ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೇಸು ಕ್ರಿಸ್ತನು ಯಾರು?

ಯೇಸು ಕ್ರಿಸ್ತನು ಯಾರು?

ಯೇಸು ಕ್ರಿಸ್ತನು ಯಾರು?

ನಜರೇತಿನ ಯೇಸುವಿನ ಮಾತುಗಳನ್ನು ಮೊದಲ ಬಾರಿ ಕೇಳಿಸಿಕೊಂಡಾಗ ಯುವ ಯೆಹೂದ್ಯನಾದ ಆಂದ್ರೆಯನು ಎಷ್ಟು ಪುಳಕಿತನಾಗಿದ್ದಿರಬೇಕು ಎಂಬುದನ್ನು ಕಲ್ಪಿಸಿಕೊಳ್ಳಿ! ಕೂಡಲೆ ಆಂದ್ರೆಯನು ತನ್ನ ಅಣ್ಣನ ಬಳಿಗೆ ಓಡಿಹೋಗಿ, “ಮೆಸ್ಸೀಯನು [ಅಥವಾ, ಕ್ರಿಸ್ತನು] ನಮಗೆ ಸಿಕ್ಕಿದನು” ಎಂಬುದಾಗಿ ಹೇಳಿದನೆಂದು ಬೈಬಲ್‌ ತಿಳಿಸುತ್ತದೆ. (ಯೋಹಾನ 1:41) ಹೀಬ್ರು ಮತ್ತು ಗ್ರೀಕ್‌ ಭಾಷೆಯಲ್ಲಿ, “ಮೆಸ್ಸೀಯ” ಮತ್ತು “ಕ್ರಿಸ್ತ” ಎಂದು ಸಾಮಾನ್ಯವಾಗಿ ಭಾಷಾಂತರಿಸಲ್ಪಟ್ಟಿರುವ ಪದಗಳ ಅರ್ಥವು “ಅಭಿಷೇಕಿಸಲ್ಪಟ್ಟವನು” ಎಂದಾಗಿದೆ. ಯೇಸು ಅಭಿಷೇಕಿಸಲ್ಪಟ್ಟವನು ಅಥವಾ ದೇವರಿಂದ ಆರಿಸಿಕೊಳ್ಳಲ್ಪಟ್ಟವನು ಆಗಿದ್ದನು. ಅವನು ಒಬ್ಬ ವಾಗ್ದತ್ತ ನಾಯಕನಾಗಿದ್ದನು. (ಯೆಶಾಯ 55:⁠4) ಶಾಸ್ತ್ರಗಳಲ್ಲಿ ಅವನ ಕುರಿತಾಗಿ ಪ್ರವಾದನ ಮಾತುಗಳಿವೆ ಮತ್ತು ಆ ಸಮಯದ ಯೆಹೂದ್ಯರು ಅವನನ್ನು ಎದುರುನೋಡುತ್ತಿದ್ದರು.​—⁠ಲೂಕ 3:15.

ಯೇಸು ನಿಜವಾಗಿಯೂ ದೇವರಿಂದ ಆರಿಸಿಕೊಳ್ಳಲ್ಪಟ್ಟವನಾಗಿದ್ದನು ಎಂಬುದು ನಮಗೆ ಹೇಗೆ ತಿಳಿದಿದೆ? ಸಾ.ಶ. 29ರಲ್ಲಿ ಯೇಸು ಕ್ರಿಸ್ತನು 30 ವರುಷದವನಾಗಿದ್ದಾಗ ಏನು ಸಂಭವಿಸಿತು ಎಂಬುದನ್ನು ಪರಿಗಣಿಸಿರಿ. ಯೊರ್ದನ್‌ ಹೊಳೆಯಲ್ಲಿ ದೀಕ್ಷಾಸ್ನಾನವನ್ನು ಪಡೆದುಕೊಳ್ಳಲು ಅವನು ಸ್ನಾನಿಕನಾದ ಯೋಹಾನನ ಬಳಿಗೆ ಹೋದನು. ಬೈಬಲ್‌ ತಿಳಿಸುವುದು: “ಯೇಸು ಸ್ನಾನಮಾಡಿಸಿಕೊಂಡ ಕೂಡಲೆ ನೀರಿನಿಂದ ಮೇಲಕ್ಕೆ ಬರಲು ಇಗೋ, ಆತನಿಗೆ ಆಕಾಶವು ತೆರೆಯಿತು; ಮತ್ತು ದೇವರ ಆತ್ಮ ಪಾರಿವಾಳದ ಹಾಗೆ ಇಳಿದು ತನ್ನ ಮೇಲೆ ಬರುವದನ್ನು ಕಂಡನು. ಆಗ​—⁠ಈತನು ಪ್ರಿಯನಾಗಿರುವ ನನ್ನ ಮಗನು, ಈತನನ್ನು ನಾನು ಮೆಚ್ಚಿದ್ದೇನೆ ಎಂದು ಆಕಾಶವಾಣಿ ಆಯಿತು.” (ಮತ್ತಾಯ 3:16, 17) ಅಂಗೀಕಾರದ ಈ ಮಾತುಗಳನ್ನು ಯೋಹಾನನು ಕೇಳಿಸಿಕೊಂಡ ಬಳಿಕ, ಯೇಸು ದೇವರಿಂದ ಆರಿಸಿಕೊಳ್ಳಲ್ಪಟ್ಟವನು ಎಂಬುದರಲ್ಲಿ ಅವನಿಗೆ ಯಾವುದೇ ಸಂದೇಹವಿರಸಾಧ್ಯವಿತ್ತೊ? ಯೇಸುವಿನ ಮೇಲೆ ತನ್ನ ಪವಿತ್ರಾತ್ಮವನ್ನು ಸುರಿಸುವ ಮೂಲಕ ಯೆಹೋವ ದೇವರು ಅವನನ್ನು ಅಭಿಷೇಕಿಸಿದನು ಅಥವಾ ಮುಂಬರಲಿದ್ದ ತನ್ನ ರಾಜ್ಯದ ರಾಜನನ್ನಾಗಿ ನೇಮಿಸಿದನು. ಯೇಸು ಈ ರೀತಿಯಲ್ಲಿ ಯೇಸು ಕ್ರಿಸ್ತನಾದನು ಇಲ್ಲವೆ ಅಭಿಷೇಕಿಸಲ್ಪಟ್ಟ ಯೇಸುವಾದನು. ಆದರೆ, ಯಾವ ಅರ್ಥದಲ್ಲಿ ಯೇಸು ದೇವರ ಮಗನಾಗಿದ್ದನು? ಅವನ ಮೂಲವು ಯಾವುದಾಗಿತ್ತು?

ಅವನ ಮೂಲವು “ಪುರಾತನ”ದ್ದಾಗಿತ್ತು

ಯೇಸುವಿನ ಜೀವನಪಥವನ್ನು ಮೂರು ಹಂತಗಳಾಗಿ ವಿಭಾಗಿಸಬಹುದು. ಮೊದಲನೇ ಹಂತವು, ಅವನು ಮಾನವನಾಗಿ ಜನಿಸುವ ಬಹಳ ಮುಂಚೆಯೇ ಆರಂಭಗೊಂಡಿತು. ಅವನ ಮೂಲವು “ಪುರಾತನವೂ ಅನಾದಿಯೂ ಆದದ್ದು” ಎಂದು ಮೀಕ 5:2 ತಿಳಿಸುತ್ತದೆ. “ನಾನು ಮೇಲಿನವನು,” ಅಂದರೆ ಸ್ವರ್ಗದಿಂದ ಬಂದವನು ಎಂದು ಸ್ವತಃ ಯೇಸುವೇ ಹೇಳಿದನು. (ಯೋಹಾನ 8:23) ಅವನು ಭೂಮಿಯಲ್ಲಿ ಮಗುವಾಗಿ ಜನಿಸುವ ಮುನ್ನ ಸ್ವರ್ಗದಲ್ಲಿ ಒಬ್ಬ ಬಲಾಢ್ಯ ಆತ್ಮಜೀವಿಯಾಗಿದ್ದನು.

ಸೃಷ್ಟಿಸಲ್ಪಟ್ಟಿರುವ ಎಲ್ಲ ವಿಷಯಗಳಿಗೆ ಒಂದು ಆರಂಭವಿರುವ ಕಾರಣ, ದೇವರು ಒಂಟಿಗನಾಗಿದ್ದ ಒಂದು ಸಮಯವಿತ್ತು. ಆದರೆ, ಅಸಂಖ್ಯಾತ ವರುಷಗಳ ಹಿಂದೆ ದೇವರು ಸೃಷ್ಟಿಕ್ರಿಯೆಯನ್ನು ಆರಂಭಿಸಿದನು. ಆತನ ಪ್ರಥಮ ಸೃಷ್ಟಿಯು ಯಾರಾಗಿದ್ದನು? ಬೈಬಲಿನ ಕೊನೆಯ ಪುಸ್ತಕವು ಯೇಸುವನ್ನು ‘ದೇವರ ಸೃಷ್ಟಿಗೆ ಮೂಲನು’ ಎಂಬುದಾಗಿ ಗುರುತಿಸುತ್ತದೆ. (ಪ್ರಕಟನೆ 3:14) ಯೇಸು “ಸೃಷ್ಟಿಗೆಲ್ಲಾ ಜ್ಯೇಷ್ಠಪುತ್ರ”ನಾಗಿದ್ದಾನೆ. ಏಕೆಂದರೆ, “ಭೂಪರಲೋಕಗಳಲ್ಲಿರುವ ದೃಶ್ಯಾದೃಶ್ಯವಾದವುಗಳೆಲ್ಲವೂ . . . ಆತನಲ್ಲಿ ಸೃಷ್ಟಿಸಲ್ಪಟ್ಟವು.” (ಕೊಲೊಸ್ಸೆ 1:​15, 16) ದೇವರಿಂದ ಸ್ವತಃ ನೇರವಾಗಿ ಸೃಷ್ಟಿಸಲ್ಪಟ್ಟವನು ಯೇಸು ಮಾತ್ರವೇ ಆಗಿದ್ದಾನೆ. ಆದುದರಿಂದ, ಅವನನ್ನು ದೇವರ “ಒಬ್ಬನೇ ಮಗ” ಎಂದು ಕರೆಯಲಾಗಿದೆ. (ಯೋಹಾನ 3:16) ಜ್ಯೇಷ್ಠಪುತ್ರನಿಗೆ “ವಾಕ್ಯ” ಎಂಬ ಬಿರುದೂ ಇದೆ. (ಯೋಹಾನ 1:14) ಏಕೆ? ಏಕೆಂದರೆ, ಮಾನವನಾಗಿ ಜನಿಸುವ ಮುನ್ನ ಸ್ವರ್ಗದಲ್ಲಿ ಅವನು ದೇವರ ವದನಕನಾಗಿ ಸೇವೆಸಲ್ಲಿಸಿದನು.

‘ಆದಿಯಲ್ಲಿ ಆಕಾಶವೂ ಭೂಮಿಯೂ’ ಉಂಟುಮಾಡಲ್ಪಟ್ಟಾಗ, “ವಾಕ್ಯ” ಎಂಬವನು ಯೆಹೋವ ದೇವರೊಂದಿಗಿದ್ದನು. “ನಮ್ಮ ಸ್ವರೂಪದಲ್ಲಿ . . . ಮನುಷ್ಯರನ್ನು ಉಂಟುಮಾಡೋಣ” ಎಂಬುದಾಗಿ ದೇವರು ಹೇಳಿದ್ದು ಈತನಿಗೇ. (ಯೋಹಾನ 1:1; ಆದಿಕಾಂಡ 1:​1, 26) ಯೆಹೋವನ ಜ್ಯೇಷ್ಠಪುತ್ರನು ಯಾವಾಗಲೂ ತನ್ನ ತಂದೆಯ ಬಳಿಯಿದ್ದು, ಆತನೊಂದಿಗೆ ಕ್ರಿಯಾಶೀಲನಾಗಿ ಕೆಲಸಮಾಡುತ್ತಿದ್ದನು. ಜ್ಞಾನೋಕ್ತಿ 8:​22-31ರಲ್ಲಿ ಅವನು ಹೀಗೆ ತಿಳಿಸುವುದಾಗಿ ಪ್ರತಿನಿಧಿಸಲಾಗಿದೆ: ‘ನಾನು ಆತನ [ಸೃಷ್ಟಿಕರ್ತನ] ಹತ್ತಿರ ಶಿಲ್ಪಿಯಾಗಿದ್ದುಕೊಂಡು ಪ್ರತಿದಿನವೂ ಆನಂದಿಸುತ್ತಾ ಯಾವಾಗಲೂ ಆತನ ಮುಂದೆ ವಿನೋದಿಸುತ್ತಾ ಇದ್ದೆನು.’

ಯೆಹೋವ ದೇವರೂ ಆತನ ಏಕಜಾತ ಪುತ್ರನೂ ಜೊತೆಜೊತೆಯಾಗಿ ಕೆಲಸಮಾಡಿದ್ದರಿಂದ, ಒಬ್ಬರನ್ನೊಬ್ಬರು ಎಷ್ಟು ಆಪ್ತವಾಗಿ ತಿಳಿದುಕೊಂಡಿರಬೇಕು! ಅಸಂಖ್ಯಾತ ವರುಷಗಳ ತನಕ ಯೆಹೋವನೊಂದಿಗಿನ ಆ ಆಪ್ತ ಸಹವಾಸವು ದೇವರ ಮಗನನ್ನು ಆಳವಾಗಿ ಪ್ರಭಾವಿಸಿತು. ಈ ವಿಧೇಯ ಮಗನು ತನ್ನ ತಂದೆಯಾದ ಯೆಹೋವನಂತೆಯೇ ಆದನು. ವಾಸ್ತವದಲ್ಲಿ ಕೊಲೊಸ್ಸೆ 1:15 ಯೇಸುವನ್ನು ‘ಅದೃಶ್ಯನಾದ ದೇವರ ಪ್ರತಿರೂಪನು’ ಎಂದು ಕರೆಯುತ್ತದೆ. ಆದುದರಿಂದಲೇ, ನಮ್ಮ ಆಧ್ಯಾತ್ಮಿಕ ಅಗತ್ಯವನ್ನು ಮತ್ತು ದೇವರ ಕುರಿತು ತಿಳಿಯಬೇಕೆಂಬ ನಮ್ಮ ಸಹಜ ಬಯಕೆಯನ್ನು ತೃಪ್ತಿಪಡಿಸಬೇಕಾದರೆ, ಯೇಸುವಿನ ಕುರಿತಾದ ಜ್ಞಾನವನ್ನು ಪಡೆಯುವುದು ಅತಿ ಪ್ರಾಮುಖ್ಯವಾಗಿದೆ. ಯೇಸು ಭೂಮಿಯಲ್ಲಿದ್ದಾಗ ಮಾಡಿದ ಎಲ್ಲ ವಿಷಯಗಳೂ ಯೆಹೋವನು ಅವನಿಂದ ಎದುರುನೋಡಿದಂಥವುಗಳೇ ಆಗಿದ್ದವು. ಆದುದರಿಂದ, ಯೇಸುವಿನ ಕುರಿತು ನಾವು ತಿಳಿದುಕೊಳ್ಳುವಾಗ ಯೆಹೋವನ ಕುರಿತಾದ ನಮ್ಮ ಜ್ಞಾನವನ್ನು ಸಹ ಅದು ಹೆಚ್ಚಿಸುತ್ತದೆ. (ಯೋಹಾನ 8:28; 14:​8-10) ಆದರೆ ಯೇಸು ಭೂಮಿಗೆ ಬಂದದ್ದು ಹೇಗೆ?

ಮಾನವನಾಗಿ ಅವನ ಜೀವನ

ಯೇಸುವಿನ ಜೀವನಪಥದ ಎರಡನೇ ಹಂತವು, ದೇವರು ಅವನನ್ನು ಈ ಭೂಮಿಗೆ ಕಳುಹಿಸಿಕೊಟ್ಟಾಗ ಆರಂಭವಾಯಿತು. ಸ್ವರ್ಗದಿಂದ ಯೇಸುವಿನ ಜೀವವನ್ನು ನಂಬಿಗಸ್ತ ಯೆಹೂದಿ ಕನ್ಯೆಯಾದ ಮರಿಯಳ ಗರ್ಭಕ್ಕೆ ಅದ್ಭುತಕರವಾಗಿ ಸ್ಥಳಾಂತರಿಸುವ ಮೂಲಕ ಯೆಹೋವನು ಇದನ್ನು ಮಾಡಿದನು. ಯೇಸು ಯಾವುದೇ ಅಪರಿಪೂರ್ಣತೆಯನ್ನು ಬಾಧ್ಯತೆಯಾಗಿ ಪಡೆಯಲಿಲ್ಲ, ಏಕೆಂದರೆ ಅವನಿಗೆ ಒಬ್ಬ ಮಾನವ ತಂದೆಯಿರಲಿಲ್ಲ. ಯೆಹೋವನ ಪವಿತ್ರಾತ್ಮ ಇಲ್ಲವೆ ಕಾರ್ಯಕಾರಿ ಶಕ್ತಿಯು ಮರಿಯಳ ಮೇಲೆ ಸುರಿಸಲ್ಪಟ್ಟಿತು ಮತ್ತು ಆತನ ಶಕ್ತಿಯ ನೆರಳು ಆಕೆಯ ‘ಮೇಲೆ ಬೀಳಲು’ ಆಕೆ ಅದ್ಭುತಕರವಾದ ರೀತಿಯಲ್ಲಿ ಗರ್ಭಿಣಿಯಾದಳು. (ಲೂಕ 1:​34, 35) ಹೀಗೆ, ಮರಿಯಳು ಒಂದು ಪರಿಪೂರ್ಣ ಮಗುವಿಗೆ ಜನ್ಮವಿತ್ತಳು. ಬಡಗಿಯಾದ ಯೋಸೇಫನ ಸಾಕುಮಗನಾಗಿ ಯೇಸು ಒಂದು ಬಡ ಕುಟುಂಬದ ಅನೇಕ ಮಕ್ಕಳಲ್ಲಿ ಮೊದಲನೆಯವನಾಗಿ ಬೆಳೆದನು.​—⁠ಯೆಶಾಯ 7:14; ಮತ್ತಾಯ 1:​22, 23; ಮಾರ್ಕ 6:⁠3.

ಯೇಸುವಿನ ಬಾಲ್ಯದ ಕುರಿತು ಕಿಂಚಿತ್ತೇ ತಿಳಿಸಲ್ಪಟ್ಟಿದೆಯಾದರೂ, ಒಂದು ಘಟನೆಯು ಗಮನಾರ್ಹವಾಗಿದೆ. ಯೇಸು 12 ವರುಷದವನಾಗಿದ್ದಾಗ ಅವನ ಹೆತ್ತವರು ಪಸ್ಕಹಬ್ಬಕ್ಕಾಗಿ ಯೆರೂಸಲೇಮಿಗೆ ತಾವು ನೀಡುತ್ತಿದ್ದ ವಾರ್ಷಿಕ ಭೇಟಿಯ ಸಮಯದಲ್ಲಿ ಅವನನ್ನು ತಮ್ಮೊಂದಿಗೆ ಕರೆದೊಯ್ದರು. ಅಲ್ಲಿರುವಾಗ, ಅವನು ಹೆಚ್ಚಿನ ಸಮಯವನ್ನು “ಬೋಧಕರ ನಡುವೆ ಕುಳಿತುಕೊಂಡು ಅವರ ಉಪದೇಶವನ್ನು ಕೇಳುತ್ತಾ ಪ್ರಶ್ನೆ ಮಾಡುತ್ತಾ” ಆಲಯದಲ್ಲಿ ಕಳೆದನು. ಮಾತ್ರವಲ್ಲದೆ, “ಆತನು ಆಡಿದ ಮಾತುಗಳನ್ನು ಕೇಳಿದವರೆಲ್ಲರೂ ಆತನ ಬುದ್ಧಿಗೂ ಉತ್ತರಗಳಿಗೂ ಆಶ್ಚರ್ಯಪಟ್ಟರು.” ಯೇಸು ಕ್ರಿಸ್ತನು ಆಧ್ಯಾತ್ಮಿಕ ವಿಷಯಗಳಿಗೆ ಸಂಬಂಧಿಸಿದ ವಿಚಾರಪ್ರೇರಕ ಪ್ರಶ್ನೆಗಳನ್ನು ಕೇಳಶಕ್ತನಾಗಿದ್ದದ್ದು ಮಾತ್ರವಲ್ಲದೆ, ಇತರರಿಗೆ ಆಶ್ಚರ್ಯವನ್ನುಂಟುಮಾಡುವ ಜಾಣ್ಮೆಯ ಉತ್ತರಗಳನ್ನು ಸಹ ಕೊಡಶಕ್ತನಾಗಿದ್ದನು. (ಲೂಕ 2:​41-50) ನಜರೇತಿನಲ್ಲಿ ಅವನು ಬೆಳೆಯುತ್ತಿದಾಗ, ತನ್ನ ಸಾಕುತಂದೆಯಾದ ಯೋಸೇಫನಿಂದ ಬಡಗಿಯ ಕೆಲಸವನ್ನು ಕಲಿತುಕೊಂಡನು.​—⁠ಮತ್ತಾಯ 13:55.

ಯೇಸು 30 ವರುಷದವನಾಗುವ ತನಕ ನಜರೇತಿನಲ್ಲಿ ವಾಸಿಸಿದನು. ತದನಂತರ ಅವನು ದೀಕ್ಷಾಸ್ನಾನವನ್ನು ಪಡೆದುಕೊಳ್ಳಲು ಯೋಹಾನನ ಬಳಿಗೆ ಹೋದನು. ದೀಕ್ಷಾಸ್ನಾನದ ಬಳಿಕ ಅವನು ತನ್ನ ಹುರುಪಿನ ಶುಶ್ರೂಷೆಯನ್ನು ಆರಂಭಿಸಿದನು. ಅವನು ಮೂರೂವರೆ ವರುಷ ದೇವರ ರಾಜ್ಯದ ಸುವಾರ್ತೆಯನ್ನು ಘೋಷಿಸುತ್ತಾ ತನ್ನ ಸ್ವದೇಶದಾದ್ಯಂತ ಸಂಚರಿಸಿದನು. ಅವನು ತಾನು ದೇವರಿಂದ ಕಳುಹಿಸಲ್ಪಟ್ಟವನು ಎಂಬುದಕ್ಕೆ ರುಜುವಾತನ್ನು ನೀಡಿದನು. ಹೇಗೆ? ಮಾನವ ಸಾಮರ್ಥ್ಯಕ್ಕೆ ಮಿಗಿಲಾದ ಶಕ್ತಿಯುತ ಕೆಲಸಗಳನ್ನು, ಅಂದರೆ ಅನೇಕ ಅದ್ಭುತಗಳನ್ನು ಮಾಡುವ ಮೂಲಕವೇ.​—⁠ಮತ್ತಾಯ 4:17; ಲೂಕ 19:​37, 38.

ಯೇಸು, ಕೋಮಲ ಮಮತೆ ಮತ್ತು ಆಳವಾದ ಭಾವನೆಗಳುಳ್ಳ ಒಬ್ಬ ವ್ಯಕ್ತಿಯೂ ಆಗಿದ್ದನು. ಅವನು ಇತರರನ್ನು ವೀಕ್ಷಿಸಿದ ಮತ್ತು ಉಪಚರಿಸಿದ ರೀತಿಯಲ್ಲಿ ಮುಖ್ಯವಾಗಿ ಅವನ ಕೋಮಲತೆಯು ವ್ಯಕ್ತವಾಗುತ್ತದೆ. ಯೇಸು ಸ್ನೇಹಪರನೂ ದಯೆಯುಳ್ಳವನೂ ಆಗಿದ್ದರಿಂದ, ಜನರು ಅವನ ಕಡೆಗೆ ಆಕರ್ಷಿತರಾದರು. ಮಕ್ಕಳು ಸಹ ಅವನೊಂದಿಗೆ ಹಾಯಾಗಿದ್ದರು. (ಮಾರ್ಕ 10:​13-16) ಯೇಸುವಿನ ಕಾಲದಲ್ಲಿದ್ದ ಕೆಲವರು, ಸ್ತ್ರೀಯರನ್ನು ಕೀಳಾಗಿ ಕಾಣುತ್ತಿದ್ದರೂ, ಯೇಸು ಅವರನ್ನು ಗೌರವದಿಂದ ಉಪಚರಿಸಿದನು. (ಯೋಹಾನ 4:​9, 27) ಬಡವರು ಮತ್ತು ದಬ್ಬಾಳಿಕೆಗೆ ಒಳಗಾದವರು ‘ತಮ್ಮ ಆತ್ಮಗಳಿಗೆ ವಿಶ್ರಾಂತಿಯನ್ನು’ ಕಂಡುಕೊಳ್ಳುವಂತೆ ಅವನು ಸಹಾಯಮಾಡಿದನು. (ಮತ್ತಾಯ 11:​28-30) ಅವನ ಬೋಧನಾ ರೀತಿಯು ಸ್ಪಷ್ಟ, ಸರಳ ಮತ್ತು ಪ್ರಾಯೋಗಿಕವಾಗಿತ್ತು. ಅವನೇನನ್ನು ಕಲಿಸಿದನೋ ಅದು, ತನ್ನ ಕೇಳುಗರಿಗೆ ಸತ್ಯ ದೇವರಾದ ಯೆಹೋವನ ಪರಿಚಯವನ್ನು ಮಾಡಿಸಬೇಕೆಂಬ ಅವನ ಹೃದಯಾಳದ ಇಚ್ಛೆಯನ್ನು ಪ್ರತಿಬಿಂಬಿಸಿತು.​—⁠ಯೋಹಾನ 17:​6-8.

ಅದ್ಭುತಗಳನ್ನು ನಡೆಸಲು ದೇವರ ಪವಿತ್ರಾತ್ಮವನ್ನು ಉಪಯೋಗಿಸುತ್ತಾ ಯೇಸು ಕೋಮಲತೆಯಿಂದ ಅಸ್ವಸ್ಥರನ್ನು ಮತ್ತು ಬಾಧಿತರನ್ನು ಗುಣಪಡಿಸಿದನು. (ಮತ್ತಾಯ 15:​30, 31) ಉದಾಹರಣೆಗೆ, ಒಬ್ಬ ಕುಷ್ಠರೋಗಿಯು ಅವನ ಬಳಿಗೆ ಬಂದು, “ನಿನಗೆ ಮನಸ್ಸಿದ್ದರೆ ನನ್ನನ್ನು ಶುದ್ಧ ಮಾಡಬಲ್ಲೆ” ಎಂದು ಹೇಳಿದನು. ಆಗ ಯೇಸು ಏನು ಮಾಡಿದನು? ಅವನು ತನ್ನ ಕೈಯನ್ನು ಚಾಚಿ ಅವನನ್ನು ಮುಟ್ಟಿ, “ನನಗೆ ಮನಸ್ಸುಂಟು; ಶುದ್ಧನಾಗು” ಎಂದು ಹೇಳಿದನು. ಕೂಡಲೆ ಆ ಕುಷ್ಠರೋಗಿಯು ವಾಸಿಯಾದನು.​—⁠ಮತ್ತಾಯ 8:​2-4.

ಒಂದು ಸಂದರ್ಭದಲ್ಲಿ, ಯೇಸುವಿನ ಬಳಿಗೆ ಬಂದು ಮೂರು ದಿವಸ ಉಳಿದುಕೊಂಡ ಜನರ ಗುಂಪಿನ ಕುರಿತಾಗಿ ಪರಿಗಣಿಸಿರಿ. ಅವನು ಜನರ ಕಡೆಗೆ ಕನಿಕರಪಟ್ಟು, “ಹೆಂಗಸರು ಮಕ್ಕಳು ಅಲ್ಲದೆ, ಗಂಡಸರೇ ನಾಲ್ಕು ಸಾವಿರ ಮಂದಿ” ಇದ್ದ ಆ ಜನರ ಗುಂಪಿಗೆ ಅದ್ಭುತಕರವಾಗಿ ಊಟವನ್ನು ಒದಗಿಸಿದನು. (ಮತ್ತಾಯ 15:​32-38) ಇನ್ನೊಂದು ಸಂದರ್ಭದಲ್ಲಿ, ತನ್ನ ಸ್ನೇಹಿತರ ಭದ್ರತೆಗೆ ಬೆದರಿಕೆಯನ್ನು ಉಂಟುಮಾಡಿದ ಬಿರುಗಾಳಿಯನ್ನು ಯೇಸು ಶಾಂತಗೊಳಿಸಿದನು. (ಮಾರ್ಕ 4:​37-39) ಸತ್ತವರನ್ನು ಅವನು ಪುನರುತ್ಥಾನಗೊಳಿಸಿದನು ಅಥವಾ ಪುನಃ ಜೀವಕ್ಕೆ ಎಬ್ಬಿಸಿದನು. * (ಲೂಕ 7:​22; ಯೋಹಾನ 11:​43, 44) ಮಾತ್ರವಲ್ಲದೆ, ಅಪರಿಪೂರ್ಣ ಮಾನವಕುಲವು ಭವಿಷ್ಯತ್ತಿಗಾಗಿ ನಿರೀಕ್ಷೆಯನ್ನು ಹೊಂದಸಾಧ್ಯವಾಗುವಂತೆ ಯೇಸು ತನ್ನ ಪರಿಪೂರ್ಣ ಮಾನವ ಜೀವವನ್ನು ಸಹ ಮನಃಪೂರ್ವಕವಾಗಿ ಅರ್ಪಿಸಿದನು. ಜನರಿಗಾಗಿ ಯೇಸುವಿನಲ್ಲಿ ಎಂಥ ಗಾಢವಾದ ಪ್ರೀತಿಯಿತ್ತು!

ಇಂದು ಯೇಸು ಎಲ್ಲಿದ್ದಾನೆ?

ಯೇಸು ಮೂವತ್ತಮೂರೂವರೆ ವರುಷದವನಾಗಿದ್ದಾಗ ಯಾತನಾ ಕಂಬದಲ್ಲಿ ಮೃತಪಟ್ಟನು. * ಆದರೆ ಮರಣವು ಅವನ ಜೀವನದ ಕೊನೆಯಾಗಿರಲಿಲ್ಲ. ಅವನ ಜೀವನಪಥದ ಮೂರನೇ ಹಂತವು, ಅವನು ಸತ್ತು ಸುಮಾರು ಮೂರು ದಿನಗಳ ನಂತರ ಯೆಹೋವ ದೇವರು ಅವನನ್ನು ಅಂದರೆ ತನ್ನ ಮಗನನ್ನು ಒಬ್ಬ ಆತ್ಮಜೀವಿಯಾಗಿ ಪುನರುತ್ಥಾನ ಮಾಡಿದಾಗ ಆರಂಭವಾಯಿತು. ಯೇಸು ತನ್ನ ಪುನರುತ್ಥಾನದ ಬಳಿಕ, ಸಾ.ಶ. ಒಂದನೇ ಶತಮಾನದಲ್ಲಿ ಜೀವಿಸುತ್ತಿದ್ದ ನೂರಾರು ಜನರಿಗೆ ಕಾಣಿಸಿಕೊಂಡನು. (1 ಕೊರಿಂಥ 15:​3-8) ತದನಂತರ ಅವನು “ದೇವರ ಬಲಗಡೆಯಲ್ಲಿ ಕೂತುಕೊಂಡು,” ರಾಜ್ಯಾಧಿಕಾರವನ್ನು ಪಡೆಯಲು ಕಾಯಬೇಕಾಗಿತ್ತು. (ಇಬ್ರಿಯ 10:​12, 13) ಆ ಸಮಯವು ಬಂದಾಗ ಯೇಸು ರಾಜನಾಗಿ ಆಳಲು ಆರಂಭಿಸಿದನು. ಹಾಗಾದರೆ ಇಂದು ನಾವು ಯೇಸುವನ್ನು ಹೇಗೆ ವೀಕ್ಷಿಸಬೇಕು? ಮರಣಕ್ಕೆ ಒಪ್ಪಿಸಲ್ಪಟ್ಟು ಕಷ್ಟಾನುಭವಿಸುತ್ತಿರುವ ಒಬ್ಬ ಮನುಷ್ಯನೋಪಾದಿ ವೀಕ್ಷಿಸಬೇಕೊ? ಇಲ್ಲವೆ, ಆರಾಧಿಸಬೇಕಾದ ಒಬ್ಬ ವ್ಯಕ್ತಿಯಾಗಿ ವೀಕ್ಷಿಸಬೇಕೊ? ಇಂದು ಯೇಸು ಒಬ್ಬ ಮಾನವನಾಗಿಯೂ ಇಲ್ಲ ಅಥವಾ ಸರ್ವಶಕ್ತ ದೇವರಾಗಿಯೂ ಇಲ್ಲ. ಬದಲಾಗಿ, ಅವನೊಬ್ಬ ಬಲಾಢ್ಯ ಆತ್ಮಜೀವಿಯಾಗಿ, ಒಬ್ಬ ಆಳುವ ರಾಜನಾಗಿ ಇದ್ದಾನೆ. ಬಲುಬೇಗನೆ ಅವನು ತನ್ನ ರಾಜತ್ವವನ್ನು, ಈ ನಮ್ಮ ಗೊಂದಲಮಯವಾದ ಇಡೀ ಲೋಕದ ಮೇಲೆ ಪ್ರದರ್ಶಿಸಲಿದ್ದಾನೆ.

ಸಾಂಕೇತಿಕ ಭಾಷೆಯನ್ನು ಉಪಯೋಗಿಸುತ್ತಾ ಪ್ರಕಟನೆ 19:11-16 ಯೇಸು ಕ್ರಿಸ್ತನನ್ನು ಬಿಳೀ ಕುದುರೆಯ ಮೇಲೆ ಕುಳಿತುಕೊಂಡು, ನೀತಿಯಿಂದ ನ್ಯಾಯವಿಚಾರಿಸುವವನು ಮತ್ತು ಯುದ್ಧಮಾಡುವವನಾಗಿ ವರ್ಣಿಸುತ್ತದೆ. ಅವನ ಬಳಿ “ಜನಾಂಗಗಳನ್ನು ಹೊಡೆಯುವದಕ್ಕಾಗಿ ಹದವಾದ ಕತ್ತಿ” ಇದೆ. ಹೌದು, ದುಷ್ಟರನ್ನು ನಾಶಮಾಡಲು ಯೇಸು ತನ್ನ ಮಹಾ ಶಕ್ತಿಯನ್ನು ಉಪಯೋಗಿಸುತ್ತಾನೆ. ಯೇಸು ಭೂಮಿಯಲ್ಲಿದ್ದಾಗ ಇಟ್ಟ ಮಾದರಿಯನ್ನು ಅನುಕರಿಸಲು ಪ್ರಯತ್ನಪಡುತ್ತಿರುವವರ ವಿಷಯದಲ್ಲಿ ಏನು? (1 ಪೇತ್ರ 2:21) ಅಂಥವರನ್ನು ಅವನು ಮತ್ತು ಅವನ ತಂದೆಯು, ಅನೇಕವೇಳೆ ಅರ್ಮಗೆದೋನ್‌ ಎಂಬುದಾಗಿ ಕರೆಯಲ್ಪಡುವ ಮುಂಬರಲಿರುವ “ದೇವರ ಮಹಾ ದಿನದಲ್ಲಾಗುವ ಯುದ್ಧ”ದಲ್ಲಿ ಪಾರುಗೊಳಿಸುವರು. ಅನಂತರ ಅವರು ದೇವರ ಸ್ವರ್ಗೀಯ ರಾಜ್ಯದ ಭೂಪ್ರಜೆಗಳಾಗಿ ಸದಾ ಜೀವಿಸುವರು.​—⁠ಪ್ರಕಟನೆ 7:​9, 14; 16:​14, 16; 21:​3, 4.

ಯೇಸುವಿನ ಶಾಂತಿಯ ಆಳ್ವಿಕೆಯ ಸಮಯದಲ್ಲಿ, ಇಡೀ ಮಾನವಕುಲಕ್ಕಾಗಿ ಅವನು ಅನೇಕ ಅದ್ಭುತಗಳನ್ನು ನಡೆಸಲಿದ್ದಾನೆ. (ಯೆಶಾಯ 9:​6, 7; 11:​1-10) ಅವನು ರೋಗವನ್ನು ಗುಣಪಡಿಸಿ, ಮರಣಕ್ಕೆ ಅಂತ್ಯವನ್ನು ತರಲಿದ್ದಾನೆ. ಕೋಟ್ಯಂತರ ಜನರನ್ನು ಪುನರುತ್ಥಾನಗೊಳಿಸಿ, ಅವರಿಗೆ ಈ ಭೂಮಿಯ ಮೇಲೆ ಸದಾ ಜೀವಿಸುವ ಸಂದರ್ಭವನ್ನು ನೀಡಲು ದೇವರು ಯೇಸುವನ್ನು ಉಪಯೋಗಿಸಲಿದ್ದಾನೆ. (ಯೋಹಾನ 5:​28, 29) ರಾಜ್ಯದಾಳಿಕೆಯ ಕೆಳಗೆ ನಮ್ಮ ಜೀವನವು ಎಷ್ಟು ಸಂತೋಷಕರವಾಗಿರಲಿದೆ ಎಂಬುದನ್ನು ನಾವೀಗ ಕಲ್ಪಿಸಿಕೊಳ್ಳಲೂ ಅಸಾಧ್ಯ. ಆದುದರಿಂದ, ನಾವು ಬೈಬಲ್‌ ಜ್ಞಾನವನ್ನು ಪಡೆದುಕೊಳ್ಳುತ್ತಾ ಮುಂದುವರಿಯುವುದು ಮತ್ತು ಯೇಸು ಕ್ರಿಸ್ತನ ಉತ್ತಮ ಪರಿಚಯವನ್ನು ಮಾಡಿಕೊಳ್ಳುವುದು ಬಹಳ ಪ್ರಾಮುಖ್ಯ.

[ಪಾದಟಿಪ್ಪಣಿಗಳು]

^ ಪ್ಯಾರ. 15 ಯೇಸು ಮಾಡಿದ ಅದ್ಭುತಗಳನ್ನು ಜನರು ತಿಳಿದಿದ್ದರು. ಯೇಸುವಿನ ವೈರಿಗಳು ಸಹ ಅವನು ‘ಬಹು ಸೂಚಕಕಾರ್ಯಗಳನ್ನು ಮಾಡುತ್ತಾನೆ’ ಎಂದು ಒಪ್ಪಿಕೊಂಡಿದ್ದರು.​—⁠ಯೋಹಾನ 11:​47, 48.

^ ಪ್ಯಾರ. 17 ಕ್ರಿಸ್ತನು ಮರದ ಕಂಬದಲ್ಲಿ ಸತ್ತನೊ ಅಥವಾ ಒಂದು ಶಿಲುಬೆಯ ಮೇಲೆ ಸತ್ತನೊ ಎಂಬುದಕ್ಕಾಗಿನ ವಿವರಣೆಗಾಗಿ, ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟಿರುವ ಶಾಸ್ತ್ರಗಳಿಂದ ತರ್ಕಿಸುವುದು (ಇಂಗ್ಲಿಷ್‌) ಎಂಬ ಪುಸ್ತಕದ ಪುಟ 89-90ನ್ನು ನೋಡಿರಿ.

[ಪುಟ 7ರಲ್ಲಿರುವ ಚೌಕ]

ಯೇಸು ಒಬ್ಬ ಸರ್ವಶಕ್ತ ದೇವರಾಗಿದ್ದಾನೊ?

ಅನೇಕ ಧಾರ್ಮಿಕ ಜನರು, ಯೇಸು ದೇವರಾಗಿದ್ದಾನೆ ಎಂದು ಹೇಳುತ್ತಾರೆ. ಇನ್ನು ಕೆಲವರು, ದೇವರು ತ್ರಯೈಕ್ಯನಾಗಿದ್ದಾನೆ ಎಂದು ವಾದಿಸುತ್ತಾರೆ. ಈ ಬೋಧನೆಗನುಸಾರ, “ತಂದೆಯು ದೇವರು, ಮಗನು ದೇವರು ಮತ್ತು ಪವಿತ್ರಾತ್ಮವು ದೇವರು. ಹಾಗಿದ್ದರೂ ಇವರು ಮೂರು ದೇವರಲ್ಲ, ಬರೀ ಒಂದೇ ದೇವರಾಗಿದ್ದಾರೆ.” ಈ ಮೂವರೂ, “ಪರಸ್ಪರ ಅನಂತತೆ ಮತ್ತು ಪರಸ್ಪರ ಸಮಾನತೆ” ಉಳ್ಳವರೆಂದು ನಂಬಲಾಗುತ್ತದೆ. (ದ ಕ್ಯಾಥೊಲಿಕ್‌ ಎನ್‌ಸೈಕ್ಲೊಪೀಡೀಯ) ಈ ಅಭಿಪ್ರಾಯಗಳು ಸರಿಯೊ?

ಯೆಹೋವ ದೇವರು ಸೃಷ್ಟಿಕರ್ತನಾಗಿದ್ದಾನೆ. (ಪ್ರಕಟನೆ 4:11) ಆತನು ಆದಿಯೂ ಅಂತ್ಯವೂ ಇಲ್ಲದವನಾಗಿದ್ದಾನೆ ಮತ್ತು ಸರ್ವಶಕ್ತನಾಗಿದ್ದಾನೆ. (ಕೀರ್ತನೆ 90:2) ಯೇಸುವಿಗಾದರೊ ಆರಂಭವಿತ್ತು. (ಕೊಲೊಸ್ಸೆ 1:​15, 16) ದೇವರನ್ನು ತನ್ನ ತಂದೆಯೆಂದು ಕರೆಯುತ್ತಾ ಯೇಸು ಹೇಳಿದ್ದು: “ತಂದೆಯು ನನಗಿಂತ ದೊಡ್ಡವನು.” (ಯೋಹಾನ 14:28) ತನಗೂ ದೇವದೂತರಿಗೂ ಗೊತ್ತಿರದ ಆದರೆ ಕೇವಲ ದೇವರೊಬ್ಬನಿಗೆ ಮಾತ್ರ ಗೊತ್ತಿರುವ ಕೆಲವು ವಿಷಯಗಳಿವೆ ಎಂಬುದನ್ನೂ ಯೇಸು ವಿವರಿಸಿದನು.​—⁠ಮಾರ್ಕ 13:⁠32.

ಅಷ್ಟುಮಾತ್ರವಲ್ಲದೆ, ಯೇಸು ತನ್ನ ತಂದೆಗೆ ಹೀಗೆ ಪ್ರಾರ್ಥಿಸಿದನು: “ನನ್ನ ಚಿತ್ತವಲ್ಲ, ನಿನ್ನ ಚಿತ್ತವೇ ಆಗಲಿ.” (ಲೂಕ 22:42) ತನಗಿಂತಲೂ ಶ್ರೇಷ್ಠ ಸ್ಥಾನದಲ್ಲಿರುವ ಒಬ್ಬ ವ್ಯಕ್ತಿಗಲ್ಲದೆ ಯೇಸು ಇನ್ಯಾರಿಗೆ ಪ್ರಾರ್ಥಿಸುತ್ತಿದ್ದನು? ಮಾತ್ರವಲ್ಲದೆ, ಯೇಸುವನ್ನು ಮರಣದಿಂದ ಎಬ್ಬಿಸಿದವನು ದೇವರಾಗಿದ್ದನು, ಸ್ವತಃ ಯೇಸುವಲ್ಲ. (ಅ. ಕೃತ್ಯಗಳು 2:32) ಹಾಗಾದರೆ, ಯೇಸು ಭೂಮಿಗೆ ಬರುವ ಮುಂಚೆಯಾಗಲಿ, ಅವನ ಭೂಜೀವಿತದ ಸಮಯದಲ್ಲಾಗಲಿ ತಂದೆ ಮತ್ತು ಮಗ ಸಮಾನರಾಗಿರಲಿಲ್ಲ. ಯೇಸು ಸ್ವರ್ಗಕ್ಕೆ ಪುನರುತ್ಥಾನವಾಗಿ ಹೋದ ನಂತರದ ಕುರಿತಾಗಿ ಏನು? ಒಂದನೇ ಕೊರಿಂಥ 11:3 ತಿಳಿಸುವುದು: “ಕ್ರಿಸ್ತನಿಗೆ ದೇವರು ತಲೆ ಆಗಿದ್ದಾನೆ.” ವಾಸ್ತವದಲ್ಲಿ, ಮಗನು ತಂದೆಗೆ ಯಾವಾಗಲೂ ಅಧೀನನಾಗಿರುವನು. (1 ಕೊರಿಂಥ 15:⁠28) ಆದುದರಿಂದ, ಯೇಸು ಸರ್ವಶಕ್ತನಾದ ದೇವರಲ್ಲ ಎಂದು ಶಾಸ್ತ್ರಗಳು ಸ್ಪಷ್ಟವಾಗಿ ತಿಳಿಸುತ್ತವೆ. ಅವನು ದೇವರ ಮಗನಾಗಿದ್ದಾನೆ.

ತ್ರಯೈಕ್ಯದ ಮೂರನೇ ವ್ಯಕ್ತಿಯೆಂದು ಕರೆಯಲಾಗುವ ಪವಿತ್ರಾತ್ಮವು ಕೂಡ ಒಂದು ವ್ಯಕ್ತಿಯಲ್ಲ. ಕೀರ್ತನೆಗಾರನು ದೇವರಿಗೆ ಪ್ರಾರ್ಥಿಸುತ್ತಾ ಹೇಳಿದ್ದು: “ನೀನು ಜೀವಶ್ವಾಸವನ್ನು ಊದಲು [“ನಿನ್ನ ಆತ್ಮವನ್ನು ಕಳುಹಿಸಲು,” NW] ಅವು ಹೊಸದಾಗಿ ಹುಟ್ಟುತ್ತವೆ.” (ಕೀರ್ತನೆ 104:30) ಈ ಆತ್ಮವು ಸ್ವತಃ ದೇವರಾಗಿಲ್ಲ; ಅದು, ದೇವರು ಕಳುಹಿಸುವ ಅಥವಾ ಆತನು ಬಯಸಿದ್ದೆಲ್ಲವನ್ನೂ ಸಾಧಿಸಲು ಉಪಯೋಗಿಸುವ ಒಂದು ಕಾರ್ಯಕಾರಿ ಶಕ್ತಿಯಾಗಿದೆ. ಅದರ ಮೂಲಕವೇ ದೇವರು ಭೌತಿಕ ಆಕಾಶ, ಭೂಮಿ ಮತ್ತು ಎಲ್ಲ ಜೀವಿಗಳನ್ನು ಸೃಷ್ಟಿಸಿದನು. (ಆದಿಕಾಂಡ 1:2; ಕೀರ್ತನೆ 33:⁠6) ಬೈಬಲನ್ನು ಬರೆದ ಪುರುಷರನ್ನು ಪ್ರೇರೇಪಿಸಲು ದೇವರು ತನ್ನ ಪವಿತ್ರಾತ್ಮವನ್ನು ಉಪಯೋಗಿಸಿದನು. (2 ಪೇತ್ರ 1:​20, 21) ಹಾಗಾದರೆ ತ್ರಯೈಕ್ಯವು ಒಂದು ಬೈಬಲ್‌ ಬೋಧನೆಯಲ್ಲ. * “ನಮ್ಮ ದೇವರಾದ ಯೆಹೋವನು ಒಬ್ಬನೇ ದೇವರು” ಎಂದು ಬೈಬಲ್‌ ಹೇಳುತ್ತದೆ.​—⁠ಧರ್ಮೋಪದೇಶಕಾಂಡ 6:4.

[ಪಾದಟಿಪ್ಪಣಿ]

^ ಪ್ಯಾರ. 28 ಹೆಚ್ಚಿನ ಮಾಹಿತಿಗಾಗಿ, ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟಿರುವ ನೀವು ತ್ರಯೈಕ್ಯವನ್ನು ನಂಬ ಬೇಕೋ? ಎಂಬ ಬ್ರೋಷರನ್ನು ನೋಡಿರಿ.

[ಪುಟ 5ರಲ್ಲಿರುವ ಚಿತ್ರ]

ಯೇಸು ತನ್ನ ದೀಕ್ಷಾಸ್ನಾನದ ಸಮಯದಲ್ಲಿ ದೇವರಿಂದ ಅಭಿಷೇಕಿಸಲ್ಪಟ್ಟವನಾದನು

[ಪುಟ 7ರಲ್ಲಿರುವ ಚಿತ್ರ]

ಯೇಸು ತನ್ನ ಶಕ್ತಿಯನ್ನು ದೇವದತ್ತ ನೇಮಕವನ್ನು ಪೂರೈಸಲು ಉಪಯೋಗಿಸಿದನು

[ಪುಟ 7ರಲ್ಲಿರುವ ಚಿತ್ರ]

ಇಂದು ಯೇಸು ಒಬ್ಬ ಶಕ್ತಿಶಾಲಿ ರಾಜನಾಗಿದ್ದಾನೆ