‘ನಿಮ್ಮೆಲ್ಲರ ಪ್ರೀತಿಯು ಹೆಚ್ಚುತ್ತಾ ಬರುತ್ತಿದೆ’
‘ನಿಮ್ಮೆಲ್ಲರ ಪ್ರೀತಿಯು ಹೆಚ್ಚುತ್ತಾ ಬರುತ್ತಿದೆ’
ಇಸವಿ 2004ರಲ್ಲಿ ಜಪಾನಿನಲ್ಲಿ ಅನೇಕ ನೈಸರ್ಗಿಕ ವಿಪತ್ತುಗಳು ಸಂಭವಿಸಿದವು. ಇವುಗಳಲ್ಲಿ ತುಫಾನುಗಳು, ಪ್ರವಾಹಗಳು ಮತ್ತು ಭೂಕಂಪಗಳು ಸೇರಿದ್ದವು. ಇವು ಯೆಹೋವನ ಸಾಕ್ಷಿಗಳನ್ನೂ ಸೇರಿಸಿ ಅನೇಕರ ಜೀವನವನ್ನು ಗಂಭೀರವಾಗಿ ಬಾಧಿಸಿದವು. (ಪ್ರಸಂಗಿ 9:11) ಆದರೂ, ಈ ಪ್ರತಿಕೂಲ ಪರಿಸ್ಥಿತಿಗಳು, ಸಾಕ್ಷಿಗಳು ಒಬ್ಬರು ಇನ್ನೊಬ್ಬರಿಗೆ ಸಹೋದರ ಪ್ರೀತಿಯನ್ನು ತೋರಿಸಲು ಸದವಕಾಶಗಳನ್ನು ನೀಡಿದವು.—1 ಪೇತ್ರ 1:22.
ಉದಾಹರಣೆಗೆ, ಜುಲೈ ತಿಂಗಳಿನಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದ ಕಾರಣ, ಮಧ್ಯ ಜಪಾನಿನಲ್ಲಿದ್ದ ನದಿಯೊಂದು ದಡವನ್ನು ಉಕ್ಕಿಹರಿಯಿತು. ನೀರಿನ ಪ್ರವಾಹವು ಯೆಹೋವನ ಸಾಕ್ಷಿಗಳ 20ಕ್ಕಿಂತಲೂ ಹೆಚ್ಚು ಮನೆಗಳನ್ನು ಹಾಳುಮಾಡಿತು. ಒಂದು ರಾಜ್ಯ ಸಭಾಗೃಹದಲ್ಲಿ ನೀರಿನ ಮಟ್ಟವು ನೆಲದಿಂದ ಮೂರು ಅಡಿಗಳಷ್ಟು ಹೆಚ್ಚಾಗಿತ್ತು. ನೆರೆಹೊರೆಯ ಸಭೆಗಳಿಂದ ಸಾಕ್ಷಿಗಳು ಆ ಕೂಡಲೆ ಸಹಾಯಕ್ಕಾಗಿ ಮುಂದೆ ಬಂದರು. ನೂರಾರು ಸ್ವಯಂಸೇವಕರು ಕೆಸರಿನಿಂದ ತುಂಬಿದ್ದ ಮನೆಗಳನ್ನು ಸ್ವಚ್ಛಗೊಳಿಸಿದರು. ಎರಡೇ ವಾರಗಳೊಳಗೆ ರಾಜ್ಯ ಸಭಾಗೃಹವು ಪೂರ್ಣ ರೀತಿಯಲ್ಲಿ ಸ್ವಚ್ಛಗೊಳಿಸಲ್ಪಟ್ಟು ದುರಸ್ತುಗೊಳಿಸಲ್ಪಟ್ಟಿತು.
ಅಕ್ಟೋಬರ್ 23ರಂದು, ಇದೇ ಕ್ಷೇತ್ರದಲ್ಲಿ ರಿಕ್ಟರ್ ಮಾನದಲ್ಲಿ 6.8ರಷ್ಟಿದ್ದ ಒಂದು ಭೂಕಂಪವು ಸಂಭವಿಸಿತು. ಕಡಿಮೆಪಕ್ಷ 40 ಮಂದಿ ತಮ್ಮ ಪ್ರಾಣಗಳನ್ನು ಕಳೆದುಕೊಂಡರು ಮತ್ತು 1,00,000ಕ್ಕಿಂತಲೂ ಹೆಚ್ಚು ಜನರು ತಮ್ಮ ಮನೆಗಳನ್ನು ಖಾಲಿಮಾಡಬೇಕಾಯಿತು. ನೀರು, ಗ್ಯಾಸ್ ಹಾಗೂ ವಿದ್ಯುಚ್ಛಕ್ತಿ ಲಭ್ಯವಿರಲಿಲ್ಲ. ಪ್ರವಾಹದ ಬಳಿಕ ನವೀಕರಿಸಲ್ಪಟ್ಟ ಆ ರಾಜ್ಯ ಸಭಾಗೃಹವು ಭೂಕಂಪವು ಸಂಭವಿಸಿದ ಅಧಿಕೇಂದ್ರದಿಂದ ಅಥವಾ ಎಪಿಸೆಂಟರ್‌ನಿಂದ ಕೇವಲ 50 ಕಿಲೊಮೀಟರುಗಳಷ್ಟು ದೂರದಲ್ಲಿತ್ತಾದರೂ, ಈ ರಾಜ್ಯ ಸಭಾಗೃಹಕ್ಕೆ ಯಾವ ಹಾನಿಯೂ ಆಗಲಿಲ್ಲ. ತತ್‌ಕ್ಷಣವೇ ಇದು ತಾತ್ಕಾಲಿಕ ಪರಿಹಾರ ಕೇಂದ್ರವಾಗಿ ಪರಿಣಮಿಸಿತು. ಕ್ರೈಸ್ತ ಮೇಲ್ವಿಚಾರಕರು ತಮ್ಮ ಜೊತೆ ವಿಶ್ವಾಸಿಗಳು ಸುರಕ್ಷಿತರಾಗಿದ್ದಾರೊ ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸಿದರು ಮತ್ತು ಯಾರೂ ಗಾಯಗೊಂಡಿಲ್ಲ ಅಥವಾ ಸಾವಿಗೀಡಾಗಿಲ್ಲ ಎಂಬುದನ್ನು ತಿಳಿದು ಅವರಿಗೆ ನೆಮ್ಮದಿಯೆನಿಸಿತು. ಮರುದಿನ ಬೆಳಗ್ಗೆ, ಜುಲೈ ತಿಂಗಳಿನಲ್ಲಿ ಪ್ರವಾಹದಲ್ಲಿ ನಷ್ಟಕ್ಕೆ ಈಡಾಗಿದ್ದ ಆರು ಮಂದಿ ಸಾಕ್ಷಿಗಳು, ಭೂಕಂಪದಿಂದ ಬಾಧಿಸಲ್ಪಟ್ಟಿದ್ದ ಕ್ಷೇತ್ರಕ್ಕೆ ಆಹಾರಪಾನೀಯಗಳನ್ನು ಒದಗಿಸಲು ಅತ್ಯಂತ ಹುರುಪಿನಿಂದ ತಮ್ಮನ್ನು ನೀಡಿಕೊಂಡರು. ಭೂಕಂಪವು ಸಂಭವಿಸಿ ಕೆಲವೇ ತಾಸುಗಳೊಳಗೆ ಪರಿಹಾರ ಸಾಮಗ್ರಿಗಳು ಲಭ್ಯಗೊಳಿಸಲ್ಪಟ್ಟವು.
“ಈ ಮುಂಚೆ ಪ್ರವಾಹಕ್ಕೆ ತುತ್ತಾಗಿದ್ದವರು, ಭೂಕಂಪದಿಂದ ಬಾಧಿತರಾದವರಿಗಾಗಿ ಮಾಡಲ್ಪಡುವ ಪರಿಹಾರ ಕಾರ್ಯವನ್ನು, ಹಿಂದೆ ತಾವು ಪಡೆದುಕೊಂಡಿದ್ದ ಸಹಾಯಕ್ಕಾಗಿ ಗಣ್ಯತೆಯನ್ನು ವ್ಯಕ್ತಪಡಿಸುವ ಸದವಕಾಶವಾಗಿ ಪರಿಗಣಿಸಿದರು. ಅವರು ಮುಂಜಾವದಿಂದ ಮಧ್ಯ ರಾತ್ರಿಯ ವರೆಗೆ ಕಷ್ಟಪಟ್ಟು ಕೆಲಸಮಾಡಿದರು. ಮತ್ತು ಅವರ ಮುಖಗಳು ತುಂಬ ಸಂತೋಷದಿಂದ ಹೊಳೆಯುತ್ತಿದ್ದವು!” ಎಂದು ಸಭಾ ಹಿರಿಯನೊಬ್ಬನು ತಿಳಿಸುತ್ತಾನೆ.
ಪ್ರವಾಹಗಳು ಅಥವಾ ಭೂಕಂಪಗಳು, ಯೆಹೋವನ ಸಾಕ್ಷಿಗಳ ಕ್ರೈಸ್ತ ಸಹೋದರತ್ವವನ್ನು ಐಕ್ಯಪಡಿಸುವಂಥ ಪ್ರೀತಿಯ ಬಂಧಕ್ಕೆ ಖಂಡಿತವಾಗಿಯೂ ಬೆದರಿಕೆಯನ್ನೊಡ್ಡಲಾರವು. ಅದಕ್ಕೆ ಬದಲಾಗಿ, ಇಂಥ ವಿಪತ್ತುಗಳು ಬಂದೆರಗುವಾಗ, ಥೆಸಲೊನೀಕದಲ್ಲಿದ್ದ ತನ್ನ ಜೊತೆ ವಿಶ್ವಾಸಿಗಳಿಗೆ ಅಪೊಸ್ತಲ ಪೌಲನು ಏನು ಹೇಳಿದನೋ ಅದರ ಅನುಭವ ಕ್ರೈಸ್ತರಿಗಾಗುತ್ತದೆ. ಅದೇನೆಂದರೆ, “ಪರಸ್ಪರವಾದ ಪ್ರೀತಿ ನಿಮ್ಮೆಲ್ಲರಲ್ಲಿಯೂ ಹೆಚ್ಚುತ್ತಾ ಬರುತ್ತದೆ.”—2 ಥೆಸಲೊನೀಕ 1:3.