ಇಟ್ಯಾಲಿಯನ್ ಭಾಷೆಯಲ್ಲಿ—ಬೈಬಲ್ ಒಂದು ಪ್ರಕ್ಷುಬ್ಧ ಇತಿಹಾಸ
ಇಟ್ಯಾಲಿಯನ್ ಭಾಷೆಯಲ್ಲಿ—ಬೈಬಲ್ ಒಂದು ಪ್ರಕ್ಷುಬ್ಧ ಇತಿಹಾಸ
“ನಮ್ಮ ದೇಶದಲ್ಲಿ [ಇಟಲಿಯಲ್ಲಿ] ಅತಿ ವ್ಯಾಪಕವಾಗಿ ವಿತರಿಸಲ್ಪಟ್ಟಿರುವ ಪುಸ್ತಕಗಳಲ್ಲಿ ಬೈಬಲ್ ಒಂದಾಗಿದೆ, ಆದರೆ ಅದೇ ಸಮಯದಲ್ಲಿ ಅದು ಬಹುಶಃ ತೀರ ಕಡಿಮೆ ಜನರಿಂದ ಓದಲ್ಪಟ್ಟಿರುವ ಪುಸ್ತಕಗಳಲ್ಲಿ ಒಂದಾಗಿದೆ. ಈಗಲೂ ಧರ್ಮನಿಷ್ಠ ಕ್ಯಾಥೊಲಿಕರಿಗೆ ಬೈಬಲಿನೊಂದಿಗೆ ಪರಿಚಿತರಾಗುವಂತೆ ಯಾವುದೇ ಉತ್ತೇಜನವು ಕೊಡಲ್ಪಡುತ್ತಿಲ್ಲ ಮತ್ತು ಅದನ್ನು ದೇವರ ವಾಕ್ಯವಾಗಿ ಓದಲೂ ಸಹಾಯವು ಕೊಡಲ್ಪಡುತ್ತಿಲ್ಲ. ಬೈಬಲಿನ ಕುರಿತು ತಿಳಿದುಕೊಳ್ಳಲು ಇಷ್ಟಪಡುವವರು ಇದ್ದಾರೆ, ಆದರೆ ಅವರಿಗೆ ಅದನ್ನು ಕಲಿಸಲು ಯಾರೂ ಇಲ್ಲ.”
ಇಸವಿ 1995ರಲ್ಲಿ ಇಟಲಿಯ ಬಿಷಪರ ಮಂಡಲಿಯ ಸಭೆಯಲ್ಲಿ ನುಡಿಯಲ್ಪಟ್ಟ ಈ ಹೇಳಿಕೆಯು ಅನೇಕ ಪ್ರಶ್ನೆಗಳನ್ನು ಎಬ್ಬಿಸುತ್ತದೆ. ಗತ ಶತಮಾನಗಳಲ್ಲಿ ಇಟಲಿಯಲ್ಲಿ ಬೈಬಲ್ ಎಷ್ಟು ವ್ಯಾಪಕವಾಗಿ ಓದಲ್ಪಟ್ಟಿತು? ಬೇರೆ ದೇಶಗಳಲ್ಲಿನ ವಿತರಣೆಗೆ ಹೋಲಿಸುವಾಗ ಇಲ್ಲಿ ಇದರ ವಿತರಣೆಯು ಏಕೆ ಕಡಿಮೆಯಾಗಿತ್ತು? ಈಗಲೂ ಇಟಲಿಯಲ್ಲಿ ತೀರ ಕಡಿಮೆ ಜನರಿಂದ ಓದಲ್ಪಟ್ಟಿರುವ ಪುಸ್ತಕಗಳಲ್ಲಿ ಇದು ಒಂದಾಗಿರುವುದು ಏಕೆ? ಬೈಬಲಿನ ಇಟ್ಯಾಲಿಯನ್ ಭಾಷಾಂತರಗಳ ಇತಿಹಾಸದ ಕುರಿತಾದ ಪರಿಶೀಲನೆಯು ಕೆಲವೊಂದು ಉತ್ತರಗಳನ್ನು ನೀಡುತ್ತದೆ.
ಇಟ್ಯಾಲಿಯನ್, ಪೋರ್ಚುಗೀಸ್, ಫ್ರೆಂಚ್, ಸ್ಪ್ಯಾನಿಷ್ ಇನ್ನು ಮುಂತಾದ ರೋಮಾನ್ಸ್ ಭಾಷೆಗಳು ಲ್ಯಾಟಿನ್ ಭಾಷೆಯಿಂದ ವಿಕಸಿತಗೊಳ್ಳಲು ಶತಮಾನಗಳೇ ಹಿಡಿದವು. ಲ್ಯಾಟಿನ್ ಹಿನ್ನೆಲೆಯಿರುವ ಬೇರೆ ಬೇರೆ ಐರೋಪ್ಯ ದೇಶಗಳಲ್ಲಿ, ಸಾಮಾನ್ಯ ಜನರ ಆಡುಭಾಷೆಯಾದ ದೇಶೀಯ ಭಾಷೆಯು ಕಾಲಕ್ರಮೇಣ ವಿಶೇಷ ಮಾನ್ಯತೆಯನ್ನು ಪಡೆಯಿತು ಮತ್ತು ಸಾಹಿತ್ಯ ಕೃತಿಗಳಲ್ಲಿಯೂ ಉಪಯೋಗಿಸಲ್ಪಟ್ಟಿತು. ದೇಶೀಯ ಭಾಷೆಯ ವಿಕಸನವು ಬೈಬಲ್ ಭಾಷಾಂತರದ ಮೇಲೆ ನೇರವಾದ ಪರಿಣಾಮವನ್ನು ಬೀರಿತು. ಹೇಗೆ? ಇತಿಹಾಸದ ಒಂದು ಹಂತದಲ್ಲಿ, ಕ್ಯಾಥೊಲಿಕ್ ಚರ್ಚಿನಿಂದ ಉಪಯೋಗಿಸಲ್ಪಡುತ್ತಿದ್ದ ಅಧಿಕೃತ ಲ್ಯಾಟಿನ್ ಭಾಷೆ ಮತ್ತು ದೇಶೀಯ ಭಾಷೆ ಹಾಗೂ ಅದರ ಭಾಷಾಪ್ರಭೇದಗಳು ಮತ್ತು ಸ್ಥಳಿಕವಾದ ವಿಭಿನ್ನ ರೂಪಗಳ ನಡುವಣ ಅಂತರವು ಎಷ್ಟು ದೊಡ್ಡದಾಯಿತೆಂದರೆ, ವ್ಯವಸ್ಥಿತ ಶಿಕ್ಷಣವಿಲ್ಲದವರು ಲ್ಯಾಟಿನ್ ಭಾಷೆಯನ್ನು ಅರ್ಥಮಾಡಿಕೊಳ್ಳಲು ಅಶಕ್ತರಾಗಿದ್ದರು.
ಇಸವಿ 1000ದಷ್ಟಕ್ಕೆ, ಇಟ್ಯಾಲಿಯನ್ ದ್ವೀಪಕಲ್ಪದ ಅಧಿಕಾಂಶ ನಿವಾಸಿಗಳು ಲ್ಯಾಟಿನ್ ವಲ್ಗೆಟ್ ಬೈಬಲಿನ ಒಂದು ಪ್ರತಿಯನ್ನು ಪಡೆದುಕೊಳ್ಳಸಾಧ್ಯವಿತ್ತಾದರೂ, ಅದನ್ನು ಓದುವುದು ಅವರಿಗೆ ತುಂಬ ಕಷ್ಟಕರವಾಗಿದ್ದಿರಸಾಧ್ಯವಿತ್ತು. ಅನೇಕ ಶತಮಾನಗಳ ವರೆಗೆ ಕ್ಯಾಥೊಲಿಕ್ ಚರ್ಚಿನ ಪಾದ್ರಿಗಳ ಆಡಳಿತವು, ಆಗ ಅಸ್ತಿತ್ವದಲ್ಲಿದ್ದ ಕೆಲವೇ ವಿಶ್ವವಿದ್ಯಾನಿಲಯಗಳಲ್ಲಿ ಏನು ಕಲಿಸಲ್ಪಡುತ್ತಿತ್ತೋ ಅದನ್ನು ಒಳಗೊಂಡು ಸರ್ವ ಶಿಕ್ಷಣ ವ್ಯವಸ್ಥೆಯನ್ನು ನಿಯಂತ್ರಿಸುತ್ತಿತ್ತು. ಕೇವಲ ಗಣ್ಯ ವ್ಯಕ್ತಿಗಳ ವರ್ಗವು ಮಾತ್ರ ಇದರಿಂದ ಪ್ರಯೋಜನ ಪಡೆಯಿತು. ಆದುದರಿಂದ, ಬೈಬಲ್ ಕಾಲಕ್ರಮೇಣ “ಅಜ್ಞಾತ ಪುಸ್ತಕ”ವಾಗಿ ಪರಿಣಮಿಸಿತು. ಆದರೂ ಅನೇಕರು ದೇವರ ವಾಕ್ಯವನ್ನು ತಮ್ಮ ಸ್ವಂತ ಭಾಷೆಯಲ್ಲಿ ಪಡೆಯಲು ಮತ್ತು ಅದನ್ನು ಅರ್ಥಮಾಡಿಕೊಳ್ಳಲು ಬಯಸಿದರು.
ಒಟ್ಟಿನಲ್ಲಿ ಪಾದ್ರಿವರ್ಗವು ಬೈಬಲ್ ಭಾಷಾಂತರವನ್ನು ವಿರೋಧಿಸಿತು, ಏಕೆಂದರೆ ಇದು ಪಾಷಂಡಮತಗಳೆಂದು ಕರೆಯಲ್ಪಡುತ್ತಿದ್ದ ಮತಗಳ ಹಬ್ಬುವಿಕೆಯನ್ನು ಉತ್ತೇಜಿಸುವುದು ಎಂಬ ಭಯ ಅವರಿಗಿತ್ತು. ಮಾಸ್‌ಸೇಮೊ ಫೀರ್‌ಪೊ ಎಂಬ ಇತಿಹಾಸಗಾರನಿಗನುಸಾರ, “ದೇಶೀಯ ಭಾಷೆಯ ಉಪಯೋಗವು, ಧಾರ್ಮಿಕ ವಿಚಾರಗಳ ಮೇಲೆ ಪಾದ್ರಿವರ್ಗಕ್ಕಿದ್ದ ಏಕೈಕ ಆಧಿಪತ್ಯವನ್ನು ಸಂರಕ್ಷಿಸುತ್ತಿದ್ದ ಭಾಷಾ ತಡೆಯನ್ನು [ಲ್ಯಾಟಿನ್ ಭಾಷೆಯ ಉಪಯೋಗ]
ತೆಗೆದುಹಾಕುವ [ಅರ್ಥದಲ್ಲಿತ್ತು].” ಆದುದರಿಂದ ಸಾಂಸ್ಕೃತಿಕ, ಧಾರ್ಮಿಕ ಮತ್ತು ಸಾಮಾಜಿಕ ಅಂಶಗಳ ಸಂಯೋಗವು, ಈಗಲೂ ಇಟಲಿಯಲ್ಲಿ ಅಸ್ತಿತ್ವದಲ್ಲಿರುವ ಬೈಬಲ್ ಶಿಕ್ಷಣದ ಕೊರತೆಗೆ ಕಾರಣವಾಗಿದೆ.ಬೈಬಲಿನ ಪ್ರಥಮ ಭಾಗಶಃ ಭಾಷಾಂತರಗಳು
ಹದಿಮೂರನೆಯ ಶತಮಾನದಲ್ಲಿ, ಲ್ಯಾಟಿನ್ ಭಾಷೆಯಿಂದ ಇಟ್ಯಾಲಿಯನ್ ಭಾಷೆಗೆ ಬೈಬಲ್ ಪುಸ್ತಕಗಳ ಪ್ರಥಮ ಭಾಷಾಂತರಗಳು ಮಾಡಲ್ಪಟ್ಟವು. ಈ ರೀತಿಯಲ್ಲಿ ಭಾಷಾಂತರಿಸಲ್ಪಟ್ಟ ಬೈಬಲಿನ ಭಾಗಗಳು ಹಸ್ತಲಿಖಿತ ಪ್ರತಿಗಳಾಗಿದ್ದವು ಮತ್ತು ತುಂಬ ದುಬಾರಿಯಾಗಿದ್ದವು. 14ನೆಯ ಶತಮಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಷಾಂತರಗಳು ಮಾಡಲ್ಪಟ್ಟ ಕಾರಣ, ಬಹುಮಟ್ಟಿಗೆ ಇಡೀ ಬೈಬಲ್ ಇಟ್ಯಾಲಿಯನ್ ಭಾಷೆಯಲ್ಲಿ ಲಭ್ಯಗೊಳಿಸಲ್ಪಟ್ಟಿತು. ಆದರೆ ಅದರ ಪುಸ್ತಕಗಳು ಬೇರೆ ಬೇರೆ ಜನರಿಂದ ಬೇರೆ ಬೇರೆ ಕಾಲಾವಧಿಗಳಲ್ಲಿ ಮತ್ತು ಸ್ಥಳಗಳಲ್ಲಿ ಭಾಷಾಂತರಿಸಲ್ಪಟ್ಟಿದ್ದವು. ಅನಾಮಿಕ ಭಾಷಾಂತರಕಾರರಿಂದ ಮಾಡಲ್ಪಟ್ಟ ಈ ಭಾಷಾಂತರಗಳಲ್ಲಿ ಹೆಚ್ಚಿನವು, ಧನಿಕರು ಮತ್ತು ಸುಶಿಕ್ಷಿತ ಜನರಿಂದ ಕೊಂಡುಕೊಳ್ಳಲ್ಪಡುತ್ತಿದ್ದವು; ಇಂಥವರು ಮಾತ್ರವೇ ಇವುಗಳನ್ನು ಖರೀದಿಸಶಕ್ತರಾಗಿದ್ದರು. ಮುದ್ರಣದ ಉಪಯೋಗವು ಪುಸ್ತಕಗಳ ಬೆಲೆಯನ್ನು ಗಮನಾರ್ಹವಾದ ರೀತಿಯಲ್ಲಿ ಕಡಿಮೆಗೊಳಿಸಿದರೂ, ಜೇಲ್ಯೋಲಾ ಫ್ರಾನ್ಯೇಟೊ ಎಂಬ ಇತಿಹಾಸಗಾರ್ತಿಗನುಸಾರ, ಬೈಬಲುಗಳು “ಕೆಲವೇ ಮಂದಿಗೆ ಮಾತ್ರ ಲಭ್ಯವಿದ್ದವು.”
ಶತಮಾನಗಳ ವರೆಗೆ ಜನಸಂಖ್ಯೆಯಲ್ಲಿ ಹೆಚ್ಚು ಮಂದಿ ಅನಕ್ಷರಸ್ಥರಾಗಿಯೇ ಉಳಿದರು. 1861ರಲ್ಲಿ ಇಟಲಿಯ ಏಕೀಕರಣದ ಸಮಯದಲ್ಲಿಯೂ ಜನಸಂಖ್ಯೆಯ 74.7 ಪ್ರತಿಶತ ಮಂದಿ ಅನಕ್ಷರಸ್ಥರಾಗಿದ್ದರು. ಹೊಸ ಇಟ್ಯಾಲಿಯನ್ ಸರಕಾರವು ಸರ್ವರಿಗಾಗಿ ಉಚಿತವಾದ ಮತ್ತು ಕಡ್ಡಾಯವಾದ ಸಾರ್ವಜನಿಕ ಶಿಕ್ಷಣವನ್ನು ಲಭ್ಯಗೊಳಿಸಲು ಸಿದ್ಧವಾಗಿದ್ದಾಗ, ಈ ನಿಯಮವನ್ನು ವಿರೋಧಿಸುವಂತೆ ರಾಜನನ್ನು ಉತ್ತೇಜಿಸುತ್ತಾ 1870ರಲ್ಲಿ IXನೆಯ ಪೋಪ್ ಪಿಯುಸ್ ಅವನಿಗೆ ಪತ್ರವನ್ನು ಬರೆದನು; ಈ ನಿಯಮವನ್ನು ಪೋಪನು “ಕ್ಯಾಥೊಲಿಕ್ ಶಾಲೆಗಳನ್ನು ಸಂಪೂರ್ಣವಾಗಿ ನಾಶಮಾಡುವ” ಗುರಿಯುಳ್ಳ ಒಂದು “ಪಿಡುಗು” ಎಂದು ವರ್ಣಿಸಿದನು.
ಇಟ್ಯಾಲಿಯನ್ ಭಾಷೆಯಲ್ಲಿ ಪ್ರಥಮ ಸಂಪೂರ್ಣ ಬೈಬಲ್
ಯೂರೋಪ್‌ನಲ್ಲಿ ಚಲಿಸುವ ಅಚ್ಚುಮೊಳೆಗಳನ್ನು ಉಪಯೋಗಿಸಿ ಮಾಡಲ್ಪಡುವ ಮುದ್ರಣವು ಪ್ರಥಮವಾಗಿ ಉಪಯೋಗಿಸಲ್ಪಟ್ಟು ಸುಮಾರು 16 ವರ್ಷಗಳು ಕಳೆದ ಬಳಿಕ, 1471ರಲ್ಲಿ ಇಟ್ಯಾಲಿಯನ್ ಭಾಷೆಯ ಪ್ರಥಮ ಸಂಪೂರ್ಣ ಬೈಬಲ್ ವೆನಿಸ್‌ನಲ್ಲಿ ಮುದ್ರಿಸಲ್ಪಟ್ಟಿತು. ಒಬ್ಬ ಕ್ಯಾಮಲ್‌ಡೊಲಿ ಸಂನ್ಯಾಸಿಯಾಗಿದ್ದ ನೀಕೋಲೊ ಮಾಲರ್‌ಬೇ ಎಂಟು ತಿಂಗಳುಗಳಲ್ಲಿ ತನ್ನ ಭಾಷಾಂತರವನ್ನು ಸಿದ್ಧಪಡಿಸಿದನು. ಅವನು ಈಗಾಗಲೇ ಅಸ್ತಿತ್ವದಲ್ಲಿದ್ದ ಭಾಷಾಂತರಗಳ ಮೇಲೆ ಹೆಚ್ಚಾಗಿ ಅವಲಂಬಿಸಿದನು, ಲ್ಯಾಟಿನ್ ವಲ್ಗೆಟ್‌ನ ಆಧಾರದ ಮೇಲೆ ಅವುಗಳನ್ನು ಪರಿಷ್ಕರಿಸಿದನು ಮತ್ತು ಕೆಲವು ಪದಗಳ ಸ್ಥಾನದಲ್ಲಿ ತನ್ನ ಸ್ವಕ್ಷೇತ್ರವಾಗಿದ್ದ ವೆನೆಷಿಯದಲ್ಲಿ ಸರ್ವಸಾಮಾನ್ಯವಾಗಿ ಉಪಯೋಗಿಸಲ್ಪಡುತ್ತಿದ್ದ ಪದಗಳನ್ನು ಸೇರಿಸಿದನು. ಅವನ ಭಾಷಾಂತರವು ಇಟ್ಯಾಲಿಯನ್ ಭಾಷೆಯ ಪ್ರಥಮ ಮುದ್ರಿತ ಮುದ್ರಣವಾಗಿದ್ದು ವ್ಯಾಪಕವಾಗಿ ವಿತರಿಸಲ್ಪಟ್ಟಿತು.
ವೆನಿಸ್‌ನಲ್ಲಿ ಬೈಬಲಿನ ಇನ್ನೊಂದು ಭಾಷಾಂತರವನ್ನು ಪ್ರಕಾಶಿಸಿದಂಥ ಇನ್ನೊಬ್ಬ ವ್ಯಕ್ತಿಯು ಆಂಟೊನ್ಯೊ ಬ್ರೂಖೋಲಿ ಆಗಿದ್ದನು. ಅವನು ಪ್ರಾಟೆಸ್ಟಂಟ್ ವಿಚಾರಧಾರೆಗಳಿದ್ದ ಒಬ್ಬ ಮಾನವತಾವಾದಿಯಾಗಿದ್ದನು, ಆದರೆ ಅವನೆಂದೂ ಅಧಿಕೃತವಾಗಿ ಕ್ಯಾಥೊಲಿಕ್ ಚರ್ಚಿನೊಂದಿಗೆ ಸಂಬಂಧವನ್ನು ಕಡಿದುಕೊಳ್ಳಲಿಲ್ಲ. 1532ರಲ್ಲಿ ಬ್ರೂಖೋಲಿ ಮೂಲ ಹೀಬ್ರು ಮತ್ತು ಗ್ರೀಕ್‌ನಿಂದ ಬೈಬಲನ್ನು ಭಾಷಾಂತರಿಸಿದನು. ಇದು ಮೂಲ ಗ್ರಂಥಪಾಠಗಳಿಂದ ಇಟ್ಯಾಲಿಯನ್ ಭಾಷೆಗೆ ಭಾಷಾಂತರಿಸಲ್ಪಟ್ಟ ಪ್ರಥಮ ಬೈಬಲಾಗಿತ್ತು. ಇದು ಅತ್ಯುತ್ತಮವಾದ ಸಾಹಿತ್ಯಕ ಇಟ್ಯಾಲಿಯನ್ ಶೈಲಿಯಲ್ಲಿ ಬರೆಯಲ್ಪಟ್ಟಿರಲಿಲ್ಲ, ಆದರೂ ಆ ದಿನಗಳಲ್ಲಿ ಪುರಾತನ ಭಾಷೆಗಳ ಕುರಿತಾದ ಪರಿಮಿತ ಜ್ಞಾನವನ್ನು ಪರಿಗಣನೆಗೆ ತೆಗೆದುಕೊಳ್ಳುವಾಗ, ಈ ಭಾಷಾಂತರವು ಮೂಲ ಗ್ರಂಥಪಾಠಗಳಿಗೆ ನಿಕಟವಾಗಿ ಅಂಟಿಕೊಂಡಿರುವುದು ಗಮನಾರ್ಹವಾದದ್ದಾಗಿದೆ. ಬ್ರೂಖೋಲಿಯು ಕೆಲವು ಸ್ಥಳಗಳಲ್ಲಿ ಮತ್ತು ಮುದ್ರಣಗಳಲ್ಲಿ ದೇವರ ಹೆಸರನ್ನು “ಯೆಓವಾ” ಎಂಬ ರೂಪದಲ್ಲಿ ಪುನಸ್ಸ್ಥಾಪಿಸಿದ್ದಾನೆ. ಸುಮಾರು ಒಂದು ಶತಮಾನದ ವರೆಗೆ ಇಟ್ಯಾಲಿಯನ್ ಪ್ರಾಟೆಸ್ಟಂಟರು ಹಾಗೂ ಧಾರ್ಮಿಕ ಭಿನ್ನಮತೀಯರ ನಡುವೆ ಅವನ ಬೈಬಲ್ ತುಂಬ ಜನಪ್ರಿಯವಾಗಿತ್ತು.
ಇತರ ಇಟ್ಯಾಲಿಯನ್ ಭಾಷಾಂತರಗಳಲ್ಲಿ ಕೆಲವು ಭಾಷಾಂತರಗಳು ಕ್ಯಾಥೊಲಿಕರಿಂದ ಪ್ರಕಟಿಸಲ್ಪಟ್ಟವು. ವಾಸ್ತವದಲ್ಲಿ ಇವು ಬ್ರೂಖೋಲಿಯ ಬೈಬಲ್‌ನ ಪರಿಷ್ಕರಣಗಳಾಗಿದ್ದವು. ಇವುಗಳಲ್ಲಿ ಯಾವುವೂ ಗಮನಾರ್ಹ ರೀತಿಯಲ್ಲಿ ವಿತರಿಸಲ್ಪಡಲಿಲ್ಲ. 1607ರಲ್ಲಿ, ಜೋವಾನ್ನೀ ಡಿಯೋಡಾಟೇ ಎಂಬ ಕ್ಯಾಲ್ವಿನಿಸ್ಟ್ ಪಾಸ್ಟರನು—ಇವನ ಹೆತ್ತವರು ಧಾರ್ಮಿಕ ಹಿಂಸೆಯಿಂದ ತಪ್ಪಿಸಿಕೊಳ್ಳಲಿಕ್ಕಾಗಿ ಸ್ವಿಟ್ಸರ್ಲೆಂಡ್‌ಗೆ ಪಲಾಯನಗೈದಿದ್ದರು—ಮೂಲ ಭಾಷೆಗಳಿಂದ ಇಟ್ಯಾಲಿಯನ್ ಭಾಷೆಗೆ ಇನ್ನೊಂದು ಭಾಷಾಂತರವನ್ನು ಜಿನಿವಾದಲ್ಲಿ ಪ್ರಕಟಿಸಿದನು. ಅವನ ಭಾಷಾಂತರವು ಅನೇಕ ಶತಮಾನಗಳ ವರೆಗೆ ಇಟ್ಯಾಲಿಯನ್ ಪ್ರಾಟೆಸ್ಟಂಟರು ಉಪಯೋಗಿಸಿದ ಬೈಬಲಾಗಿ ಪರಿಣಮಿಸಿತು. ಇದು ಸಿದ್ಧಪಡಿಸಲ್ಪಟ್ಟ ಕಾಲಾವಧಿಯಲ್ಲಿ, ಇದನ್ನು ಅತ್ಯುತ್ತಮವಾದ ಇಟ್ಯಾಲಿಯನ್ ಭಾಷಾಂತರವಾಗಿ ಪರಿಗಣಿಸಲಾಯಿತು. ಡಿಯೋಡಾಟೇಯ ಬೈಬಲ್, ಇಟಲಿಯವರು ಬೈಬಲ್ ಬೋಧನೆಗಳನ್ನು ಗ್ರಹಿಸುವಂತೆ ಸಹಾಯಮಾಡಿತು. ಆದರೆ ಪಾದ್ರಿವರ್ಗದ ಸೆನ್ಸರ್‌ಗಿರಿಯು ಈ ಬೈಬಲಿನ ಹಾಗೂ ಇತರ ಭಾಷಾಂತರಗಳ ವಿತರಣೆಗೆ ಅಡ್ಡಬಂತು.
ಬೈಬಲ್—“ಒಂದು ಅಜ್ಞಾತ ಪುಸ್ತಕ”
“ಪುಸ್ತಕಗಳ ಮೇಲೆ ನಿಗಾವಣೆ ಇಡುವ ಕೆಲಸವನ್ನು ಚರ್ಚು ಯಾವಾಗಲೂ ಯಶಸ್ವಿಕರವಾಗಿ ಪೂರೈಸಿದೆ, ಆದರೆ ಮುದ್ರಣದ ಆವಿಷ್ಕಾರಕ್ಕೆ ಮುಂಚೆ ನಿಷೇಧಿತ ಪುಸ್ತಕಗಳ ಒಂದು ಪಟ್ಟಿಯನ್ನು ಸಂಕಲಿಸುವ ಅಗತ್ಯದ ಅನಿಸಿಕೆ ಅದಕ್ಕಾಗಲಿಲ್ಲ, ಏಕೆಂದರೆ ಅಪಾಯಕರವಾಗಿ ಪರಿಗಣಿಸಲ್ಪಡುತ್ತಿದ್ದ ಬರಹಗಳನ್ನು ಸುಟ್ಟುಹಾಕಲಾಗುತ್ತಿತ್ತು”
ಎಂದು ಎನ್‌ಚೇಕ್ಲೋಪಿಡೀಆ ಕಾಟೊಲೀಕಾ ತಿಳಿಸುತ್ತದೆ. ಪ್ರಾಟೆಸ್ಟಂಟ್ ಸುಧಾರಣೆಯ ಆರಂಭದ ಬಳಿಕವೂ, ಅನೇಕ ಐರೋಪ್ಯ ದೇಶಗಳ ಪಾದ್ರಿಗಳು ಪಾಷಂಡವಾದಿ ಪುಸ್ತಕಗಳೆಂದು ಕರೆಯಲ್ಪಡುತ್ತಿದ್ದ ಪುಸ್ತಕಗಳ ವಿತರಣೆಯನ್ನು ಮಿತಗೊಳಿಸಲಿಕ್ಕಾಗಿ ತಮ್ಮಿಂದಾದುದೆಲ್ಲವನ್ನೂ ಮಾಡಿದರು. ಆದರೆ 1546ರಲ್ಲಿ ಟ್ರೆಂಟ್‌ನ ಸಮಾಲೋಚನ ಸಭೆಯ ಬಳಿಕ ಗಮನಾರ್ಹ ಬದಲಾವಣೆಯು ಉಂಟಾಯಿತು; ಆಗ ದೇಶೀಯ ಭಾಷೆಗಳಲ್ಲಿ ಬೈಬಲ್ ಭಾಷಾಂತರಗಳ ಕುರಿತಾದ ಪ್ರಶ್ನೆಯು ಪರಿಗಣಿಸಲ್ಪಟ್ಟಿತು. ಎರಡು ಭಿನ್ನ ಅಭಿಪ್ರಾಯಗಳು ವ್ಯಕ್ತಪಡಿಸಲ್ಪಟ್ಟವು. ಭಾಷಾಂತರಗಳ ನಿಷೇಧದ ಪಕ್ಷದಲ್ಲಿದ್ದವರು, ಸಾಮಾನ್ಯ ಭಾಷೆಯಲ್ಲಿ ಭಾಷಾಂತರಿಸಲ್ಪಡುವ ಬೈಬಲು “ಎಲ್ಲ ಪಾಷಂಡಮತಗಳ ಮೂಲ ಮತ್ತು ಉಗಮ” ಆಗಿದೆಯೆಂದು ಪ್ರತಿಪಾದಿಸಿದರು. ನಿಷೇಧದ ವಿರುದ್ಧ ಪಕ್ಷದಲ್ಲಿದ್ದವರು, ಕ್ಯಾಥೊಲಿಕ್ ಚರ್ಚು “ಮೋಸ ಮತ್ತು ವಂಚನೆಯನ್ನು” ಮರೆಮಾಚಲಿಕ್ಕಾಗಿ ದೇಶೀಯ ಭಾಷೆಯಲ್ಲಿ ಬೈಬಲ್ ಭಾಷಾಂತರವನ್ನು ನಿಷೇಧಿಸುತ್ತದೆಂದು ತಮ್ಮ “ಎದುರಾಳಿಗಳು” ಅಂದರೆ ಪ್ರಾಟೆಸ್ಟಂಟರು ವಾಗ್ವಾದಿಸುವರು ಎಂದು ತಿಳಿಸಿದರು.ಒಮ್ಮತವು ಇಲ್ಲದಿದ್ದ ಕಾರಣ ಸಮಾಲೋಚನ ಸಭೆಯು ಈ ವಿವಾದದ ವಿಷಯದಲ್ಲಿ ನಿಶ್ಚಿತ ನಿರ್ಧಾರವನ್ನು ತೆಗೆದುಕೊಳ್ಳಲಿಲ್ಲ, ಆದರೆ ವಲ್ಗೆಟ್ ಭಾಷಾಂತರದ ವಿಶ್ವಾಸಾರ್ಹತೆಗೆ ಅದು ಅಧಿಕೃತ ಒಪ್ಪಿಗೆಯನ್ನು ನೀಡಿತು. ಈ ಭಾಷಾಂತರವು ಕ್ಯಾಥೊಲಿಕ್ ಚರ್ಚಿಗೆ ಪ್ರಮಾಣಬದ್ಧ ಗ್ರಂಥಪಾಠವಾಗಿ ಪರಿಣಮಿಸಿತು. ಆದರೆ, ರೋಮ್‌ನ ಪಾಂಟಿಫಿಕಲ್ ಯೂನಿವರ್ಸಿಟಿ ಸಾಲಸ್ಯಾನುಮ್‌ನಲ್ಲಿ ಶಿಕ್ಷಕರಾಗಿರುವ ಕಾರ್ಲೋ ಬೂಡ್‌ಸೆಟೀ ತಿಳಿಸಿದ್ದೇನೆಂದರೆ, ವಲ್ಗೆಟ್ ಭಾಷಾಂತರವನ್ನು “ವಿಶ್ವಾಸಾರ್ಹ” ಎಂದು ಕರೆದದ್ದು, “ವಾಸ್ತವದಲ್ಲಿ ಅದೊಂದೇ ಬೈಬಲಿನ ನ್ಯಾಯಸಮ್ಮತ ರೂಪವಾಗಿರಲಿತ್ತು ಎಂಬ ವಿಚಾರವನ್ನು ಸಮ್ಮತಿಸಿತು.” ತದನಂತರದ ವಿಕಸನಗಳು ಇದನ್ನು ದೃಢೀಕರಿಸಿದವು.
ಇಸವಿ 1559ರಲ್ಲಿ IVನೆಯ ಪೋಪ್ ಪೌಲ್, ನಿಷೇಧಿತ ಪುಸ್ತಕಗಳ ಅಂದರೆ ಕ್ಯಾಥೊಲಿಕರು ಓದಲು, ಮಾರಲು, ಭಾಷಾಂತರಿಸಲು ಅಥವಾ ಹೊಂದಿರಲು ನಿಷೇಧಿಸಲ್ಪಟ್ಟಿದ್ದಂಥ ಕೃತಿಗಳ ಪ್ರಥಮ ವಿಷಯಸೂಚಿಯನ್ನು ಪ್ರಕಟಿಸಿದನು. ಅದರಲ್ಲಿ ಸೂಚಿಸಲ್ಪಟ್ಟ ಸಂಪುಟಗಳು ಕೆಟ್ಟವುಗಳು ಮತ್ತು ನಂಬಿಕೆಗೆ ಹಾಗೂ ನೈತಿಕ ಸಮಗ್ರತೆಗೆ ಅಪಾಯಕರವಾದವುಗಳಾಗಿ ಪರಿಗಣಿಸಲ್ಪಟ್ಟಿದ್ದವು. ಈ ವಿಷಯಸೂಚಿಯು, ಬ್ರೂಖೋಲಿಯ ಭಾಷಾಂತರವನ್ನೂ ಸೇರಿಸಿ ದೇಶೀಯ ಭಾಷಾಂತರಗಳ ವಾಚನವನ್ನು ನಿಷೇಧಿಸಿತ್ತು. ಈ ನಿಯಮವನ್ನು ಉಲ್ಲಂಘಿಸಿದವರನ್ನು ಬಹಿಷ್ಕರಿಸಲಾಗುತ್ತಿತ್ತು. 1596ರ ವಿಷಯಸೂಚಿಯು ಇನ್ನೂ ಹೆಚ್ಚು ನಿರ್ಬಂಧಕವಾಗಿತ್ತು. ಅಂದಿನಿಂದ ದೇಶೀಯ ಭಾಷೆಯಲ್ಲಿ ಬೈಬಲ್‌ಗಳನ್ನು ಭಾಷಾಂತರಿಸಲು ಅಥವಾ ಮುದ್ರಿಸಲು ಅಧಿಕಾರವು ನೀಡಲ್ಪಡುತ್ತಿರಲಿಲ್ಲ. ಇಂಥ ಬೈಬಲ್‌ಗಳನ್ನು ನಾಶಪಡಿಸಬೇಕಾಗಿತ್ತು.
ಇದರ ಫಲಿತಾಂಶವಾಗಿ, 16ನೇ ಶತಮಾನವು ಕೊನೆಗೊಂಡ ಬಳಿಕ ಚರ್ಚ್ ಚೌಕಗಳಲ್ಲಿ ಬೈಬಲುಗಳ ಸುಡುವಿಕೆಯು ಅತ್ಯಧಿಕಗೊಂಡಿತು. ಒಟ್ಟಿನಲ್ಲಿ ಜನರ ಮನಸ್ಸುಗಳಲ್ಲಿ ಬೈಬಲು ಪಾಷಂಡಿಗಳ ಪುಸ್ತಕವೆಂಬ ವಿಚಾರವು ಮೂಡಿತು ಮತ್ತು ಈ ವಿಚಾರಧಾರೆಯು ಈಗಲೂ ಅಸ್ತಿತ್ವದಲ್ಲಿದೆ. ಸಾರ್ವಜನಿಕ ಹಾಗೂ ಖಾಸಗಿ ಗ್ರಂಥಾಲಯಗಳಲ್ಲಿದ್ದ ಬಹುಮಟ್ಟಿಗೆ ಎಲ್ಲ ಬೈಬಲ್‌ಗಳು ಮತ್ತು ಬೈಬಲ್ ವ್ಯಾಖ್ಯಾನಗಳು ನಾಶಪಡಿಸಲ್ಪಟ್ಟವು ಮತ್ತು ತದನಂತರದ 200 ವರ್ಷಗಳ ವರೆಗೆ ಯಾವ ಕ್ಯಾಥೊಲಿಕನೂ ಇಟ್ಯಾಲಿಯನ್ ಭಾಷೆಗೆ ಬೈಬಲನ್ನು ಭಾಷಾಂತರಿಸಲಿಲ್ಲ. ಕೇವಲ ಪ್ರಾಟೆಸ್ಟಂಟ್ ವಿದ್ವಾಂಸರಿಂದ ಭಾಷಾಂತರಿಸಲ್ಪಟ್ಟ ಬೈಬಲ್‌ಗಳು ಇಟ್ಯಾಲಿಯನ್ ದ್ವೀಪಕಲ್ಪದಲ್ಲಿ ಗುಪ್ತವಾಗಿ ವಿತರಿಸಲ್ಪಟ್ಟವು; ಆದರೂ ಅವು ಕಸಿದುಕೊಳ್ಳಲ್ಪಡುತ್ತವೆಂಬ ಭಯವಿತ್ತು. ಇತಿಹಾಸಗಾರ ಮಾರ್ಯೋ ಚೇನ್ಯೋನೀ ಹೇಳುವುದು: “ವಾಸ್ತವದಲ್ಲಿ, ಚರ್ಚಿನ ಸದಸ್ಯರಿಂದ ಬೈಬಲ್ ವಾಚನ ಮಾಡಲ್ಪಡುವುದು ಅನೇಕ ಶತಮಾನಗಳ ವರೆಗೆ ಸಂಪೂರ್ಣವಾಗಿ ನಿಂತುಹೋಯಿತು.
ಬೈಬಲು ಬಹುಮಟ್ಟಿಗೆ ಒಂದು ಅಜ್ಞಾತ ಪುಸ್ತಕವಾಗಿ ಪರಿಣಮಿಸಿತು, ಮತ್ತು ಇಟಲಿಯ ಕೋಟಿಗಟ್ಟಲೆ ಜನರು ತಮ್ಮ ಇಡೀ ಜೀವಮಾನಕಾಲದಲ್ಲಿ ಬೈಬಲಿನ ಒಂದು ಪುಟವನ್ನೂ ಎಂದೂ ಓದಿರಲಿಲ್ಲ.”ನಿಷೇಧವು ಕಡಿಮೆಯಾದದ್ದು
ಸಮಯಾನಂತರ, 1757, ಜೂನ್ 13ನೆಯ ತಾರೀಖಿನ ವಿಷಯಸೂಚಿಯ ಕುರಿತಾದ ಒಂದು ಶಾಸನದಲ್ಲಿ, XIVನೆಯ ಪೋಪ್ ಬೆನಡಿಕ್ಟ್ ಹಿಂದಿನ ಲಿಖಿತ ನಿಯಮವನ್ನು ಮಾರ್ಪಡಿಸಿದನು ಮತ್ತು ಇದರಿಂದಾಗಿ “ರೋಮನ್ ಮಠಾಧಿಪತ್ಯದಿಂದ ಸಮ್ಮತಿಸಲ್ಪಟ್ಟ ಹಾಗೂ ಬಿಷಪರ ಮಾರ್ಗದರ್ಶನದ ಕೆಳಗೆ ಪ್ರಕಟಿಸಲ್ಪಟ್ಟ ದೇಶೀಯ ಭಾಷೆಯ ಭಾಷಾಂತರಗಳ ವಾಚನವನ್ನು ಅನುಮತಿಸಲಾಯಿತು.” ಇದರ ಫಲಿತಾಂಶವಾಗಿ, ಸಮಯಾನಂತರ ಫ್ಲಾರೆನ್ಸ್‌ನ ಆರ್ಚ್‌ಬಿಷಪನಾಗಿ ಪರಿಣಮಿಸಿದಂಥ ಆಂಟೊನ್ಯೊ ಮಾರ್ಟಿನಿ ವಲ್ಗೆಟ್‌ನಿಂದ ಭಾಷಾಂತರಿಸಲು ಸಿದ್ಧನಾದನು. ಇದರ ಪ್ರಥಮ ಭಾಗವು 1769ರಲ್ಲಿ ಪ್ರಕಟಿಸಲ್ಪಟ್ಟಿತು ಮತ್ತು 1781ರಲ್ಲಿ ಈ ಕೃತಿಯು ಪೂರ್ಣಗೊಳಿಸಲ್ಪಟ್ಟಿತು. ಒಂದು ಕ್ಯಾಥೊಲಿಕ್ ಮೂಲಕ್ಕನುಸಾರ, ಮಾರ್ಟಿನಿಯ ಭಾಷಾಂತರವು “ನಿರ್ದಿಷ್ಟವಾಗಿ ಹೆಸರಿಸಲು ನಿಜವಾಗಿಯೂ ಅರ್ಹವಾದ ಪ್ರಥಮ ಇಟ್ಯಾಲಿಯನ್ ಭಾಷಾಂತರ”ವಾಗಿತ್ತು. ಈ ಭಾಷಾಂತರವು ಪ್ರಕಟಿಸಲ್ಪಡುವ ತನಕ, ಲ್ಯಾಟಿನ್ ಭಾಷೆಯನ್ನು ಅರ್ಥಮಾಡಿಕೊಳ್ಳಲು ಅಸಮರ್ಥರಾಗಿದ್ದ ಕ್ಯಾಥೊಲಿಕರು ಚರ್ಚಿನಿಂದ ಅಧಿಕೃತವಾಗಿ ಅಂಗೀಕರಿಸಲ್ಪಟ್ಟಿದ್ದ ಬೈಬಲನ್ನು ಓದಲು ಅಶಕ್ತರಾಗಿದ್ದರು. ಮುಂದಿನ 150 ವರ್ಷಗಳ ವರೆಗೆ, ಇಟಲಿಯ ಕ್ಯಾಥೊಲಿಕರಿಗೆ ಸಮ್ಮತಿಸಲ್ಪಟ್ಟಿದ್ದ ಏಕಮಾತ್ರ ಭಾಷಾಂತರವು ಮಾರ್ಟಿನಿಯ ಭಾಷಾಂತರವಾಗಿತ್ತು.
ವ್ಯಾಟಿಕನ್ IIರ ವಿಶ್ವಕ್ರೈಸ್ತ ಸಮ್ಮೇಳನದಲ್ಲಿ ಒಂದು ಪ್ರಮುಖ ಬದಲಾವಣೆಯು ಸಂಭವಿಸಿತು. 1965ರಲ್ಲಿ ಡೈ ವರ್ಬುಮ್ ಎಂಬ ಅಧಿಕೃತ ಪತ್ರವು, “ವಿಶೇಷವಾಗಿ ಪವಿತ್ರ ಪುಸ್ತಕಗಳ ಮೂಲ ಗ್ರಂಥಪಾಠಗಳಿಂದ ಬೇರೆ ಬೇರೆ ಭಾಷೆಗಳಿಗೆ . . . ಸೂಕ್ತವಾದ ಮತ್ತು ನಿಷ್ಕೃಷ್ಟವಾದ ಭಾಷಾಂತರಗಳನ್ನು” ಮಾಡುವಂತೆ ಪ್ರಥಮ ಬಾರಿಗೆ ಉತ್ತೇಜಿಸಿತು. ಇದಕ್ಕೆ ಸ್ವಲ್ಪ ಮುಂಚೆ ಅಂದರೆ 1958ರಲ್ಲಿ, ಪೊಂಟೀಫೀಚೋ ಈಸ್ಟೇಟೂಟೊ ಬೇಬ್ಲೀಕೊ (ಪಾಂಟಿಫಿಕಲ್ ಬಿಬ್ಲಿಕಲ್ ಇನ್‌ಸ್ಟಿಟ್ಯೂಟ್) “ಮೂಲ ಗ್ರಂಥಪಾಠಗಳಿಂದ ಪ್ರಥಮ ಸಂಪೂರ್ಣ ಕ್ಯಾಥೊಲಿಕ್ ಭಾಷಾಂತರವನ್ನು” ಪ್ರಕಟಿಸಿತು. ಈ ಭಾಷಾಂತರವು ಕೆಲವು ಸ್ಥಳಗಳಲ್ಲಿ ದೇವರ ಹೆಸರನ್ನು “ಜಾಹ್ವೆ” ಎಂಬ ರೂಪದಲ್ಲಿ ಪುನಸ್ಸ್ಥಾಪಿಸಿತು.
ದೇಶೀಯ ಭಾಷೆಯ ಬೈಬಲುಗಳಿಗೆ ತೋರಿಸಲ್ಪಟ್ಟ ವಿರೋಧವು ತುಂಬ ಹಾನಿಕರವಾಗಿತ್ತು ಮತ್ತು ಅದರ ಪರಿಣಾಮಗಳು ಈಗಲೂ ಉಳಿದಿವೆ. ಜೇಲ್ಯೋಲಾ ಫ್ರಾನ್ಯೇಟೊಳಿಂದ ಹೇಳಲ್ಪಟ್ಟಂತೆ, “ವಿಶ್ವಾಸಿಗಳು ಆಲೋಚಿಸುವ ಹಾಗೂ ತಮ್ಮ ಮನಸ್ಸಾಕ್ಷಿಯನ್ನು ಅವಲಂಬಿಸುವ ತಮ್ಮ ಸ್ವಂತ ಸಾಮರ್ಥ್ಯವನ್ನು ಸಂಶಯಿಸುವಂಥ” ಪರಿಣಾಮವನ್ನು ಅದು ಬೀರಿದೆ. ಅಷ್ಟುಮಾತ್ರವಲ್ಲದೆ, ಧಾರ್ಮಿಕ ಸಂಪ್ರದಾಯಗಳು ಸಹ ವಿಧಿಸಲ್ಪಟ್ಟಿವೆ ಮತ್ತು ಇವುಗಳನ್ನು ಅನೇಕ ಕ್ಯಾಥೊಲಿಕರು ಬೈಬಲಿಗಿಂತಲೂ ಹೆಚ್ಚು ಪ್ರಾಮುಖ್ಯವಾಗಿ ಪರಿಗಣಿಸುತ್ತಾರೆ. ಅಧಿಕಾಂಶ ಜನರು ಈಗ ಓದಶಕ್ತರಾಗಿರುವುದಾದರೂ, ಈ ಎಲ್ಲ ಕಾರಣಗಳು ಜನರನ್ನು ಶಾಸ್ತ್ರವಚನಗಳಿಂದ ವಿಮುಖರಾಗುವಂತೆ ಮಾಡಿವೆ.
ಆದರೆ ಇಟಲಿಯಲ್ಲಿ ಯೆಹೋವನ ಸಾಕ್ಷಿಗಳ ಸೌವಾರ್ತಿಕ ಕೆಲಸವು ಇಟ್ಯಾಲಿಯನ್ ಭಾಷೆಯ ಬೈಬಲಿನಲ್ಲಿ ಜನರಿಗೆ ಹೊಸ ಆಸಕ್ತಿಯನ್ನು ಕೆರಳಿಸಿದೆ. 1963ರಲ್ಲಿ ಯೆಹೋವನ ಸಾಕ್ಷಿಗಳು ಇಟ್ಯಾಲಿಯನ್ ಭಾಷೆಯಲ್ಲಿ ಕ್ರೈಸ್ತ ಗ್ರೀಕ್ ಶಾಸ್ತ್ರದ ನೂತನ ಲೋಕ ಭಾಷಾಂತರವನ್ನು ಪ್ರಕಟಿಸಿದರು. 1967ರಲ್ಲಿ ಇಡೀ ಬೈಬಲ್ ಲಭ್ಯಗೊಳಿಸಲ್ಪಟ್ಟಿತು. ಇಟಲಿಯೊಂದರಲ್ಲೇ ಈ ಭಾಷಾಂತರದ 40,00,000ಕ್ಕಿಂತಲೂ ಹೆಚ್ಚಿನ ಪ್ರತಿಗಳು ವಿತರಿಸಲ್ಪಟ್ಟಿವೆ. ಯೆಹೋವ ಎಂಬ ದೇವರ ಹೆಸರನ್ನು ತನ್ನ ಗ್ರಂಥಪಾಠದಲ್ಲಿ ಉಪಯೋಗಿಸಿರುವ ಈ ನೂತನ ಲೋಕ ಭಾಷಾಂತರವು, ಮೂಲ ಗ್ರಂಥಪಾಠಗಳ ಅರ್ಥಕ್ಕೆ ಕಟ್ಟುನಿಟ್ಟಾಗಿ ಅಂಟಿಕೊಂಡಿರುವ ವೈಶಿಷ್ಟ್ಯವುಳ್ಳದ್ದಾಗಿದೆ.
ಯೆಹೋವನ ಸಾಕ್ಷಿಗಳು ಮನೆಯಿಂದ ಮನೆಗೆ ಹೋಗುತ್ತಾ ಕಿವಿಗೊಡುವವರೆಲ್ಲರಿಗೆ ನಿರೀಕ್ಷೆಯ ಶಾಸ್ತ್ರೀಯ ಸಂದೇಶವನ್ನು ಓದಿಹೇಳಿ, ವಿವರಿಸುತ್ತಾರೆ. (ಅ. ಕೃತ್ಯಗಳು 20:20) ಮುಂದಿನ ಬಾರಿ ನೀವು ಯೆಹೋವನ ಸಾಕ್ಷಿಗಳನ್ನು ಸಂಧಿಸುವಾಗ, ಅತಿ ಬೇಗನೆ ತಾನು ಒಂದು “ನೂತನಭೂಮಂಡಲವನ್ನು” ಸ್ಥಾಪಿಸುವೆನು ಮತ್ತು ಅದರಲ್ಲಿ “ನೀತಿಯು ವಾಸವಾಗಿರುವದು” ಎಂಬ ದೇವರ ಅದ್ಭುತಕರ ವಾಗ್ದಾನದ ಕುರಿತು ನಿಮ್ಮ ಸ್ವಂತ ಬೈಬಲ್ ಏನು ಹೇಳುತ್ತದೆ ಎಂಬುದನ್ನು ನಿಮಗೆ ತೋರಿಸುವಂತೆ ಅವರನ್ನು ಕೇಳಬಾರದೇಕೆ?—2 ಪೇತ್ರ 3:13.
[ಪುಟ 13ರಲ್ಲಿರುವ ಭೂಪಟ]
(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)
ವೆನಿಸ್
ರೋಮ್
[ಪುಟ 15ರಲ್ಲಿರುವ ಚಿತ್ರ]
ಬ್ರೂಖೋಲಿಯ ಭಾಷಾಂತರವು ಅದರ ಗ್ರಂಥಪಾಠದಲ್ಲಿ ದೇವರ ಯೆಓವಾ ಎಂಬ ಹೆಸರನ್ನು ಉಪಯೋಗಿಸಿತು
[ಪುಟ 15ರಲ್ಲಿರುವ ಚಿತ್ರ]
ನಿಷೇಧಿತ ಪುಸ್ತಕಗಳ ವಿಷಯಸೂಚಿಯು, ಇಟ್ಯಾಲಿಯನ್ ಭಾಷೆಯ ಬೈಬಲ್ ಭಾಷಾಂತರಗಳು ಅಪಾಯಕರವೆಂದು ಪಟ್ಟಿಮಾಡಿತು
[ಪುಟ 13ರಲ್ಲಿರುವ ಚಿತ್ರ ಕೃಪೆ]
ಬೈಬಲಿನ ಶೀರ್ಷಿಕೆ ಪುಟ: Biblioteca Nazionale Centrale di Roma
[ಪುಟ 15ರಲ್ಲಿರುವ ಚಿತ್ರ ಕೃಪೆ]
ಬ್ರೂಖೋಲಿಯ ಭಾಷಾಂತರ: Biblioteca Nazionale Centrale di Roma; ವಿಷಯಸೂಚಿ: Su concessione del Ministero per i Beni e le Attività Culturali