ಅಹಂಕಾರದ ಹೃದಯವನ್ನು ಬೆಳೆಸಿಕೊಳ್ಳುವ ವಿಷಯದಲ್ಲಿ ಎಚ್ಚರಿಕೆಯಿಂದಿರಿ
ಅಹಂಕಾರದ ಹೃದಯವನ್ನು ಬೆಳೆಸಿಕೊಳ್ಳುವ ವಿಷಯದಲ್ಲಿ ಎಚ್ಚರಿಕೆಯಿಂದಿರಿ
“ದೇವರು ಅಹಂಕಾರಿಗಳನ್ನು ಎದುರಿಸುತ್ತಾನೆ.”—ಯಾಕೋಬ 4:6.
ಯಾವುದಾದರೊಂದು ಘಟನೆಯು ನಿಮ್ಮ ಹೃದಯವನ್ನು ಹೆಮ್ಮೆಯಿಂದ ಉಬ್ಬಿಕೊಳ್ಳುವಂತೆ ಮಾಡಿದೆಯೊ? ನಮ್ಮಲ್ಲಿ ಹೆಚ್ಚಿನವರಿಗೆ ಅಂಥ ಆಹ್ಲಾದಕರವಾದ ಅನಿಸಿಕೆಯ ಅನುಭವವಾಗಿದೆ. ಕೆಲವೊಮ್ಮೆ ನಾವು ಸ್ವಲ್ಪ ಹೆಮ್ಮೆಪಡುವುದು ತಪ್ಪೇನಲ್ಲ. ಉದಾಹರಣೆಗೆ, ಒಬ್ಬ ಕ್ರೈಸ್ತ ದಂಪತಿಯು ತಮ್ಮ ಮಗಳ ಒಳ್ಳೇ ನಡತೆ ಹಾಗೂ ಶ್ರದ್ಧಾಪೂರ್ವಕ ಅಧ್ಯಯನದ ಕುರಿತಾದ ಒಂದು ಶಾಲಾ ವರದಿಯನ್ನು ಓದುವಾಗ, ಅವಳ ಸಾಧನೆಗಳ ವಿಷಯದಲ್ಲಿ ಅವರಿಗೆ ಬಹಳ ಸಂತೃಪ್ತಿಯ ಅನಿಸಿಕೆಯಾಗುವುದು ಸಂಭವನೀಯ. ಅಪೊಸ್ತಲ ಪೌಲನು ಮತ್ತು ಅವನ ಸಂಗಡಿಗರು ಒಂದು ಹೊಸ ಸಭೆಯನ್ನು ಸ್ಥಾಪಿಸಲು ಸಹಾಯಮಾಡಿದ್ದರು ಮತ್ತು ಆ ಸಭೆಯ ವಿಷಯದಲ್ಲಿ ಅವರಿಗೆ ಹೆಮ್ಮೆಯ ಅನಿಸಿಕೆಯಾಗಿತ್ತು, ಏಕೆಂದರೆ ಅಲ್ಲಿನ ಸಹೋದರರು ನಂಬಿಗಸ್ತಿಕೆಯಿಂದ ಹಿಂಸೆಯನ್ನು ತಾಳಿಕೊಂಡಿದ್ದರು.—1 ಥೆಸಲೊನೀಕ 1:1, 6; 2:19, 20; 2 ಥೆಸಲೊನೀಕ 1:1, 4.
2 ಈ ಮೇಲಿನ ಉದಾಹರಣೆಗಳಿಂದ, ಹೆಮ್ಮೆಯು ಯಾವುದೋ ಒಂದು ಕೃತ್ಯದಿಂದ ಅಥವಾ ಯಾವುದಾದರೊಂದರ ಒಡೆತನದಿಂದ ಉಂಟಾಗುವ ಆನಂದಕರ ಅನಿಸಿಕೆಯನ್ನು ಸೂಚಿಸಬಹುದು ಎಂಬುದನ್ನು ನಾವು ಮನಗಾಣಸಾಧ್ಯವಿದೆ. ಆದರೂ, ಅನೇಕಾವರ್ತಿ ಹೆಮ್ಮೆಯು ಅನುಚಿತವಾದ ಆತ್ಮಾಭಿಮಾನ, ಒಬ್ಬನ ಸಾಮರ್ಥ್ಯಗಳು, ಹೊರತೋರಿಕೆ, ಐಶ್ವರ್ಯ ಅಥವಾ ಸ್ಥಾನಮಾನದ ಕಾರಣದಿಂದ ಉಂಟಾಗುವ ಶ್ರೇಷ್ಠಭಾವನೆಯನ್ನು ಸೂಚಿಸುತ್ತದೆ. ಅನೇಕವೇಳೆ ಹೆಮ್ಮೆಯು ಒಬ್ಬನ ದುರಹಂಕಾರ ಮನೋಭಾವದಲ್ಲಿ, ಅಹಂಕಾರದ ನಡವಳಿಕೆಯಲ್ಲಿ ತೋರಿಸಲ್ಪಡುತ್ತದೆ. ಕ್ರೈಸ್ತರಾಗಿರುವ ನಾವು ಇಂಥ ಹೆಮ್ಮೆಯ ಭಾವನೆಯ ವಿರುದ್ಧ ನಿಶ್ಚಯವಾಗಿಯೂ ನಮ್ಮನ್ನು ಕಾಪಾಡಿಕೊಳ್ಳಬೇಕಾಗಿದೆ. ಏಕೆ? ಏಕೆಂದರೆ ಸ್ವಾರ್ಥಭಾವದವರಾಗಿರುವ ಪ್ರವೃತ್ತಿಯು ನಮಗೆ ಹುಟ್ಟಿನಿಂದಲೇ ಬಂದಿದೆ, ನಮ್ಮ ಪೂರ್ವಜನಾದ ಆದಾಮನಿಂದ ನಾವು ಅದನ್ನು ಬಾಧ್ಯತೆಯಾಗಿ ಪಡೆದಿದ್ದೇವೆ. (ಆದಿಕಾಂಡ 8:21) ಇದರ ಫಲಿತಾಂಶವಾಗಿ, ತಪ್ಪು ಕಾರಣಗಳಿಗಾಗಿ ಹೆಮ್ಮೆಪಡುವಂತೆ ನಮ್ಮ ಹೃದಯವು ನಮ್ಮನ್ನು ಸುಲಭವಾಗಿ ದಿಕ್ಕುತಪ್ಪಿಸಬಲ್ಲದು. ಉದಾಹರಣೆಗಾಗಿ, ಇತರರಿಗೆ ಹೋಲಿಸುವಾಗ ತಮ್ಮ ಜಾತಿ, ಐಶ್ವರ್ಯ, ಶಿಕ್ಷಣ, ಸಹಜ ಸಾಮರ್ಥ್ಯಗಳು ಅಥವಾ ಕೆಲಸ ನಿರ್ವಹಣೆಯ ವಿಷಯದಲ್ಲಿ ಕ್ರೈಸ್ತರು ಹೆಮ್ಮೆಪಡುವುದರಿಂದ ದೂರವಿರಬೇಕು. ಇಂಥ ವಿಷಯಗಳಿಂದ ಉಂಟಾಗುವ ಹೆಮ್ಮೆಯು ಅನುಚಿತವಾದದ್ದಾಗಿದೆ ಮತ್ತು ಯೆಹೋವನಿಗೆ ಅಸಂತೋಷಪಡಿಸುವಂಥದ್ದಾಗಿದೆ.—ಯೆರೆಮೀಯ 9:23; ಅ. ಕೃತ್ಯಗಳು 10:34, 35; 1 ಕೊರಿಂಥ 4:7; ಗಲಾತ್ಯ 5:26; 6:3, 4.
3 ಅನುಚಿತವಾದ ಹೆಮ್ಮೆಯಿಂದ ದೂರವಿರಲು ಇನ್ನೊಂದು ಕಾರಣವೂ ಇದೆ. ಇಂಥ ಹೆಮ್ಮೆಯು ನಮ್ಮ ಹೃದಯದಲ್ಲಿ ಬೆಳೆಯುವಂತೆ ಅನುಮತಿಸುವಲ್ಲಿ, ಇದು ಅಹಂಕಾರವೆಂದು ಕರೆಯಲ್ಪಡುವ ಹೆಮ್ಮೆಯ ತಿರಸ್ಕೃತ ರೂಪವಾಗಿ ಪರಿಣಮಿಸಸಾಧ್ಯವಿದೆ. ಅಹಂಕಾರ ಎಂದರೇನು? ಅಹಂಕಾರಿಯಾಗಿರುವ ವ್ಯಕ್ತಿಯೊಬ್ಬನಿಗೆ ‘ತಾನು ಶ್ರೇಷ್ಠನು’ ಎಂಬ ಅನಿಸಿಕೆಯಿರುತ್ತದೆ ಮಾತ್ರವಲ್ಲ, ಆ ವ್ಯಕ್ತಿಯು ಯಾರನ್ನು ನಿಕೃಷ್ಟರೆಂದು ಎಣಿಸುತ್ತಾನೋ ಅಂಥವರನ್ನು ತುಂಬ ಕೀಳಾಗಿ ಕಾಣುತ್ತಾನೆ. (ಲೂಕ 18:9; ಯೋಹಾನ 7:47-49) ಯೇಸು, “ಸೊಕ್ಕು” ಅಥವಾ ಅಹಂಕಾರವನ್ನು, ‘ಹೃದಯದೊಳಗಿಂದ ಹೊರಡುವ’ (NIBV) ಮತ್ತು ‘ಮನುಷ್ಯನನ್ನು ಹೊಲೆಮಾಡುವ’ ಇತರ ದುಷ್ಟ ಪ್ರವೃತ್ತಿಗಳೊಂದಿಗೆ ಪಟ್ಟಿಮಾಡಿದನು. (ಮಾರ್ಕ 7:20-23) ಹೀಗಿರುವುದರಿಂದ, ಅಹಂಕಾರದ ಹೃದಯವನ್ನು ಬೆಳೆಸಿಕೊಳ್ಳುವುದರಿಂದ ದೂರವಿರುವುದು ಎಷ್ಟು ಅತ್ಯಾವಶ್ಯಕವಾಗಿದೆ ಎಂಬುದನ್ನು ಕ್ರೈಸ್ತರು ಮನಗಾಣಸಾಧ್ಯವಿದೆ.
4 ಅಹಂಕಾರಿಗಳ ಕುರಿತಾದ ಕೆಲವು ಬೈಬಲ್ ವೃತ್ತಾಂತಗಳನ್ನು ಪರಿಗಣಿಸುವ ಮೂಲಕ ನೀವು ಅಹಂಕಾರವನ್ನು ಬೆಳೆಸಿಕೊಳ್ಳದಿರಲು ಸಹಾಯವು ದೊರಕುವುದು. ಆಗ ನೀವು, ನಿಮ್ಮಲ್ಲಿ ಇರಬಹುದಾದ ಅಥವಾ ಸಕಾಲದಲ್ಲಿ ನಿಮ್ಮಲ್ಲಿ ಬೆಳೆಯಬಹುದಾದ ಹೆಮ್ಮೆಯ ಅನುಚಿತ ಅನಿಸಿಕೆಗಳನ್ನು ಹೆಚ್ಚಿನ ಮಟ್ಟಿಗೆ ಪತ್ತೆಹಚ್ಚಲು ಶಕ್ತರಾಗುವಿರಿ. ಇದು ನಿಮ್ಮ ಹೃದಯವು ಅಹಂಕಾರಪಡುವಂತೆ ಮಾಡಸಾಧ್ಯವಿರುವ ಆಲೋಚನೆಗಳು ಅಥವಾ ಅನಿಸಿಕೆಗಳನ್ನು ತೊರೆಯುವಂತೆ ನಿಮಗೆ ಸಹಾಯಮಾಡುವುದು. ಫಲಿತಾಂಶವಾಗಿ, “ಅತಿಗರ್ವದಿಂದ [ಅಹಂಕಾರದಿಂದ] ಮೆರೆಯುವವರನ್ನು ನಿನ್ನೊಳಗಿಂದ ತೊಲಗಿಸಿಬಿಡುವೆನು; ಅಂದಿನಿಂದ ನನ್ನ ಪವಿತ್ರಪರ್ವತದಲ್ಲಿ ಗರ್ವಪಡದೆ [ಅಹಂಕಾರಪಡದೆ] ಇರುವಿ” ಎಂಬ ತನ್ನ ಎಚ್ಚರಿಕೆಗೆ ಅನುಸಾರವಾಗಿ ದೇವರು ಕ್ರಿಯೆಗೈಯುವಾಗ ನೀವು ನಕಾರಾತ್ಮಕ ರೀತಿಯಲ್ಲಿ ಬಾಧಿಸಲ್ಪಡದಿರುವಿರಿ.—ದೇವರು ಅಹಂಕಾರಿಗಳ ವಿರುದ್ಧ ಕ್ರಿಯೆಗೈಯುತ್ತಾನೆ
5 ಫರೋಹನಂಥ ಪ್ರಬಲ ಅರಸರೊಂದಿಗೆ ಯೆಹೋವನು ವ್ಯವಹರಿಸಿದ ವಿಧದಲ್ಲಿ ಅಹಂಕಾರದ ಬಗ್ಗೆ ಆತನಿಗೆ ಯಾವ ದೃಷ್ಟಿಕೋನವಿದೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಸಾಧ್ಯವಿದೆ. ಫರೋಹನು ಅಹಂಕಾರದ ಹೃದಯವುಳ್ಳವನಾಗಿದ್ದನು ಎಂಬುದರಲ್ಲಿ ಯಾವುದೇ ಸಂಶಯವಿರಸಾಧ್ಯವಿಲ್ಲ. ತನ್ನನ್ನು ಆರಾಧನೆಗೆ ಅರ್ಹನಾದ ದೇವನಾಗಿ ಪರಿಗಣಿಸುತ್ತಾ ಅವನು ತನ್ನ ದಾಸರಾಗಿದ್ದ ಇಸ್ರಾಯೇಲ್ಯರನ್ನು ತುಚ್ಛವಾಗಿ ಕಂಡನು. ಯೆಹೋವನಿಗೆ ‘ಜಾತ್ರೆ ನಡಿಸಲಿಕ್ಕಾಗಿ’ ಅರಣ್ಯದೊಳಗೆ ಹೋಗುವಂತೆ ಇಸ್ರಾಯೇಲ್ಯರನ್ನು ಅನುಮತಿಸಲು ಮಾಡಿದ ವಿನಂತಿಗೆ ಅವನು ಹೇಗೆ ಪ್ರತಿಕ್ರಿಯಿಸಿದನು ಎಂಬುದನ್ನು ಪರಿಗಣಿಸಿರಿ. “ಯೆಹೋವನೆಂಬವನು ಯಾರು? ನಾನು ಅವನ ಮಾತನ್ನು ಕೇಳಿ ಇಸ್ರಾಯೇಲ್ಯರನ್ನು ಹೋಗಗೊಡಿಸುವದೇಕೆ?” ಎಂಬುದು ಫರೋಹನ ಅಹಂಕಾರಭರಿತ ಉತ್ತರವಾಗಿತ್ತು.—ವಿಮೋಚನಕಾಂಡ 5:1, 2.
6 ಫರೋಹನು ಆರು ಬಾಧೆಗಳನ್ನು ಅನುಭವಿಸಿದ ಬಳಿಕ, “ನೀನು ಇನ್ನೂ ಅವರನ್ನು ಕಳುಹಿಸದೆ ನನ್ನ ಜನರಿಗೆ ವಿರೋಧವಾಗಿ ನಿನ್ನನ್ನು ನೀನೇ ಹೆಚ್ಚಿಸಿಕೊಳ್ಳುತ್ತೀಯೋ?” ಎಂದು ಐಗುಪ್ತದ ಅರಸನನ್ನು ಕೇಳುವಂತೆ ಯೆಹೋವನು ಮೋಶೆಗೆ ಹೇಳಿದನು. (ವಿಮೋಚನಕಾಂಡ 9:17, NIBV) ತದನಂತರ ಮೋಶೆಯು ಏಳನೆಯ ಬಾಧೆಯನ್ನು ಪ್ರಕಟಿಸಿದನು. ಇದು ದೇಶವನ್ನೆಲ್ಲ ಹಾಳುಮಾಡಿದಂಥ ಆಲಿಕಲ್ಲಿನ ಮಳೆಯಾಗಿತ್ತು. ಹತ್ತನೆಯ ಬಾಧೆಯ ಬಳಿಕ ಇಸ್ರಾಯೇಲ್ಯರು ಅರಣ್ಯಕ್ಕೆ ಹೋಗುವಂತೆ ಫರೋಹನು ಅನುಮತಿಸಿದನಾದರೂ, ತದನಂತರ ಅವನು ತನ್ನ ಮನಸ್ಸನ್ನು ಬದಲಾಯಿಸಿದನು ಮತ್ತು ಅವರನ್ನು ಬೆನ್ನಟ್ಟಿದನು. ಅಂತಿಮವಾಗಿ, ಫರೋಹನು ಹಾಗೂ ಅವನ ಸೈನಿಕರು ಕೆಂಪು ಸಮುದ್ರದಲ್ಲಿ ಸಿಕ್ಕಿಬಿದ್ದರು. ಸಮುದ್ರದ ನೀರು ಅವರನ್ನು ಆವರಿಸಿದಾಗ ಅವರಿಗೆ ಯಾವ ಆಲೋಚನೆ ಬಂದಿರಬಹುದು ಎಂಬುದನ್ನು ತುಸು ಕಲ್ಪಿಸಿಕೊಳ್ಳಿರಿ! ಫರೋಹನ ಅಹಂಕಾರದ ಪರಿಣಾಮವೇನಾಗಿತ್ತು? ಅವನ ಗಣ್ಯ ಸೈನಿಕರು ಹೇಳಿದ್ದು: “ನಾವು ಇಸ್ರಾಯೇಲ್ಯರ ಮುಂದೆ ನಿಲ್ಲಲಾರೆವು, ಓಡಿ ಹೋಗೋಣ; ಯೆಹೋವನು ಅವರಿಗೋಸ್ಕರ ನಮಗೆ ವಿರೋಧವಾಗಿ ಯುದ್ಧಮಾಡುತ್ತಾನೆ.”—ವಿಮೋಚನಕಾಂಡ 14:25.
7 ಅಹಂಕಾರಿಗಳಾದ ಇತರ ಅರಸರು ಸಹ ಯೆಹೋವನಿಂದ ಗರ್ವಭಂಗಮಾಡಲ್ಪಟ್ಟರು. ಇವರಲ್ಲಿ ಒಬ್ಬನು ಅಶ್ಶೂರ್ಯ ಅರಸನಾದ ಸನ್ಹೇರೀಬನಾಗಿದ್ದನು. (ಯೆಶಾಯ 36:1-4, 20; 37:36-38) ಕಾಲಕ್ರಮೇಣ ಅಶ್ಶೂರ್ಯವು ಬಾಬೆಲಿನವರಿಂದ ವಶಪಡಿಸಿಕೊಳ್ಳಲ್ಪಟ್ಟಿತು, ಮತ್ತು ಬಾಬೆಲಿನ ಇಬ್ಬರು ಅಹಂಕಾರಿ ಅರಸರು ಸಹ ಗರ್ವಭಂಗಮಾಡಲ್ಪಟ್ಟರು. ಅರಸನಾದ ಬೇಲ್ಶಚ್ಚರನು ಏರ್ಪಡಿಸಿದ ಔತಣವನ್ನು ಜ್ಞಾಪಿಸಿಕೊಳ್ಳಿರಿ. ಆ ಸಮಯದಲ್ಲಿ ಅವನು ಮತ್ತು ಅವನ ರಾಜೋಚಿತ ಅತಿಥಿಗಳು ಯೆಹೋವನ ದೇವಾಲಯದಿಂದ ಕೊಂಡೊಯ್ಯಲ್ಪಟ್ಟ ಪಾತ್ರೆಗಳಿಂದ ದ್ರಾಕ್ಷಾಮದ್ಯವನ್ನು ಕುಡಿದು, ಬಾಬೆಲಿನ ದೇವರುಗಳನ್ನು ಸ್ತುತಿಸಿದರು. ಆಗ ಇದ್ದಕ್ಕಿದ್ದಂತೆ ಒಬ್ಬನ ಕೈಬೆರಳುಗಳು ಕಂಡುಬಂದವು ಮತ್ತು ಅವು ಗೋಡೆಯ ಮೇಲೆ ಒಂದು ಸಂದೇಶವನ್ನು ಬರೆದವು. ರಹಸ್ಯಾರ್ಥವುಳ್ಳ ಈ ಬರಹವನ್ನು ವಿವರಿಸುವಂತೆ ಕೇಳಿಕೊಳ್ಳಲ್ಪಟ್ಟಾಗ ಪ್ರವಾದಿಯಾದ ದಾನಿಯೇಲನು ಬೇಲ್ಶಚ್ಚರನಿಗೆ ನೆನಪುಹುಟ್ಟಿಸಿದ್ದು: “ಪರಾತ್ಪರನಾದ ದೇವರು ನಿನ್ನ ತಂದೆಯಾದ ನೆಬೂಕದ್ನೆಚ್ಚರನಿಗೆ ರಾಜ್ಯ . . . ಸನ್ಮಾನಗಳನ್ನು ದಯಪಾಲಿಸಿದನು; ಹೀಗೆ ಅವನ ಹೃದಯವು ಉಬ್ಬಿ . . . ಅವನಿಗೆ ಸೊಕ್ಕೇರಲು ಅವನನ್ನು ರಾಜಾಸನದಿಂದ ತಳ್ಳಿ ಮಾನವನ್ನು ತೆಗೆದುಬಿಟ್ಟರು; ಬೇಲ್ಶಚ್ಚರನೇ, ಅವನ ಮಗನಾದ ನೀನು ಇದನ್ನೆಲ್ಲಾ ತಿಳಿದುಕೊಂಡರೂ ನಿನ್ನ ಮನಸ್ಸನ್ನು ತಗ್ಗಿಸಿಕೊಳ್ಳಲಿಲ್ಲ.” (ದಾನಿಯೇಲ 5:3, 18, 20, 22) ಅದೇ ರಾತ್ರಿ ಮೇದ್ಯಯ-ಪಾರಸಿಯ ಸೈನ್ಯವು ಬಾಬೆಲನ್ನು ವಶಪಡಿಸಿಕೊಂಡಿತು ಮತ್ತು ಬೇಲ್ಶಚ್ಚರನು ಕೊಲ್ಲಲ್ಪಟ್ಟನು.—ದಾನಿಯೇಲ 5:30, 31.
8 ಯೆಹೋವನ ಜನರನ್ನು ತುಚ್ಛವಾಗಿ ಕಂಡಂಥ ಇತರ ಅಹಂಕಾರಿ ವ್ಯಕ್ತಿಗಳ, ಅಂದರೆ ಫಿಲಿಷ್ಟಿಯ ದೈತ್ಯನಾದ ಗೊಲ್ಯಾತ, ಪಾರಸಿಯ ಮುಖ್ಯ ಮಂತ್ರಿಯಾಗಿದ್ದ ಹಾಮಾನ ಮತ್ತು ಯೂದಾಯ ಪ್ರಾಂತವನ್ನು ಆಳಿದ ರಾಜ ಹೆರೋದ ಅಗ್ರಿಪ್ಪನ ಕುರಿತು ಸಹ ತುಸು ಆಲೋಚಿಸಿರಿ. ಈ ಮೂವರು ವ್ಯಕ್ತಿಗಳು ಅಹಂಕಾರವನ್ನು ತೋರಿಸಿದ ಕಾರಣ ದೇವರ ಕೈಯಿಂದ ಅವಮಾನಕರವಾದ ರೀತಿಯಲ್ಲಿ ಮರಣವನ್ನು ಅನುಭವಿಸಿದರು. (1 ಸಮುವೇಲ 17:42-51; ಎಸ್ತೇರಳು 3:5, 6; 7:10; ಅ. ಕೃತ್ಯಗಳು 12:1-3, 21-23) ಯೆಹೋವನು ಅಹಂಕಾರಿಗಳಾಗಿದ್ದ ಆ ವ್ಯಕ್ತಿಗಳೊಂದಿಗೆ ವ್ಯವಹರಿಸಿದ ವಿಧವು, ಈ ಸತ್ಯಾಂಶವನ್ನು ಒತ್ತಿಹೇಳುತ್ತದೆ: “ಗರ್ವದಿಂದ ಭಂಗ; ಉಬ್ಬಿನಿಂದ ದೊಬ್ಬು.” (ಜ್ಞಾನೋಕ್ತಿ 16:18) ನಿಶ್ಚಯವಾಗಿಯೂ, “ದೇವರು ಅಹಂಕಾರಿಗಳನ್ನು ಎದುರಿಸುತ್ತಾನೆ” ಎಂಬುದರಲ್ಲಿ ಯಾವುದೇ ಸಂಶಯವು ಇರಸಾಧ್ಯವಿಲ್ಲ.—ಯಾಕೋಬ 4:6.
2 ಸಮುವೇಲ 5:11; 2 ಪೂರ್ವಕಾಲವೃತ್ತಾಂತ 2:11-16) ದುಃಖಕರವಾಗಿ, ಸಮಯಾನಂತರ ತೂರಿನ ಅರಸರು ಯೆಹೋವನ ಜನರ ವಿರುದ್ಧ ತಿರುಗಿದರು. ಅವರು ಹೀಗೇಕೆ ಮಾಡಿದರು?—ಕೀರ್ತನೆ 83:3-7; ಯೋವೇಲ 3:4-6; ಆಮೋಸ 1:9, 10.
9 ಐಗುಪ್ತ, ಅಶ್ಶೂರ್ಯ ಮತ್ತು ಬಾಬೆಲಿನ ಅಹಂಕಾರಿ ಅರಸರುಗಳಿಗೆ ತದ್ವಿರುದ್ಧವಾಗಿ, ತೂರಿನ ಅರಸನು ಒಮ್ಮೆ ದೇವಜನರಿಗೆ ಸಹಾಯಕನಾಗಿ ಕಂಡುಬಂದಿದ್ದನು. ದಾವೀದ ಸೊಲೊಮೋನರ ಆಳ್ವಿಕೆಯ ಸಮಯದಲ್ಲಿ, ರಾಜವೈಭವದ ಕಟ್ಟಡಗಳಿಗಾಗಿ ಮತ್ತು ದೇವರ ಆಲಯಕ್ಕಾಗಿ ತೂರಿನ ಅರಸನು ಕುಶಲ ಕಮ್ಮಾರರನ್ನು ಮತ್ತು ಸಾಮಗ್ರಿಗಳನ್ನು ಒದಗಿಸಿದ್ದನು. (‘ನಿನ್ನ ಹೃದಯವು ಉಬ್ಬಿಕೊಂಡಿತು’
10 ತೂರಿನ ರಾಜವಂಶವನ್ನು ಬಯಲಿಗೆಳೆಯುವಂತೆ ಮತ್ತು ಖಂಡಿಸುವಂತೆ ಯೆಹೋವನು ತನ್ನ ಪ್ರವಾದಿಯಾದ ಯೆಹೆಜ್ಕೇಲನನ್ನು ಪ್ರೇರೇಪಿಸಿದನು. “ತೂರಿನ ಅರಸ”ನಿಗೆ ಸಂಬೋಧಿಸಲ್ಪಟ್ಟಿದ್ದ ಆ ಸಂದೇಶವು, ತೂರಿನ ರಾಜವಂಶಕ್ಕೆ ಮತ್ತು ಯಾರು ‘ಸತ್ಯದಲ್ಲಿ ನಿಲ್ಲಲಿಲ್ಲವೋ’ ಆ ಮೂಲ ದ್ರೋಹಿಯಾದ ಸೈತಾನನಿಗೆ ಸೂಕ್ತವಾಗಿ ಅನ್ವಯವಾಗುವಂಥ ಅಭಿವ್ಯಕ್ತಿಗಳನ್ನು ಒಳಗೂಡಿದೆ. (ಯೆಹೆಜ್ಕೇಲ 28:12; ಯೋಹಾನ 8:44) ಒಂದು ಕಾಲದಲ್ಲಿ ಸೈತಾನನು ಯೆಹೋವನ ಸ್ವರ್ಗೀಯ ಪುತ್ರರ ಸಂಘಟನೆಯಲ್ಲಿ ಒಬ್ಬ ನಿಷ್ಠಾವಂತ ಆತ್ಮಜೀವಿಯಾಗಿದ್ದನು. ತೂರಿನ ರಾಜವಂಶದ ಹಾಗೂ ಸೈತಾನನ ದಂಗೆಯ ಮೂಲ ಕಾರಣದ ಕುರಿತು ಯೆಹೋವ ದೇವರು ಯೆಹೆಜ್ಕೇಲನ ಮೂಲಕ ಹೀಗೆ ಸೂಚನೆಯನ್ನು ನೀಡಿದನು:
11 “ದೇವರ ಉದ್ಯಾನವನವಾದ ಏದೆನಿನಲ್ಲಿ ನೀನಿದ್ದಿ . . . ನವರತ್ನಗಳಿಂದ ಭೂಷಿತವಾಗಿದ್ದಿ; . . . ನೀನು ರೆಕ್ಕೆತೆರೆದು ನೆರಳುಕೊಡುವ ಕೆರೂಬಿಯಾಗಿದ್ದಿ; . . . ನಿನ್ನ ಸೃಷ್ಟಿಯ ದಿನದಿಂದ ನಿನ್ನಲ್ಲಿ ಅಪರಾಧವು ಸಿಕ್ಕುವ ತನಕ ನಿನ್ನ ನಡತೆಯು ನಿರ್ದೋಷವಾಗಿ ಕಾಣುತ್ತಿತ್ತು. ನಿನ್ನ ಮಿತಿಯಿಲ್ಲದ ವ್ಯಾಪಾರದಿಂದ ನಿನ್ನಲ್ಲಿ ಬಲಾತ್ಕಾರವು ತುಂಬಿ ನೀನು ಪಾಪಿಯಾದಿ. ಆದಕಾರಣ . . . ನೆರಳುಕೊಡುವ ಕೆರೂಬಿಯೇ, . . . ನಾನು ನಿನ್ನನ್ನು ಕಿತ್ತು ಧ್ವಂಸಮಾಡಿದೆನು. ನೀನು ನಿನ್ನ ಸೊಬಗಿನ ನಿಮಿತ್ತ ಉಬ್ಬಿದ ಮನಸ್ಸುಳ್ಳವನಾಗಿ [‘ನಿನ್ನ ಹೃದಯವು ಉಬ್ಬಿಕೊಂಡು,’ NIBV] ನಿನ್ನ ಮೆರೆತದಿಂದ ನಿನ್ನ ಬುದ್ಧಿಯನ್ನು ಹಾಳುಮಾಡಿಕೊಂಡಿ.” (ಯೆಹೆಜ್ಕೇಲ 28:13-17) ಹೌದು, ಅಹಂಕಾರವು ತೂರಿನ ಅರಸರು ಯೆಹೋವನ ಜನರ ವಿರುದ್ಧ ಹಿಂಸಾಚಾರವನ್ನು ನಡೆಸುವಂತೆ ಪ್ರಚೋದಿಸಿತು. ವಾಣಿಜ್ಯ ಕೇಂದ್ರವಾಗಿದ್ದ ತೂರ್ ಪಟ್ಟಣವು ತುಂಬ ಸಂಪದ್ಭರಿತವಾಯಿತು ಮತ್ತು ಅದರ ಸುಂದರವಾದ ಉತ್ಪನ್ನಗಳಿಗೆ ಹೆಸರುವಾಸಿಯಾಯಿತು. (ಯೆಶಾಯ 23:8, 9) ತೂರಿನ ಅರಸರು ತುಂಬ ದುರಹಂಕಾರಿಗಳಾದರು ಮತ್ತು ದೇವಜನರ ಮೇಲೆ ದಬ್ಬಾಳಿಕೆ ನಡೆಸಲು ಆರಂಭಿಸಿದರು.
12 ತದ್ರೀತಿಯಲ್ಲಿ, ಸೈತಾನನಾಗಿ ಪರಿಣಮಿಸಿದ ಆತ್ಮಜೀವಿಯು ಒಂದು ಕಾಲದಲ್ಲಿ ದೇವರು ಅವನಿಗೆ ಕೊಡುತ್ತಿದ್ದ ಯಾವುದೇ ನೇಮಕವನ್ನು ಪೂರೈಸಲು ಆವಶ್ಯಕವಾಗಿದ್ದ ವಿವೇಕವನ್ನು ಹೊಂದಿದವನಾಗಿದ್ದನು. ಕೃತಜ್ಞ ಮನೋಭಾವದವನಾಗಿರುವುದಕ್ಕೆ ಬದಲಾಗಿ ಅವನು ಅನುಚಿತ ಹೆಮ್ಮೆಯಿಂದ ‘ಉಬ್ಬಿ’ದವನಾಗಿ, ದೇವರು ಆಳುವ ವಿಧವನ್ನು ತುಚ್ಛವಾಗಿ ಕಾಣಲಾರಂಭಿಸಿದನು. (1 ತಿಮೊಥೆಯ 3:6) ಅವನು ತನ್ನನ್ನು ಎಷ್ಟು ಶ್ರೇಷ್ಠನಾಗಿ ಪರಿಗಣಿಸಿದನೆಂದರೆ, ಆದಾಮಹವ್ವರ ಆರಾಧನೆಗಾಗಿ ಹಂಬಲಿಸತೊಡಗಿದನು. ಈ ದುಷ್ಟ ಬಯಕೆಯು ಬಸುರಾಗಿ ಪಾಪಕ್ಕೆ ಜನ್ಮನೀಡಿತು. (ಯಾಕೋಬ 1:14, 15) ದೇವರು ನಿಷೇಧಿಸಿದ್ದ ಒಂದು ಮರದ ಹಣ್ಣನ್ನು ತಿನ್ನುವಂತೆ ಸೈತಾನನು ಹವ್ವಳನ್ನು ವಂಚಿಸಿದನು. ತದನಂತರ, ಆದಾಮನು ಆ ನಿಷೇಧಿತ ಹಣ್ಣನ್ನು ತಿನ್ನುವಂತೆ ಸೈತಾನನು ಅವಳನ್ನು ಉಪಯೋಗಿಸಿದನು. (ಆದಿಕಾಂಡ 3:1-6) ಹೀಗೆ ಪ್ರಥಮ ಮಾನವ ಜೊತೆಯು ತಮ್ಮನ್ನು ಆಳಲಿಕ್ಕಾಗಿರುವ ದೇವರ ಹಕ್ಕನ್ನು ತಿರಸ್ಕರಿಸಿತು, ಮತ್ತು ಕಾರ್ಯತಃ ಅವರು ಸೈತಾನನ ಆರಾಧಕರಾಗಿ ಪರಿಣಮಿಸಿದರು. ಸೈತಾನನ ಅಹಂಕಾರಕ್ಕೆ ಮಿತಿಯೇ ಇರಲಿಲ್ಲ. ಅವನು ಯೇಸು ಕ್ರಿಸ್ತನನ್ನೂ ಸೇರಿಸಿ ಸ್ವರ್ಗದಲ್ಲಿ ಮತ್ತು ಭೂಮಿಯಲ್ಲಿರುವ ಎಲ್ಲ ಬುದ್ಧಿಜೀವಿಗಳನ್ನು ವಂಚನೆಗೊಳಪಡಿಸಲು, ಯೆಹೋವನ ಪರಮಾಧಿಕಾರವನ್ನು ತಿರಸ್ಕರಿಸಿ ತನ್ನನ್ನು ಆರಾಧಿಸುವಂತೆ ಮಾಡಲು ಪ್ರಯತ್ನಿಸಿದ್ದಾನೆ.—ಮತ್ತಾಯ 4:8-10; ಪ್ರಕಟನೆ 12:3, 4, 9.
2 ಕೊರಿಂಥ 4:4) ತನಗಿರುವ ಸಮಯ ಕೊಂಚವೇ ಎಂಬುದು ಅವನಿಗೆ ಗೊತ್ತಿದೆ, ಆದುದರಿಂದ ಅವನು ನಿಜ ಕ್ರೈಸ್ತರ ವಿರುದ್ಧ ಯುದ್ಧಮಾಡುತ್ತಾನೆ. ಅವನ ಗುರಿಯು ಅವರು ದೇವರಿಂದ ವಿಮುಖರಾಗುವಂತೆ, ಸ್ವಾರ್ಥಚಿಂತಕರಾಗುವಂತೆ, ಬಡಾಯಿ ಕೊಚ್ಚಿಕೊಳ್ಳುವಂತೆ ಮತ್ತು ಅಹಂಕಾರಿಗಳಾಗುವಂತೆ ಮಾಡುವುದೇ ಆಗಿದೆ. ಈ “ಕಡೇ ದಿವಸಗಳಲ್ಲಿ” ಇಂಥ ಸ್ವಾರ್ಥಪರ ಪ್ರವೃತ್ತಿಗಳು ಸರ್ವಸಾಮಾನ್ಯವಾಗಿರುವವು ಎಂದು ಬೈಬಲ್ ಮುಂತಿಳಿಸಿತು.—2 ತಿಮೊಥೆಯ 3:1, 2; ಪ್ರಕಟನೆ 12:12, 17.
13 ಹೀಗೆ, ಅಹಂಕಾರವು ಸೈತಾನನಿಂದ ಉದ್ಭವಿಸಿದ್ದಾಗಿದೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಸಾಧ್ಯವಿದೆ. ಇದು ಇಂದು ಲೋಕದಲ್ಲಿರುವ ಪಾಪ, ಕಷ್ಟಾನುಭವ ಮತ್ತು ಭ್ರಷ್ಟಾಚಾರಕ್ಕೆ ಮೂಲ ಕಾರಣವಾಗಿದೆ. ‘ಈ ಪ್ರಪಂಚದ ದೇವರಾಗಿರುವ’ ಸೈತಾನನು, ಹೆಮ್ಮೆ ಮತ್ತು ಅಹಂಕಾರದ ಅನುಚಿತ ಅನಿಸಿಕೆಗಳನ್ನು ಪ್ರವರ್ಧಿಸುವುದನ್ನು ಮುಂದುವರಿಸುತ್ತಿದ್ದಾನೆ. (14 ಯೇಸು ಕ್ರಿಸ್ತನಾದರೋ ಸೈತಾನನ ಅಹಂಕಾರದಿಂದ ಉದ್ಭವಿಸಿದ ಕೆಟ್ಟ ಫಲಗಳನ್ನು ಧೈರ್ಯದಿಂದ ಬಯಲುಪಡಿಸಿದನು. ಯೇಸು ಕಡಿಮೆಪಕ್ಷ ಮೂರು ಸಂದರ್ಭಗಳಲ್ಲಿ ಮತ್ತು ಸ್ವನೀತಿವಂತ ವೈರಿಗಳ ಸಮ್ಮುಖದಲ್ಲಿ, ಯೆಹೋವನು ಮಾನವಕುಲದೊಂದಿಗೆ ವ್ಯವಹರಿಸುವಾಗ ಪಾಲಿಸುವಂಥ ಒಂದು ನಿಯಮವನ್ನು ಸ್ಪಷ್ಟಪಡಿಸಿದನು: “ತನ್ನನ್ನು ಹೆಚ್ಚಿಸಿಕೊಳ್ಳುವ ಪ್ರತಿಯೊಬ್ಬನು ತಗ್ಗಿಸಲ್ಪಡುವನು; ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು.”—ಲೂಕ 14:11; 18:14; ಮತ್ತಾಯ 23:12.
ಅಹಂಕಾರದ ವಿರುದ್ಧ ನಿಮ್ಮ ಹೃದಯವನ್ನು ಕಾಪಾಡಿಕೊಳ್ಳಿರಿ
15 ಅಹಂಕಾರದ ಬಗ್ಗೆ ಮೇಲೆ ತಿಳಿಸಲಾಗಿರುವ ಉದಾಹರಣೆಗಳು ಅಗ್ರಗಣ್ಯ ಪುರುಷರನ್ನು ಒಳಗೂಡಿವೆ ಎಂಬುದನ್ನು ನೀವು ಗಮನಿಸಿರಬಹುದು. ಹಾಗಾದರೆ ಸಾಮಾನ್ಯ ಜನರು ಅಹಂಕಾರದ ಪ್ರವೃತ್ತಿಯನ್ನು ಹೊಂದಿರುವುದಿಲ್ಲ ಎಂಬುದು ಇದರ ಅರ್ಥವೊ? ನಿಶ್ಚಯವಾಗಿಯೂ ಇಲ್ಲ. ಅಬ್ರಹಾಮನ ಮನೆವಾರ್ತೆಯಲ್ಲಿ ಸಂಭವಿಸಿದ ಒಂದು ಘಟನೆಯನ್ನು ಪರಿಗಣಿಸಿರಿ. ಈ ಪೂರ್ವಜನಿಗೆ ವಾರಸುದಾರ ಪುತ್ರನಿರಲಿಲ್ಲ ಮತ್ತು ಅವನ ಪತ್ನಿಯಾದ ಸಾರಳು ಮಗುವನ್ನು ಹೆರುವ ಪ್ರಾಯವನ್ನು ಮೀರಿದವಳಾಗಿದ್ದಳು. ಅಬ್ರಹಾಮನ ಸನ್ನಿವೇಶದಲ್ಲಿದ್ದ ಒಬ್ಬ ಪುರುಷನು, ಎರಡನೆಯ ಹೆಂಡತಿಯನ್ನು ಮದುವೆಯಾಗಿ ಮಕ್ಕಳನ್ನು ಪಡೆಯುವುದು ಆ ಸಮಯದಲ್ಲಿನ ವಾಡಿಕೆಯಾಗಿತ್ತು. ಇಂಥ ಮದುವೆಗಳನ್ನು ದೇವರು ಅನುಮತಿಸಿದ್ದನು, ಏಕೆಂದರೆ ಸತ್ಯ ಆರಾಧಕರ ನಡುವೆ ಮದುವೆಯ ಕುರಿತಾದ ಆತನ ಮೂಲ ಮಟ್ಟವನ್ನು ಪುನಸ್ಸ್ಥಾಪಿಸುವ ಸಮಯವು ಇನ್ನೂ ಬಂದಿರಲಿಲ್ಲ.—ಮತ್ತಾಯ 19:3-9.
16 ಪತ್ನಿಯ ಕೋರಿಕೆಯ ಮೇರೆಗೆ ಅಬ್ರಹಾಮನು ಸಾರಳ ಐಗುಪ್ತ್ಯ ದಾಸಿಯಾಗಿದ್ದ ಹಾಗರಳ ಮೂಲಕ ಒಬ್ಬ ವಾರಸುದಾರನನ್ನು ಪಡೆಯಲು ಒಪ್ಪಿಕೊಂಡನು. ಅಬ್ರಹಾಮನ ಎರಡನೆಯ ಹೆಂಡತಿಯಾಗಿ ಹಾಗರಳು ಗರ್ಭಿಣಿಯಾದಳು. ತನ್ನ ಗೌರವಯುತ ಸ್ಥಾನಕ್ಕಾಗಿ ಅವಳು ಬಹಳ ಕೃತಜ್ಞಳಾಗಿರಬೇಕಿತ್ತು. ಅದಕ್ಕೆ ಬದಲಾಗಿ ಅವಳು ತನ್ನ ಹೃದಯವು ಅಹಂಕಾರಗೊಳ್ಳುವಂತೆ ಬಿಟ್ಟಳು. ಈ ವಿಷಯದಲ್ಲಿ ಬೈಬಲ್ ತಿಳಿಸುವುದು: “ತಾನು ಬಸುರಾದೆನೆಂದು ತಿಳುಕೊಂಡಾಗ ಅವಳು ಯಜಮಾನಿಯನ್ನು ತಾತ್ಸಾರಮಾಡಿದಳು.” ಈ ಮನೋಭಾವವು ಅಬ್ರಹಾಮನ ಮನೆವಾರ್ತೆಯಲ್ಲಿ ಎಂಥ ಕಲಹವನ್ನು ಉಂಟುಮಾಡಿತೆಂದರೆ, ಸಾರಳು ಹಾಗರಳನ್ನು ಮನೆಯಿಂದ ಓಡಿಸಿದಳು. ಆದರೆ ಈ ಸಮಸ್ಯೆಗೆ ಒಂದು ಪರಿಹಾರವಿತ್ತು. ದೇವದೂತನು ಹಾಗರಳಿಗೆ ಹೀಗೆ ಸಲಹೆ ನೀಡಿದನು: “ನೀನು ಯಜಮಾನಿಯ ಬಳಿಗೆ ಹಿಂದಿರುಗಿ ಹೋಗಿ ಅವಳಿಗೆ ತಗ್ಗಿ ನಡೆದುಕೋ.” (ಆದಿಕಾಂಡ 16:4, 9) ಸುವ್ಯಕ್ತವಾಗಿಯೇ ಹಾಗರಳು ಈ ಸಲಹೆಗೆ ಕಿವಿಗೊಟ್ಟಳು, ಸಾರಳ ಕಡೆಗಿನ ತನ್ನ ಮನೋಭಾವವನ್ನು ಸರಿಹೊಂದಿಸಿಕೊಂಡಳು ಮತ್ತು ಅಸಂಖ್ಯಾತ ಜನರಿಗೆ ಪೂರ್ವಜಳಾದಳು.
17 ಯಾರಾದರೊಬ್ಬರು ಹೆಚ್ಚು ಉತ್ತಮ ಸ್ಥಿತಿಗೇರುವಾಗ ಅಹಂಕಾರವು ಉಂಟಾಗಬಹುದು ಎಂಬುದನ್ನು ಹಾಗರಳ ಘಟನೆಯು ಉದಾಹರಿಸುತ್ತದೆ. ಇದರಿಂದ ಕಲಿಯತಕ್ಕ ಪಾಠವೇನೆಂದರೆ, ದೇವರ ಸೇವೆಮಾಡುವುದರಲ್ಲಿ ಶುದ್ಧ ಹೃದಯವನ್ನು ತೋರಿಸಿರುವಂಥ ಒಬ್ಬ ಕ್ರೈಸ್ತನು ಸಹ ಐಶ್ವರ್ಯ ಅಥವಾ ಅಧಿಕಾರವನ್ನು ಪಡೆದಾಗ ಅಹಂಕಾರಿಯಾಗುವ ಸಾಧ್ಯತೆಯಿದೆ. ಅವನ ಯಶಸ್ಸು, ಬುದ್ಧಿ ಅಥವಾ ಸಾಮರ್ಥ್ಯಕ್ಕಾಗಿ ಅವನನ್ನು ಇತರರು ಹೊಗಳುವಾಗಲೂ ಇಂಥ ಮನೋಭಾವವು ಬೆಳೆಯಸಾಧ್ಯವಿದೆ. ಹೌದು, ಕ್ರೈಸ್ತನೊಬ್ಬನು ತನ್ನ ಹೃದಯದಲ್ಲಿ ಅಹಂಕಾರವನ್ನು ಬೆಳೆಸಿಕೊಳ್ಳದಿರಲು ಎಚ್ಚರಿಕೆಯಿಂದಿರಬೇಕು. ಅವನು ಯಶಸ್ಸನ್ನು ಸಾಧಿಸುವಲ್ಲಿ ಅಥವಾ ಹೆಚ್ಚಿನ ಜವಾಬ್ದಾರಿಯನ್ನು ಪಡೆಯುವಲ್ಲಿ ಇದು ವಿಶೇಷವಾಗಿ ಸತ್ಯವಾಗಿದೆ.
18 ಅಹಂಕಾರದಿಂದ ದೂರವಿರುವುದಕ್ಕಾಗಿರುವ ಅತ್ಯಂತ ಪ್ರಬಲ ಕಾರಣವು, ಈ ಪ್ರವೃತ್ತಿಯ ವಿಷಯದಲ್ಲಿ ದೇವರಿಗಿರುವ ನೋಟವೇ ಆಗಿದೆ. ಆತನ ವಾಕ್ಯವು ಹೇಳುವುದು: “ಹೆಮ್ಮೆಯ ದೃಷ್ಟಿ, ಗರ್ವದ ಹೃದಯ, ದುಷ್ಟರ ಆಳುವಿಕೆ ಇವೆಲ್ಲಾ ಪಾಪವೇ.” (ಜ್ಞಾನೋಕ್ತಿ 21:4, NIBV) ಆಸಕ್ತಿಕರವಾಗಿಯೇ, “ಇಹಲೋಕ ವಿಷಯದಲ್ಲಿ ಐಶ್ವರ್ಯವುಳ್ಳ” ಕ್ರೈಸ್ತರಿಗೆ “ಅಹಂಕಾರಿಗಳಾಗಿರದೆ” ಇರುವಂತೆ ಬೈಬಲ್ ವಿಶೇಷವಾಗಿ ಎಚ್ಚರಿಕೆ ನೀಡುತ್ತದೆ. (1 ತಿಮೊಥೆಯ 6:17; ಧರ್ಮೋಪದೇಶಕಾಂಡ 8:11-17) ಮತ್ತು ಯಾರು ಐಶ್ವರ್ಯವಂತರಾಗಿಲ್ಲವೋ ಅಂಥ ಕ್ರೈಸ್ತರು “ಹೊಟ್ಟೇಕಿಚ್ಚು”ಪಡುವುದನ್ನು ತೊರೆಯಬೇಕು ಮತ್ತು ಶ್ರೀಮಂತರಾಗಲಿ ಬಡವರಾಗಲಿ ಎಲ್ಲರಲ್ಲಿಯೂ ಅಹಂಕಾರವು ಬೆಳೆಯಸಾಧ್ಯವಿದೆ ಎಂಬುದನ್ನು ಅವರು ಜ್ಞಾಪಕದಲ್ಲಿಟ್ಟುಕೊಳ್ಳಬೇಕು.—ಮಾರ್ಕ 7:21-23; ಯಾಕೋಬ 4:5.
19 ಅಹಂಕಾರ ಮತ್ತು ಅದರೊಂದಿಗೆ ಇತರ ದುಷ್ಟ ಪ್ರವೃತ್ತಿಗಳು ಯೆಹೋವನೊಂದಿಗಿನ ಒಳ್ಳೇ ಸಂಬಂಧವನ್ನು ಹಾಳುಮಾಡಬಲ್ಲವು. ಉದಾಹರಣೆಗೆ, ಅರಸನಾದ ಉಜ್ಜೀಯನ ಆಳ್ವಿಕೆಯ ಮೊದಲ ಭಾಗವನ್ನು ತೆಗೆದುಕೊಳ್ಳಿ: “ಅವನು . . . ಯೆಹೋವನ ಚಿತ್ತಾನುಸಾರವಾಗಿ ನಡೆದನು. . . . ಅವನು ದೇವರನ್ನು ಅವಲಂಬಿಸಿಕೊಂಡಿದ್ದನು; ಹೀಗೆ ಅವಲಂಬಿಸಿದ್ದ ಕಾಲದಲ್ಲೆಲ್ಲಾ ದೇವರಾದ ಯೆಹೋವನು ಅವನನ್ನು ಅಭಿವೃದ್ಧಿಗೆ ತಂದನು.” (2 ಪೂರ್ವಕಾಲವೃತ್ತಾಂತ 26:4, 5) ಆದರೂ, ದುಃಖಕರವಾಗಿ ಅರಸನಾದ ಉಜ್ಜೀಯನು ತನ್ನ ಒಳ್ಳೇ ಹೆಸರನ್ನು ಹಾಳುಮಾಡಿಕೊಂಡನು. ಏಕೆಂದರೆ ‘ಅವನು ಗರ್ವಿಷ್ಠನಾಗಿ ಭ್ರಷ್ಟನಾದನು.’ ಅವನು ತನ್ನನ್ನು ಎಷ್ಟರ ಮಟ್ಟಿಗೆ ಹೆಚ್ಚಿಸಿಕೊಂಡನೆಂದರೆ, ಧೂಪಹಾಕಲಿಕ್ಕಾಗಿ ಅವನು ದೇವಾಲಯವನ್ನು ಪ್ರವೇಶಿಸಿದನು. ದುರಭಿಮಾನದ ಈ ಕೃತ್ಯವನ್ನು ಮಾಡದಿರುವಂತೆ ಯಾಜಕರು ಅವನಿಗೆ ಎಚ್ಚರಿಕೆ ನೀಡಿದಾಗ, “ಉಜ್ಜೀಯನು ಕೋಪವುಳ್ಳವನಾದನು.” ಇದರ ಫಲಿತಾಂಶವಾಗಿ ಯೆಹೋವನು ಅವನ ಮೇಲೆ ಕುಷ್ಠರೋಗವನ್ನು ಬರಮಾಡಿದನು ಮತ್ತು ಅವನು ದೇವರ ಅಸಮ್ಮತಿಯುಳ್ಳವನಾಗಿಯೇ ಮರಣವನ್ನಪ್ಪಿದನು.—2 ಪೂರ್ವಕಾಲವೃತ್ತಾಂತ 26:16-21.
20 ಈ ಘಟನೆಯನ್ನು ನೀವು ಅರಸನಾದ ಹಿಜ್ಕೀಯನ ಉದಾಹರಣೆಯೊಂದಿಗೆ ಹೋಲಿಸಸಾಧ್ಯವಿದೆ. ಒಂದು ಸಂದರ್ಭದಲ್ಲಿ, ಈ ಅರಸನು “ಅಹಂಕಾರಿಯಾದದರಿಂದ” ಅವನ ಒಳ್ಳೇ ಹೆಸರು ಹಾಳಾಗುವ ಅಪಾಯಕರ ಸ್ಥಿತಿಯಲ್ಲಿತ್ತು. ಸಂತೋಷಕರವಾಗಿಯೇ, ‘ಹಿಜ್ಕೀಯನು ತನ್ನ ಗರ್ವವನ್ನು ಬಿಟ್ಟು ತನ್ನನ್ನು ತಗ್ಗಿಸಿಕೊಂಡನು’ ಅಂದರೆ ದೀನಭಾವವನ್ನು ತೋರಿಸಿದನು ಮತ್ತು ಪುನಃ ದೇವರ ಅನುಗ್ರಹಕ್ಕೆ ಪಾತ್ರನಾದನು. (2 ಪೂರ್ವಕಾಲವೃತ್ತಾಂತ 32:25, 26) ಹಿಜ್ಕೀಯನ ಅಹಂಕಾರಕ್ಕೆ ದೀನಭಾವವೇ ಮದ್ದಾಗಿತ್ತು ಎಂಬುದನ್ನು ಗಮನಿಸಿರಿ. ಹೌದು, ದೀನಭಾವವು ಅಹಂಕಾರಕ್ಕೆ ತದ್ವಿರುದ್ಧವಾದ ಗುಣವಾಗಿದೆ. ಆದುದರಿಂದ, ಮುಂದಿನ ಲೇಖನದಲ್ಲಿ ನಾವು ಕ್ರೈಸ್ತ ದೀನಭಾವವನ್ನು ಹೇಗೆ ಬೆಳೆಸಿಕೊಳ್ಳಸಾಧ್ಯವಿದೆ ಮತ್ತು ಕಾಪಾಡಿಕೊಳ್ಳಸಾಧ್ಯವಿದೆ ಎಂಬುದನ್ನು ಪರಿಗಣಿಸುವೆವು.
21 ಆದರೂ, ಅಹಂಕಾರದಿಂದ ಉಂಟಾಗಿರುವ ಎಲ್ಲ ಕೆಟ್ಟ ಫಲಗಳನ್ನು ನಾವೆಂದಿಗೂ ಮರೆಯದಿರೋಣ. “ದೇವರು ಅಹಂಕಾರಿಗಳನ್ನು ಯೆಶಾಯ 2:17.
ಎದುರಿಸು”ತ್ತಾನಾದ್ದರಿಂದ, ಅನುಚಿತ ಹೆಮ್ಮೆಯ ಅನಿಸಿಕೆಗಳನ್ನು ತೊರೆಯಲು ನಾವು ದೃಢನಿರ್ಧಾರವನ್ನು ಮಾಡೋಣ. ನಾವು ದೀನಭಾವವುಳ್ಳ ಕ್ರೈಸ್ತರಾಗಿರಲು ತೀವ್ರ ಪ್ರಯತ್ನವನ್ನು ನಡೆಸುವಾಗ, ದೇವರ ಮಹಾ ದಿನವನ್ನು ಪಾರಾಗಲು ಮುನ್ನೋಡಸಾಧ್ಯವಿದೆ. ಆ ಸಮಯದಲ್ಲಿ ಅಹಂಕಾರಿಗಳು ಮತ್ತು ಅವರ ಕೃತ್ಯಗಳು ಭೂಮಿಯಿಂದ ಸಂಪೂರ್ಣವಾಗಿ ತೆಗೆದುಹಾಕಲ್ಪಡುವವು. ಆಗ “ಸಾಮಾನ್ಯರ ಗರ್ವವು ಕುಗ್ಗುವದು, ಮುಖಂಡರ ಅಹಂಕಾರವೂ ತಗ್ಗುವದು, ಯೆಹೋವನೊಬ್ಬನೇ ಆ ದಿನದಲ್ಲಿ ಉನ್ನತೋನ್ನತನಾಗಿರುವನು.”—ಧ್ಯಾನಿಸಲಿಕ್ಕಾಗಿರುವ ಅಂಶಗಳು
• ಒಬ್ಬ ಅಹಂಕಾರಿಯನ್ನು ನೀವು ಹೇಗೆ ವರ್ಣಿಸುವಿರಿ?
• ಅಹಂಕಾರದ ಮೂಲವು ಏನಾಗಿದೆ?
• ಒಬ್ಬ ವ್ಯಕ್ತಿಯನ್ನು ಯಾವುದು ಅಹಂಕಾರಿಯನ್ನಾಗಿ ಮಾಡಸಾಧ್ಯವಿದೆ?
• ಅಹಂಕಾರದ ವಿರುದ್ಧ ನಾವು ಎಚ್ಚರಿಕೆಯಿಂದಿರಬೇಕು ಏಕೆ?
[ಅಧ್ಯಯನ ಪ್ರಶ್ನೆಗಳು]
1. ಯೋಗ್ಯ ರೀತಿಯ ಹೆಮ್ಮೆಯ ಅನಿಸಿಕೆಗಳಿಗೆ ಸಂಬಂಧಿಸಿದ ಒಂದು ಉದಾಹರಣೆಯನ್ನು ಕೊಡಿ.
2. ಹೆಮ್ಮೆಯ ಅನಿಸಿಕೆಗಳು ಸಾಮಾನ್ಯವಾಗಿ ಅನಪೇಕ್ಷಣೀಯವಾಗಿವೆ ಏಕೆ?
3. ಅಹಂಕಾರ ಎಂದರೇನು, ಮತ್ತು ಇದರ ಕುರಿತು ಯೇಸು ಏನು ಹೇಳಿದನು?
4. ಅಹಂಕಾರದ ಕುರಿತಾದ ಬೈಬಲ್ ಉದಾಹರಣೆಗಳನ್ನು ಪರಿಗಣಿಸುವುದು ನಮಗೆ ಹೇಗೆ ಸಹಾಯಮಾಡಬಲ್ಲದು?
5, 6. ಫರೋಹನು ಹೇಗೆ ಅಹಂಕಾರವನ್ನು ತೋರಿಸಿದನು, ಮತ್ತು ಅದರ ಪರಿಣಾಮವೇನಾಯಿತು?
7. ಬಾಬೆಲಿನ ಅರಸರು ಹೇಗೆ ಅಹಂಕಾರವನ್ನು ತೋರಿಸಿದರು?
8. ಅಹಂಕಾರಿಗಳಾಗಿದ್ದ ಬೇರೆ ಬೇರೆ ವ್ಯಕ್ತಿಗಳೊಂದಿಗೆ ಯೆಹೋವನು ಹೇಗೆ ವ್ಯವಹರಿಸಿದನು?
9. ತೂರಿನ ಅರಸರು ಹೇಗೆ ದ್ರೋಹಿಗಳಾಗಿ ಪರಿಣಮಿಸಿದರು?
10, 11. (ಎ) ತೂರಿನ ಅರಸರನ್ನು ಯಾರೊಂದಿಗೆ ಹೋಲಿಸಸಾಧ್ಯವಿದೆ? (ಬಿ) ಇಸ್ರಾಯೇಲ್ಯರ ಕಡೆಗೆ ತೂರಿನವರಿಗಿದ್ದ ಮನೋಭಾವವನ್ನು ಯಾವುದು ಬದಲಾಯಿಸಿತು?
12. ಸೈತಾನನ ವಂಚನಾತ್ಮಕ ಮಾರ್ಗಕ್ರಮಕ್ಕೆ ಯಾವುದು ನಡಿಸಿತು, ಮತ್ತು ಅವನು ಏನು ಮಾಡುವುದನ್ನು ಮುಂದುವರಿಸಿದ್ದಾನೆ?
13. ಅಹಂಕಾರವು ಯಾವ ಫಲಗಳನ್ನು ಉಂಟುಮಾಡಿದೆ?
14. ಯಾವ ನಿಯಮಕ್ಕನುಸಾರ ಯೆಹೋವನು ತನ್ನ ಬುದ್ಧಿಜೀವಿಗಳೊಂದಿಗೆ ವ್ಯವಹರಿಸುತ್ತಾನೆ?
15, 16. ಹಾಗರಳು ಅಹಂಕಾರಪಡಲು ಯಾವುದು ಕಾರಣವಾಗಿತ್ತು?
17, 18. ನಾವೆಲ್ಲರೂ ಅಹಂಕಾರದ ವಿರುದ್ಧ ನಮ್ಮನ್ನು ಎಚ್ಚರಿಕೆಯಿಂದ ಕಾಪಾಡಿಕೊಳ್ಳುವ ಅಗತ್ಯವಿದೆ ಏಕೆ?
19. ಯಾವ ರೀತಿಯಲ್ಲಿ ಉಜ್ಜೀಯನು ತನ್ನ ಒಳ್ಳೇ ಹೆಸರನ್ನು ಕೆಡಿಸಿಕೊಂಡನು?
20. (ಎ) ಅರಸನಾದ ಹಿಜ್ಕೀಯನ ಒಳ್ಳೇ ಹೆಸರು ಹೇಗೆ ಹಾಳಾಗುವ ಅಪಾಯಕ್ಕೆ ಸಿಲುಕಿತ್ತು? (ಬಿ) ಮುಂದಿನ ಲೇಖನದಲ್ಲಿ ಏನನ್ನು ಪರಿಗಣಿಸಲಾಗುವುದು?
21. ದೀನಭಾವವುಳ್ಳ ಕ್ರೈಸ್ತರು ಯಾವುದನ್ನು ಮುನ್ನೋಡಸಾಧ್ಯವಿದೆ?
[ಪುಟ 23ರಲ್ಲಿರುವ ಚಿತ್ರ]
ಫರೋಹನ ಅಹಂಕಾರವು ಅವನ ಗರ್ವಭಂಗಕ್ಕೆ ಕಾರಣವಾಯಿತು
[ಪುಟ 24ರಲ್ಲಿರುವ ಚಿತ್ರ]
ಹಾಗರಳ ಉತ್ತಮಗೊಂಡ ಸ್ಥಿತಿಯು ಅವಳನ್ನು ಅಹಂಕಾರಿಯಾಗುವಂತೆ ಮಾಡಿತು
[ಪುಟ 25ರಲ್ಲಿರುವ ಚಿತ್ರ]
ಹಿಜ್ಕೀಯನು ದೀನಭಾವವನ್ನು ತೋರಿಸಿದನು ಮತ್ತು ಪುನಃ ದೇವರ ಅನುಗ್ರಹಕ್ಕೆ ಪಾತ್ರನಾದನು