ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸೃಷ್ಟಿಯ ಅದ್ಭುತಗಳು ಯೆಹೋವನನ್ನು ಮಹೋನ್ನತೆಗೇರಿಸುತ್ತವೆ

ಸೃಷ್ಟಿಯ ಅದ್ಭುತಗಳು ಯೆಹೋವನನ್ನು ಮಹೋನ್ನತೆಗೇರಿಸುತ್ತವೆ

ಸೃಷ್ಟಿಯ ಅದ್ಭುತಗಳು ಯೆಹೋವನನ್ನು ಮಹೋನ್ನತೆಗೇರಿಸುತ್ತವೆ

ಯೆಹೋವ ದೇವರು, ಅಪರಿಪೂರ್ಣ ಮಾನವರು ಕಲ್ಪಿಸಿಕೊಳ್ಳಲು ಸಾಧ್ಯವಿರುವುದಕ್ಕಿಂತಲೂ ಹೆಚ್ಚು ಮಹೋನ್ನತದಲ್ಲಿದ್ದಾನೆ. ಭೂಮಿಯಲ್ಲಿ ಮತ್ತು ಆಕಾಶದಲ್ಲಿರುವ ಆತನ ಸೃಷ್ಟಿಕಾರ್ಯಗಳು ಆತನಿಗೆ ಸ್ತುತಿಯನ್ನು ತರುತ್ತವೆ ಮತ್ತು ನಮ್ಮನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತವೆ.​—⁠ಕೀರ್ತನೆ 19:​1-4.

ಸೃಷ್ಟಿಕರ್ತನೂ ವಿಶ್ವದ ಪರಮಾಧಿಕಾರಿಯೂ ಆದ ಯೆಹೋವನು ಮಾತಾಡುವಾಗ ಆಲಿಸುವುದು ಖಂಡಿತವಾಗಿಯೂ ಸೂಕ್ತವಾದದ್ದಾಗಿದೆ. ಆದರೆ ಭೂಮಿಯಲ್ಲಿರುವ ಮನುಷ್ಯಮಾತ್ರದವರಾದ ನಮ್ಮೊಂದಿಗೆ ಆತನು ಒಂದುವೇಳೆ ಮಾತಾಡುವುದಾದರೆ ನಾವು ಎಷ್ಟು ಆಶ್ಚರ್ಯಚಕಿತರಾಗಬಹುದು! ಒಂದುವೇಳೆ ಆತನು ಒಬ್ಬ ದೇವದೂತನ ಮೂಲಕ ನಿಮ್ಮೊಂದಿಗೆ ಮಾತಾಡುತ್ತಾನೆ ಎಂದೆಣಿಸಿ. ಖಂಡಿತವಾಗಿಯೂ ನೀವು ನಿಕಟ ಗಮನವನ್ನು ಕೊಡುವಿರಿ. 3,500 ವರುಷಗಳ ಹಿಂದೆ ನೀತಿವಂತನಾದ ಯೋಬನೊಂದಿಗೆ ದೇವರು ಮಾತಾಡಿದಾಗ, ಯೋಬನು ಅತಿ ನಿಕಟವಾದ ಗಮನವನ್ನು ಕೊಟ್ಟನು. ಭೂಮಿ ಮತ್ತು ಆಕಾಶಗಳ ಕುರಿತಾಗಿ ದೇವರು ಯೋಬನೊಂದಿಗೆ ಮಾತಾಡಿದ ವಿಷಯಗಳಿಂದ ನಾವೇನನ್ನು ಕಲಿಯಬಲ್ಲೆವು?

ಭೂಮಿಯ ಅಸ್ತಿವಾರ ಹಾಕಿದವನಾರು ಮತ್ತು ಸಮುದ್ರವನ್ನು ಹತೋಟಿಯಲ್ಲಿ ಇಡುವವನಾರು?

ದೇವರು ಬಿರುಗಾಳಿಯೊಳಗಿಂದ ಯೋಬನಿಗೆ ಭೂಮಿ ಮತ್ತು ಸಮುದ್ರದ ಕುರಿತಾಗಿ ಪ್ರಶ್ನಿಸುತ್ತಾನೆ. (ಯೋಬ 38:​1-11) ಭೂಮಿಯು ಎಷ್ಟು ದೊಡ್ಡದಾಗಿರಬೇಕು ಎಂದು ನಿರ್ಧರಿಸಲು ಮತ್ತು ಅನಂತರ ಅದನ್ನು ನಿರ್ಮಿಸಲು ಯಾವನೇ ಮಾನವ ಶಿಲ್ಪಿಯು ಸಹಾಯಮಾಡಲಿಲ್ಲ. ಭೂಮಿಯನ್ನು ಒಂದು ಕಟ್ಟಡಕ್ಕೆ ಹೋಲಿಸುತ್ತಾ ದೇವರು ಯೋಬನಿಗೆ ಕೇಳುವುದು: “ಅದರ ಮೂಲೆಗಲ್ಲನ್ನು ಹಾಕಿದವರು ಯಾರು?” ಯಾವನೇ ಮಾನವನಲ್ಲ! ಯೆಹೋವನು ಈ ಗ್ರಹವನ್ನು ಸೃಷ್ಟಿಸುತ್ತಿದ್ದಾಗ ಆತನ ದೂತಪುತ್ರರು ಅದನ್ನು ನೋಡುತ್ತಾ ಆನಂದಘೋಷಮಾಡಿದರು.

ಸಮಯದ ದೃಷ್ಟಿಯಲ್ಲಿ, ದೇವರಿಗೆ ಹೋಲಿಸುವಾಗ ಸಮುದ್ರವು ಒಂದು ಶಿಶುವಾಗಿದೆ. ಸಾಂಕೇತಿಕವಾಗಿ ದೇವರು ಅದಕ್ಕೆ ಬಟ್ಟೆಗಳನ್ನು ಉಡಿಸುತ್ತಾನೆ. ಅದು, “ಗರ್ಭವನ್ನು ಭೇದಿಸಿಕೊಂಡು” ಬಂದಂತಿದೆ. ಅಗುಳಿಗಳನ್ನೂ ಕದಗಳನ್ನೂ ಹಾಕಿ ತಡೆಯುವಂತೆ ದೇವರು ಸಮುದ್ರಕ್ಕೆ ಎಲ್ಲೆಯನ್ನು ಹಾಕಿದ್ದಾನೆ ಮತ್ತು ಸೂರ್ಯಚಂದ್ರನ ಆಕರ್ಷಣದಿಂದ ಸಮುದ್ರದ ಉಬ್ಬರವಿಳಿತಗಳು ಉಂಟಾಗುತ್ತವೆ.

ದ ವರ್ಲ್ಡ್‌ ಬುಕ್‌ ಎನ್‌ಸೈಕ್ಲಪೀಡೀಯ ಹೇಳುವುದು: “ಸಣ್ಣ ಅಲೆಗಳಿಂದ ಹಿಡಿದು 100 ಅಡಿ (30 ಮೀಟರ್‌)ಗಳಷ್ಟು ಎತ್ತರದ ರಾಕ್ಷಸ ಚಂಡಮಾರುತ ಅಲೆಗಳ ವರೆಗಿನ ಹೆಚ್ಚಿನ ಸಾಗರ ಅಲೆಗಳು ಗಾಳಿಯಿಂದಾಗಿ ಉಂಟಾಗುತ್ತವೆ. . . . ಗಾಳಿಯು ನಿಂತ ಅನಂತರ, ಅಲೆಗಳು ಸಾಗರದ ಮೇಲ್ಭಾಗದಲ್ಲಿ ಚಲಿಸುತ್ತಾ ಇರುತ್ತವೆ. ಅವು ಎಲ್ಲಿ ಉಂಟಾಗುತ್ತವೊ ಅಲ್ಲಿಂದ ಬಹಳ ದೂರದ ವರೆಗೆ ಚಲಿಸಬಲ್ಲವು. ಮುಂದೆ ಮುಂದೆ ಚಲಿಸಿದಂತೆ ಅವುಗಳ ಗಾತ್ರವು ಸಣ್ಣದಾಗುತ್ತಾ ಹೋಗುತ್ತವೆ. ಕೊನೆಗೆ, ದಡವನ್ನು ಮುಟ್ಟುವಾಗ ನೊರೆಯಂತಾಗಿ ಇಲ್ಲದೆ ಹೋಗುತ್ತವೆ.” ಸಮುದ್ರವು, “ಇಲ್ಲಿಯ ತನಕ ಬರಬಹುದು; ಮೀರಿ ಬರಬೇಡ, ನಿನ್ನ ತೆರೆಗಳ ಹೆಮ್ಮೆಗೆ ಇಲ್ಲೇ ತಡೆಯಾಗುವದು” ಎಂಬ ದೇವರ ಅಪ್ಪಣೆಗೆ ವಿಧೇಯತೆಯನ್ನು ತೋರಿಸುತ್ತದೆ.

ಉದಯವಾಗುವಂತೆ ಮಾಡುವವನಾರು?

ಮುಂದಕ್ಕೆ ದೇವರು ಯೋಬನಿಗೆ ಬೆಳಕಿನ ಮತ್ತು ಇತರ ವಿಷಯಗಳ ಪರಿಣಾಮಗಳ ಕುರಿತು ಪ್ರಶ್ನಿಸುತ್ತಾನೆ. (ಯೋಬ 38:​12-18) ರಾತ್ರಿಹಗಲಿನ ಚಕ್ರವನ್ನು ಯಾವನೇ ಮಾನವನು ನಿಯಂತ್ರಿಸಲಾರನು. ಬೆಳಗಿನ ಬೆಳಕು ಸಾಂಕೇತಿಕವಾಗಿ ಭೂಮಿಯ ಅಂಚುಗಳನ್ನು ಹಿಡಿದು ದುಷ್ಟರನ್ನು ಅದರೊಳಗಿಂದ ಒದರಿಬಿಡುತ್ತದೆ. ಪಾಪಿಗಳು “ಸಂಜೆಯ” ಕತ್ತಲಲ್ಲಿ ಅನೀತಿಯ ಕೃತ್ಯಗಳನ್ನು ಮಾಡಬಹುದು. (ಯೋಬ 24:​15, 16) ಆದರೆ ಉದಯವು ಅನೇಕ ದುಷ್ಟರನ್ನು ಚದರಿಸಿಬಿಡುತ್ತದೆ.

ಬೆಳಗಿನ ಬೆಳಕು, ದೇವರ ಕೈಯಲ್ಲಿ ಒಂದು ಮುದ್ರೆಯಂತಿದೆ ಮತ್ತು ಅದರಿಂದ ಭೂಮಿಗೆ ಸುಂದರವಾದ ಅಚ್ಚು ದೊರಕುತ್ತದೆ. ಸೂರ್ಯನ ಬೆಳಕು ಅನೇಕ ಬಣ್ಣಗಳನ್ನು ಬಯಲುಗೊಳಿಸುತ್ತದೆ. ಇದರಿಂದಾಗಿ ಭೂಗೋಳವು ಉಜ್ಜ್ವಲವಾದ ಉಡುಪನ್ನು ಧರಿಸಿದಂತೆ ತೋರುತ್ತದೆ. ಇದೆಲ್ಲವನ್ನು ಮಾಡುವುದರಲ್ಲಿ ಯೋಬನು ಯಾವುದೇ ಪಾತ್ರವನ್ನು ವಹಿಸಲಿಲ್ಲ. ಮಾತ್ರವಲ್ಲದೆ, ಅವನು ನೀರಿನ ಆಳಕ್ಕೆ ಹೋಗಿ ಅಲ್ಲಿರುವ ನಿಕ್ಷೇಪದ ಲೆಕ್ಕವನ್ನೂ ತೆಗೆದುಕೊಂಡಿರಲಿಲ್ಲ. ಅಷ್ಟೇಕೆ, ಸಾಗರದಲ್ಲಿರುವ ಜೀವಿಗಳ ಬಗ್ಗೆ ಇಂದಿನ ವರೆಗೂ ಸಂಶೋಧಕರಿಗಿರುವ ಜ್ಞಾನವು ಸೀಮಿತವೇ!

ಹಿಮದ ಮತ್ತು ಕಲ್ಮಳೆಯ ಭಂಡಾರಗಳು ಯಾರಲ್ಲಿವೆ?

ಬೆಳಕಿನ ಅಥವಾ ಕತ್ತಲೆಯ ನಿವಾಸಕ್ಕೆ ಹೋಗುವ ದಾರಿಯನ್ನು ಯಾವನೇ ಮಾನವನು ಕಂಡುಕೊಂಡಿಲ್ಲ ಇಲ್ಲವೆ ದೇವರು ‘ಯುದ್ಧಕದನಗಳ ದಿನಕ್ಕಾಗಿ ಇಟ್ಟಿರುವ’ ಹಿಮದ ಮತ್ತು ಕಲ್ಮಳೆಯ ಭಂಡಾರಗಳನ್ನೂ ಪ್ರವೇಶಿಸಿಲ್ಲ. (ಯೋಬ 38:​19-23) ಯೆಹೋವನು ಗಿಬ್ಯೋನಿನಲ್ಲಿ ತನ್ನ ವೈರಿಗಳ ವಿರುದ್ಧ ಕಲ್ಮಳೆಯನ್ನು ಉಪಯೋಗಿಸಿದಾಗ, “ಇಸ್ರಾಯೇಲ್ಯರ ಕತ್ತಿಯಿಂದ ಸಂಹೃತರಾದವರಿಗಿಂತ ಕಲ್ಮಳೆಯಿಂದ ನಾಶವಾದವರೇ ಹೆಚ್ಚು ಮಂದಿ.” (ಯೆಹೋಶುವ 10:11) ಗೋಗನ ಅಂದರೆ ಸೈತಾನನ ನಾಯಕತ್ವದ ಕೆಳಗಿರುವ ದುಷ್ಟ ಮಾನವರನ್ನು ನಾಶಮಾಡುವಾಗಲೂ ಯೆಹೋವನು ಪ್ರಕಟಪಡಿಸಿರದಂಥ ಗಾತ್ರದ ಆನೆಕಲ್ಲು ಅಥವಾ ಆಲಿಕಲ್ಲುಗಳನ್ನು ಉಪಯೋಗಿಸಬಹುದು.​—⁠ಯೆಹೆಜ್ಕೇಲ 38:​18, 22.

ಇಸವಿ 2002ರ ಜುಲೈ ತಿಂಗಳಿನಲ್ಲಿ ಚೀನದ ಮಧ್ಯ ಹೆನನ್‌ ಪ್ರಾಂತದಲ್ಲಿ ಮೊಟ್ಟೆ ಗಾತ್ರದ ಆಲಿಕಲ್ಲುಗಳು ಬಿದ್ದು 25 ಮಂದಿ ಮೃತಪಟ್ಟರು ಮತ್ತು 200 ಮಂದಿ ಗಾಯಗೊಂಡರು. 1545ರಲ್ಲಿ ನಡೆದ ಆಲಿಕಲ್ಲು ಮಳೆಯ ಕುರಿತು ಇಟಲಿಯವನಾಗಿದ್ದ ಶಿಲ್ಪಿ ಬೆನ್‌ವೆನೂಟೊ ಚಲೀನೀ ಬರೆದದ್ದು: “ಒಂದು ದಿವಸ ನಾವು ಲೀಓನ್ಸ್‌ನಿಂದ ಬಹಳ ದೂರದಲ್ಲಿದ್ದೆವು. . . . ಆಗ ಆಕಾಶವು ಭಯಂಕರವಾಗಿ ಗುಡುಗಲು ಆರಂಭವಾಯಿತು. . . . ಗುಡುಗಿನ ಶಬ್ದವು ಎಷ್ಟು ಭಯಾನಕವಾಗಿತ್ತೆಂದರೆ ಲೋಕವು ಅಂತ್ಯಗೊಳ್ಳಲಿದೆ ಎಂದು ನಾನು ಭಾವಿಸಿದೆ; ನಾನು ನನ್ನ ಕುದುರೆಯನ್ನು ಅಲ್ಲಿಯೇ ಸ್ವಲ್ಪ ಸಮಯಕ್ಕಾಗಿ ನಿಲ್ಲಿಸಿದೆ. ಆಗಲೇ, ಒಂದೇ ಒಂದು ತೊಟ್ಟು ನೀರು ಸುರಿಯದೆ ಆಲಿಕಲ್ಲುಗಳು ಬೀಳಲು ಆರಂಭಿಸಿದವು. . . . ನೋಡುತ್ತಲೇ ಇದ್ದಂತೆ ಆ ಕಲ್ಲುಗಳು ದೊಡ್ಡ ಲಿಂಬೆ ಗಾತ್ರದಷ್ಟು ಆದವು. . . . ಆಲಿಕಲ್ಲಿನಿಂದ ಕೂಡಿದ ಈ ಬಿರುಗಾಳಿಯು ಸ್ವಲ್ಪ ಸಮಯವಿದ್ದು ಅನಂತರ ನಿಂತಿತು . . . ನಾವು ನಮ್ಮ ಗಾಯಗಳನ್ನು ಮತ್ತು ಗೀರುಗಳನ್ನು ಒಬ್ಬರಿಗೊಬ್ಬರು ತೋರಿಸಿಕೊಂಡೆವು; ಆದರೆ ಒಂದು ಮೈಲಿ ದೂರಕ್ಕೆ ಹೋದಾಗ, ಅಲ್ಲಿ ನಾವು ನೋಡಿದ ಧ್ವಂಸಕಾರಕ ದೃಶ್ಯವು ನಮ್ಮ ಗಾಯಗಳನ್ನು ಮರೆತುಬಿಡುವಂತೆ ಮಾಡಿತು. ಆ ದೃಶ್ಯವು ವರ್ಣನಾತೀತವಾಗಿತ್ತು. ಎಲ್ಲ ಮರಗಳು ತಮ್ಮ ಎಲೆಗಳನ್ನು ಕಳೆದುಕೊಂಡು ಬೋಳಾಗಿ ನಿಂತಿದ್ದವು; ಗದ್ದೆಯಲ್ಲಿದ್ದ ಪ್ರಾಣಿಗಳು ಸತ್ತುಬಿದ್ದಿದ್ದವು; ದನ ಮೇಯಿಸುವ ಅನೇಕರು ಸಹ ಮೃತಪಟ್ಟಿದ್ದರು; ಅಲ್ಲಿ ನಾವು, ನಮ್ಮ ಎರಡು ಕೈಗಳಿಂದ ಹಿಡಿಯಲಾಗದಷ್ಟು ದೊಡ್ಡ ಗಾತ್ರದ ಆಲಿಕಲ್ಲುಗಳ ರಾಶಿಗಳನ್ನು ನೋಡಿದೆವು.”​—⁠ಜೀವನ ಚರಿತ್ರೆ (ಇಂಗ್ಲಿಷ್‌) (ಪುಸ್ತಕ II, 50), ಹಾರ್ವರ್ಡ್‌ ಪ್ರಕಾಶನಗಳು, ಸಂಪುಟ 31, ಪುಟ 352-3.

ಯೆಹೋವನು ತನ್ನ ವೈರಿಗಳ ವಿರುದ್ಧ ಹಿಮದ ಮತ್ತು ಕಲ್ಮಳೆಯ ಭಂಡಾರಗಳನ್ನು ತೆರೆಯುವಾಗ ಏನು ಸಂಭವಿಸುವುದು? ದೇವರು ತನ್ನ ಚಿತ್ತವನ್ನು ನೆರವೇರಿಸಲು ಅವನ್ನು ಉಪಯೋಗಿಸುವಾಗ ಆತನ ವೈರಿಗಳಾರೂ ಪಾರಾಗಲಾರರು.

ಮಳೆ, ಇಬ್ಬನಿ, ಹಿಮ ಮತ್ತು ಮಂಜುಗೆಡ್ಡೆಯು ಯಾರ ಕೈಕೆಲಸವಾಗಿದೆ?

ಯೆಹೋವನು ಅನಂತರ ಮಳೆ, ಇಬ್ಬನಿ, ಹಿಮ ಮತ್ತು ಮಂಜುಗಡ್ಡೆಯ ಕುರಿತು ಯೋಬನನ್ನು ಪ್ರಶ್ನಿಸುತ್ತಾನೆ. (ಯೋಬ 38:​24-30) ಯೆಹೋವನು ಮಳೆಯನ್ನು ಉಂಟುಮಾಡುವವನಾಗಿದ್ದಾನೆ. ‘ಮನುಷ್ಯರೇ ಇಲ್ಲದ ಕಾಡು’ ಸಹ ಆತನ ಆಶೀರ್ವಾದದಲ್ಲಿ ಆನಂದಿಸುತ್ತದೆ. ಮಳೆ, ಮಂಜುಗಡ್ಡೆ ಮತ್ತು ಹಿಮಕ್ಕೆ ಮಾನವ ತಂದೆ ಅಥವಾ ಮೂಲಕರ್ತನು ಇಲ್ಲ.

ನೇಚರ್‌ ಬುಲಟಿನ್‌ ತಿಳಿಸುವುದು: “[ಮಂಜುಗಡ್ಡೆಯ] ಅತಿ ಆಶ್ಚರ್ಯಕರವಾದ ಮತ್ತು ಒಂದುವೇಳೆ ಅತಿ ಪ್ರಾಮುಖ್ಯವಾದ ಅಂಶವು ಯಾವುದೆಂದರೆ, ನೀರು ಘನೀಕರಿಸುವಾಗ ಅದು ವಿಸ್ತಾರಗೊಳ್ಳುವುದೇ ಆಗಿದೆ . . . ಚಳಿಗಾಲದಲ್ಲಿ ಕೊಳಗಳ ಮೇಲ್ಭಾಗದಲ್ಲಿ ಉಂಟಾಗುವ ಮಂಜಿನ ಪದರವು ತೇಲಾಡುವ ಕಾರಣ, ನೀರಿನಡಿಯಲ್ಲಿ ಬೆಳೆಯುವ ಸಸಿಗಳು ಮತ್ತು ನೀರಿನಲ್ಲಿ ಜೀವಿಸುವ ಪ್ರಾಣಿಗಳು (ಮೀನು, ಮುಂತಾದವುಗಳು) ಬದುಕಿ ಉಳಿಯಲು ಸಾಧ್ಯವಾಗುತ್ತದೆ. ಒಂದುವೇಳೆ . . . ನೀರು ಗಡ್ಡೆಕಟ್ಟುವಾಗ ವಿಸ್ತಾರವಾಗುವ ಬದಲಿಗೆ ಕುಗ್ಗುವುದಾದರೆ ಮತ್ತು ಸಾಂದ್ರವಾಗುವುದಾದರೆ, ಮಂಜುಗಡ್ಡೆಯು ಭಾರವಾಗಿ ನೀರಿನಲ್ಲಿ ಮುಳುಗಿ ತಳಕ್ಕೆ ಹೋಗಿಬಿಡುತ್ತಿತ್ತು. ಕೊಳದ ಮೇಲ್ಭಾಗದಲ್ಲಿ ಇನ್ನೂ ಹೆಚ್ಚಿನ ಮಂಜುಗಡ್ಡೆಗಳು ಉಂಟಾಗುತ್ತಾ ಹೀಗೆ ಇಡೀ ಕೊಳವು ಘನೀಕರಿಸುತ್ತಿತ್ತು. . . . ಲೋಕದ ಅತಿ ಹೆಚ್ಚು ತಂಪು ಪ್ರದೇಶದಲ್ಲಿರುವ ನದಿಗಳು, ಕೆರೆಗಳು, ಸರೋವರಗಳು ಮತ್ತು ಸಾಗರಗಳು ಸಹ ನಿತ್ಯನಿರಂತರ ಘನೀಕರಿಸಲ್ಪಟ್ಟಿರುತ್ತಿದ್ದವು.”

ಸಂಪೂರ್ಣ ನೀರು ಘನೀಕರಿಸದೇ ಇರುವುದಕ್ಕೆ ನಾವೆಷ್ಟು ಆಭಾರಿಗಳಾಗಿರಬೇಕು! ಯೆಹೋವನ ಕೈಕೆಲಸಗಳಾದ ಮಳೆ ಮತ್ತು ಇಬ್ಬನಿಯು ಭೂಮಿಯ ಕಾಯಿಪಲ್ಯವನ್ನು ಹಸನಾಗಿಸುತ್ತಿರುವುದಕ್ಕಾಗಿ ನಾವು ನಿಜವಾಗಿಯೂ ಕೃತಜ್ಞರಾಗಿದ್ದೇವೆ.

ಖಗೋಳದ ಕಟ್ಟಳೆಗಳನ್ನು ಯಾರು ಸ್ಥಾಪಿಸಿದರು?

ಯೆಹೋವನು ಅನಂತರ ಖಗೋಳದ ಅಥವಾ ಆಕಾಶದ ಕುರಿತು ಯೋಬನನ್ನು ಪ್ರಶ್ನಿಸುತ್ತಾನೆ. (ಯೋಬ 38:​31-33) ಕೃತ್ತಿಕೆಯು ಏಳು ದೊಡ್ಡ ನಕ್ಷತ್ರಗಳು ಮತ್ತು ಅನೇಕಾನೇಕ ಚಿಕ್ಕ ನಕ್ಷತ್ರಗಳನ್ನು ಹೊಂದಿರುವ ತಾರಾಪುಂಜವಾಗಿದೆ. ಇವುಗಳಲ್ಲಿ ಕೆಲವು ನಕ್ಷತ್ರಗಳು ಸೂರ್ಯನಿಂದ ಸುಮಾರು 380 ಜ್ಯೋತಿರ್ವರ್ಷಗಳ ದೂರದಲ್ಲಿವೆ. ಮನುಷ್ಯನಿಗೆ ‘ಕೃತ್ತಿಕೆಯ ಸರಪಣಿಯನ್ನು ಬಿಗಿಯಲು’ ಸಾಧ್ಯವಿಲ್ಲ, ಅಂದರೆ ಅದನ್ನು ಒಂದು ಗುಚ್ಛವಾಗಿ ಒಟ್ಟುಗೂಡಿಸಲು ಅವನಿಂದ ಸಾಧ್ಯವಿಲ್ಲ. ‘ಮೃಗಶಿರದ ಬಂಧವನ್ನು ಬಿಚ್ಚಲು’ ಸಹ ಯಾವ ಮಾನವನಿಂದಲೂ ಸಾಧ್ಯವಿಲ್ಲ. ಯಾವುದೇ ತಾರಾಪುಂಜವಾಗಿರಲಿ ಮಾನವನು ಅದನ್ನು ನಿಯಂತ್ರಿಸುವುದು ಮತ್ತು ಮಾರ್ಗದರ್ಶಿಸುವುದು ಅಸಾಧ್ಯವಾಗಿದೆ. “ಖಗೋಲದ ಕಟ್ಟಳೆಗಳನ್ನು” ಅಂದರೆ ವಿಶ್ವವನ್ನು ನಿಯಂತ್ರಿಸುತ್ತಿರುವ ನಿಯಮಗಳನ್ನು ಮಾನವನಿಂದ ಬದಲಾಯಿಸಸಾಧ್ಯವಿಲ್ಲ.

ಭೂಮಿಯ ಹವಾಮಾನ, ಉಬ್ಬರವಿಳಿತಗಳು, ವಾತಾವರಣ ಮತ್ತು ಎಲ್ಲಕ್ಕಿಂತಲೂ ಹೆಚ್ಚಾಗಿ ಈ ಗ್ರಹದಲ್ಲಿ ಜೀವದ ಅಸ್ತಿತ್ವವನ್ನು ಪ್ರಭಾವಿಸುವಂಥ ಆಕಾಶಸ್ಥಕಾಯಗಳನ್ನು ಮಾರ್ಗದರ್ಶಿಸುವ ನಿಯಮಗಳನ್ನು ದೇವರು ಸ್ಥಾಪಿಸಿದ್ದಾನೆ. ಸೂರ್ಯನನ್ನು ಪರಿಗಣಿಸಿರಿ. ಅದರ ಕುರಿತು ದಿ ಎನ್‌ಸೈಕ್ಲಪೀಡೀಯ ಅಮೆರಿಕಾನ (1996ರ ಸಂಪುಟ) ತಿಳಿಸುವುದು: “ಸೂರ್ಯನ ಕಿರಣಗಳು ಭೂಮಿಗೆ ಶಾಖ ಮತ್ತು ಬೆಳಕನ್ನು ನೀಡುತ್ತವೆ. ಅವು ಗಿಡಗಳ ಬೆಳವಣಿಗೆಗೆ, ಸಮುದ್ರದಿಂದ ಮತ್ತು ಇತರ ಮೂಲಗಳಿಂದ ನೀರು ಆವಿಯಾಗಿ ಹೋಗುವುದಕ್ಕೆ, ಗಾಳಿಯನ್ನು ಉಂಟುಮಾಡುವುದಕ್ಕೆ ಮತ್ತು ಭೂಮಿಯಲ್ಲಿ ಜೀವವು ಅಸ್ತಿತ್ವದಲ್ಲಿರಲು ಅತ್ಯಾವಶ್ಯಕವಾಗಿ ಬೇಕಾಗಿರುವ ಇತರ ಅನೇಕ ಪ್ರಕ್ರಿಯೆಗಳಿಗೆ ಕಾರಣವಾಗಿವೆ.” ಅದೇ ಪುಸ್ತಕವು ಹೇಳುವುದು: “ಗಾಳಿಯಲ್ಲಿರುವ, ಅಣೆಕಟ್ಟುಗಳಲ್ಲಿರುವ ಮತ್ತು ನದಿಗಳಲ್ಲಿರುವ ಒಟ್ಟು ಶಕ್ತಿ ಹಾಗೂ ಮರ, ಕಲ್ಲಿದ್ದಲು ಮತ್ತು ಎಣ್ಣೆ ಈ ಮುಂತಾದ ನೈಸರ್ಗಿಕವಾಗಿ ದೊರಕುವ ಬೆಂಕಿ ಉರಿಸುವ ಸಾಮಗ್ರಿಗಳಲ್ಲಿರುವ ಒಟ್ಟು ಶಕ್ತಿ ಇವೆಲ್ಲವು ಸೂರ್ಯನಿಂದ 1.5 ಕೋಟಿ ಕಿಲೋಮೀಟರ್‌ ದೂರದಲ್ಲಿರುವ ಚಿಕ್ಕ ಗ್ರಹವಾದ [ಭೂಮಿಯು] ತನ್ನಲ್ಲಿ ಶೇಖರಿಸಿಟ್ಟಿರುವ ಸೂರ್ಯನ ಬೆಳಕಿನಿಂದ ಬರುವ ಶಕ್ತಿಯೇ ಹೊರತು ಇನ್ನೇನಲ್ಲ. ಒಬ್ಬನು ಇದೆಲ್ಲವನ್ನು ಪರಿಗಣಿಸುವಾಗ, ಸೂರ್ಯನ ಬೆಳಕಿನಲ್ಲಿರುವ ಅಪಾರವಾದ ಶಕ್ತಿಯನ್ನು ಅರ್ಥಮಾಡಿಕೊಳ್ಳಬಲ್ಲನು.”

ಯಾರು ಕಾರ್ಮುಗಿಲಿಗೆ ಜ್ಞಾನವನ್ನು ದಯಪಾಲಿಸಿದರು?

ಯೆಹೋವನು ಕಾರ್ಮುಗಿಲನ್ನು ಪರಿಗಣಿಸುವಂತೆ ಯೋಬನಿಗೆ ಹೇಳುತ್ತಾನೆ. (ಯೋಬ 38:​34-38) ಕಾರ್ಮುಗಿಲಾಗುವಂತೆ ಆಜ್ಞೆಯಿತ್ತು, ಮಳೆಬರುವಂತೆ ಮಾಡುವ ಶಕ್ತಿ ಮಾನವನಿಗಿಲ್ಲ. ಹಾಗಿದ್ದರೂ, ಸೃಷ್ಟಿಕರ್ತನಿಂದ ಸ್ಥಾಪಿಸಲ್ಪಟ್ಟಿರುವ ಜಲಚಕ್ರದ ಮೇಲೆ ಮಾನವನು ಎಷ್ಟು ಅವಲಂಬಿತನಾಗಿದ್ದಾನೆ!

ಜಲಚಕ್ರ ಎಂದರೇನು? ಒಂದು ಪುಸ್ತಕವು ಹೀಗೆ ತಿಳಿಸಿದೆ: “ಜಲಚಕ್ರದಲ್ಲಿ ನಾಲ್ಕು ವಿಭಿನ್ನ ಹಂತಗಳಿರುತ್ತವೆ: ಶೇಖರಣೆ, ಆವಿಯಾಗುವಿಕೆ, ಸಾಂದ್ರೀಕರಿಸಲ್ಪಟ್ಟ ಆವಿಯು ದ್ರವರೂಪವನ್ನು ತಾಳುವುದು ಮತ್ತು ಮಳೆ ಬಿದ್ದ ಅನಂತರ ನೀರು ನದಿಗಳು ಅಥವಾ ತೊರೆಗಳಿಗೆ ಹರಿದುಹೋಗುವುದು. ತಾತ್ಕಾಲಿಕವಾಗಿ ನೀರು ಭೂಮಿಯ ಮೇಲೆ ಸಮುದ್ರಗಳಲ್ಲಿ, ಕೆರೆಗಳಲ್ಲಿ ಮತ್ತು ನದಿಗಳಲ್ಲಿ ಹಾಗೂ ಹಿಮಕವಚಗಳಲ್ಲಿ ಮತ್ತು ನೀರ್ಗಲ್ಲ ನದಿಗಳಲ್ಲಿ ಶೇಖರಿಸಿಡಲ್ಪಡಬಹುದು. ಭೂಮಿಯ ಮೇಲ್ಭಾಗದಿಂದ ಅದು ಆವಿಯಾಗಿ ಹೋಗುತ್ತದೆ, ಮೋಡಗಳಲ್ಲಿ ಘನೀಕರಿಸುತ್ತದೆ, ಪುನಃ ದ್ರವರೂಪವನ್ನು ತಾಳಿ (ಮಳೆ ಅಥವಾ ಹಿಮವಾಗಿ) ಭೂಮಿಗೆ ಬೀಳುತ್ತದೆ ಮತ್ತು ಕೊನೆಗೆ ಸಮುದ್ರಕ್ಕೆ ಹರಿದುಹೋಗುತ್ತದೆ ಇಲ್ಲವೆ ಪುನಃ ಆವಿಯಾಗಿ ವಾತಾವರಣವನ್ನು ಸೇರುತ್ತದೆ. ಭೂಮಿಯಲ್ಲಿರುವ ಬಹುಮಟ್ಟಿಗೆ ಎಲ್ಲ ನೀರು ಅಸಂಖ್ಯಾತ ಬಾರಿ ಈ ಜಲಚಕ್ರವನ್ನು ಅನುಭವಿಸಿದೆ.”​—⁠ಮೈಕ್ರೋಸಾಫ್ಟ್‌ ಎನ್‌ಕಾರ್ಟ ರೆಫರೆನ್ಸ್‌ ಲೈಬ್ರರಿ 2005.

ನೀರು ತುಂಬಿದ ಮೋಡಗಳು ಆಕಾಶದಲ್ಲಿರುವ ನೀರಿನ ಬುದ್ದಲಿಗಳಂತಿವೆ. ದೇವರು ಅವುಗಳನ್ನು ಮೊಗಚಿಹಾಕುವಾಗ, ಅವುಗಳಿಂದ ನೀರು ಎಷ್ಟು ಧಾರಾಕಾರವಾಗಿ ಸುರಿಯಬಹುದೆಂದರೆ ಧೂಳು ಕೆಸರಾಗುತ್ತದೆ ಮತ್ತು ಮಣ್ಣಿನ ಹೆಂಟೆಗಳು ಇಲ್ಲವೆ ಮುದ್ದೆಗಳು ಒಂದಕ್ಕೊಂದು ಅಂಟಿಕೊಳ್ಳುತ್ತವೆ. ದೇವರು ಮಳೆಯನ್ನು ಸುರಿಸಲು ಇಲ್ಲವೆ ಅದನ್ನು ತಡೆಹಿಡಿಯಲು ಶಕ್ತನಾಗಿದ್ದಾನೆ.​—⁠ಯಾಕೋಬ 5:​17, 18.

ಮಳೆಯೊಂದಿಗೆ ಅನೇಕವೇಳೆ ಸಿಡಿಲು ಸಹ ಕಾಣಿಸಿಕೊಳ್ಳುತ್ತದೆ. ಆದರೆ ಮನುಷ್ಯನಿಗೆ ಅದು ಅವನ ಇಚ್ಛೆಯನ್ನು ಈಡೇರಿಸುವಂತೆ ಮಾಡಲು ಸಾಧ್ಯವಿಲ್ಲ. ಸಿಡಿಲುಗಳು ದೇವರ ಬಳಿ ಹೋಗಿ “ಇಗೋ, ಬಂದಿದ್ದೇವೆ” ಎಂದು ಹೇಳಿ ವರದಿಸುತ್ತವೊ ಎಂಬಂತೆ ತಿಳಿಸಲಾಗಿದೆ. ಕಾಮ್ಟನ್ಸ್‌ ಎನ್‌ಸೈಕ್ಲಪೀಡೀಯ ತಿಳಿಸುವುದು: “ಸಿಡಿಲು, ವಾಯುಮಂಡಲದಲ್ಲಿ ಗಮನಾರ್ಹವಾದ ರಾಸಾಯನಿಕ ಬದಲಾವಣೆಗಳನ್ನು ಉಂಟುಮಾಡುತ್ತದೆ. ಗಾಳಿಯ ಮಧ್ಯದಿಂದ ಸಿಡಿಲು ಹಾದುಹೋಗುವಾಗ ಅಪಾರ ಶಾಖವನ್ನು ಉತ್ಪತ್ತಿಮಾಡುತ್ತದೆ. ಈ ಶಾಖದಿಂದಾಗಿ, ಸಾರಜನಕವು ಆಮ್ಲಜನಕದೊಂದಿಗೆ ಸಂಯೋಗವಾಗಿ ನೈಟ್ರೇಟ್‌ ಮತ್ತು ಇತರ ಸಂಯುಕ್ತವಸ್ತುಗಳು ಉಂಟಾಗುತ್ತವೆ. ಈ ಸಂಯುಕ್ತವಸ್ತುಗಳು ಮಳೆಯೊಂದಿಗೆ ಭೂಮಿಗೆ ಬೀಳುತ್ತವೆ. ಈ ರೀತಿಯಲ್ಲಿ, ಗಿಡಮರಗಳನ್ನು ಬೆಳೆಸಲು ಮಣ್ಣಿಗೆ ಬೇಕಾಗಿರುವ ಪೋಷಕ ಅಂಶಗಳ ಸರಬರಾಯಿಯನ್ನು ಅವಿರತವಾಗಿ ಭರ್ತಿಮಾಡುತ್ತಾ ಇರಲು ವಾಯುಮಂಡಲಕ್ಕೆ ಸಾಧ್ಯವಾಗುತ್ತದೆ.” ಸಿಡಿಲ ಸಂಪೂರ್ಣ ಜ್ಞಾನವು ಮಾನವನಿಗೆ ಇನ್ನೂ ನಿಗೂಢವಾಗಿದೆಯಾದರೂ ಅದು ದೇವರಿಗೆ ಚೆನ್ನಾಗಿ ತಿಳಿದಿದೆ.

ಸೃಷ್ಟಿಯ ಅದ್ಭುತಗಳು ದೇವರಿಗೆ ಸ್ತುತಿಯನ್ನು ತರುತ್ತವೆ

ಸೃಷ್ಟಿಯ ಅದ್ಭುತಗಳು ಎಲ್ಲ ವಿಷಯಗಳ ಸೃಷ್ಟಿಕರ್ತನನ್ನು ನಿಜವಾಗಿಯೂ ಮಹೋನ್ನತೆಗೇರಿಸುತ್ತವೆ. (ಪ್ರಕಟನೆ 4:11) ಅಂತರಿಕ್ಷದಲ್ಲಿರುವ ಭೂಮಿ ಮತ್ತು ಆಕಾಶಸ್ಥಕಾಯಗಳ ಕುರಿತಾದ ಯೆಹೋವನ ಮಾತುಗಳಿಂದ ಯೋಬನು ಎಷ್ಟೊಂದು ವಿಸ್ಮಿತನಾಗಿರಲಿಕ್ಕಿಲ್ಲ!

ಈಗಷ್ಟೆ ನಾವು ಪರಿಗಣಿಸಿರುವ ಸೃಷ್ಟಿಯ ಅದ್ಭುತಗಳು ಮಾತ್ರವೇ ಯೋಬನಿಗೆ ಕೇಳಲ್ಪಟ್ಟ ಪ್ರಶ್ನೆಗಳಾಗಿಲ್ಲ ಮತ್ತು ಅವನಿಗೆ ನೀಡಲ್ಪಟ್ಟ ವರ್ಣನೆಗಳಲ್ಲ. ಹಾಗಿದ್ದರೂ, ನಾವೀಗ ಪರಿಗಣಿಸಿದ ವಿಷಯಗಳೇ ನಾವು ಆಶ್ಚರ್ಯಚಕಿತರಾಗಿ ಹೀಗೆ ಹೇಳುವಂತೆ ಮಾಡುತ್ತವೆ: “ಆಹಾ, ದೇವರು ಮಹೋನ್ನತನಾಗಿದ್ದಾನೆ, ನಾವು ಆತನನ್ನು ಅರಿಯಲಾರೆವು.”​—⁠ಯೋಬ 36:26.

[ಪುಟ 14ರಲ್ಲಿರುವ ಚಿತ್ರ ಕೃಪೆ]

ಹಿಮಹರುಳು: snowcrystals.net

[ಪುಟ 15ರಲ್ಲಿರುವ ಚಿತ್ರ ಕೃಪೆ]

ಕೃತ್ತಿಕಾ ತಾರಾಪುಂಜ: NASA, ESA and AURA/Caltech; ಮೀನು: U.S. Fish & Wildlife Service, Washington, D.C./William W. Hartley