ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕ್ರಿಸ್ಮಸ್‌ ಕಾಲವು ಯಾವುದಕ್ಕೆ ಪ್ರಮುಖತೆಯನ್ನು ನೀಡುತ್ತದೆ?

ಕ್ರಿಸ್ಮಸ್‌ ಕಾಲವು ಯಾವುದಕ್ಕೆ ಪ್ರಮುಖತೆಯನ್ನು ನೀಡುತ್ತದೆ?

ಕ್ರಿಸ್ಮಸ್‌ ಕಾಲವು ಯಾವುದಕ್ಕೆ ಪ್ರಮುಖತೆಯನ್ನು ನೀಡುತ್ತದೆ?

ಕೋಟಿಗಟ್ಟಲೆ ಜನರಿಗೆ ಹಬ್ಬದ ಕಾಲವು ಕುಟುಂಬದೊಂದಿಗೆ ಮತ್ತು ಸ್ನೇಹಿತರೊಂದಿಗೆ ಇರುವ, ಪ್ರೀತಿಯ ಬಂಧಗಳನ್ನು ನವೀಕರಿಸುವ ಒಂದು ಸಮಯವಾಗಿರುತ್ತದೆ. ಇನ್ನೂ ಅನೇಕರು ಇದನ್ನು ಯೇಸು ಕ್ರಿಸ್ತನ ಜನನ ಮತ್ತು ಮಾನವಕುಲದ ರಕ್ಷಣೆಯಲ್ಲಿ ಅವನು ವಹಿಸಿದ ಪಾತ್ರದ ಕುರಿತು ಮನನಮಾಡುವ ಸಮಯವಾಗಿ ಪರಿಗಣಿಸುತ್ತಾರೆ. ಅನೇಕ ದೇಶಗಳಲ್ಲಿರುವ ಸನ್ನಿವೇಶಕ್ಕೆ ಭಿನ್ನವಾಗಿ, ರಷ್ಯದಲ್ಲಿನ ಜನರಿಗೆ ಕ್ರಿಸ್ಮಸ್‌ ಹಬ್ಬವನ್ನು ಆಚರಿಸಲು ಯಾವಾಗಲೂ ಅನುಮತಿ ಇರಲಿಲ್ಲ. ಅನೇಕ ಶತಮಾನಗಳ ವರೆಗೆ ರಷ್ಯದ ಆರ್ತಡಾಕ್ಸ್‌ ಚರ್ಚಿಗೆ ಸೇರಿದವರು ಯಾವುದೇ ಮುಚ್ಚುಮರೆಯಿಲ್ಲದೆ ಕ್ರಿಸ್ಮಸ್‌ ಹಬ್ಬವನ್ನು ಆಚರಿಸುತ್ತಿದ್ದರಾದರೂ, 20ನೆಯ ಶತಮಾನದ ಅಧಿಕಾಂಶ ಕಾಲಾವಧಿಯಲ್ಲಿ ಅವರು ಹೀಗೆ ಮಾಡಲು ಅನುಮತಿಸಲ್ಪಟ್ಟಿರಲಿಲ್ಲ. ಈ ಬದಲಾವಣೆಗೆ ಕಾರಣವೇನಾಗಿತ್ತು?

ಇಸವಿ 1917ರ ಬಾಲ್ಶೇವಿಕ್‌ ಕ್ರಾಂತಿಯ ಬಳಿಕ, ಸೋವಿಯಟ್‌ ಅಧಿಕಾರಿಗಳು ದೇಶದಾದ್ಯಂತ ನಾಸ್ತಿಕತೆಯ ಆಕ್ರಮಣಶೀಲ ಧೋರಣೆಯನ್ನು ಜಾರಿಗೆ ತಂದರು. ಆಗ ಇಡೀ ಕ್ರಿಸ್ಮಸ್‌ ಹಬ್ಬದ ಕಾಲ ಮತ್ತು ಅದರ ಧಾರ್ಮಿಕ ಸೂಚ್ಯಾರ್ಥಗಳು ಅಸ್ವೀಕರಣೀಯವಾದವು. ಸರಕಾರವು ಕ್ರಿಸ್ಮಸ್‌ ಮತ್ತು ಹೊಸ ವರ್ಷದ ಆಚರಣೆಗಳಿಗೆ ವಿರುದ್ಧವಾಗಿ ಕಾರ್ಯಾಚರಣೆಯನ್ನು ನಡೆಸತೊಡಗಿತು. ಕ್ರಿಸ್ಮಸ್‌ ಮರ ಮತ್ತು ಡೈಡ್‌ ಮರೋಸ್‌ ಅಥವಾ ರಷ್ಯದಲ್ಲಿ ಸ್ಯಾಂಟ ಕ್ಲಾಸ್‌ಗೆ ತುಲನಾತ್ಮಕವಾದ ಹಿಮತಾತ ಫ್ರಾಸ್ಟ್‌ನಂಥ ಕ್ರಿಸ್ಮಸ್‌ ಕಾಲದ ಸ್ಥಳಿಕ ಸಂಕೇತಗಳನ್ನು ಬಹಿರಂಗವಾಗಿ ಖಂಡಿಸಲಾಯಿತು.

ಇಸವಿ 1935ರಲ್ಲಿ ಆದ ಒಂದು ಬದಲಾವಣೆಯು, ರಷ್ಯದವರು ಹಬ್ಬದ ಕಾಲವನ್ನು ಆಚರಿಸುತ್ತಿದ್ದ ವಿಧವನ್ನೇ ಸಂಪೂರ್ಣವಾಗಿ ಮಾರ್ಪಡಿಸಿಬಿಟ್ಟಿತು. ಸೋವಿಯಟ್‌ನವರು ಹಿಮತಾತ ಫ್ರಾಸ್ಟ್‌, ಕ್ರಿಸ್ಮಸ್‌ ಮರ ಮತ್ತು ಹೊಸ ವರ್ಷದ ಆಚರಣೆಯನ್ನು ಪುನಸ್ಸ್ಥಾಪಿಸಿದರು, ಆದರೆ ಈಗ ಗಮನಾರ್ಹವಾದ ಭಿನ್ನತೆಯಿತ್ತು. ಕ್ರಿಸ್ಮಸ್‌ ಹಬ್ಬದ ದಿನದಂದು ಅಲ್ಲ ಬದಲಾಗಿ ಹೊಸ ವರ್ಷದ ದಿನದಂದು ಹಿಮತಾತ ಫ್ರಾಸ್ಟ್‌ ಉಡುಗೊರೆಗಳನ್ನು ತರುತ್ತಾನೆ ಎಂದು ಹೇಳಲಾಗುತ್ತಿತ್ತು. ಅದೇ ರೀತಿಯಲ್ಲಿ, ಅಂದಿನಿಂದ ಒಂದು ಕ್ರಿಸ್ಮಸ್‌ ಮರವು ಹೊಸ ವರ್ಷದ ಮರವಾಗಿರಲಿಕ್ಕಿತ್ತು! ಹೀಗೆ, ಸೋವಿಯಟ್‌ ಯೂನಿಯನ್‌ನಲ್ಲಿ ಯಾವುದಕ್ಕೆ ಪ್ರಮುಖತೆ ನೀಡಬೇಕಾಗಿತ್ತೋ ಅದರಲ್ಲಿ ಗಮನಾರ್ಹ ಬದಲಾವಣೆಯು ಉಂಟಾಯಿತು. ಈಗ ಕ್ರಿಸ್ಮಸ್‌ ಹಬ್ಬದ ಸ್ಥಾನವನ್ನು ಹೊಸ ವರ್ಷದ ಆಚರಣೆಯು ಆಕ್ರಮಿಸಿತು.

ಕ್ರಿಸ್ಮಸ್‌ ಕಾಲವು ಸಂಪೂರ್ಣವಾಗಿ ಅಧಾರ್ಮಿಕವಾದ ಹಬ್ಬದ ಸಂದರ್ಭವಾಗಿ ಪರಿಣಮಿಸಿತು, ಅಧಿಕೃತವಾಗಿ ಯಾವುದೇ ಧಾರ್ಮಿಕ ಅರ್ಥವಿಲ್ಲದ್ದಾಗಿ ಬಿಟ್ಟಿತು. ಹೊಸ ವರ್ಷದ ಮರವು ಧಾರ್ಮಿಕ ಆಲಂಕಾರಿಕ ವಸ್ತುಗಳಿಂದಲ್ಲ ಬದಲಾಗಿ ಸೋವಿಯಟ್‌ ಯೂನಿಯನ್‌ನ ಪ್ರಗತಿಯನ್ನು ಚಿತ್ರಿಸುವಂಥ ಐಹಿಕ ವಸ್ತುಗಳಿಂದ ಅಲಂಕರಿಸಲ್ಪಟ್ಟಿತು. ರಷ್ಯದ ವಾಕ್‌ರೂಗ್‌ ಸ್ವ್ಯೇಟ (ಜಗತ್ತಿನಾದ್ಯಂತ) ಎಂಬ ಪತ್ರಿಕೆಯು ವಿವರಿಸುವುದು: “ಸೋವಿಯಟ್‌ ಯುಗದ ಬೇರೆ ಬೇರೆ ವರ್ಷಗಳ ಹೊಸ ವರ್ಷದ ಮರದ ಅಲಂಕಾರಗಳಿಂದ, ಕಮ್ಯೂನಿಸ್ಟ್‌ ಸಮಾಜದ ಸ್ಥಾಪನೆಯ ಇತಿಹಾಸವನ್ನು ಪತ್ತೆಹಚ್ಚಸಾಧ್ಯವಿದೆ. ಸರ್ವಸಾಮಾನ್ಯವಾದ ಮೊಲಗಳು, ಹಿಮಬಿಳಲು ಮತ್ತು ಬ್ರೆಡ್‌ನ ವೃತ್ತಾಕಾರದ ತುಂಡುಗಳೊಂದಿಗೆ, ಕುಡುಗೋಲುಗಳು, ಸುತ್ತಿಗೆಗಳು ಹಾಗೂ ಟ್ರ್ಯಾಕ್ಟರ್‌ಗಳ ಆಕಾರದ ಆಲಂಕಾರಿಕ ವಸ್ತುಗಳು ಸಹ ಉತ್ಪಾದಿಸಲ್ಪಟ್ಟವು. ಸಮಯಾನಂತರ, ಗಣಿಗಾರರು ಮತ್ತು ಗಗನಯಾತ್ರಿಗಳು, ಎಣ್ಣೆಬಾವಿ ಯಂತ್ರಗಳು, ರಾಕೆಟ್‌ಗಳು ಹಾಗೂ ಚಂದ್ರನ ಮೇಲೆ ಉಪಯೋಗಿಸಲ್ಪಡುವ ಮೋಟಾರುವಾಹನಗಳ ಚಿಕ್ಕ ಬೊಂಬೆಗಳು ಇವುಗಳ ಸ್ಥಾನವನ್ನು ಆಕ್ರಮಿಸಿದವು.”

ಆದರೆ ಕ್ರಿಸ್ಮಸ್‌ ದಿನದ ಕುರಿತಾಗಿ ಏನು? ಖಂಡಿತವಾಗಿಯೂ ಇದು ಮತ್ತೆ ಅಂಗೀಕರಿಸಲ್ಪಡಲಿಲ್ಲ. ಇದಕ್ಕೆ ಬದಲಾಗಿ, ಸೋವಿಯಟ್‌ ಸರಕಾರವು ಕ್ರಿಸ್ಮಸ್‌ ದಿನವನ್ನು ಸಾಮಾನ್ಯವಾದ ಕೆಲಸದ ದಿನದ ದರ್ಜೆಗೆ ಇಳಿಸಿಬಿಟ್ಟಿತು. ಯಾರು ಕ್ರಿಸ್ಮಸ್‌ ಹಬ್ಬದ ಧಾರ್ಮಿಕ ಆಚರಣೆಯನ್ನು ಮಾಡಲು ಬಯಸುತ್ತಿದ್ದರೋ ಅವರು, ಸರಕಾರದ ಅಸಮ್ಮತಿ ಮತ್ತು ಅಹಿತಕರ ಪರಿಣಾಮಗಳ ಅಪಾಯಕ್ಕೆ ಒಳಗಾಗುವ ಭಯದಿಂದ ತುಂಬ ಹುಷಾರಾಗಿ ಇದನ್ನು ಮಾಡಬೇಕಿತ್ತು. ಹೌದು, 20ನೆಯ ಶತಮಾನದ ರಷ್ಯದಲ್ಲಿ, ಹಬ್ಬದ ಕಾಲದಲ್ಲಿ ಯಾವುದಕ್ಕೆ ಪ್ರಮುಖತೆ ನೀಡಲಾಗುತ್ತದೋ ಅದರಲ್ಲಿ ಒಂದು ಬದಲಾವಣೆ ಉಂಟಾಯಿತು, ಅಂದರೆ ಧಾರ್ಮಿಕ ಆಚರಣೆಗೆ ಬದಲಾಗಿ ಅಧಾರ್ಮಿಕ ಆಚರಣೆಗೆ ಪ್ರಮುಖತೆಯನ್ನು ನೀಡಲಾಯಿತು.

ತೀರ ಇತ್ತೀಚಿನ ಬದಲಾವಣೆ

ಇಸವಿ 1991ರಲ್ಲಿ ಸೋವಿಯಟ್‌ ಯೂನಿಯನ್‌ ಪತನಗೊಂಡಿತು ಮತ್ತು ಜನರಿಗೆ ಹೆಚ್ಚಿನ ಸ್ವಾತಂತ್ರ್ಯ ಸಿಕ್ಕಿತು. ದೇಶದಾದ್ಯಂತ ಜಾರಿಗೆ ತರಲ್ಪಟ್ಟಿದ್ದ ನಾಸ್ತಿಕತೆಯ ಧೋರಣೆಯು ಇನ್ನಿಲ್ಲವಾಯಿತು. ಚರ್ಚ್‌ ಮತ್ತು ಸರಕಾರವು ಪ್ರತ್ಯೇಕಗೊಂಡಿದ್ದರಿಂದ, ಹೊಸದಾಗಿ ರಚಿತವಾಗಿದ್ದ ಸರ್ವತಂತ್ರ ರಾಷ್ಟ್ರಗಳು ಬಹುಮಟ್ಟಿಗೆ ಧರ್ಮದೊಂದಿಗೆ ಯಾವುದೇ ಸಂಬಂಧವನ್ನು ಹೊಂದಿರಲಿಲ್ಲ. ಧಾರ್ಮಿಕ ಮನೋಭಾವದವರಾಗಿದ್ದ ಅನೇಕರಿಗೆ, ಈಗ ತಾವು ಸ್ವಂತ ಧಾರ್ಮಿಕ ನಂಬಿಕೆಗಳನ್ನು ಪಾಲಿಸಿಕೊಂಡು ಹೋಗಸಾಧ್ಯವಿದೆ ಎಂದನಿಸಿತು. ಇದನ್ನು ಮಾಡುವ ಒಂದು ವಿಧವು, ಕ್ರಿಸ್ಮಸ್‌ ಎಂಬ ಧಾರ್ಮಿಕ ಹಬ್ಬವನ್ನು ಆಚರಿಸುವುದರ ಮೂಲಕವೇ ಎಂದು ಅವರು ತರ್ಕಿಸಿದರು. ಆದರೂ, ಇಂಥ ಅನೇಕ ಮಂದಿ ಸ್ವಲ್ಪದರಲ್ಲೇ ತೀವ್ರ ನಿರಾಶೆಯನ್ನು ಅನುಭವಿಸಿದರು. ಏಕೆ?

ವರ್ಷಗಳು ಕಳೆದಂತೆ ಈ ಹಬ್ಬವು ಹೆಚ್ಚಾಗಿ ವ್ಯಾಪಾರದ ಗುಣಸ್ವರೂಪವನ್ನು ಪಡೆದುಕೊಂಡಿದೆ. ವಾಸ್ತವದಲ್ಲಿ, ಪಾಶ್ಚಾತ್ಯ ದೇಶಗಳಲ್ಲಿ ನಡೆಯುವಂತೆಯೇ, ಕ್ರಿಸ್ಮಸ್‌ ಕಾಲವು ತಯಾರಕರು, ಸಗಟು ವ್ಯಾಪಾರಿಗಳು ಮತ್ತು ವರ್ತಕರು ಲಾಭವನ್ನು ಗಳಿಸುವ ಅತ್ಯುತ್ತಮ ವಿಧಗಳಲ್ಲಿ ಒಂದಾಗಿ ಪರಿಣಮಿಸಿದೆ. ಕ್ರಿಸ್ಮಸ್‌ ಅಲಂಕಾರದ ವಸ್ತುಗಳು ಮುಖ್ಯವಾಗಿ ಅಂಗಡಿಗಳ ಹೊರಭಾಗಗಳಲ್ಲಿ ಪ್ರದರ್ಶನಕ್ಕಿಡಲ್ಪಡುತ್ತವೆ. ಈ ಮುಂಚೆ ರಷ್ಯದಲ್ಲಿ ಅಪರಿಚಿತವಾಗಿದ್ದ ಪಾಶ್ಚಾತ್ಯ ಶೈಲಿಯ ಕ್ರಿಸ್ಮಸ್‌ ಸಂಗೀತ ಮತ್ತು ಕ್ಯಾರಲ್‌ಗಳು ಅಂಗಡಿಗಳಿಂದ ಕೇಳಿಬರುತ್ತವೆ. ಕ್ರಿಸ್ಮಸ್‌ ಹಬ್ಬದ ಥಳಕುಪಳಕಿನ ಸಾಮಾನುಗಳ ದೊಡ್ಡ ದೊಡ್ಡ ಚೀಲಗಳನ್ನು ಹೊತ್ತುಕೊಂಡಿರುವ ಮಾರಾಟಗಾರರು, ಪ್ರತಿದಿನ ಓಡಾಡುವ ಟ್ರೈನ್‌ಗಳು ಮತ್ತು ಇತರ ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ತಮ್ಮ ವಸ್ತುಗಳನ್ನು ಮಾರುತ್ತಾರೆ. ಈ ವಿವರಣೆಯು ಇಂದು ಕ್ರಿಸ್ಮಸ್‌ ಹಬ್ಬದ ಕಾಲದಲ್ಲಿ ರಷ್ಯದಲ್ಲಿರುವ ಸನ್ನಿವೇಶವನ್ನು ವರ್ಣಿಸುತ್ತದೆ.

ಈ ರೀತಿಯ ಮುಚ್ಚುಮರೆಯಿಲ್ಲದ ವಾಣಿಜ್ಯ ವ್ಯವಹಾರದಲ್ಲಿ ಯಾವುದೇ ತಪ್ಪನ್ನು ಕಾಣದಿರುವಂಥ ಕೆಲವರು, ಹಬ್ಬದ ಕಾಲದ ಇನ್ನೊಂದು ತೊಂದರೆದಾಯಕ ಅಂಶದಿಂದ ಕ್ಷೋಭೆಗೊಳ್ಳುತ್ತಾರೆ. ಅದೇನೆಂದರೆ, ಮದ್ಯದ ದುರ್ಬಳಕೆ ಮತ್ತು ಅದರಿಂದ ಉಂಟಾಗುವ ಎಲ್ಲ ನಕಾರಾತ್ಮಕ ಪರಿಣಾಮಗಳೇ. ಮಾಸ್ಕೋದ ಆಸ್ಪತ್ರೆಯೊಂದರಲ್ಲಿರುವ ತುರ್ತುಚಿಕಿತ್ಸಾ ವಿಭಾಗದ ವೈದ್ಯರೊಬ್ಬರು ವಿವರಿಸಿದ್ದು: “ವೈದ್ಯರಿಗಾದರೋ, ಹೊಸ ವರ್ಷದ ಆಚರಣೆಯೆಂದರೆ, ಗುದ್ದಾಟಗಳು ಮತ್ತು ಹೊಡೆತಗಳಿಂದ ಹಿಡಿದು ಕತ್ತಿ ಹಾಗೂ ಗುಂಡಿನ ಗಾಯಗಳ ವರೆಗೆ ಚಿಕಿತ್ಸೆ ನೀಡುವುದೇ ಆಗಿದೆ ಎಂಬುದು ಅಂಗೀಕೃತ ವಾಸ್ತವಾಂಶವಾಗಿದೆ. ಇವುಗಳಲ್ಲಿ ಹೆಚ್ಚಿನವು ಗೃಹ ಹಿಂಸಾಚಾರ, ಕುಡಿತದ ಹೊಡೆದಾಟಗಳು ಮತ್ತು ಕಾರ್‌ ಅಪಘಾತಗಳಿಂದ ಉಂಟಾದವುಗಳಾಗಿವೆ.” ರಷ್ಯದ ವಿಜ್ಞಾನ ಶಿಕ್ಷಣ ಕೇಂದ್ರದ ಶಾಖೆಯೊಂದರ ಸೀನಿಯರ್‌ ಸಿಬ್ಬಂದಿಯ ವಿಜ್ಞಾನಿಯೊಬ್ಬರು ಹೇಳಿದ್ದು: “ಮದ್ಯಪಾನಕ್ಕೆ ಸಂಬಂಧಿಸಿದ ಮರಣಗಳ ಸಂಖ್ಯೆಯಲ್ಲಿ ಇದ್ದಕ್ಕಿದ್ದಂತೆ ಹೆಚ್ಚಳವಾಗಿದೆ. ಇಸವಿ 2000ದಲ್ಲಿ ಇದು ವಿಶೇಷವಾಗಿ ಅತ್ಯಧಿಕವಾಗಿತ್ತು. ಆತ್ಮಹತ್ಯೆಗಳು ಮತ್ತು ಕೊಲೆಗಳ ಸಂಖ್ಯೆಯು ಸಹ ಅಧಿಕಗೊಂಡಿತು.”

ಅಸಂತೋಷಕರವಾಗಿಯೇ, ರಷ್ಯದಲ್ಲಿ ಹಬ್ಬದ ಕಾಲದಲ್ಲಿ ತೋರಿಸಲ್ಪಡುವ ಇಂಥ ಯಾವುದೇ ವರ್ತನೆಯು ಇನ್ನೊಂದು ಅಂಶದಿಂದ ಇನ್ನಷ್ಟು ಹದಗೆಡುತ್ತದೆ. ಈಸ್ವೆಸ್ಟ್ಯೇಯ ಎಂಬ ವಾರ್ತಾಪತ್ರಿಕೆಯು “ರಷ್ಯದವರು ಕ್ರಿಸ್ಮಸ್‌ ಹಬ್ಬವನ್ನು ಎರಡು ಬಾರಿ ಆಚರಿಸುತ್ತಾರೆ” ಎಂಬ ಮೇಲ್ಬರಹದ ಕೆಳಗೆ ಹೀಗೆ ವರದಿಸುತ್ತದೆ: “ರಷ್ಯದವರಲ್ಲಿ 10ರಲ್ಲಿ ಒಬ್ಬ ವ್ಯಕ್ತಿಯು ಕ್ರಿಸ್ಮಸ್‌ ಹಬ್ಬವನ್ನು ಎರಡು ಬಾರಿ ಆಚರಿಸುತ್ತಾನೆ. ರಷ್ಯನ್‌ ಪಬ್ಲಿಕ್‌ ಒಪಿನ್ಯನ್‌ ಆ್ಯಂಡ್‌ ಮಾರ್ಕೆಟ್‌ ರಿಸರ್ಚ್‌ ಮೇಲ್ವಿಚಾರಣಾ ಕೇಂದ್ರದಿಂದ ಗಮನಿಸಲ್ಪಟ್ಟಂತೆ, ಕ್ಯಾಥೊಲಿಕ್‌ ಕ್ರಿಸ್ಮಸ್‌ ಕ್ಯಾಲೆಂಡರ್‌ಗನುಸಾರ ಡಿಸೆಂಬರ್‌ 24ರಂದು ಮತ್ತು ಆರ್ತಡಾಕ್ಸ್‌ ಸಂಪ್ರದಾಯಕ್ಕನುಸಾರ ಜನವರಿ 7ರಂದು​—⁠ಎರಡು ಬಾರಿ ತಾವು ಕ್ರಿಸ್ಮಸ್‌ ಹಬ್ಬವನ್ನು ಆಚರಿಸುತ್ತೇವೆ ಎಂದು ಪ್ರತಿವಾದಿಗಳಲ್ಲಿ 8 ಪ್ರತಿಶತ ಮಂದಿ ಒಪ್ಪಿಕೊಂಡರು . . . ಕೆಲವರಿಗಾದರೋ, ಕ್ರಿಸ್ಮಸ್‌ ಹಬ್ಬದ ಧಾರ್ಮಿಕ ಅರ್ಥವು ಪ್ರಾಮುಖ್ಯವಾಗಿರುವುದಿಲ್ಲ, ಬದಲಾಗಿ ಅದನ್ನು ಆಚರಿಸಲಿಕ್ಕಾಗಿರುವ ಸದವಕಾಶವು ಪ್ರಾಮುಖ್ಯವಾದದ್ದಾಗಿದೆ ಎಂಬುದಂತೂ ನಿಜ.” *

ಈಗ ಈ ಹಬ್ಬವು ಆಚರಿಸಲ್ಪಡುವ ವಿಧವು ನಿಜವಾಗಿಯೂ ಕ್ರಿಸ್ತನಿಗೆ ಗೌರವ ತರುತ್ತದೊ?

ಸ್ಪಷ್ಟವಾಗಿಯೇ, ಈ ಹಬ್ಬದ ಕಾಲದಲ್ಲಿ ಹೆಚ್ಚೆಚ್ಚು ಭಕ್ತಿರಹಿತ ನಡತೆಯು ತೋರಿಸಲ್ಪಡುತ್ತದೆ. ಇದು ಇಷ್ಟೆಲ್ಲ ಕ್ಷೋಭೆದಾಯಕವಾಗಿರುವುದಾದರೂ, ದೇವರ ಮತ್ತು ಕ್ರಿಸ್ತನ ಗೌರವಾರ್ಥವಾಗಿ ಈ ಆಚರಣೆಗಳನ್ನು ನಡೆಸಬೇಕು ಎಂದು ಕೆಲವರಿಗೆ ಅನಿಸಬಹುದು. ದೇವರನ್ನು ಮೆಚ್ಚಿಸಬೇಕೆಂಬ ಬಯಕೆಯು ಪ್ರಶಂಸಾರ್ಹವಾದದ್ದೇ. ಆದರೆ ಕ್ರಿಸ್ಮಸ್‌ ಕಾಲವು ನಿಜವಾಗಿಯೂ ದೇವರಿಗೆ ಮತ್ತು ಕ್ರಿಸ್ತನಿಗೆ ಸಂತೋಷವನ್ನು ಉಂಟುಮಾಡುತ್ತದೊ? ಈ ಹಬ್ಬದ ಮೂಲವನ್ನು ಪರಿಗಣಿಸಿರಿ.

ಉದಾಹರಣೆಗೆ, ಕ್ರಿಸ್ಮಸ್‌ ಹಬ್ಬದ ವಿಷಯದಲ್ಲಿ ಸೋವಿಯಟ್‌ಗೆ ಯಾವುದೇ ದೃಷ್ಟಿಕೋನವಿರುವುದಾದರೂ, ಗ್ರೇಟ್‌ ಸೋವಿಯಟ್‌ ಎನ್‌ಸೈಕ್ಲಪೀಡೀಯದಲ್ಲಿ ತಿಳಿಸಲ್ಪಟ್ಟಿರುವ ಈ ಮುಂದಿನ ಐತಿಹಾಸಿಕ ವಾಸ್ತವಾಂಶಗಳೊಂದಿಗೆ ವಾಗ್ವಾದಿಸುವುದು ಕಷ್ಟಕರವಾಗಿರುವುದು: “ಕ್ರಿಸ್ಮಸ್‌ ಹಬ್ಬವು . . . ‘ಸಾಯುವ ಮತ್ತು ಮೃತರಿಂದ ಏಳುವ’ ದೇವದೇವತೆಗಳ ಕ್ರೈಸ್ತಪೂರ್ವ ಆರಾಧನೆಯಿಂದ ಅಳವಡಿಸಿಕೊಂಡದ್ದಾಗಿದೆ. ವಿಶೇಷವಾಗಿ ಬೇಸಾಯಮಾಡುವ ಜನರ ನಡುವೆ ಈ ಆರಾಧನೆಯು ಸರ್ವಸಾಮಾನ್ಯವಾಗಿದ್ದು, ಇವರು ಸಾಮಾನ್ಯವಾಗಿ ಡಿಸೆಂಬರ್‌ 21-25ರ ವರೆಗಿನ ಮಕರ ಸಂಕ್ರಾಂತಿಯ ಕಾಲಾವಧಿಯಲ್ಲೇ ನಿಸರ್ಗಕ್ಕೆ ನವಜೀವನವನ್ನು ಕೊಡುವ ದೇವ-ರಕ್ಷಕನ ‘ಜನನವನ್ನು’ ವಾರ್ಷಿಕವಾಗಿ ಆಚರಿಸುತ್ತಿದ್ದರು.”

ಆ ಎನ್‌ಸೈಕ್ಲಪೀಡೀಯವು ನಿಷ್ಕೃಷ್ಟವಾಗಿ ಏನನ್ನು ತಿಳಿಸುತ್ತದೋ ಅದನ್ನು ನೀವು ಅರ್ಥಗರ್ಭಿತವಾದದ್ದಾಗಿ ಕಂಡುಕೊಳ್ಳಬಹುದು: “ಪ್ರಥಮ ಶತಮಾನಗಳ ಕ್ರೈಸ್ತಧರ್ಮದಲ್ಲಿ ಕ್ರಿಸ್ಮಸ್‌ ಹಬ್ಬದ ಆಚರಣೆಯಿರಲಿಲ್ಲ. . . . ನಾಲ್ಕನೆಯ ಶತಮಾನದ ಮಧ್ಯಭಾಗದಿಂದ, ಮಿಥ್ರ ಎಂಬ ವಿಧರ್ಮಿ ದೇವತೆಯ ಆರಾಧನೆಯಿಂದ ಮಕರ ಸಂಕ್ರಾಂತಿಯ ಆಚರಣೆಯ ರೂಢಿಯನ್ನು ಕ್ರೈಸ್ತಧರ್ಮವು ಹೊಂದಿಸಿಕೊಂಡಿತು ಮತ್ತು ಇದನ್ನು ಕ್ರಿಸ್ಮಸ್‌ ಹಬ್ಬದ ಆಚರಣೆಯಾಗಿ ಪರಿವರ್ತಿಸಿತು. ಕ್ರಿಸ್ಮಸ್‌ ಹಬ್ಬವನ್ನು ಪ್ರಥಮವಾಗಿ ಆಚರಿಸಿದವರು ರೋಮ್‌ನಲ್ಲಿದ್ದ ಧಾರ್ಮಿಕ ಗುಂಪುಗಳವರೇ ಆಗಿದ್ದರು. ಹತ್ತನೆಯ ಶತಮಾನದಲ್ಲಿ, ಕ್ರಿಸ್ಮಸ್‌ ಹಬ್ಬವು ಕ್ರೈಸ್ತಧರ್ಮದೊಂದಿಗೆ ರಷ್ಯಕ್ಕೆ ಹಬ್ಬಿತು. ಇಲ್ಲಿ ಅದು ಪುರಾತನ ಸ್ಲಾವ್‌ ಜನರ, ಪೂರ್ವಜರ ಆತ್ಮಗಳನ್ನು ಗೌರವಿಸುವ ಮಕರ ಸಂಕ್ರಾಂತಿ ಆಚರಣೆಯೊಂದಿಗೆ ಬೆಸೆದುಕೊಂಡಿತು.”

‘ಯೇಸು ಡಿಸೆಂಬರ್‌ 25ರಂದು ಜನಿಸಿರುವುದರ ಬಗ್ಗೆ ದೇವರ ವಾಕ್ಯವಾಗಿರುವ ಬೈಬಲ್‌ ಏನು ಹೇಳುತ್ತದೆ?’ ಎಂದು ನೀವು ಪ್ರಶ್ನಿಸಬಹುದು. ವಾಸ್ತವದಲ್ಲಿ, ಯೇಸುವಿನ ಜನನದ ಯಾವುದೇ ನಿರ್ದಿಷ್ಟ ತಾರೀಖನ್ನು ಬೈಬಲ್‌ ತಿಳಿಸುವುದಿಲ್ಲ ಮತ್ತು ಯೇಸು ಅದನ್ನು ಆಚರಿಸುವಂತೆ ನಿರ್ದೇಶಿಸುವುದಿರಲಿ, ಸ್ವತಃ ಅವನು ಅದರ ಕುರಿತಾಗಿ ಮಾತಾಡಿರುವ ಯಾವುದೇ ದಾಖಲೆಯೂ ಇಲ್ಲ. ಆದರೂ, ಯೇಸು ವರ್ಷದ ಯಾವ ಕಾಲಾವಧಿಯಲ್ಲಿ ಜನಿಸಿದನು ಎಂಬುದನ್ನು ನಿರ್ಧರಿಸಲು ಬೈಬಲ್‌ ನಮಗೆ ಸಹಾಯಮಾಡುತ್ತದೆ.

ಮತ್ತಾಯನ ಸುವಾರ್ತೆಯ 26 ಮತ್ತು 27ನೇ ಅಧ್ಯಾಯಗಳಿಗನುಸಾರ, ಯೇಸು ನೈಸಾನ್‌ 14ರಂದು ಅಂದರೆ ಸಾ.ಶ. 33ರ ಮಾರ್ಚ್‌ 31ರಂದು ಆರಂಭವಾಗಿದ್ದ ಯೆಹೂದಿ ಪಸ್ಕಹಬ್ಬದ ದಿನದ ಕೊನೆ ಭಾಗದಲ್ಲಿ ವಧಿಸಲ್ಪಟ್ಟನು. ಯೇಸು ಸುಮಾರು 30 ವರ್ಷದವನಾಗಿದ್ದಾಗ ದೀಕ್ಷಾಸ್ನಾನ ಪಡೆದುಕೊಂಡನು ಮತ್ತು ತನ್ನ ಶುಶ್ರೂಷೆಯನ್ನು ಆರಂಭಿಸಿದನು ಎಂದು ಲೂಕನ ಸುವಾರ್ತೆಯಿಂದ ನಾವು ಕಲಿಯುತ್ತೇವೆ. (ಲೂಕ 3:21-23) ಅವನ ಶುಶ್ರೂಷೆಯು ಮೂರೂವರೆ ವರ್ಷಗಳ ವರೆಗೆ ನಡೆಸಲ್ಪಟ್ಟಿತು. ಆದುದರಿಂದ, ಯೇಸು ಮರಣಪಟ್ಟಾಗ ಸುಮಾರು 33 1/2 ವರ್ಷದವನಾಗಿದ್ದನು. ಸಾ.ಶ. 33ರ ಅಕ್ಟೋಬರ್‌ 1ರಷ್ಟಕ್ಕೆ ಅವನು 34 ವರ್ಷದವನಾಗಿರುತ್ತಿದ್ದನು. ಯೇಸುವಿನ ಜನನದ ಸಮಯದಲ್ಲಿ, ಕುರುಬರು ‘ಹೊಲದಲ್ಲಿದ್ದುಕೊಂಡು ರಾತ್ರಿಯಲ್ಲಿ ತಮ್ಮ ಕುರೀಹಿಂಡನ್ನು ಕಾಯುತ್ತಿದ್ದರು’ ಎಂದು ಲೂಕನು ವರದಿಸುತ್ತಾನೆ. (ಲೂಕ 2:8) ವಿಪರೀತ ಚಳಿಯಿರುವ ಡಿಸೆಂಬರ್‌ ತಿಂಗಳಿನಲ್ಲಿ ಕುರುಬರು ತಮ್ಮ ಕುರೀಹಿಂಡಿನೊಂದಿಗೆ ಹೊಲದಲ್ಲಿರಸಾಧ್ಯವಿರಲಿಲ್ಲ; ಈ ಕಾಲಾವಧಿಯಲ್ಲಿ ಬೇತ್ಲೆಹೇಮ್‌ನ ಸುತ್ತಮುತ್ತಲ ಪ್ರದೇಶದಲ್ಲಿ ಹಿಮವೂ ಬೀಳುವ ಸಾಧ್ಯತೆ ಇತ್ತು. ಆದರೆ ಅಕ್ಟೋಬರ್‌ 1ರಷ್ಟಕ್ಕೆ ಅವರು ತಮ್ಮ ಕುರೀಹಿಂಡಿನೊಂದಿಗೆ ಅಲ್ಲಿದ್ದಿರಸಾಧ್ಯವಿದೆ; ಪುರಾವೆಗನುಸಾರ ಇದು ಯೇಸು ಜನಿಸಿದ ಸಮಯಾವಧಿಯಾಗಿದೆ.

ಹಾಗಾದರೆ, ಹೊಸ ವರ್ಷದ ಆಚರಣೆಯ ಕುರಿತಾಗಿ ಏನು? ನಾವೀಗಾಗಲೇ ನೋಡಿರುವಂತೆ, ಇದು ನೀತಿಗೆಟ್ಟ ವರ್ತನೆಯಿಂದ ಗುರುತಿಸಲ್ಪಡುತ್ತದೆ. ಇದನ್ನು ಜಾತ್ಯತೀತಗೊಳಿಸಲು ಅನೇಕ ಪ್ರಯತ್ನಗಳು ಮಾಡಲ್ಪಟ್ಟಿದ್ದರೂ, ಇದು ಸಹ ಸಂಶಯಾಸ್ಪದ ಮೂಲಗಳನ್ನು ಹೊಂದಿದೆ.

ಹಬ್ಬದ ಕಾಲಕ್ಕೆ ಸಂಬಂಧಿಸಿದ ವಾಸ್ತವಾಂಶಗಳ ಪುರಾವೆಯನ್ನು ಪರಿಗಣಿಸುವಾಗ, ಹಬ್ಬದ ಸಮಯದಲ್ಲಿ ಯೇಸುವನ್ನು ಮನಸ್ಸಿನಲ್ಲಿಡುವಂತೆ ಉತ್ತೇಜಿಸುವ ಧ್ಯೇಯಮಂತ್ರಗಳು ಅರ್ಥರಹಿತವಾಗಿವೆ ಎಂಬುದು ಸುಸ್ಪಷ್ಟ. ಕ್ರಿಸ್ಮಸ್‌ ಕಾಲಕ್ಕೆ ಸಂಬಂಧಿಸಿರುವ ವಾಣಿಜ್ಯ ವ್ಯವಹಾರದಿಂದ ಮತ್ತು ಶಾಂತಿಭಂಗಮಾಡುವ ನಡತೆಯಿಂದ ಹಾಗೂ ಆ ಹಬ್ಬದ ಅಸಹ್ಯಕರ ವಿಧರ್ಮಿ ಮೂಲಗಳಿಂದ ನೀವು ಕ್ಷೋಭೆಗೊಂಡಿರುವುದಾದರೆ ನಿರುತ್ಸಾಹಗೊಳ್ಳದಿರಿ. ನಾವು ದೇವರಿಗೆ ಭಕ್ತಿಯನ್ನು ಸಲ್ಲಿಸಸಾಧ್ಯವಿರುವ ಮತ್ತು ಕ್ರಿಸ್ತನಿಗೆ ಗೌರವವನ್ನು ತೋರಿಸಸಾಧ್ಯವಿರುವ ಅದೇ ಸಮಯದಲ್ಲಿ ಕುಟುಂಬದ ಬಂಧಗಳನ್ನು ಇನ್ನಷ್ಟು ಬಲಗೊಳಿಸಬಲ್ಲ ಯೋಗ್ಯವಾದ ವಿಧವೊಂದು ಇದೆ.

ದೇವರನ್ನು ಮತ್ತು ಕ್ರಿಸ್ತನನ್ನು ಗೌರವಿಸಲು ಹೆಚ್ಚು ಉತ್ತಮವಾದ ವಿಧ

ಯೇಸು ಕ್ರಿಸ್ತನು ‘ಅನೇಕರನ್ನು ಬಿಡಿಸಿಕೊಳ್ಳುವದಕ್ಕಾಗಿ ತನ್ನ ಪ್ರಾಣವನ್ನು ಈಡುಕೊಡುವದಕ್ಕೆ’ ಅಂದರೆ ವಿಮೋಚನಾ ಮೌಲ್ಯವಾಗಿ ಅರ್ಪಿಸುವುದಕ್ಕೆ ಬಂದನು ಎಂದು ಬೈಬಲ್‌ ನಮಗೆ ತಿಳಿಸುತ್ತದೆ. (ಮತ್ತಾಯ 20:28) ಅವನು ವಧಿಸಲ್ಪಡುವುದಕ್ಕೆ ತನ್ನನ್ನು ಒಪ್ಪಿಸಿಕೊಂಡನು ಮತ್ತು ನಮ್ಮ ಪಾಪಗಳಿಗಾಗಿ ಮನಃಪೂರ್ವಕವಾಗಿ ಮರಣಪಟ್ಟನು. ಕೆಲವರು ಕ್ರಿಸ್ತನಿಗೆ ಗೌರವವನ್ನು ಸಲ್ಲಿಸಲು ಬಯಸಬಹುದು ಮತ್ತು ಕ್ರಿಸ್ಮಸ್‌ ಹಬ್ಬದ ಕಾಲದಲ್ಲಿ ತಾವಿದನ್ನು ಮಾಡಬಹುದು ಎಂದು ಭಾವಿಸಬಹುದು. ಆದರೆ ನಾವೀಗಾಗಲೇ ನೋಡಿರುವಂತೆ, ಕ್ರಿಸ್ಮಸ್‌ ಮತ್ತು ಹೊಸ ವರ್ಷದ ಆಚರಣೆಗಳಿಗೂ ಕ್ರಿಸ್ತನಿಗೂ ಯಾವುದೇ ಸಂಬಂಧವಿಲ್ಲ ಹಾಗೂ ಅವುಗಳ ಮೂಲವು ವಿಧರ್ಮಿ ಆಚರಣೆಯಾಗಿದೆ. ಇದಲ್ಲದೆ, ಕ್ರಿಸ್ಮಸ್‌ ಕಾಲವು ಕೆಲವರಿಗೆ ಎಷ್ಟೇ ಆಕರ್ಷಣೀಯವಾಗಿ ಕಂಡುಬರುವುದಾದರೂ, ಇದು ಅತಿಯಾದ ವಾಣಿಜ್ಯ ವ್ಯವಹಾರದಿಂದ ಗುರುತಿಸಲ್ಪಟ್ಟಿರುತ್ತದೆ. ಅಷ್ಟುಮಾತ್ರವಲ್ಲ, ಕ್ರಿಸ್ಮಸ್‌ ಹಬ್ಬವು ದೇವರಿಗೆ ಮತ್ತು ಕ್ರಿಸ್ತನಿಗೆ ಅಸಂತೋಷವನ್ನು ಉಂಟುಮಾಡುವಂಥ ಲಜ್ಜಾಸ್ಪದವಾದ ನಡತೆಯೊಂದಿಗೆ ಸಂಬಂಧಿಸಲ್ಪಡುತ್ತದೆ ಎಂಬುದನ್ನು ಒಪ್ಪಿಕೊಳ್ಳಲೇಬೇಕಾಗಿದೆ.

ದೇವರನ್ನು ಮೆಚ್ಚಿಸಲು ಪ್ರಯತ್ನಿಸುತ್ತಿರುವ ಒಬ್ಬ ವ್ಯಕ್ತಿಯು ಹೇಗೆ ಪ್ರತಿಕ್ರಿಯಿಸಬೇಕು? ಧರ್ಮನಿಷ್ಠತೆಯ ಭಾವನೆಗಳನ್ನು ತಣಿಸಬಹುದಾದರೂ ಶಾಸ್ತ್ರವಚನಗಳಿಗೆ ವಿರುದ್ಧವಾಗಿರುವ ಮಾನವ ಸಂಪ್ರದಾಯಗಳಿಗೆ ಅಂಟಿಕೊಳ್ಳುವುದಕ್ಕೆ ಬದಲಾಗಿ, ಒಬ್ಬ ಯಥಾರ್ಥ ವ್ಯಕ್ತಿಯು ದೇವರನ್ನು ಮತ್ತು ಕ್ರಿಸ್ತನನ್ನು ಗೌರವಿಸುವ ನಿಜವಾದ ವಿಧವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಾನೆ. ಆ ನಿಜವಾದ ವಿಧವು ಯಾವುದಾಗಿದೆ ಮತ್ತು ನಾವೇನು ಮಾಡಬೇಕು?

ಸ್ವತಃ ಕ್ರಿಸ್ತನೇ ನಮಗೆ ತಿಳಿಸುವುದು: “ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ ನಿತ್ಯಜೀವವು.” (ಯೋಹಾನ 17:3) ಹೌದು, ನಿಜವಾಗಿಯೂ ಯಥಾರ್ಥನಾಗಿರುವ ವ್ಯಕ್ತಿಯೊಬ್ಬನು, ದೇವರನ್ನು ಮತ್ತು ಕ್ರಿಸ್ತನನ್ನು ಹೇಗೆ ಗೌರವಿಸಬೇಕು ಎಂಬುದರ ಕುರಿತು ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಾನೆ. ತದನಂತರ ಅವನು ವರ್ಷದ ನಿರ್ದಿಷ್ಟ ಕಾಲಾವಧಿಯಲ್ಲಿ ಮಾತ್ರ ಅಲ್ಲ ಬದಲಾಗಿ ದೈನಂದಿನ ಜೀವನದಲ್ಲಿ ಈ ಜ್ಞಾನವನ್ನು ಅನ್ವಯಿಸಿಕೊಳ್ಳುತ್ತಾನೆ. ಇಂಥ ಪ್ರಾಮಾಣಿಕ ಪ್ರಯತ್ನಗಳಿಂದ ದೇವರಿಗೆ ತುಂಬ ಸಂತೋಷವಾಗುತ್ತದೆ ಮತ್ತು ಇದು ನಿತ್ಯಜೀವಕ್ಕೆ ಮುನ್ನಡಿಸಬಲ್ಲದು.

ಶಾಸ್ತ್ರವಚನಗಳಿಗೆ ಹೊಂದಿಕೆಯಲ್ಲಿ ದೇವರನ್ನು ಮತ್ತು ಕ್ರಿಸ್ತನನ್ನು ನಿಜವಾಗಿಯೂ ಗೌರವಿಸುವವರ ನಡುವೆ ನಿಮ್ಮ ಕುಟುಂಬವೂ ಇರುವಂತೆ ನೀವು ಬಯಸುತ್ತೀರೊ? ಲೋಕವ್ಯಾಪಕವಾಗಿ ಲಕ್ಷಾಂತರ ಕುಟುಂಬಗಳು ಬೈಬಲಿನಿಂದ ಅತ್ಯಾವಶ್ಯಕವಾದ ಜ್ಞಾನವನ್ನು ಪಡೆದುಕೊಳ್ಳುವಂತೆ ಯೆಹೋವನ ಸಾಕ್ಷಿಗಳು ಸಹಾಯಮಾಡಿದ್ದಾರೆ. ನಿಮ್ಮ ಕ್ಷೇತ್ರದಲ್ಲಿರುವ ಯೆಹೋವನ ಸಾಕ್ಷಿಗಳನ್ನು ಸಂಪರ್ಕಿಸುವಂತೆ ಅಥವಾ ಈ ಪತ್ರಿಕೆಯ 2ನೇ ಪುಟದಲ್ಲಿ ಕಂಡುಬರುವ ಸೂಕ್ತವಾದ ವಿಳಾಸದಲ್ಲಿ ಅವರಿಗೆ ಪತ್ರವನ್ನು ಬರೆಯುವಂತೆ ನಾವು ನಿಮ್ಮನ್ನು ಹಾರ್ದಿಕವಾಗಿ ಆಮಂತ್ರಿಸುತ್ತೇವೆ.

[ಪಾದಟಿಪ್ಪಣಿ]

^ ಪ್ಯಾರ. 11 ಇಸವಿ 1917ರ ಅಕ್ಟೋಬರ್‌ನಲ್ಲಿ ನಡೆದ ಕ್ರಾಂತಿಗೆ ಮುಂಚೆ ರಷ್ಯವು ಹಳೆಯ ಜೂಲಿಯನ್‌ ಕ್ಯಾಲೆಂಡರನ್ನು ಉಪಯೋಗಿಸುತ್ತಿತ್ತು, ಆದರೆ ಹೆಚ್ಚಿನ ದೇಶಗಳು ಅದಕ್ಕೆ ಬದಲಾಗಿ ಗ್ರಿಗೋರಿಯನ್‌ ಕ್ಯಾಲೆಂಡರನ್ನು ಉಪಯೋಗಿಸುತ್ತಿದ್ದವು. 1917ರಲ್ಲಿ ಜೂಲಿಯನ್‌ ಕ್ಯಾಲೆಂಡರ್‌ ಅದರ ಪ್ರತಿರೂಪವಾಗಿರುವ ಗ್ರಿಗೋರಿಯನ್‌ ಕ್ಯಾಲೆಂಡರ್‌ಗಿಂತ 13 ದಿನ ಹಿಂದೆಯಿತ್ತು. ಕ್ರಾಂತಿಯ ಬಳಿಕ, ಸೋವಿಯಟ್‌ನವರು ಗ್ರಿಗೋರಿಯನ್‌ ಕ್ಯಾಲೆಂಡರನ್ನು ಉಪಯೋಗಿಸಲು ಆರಂಭಿಸಿದರು; ಅಂದಿನಿಂದ ರಷ್ಯವು ಸಹ ಜಗತ್ತಿನ ಉಳಿದ ಭಾಗದವರೆಲ್ಲರೂ ಉಪಯೋಗಿಸುತ್ತಿದ್ದ ಗ್ರಿಗೋರಿಯನ್‌ ಕ್ಯಾಲೆಂಡರನ್ನೇ ಉಪಯೋಗಿಸತೊಡಗಿತು. ಆದರೆ ಜೂಲಿಯನ್‌ ಕ್ಯಾಲೆಂಡರ್‌ಗೆ “ಹಳೆಯ ಶೈಲಿಯ” ಕ್ಯಾಲೆಂಡರ್‌ ಎಂಬ ವರ್ಣನೆಯನ್ನು ನೀಡುತ್ತಾ, ಆರ್ತಡಾಕ್ಸ್‌ ಚರ್ಚ್‌ ತನ್ನ ಆಚರಣೆಗಳಿಗಾಗಿ ಈ ಕ್ಯಾಲೆಂಡರನ್ನೇ ಉಪಯೋಗಿಸುವುದನ್ನು ಮುಂದುವರಿಸಿತು. ರಷ್ಯದಲ್ಲಿ ಕ್ರಿಸ್ಮಸ್‌ ಹಬ್ಬವು ಜನವರಿ 7ರಂದು ಆಚರಿಸಲ್ಪಡುವ ವಿಷಯವನ್ನು ನೀವು ಕೇಳಿಸಿಕೊಳ್ಳಬಹುದು. ಆದರೆ ಗ್ರಿಗೋರಿಯನ್‌ ಕ್ಯಾಲೆಂಡರ್‌ನಲ್ಲಿ ಯಾವುದು ಜನವರಿ 7ನೇ ತಾರೀಖು ಆಗಿದೆಯೊ ಅದು ಜೂಲಿಯನ್‌ ಕ್ಯಾಲೆಂಡರ್‌ನಲ್ಲಿ ಡಿಸೆಂಬರ್‌ 25 ಆಗಿದೆ ಎಂಬುದು ನಿಮಗೆ ನೆನಪಿರಲಿ. ಹೀಗಿರುವುದರಿಂದ, ರಷ್ಯದ ಅನೇಕರು ತಮ್ಮ ಹಬ್ಬದ ಕಾಲವನ್ನು ಈ ಮುಂದಿನಂತೆ ಸಂಘಟಿಸುತ್ತಾರೆ: ಡಿಸೆಂಬರ್‌ 25, ಪಾಶ್ಚಾತ್ಯ ಕ್ರಿಸ್ಮಸ್‌; ಜನವರಿ 1, ಅಧಾರ್ಮಿಕ ಹೊಸ ವರ್ಷ; ಜನವರಿ 7, ಆರ್ತಡಾಕ್ಸ್‌ ಕ್ರಿಸ್ಮಸ್‌; ಜನವರಿ 14, ಹಳೆಯ ಶೈಲಿಯ ಹೊಸ ವರ್ಷ.

[ಪುಟ 7ರಲ್ಲಿರುವ ಚೌಕ/ಚಿತ್ರ]

ಹೊಸ ವರ್ಷದ ಆಚರಣೆಯ ಮೂಲಗಳು

ಜಾರ್ಜಿಯದ ಆರ್ತಡಾಕ್ಸ್‌ ಸಂನ್ಯಾಸಿಯು ತನ್ನ ಅಭಿಪ್ರಾಯವನ್ನು ಧೈರ್ಯದಿಂದ ವ್ಯಕ್ತಪಡಿಸುತ್ತಾನೆ

“ಹೊಸ ವರ್ಷದ ಹಬ್ಬವು ಪುರಾತನ ರೋಮ್‌ನ ಅನೇಕ ವಿಧರ್ಮಿ ಹಬ್ಬಗಳಿಂದ ಬಂದದ್ದಾಗಿದೆ. ಜನವರಿ 1ನೇ ತಾರೀಖು, ಜೇನಸ್‌ ಎಂಬ ವಿಧರ್ಮಿ ದೇವನಿಗೆ ಮೀಸಲಾಗಿಡಲ್ಪಟ್ಟಿದ್ದ ಒಂದು ಹಬ್ಬವಾಗಿತ್ತು ಮತ್ತು ಆ ತಿಂಗಳ ಹೆಸರು ಅವನ ಹೆಸರಿನಿಂದ ಬಂದದ್ದಾಗಿದೆ. ಜೇನಸ್‌ನ ಮೂರ್ತಿಗಳು ವಿರುದ್ಧ ದಿಕ್ಕಿನಲ್ಲಿರುವ ಎರಡು ಮುಖಗಳನ್ನು ಹೊಂದಿದ್ದವು; ಇದರ ಅರ್ಥ ಅವನು ಗತಕಾಲವನ್ನು ಮತ್ತು ವರ್ತಮಾನಕಾಲವನ್ನು ನೋಡುತ್ತಾನೆ ಎಂಬುದಾಗಿತ್ತು. ಯಾರು ಜನವರಿ 1ನ್ನು ಮೋಜು, ನಗು ಮತ್ತು ಸಮೃದ್ಧಿಯೊಂದಿಗೆ ಬರಮಾಡಿಕೊಳ್ಳುತ್ತಾರೋ ಅವರು ಇಡೀ ವರ್ಷವನ್ನು ಸಂತೋಷ ಹಾಗೂ ಸುಕ್ಷೇಮದಿಂದ ಕಳೆಯುತ್ತಾರೆ ಎಂದು ಸಹ ಹೇಳಲಾಗುತ್ತಿತ್ತು. ಇದೇ ರೀತಿಯ ಮೂಢನಂಬಿಕೆಯು, ನಮ್ಮ ದೇಶಬಾಂಧವರಲ್ಲಿ ಅನೇಕರು ಹೊಸ ವರ್ಷವನ್ನು ಆಚರಿಸುವುದರೊಂದಿಗೂ ಜೊತೆಗೂಡಿದೆ . . . ಕೆಲವೊಂದು ವಿಧರ್ಮಿ ಹಬ್ಬಗಳ ಸಮಯದಲ್ಲಿ ಜನರು ವಿಗ್ರಹಕ್ಕೆ ನೇರವಾಗಿ ಯಜ್ಞಗಳನ್ನು ತರುತ್ತಿದ್ದರು. ಕೆಲವು ಹಬ್ಬಗಳು ಅನೈತಿಕ ಕಾಮಕೇಳಿಗಳು, ವ್ಯಭಿಚಾರ ಮತ್ತು ಜಾರತ್ವಕ್ಕೆ ಕುಖ್ಯಾತವಾಗಿದ್ದವು. ಇತರ ಸಂದರ್ಭಗಳಲ್ಲಿ, ಉದಾಹರಣೆಗೆ ಜೇನಸ್‌ ಹಬ್ಬದ ಸಮಯದಲ್ಲಿ, ವಿಪರೀತವಾಗಿ ತಿನ್ನುವುದು ಮತ್ತು ಕುಡಿಯುವುದು ಒಳಗೂಡಿತ್ತು, ಅದರೊಂದಿಗೆ ಕುಡಿಕತನ ಹಾಗೂ ಎಲ್ಲ ರೀತಿಯ ಅಶುದ್ಧಕಾರ್ಯಗಳು ಜೊತೆಗೂಡಿರುತ್ತಿದ್ದವು. ಗತ ಸಮಯಗಳಲ್ಲಿ ಸ್ವತಃ ನಾವೇ ಹೊಸ ವರ್ಷವನ್ನು ಹೇಗೆ ಆಚರಿಸಿದ್ದೇವೆ ಎಂಬುದನ್ನು ಜ್ಞಾಪಿಸಿಕೊಳ್ಳುವಲ್ಲಿ, ಆಗ ನಾವೆಲ್ಲರೂ ಈ ವಿಧರ್ಮಿ ಆಚರಣೆಯಲ್ಲಿ ಪಾಲ್ಗೊಂಡಿದ್ದೆವು ಎಂಬುದನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ.”​—⁠ಜಾರ್ಜಿಯದ ಒಂದು ವಾರ್ತಾಪತ್ರಿಕೆ.

[ಪುಟ 6ರಲ್ಲಿರುವ ಚಿತ್ರ]

ಕ್ರೈಸ್ತಪ್ರಪಂಚವು ಮಿಥ್ರ ಎಂಬ ವಿಧರ್ಮಿ ದೇವತೆಯ ಆರಾಧನೆಯನ್ನು ಅಳವಡಿಸಿಕೊಂಡಿತು

[ಕೃಪೆ]

Museum Wiesbaden

[ಪುಟ 7ರಲ್ಲಿರುವ ಚಿತ್ರ]

ವಿಪರೀತ ಚಳಿಯಿರುವ ಡಿಸೆಂಬರ್‌ ತಿಂಗಳಿನಲ್ಲಿ ಕುರುಬರು ತಮ್ಮ ಕುರೀಹಿಂಡಿನೊಂದಿಗೆ ಹೊಲದಲ್ಲಿರಸಾಧ್ಯವಿರಲಿಲ್ಲ