‘ನನ್ನ ಹೃದಯದ ಅಪೇಕ್ಷೆಗಳು ಈಡೇರಿದವು’
ಜೀವನ ಕಥೆ
‘ನನ್ನ ಹೃದಯದ ಅಪೇಕ್ಷೆಗಳು ಈಡೇರಿದವು’
ಡೊಮೀನೀಕ್ ಮೊರ್‌ಗೂ ಅವರು ಹೇಳಿದಂತೆ
ಕೊನೆಗೂ 1998ರ ಡಿಸೆಂಬರ್ ತಿಂಗಳಿನಲ್ಲಿ ನಾನು ಆಫ್ರಿಕದಲ್ಲಿದ್ದೆ! ನನ್ನ ಬಾಲ್ಯದ ಕನಸು ಈಗ ನನಸಾಯಿತು. ಆಫ್ರಿಕದ ವಿಶಾಲವಾದ ಪ್ರದೇಶಗಳು ಮತ್ತು ಅಲ್ಲಿನ ರೋಮಾಂಚನ ಹುಟ್ಟಿಸುವ ವನ್ಯಜೀವಿಗಳ ಕುರಿತು ಆಲೋಚಿಸಿದಾಗೆಲ್ಲ ನನ್ನ ಮೈ ಜುಮ್ಮೆನ್ನುತ್ತಿತ್ತು. ಈಗ ನಾನು ಅಲ್ಲಿಗೇ ತಲಪಿದ್ದೆ! ಅದೇ ಸಮಯದಲ್ಲಿ, ನನ್ನ ಮತ್ತೊಂದು ಕನಸು ಸಹ ನನಸಾಯಿತು. ನಾನು ಹೊರದೇಶವೊಂದರಲ್ಲಿ ಪೂರ್ಣ ಸಮಯದ ಸೌವಾರ್ತಿಕಳಾಗಿದ್ದೆ. ಅನೇಕರಿಗೆ, ಇದು ಅಸಾಧ್ಯವಾದ ಸಂಗತಿಯಾಗಿ ಕಂಡುಬಂದಿರಬಹುದು. ನನ್ನ ದೃಷ್ಟಿಶಕ್ತಿ ತೀರ ಕಡಿಮೆಯಾಗಿದೆ, ಮತ್ತು ಯೂರೋಪಿನ ನಗರಗಳ ಬೀದಿಗಳಿಗಾಗಿ ತರಬೇತುಗೊಳಿಸಲ್ಪಟ್ಟಿರುವ ಒಂದು ಮಾರ್ಗದರ್ಶಿ ನಾಯಿಯ ಸಹಾಯದಿಂದ ಆಫ್ರಿಕದ ಮರಳಿನ ಬೀದಿಗಳಲ್ಲಿ ನಾನು ನಡೆದಾಡುತ್ತೇನೆ. ಆಫ್ರಿಕದಲ್ಲಿ ಸೇವೆ ಮಾಡುವುದು ನನಗೆ ಹೇಗೆ ಸಾಧ್ಯವಾಯಿತು ಮತ್ತು ಯೆಹೋವನು ‘ನನ್ನ ಹೃದಯದ ಅಪೇಕ್ಷೆಗಳನ್ನು’ ಹೇಗೆ ಈಡೇರಿಸಿದನು ಎಂಬುದನ್ನು ನಿಮಗೆ ತಿಳಿಸುತ್ತೇನೆ.—ಕೀರ್ತನೆ 37:4, NIBV.
ಇಸವಿ 1966ರ ಜೂನ್ 9ರಂದು ನಾನು ಫ್ರಾನ್ಸ್‌ನ ದಕ್ಷಿಣ ಭಾಗದಲ್ಲಿ ಜನಿಸಿದೆ. ನಾನು ಏಳು ಮಂದಿ ಮಕ್ಕಳಲ್ಲಿ ಕೊನೆಯವಳು. ನನಗೆ ಇಬ್ಬರು ಅಣ್ಣಂದಿರು ಮತ್ತು ನಾಲ್ಕು ಮಂದಿ ಅಕ್ಕಂದಿರು ಇದ್ದಾರೆ. ನಮ್ಮ ಹೆತ್ತವರು ನಮ್ಮೆಲ್ಲರನ್ನು ತುಂಬ ಪ್ರೀತಿಯಿಂದ ಪರಾಮರಿಸಿದರು. ಆದರೂ, ನನ್ನ ಎಳೆಯ ಜೀವನದಲ್ಲಿ ಒಂದು ಕಪ್ಪು ಚುಕ್ಕೆಯಿತ್ತು. ನನ್ನ ಅಜ್ಜಿ, ತಾಯಿ ಮತ್ತು ಒಬ್ಬ ಅಕ್ಕನಿಗಿದ್ದಂತೆ ಕಾಲಕ್ರಮೇಣ ದೃಷ್ಟಿಯನ್ನು ಸಂಪೂರ್ಣವಾಗಿ ಕಳೆದುಕೊಳ್ಳುವಂತೆ ಮಾಡುವ ಆನುವಂಶಿಕ ರೋಗ ನನಗೂ ಇತ್ತು.
ಹದಿವಯಸ್ಕಳಾಗಿದ್ದಾಗ ನಾನು ಜಾತಿಭೇದ, ಪೂರ್ವಗ್ರಹ ಮತ್ತು ಕಪಟತನವನ್ನು ಎದುರಿಸಬೇಕಾಗಿ ಬಂತು ಮತ್ತು ಇದು ಸಮಾಜದ ವಿರುದ್ಧ ದಂಗೆಯೇಳುವಂತೆ ನನ್ನನ್ನು ಪ್ರಚೋದಿಸಿತು. ಈ ಕಷ್ಟಕರ ಸಮಯದಲ್ಲೇ ನಾವು ಆ್ಯರೊ ಎಂಬ ಕ್ಷೇತ್ರಕ್ಕೆ ಸ್ಥಳಾಂತರಿಸಿದೆವು. ಅಲ್ಲಿ, ಒಂದು ಗಮನಾರ್ಹವಾದ ವಿಷಯವು ಸಂಭವಿಸಿತು.
ಒಂದು ಭಾನುವಾರ ಬೆಳಗ್ಗೆ, ಇಬ್ಬರು ಯೆಹೋವನ ಸಾಕ್ಷಿಗಳು ನಮ್ಮ ಮನೆಗೆ ಭೇಟಿಯಿತ್ತರು. ನನ್ನ ತಾಯಿಗೆ ಅವರ ಪರಿಚಯ ಇತ್ತು ಮತ್ತು ಅವರನ್ನು ಮನೆಯೊಳಗೆ ಬರಮಾಡಿಕೊಂಡರು. ಸಾಕ್ಷಿಗಳಲ್ಲಿ ಒಬ್ಬಳು, ‘ಒಂದು ದಿನ ನಾನು ಬೈಬಲ್ ಅಧ್ಯಯನವನ್ನು ಸ್ವೀಕರಿಸುತ್ತೇನೆ ಎಂದು ನೀವು ಮಾತುಕೊಟ್ಟದ್ದು ನಿಮಗೆ ನೆನಪಿದೆಯೋ’ ಗಲಾತ್ಯ 2:14.
ಎಂದು ತಾಯಿಯನ್ನು ಕೇಳಿದಳು. ತಾಯಿಗೆ ಅದು ನೆನಪಿತ್ತು, ಮತ್ತು “ಯಾವಾಗ ಆರಂಭಿಸೋಣ?” ಎಂದು ಅಮ್ಮ ಸಾಕ್ಷಿಗಳಿಗೆ ಕೇಳಿದರು. ಪ್ರತಿ ಭಾನುವಾರ ಬೆಳಗ್ಗೆ ಅಧ್ಯಯನವನ್ನು ನಡೆಸುವ ಏರ್ಪಾಡು ಮಾಡಲ್ಪಟ್ಟಿತು, ಮತ್ತು ಈ ರೀತಿಯಲ್ಲಿ ತಾಯಿ “ಸುವಾರ್ತೆಯ ಸತ್ಯಾರ್ಥದ” ಕುರಿತು ಕಲಿಯಲು ಆರಂಭಿಸಿದರು.—ಒಳನೋಟವನ್ನು ಪಡೆದುಕೊಳ್ಳುವುದು
ತಾನು ಕಲಿಯುತ್ತಿರುವ ವಿಷಯಗಳನ್ನು ಅರ್ಥಮಾಡಿಕೊಂಡು ಜ್ಞಾಪಕದಲ್ಲಿಟ್ಟುಕೊಳ್ಳಲು ಅಮ್ಮ ಶತಪ್ರಯತ್ನ ಮಾಡಿದರು. ದೃಷ್ಟಿಯನ್ನು ಕಳೆದುಕೊಂಡಿದ್ದರಿಂದ ಅವರು ಎಲ್ಲವನ್ನೂ ತಮ್ಮ ಮನಪಟಲದಲ್ಲಿ ಬರೆದುಕೊಳ್ಳಬೇಕಾಗಿತ್ತು. ಸಾಕ್ಷಿಗಳು ಅವರೊಂದಿಗೆ ತುಂಬ ತಾಳ್ಮೆಯಿಂದ ನಡೆದುಕೊಂಡರು. ನಾನಾದರೋ, ಸಾಕ್ಷಿಗಳು ಬಂದಾಗೆಲ್ಲ ನನ್ನ ಕೋಣೆಯಲ್ಲಿ ಅಡಗಿಕೊಳ್ಳುತ್ತಿದ್ದೆ ಮತ್ತು ಅವರು ಹೋದ ನಂತರವೇ ಹೊರಗೆ ಬರುತ್ತಿದ್ದೆ. ಆದರೆ ಒಂದು ದಿನ ಮಧ್ಯಾಹ್ನ ಆ ಸಾಕ್ಷಿಗಳಲ್ಲಿ ಒಬ್ಬಳಾದ ಯುಜೀನೀ ನನ್ನನ್ನು ಭೇಟಿಮಾಡಿ ನನ್ನೊಂದಿಗೆ ಮಾತಾಡಿದಳು. ದೇವರ ರಾಜ್ಯವು ಎಲ್ಲ ಕಪಟತನ, ದ್ವೇಷ ಮತ್ತು ಪೂರ್ವಗ್ರಹವನ್ನು ಈ ಲೋಕದಿಂದ ತೆಗೆದುಹಾಕುವುದು ಎಂದು ಅವಳು ನನಗೆ ತಿಳಿಸಿದಳು. “ಪರಿಹಾರವು ದೇವರ ಕೈಯಲ್ಲಿ ಮಾತ್ರ ಇದೆ” ಎಂದು ಅವಳು ಹೇಳಿದಳು. ನನಗೆ ಹೆಚ್ಚನ್ನು ಕಲಿಯಲು ಮನಸ್ಸಿದೆಯೋ ಎಂದು ಅವಳು ಕೇಳಿದಳು. ಮರುದಿನವೇ ನಾನು ನನ್ನ ಬೈಬಲ್ ಅಧ್ಯಯನವನ್ನು ಆರಂಭಿಸಿದೆ.
ನಾನು ಕಲಿಯುತ್ತಿದ್ದ ಎಲ್ಲ ವಿಷಯಗಳು ನನಗೆ ಹೊಸದಾಗಿದ್ದವು. ದೇವರು ಈ ಭೂಮಿಯಲ್ಲಿ ತಾತ್ಕಾಲಿಕವಾಗಿ ದುಷ್ಟತನವನ್ನು ಅನುಮತಿಸಿರುವುದು ಸಕಾರಣಗಳಿಗಾಗಿಯೇ ಎಂಬುದನ್ನು ನಾನು ಈಗ ಅರ್ಥಮಾಡಿಕೊಂಡೆ. (ಆದಿಕಾಂಡ 3:15; ಯೋಹಾನ 3:16; ರೋಮಾಪುರ 9:17) ಯೆಹೋವನು ನಮ್ಮನ್ನು ನಿರೀಕ್ಷಾಹೀನವಾಗಿ ಬಿಟ್ಟಿರುವುದಿಲ್ಲ ಎಂಬುದನ್ನು ಸಹ ನಾನು ಕಲಿತುಕೊಂಡೆ. ಪರದೈಸ್ ಭೂಮಿಯಲ್ಲಿ ನಿತ್ಯಜೀವವನ್ನು ಅನುಭವಿಸುವ ಅದ್ಭುತಕರ ವಾಗ್ದಾನವನ್ನು ಆತನು ಮಾಡಿದ್ದಾನೆ. (ಕೀರ್ತನೆ 37:29; 96:11, 12; ಯೆಶಾಯ 35:1, 2; 45:18) ಆ ಪರದೈಸಿನಲ್ಲಿ, ನಾನು ನಿಧಾನವಾಗಿ ಕಳೆದುಕೊಳ್ಳುತ್ತಿದ್ದ ದೃಷ್ಟಿಶಕ್ತಿಯನ್ನು ಪುನಃ ಪಡೆದುಕೊಳ್ಳುವೆನು.—ಯೆಶಾಯ 35:5.
ಪೂರ್ಣ ಸಮಯದ ಸೇವೆಯನ್ನು ಆರಂಭಿಸುವುದು
ಇಸವಿ 1985ರ ಡಿಸೆಂಬರ್ 12ರಂದು, ನನ್ನ ಅಕ್ಕ ಮಾರೀ-ಕ್ಲೇರ್‌ನಂತೆ ಯೆಹೋವನಿಗೆ ನಾನು ಮಾಡಿರುವ ಸಮರ್ಪಣೆಯ ಸಂಕೇತವಾಗಿ ನೀರಿನ ದೀಕ್ಷಾಸ್ನಾನವನ್ನು ಪಡೆದುಕೊಂಡೆ. ನನ್ನ ಅಣ್ಣನಾದ ಷಾನ್-ಪಯರ್ ಮತ್ತು ನನ್ನ ಪ್ರೀತಿಯ ತಾಯಿ ಸಹ ಶೀಘ್ರದಲ್ಲೇ ದೀಕ್ಷಾಸ್ನಾನವನ್ನು ಪಡೆದುಕೊಂಡರು.
ನಾನು ಸಹವಾಸಿಸುತ್ತಿದ್ದ ಸಭೆಯಲ್ಲಿ, ಅನೇಕ ಮಂದಿ ರೆಗ್ಯುಲರ್ ಪಯನೀಯರರು ಅಥವಾ ಪೂರ್ಣ ಸಮಯದ ಸೌವಾರ್ತಿಕರಿದ್ದರು. ಶುಶ್ರೂಷೆಯ ವಿಷಯದಲ್ಲಿ ಅವರು ಹೊಂದಿದ್ದ ಸಂತೋಷ ಮತ್ತು ಉತ್ಸಾಹವು ನನ್ನನ್ನು ಪ್ರೋತ್ಸಾಹಿಸಿತು. ಕಣ್ಣಿನ ರೋಗದಿಂದ ಬಾಧಿಸಲ್ಪಟ್ಟಿದ್ದ ಮತ್ತು ಕಾಲಿನ ಸಮಸ್ಯೆಯಿಂದಾಗಿ ಒಂದು ಸಾಧನವನ್ನು ಅಳವಡಿಸಿಕೊಂಡಿದ್ದ ಮಾರೀ-ಕ್ಲೇರ್ ಸಹ ಪೂರ್ಣ ಸಮಯದ ಸೇವೆಯನ್ನು ಪ್ರವೇಶಿಸಿದಳು. ಇಂದಿನ ವರೆಗೂ ಅವಳು ನನಗೆ ಆಧ್ಯಾತ್ಮಿಕ ಪ್ರೋತ್ಸಾಹನೆಯನ್ನು ನೀಡುತ್ತಿದ್ದಾಳೆ. ಸಭೆಯಲ್ಲಿ ಮತ್ತು ಕುಟುಂಬದಲ್ಲಿ ಪಯನೀಯರರಿಂದ ಸುತ್ತುವರಿಯಲ್ಪಟ್ಟಿದ್ದದ್ದು ಪೂರ್ಣ ಸಮಯದ ಸೇವೆಯಲ್ಲಿ ಸ್ವತಃ ಪಾಲ್ಗೊಳ್ಳುವ ಕಡುಬಯಕೆಯನ್ನು ಬೆಳೆಸಿಕೊಳ್ಳಲು ನನಗೆ ಸಹಾಯಮಾಡಿತು. ಆದುದರಿಂದ, 1990ರ ನವೆಂಬರ್ ತಿಂಗಳಿನಲ್ಲಿ, ನಾನು ಬೆಸ್‌ಯೆ ಪಟ್ಟಣದಲ್ಲಿ ಒಬ್ಬ ಪಯನೀಯರಳಾಗಿ ನನ್ನ ಸೇವೆಯನ್ನು ಆರಂಭಿಸಿದೆ.—ಕೀರ್ತನೆ 94:17-19.
ನಿರುತ್ಸಾಹದೊಂದಿಗೆ ಹೋರಾಡುವುದು
ಶುಶ್ರೂಷೆಯಲ್ಲಿ ನಾನು ಇತರ ಪಯನೀಯರರ ನಿಗಾವಣೆಯ ಪರಾಮರಿಕೆಯಿಂದ ಸಹಾಯವನ್ನು ಪಡೆದುಕೊಂಡೆ. ಆದರೂ, ನನ್ನ ಇತಿಮಿತಿಗಳಿಂದಾಗಿ ನಾನು ಆಗಿಂದಾಗ್ಗೆ ನಿರುತ್ಸಾಹಗೊಳ್ಳುತ್ತಿದ್ದೆ ಮತ್ತು ಹೆಚ್ಚನ್ನು ಮಾಡಬೇಕೆಂದು ಹಾರೈಸುತ್ತಿದ್ದೆ. ಆದರೂ, ಯೆಹೋವನು ನಿರುತ್ಸಾಹದ ಆ ಅವಧಿಗಳಲ್ಲಿ ನನ್ನಲ್ಲಿ ಬಲವನ್ನು ತುಂಬಿಸಿದನು. ನಾನು ವಾಚ್ ಟವರ್ ಪಬ್ಲಿಕೇಷನ್ಸ್ ಇಂಡೆಕ್ಸ್‌ನಲ್ಲಿ ಸಂಶೋಧನೆಮಾಡಿ, ನನ್ನ ಹಾಗೆ ದೃಷ್ಟಿಶಕ್ತಿ ಕೊರತೆಯನ್ನು ಅನುಭವಿಸಿದ ಪಯನೀಯರರ ಜೀವನ ಕಥೆಗಳಿಗಾಗಿ ಹುಡುಕಿದೆ. ಅಂಥವರು ಎಷ್ಟು ಮಂದಿ ಇದ್ದಾರೆ ಎಂಬುದನ್ನು ತಿಳಿದುಕೊಂಡಾಗ ನನಗೆ ಆಶ್ಚರ್ಯವಾಯಿತು! ಈ ಪ್ರಾಯೋಗಿಕ ಮತ್ತು ಪ್ರೋತ್ಸಾಹದಾಯಕವಾದ ವೃತ್ತಾಂತಗಳು ನನ್ನಿಂದ ಮಾಡಸಾಧ್ಯವಿರುವಂಥದ್ದನ್ನು ಗಣ್ಯಮಾಡುವಂತೆ ಹಾಗೂ ನನ್ನ ಇತಿಮಿತಿಗಳನ್ನು ಸ್ವೀಕರಿಸುವಂತೆ ನನಗೆ ಕಲಿಸಿದವು.
ನನ್ನ ಅಗತ್ಯಗಳನ್ನು ಪೂರೈಸಿಕೊಳ್ಳುವುದಕ್ಕೋಸ್ಕರ ನಾನು ಇತರ ಸಾಕ್ಷಿಗಳೊಂದಿಗೆ ಶಾಪಿಂಗ್ ಮಾಲ್‌ಗಳನ್ನು ಶುಚಿಮಾಡಲು ಹೋಗುತ್ತಿದ್ದೆ. ಒಂದು ದಿನ ನಾನು ಶುಚಿಮಾಡಿದ್ದ ಸ್ಥಳವನ್ನು ನನ್ನ ಜೊತೆಕೆಲಸಗಾರರು ಪುನಃ ಹೋಗಿ ಶುಚಿಮಾಡುತ್ತಿರುವುದನ್ನು ನೋಡಿದೆ. ನಾನು ಹೆಚ್ಚಿನ ಕಸವನ್ನು ಹಾಗೆಯೇ ಬಿಡುತ್ತಿದ್ದೆನೆಂದು ನನಗೆ ಅರ್ಥವಾಯಿತು. ನಮ್ಮ ಶುಚಿಮಾಡುವ ತಂಡದ ಜವಾಬ್ದಾರಿ ವಹಿಸಿದ್ದ ಪಯನೀಯರಳಾದ ವಾಲೆರೀಯ ಬಳಿಗೆ ಹೋಗಿ, ನಾನು ಇತರರಿಗೆ ಹೆಚ್ಚು ಕಷ್ಟವನ್ನು ಕೊಡುತ್ತಿದ್ದೇನಾ ಎಂಬುದರ ಬಗ್ಗೆ ಮುಚ್ಚುಮರೆಯಿಲ್ಲದೆ ತಿಳಿಸುವಂತೆ ಕೇಳಿದೆ. ನಾನು ಎಂದಿನಿಂದ ಆ ಕೆಲಸವನ್ನು ಮಾಡಲು ಅಶಕ್ತಳಾಗಿದ್ದೇನೆ ಎಂಬುದನ್ನು ಸ್ವತಃ ನಿರ್ಧರಿಸುವಂತೆ ಆ ಸಹೋದರಿ ನನಗೆ ದಯಾಪೂರ್ವಕವಾಗಿ ಹೇಳಿದಳು. 1994ರ ಮಾರ್ಚ್ ತಿಂಗಳಿನಲ್ಲಿ ನಾನು ಆ ಶುಚಿಮಾಡುವ ಕೆಲಸವನ್ನು ಬಿಟ್ಟುಬಿಟ್ಟೆ.
ಪುನಃ, ನಾನು ಅಪ್ರಯೋಜಕಳು ಎಂಬ ಅನಿಸಿಕೆಯು ನನ್ನನ್ನು ಕಾಡಿಸಲಾರಂಭಿಸಿತು. ನಾನು ಯೆಹೋವನಿಗೆ ಕಟ್ಟಾಸಕ್ತಿಯಿಂದ ಪ್ರಾರ್ಥಿಸಿದೆ ಮತ್ತು ಆತನು ನನ್ನ ಬಿನ್ನಹಗಳಿಗೆ ಕಿವಿಗೊಟ್ಟನು ಎಂಬುದು ನನಗೆ ತಿಳಿದಿದೆ. ಪುನಃ ಒಮ್ಮೆ ಬೈಬಲನ್ನು ಮತ್ತು ಕ್ರೈಸ್ತ ಪ್ರಕಾಶನಗಳನ್ನು ಅಧ್ಯಯನಮಾಡುವುದು ತುಂಬ ಸಹಾಯವನ್ನು ನೀಡಿತು. ಆದರೂ, ನನ್ನ ದೃಷ್ಟಿಶಕ್ತಿ ಕುಂದುತ್ತಿದ್ದ ಅದೇ ಸಮಯದಲ್ಲಿ, ಯೆಹೋವನನ್ನು ಸೇವಿಸುವ ನನ್ನ ಬಯಕೆಯು ಬಲಗೊಳ್ಳುತ್ತಾ ಇತ್ತು. ನಾನೇನು ಮಾಡಸಾಧ್ಯವಿತ್ತು?
ಮೊದಲು ಕಾಯಬೇಕಾಯಿತು, ನಂತರ ಕ್ಷಿಪ್ರ ತೀರ್ಮಾನ ಮಾಡಬೇಕಾಯಿತು
ನೀಮ್‌ನ ರೀಹಬಿಲಿಟೇಷನ್ ಸೆಂಟರ್‌ನಲ್ಲಿ ಕುರುಡರು ಮತ್ತು ದೃಷ್ಟಿಶಕ್ತಿಯ ತೊಂದರೆಯಿದ್ದವರಿಗೆ ಕೊಡಲ್ಪಡುತ್ತಿದ್ದ ತರಬೇತಿಯನ್ನು ಪಡೆದುಕೊಳ್ಳಲಿಕ್ಕಾಗಿ ನಾನು ಅರ್ಜಿಯನ್ನು ಹಾಕಿದೆ. ಮತ್ತು ಕೊನೆಗೆ, ಮೂರು ತಿಂಗಳಿಗಾಗಿ ಅಲ್ಲಿ ದಾಖಲಾದೆ. ಅಲ್ಲಿ ನಾನು ಕಳೆದ ಸಮಯವು ಸಾರ್ಥಕವಾಗಿತ್ತು. ನಾನು ನನ್ನ ಅಂಗವಿಕಲತೆಯ ತೀವ್ರತೆಯನ್ನು ತಿಳಿದುಕೊಂಡೆ ಮತ್ತು ಅದರೊಂದಿಗೆ ಹೊಂದಿಕೊಳ್ಳಲು ಕಲಿತುಕೊಂಡೆ. ಎಲ್ಲ ರೀತಿಯ ನ್ಯೂನತೆಗಳಿಂದ ಬಾಧಿಸಲ್ಪಟ್ಟಿದ್ದ ಜನರೊಂದಿಗೆ ಸಹವಾಸಿಸುವುದು, ನನ್ನ ಕ್ರೈಸ್ತ ನಿರೀಕ್ಷೆಯು ಎಷ್ಟು ಅಮೂಲ್ಯವಾದದ್ದಾಗಿದೆ ಎಂಬುದನ್ನು ಗ್ರಹಿಸಿಕೊಳ್ಳಲು ಸಹಾಯಮಾಡಿತು. ನನಗೆ ಕಡಿಮೆಪಕ್ಷ ಜೀವನದಲ್ಲಿ ಒಂದು ಗುರಿಯಿತ್ತು ಮತ್ತು ನಾನು ಪ್ರಯೋಜನಕರವಾದ ಕೆಲಸವನ್ನು ಮಾಡಲು ಶಕ್ತಳಾಗಿದ್ದೆ. ಅಷ್ಟುಮಾತ್ರವಲ್ಲದೆ, ನಾನು ಫ್ರೆಂಚ್ ಬ್ರೆಯ್ಲ್ ಲಿಪಿಯನ್ನು ಸಹ ಕಲಿತೆ.
ನಾನು ಮನೆಗೆ ಹಿಂದಿರುಗಿದಾಗ, ಈ ತರಬೇತಿಯು ನನಗೆ ಎಷ್ಟು ಸಹಾಯಮಾಡಿದೆ ಎಂಬುದನ್ನು ನನ್ನ ಕುಟುಂಬವು ಗಮನಿಸಿತು. ಆದರೆ ನನಗೆ ಅಷ್ಟು ಇಷ್ಟವಾಗದ ಒಂದು ವಿಷಯವು ಆ ಬಿಳಿ ಕೋಲಾಗಿತ್ತು. ನನಗೆ ಆ ಕೋಲನ್ನು ಉಪಯೋಗಿಸುವುದೆಂದರೆ ತೀರ ಜಿಗುಪ್ಸೆಯಾಗುತ್ತಿತ್ತು. ಅದರ ಬದಲಿಗೆ ಬೇರೊಂದು ಸಹಾಯಕವನ್ನು ಹೊಂದಿರುವುದು ಒಳ್ಳೇದಾಗಿರಬಹುದು ಎಂದು ನನಗೆ ತೋರಿತು. ಪ್ರಾಯಶಃ ಒಂದು ಮಾರ್ಗದರ್ಶಿ ನಾಯಿ ಇದ್ದರೆ ಒಳ್ಳೇದೆಂದು ನನಗನಿಸಿತು.
ನಾನು ಇಂತಹ ಒಂದು ನಾಯಿಗಾಗಿ ನನ್ನ ಬೇಡಿಕೆಯನ್ನು ಹಾಕಿದೆ, ಆದರೆ ಇದಕ್ಕಾಗಿ ಕಾಯುತ್ತಿರುವವರ ದೊಡ್ಡ ಪಟ್ಟಿ ಇದೆ ಎಂದು ನನಗೆ ಹೇಳಲಾಯಿತು. ಮಾತ್ರವಲ್ಲದೆ, ಏಜೆನ್ಸಿಯವರು ಒಂದು ತನಿಖೆಯನ್ನೂ ನಡೆಸಲಿಕ್ಕಿದ್ದರು. ಒಂದು ಮಾರ್ಗದರ್ಶಿ ನಾಯಿಯನ್ನು ಯಾರಿಗೆ ಬೇಕಾದರೂ ಕೊಡಲಾಗುತ್ತಿರಲಿಲ್ಲ. ಒಂದು ದಿನ, ಕುರುಡರಿಗಾಗಿ ಒಂದು ಸಂಘವನ್ನು ನಡೆಸಲು ಸಹಾಯಮಾಡುತ್ತಿದ್ದ ಒಬ್ಬ ಸ್ತ್ರೀಯು, ಸ್ಥಳಿಕ ಟೆನಿಸ್ ಕ್ಲಬ್‌ವೊಂದು ನಮ್ಮ ಕ್ಷೇತ್ರದಲ್ಲಿ ವಾಸಿಸುತ್ತಿರುವ ಒಬ್ಬ ಕುರುಡ ಅಥವಾ ಭಾಗಶಃ ಕುರುಡಾಗಿರುವ ವ್ಯಕ್ತಿಗೆ ಒಂದು ಮಾರ್ಗದರ್ಶಿ ನಾಯಿಯನ್ನು ದಾನವಾಗಿ ಕೊಡಲಿದೆ ಎಂದು ತಿಳಿಸಿದಳು. ಆ ನಾಯಿ ನನಗೆ ಕೊಡಲ್ಪಡಬೇಕೆಂಬ ಇಚ್ಛೆ ಅವಳಿಗಿದೆ ಎಂದು ಅವಳು ನನಗೆ ತಿಳಿಸಿದಳು. ನಾನದನ್ನು ಸ್ವೀಕರಿಸಿದೆನೋ? ಇದರಲ್ಲಿ ಯೆಹೋವನ ಹಸ್ತಕ್ಷೇಪ ಇದೆ ಎಂಬುದನ್ನು ಗ್ರಹಿಸಿಕೊಂಡು ಆ ದಯಾಭರಿತ ಪ್ರಸ್ತಾಪವನ್ನು ನಾನು ಸ್ವೀಕರಿಸಿದೆ. ಆದರೂ, ಆ ನಾಯಿಗಾಗಿ ನಾನು ಕಾಯಬೇಕಾಗಿತ್ತು.
ಇನ್ನೂ ಆಫ್ರಿಕದ ಬಗ್ಗೆ ಯೋಚಿಸುತ್ತಿರುವುದು
ನಾನು ಕಾಯುತ್ತಿದ್ದಾಗ ನನ್ನ ಗಮನವನ್ನು ಮತ್ತೊಂದು ಕಡೆಗೆ ತಿರುಗಿಸಿದೆ. ಆರಂಭದಲ್ಲಿ ತಿಳಿಸಿದಂತೆ, ನನಗೆ ಚಿಕ್ಕಂದಿನಿಂದ ಆಫ್ರಿಕದ ವಿಷಯದಲ್ಲಿ ತೀವ್ರ ಆಸಕ್ತಿಯಿತ್ತು. ವಿಶೇಷವಾಗಿ ಆಫ್ರಿಕದಲ್ಲಿರುವ
ಅನೇಕ ಜನರು ಬೈಬಲಿನಲ್ಲಿ ಮತ್ತು ಯೆಹೋವನನ್ನು ಸೇವಿಸುವುದರಲ್ಲಿ ಆಸಕ್ತಿಯನ್ನು ತೋರಿಸಿದ್ದಾರೆ ಎಂಬುದನ್ನು ತಿಳಿದುಕೊಂಡಾಗಲಂತೂ, ಕ್ಷೀಣಿಸುತ್ತಿರುವ ನನ್ನ ದೃಷ್ಟಿಶಕ್ತಿಯ ಹೊರತಾಗಿಯೂ ಅಲ್ಲಿಗೆ ಹೋಗಬೇಕೆಂಬ ಆಶೆಯು ನನ್ನಲ್ಲಿ ಇನ್ನೂ ಹೆಚ್ಚಾಯಿತು. ಸ್ವಲ್ಪ ಸಮಯದ ಹಿಂದೆ, ಮಾತುಮಾತಿನಲ್ಲಿ ನಾನು ಆಫ್ರಿಕಕ್ಕೆ ಒಂದು ಭೇಟಿ ನೀಡಲು ಬಯಸುತ್ತೇನೆ ಎಂದು ವಾಲೆರೀಗೆ ಹೇಳಿದ್ದೆ. ಅವಳಿಗೆ ನನ್ನೊಂದಿಗೆ ಬರಲು ಮನಸ್ಸಿದೆಯೋ ಎಂದು ಕೇಳಿದಾಗ ಅವಳು ಹೌದು ಎಂದು ಹೇಳಿದಳು, ಮತ್ತು ನಾವು ಆಫ್ರಿಕದಲ್ಲಿರುವ ಅನೇಕ ಫ್ರೆಂಚ್ ಭಾಷೆಯ ಬ್ರಾಂಚ್‌ಗಳಿಗೆ ಪತ್ರ ಬರೆದೆವು.ಟೋಗೋದಿಂದ ಒಂದು ಉತ್ತರ ಸಿಕ್ಕಿತು. ಪುಳಕಿತಗೊಂಡ ನಾನು ಅದನ್ನು ಓದಿಹೇಳುವಂತೆ ವಾಲೆರೀಗೆ ಕೇಳಿದೆ. ಪತ್ರವು ಪ್ರೋತ್ಸಾಹದಾಯಕವಾಗಿತ್ತು, ಮತ್ತು ವಾಲೆರೀ “ಹಾಗಾದರೆ ಹೋಗೋಣ” ಎಂದು ಹೇಳಿದಳು. ಬ್ರಾಂಚ್‌ನಲ್ಲಿರುವ ಸಹೋದರರನ್ನು ಸಂಪರ್ಕಿಸಿದ ಬಳಿಕ, ನನಗೆ ಟೋಗೋದ ರಾಜಧಾನಿಯಾದ ಲೋಮೇಯಲ್ಲಿ ಪಯನೀಯರ್ ಸೇವೆಮಾಡುತ್ತಿದ್ದ ಸಾಂಡ್ರಾ ಎಂಬ ಸಹೋದರಿಯನ್ನು ಸಂಪರ್ಕಿಸುವಂತೆ ಹೇಳಲಾಯಿತು. ನಾವು 1998ರ ಡಿಸೆಂಬರ್ 1ರಂದು ಹೊರಡಲು ನಿರ್ಣಯಿಸಿದೆವು.
ಈ ದೇಶವು ಎಷ್ಟು ಭಿನ್ನವಾಗಿತ್ತೋ ಅಷ್ಟೇ ಆಹ್ಲಾದಕರವಾಗಿತ್ತು ಸಹ! ನಾವು ಪ್ರಯಾಣಿಸುತ್ತಿದ್ದ ವಿಮಾನವು ಲೋಮೇಯಲ್ಲಿ ಬಂದಿಳಿದ ಮೇಲೆ ನಾವು ಹೊರಗೆ ಬಂದಾಗ, ಆಫ್ರಿಕದ ಉಷ್ಣವು ನಮ್ಮನ್ನು ಒಂದು ಕಂಬಳಿಯಂತೆ ಸುತ್ತಿಕೊಳ್ಳುವುದನ್ನು ಗ್ರಹಿಸಿದೆವು. ಅಲ್ಲಿ ಸಾಂಡ್ರಾ ನಮಗೆ ಸಿಕ್ಕಿದಳು. ಈ ಮುಂಚೆ ನಾವು ಒಬ್ಬರನ್ನೊಬ್ಬರು ನೋಡಿರಲಿಲ್ಲವಾದರೂ, ಒಂದೇ ಕ್ಷಣದಲ್ಲಿ ನಾವು ದೀರ್ಘಕಾಲದ ಸ್ನೇಹಿತರಾಗಿದ್ದೇವೋ ಎಂಬಂತೆ ನಮಗೆ ಅನಿಸಿತು. ನಾವು ಅಲ್ಲಿಗೆ ಆಗಮಿಸುವುದಕ್ಕೆ ತುಸು ಮುಂಚೆ, ಸಾಂಡ್ರಾ ಮತ್ತು ಅವಳ ಜೊತೆಗಾರ್ತಿ ಕ್ರಿಸ್ಟೀನ್ ಅನ್ನು ಒಳನಾಡಿನ ಟಾಬ್ಲೀಗ್‌ಬೋ ಎಂಬ ಚಿಕ್ಕ ಪಟ್ಟಣದಲ್ಲಿ ವಿಶೇಷ ಪಯನೀಯರರನ್ನಾಗಿ ನೇಮಿಸಲಾಗಿತ್ತು. ಈಗ ನಮಗೆ ಅವರ ಹೊಸ ನೇಮಕದಲ್ಲಿ ಜೊತೆಗೂಡುವ ಸದವಕಾಶ ಇತ್ತು. ನಾವು ಸುಮಾರು ಎರಡು ತಿಂಗಳುಗಳಿಗೆ ಅಲ್ಲಿದ್ದೆವು ಮತ್ತು ನಾವು ಅಲ್ಲಿಂದ ಹೊರಟಾಗ ನಾನು ಪುನಃ ಬರುವೆ ಎಂಬುದು ನನಗೆ ತಿಳಿದಿತ್ತು.
ಹಿಂದಿರುಗಿದ್ದಕ್ಕಾಗಿ ಸಂತೋಷ
ಫ್ರಾನ್ಸ್‌ನಲ್ಲಿ ನಾನು ಕೂಡಲೆ ಟೋಗೋಗೆ ಹೋಗುವ ನನ್ನ ಎರಡನೇ ಪ್ರಯಾಣಕ್ಕಾಗಿ ತಯಾರಿಯನ್ನು ಮಾಡಲು ಆರಂಭಿಸಿದೆ. ನನ್ನ ಕುಟುಂಬದವರ ಸಹಾಯದಿಂದ ನಾನು ಅಲ್ಲಿ ಆರು ತಿಂಗಳು ಉಳಿಯಲಿಕ್ಕಾಗಿ ಬೇಕಾಗಿರುವ ಏರ್ಪಾಡುಗಳನ್ನು ಮಾಡಿಕೊಂಡೆ. ಹೀಗೆ 1999ರ ಸೆಪ್ಟೆಂಬರ್ ತಿಂಗಳಿನಲ್ಲಿ ನಾನು ಟೋಗೋವಿನತ್ತ ನನ್ನ ಪ್ರಯಾಣವನ್ನು ಬೆಳೆಸಿದೆ. ಆದರೆ ಈ ಸಲ ನಾನು ಒಬ್ಬಳೇ ಪ್ರಯಾಣಿಸುತ್ತಿದ್ದೆ. ನನ್ನ ನ್ಯೂನತೆಯ ಹೊರತಾಗಿಯೂ ನಾನು ಒಬ್ಬಳೇ ಹೊರಡುವುದನ್ನು ನೋಡುವಾಗ ನನ್ನ ಕುಟುಂಬದವರಿಗೆ ಹೇಗನಿಸಿರಬಹುದು ಎಂಬುದನ್ನು ತುಸು ಕಲ್ಪಿಸಿಕೊಳ್ಳಿ! ಆದರೆ ಚಿಂತೆಗೊಳಗಾಗಲು ಯಾವುದೇ ಕಾರಣವಿರಲಿಲ್ಲ. ಈಗಾಗಲೇ ನನ್ನ ಕುಟುಂಬದ ಸದಸ್ಯರಂತೆ ಆಗಿಬಿಟ್ಟಿದ್ದ ನನ್ನ ಸ್ನೇಹಿತರು ನನಗಾಗಿ ಲೋಮೇಯಲ್ಲಿ ಕಾಯುತ್ತಿರುವರು ಎಂದು ನಾನು ನನ್ನ ಹೆತ್ತವರಿಗೆ ಆಶ್ವಾಸನೆ ನೀಡಿದೆ.
ಬೈಬಲಿನಲ್ಲಿ ಆಸಕ್ತಿ ತೋರಿಸುವಂಥ ಅನೇಕ ಜನರು ಇರುವ ಒಂದು ಕ್ಷೇತ್ರಕ್ಕೆ ಹಿಂದಿರುಗುವುದು ಎಂತಹ ಸಂತೋಷವನ್ನು ನೀಡಿತು! ಅಲ್ಲಿ ಜನರು ಬೀದಿಗಳಲ್ಲಿ ಬೈಬಲನ್ನು ಓದುತ್ತಾ ಇರುವುದನ್ನು ನೋಡುವುದು ಅಸಾಮಾನ್ಯವೇನಲ್ಲ. ಟಾಬ್ಲೀಗ್‌ಬೋದಲ್ಲಿ ಒಂದು ಬೈಬಲ್ ಚರ್ಚೆಯನ್ನು ಮಾಡಲಿಕ್ಕಾಗಿಯೇ ಜನರು ನಮ್ಮನ್ನು ಕೈಯಾಡಿಸಿ ಕರೆಯುವದುಂಟು. ಮತ್ತು ಇಬ್ಬರು ವಿಶೇಷ ಪಯನೀಯರ್ ಸಹೋದರಿಯರೊಂದಿಗೆ ಸರಳವಾದ ವಸತಿಸೌಕರ್ಯವನ್ನು ಹಂಚಿಕೊಳ್ಳುವುದು ಎಂತಹ ಸುಯೋಗವಾಗಿತ್ತು! ನಾನು ಮತ್ತೊಂದು ಸಂಸ್ಕೃತಿಯ ಕುರಿತು, ವಿಷಯಗಳನ್ನು ಭಿನ್ನವಾದ ರೀತಿಯಲ್ಲಿ ನೋಡುವುದನ್ನು ಕಲಿತುಕೊಂಡೆ. ಮೊಟ್ಟಮೊದಲಾಗಿ, ಆಫ್ರಿಕದಲ್ಲಿರುವ ನಮ್ಮ ಸಹೋದರ ಸಹೋದರಿಯರು ರಾಜ್ಯದ ಅಭಿರುಚಿಗಳನ್ನು ತಮ್ಮ ಜೀವನಗಳಲ್ಲಿ ಪ್ರಥಮವಾಗಿ ಇಡುವುದನ್ನು ನಾನು ಗಮನಿಸಿದೆ. ಉದಾಹರಣೆಗೆ, ರಾಜ್ಯ ಸಭಾಗೃಹಕ್ಕೆ ಬರಲು ಹಲವಾರು ಕಿಲೊಮೀಟರುಗಳು ನಡೆಯಲಿಕ್ಕಿರುವುದಾದರೂ, ಕೂಟಗಳಿಗೆ ಹಾಜರಾಗುವುದರಿಂದ ಅದು ಅವರನ್ನು ತಡೆಯುವುದಿಲ್ಲ. ಅವರ ಹಾರ್ದಿಕತೆ ಮತ್ತು ಸತ್ಕಾರಭಾವದಿಂದಲೂ ನಾನು ಅನೇಕ ಪಾಠಗಳನ್ನು ಕಲಿತುಕೊಂಡೆ.
ಒಂದು ದಿನ ಕ್ಷೇತ್ರ ಸೇವೆಯಿಂದ ಹಿಂದಿರುಗುತ್ತಿದ್ದಾಗ, ನಾನು ಫ್ರಾನ್ಸ್‌ಗೆ ಹಿಂದಿರುಗಲು ಹೆದರುತ್ತೇನೆ ಎಂದು ಸಾಂಡ್ರಾಳಿಗೆ ಹೇಳಿಕೊಂಡೆ. ನನ್ನ ದೃಷ್ಟಿಶಕ್ತಿಯು ಇನ್ನಷ್ಟು ಕ್ಷೀಣಿಸಿತ್ತು. ಮಿತವಾದ ದೃಷ್ಟಿಯನ್ನು ಹೊಂದಿರುವ ಒಬ್ಬ ವ್ಯಕ್ತಿಗೆ ಜೀವನವನ್ನು ಕಷ್ಟಕರವನ್ನಾಗಿ ಮಾಡುವ ಬೆಸ್‌ಯೆ ಪಟ್ಟಣದ ಜನನಿಬಿಡ ಹಾಗೂ ಗದ್ದಲಭರಿತ
ಬೀದಿಗಳು, ಬಹುಮಹಡಿ ಕಟ್ಟಡಗಳಲ್ಲಿರುವ ಮೆಟ್ಟಿಲುಸಾಲುಗಳು ಮತ್ತು ಇತರ ಅನೇಕ ವಿಷಯಗಳ ಕುರಿತಾಗಿ ನಾನು ಆಲೋಚಿಸಿದೆ. ಅದಕ್ಕೆ ವ್ಯತಿರಿಕ್ತವಾಗಿ, ಟಾಬ್ಲೀಗ್‌ಬೋದಲ್ಲಿರುವ ಬೀದಿಗಳು ನೆಲಗಟ್ಟು ಹರಿಸಿದ ರಸ್ತೆಗಳಾಗಿಲ್ಲವಾದರೂ ಶಾಂತವಾಗಿವೆ—ಜನನಿಬಿಡ ಸ್ಥಳವಲ್ಲ ಮತ್ತು ವಾಹನ ಓಡಾಟ ಸಹ ಅಷ್ಟೇನಿಲ್ಲ. ನನಗೆ ಟಾಬ್ಲೀಗ್‌ಬೋ ರೂಢಿಯಾಗಿಬಿಟ್ಟಿರುವುದರಿಂದ, ಫ್ರಾನ್ಸ್‌ಗೆ ಹೋಗಿ ಹೇಗೆ ತಾನೇ ಜೀವಿಸಬಲ್ಲೆ?ಎರಡು ದಿನಗಳ ತರುವಾಯ ನನ್ನ ತಾಯಿ ನನಗೆ ಕರೆಮಾಡಿ, ಮಾರ್ಗದರ್ಶಿ ನಾಯಿಗಳನ್ನು ತರಬೇತುಗೊಳಿಸುವ ಶಾಲೆಯು ನನಗಾಗಿ ಕಾಯುತ್ತಿದೆ ಎಂದು ಹೇಳಿದರು. ಓಸೆಎನ್ ಎಂಬ ಹೆಸರಿನ ಲ್ಯಾಬ್ರಡಾರ್ ನಾಯಿಯು ನನ್ನ “ಕಣ್ಣು” ಆಗಲಿಕ್ಕಿತ್ತು. ಪುನಃ ಒಮ್ಮೆ ನನ್ನ ಅಗತ್ಯಗಳು ಪೂರೈಸಲ್ಪಟ್ಟವು ಮತ್ತು ನನ್ನ ಆತಂಕಗಳು ನಿವಾರಿಸಲ್ಪಟ್ಟವು. ಟಾಬ್ಲೀಗ್‌ಬೋದಲ್ಲಿ ಆರು ತಿಂಗಳುಗಳ ಸಂತೋಷದ ಸೇವೆಯನ್ನು ಮಾಡಿದ ಬಳಿಕ, ನಾನು ಓಸೆಎನ್ ಅನ್ನು ಭೇಟಿಮಾಡಲು ಫ್ರಾನ್ಸ್‌ಗೆ ನನ್ನ ಪ್ರಯಾಣವನ್ನು ಬೆಳೆಸಿದೆ.
ಹಲವಾರು ತಿಂಗಳುಗಳ ತರಬೇತಿಯ ನಂತರ, ಓಸೆಎನ್ ಅನ್ನು ನನ್ನ ಕೈಗೆ ಒಪ್ಪಿಸಲಾಯಿತು. ಆರಂಭದಲ್ಲಿ ಅಷ್ಟು ಸುಲಭವಾಗಿರಲಿಲ್ಲ. ನಾವು ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಕಲಿಯಬೇಕಾಗಿತ್ತು. ಆದರೆ ಕಾಲಕ್ರಮೇಣ, ನನಗೆ ಓಸೆಎನ್‌ನ ಅಗತ್ಯ ಎಷ್ಟಿದೆ ಎಂಬುದನ್ನು ನಾನು ತಿಳಿದುಕೊಂಡೆ. ವಾಸ್ತವದಲ್ಲಿ, ಓಸೆಎನ್ ಈಗ ನನ್ನ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಬೆಸ್‌ಯೆದಲ್ಲಿದ್ದ ಜನರು ತಮ್ಮ ಬಾಗಿಲಿಗೆ ನಾನು ಒಂದು ನಾಯಿಯೊಂದಿಗೆ ಬರುತ್ತಿರುವುದನ್ನು ಕಂಡಾಗ ಹೇಗೆ ಪ್ರತಿಕ್ರಿಯಿಸಿದರು? ಅವರು ನನಗೆ ಹೆಚ್ಚಿನ ಗೌರವ ಮತ್ತು ದಯೆಯನ್ನು ತೋರಿಸಿದರು. ಓಸೆಎನ್ ನೆರೆಹೊರೆಯ “ಹೀರೋ” ಆಗಿ ಪರಿಣಮಿಸಿತು. ಅನೇಕರಿಗೆ ಶಾರೀರಿಕ ನ್ಯೂನತೆಯುಳ್ಳ ಒಬ್ಬ ವ್ಯಕ್ತಿಯ ಸಮ್ಮುಖದಲ್ಲಿ ಅಷ್ಟು ಹಾಯೆನಿಸುವುದಿಲ್ಲವಾದ ಕಾರಣ, ಓಸೆಎನ್ ಅನ್ನು ನನ್ನೊಂದಿಗೆ ಹೊಂದಿರುವುದರಿಂದ ನನಗೆ ನನ್ನ ನ್ಯೂನತೆಯ ಕುರಿತು ಸ್ವಾಭಾವಿಕ ರೀತಿಯಲ್ಲಿ ಮಾತಾಡಲು ಸಾಧ್ಯವಾಗುತ್ತಿತ್ತು. ಜನರು ಯಾವುದೇ ಜಿಗುಪ್ಸೆಯಿಲ್ಲದೆ ನನಗೆ ಕಿವಿಗೊಡುತ್ತಿದ್ದರು. ವಾಸ್ತವದಲ್ಲಿ, ಓಸೆಎನ್ ಅತಿ ಸಂಭನೀಯ ಸಂಭಾಷಣಾ ಪ್ರಾರಂಭಕವಾಯಿತು.
ಆಫ್ರಿಕದಲ್ಲಿ ಓಸೆಎನ್‌ನ ಒಟ್ಟಿಗೆ
ನಾನು ಆಫ್ರಿಕವನ್ನು ಮರೆತಿರಲಿಲ್ಲ, ಮತ್ತು ಈಗ ನನ್ನ ಮೂರನೇ ಪ್ರಯಾಣಕ್ಕಾಗಿ ಸಿದ್ಧತೆಗಳನ್ನು ಮಾಡಲಾರಂಭಿಸಿದೆ. ಈ ಸಲ ಓಸೆಎನ್ ನನ್ನೊಂದಿಗೆ ಬಂತು. ಯುವ ದಂಪತಿಯಾದ ಆ್ಯಂಟನಿ ಮತ್ತು ಒರೊರೋ ಹಾಗೂ ನನ್ನ ಸ್ನೇಹಿತೆ ಕ್ಯಾರೊಲೀನ್ ಸಹ ನನ್ನೊಂದಿಗೆ ಪ್ರಯಾಣಿಸುತ್ತಿದ್ದರು. ಅವರೆಲ್ಲರು ನನ್ನಂತೆ ಪಯನೀಯರರಾಗಿದ್ದರು. 2000ದ ಸೆಪ್ಟೆಂಬರ್ 10ರಂದು ನಾವು ಲೋಮೇಗೆ ಬಂದು ತಲಪಿದೆವು.
ಆರಂಭದಲ್ಲಿ, ಅನೇಕರು ಓಸೆಎನ್‌ನನ್ನು ಕಂಡು ಹೆದರುತ್ತಿದ್ದರು. ಲೋಮೇಯಲ್ಲಿರುವ ಕೆಲವು ಜನರು ಇಷ್ಟು ದೊಡ್ಡ ನಾಯಿಯನ್ನು ನೋಡಿರಲೇ ಇಲ್ಲ. ಏಕೆಂದರೆ ಟೋಗೋದಲ್ಲಿರುವ ಹೆಚ್ಚಿನ ನಾಯಿಗಳು ಚಿಕ್ಕದಾಗಿವೆ. ಓಸೆಎನ್‌ನ ತೊಗಲಪಟ್ಟಿಗಳನ್ನು ನೋಡಿದಾಗ, ಕೆಲವರು ಇದು ನಿಯಂತ್ರಣದಲ್ಲಿಡಬೇಕಾದ ಕ್ರೂರ ಮೃಗ ಎಂದು ನೆನಸಿದರು. ಓಸೆಎನ್ ಆದರೋ, ನನಗೆ ಅಪಾಯಕರ ಎಂದು ಯಾವುದನ್ನೆಲ್ಲ ನೆನಸಿತೋ ಅದರ ವಿರುದ್ಧ ನನ್ನನ್ನು ಸಂರಕ್ಷಿಸಲಿಕ್ಕಾಗಿ ಸದಾ ಸಿದ್ಧವಾಗಿರುವ ರಕ್ಷಣಾತ್ಮಕ ಮನೋಭಾವವನ್ನು ತಾಳಿಕೊಂಡಿತು. ಆದರೂ, ಶೀಘ್ರವೇ ಅದು ಹೊಸ ವಾತಾವರಣಕ್ಕೆ ಹೊಂದಿಕೊಂಡಿತು. ಅದು ತೊಗಲಪಟ್ಟಿಗಳನ್ನು ಹಾಕಿಕೊಳ್ಳುವಾಗ ಕರ್ತವ್ಯಪ್ರಜ್ಞೆಯನ್ನು ತಾಳುತ್ತಾ ನನ್ನ ಬದಿಯಲ್ಲಿದ್ದು ಶಿಸ್ತಿನಿಂದ ಮತ್ತು ಜವಾಬ್ದಾರಿಯಿಂದ ವರ್ತಿಸುತ್ತದೆ. ಅದನ್ನು ತೆಗೆದುಬಿಟ್ಟರೆ, ಆಟವಾಡುತ್ತದೆ ಮತ್ತು ಕೆಲವೊಮ್ಮೆ ತುಂಟಾಟ ಕೂಡ ಮಾಡುತ್ತದೆ. ನಾವು ಪರಸ್ಪರ ಸಹವಾಸದಲ್ಲಿ ತುಂಬ ಆನಂದಿಸುತ್ತೇವೆ.
ಟಾಬ್ಲೀಗ್‌ಬೋದಲ್ಲಿ ಸಾಂಡ್ರಾ ಮತ್ತು ಕ್ರಿಸ್ಟೀನ್‌ಳೊಂದಿಗೆ ಉಳಿಯುವಂತೆ ನಮ್ಮೆಲ್ಲರನ್ನೂ ಆಮಂತ್ರಿಸಲಾಯಿತು. ಸ್ಥಳಿಕ ಸಹೋದರ ಸಹೋದರಿಯರಿಗೆ ಓಸೆಎನ್‌ನ ಪರಿಚಯವಾಗಲಿಕ್ಕಾಗಿ, ಅವರು ನಮ್ಮನ್ನು ಬಂದು ಭೇಟಿಯಾಗುವಂತೆ ನಾವು ಕರೆದೆವು ಮತ್ತು ಒಂದು ಮಾರ್ಗದರ್ಶಿ ನಾಯಿಯ ಪಾತ್ರವನ್ನು ಹಾಗೂ ನನಗೆ ಅದರ ಆವಶ್ಯಕತೆ ಏಕಿದೆ ಮತ್ತು ಅದರ ಅಕ್ಕಪಕ್ಕದಲ್ಲಿರುವಾಗ ಅವರು ಹೇಗೆ ವರ್ತಿಸಬೇಕು ಎಂಬುದನ್ನು ವಿವರಿಸಿದೆವು. ಓಸೆಎನ್ ನನ್ನೊಟ್ಟಿಗೆ ರಾಜ್ಯ ಸಭಾಗೃಹಕ್ಕೆ ಬರಬಹುದು ಎಂದು ಹಿರಿಯರು ಒಪ್ಪಿಕೊಂಡರು. ಈ ಏರ್ಪಾಡು ಟೋಗೋವಿನಲ್ಲಿ ಅಸಾಮಾನ್ಯವಾಗಿದ್ದುದರಿಂದ, ಸಭೆಗೆ ಇದರ ಕುರಿತು ವಿವರಿಸುವ ಒಂದು ಪ್ರಕಟನೆಯನ್ನು ಮಾಡಲಾಯಿತು. ಶುಶ್ರೂಷೆಗೆ ಸಂಬಂಧಪಟ್ಟ ಮಟ್ಟಿಗೆ, ನಾನು ಪುನರ್ಭೇಟಿಗಳು ಮತ್ತು ಬೈಬಲ್ ಅಧ್ಯಯನಗಳಿಗೆ ಹೋಗುವಾಗ ಮಾತ್ರ ಓಸೆಎನ್ ನನ್ನೊಟ್ಟಿಗೆ ಬರುತ್ತಿತ್ತು—ಏಕೆಂದರೆ ಇಲ್ಲಿ ಜನರು ಅದು ಏಕೆ ನನ್ನೊಟ್ಟಿಗಿದೆ ಎಂಬುದನ್ನು ಅರ್ಥಮಾಡಿಕೊಳ್ಳುತ್ತಿದ್ದರು.
ಈ ಟೆರಿಟೊರಿಯಲ್ಲಿ ಸಾರುವ ಕೆಲಸವನ್ನು ಮಾಡುವುದು ಈಗಲೂ ಹರ್ಷಕರವಾಗಿದೆ. ದಯಾಭರಿತ ಕೃತ್ಯಗಳ ಮೂಲಕ ತಮ್ಮ ಆಲೋಚನಾಪರತೆಯನ್ನು ತೋರಿಸುತ್ತಿದ್ದ ಆ ಸೌಮ್ಯ ಸ್ವಭಾವದ ಜನರ ವಿಷಯದಲ್ಲಿ ನನಗೆ ಯಾವಾಗಲೂ ಗಣ್ಯತಾಭಾವವಿದೆ ಮತ್ತು ನನಗೆ ಕುಳಿತುಕೊಳ್ಳಲಿಕ್ಕಾಗಿ ಒಂದು ಕುರ್ಚಿಯನ್ನು ಕೊಡಲು ಅವರಿಗಿದ್ದಂಥ ತವಕವನ್ನು ನಾನು ತುಂಬ ಮೆಚ್ಚುತ್ತಿದ್ದೆ. 2001ರ ಅಕ್ಟೋಬರ್ ತಿಂಗಳಿನಲ್ಲಿ, ಟೋಗೋವಿಗೆ ನಾಲ್ಕನೇ ಬಾರಿ ಪ್ರಯಾಣಿಸುವಾಗ ನನ್ನ ತಾಯಿ ನನ್ನೊಟ್ಟಿಗೆ ಬಂದರು. ನಾನು ಸಂತೋಷವಾಗಿದ್ದೇನೆ ಮತ್ತು ಸುಖವಾಗಿದ್ದೇನೆ ಎಂಬುದನ್ನು ಖಚಿತಪಡಿಸಿಕೊಂಡು ಮೂರು ವಾರಗಳ ತರುವಾಯ ಅವರು ಫ್ರಾನ್ಸ್‌ಗೆ ಹಿಂದಿರುಗಿದರು.
ಟೋಗೋವಿನಲ್ಲಿ ಸೇವೆಯನ್ನು ಮಾಡಲು ಶಕ್ತಳಾದದ್ದಕ್ಕೆ ನಾನು ಯೆಹೋವನಿಗೆ ತುಂಬ ಆಭಾರಿಯಾಗಿದ್ದೇನೆ. ನನ್ನ ಬಳಿಯಿರುವ ಎಲ್ಲವನ್ನೂ ಯೆಹೋವನ ಸೇವೆಯಲ್ಲಿ ನಾನು ವ್ಯಯಿಸುವಾಗ ಆತನು ‘ನನ್ನ ಹೃದಯದ ಅಪೇಕ್ಷೆಗಳನ್ನು ಈಡೇರಿಸುವುದನ್ನು’ ಮುಂದುವರಿಸುವನು ಎಂಬ ಖಾತ್ರಿ ನನಗಿದೆ. *
[ಪಾದಟಿಪ್ಪಣಿ]
^ ಪ್ಯಾರ. 37 ಸಹೋದರಿ ಮೊರ್‌ಗೂ ಫ್ರಾನ್ಸ್‌ಗೆ ಹಿಂದಿರುಗಿ, 2003ರ ಅಕ್ಟೋಬರ್ 6ರಿಂದ 2004ರ ಫೆಬ್ರವರಿ 6ರ ವರೆಗೆ ಟೋಗೋವಿಗೆ ಐದನೆಯ ಬಾರಿ ಭೇಟಿಯಿತ್ತರು. ದುಃಖಕರವಾಗಿ, ವೈದ್ಯಕೀಯ ತೊಂದರೆಗಳಿಂದಾಗಿ ಅದು ಟೋಗೋವಿಗೆ ಅವರು ಈ ವಿಷಯಗಳ ವ್ಯವಸ್ಥೆಯಲ್ಲಿ ನೀಡುವ ಕೊನೆಯ ಭೇಟಿಯಾಗಿರಬಹುದು. ಆದರೂ, ಅವರಲ್ಲಿನ ಕಡುಬಯಕೆಯು ಯೆಹೋವನ ಸೇವೆ ಮಾಡುವುದನ್ನು ಮುಂದುವರಿಸುವುದೇ ಆಗಿದೆ.
[ಪುಟ 10ರಲ್ಲಿರುವ ಚಿತ್ರಗಳು]
ಆಫ್ರಿಕದ ವಿಶಾಲವಾದ ಪ್ರದೇಶಗಳು ಮತ್ತು ಅಲ್ಲಿನ ರೋಮಾಂಚನ ಹುಟ್ಟಿಸುವ ವನ್ಯಜೀವಿಗಳ ಕುರಿತು ಆಲೋಚಿಸಿದಾಗೆಲ್ಲ ನನ್ನ ಮೈ ಜುಮ್ಮೆನ್ನುತ್ತಿತ್ತು
[ಪುಟ 10ರಲ್ಲಿರುವ ಚಿತ್ರ]
ಓಸೆಎನ್ ನನ್ನೊಂದಿಗೆ ಪುನರ್ಭೇಟಿಗಳಿಗೆ ಬರುತ್ತಿತ್ತು
[ಪುಟ 11ರಲ್ಲಿರುವ ಚಿತ್ರ]
ಓಸೆಎನ್‌ನನ್ನು ಕೂಟಗಳಿಗೆ ತರುವುದಕ್ಕೆ ಹಿರಿಯರು ಒಪ್ಪಿದರು