ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಂದನೇ ಪೂರ್ವಕಾಲವೃತ್ತಾಂತ ಪುಸ್ತಕದ ಮುಖ್ಯಾಂಶಗಳು

ಒಂದನೇ ಪೂರ್ವಕಾಲವೃತ್ತಾಂತ ಪುಸ್ತಕದ ಮುಖ್ಯಾಂಶಗಳು

ಯೆಹೋವನ ವಾಕ್ಯವು ಸಜೀವವಾದದ್ದು

ಒಂದನೇ ಪೂರ್ವಕಾಲವೃತ್ತಾಂತ ಪುಸ್ತಕದ ಮುಖ್ಯಾಂಶಗಳು

ಯೆಹೂದ್ಯರು ಬಾಬೆಲಿನ ಬಂದಿವಾಸದಿಂದ ಬಿಡುಗಡೆಗೊಳಿಸಲ್ಪಟ್ಟು ತಮ್ಮ ಸ್ವದೇಶಕ್ಕೆ ಹಿಂದಿರುಗಿ ಸುಮಾರು 77 ವರ್ಷಗಳು ಕಳೆದಿವೆ. ದೇಶಾಧಿಪತಿಯಾದ ಜೆರುಬ್ಬಾಬೆಲನಿಂದ ಕಟ್ಟಲ್ಪಟ್ಟಿದ್ದ ದೇವಾಲಯವು ಈಗ 55 ವರ್ಷಗಳಿಂದ ಅಸ್ತಿತ್ವದಲ್ಲಿದೆ. ಯೆಹೂದ್ಯರು ತಮ್ಮ ಸ್ವದೇಶಕ್ಕೆ ಹಿಂದಿರುಗಿದ ಮುಖ್ಯ ಕಾರಣವು, ಯೆರೂಸಲೇಮಿನಲ್ಲಿ ಸತ್ಯಾರಾಧನೆಯನ್ನು ಪುನಸ್ಥಾಪಿಸುವುದೇ ಆಗಿತ್ತು. ಆದರೆ, ಜನರು ಯೆಹೋವನ ಆರಾಧನೆಯ ವಿಷಯದಲ್ಲಿ ಹುರುಪನ್ನು ಕಳೆದುಕೊಂಡಿದ್ದಾರೆ. ಅವರಿಗೆ ಪ್ರೋತ್ಸಾಹನೆಯು ಅತಿ ತುರ್ತಿನದ್ದಾಗಿದೆ, ಮತ್ತು ಬೈಬಲಿನ ಒಂದನೇ ಪೂರ್ವಕಾಲವೃತ್ತಾಂತ ಪುಸ್ತಕವು ಅದನ್ನೇ ನೀಡುತ್ತದೆ.

ವಂಶಾವಳಿಯ ಪಟ್ಟಿಯನ್ನು ಹೊರತುಪಡಿಸಿ, ಒಂದನೇ ಪೂರ್ವಕಾಲವೃತ್ತಾಂತ ಪುಸ್ತಕವು ಸುಮಾರು 40 ವರ್ಷಗಳ ಅವಧಿಯನ್ನು ಆವರಿಸುತ್ತದೆ. ಇದು ರಾಜ ಸೌಲನ ಮರಣದಿಂದ ರಾಜ ದಾವೀದನ ಮರಣದ ವರೆಗಿನ ಅವಧಿಯಾಗಿದೆ. ಸಾ.ಶ.ಪೂ. 460ರಲ್ಲಿ ಯಾಜಕನಾದ ಎಜ್ರನು ಈ ಪುಸ್ತಕವನ್ನು ಬರೆದನು ಎಂದು ನಂಬಲಾಗಿದೆ. ಒಂದನೇ ಪೂರ್ವಕಾಲವೃತ್ತಾಂತವು ದೇವಾಲಯದಲ್ಲಿ ನಡೆಸಲ್ಪಟ್ಟ ಆರಾಧನೆಯ ಒಳನೋಟವನ್ನು ಕೊಡುವುದರಿಂದ ಮತ್ತು ಮೆಸ್ಸೀಯನ ವಂಶಕ್ರಮವನ್ನು ಒದಗಿಸುವುದರಿಂದ ನಮಗೆ ಆಸಕ್ತಿದಾಯಕವಾಗಿದೆ. ಈ ಪುಸ್ತಕವು ದೇವರ ವಾಕ್ಯದ ಭಾಗವಾಗಿರುವುದರಿಂದ ಅದರಲ್ಲಿ ಅಡಕವಾಗಿರುವ ಸಂದೇಶವು ನಮ್ಮ ನಂಬಿಕೆಯನ್ನು ಬಲಪಡಿಸುತ್ತದೆ ಮತ್ತು ಬೈಬಲಿನ ನಮ್ಮ ಅರ್ಥಗ್ರಹಿಕೆಯನ್ನು ಹೆಚ್ಚಿಸುತ್ತದೆ.​—⁠ಇಬ್ರಿಯ 4:⁠12.

ಹೆಸರುಗಳ ಅರ್ಥಗರ್ಭಿತ ದಾಖಲೆ

(1 ಪೂರ್ವಕಾಲವೃತ್ತಾಂತ 1:1-9:⁠44)

ಎಜ್ರನು ಪಟ್ಟಿಮಾಡುವ ಸವಿವರವಾದ ವಂಶಾವಳಿಯ ದಾಖಲೆಯು, ಕಡಿಮೆಪಕ್ಷ ಮೂರು ಕಾರಣಗಳಿಗೆ ಆವಶ್ಯಕವಾಗಿದೆ. ಅವು ಅಧಿಕೃತ ವ್ಯಕ್ತಿಗಳು ಮಾತ್ರ ಯಾಜಕತ್ವದ ಭಾಗವಾಗಿರುವುದನ್ನು ಖಚಿತಪಡಿಸಲು, ಪ್ರತಿಯೊಂದು ಕುಲದ ಸ್ವಾಸ್ತ್ಯವನ್ನು ದೃಢೀಕರಿಸುವಂತೆ ಸಹಾಯಮಾಡಲು ಮತ್ತು ಮೆಸ್ಸೀಯನಿಗೆ ನಡೆಸುವಂಥ ವಂಶಕ್ರಮದ ದಾಖಲೆಯನ್ನು ಸುರಕ್ಷಿತವಾಗಿಡಲಿಕ್ಕಾಗಿಯೇ. ಈ ವಂಶಾವಳಿಯ ದಾಖಲೆಯು ಪ್ರಥಮ ಮನುಷ್ಯನಾದ ಆದಾಮನಿಂದ ಬಂದ ಎಲ್ಲ ಸಂತತಿಗಳ ವರದಿಯನ್ನು ಒದಗಿಸುತ್ತದೆ. ಆದಾಮನಿಂದ ನೋಹನ ವರೆಗೆ ಹತ್ತು ತಲೆಮಾರುಗಳು ಹಾಗೂ ಇನ್ನೂ ಹತ್ತು ತಲೆಮಾರುಗಳು ಅಬ್ರಹಾಮನ ವರೆಗಿವೆ. ಇಷ್ಮಾಯೇಲನ ಪುತ್ರರು, ಅಬ್ರಹಾಮನ ಉಪಪತ್ನಿಯಾದ ಕೆಟೂರಳ ಪುತ್ರರು ಮತ್ತು ಏಸಾವನ ಪುತ್ರರ ಪಟ್ಟಿಯನ್ನು ಒದಗಿಸಿದ ಬಳಿಕ, ಈ ವಂಶಾವಳಿಯ ದಾಖಲೆಯು ಇಸ್ರಾಯೇಲನ 12 ಪುತ್ರರ ವಂಶಕ್ರಮದ ಮೇಲೆ ಗಮನವನ್ನು ಕೇಂದ್ರೀಕರಿಸುತ್ತದೆ.​—⁠1 ಪೂರ್ವಕಾಲವೃತ್ತಾಂತ 2:⁠1.

ಯೆಹೂದನ ವಂಶಜರ ವಿಷಯದಲ್ಲಿ ತುಸು ಹೆಚ್ಚಿನ ಗಮನವನ್ನು ಕೊಡಲಾಗಿದೆ, ಏಕೆಂದರೆ ಅವರಿಂದ ರಾಜ ದಾವೀದನ ರಾಜವಂಶವು ಬರುತ್ತದೆ. ಅಬ್ರಹಾಮನಿಂದ ದಾವೀದನ ವರೆಗೆ 14 ತಲೆಮಾರುಗಳು, ಮತ್ತು ಬಾಬೆಲಿಗೆ ಗಡೀಪಾರುಮಾಡಲ್ಪಡುವ ವರೆಗೆ ಇನ್ನೂ 14 ತಲೆಮಾರುಗಳು ಇವೆ. (1 ಪೂರ್ವಕಾಲವೃತ್ತಾಂತ 1:27, 34; 2:1-15; 3:1-17; ಮತ್ತಾಯ 1:⁠17) ಎಜ್ರನು ನಂತರ ಯೊರ್ದನ್‌ ಹೊಳೆಯ ಪೂರ್ವದಿಕ್ಕಿನಲ್ಲಿರುವ ಕುಲಗಳ ವಂಶಜರನ್ನು ಪಟ್ಟಿಮಾಡುತ್ತಾನೆ ಮತ್ತು ಅದರ ಬೆನ್ನಿಗೆ ಲೇವಿಯ ಪುತ್ರರ ವಂಶಾವಳಿಯನ್ನು ಪಟ್ಟಿಮಾಡುತ್ತಾನೆ. (1 ಪೂರ್ವಕಾಲವೃತ್ತಾಂತ 5:1-24; 6:1) ಎಜ್ರನು ಅನಂತರ ಯೊರ್ದನ್‌ ಹೊಳೆಯ ಪಶ್ಚಿಮ ದಿಕ್ಕಿನಲ್ಲಿರುವ ಇತರ ಕೆಲವು ಕುಲಗಳ ಸಂಕ್ಷಿಪ್ತ ಪಟ್ಟಿಯೊಂದಿಗೆ ಬೆನ್ಯಾಮೀನ್‌ ಕುಲದ ಸವಿವರವಾದ ವಂಶಕ್ರಮವನ್ನು ನೀಡುತ್ತಾನೆ. (1 ಪೂರ್ವಕಾಲವೃತ್ತಾಂತ 8:1) ಬಾಬೆಲಿನ ಬಂದಿವಾಸದಿಂದ ಹಿಂದಿರುಗಿದ ಪ್ರಥಮ ನಿವಾಸಿಗಳ ಹೆಸರುಗಳನ್ನು ಸಹ ಪಟ್ಟಿಮಾಡಲಾಗಿದೆ.​—⁠1 ಪೂರ್ವಕಾಲವೃತ್ತಾಂತ 9:1-16.

ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:

1:18​—⁠ಶೆಲಹ (ಸಾಲ)ನ ತಂದೆ ಯಾರಾಗಿದ್ದನು​—⁠ಕಯಿನಾನನೋ ಅಥವಾ ಅರ್ಪಕ್ಷದನೋ? (ಲೂಕ 3:35, 36) ಅರ್ಪಕ್ಷದನು ಶೆಲಹನ ತಂದೆಯಾಗಿದ್ದನು. (ಆದಿಕಾಂಡ 10:24; 11:12) “ಕಯಿನಾನ” ಎಂದು ಲೂಕ 3:36ರಲ್ಲಿ ಉಪಯೋಗಿಸಲ್ಪಟ್ಟಿರುವ ಪದವು “ಕಲ್ದೀಯರು” ಎಂಬ ಶಬ್ದದ ತಪ್ಪಾದ ನಿರೂಪಣೆಯಾಗಿರಬಹುದು. ಇದು ಸತ್ಯವಾಗಿರುವುದಾದರೆ, ಮೂಲ ಗ್ರಂಥಪಾಠದಲ್ಲಿ, “ಇವನು ಕಲ್ದೀಯನಾದ ಅರ್ಪಕ್ಷದನ ಮಗನು” ಎಂದಿರುತ್ತಿತ್ತು. ಅಥವಾ ಕಯಿನಾನ ಮತ್ತು ಅರ್ಪಕ್ಷದ ಎಂಬ ಹೆಸರುಗಳು ಒಂದೇ ವ್ಯಕ್ತಿಗೆ ಸೂಚಿಸುವಂಥದ್ದಾಗಿರಬಹುದು. “ಇವನು ಕಯಿನಾನನ ಮಗನು” ಎಂಬ ಅಭಿವ್ಯಕ್ತಿಯು ಕೆಲವು ಹಸ್ತಪ್ರತಿಗಳಲ್ಲಿಲ್ಲ ಎಂಬುದನ್ನು ನಾವು ಗಮನಿಸತಕ್ಕದ್ದು.​—⁠ಲೂಕ 3:​36, NW ಪಾದಟಿಪ್ಪಣಿ.

2:15​—⁠ದಾವೀದನು ಇಷಯನ ಏಳನೇ ಮಗನಾಗಿದ್ದನೋ? ಇಲ್ಲ. ಇಷಯನಿಗೆ ಎಂಟು ಮಂದಿ ಗಂಡುಮಕ್ಕಳಿದ್ದರು, ಮತ್ತು ದಾವೀದನು ಎಲ್ಲರಿಗಿಂತ ಚಿಕ್ಕವನಾಗಿದ್ದನು. (1 ಸಮುವೇಲ 16:10, 11; 17:12) ಇಷಯನ ಗಂಡುಮಕ್ಕಳಲ್ಲಿ ಒಬ್ಬನು ಮಕ್ಕಳಿಲ್ಲದೆ ಸತ್ತಿರುವುದು ಸಂಭಾವ್ಯ. ವಂಶಾವಳಿಯ ದಾಖಲೆಗಳಲ್ಲಿ ಆ ಮಗನ ಹೆಸರನ್ನು ಸೇರಿಸುವುದರಿಂದ ಯಾವುದೇ ಪ್ರಯೋಜನವಿಲ್ಲದ್ದರಿಂದ ಎಜ್ರನು ಅವನ ಹೆಸರನ್ನು ಬಿಟ್ಟುಬಿಟ್ಟನು.

3:17​—⁠ಯೆಕೊನ್ಯನ ಮಗನಾದ ಶೆಯಲ್ತೀಯೇಲ (ಸಲಥಿಯೇಲ)ನನ್ನು ಲೂಕ 3:27 ನೇರಿಯ ಮಗನು ಎಂದು ಸೂಚಿಸುವುದೇಕೆ? ಯೆಕೊನ್ಯನು ಶೆಯಲ್ತೀಯೇಲನ ತಂದೆಯಾಗಿದ್ದನು. ಆದರೆ ನೇರಿಯು ತನ್ನ ಮಗಳನ್ನು ಶೆಯಲ್ತೀಯೇಲನಿಗೆ ಕೊಟ್ಟು ಮದುವೆಮಾಡಿಸಿದನು. ಲೂಕನು ಯೋಸೇಫನನ್ನು ಮರಿಯಳ ತಂದೆಯಾದ ಹೇಲೀಯ ಮಗನು ಎಂದು ಸೂಚಿಸಿದಂತೆ ನೇರಿಯ ಅಳಿಯನನ್ನು ನೇರಿಯ ಮಗನು ಎಂದು ಸೂಚಿಸಿದ್ದಾನೆ.​—⁠ಲೂಕ 3:⁠24.

3:​17-19​—⁠ಜೆರುಬ್ಬಾಬೆಲ್‌, ಪೆದಾಯ ಮತ್ತು ಶೆಯಲ್ತೀಯೇಲನ ಮಧ್ಯೆ ಯಾವ ಸಂಬಂಧವಿತ್ತು? ಜೆರುಬ್ಬಾಬೆಲನು ಶೆಯಲ್ತೀಯೇಲನ ಸಹೋದರನಾದ ಪೆದಾಯನಿಗೆ ಹುಟ್ಟಿದ ಮಕ್ಕಳಲ್ಲಿ ಒಬ್ಬನಾಗಿದ್ದನು. ಆದರೂ, ಬೈಬಲ್‌ ಕೆಲವೊಮ್ಮೆ ಜೆರುಬ್ಬಾಬೆಲನನ್ನು ಶೆಯಲ್ತೀಯೇಲನ ಮಗನು ಎಂದು ಕರೆಯುತ್ತದೆ. (ಮತ್ತಾಯ 1:12; ಲೂಕ 3:27) ಇದಕ್ಕೆ ಕಾರಣವು, ಒಂದುವೇಳೆ ಪೆದಾಯನು ಸತ್ತಿರಬಹುದು ಮತ್ತು ಶೆಯಲ್ತೀಯೇಲನು ಜೆರುಬ್ಬಾಬೆಲನನ್ನು ಬೆಳೆಸಿರಬಹುದು. ಅಥವಾ ಒಂದುವೇಳೆ ಶೆಯಲ್ತೀಯೇಲನು ಮಕ್ಕಳಿಲ್ಲದೆ ಸತ್ತಿರಬಹುದು ಮತ್ತು ಪೆದಾಯನು ಮೈದುನಧರ್ಮವನ್ನು ಆಚರಿಸಿದ ಫಲವಾಗಿ, ಆ ಸಂಬಂಧದ ಚೊಚ್ಚಲಮಗನ ಸ್ಥಾನದಲ್ಲಿ ಜೆರುಬ್ಬಾಬೆಲನು ಹುಟ್ಟಿರಬಹುದು.​—⁠ಧರ್ಮೋಪದೇಶಕಾಂಡ 25:5-10.

5:​1, 2​—⁠ಚೊಚ್ಚಲುತನದ ಹಕ್ಕನ್ನು ಪಡೆದುಕೊಳ್ಳುವುದು ಯೋಸೇಫನಿಗೆ ಯಾವ ಅರ್ಥದಲ್ಲಿತ್ತು? ಇದರ ಅರ್ಥ ಯೋಸೇಫನಿಗೆ ಸ್ವಾಸ್ತ್ಯದಲ್ಲಿ ಎರಡು ಭಾಗಗಳು ಸಿಕ್ಕಿದವೆಂದಾಗಿದೆ. (ಧರ್ಮೋಪದೇಶಕಾಂಡ 21:17) ಹೀಗೆ ಅವನು ಎರಡು ಕುಲಗಳ​—⁠ಎಫ್ರಾಯೀಮ್‌ ಮತ್ತು ಮನಸ್ಸೆ ಕುಲಗಳ ತಂದೆಯಾದನು. ಇಸ್ರಾಯೇಲನ ಇತರ ಗಂಡುಮಕ್ಕಳು ಕೇವಲ ಒಂದೊಂದು ಕುಲಗಳ ತಂದೆಯಾಗಿದ್ದರು.

ನಮಗಾಗಿರುವ ಪಾಠಗಳು:

1:1-9:44. ನಿಜ ವ್ಯಕ್ತಿಗಳ ವಂಶಾವಳಿಗಳು, ಸತ್ಯಾರಾಧನೆಯ ಇಡೀ ಏರ್ಪಾಡು ಕಟ್ಟುಕಥೆಯ ಮೇಲಲ್ಲ, ಬದಲಿಗೆ ವಾಸ್ತವಾಂಶದ ಮೇಲೆ ಅವಲಂಬಿಸಿದೆ ಎಂಬುದನ್ನು ರುಜುಪಡಿಸುತ್ತದೆ.

4:​9, 10. ಹೆಚ್ಚಿನ ದೈವಭಕ್ತ ಜನರಿಗೆ ಸ್ಥಳಾವಕಾಶವನ್ನು ಒದಗಿಸುವ ಸಲುವಾಗಿ ತನ್ನ ಪ್ರಾಂತ್ಯವನ್ನು ಸಮಾಧಾನದಿಂದ ವಿಸ್ತರಿಸಬೇಕು ಎಂದು ಕೇಳಿಕೊಂಡ ಯಾಬೇಚನ ಹೃತ್ಪೂರ್ವಕ ಪ್ರಾರ್ಥನೆಗೆ ಯೆಹೋವನು ಉತ್ತರಕೊಟ್ಟನು. ನಾವು ಸಹ ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಹುರುಪಿನಿಂದ ಪಾಲ್ಗೊಳ್ಳುವಾಗ, ಹೆಚ್ಚಿನ ಆರಾಧಕರಿಗಾಗಿ ಹೃತ್ಪೂರ್ವಕವಾಗಿ ಪ್ರಾರ್ಥಿಸಬೇಕು.

5:​10, 18-22. ರಾಜ ಸೌಲನ ದಿನಗಳಲ್ಲಿ, ಯೊರ್ದನ್‌ ಹೊಳೆಯ ಪೂರ್ವದಿಕ್ಕಿನ ಪ್ರಾಂತಗಳಲ್ಲಿ ವಾಸಿಸುತ್ತಿದ್ದ ಕುಲಗಳವರು, ತಮ್ಮ ಸಂಖ್ಯೆಗಿಂತ ಎರಡು ಪಟ್ಟು ಹೆಚ್ಚಾಗಿದ್ದ ಹಗ್ರೀಯರನ್ನು ಸೋಲಿಸಿಬಿಟ್ಟರು. ಈ ಕುಲಗಳ ರಣವೀರರು ಯೆಹೋವನಲ್ಲಿ ಭರವಸವಿಟ್ಟದ್ದರಿಂದ ಮತ್ತು ಸಹಾಯಕ್ಕಾಗಿ ಆತನ ಮರೆಹೊದದ್ದರಿಂದ ಈ ಜಯವನ್ನು ಸಾಧಿಸಲು ಸಾಧ್ಯವಾಯಿತು. ಬಹುಸಂಖ್ಯಾತ ಶತ್ರುಗಳ ವಿರುದ್ಧವಾದ ನಮ್ಮ ಆಧ್ಯಾತ್ಮಿಕ ಕಾಳಗದಲ್ಲೂ ನಾವು ಯೆಹೋವನಲ್ಲಿ ಪೂರ್ಣ ಭರವಸೆಯುಳ್ಳವರಾಗಿರೋಣ.​—⁠ಎಫೆಸ 6:10-17.

9:​26, 27. ಲೇವಿಯರಾದ ದ್ವಾರಪಾಲಕರಿಗೆ ತುಂಬ ಜವಾಬ್ದಾರಿಯುತವಾದ ಒಂದು ನೇಮಕವು ಕೊಡಲ್ಪಟ್ಟಿತು. ದೇವಾಲಯದ ಪವಿತ್ರ ಸ್ಥಳಗಳಿಗೆ ನಡಿಸುವ ದ್ವಾರಗಳ ಕೀಲಿಕೈ ಅವರ ಬಳಿ ಇರುತ್ತಿತ್ತು. ಪ್ರತಿ ದಿನ ದ್ವಾರಗಳನ್ನು ತೆರೆಯುವ ವಿಷಯದಲ್ಲಿ ಅವರು ಭರವಸಾರ್ಹರಾಗಿದ್ದರು. ನಮ್ಮ ಕ್ಷೇತ್ರದಲ್ಲಿರುವ ಜನರನ್ನು ಭೇಟಿಮಾಡಿ, ಯೆಹೋವನನ್ನು ಆರಾಧಿಸಲು ಬರುವಂತೆ ಅವರಿಗೆ ಸಹಾಯಮಾಡುವ ಜವಾಬ್ದಾರಿಯು ನಮಗೆ ಕೊಡಲ್ಪಟ್ಟಿದೆ. ನಾವು ಸಹ ಆ ಲೇವಿಯರಾದ ದ್ವಾರಪಾಲಕರಷ್ಟೇ ಭರವಸಾರ್ಹರೂ ವಿಶ್ವಾಸಾರ್ಹರೂ ಆಗಿರಬೇಕಲ್ಲವೇ?

ದಾವೀದನು ರಾಜನಾಗಿ ಆಳುತ್ತಾನೆ

(1 ಪೂರ್ವಕಾಲವೃತ್ತಾಂತ 10:1-29:⁠30)

ಕಥೆಯು, ಗಿಲ್ಬೋವ ಬೆಟ್ಟದಲ್ಲಿ ಫಿಲಿಷ್ಟಿಯರ ವಿರುದ್ಧ ನಡೆಸಲಾದ ಯುದ್ಧದಲ್ಲಿ ರಾಜ ಸೌಲ ಮತ್ತು ಅವನ ಮೂವರು ಪುತ್ರರು ಸಾಯುವ ವಿಷಯದೊಂದಿಗೆ ಆರಂಭಗೊಳ್ಳುತ್ತದೆ. ಇಷಯನ ಮಗನಾದ ದಾವೀದನನ್ನು ಯೆಹೂದ ಕುಲದ ಮೇಲೆ ರಾಜನಾಗಿ ನೇಮಿಸಲಾಗುತ್ತದೆ. ಎಲ್ಲ ಕುಲಗಳಿಗೆ ಸೇರಿದ ಪುರುಷರು ಹೆಬ್ರೋನಿಗೆ ಬಂದು ದಾವೀದನನ್ನು ಇಡೀ ಇಸ್ರಾಯೇಲಿನ ಮೇಲೆ ರಾಜನನ್ನಾಗಿ ಮಾಡುತ್ತಾರೆ. (1 ಪೂರ್ವಕಾಲವೃತ್ತಾಂತ 11:​1-3) ಅದರ ನಂತರ ಶೀಘ್ರದಲ್ಲೇ ಅವನು ಯೆರೂಸಲೇಮನ್ನು ವಶಪಡಿಸಿಕೊಳ್ಳುತ್ತಾನೆ. ತರುವಾಯ, ಇಸ್ರಾಯೇಲ್ಯರು “ಆರ್ಭಟಿಸುತ್ತಾ ಕೊಂಬು ತುತೂರಿಗಳನ್ನು ಗಟ್ಟಿಯಾಗಿ ಊದುತ್ತಾ ತಾಳಹೊಡೆಯುತ್ತಾ ಕಿನ್ನರಿ ಸ್ವರಮಂಡಲಗಳನ್ನು ಬಾರಿಸುತ್ತಾ ಯೆಹೋವನ ನಿಬಂಧನಮಂಜೂಷವನ್ನು” ತರುತ್ತಾರೆ.​—⁠1 ಪೂರ್ವಕಾಲವೃತ್ತಾಂತ 15:⁠28.

ದಾವೀದನು ಸತ್ಯ ದೇವರಿಗೆ ಒಂದು ಆಲಯವನ್ನು ಕಟ್ಟುವ ಇಚ್ಛೆಯನ್ನು ವ್ಯಕ್ತಪಡಿಸುತ್ತಾನೆ. ಆ ಸದವಕಾಶವನ್ನು ಸೊಲೊಮೋನನಿಗೆ ಮೀಸಲಾಗಿಡುತ್ತಾ ಯೆಹೋವನು ದಾವೀದನೊಂದಿಗೆ ಒಂದು ರಾಜ್ಯದ ಒಡಂಬಡಿಕೆಯನ್ನು ಮಾಡುತ್ತಾನೆ. ದಾವೀದನು ಇಸ್ರಾಯೇಲಿನ ವೈರಿಗಳ ವಿರುದ್ಧ ಯುದ್ಧಮಾಡುತ್ತಾ ಹೋಗುವಾಗ, ಯೆಹೋವನು ಅವನಿಗೆ ಒಂದರ ನಂತರ ಮತ್ತೊಂದು ವಿಜಯವನ್ನು ಕೊಡುತ್ತಾನೆ. ಮಾಡಬಾರದಾಗಿದ್ದ ಒಂದು ಖಾನೇಷುಮಾರಿಯ ಫಲವಾಗಿ 70,000 ಮಂದಿ ಸತ್ತುಬೀಳುತ್ತಾರೆ. ಯೆಹೋವನಿಗೆ ಒಂದು ಯಜ್ಞವೇದಿಯನ್ನು ಕಟ್ಟಿಸಲು ದೇವದೂತರ ನಿರ್ದೇಶನವನ್ನು ಪಡೆದುಕೊಂಡ ಬಳಿಕ, ದಾವೀದನು ಯೆಬೂಸಿಯನಾದ ಒರ್ನಾನನಿಂದ ಒಂದು ಸ್ಥಳವನ್ನು ಖರೀದಿಸುತ್ತಾನೆ. ಆ ನೆಲದಲ್ಲಿ ಯೆಹೋವನಿಗೆ “ಅಧಿಕ ಶೋಭಾಯಮಾನವಾದ” ಒಂದು ಆಲಯವನ್ನು ಕಟ್ಟಲಿಕ್ಕಾಗಿ ಬೇಕಾಗಿರುವುದೆಲ್ಲವನ್ನೂ ‘ಮೊದಲೇ ಬಹಳವಾಗಿ [ಕೂಡಿಸಿಡಲು]’ ಆರಂಭಿಸುತ್ತಾನೆ. (1 ಪೂರ್ವಕಾಲವೃತ್ತಾಂತ 22:5) ದಾವೀದನು ಲೇವಿಯರ ಸೇವೆಗಳನ್ನು ಸಂಘಟಿಸುತ್ತಾನೆ ಮತ್ತು ಅವುಗಳ ಬಗ್ಗೆ ಒಂದನೇ ಪೂರ್ವಕಾಲವೃತ್ತಾಂತ ಪುಸ್ತಕದಲ್ಲಿ ವರ್ಣಿಸಲ್ಪಟ್ಟಿರುವಷ್ಟು ಸವಿವರವಾಗಿ ಶಾಸ್ತ್ರವಚನಗಳಲ್ಲಿ ಬೇರೆಲ್ಲೂ ವರ್ಣಿಸಲ್ಪಟ್ಟಿರುವುದಿಲ್ಲ. ರಾಜನು ಮತ್ತು ಜನರು ದೇವಾಲಯಕ್ಕಾಗಿ ಉದಾರವಾಗಿ ಕಾಣಿಕೆಗಳನ್ನು ಕೊಡುತ್ತಾರೆ. 40 ವರ್ಷಗಳ ಆಳ್ವಿಕೆಯ ನಂತರ, ದಾವೀದನು “ಐಶ್ವರ್ಯ ಮಾನ ದೀರ್ಘಾಯುಷ್ಯ ಇವುಗಳನ್ನು ಅನುಭವಿಸಿದನಂತರ ತುಂಬಾ ವೃದ್ಧನಾಗಿ [ಮರಣಹೊಂದುತ್ತಾನೆ]. ಅವನಿಗೆ ಬದಲಾಗಿ ಅವನ ಮಗನಾದ ಸೊಲೊಮೋನನು [ಅರಸನಾಗುತ್ತಾನೆ].”​—⁠1 ಪೂರ್ವಕಾಲವೃತ್ತಾಂತ 29:⁠28.

ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:

11:11​—⁠ಹತರಾದವರ ಸಂಖ್ಯೆಯನ್ನು 2 ಸಮುವೇಲ 23:8ರಲ್ಲಿ 800 ಎಂದು ಕೊಡಲ್ಪಟ್ಟಿರುವಾಗ, ಇಲ್ಲಿ 300 ಎಂದು ಕೊಡಲ್ಪಟ್ಟಿರುವುದೇಕೆ? ಯಾಷೊಬ್ಬಾಮನು, ಅಥವಾ ಯೋಷೆಬಷ್ಷೆಬೆತನು ದಾವೀದನ ಮೂರು ಮಂದಿ (NW) ಅತಿ ಶೂರರಲ್ಲಿ ಮುಖ್ಯಸ್ಥನಾಗಿದ್ದನು. ಅವನ ನಂತರ ಎಲ್ಲಾಜಾರನು ಮತ್ತು ಶಮ್ಮ ಇದ್ದರು. (2 ಸಮುವೇಲ 23:8-11) ಒಬ್ಬನೇ ವ್ಯಕ್ತಿಯಿಂದ ನಡೆಸಲ್ಪಟ್ಟ ಬೇರೆ ಬೇರೆ ಕೃತ್ಯಗಳಿಗೆ ಸೂಚಿಸುವುದರಿಂದ ಈ ಎರಡೂ ವೃತ್ತಾಂತಗಳಲ್ಲಿ ಸಂಖ್ಯೆಯ ವ್ಯತ್ಯಾಸವು ತೋರಿಕೊಂಡಿರಬಹುದು.

11:​20, 21​—⁠ದಾವೀದನ ಮೂರು ಮಂದಿ ಪ್ರಧಾನ ಧೀರ ಪುರುಷರ ಸಂಬಂಧದಲ್ಲಿ ಅಬ್ಷೈಯ ಸ್ಥಾನ ಯಾವುದಾಗಿತ್ತು? ಅಬ್ಷೈಯು ದಾವೀದನ ಸೇವೆಯಲ್ಲಿದ್ದ ಮೂವರು ಅತಿ ಧೀರ ಪುರುಷರಲ್ಲಿ ಒಬ್ಬನಾಗಿರಲಿಲ್ಲ. ಆದರೂ, 2 ಸಮುವೇಲ 23:18, 19ರ ಪಾದಟಿಪ್ಪಣಿಯಲ್ಲಿ ತಿಳಿಸಲ್ಪಟ್ಟಿರುವಂತೆ ಇವನು ಮೂವತ್ತು ಮಂದಿ ಸೈನಿಕರಲ್ಲಿ ಮುಖ್ಯಸ್ಥನಾಗಿದ್ದನು ಮತ್ತು ಅವರಲ್ಲಿ ಯಾರೊಬ್ಬನೂ ಅವನಷ್ಟು ಘನವುಳ್ಳವನಾಗಿರಲಿಲ್ಲ. ಅಬ್ಷೈಯು ಯಾಷೊಬ್ಬಾಮನು ಮಾಡಿದಕ್ಕೆ ಸಮಾನವಾಗಿದ್ದ ಧೀರ ಕೃತ್ಯವೊಂದನ್ನು ಮಾಡಿದ್ದರಿಂದ ಅವನ ಪ್ರಖ್ಯಾತಿಯು ಮೂರು ಮಂದಿ ಪ್ರಧಾನ ಪುರುಷರಿಗಿದ್ದಂತೆಯೇ ಇತ್ತು.

12:8​—⁠ಗಾದ್ಯ ಯುದ್ಧನಿಪುಣರು ‘ಸಿಂಹಮುಖರು’ ಆಗಿದ್ದದ್ದು ಹೇಗೆ? ಈ ರಣವೀರರು ಅರಣ್ಯದಲ್ಲಿ ದಾವೀದನ ಸಂಗಡವಿದ್ದರು. ಅವರ ಕೂದಲು ಉದ್ದವಾಗಿ ಬೆಳೆದಿತ್ತು. ಅವರ ಕುತ್ತಿಗೆಯ ಮೇಲಿನ ಉದ್ದವಾದ ಕೂದಲು ಅವರಿಗೆ ಕ್ರೂರವಾದ ಸಿಂಹದೋಪಾದಿಯ ತೋರ್ಕೆಯನ್ನು ನೀಡಿತು.

13:5​—⁠“ಐಗುಪ್ತದ ಶೀಹೋರ್‌ ಹಳ್ಳ” ಎಂಬುದು ಏನಾಗಿದೆ? ಈ ಅಭಿವ್ಯಕ್ತಿಯು ನೈಲ್‌ ನದಿಯ ಒಂದು ವಿಭಾಗಕ್ಕೆ ಸೂಚಿಸುತ್ತದೆ ಎಂದು ಕೆಲವರು ನೆನಸಿದ್ದಾರೆ. ಆದರೆ, ಇದು ಸಾಮಾನ್ಯವಾಗಿ ‘ಐಗುಪ್ತದ ತೊರೆ ಕಣಿವೆಗೆ’ (NW) ಸೂಚಿಸುತ್ತದೆ ಎಂದು ಅರ್ಥಮಾಡಿಕೊಳ್ಳಲಾಗುತ್ತದೆ. ಇದು ವಾಗ್ದತ್ತ ದೇಶದ ನೈಋತ್ಯ ಎಲ್ಲೆಯನ್ನು ಗುರುತಿಸುವ ಕಮರಿ ಪ್ರದೇಶವಾಗಿದೆ.​—⁠ಅರಣ್ಯಕಾಂಡ 34:2, 5; ಆದಿಕಾಂಡ 15:18.

16:30​—⁠ಯೆಹೋವನ ಮುಂದೆ “ನಡುಗಿರಿ” ಎಂಬುದರ ಅರ್ಥವೇನು? “ನಡುಗಿರಿ” ಎಂಬ ಶಬ್ದವು ಇಲ್ಲಿ ಸಾಂಕೇತಿಕವಾಗಿ ಉಪಯೋಗಿಸಲ್ಪಟ್ಟಿದ್ದು ಯೆಹೋವನ ವಿಷಯದಲ್ಲಿ ಹೊಂದಿರುವ ಪೂಜ್ಯಭಾವದ ಭಯ ಮತ್ತು ಆಳವಾದ ಗೌರವಕ್ಕೆ ಸೂಚಿಸುತ್ತದೆ.

16:​1, 37-40; 21:​29, 30; 22:19​—⁠ಮಂಜೂಷವು ಯೆರೂಸಲೇಮಿಗೆ ತರಲ್ಪಟ್ಟ ಸಮಯದಿಂದ ದೇವಾಲಯವು ಕಟ್ಟಲ್ಪಡುವ ಸಮಯದ ವರೆಗೆ ಇಸ್ರಾಯೇಲಿನಲ್ಲಿ ಆರಾಧನೆಯ ವಿಷಯದಲ್ಲಿ ಯಾವ ಏರ್ಪಾಡು ಜಾರಿಯಲ್ಲಿತ್ತು? ದಾವೀದನು ಮಂಜೂಷವನ್ನು ಯೆರೂಸಲೇಮಿಗೆ ತಂದು ತಾನು ಮಾಡಿದ್ದ ಗುಡಾರದಲ್ಲಿ ಇರಿಸಿದನು. ಇದಕ್ಕೆ ಮುಂಚೆ ಅದು ಅನೇಕ ವರ್ಷಗಳಿಂದ ದೇವದರ್ಶನಗುಡಾರದಲ್ಲಿರಲಿಲ್ಲ. ಅದು ಯೆರೂಸಲೇಮಿಗೆ ತರಲ್ಪಟ್ಟ ಬಳಿಕ, ಮಂಜೂಷವು ಯೆರೂಸಲೇಮಿನಲ್ಲಿ ಆ ಗುಡಾರದಲ್ಲೇ ಇತ್ತು. ದೇವದರ್ಶನಗುಡಾರವು ಗಿಬ್ಯೋನಿನಲ್ಲಿತ್ತು, ಮತ್ತು ಚಾದೋಕನೂ ಅವನ ಸಹೋದರರೂ ಧರ್ಮಶಾಸ್ತ್ರದಲ್ಲಿ ಸೂಚಿಸಲ್ಪಟ್ಟಿದ್ದ ಬಲಿಗಳನ್ನು ಅರ್ಪಿಸುತ್ತಿದ್ದರು. ಯೆರೂಸಲೇಮಿನಲ್ಲಿ ದೇವಾಲಯವು ಕಟ್ಟಿ ಮುಗಿಸಲ್ಪಡುವ ತನಕ ಈ ಏರ್ಪಾಡು ಜಾರಿಯಲ್ಲಿತ್ತು. ದೇವಾಲಯವು ಸಿದ್ಧವಾದಾಗ, ದೇವದರ್ಶನಗುಡಾರವನ್ನು ಗಿಬ್ಯೋನಿನಿಂದ ಯೆರೂಸಲೇಮಿಗೆ ತರಲಾಯಿತು ಮತ್ತು ಮಂಜೂಷವನ್ನು ಆಲಯದ ಮಹಾಪವಿತ್ರಸ್ಥಾನದಲ್ಲಿ ಇರಿಸಲಾಯಿತು.​—⁠1 ಅರಸುಗಳು 8:4, 6.

ನಮಗಾಗಿರುವ ಪಾಠಗಳು:

13:11. ನಮ್ಮ ಪ್ರಯತ್ನಗಳು ವಿಫಲಗೊಳ್ಳುವಾಗ ಯೆಹೋವನ ಮೇಲೆ ಕೋಪಗೊಂಡು ದೋಷಾರೋಪವನ್ನು ಆತನ ಮೇಲೆ ಹಾಕುವ ಬದಲಿಗೆ, ಸನ್ನಿವೇಶವನ್ನು ಪರಿಶೀಲಿಸಿ ವೈಫಲ್ಯಕ್ಕೆ ಯಾವುದು ಕಾರಣವಾಗಿತ್ತು ಎಂದು ನೋಡಲು ಪ್ರಯತ್ನಿಸಬೇಕು. ದಾವೀದನು ಖಂಡಿತ ಇದನ್ನು ಮಾಡಿದನು. ಅವನು ತಾನು ಮಾಡಿದ ತಪ್ಪಿನಿಂದ ಪಾಠವನ್ನು ಕಲಿತುಕೊಂಡನು ಮತ್ತು ತದನಂತರ ಸರಿಯಾದ ವಿಧಾನವನ್ನು ಉಪಯೋಗಿಸುತ್ತಾ ಮಂಜೂಷವನ್ನು ಯೆರೂಸಲೇಮಿಗೆ ತಂದನು. *

14:​10, 13-16; 22:​17-19. ನಮ್ಮ ಆಧ್ಯಾತ್ಮಿಕತೆಯ ಮೇಲೆ ಪರಿಣಾಮಬೀರಬಲ್ಲ ಯಾವುದೇ ಕೆಲಸದಲ್ಲಿ ಕೈಹಾಕುವುದಕ್ಕೆ ಮುಂಚೆ ನಾವು ಯಾವಾಗಲೂ ಯೆಹೋವನನ್ನು ಪ್ರಾರ್ಥನೆಯಲ್ಲಿ ಸಮೀಪಿಸಿ ಆತನ ಮಾರ್ಗದರ್ಶನಕ್ಕಾಗಿ ಬೇಡಿಕೊಳ್ಳಬೇಕು.

16:​23-29. ಯೆಹೋವನ ಆರಾಧನೆಗೆ ನಾವು ನಮ್ಮ ಜೀವನದಲ್ಲಿ ಪ್ರಥಮ ಸ್ಥಾನವನ್ನು ನೀಡಬೇಕು.

18:⁠3. ಯೆಹೋವನು ವಾಗ್ದಾನಗಳನ್ನು ಪೂರೈಸುವಾತನಾಗಿದ್ದಾನೆ. ಆತನು ಅಬ್ರಹಾಮನ ಸಂತಾನಕ್ಕೆ, “ಐಗುಪ್ತದೇಶದ ನದಿಯಿಂದ ಯೂಫ್ರೇಟೀಸ್‌ ಮಹಾನದಿಯ ವರೆಗೂ” ಇರುವ ಇಡೀ ಕಾನಾನ್‌ ದೇಶವನ್ನು ಕೊಡುವೆನೆಂದು ಮಾಡಿದ್ದ ವಾಗ್ದಾನವನ್ನು ದಾವೀದನ ಮುಖಾಂತರ ಪೂರೈಸಿದನು.​—⁠ಆದಿಕಾಂಡ 15:18; 1 ಪೂರ್ವಕಾಲವೃತ್ತಾಂತ 13:⁠5.

21:​13-15. ಯೆಹೋವನು ತನ್ನ ಜನರಿಗಾಗುವ ನರಳಾಟದ ವಿಷಯದಲ್ಲಿ ಸೂಕ್ಷ್ಮಗ್ರಾಹಿಯಾಗಿರುವುದರಿಂದ, ಆ ವ್ಯಾಧಿಯನ್ನು ನಿಲ್ಲಿಸಿಬಿಡುವಂತೆ ತನ್ನ ದೂತನಿಗೆ ಅಪ್ಪಣೆಕೊಟ್ಟನು. ವಾಸ್ತವದಲ್ಲಿ, “ಆತನು ಕೃಪಾಪೂರ್ಣನು.” *

22:​5, 9; 29:​3-5, 14-16. ಯೆಹೋವನ ಆಲಯವನ್ನು ಕಟ್ಟುವ ನೇಮಕವನ್ನು ದಾವೀದನು ಪಡೆದುಕೊಳ್ಳಲಿಲ್ಲವಾದರೂ, ಅವನು ತನ್ನ ಉದಾರ ಮನಸ್ಸನ್ನು ತೋರ್ಪಡಿಸಿದನು. ಏಕೆ? ಏಕೆಂದರೆ, ಯೆಹೋವನ ಒಳ್ಳೇತನದ ಫಲವಾಗಿಯೇ ತಾನು ಎಲ್ಲವನ್ನೂ ಸಂಪಾದಿಸಿಕೊಂಡಿದ್ದೇನೆ ಎಂಬುದನ್ನು ಅವನು ಮನಗಂಡನು. ನಮ್ಮಲ್ಲಿಯೂ ಈ ರೀತಿಯ ಕೃತಜ್ಞತಾ ಭಾವವಿರುವುದಾದರೆ, ಅದು ನಮ್ಮಲ್ಲಿ ಉದಾರ ಮನಸ್ಸನ್ನು ಉಂಟುಮಾಡುವುದು.

24:​7-18. ದಾವೀದನು ಆರಂಭಿಸಿದ್ದ 24 ಯಾಜಕವರ್ಗಗಳ ಏರ್ಪಾಡು, ಯೆಹೋವನ ದೂತನು ಸ್ನಾನಿಕನಾದ ಯೋಹಾನನ ತಂದೆಯಾದ ಜಕರೀಯನಿಗೆ ಪ್ರತ್ಯಕ್ಷನಾಗಿ ಸಂಭವಿಸಲಿರುವ ಯೋಹಾನನ ಜನ್ಮದ ಕುರಿತು ಪ್ರಕಟಿಸಿದಾಗ ಇನ್ನೂ ಜಾರಿಯಲ್ಲಿತ್ತು. “ಅಬೀಯನ ವರ್ಗಕ್ಕೆ” ಸೇರಿದವನಾಗಿದ್ದ ಜಕರೀಯನು ಆಗ ದೇವಾಲಯದಲ್ಲಿ ತನ್ನ ಸರದಿಯ ಸೇವೆಯನ್ನು ಸಲ್ಲಿಸುತ್ತಿದ್ದನು. (ಲೂಕ 1:5, 8, 9) ಸತ್ಯಾರಾಧನೆಯು ಕಾಲ್ಪನಿಕವಲ್ಲ ಐತಿಹಾಸಿಕ ವ್ಯಕ್ತಿಗಳಿಗೆ ಸಂಬಂಧಿಸಿದ್ದಾಗಿದೆ. ಇಂದು ಯೆಹೋವನ ಸುಸಂಘಟಿತ ಆರಾಧನೆಯ ಸಂಬಂಧದಲ್ಲಿ ನಾವು ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿಗೆ’ ನಿಷ್ಠಾವಂತ ಸಹಕಾರವನ್ನು ನೀಡುವಾಗ ಆಶೀರ್ವಾದಗಳನ್ನು ಪಡೆದುಕೊಳ್ಳುವೆವು.​—⁠ಮತ್ತಾಯ 24:⁠45.

ಯೆಹೋವನನ್ನು “ಮನಸ್ಸಂತೋಷದಿಂದ” ಸೇವಿಸಿರಿ

ಒಂದನೇ ಪೂರ್ವಕಾಲವೃತ್ತಾಂತವು ಬರಿಯ ವಂಶಾವಳಿಯ ಒಂದು ಪುಸ್ತಕವಲ್ಲ. ಅದರಲ್ಲಿ, ದಾವೀದನು ಒಡಂಬಡಿಕೆಯ ಮಂಜೂಷವನ್ನು ಯೆರೂಸಲೇಮಿಗೆ ತಂದದ್ದು, ಅವನ ಮಹಾ ವಿಜಯಗಳು, ದೇವಾಲಯವನ್ನು ಕಟ್ಟಲಿಕ್ಕಾಗಿ ಮಾಡಲ್ಪಟ್ಟ ಸಿದ್ಧತೆಗಳು, ಮತ್ತು ಸೇವೆಸಲ್ಲಿಸುವ ಲೇವಿಯರಾದ ಯಾಜಕವರ್ಗಗಳ ಸಂಘಟಿಸುವಿಕೆಯ ಕಥಾ ರೂಪವೂ ಅಡಕವಾಗಿದೆ. ಒಂದನೇ ಪೂರ್ವಕಾಲವೃತ್ತಾಂತ ಪುಸ್ತಕದಲ್ಲಿ ಎಜ್ರನು ತಿಳಿಸುವ ಪ್ರತಿಯೊಂದು ವಿಷಯವು ಖಂಡಿತವಾಗಿಯೂ ಇಸ್ರಾಯೇಲ್ಯರಿಗೆ ಪ್ರಯೋಜನದಾಯಕವಾಗಿದ್ದಿರಬೇಕು, ಮತ್ತು ಇದರಿಂದಾಗಿ ಅವರು ದೇವಾಲಯದಲ್ಲಿ ಯೆಹೋವನಿಗೆ ಸಲ್ಲಿಸುವ ಆರಾಧನೆಯ ವಿಷಯದಲ್ಲಿ ನವಚೈತನ್ಯವನ್ನು ಪಡೆದುಕೊಂಡಿದ್ದಿರಬೇಕು.

ಯೆಹೋವನ ಆರಾಧನೆಯನ್ನು ತನ್ನ ಜೀವನದಲ್ಲಿ ಪ್ರಪ್ರಥಮವಾಗಿಡುವ ಮೂಲಕ ದಾವೀದನು ಎಂತಹ ಉತ್ತಮ ಮಾದರಿಯನ್ನಿಟ್ಟನು! ತನಗಾಗಿ ಉತ್ತಮ ಸುಯೋಗಗಳನ್ನು ಪಡೆದುಕೊಳ್ಳಲು ಪ್ರಯತ್ನಿಸುವ ಬದಲಿಗೆ, ಅವನು ದೇವರ ಚಿತ್ತವನ್ನು ಮಾಡುವುದಕ್ಕೆ ಪ್ರಾಧಾನ್ಯವನ್ನು ಕೊಟ್ಟನು. ಯೆಹೋವನನ್ನು “ಸಂಪೂರ್ಣಹೃದಯದಿಂದಲೂ ಮನಸ್ಸಂತೋಷದಿಂದಲೂ” ಸೇವಿಸಬೇಕು ಎಂಬ ಅವನ ಬುದ್ಧಿವಾದಕ್ಕೆ ಕಿವಿಗೊಡುವಂತೆ ನಾವು ಪ್ರೋತ್ಸಾಹಿಸಲ್ಪಟ್ಟಿದ್ದೇವೆ.​—⁠1 ಪೂರ್ವಕಾಲವೃತ್ತಾಂತ 28:⁠9.

[ಪಾದಟಿಪ್ಪಣಿಗಳು]

^ ಪ್ಯಾರ. 32 ಮಂಜೂಷವನ್ನು ಯೆರೂಸಲೇಮಿಗೆ ರವಾನಿಸುವ ದಾವೀದನ ಯತ್ನದಿಂದ ಕಲಿಯಬಹುದಾದ ಇತರ ಪಾಠಗಳಿಗಾಗಿ, ಮೇ 15, 2005ರ ಕಾವಲಿನಬುರುಜುವಿನ 16-19ನೇ ಪುಟಗಳನ್ನು ನೋಡಿರಿ.

^ ಪ್ಯಾರ. 36 ದಾವೀದನು ಮಾಡಬಾರದಾಗಿದ್ದ ಖಾನೇಷುಮಾರಿಯ ಸಂಬಂಧದಲ್ಲಿ ಕಲಿಯಬಹುದಾದ ಇತರ ಪಾಠಗಳಿಗಾಗಿ, ಮೇ 15, 2005ರ ಕಾವಲಿನಬುರುಜುವಿನ 16-19ನೇ ಪುಟಗಳನ್ನು ನೋಡಿರಿ.

[ಪುಟ 8-11ರಲ್ಲಿರುವ ಚಾರ್ಟು/ಚಿತ್ರಗಳು]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಸಾ.ಶ.ಪೂ. 4026 ಆದಾಮ ಆದಾಮನಿಂದ ನೋಹನ ವರೆಗಿನ

ತಲೆಮಾರುಗಳು (1,056 ವರುಷಗಳು)

130 ವರುಷಗಳು ⇩

 

ಶೇತ್‌

 

105 ⇩

 

ಎನೋಷ್‌

 

90 ⇩

 

ಕೇನಾನ್‌

 

70 ⇩

 

ಮಹಲಲೇಲ್‌

 

65 ⇩

 

ಯೆರೆದ್‌

 

162 ⇩

 

ಹನೋಕ್‌

 

65 ⇩

 

ಮೆತೂಷೆಲಹ

 

187 ⇩

 

ಲೆಮೆಕ್‌

 

182 ⇩

 

2970 ಸಾ.ಶ.ಪೂ. ನೋಹ ಸಾ.ಶ.ಪೂ. 2970ರಲ್ಲಿ

ನೋಹನು ಹುಟ್ಟಿದನು

ನೋಹನಿಂದ ಅಬ್ರಹಾಮನ ವರೆಗಿನ

502 ವರುಷಗಳು ⇩ ತಲೆಮಾರುಗಳು (952 ವರುಷಗಳು)

 

ಶೇಮ್‌

ಜಲಪ್ರಳಯ ಸಾ.ಶ.ಪೂ. 2370

100 ⇩

 

ಅರ್ಪಕ್ಷದ್‌

 

35 ⇩

 

ಶೆಲಹ

 

35 ⇩

 

ಏಬೆರ್‌

 

34 ⇩

 

ಪೆಲೆಗ್‌

 

30 ⇩

 

ರೆಯೂ

 

32 ⇩

 

ಸೆರೂಗ್‌

 

30 ⇩

 

ನಾಹೋರ್‌

 

29 ⇩

 

ತೆರಹ

 

130 ⇩

ಸಾ.ಶ.ಪೂ. 2018 ಅಬ್ರಹಾಮ ಸಾ.ಶ.ಪೂ. 2018ರಲ್ಲಿ

ಅಬ್ರಹಾಮನು ಹುಟ್ಟಿದನು

ಅಬ್ರಹಾಮನಿಂದ ದಾವೀದನ ವರೆಗೆ:

100ವರುಷಗಳು 14 ತಲೆಮಾರುಗಳು (911 ವರುಷಗಳು)

 

ಇಸಾಕ್‌

 

60 ⇩

ಯಾಕೋಬ್‌

 

ಸುಮಾರು 88 ⇩

 

ಯೆಹೂದ

 

 

ಪೆರೆಚ್‌

 

 

ಹೆಚ್ರೋನ್‌

 

 

ರಾಮ್‌

 

 

ಅಮ್ಮೀನಾದಾಬ್‌

 

 

ನಹಶೋನ್‌

 

 

ಸಲ್ಮೋನ್‌

 

 

ಬೋವಜ್‌

 

 

ಓಬೇದ್‌

 

 

ಇಷಯ

 

 

ಸಾ.ಶ.ಪೂ. 1107ರಲ್ಲಿ ದಾವೀದನು ಹುಟ್ಟಿದನು