ಅನ್ಯಾಯವು ತುಂಬಿರುವ ಲೋಕ
ಅನ್ಯಾಯವು ತುಂಬಿರುವ ಲೋಕ
ಅನ್ಯಾಯವು ತುಂಬಿರುವ ಲೋಕದಲ್ಲಿ ನಾವು ಜೀವಿಸುತ್ತಿದ್ದೇವೆ ಎಂಬುದನ್ನು ನೀವು ಒಪ್ಪುತ್ತೀರೋ? ನೀವು ಒಪ್ಪುತ್ತೀರಿ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ವಾಸ್ತವದಲ್ಲಿ, ನಮಗೆ ಯಾವುದೇ ಕೌಶಲಗಳಿರಲಿ ಮತ್ತು ನಾವು ನಮ್ಮ ಜೀವನಗಳನ್ನು ಎಷ್ಟೇ ವಿವೇಕಯುತವಾಗಿ ಯೋಜಿಸಲಿ, ನಮಗೆ ಐಶ್ವರ್ಯ ಅಥವಾ ಯಶಸ್ಸು, ಅಷ್ಟೇಕೆ ಆಹಾರವೂ ಸಿಗುವುದೆಂಬ ಖಾತ್ರಿಯಿಲ್ಲ. ಪುರಾತನ ಕಾಲದ ರಾಜ ಸೊಲೊಮೋನನು ಹೇಳಿದ ಮಾತುಗಳು ಅನೇಕವೇಳೆ ಸತ್ಯವಾಗಿ ರುಜುವಾಗುತ್ತವೆ: “ಜ್ಞಾನಿಗಳಿಗೆ ಅನ್ನ ಸಿಕ್ಕದು, ವಿವೇಕಿಗಳಿಗೆ ಧನ ಲಭಿಸದು, ಪ್ರವೀಣರಿಗೆ ದಯೆ ದೊರೆಯದು.” ಏಕೆ? ಏಕೆಂದರೆ, “ಕಾಲವೂ ಪ್ರಾಪ್ತಿಯೂ ಯಾರಿಗೂ ತಪ್ಪಿದ್ದಲ್ಲ” ಎಂದು ಸೊಲೊಮೋನನು ಹೇಳುತ್ತಾನೆ.—ಪ್ರಸಂಗಿ 9:11.
“ಕೇಡಿನ ಕಾಲವು ತಕ್ಷಣ ಬೀಳುವಾಗ”
ಹೌದು, “ಕಾಲವೂ ಪ್ರಾಪ್ತಿಯೂ” ಅಂದರೆ ಅನೇಕವೇಳೆ ತಪ್ಪಾದ ಸಮಯದಲ್ಲಿ ತಪ್ಪಾದ ಸ್ಥಳದಲ್ಲಿರುವುದು, ನಾವು ಜಾಗರೂಕವಾಗಿ ತಯಾರಿಸಿದ ಯೋಜನೆಗಳನ್ನು ಮತ್ತು ಅತಿ ಅಪೇಕ್ಷಣೀಯ ನಿರೀಕ್ಷಣೆಗಳನ್ನು ಅನೇಕವೇಳೆ ಹಾಳುಮಾಡಿಬಿಡುತ್ತದೆ. ಸೊಲೊಮೋನನಿಗನುಸಾರ, ನಾವು ‘ಕೇಡಿನ ಕಾಲವು ತಕ್ಷಣ ಬೀಳುವಾಗ ಬಲೆಯಿಂದ ಹಿಡಿಯಲ್ಪಟ್ಟಿರುವ ಮೀನಿನಂತೆಯೂ ಉರುಲಿನಲ್ಲಿ ಸಿಕ್ಕಿರುವ ಪಕ್ಷಿಯಂತೆಯೂ’ ಇರುತ್ತೇವೆ. (ಪ್ರಸಂಗಿ 9:12, NIBV) ಉದಾಹರಣೆಗೆ, ಲಕ್ಷಾಂತರ ಮಂದಿ ತಮ್ಮ ಕುಟುಂಬಗಳಿಗೆ ಆಹಾರವನ್ನು ಒದಗಿಸಲಿಕ್ಕಾಗಿ ಕಷ್ಟಪಟ್ಟು ವ್ಯವಸಾಯಮಾಡುತ್ತಾರೆ. ಆದರೆ ಅವರು, ಮಳೆಯು ಬರದೆ ಹೋಗುವಾಗ ಮತ್ತು ಅನಾವೃಷ್ಟಿಯು ಬೆಳೆಗಳನ್ನು ನಾಶಮಾಡುವಾಗ ‘ಕೇಡಿನ ಕಾಲದಲ್ಲಿ’ ಸಿಕ್ಕಿಕೊಳ್ಳುತ್ತಾರೆ.
ಇತರರು ಸಹಾಯಮಾಡಲು ಪ್ರಯತ್ನಿಸುತ್ತಾರೆ ನಿಜ. ಆದರೆ ‘ಕೇಡಿನ ಕಾಲದಲ್ಲಿ’ ಸಿಕ್ಕಿಕೊಂಡಿರುವ ವ್ಯಕ್ತಿಗಳಿಗೆ ಲೋಕವ್ಯಾಪಕವಾಗಿರುವ ಜನರು ಕೊಡುವ ಸಹಾಯವು ಸಹ ಅನೇಕವೇಳೆ ಅನ್ಯಾಯವಾಗಿ ಕಂಡುಬರುತ್ತದೆ. ಉದಾಹರಣೆಗೆ, ಕ್ಷಾಮದ ವಿರುದ್ಧ ಇತ್ತೀಚಿನ ವರ್ಷವೊಂದರಲ್ಲಿ ಮಾಡಲ್ಪಟ್ಟ ಹೋರಾಟದಲ್ಲಿ, ಒಂದು ಖ್ಯಾತ ಪರಿಹಾರ ಏಜೆನ್ಸಿಗನುಸಾರ, “ಇಡೀ [ಆಫ್ರಿಕ] ಖಂಡವು, ಕೊಲ್ಲಿ ಯುದ್ಧದಲ್ಲಿ ಉಪಯೋಗಿಸಲ್ಪಟ್ಟ ಹಣದಲ್ಲಿ ಕೇವಲ ಐದರಲ್ಲಿ ಒಂದು ಭಾಗವನ್ನು ಮಾತ್ರ ನೆರವಾಗಿ ಪಡೆದುಕೊಂಡಿತು.” ಸಾಧನ ಸಂಪತ್ತುಗಳನ್ನು ಹೊಂದಿರುವ ದೇಶಗಳು, ಒಂದು ಇಡೀ ಖಂಡದಲ್ಲಿ ಕ್ಷಾಮದಿಂದುಂಟಾಗಿರುವ ನೋವು ಹಾಗೂ ನರಳಾಟವನ್ನು ನಿವಾರಿಸಲಿಕ್ಕಾಗಿ ಖರ್ಚುಮಾಡಿದ ಹಣಕ್ಕಿಂತಲೂ ಐದು ಪಟ್ಟು ಹೆಚ್ಚು ಹಣವನ್ನು ಒಂದು ದೇಶದಲ್ಲಿ ಯುದ್ಧಮಾಡಲಿಕ್ಕಾಗಿ ಸುರಿಸುವುದು ನ್ಯಾಯವಾಗಿತ್ತೋ? ಅಲ್ಲದೆ, ಅನೇಕರು ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿ ಜೀವಿಸುತ್ತಿರುವಾಗ, ಲೋಕದ ನಿವಾಸಿಗಳಲ್ಲಿ ನಾಲ್ವರಲ್ಲಿ ಒಬ್ಬ ವ್ಯಕ್ತಿ ಕಡುಬಡತನದಲ್ಲಿ ಜೀವಿಸುತ್ತಿರುವುದು ಅಥವಾ ಲಕ್ಷಾಂತರ ಮಂದಿ ಮಕ್ಕಳು ತಡೆಗಟ್ಟಸಾಧ್ಯವಿರುವ ರೋಗಗಳಿಂದ ಪ್ರತಿ ವರ್ಷ ಸಾಯುವುದು ನ್ಯಾಯವಾಗಿದೆಯೋ? ಖಂಡಿತವಾಗಿಯೂ ಇಲ್ಲ!
ವಾಸ್ತವದಲ್ಲಿ, “ಕೇಡಿನ ಕಾಲವು ತಕ್ಷಣ ಬೀಳುವಾಗ” ಅದರಲ್ಲಿ
‘ಕಾಲ ಮತ್ತು ಪ್ರಾಪ್ತಿಗಿಂತ’ ಹೆಚ್ಚಿನದ್ದು ಒಳಗೂಡಿರುತ್ತದೆ. ನಮ್ಮ ಹತೋಟಿಗೆ ಮೀರಿದ ಬಲಾಢ್ಯವಾದ ಶಕ್ತಿಗಳು ಸಹ ನಮ್ಮ ಜೀವನಗಳ ಮೇಲೆ ಹತೋಟಿಯನ್ನು ಸಾಧಿಸುತ್ತವೆ ಮತ್ತು ನಮಗೆ ಏನು ಸಂಭವಿಸುತ್ತದೋ ಅದರ ಮೇಲೆ ಗಮನಾರ್ಹವಾದ ಪ್ರಭಾವವನ್ನು ಬೀರುತ್ತವೆ. 2004ರ ಶರತ್ಕಾಲದಲ್ಲಿ ಅಲಾನ್ಯದ ಬೆಸ್ಲಾನ್‌ನಲ್ಲಿ ಏನು ಸಂಭವಿಸಿತೋ ಅದು ಇದಕ್ಕೆ ಸತ್ಯಸಾಕ್ಷಿಯಾಗಿದೆ. ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ಮಧ್ಯೆ ನಡೆಸಲ್ಪಟ್ಟ ಭೀಕರ ಹೋರಾಟದಲ್ಲಿ ನೂರಾರು ಜನರು ಕೊಲ್ಲಲ್ಪಟ್ಟರು ಮತ್ತು ಇವರಲ್ಲಿ ಶಾಲೆಗೆ ಪ್ರಥಮ ದಿನ ಕಾಲಿಟ್ಟ ಅನೇಕ ಮಂದಿ ಚಿಕ್ಕ ಮಕ್ಕಳು ಸಹ ಇದ್ದರು. ಆ ದುರಂತದ ಸಮಯದಲ್ಲಿ ಯಾರು ಸತ್ತರು ಮತ್ತು ಯಾರು ಪಾರಾದರು ಎಂಬುದು ಹೆಚ್ಚಾಗಿ ಆಕಸ್ಮಿಕವಾದ ವಿಷಯವಾಗಿತ್ತು ಎಂಬುದು ನಿಜ—ಆದರೆ ಆ ‘ಕೇಡಿನ ಕಾಲದ’ ಮೂಲಭೂತ ಕಾರಣವು ಮಾನವ ಹೋರಾಟವಾಗಿತ್ತು.ಇದರಿಂದ ಯಾವುದೇ ಮುಕ್ತಿ ಇಲ್ಲವೋ?
ಅನ್ಯಾಯಕೃತ್ಯಗಳ ಬಗ್ಗೆ ಮಾತಾಡುವಾಗ ಅನೇಕರು “ಇದೇ ಜೀವನ” ಮತ್ತು “ಇದು ಹೊಸದೇನಲ್ಲ, ಮುಂದಕ್ಕೂ ಹೀಗೆಯೇ ಇರುವುದು” ಎಂದು ಹೇಳುತ್ತಾರೆ. ಅವರಿಗನುಸಾರವಾಗಿ, ಬಲಿಷ್ಠರು ಸದಾ ಬಡಪಾಯಿಗಳ ಮೇಲೆ ದಬ್ಬಾಳಿಕೆ ನಡೆಸುವರು ಮತ್ತು ಶ್ರೀಮಂತರು ಬಡವರನ್ನು ಸದಾ ಶೋಷಿಸುತ್ತಿರುವರು. ಅದರೊಂದಿಗೆ ಈ “ಕಾಲವೂ ಪ್ರಾಪ್ತಿಯೂ” ಮಾನವಕುಲವು ಅಸ್ತಿತ್ವದಲ್ಲಿರುವ ವರೆಗೆ ಬಾಧಿಸುವುದು ಎಂದವರು ಅಭಿಪ್ರಯಿಸುತ್ತಾರೆ.
ಇದೇ ನಮ್ಮ ಗತಿಯೋ? ತಮ್ಮಲ್ಲಿರುವ ಕೌಶಲಗಳನ್ನು ಜಾಣ್ಮೆಯಿಂದಲೂ ವಿವೇಕದಿಂದಲೂ ಉಪಯೋಗಿಸುವವರಿಗೆ ತಮ್ಮ ಕಷ್ಟಕ್ಕೆ ತಕ್ಕ ಫಲ ಸಿಗಲು ಸಾಧ್ಯವಿದೆಯೋ? ಅನ್ಯಾಯದಿಂದ ತುಂಬಿರುವ ಈ ಲೋಕದಲ್ಲಿ ಶಾಶ್ವತವಾದ ಬದಲಾವಣೆಯನ್ನು ಯಾರಿಂದಲಾದರೂ ತರಲು ಸಾಧ್ಯವಿದೆಯೋ? ಈ ವಿಚಾರದಲ್ಲಿ ಮುಂದಿನ ಲೇಖನವು ಏನು ಹೇಳುತ್ತದೆ ಎಂಬುದನ್ನು ಪರಿಗಣಿಸಿರಿ.
[ಪುಟ 2ರಲ್ಲಿರುವ ಚಿತ್ರ ಕೃಪೆ]
COVER: Man with a child: UN PHOTO 148426/McCurry/Stockbower
[ಪುಟ 3ರಲ್ಲಿರುವ ಚಿತ್ರ ಕೃಪೆ]
MAXIM MARMUR/AFP/Getty Images