ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಕ್ರೈಸ್ತನೊಬ್ಬನು ಶಸ್ತ್ರಸಜ್ಜಿತನಾಗಿರಬೇಕಾದ ಒಂದು ಉದ್ಯೋಗವನ್ನು ಅಂಗೀಕರಿಸುವಲ್ಲಿ, ಅವನು ಒಳ್ಳೇ ಮನಸ್ಸಾಕ್ಷಿಯನ್ನು ಕಾಪಾಡಿಕೊಳ್ಳಸಾಧ್ಯವಿದೆಯೊ?

ಲೋಕದಾದ್ಯಂತ ಇರುವ ಯೆಹೋವನ ಸಾಕ್ಷಿಗಳು, ತಮ್ಮ ಕುಟುಂಬಗಳಿಗೆ ಭೌತಿಕವಾಗಿ ಒದಗಿಸಲು ತಮಗಿರುವ ದೇವದತ್ತ ಜವಾಬ್ದಾರಿಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. (1 ತಿಮೊಥೆಯ 5:8) ಆದರೆ, ಕೆಲವೊಂದು ರೀತಿಯ ಉದ್ಯೋಗಗಳು ಬೈಬಲ್‌ ಮೂಲತತ್ತ್ವಗಳನ್ನು ನೇರವಾಗಿ ಉಲ್ಲಂಘಿಸುವಂತಿರುತ್ತದೆ ಮತ್ತು ಅಂಥದ್ದರಿಂದ ನಾವು ದೂರವಿರಬೇಕು. ಇವುಗಳಲ್ಲಿ ಜೂಜಾಟ, ರಕ್ತದ ದುರುಪಯೋಗ ಮತ್ತು ತಂಬಾಕು ಉತ್ಪನ್ನಗಳ ಉಪಯೋಗವನ್ನು ಉತ್ತೇಜಿಸುವುದಕ್ಕೆ ಸಂಬಂಧಿಸಿದ ಉದ್ಯೋಗವು ಒಳಗೂಡಿದೆ. (ಯೆಶಾಯ 65:11; ಅ. ಕೃತ್ಯಗಳು 15:29; 2 ಕೊರಿಂಥ 7:1; ಕೊಲೊಸ್ಸೆ 3:5) ಬೇರೆ ರೀತಿಯ ಕೆಲಸಗಳು ಬೈಬಲಿನಲ್ಲಿ ನೇರವಾಗಿ ಖಂಡಿಸಲ್ಪಟ್ಟಿರುವುದಿಲ್ಲವಾದರೂ, ಅವು ಒಬ್ಬನ ಮನಸ್ಸಾಕ್ಷಿಯನ್ನು ಅಥವಾ ಇತರರ ಮನಸ್ಸಾಕ್ಷಿಯನ್ನು ಘಾಸಿಗೊಳಿಸಬಲ್ಲವು.

ಒಂದು ಬಂದೂಕನ್ನು ಅಥವಾ ಇನ್ನಾವುದೇ ಆಯುಧವನ್ನು ಹಿಡಿಯುವ ಐಹಿಕ ಕೆಲಸದಲ್ಲಿ ಒಳಗೂಡಬೇಕೊ ಇಲ್ಲವೊ ಎಂಬುದು ವೈಯಕ್ತಿಕ ನಿರ್ಣಯವಾಗಿದೆ. ಆದರೆ, ಒಬ್ಬನು ತನ್ನ ಆಯುಧವನ್ನು ಉಪಯೋಗಿಸಬೇಕಾದ ಆವಶ್ಯಕತೆ ಏಳುವಾಗ, ಶಸ್ತ್ರಸಜ್ಜಿತ ಉದ್ಯೋಗವು ಅವನನ್ನು ರಕ್ತಾಪರಾಧಿಯಾಗುವಂತೆ ಮಾಡುವ ಸಾಧ್ಯತೆ ಇದೆ. ಆದುದರಿಂದ, ಮಾನವ ಜೀವವು ಒಳಗೂಡಿರುವಂಥ ಸನ್ನಿವೇಶದಲ್ಲಿ ತತ್‌ಕ್ಷಣದ ನಿರ್ಣಯವನ್ನು ಮಾಡುವ ಹೊರೆಯನ್ನು ತಾನು ಅಂಗೀಕರಿಸಲು ಸಿದ್ಧನಾಗಿದ್ದೇನೋ ಎಂಬುದನ್ನು ಕ್ರೈಸ್ತನೊಬ್ಬನು ಪ್ರಾರ್ಥನಾಪೂರ್ವಕವಾಗಿ ಪರಿಗಣಿಸುವ ಅಗತ್ಯವಿದೆ. ಒಂದು ಆಯುಧವನ್ನು ಹೊಂದಿರುವುದು ಒಬ್ಬ ವ್ಯಕ್ತಿಯನ್ನು, ಆಕ್ರಮಣ ಅಥವಾ ಪ್ರತೀಕಾರದಿಂದಾಗಿ ಗಾಯಗೊಳ್ಳುವ ಇಲ್ಲವೆ ಮರಣಕ್ಕೆ ತುತ್ತಾಗುವ ಅಪಾಯಕ್ಕೂ ಗುರಿಪಡಿಸಬಲ್ಲದು.

ಒಬ್ಬನ ನಿರ್ಣಯದಿಂದ ಇತರರು ಸಹ ಬಾಧಿತರಾಗಬಹುದು. ಉದಾಹರಣೆಗೆ, ಒಬ್ಬ ಕ್ರೈಸ್ತನ ಪ್ರಮುಖ ಜವಾಬ್ದಾರಿಯು ದೇವರ ರಾಜ್ಯದ ಸುವಾರ್ತೆಯನ್ನು ಸಾರುವುದೇ ಆಗಿದೆ. (ಮತ್ತಾಯ 24:14) ಒಬ್ಬನು ಆಯುಧವನ್ನು ಹಿಡಿದು ಜೀವನೋಪಾಯಮಾಡುತ್ತಿದ್ದು, ಅದೇ ಸಮಯದಲ್ಲಿ ಇತರರಿಗೆ “ಎಲ್ಲರ ಸಂಗಡ ಸಮಾಧಾನದಿಂದಿರಿ” ಎಂದು ಬೋಧಿಸಸಾಧ್ಯವಿದೆಯೋ? (ರೋಮಾಪುರ 12:18) ಮಕ್ಕಳ ಅಥವಾ ಕುಟುಂಬದ ಇತರ ಸದಸ್ಯರ ಕುರಿತಾಗಿ ಏನು? ಮನೆಯಲ್ಲಿ ಒಂದು ಕೈಬಂದೂಕು ಇರುವುದು ಅವರ ಜೀವಕ್ಕೆ ಅಪಾಯಕರವಾಗಿರಸಾಧ್ಯವಿದೆಯೋ? ಅಷ್ಟುಮಾತ್ರವಲ್ಲ, ಈ ವಿಷಯದಲ್ಲಿ ಒಬ್ಬನ ನಿಲುವಿನಿಂದ ಇತರರು ಎಡವುವ ಸಾಧ್ಯತೆಯಿದೆಯೊ?​—⁠ಫಿಲಿಪ್ಪಿ 1:​10, NW.

ಈ “ಕಡೇ ದಿವಸಗಳಲ್ಲಿ” ಹೆಚ್ಚೆಚ್ಚು ಜನರು ‘ಉಗ್ರತೆಯುಳ್ಳವರು, ಒಳ್ಳೇದನ್ನು ಪ್ರೀತಿಸದಿರುವವರು’ ಆಗಿದ್ದಾರೆ. (2 ತಿಮೊಥೆಯ 3:1, 3) ಇದನ್ನು ತಿಳಿದವನಾಗಿದ್ದು, ಒಬ್ಬ ವ್ಯಕ್ತಿಯು ಇಂಥ ವ್ಯಕ್ತಿತ್ವವಿರುವ ಜನರೊಂದಿಗೆ ಅವನನ್ನು ಘರ್ಷಣೆಗೆ ಒಡ್ಡಬಹುದಾದ ಶಸ್ತ್ರಸಜ್ಜಿತ ಉದ್ಯೋಗವನ್ನು ಆಯ್ಕೆಮಾಡುವಲ್ಲಿ, ಅವನ ಮೇಲೆ ‘ಯಾರೂ ತಪ್ಪುಹೊರಿಸದೆ’ ಇರಸಾಧ್ಯವಿದೆಯೊ? (1 ತಿಮೊಥೆಯ 3:10) ಖಂಡಿತವಾಗಿಯೂ ಇಲ್ಲ. ಈ ಕಾರಣದಿಂದಲೇ, ಅಂಥ ಒಬ್ಬ ವ್ಯಕ್ತಿಗೆ ದಯಾಪೂರ್ವಕವಾಗಿ ಬೈಬಲ್‌ ಸಲಹೆಯು ಕೊಡಲ್ಪಟ್ಟ ಬಳಿಕವೂ ಅವನು ಆಯುಧ ಹಿಡಿಯುವುದನ್ನು ಮುಂದುವರಿಸುವಲ್ಲಿ, ಸಭೆಯು ಅವನನ್ನು “ದೋಷಾರೋಪಣೆಯಿಲ್ಲದವನು” ಎಂದು ಪರಿಗಣಿಸುವುದಿಲ್ಲ. (1 ತಿಮೊಥೆಯ 3:2; ತೀತ 1:5, 6) ಹೀಗೆ, ಅಂಥ ಪುರುಷನು ಅಥವಾ ಸ್ತ್ರೀಯು ಸಭೆಯಲ್ಲಿ ಯಾವುದೇ ವಿಶೇಷ ಸುಯೋಗಗಳಿಗೆ ಅರ್ಹರಾಗುವುದಿಲ್ಲ.

ತನ್ನ ಶಿಷ್ಯರು ತಮ್ಮ ಜೀವಿತಗಳಲ್ಲಿ ರಾಜ್ಯಾಭಿರುಚಿಗಳಿಗೆ ಪ್ರಥಮ ಸ್ಥಾನವನ್ನು ಕೊಡುವಲ್ಲಿ, ಜೀವನಾವಶ್ಯಕತೆಗಳನ್ನು ಪೂರೈಸುವುದರ ಕುರಿತು ಅವರು ವಿಪರೀತವಾಗಿ ಚಿಂತಿಸುವ ಅಗತ್ಯವಿಲ್ಲ ಎಂದು ಯೇಸು ಅವರಿಗೆ ಆಶ್ವಾಸನೆ ನೀಡಿದನು. (ಮತ್ತಾಯ 6:25, 33) ನಿಶ್ಚಯವಾಗಿಯೂ, ನಾವು ಯೆಹೋವನಲ್ಲಿ ಪೂರ್ಣ ಭರವಸೆಯನ್ನಿಡುವುದಾದರೆ, ‘ಆತನು [ನಮ್ಮನ್ನು] ಉದ್ಧಾರಮಾಡುವನು. ಆತನು ನೀತಿವಂತನನ್ನು ಎಂದಿಗೂ ಕದಲಗೊಡಿಸನು.’​—⁠ಕೀರ್ತನೆ 55:⁠22.