ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರೀತಿಯಿಂದ ಕಿವಿಗೊಡುವ ಕಲೆ

ಪ್ರೀತಿಯಿಂದ ಕಿವಿಗೊಡುವ ಕಲೆ

ಪ್ರೀತಿಯಿಂದ ಕಿವಿಗೊಡುವ ಕಲೆ

“ನನಗೆ ಕಿವಿಗೊಟ್ಟದ್ದಕ್ಕಾಗಿ ತುಂಬ ಉಪಕಾರ.” ಇತ್ತೀಚೆಗೆ ಯಾರಾದರೂ ನಿಮಗೆ ಹೀಗೆ ಹೇಳಿದ್ದಾರೊ? ಅದೆಷ್ಟು ಉತ್ತಮ ಅಭಿನಂದನೆ! ಉತ್ತಮ ರೀತಿಯಲ್ಲಿ ಕಿವಿಗೊಡುವ ಅಥವಾ ಆಲಿಸುವ ವ್ಯಕ್ತಿಯನ್ನು ಹೆಚ್ಚುಕಡಿಮೆ ಎಲ್ಲರೂ ಇಷ್ಟಪಡುತ್ತಾರೆ. ಕಿವಿಗೊಟ್ಟು ಆಲಿಸುವ ಮೂಲಕ, ಸಮಸ್ಯೆಗಳಿಂದಾಗಿ ಚಿಂತಿತರಾಗಿರುವ ಇಲ್ಲವೆ ಹೊರೆಹೊತ್ತವರಂತಿರುವ ಜನರನ್ನು ನಾವು ಚೈತನ್ಯಗೊಳಿಸಬಲ್ಲೆವು. ಮಾತ್ರವಲ್ಲದೆ, ಉತ್ತಮವಾಗಿ ಕಿವಿಗೊಡುವವರಾಗಿರುವುದು ಜನರೊಂದಿಗೆ ಆನಂದಿಸುವಂತೆಯೂ ನಮಗೆ ಸಹಾಯಮಾಡುವುದು, ಅಲ್ಲವೆ? ಕ್ರೈಸ್ತ ಸಭೆಯಲ್ಲಿ, ‘ಪರಸ್ಪರ ಹಿತಚಿಂತಕರಾಗಿದ್ದು ಪ್ರೀತಿಸುತ್ತಿರುವಂತೆ ಮತ್ತು ಸತ್ಕಾರ್ಯಮಾಡುವಂತೆ ಒಬ್ಬರನ್ನೊಬ್ಬರು ಪ್ರೇರೇಪಿಸ’ಬೇಕಾದರೆ ಪ್ರೀತಿಯಿಂದ ಕಿವಿಗೊಡುವುದು ಅತ್ಯಾವಶ್ಯಕವಾದ ವಿಷಯವಾಗಿದೆ.​—⁠ಇಬ್ರಿಯ 10:24.

ಹಾಗಿದ್ದರೂ, ಅನೇಕ ಜನರು ಕಿವಿಗೊಡುವುದರಲ್ಲಿ ಕೊರತೆಯುಳ್ಳವರಾಗಿದ್ದಾರೆ. ಇತರರು ಏನನ್ನು ಹೇಳಬಯಸುತ್ತಾರೊ ಅದಕ್ಕೆ ಕಿವಿಗೊಡುವ ಬದಲಿಗೆ ಸಲಹೆ ನೀಡುವುದು, ತಮ್ಮ ಸ್ವಂತ ಅನುಭವಗಳನ್ನು ತಿಳಿಸುವುದು ಇಲ್ಲವೆ ತಮ್ಮ ಸ್ವಂತ ದೃಷ್ಟಿಕೋನವನ್ನು ತಿಳಿಸುವುದು ಇದೇ ಅವರಿಗೆ ಇಷ್ಟವಾದ ಸಂಗತಿಗಳಾಗಿರುತ್ತವೆ. ಕಿವಿಗೊಡುವುದು ನಿಜವಾಗಿಯೂ ಒಂದು ಕಲೆಯಾಗಿದೆ. ಪ್ರೀತಿಯಿಂದ ಕಿವಿಗೊಡಲು ನಾವು ಹೇಗೆ ಕಲಿಯಬಲ್ಲೆವು?

ಒಂದು ಪ್ರಾಮುಖ್ಯ ಅಂಶ

ಯೆಹೋವನು ನಮ್ಮ ‘[ಮಹಾನ್‌] ಬೋಧಕನಾಗಿದ್ದಾನೆ.’ (ಯೆಶಾಯ 30:20) ಕಿವಿಗೊಡುವ ವಿಷಯದಲ್ಲಿಯೂ ಆತನು ನಮಗೆ ಬಹಳಷ್ಟನ್ನು ಕಲಿಸಬಲ್ಲನು. ಪ್ರವಾದಿಯಾದ ಎಲೀಯನಿಗೆ ಯೆಹೋವನು ಹೇಗೆ ಸಹಾಯ ನೀಡಿದನು ಎಂಬುದನ್ನು ಪರಿಗಣಿಸಿರಿ. ರಾಣಿ ಈಜೆಬೆಲಳ ಬೆದರಿಕೆಗಳಿಗೆ ಎಲೀಯನು ಭಯಪಟ್ಟು ಅರಣ್ಯಕ್ಕೆ ಓಡಿಹೋಗಿ, ತಾನು ಮರಣವನ್ನು ಅಪೇಕ್ಷಿಸುತ್ತೇನೆಂದು ಹೇಳಿದನು. ಅಲ್ಲಿ ದೇವರ ದೂತನು ಅವನೊಂದಿಗೆ ಮಾತಾಡಿದನು. ತನ್ನ ಭಯವನ್ನು ಪ್ರವಾದಿಯು ವಿವರಿಸಿದಾಗ ಯೆಹೋವನು ಕಿವಿಗೊಟ್ಟನು ಮತ್ತು ಅನಂತರವೇ ತನ್ನ ಮಹಾ ಶಕ್ತಿಯನ್ನು ಪ್ರದರ್ಶಿಸಿದನು. ಪರಿಣಾಮವೇನಾಗಿತ್ತು? ಎಲೀಯನ ಭಯವು ದೂರವಾಗಿ ಅವನು ತನ್ನ ನೇಮಕಕ್ಕೆ ಹಿಂದಿರುಗಿದನು. (1 ಅರಸುಗಳು 19:2-15) ತನ್ನ ಸೇವಕರನ್ನು ಕಳವಳಗೊಳಿಸುತ್ತಿರುವ ವಿಷಯದ ಕುರಿತು ಕಿವಿಗೊಡಲು ಯೆಹೋವನು ಏಕೆ ಸಮಯವನ್ನು ವಿನಿಯೋಗಿಸುತ್ತಾನೆ? ಏಕೆಂದರೆ ಆತನಿಗೆ ಅವರ ಬಗ್ಗೆ ಚಿಂತೆಯಿದೆ. (1 ಪೇತ್ರ 5:⁠7) ಉತ್ತಮ ರೀತಿಯಲ್ಲಿ ಕಿವಿಗೊಡುವವರಾಗಲು ಬೇಕಾಗಿರುವ ಒಂದು ಪ್ರಾಮುಖ್ಯ ಅಂಶವು ಇಲ್ಲಿದೆ: ಇತರರ ವಿಷಯದಲ್ಲಿ ಚಿಂತೆಯನ್ನು ಮತ್ತು ಅವರಿಗಾಗಿ ನೈಜ ಕಾಳಜಿಯನ್ನು ತೋರಿಸಿರಿ.

ಬೊಲಿವಿಯದಲ್ಲಿನ ಒಬ್ಬ ಮನುಷ್ಯನು ಒಂದು ಗಂಭೀರವಾದ ತಪ್ಪನ್ನು ಗೈದಾಗ, ಒಬ್ಬ ಜೊತೆ ವಿಶ್ವಾಸಿಯಿಂದ ಅಂಥ ಕಾಳಜಿಯನ್ನು ಪಡೆದುಕೊಂಡದ್ದನ್ನು ಗಣ್ಯಮಾಡಿದನು. ಆ ಮನುಷ್ಯನು ವಿವರಿಸುವುದು: “ಆ ಸಮಯದಲ್ಲಿ ನಾನು ನನ್ನ ಜೀವನದ ಅತಿ ದುಃಖಕರ ಗಳಿಗೆಯಲ್ಲಿದ್ದೆ. ಒಂದುವೇಳೆ ಆ ಸಹೋದರನು ನನಗೆ ಕಿವಿಗೊಡಲು ಸಮಯವನ್ನು ಕೊಡದೇ ಇರುತ್ತಿದ್ದಲ್ಲಿ, ಯೆಹೋವನನ್ನು ಸೇವಿಸುವುದನ್ನು ನಾನು ಸುಲಭವಾಗಿ ಬಿಟ್ಟುಬಿಡುತ್ತಿದ್ದೆನೊ ಏನೋ. ಆ ಸಹೋದರನು ಹೆಚ್ಚೇನು ಮಾತಾಡಲಿಲ್ಲ, ಆದರೆ ನಾನು ಮಾತಾಡುವಾಗ ಕಿವಿಗೊಡುವ ಮೂಲಕ ನನ್ನ ಬಗ್ಗೆ ಅವನಿಗೆ ಕಾಳಜಿಯಿದೆ ಎಂಬುದನ್ನು ತೋರಿಸಿಕೊಟ್ಟದ್ದು ತಾನೇ ನನ್ನನ್ನು ನಿಜವಾಗಿಯೂ ಬಲಪಡಿಸಿತು. ನನಗೆ ಪರಿಹಾರದ ಅಗತ್ಯವಿರಲಿಲ್ಲ ಏಕೆಂದರೆ ನಾನೇನು ಮಾಡಬೇಕೆಂದು ನನಗೆ ತಿಳಿದಿತ್ತು. ಆದರೆ ನನಗೆ ಹೇಗನಿಸುತ್ತಿದೆಯೊ ಅದರ ಬಗ್ಗೆ ಇತರರಿಗೆ ಚಿಂತೆಯಿದೆ ಎಂಬ ಆಶ್ವಾಸನೆ ಬೇಕಾಗಿತ್ತು ಅಷ್ಟೇ. ನಾನು ಹತಾಶೆಯಲ್ಲಿ ಮುಳುಗಿಹೋಗದಂತೆ ಅವನ ಕಿವಿಗೊಡುವಿಕೆಯು ನನ್ನನ್ನು ರಕ್ಷಿಸಿತು.”

ಪ್ರೀತಿಯಿಂದ ಕಿವಿಗೊಡುವ ಕಲೆಯಲ್ಲಿ ಅತ್ಯುತ್ತಮ ಮಾದರಿಯು ಯೇಸು ಕ್ರಿಸ್ತನಾಗಿದ್ದಾನೆ. ಯೇಸುವಿನ ಮರಣದ ಸ್ವಲ್ಪ ದಿವಸಗಳ ಅನಂತರ ಅವನ ಶಿಷ್ಯರಲ್ಲಿ ಇಬ್ಬರು ಯೆರೂಸಲೇಮಿನಿಂದ ಸುಮಾರು 11 ಕಿಲೋಮೀಟರ್‌ ದೂರದಲ್ಲಿದ್ದ ಒಂದು ಹಳ್ಳಿಗೆ ಪ್ರಯಾಣಿಸುತ್ತಿದ್ದರು. ಅವರು ಬಹಳ ಖಿನ್ನರಾಗಿದ್ದರು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಆದುದರಿಂದ ಪುನರುತ್ಥಿತ ಯೇಸು ಕ್ರಿಸ್ತನು ಅವರೊಂದಿಗೆ ನಡೆಯಲು ಆರಂಭಿಸಿದನು. ಅವರನ್ನು ಬಾಧಿಸುತ್ತಿದ್ದ ವಿಷಯವನ್ನು ಅವರಿಂದ ಹೊರತರಲು ಅವನು ಅತಿ ಜಾಗರೂಕತೆಯಿಂದ ರೂಪಿಸಿದ ಪ್ರಶ್ನೆಗಳನ್ನು ಕೇಳಿದನು ಮತ್ತು ಶಿಷ್ಯರು ಅವುಗಳಿಗೆ ಪ್ರತ್ಯುತ್ತರ ಕೊಟ್ಟರು. ತಾವು ನಿರೀಕ್ಷಿಸುತ್ತಿದ್ದ ವಿಷಯಗಳನ್ನು ಮತ್ತು ಈಗ ತಾವು ಅನುಭವಿಸುತ್ತಿರುವ ಆಶಾಭಂಗ ಹಾಗೂ ಗಲಿಬಿಲಿಯನ್ನು ಅವರು ಅವನಿಗೆ ತಿಳಿಸಿದರು. ಯೇಸುವಿಗೆ ಅವರ ಬಗ್ಗೆ ಚಿಂತೆಯಿತ್ತು ಮತ್ತು ಅವನು ಪ್ರೀತಿಯಿಂದ ಅವರಿಗೆ ಕಿವಿಗೊಟ್ಟ ಕಾರಣ ಮುಂದಕ್ಕೆ ಅವನು ಹೇಳುವ ವಿಷಯವನ್ನು ಆಲಿಸಲು ಆ ಇಬ್ಬರು ಶಿಷ್ಯರು ತಯಾರಾದರು. ಅನಂತರ ಯೇಸು “ಸಮಸ್ತಗ್ರಂಥಗಳಲ್ಲಿ ತನ್ನ ವಿಷಯವಾಗಿರುವ ಸೂಚನೆಗಳನ್ನು ಅವರಿಗೆ ವಿವರಿಸಿದನು.”​—⁠ಲೂಕ 24:​13-27.

ಕಿವಿಗೊಡುವುದರಲ್ಲಿ ನಾವು ಪ್ರಥಮ ಹೆಜ್ಜೆಯನ್ನು ತೆಗೆದುಕೊಳ್ಳುವುದು, ಇತರರು ನಮಗೆ ಕಿವಿಗೊಡುವಂತೆ ಮಾಡುವ ಪ್ರೀತಿಪರ ಮಾರ್ಗವಾಗಿದೆ. ಬೊಲಿವಿಯದ ಸ್ತ್ರೀಯೊಬ್ಬಳು ಹೇಳುವುದು: “ನನ್ನ ಹೆತ್ತವರು ಮತ್ತು ನನ್ನ ಗಂಡನ ಹೆತ್ತವರು, ನಾನು ನನ್ನ ಮಕ್ಕಳನ್ನು ಬೆಳೆಸುತ್ತಿದ್ದ ರೀತಿಯನ್ನು ಆಕ್ಷೇಪಿಸಲಾರಂಭಿಸಿದರು. ಅವರ ಹೇಳಿಕೆಗಳನ್ನು ನಾನು ಕೋಪದಿಂದ ತಳ್ಳಿಹಾಕಿದೆ, ಆದರೆ ಹೆತ್ತವಳಾಗಿ ನಾನು ನನ್ನ ಪಾತ್ರವನ್ನು ಸರಿಯಾಗಿ ನಿರ್ವಹಿಸುತ್ತಿದ್ದೇನೊ ಎಂದು ಮನಸ್ಸಿನಾಳದಲ್ಲಿ ನನಗೂ ಸಂಶಯವಿತ್ತು. ಆ ಸಮಯದಲ್ಲಿ ಒಬ್ಬ ಯೆಹೋವನ ಸಾಕ್ಷಿ ನನ್ನನ್ನು ಭೇಟಿಯಾದಳು. ದೇವರ ವಾಗ್ದಾನಗಳ ಕುರಿತು ಅವಳು ನನ್ನೊಂದಿಗೆ ಮಾತಾಡಿದಳು. ಆದರೆ, ಅನಂತರ ಅವಳು ಆ ವಿಷಯದ ಕುರಿತು ನನ್ನ ಅಭಿಪ್ರಾಯವೇನು ಎಂಬುದಾಗಿ ಕೇಳಿದ ರೀತಿಯಿಂದ ಅವಳು ನನಗೆ ಕಿವಿಗೊಡಲು ಇಚ್ಛಿಸುತ್ತಾಳೆ ಎಂಬುದನ್ನು ನಾನು ತಿಳಿದುಕೊಂಡೆ. ನಾನು ಅವಳನ್ನು ಒಳಗೆ ಆಮಂತ್ರಿಸಿ, ನನ್ನ ಸಮಸ್ಯೆಯನ್ನು ಅವಳಿಗೆ ತಿಳಿಸಿದೆ. ಅವಳು ತಾಳ್ಮೆಯಿಂದ ಕಿವಿಗೊಟ್ಟಳು. ನನ್ನ ಮಕ್ಕಳ ಕುರಿತು ನನಗೆ ಯಾವ ಇಚ್ಛೆಗಳಿವೆ ಮತ್ತು ಅದರ ಕುರಿತು ನನ್ನ ಗಂಡನಿಗೆ ಹೇಗನಿಸುತ್ತದೆ ಎಂಬುದನ್ನು ಅವಳು ಕೇಳಿದಳು. ನನ್ನನ್ನು ಅರ್ಥಮಾಡಿಕೊಳ್ಳಲು ಬಯಸುವ ಒಬ್ಬರೊಂದಿಗಿರುವುದು ನಿಜವಾಗಿಯೂ ನೆಮ್ಮದಿದಾಯಕವಾಗಿತ್ತು. ಕುಟುಂಬ ಜೀವನದ ಬಗ್ಗೆ ಬೈಬಲ್‌ ಏನನ್ನು ತಿಳಿಸುತ್ತದೆ ಎಂಬುದನ್ನು ಅವಳು ನನಗೆ ತೋರಿಸಲಾರಂಭಿಸಿದಾಗ, ನನ್ನ ಪರಿಸ್ಥಿತಿಯ ಬಗ್ಗೆ ನಿಜವಾಗಿಯೂ ಕಾಳಜಿಯಿರುವ ಒಬ್ಬರೊಂದಿಗೆ ಮಾತಾಡುತ್ತಿದ್ದೇನೆ ಎಂಬುದು ನನಗೆ ಗೊತ್ತಿತ್ತು.”

“ಪ್ರೀತಿ . . . ಸ್ವಪ್ರಯೋಜನವನ್ನು ಚಿಂತಿಸುವದಿಲ್ಲ,” ಎನ್ನುತ್ತದೆ ಬೈಬಲ್‌. (1 ಕೊರಿಂಥ 13:​4, 5) ಹಾಗಾದರೆ, ಪ್ರೀತಿಯಿಂದ ಕಿವಿಗೊಡುವುದು ಎಂಬುದು ಸ್ವಪ್ರಯೋಜನವನ್ನು ಅಥವಾ ನಮ್ಮ ಸ್ವಂತ ಅಭಿರುಚಿಗಳನ್ನು ಬದಿಗೊತ್ತುವುದು ಎಂಬ ಅರ್ಥವನ್ನು ಕೊಡುತ್ತದೆ. ಇದು, ಇತರರು ಯಾವುದಾದರೊಂದು ಗಂಭೀರವಾದ ವಿಷಯದ ಕುರಿತು ನಮ್ಮೊಂದಿಗೆ ಮಾತಾಡುವಾಗ ನಾವು ಟಿವಿಯನ್ನು ಆಫ್‌ ಮಾಡುವುದು, ವಾರ್ತಾಪತ್ರಿಕೆಯನ್ನು ಬದಿಗಿಡುವುದು, ಇಲ್ಲವೆ ಸೆಲ್‌ ಫೋನ್‌ ಅನ್ನು ಆಫ್‌ಮಾಡಿ ಇಡುವುದು ಈ ಮುಂತಾದ ವಿಷಯವನ್ನು ಮಾಡುವುದನ್ನು ಕೇಳಿಕೊಳ್ಳಬಹುದು. ಪ್ರೀತಿಯಿಂದ ಕಿವಿಗೊಡುವುದು ಎಂದರೆ ಇತರ ವ್ಯಕ್ತಿಯ ವಿಚಾರಗಳಲ್ಲಿ ಆಳವಾಗಿ ಆಸಕ್ತನಾಗಿರುವುದನ್ನು ಸೂಚಿಸುತ್ತದೆ. ಇತರರು ಮಾತಾಡುವಾಗ, “ಇದು ನನಗೆ ಸ್ವಲ್ಪ ಸಮಯದ ಹಿಂದೆ ನಡೆದ ಒಂದು ವಿಷಯವನ್ನು ಜ್ಞಾಪಕಕ್ಕೆ ತರುತ್ತದೆ” ಎಂಬಂಥ ಮಾತುಗಳೊಂದಿಗೆ ನಮ್ಮ ಕುರಿತು ಮಾತಾಡಲು ಆರಂಭಿಸಿ ಮಧ್ಯೆ ಬಾಯಿಹಾಕುವುದನ್ನು ತ್ಯಜಿಸಬೇಕು. ಸ್ನೇಹಪರ ಸಂಭಾಷಣೆಯೊಂದರಲ್ಲಿ ಅಂಥ ಮಾತುಗಳು ಸ್ವೀಕಾರಾರ್ಹವಾಗಿರುವುದಾದರೂ, ಒಬ್ಬರು ಒಂದು ಗಂಭೀರವಾದ ಸಮಸ್ಯೆಯ ಕುರಿತು ನಮ್ಮೊಂದಿಗೆ ಚರ್ಚಿಸುವಾಗ ನಾವು ನಮ್ಮ ವೈಯಕ್ತಿಕ ಅಭಿರುಚಿಗಳನ್ನು ಬದಿಗೊತ್ತಬೇಕು. ಇತರರ ಕಡೆಗಿನ ನೈಜ ಆಸಕ್ತಿಯನ್ನು ಇನ್ನೊಂದು ವಿಧದಲ್ಲಿಯೂ ತೋರಿಸಸಾಧ್ಯವಿದೆ.

ಭಾವನೆಗಳನ್ನು ಅರಿತುಕೊಳ್ಳಲು ಕಿವಿಗೊಡಿರಿ

ಯೋಬನ ಸಂಗಡಿಗರು ಕಡಿಮೆಪಕ್ಷ ಅವನ ಹತ್ತು ಪ್ರಸಂಗಗಳಿಗೆ ಕಿವಿಗೊಟ್ಟರು. ಆದರೂ ಯೋಬನು ದುಃಖದಿಂದ ಹೇಳಿದ್ದು: “ಅಯ್ಯೋ, ನನ್ನ ಕಡೆಗೆ ಕಿವಿಗೊಡತಕ್ಕವನು ಇದ್ದರೆ ಎಷ್ಟೋ ಲೇಸು!” (ಯೋಬ 31:35) ಏಕೆ? ಏಕೆಂದರೆ ಅವರ ಕಿವಿಗೊಡುವಿಕೆಯು ಅವನಿಗೆ ಯಾವುದೇ ಸಾಂತ್ವನವನ್ನು ಒದಗಿಸಲಿಲ್ಲ. ಅವರಿಗೆ ಯೋಬನ ಬಗ್ಗೆ ಯಾವುದೇ ಕಾಳಜಿಯಿರಲಿಲ್ಲ ಮತ್ತು ಅವನ ಭಾವನೆಗಳನ್ನು ಅರಿತುಕೊಳ್ಳಲೂ ಅವರು ಬಯಸಲಿಲ್ಲ. ಸಹಾನುಭೂತಿಯುಳ್ಳ ಕೇಳುಗರು ತೋರಿಸುವ ಅನುಕಂಪವು ಖಂಡಿತವಾಗಿಯೂ ಅವರಲ್ಲಿರಲಿಲ್ಲ. ಆದರೆ ಅಪೊಸ್ತಲ ಪೇತ್ರನು ಸಲಹೆನೀಡಿದ್ದು: “ನೀವೆಲ್ಲರೂ ಏಕಮನಸ್ಸುಳ್ಳವರಾಗಿರಿ; ಪರರ ಸುಖದುಃಖಗಳಲ್ಲಿ ಸೇರುವವರಾಗಿರಿ [“ಅನುಕಂಪವುಳ್ಳವರಾಗಿರಿ,” NW]; ಅಣ್ಣತಮ್ಮಂದಿರಂತೆ ಒಬ್ಬರನ್ನೊಬ್ಬರು ಪ್ರೀತಿಸಿರಿ; ಕರುಣೆಯೂ ದೀನಭಾವವೂ ಉಳ್ಳವರಾಗಿರಿ.” (1 ಪೇತ್ರ 3:⁠8) ನಾವು ಹೇಗೆ ಅನುಕಂಪವನ್ನು ತೋರಿಸಸಾಧ್ಯವಿದೆ? ಒಂದು ವಿಧವು, ಇನ್ನೊಬ್ಬ ವ್ಯಕ್ತಿಯ ಭಾವನೆಗಳ ಬಗ್ಗೆ ಚಿಂತೆತೋರಿಸಿ, ಅವುಗಳನ್ನು ಅರಿತುಕೊಳ್ಳಲು ಪ್ರಯತ್ನಿಸುವ ಮೂಲಕವೇ. “ಅದು ನಿಜವಾಗಿಯೂ ನಿನಗೆ ದುಃಖವನ್ನು ಉಂಟುಮಾಡಿರಬೇಕು” ಇಲ್ಲವೆ “ನಿನ್ನ ಬಗ್ಗೆ ತಪ್ಪುತಿಳಿಯಲಾಗಿದೆ ಎಂದು ನಿನಗನಿಸಿರಬೇಕು” ಎಂಬಂಥ ಅನುಕಂಪದ ಮಾತುಗಳನ್ನು ಆಡುವ ಮೂಲಕ ನಮಗೆ ನಿಜವಾಗಿಯೂ ಚಿಂತೆಯಿದೆ ಎಂಬುದನ್ನು ತೋರಿಸಸಾಧ್ಯವಿದೆ. ಇನ್ನೊಂದು ವಿಧವು, ವ್ಯಕ್ತಿಯು ಏನನ್ನು ತಿಳಿಸುತ್ತಿದ್ದಾನೊ ಅದನ್ನು ನಮ್ಮ ಸ್ವಂತ ಮಾತುಗಳಲ್ಲಿ ಪುನರುಚ್ಚರಿಸುವ ಮೂಲಕವೇ ಆಗಿದೆ. ಹೀಗೆ ಮಾಡುವಾಗ, ಆ ವ್ಯಕ್ತಿ ಏನನ್ನು ಹೇಳುತ್ತಿದ್ದಾನೊ ಅದು ನಮಗೆ ಅರ್ಥವಾಗುತ್ತಿದೆ ಎಂಬುದನ್ನು ನಾವು ತೋರಿಸುತ್ತೇವೆ. ಪ್ರೀತಿಯಿಂದ ಕಿವಿಗೊಡುವುದು ಎಂದರೆ ಬರೀ ಪದಗಳಿಗೆ ಲಕ್ಷ್ಯಕೊಡುವುದಲ್ಲ, ಬದಲಾಗಿ ಪದಗಳ ಹಿಂದೆ ಅಡಗಿರುವ ಭಾವನೆಗಳಿಗೂ ಲಕ್ಷಕೊಡುವುದನ್ನು ಸೂಚಿಸುತ್ತದೆ.

ರೋಬರ್ಟ್‌ * ಎಂಬವನು ಯೆಹೋವನ ಸಾಕ್ಷಿಗಳ ಅನುಭವಿಯಾದ ಪೂರ್ಣ ಸಮಯದ ಶುಶ್ರೂಷಕನಾಗಿದ್ದಾನೆ. ಅವನು ತಿಳಿಸುವುದು: “ಒಂದು ಸಮಯದಲ್ಲಿ ನಾನು ನನ್ನ ಶುಶ್ರೂಷೆಯಿಂದ ಬಹಳ ಬೇಸತ್ತುಹೋದೆ. ಆದುದರಿಂದ ಒಬ್ಬ ಸಂಚರಣ ಮೇಲ್ವಿಚಾರಕರೊಂದಿಗೆ ಮಾತಾಡಿದೆ. ಅವರು ನಿಜವಾಗಿಯೂ ನನಗೆ ಕಿವಿಗೊಟ್ಟು, ನನ್ನ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರು. ನನ್ನ ಮನೋಭಾವಕ್ಕಾಗಿ ಅವರು ನನ್ನನ್ನು ಖಂಡಿಸಬಹುದೆಂಬ ಭಯ ನನ್ನಲ್ಲಿದೆ ಎಂಬುದನ್ನು ಸಹ ಅವರು ಗ್ರಹಿಸಿಕೊಂಡರು. ಅವರು ನನ್ನ ಭಾವನೆಗಳನ್ನು ಅರ್ಥಮಾಡಿಕೊಳ್ಳಬಲ್ಲರು, ಏಕೆಂದರೆ ಅವರೂ ಅಂಥ ಭಾವನೆಗಳನ್ನು ಹೊಂದಿದ್ದರು ಎಂದು ಆ ಸಹೋದರರು ನನಗೆ ಆಶ್ವಾಸನೆ ನೀಡಿದರು. ನನ್ನ ಶುಶ್ರೂಷೆಯಲ್ಲಿ ಮುಂದೊತ್ತುವಂತೆ ಇದು ನಿಜವಾಗಿಯೂ ನನಗೆ ಸಹಾಯಮಾಡಿತು.”

ಹೇಳಲ್ಪಡುವ ವಿಷಯವನ್ನು ನಾವು ಒಪ್ಪದಿದ್ದರೂ ಅದಕ್ಕೆ ಕಿವಿಗೊಡಸಾಧ್ಯವಿದೆಯೊ? ತನಗೆ ಏನನಿಸುತ್ತದೆ ಎಂಬುದನ್ನು ನಮಗೆ ಹೇಳಿದ್ದಕ್ಕಾಗಿ ನಾವು ಗಣ್ಯತೆಯನ್ನು ವ್ಯಕ್ತಪಡಿಸಸಾಧ್ಯವಿದೆಯೊ? ಹೌದು. ಯುವ ಪ್ರಾಯದ ಮಗನು ಶಾಲೆಯಲ್ಲಿ ಜಗಳವಾಡಿದರೆ ಇಲ್ಲವೆ ಒಬ್ಬ ಹದಿಹರೆಯದ ಮಗಳು ಮನೆಗೆ ಬಂದು ನಾನು ಒಬ್ಬನನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳುವುದಾದರೆ ಆಗೇನು? ಯಾವುದು ಸರಿಯಾದ ಮತ್ತು ಯಾವುದು ತಪ್ಪಾದ ನಡವಳಿಕೆ ಎಂಬುದನ್ನು ವಿವರಿಸುವ ಮೊದಲು ಆ ಯುವಕ ಅಥವಾ ಯುವತಿಗೆ ಕಿವಿಗೊಟ್ಟು, ಅವರ ಮನಸ್ಸಿನಲ್ಲಿ ಏನು ವಿಚಾರನಡೆಯುತ್ತಾ ಇದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಹೆತ್ತವರು ಪ್ರಯತ್ನಿಸುವುದು ಉತ್ತಮವಲ್ಲವೆ?

“ಮನುಷ್ಯನ ಹೃದಯಸಂಕಲ್ಪವು ಆಳವಾದ [ಬಾವಿಯ] ನೀರು. ಆದರೆ ವಿವೇಕಿಯು ಅದನ್ನು ಸೇದಬಲ್ಲನು” ಎನ್ನುತ್ತದೆ ಜ್ಞಾನೋಕ್ತಿ 20:⁠5. ಉದಾಹರಣೆಗೆ, ಒಬ್ಬ ವಿವೇಕಿಯೂ ಅನುಭವಿಯೂ ಆದ ವ್ಯಕ್ತಿ ನಾವು ಕೇಳಿಕೊಳ್ಳದೆ ಸಲಹೆಯನ್ನು ನೀಡುವ ಸ್ವಭಾವದವನಾಗಿರದಿರುವಲ್ಲಿ, ನಾವು ಅವನಿಂದ ಸಲಹೆಯನ್ನು ಹೊರಸೇದಬೇಕಾಗಬಹುದು. ಪ್ರೀತಿಯಿಂದ ಕಿವಿಗೊಡುವಾಗಲೂ ಸನ್ನಿವೇಶವು ಇದೇ ರೀತಿಯಾಗಿದೆ. ಒಬ್ಬ ವ್ಯಕ್ತಿಯ ಮನಸ್ಸಿನಲ್ಲಿ ಏನಿದೆ ಎಂಬುದನ್ನು ತಿಳಿಯಲು ವಿವೇಕ ಇಲ್ಲವೆ ವಿವೇಚನಾಶಕ್ತಿಯ ಅಗತ್ಯವಿದೆ. ಪ್ರಶ್ನೆಗಳನ್ನು ಕೇಳುವುದು ಸಹಾಯಕಾರಿಯಾಗಿದೆ, ಆದರೆ ನಮ್ಮ ಪ್ರಶ್ನೆಗಳು ಖಾಸಗಿ ವಿಚಾರಗಳನ್ನು ತಿಳಿದುಕೊಳ್ಳಲು ಬಯಸುವ ರೀತಿಯಲ್ಲಿ ಇರದಂತೆ ನಾವು ಎಚ್ಚರವಹಿಸಬೇಕು. ಮಾತಾಡಲು ಬಯಸುವವನು ತನಗೆ ಹಾಯೆನಿಸುವ ವಿಚಾರಗಳಿಂದ ಮಾತನ್ನು ಆರಂಭಿಸುವಂತೆ ಬಿಡುವುದು ಸಹಾಯಕಾರಿಯಾಗಿರಬಹುದು. ಉದಾಹರಣೆಗೆ, ತನ್ನ ವೈವಾಹಿಕ ಜೀವನದಲ್ಲಿನ ಸಮಸ್ಯೆಗಳ ಕುರಿತು ಮಾತಾಡಲು ಬಯಸುವ ಒಬ್ಬ ಪತ್ನಿಯು, ತಾನು ಮತ್ತು ತನ್ನ ಗಂಡನು ಆರಂಭದಲ್ಲಿ ಹೇಗೆ ಒಬ್ಬರನ್ನೊಬ್ಬರು ಭೇಟಿಯಾಗಿ ವಿವಾಹವಾದೆವು ಎಂಬುದನ್ನು ತಿಳಿಸುತ್ತಾ ಮಾತನ್ನು ಆರಂಭಿಸುವುದನ್ನು ಸುಲಭವಾಗಿ ಕಾಣಬಹುದು. ಕ್ರೈಸ್ತ ಶುಶ್ರೂಷೆಯಲ್ಲಿ ಅಕ್ರಿಯನಾದ ಒಬ್ಬ ವ್ಯಕ್ತಿಯು, ತಾನು ಹೇಗೆ ಸತ್ಯವನ್ನು ಕಲಿತುಕೊಂಡೆನು ಎಂಬುದನ್ನು ತಿಳಿಸುತ್ತಾ ಮಾತನ್ನು ಆರಂಭಿಸುವುದನ್ನು ಸುಲಭವಾಗಿ ಕಾಣಬಹುದು.

ಪ್ರೀತಿಯಿಂದ ಕಿವಿಗೊಡುವುದು​—⁠ಒಂದು ಪಂಥಾಹ್ವಾನ

ಒಬ್ಬರು ನಮ್ಮ ಬಗ್ಗೆ ಕೋಪಗೊಂಡಿರುವಾಗ ಅವರಿಗೆ ಕಿವಿಗೊಡುವುದು ಒಂದು ಪಂಥಾಹ್ವಾನವಾಗಿರಸಾಧ್ಯವಿದೆ. ಏಕೆಂದರೆ, ಮಾನವ ಸಹಜ ಗುಣವು ನಮ್ಮನ್ನು ಸಮರ್ಥಿಸಿಕೊಳ್ಳುವುದೇ ಆಗಿದೆ. ಈ ಪಂಥಾಹ್ವಾನವನ್ನು ನಾವು ಹೇಗೆ ಎದುರಿಸಬಲ್ಲೆವು? “ಮೃದುವಾದ ಪ್ರತ್ಯುತ್ತರವು ಸಿಟ್ಟನ್ನಾರಿಸುವದು,” ಎನ್ನುತ್ತದೆ ಜ್ಞಾನೋಕ್ತಿ 15:⁠1. ವ್ಯಕ್ತಿಯು ಮಾತಾಡುವಂತೆ ದಯಾಪರವಾಗಿ ತಿಳಿಸಿ, ಅನಂತರ ಅವನು ತನ್ನ ಬೇಸರವನ್ನು ವ್ಯಕ್ತಪಡಿಸುವಾಗ ತಾಳ್ಮೆಯಿಂದ ಅವನಿಗೆ ಕಿವಿಗೊಡಿ. ಇದು, ಮೃದುವಾಗಿ ಪ್ರತ್ಯುತ್ತರ ಕೊಡುವ ಒಂದು ವಿಧವಾಗಿದೆ.

ಇಬ್ಬರು ವ್ಯಕ್ತಿಗಳ ನಡುವೆ ಅನೇಕವೇಳೆ ಸಂಭವಿಸುವ ಬಿರುಸಿನ ವಾಗ್ವಾದಗಳಲ್ಲಿ, ಅವರು ಏನನ್ನು ಈಗಾಗಲೇ ಹೇಳಿದ್ದಾರೊ ಅದನ್ನೇ ಪುನಃ ಪುನಃ ಹೇಳುವುದು ಸೇರಿಕೊಂಡಿರುತ್ತದೆ. ಪ್ರತಿಯೊಬ್ಬ ವ್ಯಕ್ತಿಗೆ ಇನ್ನೊಬ್ಬನು ತನಗೆ ಕಿವಿಗೊಡುತ್ತಿಲ್ಲ ಎಂದು ಅನಿಸುತ್ತದೆ. ಅವರಲ್ಲಿ ಒಬ್ಬನು ಮಾತಾಡುವುದನ್ನು ನಿಲ್ಲಿಸಿ, ನಿಜವಾಗಿಯೂ ಕಿವಿಗೊಡುವಲ್ಲಿ ಪರಿಸ್ಥಿತಿಯು ಎಷ್ಟು ಉತ್ತಮವಾಗುತ್ತಿತ್ತು! ಸ್ವನಿಯಂತ್ರಣವನ್ನು ತೋರಿಸುವುದು ಮತ್ತು ವಿವೇಕದಿಂದಲೂ ಪ್ರೀತಪೂರ್ವಕ ವಿಧದಲ್ಲಿಯೂ ಮಾತಾಡುವುದು ಪ್ರಾಮುಖ್ಯವಾಗಿದೆ ನಿಶ್ಚಯ. ಬೈಬಲ್‌ ತಿಳಿಸುವುದು: “ತನ್ನ ತುಟಿಗಳನ್ನು ತಡೆಯುವವನು ಜ್ಞಾನವಂತನು.”​—⁠ಜ್ಞಾನೋಕ್ತಿ 10:​19, NIBV.

ಪ್ರೀತಿಯಿಂದ ಕಿವಿಗೊಡುವ ಸಾಮರ್ಥ್ಯವು ಸ್ವಾಭಾವಿಕವಾಗಿ ಬರುವುದಿಲ್ಲ. ಹಾಗಿದ್ದರೂ, ಅದೊಂದು ಕಲೆಯಾಗಿದೆ. ಪ್ರಯತ್ನ ಮತ್ತು ಶಿಸ್ತಿನ ಮೂಲಕ ನಾವದನ್ನು ಕಲಿಯಬಲ್ಲೆವು. ಇದು ಗಳಿಸಲು ಯೋಗ್ಯವಾದ ಕುಶಲತೆಯಾಗಿದೆ. ಇತರರು ಮಾತಾಡುವಾಗ ನಿಜವಾಗಿಯೂ ಕಿವಿಗೊಡುವುದು ನಮ್ಮ ಪ್ರೀತಿಯ ಅಭಿವ್ಯಕ್ತಿಯಾಗಿದೆ. ಅದು ನಮಗೂ ಸಂತೋಷವನ್ನು ತರುತ್ತದೆ. ಹಾಗಿರುವುದರಿಂದ, ಪ್ರೀತಿಯಿಂದ ಕಿವಿಗೊಡುವ ಕಲೆಯನ್ನು ಬೆಳೆಸಿಕೊಳ್ಳುವುದು ಎಷ್ಟು ವಿವೇಕಪ್ರದವಾಗಿದೆ!

[ಪಾದಟಿಪ್ಪಣಿ]

^ ಪ್ಯಾರ. 12 ಹೆಸರು ಬದಲಾಯಿಸಲ್ಪಟ್ಟಿದೆ.

[ಪುಟ 11ರಲ್ಲಿರುವ ಚಿತ್ರ]

ಕಿವಿಗೊಡುವಾಗ ನಮ್ಮ ಸ್ವಂತ ಅಭಿರುಚಿಗಳನ್ನು ಬದಿಗೊತ್ತಬೇಕು

[ಪುಟ 12ರಲ್ಲಿರುವ ಚಿತ್ರ]

ಒಬ್ಬರು ಕೋಪಗೊಂಡಿರುವಾಗ ಅವರಿಗೆ ಕಿವಿಗೊಡುವುದು ಒಂದು ಪಂಥಾಹ್ವಾನವಾಗಿರಸಾಧ್ಯವಿದೆ