ಒಳ್ಳೇ ನಡತೆಯು ಉತ್ತಮ ಫಲಿತಾಂಶಗಳನ್ನು ತರುತ್ತದೆ
ಒಳ್ಳೇ ನಡತೆಯು ಉತ್ತಮ ಫಲಿತಾಂಶಗಳನ್ನು ತರುತ್ತದೆ
ದಕ್ಷಿಣ ಜಪಾನ್‌ನ ಕರಾವಳಿ ಪ್ರದೇಶದ ಸಮೀಪದಲ್ಲಿರುವ ಒಂದು ಚಿಕ್ಕ ದ್ವೀಪದಲ್ಲಿ, ಒಬ್ಬ ತಾಯಿ ಮತ್ತು ಅವಳ ಮೂವರು ಚಿಕ್ಕ ಮಕ್ಕಳು ಯೆಹೋವನ ಸಾಕ್ಷಿಗಳೊಂದಿಗೆ ಬೈಬಲ್ ಅಧ್ಯಯನಮಾಡಲು ಆರಂಭಿಸಿದರು. ಇದನ್ನು ನೋಡಿ, ಆ ಪ್ರತ್ಯೇಕ ಮತ್ತು ತುಂಬ ಸಾಂಪ್ರದಾಯಬದ್ಧ ಕ್ಷೇತ್ರದಲ್ಲಿನ ನೆರೆಯವರು ಈ ತಾಯಿ ತಮ್ಮ ಕಣ್ಣಿಗೆ ಬಿದ್ದಾಗೆಲ್ಲ ಅವಳನ್ನು ಅಲಕ್ಷಿಸಲಾರಂಭಿಸಿದರು. “ಅವರು ನನ್ನನ್ನು ಅಲಕ್ಷಿಸಿದ್ದಕ್ಕಿಂತಲೂ ಹೆಚ್ಚಾಗಿ ನನ್ನ ಗಂಡ ಮತ್ತು ಮಕ್ಕಳೊಂದಿಗೆ ಅನಾದರದಿಂದ ನಡೆದುಕೊಂಡದ್ದೇ ನನಗೆ ಹೆಚ್ಚು ನೋವನ್ನು ಉಂಟುಮಾಡಿತು” ಎಂದು ಅವಳು ತಿಳಿಸುತ್ತಾಳೆ. ಆದರೂ, ಅವಳು ತನ್ನ ಮಕ್ಕಳಿಗೆ, “ಯೆಹೋವನಿಗೋಸ್ಕರ ನಾವು ನಮ್ಮ ನೆರೆಯವರನ್ನು ಸಂಧಿಸುವಾಗೆಲ್ಲ ಅಭಿವಂದಿಸುತ್ತಾ ಇರಬೇಕು” ಎಂದು ಹೇಳಿದಳು.—ಮತ್ತಾಯ 5:47, 48.
ಜನರು ಎಷ್ಟೇ ತಿರಸ್ಕಾರದಿಂದ ಕಾಣುವುದಾದರೂ ತಾವು ಮಾತ್ರ ವಿನಯಶೀಲರಾಗಿರಬೇಕೆಂದು ಅವಳು ಮನೆಯಲ್ಲಿ ಮಕ್ಕಳಿಗೆ ಕಲಿಸಿದಳು. ಸ್ಥಳಿಕ ಬಿಸಿನೀರಿನ ಬುಗ್ಗೆಗಳಿಗೆ ಮಕ್ಕಳು ಕ್ರಮವಾಗಿ ಭೇಟಿ ನೀಡಲು ಹೋಗುತ್ತಿದ್ದಾಗ ಕಾರಿನಲ್ಲಿ ಅವರು ತಮ್ಮ ಅಭಿವಂದನೆಗಳನ್ನು ಪ್ರ್ಯಾಕ್ಟಿಸ್ ಮಾಡುತ್ತಿದ್ದರು. ಆ ಕಟ್ಟಡವನ್ನು ಪ್ರವೇಶಿಸಿದ ಬಳಿಕ, ಮಕ್ಕಳು ಯಾವಾಗಲೂ ಉಲ್ಲಾಸದಿಂದ “ಕೋನೀಚೀವಾ!” ಅಂದರೆ “ಶುಭದಿನ!” ಎಂದು ಗಟ್ಟಿಯಾಗಿ ಹೇಳುತ್ತಿದ್ದರು. ನೆರೆಯವರು ಉದಾಸೀನಭಾವದಿಂದ ಪ್ರತಿಕ್ರಿಯಿಸುತ್ತಿದ್ದರಾದರೂ, ಈ ಕುಟುಂಬವು ತಾವು ಭೇಟಿಯಾಗುವವರನ್ನೆಲ್ಲ ತಾಳ್ಮೆಯಿಂದ ಅಭಿವಂದಿಸುತ್ತಾ ಮುಂದೆ ಸಾಗಿತು. ಜನರು ಆ ಮಕ್ಕಳ ಒಳ್ಳೇ ಶಿಷ್ಟಾಚಾರಗಳನ್ನು ಗಮನಿಸದಿರಲಾಗಲಿಲ್ಲ.
ಕೊನೆಗೂ ಬೇರೆ ಬೇರೆ ನೆರೆಯವರು “ಕೋನೀಚೀವಾ” ಎಂಬ ಅಭಿವಂದನೆಯೊಂದಿಗೆ ಪ್ರತಿಕ್ರಿಯೆ ತೋರಿಸಿದರು. ಎರಡು ವರ್ಷಗಳ ಕೊನೆಯಲ್ಲಿ, ಪಟ್ಟಣದಲ್ಲಿರುವ ಬಹುಮಟ್ಟಿಗೆ ಪ್ರತಿಯೊಬ್ಬರೂ ಈ ಕುಟುಂಬದ ಅಭಿವಂದನೆಗೆ ಪ್ರತಿಕ್ರಿಯಿಸಿದರು. ನೆರೆಯವರು ಈ ಕುಟುಂಬದೊಂದಿಗೆ ಹೆಚ್ಚು ಸ್ನೇಹಪರರಾಗಿ ವರ್ತಿಸಿದರು ಮಾತ್ರವಲ್ಲ ಅವರು ಸ್ವತಃ ಪರಸ್ಪರರನ್ನು ವಂದಿಸಲಾರಂಭಿಸಿದರು ಮತ್ತು ತಮ್ಮೊಳಗೇ ಒಬ್ಬರು ಇನ್ನೊಬ್ಬರ ಕಡೆಗೆ ಸ್ನೇಹಭಾವವನ್ನು ತೋರಿಸಿದರು. ಈ ಬದಲಾವಣೆಯಲ್ಲಿ ಆ ಮಕ್ಕಳು ವಹಿಸಿದ ಪಾತ್ರಕ್ಕಾಗಿ ಡೆಪ್ಯುಟಿ ಮೇಯರ್ ಅವರನ್ನು ಸನ್ಮಾನಿಸಲು ಬಯಸಿದನು. ಆದರೆ ಕ್ರೈಸ್ತರು ಏನು ಮಾಡಬೇಕಾಗಿದೆಯೋ ಅದನ್ನೇ ಅವರು ಮಾಡುತ್ತಿದ್ದಾರೆ ಅಷ್ಟೇ ಎಂದು ಅವರ ತಾಯಿ ತಿಳಿಸಿದಳು. ತದನಂತರ, ಇಡೀ ದ್ವೀಪಕ್ಕಾಗಿ ಏರ್ಪಡಿಸಲ್ಪಟ್ಟಿದ್ದ ಭಾಷಣ ಸ್ಪರ್ಧೆಯಲ್ಲಿ, ಜನರ ಪ್ರತಿಕ್ರಿಯೆ ಹೇಗಿರುವುದಾದರೂ ಅವರನ್ನು ವಿನಯದಿಂದ ಅಭಿವಂದಿಸಲು ತನ್ನ ತಾಯಿಯು ಹೇಗೆ ಕುಟುಂಬವನ್ನು ತರಬೇತುಗೊಳಿಸಿದಳು ಎಂಬುದನ್ನು ಒಬ್ಬ ಮಗನು ತಿಳಿಸಿದನು. ಅವನ ಭಾಷಣಕ್ಕೆ ಮೊದಲ ಬಹುಮಾನ ಸಿಕ್ಕಿತು ಮತ್ತು ಅದು ಆ ಪಟ್ಟಣದ ವಾರ್ತಾಪತ್ರಿಕೆಯಲ್ಲಿ ಮುದ್ರಿಸಲ್ಪಟ್ಟಿತು. ಕ್ರೈಸ್ತ ಮೂಲತತ್ತ್ವಗಳನ್ನು ಅನುಸರಿಸಿದ್ದು ಇಷ್ಟು ಒಳ್ಳೇ ಫಲಿತಾಂಶಗಳನ್ನು ಉಂಟುಮಾಡಿದ್ದಕ್ಕಾಗಿ ಇಂದು ಆ ಕುಟುಂಬವು ತುಂಬ ಸಂತೋಷಗೊಂಡಿದೆ. ಜನರು ಸ್ನೇಹಪರರಾಗಿರುವಾಗ ಇತರರೊಂದಿಗೆ ಸುವಾರ್ತೆಯನ್ನು ಹಂಚಿಕೊಳ್ಳುವುದು ಹೆಚ್ಚು ಸುಲಭವಾಗುತ್ತದೆ.