಗಿ ಕೊಲ್ಲಲಾಗುತ್ತಿತ್ತು. ಉದಾಹರಣೆಗೆ, ಸ್ಪಾರ್ಟಕಸ್‌ನಿಂದ ಎಬ್ಬಿಸಲ್ಪಟ್ಟ ದಂಗೆಯನ್ನು ನಿಲ್ಲಿಸಲಿಕ್ಕಾಗಿ ರೋಮನ್‌ ಸೈನ್ಯವು ಒಂದೇ ಸಮಯಕ್ಕೆ 6,000 ಮಂದಿ ದಾಸರನ್ನು ಕೊಂದಿತು. ಯೂದಾಯದಲ್ಲಿ ಸಮಸ್ಯೆಯು ಹತೋಟಿಮೀರಿ ಹೋದಾಗ, ರಾಜ್ಯಪಾಲನು ಸಾಮಾನ್ಯವಾಗಿ ಸಿರಿಯದಲ್ಲಿದ್ದ ಚಕ್ರವರ್ತಿಯ ರಾಯಭಾರಿಯ ಕಡೆಗೆ ತಿರುಗುತ್ತಿದ್ದನು. ಆ ರಾಯಭಾರಿಯು ದೊಡ್ಡದಾದ ಸೈನ್ಯದಳಗಳ ಆಧಿಪತ್ಯವನ್ನು ನಡೆಸುತ್ತಿದ್ದನು. ಪಿಲಾತನು ರಾಜ್ಯಪಾಲನಾಗಿ ಆಳ್ವಿಕೆಮಾಡುತ್ತಿದ್ದ ಹೆಚ್ಚಿನ ಸಮಯಾವಧಿಯಲ್ಲಿ, ರಾಯಭಾರಿಯು ಗೈರುಹಾಜರಾಗಿದ್ದನು. ಆದುದರಿಂದ, ಸಂಭವಿಸಿದ ಯಾವುದೇ ಗಲಭೆಯನ್ನು ಪಿಲಾತನೇ ನಿಲ್ಲಿಸಬೇಕಿತ್ತು.

ರಾಜ್ಯಪಾಲರು ಕ್ರಮವಾಗಿ ಚಕ್ರವರ್ತಿಯೊಂದಿಗೆ ಸಂವಾದಿಸುತ್ತಿದ್ದರು. ಚಕ್ರವರ್ತಿಯ ಘನತೆಗೆ ಸಂಬಂಧಿಸಿದ ವಿಷಯಗಳನ್ನು ಇಲ್ಲವೆ ರೋಮನ್‌ ಅಧಿಕಾರಕ್ಕೆ ಯಾವುದೇ ಬೆದರಿಕೆಯಿರುವುದಾದರೆ ಅದನ್ನು ಚಕ್ರವರ್ತಿಗೆ ವರದಿಸುವ ಅಗತ್ಯವಿತ್ತು ಮತ್ತು ಚಕ್ರವರ್ತಿಯು ಕೂಡಲೆ ಆಜ್ಞೆಯನ್ನು ಹೊರಡಿಸುತ್ತಿದ್ದನು. ಸಂಭವಿಸಿದ ಘಟನೆಗಳ ಕುರಿತು ಚಕ್ರವರ್ತಿಗೆ ಇತರರು ದೂರನ್ನು ಸಲ್ಲಿಸುವ ಮುಂಚೆ ರಾಜ್ಯಪಾಲನು ತನ್ನದೇ ಆದ ವಿವರಣೆಯನ್ನು ನೀಡಲು ಆತುರನಾಗಿರುತ್ತಿದ್ದನು. ಯೂದಾಯದಲ್ಲಿ ಸಮಸ್ಯೆಯು ಬೆಳೆಯುತ್ತಾ ಹೋದಂತೆ ಅಂಥ ಚಿಂತೆಯು ಪಿಲಾತನಿಗೂ ಉಂಟಾಯಿತು.

ಸುವಾರ್ತಾ ವೃತ್ತಾಂತಗಳಲ್ಲದೆ, ಇತಿಹಾಸಗಾರರಾದ ಫ್ಲೇವಿಯಸ್‌ ಜೋಸೀಫಸ್‌ ಮತ್ತು ಫೈಲೋ ಎಂಬವರು ಪಿಲಾತನ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ಕ್ರೈಸ್ತರು ಎಂಬ ಹೆಸರು ಯಾರಿಂದ ಬಂತೊ ಆ ಕ್ರಿಸ್ಟಸ್‌ನನ್ನು ಪಿಲಾತನು ಕೊಲ್ಲಿಸಿದನು ಎಂಬುದಾಗಿ ರೋಮನ್‌ ಇತಿಹಾಸಗಾರನಾದ ಟ್ಯಾಸಿಟಸ್‌ ಸಹ ತಿಳಿಸಿದ್ದಾನೆ.

ಅನ್ಯಾಯಕ್ಕೊಳಗಾದ ಯೆಹೂದ್ಯರು ಉದ್ರೇಕಿತರಾದರು

ಪ್ರತಿಮೆಗಳನ್ನು ಮಾಡುವುದನ್ನು ಯೆಹೂದ್ಯರು ವಿರೋಧಿಸುತ್ತಿದ್ದ ಕಾರಣ, ಅವರಿಗೆ ಪರಿಗಣನೆಯನ್ನು ತೋರಿಸಿ ರೋಮನ್‌ ರಾಜ್ಯಪಾಲರು ಯೆರೂಸಲೇಮಿನ ಒಳಕ್ಕೆ ಚಕ್ರವರ್ತಿಯ ಪ್ರತೀಕವನ್ನು ಹೊಂದಿದ್ದ ಮಿಲಿಟರಿ ಪತಾಕೆಗಳನ್ನು ತೆಗೆದುಕೊಂಡು ಹೋಗುತ್ತಿರಲಿಲ್ಲ ಎಂದು ಜೋಸೀಫಸ್‌ ತಿಳಿಸುತ್ತಾನೆ. ಆದರೆ, ಪಿಲಾತನು ಇಂಥ ಯಾವುದೇ ಪರಿಗಣನೆಯನ್ನು ತೋರಿಸಲಿಲ್ಲ. ಇದರಿಂದಾಗಿ ಕುಪಿತರಾದ ಯೆಹೂದ್ಯರು, ಪಿಲಾತನ ವಿರುದ್ಧ ದೂರು ಹೇಳಲು ಕೈಸರೈಯಕ್ಕೆ ಧಾವಿಸಿದರು. ಐದು ದಿವಸಗಳ ತನಕ ಪಿಲಾತನು ಯಾವುದೇ ಕ್ರಿಯೆಯನ್ನು ಕೈಗೊಳ್ಳಲಿಲ್ಲ. ಆರನೇ ದಿನದಂದು ಅವನು ತನ್ನ ಸೈನಿಕರಿಗೆ, ಪ್ರತಿಭಟಕರನ್ನು ಸುತ್ತುವರಿದು ಅವರು ಒಂದುವೇಳೆ ತಮ್ಮ ತಮ್ಮ ಸ್ಥಳಕ್ಕೆ ಹಿಂದಿರುಗಿ ಹೋಗದಿದ್ದರೆ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕುವಂತೆ ಆಜ್ಞಾಪಿಸಿದನು. ಆದರೆ ಯೆಹೂದ್ಯರು, ತಮ್ಮ ಧರ್ಮಶಾಸ್ತ್ರವು ಉಲ್ಲಂಘಿಸಲ್ಪಡುವುದನ್ನು ನೋಡುವ ಬದಲು ತಾವು ಸಾಯುವುದೇ ಮೇಲು ಎಂದು ಹೇಳಿದಾಗ, ಪಿಲಾತನು ತನ್ನ ಮನಸ್ಸನ್ನು ಬದಲಾಯಿಸಿ ಪ್ರತಿಮೆಗಳನ್ನು ಯೆರೂಸಲೇಮಿನಿಂದ ತೆಗೆದುಬಿಡುವಂತೆ ಆಜ್ಞಾಪಿಸಿದನು.

ಪಿಲಾತನಿಗೆ ಬಲಾತ್ಕಾರವನ್ನು ಉಪಯೋಗಿಸುವ ಸಾಮರ್ಥ್ಯವಿತ್ತು. ಜೋಸೀಫಸನಿಂದ ದಾಖಲಿಸಲ್ಪಟ್ಟಿರುವ ಒಂದು ಘಟನೆಯಲ್ಲಿ, ಯೆರೂಸಲೇಮಿನೊಳಗೆ ನೀರಿನ ಸರಬರಾಯಿಗಾಗಿ ಕಾಲುವೆಯನ್ನು ಸರಿಪಡಿಸುವ ಕೆಲಸವನ್ನು ಪಿಲಾತನು ಆರಂಭಿಸಿದನು ಮತ್ತು ಇದಕ್ಕೆ ಬೇಕಾಗಿದ್ದ ಹಣವನ್ನು ಅವನು ದೇವಾಲಯದ ಖಜಾನೆಯಿಂದ ಉಪಯೋಗಿಸಿದನು. ಪಿಲಾತನು ಹಣವನ್ನು ಬರೀ ಕಸಿದುಕೊಳ್ಳಲಿಲ್ಲ, ಏಕೆಂದರೆ ಹಾಗೆ ಮಾಡುವುದಾದರೆ ಅದು ದೇವಾಲಯದಿಂದ ಹಣವನ್ನು ಕದಿಯುವುದಕ್ಕೆ ಸಮಾನವಾಗಿರುತ್ತದೆ ಮತ್ತು ಯೆಹೂದ್ಯರಿಗೆ ಕೋಪವನ್ನೆಬ್ಬಿಸುತ್ತದೆ ಹಾಗೂ ಅವರು ತನ್ನನ್ನು ಅಧಿಕಾರದಿಂದ ತೆಗೆದುಹಾಕುವಂತೆ ತಿಬೇರಿಯನನ್ನು ಕೇಳಿಕೊಳ್ಳುವರು ಎಂದು ಅವನಿಗೆ ತಿಳಿದಿತ್ತು. ಆದರೆ, ಪಿಲಾತನಿಗೆ ದೇವಾಲಯದ ಅಧಿಕಾರಿಗಳ ಬೆಂಬಲವೂ ಇತ್ತೆಂದು ತೋರುತ್ತದೆ. ಆದುದರಿಂದ ಆ ಅಧಿಕಾರಿಗಳು ಸ್ವಲ್ಪ ಹಣವನ್ನು ಬದಿಗಿರಿಸಿ, ಅದಕ್ಕೆ “ಕೊರ್ಬಾನ್‌” ಅಂದರೆ ಮೀಸಲಾಗಿಟ್ಟಿರುವ ಹಣ ಎಂಬುದಾಗಿ ಹೆಸರಿಟ್ಟು, ಆ ಹಣವನ್ನು ಪಟ್ಟಣದ ಪ್ರಯೋಜನಾರ್ಥವಾಗಿ ಉಪಯೋಗಿಸಬಹುದು ಎಂಬುದಾಗಿ ಹೇಳಿದರು. ಆದರೆ ಸಾವಿರಾರು ಯೆಹೂದ್ಯರು ಇದಕ್ಕೆ ವಿರುದ್ಧವಾಗಿ ತಮ್ಮ ಕೋಪವನ್ನು ವ್ಯಕ್ತಪಡಿಸಿದರು.

ಜನರ ಗುಂಪಿನ ಮಧ್ಯೆ ಸೇರಿ, ವಿರೋಧಿಸುವವರನ್ನು ದೊಣ್ಣೆಗಳಿಂದ ಹೊಡೆಯುವಂತೆ, ಆದರೆ ಕತ್ತಿಯನ್ನು ಉಪಯೋಗಿಸದಿರುವಂತೆ ಪಿಲಾತನು ತನ್ನ ಸೈನಿಕರಿಗೆ ಆಜ್ಞಾಪಿಸಿದನು. ಅವನು ಹತ್ಯೆಗೈಯದೆ ಗಲಭೆಯ ಗುಂಪನ್ನು ಹತೋಟಿಗೆ ತರಲು ಬಯಸಿದನೆಂಬುದು ಸ್ಪಷ್ಟ. ಇದರಿಂದ ಕೆಲವರು ಮೃತಪಟ್ಟರಾದರೂ ಅವನು ಬಯಸಿದ ಸಂಗತಿಯು ನೆರವೇರಿತು. ಆದುದರಿಂದಲೇ, ಪಿಲಾತನು ಗಲಿಲಾಯದವರ ರಕ್ತವನ್ನು ಅವರು ಕೊಟ್ಟ ಬಲಿಗಳ ಸಂಗಡ ಬೆರಸಿದ್ದಾನೆ ಎಂದು ಕೆಲವರು ಯೇಸುವಿಗೆ ವರದಿಸಿದಾಗ, ಅವರು ಈ ಘಟನೆಯನ್ನೇ ಸೂಚಿಸುತ್ತಿದ್ದಿರಬಹುದು.​—⁠ಲೂಕ 13:⁠1.

“ಸತ್ಯವಂದರೇನು?”

ಪಿಲಾತನನ್ನು ಕುಪ್ರಸಿದ್ಧಗೊಳಿಸಿದ ವಿಷಯವು, ಯೇಸು ತನ್ನನ್ನು ರಾಜನೆಂಬುದಾಗಿ ಹೇಳಿಕೊಳ್ಳುತ್ತಾನೆ ಎಂದು ಯೆಹೂದಿ ಮಹಾ ಯಾಜಕರು ಮತ್ತು ಹಿರೀಪುರುಷರು ಹೊರಿಸಿದ ಆಪಾದನೆಯನ್ನು ಅವನು ತನಿಖೆಮಾಡಲು ಹೊರಟದ್ದೇ ಆಗಿದೆ. ಯೇಸು ತಾನು ಸತ್ಯದ ವಿಷಯದಲ್ಲಿ ಸಾಕ್ಷಿಹೇಳುವುದಕ್ಕೋಸ್ಕರ ಹುಟ್ಟಿದ್ದೇನೆ ಎಂದು ಹೇಳಿದಾಗ, ಯೇಸುವಿನಿಂದ ರೋಮ್‌ಗೆ ಯಾವುದೇ ಬೆದರಿಕೆಯಿಲ್ಲ ಎಂಬುದನ್ನು ಪಿಲಾತನು ಕಂಡುಕೊಂಡನು. “ಸತ್ಯವಂದರೇನು?” ಎಂದು ಅವನು ಕೇಳಿದನು. ಸತ್ಯ ಎಂಬ ವಿಷಯವು ಹೆಚ್ಚಿನ ಜನರ ಗಮನವನ್ನು ಸೆಳೆಯಸಾಧ್ಯವಿರದ ಅತಿ ಜಟಿಲವಾದ ಸಂಗತಿಯಾಗಿತ್ತು ಎಂದು ಅವನು ಭಾವಿಸಿದನು ಎಂಬುದು ಸುವ್ಯಕ್ತ. ಅವನ ಅಂತಿಮ ತೀರ್ಮಾನ ಏನಾಗಿತ್ತು? “ಈ ಮನುಷ್ಯನಲ್ಲಿ ನನಗೆ ಯಾವ ಅಪರಾಧವೂ ಕಾಣಿಸುವದಿಲ್ಲ.”​—⁠ಯೋಹಾನ 18:​37, 38; ಲೂಕ 23:⁠4.

ಇದು ಯೇಸುವಿನ ವಿಚಾರಣೆಗೆ ಕೊನೆಯಾಗಿರಬೇಕಿತ್ತು, ಆದರೆ ಯೆಹೂದ್ಯರು ವಿಷಯವನ್ನು ಅಲ್ಲಿಗೇ ಬಿಟ್ಟುಬಿಡಲಿಲ್ಲ. ಯೇಸು ತಮ್ಮ ದೇಶದವರ ಮನಸ್ಸನ್ನು ಕೆಡಿಸುತ್ತಿದ್ದಾನೆ ಎಂದು ಅವರು ದೂರಿಟ್ಟರು. ಮಹಾ ಯಾಜಕರು ಈ ರೀತಿ ಯೇಸುವನ್ನು ಹಿಡಿದುಕೊಡಲು ಹೊಟ್ಟೆಕಿಚ್ಚೇ ಕಾರಣವಾಗಿತ್ತು ಮತ್ತು ಪಿಲಾತನಿಗೆ ಇದು ತಿಳಿದಿತ್ತು. ಯೇಸುವನ್ನು ಬಿಡುಗಡೆಗೊಳಿಸಿದರೆ ಅದು ಸಮಸ್ಯೆಯನ್ನು ತರುತ್ತದೆ ಎಂಬುದನ್ನು ಪಿಲಾತನು ಸಹ ತಿಳಿದಿದ್ದನು ಮತ್ತು ಸಮಸ್ಯೆಯು ಏಳದಂತೆ ನೋಡಿಕೊಳ್ಳಲು ಬಯಸಿದ್ದನು. ಏಕೆಂದರೆ, ಈಗಾಗಲೇ ಅವನು ಬೇಕಾದಷ್ಟು ಸಮಸ್ಯೆಗಳನ್ನು ಎದುರಿಸಿದ್ದನು. ಆ ಸಮಯದಲ್ಲಾಗಲೇ, ರಾಜದ್ರೋಹ ಮತ್ತು ಕೊಲೆಯ ಆಪಾದನೆಯಿಂದ ಬರಬ್ಬನು ಮತ್ತು ಇತರರು ಸೆರೆವಾಸದಲ್ಲಿದ್ದರು. (ಮಾರ್ಕ 15:​7, 10; ಲೂಕ 23:⁠2) ಮಾತ್ರವಲ್ಲದೆ, ಯೆಹೂದ್ಯರೊಂದಿಗೆ ಈ ಮುಂಚೆ ನಡೆದಿದ್ದ ವಾದವಿವಾದಗಳು, ಕೆಟ್ಟ ರಾಜ್ಯಪಾಲರೊಂದಿಗೆ ಕ್ರೂರವಾಗಿ ನಡೆದುಕೊಳ್ಳುವುದರಲ್ಲಿ ಪ್ರಖ್ಯಾತನಾಗಿದ್ದ ತಿಬೇರಿಯನ ಮುಂದೆ ಪಿಲಾತನ ಸತ್ಕೀರ್ತಿಯನ್ನು ಹಾಳುಮಾಡಿದ್ದವು. ಹಾಗಿದ್ದರೂ, ಯೆಹೂದ್ಯರಿಗೆ ತಲೆಬಾಗುವುದು ಬಲಹೀನತೆಯನ್ನು ಸೂಚಿಸುತ್ತಿತ್ತು. ಆದುದರಿಂದ ಪಿಲಾತನು ಒಂದು ಉಭಯಸಂಕಟದಲ್ಲಿ ಸಿಲುಕಿದ್ದನು.

ಯೇಸು ಕ್ರಿಸ್ತನು ಎಲ್ಲಿಯವನೆಂದು ತಿಳಿದುಕೊಂಡ ಬಳಿಕ, ಪಿಲಾತನು ಈ ಮೊಕದ್ದಮೆಯನ್ನು ಗಲಿಲಾಯದ ಜಿಲ್ಲಾಧಿಕಾರಿಯಾದ ಹೆರೋದ ಅಂತಿಪನಿಗೆ ದಾಟಿಸಲು ಪ್ರಯತ್ನಿಸಿದನು. ಆದರೆ ಅದು ಅಸಫಲವಾದಾಗ, ಯೆಹೂದಿ ಸಂಪ್ರದಾಯಕ್ಕನುಸಾರ ಪಸ್ಕಹಬ್ಬದಂದು ಒಬ್ಬ ಕೈದಿಯನ್ನು ಬಿಡುಗಡೆಮಾಡಬಹುದಾದ ಕಾರಣ ಯೇಸುವನ್ನು ಬಿಡುಗಡೆಮಾಡಲು ಕೇಳಿಕೊಳ್ಳುವಂತೆ ತನ್ನ ಅರಮನೆಯ ಹೊರಗೆ ನಿಂತಿದ್ದ ಜನರ ಗುಂಪನ್ನು ಪ್ರಚೋದಿಸಲು ಪ್ರಯತ್ನಿಸಿದನು. ಆದರೆ ಜನರ ಗುಂಪು ತಮಗಾಗಿ ಬರಬ್ಬನನ್ನು ಬಿಡುಗಡೆಮಾಡುವಂತೆ ಕೂಗಿಕೊಂಡಿತು.​—⁠ಲೂಕ 23:​5-19.

ಪಿಲಾತನಿಗೆ ಸರಿಯಾದದ್ದನ್ನು ಮಾಡುವ ಇಚ್ಛೆಯಿದ್ದಿರಬಹುದು, ಆದರೆ ಅದೇ ಸಮಯದಲ್ಲಿ ಅವನಿಗೆ ತನ್ನನ್ನು ರಕ್ಷಿಸಿಕೊಳ್ಳುವ ಮತ್ತು ಜನರ ಗುಂಪನ್ನು ಮೆಚ್ಚಿಸುವ ಇಚ್ಛೆಯೂ ಇತ್ತು. ಅಂತಿಮವಾಗಿ, ಅವನು ತನ್ನ ಮನಸ್ಸಾಕ್ಷಿ ಮತ್ತು ನ್ಯಾಯಕ್ಕಿಂತ ತನ್ನ ಸ್ಥಾನವನ್ನು ಪ್ರಾಮುಖ್ಯವಾಗಿ ಪರಿಗಣಿಸಿದನು. ನೀರನ್ನು ತರುವಂತೆ ಹೇಳಿ, ಅವನು ತನ್ನ ಕೈಗಳನ್ನು ತೊಳೆದುಕೊಂಡನು ಮತ್ತು ಈ ನಿರಪರಾಧಿ ಮನುಷ್ಯನ ರಕ್ತಾಪರಾಧದಿಂದ ತಾನು ವಿಮುಕ್ತನು ಎಂದು ಹೇಳಿಕೊಂಡನು. * ಯೇಸು ಒಬ್ಬ ನಿರಪರಾಧಿಯಾಗಿದ್ದನು ಎಂಬುದನ್ನು ಪಿಲಾತನು ನಂಬಿದ್ದನಾದರೂ, ಅವನು ಯೇಸುವನ್ನು ಕೊರಡೆಗಳಿಂದ ಹೊಡೆಸಿದನು ಮತ್ತು ಸಿಪಾಯಿಗಳು ಅವನಿಗೆ ಅಪಹಾಸ್ಯಮಾಡಿ, ಹೊಡೆದು ಅವನ ಮೇಲೆ ಉಗುಳುವಂತೆ ಅನುಮತಿಸಿದನು.​—⁠ಮತ್ತಾಯ 27:​24-31.

ಪಿಲಾತನು ಯೇಸುವನ್ನು ಬಿಡುಗಡೆಮಾಡಲು ಅಂತಿಮ ಪ್ರಯತ್ನವನ್ನು ಸಹ ಮಾಡಿದನು, ಆದರೆ ಹಾಗೆ ಮಾಡಿದರೆ ಅವನು ಕೈಸರನ ಮಿತ್ರನಲ್ಲ ಎಂದು ಜನರ ಗುಂಪು ಕೂಗಿ ಹೇಳಿತು. (ಯೋಹಾನ 19:12) ಆಗ ಪಿಲಾತನು ತನ್ನ ಪ್ರಯತ್ನವನ್ನು ಕೈಬಿಟ್ಟನು. ಪಿಲಾತನ ನಿರ್ಣಯದ ಕುರಿತು ಒಬ್ಬ ವಿದ್ವಾಂಸನು ಹೇಳಿದ್ದು: “ಪರಿಹಾರವು ಸುಲಭವಾಗಿತ್ತು: ಆ ಮನುಷ್ಯನನ್ನು ಕೊಲ್ಲುವುದು. ನಷ್ಟವಾಗುವುದು ಕೇವಲ ಒಬ್ಬ ಅಲ್ಪ ಯೆಹೂದ್ಯನ ಜೀವ, ಅಷ್ಟೆ; ಅವನನ್ನು ಉಳಿಸಿಕೊಳ್ಳಲಿಕ್ಕಾಗಿ ಸಮಸ್ಯೆಯನ್ನು ಮುಂದುವರಿಯುವಂತೆ ಬಿಡುವುದು ಮೂರ್ಖತನ.”

ಪಿಲಾತನಿಗೆ ಏನು ಸಂಭವಿಸಿತು?

ಪಿಲಾತನ ಜೀವನದಲ್ಲಿ ದಾಖಲಾದ ಕೊನೆಯ ಘಟನೆಯು ಇನ್ನೊಂದು ಜಗಳವಾಗಿದೆ. ಮೋಶೆಯು ಗೆರಿಜ್ಜೀಮ್‌ ಬೆಟ್ಟದ ಮೇಲೆ ನಿಧಿಯನ್ನು ಹೂತಿಟ್ಟಿದ್ದಾನೆ ಎಂದು ನಂಬಲಾಗಿತ್ತು ಮತ್ತು ಆ ನಿಧಿಯನ್ನು ಹೊರತೆಗೆಯುವ ನಿರೀಕ್ಷೆಯಲ್ಲಿ ಶಸ್ತ್ರಸಜ್ಜಿತರಾದ ಅಸಂಖ್ಯಾತ ಸಮಾರ್ಯರು ಅಲ್ಲಿ ಒಟ್ಟುಗೂಡಿದ್ದರು. ಆಗ ಪಿಲಾತನು ಮಧ್ಯೆಪ್ರವೇಶಿಸಿದನು ಮತ್ತು ಅವನ ಸೈನಿಕರು ಸಮಾರ್ಯದವರಲ್ಲಿ ಅನೇಕರನ್ನು ಕೊಂದರು. ಸಮಾರ್ಯದವರು ಸಿರಿಯದ ರಾಜ್ಯಪಾಲನಾದ ಲೂಕ್ಯುಸ್‌ ವಿಟೇಲಿಯುಸ್‌ ಎಂಬ ಪಿಲಾತನ ಮೇಲಧಿಕಾರಿಗೆ ದೂರಿಟ್ಟರು. ಪಿಲಾತನು ತನ್ನ ಮಿತಿಯನ್ನು ಮೀರಿದ್ದಾನೆ ಎಂದು ಲೂಕ್ಯುಸ್‌ಗೆ ಅನಿಸಿತೊ ಇಲ್ಲವೊ ಎಂಬುದು ತಿಳಿದಿಲ್ಲವಾದರೂ, ಪಿಲಾತನು ತಾನು ಮಾಡಿದ ಈ ಕೃತ್ಯಕ್ಕೆ ರೋಮಿನ ಚಕ್ರವರ್ತಿಯ ಮುಂದೆ ಉತ್ತರವನ್ನು ನೀಡಬೇಕು ಎಂಬುದಾಗಿ ಆಜ್ಞಾಪಿಸಿದನು. ಆದರೆ ಪಿಲಾತನು ರೋಮಿಗೆ ಬರುವ ಮುನ್ನ ಚಕ್ರವರ್ತಿ ತಿಬೇರಿಯನು ಮರಣವನ್ನಪ್ಪಿದನು.

“ಆ ಕಾಲಘಟ್ಟದಿಂದ ಪಿಲಾತನು ಇತಿಹಾಸದ ದಾಖಲೆಯಿಂದ ಇಲ್ಲದೇ ಹೋಗಿ, ಬರೀ ದಂತ ಕಥೆಗಳಲ್ಲಿ ಕಂಡುಬಂದನು” ಎಂಬುದಾಗಿ ಒಂದು ಪತ್ರಿಕೆಯು ತಿಳಿಸುತ್ತದೆ. ಆದರೆ ಕಳೆದುಹೋಗಿರುವ ಈ ಮಾಹಿತಿಯನ್ನು ಒದಗಿಸಲು ಅನೇಕರು ಪ್ರಯತ್ನಿಸಿದ್ದಾರೆ. ಪಿಲಾತನು ಆಮೇಲೆ ಕ್ರೈಸ್ತನಾದನು ಎಂದು ವಾದಿಸಲಾಗಿದೆ. ಇತಿಯೋಪಿಯದ “ಕ್ರೈಸ್ತರು” ಅವನನ್ನು “ಸಂತ”ನನ್ನಾಗಿ ಮಾಡಿದರು. ಪಿಲಾತನು ಇಸ್ಕರಿಯೋತ ಯೂದನಂತೆ ಆತ್ಮಹತ್ಯೆಮಾಡಿಕೊಂಡನು ಎಂಬುದಾಗಿ ತಿಳಿಸಿರುವ ಅನೇಕರಲ್ಲಿ, ಮೂರನೇ ಶತಮಾನದ ಕೊನೆಯ ಮತ್ತು ನಾಲ್ಕನೇ ಶತಮಾನದ ಆರಂಭದ ಬರಹಗಾರನಾದ ಯುಸೀಬಿಯಸ್‌ನು ಮೊದಲಿಗನಾಗಿದ್ದನು. ಹಾಗಿದ್ದರೂ, ನಿಜವಾಗಿ ಪಿಲಾತನಿಗೆ ಏನು ಸಂಭವಿಸಿತು ಎಂಬುದು ಯಾರಿಗೂ ತಿಳಿಯದ ಸಂಗತಿಯಾಗಿದೆ.

ಪಿಲಾತನು ಹಟಮಾರಿಯಾದ, ಗಾಂಭೀರ್ಯವಿಲ್ಲದ ಮತ್ತು ಒರಟಾದ ವ್ಯಕ್ತಿಯಾಗಿದ್ದಿರಸಾಧ್ಯವಿದೆ. ಆದರೂ ಅವನು ತನ್ನ ಪದವಿಯನ್ನು ಹತ್ತು ವರುಷಗಳ ಕಾಲ ಉಳಿಸಿಕೊಂಡನು. ಹೆಚ್ಚಿನ ಅಧಿಕಾರಿಗಳು ಅಷ್ಟು ಕಾಲದ ವರೆಗೆ ಆ ಸ್ಥಾನದಲ್ಲಿ ಉಳಿಯಲಿಲ್ಲ. ಆದುದರಿಂದ ರೋಮನರ ದೃಷ್ಟಿಯಲ್ಲಿ ಪಿಲಾತನು ಒಬ್ಬ ಸಮರ್ಥ ವ್ಯಕ್ತಿಯಾಗಿದ್ದನು. ಅವನನ್ನು ಹೇಡಿ ಎಂಬುದಾಗಿಯೂ ಕರೆಯಲಾಗಿದೆ, ಏಕೆಂದರೆ ತನ್ನನ್ನು ರಕ್ಷಿಸಿಕೊಳ್ಳುವ ಉದ್ದೇಶದಿಂದ ಅವನು ಯೇಸುವನ್ನು ಹಿಂಸಿಸಿ ಕೊಲ್ಲಿಸಿದನು. ಇನ್ನೂ ಕೆಲವರು ವಾದಿಸುವುದೇನೆಂದರೆ, ಪಿಲಾತನ ಕೆಲಸವು ನ್ಯಾಯವನ್ನು ಎತ್ತಿಹಿಡಿಯುವುದಕ್ಕಿಂತ ಹೆಚ್ಚಾಗಿ ಶಾಂತಿಯನ್ನು ಮತ್ತು ರೋಮನರ ಅಭಿರುಚಿಗಳನ್ನು ಕಾಪಾಡುವುದೇ ಆಗಿತ್ತು.

ಪಿಲಾತನ ಸಮಯವು ನಮ್ಮದಕ್ಕಿಂತ ತೀರ ಭಿನ್ನವಾಗಿತ್ತು. ಹಾಗಿದ್ದರೂ, ಯಾವನೇ ನ್ಯಾಯಾಧೀಶನು ತನಗೆ ನಿರಪರಾಧಿಯೆಂದು ತೋರಿದ ವ್ಯಕ್ತಿಯನ್ನು ನ್ಯಾಯವಾಗಿ ಅಪರಾಧಿಯೆಂದು ಖಂಡಿಸಲಾರನು. ಒಂದುವೇಳೆ ಪೊಂತ್ಯ ಪಿಲಾತನು ಯೇಸುವನ್ನು ಭೇಟಿಯಾಗದಿರುತ್ತಿದ್ದಲ್ಲಿ, ಇತಿಹಾಸದ ಪುಟಗಳಲ್ಲಿ ಅವನೊಬ್ಬ ಸಾಮಾನ್ಯ ವ್ಯಕ್ತಿಯಾಗಿರುತ್ತಿದ್ದನಷ್ಟೆ.

[ಪಾದಟಿಪ್ಪಣಿ]

^ ಪ್ಯಾರ. 19 ರಕ್ತಪಾತದಲ್ಲಿ ತಾನು ಭಾಗಿಯಾಗುವುದಿಲ್ಲ ಎಂಬುದನ್ನು ಸೂಚಿಸಲು ಕೈಗಳನ್ನು ತೊಳೆಯುವುದು ಯೆಹೂದಿ ಪದ್ಧತಿಯಾಗಿತ್ತು, ರೋಮನ್‌ ಪದ್ಧತಿಯಲ್ಲ.​—⁠ಧರ್ಮೋಪದೇಶಕಾಂಡ 21:​6, 7.

[ಪುಟ 11ರಲ್ಲಿರುವ ಚಿತ್ರ]

ಪೊಂತ್ಯ ಪಿಲಾತನನ್ನು ಯೆಹೂದದ ರಾಜ್ಯಪಾಲನಾಗಿ ಗುರುತಿಸುವ ಈ ಬರಹವು ಕೈಸರೈಯದಲ್ಲಿ ಕಂಡುಬಂತು