ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಲಭ್ಯವಿರುವ ಅತ್ಯುತ್ತಮ ಶಿಕ್ಷಣದಿಂದ ಪ್ರಯೋಜನವನ್ನು ಪಡೆದುಕೊಳ್ಳಿರಿ!

ಲಭ್ಯವಿರುವ ಅತ್ಯುತ್ತಮ ಶಿಕ್ಷಣದಿಂದ ಪ್ರಯೋಜನವನ್ನು ಪಡೆದುಕೊಳ್ಳಿರಿ!

ಲಭ್ಯವಿರುವ ಅತ್ಯುತ್ತಮ ಶಿಕ್ಷಣದಿಂದ ಪ್ರಯೋಜನವನ್ನು ಪಡೆದುಕೊಳ್ಳಿರಿ!

ಮಾನವರನ್ನು ಸೇರಿಸಿ ಎಲ್ಲವನ್ನೂ ಸೃಷ್ಟಿಸಿದವನು ಯೆಹೋವ ದೇವರಾಗಿದ್ದಾನೆ ಎಂದು ಬೈಬಲ್‌ ಹೇಳುತ್ತದೆ. (ಆದಿಕಾಂಡ 1:27; ಪ್ರಕಟನೆ 4:11) ಮಹಾನ್‌ ಉಪದೇಶಕನಾದ ಆತನು ಮೊದಲ ಮಾನವ ದಂಪತಿಯಾದ ಆದಾಮಹವ್ವರಿಗೆ ಶಿಕ್ಷಣವನ್ನು ನೀಡಿ, ಸುಂದರವಾದ ಏದೆನ್‌ ತೋಟದಲ್ಲಿ ಜೀವನವನ್ನು ನಡೆಸಲು ಅವರನ್ನು ಸಿದ್ಧಗೊಳಿಸಿದನು. ಅವರಿಗೆ ಸದಾ ಶಿಕ್ಷಣವನ್ನು ನೀಡುತ್ತಾ ನಿತ್ಯನಿರಂತರಕ್ಕೂ ಅವರ ಕಾಳಜಿವಹಿಸುವುದು ಆತನ ಉದ್ದೇಶವಾಗಿತ್ತು. (ಆದಿಕಾಂಡ 1:​28, 29; 2:​15-17; ಯೆಶಾಯ 30:​20, 21) ಅವರಿಗಿದ್ದ ಆ ಪ್ರತೀಕ್ಷೆಯ ಕುರಿತು ತುಸು ಯೋಚಿಸಿರಿ!

ಆದರೆ ದುಃಖಕರವಾಗಿ ಆ ಮೊದಲ ಜೋಡಿ ತಮ್ಮ ಪ್ರತೀಕ್ಷೆಯನ್ನು ತೊರೆದುಬಿಟ್ಟಿತು. ಅವರ ಅವಿಧೇಯತೆಯು, ಇಡೀ ಮಾನವಕುಲದ ನೈತಿಕ ಮತ್ತು ಶಾರೀರಿಕ ಅವನತಿಗೆ ದಾರಿಮಾಡಿಕೊಟ್ಟಿತು. (ಆದಿಕಾಂಡ 3:​17-19; ರೋಮಾಪುರ 5:12) ಮಾನವರು ಸೃಷ್ಟಿಸಲ್ಪಟ್ಟು ಕೆಲವೇ ಸಂತತಿಗಳು ದಾಟಿದ ನಂತರ ಜೀವಿಸಿದ ಜನರನ್ನು ಸೂಚಿಸುತ್ತಾ ಬೈಬಲ್‌ ಹೇಳುವುದು: ‘ಮನುಷ್ಯರ ಕೆಟ್ಟತನವು ಭೂಮಿಯ ಮೇಲೆ ಹೆಚ್ಚಾಗಿರುವದನ್ನೂ ಅವರು ಹೃದಯದಲ್ಲಿ ಯೋಚಿಸುವದೆಲ್ಲವು ಯಾವಾಗಲೂ ಬರೀ ಕೆಟ್ಟದ್ದಾಗಿರುವದನ್ನೂ ಯೆಹೋವನು ನೋಡಿದನು.’​—⁠ಆದಿಕಾಂಡ 6:⁠5.

ಮನುಷ್ಯನು ಯಾವಾಗಲೂ ಬರೀ ಕೆಟ್ಟದ್ದನ್ನೇ ಯೋಚಿಸುತ್ತಾನೆ ಎಂದು ಯೆಹೋವನು ಹೇಳಿ 4,500 ವರುಷಗಳು ದಾಟಿವೆ ಮತ್ತು ಈಗ ಮಾನವಕುಲದ ಪರಿಸ್ಥಿತಿಯು ಇನ್ನಷ್ಟು ಹದಗೆಟ್ಟಿದೆ. ಅನೇಕರು ಯಾವುದೇ ಅಂಜಿಕೆಯಿಲ್ಲದೆ ಸುಳ್ಳು ಹೇಳುತ್ತಾರೆ, ಕದಿಯುತ್ತಾರೆ ಇಲ್ಲವೆ ಇತರರ ಮೇಲೆ ಆಕ್ರಮಣಮಾಡುತ್ತಾರೆ. ಸಮಸ್ಯೆಗಳು ಪ್ರತಿದಿನ ಹೆಚ್ಚಾಗುತ್ತಾ ಇವೆ ಮತ್ತು ಜೊತೆ ಮಾನವರ ಕಡೆಗಿನ ಹಿತಚಿಂತನೆಯು ಕಡಿಮೆಯಾಗುತ್ತಾ ಇದೆ. ಕುಟುಂಬ ಸದಸ್ಯರ ಮಧ್ಯೆ ಇರುವ ಸಂಬಂಧವನ್ನು ಸೇರಿಸಿ ಹೆಚ್ಚಿನ ವೈಯಕ್ತಿಕ ಸಂಬಂಧಗಳು ನಿಜವಾಗಿಯು ಬಿಕ್ಕಟ್ಟಿನಲ್ಲಿಲ್ಲವೆ? ಹಾಗಿದ್ದರೂ ಸದ್ಯದ ಈ ಪರಿಸ್ಥಿತಿಗೆ ದೇವರು ಕಾರಣನಲ್ಲ. ಅಥವಾ ಆತನಿಗೆ ಇಂದಿನ ಸಮಸ್ಯೆಗಳ ಬಗ್ಗೆ ಈಗ ಯಾವುದೇ ಚಿಂತೆಯಿಲ್ಲ ಎಂಬುದೂ ಇದರ ಅರ್ಥವಾಗಿರುವುದಿಲ್ಲ. ಯೆಹೋವನು ಮಾನವರ ಹಿತಕ್ಷೇಮದ ಬಗ್ಗೆ ಯಾವಾಗಲೂ ಆಸಕ್ತನಾಗಿದ್ದಾನೆ. ಸಂತೋಷಕರ ಜೀವನವನ್ನು ಗಳಿಸಲು ಮಾರ್ಗದರ್ಶನಕ್ಕಾಗಿ ಆತನ ಕಡೆಗೆ ನೋಡುವ ಜನರಿಗೆ ಆತನು ಶಿಕ್ಷಣವನ್ನು ನೀಡಲು ಸದಾ ಸಿದ್ಧನಿದ್ದಾನೆ. ಸುಮಾರು 2,000 ವರುಷಗಳ ಹಿಂದೆ ಆತನು ತನ್ನ ಮಗನಾದ ಯೇಸು ಕ್ರಿಸ್ತನನ್ನು ಈ ಭೂಮಿಗೆ ಕಳುಹಿಸಿಕೊಟ್ಟನು ಮತ್ತು ಈ ರೀತಿಯಲ್ಲಿ, ಯಾರಿಗೆ ತಮ್ಮ ಜೀವನವನ್ನು ಯಶಸ್ಸುಗೊಳಿಸಲು ಮನಸ್ಸಿದೆಯೊ ಅಂಥ ಜನರಿಗೆ ಶಿಕ್ಷಣವನ್ನು ನೀಡುವ ಆತನ ಇಚ್ಛೆಯನ್ನು ವ್ಯಕ್ತಪಡಿಸಿದನು. ಪರಿಪೂರ್ಣ ಶಿಕ್ಷಣದ ಒಂದು ಮಾದರಿಯನ್ನು ಯೇಸು ತೋರಿಸಿ ಹೋದನು, ಏಕೆಂದರೆ ಅವನು ಅಸಂಖ್ಯಾತ ವರುಷಗಳ ಕಾಲ ಮಹಾನ್‌ ಉಪದೇಶಕನಿಂದ ಕಲಿಸಲ್ಪಟ್ಟಿದ್ದನು.

ಸತ್ಯ ಕ್ರೈಸ್ತತ್ವ​—⁠ಒಂದು ಶಿಕ್ಷಣ

ಸತ್ಯ ಕ್ರೈಸ್ತತ್ವವು ಪ್ರೀತಿಯ ಮೇಲಾಧಾರಿತವಾದ ಜೀವನಮಾರ್ಗವಾಗಿದೆ ಮತ್ತು ಅದನ್ನು ಯೇಸು ಕ್ರಿಸ್ತನು ಆರಂಭಿಸಿದನು. ಸತ್ಯ ಕ್ರೈಸ್ತತ್ವದಲ್ಲಿ, ಎಲ್ಲ ಆಲೋಚನೆಗಳು ಮತ್ತು ಕೃತ್ಯಗಳು ದೇವರ ಚಿತ್ತಕ್ಕೆ ಹೊಂದಿಕೆಯಲ್ಲಿರಬೇಕು ಮತ್ತು ಇದು ದೇವರ ನಾಮವನ್ನು ಗೌರವಿಸುವ ಹಾಗೂ ಘನಪಡಿಸುವ ಉದ್ದೇಶಕ್ಕಾಗಿದೆ. (ಮತ್ತಾಯ 22:​37-39; ಇಬ್ರಿಯ 10:⁠7) ಈ ಜೀವನಮಾರ್ಗದ ಕುರಿತಾದ ಯೇಸುವಿನ ಬೋಧನೆಗಳ ಹಿಂದೆ ಅವನ ತಂದೆಯಾದ ಯೆಹೋವನಿದ್ದನು. ದೇವರಿಂದ ಯೇಸುವಿಗೆ ದೊರೆತ ಬೆಂಬಲದ ಕುರಿತು ನಾವು ಯೋಹಾನ 8:29ರಲ್ಲಿ ಓದುತ್ತೇವೆ: “ನನ್ನನ್ನು ಕಳುಹಿಸಿಕೊಟ್ಟಾತನು ನನ್ನ ಸಂಗಡ ಇದ್ದಾನೆ, ನಾನು ಆತನಿಗೆ ಮೆಚ್ಚಿಕೆಯಾದದ್ದನ್ನು ಯಾವಾಗಲೂ ಮಾಡುವದರಿಂದ ಆತನು ನನ್ನನ್ನು ಒಂಟಿಗನಾಗಿ ಬಿಡಲಿಲ್ಲ.” ಹೌದು, ಯೇಸುವಿಗೆ ಅವನ ಶುಶ್ರೂಷೆಯಾದ್ಯಂತ ತಂದೆಯ ಬೆಂಬಲ ಮತ್ತು ಮಾರ್ಗದರ್ಶನವಿತ್ತು. ಯೇಸುವಿನ ಆರಂಭದ ಹಿಂಬಾಲಕರು ಜೀವನದ ಪಂಥಾಹ್ವಾನಗಳನ್ನು ಯಾವುದೇ ಮಾರ್ಗದರ್ಶನವಿಲ್ಲದೆ ಎದುರಿಸುವ ಅಗತ್ಯವಿರಲಿಲ್ಲ. ಯೆಹೋವನು ತನ್ನ ಮಗನ ಮೂಲಕ ಅವರಿಗೆ ಬೇಕಾದ ಶಿಕ್ಷಣವನ್ನು ನೀಡಿದನು. ಯೇಸುವಿನ ಬೋಧನೆಗಳನ್ನು ಮತ್ತು ಮಾದರಿಯನ್ನು ಅನುಸರಿಸುವುದು ಅವರನ್ನು ಉತ್ತಮ ಜನರನ್ನಾಗಿ ಮಾಡಿತು. ಇಂದಿರುವ ಅವನ ಶಿಷ್ಯರ ಕುರಿತಾಗಿಯೂ ಇದು ಸತ್ಯವಾಗಿದೆ.​—⁠“ಯೇಸು ಮತ್ತು ಅವನ ಬೋಧನೆಗಳ ಪ್ರಭಾವ” ಎಂಬ 6ನೇ ಪುಟದಲ್ಲಿರುವ ಚೌಕವನ್ನು ನೋಡಿ.

ಸತ್ಯ ಕ್ರೈಸ್ತತ್ವದ ಒಂದು ಎದ್ದುಕಾಣುವ ಅಂಶವೇನೆಂದರೆ, ಅದರಲ್ಲಿ ಜನರ ಮನಸ್ಸು ಮತ್ತು ಹೃದಯವನ್ನು ಪ್ರಭಾವಿಸಿ ಆಂತರ್ಯದಿಂದ ಅವರನ್ನು ಪರಿವರ್ತಿಸುವ ಶಿಕ್ಷಣವು ಒಳಗೂಡಿದೆ. (ಎಫೆಸ 4:​23, 24) ಒಂದು ಉದಾಹರಣೆಯನ್ನು ತಿಳಿಸುವುದಾದರೆ, ಒಬ್ಬನು ತನ್ನ ಸಂಗಾತಿಗೆ ನಂಬಿಗಸ್ತನಾಗಿರುವ ವಿಷಯದಲ್ಲಿ ಯೇಸು ಏನನ್ನು ಕಲಿಸಿದನೆಂಬುದನ್ನು ಪರಿಗಣಿಸಿರಿ: “ವ್ಯಭಿಚಾರ ಮಾಡಬಾರದೆಂದು ಹೇಳಿಯದೆ ಎಂಬದಾಗಿ ನೀವು ಕೇಳಿದ್ದೀರಷ್ಟೆ. ಆದರೆ ನಾನು ನಿಮಗೆ ಹೇಳುವದೇನಂದರೆ​—⁠ಪರಸ್ತ್ರೀಯನ್ನು ನೋಡಿ ಮೋಹಿಸುವ ಪ್ರತಿ ಮನುಷ್ಯನು ಆಗಲೇ ತನ್ನ ಮನಸ್ಸಿನಲ್ಲಿ ಆಕೆಯ ಕೂಡ ವ್ಯಭಿಚಾರ ಮಾಡಿದವನಾದನು.” (ಮತ್ತಾಯ 5:​27, 28) ಈ ಮಾತುಗಳಲ್ಲಿ, ಹೃದಯವನ್ನು ಶುದ್ಧವಾಗಿಡಬೇಕು ಮತ್ತು ಅಹಿತಕರವಾದ ಆಲೋಚನೆಗಳು ಹಾಗೂ ಇಚ್ಛೆಗಳು​—⁠ಅವುಗಳನ್ನು ಇನ್ನೂ ಕಾರ್ಯರೂಪಕ್ಕೆ ಹಾಕಿರದಿದ್ದರೂ​—⁠ಗಂಭೀರವಾದ ಪರಿಣಾಮಗಳನ್ನು ಉಂಟುಮಾಡಬಹುದು ಎಂಬುದನ್ನು ಯೇಸು ತನ್ನ ಶಿಷ್ಯರಿಗೆ ಕಲಿಸುತ್ತಿದ್ದನು. ಕೆಟ್ಟ ಆಲೋಚನೆಗಳು, ದೇವರಿಗೆ ಕೋಪವನ್ನೆಬ್ಬಿಸುವ ಮತ್ತು ಇತರರಿಗೆ ಹಾನಿಯನ್ನುಂಟುಮಾಡುವ ಕೃತ್ಯಗಳಿಗೆ ನಡೆಸಬಲ್ಲವು ಎಂಬುದನ್ನು ನೀವು ಒಪ್ಪುವುದಿಲ್ಲವೊ?

ಆದುದರಿಂದಲೇ ಬೈಬಲ್‌ ಈ ಸಲಹೆಯನ್ನು ನೀಡುತ್ತದೆ: “ಇಹಲೋಕದ ನಡವಳಿಕೆಯನ್ನು ಅನುಸರಿಸದೆ ನೂತನಮನಸ್ಸನ್ನು ಹೊಂದಿಕೊಂಡು ಪರಲೋಕಭಾವದವರಾಗಿರಿ. ಹೀಗಾದರೆ ದೇವರ ಚಿತ್ತಕ್ಕನುಸಾರವಾದದ್ದು ಅಂದರೆ ಉತ್ತಮವಾದದ್ದೂ ಮೆಚ್ಚಿಕೆಯಾದದ್ದೂ ದೋಷವಿಲ್ಲದ್ದೂ ಯಾವ ಯಾವದೆಂದು ವಿವೇಚಿಸಿ ತಿಳುಕೊಳ್ಳುವಿರಿ.” (ರೋಮಾಪುರ 12:⁠2) ‘ಶಿಕ್ಷಣದ ಮೂಲಕ ನೂತನಮನಸ್ಸನ್ನು ಹೊಂದಿಕೊಳ್ಳಲು ನಿಜವಾಗಿಯೂ ಸಾಧ್ಯವಿದೆಯೊ?’ ಎಂದು ನೀವು ಕೇಳಬಹುದು. ನೂತನಮನಸ್ಸನ್ನು ಹೊಂದಿಕೊಳ್ಳುವುದೆಂದರೆ, ದೇವರ ವಾಕ್ಯದಲ್ಲಿ ಕೊಡಲ್ಪಟ್ಟಿರುವ ಮೂಲತತ್ತ್ವಗಳು ಮತ್ತು ಸಲಹೆಗಳಿಂದ ಮನಸ್ಸನ್ನು ತುಂಬಿಸಿ ಅದನ್ನು ಭಿನ್ನವಾದ ದಿಕ್ಕಿನತ್ತ ಪ್ರೇರೇಪಿಸುವುದು ಸೇರಿದೆ. ದೇವರು ತನ್ನ ವಾಕ್ಯದ ಮೂಲಕ ನೀಡುವ ಶಿಕ್ಷಣವನ್ನು ಸ್ವೀಕರಿಸುವ ಮೂಲಕ ಇದನ್ನು ಸಾಧಿಸಸಾಧ್ಯವಿದೆ.

ತಮ್ಮನ್ನು ಬದಲಾಯಿಸಿಕೊಳ್ಳಲು ಪ್ರಚೋದಿತರು

“ದೇವರ ವಾಕ್ಯವು ಸಜೀವವಾದದ್ದು, ಕಾರ್ಯಸಾಧಕವಾದದ್ದು.” (ಇಬ್ರಿಯ 4:12) ಅದು ಈಗಲೂ ವ್ಯಕ್ತಿಗಳ ಮೇಲೆ ಶಕ್ತಿಯುತ ಪ್ರಭಾವವನ್ನು ಬೀರುತ್ತಿದೆ. ಈ ರೀತಿಯಲ್ಲಿ ಅದು ಎಂದಿಗೂ ಹಳತಾಗುವುದಿಲ್ಲ ಎಂಬುದನ್ನು ರುಜುಪಡಿಸುತ್ತಿದೆ. ಒಬ್ಬ ವ್ಯಕ್ತಿಯು ತನ್ನ ಮಾರ್ಗವನ್ನು ಬದಲಾಯಿಸುವಂತೆ, ಸತ್ಯ ಕ್ರೈಸ್ತತ್ವವನ್ನು ತನ್ನದಾಗಿಸಿಕೊಳ್ಳುವಂತೆ ಮತ್ತು ಉತ್ತಮ ವ್ಯಕ್ತಿಯಾಗುವಂತೆ ಬೈಬಲ್‌ ಪ್ರಚೋದನೆ ನೀಡಬಲ್ಲದು. ಬೈಬಲ್‌ ಶಿಕ್ಷಣದ ಮೌಲ್ಯವನ್ನು ಈ ಕೆಳಗಿನ ಉದಾಹರಣೆಗಳು ದೃಷ್ಟಾಂತಿಸುತ್ತವೆ.

ಹಿಂದಿನ ಲೇಖನದಲ್ಲಿ ತಿಳಿಸಲಾಗಿದ್ದ ಏಮೀಲ್ಯಾ ಹೇಳುವುದು: “ಕೇವಲ ನನ್ನ ಪ್ರಯತ್ನದಿಂದ ನನ್ನ ಮನೆಯ ಪರಿಸ್ಥಿತಿಯನ್ನು ಸರಿಪಡಿಸಲು ಸಾಧ್ಯವಿರಲಿಲ್ಲ. ಯೆಹೋವನ ಸಾಕ್ಷಿಗಳೊಂದಿಗೆ ನಾನು ಬೈಬಲನ್ನು ಅಧ್ಯಯನಮಾಡಲು ಆರಂಭಿಸಿದಾಗ, ನನ್ನ ಮನೆಯ ಪರಿಸ್ಥಿತಿಯು ಸರಿಯಾಗಸಾಧ್ಯವಿದೆ ಎಂಬುದನ್ನು ನಾನು ಕಂಡುಕೊಂಡೆ ಮತ್ತು ನನ್ನ ಮನೋಭಾವವನ್ನು ಬದಲಾಯಿಸಲು ಆರಂಭಿಸಿದೆ. ನಾನು ಹೆಚ್ಚು ತಾಳ್ಮೆಯಿಂದಿರಲು ಮತ್ತು ಕೋಪೋದ್ರೇಕಗೊಳ್ಳದಿರಲು ಕಲಿತುಕೊಂಡೆ. ಕ್ರಮೇಣ ನನ್ನ ಗಂಡ ನನ್ನೊಂದಿಗೆ ಅಧ್ಯಯನದಲ್ಲಿ ಜೊತೆಗೂಡಲು ಆರಂಭಿಸಿದರು. ಕುಡಿಯುವುದನ್ನು ನಿಲ್ಲಿಸುವುದು ಅವರಿಗೆ ಅಷ್ಟು ಸುಲಭವಾಗಿರಲಿಲ್ಲ, ಆದರೆ ಅವರು ನಿಲ್ಲಿಸಶಕ್ತರಾದರು. ಇದು ನಮ್ಮ ವೈವಾಹಿಕ ಜೀವನಕ್ಕೆ ಹೊಸ ಆರಂಭವನ್ನು ನೀಡಿತು. ಈಗ ನಾವು ಸಂತೋಷಭರಿತ ಕ್ರೈಸ್ತರಾಗಿದ್ದೇವೆ ಮತ್ತು ಬೈಬಲಿನ ಉತ್ತಮ ಮೂಲತತ್ತ್ವಗಳನ್ನು ನಮ್ಮ ಮಕ್ಕಳ ಮನಸ್ಸಿನಲ್ಲಿ ಬೇರೂರಿಸುತ್ತಿದ್ದೇವೆ.”​—⁠ಧರ್ಮೋಪದೇಶಕಾಂಡ 6:⁠7.

ಸತ್ಯ ಕ್ರೈಸ್ತತ್ವ ಒದಗಿಸುವ ಶಿಕ್ಷಣವು ಒಬ್ಬ ವ್ಯಕ್ತಿಯನ್ನು ದುಶ್ಚಟಗಳು ಮತ್ತು ಅನೈತಿಕ ಜೀವನರೀತಿಯಿಂದ ಬಿಡಿಸಬಲ್ಲದು. ಇದು ಸತ್ಯ ಎಂಬುದನ್ನು ಮ್ಯಾನ್ವೆಲ್‌ * ಕಂಡುಕೊಂಡನು. ಅವನು 13 ವರುಷದವನಾಗಿದ್ದಾಗ ಮನೆಬಿಟ್ಟು ಹೋಗಿದ್ದನು ಮತ್ತು ಮಾರಿವಾನವನ್ನು ಉಪಯೋಗಿಸಲು ಆರಂಭಿಸಿದ್ದನು. ಸಮಯಾನಂತರ ಅವನು ಹೆರೋಯಿನ್‌ ವ್ಯಸನಿಯಾದನು. ಆಶ್ರಯ ಮತ್ತು ಹಣವನ್ನು ಪಡೆಯಲಿಕ್ಕಾಗಿ ಸ್ತ್ರೀಪುರುಷರೊಂದಿಗೆ ಅವನು ಲೈಂಗಿಕ ಸಂಭೋಗದಲ್ಲಿ ಒಳಗೂಡಿದನು. ಕೆಲವೊಮ್ಮೆ ಅವನು ತನ್ನ ಹೊಟ್ಟೆಪಾಡಿಗಾಗಿ ಜನರ ಸುಲಿಗೆಯನ್ನೂ ಮಾಡಿದನು. ಅವನು ಹೆಚ್ಚುಕಡಿಮೆ ಯಾವಾಗಲೂ ಅಮಲೌಷಧದ ನಶೆಯಲ್ಲೇ ಇರುತ್ತಿದ್ದನು. ಹಿಂಸಾತ್ಮಕ ನಡತೆಯ ಕಾರಣ ಅನೇಕವೇಳೆ ಅವನು ಸೆರೆಮನೆಗೆ ಹಾಕಲ್ಪಡುತ್ತಿದ್ದನು. ಒಮ್ಮೆ ಅವನು ನಾಲ್ಕು ವರುಷ ಸೆರೆಮನೆಯಲ್ಲಿ ಕಳೆದನು. ಅಲ್ಲಿರುವಾಗ ಅವನು ಶಸ್ತ್ರಾಸ್ತ್ರಗಳ ಮಾರಾಟದಲ್ಲಿ ಒಳಗೂಡಿದನು. ಅವನು ವಿವಾಹವಾದ ನಂತರ ತನ್ನ ಕೃತ್ಯಗಳ ಫಲಗಳನ್ನು ಕೊಯ್ಯುತ್ತಾ ಮುಂದುವರಿಯಬೇಕಾಯಿತು. ಅವನು ತಿಳಿಸುವುದು: “ಕೊನೆಗೆ ನಾವು ಕೋಳಿಗಳನ್ನು ಸಾಕಲಾಗುತ್ತಿದ್ದ ಒಂದು ಸ್ಥಳದಲ್ಲಿ ವಾಸಿಸಬೇಕಾಯಿತು. ನನ್ನ ಹೆಂಡತಿ ಇಟ್ಟಿಗೆಗಳನ್ನಿಟ್ಟು ಅದರ ಮೇಲೆ ಅಡಿಗೆ ಮಾಡುತ್ತಿದ್ದದ್ದು ಇನ್ನೂ ನನಗೆ ನೆನಪಾಗುತ್ತದೆ. ನಮ್ಮ ಪರಿಸ್ಥಿತಿಯು ಎಷ್ಟು ಅಭದ್ರವಾಗಿತ್ತೆಂದರೆ ನನ್ನ ಸ್ವಂತ ಕುಟುಂಬದವರೇ ನನ್ನ ಹೆಂಡತಿಗೆ ನನ್ನನ್ನು ಬಿಟ್ಟುಹೋಗುವಂತೆ ಉತ್ತೇಜಿಸಿದರು.”

ಅವನ ಜೀವನವನ್ನು ಯಾವುದು ಬದಲಾಯಿಸಿತು? ಮ್ಯಾನ್ವೆಲ್‌ ಉತ್ತರಿಸುವುದು: “ಒಮ್ಮೆ ಒಬ್ಬ ಪರಿಚಯಸ್ಥನು ನಮ್ಮ ಮನೆಗೆ ಬಂದು ಬೈಬಲಿನ ಕುರಿತು ಮಾತಾಡಿದನು. ನಾನು ಅವನ ಭೇಟಿಗಳಿಗೆ ಅನುಮೋದಿಸಿದೆ. ಜನರಲ್ಲಿ ಆಸಕ್ತಿಯಿರುವ ಒಬ್ಬ ದೇವರು ಅಸ್ತಿತ್ವದಲ್ಲಿಲ್ಲ ಎಂಬುದನ್ನು ಅವನಿಗೆ ತೋರಿಸುವುದೇ ನನ್ನ ಉದ್ದೇಶವಾಗಿತ್ತು. ನಾನು ಹೇಳುತ್ತಿರುವ ವಿಷಯಕ್ಕೆ ನಾನೇ ಜೀವಂತ ಪುರಾವೆ ಎಂದು ನಾನು ಪರಿಗಣಿಸಿದೆ. ಆದರೂ, ಆ ಸಾಕ್ಷಿಯ ತಾಳ್ಮೆ ಮತ್ತು ವಿನಯತೆಯು ನನ್ನನ್ನು ಆಶ್ಚರ್ಯಗೊಳಿಸಿತು. ಆದುದರಿಂದ ರಾಜ್ಯ ಸಭಾಗೃಹದಲ್ಲಿನ ಕೂಟಗಳಿಗೆ ಹಾಜರಾಗಲು ನಾನು ಒಪ್ಪಿಕೊಂಡೆ. ಅಲ್ಲಿದ್ದ ಕೆಲವರಿಗೆ ನನ್ನ ಹಿನ್ನೆಲೆ ತಿಳಿದಿದ್ದರೂ, ಅವರು ನನ್ನನ್ನು ಸ್ನೇಹಭಾವದಿಂದ ವಂದಿಸಿದರು. ನಾನೂ ಅವರಲ್ಲಿ ಒಬ್ಬನೆಂಬಂತೆ ಅವರು ಉಪಚರಿಸಿದರು. ಇದು ನನಗೆ ಬಹಳ ಸಾಂತ್ವನವನ್ನು ನೀಡಿತು. ನನ್ನನ್ನು ಅದು ಎಷ್ಟೊಂದು ಪ್ರಭಾವಿಸಿತೆಂದರೆ, ಅಮಲೌಷಧಗಳೊಂದಿಗೆ ಯಾವುದೇ ಸಂಬಂಧವನ್ನು ಇಟ್ಟುಕೊಳ್ಳದೆ, ಒಂದು ಪ್ರಾಮಾಣಿಕ ಕೆಲಸವನ್ನು ಆರಂಭಿಸಲು ನಾನು ನಿರ್ಧರಿಸಿದೆ. ನನ್ನ ಬೈಬಲ್‌ ಅಧ್ಯಯನವನ್ನು ಆರಂಭಿಸಿ ನಾಲ್ಕು ತಿಂಗಳುಗಳ ಅನಂತರ ನಾನು ಸಾರುವ ಕೆಲಸದಲ್ಲಿ ಭಾಗವಹಿಸಲು ಅರ್ಹನಾದೆ ಮತ್ತು ತದನಂತರ ನಾಲ್ಕು ತಿಂಗಳುಗಳಲ್ಲಿ ನಾನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಿ ದೀಕ್ಷಾಸ್ನಾನವನ್ನು ಪಡೆದುಕೊಂಡೆ.”

ಸತ್ಯ ಕ್ರೈಸ್ತತ್ವವು ಮ್ಯಾನ್ವೆಲ್‌ ಮತ್ತು ಅವನ ಕುಟುಂಬಕ್ಕೆ ಯಾವ ಅರ್ಥದಲ್ಲಿತ್ತು? “ಬೈಬಲ್‌ ಶಿಕ್ಷಣವು ಸಿಗದಿರುತ್ತಿದ್ದರೆ ಕೆಲವು ವರುಷಗಳ ಹಿಂದೆಯೇ ನಾನು ಸತ್ತಿರುತ್ತಿದ್ದೆ. ಯೇಸು ಕಲಿಸಿದ ಜೀವನಮಾರ್ಗದಿಂದಾಗಿ ನನ್ನ ಕುಟುಂಬವು ನನಗೆ ಪುನಃ ಸಿಕ್ಕಿತು. ನಾನು ಯುವಕನಾಗಿದ್ದಾಗ ಏನನ್ನು ಅನುಭವಿಸಿದೆನೊ ಅದನ್ನು ನನ್ನ ಇಬ್ಬರು ಮಕ್ಕಳು ಅನುಭವಿಸಬೇಕಾಗಿಲ್ಲ. ನನ್ನ ಹೆಂಡತಿಯೊಂದಿಗೆ ಈಗ ನನಗಿರುವ ಒಳ್ಳೇ ಸಂಬಂಧಕ್ಕಾಗಿ ನಾನು ಹೆಮ್ಮೆಪಡುತ್ತೇನೆ ಮತ್ತು ಯೆಹೋವನಿಗೆ ಆಭಾರಿಯಾಗಿದ್ದೇನೆ. ನಾನು ಈಗ ಆರಿಸಿಕೊಂಡಿರುವ ಮಾರ್ಗಕ್ಕಾಗಿ ನನ್ನ ಪೂರ್ವ ಸ್ನೇಹಿತರಲ್ಲಿ ಕೆಲವರು ನನ್ನನ್ನು ಅಭಿನಂದಿಸಿದ್ದಾರೆ ಮತ್ತು ನಾನೀಗ ನಡೆಯುತ್ತಿರುವ ಮಾರ್ಗವು ಅತ್ಯುತ್ತಮವಾದದ್ದು ಎಂದು ಅವರು ನೆನಸುತ್ತಾರೆಂದು ಹೇಳಿದ್ದಾರೆ.”

ಕ್ರೈಸ್ತ ಜೀವನರೀತಿಯಲ್ಲಿ ನೈತಿಕ ಶುದ್ಧತೆಯೊಂದಿಗೆ ಶಾರೀರಿಕ ಶುದ್ಧತೆಯೂ ಸೇರಿಕೊಂಡಿದೆ. ದಕ್ಷಿಣ ಆಫ್ರಿಕದಲ್ಲಿರುವ ಒಂದು ಬಡ ಕ್ಷೇತ್ರದಲ್ಲಿ ವಾಸಿಸುತ್ತಿರುವ ಜಾನ್‌ ಇದನ್ನು ಅರ್ಥಮಾಡಿಕೊಂಡನು. ಅವನು ವಿವರಿಸುವುದು: “ನಮ್ಮ ಮಗಳು ಕೆಲವೊಮ್ಮೆ ಒಂದು ವಾರ ಸ್ನಾನಮಾಡುತ್ತಿರಲಿಲ್ಲ ಮತ್ತು ನಮಗೆ ಇದೊಂದು ದೊಡ್ಡ ವಿಷಯವಾಗಿರಲಿಲ್ಲ.” ತಮ್ಮ ಮನೆಯು ಸಹ ತೀರ ಕೊಳಕಾಗಿರುತ್ತಿತ್ತು ಎಂದು ಅವನ ಹೆಂಡತಿಯು ಒಪ್ಪಿಕೊಳ್ಳುತ್ತಾಳೆ. ಆದರೆ ಕ್ರೈಸ್ತ ಶಿಕ್ಷಣದಿಂದಾಗಿ ವಿಷಯಗಳು ಬದಲಾದವು. ಕಾರು ಕಳ್ಳರ ಗುಂಪಿನೊಂದಿಗೆ ಸಹವಾಸಿಸುವುದನ್ನು ಜಾನ್‌ ನಿಲ್ಲಿಸಿದನು ಮತ್ತು ತನ್ನ ಕುಟುಂಬಕ್ಕೆ ಹೆಚ್ಚಿನ ಗಮನವನ್ನು ಕೊಡಲು ಆರಂಭಿಸಿದನು. “ಕ್ರೈಸ್ತರಾಗಿ ನಾವು ನಮ್ಮ ದೇಹ ಮತ್ತು ಬಟ್ಟೆಬರೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂಬುದನ್ನು ನಾವು ಕಲಿತುಕೊಂಡೆವು. ಯೆಹೋವ ದೇವರು ಪರಿಶುದ್ಧನಾಗಿರುವದರಿಂದ ನಾವೂ ಪರಿಶುದ್ಧರಾಗಿರಬೇಕು ಎಂದು ಉತ್ತೇಜಿಸುವ 1 ಪೇತ್ರ 1:16ರಲ್ಲಿರುವ ಮಾತುಗಳು ನನಗೆ ಬಹಳ ಪ್ರಿಯವಾದವುಗಳು. ಈಗ ನಾವು ನಮ್ಮ ಸರಳವಾದ ಮನೆಯನ್ನು ಚೊಕ್ಕಟವಾಗಿಡಲು ಸಹ ಪ್ರಯತ್ನಿಸುತ್ತಿದ್ದೇವೆ.”

ನೀವು ಅತ್ಯುತ್ತಮ ಶಿಕ್ಷಣವನ್ನು ಕಂಡುಕೊಳ್ಳಬಲ್ಲಿರಿ

ಮೇಲೆ ತಿಳಿಸಿರುವಂಥ ರೀತಿಯ ಅನುಭವಗಳು ಇನ್ನೂ ಅನೇಕ ಇವೆ. ಬೈಬಲಿನ ಮೇಲಾಧಾರಿತವಾದ ಶಿಕ್ಷಣದಿಂದಾಗಿ ಸಾವಿರಾರು ಜನರು ಹೆಚ್ಚು ಉತ್ತಮ ರೀತಿಯ ಜೀವನವನ್ನು ನಡೆಸಲು ಕಲಿತಿದ್ದಾರೆ. ಪ್ರಾಮಾಣಿಕರೂ ಶ್ರಮಶೀಲರೂ ಆಗಿರುವ ಕಾರಣ ಅವರನ್ನು ಅವರ ಧಣಿಗಳು ಗಣ್ಯಮಾಡುತ್ತಾರೆ. ತಮ್ಮ ಜೊತೆ ಮಾನವರ ಹಿತಕ್ಷೇಮದಲ್ಲಿ ಆಸಕ್ತಿಯನ್ನು ತೋರಿಸುತ್ತಾ ಅವರು ಉತ್ತಮ ನೆರೆಯವರೂ ಸ್ನೇಹಿತರೂ ಆಗಿದ್ದಾರೆ. ಕೆಟ್ಟ ಚಾಳಿಗಳನ್ನು ಮತ್ತು ಶಾರೀರಿಕ ಪ್ರವೃತ್ತಿಗಳನ್ನು ತ್ಯಜಿಸಲು ಅವರು ದೃಢನಿಶ್ಚಿತರಾಗಿದ್ದಾರೆ. ಈ ಮೂಲಕ ಅವರು ತಮ್ಮ ಸ್ವಂತ ಶಾರೀರಿಕ, ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯದ ಉತ್ತಮ ಆರೈಕೆಮಾಡುತ್ತಾರೆ. ಕೆಟ್ಟ ಚಾಳಿಗಳಿಗಾಗಿ ತಮ್ಮ ಹಣವನ್ನು ಹಾಳುಮಾಡುವ ಬದಲಿಗೆ, ತಮ್ಮ ಮತ್ತು ತಮ್ಮ ಕುಟುಂಬದ ಹಿತಕ್ಕಾಗಿ ಅವರು ಅದನ್ನು ಉಪಯೋಗಿಸುತ್ತಿದ್ದಾರೆ. (1 ಕೊರಿಂಥ 6:​9-11; ಕೊಲೊಸ್ಸೆ 3:​18-23) ನಿಸ್ಸಂಶಯವಾಗಿ, ಬೈಬಲಿನಲ್ಲಿ ಯೆಹೋವನು ಏನನ್ನು ತಿಳಿಸಿದ್ದಾನೊ ಅದಕ್ಕೆ ಅನುಗುಣವಾಗಿ ಜೀವಿಸುವ ಮೂಲಕ ಸಿಗುವ ಪ್ರತಿಫಲಗಳಿಂದ, ಸತ್ಯ ಕ್ರೈಸ್ತತ್ವಕ್ಕೆ ಅನುಸಾರ ಜೀವಿಸುವುದು ಜೀವನದ ಅತ್ಯುತ್ತಮ ಮಾರ್ಗವಾಗಿದೆ ಮತ್ತು ಅದು ಲಭ್ಯವಿರುವುದರಲ್ಲೇ ಅತ್ಯುತ್ತಮವಾದ ಶಿಕ್ಷಣವಾಗಿದೆ ಎಂಬುದು ಮಂದಟ್ಟಾಗುತ್ತದೆ. ದೇವರ ನಿಯಮಗಳಿಗೆ ಅನುಸಾರವಾಗಿ ಜೀವಿಸುತ್ತಿರುವ ವ್ಯಕ್ತಿಯ ಕುರಿತು ಬೈಬಲ್‌ ತಿಳಿಸುವುದು: “ಅವನ ಕಾರ್ಯವೆಲ್ಲವೂ ಸಫಲವಾಗುವದು.”​—⁠ಕೀರ್ತನೆ 1:⁠3.

ಸರ್ವಶಕ್ತ ದೇವರಾದ ಯೆಹೋವನು ನಮಗೆ ಶಿಕ್ಷಣವನ್ನು ನೀಡಲು ಇಚ್ಛೆಯುಳ್ಳವನಾಗಿದ್ದಾನೆ ಎಂಬುದನ್ನು ತಿಳಿಯುವುದು ಉತ್ತೇಜನದಾಯಕವಾಗಿದೆ. ಆತನು ತನ್ನ ಕುರಿತು ಹೀಗೆ ಹೇಳುತ್ತಾನೆ: “ನಾನೇ ನಿನ್ನ ದೇವರಾದ ಯೆಹೋವನು, ನಿನಗೆ ವೃದ್ಧಿಮಾರ್ಗವನ್ನು ಬೋಧಿಸಿ ನೀನು ನಡೆಯಬೇಕಾದ ದಾರಿಯಲ್ಲಿ ನಿನ್ನನ್ನು ನಡೆಯಿಸುವವನಾಗಿದ್ದೇನೆ.” (ಯೆಶಾಯ 48:17) ಯೆಹೋವನು ತನ್ನ ಮಗನಾದ ಯೇಸು ಕ್ರಿಸ್ತನ ಮಾದರಿ ಮತ್ತು ಬೋಧನೆಯ ಮೂಲಕ ನಮಗೆ ದಾರಿಯನ್ನು ತೋರಿಸಿಕೊಟ್ಟಿದ್ದಾನೆ. ಯೇಸು ಭೂಮಿಯಲ್ಲಿದ್ದಾಗ ಅವನ ಬೋಧನೆಗಳು, ಅವನನ್ನು ತಿಳಿದ ಅನೇಕ ಜನರ ಜೀವಿತಗಳನ್ನು ಬದಲಾಯಿಸಿದವು. ಇಂದು ಅವನ ಬೋಧನೆಗಳಿಗೆ ಅನುಸಾರ ಜೀವಿಸುತ್ತಿರುವ ಅನೇಕರ ವಿಷಯದಲ್ಲಿಯೂ ಇದು ಸತ್ಯವಾಗಿದೆ. ಈ ಬೋಧನೆಗಳ ಕುರಿತು ಹೆಚ್ಚನ್ನು ಕಲಿಯಲು ನೀವು ಏಕೆ ಸಮಯವನ್ನು ಬದಿಗಿರಿಸಬಾರದು? ನೀವು ಅಂಥ ಅಮೂಲ್ಯವಾದ ಶಿಕ್ಷಣವನ್ನು ಪಡೆಯುವಂತೆ ನಿಮ್ಮ ನೆರೆಹೊರೆಯಲ್ಲಿರುವ ಯೆಹೋವನ ಸಾಕ್ಷಿಗಳು ನಿಮಗೆ ಸಹಾಯಮಾಡಲು ಸಂತೋಷಿಸುತ್ತಾರೆ.

[ಪಾದಟಿಪ್ಪಣಿ]

^ ಪ್ಯಾರ. 12 ಕೆಲವು ಹೆಸರುಗಳು ಬದಲಾಯಿಸಲ್ಪಟ್ಟಿವೆ.

[ಪುಟ 6ರಲ್ಲಿರುವ ಚೌಕ/ಚಿತ್ರ]

ಯೇಸು ಮತ್ತು ಅವನ ಬೋಧನೆಗಳ ಪ್ರಭಾವ

ಸುಂಕದ ಗುತ್ತಿಗೆದಾರನಾದ ಜಕ್ಕಾಯನು ತನ್ನ ಸ್ಥಾನಮಾನವನ್ನು ಉಪಯೋಗಿಸಿ ಹಣವನ್ನು ಸುಲಿಗೆಮಾಡಿ, ಸಾಮಾನ್ಯ ಜನರನ್ನು ದೋಚಿ ಐಶ್ವರ್ಯವಂತನಾಗಿದ್ದನು. ಆದರೆ ಯೇಸುವಿನ ಬೋಧನೆಗಳನ್ನು ತನ್ನ ಜೀವಿತದಲ್ಲಿ ಅನ್ವಯಿಸುವ ಮೂಲಕ ಅವನು ಬದಲಾದನು.​—⁠ಲೂಕ 19:​1-10.

ತಾರ್ಸದ ಸೌಲನು ಕ್ರೈಸ್ತರನ್ನು ಹಿಂಸಿಸುವುದನ್ನು ನಿಲ್ಲಿಸಿ, ಕ್ರೈಸ್ತತ್ವಕ್ಕೆ ಪರಿವರ್ತಿತನಾಗಿ ಅಪೊಸ್ತಲ ಪೌಲನಾದನು.​—⁠ಅ. ಕೃತ್ಯಗಳು 22:​6-21; ಫಿಲಿಪ್ಪಿ 3:​4-9.

ಕೊರಿಂಥದಲ್ಲಿದ್ದ ಕೆಲವು ಕ್ರೈಸ್ತರು ‘ಜಾರರು ವಿಗ್ರಹಾರಾಧಕರು ವ್ಯಭಿಚಾರಿಗಳು ಪುರುಷಗಾಮಿಗಳು ಕಳ್ಳರು ಲೋಭಿಗಳು ಕುಡಿಕರು ಬೈಯುವವರು ಸುಲುಕೊಳ್ಳುವವರು’ ಆಗಿದ್ದರು. ಆದರೂ ಸತ್ಯ ಕ್ರೈಸ್ತತ್ವದ ಕುರಿತು ಕಲಿತುಕೊಂಡ ಬಳಿಕ ಅವರು ‘ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ತಮ್ಮನ್ನು ತೊಳೆದುಕೊಂಡು ದೇವಜನರಾದರು ಮತ್ತು ನೀತಿವಂತರೆಂಬ ಹೆಸರನ್ನು ಹೊಂದಿದರು.’​—⁠1 ಕೊರಿಂಥ 6:​9-11.

[ಪುಟ 7ರಲ್ಲಿರುವ ಚಿತ್ರ]

ಯಶಸ್ಸನ್ನು ಹೇಗೆ ಗಳಿಸಬಹುದೆಂಬುದನ್ನು ಬೈಬಲ್‌ ನಿಮಗೆ ತೋರಿಸಬಲ್ಲದು