ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಮನಸ್ಸಾಕ್ಷಿ ಸುಶಿಕ್ಷಿತವಾಗಿದೆಯೋ?

ನಿಮ್ಮ ಮನಸ್ಸಾಕ್ಷಿ ಸುಶಿಕ್ಷಿತವಾಗಿದೆಯೋ?

ನಿಮ್ಮ ಮನಸ್ಸಾಕ್ಷಿ ಸುಶಿಕ್ಷಿತವಾಗಿದೆಯೋ?

“ಏನೋ ನನ್ನ ಮನಸ್ಸು ಇದಕ್ಕೆ ಒಪ್ಪುತ್ತಾ ಇಲ್ಲ,” ಅಥವಾ “ನನ್ನಿಂದ ಇದನ್ನು ಮಾಡಲಿಕ್ಕಾಗಲ್ಲ. ಇದನ್ನು ಮಾಡುವುದು ಸರಿಯಲ್ಲ ಎಂದು ನನ್ನ ಅಂತರಂಗ ಹೇಳುತ್ತದೆ” ಎಂದು ನೀವು ಎಂದಾದರೂ ಹೇಳಿದ್ದುಂಟೋ? ಅದು ನಿಮ್ಮ ಮನಸ್ಸಾಕ್ಷಿಯ “ಧ್ವನಿ” ಆಗಿತ್ತು; ಸರಿ ತಪ್ಪಿನ ಆ ಅಂತರಾಳದ ಗ್ರಹಿಕೆ ಅಥವಾ ಪ್ರಜ್ಞೆಯು ಒಂದು ಸಂಗತಿಯನ್ನು ತಪ್ಪೆಂದು ಇಲ್ಲವೆ ತಪ್ಪಲ್ಲವೆಂದು ನಿರ್ಣಯಿಸುವ ಸಾಮರ್ಥ್ಯವಾಗಿದೆ. ಹೌದು, ಮನಸ್ಸಾಕ್ಷಿಯೆಂಬುದು ನಮ್ಮಲ್ಲಿನ ಸಹಜ ಶಕ್ತಿಯಾಗಿದೆ.

ಮನುಷ್ಯನು ದೇವರಿಂದ ವಿಮುಖನಾಗಿರುವುದಾದರೂ, ಸಾಮಾನ್ಯವಾಗಿ ಸರಿ ತಪ್ಪಿನ ಮಧ್ಯೆ ವ್ಯತ್ಯಾಸವನ್ನು ಕಂಡುಕೊಳ್ಳುವ ಸಾಮರ್ಥ್ಯ ಅವನಲ್ಲಿರುತ್ತದೆ. ಇದಕ್ಕೆ ಕಾರಣವು ಅವನು ದೇವರ ಸ್ವರೂಪದಲ್ಲಿ ಸೃಷ್ಟಿಸಲ್ಪಟ್ಟಿರುವುದೇ ಆಗಿದೆ. ಆದುದರಿಂದ, ಅವನಿಂದ ವಿವೇಕ ಮತ್ತು ನೀತಿ ಎಂಬಂಥ ದೈವಿಕ ಗುಣಗಳನ್ನು ಸ್ವಲ್ಪ ಮಟ್ಟಿಗೆ ಪ್ರತಿಬಿಂಬಿಸಲು ಸಾಧ್ಯವಾಗುತ್ತದೆ. (ಆದಿಕಾಂಡ 1:26, 27) ಇದರ ಕುರಿತು ದೈವಪ್ರೇರಿತನಾದ ಅಪೊಸ್ತಲ ಪೌಲನು ಬರೆದದ್ದು: “ಧರ್ಮಶಾಸ್ತ್ರವಿಲ್ಲದ ಅನ್ಯಜನರು ಸ್ವಾಭಾವಿಕವಾಗಿ ಧರ್ಮಶಾಸ್ತ್ರದಲ್ಲಿ ಹೇಳಿದಂತೆ ನಡೆದರೆ ಅವರು ಧರ್ಮಶಾಸ್ತ್ರವಿಲ್ಲದವರಾಗಿದ್ದರೂ ತಾವೇ ತಮಗೆ ಧರ್ಮಪ್ರಮಾಣವಾಗಿದ್ದಾರೆ; ಹೇಗಂದರೆ ಅವರು ಧರ್ಮಶಾಸ್ತ್ರದ ಮುಖ್ಯ ತಾತ್ಪರ್ಯ ತಮ್ಮ ಹೃದಯದಲ್ಲಿ ಬರೆದದೆ ಎಂಬದನ್ನು ತೋರ್ಪಡಿಸುತ್ತಾರೆ. ಇದಕ್ಕೆ ಅವರ ಮನಸ್ಸು [ಮನಸ್ಸಾಕ್ಷಿ] ಸಹ ಸಾಕ್ಷಿ ನುಡಿಯುತ್ತದೆ; ಅವರ ಯೋಚನೆಗಳು ವಾದಿಪ್ರತಿವಾದಿಗಳಂತೆ​—⁠ಇದು ತಪ್ಪೆಂದು ತಪ್ಪಲ್ಲವೆಂದು ಸೂಚಿಸುತ್ತವೆ.” *​—⁠ರೋಮಾಪುರ 2:14, 15.

ಪ್ರಥಮ ಪುರುಷನಾದ ಆದಾಮನಿಂದ ಪಡೆದುಕೊಂಡಿರುವ ಈ ನೈತಿಕ ಸ್ವಭಾವವು, ಎಲ್ಲ ಕುಲ ಮತ್ತು ರಾಷ್ಟ್ರಗಳ ಜನರಲ್ಲಿ ಒಂದು “ಧರ್ಮಶಾಸ್ತ್ರ”ದಂತೆ ಅಥವಾ ನಡತೆಯ ನೀತಿಸೂತ್ರದಂತೆ ಕಾರ್ಯವೆಸಗುತ್ತದೆ. ಇದು ಸ್ವಪರಿಶೀಲನೆ ಮಾಡಿ ನಮ್ಮ ಬಗ್ಗೆಯೇ ತೀರ್ಪನ್ನು ಹೊರಡಿಸುವ ಶಕ್ತಿಯಾಗಿದೆ. (ರೋಮಾಪುರ 9:2) ಈ ಸಾಮರ್ಥ್ಯವು ತಮ್ಮಲ್ಲಿದೆ ಎಂಬುದನ್ನು ಆದಾಮಹವ್ವರು ದೇವರ ನಿಯಮವನ್ನು ಉಲ್ಲಂಘಿಸಿದಾಗ ತೋರಿಸಿದರು​—⁠ಅವರು ತಮ್ಮನ್ನು ಬಚ್ಚಿಟ್ಟುಕೊಂಡರು. (ಆದಿಕಾಂಡ 3:7, 8) ಮನಸ್ಸಾಕ್ಷಿಯು ಹೇಗೆ ಕೆಲಸಮಾಡುತ್ತದೆ ಎಂಬುದಕ್ಕಿರುವ ಮತ್ತೊಂದು ಉದಾಹರಣೆಯು, ರಾಜ ದಾವೀದನು ಖಾನೇಷುಮಾರಿಯನ್ನು ಮಾಡಿಸುವ ಮೂಲಕ ಪಾಪಮಾಡಿದ್ದೇನೆ ಎಂಬುದನ್ನು ಗ್ರಹಿಸಿಕೊಂಡಾಗ ಪ್ರತಿಕ್ರಿಯಿಸಿದ ರೀತಿಯಲ್ಲಿ ಕಂಡುಬರುತ್ತದೆ. “ದಾವೀದನನ್ನು ಮನಸ್ಸಾಕ್ಷಿಯು ಹಂಗಿಸತೊಡಗಿತು” ಎಂದು ಬೈಬಲ್‌ ಹೇಳುತ್ತದೆ.​—⁠2 ಸಮುವೇಲ 24:1-10.

ನಮ್ಮ ಹಿಂದಿನ ನಡತೆಯ ಬಗ್ಗೆ ಆಲೋಚಿಸಿ ಅದನ್ನು ತೂಗಿನೋಡುವುದು, ದೇವರು ಸ್ವೀಕರಿಸುವಂಥ ಪಶ್ಚಾತ್ತಾಪವೆಂಬ ಪ್ರಮುಖ ಹೆಜ್ಜೆಯನ್ನು ತೆಗೆದುಕೊಳ್ಳುವಂತೆ ನಮಗೆ ಸಹಾಯಮಾಡಬಲ್ಲದು. ದಾವೀದನು ಬರೆದದ್ದು: “ನಾನು [ನನ್ನ ಪಾಪವನ್ನು] ಅರಿಕೆಮಾಡದೆ ಇದ್ದಾಗ ದಿನವೆಲ್ಲಾ ನರಳುವದರಿಂದ ನನ್ನ ಎಲುಬುಗಳು ಸವೆದುಹೋಗುತ್ತಿದ್ದವು. [ಹೀಗಿರುವಲ್ಲಿ] ಯೆಹೋವನ ಸನ್ನಿಧಿಯಲ್ಲಿ ನನ್ನ ದ್ರೋಹವನ್ನು ಒಪ್ಪಿಕೊಳ್ಳುವೆನು ಅಂದುಕೊಂಡು ನನ್ನ ಪಾಪವನ್ನು ಮರೆಮಾಡದೆ ನಿನಗೆ ನನ್ನ ದೋಷವನ್ನು ತಿಳಿಸಿದೆನು. ನೀನು ನನ್ನ ಅಪರಾಧಪಾಪಗಳನ್ನು ಪರಿಹರಿಸಿಬಿಟ್ಟಿ.” (ಕೀರ್ತನೆ 32:3, 5) ಹೀಗೆ, ಸಜೀವವಾಗಿರುವ ಒಂದು ಮನಸ್ಸಾಕ್ಷಿಯು ಒಬ್ಬ ತಪ್ಪಿತಸ್ಥನಿಗೆ, ದೇವರ ಕ್ಷಮಾಪಣೆಯನ್ನು ಪಡೆದುಕೊಳ್ಳಬೇಕು ಮತ್ತು ಆತನ ಮಾರ್ಗಗಳನ್ನು ಹಿಂಬಾಲಿಸಬೇಕು ಎಂದು ಗ್ರಹಿಸಿಕೊಳ್ಳುವಂತೆ ಸಹಾಯಮಾಡುವ ಮೂಲಕ ಅವನನ್ನು ಪುನಃ ದೇವರ ಸಮೀಪಕ್ಕೆ ತರಬಲ್ಲದು.​—⁠ಕೀರ್ತನೆ 51:1-4, 9, 13-15.

ನಾವು ಒಂದು ಆಯ್ಕೆಯನ್ನು ಅಥವಾ ನೈತಿಕ ನಿರ್ಣಯವನ್ನು ಮಾಡಲಿಕ್ಕಿರುವಾಗ ಮನಸ್ಸಾಕ್ಷಿಯು ಎಚ್ಚರಿಕೆಗಳನ್ನು ಅಥವಾ ಮಾರ್ಗದರ್ಶನೆಯನ್ನು ಸಹ ನೀಡುತ್ತದೆ. ಮನಸ್ಸಾಕ್ಷಿಯ ಈ ವೈಶಿಷ್ಟ್ಯವು ತಾನೇ ಯೋಸೇಫನಿಗೆ ವ್ಯಭಿಚಾರ ತಪ್ಪಾಗಿದೆ ಮತ್ತು ಕೆಟ್ಟದ್ದಾಗಿದೆ​—⁠ದೇವರಿಗೆ ವಿರುದ್ಧವಾದ ಪಾಪವಾಗಿದೆ ಎಂದು ಗ್ರಹಿಸುವಂತೆ ಸಹಾಯಮಾಡಿರಬೇಕು. ವ್ಯಭಿಚಾರವನ್ನು ಖಂಡಿಸುವಂಥ ನಿರ್ದಿಷ್ಟ ನಿಯಮವು ತರುವಾಯ ಇಸ್ರಾಯೇಲ್ಯರಿಗೆ ಕೊಡಲ್ಪಟ್ಟ ದಶಾಜ್ಞೆಗಳಲ್ಲಿ ಸೇರಿಸಲ್ಪಟ್ಟಿತು. (ಆದಿಕಾಂಡ 39:1-9; ವಿಮೋಚನಕಾಂಡ 20:14) ಆದುದರಿಂದ, ನಮ್ಮ ಮನಸ್ಸಾಕ್ಷಿಯು ನಮ್ಮನ್ನು ಕೇವಲ ನ್ಯಾಯತೀರಿಸುವ ಬದಲಿಗೆ ನಮ್ಮನ್ನು ಮಾರ್ಗದರ್ಶಿಸುವಂತೆ ತರಬೇತುಗೊಳಿಸಲ್ಪಡುವಲ್ಲಿ ನಾವು ಹೆಚ್ಚಿನ ಪ್ರಯೋಜನವನ್ನು ಪಡೆದುಕೊಳ್ಳುವುದು ಸಂಭಾವ್ಯ. ನಿಮ್ಮ ಮನಸ್ಸಾಕ್ಷಿಯು ಈ ರೀತಿಯಲ್ಲಿ ಕೆಲಸಮಾಡುತ್ತದೋ?

ಸರಿಯಾದ ನಿರ್ಣಯಗಳನ್ನು ಮಾಡುವಂತೆ ನಿಮ್ಮ ಮನಸ್ಸಾಕ್ಷಿಯನ್ನು ತರಬೇತುಗೊಳಿಸುವುದು

ನಮಗೆ ಮನಸ್ಸಾಕ್ಷಿ ಎಂಬ ಸಹಜ ಶಕ್ತಿ ಕೊಡಲ್ಪಟ್ಟಿದೆಯಾದರೂ, ದುಃಖಕರವಾಗಿ ಅದರಲ್ಲಿ ಒಂದು ದೋಷ ಕಂಡುಬಂದಿದೆ. ಮಾನವಕುಲವು ಒಂದು ಉತ್ತಮ ಆರಂಭವನ್ನು ಹೊಂದಿತ್ತಾದರೂ, “ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಹೊಂದದೆ ಹೋಗಿದ್ದಾರೆ.” (ರೋಮಾಪುರ 3:23) ನಾವು ಪಾಪ ಮತ್ತು ಅಪರಿಪೂರ್ಣತೆಯಿಂದ ಕಲಂಕಿತರಾಗಿರುವುದರಿಂದ, ನಮ್ಮ ಮನಸ್ಸಾಕ್ಷಿಯು ವಕ್ರಗೊಂಡಿರಬಹುದು ಮತ್ತು ಯೆಹೋವನಿಂದ ಮೂಲತಃ ಉದ್ದೇಶಿಸಲ್ಪಟ್ಟ ರೀತಿಯಲ್ಲಿ ಸಂಪೂರ್ಣವಾಗಿ ಕೆಲಸಮಾಡದೆ ಇರಬಹುದು. (ರೋಮಾಪುರ 7:18-23) ಅದರೊಂದಿಗೆ, ಬಾಹ್ಯ ವಿಚಾರಗಳು ನಮ್ಮ ಮನಸ್ಸಾಕ್ಷಿಯ ಮೇಲೆ ಪರಿಣಾಮ ಬೀರಬಲ್ಲವು. ಅದು ನಾವು ಬೆಳೆಸಲ್ಪಟ್ಟ ರೀತಿಯಿಂದ ಅಥವಾ ಸ್ಥಳಿಕ ಪದ್ಧತಿಗಳು, ನಂಬಿಕೆಗಳು ಮತ್ತು ವಾತಾವರಣದಿಂದ ಪ್ರಭಾವಿಸಲ್ಪಡಸಾಧ್ಯವಿದೆ. ಹದಗೆಟ್ಟಿರುವ ನೈತಿಕ ಮೌಲ್ಯಗಳು ಮತ್ತು ಅವನತಿಗಿಳಿಯುತ್ತಿರುವ ಈ ಲೋಕದ ಮಟ್ಟಗಳು ಒಂದು ಒಳ್ಳೇ ಮನಸ್ಸಾಕ್ಷಿಯ ಮಟ್ಟವಾಗಿರಲು ಸಾಧ್ಯವಿಲ್ಲ.

ಆದುದರಿಂದ, ಒಬ್ಬ ಕ್ರೈಸ್ತನಿಗೆ ದೇವರ ವಾಕ್ಯವಾದ ಬೈಬಲಿನಲ್ಲಿ ಕಂಡುಬರುವ ಸದೃಢವಾದ ಮತ್ತು ನೀತಿಯುತ ಮಟ್ಟಗಳ ಹೆಚ್ಚಿನ ಸಹಾಯವು ಅವಶ್ಯ ಬೇಕಾಗಿದೆ. ಈ ಮಟ್ಟಗಳು, ವಿಚಾರಗಳನ್ನು ತೂಗಿನೋಡುವಂತೆ ಮತ್ತು ತಿದ್ದುಪಡಿಯನ್ನು ಮಾಡುವಂತೆ ನಮ್ಮ ಮನಸ್ಸಾಕ್ಷಿಯನ್ನು ಮಾರ್ಗದರ್ಶಿಸಬಲ್ಲವು. (2 ತಿಮೊಥೆಯ 3:16) ನಮ್ಮ ಮನಸ್ಸಾಕ್ಷಿಯು ದೇವರ ಮಟ್ಟಗಳಿಗನುಸಾರವಾಗಿ ತರಬೇತುಗೊಳಿಸಲ್ಪಡುವಾಗ, ಅದು ನೈತಿಕ ವಿಷಯಗಳಲ್ಲಿ ಎಚ್ಚರಿಕೆ ನೀಡುವಂಥ ಒಂದು ಗಂಟೆಯಾಗಿ ಕಾರ್ಯವೆಸಗುತ್ತಾ ‘ಇದು ಒಳ್ಳೇದು ಅದು ಕೆಟ್ಟದ್ದು ಎಂಬ ಭೇದವನ್ನು ತಿಳಿದುಕೊಳ್ಳಲು’ ನಮಗೆ ಸಹಾಯಮಾಡಬಲ್ಲದು. (ಇಬ್ರಿಯ 5:14) ದೇವರ ಮಟ್ಟಗಳು ಇಲ್ಲದಿರುವಲ್ಲಿ, ನಾವು ಒಂದು ತಪ್ಪಾದ ಮಾರ್ಗದಲ್ಲಿ ಕಾಲಿಡುವಾಗ ನಮ್ಮ ಮನಸ್ಸಾಕ್ಷಿಯು ನಮಗೆ ಯಾವುದೇ ಎಚ್ಚರಿಕೆಯನ್ನು ಕೊಡದೆ ಇರಬಹುದು. “ಮನುಷ್ಯದೃಷ್ಟಿಗೆ ಸರಳವಾಗಿ ತೋರುವ ಒಂದು ದಾರಿಯುಂಟು; ಕಟ್ಟಕಡೆಗೆ ಅದು ಮರಣಮಾರ್ಗವೇ” ಎಂದು ಬೈಬಲ್‌ ಹೇಳುತ್ತದೆ.​—⁠ಜ್ಞಾನೋಕ್ತಿ 16:25; 17:⁠20.

ಜೀವನದ ಕೆಲವು ಕ್ಷೇತ್ರಗಳ ಬಗ್ಗೆ ದೇವರ ವಾಕ್ಯದಲ್ಲಿ ಸ್ಪಷ್ಟವಾದ ಮಾರ್ಗದರ್ಶನೆಗಳು ಮತ್ತು ನಿರ್ದೇಶನಗಳು ಕೊಡಲ್ಪಟ್ಟಿವೆ. ಅವನ್ನು ಪಾಲಿಸುವುದರಿಂದ ನಾವು ಪ್ರಯೋಜನವನ್ನು ಪಡೆದುಕೊಳ್ಳುತ್ತೇವೆ. ಮತ್ತೊಂದು ಬದಿಯಲ್ಲಿ, ಬೈಬಲಿನಲ್ಲಿ ನಿರ್ದಿಷ್ಟ ಸೂಚನೆಗಳು ಕೊಡಲ್ಪಟ್ಟಿರದ ಇನ್ನೂ ಅನೇಕ ಸನ್ನಿವೇಶಗಳಿವೆ. ಇದರಲ್ಲಿ ಉದ್ಯೋಗ, ಆರೋಗ್ಯಕ್ಕೆ ಸಂಬಂಧಿಸಿದ ವಿಚಾರಗಳು, ಮನೋರಂಜನೆ, ಉಡುಪು ಮತ್ತು ಕೇಶಾಲಂಕಾರದ ಆಯ್ಕೆ ಇತ್ಯಾದಿ ಕ್ಷೇತ್ರಗಳು ಸೇರಿರಬಹುದು. ಪ್ರತಿಯೊಂದು ಸನ್ನಿವೇಶವನ್ನು ಹೇಗೆ ನಿರ್ವಹಿಸುವುದು ಎಂಬುದನ್ನು ತಿಳಿದಿರುವುದು ಮತ್ತು ಸರಿಯಾದ ನಿರ್ಣಯವನ್ನು ಮಾಡುವುದು ಸುಲಭದ ಸಂಗತಿಯೇನಲ್ಲ. ಈ ಕಾರಣಕ್ಕಾಗಿ, ನಮಗೆ ರಾಜ ದಾವೀದನಿಗಿದ್ದ ಮನೋಭಾವವಿರಬೇಕು. ಅವನು ಪ್ರಾರ್ಥನೆಯಲ್ಲಿ ಹೇಳಿದ್ದು: “ಯೆಹೋವನೇ, ನಿನ್ನ ಮಾರ್ಗವನ್ನು ನನಗೆ ತಿಳಿಸು; ನೀನು ಒಪ್ಪುವ ದಾರಿಯನ್ನು ತೋರಿಸು. ನಿನ್ನ ಸತ್ಯಾನುಸಾರವಾಗಿ ನನ್ನನ್ನು ನಡಿಸುತ್ತಾ ಉಪದೇಶಿಸು; ನೀನೇ ನನ್ನನ್ನು ರಕ್ಷಿಸುವ ದೇವರು.” (ಕೀರ್ತನೆ 25:4, 5) ನಾವು ದೇವರ ದೃಷ್ಟಿಕೋನಗಳು ಮತ್ತು ಮಾರ್ಗಗಳನ್ನು ಎಷ್ಟು ಉತ್ತಮವಾಗಿ ಅರ್ಥಮಾಡಿಕೊಳ್ಳುತ್ತೇವೋ ಅಷ್ಟು ಹೆಚ್ಚಾಗಿ ನಮ್ಮ ಪರಿಸ್ಥಿತಿಗಳನ್ನು ನಿಷ್ಕೃಷ್ಟವಾಗಿ ತೂಗಿನೋಡಿ ಶುದ್ಧ ಮನಸ್ಸಾಕ್ಷಿಯೊಂದಿಗೆ ನಿರ್ಣಯಗಳನ್ನು ಮಾಡಲು ನಮ್ಮಿಂದ ಸಾಧ್ಯವಾಗುವುದು.

ಆದುದರಿಂದ, ಒಂದು ಪ್ರಶ್ನೆ ಏಳುವಾಗ ಅಥವಾ ಒಂದು ನಿರ್ಣಯವನ್ನು ಮಾಡಲಿಕ್ಕಿರುವಾಗ, ನಾವು ಅನ್ವಯಿಸಬಹುದಾದ ಬೈಬಲ್‌ ಮೂಲತತ್ತ್ವಗಳ ಬಗ್ಗೆ ಮೊದಲು ಆಲೋಚಿಸಬೇಕು. ಅವುಗಳಲ್ಲಿ ಕೆಲವು ಹೀಗಿರಬಹುದು: ತಲೆತನಕ್ಕಾಗಿನ ಗೌರವ (ಕೊಲೊಸ್ಸೆ 3:18, 20); ಎಲ್ಲ ವಿಷಯಗಳಲ್ಲಿ ಪ್ರಾಮಾಣಿಕತೆ (ಇಬ್ರಿಯ 13:18); ಕೆಟ್ಟದ್ದನ್ನು ಹಗೆಮಾಡುವುದು (ಕೀರ್ತನೆ 97:10); ಸಮಾಧಾನವನ್ನು ಬೆನ್ನಟ್ಟುವುದು (ರೋಮಾಪುರ 14:19); ಸ್ಥಾಪಿತ ಅಧಿಕಾರಿಗಳಿಗೆ ವಿಧೇಯತೆ (ಮತ್ತಾಯ 22:21; ರೋಮಾಪುರ 13:1-7); ದೇವರಿಗೆ ಅನನ್ಯ ಭಕ್ತಿ (ಮತ್ತಾಯ 4:10); ಲೋಕದ ಭಾಗವಾಗಿರದೆ ಉಳಿಯುವುದು (ಯೋಹಾನ 17:14); ದುಸ್ಸಹವಾಸಗಳನ್ನು ತ್ಯಜಿಸುವುದು (1 ಕೊರಿಂಥ 15:33); ಉಡುಪು ಮತ್ತು ಕೇಶಾಲಂಕಾರದ ವಿಷಯದಲ್ಲಿ ನಿರಾಡಂಬರತೆ (1 ತಿಮೊಥೆಯ 2:9, 10); ಮತ್ತು ಇತರರು ಎಡವದಂತೆ ಜಾಗರೂಕರಾಗಿರುವುದು (ರೋಮಾಪುರ 14:13). ಹೀಗೆ ಸಂಬಂಧಪಟ್ಟ ಬೈಬಲ್‌ ಮೂಲತತ್ತ್ವವನ್ನು ಗುರುತಿಸುವುದು ನಮ್ಮ ಮನಸ್ಸಾಕ್ಷಿಯನ್ನು ಬಲಪಡಿಸಸಾಧ್ಯವಿದೆ ಮತ್ತು ಸರಿಯಾದ ನಿರ್ಣಯವನ್ನು ಮಾಡುವಂತೆ ನಮಗೆ ಸಹಾಯಮಾಡುತ್ತದೆ.

ನಿಮ್ಮ ಮನಸ್ಸಾಕ್ಷಿಗೆ ಕಿವಿಗೊಡಿರಿ

ನಮ್ಮ ಮನಸ್ಸಾಕ್ಷಿ ನಮಗೆ ಸಹಾಯಮಾಡಬೇಕಾದರೆ, ನಾವು ಅದಕ್ಕೆ ಕಿವಿಗೊಡಬೇಕು. ನಾವು ನಮ್ಮ ಬೈಬಲ್‌ ಶಿಕ್ಷಿತ ಮನಸ್ಸಾಕ್ಷಿಯ ಸೂಚನೆಗಳಿಗೆ ಒಡನೆ ಕಿವಿಗೊಟ್ಟರೆ ಮಾತ್ರ ನಮಗೆ ಪ್ರಯೋಜನ ಸಿಗುತ್ತದೆ. ಒಂದು ಶಿಕ್ಷಿತ ಮನ್ಸಸಾಕ್ಷಿಯನ್ನು ನಾವು ವಾಹನದ ಡ್ಯಾಷ್‌ ಬೋರ್ಡ್‌ನಲ್ಲಿರುವ ಎಚ್ಚರಿಕೆ ನೀಡುವ ದೀಪಗಳಿಗೆ ಹೋಲಿಸಬಹುದು. ಒಂದುವೇಳೆ ಎಂಜಿನ್‌ ಎಣ್ಣೆಯ ಪ್ರಮಾಣವು ಕಡಿಮೆಯಿದೆ ಎಂದು ತೋರಿಸುವ ದೀಪವು ಉರಿಯಲಾರಂಭಿಸುತ್ತದೆ ಎಂದಿಟ್ಟುಕೊಳ್ಳಿ. ನಾವು ಆ ಎಚ್ಚರಿಕೆಯನ್ನು ಅಲಕ್ಷಿಸಿ ನಮ್ಮ ಪ್ರಯಾಣವನ್ನು ಮುಂದುವರಿಸುವುದಾದರೆ ಏನು ಸಂಭವಿಸಬಹುದು? ನಾವು ವಾಹನದ ಮೋಟಾರಿಗೆ ಗಂಭೀರವಾದ ಹಾನಿಯನ್ನು ಉಂಟುಮಾಡಸಾಧ್ಯವಿದೆ. ತದ್ರೀತಿಯಲ್ಲಿ, ನಮ್ಮ ಮನಸ್ಸಾಕ್ಷಿ ಅಥವಾ ನಮ್ಮ ಅಂತರಾಳದ ಧ್ವನಿಯು, ಒಂದು ನಿರ್ದಿಷ್ಟ ಕ್ರಿಯಾಕ್ರಮವು ಸರಿಯಲ್ಲ ಎಂದು ನಮಗೆ ಎಚ್ಚರಿಸಬಹುದು. ನಮ್ಮ ಶಾಸ್ತ್ರೀಯ ಮಟ್ಟಗಳು ಮತ್ತು ಮೌಲ್ಯಗಳನ್ನು ನಾವು ತೆಗೆದುಕೊಂಡಿರುವ ಅಥವಾ ತೆಗೆದುಕೊಳ್ಳಲಿಕ್ಕಿರುವ ಕ್ರಿಯಾಕ್ರಮದೊಂದಿಗೆ ಹೋಲಿಸುವ ಮೂಲಕ, ನಮ್ಮ ಮನಸ್ಸಾಕ್ಷಿಯು ಡ್ಯಾಷ್‌ ಬೋರ್ಡ್‌ನಲ್ಲಿರುವ ಆ ಎಚ್ಚರಿಕೆ ನೀಡುವ ದೀಪದಂತೆ ಒಂದು ಎಚ್ಚರಿಕೆಯನ್ನು ನೀಡುತ್ತದೆ. ಆ ಎಚ್ಚರಿಕೆಗೆ ಕಿವಿಗೊಡುವುದು ತಪ್ಪಾದ ಕ್ರಿಯೆಯಿಂದ ಉಂಟಾಗಬಹುದಾದ ದುಷ್ಪರಿಣಾಮಗಳಿಂದ ನಮ್ಮನ್ನು ತಪ್ಪಿಸುವುದಲ್ಲದೆ, ನಮ್ಮ ಮನಸ್ಸಾಕ್ಷಿಯು ಸರಿಯಾಗಿ ಕೆಲಸಮಾಡುವುದನ್ನು ಮುಂದುವರಿಸುವಂತೆ ಸಹ ಸಹಾಯಮಾಡುವುದು.

ನಾವು ಆ ಎಚ್ಚರಿಕೆಯನ್ನು ಅಲಕ್ಷಿಸಲು ತೀರ್ಮಾನಿಸುತ್ತೇವೆ ಎಂದಿಟ್ಟುಕೊಳ್ಳೋಣ. ಆಗ ಏನಾಗಬಹುದು? ಕಾಲಕ್ರಮೇಣ, ಮನಸ್ಸಾಕ್ಷಿಯು ಯಾವುದೇ ಪ್ರತಿಕ್ರಿಯೆಯನ್ನು ತೋರಿಸದ ಜಡ ವಸ್ತುವಿನಂತೆ ಆಗಿಬಿಡಸಾಧ್ಯವಿದೆ. ಮನಸ್ಸಾಕ್ಷಿಯನ್ನು ಸತತವಾಗಿ ತಿರಸ್ಕರಿಸುವುದನ್ನು ಅಥವಾ ನಿಗ್ರಹಿಸುವುದನ್ನು, ಕಾದ ಕಬ್ಬಿಣದಿಂದ ಮಾಂಸವನ್ನು ಸುಟ್ಟುಬಿಡುವ ಕ್ರಿಯೆಗೆ ಹೋಲಿಸಬಹುದು. ಸುಡಲ್ಪಟ್ಟ ಮಚ್ಚೆ ಅಂಗಾಂಶವು ಎಲ್ಲ ನರ ತುದಿಗಳನ್ನು ಕಳೆದುಕೊಳ್ಳುವ ಕಾರಣ ಅದರಲ್ಲಿ ಯಾವುದೇ ಸ್ಪರ್ಶ ಸಂವೇದನೆ ಇರುವುದಿಲ್ಲ. (1 ತಿಮೊಥೆಯ 4:2) ಇಂತಹ ಒಂದು ಮನಸ್ಸಾಕ್ಷಿಯು ಪಾಪಮಾಡಿದಾಗ ಯಾವುದೇ ತೀರ್ಪನ್ನು ಹೊರಡಿಸುವುದಿಲ್ಲ ಅಥವಾ ಅದೇ ಪಾಪವನ್ನು ಪುನಃ ಮಾಡದಂತೆ ಯಾವುದೇ ಎಚ್ಚರಿಕೆಗಳನ್ನು ಕೊಡುವುದಿಲ್ಲ. ಘಾಸಿಗೊಂಡ ಮನಸ್ಸಾಕ್ಷಿಯು ಸರಿ ತಪ್ಪಿನ ಬೈಬಲ್‌ ಮಟ್ಟಗಳನ್ನು ತಿರಸ್ಕರಿಸುತ್ತದೆ ಮತ್ತು ಹೀಗೆ ಅದೊಂದು ಕೆಟ್ಟ ಮನಸ್ಸಾಕ್ಷಿಯಾಗಿರುತ್ತದೆ. ಇಂತಹ ಮನಸ್ಸಾಕ್ಷಿಯನ್ನು ಹೊಂದಿರುವವನು ‘ತನ್ನ ದುಸ್ಥಿತಿಯ ಬಗ್ಗೆ ಸ್ವಲ್ಪವೂ ಚಿಂತಿಸದೆ’ ಇರುವುದರಿಂದ ಮತ್ತು ದೇವರಿಂದ ವಿಮುಖನಾಗಿರುವುದರಿಂದ ಅವನದ್ದು ಕಲುಷಿತಗೊಂಡಿರುವ ಮನಸ್ಸಾಕ್ಷಿಯಾಗಿರುತ್ತದೆ. (ಎಫೆಸ 4:17-19; ತೀತ 1:15) ನಮ್ಮ ಮನಸ್ಸಾಕ್ಷಿಯನ್ನು ಅಲಕ್ಷ್ಯಮಾಡುವುದು ಎಂತಹ ಮಾರಕ ಪರಿಣಾಮವನ್ನು ತರುತ್ತದೆ!

“ಒಳ್ಳೇ ಮನಸ್ಸಾಕ್ಷಿಯುಳ್ಳವರಾಗಿರಿ”

ಒಳ್ಳೇ ಮನಸ್ಸಾಕ್ಷಿಯನ್ನು ಕಾಪಾಡಿಕೊಳ್ಳುವುದರಲ್ಲಿ ಸತತ ಪ್ರಯತ್ನವು ಒಳಗೂಡಿದೆ. ಅಪೊಸ್ತಲ ಪೌಲನು ಹೇಳಿದ್ದು: “ದೇವರ ವಿಷಯದಲ್ಲಿಯೂ ಮನುಷ್ಯರ ವಿಷಯದಲ್ಲಿಯೂ ನಾನು ನಿರ್ದೋಷಿ ಎಂದು ಸಾಕ್ಷಿ ಹೇಳುವ ಮನಸ್ಸು ನನಗೆ ಯಾವಾಗಲೂ ಇರಬೇಕೆಂದು ಅಭ್ಯಾಸಮಾಡಿಕೊಳ್ಳುತ್ತೇನೆ.” (ಅ. ಕೃತ್ಯಗಳು 24:16) ಒಬ್ಬ ಕ್ರೈಸ್ತನಾಗಿ, ತಾನು ದೇವರ ವಿಷಯದಲ್ಲಿ ನಿರ್ದೋಷಿಯಾಗಿ ಉಳಿಯಬೇಕು ಎಂಬುದನ್ನು ಖಚಿತಪಡಿಸಿಕೊಳ್ಳಲಿಕ್ಕಾಗಿ ಪೌಲನು ತನ್ನ ಕ್ರಿಯಾಕ್ರಮವನ್ನು ಯಾವಾಗಲೂ ಪರಿಶೀಲಿಸಿ ತಿದ್ದಿಕೊಂಡನು. ಅಂತಿಮ ಪರಿಶೀಲನೆಯಲ್ಲಿ, ನಾವು ಏನನ್ನು ಮಾಡುತ್ತೇವೋ ಅದು ಸರಿಯೋ ತಪ್ಪೋ ಎಂಬುದನ್ನು ನಿರ್ಧರಿಸುವವನು ದೇವರಾಗಿದ್ದಾನೆ ಎಂಬುದನ್ನು ಪೌಲನು ತಿಳಿದಿದ್ದನು. (ರೋಮಾಪುರ 14:10-12; 1 ಕೊರಿಂಥ 4:4) “ನಾವು ಯಾವಾತನಿಗೆ ಲೆಕ್ಕ ಒಪ್ಪಿಸಬೇಕಾಗಿದೆಯೋ ಆತನ ದೃಷ್ಟಿಗೆ ಸಮಸ್ತವೂ ಮುಚ್ಚುಮರೆಯಿಲ್ಲದ್ದಾಗಿಯೂ ಬೈಲಾದದ್ದಾಗಿಯೂ ಅದೆ” ಎಂದು ಪೌಲನು ಹೇಳಿದನು.​—⁠ಇಬ್ರಿಯ 4:⁠13.

ಪೌಲನು ಮನುಷ್ಯರ ವಿಷಯದಲ್ಲಿಯೂ ನಿರ್ದೋಷಿಯಾಗಿ ಉಳಿಯುವುದರ ಬಗ್ಗೆ ಮಾತಾಡಿದನು. ಒಂದು ಸೂಕ್ತ ಉದಾಹರಣೆಯು, “ವಿಗ್ರಹಗಳಿಗೆ ನೈವೇದ್ಯಮಾಡಿದ ಪದಾರ್ಥಗಳನ್ನು ತಿನ್ನುವದರ” ವಿಷಯದಲ್ಲಿ ಅವನು ಕೊರಿಂಥದ ಕ್ರೈಸ್ತರಿಗೆ ಕೊಟ್ಟ ಬುದ್ಧಿವಾದವಾಗಿದೆ. ಅವನು ಏನು ಹೇಳುತ್ತಿದ್ದನೆಂದರೆ, ಒಂದು ನಿರ್ದಿಷ್ಟ ನಡವಳಿಕೆಯು ದೇವರ ವಾಕ್ಯದ ದೃಷ್ಟಿಯಲ್ಲಿ ಆಕ್ಷೇಪಣೀಯವಾಗಿಲ್ಲ ಎಂದು ತೋರುವ ಸಮಯದಲ್ಲೂ ಅದು ಇತರರ ಮನಸ್ಸಾಕ್ಷಿಯ ಮೇಲೆ ಬೀರಬಹುದಾದ ಪರಿಣಾಮದ ಕುರಿತು ಆಲೋಚಿಸುವುದು ಪ್ರಾಮುಖ್ಯ. ಇದನ್ನು ಮಾಡಲು ತಪ್ಪುವುದಾದರೆ, ‘ಯಾರಿಗೋಸ್ಕರ ಕ್ರಿಸ್ತನು ಸತ್ತನೋ ಆ ನಮ್ಮ ಸಹೋದರರ [ಆಧ್ಯಾತ್ಮಿಕತೆಯು] ನಾಶವಾಗುವ’ ಸಾಧ್ಯತೆಯಿದೆ. ನಾವು ದೇವರೊಂದಿಗಿರುವ ನಮ್ಮ ಸ್ವಂತ ಸಂಬಂಧವನ್ನು ಸಹ ಹಾಳುಮಾಡಲು ಸಾಧ್ಯವಿದೆ.​—⁠1 ಕೊರಿಂಥ 8:4, 11-13; 10:23, 24.

ಆದುದರಿಂದ, ನಿಮ್ಮ ಮನಸ್ಸಾಕ್ಷಿಯನ್ನು ತರಬೇತುಗೊಳಿಸುವುದನ್ನು ಮುಂದುವರಿಸಿರಿ ಮತ್ತು ಒಳ್ಳೇ ಮನಸ್ಸಾಕ್ಷಿಯನ್ನು ಕಾಪಾಡಿಕೊಳ್ಳಿರಿ. ನಿರ್ಣಯಗಳನ್ನು ಮಾಡುವಾಗ ದೇವರ ಮಾರ್ಗದರ್ಶನಕ್ಕಾಗಿ ಕೇಳಿಕೊಳ್ಳಿ. (ಯಾಕೋಬ 1:5) ದೇವರ ವಾಕ್ಯವನ್ನು ಅಧ್ಯಯನಮಾಡಿರಿ ಮತ್ತು ಅದರ ಮೂಲತತ್ತ್ವಗಳು ನಿಮ್ಮ ಹೃದಮನಗಳನ್ನು ರೂಪಿಸುವಂತೆ ಅನುಮತಿಸಿರಿ. (ಜ್ಞಾನೋಕ್ತಿ 2:3-5) ಗಂಭೀರವಾದ ವಿಚಾರಗಳ ಬಗ್ಗೆ ನಿರ್ಣಯಗಳನ್ನು ಮಾಡಲಿಕ್ಕಿರುವಾಗ, ಒಳಗೂಡಿರುವ ಬೈಬಲ್‌ ಮೂಲತತ್ತ್ವಗಳನ್ನು ನೀವು ಸರಿಯಾಗಿ ಅರ್ಥಮಾಡಿಕೊಂಡಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಲಿಕ್ಕಾಗಿ ಪ್ರೌಢ ಕ್ರೈಸ್ತರ ಬಳಿ ಅದರ ಬಗ್ಗೆ ವಿಚಾರಿಸಿ. (ಜ್ಞಾನೋಕ್ತಿ 12:15; ರೋಮಾಪುರ 14:1; ಗಲಾತ್ಯ 6:5) ನಿಮ್ಮ ನಿರ್ಣಯವು ನಿಮ್ಮ ಮನಸ್ಸಾಕ್ಷಿಯ ಮೇಲೆ ಯಾವ ಪರಿಣಾಮವನ್ನು ಬೀರುವುದು, ಇತರರ ಮೇಲೆ ಯಾವ ಪರಿಣಾಮವನ್ನು ಬೀರುವುದು ಮತ್ತು ಎಲ್ಲಕ್ಕಿಂತಲೂ ಮಿಗಿಲಾಗಿ ಯೆಹೋವನೊಂದಿಗಿರುವ ನಿಮ್ಮ ಸಂಬಂಧದ ಮೇಲೆ ಯಾವ ಪರಿಣಾಮವನ್ನು ಬೀರುವುದು ಎಂಬುದನ್ನು ಪರಿಗಣಿಸಿರಿ.​—⁠1 ತಿಮೊಥೆಯ 1:5, 18, 19.

ನಮ್ಮ ಮನಸ್ಸಾಕ್ಷಿಯು ನಮ್ಮ ಸ್ವರ್ಗೀಯ ತಂದೆಯಾದ ಯೆಹೋವ ದೇವರಿಂದ ಕೊಡಲ್ಪಟ್ಟ ಅತ್ಯದ್ಭುತಕರವಾದ ಉಡುಗೊರೆಯಾಗಿದೆ. ಕೊಟ್ಟಾತನ ಚಿತ್ತಕ್ಕನುಗುಣವಾಗಿ ಅದನ್ನು ಉಪಯೋಗಿಸುವ ಮೂಲಕ ನಾವು ನಮ್ಮ ಸೃಷ್ಟಿಕರ್ತನ ಸಮೀಪಕ್ಕೆ ಬರುವೆವು. ನಾವು ಮಾಡುವ ಪ್ರತಿಯೊಂದು ವಿಷಯದಲ್ಲೂ ‘ಒಳ್ಳೇ ಮನಸ್ಸಾಕ್ಷಿಯನ್ನು’ ಕಾಪಾಡಿಕೊಳ್ಳಲು ಪ್ರಯತ್ನಿಸುವಾಗ, ನಾವು ದೇವರ ಸ್ವರೂಪದಲ್ಲೇ ಸೃಷ್ಟಿಸಲ್ಪಟ್ಟಿದ್ದೇವೆ ಎಂಬುದನ್ನು ಹೆಚ್ಚು ಸ್ಪಷ್ಟವಾಗಿ ತೋರಿಸಿಕೊಡುತ್ತೇವೆ.​—⁠1 ಪೇತ್ರ 3:16; ಕೊಲೊಸ್ಸೆ 3:⁠10.

[ಪಾದಟಿಪ್ಪಣಿ]

^ ಪ್ಯಾರ. 3 ಇಲ್ಲಿ ಉಪಯೋಗಿಸಲ್ಪಟ್ಟಿರುವ ಗ್ರೀಕ್‌ ಶಬ್ದದ ಅರ್ಥ, “ನೈತಿಕ ತೀರ್ಮಾನದ ಅಂತರಾಳದ ಸಾಮರ್ಥ್ಯ” ಎಂದಾಗಿದೆ (ಹ್ಯಾರಲ್ಡ್‌ ಕೆ. ಮೋಲ್ಟನ್‌ರವರ ದಿ ಆ್ಯನಲಿಟಿಕಲ್‌ ಗ್ರೀಕ್‌ ಲೆಕ್ಸಿಕನ್‌ ರಿವೈಸ್ಡ್‌); “ನೈತಿಕವಾಗಿ ಯಾವುದು ಒಳ್ಳೇದು ಮತ್ತು ಕೆಟ್ಟದ್ದು ಆಗಿದೆಯೋ ಅದನ್ನು ತಿಳಿಯುವುದು” ಆಗಿದೆ.​—⁠ಜೆ. ಎಚ್‌. ಥೇಯರ್‌ರವರ ಗ್ರೀಕ್‌-ಇಂಗ್ಲಿಷ್‌ ಲೆಕ್ಸಿಕನ್‌.

[ಪುಟ 13ರಲ್ಲಿರುವ ಚಿತ್ರಗಳು]

ನಿಮ್ಮ ಮನಸ್ಸಾಕ್ಷಿಯು ನಿಮ್ಮನ್ನು ಕೇವಲ ನ್ಯಾಯತೀರಿಸುವ ಬದಲಿಗೆ ನಿಮ್ಮನ್ನು ಮಾರ್ಗದರ್ಶಿಸುವಂತೆ ತರಬೇತುಗೊಳಿಸಲ್ಪಟ್ಟಿದೆಯೋ?

[ಪುಟ 14ರಲ್ಲಿರುವ ಚಿತ್ರ]

ಬೈಬಲ್‌ ಮೂಲತತ್ತ್ವಗಳನ್ನು ಕಲಿಯುವುದರಿಂದ ಮತ್ತು ಅನ್ವಯಿಸುವುದರಿಂದ ನಾವು ಸುಶಿಕ್ಷಿತ ಮನಸ್ಸಾಕ್ಷಿಯನ್ನು ಪಡೆದುಕೊಳ್ಳುತ್ತೇವೆ

[ಪುಟ 15ರಲ್ಲಿರುವ ಚಿತ್ರಗಳು]

ನಿಮ್ಮ ಮನಸ್ಸಾಕ್ಷಿ ಕೊಡುವ ಎಚ್ಚರಿಕೆಗಳನ್ನು ಅಲಕ್ಷಿಸಬೇಡಿರಿ