ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಥಮ ಶತಮಾನದ ಯೆಹೂದ್ಯರ ಮಧ್ಯೆ ಕ್ರೈಸ್ತತ್ವವು ಹಬ್ಬುತ್ತದೆ

ಪ್ರಥಮ ಶತಮಾನದ ಯೆಹೂದ್ಯರ ಮಧ್ಯೆ ಕ್ರೈಸ್ತತ್ವವು ಹಬ್ಬುತ್ತದೆ

ಪ್ರಥಮ ಶತಮಾನದ ಯೆಹೂದ್ಯರ ಮಧ್ಯೆ ಕ್ರೈಸ್ತತ್ವವು ಹಬ್ಬುತ್ತದೆ

ಯೆರೂಸಲೇಮಿನಲ್ಲಿ, ಸಾ.ಶ. 49ರ ಸುಮಾರಿಗೆ ಒಂದು ಪ್ರಾಮುಖ್ಯ ಕೂಟವು ನಡೆಸಲ್ಪಟ್ಟಿತು. ಪ್ರಥಮ ಶತಮಾನದ ಕ್ರೈಸ್ತ ಸಭೆಯ “ಸಭಾಸ್ತಂಭಗಳೆಂದು ಹೆಸರುಗೊಂಡಿರುವ” ಯೋಹಾನ, ಪೇತ್ರ ಮತ್ತು ಯೇಸುವಿನ ಮಲಸಹೋದರನಾದ ಯಾಕೋಬ ಈ ಮೂವರು ಅಲ್ಲಿದ್ದರು. ಮಾತ್ರವಲ್ಲದೆ, ಅಪೊಸ್ತಲ ಪೌಲ ಮತ್ತು ಅವನ ಸಂಗಡಿಗನಾದ ಬಾರ್ನಬನು ಕೂಡ ಆ ಕೂಟಕ್ಕೆ ಹಾಜರಾಗಿದ್ದರು. ವಿಸ್ತಾರವಾದ ಕ್ಷೇತ್ರವನ್ನು ಸಾರುವ ಕೆಲಸಕ್ಕಾಗಿ ಹೇಗೆ ವಿಭಜಿಸುವುದು ಎಂಬುದೇ ಅಲ್ಲಿ ಚರ್ಚಿಸಲಿದ್ದ ಸಂಗತಿಯಾಗಿತ್ತು. ಪೌಲನು ವಿವರಿಸಿದ್ದು: “[ಅವರು] ನನಗೂ ಬಾರ್ನಬನಿಗೂ ಬಲಗೈ ಕೊಟ್ಟು​—⁠ನೀವು ಅನ್ಯಜನರ ಬಳಿಗೆ ಹೋಗಿರಿ, ನಾವು ಸುನ್ನತಿಯವರ ಬಳಿಗೆ ಹೋಗುತ್ತೇವೆ ಅಂದರು.”​—⁠ಗಲಾತ್ಯ 2:​1, 9. *

ಈ ಒಪ್ಪಂದವನ್ನು ನಾವು ಹೇಗೆ ಅರ್ಥಮಾಡಿಕೊಳ್ಳಬೇಕು? ಸುವಾರ್ತೆಯನ್ನು ಸಾರಬೇಕಾದ ಕ್ಷೇತ್ರವನ್ನು, ಯೆಹೂದ್ಯರೂ ಯೆಹೂದಿ ಮತಾವಲಂಬಿಗಳೂ ಒಂದು ಬದಿಯಲ್ಲಿ ಮತ್ತು ಅನ್ಯಜನರು ಇನ್ನೊಂದು ಬದಿಯಲ್ಲಿ ಎಂಬಂತೆ ವಿಭಜಿಸಲಾಯಿತೊ? ಅಥವಾ ಕ್ಷೇತ್ರವನ್ನು ಭೂಗೋಳ ಕ್ಷೇತ್ರಕ್ಕನುಸಾರ ವಿಭಜಿಸಲಾಯಿತೊ? ಇದಕ್ಕೆ ಸೂಕ್ತ ಉತ್ತರವನ್ನು ಕಂಡುಕೊಳ್ಳಬೇಕಾದರೆ, ಪ್ಯಾಲಿಸ್ಟೈನ್‌ನ ಹೊರಗೆ ವಾಸಿಸುತ್ತಿದ್ದ ಚದರಿಹೋಗಿದ್ದ ಯೆಹೂದ್ಯರ ಕುರಿತಾದ ಕೊಂಚ ಐತಿಹಾಸಿಕ ಮಾಹಿತಿಯನ್ನು ಪಡೆದುಕೊಳ್ಳುವುದು ಅಗತ್ಯ.

ಪ್ರಥಮ ಶತಮಾನದಲ್ಲಿನ ಯೆಹೂದಿ ಜಗತ್ತು

ಪ್ರಥಮ ಶತಮಾನದಲ್ಲಿ ಎಷ್ಟು ಮಂದಿ ಯೆಹೂದ್ಯರು ಪ್ಯಾಲಿಸ್ಟೈನ್‌ನ ಹೊರಗೆ ವಾಸಿಸುತ್ತಿದ್ದರು? ಯೆಹೂದಿ ಜಗತ್ತಿನ ಭೂಪಟ (ಇಂಗ್ಲಿಷ್‌) ಎಂಬ ಪ್ರಕಾಶನದಲ್ಲಿರುವ ಮಾತುಗಳನ್ನು ಅನೇಕ ವಿದ್ವಾಂಸರು ಒಪ್ಪಿಕೊಳ್ಳುತ್ತಾರೆ ಎಂದು ತೋರುತ್ತದೆ. ಅದು ತಿಳಿಸುವುದು: “ನಿರ್ದಿಷ್ಟವಾದ ಸಂಖ್ಯೆಯನ್ನು ಕಂಡುಕೊಳ್ಳುವುದು ಕಷ್ಟಕರವಾಗಿದ್ದರೂ, ಸಾ.ಶ. 70ಕ್ಕಿಂತ ಸ್ವಲ್ಪ ಸಮಯದ ಮುಂಚೆ ಯೂದಾಯದಲ್ಲಿ 25 ಲಕ್ಷ ಮತ್ತು ರೋಮನ್‌ ಸಾಮ್ರಾಜ್ಯದ ಉಳಿದ ಭಾಗದಾದ್ಯಂತ 40 ಲಕ್ಷಕ್ಕಿಂತಲೂ ಹೆಚ್ಚು ಯೆಹೂದ್ಯರು ಇದ್ದರೆಂದು ಅಂದಾಜುಮಾಡಲಾಗಿದೆ. . . . ಇಡೀ ರೋಮನ್‌ ಸಾಮ್ರಾಜ್ಯದ 10 ಪ್ರತಿಶತ ಜನಸಂಖ್ಯೆಯು ಯೆಹೂದ್ಯರದ್ದಾಗಿದ್ದದ್ದು ಸಂಭವನೀಯ. ಮತ್ತು ಎಲ್ಲಿ ಯೆಹೂದ್ಯರು ಹೆಚ್ಚಾಗಿ ವಾಸಿಸುತ್ತಿದ್ದರೊ ಅಂಥ ಸ್ಥಳಗಳಲ್ಲಿ, ಅಂದರೆ ಪೂರ್ವ ಪ್ರಾಂತಗಳ ನಗರಗಳಲ್ಲಿ, ಅಲ್ಲಿನ ನಿವಾಸಿಗಳ 25 ಪ್ರತಿಶತ ಅಥವಾ ಅದಕ್ಕಿಂತಲೂ ಹೆಚ್ಚು ಸಂಖ್ಯೆಯಲ್ಲಿ ಯೆಹೂದ್ಯರಿದ್ದರು.”

ಯೆಹೂದ್ಯರ ಮುಖ್ಯ ಕೇಂದ್ರಗಳು ಪೂರ್ವದಲ್ಲಿದ್ದವು ಅಂದರೆ ಸಿರಿಯ, ಏಷ್ಯಾ ಮೈನರ್‌, ಬಾಬೆಲ್‌ ಮತ್ತು ಐಗುಪ್ತದಲ್ಲಿದ್ದವು. ಆದರೆ ಯೂರೋಪಿನಲ್ಲಿ ಯೆಹೂದ್ಯರ ಚಿಕ್ಕ ಸಮುದಾಯಗಳಿದ್ದವು. ಆರಂಭದ ಸುಪ್ರಸಿದ್ಧ ಯೆಹೂದಿ ಕ್ರೈಸ್ತರಲ್ಲಿ ಕೆಲವರು ಇಸ್ರಾಯೇಲಿನ ಹೊರಗೆ ವಾಸಿಸುತ್ತಿದ್ದವರಾಗಿದ್ದರು. ಉದಾಹರಣೆಗೆ, ಸೈಪ್ರಸ್‌ನ (ಕುಪ್ರದ) ಬಾರ್ನಬ, ಮೊದಲು ಪೊಂತದಲ್ಲಿ ಅನಂತರ ರೋಮಿನಲ್ಲಿದ್ದ ಪ್ರಿಸ್ಕ ಹಾಗೂ ಅಕ್ವಿಲ, ಅಲೆಕ್ಸಾಂದ್ರಿಯದ ಅಪೊಲ್ಲೋಸ ಮತ್ತು ತಾರ್ಸದ ಪೌಲನು ಇಂಥವರಲ್ಲಿ ಕೆಲವರು.​—⁠ಅ. ಕೃತ್ಯಗಳು 4:36; 18:​2, 24; 22:⁠3.

ಚದರಿಹೋಗಿದ್ದ ಯೆಹೂದ್ಯರ ಈ ಸಮುದಾಯಗಳಿಗೆ ತಮ್ಮ ಸ್ವದೇಶದೊಂದಿಗೆ ಅನೇಕ ಕಾರಣಗಳಿಂದಾಗಿ ಹೊಕ್ಕುಬಳಕೆಯಿದ್ದವು. ಒಂದು ಯಾವುದೆಂದರೆ, ಅವರು ಯೆರೂಸಲೇಮಿನಲ್ಲಿದ್ದ ದೇವಾಲಯಕ್ಕೆ ವಾರ್ಷಿಕ ಕಂದಾಯವನ್ನು ಕಳುಹಿಸುತ್ತಿದ್ದರು. ಇದು, ದೇವಾಲಯದ ಜೀವನ ಮತ್ತು ಆರಾಧನೆಯಲ್ಲಿ ಭಾಗವಹಿಸಲು ಅವರಿಗೆ ಒಂದು ಮಾರ್ಗವನ್ನು ಒದಗಿಸಿತು. ಇದರ ಕುರಿತು ವಿದ್ವಾಂಸರಾದ ಜಾನ್‌ ಬಾರ್ಕ್ಲೇ ತಿಳಿಸುವುದು: “ಈ ಹಣದ ಸಂಗ್ರಹವನ್ನು ಮತ್ತು ಇದಕ್ಕೆ ಕೂಡಿಕೆಯಾಗಿ ಐಶ್ವರ್ಯವಂತರಿಂದ ಹೆಚ್ಚಿನ ದಾನಗಳನ್ನು ಒಟ್ಟುಗೂಡಿಸುವ ಕೆಲಸವನ್ನು ಪ್ಯಾಲಿಸ್ಟೈನ್‌ನ ಹೊರಗೆ ವಾಸಿಸುತ್ತಿದ್ದ ಯೆಹೂದಿ ಸಮುದಾಯಗಳೇ ನಿಷ್ಠೆಯಿಂದ ನಿರ್ವಹಿಸುತ್ತಿದ್ದವು ಎಂಬುದಕ್ಕೆ ಸಾಕಷ್ಟು ಪುರಾವೆಯಿದೆ.”

ಇನ್ನೊಂದು ಸಂಬಂಧವು, ಪ್ರತಿ ವರುಷ ಹಬ್ಬಗಳನ್ನು ಆಚರಿಸಲಿಕ್ಕಾಗಿ ಹತ್ತಾರು ಸಾವಿರ ಯಾತ್ರಿಕರು ಯೆರೂಸಲೇಮಿಗೆ ಹೋಗುತ್ತಿದ್ದರು. ಅಪೊಸ್ತಲರ ಕೃತ್ಯಗಳು 2:​9-11ರಲ್ಲಿರುವ ಸಾ.ಶ. 33ರ ಪಂಚಾಶತ್ತಮದ ಕುರಿತಾದ ವೃತ್ತಾಂತವು ಇದನ್ನು ದೃಷ್ಟಾಂತಿಸುತ್ತದೆ. ಹಬ್ಬದಲ್ಲಿ ಉಪಸ್ಥಿತರಿದ್ದ ಯೆಹೂದಿ ಯಾತ್ರಿಕರು ಪಾರ್ಥಿಯ, ಮೇದ್ಯ, ಏಲಾಮ್‌, ಮೆಸೊಪೊತಾಮ್ಯ, ಕಪ್ಪದೋಕ್ಯ, ಪೊಂತ, ಏಷ್ಯಾ, ಫ್ರುಗ್ಯ ಸೀಮೆ, ಪಂಫುಲ್ಯ, ಐಗುಪ್ತ, ಲಿಬ್ಯ, ರೋಮ್‌, ಕ್ರೇತ, ಮತ್ತು ಅರೇಬಿಯ ದೇಶಗಳಿಂದ ಬಂದವರಾಗಿದ್ದರು.

ಪ್ಯಾಲಿಸ್ಟೈನ್‌ನ ಹೊರಗೆ ಚದರಿದ್ದ ಯೆಹೂದ್ಯರೊಂದಿಗೆ ಯೆರೂಸಲೇಮಿನ ದೇವಾಲಯದ ಆಡಳಿತಗಾರರು ಪತ್ರಗಳ ಮೂಲಕ ಸಂಪರ್ಕವನ್ನು ಇಟ್ಟುಕೊಂಡಿದ್ದರು. ಅಪೊಸ್ತಲರ ಕೃತ್ಯಗಳು 5:34ರಲ್ಲಿ ತಿಳಿಸಲ್ಪಟ್ಟಿರುವ ನ್ಯಾಯಶಾಸ್ತ್ರಿಯಾದ ಗಮಲಿಯೇಲನು, ಬಾಬೆಲ್‌ ಮತ್ತು ಲೋಕದ ಇತರ ಭಾಗಗಳಿಗೆ ಪತ್ರಗಳನ್ನು ಕಳುಹಿಸಿದನು ಎಂಬುದು ತಿಳಿದಿರುವ ಸಂಗತಿಯಾಗಿದೆ. ಸಾ.ಶ. 59ರ ಸುಮಾರಿಗೆ ಅಪೊಸ್ತಲ ಪೌಲನು ರೋಮಿಗೆ ಸೆರೆವಾಸಿಯಾಗಿ ಬಂದಾಗ, “ಯೆಹೂದ್ಯರಲ್ಲಿ ಪ್ರಮುಖ” ಪುರುಷರು ಅವನಿಗೆ “ನಿನ್ನ ವಿಷಯವಾಗಿ ನಮಗೆ ಯೂದಾಯದಿಂದ ಕಾಗದಗಳು ಬರಲಿಲ್ಲ, ಸಹೋದರರಲ್ಲಿ ಒಬ್ಬರೂ ಬಂದು ನಿನ್ನ ವಿಷಯವಾಗಿ ಕೆಟ್ಟದ್ದನ್ನು ತಿಳಿಸಲೂ ಇಲ್ಲ, ಮಾತಾಡಲೂ ಇಲ್ಲ” ಎಂದು ಹೇಳಿದರು. ಹಾಗಾದರೆ, ಕಾಗದಗಳು ಮತ್ತು ವರದಿಗಳು ಸ್ವದೇಶದಿಂದ ರೋಮಿಗೆ ಆಗಿಂದಾಗ್ಗೆ ಕಳುಹಿಸಲ್ಪಡುತ್ತಿದ್ದವು ಎಂಬುದನ್ನು ಇದು ಸೂಚಿಸುತ್ತದೆ.​—⁠ಅ. ಕೃತ್ಯಗಳು 28:​17, 21.

ಪ್ಯಾಲಿಸ್ಟೈನ್‌ನ ಹೊರಗೆ ವಾಸಿಸುತ್ತಿದ್ದ ಇಸ್ರಾಯೇಲ್ಯರು, ಹೀಬ್ರು ಶಾಸ್ತ್ರವಚನಗಳ ಗ್ರೀಕ್‌ ಭಾಷಾಂತರವಾದ ಸೆಪ್ಟುಅಜಂಟ್‌ ಬೈಬಲನ್ನು ಉಪಯೋಗಿಸುತ್ತಿದ್ದರು. ಒಂದು ಪರಾಮರ್ಶೆ ಗ್ರಂಥವು ತಿಳಿಸುವುದು: “LXX [ಸೆಪ್ಟುಅಜಂಟ್‌] ಅನ್ನು ಚದರಿಹೋಗಿದ್ದ ಯೆಹೂದ್ಯರ ಬೈಬಲ್‌ ಎಂಬುದಾಗಿ ಇಲ್ಲವೆ ‘ಪವಿತ್ರ ಗ್ರಂಥ’ ಎಂಬುದಾಗಿ ಪ್ಯಾಲಿಸ್ಟೈನ್‌ನ ಹೊರಗಿದ್ದ ಯೆಹೂದಿ ಸಮುದಾಯಗಳೆಲ್ಲವೂ ಸ್ವೀಕರಿಸಿದ್ದವು ಮತ್ತು ಅದನ್ನೇ ಅವರು ಓದುತ್ತಿದ್ದರು ಎಂಬ ತೀರ್ಮಾನಕ್ಕೆ ಬರುವುದು ಸೂಕ್ತವಾಗಿದೆ.” ಆರಂಭದ ಕ್ರೈಸ್ತರು ಸಹ ತಮ್ಮ ಬೋಧಿಸುವಿಕೆಯಲ್ಲಿ ಇದೇ ಭಾಷಾಂತರವನ್ನು ಹೆಚ್ಚಾಗಿ ಉಪಯೋಗಿಸುತ್ತಿದ್ದರು.

ಯೆರೂಸಲೇಮಿನಲ್ಲಿದ್ದ ಕ್ರೈಸ್ತ ಆಡಳಿತ ಮಂಡಲಿಯ ಸದಸ್ಯರು ಈ ಎಲ್ಲ ಸನ್ನಿವೇಶಗಳನ್ನು ಚೆನ್ನಾಗಿ ಅರಿತಿದ್ದರು. ಸುವಾರ್ತೆಯು ಸಿರಿಯ ಮತ್ತು ಅದಕ್ಕಿಂತಲೂ ಆಚೆ ವಾಸಿಸುವ ಅಂದರೆ, ದಮಸ್ಕ ಹಾಗೂ ಅಂತಿಯೋಕ್ಯದಲ್ಲಿದ್ದ ಯೆಹೂದ್ಯರಿಗೂ ಅಷ್ಟರಲ್ಲೇ ತಲಪಿತ್ತು. (ಅ. ಕೃತ್ಯಗಳು 9:​19, 20; 11:19; 15:​23, 41; ಗಲಾತ್ಯ 1:21) ಸಾ.ಶ. 49ರಲ್ಲಿ ನಡೆದ ಕೂಟದಲ್ಲಿ ಹಾಜರಾಗಿದ್ದವರು, ಭವಿಷ್ಯದಲ್ಲಿ ಮಾಡಬೇಕಾದ ಕೆಲಸಕ್ಕಾಗಿ ಯೋಜನೆಯನ್ನು ಮಾಡುತ್ತಿದ್ದರು ಎಂಬುದು ಸುವ್ಯಕ್ತ. ಯೆಹೂದ್ಯರ ಮತ್ತು ಯೆಹೂದಿ ಮತಾವಲಂಬಿಗಳ ಮಧ್ಯದಲ್ಲಿ ಆದ ಬೆಳವಣಿಗೆಗಳ ಕುರಿತು ಬೈಬಲ್‌ ಏನು ತಿಳಿಸುತ್ತದೆ ಎಂಬುದನ್ನು ನಾವು ಪರಿಗಣಿಸೋಣ.

ಪೌಲನ ಪ್ರಯಾಣಗಳು ಮತ್ತು ಪ್ಯಾಲಿಸ್ಟೈನ್‌ನ ಹೊರಗಿದ್ದ ಯೆಹೂದ್ಯರು

ಅಪೊಸ್ತಲ ಪೌಲನ ಮೂಲ ನೇಮಕವು, ‘ಅನ್ಯಜನರಿಗೂ ಅರಸುಗಳಿಗೂ ಇಸ್ರಾಯೇಲ್ಯರಿಗೂ [ಯೇಸು ಕ್ರಿಸ್ತನ] ಹೆಸರನ್ನು ತಿಳಿಸುವುದೇ’ ಆಗಿತ್ತು. * (ಅ. ಕೃತ್ಯಗಳು 9:15) ಯೆರೂಸಲೇಮಿನಲ್ಲಿ ನಡೆದ ಕೂಟದ ಅನಂತರ, ಪೌಲನು ಎಲ್ಲೆಲ್ಲ ಪ್ರಯಾಣಿಸಿದನೊ ಅಲ್ಲೆಲ್ಲ ಹರಡಿಕೊಂಡಿದ್ದ ಯೆಹೂದ್ಯರನ್ನು ತಲಪುವುದನ್ನು ಮುಂದುವರಿಸಿದನು. (14ನೇ ಪುಟದಲ್ಲಿರುವ ಚೌಕವನ್ನು ನೋಡಿ.) ಹಾಗಾದರೆ, ಇದರಿಂದ ತಿಳಿದುಬರುವುದೇನೆಂದರೆ ಕ್ಷೇತ್ರಕ್ಕೆ ಸಂಬಂಧಿಸಿದ ಆ ಒಪ್ಪಂದವು ಭೂಗೋಳ ಕ್ಷೇತ್ರಕ್ಕೆ ಸಂಬಂಧಿಸಿದ್ದಾಗಿತ್ತು. ಪೌಲನೂ ಬಾರ್ನಬನೂ ತಮ್ಮ ಮಿಷನೆರಿ ಕೆಲಸವನ್ನು ರೋಮನ್‌ ಸಾಮ್ರಾಜ್ಯದ ಪಶ್ಚಿಮ ಭಾಗಕ್ಕೆ ವಿಸ್ತರಿಸಿದರು ಮತ್ತು ಇತರರು ಪೂರ್ವದಲ್ಲಿದ್ದ ಯೆಹೂದಿ ಸ್ವದೇಶದಲ್ಲಿ ಹಾಗೂ ದೊಡ್ಡದಾದ ಯೆಹೂದಿ ಸಮುದಾಯಗಳಲ್ಲಿ ಸೇವೆಸಲ್ಲಿಸಿದರು.

ಪೌಲನೂ ಅವನ ಸಂಗಡಿಗರೂ ಸಿರಿಯದಲ್ಲಿದ್ದ ಅಂತಿಯೋಕ್ಯದಿಂದ ತಮ್ಮ ಎರಡನೇ ಮಿಷನೆರಿ ಪ್ರಯಾಣವನ್ನು ಆರಂಭಿಸಿದಾಗ, ಅವರು ಪಶ್ಚಿಮ ದಿಕ್ಕಿನತ್ತ ಏಷ್ಯಾ ಮೈನರ್‌ನಿಂದ ತ್ರೋವದ ತನಕ ಹೋದರು. ಅಲ್ಲಿಂದ ಅವರು ಸಮುದ್ರವನ್ನು ದಾಟಿ ಮಕೆದೋನ್ಯಕ್ಕೆ ಹೋದರು, ಏಕೆಂದರೆ “[ಮಕೆದೋನ್ಯದವರಿಗೆ] ಸುವಾರ್ತೆಯನ್ನು ಸಾರುವದಕ್ಕೆ ದೇವರು [ಅವರನ್ನು] ಕರೆದಿದ್ದಾನೆಂದು” ಅವರು ನಿಶ್ಚಯಿಸಿಕೊಂಡರು. ಅನಂತರ, ಅಥೇನೆ ಮತ್ತು ಕೊರಿಂಥವನ್ನು ಸೇರಿಸಿ ಇತರ ಯೂರೋಪಿಯನ್‌ ನಗರಗಳಲ್ಲಿ ಕ್ರೈಸ್ತ ಸಭೆಗಳು ಸ್ಥಾಪನೆಯಾದವು.​—⁠ಅ. ಕೃತ್ಯಗಳು 15:​40, 41; 16:​6-10; 17:​1–18:18.

ಪೌಲನ ಮೂರನೇ ಮಿಷನೆರಿ ಪ್ರಯಾಣದ ಅಂತ್ಯದಲ್ಲಿ, ಅಂದರೆ ಸಾ.ಶ. 56ರ ಸುಮಾರಿಗೆ ಅವನು ಪಶ್ಚಿಮಕ್ಕೆ ಇನ್ನೂ ದೂರಕ್ಕೆ ಹೋಗಿ ತನಗೆ ಯೆರೂಸಲೇಮಿನ ಕೂಟದಲ್ಲಿ ನೇಮಿಸಲ್ಪಟ್ಟಿದ್ದ ಕೆಲಸದ ಕ್ಷೇತ್ರವನ್ನು ವಿಸ್ತರಿಸಲು ನಿರ್ಧರಿಸಿದನು. ಅವನು ಬರೆದದ್ದು: “ರೋಮಾಪುರದಲ್ಲಿರುವ ನಿಮಗೆ ಸಹ ಸುವಾರ್ತೆಯನ್ನು ಸಾರುವದಕ್ಕೆ ನಾನಂತೂ ಸಿದ್ಧವಾಗಿದ್ದೇನೆ,” ಮತ್ತು “[ನಾನು] ನಿಮ್ಮ ಮಾರ್ಗವಾಗಿ ಸ್ಪೇನ್‌ ದೇಶಕ್ಕೆ ಹೋಗುವೆನು.” (ರೋಮಾಪುರ 1:15; 15:​24, 28) ಆದರೆ ಪೂರ್ವದಲ್ಲಿದ್ದ ದೊಡ್ಡ ಯೆಹೂದಿ ಸಮುದಾಯಗಳ ಕುರಿತಾಗಿ ಏನು?

ಪೂರ್ವದಲ್ಲಿದ್ದ ಯೆಹೂದಿ ಸಮುದಾಯಗಳು

ಸಾ.ಶ. ಪ್ರಥಮ ಶತಮಾನದಲ್ಲಿ, ಅತಿ ದೊಡ್ಡ ಯೆಹೂದಿ ಸಮುದಾಯವಿದ್ದ ಸ್ಥಳವು ಐಗುಪ್ತದ ರಾಜಧಾನಿಯಾದ ಅಲೆಕ್ಸಾಂದ್ರಿಯವಾಗಿತ್ತು. ವ್ಯಾಪಾರ ಮತ್ತು ಸಂಸ್ಕೃತಿಯ ಕೇಂದ್ರವಾಗಿದ್ದ ಈ ಸ್ಥಳದಲ್ಲಿ ನೂರಾರು ಸಾವಿರಗಳಷ್ಟು ಯೆಹೂದ್ಯರಿದ್ದರು. ಆ ನಗರದಾದ್ಯಂತ ಯೆಹೂದ್ಯರ ಸಭಾಮಂದಿರಗಳಿದ್ದವು. ಆ ಸಮಯದಲ್ಲಿ ಐಗುಪ್ತದಾದ್ಯಂತ ಕಡಿಮೆಪಕ್ಷ ಹತ್ತು ಲಕ್ಷ ಯೆಹೂದ್ಯರು ಇದ್ದರೆಂದು ಅಲೆಕ್ಸಾಂದ್ರಿಯದ ಯೆಹೂದ್ಯನಾದ ಫಿಲೋ ತಿಳಿಸಿದನು. ಹತ್ತಿರದ ಲಿಬ್ಯ, ಕುರೇನೆಪಟ್ಟಣ ಮತ್ತು ಸುತ್ತಮುತ್ತಲಿನ ನಗರಗಳಲ್ಲಿಯೂ ಸಾಕಷ್ಟು ಸಂಖ್ಯೆಯಲ್ಲಿ ಯೆಹೂದ್ಯರು ನೆಲೆಸಿದ್ದರು.

ಕ್ರೈಸ್ತರಾದ ಕೆಲವು ಯೆಹೂದ್ಯರು ಈ ಕ್ಷೇತ್ರದಿಂದಲೇ ಬಂದವರಾಗಿದ್ದರು. ಸಿರಿಯದ ಅಂತಿಯೋಕ್ಯದಲ್ಲಿನ ಸಭೆಯನ್ನು ಬೆಂಬಲಿಸಿದ “ಅಲೆಕ್ಸಾಂದ್ರಿಯದಲ್ಲಿ ಹುಟ್ಟಿದ ಅಪೊಲ್ಲೋಸ,” ‘ಕುಪ್ರದ್ವೀಪದವರು ಕುರೇನ್ಯದವರು,’ ಮತ್ತು “ಕುರೇನ್ಯದ ಲೂಕ್ಯ” ಎಂಬವರ ಬಗ್ಗೆ ನಾವು ಓದುತ್ತೇವೆ. (ಅ. ಕೃತ್ಯಗಳು 2:​10; 11:​19, 20; 13:1; 18:24) ಐಗುಪ್ತ ಮತ್ತು ಅದರ ಆಸುಪಾಸಿನಲ್ಲಿ ನಡೆಸಲ್ಪಟ್ಟ ಆರಂಭದ ಕ್ರೈಸ್ತ ಚಟುವಟಿಕೆಯ ಕುರಿತು ಈ ಉಲ್ಲೇಖ ಮತ್ತು ಕ್ರೈಸ್ತ ಸೌವಾರ್ತಿಕನಾದ ಫಿಲಿಪ್ಪನು ಐಥಿಯೋಪ್ಯದ ಕಂಚುಕಿಗೆ ಸಾಕ್ಷಿನೀಡಿದ ಉಲ್ಲೇಖವಲ್ಲದೆ ಬೈಬಲ್‌ ಬೇರೆ ಯಾವುದೇ ಸಂಗತಿಯನ್ನು ತಿಳಿಸುವುದಿಲ್ಲ.​—⁠ಅ. ಕೃತ್ಯಗಳು 8:​26-39.

ಯೆಹೂದಿ ಸಮುದಾಯವಿದ್ದ ಇನ್ನೊಂದು ಮುಖ್ಯ ಕೇಂದ್ರವು ಬಾಬೆಲ್‌ ಆಗಿತ್ತು. ಅಲ್ಲಿನ ಯೆಹೂದಿ ಸಮುದಾಯವು ಪಾರ್ಥಿಯ, ಮೇದ್ಯ ಮತ್ತು ಏಲಾಮ್‌ನ ತನಕ ವಿಸ್ತಾರಗೊಂಡಿತ್ತು. “ಟೈಗ್ರಿಸ್‌ ಮತ್ತು ಯೂಫ್ರೇಟೀಸ್‌ ತಗ್ಗಿನಲ್ಲಿರುವ ಪ್ರತಿಯೊಂದು ಕ್ಷೇತ್ರದಲ್ಲಿ ಅಂದರೆ ಅರ್‌ಮೇನಿಯದಿಂದ ಪರ್ಷಿಯನ್‌ ಕೊಲ್ಲಿಯ ವರೆಗೆ ಮತ್ತು ಈಶಾನ್ಯ ದಿಕ್ಕಿನಲ್ಲಿ ಕ್ಯಾಸ್ಪಿಯನ್‌ ಸಮುದ್ರದ ವರೆಗೆ ಹಾಗೂ ಪೂರ್ವ ದಿಕ್ಕಿನಲ್ಲಿ ಮೇದ್ಯದ ವರೆಗೆ ಯೆಹೂದಿ ನಿವಾಸಿಗಳಿದ್ದರು” ಎಂದು ಒಬ್ಬ ಇತಿಹಾಸಗಾರನು ತಿಳಿಸುತ್ತಾನೆ. ಅವರ ಸಂಖ್ಯೆಯು 8,00,000 ಅಥವಾ ಅದಕ್ಕಿಂತಲೂ ಹೆಚ್ಚು ಇತ್ತೆಂದು ಎನ್‌ಸೈಕ್ಲಪೀಡೀಯ ಜುಡೈಕ ಅಂದಾಜುಮಾಡಿದೆ. ಹತ್ತಾರು ಸಾವಿರಗಳಷ್ಟು ಬ್ಯಾಬಿಲೋನಿಯದ ಯೆಹೂದ್ಯರು ವಾರ್ಷಿಕ ಹಬ್ಬಗಳನ್ನು ಆಚರಿಸಲಿಕ್ಕಾಗಿ ಯೆರೂಸಲೇಮಿಗೆ ಪ್ರಯಾಣಿಸುತ್ತಿದ್ದರು ಎಂದು ಪ್ರಥಮ ಶತಮಾನದ ಯೆಹೂದಿ ಇತಿಹಾಸಗಾರನಾದ ಜೋಸೀಫಸ್‌ ತಿಳಿಸುತ್ತಾನೆ.

ಸಾ.ಶ. 33ರ ಪಂಚಾಶತ್ತಮದಂದು ಯಾರಾದರೂ ಬ್ಯಾಬಿಲೋನಿಯದ ಯಾತ್ರಿಕರು ದೀಕ್ಷಾಸ್ನಾನವನ್ನು ಪಡೆದುಕೊಂಡರೊ? ಅದು ನಮಗೆ ತಿಳಿದಿಲ್ಲ, ಆದರೆ ಆ ದಿನದಂದು ಅಪೊಸ್ತಲ ಪೇತ್ರನ ಭಾಷಣವನ್ನು ಆಲಿಸಿದವರಲ್ಲಿ ಮೆಸೊಪೊತಾಮ್ಯದಿಂದ ಬಂದವರೂ ಇದ್ದರು. (ಅ. ಕೃತ್ಯಗಳು 2:⁠9) ಅಪೊಸ್ತಲ ಪೇತ್ರನು ಸಾ.ಶ. 62-64ರ ಸುಮಾರಿಗೆ ಬಾಬೆಲಿನಲ್ಲಿದ್ದನು ಎಂಬುದು ನಮಗೆ ತಿಳಿದಿದೆ. ಅಲ್ಲಿರುವಾಗ, ಅವನು ತನ್ನ ಮೊದಲ ಪತ್ರವನ್ನು ಮತ್ತು ಒಂದುವೇಳೆ ಎರಡನೇ ಪತ್ರವನ್ನು ಸಹ ಬರೆದನು. (1 ಪೇತ್ರ 5:13) ಗಲಾತ್ಯದವರಿಗೆ ಬರೆದ ಪತ್ರದಲ್ಲಿ ಸೂಚಿಸಲಾದ ಆ ಕೂಟದಲ್ಲಿ ಪೇತ್ರ, ಯೋಹಾನ ಮತ್ತು ಯಾಕೋಬರಿಗೆ ನೇಮಿಸಲ್ಪಟ್ಟ ಕ್ಷೇತ್ರದಲ್ಲಿ, ಯೆಹೂದ್ಯರ ದೊಡ್ಡ ಜನಸಂಖ್ಯೆ ಇದ್ದ ಬಾಬೆಲು ಸಹ ಭಾಗವಾಗಿದ್ದಿರಬೇಕು ಎಂಬುದು ನಿಸ್ಸಂಶಯ.

ಯೆರೂಸಲೇಮ್‌ ಸಭೆ ಮತ್ತು ಪ್ಯಾಲಿಸ್ಟೈನ್‌ನ ಹೊರಗಿದ್ದ ಯೆಹೂದ್ಯರು

ಕ್ಷೇತ್ರಗಳ ಬಗ್ಗೆ ಚರ್ಚಿಸಲಾದ ಕೂಟದಲ್ಲಿ ಹಾಜರಿದ್ದ ಯಾಕೋಬನು ಯೆರೂಸಲೇಮ್‌ ಸಭೆಯಲ್ಲಿ ಮೇಲ್ವಿಚಾರಕನಾಗಿ ಸೇವೆಸಲ್ಲಿಸುತ್ತಿದ್ದನು. (ಅ. ಕೃತ್ಯಗಳು 12:​12, 17; 15:13; ಗಲಾತ್ಯ 1:​18, 19) ಮಾತ್ರವಲ್ಲದೆ ಅವನು, ಸಾ.ಶ. 33ರ ಪಂಚಾಶತ್ತಮದಂದು ಬೇರೆ ಬೇರೆ ಸ್ಥಳಗಳಿಂದ ಬಂದ ಸಾವಿರಾರು ಯೆಹೂದ್ಯರು ಸುವಾರ್ತೆಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿ ದೀಕ್ಷಾಸ್ನಾನ ಪಡೆದುಕೊಂಡದ್ದನ್ನು ಕಣ್ಣಾರೆ ಕಂಡ ಸಾಕ್ಷಿಯಾಗಿದ್ದನು.​—⁠ಅ. ಕೃತ್ಯಗಳು 1:14; 2:​1, 41.

ಆಗ ಮತ್ತು ಅನಂತರದ ಸಮಯಗಳಲ್ಲಿ ಹತ್ತಾರು ಸಾವಿರ ಯೆಹೂದ್ಯರು ವಾರ್ಷಿಕ ಹಬ್ಬಗಳನ್ನು ಆಚರಿಸಲು ಬಂದರು. ನಗರವು ಜನಜಂಗುಳಿಯಿಂದ ತುಂಬಿತು ಮತ್ತು ಪ್ರವಾಸಿಗರು ಹತ್ತಿರದ ಹಳ್ಳಿಗಳಲ್ಲಿ ಇಲ್ಲವೆ ಡೇರೆಗಳಲ್ಲಿ ಉಳಿಯಬೇಕಾಯಿತು. ಯಾತ್ರಿಕರು ತಮ್ಮ ಸ್ನೇಹಿತರನ್ನು ಭೇಟಿಯಾಗುವುದಕ್ಕಲ್ಲದೆ ಆರಾಧನೆ ಸಲ್ಲಿಸಲು, ಯಜ್ಞವನ್ನು ಅರ್ಪಿಸಲು ಮತ್ತು ಟೋರಾವನ್ನು ಅಧ್ಯಯನಮಾಡಲು ದೇವಾಲಯಕ್ಕೆ ಹೋಗುತ್ತಿದ್ದರು ಎಂದು ಎನ್‌ಸೈಕ್ಲಪೀಡೀಯ ಜುಡೈಕ ವಿವರಿಸುತ್ತದೆ.

ಯೆರೂಸಲೇಮ್‌ ಸಭೆಯ ಯಾಕೋಬ ಮತ್ತು ಇತರ ಸದಸ್ಯರು ಈ ಸಂದರ್ಭಗಳನ್ನು ಬೇರೆ ಬೇರೆ ಕಡೆಯಿಂದ ಬಂದ ಯೆಹೂದ್ಯರಿಗೆ ಸಾಕ್ಷಿನೀಡಲು ಉಪಯೋಗಿಸಿದರು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಸ್ತೆಫನನ ಮರಣದಿಂದಾಗಿ “ಯೆರೂಸಲೇಮಿನಲ್ಲಿದ್ದ ಸಭೆಗೆ ದೊಡ್ಡ ಹಿಂಸೆ” ಉಂಟಾದ ಅವಧಿಯಲ್ಲಿ ಅಪೊಸ್ತಲರು ಈ ಸಾಕ್ಷಿನೀಡುವ ಕೆಲಸವನ್ನು ಬಹಳ ವಿವೇಕದಿಂದ ಮಾಡಿದ್ದಿರಬಹುದು. (ಅ. ಕೃತ್ಯಗಳು 8:⁠1) ಈ ಘಟನೆಯ ಮುಂಚೆ ಮತ್ತು ಅನಂತರ, ಆ ಕ್ರೈಸ್ತರಲ್ಲಿ ಸಾರುವ ಕೆಲಸದ ಕಡೆಗಿದ್ದ ಹುರುಪಿನ ಕಾರಣ ಬಹಳ ಅಭಿವೃದ್ಧಿಯು ಉಂಟಾಯಿತು.​—⁠ಅ. ಕೃತ್ಯಗಳು 5:42; 8:​4; 9:31.

ನಾವೇನನ್ನು ಕಲಿಯಬಲ್ಲೆವು?

ಯೆಹೂದ್ಯರು ಎಲ್ಲಿಯೇ ಇರಲಿ ಅವರನ್ನು ತಲಪಲು ಯಥಾರ್ಥವಾದ ಪ್ರಯತ್ನಗಳನ್ನು ಆರಂಭದ ಕ್ರೈಸ್ತರು ಮಾಡಿದರು ಎಂಬುದು ನಿಜ. ಅದೇ ಸಮಯದಲ್ಲಿ, ಪೌಲನೂ ಇತರರೂ ಯೂರೋಪಿಯನ್‌ ಕ್ಷೇತ್ರದಲ್ಲಿದ್ದ ಅನ್ಯಜನರನ್ನು ತಲಪಿದರು. ಯೇಸು ಕ್ರಿಸ್ತನು ತನ್ನ ಹಿಂಬಾಲಕರನ್ನು ಅಗಲಿಹೋಗುವಾಗ ಅವರಿಗೆ “ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ” ಮಾಡಲು ಕೊಟ್ಟ ಆಜ್ಞೆಗೆ ಇವರು ವಿಧೇಯರಾದರು.​—⁠ಮತ್ತಾಯ 28:​19, 20.

ಈ ಉದಾಹರಣೆಯಿಂದ, ಯೆಹೋವನ ಆತ್ಮದ ಬೆಂಬಲವು ಬೇಕಾಗಿರುವುದಾದರೆ ಸಾರುವ ಕೆಲಸವನ್ನು ವ್ಯವಸ್ಥಾಪಿತ ರೀತಿಯಲ್ಲಿ ಮಾಡುವುದರ ಪ್ರಮುಖತೆಯನ್ನು ನಾವು ಕಲಿತುಕೊಳ್ಳುತ್ತೇವೆ. ವಿಶೇಷವಾಗಿ ಎಲ್ಲಿ ಯೆಹೋವನ ಸಾಕ್ಷಿಗಳು ಕೊಂಚವೇ ಇದ್ದಾರೊ ಅಂಥ ಕ್ಷೇತ್ರದಲ್ಲಿ ದೇವರ ವಾಕ್ಯಕ್ಕೆ ಗೌರವವನ್ನು ನೀಡುವ ಜನರನ್ನು ಭೇಟಿಯಾಗುವುದರ ಪ್ರಯೋಜನಗಳನ್ನು ಸಹ ನಾವು ನೋಡಬಲ್ಲೆವು. ನಿಮ್ಮ ಸಭೆಗೆ ನೇಮಕವಾಗಿರುವ ಟೆರಿಟೊರಿಯಲ್ಲಿನ ಕೆಲವು ಕ್ಷೇತ್ರಗಳು ಇನ್ನಿತರ ಕ್ಷೇತ್ರಗಳಿಗಿಂತ ಹೆಚ್ಚು ಫಲಪ್ರದವಾಗಿವೆಯೊ? ಇಂಥ ಫಲಪ್ರದ ಕ್ಷೇತ್ರಗಳನ್ನು ಪದೇ ಪದೇ ಆವರಿಸುವುದು ಪ್ರಯೋಜನಕಾರಿಯಾಗಿದೆ. ಅನೌಪಚಾರಿಕ ಸಾಕ್ಷಿನೀಡಲು ಅಥವಾ ಬೀದಿ ಸಾಕ್ಷಿನೀಡಲು ಸೂಕ್ತವಾಗಿರುವ ಯಾವುದೇ ಸಾರ್ವಜನಿಕ ಘಟನೆಗಳು ನಿಮ್ಮ ನೆರೆಹೊರೆಯಲ್ಲಿ ಜರುಗಲಿವೆಯೊ?

ಕೇವಲ ಬೈಬಲನ್ನು ಓದಿ ಆರಂಭದ ಕ್ರೈಸ್ತರ ಬಗ್ಗೆ ತಿಳಿದುಕೊಳ್ಳುವುದಕ್ಕಿಂತ, ತಕ್ಕಮಟ್ಟಿನ ಐತಿಹಾಸಿಕ ಮತ್ತು ಭೂಗೋಳ ಕ್ಷೇತ್ರಕ್ಕೆ ಸಂಬಂಧಿಸಿದ ವಿವರಗಳೊಂದಿಗೆ ಹೆಚ್ಚು ಪರಿಚಿತರಾಗುವುದು ನಮಗೆ ಉಪಯುಕ್ತವಾಗಿದೆ. ನಮ್ಮ ತಿಳಿವಳಿಕೆಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ನಾವು ಉಪಯೋಗಿಸಬಲ್ಲ ಒಂದು ಸಾಧನ ‘ಒಳ್ಳೆಯ ದೇಶವನ್ನು ನೋಡಿ’ ಎಂಬ ಬ್ರೋಷರ್‌ ಆಗಿದೆ. ಇದರಲ್ಲಿ ಅನೇಕ ಭೂಪಟಗಳು ಮತ್ತು ಚಿತ್ರಗಳು ಕೊಡಲ್ಪಟ್ಟಿವೆ.

[ಪಾದಟಿಪ್ಪಣಿಗಳು]

^ ಪ್ಯಾರ. 2 ಸುನ್ನತಿಯ ಕುರಿತು ಪ್ರಥಮ ಶತಮಾನದ ಆಡಳಿತ ಮಂಡಲಿಯು ಚರ್ಚೆ ನಡೆಸಿದ ಅದೇ ಸಮಯದಲ್ಲಿ ಅಥವಾ ಅದಕ್ಕೆ ಸಂಬಂಧಿಸಿ ಈ ಕೂಟವೂ ನಡೆಸಲ್ಪಟ್ಟಿರಬಹುದು.​—⁠ಅ. ಕೃತ್ಯಗಳು 15:​6-29.

^ ಪ್ಯಾರ. 13 ಈ ಲೇಖನದಲ್ಲಿ ಪೌಲನು ಯೆಹೂದ್ಯರಿಗೆ ಸಾಕ್ಷಿನೀಡಿದ ಕುರಿತು ಗಮನವನ್ನು ನೀಡಲಾಗುತ್ತದೆಯೆ ಹೊರತು “ಅನ್ಯಜನರಿಗೆ ಅಪೊಸ್ತಲನಾಗಿ” ಅವನು ಮಾಡಿದ ಚಟುವಟಿಕೆಗಳಿಗೆ ಅಲ್ಲ.​—⁠ರೋಮಾಪುರ 11:13.

[ಪುಟ 14ರಲ್ಲಿರುವ ಚಾರ್ಟು]

ಪ್ಯಾಲಿಸ್ಟೈನ್‌ನ ಹೊರಗಿದ್ದ ಯೆಹೂದ್ಯರಿಗಾಗಿ ಅಪೊಸ್ತಲ ಪೌಲನ ಕಾಳಜಿ

ಸಾ.ಶ. 49ರಲ್ಲಿ ಯೆರೂಸಲೇಮಿನಲ್ಲಿ ಕೂಟವು ನಡೆಯುವುದಕ್ಕಿಂತ ಮುಂಚೆ

ಅ. ಕೃತ್ಯಗಳು 9:​19, 20 ದಮಸ್ಕ​—⁠‘ಸಭಾಮಂದಿರಗಳಲ್ಲಿ ಸಾರುವದಕ್ಕೆ ಪ್ರಾರಂಭಮಾಡಿದನು’

ಅ. ಕೃತ್ಯಗಳು 9:29 ಯೆರೂಸಲೇಮ್‌​—⁠‘ಗ್ರೀಕ್‌ಭಾಷೆಯನ್ನಾಡುವ ಯೆಹೂದ್ಯರ ಸಂಗಡ ಮಾತಾಡಿದನು’

ಅ. ಕೃತ್ಯಗಳು 13:5 ಸಲಮೀಸ್‌, ಕುಪ್ರ​—⁠“ಯೆಹೂದ್ಯರ ಸಭಾಮಂದಿರಗಳಲ್ಲಿ ದೇವರ ವಾಕ್ಯವನ್ನು ಪ್ರಸಿದ್ಧಿಪಡಿಸಿದರು”

ಅ. ಕೃತ್ಯಗಳು 13:14 ಪಿಸಿದ್ಯ ಸೀಮೆಯ ಅಂತಿಯೋಕ್ಯ​—⁠“ಸಭಾಮಂದಿರಕ್ಕೆ ಹೋಗಿ”

ಅ. ಕೃತ್ಯಗಳು 14:1 ಇಕೋನ್ಯ​—⁠‘ಯೆಹೂದ್ಯರ ಸಭಾಮಂದಿರದೊಳಗೆ ಹೋದನು’

ಸಾ.ಶ. 49ರಲ್ಲಿ ಯೆರೂಸಲೇಮಿನಲ್ಲಿ ಕೂಟವು ನಡೆದ ತರುವಾಯ

ಅ. ಕೃತ್ಯಗಳು 16:14 ಫಿಲಿಪ್ಪಿ​—⁠‘ಲುದ್ಯಳೆಂಬ ದೇವಭಕ್ತಳು’

ಅ. ಕೃತ್ಯಗಳು 17:1 ಥೆಸಲೋನಿಕ​—⁠“ಯೆಹೂದ್ಯರದೊಂದು ಸಭಾಮಂದಿರ”

ಅ. ಕೃತ್ಯಗಳು 17:10 ಬೆರೋಯ​—⁠“ಯೆಹೂದ್ಯರ ಸಭಾಮಂದಿರ”

ಅ. ಕೃತ್ಯಗಳು 17:17 ಅಥೇನೆ​—⁠‘ಸಭಾಮಂದಿರದಲ್ಲಿ ಯೆಹೂದ್ಯರ ಸಂಗಡ ವಾದಿಸಿದನು’

ಅ. ಕೃತ್ಯಗಳು 18:4 ಕೊರಿಂಥ​—⁠“ಸಭಾಮಂದಿರದಲ್ಲಿ ಚರ್ಚಿಸಿ”

ಅ. ಕೃತ್ಯಗಳು 18:19 ಎಫೆಸ​—⁠“ಸಭಾಮಂದಿರದೊಳಕ್ಕೆ ಹೋಗಿ ಯೆಹೂದ್ಯರ ಸಂಗಡ ವಾದಿಸಿದನು”

ಅ. ಕೃತ್ಯಗಳು 19:8 ಎಫೆಸ​—⁠“ಸಭಾಮಂದಿರದೊಳಗೆ ಹೋಗಿ ಮೂರು ತಿಂಗಳು . . . ಧೈರ್ಯದಿಂದ ಮಾತಾಡಿದನು”

ಅ. ಕೃತ್ಯಗಳು 28:17 ರೋಮ್‌​—⁠“ಯೆಹೂದ್ಯರಲ್ಲಿ ಪ್ರಮುಖರನ್ನು ತನ್ನ ಬಳಿಗೆ ಕರೆಯಿಸಿದನು”

[ಪುಟ 15ರಲ್ಲಿರುವ ಭೂಪಟ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಸಾ.ಶ. 33ರ ಪಂಚಾಶತ್ತಮದಂದು ಸುವಾರ್ತೆಯನ್ನು ಆಲಿಸಿದ ಜನರು ವಿಸ್ತಾರವಾದ ಕ್ಷೇತ್ರದಿಂದ ಬಂದವರಾಗಿದ್ದರು

ಇಲ್ಲುರಿಕ

ಇಟಲಿ

ರೋಮ್‌

ಮಕೆದೋನ್ಯ

ಗ್ರೀಸ್‌

ಅಥೆನ್ಸ್‌

ಕ್ರೇತ

ಕುರೇನೆ

ಲಿಬ್ಯ

ಬಿಥೂನ್ಯ

ಗಲಾತ್ಯ

ಏಷ್ಯಾ

ಫ್ರುಗ್ಯ

ಪಂಫುಲ್ಯ

ಸೈಪ್ರಸ್‌

ಐಗುಪ್ತ

ಇಥಿಯೋಪಿಯ

ಪೊಂತ

ಕಪ್ಪದೋಕ್ಯ

ಕಿಲಿಕ್ಯ

ಮೆಸೊಪೊತಾಮ್ಯ

ಸಿರಿಯ

ಸಮಾರ್ಯ

ಯೆರೂಸಲೇಮ್‌

ಯೂದಾಯ

ಮೇದ್ಯ

ಬಾಬೆಲ್‌

ಏಲಾಮ್‌

ಅರೇಬಿಯ

ಪಾರ್ಥಿಯ

[ಜಲಾಶಯಗಳು]

ಮೆಡಿಟರೇನಿಯನ್‌ ಸಮುದ್ರ

ಕಪ್ಪು ಸಮುದ್ರ

ಕೆಂಪು ಸಮುದ್ರ

ಪರ್ಷಿಯನ್‌ ಖಾರಿ