ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಗತಿಪರರಾದ ಮತ್ತು ಸನ್ನಿವೇಶಗಳಿಗೆ ಹೊಂದಿಕೊಳ್ಳುವ ಶುಶ್ರೂಷಕರಾಗುವುದು

ಪ್ರಗತಿಪರರಾದ ಮತ್ತು ಸನ್ನಿವೇಶಗಳಿಗೆ ಹೊಂದಿಕೊಳ್ಳುವ ಶುಶ್ರೂಷಕರಾಗುವುದು

ಪ್ರಗತಿಪರರಾದ ಮತ್ತು ಸನ್ನಿವೇಶಗಳಿಗೆ ಹೊಂದಿಕೊಳ್ಳುವ ಶುಶ್ರೂಷಕರಾಗುವುದು

“ಯಾವ ವಿಧದಲ್ಲಿಯಾದರೂ ಕೆಲವರನ್ನು ರಕ್ಷಿಸಬೇಕೆಂದು ಯಾರಾರಿಗೆ ಎಂಥೆಂಥವನಾಗಬೇಕೋ ಅಂಥಂಥವನಾಗಿದ್ದೇನೆ.”​—⁠1 ಕೊರಿಂಥ 9:⁠22.

ಬುದ್ಧಿವಂತರೊಂದಿಗೆ ಮತ್ತು ಸುಸಂಸ್ಕೃತರೊಂದಿಗೆ, ಹಾಗೆಯೇ ಗುಡಾರಹೊಲೆಯುವಂಥ ಕೆಳಮಟ್ಟದ ಜನರೊಂದಿಗೆ ಅವನು ಸರಾಗವಾಗಿ ವ್ಯವಹರಿಸುತ್ತಿದ್ದನು. ರೋಮ್‌ನ ಗೌರವಾನ್ವಿತ ವ್ಯಕ್ತಿಗಳೊಂದಿಗೆ ಮತ್ತು ಫ್ರಿಜಿಯದ ರೈತರೊಂದಿಗೆ ಅವನು ಒಡಂಬಡಿಸುವಂಥ ರೀತಿಯಲ್ಲಿ ಮಾತಾಡುತ್ತಿದ್ದನು. ಉದಾರ ಮನೋಭಾವದ ಗ್ರೀಕರಿಗೆ ಮತ್ತು ಸಂಪ್ರದಾಯಶರಣರಾದ ಯೆಹೂದ್ಯರಿಗೆ ಅವನ ಬರಹಗಳು ಉತ್ತೇಜನದಾಯಕವಾಗಿದ್ದವು. ಅವನ ತರ್ಕಬದ್ಧ ಮಾತು ಅನಿರಾಕರಣೀಯವಾಗಿತ್ತು ಮತ್ತು ಅವನ ಭಾವನಾತ್ಮಕ ಗುಣಲಕ್ಷಣವು ಪ್ರಭಾವಶಾಲಿಯಾಗಿತ್ತು. ಕೆಲವರನ್ನಾದರೂ ಕ್ರಿಸ್ತನ ಕಡೆಗೆ ನಡೆಸುವ ಉದ್ದೇಶದಿಂದ ಅವನು ಪ್ರತಿಯೊಬ್ಬರೂ ಸಮ್ಮತಿಸುವಂಥ ಒಂದು ಅಂಶವನ್ನು ಕಂಡುಕೊಂಡು ಅದರ ಕುರಿತು ಮಾತಾಡಲು ಪ್ರಯತ್ನಿಸಿದನು.​—⁠ಅ. ಕೃತ್ಯಗಳು 20:⁠21.

2 ಈ ವ್ಯಕ್ತಿಯು ಅಪೊಸ್ತಲ ಪೌಲನೇ ಆಗಿದ್ದನು. ಅವನು ಪರಿಣಾಮಕಾರಿಯಾದ ಹಾಗೂ ಪ್ರಗತಿಪರನಾದ ಒಬ್ಬ ಶುಶ್ರೂಷಕನಾಗಿದ್ದನು ಎಂಬುದರಲ್ಲಿ ಸಂಶಯವೇ ಇಲ್ಲ. (1 ತಿಮೊಥೆಯ 1:12) ಯೇಸುವಿನಿಂದ ಅವನು “ಅನ್ಯಜನರಿಗೂ ಅರಸುಗಳಿಗೂ ಇಸ್ರಾಯೇಲ್ಯರಿಗೂ [ಕ್ರಿಸ್ತನ] ಹೆಸರನ್ನು ತಿಳಿಸುವ” ಆಜ್ಞೆಯನ್ನು ಪಡೆದುಕೊಂಡನು. (ಅ. ಕೃತ್ಯಗಳು 9:15) ಈ ನೇಮಕದ ವಿಷಯದಲ್ಲಿ ಅವನಿಗೆ ಯಾವ ಮನೋಭಾವವಿತ್ತು? ಅವನು ಘೋಷಿಸಿದ್ದು: “ಯಾವ ವಿಧದಲ್ಲಿಯಾದರೂ ಕೆಲವರನ್ನು ರಕ್ಷಿಸಬೇಕೆಂದು ಯಾರಾರಿಗೆ ಎಂಥೆಂಥವನಾಗಬೇಕೋ ಅಂಥಂಥವನಾಗಿದ್ದೇನೆ. ನಾನು ಇತರರ ಸಂಗಡ ಸುವಾರ್ತೆಯ ಫಲದಲ್ಲಿ ಪಾಲುಗಾರನಾಗಬೇಕೆಂದು ಇದೆಲ್ಲವನ್ನು ಸುವಾರ್ತೆಗೋಸ್ಕರವೇ ಮಾಡುತ್ತೇನೆ.” (1 ಕೊರಿಂಥ 9:19-23) ನಮ್ಮ ಸಾರುವ ಮತ್ತು ಬೋಧಿಸುವ ಕೆಲಸದಲ್ಲಿ ಹೆಚ್ಚು ಪರಿಣಾಮಕಾರಿಯಾಗಿರುವಂತೆ ನಮಗೆ ಸಹಾಯಮಾಡಸಾಧ್ಯವಿರುವ ಯಾವ ವಿಷಯಗಳನ್ನು ನಾವು ಪೌಲನ ಮಾದರಿಯಿಂದ ಕಲಿಯಸಾಧ್ಯವಿದೆ?

ಬದಲಾದ ವ್ಯಕ್ತಿಯೊಬ್ಬನು ಕಷ್ಟಕರ ನೇಮಕದಲ್ಲಿ ಸಫಲನಾದದ್ದು

3 ಪೌಲನು ಯಾವಾಗಲೂ ದೀರ್ಘಶಾಂತಿಯುಳ್ಳವನು ಮತ್ತು ಇತರರಿಗೆ ಪರಿಗಣನೆ ತೋರಿಸುವವನು ಆಗಿದ್ದು, ಅವನು ಪಡೆದುಕೊಂಡ ನೇಮಕಕ್ಕೆ ತಕ್ಕವನಾಗಿದ್ದನೊ? ನಿಶ್ಚಯವಾಗಿಯೂ ಇಲ್ಲ! ಧಾರ್ಮಿಕ ಮತಾಂಧತೆಯು ಸೌಲನನ್ನು (ಪೌಲನು ಮುಂಚೆ ಈ ಹೆಸರಿನಿಂದ ಪ್ರಸಿದ್ಧನಾಗಿದ್ದನು) ಕ್ರಿಸ್ತನ ಹಿಂಬಾಲಕರ ಉಗ್ರ ಹಿಂಸಕನನ್ನಾಗಿ ಮಾಡಿತ್ತು. ಅವನು ಯೌವನಸ್ಥನಾಗಿದ್ದಾಗ ಸ್ತೆಫನನ ಕೊಲೆಗೆ ಸಮ್ಮತಿಸಿದವನಾಗಿದ್ದನು. ತದನಂತರ ಪೌಲನು ನಿರ್ದಯವಾಗಿ ಕ್ರೈಸ್ತರನ್ನು ಬೆನ್ನಟ್ಟತೊಡಗಿದನು. (ಅ. ಕೃತ್ಯಗಳು 7:58; 8:1, 3; 1 ತಿಮೊಥೆಯ 1:13) ‘ಕರ್ತನ ಶಿಷ್ಯರಿಗೆ ಬೆದರಿಕೆಯ ಮಾತುಗಳನ್ನಾಡುತ್ತಾ ಅವರನ್ನು ಸಂಹರಿಸಬೇಕೆಂಬ’ ಆಶೆಯು ಅವನಲ್ಲಿ ತೀವ್ರವಾಗುತ್ತಾ ಹೋಯಿತು. ಯೆರೂಸಲೇಮಿನಲ್ಲಿದ್ದ ವಿಶ್ವಾಸಿಗಳನ್ನು ಮಾತ್ರ ಬೆನ್ನಟ್ಟುವುದರಲ್ಲಿ ತೃಪ್ತನಾಗದೆ ಅವನು ತನ್ನ ದ್ವೇಷದ ಕಾರ್ಯಾಚರಣೆಯನ್ನು ಉತ್ತರದಲ್ಲಿ ದಮಸ್ಕದಷ್ಟು ದೂರದ ವರೆಗೂ ವಿಸ್ತರಿಸಿದನು.​—⁠ಅ. ಕೃತ್ಯಗಳು 9:1, 2.

4 ಕ್ರೈಸ್ತಧರ್ಮದ ಕಡೆಗಿನ ಪೌಲನ ತೀವ್ರ ದ್ವೇಷಕ್ಕೆ ಮೂಲ ಕಾರಣವು, ಈ ಹೊಸ ಧರ್ಮವು ಯೆಹೂದ್ಯೇತರ ವಿಚಾರಧಾರೆಗಳನ್ನು ಯೆಹೂದಿಮತದೊಂದಿಗೆ ಮಿಶ್ರಗೊಳಿಸುವ ಮೂಲಕ ಅದನ್ನು ಭ್ರಷ್ಟಗೊಳಿಸುತ್ತದೆ ಎಂಬ ನಿಶ್ಚಿತಾಭಿಪ್ರಾಯವೇ ಆಗಿದ್ದಿರಬಹುದು. ಎಷ್ಟೆಂದರೂ ಪೌಲನು ಒಬ್ಬ ‘ಫರಿಸಾಯನಾಗಿದ್ದನು’ ಮತ್ತು ಆ ಹೆಸರಿನ ಅರ್ಥವೇ “ಪ್ರತ್ಯೇಕಿತನು” ಎಂದಾಗಿದೆ. (ಅ. ಕೃತ್ಯಗಳು 23:6) ಎಲ್ಲ ಜನರಲ್ಲಿ ಅನ್ಯರಿಗೇ ಹೋಗಿ ಕ್ರಿಸ್ತನ ಕುರಿತು ಸಾರಲಿಕ್ಕಾಗಿ ದೇವರು ತನ್ನನ್ನು ಆಯ್ಕೆಮಾಡಿದ್ದಾನೆ ಎಂಬುದು ಪೌಲನಿಗೆ ತಿಳಿದುಬಂದಾಗ ಅವನೆಷ್ಟು ಆಘಾತಗೊಂಡಿದ್ದಿರಬಹುದು ಎಂಬುದನ್ನು ಊಹಿಸಿಕೊಳ್ಳಿರಿ! (ಅ. ಕೃತ್ಯಗಳು 22:14, 15; 26:16-18) ಫರಿಸಾಯರು ಯಾರನ್ನು ಪಾಪಿಗಳಾಗಿ ಪರಿಗಣಿಸುತ್ತಿದ್ದರೋ ಅವರೊಂದಿಗೆ ಊಟಮಾಡಲು ಸಹ ನಿರಾಕರಿಸುತ್ತಿದ್ದರು! (ಲೂಕ 7:36-39) ಪೌಲನು ತನ್ನ ದೃಷ್ಟಿಕೋನವನ್ನು ಬದಲಾಯಿಸಿಕೊಂಡು, ಅದನ್ನು ಎಲ್ಲ ರೀತಿಯ ಜನರು ರಕ್ಷಣೆಯನ್ನು ಹೊಂದಬೇಕು ಎಂಬ ದೇವರ ಚಿತ್ತಕ್ಕೆ ಹೊಂದಿಕೆಯಲ್ಲಿ ತರಲು ಭಾರೀ ಪ್ರಯತ್ನವನ್ನು ಮಾಡಬೇಕಾಯಿತು ಎಂಬುದರಲ್ಲಿ ಸಂಶಯವೇ ಇಲ್ಲ.​—⁠ಗಲಾತ್ಯ 1:13-17.

5 ನಾವು ಸಹ ಇದನ್ನೇ ಮಾಡಬೇಕಾಗಬಹುದು. ನಮ್ಮ ಅಂತಾರಾಷ್ಟ್ರೀಯ, ಬಹುಭಾಷೀಯ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿವಿಧ ಜನರನ್ನು ಸಂಧಿಸುವಾಗ, ನಮ್ಮ ಮನೋಭಾವವನ್ನು ಪರೀಕ್ಷಿಸಿಕೊಳ್ಳಲು ಮತ್ತು ಯಾವುದೇ ರೀತಿಯ ಪೂರ್ವಕಲ್ಪಿತ ಅಭಿಪ್ರಾಯವನ್ನು ನಮ್ಮಿಂದ ತೆಗೆದುಹಾಕಲು ನಾವು ಪ್ರಜ್ಞಾಪೂರ್ವಕ ಪ್ರಯತ್ನವನ್ನು ಮಾಡಬೇಕಾಗಿದೆ. (ಎಫೆಸ 4:22-24) ನಮಗೆ ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ, ನಾವು ಬೆಳೆಸಲ್ಪಟ್ಟ ರೀತಿಯು ಅಂದರೆ ನಮ್ಮ ಸಾಮಾಜಿಕ ಮತ್ತು ಶೈಕ್ಷಣಿಕ ಹಿನ್ನೆಲೆಯು ನಮ್ಮ ಮೇಲೆ ಪ್ರಭಾವವನ್ನು ಬೀರುತ್ತದೆ. ಇದು ಪಕ್ಷಪಾತದ, ಪೂರ್ವಕಲ್ಪಿತವಾದ, ಹೊಂದಿಸಿಕೊಳ್ಳಲು ಕಷ್ಟಕರವಾದ ದೃಷ್ಟಿಕೋನಗಳನ್ನು ಮತ್ತು ಮನೋಭಾವಗಳನ್ನು ನಮ್ಮಲ್ಲಿ ತುಂಬಿಸಸಾಧ್ಯವಿದೆ. ನಾವು ಕುರಿಗಳಂಥ ಜನರನ್ನು ಕಂಡುಕೊಳ್ಳುವುದರಲ್ಲಿ ಮತ್ತು ಅವರಿಗೆ ಸಹಾಯಮಾಡುವುದರಲ್ಲಿ ಸಾಫಲ್ಯವನ್ನು ಕಂಡುಕೊಳ್ಳಬೇಕಾದರೆ, ಇಂಥ ಭಾವನೆಗಳನ್ನು ತೊರೆಯಬೇಕಾಗಿದೆ. (ರೋಮಾಪುರ 15:7) ಪೌಲನು ಇದನ್ನೇ ಮಾಡಿದನು. ಅವನು ತನ್ನ ಶುಶ್ರೂಷೆಯನ್ನು ವಿಸ್ತರಿಸುವ ಪಂಥಾಹ್ವಾನವನ್ನು ಸ್ವೀಕರಿಸಿದನು. ಪ್ರೀತಿಯಿಂದ ಪ್ರಚೋದಿತನಾದ ಅವನು ಅನುಕರಣೆಗೆ ಯೋಗ್ಯವಾದ ಬೋಧನಾ ಕೌಶಲಗಳನ್ನು ಬೆಳೆಸಿಕೊಂಡನು. ವಾಸ್ತವದಲ್ಲಿ, ‘ಅನ್ಯಜನರಿಗೆ ಅಪೊಸ್ತಲನಾಗಿದ್ದ’ ಅವನ ಶುಶ್ರೂಷೆಯ ಕುರಿತಾದ ಅಧ್ಯಯನವು, ಸಾರುವುದರಲ್ಲಿ ಮತ್ತು ಬೋಧಿಸುವುದರಲ್ಲಿ ಅವನು ಗಮನಕೊಡುವವನಾಗಿದ್ದನು, ಹೊಂದಿಕೊಳ್ಳುವ ಮನೋಭಾವದವನಾಗಿದ್ದನು ಮತ್ತು ವ್ಯವಹಾರಚಾತುರ್ಯವುಳ್ಳವನಾಗಿದ್ದನು ಎಂಬುದನ್ನು ತೋರಿಸುತ್ತದೆ. *​—⁠ರೋಮಾಪುರ 11:⁠13.

ಪೌಲನು ಭಿನ್ನ ಸನ್ನಿವೇಶಗಳಿಗೆ ಹೇಗೆ ಹೊಂದಿಕೊಂಡನು?

6 ಪೌಲನು ತನ್ನ ಕೇಳುಗರ ನಂಬಿಕೆಗಳಿಗೆ ಮತ್ತು ಹಿನ್ನೆಲೆಗೆ ಗಮನಕೊಡುವವನಾಗಿದ್ದನು. IIನೆಯ ಅಗ್ರಿಪ್ಪ ರಾಜನೊಂದಿಗೆ ಮಾತಾಡುವಾಗ ಪೌಲನು, ಆ ರಾಜನಿಗೆ ‘ಯೆಹೂದ್ಯರಲ್ಲಿರುವ ಎಲ್ಲ ಆಚಾರಗಳು ಮತ್ತು ವಿವಾದಗಳು ಚೆನ್ನಾಗಿ’ ಗೊತ್ತಿವೆ ಎಂಬುದನ್ನು ಅಂಗೀಕರಿಸಿದನು. ತದನಂತರ ಪೌಲನು ಅಗ್ರಿಪ್ಪನ ನಂಬಿಕೆಗಳ ಕುರಿತಾದ ತನ್ನ ಜ್ಞಾನವನ್ನು ಕೌಶಲಭರಿತವಾಗಿ ಉಪಯೋಗಿಸಿ, ಆ ರಾಜನು ಚೆನ್ನಾಗಿ ಅರ್ಥಮಾಡಿಕೊಳ್ಳುವಂಥ ವಿಷಯಗಳ ಕುರಿತು ಅವನೊಂದಿಗೆ ಚರ್ಚಿಸಿದನು. ಪೌಲನ ತರ್ಕಬದ್ಧ ಮಾತುಗಳ ಸ್ಪಷ್ಟತೆ ಮತ್ತು ನಿಶ್ಚಿತಾಭಿಪ್ರಾಯವು ಹೇಗಿತ್ತೆಂದರೆ, ಅಗ್ರಿಪ್ಪನು ಹೇಳಿದ್ದು: “ಅಲ್ಪ ಸಮಯದಲ್ಲಿಯೇ ನನ್ನನ್ನು ಕ್ರೈಸ್ತನನ್ನಾಗಿ ಮಾಡಬೇಕೆಂದು ಒಡಂಬಡಿಸುತ್ತಿದ್ದೀ!” (NIBV)​—⁠ಅ. ಕೃತ್ಯಗಳು 26:2, 3, 27, 28.

7 ಪೌಲನು ಸನ್ನಿವೇಶಗಳಿಗೆ ಹೊಂದಿಕೊಳ್ಳುವವನೂ ಆಗಿದ್ದನು. ಲುಸ್ತ್ರ ಪಟ್ಟಣದಲ್ಲಿ ಜನರ ಒಂದು ಗುಂಪು ಅವನನ್ನು ಮತ್ತು ಬಾರ್ನಬನನ್ನು ದೇವತೆಗಳೆಂದು ಪರಿಗಣಿಸಿ ಆರಾಧಿಸಲು ಬಂದಾಗ, ಅವರು ಹಾಗೆ ಮಾಡದಂತೆ ತಡೆಯಲು ಪ್ರಯತ್ನಿಸಿದಾಗ ಅವನ ವಿಧಾನವು ಎಷ್ಟು ಭಿನ್ನವಾಗಿತ್ತೆಂಬುದನ್ನು ಗಮನಿಸಿರಿ. ಲುಕವೋನ್ಯ ಭಾಷೆಯನ್ನು ಮಾತಾಡುತ್ತಿದ್ದ ಈ ಜನರು, ಅಂದಿನ ಜನಸಂಖ್ಯೆಯಲ್ಲೇ ತೀರ ಕಡಿಮೆ ವಿದ್ಯಾಭ್ಯಾಸವಿದ್ದವರು ಮತ್ತು ಹೆಚ್ಚು ಮೂಢನಂಬಿಕೆಯುಳ್ಳವರಾಗಿದ್ದರು ಎಂದು ಹೇಳಲಾಗುತ್ತದೆ. ಅಪೊಸ್ತಲರ ಕೃತ್ಯಗಳು 14:​14-18ಕ್ಕನುಸಾರ, ಸತ್ಯ ದೇವರ ಶ್ರೇಷ್ಠತೆಯ ಪುರಾವೆಯಾಗಿ ಪೌಲನು, ಸೃಷ್ಟಿಯನ್ನು ಮತ್ತು ಅದರ ನೈಸರ್ಗಿಕ ಕೊಡುಗೆಗಳನ್ನು ಸೂಚಿಸಿ ಮಾತಾಡಿದನು. ಈ ವಾದವು ಅರ್ಥಮಾಡಿಕೊಳ್ಳಲು ಸುಲಭವಾಗಿತ್ತು ಹಾಗೂ ಪೌಲನಿಗೆ ಮತ್ತು ಬಾರ್ನಬನಿಗೆ “ಬಲಿಯನ್ನು ಅರ್ಪಿಸುವುದರಿಂದ ಜನರನ್ನು ತಡೆಯಲು” (NW) ಸಹಾಯಮಾಡಿದ್ದಿರುವಂತೆ ತೋರುತ್ತದೆ.

8 ಪೌಲನು ಪರಿಪೂರ್ಣನಾಗಿರಲಿಲ್ಲ ಮತ್ತು ಕೆಲವೊಮ್ಮೆ ನಿರ್ದಿಷ್ಟ ವಿಷಯಗಳ ಕುರಿತು ಅವನಿಗೆ ಬಲವಾದ ಅನಿಸಿಕೆಗಳಿದ್ದವು ಎಂಬುದಂತೂ ನಿಶ್ಚಯ. ಉದಾಹರಣೆಗೆ, ಅವನು ಒಂದು ಸಂದರ್ಭದಲ್ಲಿ ಅವಮಾನಗೊಳಿಸುವಂಥ ಮತ್ತು ಅನುಚಿತವಾದ ಆಕ್ರಮಣಕ್ಕೊಳಗಾದಾಗ, ಅನನೀಯನೆಂಬ ಹೆಸರಿನ ಒಬ್ಬ ಯೆಹೂದ್ಯನ ವಿರುದ್ಧ ಅವನು ವಾಗ್ದಾಳಿ ಮಾಡಿದನು. ಆದರೆ ಅವನಿಗೆ ಅರಿವಿಲ್ಲದೇ ಮಹಾಯಾಜಕನನ್ನು ಅಪಮಾನಿಸಿದ್ದಾನೆ ಎಂದು ಪೌಲನಿಗೆ ತಿಳಿಸಲ್ಪಟ್ಟಾಗ, ತತ್‌ಕ್ಷಣವೇ ಅವನು ಕ್ಷಮೆಯಾಚಿಸಿದನು. (ಅ. ಕೃತ್ಯಗಳು 23:1-5) ಅಥೇನೆ “ಪಟ್ಟಣದಲ್ಲಿ ಎಲ್ಲೆಲ್ಲಿಯೂ ವಿಗ್ರಹಗಳೇ ಇರುವುದನ್ನು ನೋಡಿ” ಆರಂಭದಲ್ಲಿ “ಅವನ ಮನಸ್ಸು ಅವನೊಳಗೆ ಕುದಿಯಿತು.” ಆದರೂ, ಮಾರ್ಸ್‌ ಹಿಲ್‌ ಅಥವಾ ಅರಿಯೊಪಾಗದಲ್ಲಿ ಅವನು ತದನಂತರ ಕೊಟ್ಟ ಭಾಷಣದಲ್ಲಿ ಈ ಭಾವನೆಯನ್ನು ತೋರ್ಪಡಿಸಲಿಲ್ಲ. ಬದಲಾಗಿ, ಅಥೇನೆ ಪಟ್ಟಣದ ಚೌಕದಲ್ಲಿ ಅವನು ಜನರನ್ನು ಸಂಬೋಧಿಸಿ ಮಾತಾಡಿದನು; “ತಿಳಿಯದ ದೇವರಿಗೆ” ಮೀಸಲಾಗಿಡಲ್ಪಟ್ಟಿದ್ದ ಅವರ ಬಲಿಪೀಠವನ್ನು ಸೂಚಿಸುವ ಮೂಲಕ ಹಾಗೂ ಅವರ ಕವಿಗಳಲ್ಲಿ ಒಬ್ಬರ ಮಾತುಗಳನ್ನು ಉಲ್ಲೇಖಿಸುವ ಮೂಲಕ, ಅವರು ಒಪ್ಪಿಕೊಳ್ಳುವಂಥ ಸಾಮಾನ್ಯ ಅಂಶದ ಕುರಿತಾಗಿ ಅವನು ತರ್ಕಿಸಿದನು.​—⁠ಅ. ಕೃತ್ಯಗಳು 17:16-28.

9 ಭಿನ್ನ ಭಿನ್ನ ಸಭಿಕರೊಂದಿಗೆ ವ್ಯವಹರಿಸುವಾಗ ಪೌಲನು ವ್ಯವಹಾರಚಾತುರ್ಯವನ್ನು, ಅಂದರೆ ಏಳುವಂಥ ಭಿನ್ನ ಭಿನ್ನ ಸನ್ನಿವೇಶಗಳನ್ನು ನಿಭಾಯಿಸಲು ಉಪಾಯಗಳನ್ನು ಕಂಡುಹಿಡಿಯುವ ಕೌಶಲವನ್ನು ತೋರಿಸಿದನು. ತನ್ನ ಸಭಿಕರ ಆಲೋಚನೆಯನ್ನು ರೂಪಿಸಿದಂಥ ಸಂಸ್ಕೃತಿ ಮತ್ತು ಪರಿಸರವನ್ನು ಅವನು ಪರಿಗಣನೆಗೆ ತೆಗೆದುಕೊಂಡನು. ಅವನು ರೋಮ್‌ನಲ್ಲಿದ್ದ ಕ್ರೈಸ್ತರಿಗೆ ಪತ್ರವನ್ನು ಬರೆದಾಗ, ಆ ಸಮಯದ ಮಹಾನ್‌ ರಾಜಕೀಯ ಶಕ್ತಿಯ ರಾಜಧಾನಿಯಲ್ಲಿ ಅವರು ವಾಸಿಸುತ್ತಿದ್ದರೆಂಬುದು ಅವನಿಗೆ ಚೆನ್ನಾಗಿ ತಿಳಿದಿತ್ತು. ರೋಮ್‌ನಲ್ಲಿದ್ದ ಕ್ರೈಸ್ತರಿಗೆ ಪೌಲನು ಬರೆದ ಪತ್ರದ ಪ್ರಮುಖ ಅಂಶವು, ಭ್ರಷ್ಟಗೊಳಿಸಲಿಕ್ಕಾಗಿರುವ ಆದಾಮನ ಪಾಪದ ಶಕ್ತಿಯು ವಿಮೋಚಿಸಲಿಕ್ಕಾಗಿರುವ ಕ್ರಿಸ್ತನ ಶಕ್ತಿಯಿಂದ ಜಯಿಸಲ್ಪಟ್ಟಿದೆ ಎಂಬುದೇ ಆಗಿತ್ತು. ರೋಮ್‌ನ ಕ್ರೈಸ್ತರೊಂದಿಗೆ ಮತ್ತು ಅವರ ಸುತ್ತಲೂ ಇದ್ದ ಜನರೊಂದಿಗೆ ಅವನು ಅವರ ಹೃದಯವನ್ನು ತಲಪುವಂಥ ಭಾಷೆಯಲ್ಲಿ ಮಾತಾಡಿದನು.​—⁠ರೋಮಾಪುರ 1:4; 5:14, 15.

10 ತನ್ನ ಕೇಳುಗರಿಗೆ ಬೈಬಲಿನ ಗಹನ ಸತ್ಯತೆಗಳನ್ನು ವಿವರಿಸಲು ಬಯಸಿದಾಗ ಪೌಲನು ಏನು ಮಾಡಿದನು? ಈ ಅಪೊಸ್ತಲನು ಜಟಿಲವಾದ ಆಧ್ಯಾತ್ಮಿಕ ವಿಚಾರಗಳನ್ನು ಸ್ಪಷ್ಟವಾಗಿ ತಿಳಿಯಪಡಿಸಲಿಕ್ಕಾಗಿ ಸರ್ವಸಾಮಾನ್ಯವಾದ, ಸುಲಭವಾಗಿ ಅರ್ಥಮಾಡಿಕೊಳ್ಳಲ್ಪಡುವ ದೃಷ್ಟಾಂತಗಳನ್ನು ಉಪಯೋಗಿಸುವುದರಲ್ಲಿ ನಿಪುಣನಾಗಿದ್ದನು. ಉದಾಹರಣೆಗೆ, ರೋಮ್‌ನಲ್ಲಿದ್ದ ಜನರು ಆ ಸಾಮ್ರಾಜ್ಯದಾದ್ಯಂತ ಅಸ್ತಿತ್ವದಲ್ಲಿದ್ದ ದಾಸತ್ವ ಪದ್ಧತಿಯ ವಿಷಯದಲ್ಲಿ ಪರಿಚಿತರಾಗಿದ್ದರು ಎಂಬುದು ಪೌಲನಿಗೆ ತಿಳಿದಿತ್ತು. ವಾಸ್ತವದಲ್ಲಿ, ಅವನು ಯಾರಿಗೆ ಪತ್ರವನ್ನು ಬರೆಯುತ್ತಿದ್ದನೋ ಅವರಲ್ಲಿ ಹೆಚ್ಚಿನವರು ದಾಸರಾಗಿದ್ದಿರಬಹುದು. ಆದುದರಿಂದಲೇ, ಪಾಪಕ್ಕೆ ಅಥವಾ ನೀತಿಗೆ ಒಬ್ಬ ವ್ಯಕ್ತಿಯು ವಿಧೇಯನಾಗಲು ಆಯ್ಕೆಮಾಡುವುದರ ಕುರಿತಾದ ತನ್ನ ಪ್ರಬಲ ವಾಗ್ವಾದವನ್ನು ಬೆಂಬಲಿಸಲಿಕ್ಕಾಗಿ ಪೌಲನು ದಾಸತ್ವವನ್ನು ದೃಷ್ಟಾಂತವಾಗಿ ಉಪಯೋಗಿಸಿದನು.​—⁠ರೋಮಾಪುರ 6:16-20.

11 ಪರಾಮರ್ಶೆಯ ಕೃತಿಯೊಂದು ಹೇಳುವಂತೆ, “ರೋಮನ್‌ ಸಂಸ್ಕೃತಿಯಲ್ಲಿ ಯಜಮಾನನು ಒಬ್ಬ ದಾಸನನ್ನು ಯಾವ ಷರತ್ತೂ ಇಲ್ಲದೆ ಸ್ವತಂತ್ರಗೊಳಿಸಸಾಧ್ಯವಿತ್ತು ಅಥವಾ ತನ್ನ ಯಜಮಾನನಿಗೆ ಹಣವನ್ನು ನೀಡುವ ಮೂಲಕ ದಾಸನು ತನ್ನ ಸ್ವಾತಂತ್ರ್ಯವನ್ನು ಖರೀದಿಸಸಾಧ್ಯವಿತ್ತು. ದಾಸನ ಒಡೆತನವನ್ನು ಒಂದು ದೇವತೆಗೆ ವರ್ಗಾಯಿಸುವ ಮೂಲಕವೂ ಸ್ವಾತಂತ್ರ್ಯವನ್ನು ನೀಡುವ ಏರ್ಪಾಡನ್ನು ಮಾಡಸಾಧ್ಯವಿತ್ತು.” ಸ್ವತಂತ್ರನಾದ ದಾಸನೊಬ್ಬನು ಕೂಲಿಯನ್ನು ಪಡೆದುಕೊಂಡು ತನ್ನ ಯಜಮಾನನ ಬಳಿ ಕೆಲಸಮಾಡುವುದನ್ನು ಮುಂದುವರಿಸಸಾಧ್ಯವಿತ್ತು. ಪಾಪ ಮತ್ತು ನೀತಿ ಎಂಬ ಇಬ್ಬರು ಯಜಮಾನರಲ್ಲಿ ಯಾರಿಗೆ ವಿಧೇಯರಾಗಬೇಕು ಎಂಬ ವಿಷಯದಲ್ಲಿ ವ್ಯಕ್ತಿಯೊಬ್ಬನ ಆಯ್ಕೆಯ ಕುರಿತು ಪೌಲನು ಬರೆದಾಗ, ಅವನು ಈ ರೂಢಿಯನ್ನೇ ಪರೋಕ್ಷವಾಗಿ ಸೂಚಿಸಿ ಮಾತಾಡಿದ್ದಿರಬಹುದು. ರೋಮ್‌ನಲ್ಲಿದ್ದ ಕ್ರೈಸ್ತರು ಪಾಪದಿಂದ ಸ್ವತಂತ್ರಗೊಳಿಸಲ್ಪಟ್ಟಿದ್ದರು ಮತ್ತು ಈಗ ದೇವರು ಅವರ ಒಡೆಯನಾಗಿದ್ದನು. ಅವರು ದೇವರ ಸೇವೆಯನ್ನು ಮಾಡಲು ಸ್ವತಂತ್ರರಾಗಿದ್ದರಾದರೂ, ಇಷ್ಟಪಡುವುದಾದರೆ ಈಗಲೂ ಅವರು ತಮ್ಮ ಹಿಂದಿನ ಯಜಮಾನನಾದ ಪಾಪಕ್ಕೆ ದಾಸರಾಗುವ ಆಯ್ಕೆಯನ್ನು ಮಾಡಸಾಧ್ಯವಿತ್ತು. ಸರಳವಾದರೂ ಪರಿಚಿತವಾದ ಈ ದೃಷ್ಟಾಂತವು, ರೋಮ್‌ನಲ್ಲಿದ್ದ ಆ ಕ್ರೈಸ್ತರು ‘ನಾನು ಯಾವ ಯಜಮಾನನ ಸೇವೆಮಾಡುತ್ತಿದ್ದೇನೆ?’ ಎಂದು ಸ್ವತಃ ಕೇಳಿಕೊಳ್ಳುವಂತೆ ಅವರನ್ನು ಪ್ರಚೋದಿಸಲಿತ್ತು. *

ಪೌಲನ ಮಾದರಿಯಿಂದ ಕಲಿಯುವುದು

12 ನಮ್ಮ ವೈವಿಧ್ಯಮಯ ಸಭಿಕರ ಹೃದಯವನ್ನು ತಲಪಬೇಕಾದರೆ, ಪೌಲನಂತೆ ನಾವು ಸಹ ಗಮನಕೊಡುವವರಾಗಿರಬೇಕು, ಹೊಂದಿಕೊಳ್ಳುವ ಮನೋಭಾವದವರಾಗಿರಬೇಕು ಮತ್ತು ವ್ಯವಹಾರಚಾತುರ್ಯವುಳ್ಳವರಾಗಿರಬೇಕು. ಸುವಾರ್ತೆಯನ್ನು ಅರ್ಥಮಾಡಿಕೊಳ್ಳುವಂತೆ ನಮ್ಮ ಕೇಳುಗರಿಗೆ ಸಹಾಯಮಾಡಲಿಕ್ಕಾಗಿ, ಕಾಟಾಚಾರಕ್ಕಾಗಿ ಅವರನ್ನು ಭೇಟಿಯಾಗಿ, ಸಿದ್ಧಪಡಿಸಿರುವ ಸಂದೇಶವೊಂದನ್ನು ತಿಳಿಸಿ, ಯಾವುದಾದರೊಂದು ಬೈಬಲ್‌ ಸಾಹಿತ್ಯವನ್ನು ಕೊಟ್ಟು ಬರುವುದಕ್ಕಿಂತಲೂ ಹೆಚ್ಚನ್ನು ಮಾಡುವ ಅಪೇಕ್ಷೆ ನಮಗಿರಬೇಕು. ನಾವು ಅವರ ಆವಶ್ಯಕತೆಗಳು ಮತ್ತು ಚಿಂತೆಗಳನ್ನು, ಅವರ ಇಷ್ಟಾನಿಷ್ಟಗಳನ್ನು ಹಾಗೂ ಅವರ ಭಯಗಳನ್ನು ಮತ್ತು ಪೂರ್ವಕಲ್ಪಿತ ಅಭಿಪ್ರಾಯಗಳನ್ನು ವಿವೇಚಿಸಿ ತಿಳಿದುಕೊಳ್ಳಲು ಪ್ರಯತ್ನಿಸಬೇಕು. ಇದು ಬಹಳಷ್ಟು ಆಲೋಚನೆ ಮತ್ತು ಪ್ರಯತ್ನವನ್ನು ಅಗತ್ಯಪಡಿಸುತ್ತದಾದರೂ, ಲೋಕವ್ಯಾಪಕವಾಗಿರುವ ರಾಜ್ಯ ಪ್ರಚಾರಕರು ಇದನ್ನು ಅತ್ಯಾಸಕ್ತಿಯಿಂದ ಮಾಡುತ್ತಿದ್ದಾರೆ. ಉದಾಹರಣೆಗೆ, ಹಂಗೆರಿಯಲ್ಲಿರುವ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸ್‌ ಹೀಗೆ ವರದಿಸುತ್ತದೆ: “ಬೇರೆ ರಾಷ್ಟ್ರಗಳ ಜನರ ಪದ್ಧತಿಗಳು ಮತ್ತು ಜೀವನ ಶೈಲಿಗಳಿಗೆ ಸಹೋದರರು ಗೌರವವನ್ನು ತೋರಿಸುತ್ತಾರೆ ಹಾಗೂ ಅವರು ಸ್ಥಳಿಕ ಪದ್ಧತಿಗಳಿಗೆ ಹೊಂದಿಕೊಳ್ಳುವಂತೆ ನಿರೀಕ್ಷಿಸುವುದಿಲ್ಲ.” ಬೇರೆ ಕಡೆಗಳಲ್ಲಿರುವ ಸಾಕ್ಷಿಗಳು ಸಹ ಇದನ್ನೇ ಮಾಡಲು ಪ್ರಯತ್ನಿಸುತ್ತಾರೆ.

13 ದೂರ ಪ್ರಾಚ್ಯದ ಒಂದು ದೇಶದಲ್ಲಿ, ಅಧಿಕಾಂಶ ಜನರು ಆರೋಗ್ಯ, ಮಕ್ಕಳ ತರಬೇತಿ ಮತ್ತು ಶಿಕ್ಷಣದ ವಿಷಯದಲ್ಲಿ ಆಸಕ್ತರಾಗಿದ್ದಾರೆ. ಅಲ್ಲಿನ ರಾಜ್ಯ ಪ್ರಚಾರಕರು ಭೂವ್ಯಾಪಕವಾಗಿ ಹೀನಗೊಳ್ಳುತ್ತಿರುವ ಪರಿಸ್ಥಿತಿಗಳು ಅಥವಾ ಜಟಿಲವಾದ ಸಾಮಾಜಿಕ ಸಮಸ್ಯೆಗಳಂಥ ವಿಷಯಗಳ ಕುರಿತು ಚರ್ಚಿಸುವ ಬದಲು ಈ ವಿಷಯಗಳನ್ನು ಎತ್ತಿತೋರಿಸಲು ಪ್ರಯತ್ನಿಸುತ್ತಾರೆ. ತದ್ರೀತಿಯಲ್ಲಿ, ಯುನೈಟೆಡ್‌ ಸ್ಟೇಟ್ಸ್‌ನ ಒಂದು ದೊಡ್ಡ ನಗರದಲ್ಲಿರುವ ಪ್ರಚಾರಕರು, ತಮ್ಮ ಟೆರಿಟೊರಿಯಲ್ಲಿ ಒಂದು ನಿರ್ದಿಷ್ಟ ನೆರೆಹೊರೆಯಲ್ಲಿರುವ ಜನರು ಭ್ರಷ್ಟಾಚಾರ, ವಾಹನ ಸಂಚಾರದ ದಟ್ಟಣೆ ಮತ್ತು ದುಷ್ಕೃತ್ಯಗಳಂಥ ವಿಷಯಗಳ ಕುರಿತು ಚಿಂತಿತರಾಗಿದ್ದಾರೆ ಎಂಬುದನ್ನು ಗಮನಿಸಿದರು. ಸಾಕ್ಷಿಗಳು ಬೈಬಲ್‌ ಚರ್ಚೆಗಳನ್ನು ಆರಂಭಿಸಲಿಕ್ಕಾಗಿ ಈ ವಿಷಯಗಳನ್ನು ಯಶಸ್ವಿಕರವಾಗಿ ಉಪಯೋಗಿಸುತ್ತಾರೆ. ಪರಿಣಾಮಕಾರಿ ಬೈಬಲ್‌ ಬೋಧಕರು ಶುಶ್ರೂಷೆಯಲ್ಲಿ ತಾವು ಯಾವುದೇ ವಿಷಯವನ್ನು ಆಯ್ಕೆಮಾಡುವುದಾದರೂ, ಅವರು ಸಕಾರಾತ್ಮಕರು ಮತ್ತು ಪ್ರೋತ್ಸಾಹದಾಯಕರು ಹಾಗೂ ಈಗ ಬೈಬಲ್‌ ಮೂಲತತ್ತ್ವಗಳನ್ನು ಅನ್ವಯಿಸಿಕೊಳ್ಳುವುದರ ಪ್ರಾಯೋಗಿಕ ಮೌಲ್ಯವನ್ನು ಮತ್ತು ಭವಿಷ್ಯತ್ತಿಗಾಗಿ ದೇವರು ಕಾದಿರಿಸಿರುವ ಉಜ್ವಲ ಪ್ರತೀಕ್ಷೆಗಳನ್ನು ಒತ್ತಿಹೇಳುವುದನ್ನು ಖಚಿತಪಡಿಸಿಕೊಳ್ಳುತ್ತಾರೆ.​—⁠ಯೆಶಾಯ 48:17, 18; 52:⁠7.

14 ಜನರು ಅತ್ಯಧಿಕ ಮಟ್ಟಿಗೆ ಭಿನ್ನವಾಗಿರುವಂಥ ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಧಾರ್ಮಿಕ ಹಿನ್ನೆಲೆಗಳನ್ನು ಹೊಂದಿರುವುದರಿಂದ, ಶುಶ್ರೂಷೆಯಲ್ಲಿ ನಮ್ಮ ಪ್ರಸ್ತಾಪವನ್ನು ಬದಲಾಯಿಸುವುದು ಸಹ ಸಹಾಯಕರವಾದದ್ದಾಗಿದೆ. ಒಬ್ಬ ಸೃಷ್ಟಿಕರ್ತನಲ್ಲಿ ನಂಬಿಕೆಯಿಡುವ ಆದರೆ ಬೈಬಲಿನಲ್ಲಿ ನಂಬಿಕೆ ಇಡದಿರುವಂಥ ಜನರೊಂದಿಗಿನ ನಮ್ಮ ಪ್ರಸ್ತಾಪವು, ದೇವರು ಅಸ್ತಿತ್ವದಲ್ಲಿಲ್ಲ ಎಂದು ನಂಬುವವರೊಂದಿಗೆ ಮಾತಾಡುವುದಕ್ಕಾಗಿರುವ ಪ್ರಸ್ತಾಪಕ್ಕಿಂತ ಭಿನ್ನವಾಗಿರುವುದು. ಎಲ್ಲ ರೀತಿಯ ಧಾರ್ಮಿಕ ಸಾಹಿತ್ಯವು ಪ್ರಚಾರಕ್ಕಾಗಿರುವ ಒಂದು ಸಾಧನವಾಗಿದೆ ಎಂದು ಭಾವಿಸುವಂಥ ವ್ಯಕ್ತಿಯೊಂದಿಗೆ ಮಾತಾಡುವಾಗ ನಾವು ಉಪಯೋಗಿಸುವ ನಿರೂಪಣೆಯು, ಬೈಬಲ್‌ ಏನನ್ನು ಕಲಿಸುತ್ತದೋ ಅದನ್ನು ಅಂಗೀಕರಿಸುವಂಥ ಒಬ್ಬ ವ್ಯಕ್ತಿಗಾಗಿ ಉಪಯೋಗಿಸುವ ನಿರೂಪಣೆಗಿಂತ ಭಿನ್ನವಾಗಿರುವುದು. ನಾವು ಯಾರೊಂದಿಗೆ ಮಾತಾಡುತ್ತೇವೋ ಆ ಬೇರೆ ಬೇರೆ ಶೈಕ್ಷಣಿಕ ಮಟ್ಟಗಳ ಜನರೊಂದಿಗೆ ವ್ಯವಹರಿಸುವಾಗಲೂ ಹೊಂದಾಣಿಕೆಯನ್ನು ಮಾಡಿಕೊಳ್ಳುವ ಆವಶ್ಯಕತೆಯಿದೆ. ಕೌಶಲಭರಿತ ಬೋಧಕರು, ತಾವು ಎದುರಿಸುವಂಥ ಸನ್ನಿವೇಶಕ್ಕೆ ಸೂಕ್ತವಾಗಿರುವ ತರ್ಕವನ್ನು ಮತ್ತು ದೃಷ್ಟಾಂತಗಳನ್ನು ಉಪಯೋಗಿಸುತ್ತಾರೆ.​—⁠1 ಯೋಹಾನ 5:⁠20.

ಹೊಸ ಶುಶ್ರೂಷಕರಿಗಾಗಿ ಸಹಾಯ

15 ಪೌಲನು ತನ್ನ ಸ್ವಂತ ಬೋಧನಾ ವಿಧಾನಗಳನ್ನು ಮಾತ್ರ ಉತ್ತಮಗೊಳಿಸುವುದರ ಬಗ್ಗೆ ಚಿಂತಿತನಾಗಿರಲಿಲ್ಲ. ಪರಿಣಾಮಕಾರಿ ಶುಶ್ರೂಷಕರಾಗಲಿಕ್ಕಾಗಿ ತಿಮೊಥೆಯ ಹಾಗೂ ತೀತನಂಥ ಯುವ ಜನತೆಗೆ ತರಬೇತಿ ನೀಡುವ ಮತ್ತು ಅವರನ್ನು ಸಿದ್ಧಪಡಿಸುವ ಆವಶ್ಯಕತೆಯನ್ನು ಅವನು ಮನಗಂಡನು. (2 ತಿಮೊಥೆಯ 2:2; 3:10, 14; ತೀತ 1:⁠4) ತದ್ರೀತಿಯಲ್ಲಿ, ಇಂದು ಸಹ ತರಬೇತಿಯನ್ನು ಒದಗಿಸುವ ಮತ್ತು ಪಡೆದುಕೊಳ್ಳುವ ಜರೂರಿ ಆವಶ್ಯಕತೆಯು ಇದೆ.

16 ಇಸವಿ 1914ರಲ್ಲಿ, ಭೂವ್ಯಾಪಕವಾಗಿ ಹೆಚ್ಚುಕಡಿಮೆ 5,000 ಮಂದಿ ರಾಜ್ಯ ಪ್ರಚಾರಕರಿದ್ದರು; ಇಂದು, ಪ್ರತಿ ವಾರ ಸುಮಾರು 5,000 ಮಂದಿ ಹೊಸಬರು ದೀಕ್ಷಾಸ್ನಾನ ಪಡೆದುಕೊಳ್ಳುತ್ತಿದ್ದಾರೆ! (ಯೆಶಾಯ 54:2, 3; ಅ. ಕೃತ್ಯಗಳು 11:21) ಹೊಸಬರು ಕ್ರೈಸ್ತ ಸಭೆಯೊಂದಿಗೆ ಸಹವಾಸಿಸಲು ಆರಂಭಿಸುವಾಗ ಮತ್ತು ಶುಶ್ರೂಷೆಯಲ್ಲಿ ಪಾಲ್ಗೊಳ್ಳಲು ಬಯಸುವಾಗ, ಅವರಿಗೆ ತರಬೇತಿ ಮತ್ತು ಮಾರ್ಗದರ್ಶನದ ಅಗತ್ಯವಿದೆ. (ಗಲಾತ್ಯ 6:6) ಶಿಷ್ಯರಿಗೆ ಬೋಧಿಸುವುದರಲ್ಲಿ ಮತ್ತು ಅವರನ್ನು ತರಬೇತುಗೊಳಿಸುವುದರಲ್ಲಿ ಯಜಮಾನನಾದ ಯೇಸು ಉಪಯೋಗಿಸಿದಂಥ ವಿಧಾನಗಳನ್ನೇ ನಾವು ಉಪಯೋಗಿಸುವುದು ಅತ್ಯಾವಶ್ಯಕವಾದದ್ದಾಗಿದೆ. *

17 ಯೇಸು ಜನರ ಒಂದು ಗುಂಪನ್ನು ಕಂಡ ಕೂಡಲೆ ಅವರೊಂದಿಗೆ ಮಾತಾಡಲಾರಂಭಿಸುವಂತೆ ತನ್ನ ಅಪೊಸ್ತಲರಿಗೆ ತಿಳಿಸಲಿಲ್ಲ. ಮೊದಲಾಗಿ ಅವನು ಸಾರುವ ಕೆಲಸದ ಅಗತ್ಯವನ್ನು ಒತ್ತಿಹೇಳಿದನು ಮತ್ತು ಪ್ರಾರ್ಥನಾಪೂರ್ವಕ ಮನೋಭಾವವನ್ನು ಉತ್ತೇಜಿಸಿದನು. ತದನಂತರ ಅವನು ಮೂರು ಮೂಲಭೂತ ಒದಗಿಸುವಿಕೆಗಳನ್ನು ಮಾಡಿದನು: ಒಬ್ಬ ಸಂಗಡಿಗ, ಒಂದು ಟೆರಿಟೊರಿ ನೇಮಕ ಮತ್ತು ಒಂದು ಸಂದೇಶ. (ಮತ್ತಾಯ 9:35-38; 10:5-7; ಮಾರ್ಕ 6:7; ಲೂಕ 9:2, 6) ನಾವು ಸಹ ಇದನ್ನೇ ಮಾಡಸಾಧ್ಯವಿದೆ. ನಾವು ನಮ್ಮ ಸ್ವಂತ ಮಗುವಿಗೆ ಸಹಾಯಮಾಡುತ್ತಿರಲಿ, ಒಬ್ಬ ಹೊಸ ವಿದ್ಯಾರ್ಥಿಗೆ ಅಥವಾ ಸ್ವಲ್ಪ ಕಾಲಾವಧಿಯಿಂದ ಸಾರುವ ಚಟುವಟಿಕೆಯಲ್ಲಿ ಪಾಲ್ಗೊಳ್ಳದಿದ್ದಂಥ ಒಬ್ಬ ವ್ಯಕ್ತಿಗೆ ಸಹಾಯಮಾಡುತ್ತಿರಲಿ, ಈ ರೀತಿಯಲ್ಲಿ ತರಬೇತಿಯನ್ನು ಒದಗಿಸಲು ಪ್ರಯತ್ನವನ್ನು ಮಾಡುವುದು ಸೂಕ್ತವಾದದ್ದಾಗಿದೆ.

18 ರಾಜ್ಯದ ಸಂದೇಶವನ್ನು ತಿಳಿಯಪಡಿಸುವುದರಲ್ಲಿ ಆತ್ಮವಿಶ್ವಾಸವನ್ನು ಪಡೆಯಲು ಹೊಸಬರಿಗೆ ಬಹಳಷ್ಟು ಸಹಾಯದ ಅಗತ್ಯವಿರುತ್ತದೆ. ಸರಳವಾದ, ಆಸಕ್ತಿಕರವಾಗಿರುವ ನಿರೂಪಣೆಯೊಂದನ್ನು ತಯಾರಿಸಲು ಮತ್ತು ಪ್ರ್ಯಾಕ್ಟಿಸ್‌ ಮಾಡಲು ನೀವು ಅವರಿಗೆ ಸಹಾಯಮಾಡಸಾಧ್ಯವಿದೆಯೋ? ಕ್ಷೇತ್ರ ಸೇವೆಯಲ್ಲಿ, ಮೊದಲ ಕೆಲವು ಮನೆಗಳಲ್ಲಿ ನೀವು ಮಾತಾಡುವಾಗ ಅವರು ನಿಮ್ಮ ಮಾದರಿಯಿಂದ ವಿಷಯಗಳನ್ನು ಕಲಿಯುವಂತೆ ಬಿಡಿರಿ. ನೀವು ಗಿದ್ಯೋನನ ಕಾರ್ಯವಿಧಾನವನ್ನು ಅನುಸರಿಸಿರಿ; ಅವನು ತನ್ನ ಜೊತೆ ಕಾದಾಳುಗಳಿಗೆ ಹೇಳಿದ್ದು: “ನನ್ನನ್ನೇ ನೋಡುತ್ತಾ ನಾನು ಮಾಡುವ ಹಾಗೆ ಮಾಡಿರಿ.” (ನ್ಯಾಯಸ್ಥಾಪಕರು 7:17) ಆ ಬಳಿಕ ಸೇವೆಯಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಆ ಹೊಸಬನಿಗೆ ಕೊಡಿರಿ. ಹೊಸಬರು ಮಾಡುವ ಪ್ರಯತ್ನಗಳಿಗಾಗಿ ಅವರನ್ನು ಹೃತ್ಪೂರ್ವಕವಾಗಿ ಪ್ರಶಂಸಿಸಿರಿ, ಮತ್ತು ಸೂಕ್ತವಾಗಿರುವಾಗ ಪ್ರಗತಿಯನ್ನು ಮಾಡಲಿಕ್ಕಾಗಿ ಚುಟುಕಾದ ಸಲಹೆಗಳನ್ನು ಕೊಡಿರಿ.

19 ‘ನಮಗೆ ನೇಮಿಸಿರುವ ಸೇವೆಯನ್ನು ಲೋಪವಿಲ್ಲದೆ’ ನಡಿಸಲಿಕ್ಕಾಗಿ, ನಮ್ಮ ಪ್ರಸ್ತಾಪದಲ್ಲಿ ಅಗತ್ಯವಿರುವ ಹೆಚ್ಚಿನ ಹೊಂದಾಣಿಕೆಗಳನ್ನು ಮಾಡಿಕೊಳ್ಳಲು ದೃಢನಿರ್ಧಾರವನ್ನು ಮಾಡಿದ್ದೇವೆ ಮತ್ತು ಹೊಸ ಶುಶ್ರೂಷಕರು ಇದನ್ನೇ ಮಾಡಲಿಕ್ಕಾಗಿ ಅವರನ್ನು ತರಬೇತುಗೊಳಿಸಲು ಬಯಸುತ್ತೇವೆ. ನಮ್ಮ ಗುರಿಯು ರಕ್ಷಣೆಗೆ ನಡಿಸುವಂಥ ದೇವರ ಜ್ಞಾನವನ್ನು ಕಲಿಸುವುದೇ ಆಗಿದೆ; ಮತ್ತು ಈ ಗುರಿಯ ಪ್ರಮುಖತೆಯನ್ನು ನಾವು ಪರಿಗಣಿಸುವಾಗ, ‘ಯಾವ ವಿಧದಲ್ಲಿಯಾದರೂ ಕೆಲವರನ್ನು ರಕ್ಷಿಸಬೇಕೆಂದು ಯಾರಾರಿಗೆ ಎಂಥೆಂಥವರಾಗಬೇಕೋ ಅಂಥಂಥವರಾಗಲು’ ನಾವು ಮಾಡುವ ಸರ್ವ ಪ್ರಯತ್ನಗಳು ಸಾರ್ಥಕವಾಗಿವೆ ಎಂಬ ಮನವರಿಕೆ ನಮಗಾಗುತ್ತದೆ.​—⁠2 ತಿಮೊಥೆಯ 4:5; 1 ಕೊರಿಂಥ 9:⁠22.

[ಪಾದಟಿಪ್ಪಣಿಗಳು]

^ ಪ್ಯಾರ. 8 ಪೌಲನ ಶುಶ್ರೂಷೆಯಲ್ಲಿನ ಇಂಥ ಗುಣಗಳ ಉದಾಹರಣೆಗಳಿಗಾಗಿ, ಅ. ಕೃತ್ಯಗಳು 13:9, 16-42; 17:2-4; 18:1-4; 19:11-20; 20:34; ರೋಮಾಪುರ 10:11-15; 2 ಕೊರಿಂಥ 6:11-13ನ್ನು ಪರಿಗಣಿಸಿರಿ.

^ ಪ್ಯಾರ. 15 ತದ್ರೀತಿಯಲ್ಲಿ, ದೇವರು ಮತ್ತು ಆತನ ಆತ್ಮಾಭಿಷಿಕ್ತ “ಪುತ್ರರ” ನಡುವಣ ಹೊಸ ಸಂಬಂಧವನ್ನು ವಿವರಿಸುತ್ತಾ ಪೌಲನು, ರೋಮನ್‌ ಸಾಮ್ರಾಜ್ಯದಲ್ಲಿದ್ದ ತನ್ನ ವಾಚಕರಿಗೆ ಬಹಳಷ್ಟು ಪರಿಚಿತವಾಗಿದ್ದ ಒಂದು ಕಾನೂನುಸಂಬಂಧಿತ ವಿಚಾರವನ್ನು ಉಪಯೋಗಿಸಿದನು. (ರೋಮಾಪುರ 8:14-17, NW) “ದತ್ತುಸ್ವೀಕಾರವು ನಿಜವಾಗಿಯೂ ಒಂದು ರೋಮನ್‌ ಪದ್ಧತಿಯಾಗಿತ್ತು ಮತ್ತು ಕುಟುಂಬದ ಕುರಿತಾದ ರೋಮನ್‌ ವಿಚಾರಧಾರೆಗಳಿಗೆ ನಿಕಟವಾಗಿ ಸಂಬಂಧಿಸಿದ್ದಾಗಿತ್ತು” ಎಂದು ರೋಮ್‌ನಲ್ಲಿ ಸಂತ ಪೌಲ (ಇಂಗ್ಲಿಷ್‌) ಎಂಬ ಪುಸ್ತಕವು ತಿಳಿಸುತ್ತದೆ.

^ ಪ್ಯಾರ. 22 ಸದ್ಯಕ್ಕೆ, ಯೆಹೋವನ ಸಾಕ್ಷಿಗಳ ಎಲ್ಲ ಸಭೆಗಳಲ್ಲಿ ‘ಪಯನೀಯರರು ಇತರರಿಗೆ ನೆರವು ನೀಡುವ’ ಕಾರ್ಯಕ್ರಮವು ಇದೆ. ಈ ಕಾರ್ಯಕ್ರಮವು, ಕಡಿಮೆ ಅನುಭವವಿರುವ ಪ್ರಚಾರಕರಿಗೆ ನೆರವಾಗುವುದರಲ್ಲಿ ಪೂರ್ಣ ಸಮಯದ ಶುಶ್ರೂಷಕರ ಅನುಭವ ಮತ್ತು ತರಬೇತಿಯನ್ನು ಉಪಯೋಗಿಸಿಕೊಳ್ಳುತ್ತದೆ.

ನಿಮಗೆ ನೆನಪಿದೆಯೊ?

• ನಮ್ಮ ಶುಶ್ರೂಷೆಯಲ್ಲಿ ನಾವು ಪೌಲನನ್ನು ಯಾವ ವಿಧಗಳಲ್ಲಿ ಅನುಕರಿಸಸಾಧ್ಯವಿದೆ?

• ನಮ್ಮ ಆಲೋಚನೆಯಲ್ಲಿ ಯಾವ ಬದಲಾವಣೆಗಳನ್ನು ಮಾಡುವ ಆವಶ್ಯಕತೆ ಇರಬಹುದು?

• ನಮ್ಮ ಸಂದೇಶವನ್ನು ನಾವು ಸಕಾರಾತ್ಮಕವಾಗಿ ಇಟ್ಟುಕೊಳ್ಳಸಾಧ್ಯವಿದೆ ಹೇಗೆ?

• ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಲು ಹೊಸ ಶುಶ್ರೂಷಕರಿಗೆ ಯಾವುದರ ಆವಶ್ಯಕತೆಯಿದೆ?

[ಅಧ್ಯಯನ ಪ್ರಶ್ನೆಗಳು]

1, 2. (ಎ) ಯಾವ ವಿಧಗಳಲ್ಲಿ ಅಪೊಸ್ತಲ ಪೌಲನು ಒಬ್ಬ ಪರಿಣಾಮಕಾರಿ ಶುಶ್ರೂಷಕನಾಗಿದ್ದನು? (ಬಿ) ತನ್ನ ನೇಮಕದ ಕಡೆಗಿನ ತನ್ನ ಸ್ವಂತ ಮನೋಭಾವವನ್ನು ಪೌಲನು ಹೇಗೆ ವರ್ಣಿಸಿದನು?

3. ತನ್ನ ಮತಾಂತರಕ್ಕೆ ಮುಂಚೆ ಪೌಲನಿಗೆ ಕ್ರೈಸ್ತರ ಕಡೆಗೆ ಯಾವ ಭಾವನೆಯಿತ್ತು?

4. ತನ್ನ ನೇಮಕವನ್ನು ಪೂರೈಸಲಿಕ್ಕಾಗಿ ಪೌಲನು ಯಾವ ಹೊಂದಾಣಿಕೆಯನ್ನು ಮಾಡಬೇಕಾಯಿತು?

5. ನಮ್ಮ ಶುಶ್ರೂಷೆಯಲ್ಲಿ ನಾವು ಹೇಗೆ ಪೌಲನನ್ನು ಅನುಕರಿಸಸಾಧ್ಯವಿದೆ?

6. ಪೌಲನು ತನ್ನ ಕೇಳುಗರ ಹಿನ್ನೆಲೆಗೆ ಹೇಗೆ ಗಮನಕೊಡುವವನಾಗಿದ್ದನು, ಮತ್ತು ಇದರ ಫಲಿತಾಂಶವೇನಾಗಿತ್ತು?

7. ಲುಸ್ತ್ರದಲ್ಲಿ ಜನರ ಒಂದು ಗುಂಪಿಗೆ ಸಾರುತ್ತಿದ್ದಾಗ, ಪೌಲನು ಹೊಂದಿಕೊಳ್ಳುವ ಮನೋಭಾವವನ್ನು ಹೇಗೆ ತೋರಿಸಿದನು?

8. ಕೆಲವೊಮ್ಮೆ ಪೌಲನಿಗೆ ಬಲವಾದ ಅನಿಸಿಕೆಗಳಿದ್ದವಾದರೂ, ತಾನು ಹೊಂದಿಕೊಳ್ಳುವ ಭಾವದವನಾಗಿದ್ದೇನೆ ಎಂಬುದನ್ನು ಪೌಲನು ಯಾವ ವಿಧಗಳಲ್ಲಿ ತೋರಿಸಿದನು?

9. ಭಿನ್ನ ಭಿನ್ನ ಸಭಿಕರೊಂದಿಗೆ ವ್ಯವಹರಿಸುವಾಗ ಪೌಲನು ವ್ಯವಹಾರಚಾತುರ್ಯವನ್ನು ಹೇಗೆ ತೋರಿಸಿದನು?

10, 11. ಪೌಲನು ತನ್ನ ದೃಷ್ಟಾಂತಗಳನ್ನು ಕೇಳುಗರಿಗೆ ತಕ್ಕಂತೆ ಹೇಗೆ ಹೊಂದಿಸಿಕೊಂಡನು? (ಪಾದಟಿಪ್ಪಣಿಯನ್ನು ಸಹ ನೋಡಿ.)

12, 13. (ಎ) ನಮ್ಮ ವೈವಿಧ್ಯಮಯ ಸಭಿಕರ ಹೃದಯವನ್ನು ತಲಪಲಿಕ್ಕಾಗಿ ಇಂದು ನಾವು ಯಾವ ಪ್ರಯತ್ನವನ್ನು ಮಾಡುವ ಅಗತ್ಯವಿದೆ? (ಬಿ) ಭಿನ್ನ ಹಿನ್ನೆಲೆಗಳಿಂದ ಬಂದಿರುವ ಜನರಿಗೆ ಸಾರುವಾಗ ಯಾವ ಸಂಗತಿಯು ಪರಿಣಾಮಕಾರಿಯಾಗಿರುವುದನ್ನು ನೀವು ಕಂಡುಕೊಂಡಿದ್ದೀರಿ?

14. ಜನರ ಬೇರೆ ಬೇರೆ ಆವಶ್ಯಕತೆಗಳು ಮತ್ತು ಸನ್ನಿವೇಶಗಳಿಗೆ ನಾವು ಹೊಂದಿಕೊಳ್ಳಸಾಧ್ಯವಿರುವ ವಿಧಗಳನ್ನು ವಿವರಿಸಿರಿ.

15, 16. ಹೊಸ ಶುಶ್ರೂಷಕರನ್ನು ತರಬೇತುಗೊಳಿಸುವ ಆವಶ್ಯಕತೆ ಏಕಿದೆ?

17, 18. ಹೊಸಬರು ಶುಶ್ರೂಷೆಯಲ್ಲಿ ಆತ್ಮವಿಶ್ವಾಸವನ್ನು ಪಡೆಯಲು ನಾವು ಹೇಗೆ ಸಹಾಯಮಾಡಸಾಧ್ಯವಿದೆ?

19. ‘ನಿಮಗೆ ನೇಮಿಸಿರುವ ಸೇವೆಯನ್ನು ನೀವು ಲೋಪವಿಲ್ಲದೆ ನಡಿಸಲು’ ಪ್ರಯತ್ನಿಸುವಾಗ ನಿಮ್ಮ ದೃಢನಿರ್ಧಾರವೇನಾಗಿದೆ?

[ಪುಟ 29ರಲ್ಲಿರುವ ಸಂಕ್ಷಿಪ್ತ ವಿವರಣೆ]

ಅಪೊಸ್ತಲ ಪೌಲನು ಸಾರುವುದರಲ್ಲಿ ಮತ್ತು ಬೋಧಿಸುವುದರಲ್ಲಿ ಗಮನಕೊಡುವವನಾಗಿದ್ದನು, ಹೊಂದಿಕೊಳ್ಳುವ ಮನೋಭಾವದವನಾಗಿದ್ದನು ಮತ್ತು ವ್ಯವಹಾರಚಾತುರ್ಯವುಳ್ಳವನಾಗಿದ್ದನು

[ಪುಟ 31ರಲ್ಲಿರುವ ಸಂಕ್ಷಿಪ್ತ ವಿವರಣೆ]

ಯೇಸು ತನ್ನ ಶಿಷ್ಯರಿಗೆ ಮೂರು ಮೂಲಭೂತ ಒದಗಿಸುವಿಕೆಗಳನ್ನು ಮಾಡಿದನು: ಒಬ್ಬ ಸಂಗಡಿಗ, ಒಂದು ಟೆರಿಟೊರಿ ನೇಮಕ ಮತ್ತು ಒಂದು ಸಂದೇಶ

[ಪುಟ 28ರಲ್ಲಿರುವ ಚಿತ್ರಗಳು]

ಹೊಂದಿಕೊಳ್ಳುವವನಾಗಿರುವ ಮೂಲಕ ಪೌಲನು ಬೇರೆ ಬೇರೆ ಸಭಿಕರನ್ನು ತಲಪುವುದರಲ್ಲಿ ಸಫಲನಾದನು

[ಪುಟ 30ರಲ್ಲಿರುವ ಚಿತ್ರ]

ಪರಿಣಾಮಕಾರಿ ಶುಶ್ರೂಷಕರು ತಮ್ಮ ಕೇಳುಗರ ಸಾಂಸ್ಕೃತಿಕ ಹಿನ್ನೆಲೆಯನ್ನು ಗಣನೆಗೆ ತೆಗೆದುಕೊಳ್ಳುತ್ತಾರೆ

[ಪುಟ 31ರಲ್ಲಿರುವ ಚಿತ್ರ]

ಪ್ರಗತಿಪರ ಶುಶ್ರೂಷಕರು ಹೊಸಬರನ್ನು ಶುಶ್ರೂಷೆಗಾಗಿ ಸಿದ್ಧಪಡಿಸುತ್ತಾರೆ