ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೀವು ‘ದೇವರ ವಿಷಯಗಳಲ್ಲಿ ಐಶ್ವರ್ಯವಂತರು’ ಆಗಿದ್ದೀರೊ?

ನೀವು ‘ದೇವರ ವಿಷಯಗಳಲ್ಲಿ ಐಶ್ವರ್ಯವಂತರು’ ಆಗಿದ್ದೀರೊ?

ನೀವು ‘ದೇವರ ವಿಷಯಗಳಲ್ಲಿ ಐಶ್ವರ್ಯವಂತರು’ ಆಗಿದ್ದೀರೊ?

ಯೇಸು ಕ್ರಿಸ್ತನು ತಿಳಿಸಿದ ಅನೇಕ ಆಲೋಚನಾಪ್ರೇರಕ ಸಾಮ್ಯಗಳಲ್ಲಿ ಒಂದು ಒಬ್ಬ ಧನಿಕ ಜಮೀನ್ದಾರನದ್ದಾಗಿದೆ. ತನ್ನ ಭವಿಷ್ಯತ್ತನ್ನು ಭದ್ರವಾಗಿರಿಸಲು ಅವನು ಇನ್ನಷ್ಟು ದೊಡ್ಡ ಕಣಜಗಳನ್ನು ಕಟ್ಟಿಸಲು ಯೋಜಿಸುತ್ತಾನೆ. ಆದರೂ ತನ್ನ ದೃಷ್ಟಾಂತದಲ್ಲಿ ಯೇಸು ಅವನನ್ನು “ಬುದ್ಧಿಹೀನನು” ಎಂದು ಕರೆದನು. (ಲೂಕ 12:​16-21) ಅನೇಕ ಬೈಬಲ್‌ ಭಾಷಾಂತರಗಳು ಇಲ್ಲಿ “ಮೂರ್ಖ” ಎಂಬ ಪದವನ್ನೂ ಉಪಯೋಗಿಸುತ್ತವೆ. ಅವನ ಬಗ್ಗೆ ಅಷ್ಟೊಂದು ಕಠಿನವಾದ ತೀರ್ಪನ್ನು ಏಕೆ ಕೊಡಲಾಯಿತು?

ಏಕೆಂದರೆ ಈ ಧನಿಕನ ಯೋಜನೆಗಳಲ್ಲಿ ದೇವರ ಪ್ರಸ್ತಾಪವೂ ಇರಲಿಲ್ಲ, ತನ್ನ ಭೂಮಿಯ ಫಲವತ್ತತೆಗಾಗಿ ಅವನು ದೇವರಿಗೆ ಕೀರ್ತಿಯನ್ನು ಸಲ್ಲಿಸಲೂ ಇಲ್ಲ. (ಮತ್ತಾಯ 5:45) ಬದಲಿಗೆ, ಅವನು ಹೀಗೆ ಜಂಬಕೊಚ್ಚಿಕೊಂಡನು: “ಜೀವವೇ, ಅನೇಕ ವರುಷಗಳಿಗೆ ಬೇಕಾದಷ್ಟು ಸರಕು ನಿನಗೆ ಬಿದ್ದದೆ; ವಿಶ್ರಮಿಸಿಕೋ, ಊಟಮಾಡು, ಕುಡಿ, ಸುಖಪಡು.” ಹೌದು, ತನ್ನ ಪ್ರಯತ್ನಗಳ ಫಲವು “ಎತ್ತರವಾದ ಗೋಡೆ”ಯಾಗಿ ಪರಿಣಮಿಸುವುದೆಂದು ಅವನು ಭಾವಿಸಿದನು.​—⁠ಜ್ಞಾನೋಕ್ತಿ 18:11.

ಇಂತಹ ದರ್ಪದ ಮನೋಭಾವದ ವಿರುದ್ಧ ಶಿಷ್ಯ ಯಾಕೋಬನು ಬರೆದುದು: “ಈಹೊತ್ತು ಇಲ್ಲವೆ ನಾಳೆ ನಾವು ಇಂಥ ಪಟ್ಟಣಕ್ಕೆ ಹೋಗಿ ಅಲ್ಲಿ ಒಂದು ವರುಷವಿದ್ದು ವ್ಯಾಪಾರವನ್ನು ಮಾಡಿ ಲಾಭವನ್ನು ಸಂಪಾದಿಸುತ್ತೇವೆ ಅನ್ನುವವರೇ ಕೇಳಿರಿ. ನಾಳೆ ಏನಾಗುವದೋ ನಿಮಗೆ ತಿಳಿಯದು. ನಿಮ್ಮ ಜೀವಮಾನವು ಎಂಥದು? ನೀವು ಸ್ವಲ್ಪ ಹೊತ್ತು ಕಾಣಿಸಿಕೊಂಡು ಆ ಮೇಲೆ ಕಾಣದೆ ಹೋಗುವ ಹಬೆಯಂತಿರುತ್ತೀರಿ.”​—⁠ಯಾಕೋಬ 4:​13, 14.

ಆ ಮಾತುಗಳ ಸತ್ಯತೆಗೆ ಹೊಂದಿಕೆಯಲ್ಲಿ, ಯೇಸುವಿನ ಸಾಮ್ಯದ ಐಶ್ವರ್ಯವಂತನಿಗೆ ಹೀಗೆ ಹೇಳಲಾಯಿತು: “ಬುದ್ಧಿಹೀನನು ನೀನು! ಈ ಹೊತ್ತು ರಾತ್ರಿ ನಿನ್ನ ಪ್ರಾಣವನ್ನು ನಿನ್ನ ಕಡೆಯಿಂದ ಕೇಳುವರು; ಆಗ ನೀನು ಸಿದ್ಧಮಾಡಿಟ್ಟಿರುವದು ಯಾರಿಗಾಗುವದು”? ಬೇಗನೆ ಕಾಣದೆ ಹೋಗುವ ಹಬೆ ಅಥವಾ ಮಂಜಿನಂತೆ, ಆ ಐಶ್ವರ್ಯವಂತನು ತನ್ನ ಕನಸುಗಳು ನೆರವೇರುವ ಮೊದಲೇ ಸಾಯಲಿದ್ದನು. ಇದರಲ್ಲಿರುವ ಪಾಠವನ್ನು ನಾವು ವಿವೇಚಿಸಿ ತಿಳಿಯುತ್ತೇವೊ? ಯೇಸು ಹೇಳಿದ್ದು: “ತನಗೋಸ್ಕರ ದ್ರವ್ಯವನ್ನಿಟ್ಟುಕೊಂಡು ದೇವರ ವಿಷಯಗಳಲ್ಲಿ ಐಶ್ವರ್ಯವಂತನಾಗದೆ ಇರುವವನು ಅವನಂತೆಯೇ ಇದ್ದಾನೆ.” ನೀವು ‘ದೇವರ ವಿಷಯಗಳಲ್ಲಿ ಐಶ್ವರ್ಯವಂತರು’ ಆಗಿದ್ದೀರೊ?