ಹೆತ್ತವರೇ, ನಿಮ್ಮ ಮಕ್ಕಳಿಗೆ ಎಂಥ ಭವಿಷ್ಯವಿರಬೇಕೆಂದು ಬಯಸುತ್ತೀರಿ?
ಹೆತ್ತವರೇ, ನಿಮ್ಮ ಮಕ್ಕಳಿಗೆ ಎಂಥ ಭವಿಷ್ಯವಿರಬೇಕೆಂದು ಬಯಸುತ್ತೀರಿ?
“ಪ್ರಾಯಸ್ಥರೇ, ಕನ್ಯೆಯರೇ, . . . ಯೆಹೋವನ ಹೆಸರನ್ನು ಸ್ತುತಿಸಿರಿ.”—ಕೀರ್ತನೆ 148:12, 13, Nibv.
ತಮ್ಮ ಮಕ್ಕಳ ಭವಿಷ್ಯದ ಕುರಿತು ತವಕದಿಂದ ಚಿಂತಿಸದಿರುವ ಹೆತ್ತವರು ಯಾರಿದ್ದಾರೆ? ಒಂದು ಮಗು ಜನಿಸಿದ ಕ್ಷಣದಿಂದ ಹಿಡಿದು, ಅಷ್ಟೇಕೆ ಅದಕ್ಕೆ ಮೊದಲು ಸಹ ಹೆತ್ತವರು ಅದರ ಯೋಗಕ್ಷೇಮದ ಬಗ್ಗೆ ಚಿಂತಿಸುತ್ತಾರೆ. ಮಗು ಆರೋಗ್ಯದಿಂದಿರುವುದೊ? ಅದು ಸಹಜ ರೀತಿಯಲ್ಲಿ ಬೆಳೆಯುವುದೊ? ಮಗು ಬೆಳೆದು ದೊಡ್ಡದಾಗುತ್ತಿರುವಾಗ ಬೇರೆ ಚಿಂತೆಗಳು ಏಳುತ್ತವೆ. ಸಾಮಾನ್ಯವಾಗಿ ಹೆತ್ತವರು ತಮ್ಮ ಮಕ್ಕಳಿಗೆ ಅತ್ಯುತ್ತಮವಾದುದನ್ನೇ ಬಯಸುತ್ತಾರೆ.—1 ಸಮುವೇಲ 1:11, 27, 28; ಕೀರ್ತನೆ 127:3-5.
2 ಆದರೆ ಇಂದಿನ ಜಗತ್ತಿನಲ್ಲಿ ತಮ್ಮ ಮಕ್ಕಳಿಗೆ ಅತ್ಯುತ್ತಮವಾದುದನ್ನು ಒದಗಿಸುವುದು ಹೆತ್ತವರಿಗೆ ಒಂದು ಪಂಥಾಹ್ವಾನವೇ ಸರಿ. ಅನೇಕ ಹೆತ್ತವರು ಕಷ್ಟಕರವಾದ ಸಮಯಗಳನ್ನು, ಅಂದರೆ ಯುದ್ಧಗಳು, ರಾಜಕೀಯ ಉತ್ಕ್ರಾಂತಿಗಳು, ಹಣಕಾಸಿನ ತೊಂದರೆಗಳು, ಶಾರೀರಿಕ ಹಾನಿ ಇಲ್ಲವೆ ಭಾವಾತ್ಮಕವಾಗಿ ಘಾಸಿಗೊಂಡಂಥ ಸ್ಥಿತಿಗಳನ್ನು ಅನುಭವಿಸಿರುತ್ತಾರೆ. ಆದುದರಿಂದ, ತಮ್ಮ ಮಕ್ಕಳು ಅಂತಹ ಕಷ್ಟಗಳನ್ನು ಅನುಭವಿಸಬಾರದೆಂದು ಹೆತ್ತವರು ಹೃದಯದಾಳದಿಂದ ಬಯಸುವುದು ಸ್ವಾಭಾವಿಕ. ಸಂಪದ್ಭರಿತ ದೇಶಗಳಲ್ಲಿ ಹೆತ್ತವರು, ತಮ್ಮ ಸ್ನೇಹಿತರ ಮತ್ತು ಸಂಬಂಧಿಕರ ಗಂಡುಹೆಣ್ಣುಮಕ್ಕಳು ವೃತ್ತಿಪರ ಉದ್ಯೋಗಗಳಲ್ಲಿ ಏಳಿಗೆಹೊಂದುತ್ತಾ ಯಶಸ್ವೀ ಜೀವನಗಳನ್ನು ನಡೆಸುವುದನ್ನು ಕಾಣಬಹುದು. ಹೀಗೆ, ತಮ್ಮ ಮಕ್ಕಳು ಸಹ ಬೆಳೆದು ದೊಡ್ಡವರಾದಾಗ ಅಂತಹ ತಕ್ಕಮಟ್ಟಿಗಿನ ಸೌಕರ್ಯವಿರುವ ಮತ್ತು ಸುಭದ್ರ ಜೀವನವನ್ನು, ಅಂದರೆ ಉತ್ತಮ ಜೀವನವನ್ನು ನಡೆಸಶಕ್ತರಾಗುವಂತೆ ತಮ್ಮಿಂದ ಸಾಧ್ಯವಿರುವ ಎಲ್ಲವನ್ನೂ ಮಾಡುವ ಹಂಗು ತಮಗಿದೆಯೆಂದು ಅವರಿಗನಿಸುತ್ತದೆ.—ಪ್ರಸಂಗಿ 3:13.
ಉತ್ತಮ ಜೀವನವನ್ನು ಆರಿಸಿಕೊಳ್ಳುವುದು
3 ಯೇಸು ಕ್ರಿಸ್ತನ ಹಿಂಬಾಲಕರಾಗಿರುವ ಕ್ರೈಸ್ತರು ತಮ್ಮ ಜೀವನವನ್ನು ಯೆಹೋವನಿಗೆ ಸಮರ್ಪಿಸಲು ಆರಿಸಿಕೊಂಡಿದ್ದಾರೆ. ಯೇಸುವಿನ ಈ ಮಾತುಗಳು ಅವರ ಹೃದಯದಲ್ಲಿವೆ: “ಯಾವನಿಗಾದರೂ ನನ್ನ ಹಿಂದೆ ಬರುವದಕ್ಕೆ ಮನಸ್ಸಿದ್ದರೆ ಅವನು ತನ್ನನ್ನು ನಿರಾಕರಿಸಿ ತನ್ನ ಶಿಲುಬೆಯನ್ನು [“ಯಾತನಾಕಂಬವನ್ನು,” NW] ದಿನಾಲೂ ಹೊತ್ತುಕೊಂಡು ನನ್ನ ಹಿಂದೆ ಬರಲಿ.” (ಲೂಕ 9:23; 14:27) ಹೌದು, ಒಬ್ಬ ಕ್ರೈಸ್ತನ ಜೀವನದಲ್ಲಿ ಸ್ವತ್ಯಾಗವು ಒಳಗೂಡಿದೆ ಎಂಬುದು ನಿಶ್ಚಯ. ಆದರೂ, ಅದು ದಾರಿದ್ರ್ಯ ಮತ್ತು ದುರವಸ್ಥೆಯ ಜೀವನವಲ್ಲ, ಬದಲಾಗಿ ಸಂತೋಷಭರಿತ ಮತ್ತು ತೃಪ್ತಿಕರವಾದ ಉತ್ತಮ ಜೀವನವಾಗಿದೆ. ಏಕೆಂದರೆ, ಇದರಲ್ಲಿ ಕೊಡುವಿಕೆ ಒಳಗೂಡಿದೆ ಮತ್ತು ಯೇಸು ಹೇಳಿದಂತೆ “ತೆಗೆದುಕೊಳ್ಳುವದಕ್ಕಿಂತ ಕೊಡುವದೇ ಹೆಚ್ಚಿನ ಭಾಗ್ಯ” ಅಥವಾ ಸಂತೋಷವನ್ನು ತರುತ್ತದೆ.—ಅ. ಕೃತ್ಯಗಳು 20:35.
4 ಯೇಸುವಿನ ಸಮಯದಲ್ಲಿದ್ದ ಜನರು ತೀರ ಕಷ್ಟಕರವಾದ ಪರಿಸ್ಥಿತಿಗಳಲ್ಲಿ ಜೀವಿಸುತ್ತಿದ್ದರು. ಹೊಟ್ಟೆಪಾಡಿಗಾಗಿ ದುಡಿಯುವುದರೊಂದಿಗೆ, ರೋಮನರ ಕ್ರೂರ ಆಳ್ವಿಕೆಯನ್ನೂ ಆ ಸಮಯಗಳ ಸಂಪ್ರದಾಯಬದ್ಧ ಧಾರ್ಮಿಕ ಮುಖಂಡರ ದಬ್ಬಾಳಿಕೆಯ ಹೊರೆಯನ್ನೂ ಅವರು ಸಹಿಸಿಕೊಳ್ಳಬೇಕಾಗಿತ್ತು. (ಮತ್ತಾಯ 23:2-4) ಹೀಗಿದ್ದರೂ, ಯೇಸುವಿನ ಬಗ್ಗೆ ಕೇಳಿಸಿಕೊಂಡ ಅನೇಕರು ತಮ್ಮ ವೈಯಕ್ತಿಕ ಬೆನ್ನಟ್ಟುವಿಕೆಗಳನ್ನು, ಜೀವನೋದ್ಯೋಗಗಳನ್ನು ಸಹ ತ್ಯಜಿಸಿ ಅವನ ಹಿಂಬಾಲಕರಾದರು. (ಮತ್ತಾಯ 4:18-22; 9:9; ಕೊಲೊಸ್ಸೆ 4:14) ಹೀಗೆ ಮಾಡುವುದರಿಂದ ಆ ಶಿಷ್ಯರು ತಮ್ಮ ಭವಿಷ್ಯತ್ತನ್ನು ಗಂಡಾಂತರಕ್ಕೊಡ್ಡುತ್ತಿದ್ದರೊ? ಯೇಸುವಿನ ಈ ಮಾತುಗಳನ್ನು ಗಮನಿಸಿ: “ನನ್ನ ಹೆಸರಿನ ನಿಮಿತ್ತ ಮನೆಗಳನ್ನಾಗಲಿ ಅಣ್ಣತಮ್ಮಂದಿರನ್ನಾಗಲಿ ಅಕ್ಕತಂಗಿಯರನ್ನಾಗಲಿ ತಂದೆಯನ್ನಾಗಲಿ ತಾಯಿಯನ್ನಾಗಲಿ ಮಕ್ಕಳನ್ನಾಗಲಿ ಭೂಮಿಯನ್ನಾಗಲಿ ಬಿಟ್ಟುಬಿಟ್ಟಿರುವವರೆಲ್ಲರಿಗೆ ಅನೇಕ ಪಾಲು ಹೆಚ್ಚಾಗಿ ಸಿಕ್ಕುವದು; ಮತ್ತು ಅವರು ನಿತ್ಯಜೀವಕ್ಕೆ ಬಾಧ್ಯರಾಗುವರು.” (ಮತ್ತಾಯ 19:29) ತನ್ನ ಸ್ವರ್ಗೀಯ ತಂದೆಗೆ ತನ್ನ ಹಿಂಬಾಲಕರ ಆವಶ್ಯಕತೆಗಳೇನೆಂಬುದು ತಿಳಿದದೆಯೆಂದು ಯೇಸು ಅವರಿಗೆ ಆಶ್ವಾಸನೆ ನೀಡಿದನು. ಆದುದರಿಂದ ಅವನು ಅವರನ್ನು ಹೀಗೆ ಉತ್ತೇಜಿಸಿದನು: “ಹೀಗಿರುವದರಿಂದ, ನೀವು ಮೊದಲು ದೇವರ ರಾಜ್ಯಕ್ಕಾಗಿಯೂ [ಆತನ] ನೀತಿಗಾಗಿಯೂ ತವಕಪಡಿರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು.”—ಮತ್ತಾಯ 6:31-33.
5 ಇಂದಿನ ಸ್ಥಿತಿಗತಿಗಳೂ ಹೆಚ್ಚುಕಡಮೆ ಹಾಗೆಯೇ ಇವೆ. ಯೆಹೋವನು ನಮ್ಮ ಆವಶ್ಯಕತೆಗಳನ್ನು ಬಲ್ಲನು ಮತ್ತು ತಮ್ಮ ಜೀವನದಲ್ಲಿ ರಾಜ್ಯಾಭಿರುಚಿಗಳನ್ನು ಪ್ರಥಮವಾಗಿಡುವವರಿಗೆ, ವಿಶೇಷವಾಗಿ ಪೂರ್ಣ ಸಮಯದ ಶುಶ್ರೂಷೆಯನ್ನು ಬೆನ್ನಟ್ಟುವವರಿಗೆ ಆತನು ತಮ್ಮ ಪರಾಮರಿಕೆ ಮಾಡುವನೆಂಬ ಅದೇ ಆಶ್ವಾಸನೆಯಿದೆ. (ಮಲಾಕಿಯ 3:6, 16; 1 ಪೇತ್ರ 5:7) ಆದರೆ ಕೆಲವು ಮಂದಿ ಹೆತ್ತವರಿಗೆ ಈ ವಿಷಯದಲ್ಲಿ ಚಂಚಲ ಮನಸ್ಸಿದೆ. ಒಂದು ಕಡೆಯಲ್ಲಿ, ತಮ್ಮ ಮಕ್ಕಳು ಯೆಹೋವನ ಸೇವೆಯಲ್ಲಿ ಪ್ರಗತಿಮಾಡುವುದನ್ನು ನೋಡುವ, ಪ್ರಾಯಶಃ ಸಕಾಲದಲ್ಲಿ ಪೂರ್ಣ ಸಮಯದ ಶುಶ್ರೂಷೆಗೆ ಸೇರಬೇಕೆಂಬ ಮನಸ್ಸು ಅವರಿಗಿರುತ್ತದೆ. ಆದರೆ ಇನ್ನೊಂದು ಕಡೆಯಲ್ಲಿ, ಇಂದಿನ ಲೋಕದ ಆರ್ಥಿಕ ಮತ್ತು ಉದ್ಯೋಗದ ಪರಿಸ್ಥಿತಿಯನ್ನು ನೋಡುವಾಗ, ತಮ್ಮ ಮಕ್ಕಳಿಗೆ ಮೊದಲು ಒಳ್ಳೇ ವಿದ್ಯಾಭ್ಯಾಸ ಕೊಡಿಸುವುದು ಅಗತ್ಯ, ಏಕೆಂದರೆ ಆಗ ಅವರಿಗೆ ಅಗತ್ಯಬೀಳುವಾಗ ಒಳ್ಳೆಯ ಉದ್ಯೋಗವನ್ನು ಪಡೆಯಲು ಬೇಕಾದ ಅರ್ಹತೆಗಳಿರುವವು, ಇಲ್ಲವೆ ಜೀವನಾಧಾರಕ್ಕಾಗಿ ಅಗತ್ಯವಾದ ಏನಾದರೂ ಇರುವುದು ಎಂದು ಆ ಹೆತ್ತವರು ಎಣಿಸುತ್ತಾರೆ. ಅಂತಹ ಹೆತ್ತವರಿಗೆ, ಒಳ್ಳೇ ವಿದ್ಯಾಭ್ಯಾಸವೆಂದರೆ ಅನೇಕವೇಳೆ ಉನ್ನತ ಶಿಕ್ಷಣವೇ ಆಗಿರುತ್ತದೆ.
ಭವಿಷ್ಯಕ್ಕಾಗಿ ಸಿದ್ಧರಾಗುವುದು
6 ಶೈಕ್ಷಣಿಕ ವ್ಯವಸ್ಥೆಯು ಒಂದು ದೇಶದಿಂದ ಇನ್ನೊಂದಕ್ಕೆ ಭಿನ್ನವಾಗಿರುತ್ತದೆ. ಉದಾಹರಣೆಗೆ, ಭಾರತದಲ್ಲಿ ಶಾಲೆಗಳು 10 ಅಥವಾ 12 ವರುಷಗಳ ಮೂಲ ವಿದ್ಯಾಭ್ಯಾಸವನ್ನು ಒದಗಿಸುತ್ತವೆ. ಆ ಬಳಿಕ, ವಿದ್ಯಾರ್ಥಿಗಳು ವೈದ್ಯವೃತ್ತಿ, ವಕೀಲವೃತ್ತಿ, ಇಂಜಿನಿಯರ್ ವೃತ್ತಿ ಇತ್ಯಾದಿಗಳಿಗಾಗಿ ಸ್ನಾತಕ ಪದವಿಗೊ ಸ್ನಾತಕೋತ್ತರ ಪದವಿಗೊ ಮೂರು ಅಥವಾ ಹೆಚ್ಚು ವರುಷಗಳ ವಿದ್ಯಾಭ್ಯಾಸಕ್ಕಾಗಿ ಕಾಲೇಜು ಇಲ್ಲವೆ ಯೂನಿವರ್ಸಿಟಿಯನ್ನು ಸೇರಲು ಆರಿಸಿಕೊಳ್ಳಬಹುದು. ಈ ರೀತಿಯ ಯೂನಿವರ್ಸಿಟಿ ಶಿಕ್ಷಣಕ್ಕೆ ಸೂಚಿಸಲು “ಉನ್ನತ ಶಿಕ್ಷಣ” ಎಂಬ ಪದಗಳನ್ನು ಈ ಲೇಖನದಲ್ಲಿ ಉಪಯೋಗಿಸಲಾಗಿದೆ. ಇನ್ನೊಂದು ಕಡೆಯಲ್ಲಿ, ಅಲ್ಪಾವಧಿಯ ಕೋರ್ಸ್‌ಗಳ ಮೂಲಕ ಯಾವುದಾದರೂ ಕಸಬು ಅಥವಾ ಕೆಲಸದ ಸಂಬಂಧದಲ್ಲಿ ಸರ್ಟಿಫಿಕೇಟನ್ನು ಇಲ್ಲವೆ ಡಿಪ್ಲೋಮವನ್ನು ನೀಡುವ ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣದ ಕೇಂದ್ರಗಳಿವೆ.
7 ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣಕ್ಕಾಗಿ ಸಿದ್ಧಪಡಿಸುವುದೇ ಈಗಿರುವ ಪ್ರವೃತ್ತಿಯಾಗಿದೆ. ಈ ಕಾರಣದಿಂದ, ಹೆಚ್ಚಿನ ವಿದ್ಯಾಸಂಸ್ಥೆಗಳು ವಿದ್ಯಾರ್ಥಿಗಳನ್ನು ಉದ್ಯೋಗಕ್ಕೆ ಸಿದ್ಧಮಾಡುವಂಥ ಕೋರ್ಸುಗಳನ್ನು ಕಲಿಸುವ ಬದಲಿಗೆ, ಅವರು ಯೂನಿವರ್ಸಿಟಿಗೆ ಪ್ರವೇಶವನ್ನು ಪಡೆಯಲು ಇಲ್ಲವೆ ಎಂಟ್ರನ್ಸ್ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳನ್ನು ಪಡೆಯಲು ಶಕ್ತಗೊಳಿಸುವ ಪಠ್ಯವಿಷಯಗಳ ಮೇಲೆ ಮಾತ್ರ ಗಮನವನ್ನು ಕೇಂದ್ರೀಕರಿಸುತ್ತವೆ. ಇಂದಿನ ವಿದ್ಯಾರ್ಥಿಗಳು, ಯಶಸ್ಸಿನ ಭರವಸೆಕೊಡುವಂಥ ಮತ್ತು ಹೆಚ್ಚು ಸಂಬಳ ದೊರೆಯುವ ಉದ್ಯೋಗಗಳನ್ನು ಪಡೆಯಲಿಕ್ಕೋಸ್ಕರ ಡಿಗ್ರಿಗಳನ್ನು ಗಿಟ್ಟಿಸಿಕೊಳ್ಳಲು ಪ್ರಸಿದ್ಧ ಶಿಕ್ಷಣಸಂಸ್ಥೆಗಳಿಗೆ ಸೇರುವಂತೆ ಉಪಾಧ್ಯಾಯರು, ಸಲಹೆಗಾರರು ಮತ್ತು ಜೊತೆ ವಿದ್ಯಾರ್ಥಿಗಳಿಂದ ವಿಪರೀತ ಒತ್ತಡಕ್ಕೆ ಒಳಗಾಗುತ್ತಿದ್ದಾರೆ.
8 ಹಾಗಾದರೆ, ಕ್ರೈಸ್ತ ಹೆತ್ತವರು ಏನು ಮಾಡಬೇಕು? ತಮ್ಮ ಮಕ್ಕಳು ಚೆನ್ನಾಗಿ ಓದಿ, ಮುಂದಿನ ದಿನಗಳಲ್ಲಿ ತಮ್ಮ ಕಾಲ ಮೇಲೆ ನಿಂತುಕೊಳ್ಳಲು ಬೇಕಾಗುವ ಕೌಶಲಗಳನ್ನು ಕಲಿತುಕೊಳ್ಳಬೇಕೆಂದು ಅವರು ಬಯಸುತ್ತಾರೆ ನಿಜ. (ಜ್ಞಾನೋಕ್ತಿ 22:29) ಆದರೆ ಅವರು, ತಮ್ಮ ಮಕ್ಕಳು ಪ್ರಾಪಂಚಿಕ ಏಳಿಗೆ ಮತ್ತು ಯಶಸ್ಸನ್ನು ಸಾಧಿಸುವ ಸಲುವಾಗಿ ಸ್ಪರ್ಧಾಮನೋಭಾವದಿಂದ ಪ್ರಭಾವಿತರಾಗುವಂತೆ ಬಿಡಬೇಕೊ? ಅವರು ತಮ್ಮ ನುಡಿ ಅಥವಾ ವೈಯಕ್ತಿಕ ಮಾದರಿಯ ಮೂಲಕ ಯಾವ ರೀತಿಯ ಗುರಿಗಳನ್ನು ತಮ್ಮ ಮಕ್ಕಳ ಮುಂದಿಡುತ್ತಾರೆ? ಕೆಲವು ಹೆತ್ತವರು, ಸಮಯ ಬರುವಾಗ ತಮ್ಮ ಮಕ್ಕಳನ್ನು ಕಾಲೇಜು ಇಲ್ಲವೆ ಯೂನಿವರ್ಸಿಟಿಗಳಿಗೆ ಸೇರಿಸಲಾಗುವಂತೆ ತುಂಬ ಪ್ರಯಾಸಪಟ್ಟು ದುಡಿದು, ಹಣವನ್ನು ಕೂಡಿಸಿಡುತ್ತಾರೆ. ಇತರರು ಇದಕ್ಕಾಗಿ ಸಾಲಮಾಡಲೂ ಸಿದ್ಧರಾಗಿರುತ್ತಾರೆ. ಆದರೆ ಅಂತಹ ಒಂದು ನಿರ್ಣಯದ ಬೆಲೆಯನ್ನು ತೆರಲಾಗುವ ಹಣದ ಮೊತ್ತದಿಂದ ಮಾತ್ರ ಅಳೆಯಲಾಗುವುದಿಲ್ಲ. ಹಾಗಾದರೆ ಇಂದು ಉನ್ನತ ಶಿಕ್ಷಣವನ್ನು ಬೆನ್ನಟ್ಟುವುದರ ಬೆಲೆ ಎಷ್ಟಾಗಿರುತ್ತದೆ?—ಲೂಕ 14:28-33.
ಉನ್ನತ ಶಿಕ್ಷಣವನ್ನು ಬೆನ್ನಟ್ಟುವುದರ ಬೆಲೆ
9 ಬೆಲೆಯ ಬಗ್ಗೆ ಯೋಚಿಸುವಾಗ ನಾವು ಸಾಮಾನ್ಯವಾಗಿ ಖರ್ಚಾಗುವ ಹಣದ ಕುರಿತು ಚಿಂತಿಸುತ್ತೇವೆ. ಕೆಲವು ದೇಶಗಳಲ್ಲಿ ಸರಕಾರವು ಉನ್ನತ ಶಿಕ್ಷಣದ ಹೊಣೆಯನ್ನು ವಹಿಸಿಕೊಳ್ಳುವುದರಿಂದ ಅರ್ಹ ವಿದ್ಯಾರ್ಥಿಗಳಿಗೆ ಫೀಸ್ ಕೊಡಬೇಕಾಗಿರುವುದಿಲ್ಲ. ಆದರೂ ಹೆಚ್ಚಿನ ಸ್ಥಳಗಳಲ್ಲಿ ಉನ್ನತ ಶಿಕ್ಷಣ ದುಬಾರಿಯಾಗಿದೆ, ಮತ್ತು ದಿನೇದಿನೇ ಹೆಚ್ಚಾಗುತ್ತ ಹೋಗುತ್ತಿದೆ. ನ್ಯೂ ಯಾರ್ಕ್ ಟೈಮ್ಸ್ ಪತ್ರಿಕೆಯ ಒಂದು ಲೇಖನವು ಹೇಳುವುದು: “ಉನ್ನತ ಶಿಕ್ಷಣವು ಅವಕಾಶಗಳನ್ನು ತೆರೆಯುವ ಬಾಗಿಲಾಗಿ ಎಣಿಸಲ್ಪಡುತ್ತಿತ್ತು. ಆದರೆ ಈ ದಿನಗಳಲ್ಲಿ ಅದು ಹಣವಿರುವವರ ಮತ್ತು ಬಡವರ ಮಧ್ಯೆ ಇರುವ ಅಂತರವನ್ನು ಇನ್ನಷ್ಟು ದೃಢೀಕರಿಸುತ್ತದೆ.” ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಉತ್ತಮ ಗುಣಮಟ್ಟದ ಉನ್ನತ ಶಿಕ್ಷಣವು ತ್ವರಿತಗತಿಯಲ್ಲಿ, ಐಶ್ವರ್ಯವಂತರ ಮತ್ತು ವರ್ಚಸ್ಸುಳ್ಳವರ ಕ್ಷೇತ್ರವಾಗಿ ಪರಿಣಮಿಸುತ್ತಿದೆ. ಇವರು, ತಮ್ಮ ಮಕ್ಕಳು ಸಹ ಈ ಸಮಾಜದಲ್ಲಿ ಐಶ್ವರ್ಯವಂತರು ಮತ್ತು ವರ್ಚಸುಳ್ಳವರಾಗುವಂತೆ ಅವರಿಗೆ ಉನ್ನತ ಶಿಕ್ಷಣವನ್ನು ಒದಗಿಸುತ್ತಾರೆ. ಹಾಗಾದರೆ, ಕ್ರೈಸ್ತ ಹೆತ್ತವರು ತಮ್ಮ ಮಕ್ಕಳಿಗಾಗಿ ಅಂಥ ಗುರಿಗಳನ್ನು ಆರಿಸಿಕೊಳ್ಳಬೇಕೊ?—ಫಿಲಿಪ್ಪಿ 3:7, 8; ಯಾಕೋಬ 4:4.
10 ಉನ್ನತ ಶಿಕ್ಷಣವು ಉಚಿತವಾಗಿ ಸಿಗುವಲ್ಲಿಯೂ ಅದರೊಂದಿಗೆ ಕೆಲವು ಅಹಿತಕರ ಜವಾಬ್ದಾರಿಗಳು ಸೇರಿರಬಹುದು. ದೃಷ್ಟಾಂತಕ್ಕೆ, ಆಗ್ನೇಯ ಏಷಿಯದ ಒಂದು ದೇಶದಲ್ಲಿನ ಸರಕಾರವು “ಪಿರಮಿಡ್ಡು ಶೈಲಿಯ ಶಾಲಾ ವ್ಯವಸ್ಥೆಯನ್ನು” ನಡೆಸುತ್ತದೆಂದೂ, ಅದು “ಅತ್ಯುತ್ತಮವಾಗಿರುವ ವಿದ್ಯಾರ್ಥಿಗಳನ್ನು ನಿರ್ಲಜ್ಜೆಯಿಂದ ಮೇಲಕ್ಕೆ ತಳ್ಳುತ್ತದೆ” ಎಂದೂ ದ ವಾಲ್ ಸ್ಟ್ರೀಟ್ ಜರ್ನಲ್ ಹೇಳುತ್ತದೆ. “ಮೇಲೆ” ಅಂದರೆ, ಜಗತ್ತಿನ ಪ್ರತಿಷ್ಠಿತ ಶಿಕ್ಷಣಸಂಸ್ಥೆಗಳಾದ ಇಂಗ್ಲೆಂಡಿನ ಆಕ್ಸ್‌ಫರ್ಡ್ ಯೂನಿವರ್ಸಿಟಿ, ಕೇಂಬ್ರಿಜ್ ಯೂನಿವರ್ಸಿಟಿ ಮತ್ತು ಅಮೆರಿಕದ ಐವೀ ಲೀಗ್ ಯೂನಿವರ್ಸಿಟಿ ಮುಂತಾದವುಗಳಿಗೆ ಸೇರಿಸಲ್ಪಡುವುದೇ ಆಗಿದೆ. ಸರಕಾರ ಇಂತಹ ದೂರವ್ಯಾಪ್ತಿಯ ಕಾರ್ಯಕ್ರಮವನ್ನು ಒದಗಿಸುವುದೇಕೆ? “ರಾಷ್ಟ್ರೀಯ ಆರ್ಥಿಕ ವ್ಯವಸ್ಥೆಯನ್ನು ಉತ್ತೇಜಿಸಲಿಕ್ಕಾಗಿಯೇ,” ಎನ್ನುತ್ತದೆ ಆ ವರದಿ. ಹೀಗೆ ವಿದ್ಯಾಭ್ಯಾಸ ಉಚಿತವಾದರೂ ವಿದ್ಯಾರ್ಥಿಗಳು ತೆರಬೇಕಾದ ಬೆಲೆಯು, ಈಗಿನ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದರಲ್ಲಿ ತಮ್ಮ ಇಡೀ ಜೀವನವನ್ನು ವ್ಯಯಿಸುವುದೇ ಆಗಿರುತ್ತದೆ. ಲೋಕದಲ್ಲಿ ಈ ರೀತಿಯ ಜೀವನವನ್ನು ಬಹುಜನರು ಅತಿ ಹೆಚ್ಚಾಗಿ ಬೆನ್ನಟ್ಟುತ್ತಾರಾದರೂ, ಕ್ರೈಸ್ತ ಹೆತ್ತವರು ತಮ್ಮ ಮಕ್ಕಳಿಗೆ ಇದನ್ನೇ ಬಯಸಬೇಕೊ?—ಯೋಹಾನ 15:19; 1 ಯೋಹಾನ 2:15-17.
11 ಯೋಚಿಸಬೇಕಾದ ಇನ್ನೊಂದು ವಿಷಯವು ಶಿಕ್ಷಣ ಕ್ಷೇತ್ರದಲ್ಲಿನ ಪರಿಸರವಾಗಿದೆ. ಕಾಲೇಜ್ ಮತ್ತು ಯೂನಿವರ್ಸಿಟಿ ಕ್ಯಾಂಪಸ್‌ಗಳು ದುರ್ವರ್ತನೆಗಳಿಗೆ ಅಂದರೆ, ಅಮಲೌಷಧ ಮತ್ತು ಮದ್ಯದ ದುರುಪಯೋಗ, ಲೈಂಗಿಕ ದುರಾಚಾರ, ನಕಲುಮಾಡಿ ಪರೀಕ್ಷೆ ಪಾಸಾಗುವುದು, ರ್ಯಾಗಿಂಗ್ ಇತ್ಯಾದಿಗಳಿಗೆ ಕುಪ್ರಸಿದ್ಧವಾಗಿವೆ. ಮದ್ಯದ ದುರುಪಯೋಗದ ಬಗ್ಗೆ ಯೋಚಿಸಿರಿ. ಮದ್ಯಪಾನಕೇಳಿ, ಅಂದರೆ ಸುಮ್ಮನೆ ಮತ್ತರಾಗುವ ಉದ್ದೇಶದಿಂದ ಮಾತ್ರ ಕುಡಿಯುವುದರ ವಿಷಯದಲ್ಲಿ ನ್ಯೂ ಸೈಅಂಟಿಸ್ಟ್ ಪತ್ರಿಕೆ ವರದಿಸುವುದು: “[ಅಮೆರಿಕದಲ್ಲಿನ ಯೂನಿವರ್ಸಿಟಿ ವಿದ್ಯಾರ್ಥಿಗಳಲ್ಲಿ] ಸುಮಾರು 44 ಪ್ರತಿಶತ ಮಂದಿ ಎರಡು ವಾರಗಳಲ್ಲಿ ಒಮ್ಮೆಯಾದರೂ ಮದ್ಯಪಾನಕೇಳಿಯಲ್ಲಿ ಸೇರಿಕೊಳ್ಳುತ್ತಾರೆ.” ಆಸ್ಟ್ರೇಲಿಯ, ಬ್ರಿಟನ್, ರಷ್ಯ ಮತ್ತು ಬೇರೆ ಕಡೆಗಳಲ್ಲಿಯೂ ಈ ಸಮಸ್ಯೆ ಸಾಮಾನ್ಯವಾಗಿರುತ್ತದೆ. ಲೈಂಗಿಕ ದುರಾಚಾರದ ವಿಷಯದಲ್ಲಿ ಹೇಳುವಾಗ, ಇಂದು ಯೂನಿವರ್ಸಿಟಿ ವಿದ್ಯಾರ್ಥಿಗಳ ಮಧ್ಯೆ ನಡೆಯುವ ಮಾತುಕತೆಯು, “ಏಕರಾತ್ರಿಯ ಲೈಂಗಿಕ ಸಂಬಂಧದ” ಕುರಿತಾಗಿರುತ್ತದೆ. ಒಂದು ನ್ಯೂಸ್‌ವೀಕ್ ವರದಿಗನುಸಾರ 1 ಕೊರಿಂಥ 5:11; 6:9, 10.
ಇದು, “ಮುಂದಕ್ಕೆ ಮಾತುಕತೆ ನಡೆಸಲೂ ಇಚ್ಛೆಯಿಲ್ಲದೆ ಇಬ್ಬರು ಪರಿಚಯಸ್ಥರ ನಡುವೆ, ಚುಂಬನದಿಂದ ಹಿಡಿದು ಸಂಭೋಗದ ತನಕದ ಯಾವುದೇ ಕೃತ್ಯವು ನಡೆಯಬಹುದಾದ ಒಂದೇ ಬಾರಿ ನಡೆಯುವ ಲೈಂಗಿಕ ಸಂಬಂಧವನ್ನು ವರ್ಣಿಸುತ್ತದೆ.” ವಿದ್ಯಾರ್ಥಿಗಳಲ್ಲಿ 60ರಿಂದ 80 ಪ್ರತಿಶತ ಮಂದಿ ಈ ರೀತಿಯ ವರ್ತನೆಯಲ್ಲಿ ಭಾಗವಹಿಸುತ್ತಾರೆಂದು ಅಧ್ಯಯನಗಳು ತೋರಿಸುತ್ತವೆ. ಒಬ್ಬ ಸಂಶೋಧಕಿ ಹೇಳುವುದು: “ನೀವು ಎಲ್ಲರಂತಿರುವ ಒಬ್ಬ ಸಾಧಾರಣ ವಿದ್ಯಾರ್ಥಿಯಾಗಿರುವಲ್ಲಿ ಅದನ್ನು ಮಾಡುತ್ತೀರಿ.”—12 ಹಾನಿಕರ ಪರಿಸರವಲ್ಲದೆ, ಹೋಮ್‌ವರ್ಕ್ ಮತ್ತು ಪರೀಕ್ಷೆಗಳ ಒತ್ತಡವೂ ಇದೆ. ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿದ್ಯಾರ್ಥಿಗಳು ಅಧ್ಯಯನ ಮತ್ತು ಹೋಮ್‌ವರ್ಕ್ ಮಾಡಬೇಕಾಗಿರುವುದು ಸ್ವಾಭಾವಿಕ. ಕೆಲವರು ಕಾಲೇಜಿಗೆ ಹೋಗುತ್ತಿರುವಾಗಲೇ ಕಡಮೆಪಕ್ಷ ಒಂದು ಪಾರ್ಟ್‌ಟೈಮ್ ಕೆಲಸವನ್ನಾದರೂ ಮಾಡಬೇಕಾಗುತ್ತದೆ. ಇದೆಲ್ಲದ್ದಕ್ಕೂ ಅವರು ಬಹಳಷ್ಟು ಸಮಯ ಮತ್ತು ಶಕ್ತಿಯನ್ನು ವ್ಯಯಿಸಬೇಕಾಗುತ್ತದೆ. ಹೀಗಿರುವಲ್ಲಿ, ಆಧ್ಯಾತ್ಮಿಕ ಚಟುವಟಿಕೆಗಳಿಗೆ ಸಮಯ ಎಲ್ಲಿರುತ್ತದೆ? ಒತ್ತಡಗಳು ಹೆಚ್ಚಾಗುವಾಗ ಅವರೇನನ್ನು ಬಿಟ್ಟುಕೊಡುವರು? ಆಗಲೂ ರಾಜ್ಯಾಭಿರುಚಿಗಳಿಗೆ ಪ್ರಥಮ ಸ್ಥಾನ ಸಿಕ್ಕೀತೆ ಇಲ್ಲವೆ ಅವುಗಳು ಬದಿಗೆ ತಳ್ಳಲ್ಪಡಬಹುದೇ? (ಮತ್ತಾಯ 6:33) ಕ್ರೈಸ್ತರಿಗೆ ಬೈಬಲ್ ಉತ್ತೇಜನ ಕೊಡುವುದು: “ಈ ದಿನಗಳು ಕೆಟ್ಟವುಗಳಾಗಿವೆ; ಆದದರಿಂದ ಕಾಲವನ್ನು ಸುಮ್ಮನೆ ಕಳಕೊಳ್ಳದೆ ಅದನ್ನು ಬೆಲೆಯುಳ್ಳದ್ದೆಂದು ಉಪಯೋಗಿಸಿಕೊಳ್ಳಿರಿ.” (ಎಫೆಸ 5:15, 16) ಹೀಗಿರುವಾಗ, ಕೆಲವರು ತಮ್ಮ ಸಮಯ ಮತ್ತು ಶಕ್ತಿಗಾಗಿರುವ ಬೇಡಿಕೆಗಳಿಗೆ ಬಲಿಬಿದ್ದು ಇಲ್ಲವೆ ಕಾಲೇಜಿನಲ್ಲಿನ ಅಶಾಸ್ತ್ರೀಯ ನಡತೆಯಲ್ಲಿ ಸಿಕ್ಕಿಬಿದ್ದು ನಂಬಿಕೆಯನ್ನು ಬಿಟ್ಟುಹೋಗಿರುವುದು ಅದೆಷ್ಟು ವಿಷಾದನೀಯ!
* (ಜ್ಞಾನೋಕ್ತಿ 22:3; 2 ತಿಮೊಥೆಯ 2:22) ಯುವ ಮಕ್ಕಳು ಮುಂದೆ ಪಡೆಯಬಹುದಾದ ಯಾವುದೇ ಪ್ರಯೋಜನಗಳ ದೃಷ್ಟಿಯಲ್ಲಿ ಈ ರೀತಿಯ ಅಪಾಯಕ್ಕೆ ಅವರನ್ನು ಒಡ್ಡುವುದು ವಿವೇಕಯುತವೊ? ಮತ್ತು ಅತಿ ಪ್ರಾಮುಖ್ಯವಾಗಿ, ತಮ್ಮ ಜೀವಿತದಲ್ಲಿ ಯಾವುದು ಪ್ರಥಮವಾಗಿರಬೇಕೆಂಬ ವಿಷಯದಲ್ಲಿ ಈ ಯುವ ವಿದ್ಯಾರ್ಥಿಗಳು ಅಲ್ಲಿ ಏನನ್ನು ಕಲಿತುಕೊಳ್ಳುತ್ತಾರೆ? (ಫಿಲಿಪ್ಪಿ 1:10; 1 ಥೆಸಲೊನೀಕ 5:21) ಈ ಪ್ರಶ್ನೆಗಳ ವಿಷಯದಲ್ಲಿ ಹಾಗೂ ತಮ್ಮ ಮಕ್ಕಳನ್ನು ಇನ್ನೊಂದು ಊರಿನ ಅಥವಾ ದೇಶದ ಕಾಲೇಜುಗಳಿಗೆ ಕಳುಹಿಸುವ ವಿಷಯದಲ್ಲಿ ಹೆತ್ತವರು ಗಂಭೀರವಾಗಿಯೂ ಪ್ರಾರ್ಥನಾಪೂರ್ವಕವಾಗಿಯೂ ಚಿಂತಿಸತಕ್ಕದ್ದು.
13 ಲೈಂಗಿಕ ದುರಾಚಾರ, ದುರ್ವರ್ತನೆ ಮತ್ತು ಒತ್ತಡಗಳು ಕಾಲೇಜ್ ಮತ್ತು ಯೂನಿವರ್ಸಿಟಿ ಕ್ಯಾಂಪಸ್‌ಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ ಎಂಬುದು ನಿಶ್ಚಯ. ಆದರೆ ಲೋಕದ ಅನೇಕ ಯುವ ಜನರು ಇಂತಹ ವಿಷಯಗಳನ್ನು ಶಿಕ್ಷಣದ ಭಾಗವಾಗಿ ಪರಿಗಣಿಸಿ, ಅದರ ಬಗ್ಗೆ ಎಳ್ಳಷ್ಟೂ ಚಿಂತಿಸುವುದಿಲ್ಲ. ಆದರೆ ಕ್ರೈಸ್ತ ಹೆತ್ತವರು ಬೇಕುಬೇಕೆಂದೇ ತಮ್ಮ ಮಕ್ಕಳನ್ನು ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ವರ್ಷಗಳ ತನಕ ಇಂತಹ ಹಾನಿಕರ ಪರಿಸರಕ್ಕೆ ಒಡ್ಡಬೇಕೊ?ಇರುವ ಅನ್ಯಮಾರ್ಗಗಳಾವುವು?
14 ಯುವ ಜನರು ಯಶಸ್ಸನ್ನು ಗಳಿಸಬೇಕಾದರೆ ಅವರಿಗಿರುವ ಏಕಮಾತ್ರ ಆಯ್ಕೆಯು ಯೂನಿವರ್ಸಿಟಿ ಶಿಕ್ಷಣವನ್ನು ಪಡೆಯುವುದೇ ಎಂಬುದು ಇಂದಿನ ಜನಪ್ರಿಯ ಅಭಿಪ್ರಾಯವಾಗಿದೆ. ಆದರೂ, ಜನಪ್ರಿಯವಾದುದನ್ನು ಅನುಸರಿಸುವ ಬದಲಿಗೆ ಕ್ರೈಸ್ತರು ಬೈಬಲಿನ ಈ ಬುದ್ಧಿವಾದವನ್ನು ಪಾಲಿಸುತ್ತಾರೆ: “ಇಹಲೋಕದ ನಡವಳಿಕೆಯನ್ನು ಅನುಸರಿಸದೆ ನೂತನಮನಸ್ಸನ್ನು ಹೊಂದಿಕೊಂಡು ಪರಲೋಕಭಾವದವರಾಗಿರಿ. ಹೀಗಾದರೆ ದೇವರ ಚಿತ್ತಕ್ಕನುಸಾರವಾದದ್ದು ಅಂದರೆ ಉತ್ತಮವಾದದ್ದೂ ಮೆಚ್ಚಿಕೆಯಾದದ್ದೂ ದೋಷವಿಲ್ಲದ್ದೂ ಯಾವ ಯಾವದೆಂದು ವಿವೇಚಿಸಿ ತಿಳುಕೊಳ್ಳುವಿರಿ.” (ರೋಮಾಪುರ 12:2) ಹಾಗಾದರೆ, ಈ ಅಂತ್ಯಕಾಲದ ಕೊನೆಯ ಹಂತದಲ್ಲಿ, ಆಬಾಲವೃದ್ಧರಾಗಿರುವ ತನ್ನ ಜನರಿಗಾಗಿ ದೇವರ ಚಿತ್ತವೇನು? ಪೌಲನು ತಿಮೊಥೆಯನನ್ನು ಪ್ರೋತ್ಸಾಹಿಸಿದ್ದು: “ನೀನು ಎಲ್ಲಾ ವಿಷಯಗಳಲ್ಲಿ ಸ್ವಸ್ಥಚಿತ್ತನಾಗಿರು, ಶ್ರಮೆಯನ್ನು ತಾಳಿಕೋ, ಸೌವಾರ್ತಿಕನ ಕೆಲಸವನ್ನು ಮಾಡು, ನಿನಗೆ ನೇಮಿಸಿರುವ ಸೇವೆಯನ್ನು ಲೋಪವಿಲ್ಲದೆ ನಡಿಸು.” ಆ ಮಾತುಗಳು ನಿಶ್ಚಯವಾಗಿಯೂ ಇಂದು ನಮಗೆಲ್ಲರಿಗೂ ಅನ್ವಯಿಸುತ್ತವೆ.—2 ತಿಮೊಥೆಯ 4:5.
15 ಲೋಕದ ಪ್ರಾಪಂಚಿಕ ಮನೋಭಾವದಲ್ಲಿ ಸಿಕ್ಕಿಬೀಳುವ ಬದಲಿಗೆ, ನಾವೆಲ್ಲರೂ “ಸ್ವಸ್ಥಚಿತ್ತ”ವನ್ನು, ನಮ್ಮ ಆಧ್ಯಾತ್ಮಿಕ ನೆಲೆಯನ್ನು ಕಾಪಾಡಿಕೊಳ್ಳುವುದು ಅಗತ್ಯ. ನೀವು ಯುವ ವ್ಯಕ್ತಿಯಾಗಿರುವಲ್ಲಿ ಹೀಗೆ ಕೇಳಿಕೊಳ್ಳಿ: ‘ದೇವರ ವಾಕ್ಯದ ಅರ್ಹ ಶುಶ್ರೂಷಕನಾಗುವಂತೆ, “ನನಗೆ ನೇಮಿಸಿರುವ ಸೇವೆಯನ್ನು ಲೋಪವಿಲ್ಲದೆ ನಡಿಸಲು” ನನ್ನಿಂದಾಗುವಷ್ಟು ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತಿದ್ದೇನೊ? ನನ್ನ ಶುಶ್ರೂಷೆಯನ್ನು “ಲೋಪವಿಲ್ಲದೆ” ಇಲ್ಲವೆ ಪೂರ್ಣವಾಗಿ ನಡೆಸಲಿಕ್ಕಾಗಿ ನಾನು ಯಾವ ಯೋಜನೆಗಳನ್ನು ಮಾಡಿದ್ದೇನೆ? ಪೂರ್ಣ ಸಮಯದ ಸೇವೆಯನ್ನು ನನ್ನ ಜೀವನವೃತ್ತಿಯನ್ನಾಗಿ ಮಾಡುವುದರ ಕುರಿತು ಆಲೋಚಿಸಿದ್ದೇನೊ?’ ಇತರ ಯುವ ಜನರು ಸ್ವಾರ್ಥಪರ ಬೆನ್ನಟ್ಟುವಿಕೆಯಲ್ಲಿ ತಲ್ಲೀನರಾಗಿರುತ್ತ, ಉಜ್ವಲವಾದ ಭವಿಷ್ಯಕ್ಕೆ ನಡೆಸುತ್ತದೆಂದು ನೆನಸುವ “ಮಹಾಪದವಿ”ಯನ್ನು ಹುಡುಕುವುದರಲ್ಲಿ ತೊಡಗಿರುವುದನ್ನು ನೀವು ನೋಡುವಾಗ, ಇವು ವಿಶೇಷವಾಗಿ ಕಷ್ಟಕರವಾದ ಪ್ರಶ್ನೆಗಳೆಂಬುದು ನಿಜ. (ಯೆರೆಮೀಯ 45:5) ಆದಕಾರಣ, ಕ್ರೈಸ್ತ ಹೆತ್ತವರು ತಮ್ಮ ಮಕ್ಕಳಿಗೆ ಶೈಶವದಿಂದಲೇ ಯೋಗ್ಯ ರೀತಿಯ ಆಧ್ಯಾತ್ಮಿಕ ಪರಿಸರ ಮತ್ತು ತರಬೇತನ್ನು ವಿವೇಕದಿಂದ ಒದಗಿಸುತ್ತಾರೆ.—ಜ್ಞಾನೋಕ್ತಿ 22:6; ಪ್ರಸಂಗಿ 12:1; 2 ತಿಮೊಥೆಯ 3:14, 15.
16 ತಾಯಿಯು ಅನೇಕ ವರುಷಗಳಿಂದ ಪೂರ್ಣ ಸಮಯದ ಶುಶ್ರೂಷಕಿಯಾಗಿರುವ ಒಂದು ಕುಟುಂಬದ ಮೂವರು ಗಂಡುಮಕ್ಕಳಲ್ಲಿ ಹಿರಿಯವನು ನೆನಪಿಸಿಕೊಳ್ಳುವುದು: “ನಮ್ಮ ತಾಯಿ ನಮ್ಮ ಸಹವಾಸವನ್ನು ತೀರ ನಿಕಟವಾಗಿ ಪರೀಕ್ಷಿಸುತ್ತಿದ್ದರು. ನಾವು ನಮ್ಮ ಶಾಲಾ ಸಹಪಾಠಿಗಳೊಂದಿಗೆ ಬೆರೆಯದೆ, ಸಭೆಯಲ್ಲಿ ಉತ್ತಮ ಆಧ್ಯಾತ್ಮಿಕ ರೂಢಿಗಳಿದ್ದವರೊಂದಿಗೆ ಮಾತ್ರ ಸಹವಾಸಮಾಡಿದೆವು. ತಾಯಿ ಪೂರ್ಣ ಸಮಯದ ಸೇವೆಯಲ್ಲಿದ್ದಂತಹ ಮಿಷನೆರಿಗಳು, ಸಂಚರಣ ಮೇಲ್ವಿಚಾರಕರು, ಬೆತೆಲಿಗರು ಮತ್ತು ಪಯನೀಯರರನ್ನು ಕ್ರಮವಾಗಿ ನಮ್ಮ ಮನೆಗೆ ಸಹವಾಸದ ಉದ್ದೇಶದಿಂದ ಆಮಂತ್ರಿಸುತ್ತಿದ್ದರು. ಅವರ ಅನುಭವಗಳನ್ನು ಕೇಳಿ, ಅವರ ಆನಂದವನ್ನು ನೋಡುವುದು, ನಮ್ಮ ಹೃದಯಗಳಲ್ಲಿ ಪೂರ್ಣ ಸಮಯದ ಸೇವೆಯನ್ನು ಮಾಡುವ ಆಸೆಯನ್ನು ಹುಟ್ಟಿಸಿತು.” ಈ ಮೂವರು ಗಂಡುಮಕ್ಕಳೂ ಪೂರ್ಣ ಸಮಯದ ಶುಶ್ರೂಷೆಯಲ್ಲಿ—ಒಬ್ಬನು ಬೆತೆಲಿನಲ್ಲಿ, ಇನ್ನೊಬ್ಬನು ಶುಶ್ರೂಷಾ ತರಬೇತು ಶಾಲೆಗೆ ಹಾಜರಾಗಿ, ಮತ್ತೊಬ್ಬನು ಪಯನೀಯರನಾಗಿ—ಸೇವೆಸಲ್ಲಿಸುವುದನ್ನು ನೋಡುವುದು ಎಷ್ಟು ಆನಂದದಾಯಕ!
17 ಪ್ರಬಲವಾದ ಆಧ್ಯಾತ್ಮಿಕ ಪರಿಸರವನ್ನು ಒದಗಿಸುವುದರೊಂದಿಗೆ, ಹೆತ್ತವರು ಆದಷ್ಟು ಬೇಗನೆ, ತಮ್ಮ ಮಕ್ಕಳು ಶಾಲಾ ಪಠ್ಯವಿಷಯಗಳನ್ನು *
ಮತ್ತು ಕಸಬು ತರಬೇತನ್ನು ಆಯ್ದುಕೊಳ್ಳುವಾಗ ಯೋಗ್ಯ ಮಾರ್ಗದರ್ಶನವನ್ನೂ ನೀಡಬೇಕು. ಈಗ ಬೆತೆಲ್ ಸೇವೆಯಲ್ಲಿರುವ ಇನ್ನೊಬ್ಬ ಯುವಕನು ಹೇಳುವುದು: “ನನ್ನ ಹೆತ್ತವರು ತಮ್ಮ ಮದುವೆಗೆ ಮುಂಚಿತವಾಗಿ ಮತ್ತು ಅನಂತರ ಪಯನೀಯರ್ ಸೇವೆಮಾಡಿದ್ದು, ಆ ಪಯನೀಯರ್ ಆತ್ಮವನ್ನು ಇಡೀ ಕುಟುಂಬಕ್ಕೆ ದಾಟಿಸಲು ತುಂಬ ಪ್ರಯತ್ನವನ್ನು ಮಾಡಿದ್ದಾರೆ. ಶಾಲೆಯಲ್ಲಿ ನಾವು ಪಠ್ಯವಿಷಯಗಳನ್ನು ಆರಿಸಿಕೊಳ್ಳುವಾಗ ಇಲ್ಲವೆ ನಮ್ಮ ಭವಿಷ್ಯವನ್ನು ಬಾಧಿಸುವ ನಿರ್ಣಯಗಳನ್ನು ಮಾಡುವಾಗೆಲ್ಲ, ನಾವು ಪಾರ್ಟ್‌ಟೈಮ್ ಕೆಲಸ ಮತ್ತು ಪಯನೀಯರ್ ಸೇವೆ ಇವೆರಡನ್ನೂ ಮಾಡಲು ಅತ್ಯುತ್ತಮ ಅವಕಾಶವನ್ನು ಕೊಡುವಂಥ ರೀತಿಯ ಆಯ್ಕೆಯನ್ನು ಮಾಡುವಂತೆ ಪ್ರೋತ್ಸಾಹಿಸುತ್ತಿದ್ದರು.” ಯೂನಿವರ್ಸಿಟಿ ವಿದ್ಯೆಗೆ ನಡೆಸುವ ಪಠ್ಯವಿಷಯಗಳನ್ನು ಆರಿಸಿಕೊಳ್ಳುವ ಬದಲಿಗೆ, ದೇವಪ್ರಭುತ್ವಾತ್ಮಕ ಜೀವನಪಥವನ್ನು ಬೆನ್ನಟ್ಟುವುದರಲ್ಲಿ ಉಪಯುಕ್ತವಾಗುವ ಕೋರ್ಸುಗಳ ಕುರಿತು ಹೆತ್ತವರೂ ಮಕ್ಕಳೂ ಪರಿಗಣಿಸುವುದು ಅಗತ್ಯ.18 ಅನೇಕ ದೇಶಗಳಲ್ಲಿ, ಅಗತ್ಯವಾಗಿ ಬೇಕಾಗಿರುವವರು ಯೂನಿವರ್ಸಿಟಿ ಪದವೀಧರರಲ್ಲ, ಬದಲಾಗಿ ಕಸಬಿನವರು, ಸೇವಾವೃತ್ತಿಯವರು ಎಂದು ಅಧ್ಯಯನಗಳು ತೋರಿಸುತ್ತವೆ. “ಮುಂದಿನ ದಶಕಗಳಲ್ಲಿ ಕೆಲಸಗಾರರಲ್ಲಿ 70% ಮಂದಿಗೆ ಬೇಕಾಗುವುದು ನಾಲ್ಕು ವರುಷಗಳ ಕಾಲೇಜ್ ಡಿಗ್ರಿಯಲ್ಲ, ಬದಲಿಗೆ ಒಂದು ಸರಕಾರಿ ಕಾಲೇಜಿನಿಂದ ದೊರೆಯುವ ಎರಡು ವರುಷಗಳ ಅಧ್ಯಯನದ ಅಸೋಸಿಯೇಟ್ ಡಿಗ್ರಿ ಅಥವಾ ಯಾವುದಾದರೂ ವಿಧದ ಟೆಕ್ನಿಕಲ್ ಸರ್ಟಿಫಿಕೇಟೇ” ಎಂದು ಯು.ಎಸ್.ಎ. ಟುಡೇ ವರದಿ ಮಾಡುತ್ತದೆ. ಇಂತಹ ಅನೇಕ ಸಂಸ್ಥೆಗಳು ಆಫೀಸ್ ಕೌಶಲ, ಆಟೋ ರಿಪೇರಿ, ಕಂಪ್ಯೂಟರ್ ರಿಪೇರಿ, ಕೊಳಾಯಿ ಕೆಲಸ, ಹೇರ್‌ಡ್ರೆಸಿಂಗ್ ಮತ್ತು ಇನ್ನೂ ಅನೇಕ ಕಸಬುಗಳ ಸ್ವಲ್ಪಾವಧಿಯ ಕೋರ್ಸುಗಳನ್ನು ನಡೆಸುತ್ತವೆ. ಇವು ಅಪೇಕ್ಷಣೀಯ ಕೆಲಸಗಳೋ? ನಿಶ್ಚಯವಾಗಿಯೂ! ಇವು ಕೆಲವರು ನೆನಸುವಷ್ಟು ಆಕರ್ಷಣೀಯವಾಗಿ ಇರಲಿಕ್ಕಿಲ್ಲವಾದರೂ, ಯೆಹೋವನ ಸೇವೆಯನ್ನೇ ತಮ್ಮ ನಿಜವಾದ ವೃತ್ತಿಯನ್ನಾಗಿ ಮಾಡಿಕೊಂಡಿರುವವರಿಗೆ ಬೇಕಾದ ಆದಾಯ ಮತ್ತು ಹೊಂದಿಸಿಕೊಳ್ಳುವ ಸ್ವಾತಂತ್ರ್ಯವನ್ನು ಕೊಡುತ್ತದೆ.—2 ಥೆಸಲೊನೀಕ 3:8.
19 ಬೈಬಲ್ ಹೀಗೆ ಕೇಳಿಕೊಳ್ಳುತ್ತದೆ: “ಪ್ರಾಯಸ್ಥರೇ, ಕನ್ಯೆಯರೇ, . . . ಯೆಹೋವನ ಹೆಸರನ್ನು ಸ್ತುತಿಸಿರಿ; ಆತನ ಹೆಸರು ಮಾತ್ರ ಶ್ರೇಷ್ಠವಾಗಿದೆ; ಆತನ ಮಹಿಮೆಯು ಭೂಮ್ಯಾಕಾಶಗಳನ್ನು ಆವರಿಸಿದೆ.” (ಕೀರ್ತನೆ 148:12, 13, NIBV) ಈ ಲೋಕವು ನೀಡುವ ಸ್ಥಾನಮಾನ ಮತ್ತು ಪ್ರತಿಫಲಕ್ಕೆ ಹೋಲಿಸುವಾಗ, ಪೂರ್ಣ ಸಮಯದ ಯೆಹೋವನ ಸೇವೆಯ ಜೀವನವೃತ್ತಿಯು ಆನಂದ ಮತ್ತು ಸಂತೃಪ್ತಿಯ ಜೀವನಕ್ಕಿರುವ ನಿಶ್ಚಿತ ಮಾರ್ಗವೆಂಬುದರಲ್ಲಿ ಸಂಶಯವಿಲ್ಲ. ಬೈಬಲಿನ ಈ ಆಶ್ವಾಸನೆಯನ್ನು ಮನಸ್ಸಿನಲ್ಲಿಡಿರಿ: “ಯೆಹೋವನ ಆಶೀರ್ವಾದವು ಭಾಗ್ಯದಾಯಕವು; ಅದು ವ್ಯಸನವನ್ನು ಸೇರಿಸದು.”—ಜ್ಞಾನೋಕ್ತಿ 10:22.
[ಪಾದಟಿಪ್ಪಣಿಗಳು]
^ ಪ್ಯಾರ. 18 ಯೂನಿವರ್ಸಿಟಿ ಶಿಕ್ಷಣಕ್ಕಿಂತ ಹೆಚ್ಚಾಗಿ ದೇವಪ್ರಭುತ್ವಾತ್ಮಕ ಶಿಕ್ಷಣವನ್ನು ಅಮೂಲ್ಯವೆಂದೆಣಿಸಿದವರ ಅನುಭವಗಳಿಗಾಗಿ ಕಾವಲಿನಬುರುಜು (ಇಂಗ್ಲಿಷ್), ಮೇ 1, 1982, ಪುಟಗಳು 3-6; ಏಪ್ರಿಲ್ 15, 1979, ಪುಟಗಳು 5-10; ಎಚ್ಚರ! (ಇಂಗ್ಲಿಷ್) ಜೂನ್ 8, 1978, ಪುಟ 15; ಮತ್ತು ಆಗಸ್ಟ್ 8, 1974, ಪುಟಗಳು 3-7 ನೋಡಿ.
^ ಪ್ಯಾರ. 23 ಅಕ್ಟೋಬರ್ 8, 1998ರ ಎಚ್ಚರ! ಪತ್ರಿಕೆಯಲ್ಲಿ, “ಒಂದು ಭದ್ರವಾದ ಜೀವಿತದ ಅನ್ವೇಷಣದಲ್ಲಿ,” ಪುಟಗಳು 4-6 ಮತ್ತು ಮೇ 8, 1989 (ಇಂಗ್ಲಿಷ್) ಸಂಚಿಕೆಯಲ್ಲಿ, “ನಾನು ಯಾವ ಜೀವನವೃತ್ತಿಯನ್ನು ಆಯ್ಕೆಮಾಡಬೇಕು?” ಪುಟಗಳು 12-14ನ್ನು ನೋಡಿ.
ವಿವರಿಸಬಲ್ಲಿರಾ?
• ಕ್ರೈಸ್ತರು ಭದ್ರವಾದ ಭವಿಷ್ಯಕ್ಕಾಗಿ ಯಾವುದರಲ್ಲಿ ಭರವಸೆಯಿಡುತ್ತಾರೆ?
• ತಮ್ಮ ಮಕ್ಕಳ ಭವಿಷ್ಯದ ಕುರಿತು ಕ್ರೈಸ್ತ ಹೆತ್ತವರು ಯಾವ ಪಂಥಾಹ್ವಾನಗಳನ್ನು ಎದುರಿಸುತ್ತಾರೆ?
• ಉನ್ನತ ಶಿಕ್ಷಣವನ್ನು ಬೆನ್ನಟ್ಟುವುದರ ಬೆಲೆಯನ್ನು ಲೆಕ್ಕಿಸುವಾಗ ಯಾವ ವಿಷಯಗಳನ್ನು ಪರಿಗಣಿಸತಕ್ಕದ್ದು?
• ತಮ್ಮ ಮಕ್ಕಳು ಯೆಹೋವನ ಸೇವೆಯನ್ನು ತಮ್ಮ ಜೀವನವೃತ್ತಿಯಾಗಿ ಬೆನ್ನಟ್ಟುವಂತೆ ಹೆತ್ತವರು ಹೇಗೆ ಸಹಾಯಮಾಡಬಲ್ಲರು?
[ಅಧ್ಯಯನ ಪ್ರಶ್ನೆಗಳು]
1. ತಮ್ಮ ಮಕ್ಕಳ ಬಗ್ಗೆ ಹೆತ್ತವರಿಗೆ ಯಾವ ಚಿಂತೆಗಳಿರುತ್ತವೆ?
2. ಇಂದು ಅನೇಕ ಮಂದಿ ಹೆತ್ತವರು, ತಮ್ಮ ಮಕ್ಕಳು ಬೆಳೆದು ದೊಡ್ಡವರಾದಾಗ ಉತ್ತಮವಾದ ಜೀವನವನ್ನು ನಡೆಸಬೇಕೆಂಬ ತೀವ್ರವಾದ ಆಸೆಯನ್ನು ಹೊಂದಿರುವುದೇಕೆ?
3. ಕ್ರೈಸ್ತರು ಯಾವ ಆಯ್ಕೆಯನ್ನು ಮಾಡಿದ್ದಾರೆ?
4. ತನ್ನ ಹಿಂಬಾಲಕರು ಯಾವುದನ್ನು ಬೆನ್ನಟ್ಟುವಂತೆ ಯೇಸು ಉತ್ತೇಜಿಸಿದನು?
5. ದೇವರು ತನ್ನ ಸೇವಕರನ್ನು ಪರಾಮರಿಸುವನೆಂದು ಯೇಸು ಕೊಟ್ಟ ಆಶ್ವಾಸನೆಯ ಬಗ್ಗೆ ಕೆಲವು ಹೆತ್ತವರ ಅನಿಸಿಕೆಯೇನು?
6. ಈ ಲೇಖನದಲ್ಲಿ “ಉನ್ನತ ಶಿಕ್ಷಣ” ಎಂಬ ಪದಗಳನ್ನು ಯಾವ ಅರ್ಥದಲ್ಲಿ ಉಪಯೋಗಿಸಲಾಗಿದೆ?
7. ವಿದ್ಯಾರ್ಥಿಗಳು ಯಾವ ಒತ್ತಡಗಳಿಗೆ ಒಡ್ಡಲ್ಪಡುತ್ತಾರೆ?
8. ಕ್ರೈಸ್ತ ಹೆತ್ತವರ ಮುಂದೆ ಯಾವ ಆಯ್ಕೆಗಳಿರುತ್ತವೆ?
9. ಇಂದು ಉನ್ನತ ಶಿಕ್ಷಣದ ವೆಚ್ಚದ ಕುರಿತು ಏನು ಹೇಳಸಾಧ್ಯವಿದೆ?
10. ಉನ್ನತ ಶಿಕ್ಷಣವು ಈಗಿನ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದರೊಂದಿಗೆ ಒತ್ತಾಗಿ ಕೂಡಿಕೊಂಡಿರುವುದು ಹೇಗೆ?
11. ಯೂನಿವರ್ಸಿಟಿ ವಿದ್ಯಾರ್ಥಿಗಳ ಕುರಿತಾದ ವರದಿಗಳು ಮದ್ಯಪಾನದ ದುರುಪಯೋಗ ಮತ್ತು ಲೈಂಗಿಕ ದುರಾಚಾರದ ಬಗ್ಗೆ ಏನು ತೋರಿಸುತ್ತವೆ?
12. ಕಾಲೇಜ್ ವಿದ್ಯಾರ್ಥಿಗಳು ಯಾವ ಒತ್ತಡಗಳಿಗೆ ಒಡ್ಡಲ್ಪಡುತ್ತಾರೆ?
13. ಕ್ರೈಸ್ತ ಹೆತ್ತವರು ಯಾವ ಪ್ರಶ್ನೆಗಳ ವಿಷಯದಲ್ಲಿ ಚಿಂತಿಸತಕ್ಕದ್ದು?
14, 15. (ಎ) ಜನಪ್ರಿಯ ಅಭಿಪ್ರಾಯದ ಹೊರತಾಗಿಯೂ ಯಾವ ಬೈಬಲ್ ಸಲಹೆ ಇಂದು ಅನ್ವಯವಾಗುತ್ತದೆ? (ಬಿ) ಯುವ ಜನರು ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳಬಲ್ಲರು?
16. ಕ್ರೈಸ್ತ ಹೆತ್ತವರು ತಮ್ಮ ಮಕ್ಕಳಿಗೆ ಯೋಗ್ಯ ರೀತಿಯ ಆಧ್ಯಾತ್ಮಿಕ ಪರಿಸರವನ್ನು ಹೇಗೆ ವಿವೇಕದಿಂದ ಒದಗಿಸಬಲ್ಲರು?
17. ಶಾಲಾ ಪಠ್ಯವಿಷಯಗಳು ಮತ್ತು ಕಸಬಿನ ಗುರಿಗಳ ಆಯ್ಕೆಯಲ್ಲಿ ಹೆತ್ತವರು ಮಕ್ಕಳಿಗೆ ಯಾವ ಮಾರ್ಗದರ್ಶನವನ್ನು ಒದಗಿಸಬಲ್ಲರು? (ಪುಟ 29ರಲ್ಲಿರುವ ಚೌಕ ನೋಡಿ.)
18. ಯುವ ಜನರು ಯಾವ ಉದ್ಯೋಗಾವಕಾಶಗಳ ಬಗ್ಗೆ ಚಿಂತಿಸಬಹುದು?
19. ಆನಂದ ಮತ್ತು ಸಂತೃಪ್ತಿಯ ಜೀವನಕ್ಕಿರುವ ಅತಿ ನಿಶ್ಚಿತ ಮಾರ್ಗವು ಯಾವುದು?
[ಪುಟ 29ರಲ್ಲಿರುವ ಚೌಕ]
ಉನ್ನತ ಶಿಕ್ಷಣದ ಮೌಲ್ಯವೇನು?
ಯೂನಿವರ್ಸಿಟಿಗಳಿಗೆ ಸೇರುವ ಹೆಚ್ಚಿನವರು, ಡಿಗ್ರಿ ಗಳಿಸುವುದು ತಮಗೆ ಉತ್ತಮ ಆದಾಯ ಮತ್ತು ಭದ್ರತೆಯಿರುವ ಉದ್ಯೋಗವನ್ನು ದೊರಕಿಸಿಕೊಡುವುದೆಂದು ಎದುರುನೋಡುತ್ತಾರೆ. ಆದರೂ, ಸರಕಾರಿ ವರದಿಗಳು ತಿಳಿಸುವುದೇನಂದರೆ, ಕಾಲೇಜಿಗೆ ಹೋಗುವವರಲ್ಲಿ ಆರು ವರುಷಗಳೊಳಗೆ ಡಿಗ್ರಿ ಗಳಿಸುವವರು ಸುಮಾರು 25% ಮಾತ್ರ ಎಂಬುದು ತೀರ ವಿಷಾದಕರ. ಹಾಗಿದ್ದರೂ, ಆ ಡಿಗ್ರಿ ಅವರಿಗೆ ಉತ್ತಮ ಉದ್ಯೋಗವನ್ನು ದೊರಕಿಸಿಕೊಡುತ್ತದೆಯೆ? ಈಗ ನಡೆಯುತ್ತಿರುವ ಸಂಶೋಧನೆ ಮತ್ತು ಅಧ್ಯಯನಗಳು ಹೇಳುವ ವಿಷಯವನ್ನು ಗಮನಿಸಿ.
“ಹಾರ್ವರ್ಡ್ ಮತ್ತು ಡ್ಯೂಕ್ ಯೂನಿವರ್ಸಿಟಿಗಳಿಗೆ ಹೋಗುವುದು ತಾನೇ ಒಳ್ಳೆಯ ಕೆಲಸವನ್ನೂ ಹೆಚ್ಚು ವೇತನವನ್ನೂ ಒದಗಿಸುವುದಿಲ್ಲ. . . . ಕಂಪೆನಿಗಳಿಗೆ, ಕೆಲಸ ಹುಡುಕುವ ಯುವ ಉಮೇದ್ವಾರರ ಹೆಚ್ಚು ಪರಿಚಯ ಇರುವುದಿಲ್ಲ. ಹೆಸರಾಂತ ಯೂನಿವರ್ಸಿಟಿಯೊಂದರ ಡಿಗ್ರಿ (ಐವೀ ಲೀಗ್‌ನ ಡಿಗ್ರಿ) ಹೊಂದಿರುವುದು ಅವರ ಮೇಲೆ ಪ್ರಭಾವ ಬೀರಬಹುದು ನಿಜ. ಆದರೆ ಆ ಬಳಿಕ, ಕೆಲಸಗಾರರಿಗೆ ಏನು ಪೂರೈಸಲು ಸಾಧ್ಯವಿದೆ ಅಥವಾ ಸಾಧ್ಯವಿಲ್ಲ ಎಂಬುದೇ ಯಜಮಾನರಿಗೆ ಪ್ರಾಮುಖ್ಯವಾಗಿರುತ್ತದೆ.”—ನ್ಯೂಸ್‌ವೀಕ್, ನವೆಂಬರ್ 1, 1999.
“ಇಂದಿನ ಸಾಮಾನ್ಯ ರೀತಿಯ ಕೆಲಸಕ್ಕೆ ಹಿಂದಿಗಿಂತ ಹೆಚ್ಚಿನ ಕೌಶಲಗಳ ಅಗತ್ಯವಿದೆಯಾದರೂ . . . ಈ ಕೆಲಸಗಳಿಗೆ ಬೇಕಾಗಿರುವುದು ಒಳ್ಳೇ ಹೈಸ್ಕೂಲ್ ಮಟ್ಟದ, ಅಂದರೆ ಒಂಬತ್ತನೆಯ ತರಗತಿಯ ಮಟ್ಟದ ಗಣಿತ, ವಾಚನ ಮತ್ತು ಬರವಣಿಗೆಯೇ ಹೊರತು ಕಾಲೇಜ್ ಮಟ್ಟದ ಕೌಶಲಗಳಲ್ಲ. . . . ಒಳ್ಳೇ ಕೆಲಸವನ್ನು ಪಡೆಯಲು ವಿದ್ಯಾರ್ಥಿಗಳು ಕಾಲೇಜಿಗೆ ಹೋಗಬೇಕೆಂದಿರುವುದಿಲ್ಲವಾದರೂ ಅವರು ಹೈಸ್ಕೂಲ್ ಮಟ್ಟದ ಕೌಶಲಗಳಲ್ಲಿ ನುರಿತವರಾಗಿರಬೇಕು.”—ಅಮೆರಿಕನ್ ಎಜುಕೇಟರ್, ಸ್ಪ್ರಿಂಗ್ 2004.
“ಕಾಲೇಜಿನ ನಂತರದ ಜೀವನದಲ್ಲಿ ಕೆಲಸಗಾರರಾಗಲು ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುವುದರಲ್ಲಿ ಹೆಚ್ಚಿನ ಕಾಲೇಜ್‌ಗಳು ವಾಸ್ತವವಾದ ಲೋಕದೊಂದಿಗೆ ಸರಿಹೆಜ್ಜೆಯನ್ನಿಟ್ಟಿಲ್ಲ. ಔದ್ಯೋಗಿಕ ಶಿಕ್ಷಣ ಕೊಡುವ ಶಾಲೆಗಳು ಜನಪ್ರಿಯವಾಗುತ್ತಿವೆ. ಈ ಶಾಲೆಗಳಿಗೆ ಸೇರುವವರ ಸಂಖ್ಯೆಯು 1996ರಿಂದ 2000ದ ವರೆಗಿನ ವರುಷಗಳಲ್ಲಿ 48% ಹೆಚ್ಚಾಗಿದೆ . . . ಈ ಮಧ್ಯೆ ದುಬಾರಿಯಾದ, ಸಮಯ ಕಬಳಿಸುವ ಆ ಕಾಲೇಜ್ ಡಿಗ್ರಿಗಳ ಬೆಲೆ ಹಿಂದೆಂದಿಗಿಂತಲೂ ಕಡಮೆಯಾಗಿದೆ.”—ಟೈಮ್, ಜನವರಿ 24, 2005.
“ಇಸವಿ 2005ಕ್ಕಾಗಿ ಅಮೆರಿಕದ ಕಾರ್ಮಿಕ ಇಲಾಖೆಯು ಮಾಡಿದ ಮುನ್ನಂದಾಜುಗಳು ಭಯಂಕರವಾದ ಚಿತ್ರಣವನ್ನು ಬಿಡಿಸುತ್ತ, ನಾಲ್ಕು ವರ್ಷಗಳ ಕಾಲೇಜ್ ಪದವೀಧರರಲ್ಲಿ ಕಡಮೆಪಕ್ಷ ಮೂರರಲ್ಲಿ ಒಂದಂಶ ಮಂದಿಗೆ ಅವರ ಡಿಗ್ರಿಗಳಿಗೆ ಸಮಾನವಾದ ಉದ್ಯೋಗ ದೊರೆಯದು ಎಂದು ಹೇಳುತ್ತದೆ.”—ದ ಫ್ಯೂಚರಿಸ್ಟ್, ಜುಲೈ/ಆಗಸ್ಟ್ 2000.
ಈ ಎಲ್ಲ ವಿಷಯಗಳ ಕಾರಣದಿಂದ, ಶಿಕ್ಷಕ ವರ್ಗದಲ್ಲಿ ಹೆಚ್ಚೆಚ್ಚು ಮಂದಿ ಇಂದಿನ ಉನ್ನತ ಶಿಕ್ಷಣದ ಮೌಲ್ಯವನ್ನು ಗಂಭೀರವಾಗಿ ಸಂಶಯಿಸುತ್ತಿದ್ದಾರೆ. “ನಾವು ಜನರನ್ನು ತಪ್ಪಾದ ಗುರಿಗಳಿಗಾಗಿ ತರಬೇತುಗೊಳಿಸುತ್ತಿದ್ದೇವೆ” ಎಂದು ಪ್ರಲಾಪಿಸುತ್ತದೆ ಫ್ಯೂಚರಿಸ್ಟ್ ವರದಿ. ಇದಕ್ಕೆ ತದ್ವಿರುದ್ಧವಾಗಿ, ದೇವರ ಬಗ್ಗೆ ಬೈಬಲ್ ಏನು ಹೇಳುತ್ತದೆಂದು ಗಮನಿಸಿ: “ನಾನೇ ನಿನ್ನ ದೇವರಾದ ಯೆಹೋವನು, ನಿನಗೆ ವೃದ್ಧಿಮಾರ್ಗವನ್ನು ಬೋಧಿಸಿ ನೀನು ನಡೆಯಬೇಕಾದ ದಾರಿಯಲ್ಲಿ ನಿನ್ನನ್ನು ನಡೆಯಿಸುವವನಾಗಿದ್ದೇನೆ. ನೀನು ನನ್ನ ಆಜ್ಞೆಗಳನ್ನು ಕೇಳಿದ್ದರೆ ಎಷ್ಟೋ ಚೆನ್ನಾಗಿತ್ತು! ನಿನ್ನ ಸುಖವು ದೊಡ್ಡ ನದಿಯಂತೆಯೂ ನಿನ್ನ ಕ್ಷೇಮವು ಸಮುದ್ರದ ಅಲೆಗಳ ಹಾಗೂ ಇರುತ್ತಿದ್ದವು.”—ಯೆಶಾಯ 48:17, 18.
[ಪುಟ 26ರಲ್ಲಿರುವ ಚಿತ್ರ]
ಅವರು ತಮ್ಮ ವೈಯಕ್ತಿಕ ಬೆನ್ನಟ್ಟುವಿಕೆಗಳನ್ನು ತೊರೆದು ಯೇಸುವನ್ನು ಹಿಂಬಾಲಿಸಿದರು
[ಪುಟ 31ರಲ್ಲಿರುವ ಚಿತ್ರ]
ಕ್ರೈಸ್ತ ಹೆತ್ತವರು ವಿವೇಕದಿಂದ ತಮ್ಮ ಮಕ್ಕಳಿಗೆ ಶೈಶವದಿಂದಲೇ ಪ್ರಬಲವಾದ ಆಧ್ಯಾತ್ಮಿಕ ಪರಿಸರವನ್ನು ಒದಗಿಸುತ್ತಾರೆ