ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅರ್ಮಗೆದೋನ್‌ ಒಂದು ಸಂತೋಷಕರ ಆರಂಭ

ಅರ್ಮಗೆದೋನ್‌ ಒಂದು ಸಂತೋಷಕರ ಆರಂಭ

ಅರ್ಮಗೆದೋನ್‌ ಒಂದು ಸಂತೋಷಕರ ಆರಂಭ

ಅರ್ಮಗೆದೋನ್‌ ಎಂಬ ಪದವು “ಹರ್ಮಗೆದೋನ್‌” ಇಲ್ಲವೆ “ಮೆಗಿದ್ದೋ ಬೆಟ್ಟ” ಎಂಬ ಇಬ್ರಿಯ ಅಭಿವ್ಯಕ್ತಿಯಿಂದ ಬಂದಿದೆ. ಅದನ್ನು ನಾವು ಪ್ರಕಟನೆ 16:16ರಲ್ಲಿ ಕಾಣುತ್ತೇವೆ. ಅಲ್ಲಿ ತಿಳಿಸುವುದು: “ದೆವ್ವಗಳು ಭೂರಾಜರನ್ನು ಇಬ್ರಿಯ ಭಾಷೆಯಲ್ಲಿ ಹರ್ಮಗೆದೋನ್‌ ಎಂಬ ಹೆಸರುಳ್ಳ ಸ್ಥಳಕ್ಕೆ ಕೂಡಿಸಿದವು.” ಯಾರನ್ನು ಅರ್ಮಗೆದೋನಿಗೆ ಒಟ್ಟುಗೂಡಿಸಲಾಗುತ್ತದೆ ಮತ್ತು ಏಕೆ? ಎರಡೇ ವಚನಗಳ ಹಿಂದಕ್ಕೆ ಹೋಗುವುದಾದರೆ ಅಲ್ಲಿ, ಅಂದರೆ ಪ್ರಕಟನೆ 16:14ರಲ್ಲಿ ನಾವು ಓದುವುದು: ‘ಭೂಲೋಕದಲ್ಲೆಲ್ಲಿಯೂ ಇರುವ ರಾಜರನ್ನು ದೇವರ ಮಹಾ ದಿನದಲ್ಲಾಗುವ ಯುದ್ಧಕ್ಕೆ’ ಒಟ್ಟುಗೂಡಿಸಲಾಯಿತು. ಸ್ವಾಭಾವಿಕವಾಗಿಯೇ, ಈ ಹೇಳಿಕೆಗಳು ಇನ್ನೂ ಕೆಲವು ಆಸಕ್ತಿಕರವಾದ ಪ್ರಶ್ನೆಗಳನ್ನು ಎಬ್ಬಿಸುತ್ತವೆ. ಈ ‘ರಾಜರು’ ಎಲ್ಲಿ ಯುದ್ಧಮಾಡುತ್ತಾರೆ? ಯಾವ ವಿಷಯಕ್ಕಾಗಿ ಯುದ್ಧಮಾಡುತ್ತಾರೆ ಮತ್ತು ಯಾರೊಂದಿಗೆ ಯುದ್ಧಮಾಡುತ್ತಾರೆ? ಅನೇಕರು ನಂಬುವಂತೆ ಆ ಯುದ್ಧದಲ್ಲಿ ಬಹಳಷ್ಟು ಜನರನ್ನು ಕ್ಷಣಮಾತ್ರದಲ್ಲಿ ನಾಶಮಾಡಬಲ್ಲ ಶಸ್ತ್ರಗಳು ಉಪಯೋಗಿಸಲ್ಪಡುತ್ತವೊ? ಅರ್ಮಗೆದೋನಿನಿಂದ ಪಾರಾಗಿ ಉಳಿಯುವವರು ಇರುವರೊ? ಈ ಎಲ್ಲ ಪ್ರಶ್ನೆಗಳಿಗೆ ಬೈಬಲ್‌ ಉತ್ತರಗಳನ್ನು ಕೊಡಲಿ.

“ಮೆಗಿದ್ದೋ ಬೆಟ್ಟ” ಎಂಬುದಾಗಿ ಸೂಚಿಸಿ ಹೇಳಿರುವುದರಿಂದ, ಅರ್ಮಗೆದೋನ್‌ ಯುದ್ಧವು ಮಧ್ಯಪೂರ್ವ ದೇಶದಲ್ಲಿನ ಒಂದು ನಿರ್ದಿಷ್ಟ ಬೆಟ್ಟದಲ್ಲಿ ಹೋರಾಡಲ್ಪಡುವ ಯುದ್ಧ ಎಂಬ ಅರ್ಥವನ್ನು ಕೊಡುತ್ತದೊ? ಇಲ್ಲ. ಏಕೆಂದರೆ, ಪುರಾತನ ಮೆಗಿದ್ದೋ ಕ್ಷೇತ್ರದಲ್ಲಿ ಅಂಥ ಯಾವುದೇ ಬೆಟ್ಟವು ಅಸ್ತಿತ್ವದಲ್ಲಿರಲಿಲ್ಲ. ಆ ಕ್ಷೇತ್ರದ ಹತ್ತಿರದಲ್ಲಿರುವ ಬೈಲುಸೀಮೆಗಿಂತ ಸುಮಾರು 20 ಮೀಟರ್‌ ಎತ್ತರಕ್ಕೆ ಇರುವ ಒಂದು ದಿಬ್ಬವು ಮಾತ್ರ ಅಲ್ಲಿದೆ. ಇದಲ್ಲದೆ, ಮೆಗಿದ್ದೋವಿನಾದ್ಯಂತ ಇರುವ ಕ್ಷೇತ್ರವು ಎಲ್ಲ “ಭೂರಾಜರೂ ಅವರ ಸೈನ್ಯಗಳವರೂ” ಒಟ್ಟುಸೇರಲು ಸಾಧ್ಯವಿರುವಷ್ಟು ವಿಸ್ತಾರವಾಗಿಲ್ಲ. (ಪ್ರಕಟನೆ 19:19) ಹಾಗಿದ್ದರೂ ಮೆಗಿದ್ದೋ, ಮಧ್ಯಪೂರ್ವ ದೇಶಗಳ ಇತಿಹಾಸದಲ್ಲಿನ ಕೆಲವು ಘೋರ ಮತ್ತು ಅತಿ ನಿರ್ಣಾಯಕ ಯುದ್ಧಗಳು ನಡೆದ ಸ್ಥಳವಾಗಿದೆ. ಹೀಗೆ, ಅರ್ಮಗೆದೋನ್‌ ಎಂಬ ಪದವು ಏಕೈಕ ನಿಶ್ಚಯ ವಿಜಯಿ ಇರುವ ಒಂದು ನಿರ್ಣಾಯಕ ಯುದ್ಧದ ಸಂಕೇತವಾಗಿದೆ.​—⁠ಪುಟ 5ರಲ್ಲಿರುವ “ಮೆಗಿದ್ದೋ​—⁠ಒಂದು ಸೂಕ್ತವಾದ ಸಂಕೇತ” ಎಂಬ ಚೌಕವನ್ನು ನೋಡಿ.

ಅರ್ಮಗೆದೋನ್‌ ಎಂಬುದು ಕೇವಲ ಭೂರಾಷ್ಟ್ರಗಳ ಮಧ್ಯೆ ನಡೆಯುವ ಒಂದು ಕಾದಾಟವಾಗಿರಸಾಧ್ಯವಿಲ್ಲ. ಏಕೆಂದರೆ, ‘ಭೂಲೋಕದಲ್ಲೆಲ್ಲಿಯೂ ಇರುವ ರಾಜರು’ ಒಟ್ಟಾಗಿ “ದೇವರ ಮಹಾ ದಿನದಲ್ಲಾಗುವ ಯುದ್ಧಕ್ಕೆ” ವಿರುದ್ಧವಾಗಿ ನಿಲ್ಲುತ್ತಾರೆ ಎಂದು ಪ್ರಕಟನೆ 16:14 ತಿಳಿಸುತ್ತದೆ. “ಯೆಹೋವನಿಂದ ಹತರಾದವರು ಲೋಕದ ಒಂದು ಕಡೆಯಿಂದ ಇನ್ನೊಂದು ಕಡೆಯ ವರೆಗೂ ಬಿದ್ದಿರುವರು” ಎಂಬುದಾಗಿ ಯೆರೆಮೀಯನು ತನ್ನ ಪ್ರೇರಿತ ಪ್ರವಾದನೆಯಲ್ಲಿ ತಿಳಿಸಿದ್ದಾನೆ. (ಯೆರೆಮೀಯ 25:33) ಹಾಗಾದರೆ, ಅರ್ಮಗೆದೋನ್‌ ಎಂಬುದು ಮಧ್ಯಪೂರ್ವ ದೇಶದ ಒಂದು ನಿರ್ದಿಷ್ಟ ಸ್ಥಳದಲ್ಲಿ ಸಂಭವಿಸುವ ಮಾನವ ಯುದ್ಧವಲ್ಲ. ಇದು ಯೆಹೋವನ ಯುದ್ಧವಾಗಿದೆ ಮತ್ತು ಇದೊಂದು ಜಾಗತಿಕ ಯುದ್ಧವಾಗಿದೆ.

ಆದರೆ, ಪ್ರಕಟನೆ 16:16ರಲ್ಲಿ ಅರ್ಮಗೆದೋನನ್ನು ಒಂದು “ಸ್ಥಳ” ಎಂದು ಕರೆಯಲಾಗಿದೆ ಎಂಬುದನ್ನು ಗಮನಿಸಿರಿ. ಬೈಬಲಿನಲ್ಲಿ “ಸ್ಥಳ” ಎಂಬ ಪದವು ಒಂದು ಪರಿಸ್ಥಿತಿ ಅಥವಾ ಒಂದು ಸನ್ನಿವೇಶವನ್ನು ಸೂಚಿಸಬಹುದು. ನಾವೀಗ ಚರ್ಚಿಸುವ ವಿಷಯದಲ್ಲಿ “ಸ್ಥಳ” ಎಂಬುದು, ಯೆಹೋವನಿಗೆ ವಿರುದ್ಧವಾಗಿ ಇಡೀ ಲೋಕವು ಒಟ್ಟಾಗುವ ಸನ್ನಿವೇಶವನ್ನು ಸೂಚಿಸುತ್ತದೆ. (ಪ್ರಕಟನೆ 12:​6, 14) ಅರ್ಮಗೆದೋನಿನಲ್ಲಿ ಎಲ್ಲ ಭೂರಾಷ್ಟ್ರಗಳು, “ರಾಜಾಧಿರಾಜನೂ ಕರ್ತರ ಕರ್ತನೂ” ಆಗಿರುವ ಯೇಸು ಕ್ರಿಸ್ತನ ಮಿಲಿಟರಿ ಅಧಿಕಾರದ ಕೆಳಗಿರುವ ‘ಪರಲೋಕದ ಸೈನ್ಯದವರ’ ವಿರುದ್ಧ ಒಟ್ಟಾಗಿ ಕೂಡಿಬರುವರು.​—⁠ಪ್ರಕಟನೆ 19:​14, 16.

ಅರ್ಮಗೆದೋನ್‌, ಬಹಳಷ್ಟು ಜನರನ್ನು ಕ್ಷಣಮಾತ್ರದಲ್ಲಿ ನಾಶಮಾಡಬಲ್ಲ ಶಸ್ತ್ರಗಳನ್ನು ಒಳಗೊಂಡ ಇಲ್ಲವೆ ಆಕಾಶಸ್ಥಕಾಯದೊಂದಿಗಿನ ಭೂಮಿಯ ಅಪ್ಪಳಿಸುವಿಕೆಯ ಕಾರಣದಿಂದ ಆಗುವ ಸರ್ವನಾಶವಾಗಿರುವುದು ಎಂಬ ವಾದದ ವಿಷಯದಲ್ಲೇನು? ಪ್ರೀತಿಪರನಾದ ದೇವರು ಮಾನವಕುಲಕ್ಕೆ ಮತ್ತು ಅದರ ಮನೆಯಾದ ಭೂಮಿಗೆ ಇಂಥ ಒಂದು ಭಯಾನಕ ಅಂತ್ಯವನ್ನು ಬರಮಾಡುವನೊ? ಇಲ್ಲ. ಭೂಮಿಯನ್ನು ‘ಶೂನ್ಯಸ್ಥಾನವಾಗಿರಲೆಂದು ಸೃಷ್ಟಿಸದೆ ಜನನಿವಾಸಕ್ಕಾಗಿಯೇ ರೂಪಿಸಿದ್ದೇನೆ’ ಎಂದು ಆತನು ಸ್ಪಷ್ಟವಾಗಿ ತಿಳಿಸಿದ್ದಾನೆ. (ಯೆಶಾಯ 45:18; ಕೀರ್ತನೆ 96:10) ಅರ್ಮಗೆದೋನಿನಲ್ಲಿ ಯೆಹೋವನು, ಘೋರವಾದ ರೀತಿಯಲ್ಲಿ ಬೆಂಕಿಯಿಂದ ನಮ್ಮ ಭೂಗೋಳವನ್ನು ಧ್ವಂಸಮಾಡುವುದಿಲ್ಲ. ಬದಲಾಗಿ, ಆತನು ‘ಲೋಕನಾಶಕರನ್ನು ನಾಶಮಾಡುವನು.’​—⁠ಪ್ರಕಟನೆ 11:18.

ಅರ್ಮಗೆದೋನ್‌​—⁠ಯಾವಾಗ?

ಶತಮಾನಗಳಿಂದ, ಅರ್ಮಗೆದೋನ್‌ ಯಾವಾಗ ಬರುತ್ತದೆ? ಎಂಬ ತುರ್ತಾದ ಪ್ರಶ್ನೆಯು ಅಸಂಖ್ಯಾತ ಊಹೆಗಳನ್ನು ಉಂಟುಮಾಡಿದೆ. ಪ್ರಕಟನೆ ಪುಸ್ತಕವನ್ನು ಬೈಬಲಿನ ಇನ್ನಿತರ ಭಾಗಗಳ ಬೆಳಕಿನಲ್ಲಿ ಪರೀಕ್ಷಿಸುವುದು, ಅತಿ ಪ್ರಾಮುಖ್ಯವಾದ ಈ ಯುದ್ಧವು ಯಾವಾಗ ಸಂಭವಿಸುವುದು ಎಂಬುದನ್ನು ತಿಳಿಯಲು ನಮಗೆ ಸಹಾಯಮಾಡಬಲ್ಲದು. ಪ್ರಕಟನೆ 16:15 ಅರ್ಮಗೆದೋನನ್ನು, ಕಳ್ಳನಂತೆ ಬರುವ ಯೇಸುವಿನ ಬರೋಣಕ್ಕೆ ಸಂಬಂಧಿಸಿ ಮಾತಾಡುತ್ತದೆ. ಈ ವಿಷಯಗಳ ವ್ಯವಸ್ಥೆಯ ಮೇಲೆ ನ್ಯಾಯತೀರ್ಪನ್ನು ವಿಧಿಸಲು ತಾನು ಬರುವುದನ್ನು ವರ್ಣಿಸುವಾಗಲೂ ಯೇಸು ಇದೇ ದೃಷ್ಟಾಂತವನ್ನು ಉಪಯೋಗಿಸಿದನು.​—⁠ಮತ್ತಾಯ 24:​43, 44; 1 ಥೆಸಲೊನೀಕ 5:⁠2.

ಬೈಬಲ್‌ ಪ್ರವಾದನೆಗಳ ನೆರವೇರಿಕೆಯು ಸೂಚಿಸುವಂತೆ, 1914ರಿಂದ ನಾವು ಈ ವಿಷಯಗಳ ವ್ಯವಸ್ಥೆಯ ಕಡೇ ದಿವಸಗಳಲ್ಲಿ ಜೀವಿಸುತ್ತಿದ್ದೇವೆ. * ಯೇಸು ತಿಳಿಸಿದಂಥ “[ಮಹಾ] ಸಂಕಟ” ಎಂಬ ಕಾಲಾವಧಿಯು ಆ ಕಡೇ ದಿವಸಗಳ ಅಂತಿಮ ಭಾಗವನ್ನು ಗುರುತಿಸುತ್ತದೆ. ಆ ಕಾಲಾವಧಿಯು ಎಷ್ಟು ದೀರ್ಘವಾಗಿರುತ್ತದೆ ಎಂಬುದನ್ನು ಬೈಬಲ್‌ ತಿಳಿಸುವುದಿಲ್ಲ, ಆದರೆ ಅದು ತರುವ ಸಂಕಷ್ಟಗಳು ಮಾತ್ರ ಲೋಕವು ಹಿಂದೆಂದೂ ಕಂಡಿರದಂಥ ಸಂಕಷ್ಟಗಳಾಗಿರುವವು. ಆ ಮಹಾ ಸಂಕಟವು ಅರ್ಮಗೆದೋನಿನಲ್ಲಿ ಪರಾಕಾಷ್ಠೆಯನ್ನು ತಲಪುವುದು.​—⁠ಮತ್ತಾಯ 24:​21, 29.

ಅರ್ಮಗೆದೋನ್‌ ಎಂಬುದು “ಸರ್ವಶಕ್ತನಾದ ದೇವರ ಮಹಾ ದಿನದಲ್ಲಾಗುವ ಯುದ್ಧ”ವಾಗಿರುವ ಕಾರಣ ಅದು ತಡವಾಗಿ ಬರುವಂತೆ ಮನುಷ್ಯರು ಏನನ್ನೂ ಮಾಡಸಾಧ್ಯವಿಲ್ಲ. ಈ ಯುದ್ಧವನ್ನು ಆರಂಭಿಸಲು ಯೆಹೋವನು “ಕ್ಲುಪ್ತಕಾಲ”ವನ್ನು ನೇಮಿಸಿದ್ದಾನೆ. ಅದು “ತಾಮಸವಾಗದು.”​—⁠ಹಬಕ್ಕೂಕ 2:⁠3.

ನೀತಿವಂತನಾದ ದೇವರು ನ್ಯಾಯವಾದ ಯುದ್ಧವನ್ನು ಮಾಡುತ್ತಾನೆ

ದೇವರು ಯಾಕಾಗಿ ಒಂದು ಜಾಗತಿಕ ಯುದ್ಧವನ್ನು ಮಾಡಬೇಕು? ಅರ್ಮಗೆದೋನ್‌ ಯುದ್ಧವು ಆತನ ಮುಖ್ಯ ಗುಣಗಳಲ್ಲಿ ಒಂದಾದ ನ್ಯಾಯಕ್ಕೆ ಆಪ್ತ ಸಂಬಂಧದಲ್ಲಿದೆ. ಬೈಬಲ್‌ ಘೋಷಿಸುವುದು: “ಯೆಹೋವನು ನ್ಯಾಯವನ್ನು ಮೆಚ್ಚುವವನು.” (ಕೀರ್ತನೆ 37:28) ಮಾನವ ಇತಿಹಾಸದಲ್ಲಿ ಮಾಡಲ್ಪಟ್ಟಿರುವ ಎಲ್ಲ ಅನ್ಯಾಯದ ಕೃತ್ಯಗಳನ್ನು ಆತನು ನೋಡಿದ್ದಾನೆ. ಖಂಡಿತವಾಗಿಯೂ ಇವು ಆತನಲ್ಲಿ ನೀತಿಭರಿತ ಕ್ರೋಧವನ್ನು ಉಂಟುಮಾಡಿವೆ. ಹಾಗಾಗಿ, ಈ ಇಡೀ ದುಷ್ಟ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಾಶಮಾಡಲು ಒಂದು ನ್ಯಾಯವಾದ ಯುದ್ಧವನ್ನು ಮಾಡುವಂತೆ ಆತನು ತನ್ನ ಮಗನನ್ನು ನೇಮಿಸಿದ್ದಾನೆ.

ನಿಜವಾಗಿಯೂ ನ್ಯಾಯವಾದ ಮತ್ತು ದುಷ್ಟರನ್ನು ಮಾತ್ರವೇ ನಾಶಮಾಡುವ ಒಂದು ಯುದ್ಧವನ್ನು ಮಾಡಲು ಯೆಹೋವನು ಮಾತ್ರ ಶಕ್ತನಾಗಿದ್ದಾನೆ. ಈ ಯುದ್ಧದಲ್ಲಿ ನೀತಿವಂತರು, ಅವರು ಭೂಮಿಯ ಯಾವುದೇ ಭಾಗದಲ್ಲಿರಲಿ, ಸಂರಕ್ಷಿಸಲ್ಪಡುವರು. (ಮತ್ತಾಯ 24:​40, 41; ಪ್ರಕಟನೆ 7:​9, 10, 13, 14) ಮತ್ತು ಇಡೀ ಭೂಮಿಯ ಮೇಲೆ ತನ್ನ ಪರಮಾಧಿಕಾರವನ್ನು ಚಲಾಯಿಸಲು ಆತನೊಬ್ಬನಿಗೇ ಹಕ್ಕಿದೆ, ಏಕೆಂದರೆ ಅದು ಆತನ ಸೃಷ್ಟಿಯಾಗಿದೆ.​—⁠ಪ್ರಕಟನೆ 4:11.

ಯೆಹೋವನು ತನ್ನ ವೈರಿಗಳ ವಿರುದ್ಧ ಯಾವ ನಾಶಕಾರಕ ಶಕ್ತಿಗಳನ್ನು ಉಪಯೋಗಿಸುವನು? ಅದು ನಮಗೀಗ ತಿಳಿದಿಲ್ಲ. ಆದರೆ, ದುಷ್ಟ ಜನಾಂಗಗಳನ್ನು ಸಂಪೂರ್ಣವಾಗಿ ನುಚ್ಚುನೂರು ಮಾಡಬಲ್ಲ ಸಾಧನಗಳು ಆತನ ಬಳಿಯಿದೆ ಎಂಬುದು ನಮಗೆ ತಿಳಿದಿದೆ. (ಯೋಬ 38:​22, 23; ಚೆಫನ್ಯ 1:15-18) ಹಾಗಿದ್ದರೂ, ಈ ಯುದ್ಧದಲ್ಲಿ ದೇವರ ಭೂಆರಾಧಕರು ಭಾಗವಹಿಸುವುದಿಲ್ಲ. ಕೇವಲ ಸ್ವರ್ಗೀಯ ಸೈನ್ಯವು ಯೇಸು ಕ್ರಿಸ್ತನೊಂದಿಗೆ ಈ ಯುದ್ಧದಲ್ಲಿ ಭಾಗವಹಿಸಲಿದೆ ಎಂಬುದನ್ನು ಪ್ರಕಟನೆ 19ನೇ ಅಧ್ಯಾಯದಲ್ಲಿರುವ ದರ್ಶನವು ಸೂಚಿಸುತ್ತದೆ. ಭೂಮಿಯಲ್ಲಿರುವ ಯೆಹೋವನ ಕ್ರೈಸ್ತ ಸೇವಕರಲ್ಲಿ ಯಾರೂ ಇದರಲ್ಲಿ ಪಾಲ್ಗೊಳ್ಳುವುದಿಲ್ಲ.​—⁠2 ಪೂರ್ವಕಾಲವೃತ್ತಾಂತ 20:15, 17.

ವಿವೇಕಿಯಾಗಿರುವ ದೇವರು ಸಾಕಷ್ಟು ಎಚ್ಚರಿಕೆಯನ್ನು ನೀಡುತ್ತಾನೆ

ಸಂರಕ್ಷಿಸಲ್ಪಡುವವರ ಕುರಿತಾಗಿ ಏನು? ವಾಸ್ತವದಲ್ಲಿ, ಅರ್ಮಗೆದೋನಿನಲ್ಲಿ ಯಾರೂ ನಾಶವಾಗಬೇಕಾಗಿಲ್ಲ. ಅಪೊಸ್ತಲ ಪೇತ್ರನು ತಿಳಿಸಿದ್ದು: ‘ಯಾವನಾದರೂ ನಾಶವಾಗುವದರಲ್ಲಿ [ಯೆಹೋವನು] ಇಷ್ಟಪಡದೆ ಎಲ್ಲರೂ ತನ್ನ ಕಡೆಗೆ ತಿರುಗಿಕೊಳ್ಳಬೇಕೆಂದು ಅಪೇಕ್ಷಿಸುತ್ತಾನೆ.’ (2 ಪೇತ್ರ 3:⁠9) ಮಾತ್ರವಲ್ಲದೆ ಅಪೊಸ್ತಲ ಪೌಲನು ಹೇಳಿದ್ದು: “ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಬೇಕೆಂಬದು” ದೇವರ ಚಿತ್ತವಾಗಿದೆ.​—⁠1 ತಿಮೊಥೆಯ 2:⁠4.

ಈ ಗುರಿಯನ್ನು ತಲಪುವ ಸಲುವಾಗಿ ಯೆಹೋವನು, ಲೋಕದಾದ್ಯಂತ ನೂರಾರು ಭಾಷೆಗಳಲ್ಲಿ “ರಾಜ್ಯದ . . . ಸುವಾರ್ತೆಯು” ಘೋಷಿಸಲ್ಪಡುವಂತೆ ವಿವೇಕದಿಂದ ನೋಡಿಕೊಂಡಿದ್ದಾನೆ. ಪಾರಾಗಲು ಮತ್ತು ರಕ್ಷಣೆಯನ್ನು ಹೊಂದಲು ಎಲ್ಲ ಕಡೆಗಳಲ್ಲಿರುವ ಜನರಿಗೆ ಅವಕಾಶವನ್ನು ನೀಡಲಾಗುತ್ತಿದೆ. (ಮತ್ತಾಯ 24:14; ಕೀರ್ತನೆ 37:34; ಫಿಲಿಪ್ಪಿ 2:12) ಯಾರು ಸುವಾರ್ತೆಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ತೋರಿಸುತ್ತಾರೊ ಅವರು ಅರ್ಮಗೆದೋನನ್ನು ಪಾರಾಗಿ ಪರಿಪೂರ್ಣತೆಯನ್ನು ಹೊಂದಿ ಪರದೈಸ್‌ ಭೂಮಿಯಲ್ಲಿ ಸದಾ ಜೀವಿಸಬಲ್ಲರು. (ಯೆಹೆಜ್ಕೇಲ 18:23, 32; ಚೆಫನ್ಯ 2:3; ರೋಮಾಪುರ 10:13) ಪ್ರೀತಿಯ ಸ್ವರೂಪಿ ಆಗಿರುವ ದೇವರಿಂದ ಒಬ್ಬನು ಎದುರುನೋಡವಂಥದ್ದು ಇದನ್ನೇ ಅಲ್ಲವೆ?​—⁠1 ಯೋಹಾನ 4:⁠8.

ಪ್ರೀತಿಯ ದೇವರು ಯುದ್ಧಮಾಡಲು ಸಾಧ್ಯವಿದೆಯೆ?

ಪ್ರೀತಿಯ ಸಾಕಾರರೂಪವಾಗಿರುವ ದೇವರೊಬ್ಬನು ಮಾನವಕುಲದಲ್ಲಿ ಹೆಚ್ಚಿನವರನ್ನು ಏಕೆ ನಾಶಮಾಡುವನು ಎಂದು ಅನೇಕರು ಆಶ್ಚರ್ಯಪಡುತ್ತಾರೆ. ಈ ಸನ್ನಿವೇಶವನ್ನು, ಇಲಿಗಳ ಕಾಟವಿರುವ ಒಂದು ಮನೆಗೆ ಹೋಲಿಸಬಹುದು. ಮನೆಯ ಜವಾಬ್ದಾರಿಯುತ ಯಜಮಾನನು ಇಲಿಗಳನ್ನು ನಿರ್ನಾಮಮಾಡುವ ಮೂಲಕ ತನ್ನ ಕುಟುಂಬದ ಆರೋಗ್ಯ ಮತ್ತು ಸುಕ್ಷೇಮವನ್ನು ಕಾಪಾಡಬೇಕೆಂದು ನೀವು ಒಪ್ಪಿಕೊಳ್ಳುವುದಿಲ್ಲವೆ?

ತದ್ರೀತಿಯಲ್ಲಿ, ಮಾನವರ ಮೇಲೆ ಯೆಹೋವನಿಗೆ ಆಳವಾದ ಮಮತೆಯಿರುವ ಕಾರಣ ಅರ್ಮಗೆದೋನ್‌ ಯುದ್ಧವು ನಡೆಸಲ್ಪಡಬೇಕು. ಭೂಮಿಯನ್ನು ಒಂದು ಪರದೈಸಾಗಿ ಮಾರ್ಪಡಿಸಬೇಕು ಮತ್ತು ಮಾನವಕುಲವನ್ನು ಪರಿಪೂರ್ಣತೆಯ ಹಾಗೂ ‘ಯಾರೂ ಹೆದರಿಸದ’ ಶಾಂತಿಯ ಪರಿಸ್ಥಿತಿಗೆ ತರಬೇಕೆಂಬುದೇ ದೇವರ ಉದ್ದೇಶವಾಗಿದೆ. (ಮೀಕ 4:3, 4; ಪ್ರಕಟನೆ 21:4) ಅದನ್ನು ನೆರವೇರಿಸಬೇಕಾದರೆ, ತಮ್ಮ ಜೊತೆ ಮಾನವರ ಶಾಂತಿ ಹಾಗೂ ಭದ್ರತೆಯನ್ನು ಭಂಗಗೊಳಿಸುವ ಜನರನ್ನು ಏನು ಮಾಡಬೇಕು? ನೀತಿವಂತರ ಸುಕ್ಷೇಮಕ್ಕಾಗಿ ಅಂಥ ಜನರನ್ನು ಅಂದರೆ ಸರಿಪಡಿಸಲು ಅಸಾಧ್ಯವಾದ ದುಷ್ಟರನ್ನು ನಿರ್ನಾಮಮಾಡಲೇಬೇಕು.​—⁠2 ಥೆಸಲೊನೀಕ 1:​8, 9; ಪ್ರಕಟನೆ 21:⁠8.

ಇಂದು ಹೆಚ್ಚಿನ ಕಲಹ ಮತ್ತು ರಕ್ತಸುರಿಸುವಿಕೆಯು, ಅಪರಿಪೂರ್ಣ ಮಾನವ ಆಳ್ವಿಕೆಯ ಹಾಗೂ ಸ್ವಾರ್ಥಪರ ರಾಷ್ಟ್ರೀಯ ಅಭಿರುಚಿಗಳ ಬೆನ್ನಟ್ಟುವಿಕೆಯ ಕಾರಣದಿಂದ ಸಂಭವಿಸುತ್ತಿವೆ. (ಪ್ರಸಂಗಿ 8:⁠9) ತಮ್ಮ ಪ್ರಭಾವವನ್ನು ವಿಸ್ತರಿಸುತ್ತಾ ಮಾನವ ಸರಕಾರಗಳು ದೇವರ ಸ್ಥಾಪಿತ ಸರಕಾರವನ್ನು ಸಂಪೂರ್ಣವಾಗಿ ಅಗಣ್ಯಮಾಡುತ್ತಿವೆ. ಅವರು ತಮ್ಮ ಅಧಿಕಾರವನ್ನು ತ್ಯಜಿಸಿಬಿಟ್ಟು ದೇವರ ಮತ್ತು ಕ್ರಿಸ್ತನ ಪರಮಾಧಿಕಾರಕ್ಕೆ ತಲೆಬಾಗುವರು ಎಂಬ ಯಾವ ಸೂಚನೆಯೂ ಇಲ್ಲ. (ಕೀರ್ತನೆ 2:​1-9) ಆದುದರಿಂದ, ಕ್ರಿಸ್ತನ ಕೆಳಗಿರುವ ಯೆಹೋವನ ರಾಜ್ಯದ ನೀತಿಯ ಆಳ್ವಿಕೆಗೆ ದಾರಿಯನ್ನು ಮಾಡಲಿಕ್ಕಾಗಿ ಅಂಥ ಸರಕಾರಗಳನ್ನು ತೆಗದುಹಾಕಬೇಕಾಗಿದೆ. (ದಾನಿಯೇಲ 2:44) ಈ ಗ್ರಹವನ್ನು ಮತ್ತು ಮಾನವಕುಲವನ್ನು ಆಳುವ ಹಕ್ಕು ನಿಜವಾಗಿಯೂ ಯಾರಿಗಿದೆ ಎಂಬ ವಿವಾದವನ್ನು ಸಂಪೂರ್ಣವಾಗಿಯೂ ಶಾಶ್ವತವಾಗಿಯೂ ಪರಿಹರಿಸಲು ಅರ್ಮಗೆದೋನ್‌ ಯುದ್ಧವು ಹೋರಾಡಲ್ಪಡಲೇಬೇಕು.

ಅರ್ಮಗೆದೋನಿನ ಮೂಲಕ ಯೆಹೋವನು ಕ್ರಿಯಾಶೀಲನಾಗಿ ಹಸ್ತಕ್ಷೇಪಮಾಡಲು, ಮಾನವಕುಲದ ಹಿತಾಸಕ್ತಿಯೇ ಕಾರಣವಾಗಿದೆ. ಲೋಕದ ಹದಗೆಡುತ್ತಿರುವ ಪರಿಸ್ಥಿತಿಗಳ ಎದುರಿನಲ್ಲಿ, ಕೇವಲ ದೇವರ ಪರಿಪೂರ್ಣ ಆಳ್ವಿಕೆಯು ಮಾನವಕುಲದ ಅಗತ್ಯಗಳನ್ನು ಸಂಪೂರ್ಣವಾಗಿ ಪೂರೈಸುವುದು. ಕೇವಲ ಆತನ ರಾಜ್ಯದ ಮೂಲಕವೇ ನಿಜ ಶಾಂತಿ ಮತ್ತು ಏಳಿಗೆಯು ನೆಲೆಸುವುದು. ಒಂದುವೇಳೆ ದೇವರು ನಿತ್ಯನಿರಂತರಕ್ಕೂ ಕ್ರಿಯೆಗೈಯಲು ನಿರಾಕರಿಸುವುದಾದರೆ ಲೋಕದ ಪರಿಸ್ಥಿತಿಗಳು ಹೇಗಿರಬಹುದು? ಮಾನವನ ಆಳ್ವಿಕೆಯ ಕೆಳಗೆ ಶತಮಾನಗಳಿಂದ ಮಾನವಕುಲವನ್ನು ಬಾಧಿಸುತ್ತಿರುವ ಹಗೆತನ, ಹಿಂಸಾಕೃತ್ಯ ಮತ್ತು ಯುದ್ಧಗಳು ಸದಾಕಾಲಕ್ಕೂ ಮುಂದುವರಿಯುತ್ತಲೇ ಇರುವುದಲ್ಲವೆ? ವಾಸ್ತವದಲ್ಲಿ ಅರ್ಮಗೆದೋನ್‌ ಯುದ್ಧವು ಮಾನವಕುಲದ ಪ್ರಯೋಜನಾರ್ಥವಾಗಿ ಸಂಭವಿಸಸಾಧ್ಯವಿರುವ ಅತಿ ಉತ್ತಮ ಸಂಗತಿಯಾಗಿದೆ!​—⁠ಲೂಕ 18:​7, 8; 2 ಪೇತ್ರ 3:13.

ಎಲ್ಲ ಯುದ್ಧಗಳನ್ನು ಅಂತ್ಯಗೊಳಿಸಲಿಕ್ಕಾಗಿರುವ ಯುದ್ಧ

ಬೇರೆ ಯಾವುದೇ ಯುದ್ಧವು ಇಷ್ಟರ ತನಕ ಪೂರೈಸಿರದ ಒಂದು ಸಂಗತಿಯನ್ನು ಅರ್ಮಗೆದೋನ್‌ ಯುದ್ಧವು ಪೂರೈಸಲಿದೆ. ಅದೇನೆಂದರೆ, ಈ ಯುದ್ಧವು ಎಲ್ಲ ಯುದ್ಧಗಳನ್ನು ಅಂತ್ಯಗೊಳಿಸಲಿದೆ. ಯುದ್ಧಗಳೇ ಇಲ್ಲದಂಥ ಸಮಯವನ್ನು ಯಾರು ತಾನೇ ಆಶಿಸುವುದಿಲ್ಲ? ಆದರೆ, ಯುದ್ಧಗಳನ್ನು ಇಲ್ಲದಂತೆ ಮಾಡಲು ಮಾನವನು ಕೈಗೊಂಡಿರುವ ಎಲ್ಲ ಪ್ರಯತ್ನಗಳು ವ್ಯರ್ಥವಾಗಿವೆ. ಮಾನವನ ಈ ಸತತವಾದ ಸೋಲು ಯೆರೆಮೀಯನ ಈ ಮುಂದಿನ ಮಾತುಗಳ ಸತ್ಯತೆಯನ್ನು ಎತ್ತಿತೋರಿಸುತ್ತದೆ: “ಯೆಹೋವನೇ, ಮಾನವನ ಮಾರ್ಗವು ಅವನ ಸ್ವಾಧೀನದಲ್ಲಿಲ್ಲವೆಂದು ನನಗೆ ಗೊತ್ತು; ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು.” (ಯೆರೆಮೀಯ 10:23) ಯೆಹೋವನು ಏನನ್ನು ನೆರವೇರಿಸಲಿದ್ದಾನೊ ಅದರ ಕುರಿತು ಬೈಬಲ್‌ ಹೀಗೆ ವಾಗ್ದಾನಿಸುತ್ತದೆ: “ಲೋಕದ ಎಲ್ಲಾ ಭಾಗದಲ್ಲೂ ಯುದ್ಧವನ್ನು ನಿಲ್ಲಿಸಿಬಿಟ್ಟಿದ್ದಾನೆ; ಬಿಲ್ಲುಗಳನ್ನು ಭಲ್ಲೆಯಗಳನ್ನೂ ಮುರಿದುಹಾಕಿದ್ದಾನೆ; ರಥಗಳನ್ನು ದಹಿಸಿಬಿಟ್ಟಿದ್ದಾನೆ.”​—⁠ಕೀರ್ತನೆ 46:​8, 9.

ಭವಿಷ್ಯತ್ತಿನಲ್ಲಿ ಜನಾಂಗಗಳು ಒಂದಕ್ಕೊಂದು ವಿರುದ್ಧವಾಗಿ ನಾಶಕಾರಕ ಆಯುಧಗಳನ್ನು ಎತ್ತುವಾಗ ಮತ್ತು ಪರಿಸರವನ್ನು ನಾಶಮಾಡಲು ಹೊರಡುವಾಗ, ಬೈಬಲಿನಲ್ಲಿ ತಿಳಿಸಿರುವ ಅರ್ಮಗೆದೋನ್‌ ಯುದ್ಧದ ಮೂಲಕ ಭೂಮಿಯ ನಿರ್ಮಾಣಿಕನು ಕ್ರಿಯೆಗೈಯುವನು. (ಪ್ರಕಟನೆ 11:18) ಆದುದರಿಂದ, ವರುಷಗಳಾದ್ಯಂತ ದೇವಭಕ್ತರು ಕೇವಲ ನಿರೀಕ್ಷಿಸುತ್ತಿದ್ದ ಸಂಗತಿಯನ್ನು ಈ ಯುದ್ಧವು ನೆರವೇರಿಸಲಿದೆ. ಈ ಯುದ್ಧವು, ಎಲ್ಲ ಸೃಷ್ಟಿಗಳ ಮೇಲೆ ಭೂಮಿಯ ಒಡೆಯನಾದ ಯೆಹೋವ ದೇವರಿಗಿರುವ ಆಳುವ ಹಕ್ಕನ್ನು ನಿರ್ದೋಷೀಕರಿಸುವುದು.

ಹಾಗಾಗಿ, ಯಾರು ನೀತಿಯನ್ನು ಪ್ರೀತಿಸುತ್ತಾರೊ ಅವರು ಅರ್ಮಗೆದೋನ್‌ ಯುದ್ಧಕ್ಕೆ ಭಯಪಡುವ ಅಗತ್ಯವಿಲ್ಲ. ಬದಲಾಗಿ, ಅದು ಅವರಿಗೆ ನಿರೀಕ್ಷೆಯ ಬುನಾದಿಯನ್ನು ಒದಗಿಸುತ್ತದೆ. ಅರ್ಮಗೆದೋನ್‌ ಯುದ್ಧವು, ಎಲ್ಲ ಭ್ರಷ್ಟಾಚಾರ ಮತ್ತು ದುಷ್ಟತನವನ್ನು ತೆಗೆದುಹಾಕಿ ಭೂಮಿಯನ್ನು ಶುದ್ಧಗೊಳಿಸುವುದು ಹಾಗೂ ದೇವರ ಮೆಸ್ಸೀಯ ರಾಜ್ಯದ ಆಳ್ವಿಕೆಯ ಕೆಳಗೆ ಒಂದು ನೀತಿಯ ನೂತನ ವ್ಯವಸ್ಥೆಗೆ ಮಾರ್ಗವನ್ನು ತೆರೆಯುವುದು. (ಯೆಶಾಯ 11:​4, 5) ಅರ್ಮಗೆದೋನ್‌ ಯುದ್ಧವು ಒಂದು ಘೋರವಾದ ರೀತಿಯ ಅಂತ್ಯವಾಗಿರುವ ಬದಲಿಗೆ ಪರದೈಸ್‌ ಭೂಮಿಯಲ್ಲಿ ಸದಾ ಜೀವಿಸುವ ನೀತಿಯ ಮಾನವರಿಗೆ ಒಂದು ಸಂತೋಷಕರ ಆರಂಭವಾಗಿರುವುದು.​—⁠ಕೀರ್ತನೆ 37:29.

[ಪಾದಟಿಪ್ಪಣಿ]

^ ಪ್ಯಾರ. 9 ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟಿರುವ ನಿತ್ಯಜೀವಕ್ಕೆ ನಡೆಸುವ ಜ್ಞಾನ ಪುಸ್ತಕದಲ್ಲಿನ 11ನೇ ಅಧ್ಯಾಯವನ್ನು ನೋಡಿರಿ.

[ಪುಟ 5ರಲ್ಲಿರುವ ಚೌಕ/ಚಿತ್ರ]

ಮೆಗಿದ್ದೋ​—⁠ಒಂದು ಸೂಕ್ತವಾದ ಸಂಕೇತ

ಪುರಾತನ ಮೆಗಿದ್ದೋ ಪಟ್ಟಣವು ಅತಿ ಪ್ರಾಮುಖ್ಯವಾದ ಸ್ಥಳದಲ್ಲಿತ್ತು. ಅಲ್ಲಿಂದ, ಉತ್ತರ ಇಸ್ರಾಯೇಲಿನಲ್ಲಿದ್ದ ಫಲವತ್ತಾದ ಇಜ್ರೇಲ್‌ ಕಣಿವೆಯ ಪಶ್ಚಿಮ ಭಾಗವನ್ನು ದೃಷ್ಟಿಸಬಹುದಾಗಿತ್ತು. ಆ ಪಟ್ಟಣವನ್ನು ಅಡ್ಡಹಾಯ್ದು ಹೋಗುತ್ತಿದ್ದ ಅಂತಾರಾಷ್ಟ್ರೀಯ ವ್ಯಾಪಾರ ಮತ್ತು ಮಿಲಿಟರಿ ಮಾರ್ಗಗಳನ್ನು ಅದು ನಿಯಂತ್ರಿಸುತ್ತಿತ್ತು. ಹೀಗೆ, ಮೆಗಿದ್ದೋ ಪಟ್ಟಣವು ನಿರ್ಣಾಯಕ ಕದನಗಳ ಒಂದು ಸ್ಥಳವಾಗಿ ಪರಿಣಮಿಸಿತು. ಬೈಬಲಿಗೆ ಸಂಬಂಧಿಸಿದ ಲೋಕದಲ್ಲಿನ ಪಟ್ಟಣಗಳು​—⁠ಮೆಗಿದ್ದೋ (ಇಂಗ್ಲಿಷ್‌) ಎಂಬ ತನ್ನ ಪುಸ್ತಕದಲ್ಲಿ ಪ್ರೊಫೆಸರ್‌ ಗ್ರೇಅಮ್‌ ಡೇವೀಸ್‌ ಬರೆದದ್ದು: “ಮೆಗಿದ್ದೋ ಪಟ್ಟಣವು . . . ಎಲ್ಲ ದಿಕ್ಕುಗಳಿಂದ ಬರುತ್ತಿದ್ದ ವ್ಯಾಪಾರಿಗಳಿಗೆ ಮತ್ತು ವಲಸೆಗಾರರಿಗೆ ಸುಲಭವಾಗಿ ತಲಪಸಾಧ್ಯವಿದ್ದ ಪಟ್ಟಣವಾಗಿತ್ತು; ಆದರೆ ಅದೇ ಸಮಯದಲ್ಲಿ ಅದು ಸಾಕಷ್ಟು ಶಕ್ತಿಯುತವಾಗಿರುತ್ತಿದ್ದಲ್ಲಿ, ಈ ಮಾರ್ಗಗಳ ಮೂಲಕ ಪ್ರವೇಶವನ್ನು ತನ್ನ ನಿಯಂತ್ರಣದಲ್ಲಿ ಇಡಸಾಧ್ಯವಿತ್ತು ಮತ್ತು ಇದರ ಪರಿಣಾಮವಾಗಿ ವ್ಯಾಪಾರ ಹಾಗೂ ಯುದ್ಧದ ಪ್ರಗತಿಯನ್ನು ತನ್ನ ಹತೋಟಿಯಲ್ಲಿ ಇಡಶಕ್ತವಾಗಿತ್ತು. ಆದುದರಿಂದಲೇ, ಈ ಪಟ್ಟಣವನ್ನು . . . ಜಯಿಸಲಿಕ್ಕಾಗಿ ಅನೇಕವೇಳೆ ಹೋರಾಟಗಳು ನಡೆಯುತ್ತಿದ್ದವು ಮತ್ತು ಅದನ್ನು ಜಯಿಸಿದಾಗ ಭದ್ರವಾಗಿ ಕಾಪಾಡಲಾಗುತ್ತಿತ್ತು ಎಂಬುದರಲ್ಲಿ ಯಾವುದೇ ಆಶ್ಚರ್ಯವಿಲ್ಲ.”

ಸಾ.ಶ.ಪೂ. ಎರಡನೇ ಸಹಸ್ರಮಾನದಲ್ಲಿ ಐಗುಪ್ತದ ರಾಜನಾದ ಮೂರನೇ ತುಟ್‌ಮೋಸನು ಮೆಗಿದ್ದೋ ಪಟ್ಟಣದಲ್ಲಿನ ಕಾನಾನ್ಯ ಅರಸರನ್ನು ಸೋಲಿಸಿದಾಗ, ಆ ಪಟ್ಟಣದ ದೀರ್ಘ ಇತಿಹಾಸವು ಆರಂಭಗೊಂಡಿತು. ಮತ್ತು ಅದು ಅನೇಕ ಶತಮಾನಗಳ ವರೆಗೂ ಅಂದರೆ 1918ರಲ್ಲಿ ಬ್ರಿಟಿಷ್‌ ಜನರಲ್‌ ಎಡ್‌ಮಂಟ್‌ ಅಲನ್‌ಬೀ ತುರ್ಕಿಯರ ಸೈನ್ಯವನ್ನು ಸೋಲಿಸಿದ ವರೆಗೂ ಮುಂದುವರಿಯಿತು. ನ್ಯಾಯಸ್ಥಾಪಕ ಬಾರಾಕನು ಕಾನಾನ್ಯ ಅರಸನಾದ ಯಾಬೀನನಿಗೆ ಮಾರಕ ಹೊಡೆತವನ್ನು ನೀಡಲು ದೇವರು ಸಾಧ್ಯವನ್ನಾಗಿ ಮಾಡಿದ್ದು ಮೆಗಿದ್ದೋವಿನಲ್ಲಿಯೇ. (ನ್ಯಾಯಸ್ಥಾಪಕರು 4:12-24; 5:19, 20) ನ್ಯಾಯಸ್ಥಾಪಕ ಗಿದ್ಯೋನನು ಮಿದ್ಯಾನ್ಯರನ್ನು ವಿವೇಚನೆಯಿಂದ ಸೋಲಿಸಿದ್ದು ಇದೇ ಸ್ಥಳದ ಆಸುಪಾಸಿನಲ್ಲಿ. (ನ್ಯಾಯಸ್ಥಾಪಕರು 7:1-22) ಮಾತ್ರವಲ್ಲದೆ, ಇದೇ ಸ್ಥಳದಲ್ಲಿ ಅರಸರಾದ ಅಹಜ್ಯ ಮತ್ತು ಯೋಷೀಯರು ಕೊಲ್ಲಲ್ಪಟ್ಟರು ಸಹ.​—⁠2 ಅರಸುಗಳು 9:27; 23:29, 30.

ಇದು ಅಸಂಖ್ಯಾತ ನಿರ್ಣಾಯಕ ಯುದ್ಧಗಳ ಸ್ಥಳವಾಗಿದ್ದದರಿಂದ, ಅರ್ಮಗೆದೋನನ್ನು ಈ ಸ್ಥಳದೊಂದಿಗೆ ಸಂಬಂಧಿಸಿ ಮಾತಾಡುವುದು ಸೂಕ್ತವಾಗಿದೆ. ಇದು, ದೇವರ ಎಲ್ಲ ವಿರೋಧಿ ಶಕ್ತಿಗಳ ಮೇಲೆ ಆತನ ಸಂಪೂರ್ಣ ವಿಜಯದ ಸೂಕ್ತವಾದ ಸಂಕೇತವಾಗಿದೆ.

[ಕೃಪೆ]

Pictorial Archive (Near Eastern History) Est.

[ಪುಟ 7ರಲ್ಲಿರುವ ಚಿತ್ರಗಳು]

ಲೋಕವ್ಯಾಪಕವಾಗಿ, ಅರ್ಮಗೆದೋನಿನಿಂದ ಪಾರಾಗಲು ಜನರಿಗೆ ಎಚ್ಚರಿಕೆ ಮತ್ತು ಅವಕಾಶವನ್ನು ಕೊಡಲಾಗುತ್ತಿದೆ

[ಪುಟ 7ರಲ್ಲಿರುವ ಚಿತ್ರ]

ಅರ್ಮಗೆದೋನ್‌ ಒಂದು ಸಂತೋಷಕರ ಆರಂಭವನ್ನು ಸೂಚಿಸುತ್ತದೆ