ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹೋಶೇಯನ ಪ್ರವಾದನೆಯು ದೇವರೊಂದಿಗೆ ನಡೆಯುವಂತೆ ನಮಗೆ ಸಹಾಯಮಾಡುತ್ತದೆ

ಹೋಶೇಯನ ಪ್ರವಾದನೆಯು ದೇವರೊಂದಿಗೆ ನಡೆಯುವಂತೆ ನಮಗೆ ಸಹಾಯಮಾಡುತ್ತದೆ

ಹೋಶೇಯನ ಪ್ರವಾದನೆಯು ದೇವರೊಂದಿಗೆ ನಡೆಯುವಂತೆ ನಮಗೆ ಸಹಾಯಮಾಡುತ್ತದೆ

“ಯೆಹೋವನನ್ನು ಆತನ ಜನರು ಹಿಂಬಾಲಿಸುವರು.”​—⁠ಹೋಶೇಯ 11:⁠10.

ಆಸಕ್ತಿಕರ ನಟರು ಮತ್ತು ಕುತೂಹಲ ಕೆರಳಿಸುವಂಥ ಕಥಾವಸ್ತುಗಳು ಇರುವ ನಾಟಕಗಳು ನಿಮಗೆ ಇಷ್ಟವೊ? ಬೈಬಲಿನ ಹೋಶೇಯ ಪುಸ್ತಕವು ಒಂದು ಸಾಂಕೇತಿಕ ನಾಟಕವನ್ನು ಒಳಗೂಡಿದೆ. * ಈ ನಾಟಕವು ದೇವರ ಪ್ರವಾದಿಯಾದ ಹೋಶೇಯನ ಕುಟುಂಬದ ಸ್ಥಿತಿಗತಿಗಳನ್ನು ವರ್ಣಿಸುತ್ತದೆ. ಮತ್ತು ಇದು ಮೋಶೆಯ ಧರ್ಮಶಾಸ್ತ್ರದ ಒಡಂಬಡಿಕೆಯ ಮೂಲಕ ಪುರಾತನ ಇಸ್ರಾಯೇಲಿನೊಂದಿಗೆ ಯೆಹೋವನು ಮಾಡಿಕೊಂಡಿದ್ದ ಸಾಂಕೇತಿಕ ವಿವಾಹಕ್ಕೆ ಸಂಬಂಧಿಸಿದ್ದಾಗಿದೆ.

2 ಈ ನಾಟಕದ ಹಿನ್ನೆಲೆಯು ಹೋಶೇಯ 1ನೇ ಅಧ್ಯಾಯದಲ್ಲಿ ಕಂಡುಬರುತ್ತದೆ. ಹೋಶೇಯನು ಹತ್ತು ಕುಲಗಳ ಇಸ್ರಾಯೇಲ್‌ ರಾಜ್ಯದ (ಇದರ ಪ್ರಮುಖ ಕುಲವಾಗಿರುವ ಎಫ್ರಾಯೀಮ್‌ ಎಂಬ ಹೆಸರಿನಿಂದಲೂ ಕರೆಯಲ್ಪಡುತ್ತಿತ್ತು) ಕ್ಷೇತ್ರದಲ್ಲಿ ಜೀವಿಸಿದ್ದನು ಎಂಬುದು ಸುವ್ಯಕ್ತ. ಅವನು ಇಸ್ರಾಯೇಲಿನ ಕೊನೆಯ ಏಳು ಅರಸರ ಆಳ್ವಿಕೆಯ ಸಮಯದಲ್ಲಿ ಮತ್ತು ಯೆಹೂದದ ಅರಸರಾದ ಉಜ್ಜೀಯ, ಯೋಥಾಮ, ಆಹಾಜ ಮತ್ತು ಹಿಜ್ಕೀಯರ ಕಾಲದಲ್ಲಿ ಪ್ರವಾದಿಸಿದನು. (ಹೋಶೇಯ 1:1) ಹೀಗೆ ಹೋಶೇಯನು ಕಡಿಮೆಪಕ್ಷ 59 ವರ್ಷಗಳ ವರೆಗೆ ಪ್ರವಾದಿಸಿದನು. ಹೋಶೇಯನ ಪುಸ್ತಕವು ಸಾ.ಶ.ಪೂ. 745ರ ಬಳಿಕ ಸ್ವಲ್ಪದರಲ್ಲೇ ಪೂರ್ಣಗೊಳಿಸಲ್ಪಟ್ಟಿತಾದರೂ, ಇದು ಇಂದಿಗೂ ಅನ್ವಯವಾಗುತ್ತದೆ; ಏಕೆಂದರೆ “ಯೆಹೋವನನ್ನು ಆತನ ಜನರು ಹಿಂಬಾಲಿಸುವರು” ಎಂಬ ಮಾತುಗಳಲ್ಲಿ ಮುಂತಿಳಿಸಲ್ಪಟ್ಟಿರುವಂಥ ರೀತಿಯ ಒಂದು ಜೀವನಮಾರ್ಗವನ್ನು ಇಂದು ಲಕ್ಷಾಂತರ ಮಂದಿ ಬೆನ್ನಟ್ಟುತ್ತಿದ್ದಾರೆ.​—⁠ಹೋಶೇಯ 11:⁠10.

ಒಂದು ಸ್ಥೂಲ ಸಮೀಕ್ಷೆಯು ಏನನ್ನು ತಿಳಿಯಪಡಿಸುತ್ತದೆ?

3 ಹೋಶೇಯ 1ರಿಂದ 5ನೇ ಅಧ್ಯಾಯಗಳ ವರೆಗಿನ ಸಂಕ್ಷಿಪ್ತವಾದ ಸ್ಥೂಲ ಸಮೀಕ್ಷೆಯು, ನಂಬಿಕೆಯನ್ನು ತೋರಿಸುವ ಮೂಲಕ ಮತ್ತು ದೇವರ ಚಿತ್ತಕ್ಕೆ ಹೊಂದಿಕೆಯಲ್ಲಿರುವ ಜೀವನಮಾರ್ಗವನ್ನು ಬೆನ್ನಟ್ಟುವ ಮೂಲಕ ಆತನೊಂದಿಗೆ ನಡೆಯುವ ನಮ್ಮ ನಿರ್ಧಾರವನ್ನು ಇನ್ನಷ್ಟು ಬಲಪಡಿಸುವುದು. ಇಸ್ರಾಯೇಲ್‌ ರಾಜ್ಯದ ನಿವಾಸಿಗಳು ಆಧ್ಯಾತ್ಮಿಕ ವ್ಯಭಿಚಾರದ ದೋಷಾಪರಾಧಿಗಳಾಗಿ ಪರಿಣಮಿಸಿದರಾದರೂ, ಅವರು ಪಶ್ಚಾತ್ತಾಪಪಡುವಲ್ಲಿ ದೇವರು ಅವರಿಗೆ ಕರುಣೆಯನ್ನು ತೋರಿಸಲಿದ್ದನು. ಇದು ಹೋಶೇಯನು ತನ್ನ ಪತ್ನಿಯಾದ ಗೋಮೆರಳೊಂದಿಗೆ ವ್ಯವಹರಿಸಿದ ರೀತಿಯಿಂದ ದೃಷ್ಟಾಂತಿಸಲ್ಪಟ್ಟಿದೆ. ಅವಳು ಅವನಿಗೆ ಒಂದು ಮಗುವನ್ನು ಹೆತ್ತ ಬಳಿಕ, ಹಾದರಕ್ಕೆ ಹುಟ್ಟಿದ ಇನ್ನೂ ಇಬ್ಬರು ಮಕ್ಕಳನ್ನು ಪಡೆದಿರುವುದು ಸುವ್ಯಕ್ತ. ಆದರೂ, ಪಶ್ಚಾತ್ತಾಪಪಡುವ ಇಸ್ರಾಯೇಲ್ಯರಿಗೆ ಕರುಣೆ ತೋರಿಸಲು ಯೆಹೋವನು ಮನಃಪೂರ್ವಕವಾಗಿ ಸಿದ್ಧನಾಗಿದ್ದಂತೆಯೇ ಹೋಶೇಯನು ಅವಳನ್ನು ಪುನಃ ಸ್ವೀಕರಿಸಿದನು.​—⁠ಹೋಶೇಯ 1:​1–3:⁠5.

4 ಇಸ್ರಾಯೇಲ್ಯರ ವಿರುದ್ಧ ಯೆಹೋವನಿಗೆ ಒಂದು “ವಿವಾದ” ಇಲ್ಲವೆ ಕಾನೂನುರೀತ್ಯ ಮೊಕದ್ದಮೆಯಿತ್ತು, ಏಕೆಂದರೆ ಇಸ್ರಾಯೇಲಿನಲ್ಲಿ ಪ್ರೀತಿ, ಸತ್ಯತೆ ಅಥವಾ ದೇವಜ್ಞಾನವು ಇರಲಿಲ್ಲ. ವಿಗ್ರಹಾರಾಧಕ ಇಸ್ರಾಯೇಲ್‌ ಮತ್ತು ಯೆಹೂದದ ಹಟಮಾರಿ ರಾಜ್ಯದ ವಿರುದ್ಧ ಆತನು ದಂಡನೆಯನ್ನು ವಿಧಿಸಲಿದ್ದನು. ಆದರೆ ದೇವರ ಸ್ವಕೀಯ ಜನರಾಗಿದ್ದ ಇವರು ‘ಇಕ್ಕಟ್ಟಿಗೆ ಸಿಕ್ಕಿದಾಗ’ ಮಾತ್ರ ಯೆಹೋವನನ್ನು ಆಶ್ರಯಿಸಲು ಪ್ರಯತ್ನಿಸುತ್ತಿದ್ದರು.​—⁠ಹೋಶೇಯ 4:​1–5:⁠15.

ನಾಟಕವು ವಿಕಾಸಗೊಳ್ಳುತ್ತಾ ಹೋಗುತ್ತದೆ

5 ದೇವರು ಹೋಶೇಯನಿಗೆ ಹೀಗೆ ಆಜ್ಞಾಪಿಸಿದನು: “ನೀನು ಹೋಗಿ ವ್ಯಭಿಚಾರಿಣಿಯನ್ನು ಮದುವೆಮಾಡಿಕೊಂಡು ವ್ಯಭಿಚಾರದಿಂದಾಗುವ ಮಕ್ಕಳನ್ನು ಸೇರಿಸಿಕೋ; ದೇಶವು ನನ್ನನ್ನು ಬಿಟ್ಟು ಅಧಿಕವ್ಯಭಿಚಾರವನ್ನು ನಡಿಸುತ್ತದೆಂಬದಕ್ಕೆ ಇದು ದೃಷ್ಟಾಂತವಾಗಿರಲಿ.” (ಹೋಶೇಯ 1:2) ಇಸ್ರಾಯೇಲಿನಲ್ಲಿ ವ್ಯಭಿಚಾರವು ಎಷ್ಟು ವ್ಯಾಪಕವಾಗಿತ್ತು? ನಮಗೆ ಹೀಗೆ ತಿಳಿಸಲ್ಪಟ್ಟಿದೆ: “ವ್ಯಭಿಚಾರ ಗುಣವು [ಹತ್ತು ಕುಲಗಳ ಆ ರಾಜ್ಯದ ಜನರನ್ನು] ಭ್ರಾಂತಿಗೊಳಿಸಿದೆ; ತಮ್ಮ ದೇವರಿಗೆ ಪತಿಭಕ್ತಿಯನ್ನು ಸಲ್ಲಿಸದೆ ದ್ರೋಹಿಗಳಾಗಿದ್ದಾರೆ. . . . ನಿಮ್ಮ ಕುಮಾರಿಯರು ಸೂಳೆಯರಾಗಿ ನಡೆಯುವದೂ, ನಿಮ್ಮ ವಧುಗಳು ವ್ಯಭಿಚಾರಮಾಡುವದೂ ಏನಾಶ್ಚರ್ಯ? . . . ನೀವೇ ಸೂಳೆಯರನ್ನು ಕರಕೊಂಡು ಓರೆಯಾಗಿ ಹೋಗುತ್ತೀರಿ; ದೇವದಾಸಿಯರೊಂದಿಗೆ ಯಜ್ಞಮಾಡುತ್ತೀರಿ.”​—⁠ಹೋಶೇಯ 4:12-14.

6 ಪುರಾತನ ಇಸ್ರಾಯೇಲಿನಲ್ಲಿ ಶಾರೀರಿಕ ಹಾಗೂ ಆಧ್ಯಾತ್ಮಿಕ ಅರ್ಥದಲ್ಲಿ ವ್ಯಭಿಚಾರವು ವ್ಯಾಪಕವಾಗಿ ಹಬ್ಬಿಕೊಂಡಿತ್ತು. ಆದುದರಿಂದಲೇ ಯೆಹೋವನು ಇಸ್ರಾಯೇಲ್ಯರಿಗೆ ‘ಮುಯ್ಯಿತೀರಿಸಲಿದ್ದನು’ ಅಥವಾ ಅವರನ್ನು ‘ದಂಡಿಸಲಿದ್ದನು.’ (ಹೋಶೇಯ 1:4; 4:9) ಈ ಎಚ್ಚರಿಕೆಯು ನಮಗೆ ಮಹತ್ವಾರ್ಥವುಳ್ಳದ್ದಾಗಿದೆ, ಏಕೆಂದರೆ ಇಂದು ಅನೈತಿಕತೆಯಲ್ಲಿ ತೊಡಗಿರುವ ಮತ್ತು ಅಶುದ್ಧ ಆರಾಧನೆಯಲ್ಲಿ ಒಳಗೂಡುತ್ತಿರುವವರ ವಿರುದ್ಧ ಯೆಹೋವನು ಮುಯ್ಯಿತೀರಿಸಲಿದ್ದಾನೆ. ಆದರೆ ದೇವರೊಂದಿಗೆ ನಡೆಯುತ್ತಿರುವವರು ಶುದ್ಧ ಆರಾಧನೆಗಾಗಿರುವ ಆತನ ಮಟ್ಟಗಳಿಗನುಸಾರ ಜೀವಿಸುತ್ತಾರೆ ಮತ್ತು ‘ಯಾವ ಜಾರನಿಗೂ ಕ್ರಿಸ್ತನ ಮತ್ತು ದೇವರ ರಾಜ್ಯದಲ್ಲಿ ಬಾಧ್ಯತೆ ಇಲ್ಲವೇ ಇಲ್ಲ’ ಎಂಬುದನ್ನು ಬಲ್ಲವರಾಗಿದ್ದಾರೆ.​—⁠ಎಫೆಸ 5:5; ಯಾಕೋಬ 1:⁠27.

7 ಹೋಶೇಯನು ಗೋಮೆರಳನ್ನು ವಿವಾಹವಾದಾಗ ಅವಳು ಒಬ್ಬ ಕನ್ಯೆಯಾಗಿದ್ದಳು ಎಂಬುದು ಸುವ್ಯಕ್ತ. ಮತ್ತು “ಅವನಿಗೆ ಗಂಡು ಮಗುವನ್ನು” ಹೆತ್ತಾಗಲೂ ಅವಳು ತನ್ನ ಗಂಡನಿಗೆ ನಂಬಿಗಸ್ತಳಾಗಿದ್ದ ಪತ್ನಿಯಾಗಿದ್ದಳು. (ಹೋಶೇಯ 1:3) ಈ ಸಾಂಕೇತಿಕ ನಾಟಕದಲ್ಲಿ ಚಿತ್ರಿಸಲ್ಪಟ್ಟಿರುವಂತೆ, ಸಾ.ಶ.ಪೂ. 1513ರಲ್ಲಿ ಐಗುಪ್ತದ ದಾಸತ್ವದೊಳಗಿಂದ ಇಸ್ರಾಯೇಲ್ಯರನ್ನು ಬಿಡುಗಡೆಮಾಡಿದ ಸ್ವಲ್ಪ ಸಮಯಾನಂತರ, ದೇವರು ಅವರೊಂದಿಗೆ ಒಂದು ಒಡಂಬಡಿಕೆಯನ್ನು ಮಾಡಿಕೊಂಡನು. ಇದು ಒಂದು ನಿಷ್ಕಳಂಕ ವಿವಾಹಕ್ಕಾಗಿರುವ ಕರಾರಿನಂತಿತ್ತು. ಆ ಒಡಂಬಡಿಕೆಗೆ ಒಪ್ಪಿಕೊಳ್ಳುವ ಮೂಲಕ ಇಸ್ರಾಯೇಲ್‌ ಜನಾಂಗವು ತನ್ನ ‘ಪತಿಯಾದ’ ಯೆಹೋವನಿಗೆ ನಂಬಿಗಸ್ತಿಕೆಯಿಂದ ಉಳಿಯುವ ವಚನಕೊಟ್ಟಿತು. (ಯೆಶಾಯ 54:5) ಹೌದು, ಯೆಹೋವನು ಇಸ್ರಾಯೇಲಿನೊಂದಿಗೆ ಮಾಡಿಕೊಂಡ ಈ ಸಾಂಕೇತಿಕ ವಿವಾಹವು, ಹೋಶೇಯನು ಗೋಮೆರಳೊಂದಿಗೆ ಮಾಡಿಕೊಂಡ ನಿಷ್ಕಳಂಕ ವಿವಾಹದಿಂದ ಸಂಕೇತಿಸಲ್ಪಟ್ಟಿತು. ಆದರೆ ವಿಷಯಗಳು ಎಷ್ಟು ಬದಲಾದವು!

8 ಹೋಶೇಯನ ಪತ್ನಿಯು ‘ಪುನಃ ಗರ್ಭಿಣಿಯಾಗಿ ಹೆಣ್ಣುಮಗುವನ್ನು ಹೆತ್ತಳು.’ ಈ ಹುಡುಗಿ ಮತ್ತು ತದನಂತರ ಜನಿಸಿದ ಇನ್ನೊಂದು ಮಗುವು ಗೋಮೆರಳಿಗೆ ವ್ಯಭಿಚಾರದಿಂದಾಗಿ ಹುಟ್ಟಿದ್ದಿರಬಹುದು. (ಹೋಶೇಯ 1:6, 8) ಗೋಮೆರಳು ಇಸ್ರಾಯೇಲ್‌ ಜನಾಂಗವನ್ನು ಪ್ರತಿನಿಧಿಸಿದ್ದರಿಂದ, ‘ಇಸ್ರಾಯೇಲ್‌ ತನ್ನನ್ನು ವೇಶ್ಯೆಯಾಗಿ ಮಾಡಿಕೊಂಡದ್ದು ಹೇಗೆ?’ ಎಂದು ನೀವು ಕೇಳಬಹುದು. ಸಾ.ಶ.ಪೂ. 997ರಲ್ಲಿ, ಇಸ್ರಾಯೇಲಿನ ಕುಲಗಳಲ್ಲಿ ಹತ್ತು ಕುಲಗಳು ಯೆಹೂದ ಮತ್ತು ಬೆನ್ಯಾಮೀನ್‌ ಎಂಬ ದಕ್ಷಿಣ ಕುಲಗಳಿಂದ ತಮ್ಮನ್ನು ಪ್ರತ್ಯೇಕಿಸಿಕೊಂಡವು. ಉತ್ತರದ ಹತ್ತು ಕುಲಗಳ ಇಸ್ರಾಯೇಲ್‌ ರಾಜ್ಯದಲ್ಲಿ ಬಸವಾರಾಧನೆಯು ಆರಂಭಿಸಲ್ಪಟ್ಟಿತು. ಇದರಿಂದ ಜನರು ಯೆರೂಸಲೇಮಿನಲ್ಲಿರುವ ಯೆಹೋವನ ಆಲಯದಲ್ಲಿ ಆತನನ್ನು ಆರಾಧಿಸಲಿಕ್ಕಾಗಿ ಯೆಹೂದಕ್ಕೆ ಹೋಗದಂತೆ ಮಾಡಲಾಯಿತು. ಬಾಳನೆಂಬ ಸುಳ್ಳು ದೇವನ ಆರಾಧನೆ ಹಾಗೂ ಅದರಲ್ಲಿ ಒಳಗೂಡಿದ್ದ ಕಾಮಕೇಳಿಗಳು ಇಸ್ರಾಯೇಲಿನಲ್ಲಿ ಆಳವಾಗಿ ಬೇರೂರಿದವು.

9 ಹಾದರದಿಂದ ಹುಟ್ಟಿದ್ದಿರಬಹುದಾದ ಗೋಮೆರಳ ಎರಡನೇ ಮಗುವಿನ ಜನನದ ಸಮಯದಲ್ಲಿ ದೇವರು ಹೋಶೇಯನಿಗೆ ಹೇಳಿದ್ದು: ‘ಈ ಮಗುವಿಗೆ ಲೋರುಹಾಮ [ಇದರ ಅರ್ಥ, “ಅವಳಿಗೆ ಕರುಣೆ ತೋರಿಸಲ್ಪಟ್ಟಿಲ್ಲ”] ಎಂಬ ಹೆಸರಿಡು; ಏಕಂದರೆ ನಾನು ಇಸ್ರಾಯೇಲ್‌ ವಂಶದವರಲ್ಲಿ ಇನ್ನು ವಾತ್ಸಲ್ಯ [ಕರುಣೆ] ಇಡುವದಿಲ್ಲ, ಅವರನ್ನು ಎಷ್ಟು ಮಾತ್ರವೂ ಕ್ಷಮಿಸುವದಿಲ್ಲ.’ (ಹೋಶೇಯ 1:6) ಯೆಹೋವನು ಅವರನ್ನು ಕ್ಷಮಿಸಲಿಲ್ಲ ಮತ್ತು ಸಾ.ಶ.ಪೂ. 740ರಲ್ಲಿ ಅಶ್ಶೂರದವರು ಇಸ್ರಾಯೇಲ್ಯರನ್ನು ಬಂಧಿವಾಸಿಗಳಾಗಿ ಒಯ್ದರು. ಆದರೆ ದೇವರು ಎರಡು ಕುಲಗಳ ಯೆಹೂದ ರಾಜ್ಯಕ್ಕೆ ಕರುಣೆ ತೋರಿಸಿ ಅದನ್ನು ಉದ್ಧರಿಸಿದನು; ಆದರೆ ಬಿಲ್ಲು, ಕತ್ತಿ, ಕಾಳಗ, ಕುದುರೆಗಳು ಅಥವಾ ರಾಹುತರಿಂದಲ್ಲ. (ಹೋಶೇಯ 1:7) ಸಾ.ಶ.ಪೂ. 732ರ ಒಂದೇ ರಾತ್ರಿಯಲ್ಲಿ, ಯೆಹೂದದ ರಾಜಧಾನಿಯಾಗಿದ್ದ ಯೆರೂಸಲೇಮ್‌ ಪಟ್ಟಣಕ್ಕೆ ಬೆದರಿಕೆಯೊಡ್ಡುತ್ತಿದ್ದ 1,85,000 ಅಶ್ಶೂರ ಸೈನಿಕರನ್ನು ಕೇವಲ ಒಬ್ಬ ದೇವದೂತನು ಹತಿಸಿಬಿಟ್ಟನು.​—⁠2 ಅರಸುಗಳು 19:⁠35.

ಇಸ್ರಾಯೇಲಿನ ವಿರುದ್ಧ ಯೆಹೋವನ ಕಾನೂನುರೀತ್ಯ ಮೊಕದ್ದಮೆ

10 ಗೋಮೆರಳು ಹೋಶೇಯನನ್ನು ಬಿಟ್ಟುಹೋದಳು ಮತ್ತು ಒಬ್ಬ ‘ವ್ಯಭಿಚಾರಿಣಿಯಾಗಿ’ ಇನ್ನೊಬ್ಬ ಗಂಡಸಿನೊಂದಿಗೆ ಹಾದರಮಾಡಿಕೊಂಡು ಬದುಕತೊಡಗಿದಳು. ಇದು, ಇಸ್ರಾಯೇಲ್‌ ರಾಜ್ಯವು ಹೇಗೆ ವಿಗ್ರಹಾರಾಧಕ ಜನಾಂಗಗಳೊಂದಿಗೆ ರಾಜಕೀಯ ಮೈತ್ರಿಸಂಬಂಧಗಳನ್ನು ಬೆಳೆಸಿತು ಮತ್ತು ಆ ಜನಾಂಗಗಳನ್ನು ಅವಲಂಬಿಸಲು ಆರಂಭಿಸಿತು ಎಂಬುದನ್ನು ದೃಷ್ಟಾಂತಿಸುತ್ತದೆ. ಇಸ್ರಾಯೇಲ್‌ ತನ್ನ ಭೌತಿಕ ಸಮೃದ್ಧಿಗಾಗಿ ಯೆಹೋವನಿಗೆ ಕೀರ್ತಿಯನ್ನು ಸಲ್ಲಿಸುವುದಕ್ಕೆ ಬದಲಾಗಿ, ಅಂಥ ಜನಾಂಗಗಳ ದೇವರುಗಳಿಗೆ ಈ ಕೀರ್ತಿಯನ್ನು ಸಲ್ಲಿಸಿತು ಮತ್ತು ಸುಳ್ಳು ಆರಾಧನೆಯಲ್ಲಿ ಒಳಗೂಡುವ ಮೂಲಕ ದೇವರೊಂದಿಗಿನ ತನ್ನ ವಿವಾಹದ ಒಡಂಬಡಿಕೆಯನ್ನು ಉಲ್ಲಂಘಿಸಿತು. ಆದುದರಿಂದ, ಆಧ್ಯಾತ್ಮಿಕವಾಗಿ ವ್ಯಭಿಚಾರ ಗೈದಿರುವ ಈ ಜನಾಂಗದ ವಿರುದ್ಧ ಯೆಹೋವನಿಗೆ ಕಾನೂನುರೀತ್ಯ ವ್ಯಾಜ್ಯವಿದ್ದುದರಲ್ಲಿ ಆಶ್ಚರ್ಯವೇನಿಲ್ಲ!​—⁠ಹೋಶೇಯ 1:2; 2:2, 12, 13.

11 ತನ್ನ ಪತಿಯನ್ನು ತೊರೆದದ್ದಕ್ಕಾಗಿ ಇಸ್ರಾಯೇಲ್‌ ಯಾವ ದಂಡವನ್ನು ತೆರಬೇಕಾಯಿತು? ಅದು, ಅಶ್ಶೂರರನ್ನು ವಶಪಡಿಸಿಕೊಂಡ ಜನಾಂಗವಾದ ಬಾಬೆಲೆಂಬ ‘ಅಡವಿಗೆ’ ಹೋಗುವಂತೆ ದೇವರು ಮಾಡಿದನು; ಸಾ.ಶ.ಪೂ. 740ರಲ್ಲಿ ಇಸ್ರಾಯೇಲ್ಯರು ಆ ಅಶ್ಶೂರಕ್ಕೆ ಗಡೀಪಾರುಮಾಡಲ್ಪಟ್ಟಿದ್ದರು. (ಹೋಶೇಯ 2:14) ಹೀಗೆ ಯೆಹೋವನು 10 ಕುಲಗಳ ಆ ರಾಜ್ಯವು ಕೊನೆಗೊಳ್ಳುವಂತೆ ಮಾಡಿದಾಗ, 12 ಕುಲಗಳಿದ್ದ ಮೂಲ ಇಸ್ರಾಯೇಲ್‌ ಜನಾಂಗದೊಂದಿಗೆ ಮಾಡಿಕೊಂಡಿದ್ದ ತನ್ನ ವಿವಾಹದ ಒಡಂಬಡಿಕೆಯನ್ನು ಆತನು ರದ್ದುಪಡಿಸಲಿಲ್ಲ. ವಾಸ್ತವದಲ್ಲಿ, ಸಾ.ಶ.ಪೂ. 607ರಲ್ಲಿ ಬಾಬೆಲಿನವರು ಯೆರೂಸಲೇಮನ್ನು ನಾಶಮಾಡುವಂತೆ ಮತ್ತು ಯೆಹೂದದ ಜನರು ಬಂಧಿವಾಸಿಗಳಾಗುವಂತೆ ದೇವರು ಅನುಮತಿಸಿದಾಗ, ಯಾವುದರ ಮೂಲಕ 12 ಕುಲಗಳಿದ್ದ ಇಸ್ರಾಯೇಲ್‌ ಜನಾಂಗವು ಆತನೊಂದಿಗೆ ಸಾಂಕೇತಿಕ ವಿವಾಹ ಸಂಬಂಧವನ್ನು ಪ್ರವೇಶಿಸಿತ್ತೊ ಆ ಮೋಶೆಯ ಧರ್ಮಶಾಸ್ತ್ರದ ಒಡಂಬಡಿಕೆಯನ್ನು ಆತನು ಅಳಿಸಿಹಾಕಲಿಲ್ಲ. ಆದರೆ ಯೆಹೂದಿ ಮುಖಂಡರು ಯೇಸು ಕ್ರಿಸ್ತನನ್ನು ತಿರಸ್ಕರಿಸಿ, ಸಾ.ಶ. 33ರಲ್ಲಿ ಅವನನ್ನು ಮರಣಕ್ಕೆ ಒಳಪಡಿಸಿದ ಬಳಿಕವೇ ಆ ಒಡಂಬಡಿಕೆಯ ಸಂಬಂಧವು ಕಡಿದುಹಾಕಲ್ಪಟ್ಟಿತು.​—⁠ಕೊಲೊಸ್ಸೆ 2:⁠14.

ಯೆಹೋವನು ಇಸ್ರಾಯೇಲಿಗೆ ಬುದ್ಧಿಹೇಳುತ್ತಾನೆ

12 ಇಸ್ರಾಯೇಲ್‌ ತನ್ನ ‘ಸೂಳೆತನವನ್ನು ತೊಲಗಿಸುವಂತೆ’ ದೇವರು ಅವಳಿಗೆ ಬುದ್ಧಿಹೇಳಿದನಾದರೂ, ಅವಳು ತನ್ನ ಮಿಂಡರ ಹಿಂದೆ ಹೋಗಲು ಬಯಸಿದಳು. (ಹೋಶೇಯ 2:2, 5) ಯೆಹೋವನಂದದ್ದು: “ಹೀಗಿರಲು, ಆಹಾ, ನಾನು ಅವಳ ದಾರಿಗೆ ಮುಳ್ಳುಬೇಲಿ ಹಾಕುವೆನು, ಬೇಕುಬೇಕಾದ ಹಾದಿಗಳನ್ನು ಹಿಡಿಯದಂತೆ ಅವಳಿಗೆ ಅಡ್ಡಗೋಡೆ ಕಟ್ಟುವೆನು. ಅವಳು ತನ್ನ ಮಿಂಡರನ್ನು ಹಿಂದಟ್ಟಿದರೂ ಅವರನ್ನು ಸಂಧಿಸಳು; ಅವರನ್ನು ಹುಡುಕಿದರೂ ಅವರು ಸಿಕ್ಕರು; ಆಗ ಅವಳು​—⁠ನನ್ನ ಮದುವೆಯ ಗಂಡನ ಬಳಿಗೆ ಹಿಂದಿರುಗಿ ಹೋಗುವೆನು, ಈಗಿನ ನನ್ನ ಸ್ಥಿತಿಗಿಂತ ಆಗಿನ ಸ್ಥಿತಿಯು ಎಷ್ಟೋ ಲೇಸು ಅಂದುಕೊಳ್ಳುವಳು. ತನ್ನ ಧಾನ್ಯದ್ರಾಕ್ಷಾರಸತೈಲಗಳು ನನ್ನಿಂದ ದೊರೆತವುಗಳೆಂದೂ ಬಾಳನ ಪೂಜೆಗೆ [ಅಥವಾ, “ಬಾಳನ ಒಂದು ಮೂರ್ತಿಯನ್ನು ಮಾಡುವುದಕ್ಕೆ,” NW ಪಾದಟಿಪ್ಪಣಿ] ಉಪಯೋಗಿಸಿದ ಬೆಳ್ಳಿ ಬಂಗಾರಗಳು ನನ್ನ ಧಾರಾಳವಾದ ವರವೆಂದೂ ಅವಳಿಗೆ ತಿಳಿಯದು.”​—⁠ಹೋಶೇಯ 2:6-8.

13 ತನ್ನ ‘ಮಿಂಡರಾಗಿದ್ದ’ ಜನಾಂಗಗಳ ಸಹಾಯವನ್ನು ಇಸ್ರಾಯೇಲ್‌ ಪಡೆದುಕೊಳ್ಳಲು ಪ್ರಯತ್ನಿಸಿತಾದರೂ, ಅವರಲ್ಲಿ ಯಾರೊಬ್ಬರೂ ಅವಳಿಗೆ ಸಹಾಯಮಾಡಲು ಶಕ್ತರಾಗಿರಲಿಲ್ಲ. ಅವರು ಅವಳಿಗೆ ಯಾವುದೇ ರೀತಿಯಲ್ಲಿ ಸಹಾಯಮಾಡಲು ಶಕ್ತರಾಗದಿರುವಂತೆ ಅಭೇದ್ಯವಾದ ಪೊದೆಯಿಂದಲೋ ಎಂಬಂತೆ ಅವಳ ಸುತ್ತಲೂ ಬೇಲಿಹಾಕಲ್ಪಟ್ಟಿತ್ತು. ಅಶ್ಶೂರದವರು ಮೂರು ವರ್ಷಗಳ ವರೆಗೆ ಮುತ್ತಿಗೆ ಹಾಕಿದ ಬಳಿಕ, ಸಾ.ಶ.ಪೂ. 740ರಲ್ಲಿ ಅವಳ ರಾಜಧಾನಿಯಾಗಿದ್ದ ಸಮಾರ್ಯ ಪಟ್ಟಣವು ಪತನಗೊಂಡಿತು ಮತ್ತು ಹತ್ತು ಕುಲಗಳ ಆ ರಾಜ್ಯವು ಇನ್ನೆಂದೂ ಪುನಸ್ಸ್ಥಾಪಿಸಲ್ಪಡಲಿಲ್ಲ. ತಮ್ಮ ಮೂಲಪಿತೃಗಳು ಯೆಹೋವನ ಸೇವೆಮಾಡುತ್ತಿದ್ದಾಗ ಪರಿಸ್ಥಿತಿಯು ಎಷ್ಟು ಒಳ್ಳೇದಿತ್ತು ಎಂಬುದನ್ನು ಬಂಧಿವಾಸಿಗಳಾಗಿದ್ದ ಇಸ್ರಾಯೇಲ್ಯರಲ್ಲಿ ಕೆಲವರು ಮಾತ್ರವೇ ಮನಗಾಣಲಿದ್ದರು. ಈ ಉಳಿಕೆಯವರು ಬಾಳನ ಆರಾಧನೆಯನ್ನು ತಿರಸ್ಕರಿಸಿ, ಯೆಹೋವನೊಂದಿಗೆ ನವೀಕೃತವಾದ ಒಡಂಬಡಿಕೆಯ ಸಂಬಂಧವನ್ನು ಪಡೆದುಕೊಳ್ಳಲಿದ್ದರು.

ನಾಟಕದ ಕಡೆಗೆ ಇನ್ನೊಂದು ನೋಟ

14 ಹೋಶೇಯನ ಮನೆಯಲ್ಲಿನ ಸ್ಥಿತಿಗತಿಗಳು ಮತ್ತು ಯೆಹೋವನೊಂದಿಗೆ ಇಸ್ರಾಯೇಲ್ಯರಿಗಿರುವ ಸಂಬಂಧವನ್ನು ಹೆಚ್ಚು ಪೂರ್ಣವಾಗಿ ಅರ್ಥಮಾಡಿಕೊಳ್ಳಲಿಕ್ಕಾಗಿ ಈ ಮಾತುಗಳನ್ನು ಪರಿಗಣಿಸಿರಿ: ‘ಯೆಹೋವನು ನನಗೆ, ನೀನು ಮಿಂಡನಿಗೆ ಪ್ರಿಯಳೂ ವ್ಯಭಿಚಾರಾಸಕ್ತಳೂ ಆದ ಹೆಂಗಸನ್ನು ಪ್ರೀತಿಸುತ್ತಾ ಬಾ [“ಪುನಃ ಪ್ರೀತಿಸು,” NIBV] ಎಂದು ಅಪ್ಪಣೆ ಕೊಟ್ಟನು.’ (ಹೋಶೇಯ 3:1) ಆಗ ಹೋಶೇಯನು ಗೋಮೆರಳು ಯಾರೊಂದಿಗೆ ಜೀವಿಸುತ್ತಿದ್ದಳೋ ಆ ಮನುಷ್ಯನಿಂದ ಅವಳನ್ನು ಕೊಂಡುಕೊಂಡು ಯೆಹೋವನ ಅಪ್ಪಣೆಯ ಪ್ರಕಾರ ನಡೆದುಕೊಂಡನು. ತದನಂತರ, ಹೋಶೇಯನು ತನ್ನ ಪತ್ನಿಗೆ “ನನಗಾಗಿ ಬಹು ದಿವಸ ತಾಳಿಕೊಂಡಿರು; ಸೂಳೆತನಮಾಡಬೇಡ, ಯಾವನನ್ನೂ ಸೇರಬೇಡ” ಎಂದು ದೃಢವಾಗಿ ಬುದ್ಧಿಹೇಳಿದನು. (ಹೋಶೇಯ 3:2, 3) ಗೋಮೆರಳು ಈ ಶಿಸ್ತಿಗೆ ಪ್ರತಿಕ್ರಿಯಿಸಿದಳು ಮತ್ತು ಹೋಶೇಯನು ಅವಳೊಂದಿಗಿನ ವಿವಾಹಸಂಬಂಧವನ್ನು ಪುನಃ ಆರಂಭಿಸಿದನು. ಇಸ್ರಾಯೇಲ್‌ ಮತ್ತು ಯೆಹೂದದ ಜನರೊಂದಿಗಿನ ದೇವರ ವ್ಯವಹಾರಗಳಿಗೆ ಇದು ಹೇಗೆ ಅನ್ವಯವಾಯಿತು?

15 ಇಸ್ರಾಯೇಲ್‌ ಮತ್ತು ಯೆಹೂದದಿಂದ ದೇಶಭ್ರಷ್ಟರಾಗಿ ಕರೆದೊಯ್ಯಲ್ಪಟ್ಟಿದ್ದವರು ಬಾಬೆಲಿನಲ್ಲಿ ಬಂಧಿವಾಸಿಗಳಾಗಿದ್ದಾಗ, ‘ಅವರೊಂದಿಗೆ ಹೃದಯಂಗಮವಾಗಿ ಮಾತಾಡಲಿಕ್ಕಾಗಿ’ ದೇವರು ತನ್ನ ಪ್ರವಾದಿಗಳನ್ನು ಉಪಯೋಗಿಸಿದನು. ದೇವರ ಕರುಣೆಯನ್ನು ಪಡೆಯಬೇಕಾದರೆ ಆತನ ಜನರು ಪಶ್ಚಾತ್ತಾಪವನ್ನು ತೋರಿಸಬೇಕಾಗಿತ್ತು ಮತ್ತು ಗೋಮೆರಳು ತನ್ನ ‘ಗಂಡನ’ ಬಳಿಗೆ ಹಿಂದಿರುಗಿದಂತೆಯೇ ಇವರು ತಮ್ಮ ಗಂಡನ ಬಳಿಗೆ ಹಿಂದಿರುಗಬೇಕಾಗಿತ್ತು. ಆಗ ಯೆಹೋವನು ಶಿಸ್ತಿಗೊಳಗಾಗಿದ್ದ ತನ್ನ ಪತ್ನಿಸದೃಶ ಜನಾಂಗವನ್ನು ಬಾಬೆಲೆಂಬ ‘ಅಡವಿಯಿಂದ’ ಹೊರತಂದು, ಅದನ್ನು ಯೆಹೂದ ಮತ್ತು ಯೆರೂಸಲೇಮಿಗೆ ಹಿಂದೆ ಕರೆತರಲಿದ್ದನು. (ಹೋಶೇಯ 2:14, 15) ಸಾ.ಶ.ಪೂ. 537ರಲ್ಲಿ ಆತನು ಈ ವಾಗ್ದಾನವನ್ನು ಪೂರೈಸಿದನು.

16 ದೇವರು ಈ ವಾಗ್ದಾನವನ್ನು ಸಹ ನೆರವೇರಿಸಿದನು: “ಆ ಕಾಲದಲ್ಲಿ ನಾನು ನನ್ನ ಜನರಿಗಾಗಿ ಭೂಜಂತುಗಳಿಗೂ ಆಕಾಶಪಕ್ಷಿಗಳಿಗೂ ನೆಲದ ಕ್ರಿಮಿಕೀಟಗಳಿಗೂ ನಿಬಂಧನೆಮಾಡಿ ವಿಧಿಸಿ ಬಿಲ್ಲುಕತ್ತಿಕಾಳಗಗಳನ್ನು ದೇಶದಲ್ಲಿ ನಿಲ್ಲದಂತೆ ಧ್ವಂಸಪಡಿಸಿ ನನ್ನ ಜನರು ನಿರ್ಭಯವಾಗಿ ವಾಸಿಸುವಂತೆ ಮಾಡುವೆನು.” (ಹೋಶೇಯ 2:18) ತಮ್ಮ ಸ್ವದೇಶಕ್ಕೆ ಹಿಂದಿರುಗಿದ ಯೆಹೂದಿ ಉಳಿಕೆಯವರು, ಪ್ರಾಣಿಗಳ ಯಾವುದೇ ಹೆದರಿಕೆಯಿಲ್ಲದೆ ನಿರ್ಭಯವಾಗಿ ವಾಸಿಸಿದರು. ಈ ಪ್ರವಾದನೆಯು ಸಾ.ಶ. 1919ರಲ್ಲಿಯೂ ನೆರವೇರಿಕೆಯನ್ನು ಪಡೆಯಿತು. ಆ ಸಮಯದಲ್ಲಿ ಆಧ್ಯಾತ್ಮಿಕ ಇಸ್ರಾಯೇಲ್ಯರಲ್ಲಿ ಉಳಿಕೆಯವರು ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾಗಿರುವ ‘ಮಹಾ ಬಾಬೆಲಿನಿಂದ’ ವಿಮೋಚಿಸಲ್ಪಟ್ಟರು. ಈಗ ಅವರು, ಭೂಮಿಯಲ್ಲಿ ಸದಾಕಾಲ ಜೀವಿಸಲು ನಿರೀಕ್ಷಿಸುತ್ತಿರುವ ತಮ್ಮ ಸಂಗಡಿಗರೊಂದಿಗೆ ಒಂದು ಆಧ್ಯಾತ್ಮಿಕ ಪರದೈಸಿನಲ್ಲಿ ನಿರ್ಭಯವಾಗಿ ವಾಸಿಸುತ್ತಿದ್ದಾರೆ ಮತ್ತು ಜೀವನವನ್ನು ಆನಂದಿಸುತ್ತಿದ್ದಾರೆ. ಈ ಸತ್ಯ ಕ್ರೈಸ್ತರಲ್ಲಿ ಪ್ರಾಣಿಗಳಂಥ ಪ್ರವೃತ್ತಿಗಳು ಇರುವುದಿಲ್ಲ.​—⁠ಪ್ರಕಟನೆ 14:8; ಯೆಶಾಯ 11:6-9; ಗಲಾತ್ಯ 6:⁠16.

ಪಾಠಗಳನ್ನು ಹೃದಯಕ್ಕೆ ತೆಗೆದುಕೊಳ್ಳಿ

17ದೇವರು ಕರುಣೆಯೂ ಸಹಾನುಭೂತಿಯೂ ಉಳ್ಳವನಾಗಿದ್ದಾನೆ, ಮತ್ತು ನಾವು ಸಹ ಹೀಗೆಯೇ ಇರಬೇಕು. ಇದು, ಹೋಶೇಯನ ಆರಂಭದ ಅಧ್ಯಾಯಗಳಿಂದ ಕಲಿಸಲ್ಪಟ್ಟಿರುವ ಒಂದು ಪಾಠವಾಗಿದೆ. (ಹೋಶೇಯ 1:6, 7; 2:23) ಪಶ್ಚಾತ್ತಾಪಪಟ್ಟ ಇಸ್ರಾಯೇಲ್ಯರಿಗೆ ಕರುಣೆಯನ್ನು ತೋರಿಸಲು ದೇವರಿಗಿರುವ ಸಿದ್ಧಮನಸ್ಸು, ಈ ಪ್ರೇರಿತ ಜ್ಞಾನೋಕ್ತಿಗೆ ಹೊಂದಿಕೆಯಲ್ಲಿದೆ: “ದೋಷಗಳನ್ನು ಮುಚ್ಚಿಕೊಳ್ಳುವವನಿಗೆ ಶುಭವಾಗದು; ಅವುಗಳನ್ನು ಒಪ್ಪಿಕೊಂಡು ಬಿಟ್ಟುಬಿಡುವವನಿಗೆ ಕರುಣೆ ದೊರೆಯುವದು.” (ಜ್ಞಾನೋಕ್ತಿ 28:13) ಪಶ್ಚಾತ್ತಾಪಪಡುವ ತಪ್ಪಿತಸ್ಥರಿಗೆ ಕೀರ್ತನೆಗಾರನ ಈ ಮಾತುಗಳು ಸಹ ಸಾಂತ್ವನದಾಯಕವಾಗಿವೆ: “ಕುಗ್ಗಿದ ಮನಸ್ಸೇ ದೇವರಿಗೆ ಇಷ್ಟಯಜ್ಞ; ದೇವರೇ, ಪಶ್ಚಾತ್ತಾಪದಿಂದ ಜಜ್ಜಿಹೋದ ಮನಸ್ಸನ್ನು ನೀನು ತಿರಸ್ಕರಿಸುವದಿಲ್ಲ.”​—⁠ಕೀರ್ತನೆ 51:⁠17.

18 ಹೋಶೇಯನ ಪ್ರವಾದನೆಯು ನಾವು ಆರಾಧಿಸುವಂಥ ದೇವರ ಸಹಾನುಭೂತಿ ಮತ್ತು ಕರುಣೆಯನ್ನು ಎತ್ತಿತೋರಿಸುತ್ತದೆ. ಕೆಲವರು ಆತನ ನೀತಿಯ ಮಾರ್ಗಗಳಿಂದ ದಾರಿತಪ್ಪುವುದಾದರೂ, ಅವರು ಪಶ್ಚಾತ್ತಾಪಪಟ್ಟು ಹಿಂದಿರುಗಸಾಧ್ಯವಿದೆ. ಅವರು ಹೀಗೆ ಮಾಡುವಲ್ಲಿ ಯೆಹೋವನು ಅವರನ್ನು ಸ್ವಾಗತಿಸುತ್ತಾನೆ. ಆತನು ಯಾರೊಂದಿಗೆ ಒಂದು ಸಾಂಕೇತಿಕ ವಿವಾಹಸಂಬಂಧವನ್ನು ಬೆಳೆಸಿಕೊಂಡಿದ್ದನೋ ಆ ಇಸ್ರಾಯೇಲ್‌ ಜನಾಂಗದ ಪಶ್ಚಾತ್ತಾಪಪಟ್ಟ ಸದಸ್ಯರಿಗೆ ಕರುಣೆಯನ್ನು ತೋರಿಸಿದನು. ಅವರು ಯೆಹೋವನಿಗೆ ಅವಿಧೇಯರಾಗಿ ‘ಆತನನ್ನು ನೋಯಿಸಿದರೂ,’ ಆತನು ಕರುಣಾಳುವಾಗಿದ್ದನು ಮತ್ತು ‘ಅವರು ಮಾಂಸಮಾತ್ರರು ಎಂಬುದನ್ನು ಆತನು ನೆನಪುಮಾಡಿಕೊಳ್ಳುತ್ತಾ ಇದ್ದನು.’ (ಕೀರ್ತನೆ 78:38-41) ಇಂಥ ಕರುಣೆಯು, ನಮ್ಮ ಸಹಾನುಭೂತಿಯ ದೇವರಾದ ಯೆಹೋವನೊಂದಿಗೆ ನಡೆಯುತ್ತಾ ಇರುವಂತೆ ನಮ್ಮನ್ನು ಪ್ರಚೋದಿಸಬೇಕು.

19 ನರಹತ್ಯ, ಕಳ್ಳತನ ಮತ್ತು ವ್ಯಭಿಚಾರದಂಥ ಪಾಪಗಳು ಇಸ್ರಾಯೇಲಿನಲ್ಲಿ ವ್ಯಾಪಕವಾಗಿ ಹಬ್ಬಿಕೊಂಡಿದ್ದರೂ, ಯೆಹೋವನು ‘ಅವಳೊಂದಿಗೆ ಹೃದಯಂಗಮವಾಗಿ ಮಾತಾಡಿದನು.’ (ಹೋಶೇಯ 2:14; 4:2) ನಾವು ಯೆಹೋವನ ಕರುಣೆ ಮತ್ತು ಸಹಾನುಭೂತಿಯ ಕುರಿತು ಧ್ಯಾನಿಸುವಾಗ, ಅದು ನಮ್ಮ ಹೃದಯಗಳನ್ನು ಉತ್ತೇಜಿಸಿ, ಆತನೊಂದಿಗಿನ ನಮ್ಮ ವೈಯಕ್ತಿಕ ಬಂಧವನ್ನು ಇನ್ನಷ್ಟು ಬಲಗೊಳಿಸಬೇಕು. ಆದುದರಿಂದ ನಾವು ಸ್ವತಃ ಹೀಗೆ ಕೇಳಿಕೊಳ್ಳೋಣ: ‘ಇತರರೊಂದಿಗಿನ ನನ್ನ ವ್ಯವಹಾರಗಳಲ್ಲಿ ನಾನು ಯೆಹೋವನ ಕರುಣೆ ಮತ್ತು ಸಹಾನುಭೂತಿಯನ್ನು ಹೇಗೆ ಹೆಚ್ಚು ಉತ್ತಮವಾಗಿ ಅನುಕರಿಸಬಲ್ಲೆ? ನನ್ನ ಮನಸ್ಸನ್ನು ನೋಯಿಸಿರುವಂಥ ಒಬ್ಬ ಜೊತೆ ಕ್ರೈಸ್ತನು ನನ್ನ ಬಳಿ ಕ್ಷಮೆಯಾಚಿಸುವಲ್ಲಿ, ದೇವರು ಮಾಡುವಂತೆಯೇ ನಾನು ಕ್ಷಮಿಸಲು ಸಿದ್ಧನಾಗಿದ್ದೇನೊ?’​—⁠ಕೀರ್ತನೆ 86:⁠5.

20ದೇವರು ನಿಜವಾದ ನಿರೀಕ್ಷೆಯನ್ನು ನೀಡುತ್ತಾನೆ. ಉದಾಹರಣೆಗೆ ಆತನು ವಾಗ್ದಾನಿಸಿದ್ದು: ‘ನಾನು ಆಕೋರಿನ ತಗ್ಗನ್ನೇ ಅವಳ ಸುಖನಿರೀಕ್ಷೆಗೆ ದ್ವಾರವನ್ನಾಗಿ ಮಾಡುವೆನು.’ (ಹೋಶೇಯ 2:15) ಯೆಹೋವನ ಪುರಾತನ ಪತ್ನಿಸದೃಶ ಸಂಘಟನೆಯು, ‘ಆಕೋರಿನ ತಗ್ಗು’ ಎಲ್ಲಿತ್ತೋ ಆ ತನ್ನ ಸ್ವದೇಶಕ್ಕೆ ಪುನಸ್ಸ್ಥಾಪಿಸಲ್ಪಡುವ ನಿಶ್ಚಿತ ನಿರೀಕ್ಷೆಯನ್ನು ಹೊಂದಿತ್ತು. ಸಾ.ಶ.ಪೂ. 537ರಲ್ಲಿ ಆದ ಈ ವಾಗ್ದಾನದ ನೆರವೇರಿಕೆಯು, ನಮ್ಮ ಮುಂದೆ ಯೆಹೋವನು ಇಡುವಂಥ ನಿಶ್ಚಿತ ನಿರೀಕ್ಷೆಯಲ್ಲಿ ಆನಂದಿಸಲು ನಮಗೆ ಸದೃಢವಾದ ಕಾರಣವನ್ನು ಕೊಡುತ್ತದೆ.

21ದೇವರೊಂದಿಗೆ ನಡೆಯುವುದನ್ನು ಮುಂದುವರಿಸಲಿಕ್ಕಾಗಿ ನಾವು ಆತನ ಕುರಿತಾದ ಜ್ಞಾನವನ್ನು ಪಡೆದುಕೊಳ್ಳುತ್ತಾ ಇರಬೇಕು ಮತ್ತು ಅದನ್ನು ನಮ್ಮ ಜೀವನದಲ್ಲಿ ಅನ್ವಯಿಸಿಕೊಳ್ಳಬೇಕು. ಇಸ್ರಾಯೇಲಿನಲ್ಲಿ ಯೆಹೋವನ ಜ್ಞಾನದ ವಿಪರೀತ ಕೊರತೆಯಿತ್ತು. (ಹೋಶೇಯ 4:1, 6) ಆದರೂ, ಕೆಲವರು ದೈವಿಕ ಬೋಧನೆಯನ್ನು ಬಹುಮೂಲ್ಯವಾಗಿ ಪರಿಗಣಿಸಿದರು, ಅದಕ್ಕೆ ಹೊಂದಿಕೆಯಲ್ಲಿ ಕ್ರಿಯೆಗೈದರು ಮತ್ತು ಬಹಳವಾಗಿ ಆಶೀರ್ವದಿಸಲ್ಪಟ್ಟರು. ಹೋಶೇಯನು ಅವರಲ್ಲಿ ಒಬ್ಬನಾಗಿದ್ದನು. ಅದೇ ರೀತಿಯಲ್ಲಿ ಎಲೀಯನ ದಿನಗಳಲ್ಲಿ ಬಾಳನ ವಿಗ್ರಹಕ್ಕೆ ಅಡ್ಡಬೀಳದಿದ್ದ 7,000 ಮಂದಿಯೂ ಇಂಥವರೇ ಆಗಿದ್ದರು. (1 ಅರಸುಗಳು 19:18; ರೋಮಾಪುರ 11:1-4) ದೈವಿಕ ಉಪದೇಶಕ್ಕಾಗಿ ನಮಗಿರುವ ಕೃತಜ್ಞತೆಯು, ದೇವರೊಂದಿಗೆ ನಡೆಯುತ್ತಾ ಇರುವಂತೆ ನಮಗೆ ಸಹಾಯಮಾಡುವುದು.​—⁠ಕೀರ್ತನೆ 119:66; ಯೆಶಾಯ 30:20, 21.

22ತನ್ನ ಜನರ ನಡುವೆ ನಾಯಕತ್ವವನ್ನು ವಹಿಸುವವರು ಧರ್ಮಭ್ರಷ್ಟತೆಯನ್ನು ತೊರೆಯುವಂತೆ ಯೆಹೋವನು ನಿರೀಕ್ಷಿಸುತ್ತಾನೆ. ಹೋಶೇಯ 5:1 ಹೀಗೆ ತಿಳಿಸುತ್ತದೆ: “ಯಾಜಕರೇ, ಇದನ್ನು ಕೇಳಿರಿ, ಇಸ್ರಾಯೇಲ್‌ ಕುಲದವರೇ, ಆಲಿಸಿರಿ; ರಾಜವಂಶದವರೇ, ಕಿವಿಗೊಡಿರಿ; ನೀವು ಮಿಚ್ಪದಲ್ಲಿ ಉರುಲಾಗಿಯೂ ತಾಬೋರಿನಲ್ಲಿ ಬಲೆಯಾಗಿಯೂ ಇದ್ದ ಕಾರಣ ನಿಮಗೆ ನ್ಯಾಯತೀರ್ಪು ಬಂದಿದೆ.” ಧರ್ಮಭ್ರಷ್ಟ ನಾಯಕರು ಇಸ್ರಾಯೇಲ್ಯರಿಗೆ ಉರುಲಾಗಿಯೂ ಬಲೆಯಾಗಿಯೂ ಇದ್ದು, ವಿಗ್ರಹಾರಾಧನೆಯಲ್ಲಿ ತೊಡಗುವಂತೆ ಅವರನ್ನು ಪ್ರಲೋಭಿಸುತ್ತಿದ್ದರು. ತಾಬೋರ್‌ ಬೆಟ್ಟವೂ ಮಿಚ್ಪ ಎಂಬ ಸ್ಥಳವೂ ಬಹುಶಃ ಇಂಥ ಸುಳ್ಳು ಆರಾಧನೆಯ ಕೇಂದ್ರಗಳಾಗಿದ್ದವೆಂದು ತೋರುತ್ತದೆ.

23 ಇಷ್ಟರ ತನಕ ಹೋಶೇಯನ ಪ್ರವಾದನೆಯು ನಮಗೆ, ತನ್ನ ಉಪದೇಶವನ್ನು ಅನ್ವಯಿಸಿಕೊಂಡು ಧರ್ಮಭ್ರಷ್ಟತೆಯನ್ನು ತಿರಸ್ಕರಿಸುವವರಿಗೆ ನಿರೀಕ್ಷೆ ಮತ್ತು ಆಶೀರ್ವಾದಗಳನ್ನು ನೀಡುವ ಯೆಹೋವನು ಕರುಣಾಭರಿತ ದೇವರಾಗಿದ್ದಾನೆ ಎಂಬುದನ್ನು ತೋರಿಸಿಕೊಟ್ಟಿದೆ. ಆದುದರಿಂದ, ಪುರಾತನಕಾಲದ ಪಶ್ಚಾತ್ತಾಪಪಟ್ಟ ಇಸ್ರಾಯೇಲ್ಯರಂತೆ ನಾವು ಯೆಹೋವನನ್ನು ಆಶ್ರಯಿಸೋಣ ಮತ್ತು ಯಾವಾಗಲೂ ಆತನನ್ನು ಸಂತೋಷಪಡಿಸಲು ಪ್ರಯತ್ನಿಸೋಣ. (ಹೋಶೇಯ 5:15) ಹೀಗೆ ಮಾಡುವ ಮೂಲಕ ನಾವು ಒಳ್ಳೇದನ್ನು ಕೊಯ್ಯುವೆವು ಮತ್ತು ಯಾರು ನಂಬಿಗಸ್ತಿಕೆಯಿಂದ ದೇವರೊಂದಿಗೆ ನಡೆಯುತ್ತಾರೋ ಅವರೆಲ್ಲರಿಂದ ಅನುಭವಿಸಲ್ಪಡುವ ಅನುಪಮ ಆನಂದ ಹಾಗೂ ಶಾಂತಿಯನ್ನು ನಾವು ಹೊಂದುವೆವು.​—⁠ಕೀರ್ತನೆ 100:2; ಫಿಲಿಪ್ಪಿ 4:6, 7.

[ಪಾದಟಿಪ್ಪಣಿ]

^ ಪ್ಯಾರ. 3 ಗಲಾತ್ಯ 4:​21-26ರಲ್ಲಿ ಒಂದು ಸಾಂಕೇತಿಕ ನಾಟಕವು ಸಾದರಪಡಿಸಲ್ಪಟ್ಟಿದೆ. ಇದರ ಕುರಿತು, ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟಿರುವ ಶಾಸ್ತ್ರಗಳ ಕುರಿತಾದ ಒಳನೋಟ (ಇಂಗ್ಲಿಷ್‌) ಪುಸ್ತಕದ ಸಂಪುಟ 2, ಪುಟಗಳು 693-4ನ್ನು ನೋಡಿ.

ನೀವು ಹೇಗೆ ಉತ್ತರಿಸುವಿರಿ?

• ಗೋಮೆರಳೊಂದಿಗಿನ ಹೋಶೇಯನ ವಿವಾಹವು ಏನನ್ನು ಸಂಕೇತಿಸಿತು?

• ಯೆಹೋವನಿಗೆ ಇಸ್ರಾಯೇಲಿನ ವಿರುದ್ಧ ಏಕೆ ಒಂದು ಕಾನೂನುರೀತ್ಯ ವ್ಯಾಜ್ಯವಿತ್ತು?

• ಹೋಶೇಯ 1ರಿಂದ 5ನೇ ಅಧ್ಯಾಯಗಳ ಯಾವ ಪಾಠವು ನಿಮ್ಮನ್ನು ಪ್ರಭಾವಿಸಿತು?

[ಅಧ್ಯಯನ ಪ್ರಶ್ನೆಗಳು]

1. ಹೋಶೇಯ ಪುಸ್ತಕದಲ್ಲಿ ಯಾವ ಸಾಂಕೇತಿಕ ನಾಟಕವು ಕಂಡುಬರುತ್ತದೆ?

2. ಹೋಶೇಯನ ಕುರಿತು ಯಾವ ವಿಷಯಗಳು ತಿಳಿಸಲ್ಪಟ್ಟಿವೆ?

3, 4. ಹೋಶೇಯ 1ರಿಂದ 5ನೇ ಅಧ್ಯಾಯಗಳಲ್ಲಿ ಯಾವ ವಿಷಯಗಳು ಆವರಿಸಲ್ಪಟ್ಟಿವೆ ಎಂಬುದನ್ನು ಸಂಕ್ಷಿಪ್ತವಾಗಿ ವಿವರಿಸಿರಿ.

5, 6. (ಎ) ಹತ್ತು ಕುಲಗಳ ಇಸ್ರಾಯೇಲ್‌ ರಾಜ್ಯದಲ್ಲಿ ವ್ಯಭಿಚಾರವು ಎಷ್ಟು ವ್ಯಾಪಕವಾಗಿ ಹಬ್ಬಿಕೊಂಡಿತ್ತು? (ಬಿ) ಪುರಾತನ ಇಸ್ರಾಯೇಲಿಗೆ ಕೊಡಲ್ಪಟ್ಟ ಎಚ್ಚರಿಕೆಯು ನಮಗೆ ಮಹತ್ವಾರ್ಥವುಳ್ಳದ್ದಾಗಿದೆ ಏಕೆ?

7. ಹೋಶೇಯನು ಗೋಮೆರಳೊಂದಿಗೆ ಮಾಡಿಕೊಂಡ ವಿವಾಹದಿಂದ ಏನು ಸಂಕೇತಿಸಲ್ಪಟ್ಟಿತು?

8. ಹತ್ತು ಕುಲಗಳ ಇಸ್ರಾಯೇಲ್‌ ರಾಜ್ಯವು ಹೇಗೆ ಅಸ್ತಿತ್ವಕ್ಕೆ ಬಂತು, ಮತ್ತು ಅದರ ಆರಾಧನೆಯ ವಿಷಯದಲ್ಲಿ ನೀವು ಏನು ಹೇಳಬಲ್ಲಿರಿ?

9. ಹೋಶೇಯ 1:6ರಲ್ಲಿ ಮುಂತಿಳಿಸಲ್ಪಟ್ಟಂತೆ ಇಸ್ರಾಯೇಲಿಗೆ ಏನು ಸಂಭವಿಸಿತು?

10. ಗೋಮೆರಳ ಹಾದರದ ನಡತೆಯು ಏನನ್ನು ದೃಷ್ಟಾಂತಿಸಿತು?

11. ಇಸ್ರಾಯೇಲ್‌ ಮತ್ತು ಯೆಹೂದವು ಗಡೀಪಾರುಮಾಡಲ್ಪಡುವಂತೆ ಯೆಹೋವನು ಅನುಮತಿಸಿದಾಗ ಧರ್ಮಶಾಸ್ತ್ರದ ಒಡಂಬಡಿಕೆಗೆ ಏನಾಯಿತು?

12, 13. ಹೋಶೇಯ 2:​6-8ರ ಸಾರಾಂಶವೇನು, ಮತ್ತು ಆ ಮಾತುಗಳು ಇಸ್ರಾಯೇಲ್ಯರಿಗೆ ಹೇಗೆ ಅನ್ವಯವಾದವು?

14. ಹೋಶೇಯನು ಗೋಮೆರಳೊಂದಿಗಿನ ವಿವಾಹಸಂಬಂಧವನ್ನು ಪುನಃ ಆರಂಭಿಸಿದ್ದೇಕೆ?

15, 16. (ಎ) ಯಾವ ಸನ್ನಿವೇಶಗಳ ಕೆಳಗೆ ದೇವರ ಶಿಸ್ತಿಗೊಳಗಾಗಿದ್ದ ಜನಾಂಗವು ಆತನ ಕರುಣೆಯನ್ನು ಪಡೆದುಕೊಳ್ಳಸಾಧ್ಯವಿತ್ತು? (ಬಿ) ಹೋಶೇಯ 2:18 ಹೇಗೆ ನೆರವೇರಿಕೆಯನ್ನು ಪಡೆದಿದೆ?

17-19. (ಎ) ನಾವು ದೇವರ ಯಾವ ಗುಣಗಳನ್ನು ಅನುಕರಿಸುವಂತೆ ಇಲ್ಲಿ ಪ್ರೋತ್ಸಾಹಿಸಲ್ಪಟ್ಟಿದ್ದೇವೆ? (ಬಿ) ಯೆಹೋವನ ಕರುಣೆ ಮತ್ತು ಸಹಾನುಭೂತಿಯು ನಮ್ಮ ಮೇಲೆ ಹೇಗೆ ಪ್ರಭಾವ ಬೀರಬೇಕು?

20. ನಾವು ದೇವದತ್ತ ನಿರೀಕ್ಷೆಯಲ್ಲಿ ದೃಢವಿಶ್ವಾಸವನ್ನು ಹೊಂದಿರಬೇಕು ಎಂಬುದನ್ನು ತೋರಿಸಲು ಒಂದು ಉದಾಹರಣೆಯನ್ನು ಕೊಡಿ.

21. ನಾವು ದೇವರೊಂದಿಗೆ ನಡೆಯುವುದರಲ್ಲಿ ಜ್ಞಾನವು ಯಾವ ಪಾತ್ರವನ್ನು ವಹಿಸುತ್ತದೆ?

22. ಧರ್ಮಭ್ರಷ್ಟತೆಯ ಬಗ್ಗೆ ನಮಗೆ ಯಾವ ನೋಟವಿರಬೇಕು?

23. ಹೋಶೇಯ 1ರಿಂದ 5ನೇ ಅಧ್ಯಾಯಗಳ ವರೆಗಿನ ಅಧ್ಯಯನದಿಂದ ನೀವು ಹೇಗೆ ಪ್ರಯೋಜನಪಡೆದಿದ್ದೀರಿ?

[ಪುಟ 18ರಲ್ಲಿರುವ ಚಿತ್ರ]

ಹೋಶೇಯನ ಪತ್ನಿಯು ಯಾರನ್ನು ಪ್ರತಿನಿಧಿಸುತ್ತಾಳೆ ಎಂಬುದು ನಿಮಗೆ ಗೊತ್ತೋ?

[ಪುಟ 19ರಲ್ಲಿರುವ ಚಿತ್ರ]

ಸಮಾರ್ಯದ ನಿವಾಸಿಗಳು ಸಾ.ಶ.ಪೂ. 740ರಲ್ಲಿ ಅಶ್ಶೂರದವರಿಂದ ಜಯಿಸಲ್ಪಟ್ಟರು

[ಪುಟ 20ರಲ್ಲಿರುವ ಚಿತ್ರ]

ಹರ್ಷಭರಿತ ಜನರು ತಮ್ಮ ಸ್ವದೇಶಕ್ಕೆ ಹಿಂದಿರುಗುತ್ತಾರೆ