“ನನ್ನ ಜೀವನದಲ್ಲೇ ಅತ್ಯುತ್ತಮವಾದ ದಿನ”
“ನನ್ನ ಜೀವನದಲ್ಲೇ ಅತ್ಯುತ್ತಮವಾದ ದಿನ”
“ಖಿನ್ನತೆಯು ಯುವ ಜನರಲ್ಲಿ ತೀರ ಹೆಚ್ಚು ವರದಿಸಲ್ಪಟ್ಟಿರುವ ಮತ್ತು ಬಹುಶಃ ಅತ್ಯಂತ ಗಂಭೀರವಾಗಿರುವ ಮಾನಸಿಕ ಆರೋಗ್ಯ ಸಮಸ್ಯೆಯಾಗಿದೆ” ಎಂದು ಆಸ್ಟ್ರೇಲಿಯದಲ್ಲಿ ಸರಕಾರದಿಂದ ಆರ್ಥಿಕ ನೆರವು ಪಡೆದುಕೊಳ್ಳುತ್ತಿರುವ ಬಿಯಾಂಡ್‌ಬ್ಲೂ ಏಜೆನ್ಸಿಯು ಪ್ರತಿಪಾದಿಸುತ್ತದೆ. ಪ್ರತಿ ವರ್ಷ ಆಸ್ಟ್ರೇಲಿಯದ ಸುಮಾರು 1,00,000 ಯುವ ಜನರು ಖಿನ್ನತೆಯಿಂದ ನರಳುತ್ತಿದ್ದಾರೆ ಎಂಬುದನ್ನು ಅಧ್ಯಯನಗಳು ತಿಳಿಯಪಡಿಸುತ್ತವೆ.
ಯುವ ಕ್ರೈಸ್ತರು ಈ ಖಿನ್ನತೆಯಿಂದ ಮುಕ್ತರೇನಲ್ಲ. ಆದರೂ, ಯೆಹೋವನಲ್ಲಿನ ನಂಬಿಕೆಯು ಅವರಲ್ಲಿ ಅನೇಕರಿಗೆ ನಕಾರಾತ್ಮಕ ಅನಿಸಿಕೆಗಳನ್ನು ದೂರಮಾಡಲು ಮತ್ತು ತಮ್ಮ ಯೌವನಾವಸ್ಥೆಯನ್ನು ಸಫಲದಾಯಕವಾಗಿ ಮಾಡಲು ಸಹಾಯಮಾಡಿದೆ. ಇದರಿಂದ ಅವರು ಇತರರ ಮೇಲೆ ಅತ್ಯುತ್ತಮ ಪ್ರಭಾವವನ್ನು ಬೀರುತ್ತಾರೆ. ಹೇಗೆ?
ಹದಿನೆಂಟು ವರ್ಷದ ಕ್ಲಾರ್‌ಳ ಅನುಭವವನ್ನು ತೆಗೆದುಕೊಳ್ಳಿ. ಅವಳು ಮತ್ತು ಅವಳ ತಾಯಿ ಮೆಲ್ಬರ್ನ್‌ನಲ್ಲಿರುವ ಯೆಹೋವನ ಸಾಕ್ಷಿಗಳ ಸಭೆಯೊಂದಕ್ಕೆ ಹಾಜರಾಗುತ್ತಾರೆ. ಕ್ಲಾರ್‌ಳ ತಂದೆಯು ಕುಟುಂಬವನ್ನು ತೊರೆದುಹೋದಾಗ ಅವಳು ಖಿನ್ನಳಾದಳು. ಆದರೆ ಸ್ವರ್ಗೀಯ ತಂದೆಯಾದ ಯೆಹೋವನಲ್ಲಿನ ಅವಳ ನಂಬಿಕೆಯು ಬಲವಾಗಿ ಉಳಿಯಿತು. ಒಂದು ದಿನ, ಅವರ ಕುಟುಂಬ ವೈದ್ಯೆಯಾಗಿದ್ದ ಲಿಡೀಯಳು ಅಸ್ವಸ್ಥರಾಗಿದ್ದ ಕ್ಲಾರ್‌ಳ ತಾಯಿ ಹೇಗಿದ್ದಾರೆ ಎಂದು ನೋಡಲಿಕ್ಕಾಗಿ ಅವರ ಮನೆಗೆ ಬಂದಳು. ತದನಂತರ, ಕ್ಲಾರ್‌ಳನ್ನು ತನ್ನ ವಾಹನದಲ್ಲಿ ಶಾಪಿಂಗ್ ಸೆಂಟರ್‌ಗೆ ತಲಪಿಸುವ ನೀಡಿಕೆಯನ್ನು ಮಾಡಿದಳು. ಹೀಗೆ ಪ್ರಯಾಣಿಸುತ್ತಿರುವಾಗ, ಕ್ಲಾರ್‌ಳಿಗೆ ಯಾರಾದರೂ ಬಾಯ್‌ಫ್ರೆಂಡ್ ಇದ್ದಾರೋ ಎಂದು ಕೇಳಿದಳು. ತಾನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳಾಗಿರುವುದರಿಂದ, ಮೋಜಿಗಾಗಿ ಹುಡುಗರೊಂದಿಗೆ ಡೇಟಿಂಗ್‌ನಲ್ಲಿ ಒಳಗೂಡುವುದಿಲ್ಲ ಎಂದು ಕ್ಲಾರ್ ವಿವರಿಸಿದಳು. ಇದನ್ನು ಕೇಳಿ ವೈದ್ಯೆಯು ತುಂಬ ಚಕಿತಳಾದಳು. ತದನಂತರ ಕ್ಲಾರ್, ಜೀವನದಲ್ಲಿ ವಿವೇಕಭರಿತ ನಿರ್ಣಯಗಳನ್ನು ಮಾಡಲು ಬೈಬಲ್ ತನಗೆ ಹೇಗೆ ಸಹಾಯಮಾಡಿದೆ ಎಂಬುದನ್ನು ವಿವರಿಸಿದಳು. ಕೊನೆಯದಾಗಿ, ತನಗೆ ಬಹಳವಾಗಿ ಸಹಾಯಮಾಡಿದ್ದ ಬೈಬಲ್ ಆಧಾರಿತ ಪ್ರಕಾಶನವೊಂದನ್ನು ಆ ವೈದ್ಯೆಗೆ ತಂದುಕೊಡುವುದಾಗಿ ಕ್ಲಾರ್ ತಿಳಿಸಿದಳು. ಆ ಪುಸ್ತಕದ ಶೀರ್ಷಿಕೆಯು ಯುವ ಜನರ ಪ್ರಶ್ನೆಗಳು—ಕಾರ್ಯಸಾಧಕ ಉತ್ತರಗಳು ಎಂದಾಗಿತ್ತು.
ಈ ಪುಸ್ತಕವನ್ನು ಸ್ವೀಕರಿಸಿ ಮೂರು ದಿನಗಳಾದ ಬಳಿಕ, ಅದನ್ನು ಓದಿ ತಾನು ಎಷ್ಟು ಆನಂದಪಟ್ಟೆನೆಂಬುದನ್ನು ತಿಳಿಸಲಿಕ್ಕಾಗಿ ಲಿಡೀಯಳು ಕ್ಲಾರ್‌ಳ ತಾಯಿಗೆ ಫೋನ್‌ಮಾಡಿದಳು. ಈ ಪುಸ್ತಕದ ಇನ್ನೂ ಆರು ಪ್ರತಿಗಳನ್ನು ತನ್ನ ಜೊತೆಯಲ್ಲಿ ಕೆಲಸಮಾಡುವವರಿಗಾಗಿ ಅವಳು ವಿನಂತಿಸಿಕೊಂಡಳು. ಕ್ಲಾರ್ ಈ ಪುಸ್ತಕಗಳನ್ನು ವೈದ್ಯೆಗೆ ತಲಪಿಸಿದಾಗ, ಕ್ಲಾರ್‌ಳ ನಂಬಿಕೆಯಿಂದ ತಾನೆಷ್ಟು ಪ್ರಭಾವಿತಳಾಗಿದ್ದೇನೆ ಎಂಬುದನ್ನು ಅವಳು ವಿವರಿಸಿದಳು. ಕ್ಲಾರ್ ಅವಳೊಂದಿಗೆ ಬೈಬಲ್ ಅಧ್ಯಯನಮಾಡುವ ಪ್ರಸ್ತಾಪಮಾಡಿದಳು, ಮತ್ತು ಆ ವೈದ್ಯೆ ಇದಕ್ಕೆ ಒಪ್ಪಿಕೊಂಡಳು.
ಅನೇಕ ತಿಂಗಳುಗಳ ವರೆಗೆ ಕ್ಲಾರ್, ವೈದ್ಯೆಯ ಊಟದ ವಿರಾಮದ ಸಮಯದಲ್ಲಿ ಅಧ್ಯಯನವನ್ನು ನಡೆಸಿದಳು. ತದನಂತರ, ಯುವ ಜನರಲ್ಲಿನ ಖಿನ್ನತೆಯ ಬಗ್ಗೆ ಒಂದು ಸೆಮಿನಾರ್‌ನಲ್ಲಿ ಭಾಷಣ ಕೊಡಲು ಸಾಧ್ಯವಿದೆಯೋ ಎಂದು ಲಿಡೀಯಳು ಕ್ಲಾರ್‌ಳನ್ನು ಕೇಳಿದಳು. ಅವಳಿಗೆ ತುಂಬ ಭಯವಾಯಿತಾದರೂ ಇದಕ್ಕೆ ಒಪ್ಪಿಕೊಂಡಳು. ಈ ಸೆಮಿನಾರ್‌ಗೆ 60ಕ್ಕಿಂತಲೂ ಹೆಚ್ಚು ಮಂದಿ ಹಾಜರಾದರು. ವಯಸ್ಕರಾಗಿದ್ದ ನಾಲ್ಕು ಮಂದಿ ಮಾನಸಿಕ-ಆರೋಗ್ಯ ವೃತ್ತಿಪರರು ಸಭಿಕರನ್ನು ಉದ್ದೇಶಿಸಿ ಮಾತಾಡಿದರು. ತದನಂತರ ಕ್ಲಾರ್‌ಳ ಸರದಿಯು ಬಂತು. ಯುವ ಜನರು ದೇವರೊಂದಿಗೆ ಒಂದು ಸಂಬಂಧವನ್ನು ಹೊಂದಿರುವುದು ಎಷ್ಟು ಪ್ರಾಮುಖ್ಯವಾದದ್ದಾಗಿದೆ ಎಂಬ ಅಂಶವನ್ನು ಅವಳು ಎತ್ತಿತೋರಿಸಿದಳು. ಯೆಹೋವ ದೇವರು ಯುವ ಜನರನ್ನು ಬಹಳವಾಗಿ ಪರಾಮರಿಸುತ್ತಾನೆ ಮತ್ತು ಬೆಂಬಲ ಹಾಗೂ ಸಾಂತ್ವನಕ್ಕಾಗಿ ತನ್ನ ಕಡೆಗೆ ತಿರುಗುವವರೆಲ್ಲರಿಗೆ ಸಹಾಯಮಾಡುತ್ತಾನೆ ಎಂದು ಅವಳು ವಿವರಿಸಿದಳು. ಇದರೊಂದಿಗೆ, ಅತಿ ಬೇಗನೆ ಯೆಹೋವನು ಎಲ್ಲ ರೀತಿಯ ಶಾರೀರಿಕ ಮತ್ತು ಮಾನಸಿಕ ಅಸ್ವಸ್ಥತೆಗಳನ್ನು ಸಂಪೂರ್ಣವಾಗಿ ಇಲ್ಲವಾಗಿಸುವನು ಎಂಬ ತನ್ನ ನಿಶ್ಚಿತಾಭಿಪ್ರಾಯವನ್ನು ವ್ಯಕ್ತಪಡಿಸಿದಳು. (ಯೆಶಾಯ 33:24) ಈ ಅತ್ಯುತ್ತಮ ಸಾಕ್ಷಿಯ ಫಲಿತಾಂಶವೇನಾಗಿತ್ತು?
ಕ್ಲಾರ್ ಹೇಳಿದ್ದು: “ಸೆಷನ್‌ನ ತರುವಾಯ ಅನೇಕರು ನನ್ನ ಬಳಿಗೆ ಬಂದು, ಒಬ್ಬ ಯುವ ವ್ಯಕ್ತಿಯು ದೇವರ ಕುರಿತು ಮಾತಾಡುವುದನ್ನು ಕೇಳಿಸಿಕೊಂಡು ಅವರೆಷ್ಟು ಪ್ರಭಾವಿತರಾದರೆಂದು ತಿಳಿಸಿದರು. ನಾನು ಯುವ ಜನರ ಪ್ರಶ್ನೆಗಳು ಎಂಬ ಪುಸ್ತಕದ 23 ಪ್ರತಿಗಳನ್ನು ವಿತರಿಸಿದೆ. ಸಭಿಕರಲ್ಲಿ ಮೂವರು ಹುಡುಗಿಯರು ತಮ್ಮ ಟೆಲಿಫೋನ್ ನಂಬರ್‌ಗಳನ್ನು ನನಗೆ ಕೊಟ್ಟರು. ಈ ಹುಡುಗಿಯರಲ್ಲಿ ಒಬ್ಬಳು ಈಗ ಬೈಬಲ್ ಅಧ್ಯಯನಮಾಡುತ್ತಿದ್ದಾಳೆ. ಅದು ನನ್ನ ಜೀವನದಲ್ಲೇ ಅತ್ಯುತ್ತಮವಾದ ದಿನ”ವಾಗಿತ್ತು.