ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿರ್ಣಾಯಕವಾದ ಕ್ರಿಯೆಗೆ ಸಮಯವು ಇದೇ

ನಿರ್ಣಾಯಕವಾದ ಕ್ರಿಯೆಗೆ ಸಮಯವು ಇದೇ

ನಿರ್ಣಾಯಕವಾದ ಕ್ರಿಯೆಗೆ ಸಮಯವು ಇದೇ

“ನೀವು ಎಷ್ಟರ ವರೆಗೆ ಎರಡು ಮನಸ್ಸುಳ್ಳವರಾಗಿರುವಿರಿ?”​—⁠1 ಅರಸುಗಳು 18:21.

ಯೆಹೋವನು ಒಬ್ಬನೇ ಸತ್ಯದೇವರೆಂದು ನೀವು ನಂಬುತ್ತೀರಾ? ಬೈಬಲ್‌ ಪ್ರವಾದನೆಗಳು ನಮ್ಮ ಕಾಲವು ಸೈತಾನನ ದುಷ್ಟ ವ್ಯವಸ್ಥೆಯ “ಕಡೇ ದಿವಸ”ಗಳಾಗಿರುವುದನ್ನು ಸೂಚಿಸುತ್ತವೆಂಬುದನ್ನು ಸಹ ನೀವು ನಂಬುತ್ತೀರಾ? (2 ತಿಮೊಥೆಯ 3:⁠1) ಹಾಗಿರುವಲ್ಲಿ, ಎಲ್ಲ ಸಮಯಗಳಿಗಿಂತಲೂ ಈಗ ನಿರ್ಣಾಯಕವಾದ ಕ್ರಿಯೆಯನ್ನು ಕೈಗೊಳ್ಳುವುದು ಅಗತ್ಯ ಎಂಬುದನ್ನು ನೀವು ಖಂಡಿತ ಒಪ್ಪಿಕೊಳ್ಳುವಿರಿ. ಮಾನವ ಇತಿಹಾಸದಲ್ಲಿ ಹಿಂದೆಂದಿಗಿಂತಲೂ ಇಂದು ಅನೇಕ ಜೀವಗಳು ಅಪಾಯಕ್ಕೊಳಗಾಗಿವೆ.

2 ಸಾ.ಶ.ಪೂ. ಹತ್ತನೆಯ ಶತಮಾನದಲ್ಲಿ ಇಸ್ರಾಯೇಲ್‌ ಜನಾಂಗವು ಬಹಳ ಗಂಭೀರವಾದ ಒಂದು ನಿರ್ಣಯವನ್ನು ಮಾಡಬೇಕಾಗಿ ಬಂತು. ಅದು, ತಾವು ಯಾರನ್ನು ಸೇವಿಸುವೆವು ಎಂಬುದೇ. ರಾಜ ಅಹಾಬನು ತನ್ನ ವಿಧರ್ಮಿ ಪತ್ನಿ ಈಜೆಬೆಲಳ ಪ್ರಭಾವಕ್ಕೊಳಗಾಗಿ ಹತ್ತು ಕುಲಗಳ ಇಸ್ರಾಯೇಲ್‌ ರಾಜ್ಯದಲ್ಲಿ ಬಾಳನ ಆರಾಧನೆಗೆ ಕುಮ್ಮಕ್ಕುಕೊಟ್ಟನು. ಬಾಳನು ಫಲಶಕ್ತಿಯ ದೇವನಾಗಿದ್ದು, ಮಳೆ ಮತ್ತು ಹುಲುಸಾದ ಬೆಳೆಯನ್ನು ಒದಗಿಸುತ್ತಾನೆಂದು ನಂಬಲಾಗುತ್ತಿತ್ತು. ಬಾಳನ ಅನೇಕ ಆರಾಧಕರು ತಮ್ಮ ಕೈಗೆ ಮುತ್ತಿಕ್ಕಿ ತಮ್ಮ ದೇವನ ವಿಗ್ರಹವೊಂದರ ಕಡೆಗೆ ಅದನ್ನು ಊದುತ್ತಿದ್ದಿರಬಹುದು ಅಥವಾ ಅದಕ್ಕೆ ಅಡ್ಡಬೀಳುತ್ತಿದ್ದಿರಬಹುದು. ತಮ್ಮ ಬೆಳೆ ಮತ್ತು ಜಾನುವಾರುಗಳನ್ನು ಬಾಳನು ಆಶೀರ್ವದಿಸುವಂತೆ ಆರಾಧಕರು ದೇವಸ್ಥಾನದ ದೇವದಾಸಿಯರೊಂದಿಗೆ ಕಾಮಕೇಳಿಯಲ್ಲಿ ಪಾಲ್ಗೊಳ್ಳುತ್ತಿದ್ದರು. ರಕ್ತಸೋರುವಷ್ಟು ತಮ್ಮ ದೇಹಕ್ಕೆ ಗಾಯಮಾಡಿಕೊಳ್ಳುವ ಪದ್ಧತಿಯೂ ಅವರಲ್ಲಿತ್ತು.​—⁠1 ಅರಸುಗಳು 18:28.

3 ಆದರೆ ಸುಮಾರು 7,000 ಮಂದಿ ಇಸ್ರಾಯೇಲ್ಯರು ಈ ವಿಗ್ರಹಾರಾಧಕ, ಅನೈತಿಕ, ಹಿಂಸಾತ್ಮಕ ಆರಾಧನಾ ರೂಪದಲ್ಲಿ ಭಾಗವಹಿಸಲು ನಿರಾಕರಿಸಿದರು. (1 ಅರಸುಗಳು 19:18) ಅವರು ಯೆಹೋವ ದೇವರೊಂದಿಗೆ ಮಾಡಿದ್ದ ಒಡಂಬಡಿಕೆಯ ಸಂಬಂಧಕ್ಕೆ ನಿಷ್ಠೆಯಿಂದ ಅಂಟಿಕೊಂಡರು ಮತ್ತು ಈ ಕಾರಣ ಹಿಂಸೆಗೊಳಗಾದರು. ಉದಾಹರಣೆಗೆ, ರಾಣಿ ಈಜೆಬೆಲಳು ಯೆಹೋವನ ಅನೇಕ ಪ್ರವಾದಿಗಳನ್ನು ಹತಿಸಿದಳು. (1 ಅರಸುಗಳು 18:​4, 13) ಈ ತೀವ್ರ ಪರೀಕ್ಷೆಯ ಕಾರಣದಿಂದ ಇಸ್ರಾಯೇಲಿನಲ್ಲಿ ಹೆಚ್ಚಿನವರು ಮಧ್ಯನಂಬಿಕೆಯನ್ನು ಆಚರಿಸುತ್ತ, ಯೆಹೋವನನ್ನೂ ಬಾಳನನ್ನೂ ಮೆಚ್ಚಿಸಪ್ರಯತ್ನಿಸಿದರು. ಆದರೆ ಇಸ್ರಾಯೇಲ್ಯನೊಬ್ಬನು ಯೆಹೋವನಿಂದ ದೂರತೊಲಗಿ ಮಿಥ್ಯದೇವರನ್ನು ಆರಾಧಿಸುವುದು ಧರ್ಮಭ್ರಷ್ಟತೆಯಾಗಿತ್ತು. ಇಸ್ರಾಯೇಲ್ಯರು ಯೆಹೋವನನ್ನು ಪ್ರೀತಿಸಿ ಆತನ ಆಜ್ಞೆಗಳಿಗೆ ವಿಧೇಯರಾಗುವಲ್ಲಿ ಅವರನ್ನು ಆಶೀರ್ವದಿಸುವೆನೆಂದು ಆತನು ಮಾತು ಕೊಟ್ಟಿದ್ದನು. ಆದರೆ, ತನಗೆ “ಅನನ್ಯ ಭಕ್ತಿ”ಯನ್ನು ತೋರಿಸಲು ತಪ್ಪುವಲ್ಲಿ ಅವರು ನಾಶವಾಗುವರೆಂದು ಆತನು ಎಚ್ಚರಿಸಿದ್ದನು.​—⁠ಧರ್ಮೋಪದೇಶಕಾಂಡ 5:​6-10, NW; 28:​15, 63.

4 ಇಂದು ಕ್ರೈಸ್ತಪ್ರಪಂಚದಲ್ಲಿ ತದ್ರೀತಿಯದೇ ಆದ ಸನ್ನಿವೇಶ ನೆಲೆಸಿದೆ. ಚರ್ಚ್‌ ಸದಸ್ಯರು ತಾವು ಕ್ರೈಸ್ತರೆಂದು ಹೇಳಿಕೊಳ್ಳುತ್ತಾರಾದರೂ ಅವರ ಧಾರ್ಮಿಕ ಹಬ್ಬಗಳು, ನಡೆವಳಿಕೆ ಮತ್ತು ನಂಬಿಕೆಗಳು ಬೈಬಲ್‌ ಬೋಧನೆಗಳಿಗೆ ವಿರುದ್ಧವಾಗಿವೆ. ಈಜೆಬೆಲಳಂತೆಯೇ ಕ್ರೈಸ್ತಪ್ರಪಂಚದ ಪಾದ್ರಿವರ್ಗವು ಯೆಹೋವನ ಸಾಕ್ಷಿಗಳನ್ನು ಹಿಂಸೆಗೊಳಪಡಿಸುವುದರಲ್ಲಿ ನಾಯಕತ್ವವನ್ನು ವಹಿಸುತ್ತದೆ. ಅದಕ್ಕೆ ಯುದ್ಧಗಳನ್ನು ಬೆಂಬಲಿಸುವ ದೀರ್ಘ ಚರಿತ್ರೆಯೂ ಇದ್ದು, ಹೀಗೆ ಚರ್ಚ್‌ ಸದಸ್ಯರಲ್ಲಿ ಅಸಂಖ್ಯಾತ ಕೋಟಿ ಮಂದಿಯ ಸಾವಿಗೆ ಕಾರಣವಾಗಿದೆ. ಲೋಕ ಸರಕಾರಗಳಿಗೆ ಕೊಡಲ್ಪಡುವ ಇಂತಹ ಧಾರ್ಮಿಕ ಬೆಂಬಲವನ್ನು ಬೈಬಲಿನಲ್ಲಿ ಆಧ್ಯಾತ್ಮಿಕ ಜಾರತ್ವವೆಂದು ಗುರುತಿಸಲಾಗಿದೆ. (ಪ್ರಕಟನೆ 18:​2, 3) ಇದಕ್ಕೆ ಕೂಡಿಸಿ, ಕ್ರೈಸ್ತಪ್ರಪಂಚವು ಅಕ್ಷರಾರ್ಥವಾದ ಜಾರತ್ವವನ್ನು, ಪಾದ್ರಿವರ್ಗದ ಮಧ್ಯೆಯೂ ಹೆಚ್ಚೆಚ್ಚಾಗಿ ಸಹಿಸಿಕೊಳ್ಳುತ್ತಿದೆ. ಯೇಸು ಕ್ರಿಸ್ತನೂ ಅವನ ಅಪೊಸ್ತಲರೂ ಈ ಮಹಾ ಧರ್ಮಭ್ರಷ್ಟತೆಯನ್ನು ಮುಂತಿಳಿಸಿದ್ದರು. (ಮತ್ತಾಯ 13:​36-43; ಅ. ಕೃತ್ಯಗಳು 20:​29, 30; 2 ಪೇತ್ರ 2:​1, 2) ಹಾಗಾದರೆ ಕ್ರೈಸ್ತಪ್ರಪಂಚದ ಒಂದು ನೂರು ಕೋಟಿಗಳಿಗಿಂತಲೂ ಹೆಚ್ಚು ಮಂದಿ ಹಿಂಬಾಲಕರಿಗೆ ಅಂತಿಮ ಫಲವೇನಾಗಲಿರುವುದು? ಮತ್ತು ಯೆಹೋವನ ಸತ್ಯಾರಾಧಕರಿಗೆ ಇವರ ಕಡೆಗೂ ಸುಳ್ಳುಧರ್ಮದಿಂದ ದಾರಿತಪ್ಪಿಸಲ್ಪಟ್ಟಿರುವ ಇತರರ ಕಡೆಗೂ ಯಾವ ಜವಾಬ್ದಾರಿಯಿದೆ? ‘ಬಾಳನನ್ನು ಇಸ್ರಾಯೇಲಿನಿಂದ ನಾಶಮಾಡಿಬಿಡುವುದಕ್ಕೆ’ ನಡೆಸಿದ ನಾಟಕೀಯ ಸಂಭವಗಳನ್ನು ಪರೀಕ್ಷಿಸುವ ಮೂಲಕ ಈ ಪ್ರಶ್ನೆಗಳಿಗೆ ನಮಗೆ ಸ್ಪಷ್ಟವಾದ ಉತ್ತರವು ದೊರೆಯುತ್ತದೆ.​—⁠2 ಅರಸುಗಳು 10:​28, NIBV.

ತನ್ನ ಮೊಂಡರಾದ ಜನರಿಗಾಗಿ ದೇವರ ಪ್ರೀತಿ

5 ಯೆಹೋವ ದೇವರು ತನಗೆ ಅಪನಂಬಿಗಸ್ತರಾಗುವವರನ್ನು ಶಿಕ್ಷಿಸುವುದರಲ್ಲಿ ಹರ್ಷಿಸುವುದಿಲ್ಲ. ಪ್ರೀತಿಪೂರ್ಣ ತಂದೆಯಾಗಿರುವ ಆತನು, ದುಷ್ಟರು ಪಶ್ಚಾತ್ತಾಪಪಟ್ಟು ತನ್ನ ಕಡೆಗೆ ತಿರುಗಬೇಕೆಂದು ಇಚ್ಛಿಸುತ್ತಾನೆ. (ಯೆಹೆಜ್ಕೇಲ 18:32; 2 ಪೇತ್ರ 3:⁠9) ಇದನ್ನು ತೋರಿಸಲಿಕ್ಕಾಗಿ ಮತ್ತು ಬಾಳನ ಆರಾಧನೆಯ ಫಲದ ಕುರಿತು ತನ್ನ ಜನರನ್ನು ಎಚ್ಚರಿಸಲಿಕ್ಕಾಗಿ, ಅಹಾಬ ಹಾಗೂ ಈಜೆಬೆಲರ ಕಾಲದಲ್ಲಿ ಯೆಹೋವನು ಅನೇಕ ಮಂದಿ ಪ್ರವಾದಿಗಳನ್ನು ಉಪಯೋಗಿಸಿದನು. ಇಂತಹ ಪ್ರವಾದಿಗಳಲ್ಲಿ ಒಬ್ಬನು ಎಲೀಯನಾಗಿದ್ದನು. ಮುಂದಾಗಿಯೇ ತಿಳಿಸಲ್ಪಟ್ಟ ಒಂದು ವಿಪತ್ಕಾರಕ ಅನಾವೃಷ್ಟಿಯ ಬಳಿಕ, ಇಸ್ರಾಯೇಲ್ಯರನ್ನು ಮತ್ತು ಬಾಳನ ಪ್ರವಾದಿಗಳನ್ನು ಕರ್ಮೆಲ್‌ ಬೆಟ್ಟದಲ್ಲಿ ಜಮಾಯಿಸುವಂತೆ ಎಲೀಯನು ರಾಜ ಅಹಾಬನಿಗೆ ತಿಳಿಸಿದನು.​—⁠1 ಅರಸುಗಳು 18:​1, 19.

6 “ಹಾಳಾಗಿದ್ದ,” ಅಂದರೆ ಬಹುಶಃ ಈಜೆಬೆಲಳನ್ನು ಮೆಚ್ಚಿಸಲಿಕ್ಕಾಗಿ ಕೆಡವಲ್ಪಟ್ಟಿದ್ದ ಯೆಹೋವನ ಯಜ್ಞವೇದಿಯೊಂದರ ಬಳಿ ಈ ಸಭೆಯು ಕೂಡಿಬಂತು. (1 ಅರಸುಗಳು 18:30) ವಿಷಾದಕರ ಸಂಗತಿಯೇನೆಂದರೆ, ಅಗತ್ಯವಾಗಿ ಬೇಕಾಗಿದ್ದ ಮಳೆಯನ್ನು ಬರಿಸಲು, ಯೆಹೋವನು ಅಥವಾ ಬಾಳನು ಇವರಲ್ಲಿ ಯಾರು ನಿಜವಾಗಿಯೂ ಶಕ್ತನೆಂಬುದರ ಬಗ್ಗೆ ಅಲ್ಲಿ ಹಾಜರಾಗಿದ್ದ ಇಸ್ರಾಯೇಲ್ಯರಿಗೆ ಸಂದೇಹವಿತ್ತು. ಬಾಳನ ಪ್ರತಿನಿಧಿಗಳಾಗಿ 450 ಮಂದಿ ಪ್ರವಾದಿಗಳಿದ್ದಾಗ, ಎಲೀಯನು ಒಬ್ಬನೇ ಯೆಹೋವನನ್ನು ಪ್ರತಿನಿಧೀಕರಿಸುವ ಪ್ರವಾದಿಯಾಗಿದ್ದನು. ಆ ಇಸ್ರಾಯೇಲ್ಯರ ಸಮಸ್ಯೆಯ ಬುಡಕ್ಕೆ ಹೋಗುತ್ತ ಎಲೀಯನು ಜನರನ್ನು, “ನೀವು ಎಷ್ಟರ ವರೆಗೆ ಎರಡು ಮನಸ್ಸುಳ್ಳವರಾಗಿರುವಿರಿ?” ಎಂದು ಕೇಳಿದನು. ಬಳಿಕ, ಇನ್ನೂ ಹೆಚ್ಚು ಸರಳವಾದ ಮಾತುಗಳಲ್ಲಿ ವಿವಾದಾಂಶವನ್ನು ಅವರ ಮುಂದಿಡುತ್ತ ಹೇಳಿದ್ದು: “ಯೆಹೋವನು ದೇವರಾಗಿದ್ದರೆ ಆತನನ್ನೇ ಹಿಂಬಾಲಿಸಿರಿ; ಬಾಳನು ದೇವರಾಗಿದ್ದರೆ ಅವನನ್ನೇ ಹಿಂಬಾಲಿಸಿರಿ.” ನಿರ್ಣಯಕ್ಕೆ ಬಾರದಿದ್ದ ಆ ಇಸ್ರಾಯೇಲ್ಯರು ಯೆಹೋವನಿಗೆ ಅನನ್ಯ ಭಕ್ತಿಯನ್ನು ತೋರಿಸುವಂತೆ ಪ್ರೇರಿಸಲಿಕ್ಕಾಗಿ, ಸತ್ಯ ದೇವರು ಯಾರು ಎಂಬುದನ್ನು ತೋರಿಸಿಕೊಡುವ ಒಂದು ಪರೀಕ್ಷೆಯನ್ನು ನಡೆಸಲು ಎಲೀಯನು ಸೂಚಿಸಿದನು. ಯೆಹೋವನಿಗೊಂದು ಮತ್ತು ಬಾಳನಿಗೊಂದು, ಹೀಗೆ ಎರಡು ಹೋರಿಗಳನ್ನು ಕೊಯ್ದು ಯಜ್ಞಾರ್ಪಿಸಬೇಕಾಗಿತ್ತು. ಸತ್ಯ ದೇವರು ತನ್ನ ಯಜ್ಞವನ್ನು ಬೆಂಕಿಯಿಂದ ದಹಿಸುವನು. ಬಾಳನ ಪ್ರವಾದಿಗಳು ತಮ್ಮ ಯಜ್ಞವನ್ನು ಸಿದ್ಧಮಾಡಿದ ಬಳಿಕ ತಾಸುಗಟ್ಟಲೆ, “ಬಾಳನೇ, ನಮಗೆ ಕಿವಿಗೊಡು” ಎಂದು ಕೂಗಾಡತೊಡಗಿದರು. ಎಲೀಯನು ಅವರಿಗೆ ಪರಿಹಾಸ್ಯಮಾಡತೊಡಗಿದಾಗ, ಅವರು ರಕ್ತಸೋರುವಷ್ಟು ಗಾಯಮಾಡಿಕೊಂಡು ಗಟ್ಟಿಯಾಗಿ ಕೂಗಿದರೂ ಉತ್ತರ ದೊರೆಯಲಿಲ್ಲ.​—⁠1 ಅರಸುಗಳು 18:​21, 26-29.

7 ಈಗ ಎಲೀಯನ ಸರದಿ ಬಂತು. ಪ್ರಥಮವಾಗಿ, ಅವನು ಯಜ್ಞವೇದಿಯನ್ನು ದುರಸ್ತುಮಾಡಿ, ಎಳೆಯ ಹೋರಿಯ ತುಂಡುಗಳನ್ನು ಅದರ ಮೇಲಿಟ್ಟನು. ಬಳಿಕ, ಆ ಯಜ್ಞದ ಮೇಲೆ ನಾಲ್ಕು ದೊಡ್ಡ ಕೊಡ ನೀರು ಹೊಯ್ಯುವಂತೆ ಹೇಳಿದನು. ಹೀಗೆ ಮೂರು ಬಾರಿ, ಯಜ್ಞವೇದಿಯ ಸುತ್ತಲಿನ ಕಾಲಿವೆ ನೀರಿನಿಂದ ತುಂಬುವ ತನಕ ಮಾಡಲಾಯಿತು. ಬಳಿಕ, ಎಲೀಯನು ಹೀಗೆ ಪ್ರಾರ್ಥಿಸಿದನು: “ಅಬ್ರಹಾಮ್‌ ಇಸಾಕ್‌ ಇಸ್ರಾಯೇಲ್ಯರ ದೇವರೇ, ಯೆಹೋವನೇ, ನೀನೊಬ್ಬನೇ ಇಸ್ರಾಯೇಲ್ಯರ ದೇವರಾಗಿರುತ್ತೀ ಎಂಬದನ್ನೂ ನಾನು ನಿನ್ನ ಸೇವಕನಾಗಿರುತ್ತೇನೆಂಬದನ್ನೂ ಇದನ್ನೆಲ್ಲಾ ನಿನ್ನ ಅಪ್ಪಣೆಯ ಮೇರೆಗೆ ಮಾಡಿದೆನೆಂಬದನ್ನೂ ಈಹೊತ್ತು ತೋರಿಸಿಕೊಡು. ಕಿವಿಗೊಡು; ಯೆಹೋವನೇ, ಕಿವಿಗೊಡು; ಯೆಹೋವನಾದ ನೀನೊಬ್ಬನೇ ದೇವರೂ ಈ ಜನರ ಮನಸ್ಸನ್ನು ನಿನ್ನ ಕಡೆಗೆ ತಿರುಗಿಸಿಕೊಳ್ಳುವವನೂ ಆಗಿರುತ್ತೀ ಎಂಬದನ್ನು ಇವರಿಗೆ ತಿಳಿಯಪಡಿಸು.”​—⁠1 ಅರಸುಗಳು 18:​30-37.

8 ಆಗ ಸತ್ಯದೇವರು ಅವನ ಪ್ರಾರ್ಥನೆಗೆ ಉತ್ತರವಾಗಿ, ಯಜ್ಞ ಮತ್ತು ವೇದಿಯನ್ನು ಆಕಾಶದಿಂದ ಬೆಂಕಿಬಿದ್ದು ದಹಿಸುವಂತೆ ಮಾಡಿದನು. ಆ ಬೆಂಕಿ ವೇದಿಯ ಸುತ್ತಲು ಕಾಲಿವೆಯಲ್ಲಿದ್ದ ನೀರನ್ನೂ ಹೀರಿಬಿಟ್ಟಿತು! ಆಗ ಇಸ್ರಾಯೇಲ್ಯರ ಮೇಲಾದ ಪರಿಣಾಮವನ್ನು ಭಾವಿಸಿರಿ. “ಜನರೆಲ್ಲರೂ ಅದನ್ನು ಕಂಡು ಬೋರ್ಲಬಿದ್ದು​—⁠ಯೆಹೋವನೇ ದೇವರು, ಯೆಹೋವನೇ ದೇವರು ಎಂದು ಕೂಗಿದರು.” ಈಗ ಎಲೀಯನು ಮುಂದಿನ ನಿರ್ಣಾಯಕವಾದ ಕ್ರಿಯೆಯನ್ನು ಕೈಗೊಂಡು, ಇಸ್ರಾಯೇಲ್ಯರಿಗೆ ಹೀಗೆ ಆಜ್ಞಾಪಿಸಿದನು: “ಬಾಳನ ಪ್ರವಾದಿಗಳೆಲ್ಲರನ್ನೂ ಹಿಡಿಯಿರಿ; ಅವರಲ್ಲಿ ಒಬ್ಬನೂ ತಪ್ಪಿಸಿಕೊಳ್ಳಬಾರದು.” ಆಗ ಬಾಳನ ಪ್ರವಾದಿಗಳಲ್ಲಿ ಎಲ್ಲ 450 ಮಂದಿಯನ್ನು ಕರ್ಮೆಲ್‌ ಬೆಟ್ಟದ ಬುಡದಲ್ಲಿ ಹತಿಸಲಾಯಿತು.​—⁠1 ಅರಸುಗಳು 18:​38-40.

9 ಮರೆಯಲಾಗದ ಅದೇ ದಿನದಂದು, ಯೆಹೋವನು ಮೂರೂವರೆ ವರುಷಗಳಲ್ಲಿ ಪ್ರಥಮ ಬಾರಿ ದೇಶದಲ್ಲಿ ಮಳೆಬೀಳುವಂತೆ ಮಾಡಿದನು! (ಯಾಕೋಬ 5:​17, 18) ಇಸ್ರಾಯೇಲ್ಯರು ತಮ್ಮ ಮನೆಗಳಿಗೆ ಹಿಂದೆರಳಿದಾಗ ಅವರ ಮಧ್ಯೆ ನಡೆಯುತ್ತಿದ್ದ ಮಾತುಕತೆಯನ್ನು ನೀವು ಊಹಿಸಬಲ್ಲಿರಿ; ಯೆಹೋವನು ತನ್ನ ದೇವತ್ವವನ್ನು ಸ್ಥಾಪಿಸಿದ್ದನು. ಆದರೆ ಬಾಳನ ಆರಾಧಕರು ಇನ್ನೂ ಬಿಟ್ಟುಕೊಡಲಿಲ್ಲ. ಈಜೆಬೆಲಳು ಯೆಹೋವನ ಸೇವಕರನ್ನು ಹಿಂಸಿಸುವುದನ್ನು ಮುಂದುವರಿಸಿದಳು. (1 ಅರಸುಗಳು 19:​1, 2; 21:​11-16) ಹೀಗೆ ದೇವಜನರ ಸಮಗ್ರತೆ ಪುನಃ ಪರೀಕ್ಷಿಸಲ್ಪಟ್ಟಿತು. ಬಾಳನ ಆರಾಧಕರ ವಿರುದ್ಧ ಯೆಹೋವನ ತೀರ್ಪಿನ ದಿನವು ಬರುವಾಗ, ಅವರು ಯೆಹೋವನಿಗೆ ಅನನ್ಯ ಭಕ್ತಿಯನ್ನು ಕೊಡುವವರಾಗಿ ಇರುವರೊ?

ಈಗಲೇ ನಿರ್ಣಾಯಕವಾಗಿ ಕ್ರಿಯೆಗೈಯಿರಿ

10 ಈ ಆಧುನಿಕ ದಿನಗಳಲ್ಲಿ, ಅಭಿಷಿಕ್ತ ಕ್ರೈಸ್ತರು ಎಲೀಯನಂತಹ ಕೆಲಸವನ್ನು ಮಾಡಿದ್ದಾರೆ. ಬಾಯಿಮಾತು ಮತ್ತು ಮುದ್ರಿತ ಪುಟಗಳ ಮೂಲಕ, ಅವರು ಕ್ರೈಸ್ತಪ್ರಪಂಚದ ಒಳಗಣ ಮತ್ತು ಹೊರಗಣ ರಾಷ್ಟ್ರಗಳ ಜನರಿಗೆ ಸುಳ್ಳುಧರ್ಮದ ಅಪಾಯದ ಕುರಿತು ಎಚ್ಚರಿಕೆಯನ್ನು ಕೊಡುತ್ತಿದ್ದಾರೆ. ಇದರ ಪರಿಣಾಮವಾಗಿ, ಲಕ್ಷಾಂತರ ಜನರು ಸುಳ್ಳುಧರ್ಮದ ಸದಸ್ಯತ್ವವನ್ನು ತ್ಯಜಿಸಲು ನಿರ್ಣಾಯಕವಾದ ಕ್ರಿಯೆಯನ್ನು ಕೈಗೊಂಡಿದ್ದಾರೆ ಮತ್ತು ತಮ್ಮ ಜೀವನಗಳನ್ನು ಯೆಹೋವನಿಗೆ ಸಮರ್ಪಿಸಿಕೊಂಡು ಯೇಸು ಕ್ರಿಸ್ತನ ಸ್ನಾತ ಶಿಷ್ಯರಾಗಿದ್ದಾರೆ. ಹೌದು, ಸುಳ್ಳುಧರ್ಮದ ಬಗ್ಗೆ ಕೊಡಲ್ಪಟ್ಟಿರುವ ಈ ತುರ್ತು ಕರೆಗೆ ಅವರು ಕಿವಿಗೊಟ್ಟಿದ್ದಾರೆ: “ನನ್ನ ಪ್ರಜೆಗಳೇ, ಅವಳನ್ನು ಬಿಟ್ಟುಬನ್ನಿರಿ; ನೀವು ಅವಳ ಪಾಪಗಳಲ್ಲಿ ಪಾಲುಗಾರರಾಗಬಾರದು; ಅವಳಿಗಾಗುವ ಉಪದ್ರವಗಳಿಗೆ ಗುರಿಯಾಗಬಾರದು.”​—⁠ಪ್ರಕಟನೆ 18:⁠4.

11 ಇನ್ನಿತರ ಲಕ್ಷಾಂತರ ಮಂದಿ, ಯೆಹೋವನ ಸಾಕ್ಷಿಗಳು ಹಬ್ಬಿಸುತ್ತಿರುವ ಬೈಬಲ್‌ ಆಧಾರಿತ ಸಂದೇಶದಿಂದ ಆಕರ್ಷಿತರಾದರೂ, ತಾವು ಏನು ಮಾಡಬೇಕೆಂಬುದರ ಬಗ್ಗೆ ಅನಿಶ್ಚಿತರಾಗಿದ್ದಾರೆ. ಇವರಲ್ಲಿ ಕೆಲವರು ಆಗಾಗ್ಗೆ ಕ್ರೈಸ್ತ ಕೂಟಗಳಿಗೆ ಅಂದರೆ ಕರ್ತನ ಸಂಧ್ಯಾಭೋಜನ ಇಲ್ಲವೆ ಜಿಲ್ಲಾ ಅಧಿವೇಶನದ ಕೆಲವೊಂದು ಭಾಗಗಳಿಗೆ ಹಾಜರಾಗುತ್ತಾರೆ. ಇಂಥವರೆಲ್ಲರೂ, “ನೀವು ಎರಡು ಅಭಿಪ್ರಾಯಗಳ ಮಧ್ಯದಲ್ಲಿ ಎಷ್ಟರವರೆಗೂ ನಿಂತವರಾಗಿ ಇರುವಿರಿ?” ಎಂಬ ಎಲೀಯನ ಮಾತುಗಳನ್ನು ಜಾಗರೂಕತೆಯಿಂದ ಪರ್ಯಾಲೋಚಿಸುವಂತೆ ನಾವು ಪ್ರೋತ್ಸಾಹಿಸುತ್ತೇವೆ. (1 ಅರಸುಗಳು 18:​21, NIBV) ವಿಳಂಬಿಸುವ ಬದಲಾಗಿ ಅವರು ಈಗಲೇ ನಿರ್ಣಾಯಕವಾದ ಕ್ರಿಯೆಯನ್ನು ಕೈಗೊಂಡು, ಯೆಹೋವನ ಸಮರ್ಪಿತ, ಸ್ನಾತ ಆರಾಧಕರಾಗುವ ಗುರಿಯ ಕಡೆಗೆ ಹುರುಪಿನಿಂದ ಕೆಲಸ ನಡೆಸಬೇಕು. ಇದು ನಿತ್ಯಜೀವಕ್ಕಾಗಿರುವ ಅವರ ಪ್ರತೀಕ್ಷೆಯ ಪ್ರಶ್ನೆಯಾಗಿದೆ!​—⁠2 ಥೆಸಲೊನೀಕ 1:​6-9.

12 ವಿಷಾದಕರವಾಗಿ, ಕೆಲವು ಸ್ನಾತ ಕ್ರೈಸ್ತರು ತಮ್ಮ ಆರಾಧನೆಯಲ್ಲಿ ಅಕ್ರಮರೂ ನಿಷ್ಕ್ರಿಯರೂ ಆಗಿದ್ದಾರೆ. (ಇಬ್ರಿಯ 10:​23-25; 13:​15, 16) ಇನ್ನೂ ಕೆಲವರು ಹಿಂಸೆಯ ಭಯದ ಕಾರಣ, ಜೀವನಾವಶ್ಯಕತೆಗಳ ಚಿಂತೆಗಳ ಕಾರಣ, ಐಶ್ವರ್ಯವಂತರಾಗುವ ಪ್ರಯತ್ನಗಳ ಕಾರಣ ಇಲ್ಲವೆ ಸ್ವಾರ್ಥಪರ ಸುಖಭೋಗಗಳನ್ನು ಬೆನ್ನಟ್ಟುವ ಕಾರಣ ತಮ್ಮ ಹುರುಪನ್ನು ಕಳೆದುಕೊಂಡಿದ್ದಾರೆ. ಈ ಸಂಗತಿಗಳೇ ತನ್ನ ಹಿಂಬಾಲಕರನ್ನು ಎಡವಿಬೀಳಿಸುವವು, ಅಡಗಿಸಿಬಿಡುವವು ಮತ್ತು ಅವರಿಗೆ ಉರುಲಾಗುವವೆಂದು ಯೇಸು ಎಚ್ಚರಿಸಿದನು. (ಮತ್ತಾಯ 10:​28-33; 13:​20-22; ಲೂಕ 12:​22-31; 21:​34-36) ‘ಎರಡು ಅಭಿಪ್ರಾಯಗಳ ಮಧ್ಯದಲ್ಲಿ ನಿಂತಿರುವ’ ಬದಲಿಗೆ ಇಂಥವರು, ದೇವರಿಗೆ ತಾವು ಮಾಡಿರುವ ಸಮರ್ಪಣೆಗನುಸಾರ ಜೀವಿಸಲು ನಿರ್ಣಾಯಕವಾದ ಕ್ರಿಯೆಯನ್ನು ಕೈಗೊಳ್ಳುವ ಮೂಲಕ ಹುರುಪುಳ್ಳವರಾಗಿದ್ದು ‘ದೇವರ ಕಡೆಗೆ ತಿರುಗಿಕೊಳ್ಳಬೇಕು.’​—⁠ಪ್ರಕಟನೆ 3:​15-19.

ಸುಳ್ಳುಧರ್ಮದ ಹಠಾತ್ತಾದ ಅಂತ್ಯ

13 ಮನುಷ್ಯರು ಈಗಲೇ ನಿರ್ಣಾಯಕವಾದ ಕ್ರಿಯೆಯನ್ನು ಕೈಗೊಳ್ಳುವುದು ಏಕೆ ತುರ್ತಿನದ್ದೆಂಬುದನ್ನು, ಕರ್ಮೆಲ್‌ ಬೆಟ್ಟದಲ್ಲಿ ಸತ್ಯ ದೇವರು ಯಾರೆಂಬ ವಿವಾದಾಂಶವು ಇತ್ಯರ್ಥವಾಗಿ ಸುಮಾರು 18 ವರುಷಗಳು ಕಳೆದ ಬಳಿಕ ಇಸ್ರಾಯೇಲಿನಲ್ಲಿ ಏನಾಯಿತೊ ಅದರಿಂದ ನೋಡಬಹುದು. ಬಾಳನ ಆರಾಧನೆಯ ವಿರುದ್ಧವಾಗಿ ಯೆಹೋವನ ತೀರ್ಪಿನ ದಿನವು ಎಲೀಯನ ಉತ್ತರಾಧಿಕಾರಿಯಾದ ಎಲೀಷನ ಶುಶ್ರೂಷೆಯ ಸಮಯದಲ್ಲಿ ಹಠಾತ್ತಾಗಿ ಮತ್ತು ಅನಿರೀಕ್ಷಿತವಾಗಿ ಬಂತು. ರಾಜ ಅಹಾಬನ ಮಗನಾದ ಯೋರಾಮನು ಇಸ್ರಾಯೇಲಿನಲ್ಲಿ ಆಳುತ್ತಿದ್ದನು ಮತ್ತು ಈಜೆಬೆಲಳು ರಾಜಮಾತೆಯಾಗಿ ಆಗಲೂ ಜೀವದಿಂದಿದ್ದಳು. ಎಲೀಷನು ಇಸ್ರಾಯೇಲಿನ ಸೇನಾಪತಿಯಾಗಿದ್ದ ಯೇಹುವನ್ನು ಹೊಸ ರಾಜನಾಗಿ ಅಭಿಷೇಕಿಸಲು ತನ್ನ ಸೇವಕನನ್ನು ಗುಪ್ತವಾಗಿ ಕಳುಹಿಸಿದನು. ಆಗ ಯೇಹು ಯೋರ್ದಾನಿನ ಆಚೆಪಕ್ಕದಲ್ಲಿದ್ದ ರಾಮೋತ್‌ಗಿಲ್ಯಾದಿನಲ್ಲಿ ಇಸ್ರಾಯೇಲಿನ ವೈರಿಗಳ ಎದುರು ಯುದ್ಧ ನಡೆಸುತ್ತಾ ಇದ್ದನು ಮತ್ತು ರಾಜ ಯೋರಾಮನು ಮೆಗಿದ್ದೋ ಸಮೀಪದ ಕಣಿವೆಯಲ್ಲಿದ್ದ ಇಜ್ರೇಲಿನಲ್ಲಿ ಯುದ್ಧಗಾಯದಿಂದ ಗುಣ ಹೊಂದುತ್ತಿದ್ದನು.​—⁠2 ಅರಸುಗಳು 8:​29–9:⁠4.

14 ಯೇಹು ಹೀಗೆ ಮಾಡುವಂತೆ ಯೆಹೋವನು ಆಜ್ಞಾಪಿಸಿದನು: “ನೀನು ನಿನ್ನ ಯಜಮಾನನಾದ ಅಹಾಬನ ಮನೆಯವರನ್ನು ಸಂಹರಿಸಿಬಿಡು; ಆಗ ನನ್ನ ಸೇವಕರಾದ ಪ್ರವಾದಿಗಳೇ ಮೊದಲಾದ ಯೆಹೋವಭಕ್ತರ ರಕ್ತವನ್ನು ಸುರಿಸಿದ್ದಕ್ಕಾಗಿ ನಾನು ಈಜೆಬೆಲಳಿಗೆ ಮುಯ್ಯಿತೀರಿಸಿದಂತಾಗುವದು. ಅಹಾಬನ ಕುಟುಂಬದವರೆಲ್ಲಾ ನಿರ್ನಾಮವಾಗಬೇಕು. . . . ಈಜೆಬೆಲಳ ಶವವು ಸಮಾಧಿಯನ್ನು ಸೇರುವದಿಲ್ಲ; ನಾಯಿಗಳು ಅದನ್ನು ಇಜ್ರೇಲಿನ ಹೊಲದಲ್ಲಿ ತಿಂದುಬಿಡುವವು.”​—⁠2 ಅರಸುಗಳು 9:​7-10.

15 ಯೇಹು ನಿರ್ಣಾಯಕವಾದ ಕ್ರಿಯೆಯನ್ನು ಕೈಗೊಳ್ಳುವ ವ್ಯಕ್ತಿಯಾಗಿದ್ದನು. ಅವನು ವಿಳಂಬಿಸದೆ ತನ್ನ ರಥವನ್ನು ಹತ್ತಿ ಇಜ್ರೇಲಿನ ಕಡೆಗೆ ವೇಗವಾಗಿ ಸವಾರಿಮಾಡಿದನು. ಇಜ್ರೇಲಿನ ಕಾವಲುಗಾರನೊಬ್ಬನು ಯೇಹುವಿನ ರಥಸವಾರಿಯನ್ನು ಗುರುತಿಸಿ ಯೋರಾಮನಿಗೆ ಸುದ್ದಿಕೊಟ್ಟನು. ಆಗ ಯೋರಾಮನು ತನ್ನ ರಥವನ್ನು ಹತ್ತಿ ತನ್ನ ಸೇನಾಪತಿ ಯೇಹುವನ್ನು ಸಂಧಿಸಲು ಹೋದನು. ಅವರು ಸಂಧಿಸಿದಾಗ, “ಯೇಹುವೇ, ಶುಭವೋ” ಎಂದು ಕೇಳಿದನು. ಆಗ ಯೇಹು, “ನಿನ್ನ ತಾಯಿಯ ದೇವದ್ರೋಹವೂ ಮಂತ್ರತಂತ್ರವೂ ಪ್ರಬಲವಾಗಿರುವಲ್ಲಿ ಶುಭವೆಲ್ಲಿಂದ ಬರುವದು” ಎಂದು ಪ್ರಶ್ನಿಸಿ, ಯೋರಾಮನು ಓಡಿಹೋಗುವ ಮೊದಲೇ ತನ್ನ ಬಿಲ್ಲನ್ನೆತ್ತಿ ಬಾಣವು ಅವನ ಹೃದಯಕ್ಕೆ ನಾಟುವಂತೆ ಹೊಡೆದು ಅವನನ್ನು ಕೊಂದನು.​—⁠2 ಅರಸುಗಳು 9:​20-24.

16 ವಿಳಂಬಿಸದೆ ಯೇಹು ರಥವನ್ನು ಓಡಿಸುತ್ತ ಪಟ್ಟಣಕ್ಕೆ ಬಂದನು. ತುಂಬ ಪ್ರಸಾಧನ ಹಚ್ಚಿ ಅಲಂಕರಿಸಿಕೊಂಡಿದ್ದ ಈಜೆಬೆಲಳು ಕಿಟಿಕಿಯಿಂದ ಕೆಳಗೆ ನೋಡುತ್ತ ಯೇಹುವನ್ನು ಬೆದರಿಕೆಯ ಸವಾಲಿನಿಂದ ವಂದಿಸಿದಳು. ಆಕೆಯನ್ನು ಅಲಕ್ಷಿಸುತ್ತ, ಯೇಹು “ನನ್ನ ಪಕ್ಷದವರು ಯಾರು” ಎಂದು ಬೆಂಬಲಕ್ಕಾಗಿ ಕೂಗಿ ಕರೆದನು. ಆಗ ಈಜೆಬೆಲಳ ಸೇವಕರು ನಿರ್ಣಾಯಕವಾದ ಕ್ರಿಯೆಯನ್ನು ಕೈಗೊಳ್ಳಬೇಕಾಯಿತು. ಇಬ್ಬರು ಮೂವರು ಕಂಚುಕಿಗಳು ಕಿಟಿಕಿಯಿಂದ ಹೊರಗೆ ನೋಡಲು, ಒಡನೆ ಅವರ ನಿಷ್ಠೆಯು ಪರೀಕ್ಷೆಗೊಳಗಾಯಿತು. “ಆಕೆಯನ್ನು ಕೆಳಗೆ ದೊಬ್ಬಿರಿ” ಎಂದು ಯೇಹು ಆಜ್ಞಾಪಿಸಿದನು. ಕಂಚುಕಿಗಳು ಈಜೆಬೆಲಳನ್ನು ಕೆಳಗೆ ಬೀದಿಗೆ ದೊಬ್ಬಲಾಗಿ, ಯೇಹುವಿನ ಕುದುರೆಗಳು ಮತ್ತು ರಥವು ಆಕೆಯನ್ನು ತುಳಿದುಹಾಕಿದವು. ಹೀಗೆ ಇಸ್ರಾಯೇಲಿನಲ್ಲಿ ಬಾಳನ ಆರಾಧನೆಯನ್ನು ಚಿತಾಯಿಸಿದಾಕೆಗೆ ತಕ್ಕದಾದ ಅಂತ್ಯವಾಯಿತು. ಆಕೆಯನ್ನು ಹೂಣಿಡಲು ಬರುವಷ್ಟರಲ್ಲಿ ಮುಂತಿಳಿಸಲ್ಪಟ್ಟಂತೆಯೇ ನಾಯಿಗಳು ಆಕೆಯ ಮಾಂಸವನ್ನು ತಿಂದುಬಿಟ್ಟಿದ್ದವು.​—⁠2 ಅರಸುಗಳು 9:​30-37.

17 “ಬಾಬೆಲೆಂಬ ಮಹಾನಗರಿ” ಎಂಬ ಹೆಸರಿರುವ ಸಾಂಕೇತಿಕ ಜಾರಸ್ತ್ರೀಗೂ ತದ್ರೀತಿಯ ಆಘಾತಕರ ಅಂತ್ಯವು ಬರುವುದು. ಈ ಜಾರಸ್ತ್ರೀಯು ಸೈತಾನನ ಲೋಕದ ಸುಳ್ಳುಧರ್ಮಗಳನ್ನು ಪ್ರತಿನಿಧೀಕರಿಸುತ್ತಾಳೆ. ಇವುಗಳ ಮೂಲವು ಪುರಾತನ ನಗರವಾದ ಬಾಬೆಲ್‌ ಆಗಿತ್ತು. ಸುಳ್ಳುಧರ್ಮ ಅಂತ್ಯಗೊಂಡ ತರುವಾಯ ಯೆಹೋವ ದೇವರು, ಸೈತಾನನ ಲೋಕದ ಜಾತ್ಯತೀತ ಭಾಗಗಳಿಗೆ ಸೇರಿರುವ ಸಕಲ ಮಾನವರ ಕಡೆಗೆ ಗಮನ ಹರಿಸುವನು. ಆಗ ಇವರು ಸಹ ನಾಶಹೊಂದುವರು ಮತ್ತು ಇದು ನೀತಿಯ ನೂತನ ಲೋಕಕ್ಕೆ ದಾರಿಯನ್ನು ಸಿದ್ಧಮಾಡಿಕೊಡುವುದು.​—⁠ಪ್ರಕಟನೆ 17:​3-6; 19:​19-21; 21:​1-4.

18 ಈಜೆಬೆಲಳ ಮರಣಾನಂತರ, ಅರಸನಾದ ಯೇಹು ಅಹಾಬನ ವಂಶಜರನ್ನು ಮತ್ತು ಅವನ ಪ್ರಧಾನ ಬೆಂಬಲಿಗರನ್ನು ಹತಿಸಲು ತಡಮಾಡಲಿಲ್ಲ. (2 ಅರಸುಗಳು 10:11) ಆದರೂ ಬಾಳನನ್ನು ಆರಾಧಿಸುತ್ತಿದ್ದ ಅನೇಕ ಮಂದಿ ಇಸ್ರಾಯೇಲ್ಯರು ಆ ದೇಶದಲ್ಲಿ ಇನ್ನೂ ಇದ್ದರು. ‘ಯೆಹೋವನಲ್ಲಿ ತನಗಿರುವ ಆಸಕ್ತಿಯನ್ನು’ ತೋರಿಸಲು ಯೇಹು ನಿರ್ಣಾಯಕವಾದ ಕ್ರಿಯೆಯನ್ನು ಕೈಗೊಂಡನು. (2 ಅರಸುಗಳು 10:16) ಯೇಹು ತಾನೂ ಒಬ್ಬ ಬಾಳನ ಆರಾಧಕನಾಗಿರುವಂತೆ ವರ್ತಿಸುತ್ತ, ಸಮಾರ್ಯದಲ್ಲಿ ಅಹಾಬನು ಕಟ್ಟಿಸಿದ್ದ ಬಾಳನ ದೇವಸ್ಥಾನದಲ್ಲಿ ಒಂದು ದೊಡ್ಡ ಉತ್ಸವವನ್ನು ಏರ್ಪಡಿಸಿದನು. ಇಸ್ರಾಯೇಲಿನಲ್ಲಿದ್ದ ಬಾಳನ ಎಲ್ಲ ಆರಾಧಕರು ಆ ಉತ್ಸವಕ್ಕೆ ಬಂದರು. ದೇವಸ್ಥಾನದೊಳಗೆ ಸಿಕ್ಕಿಬಿದ್ದಿದ್ದ ಅವರನ್ನೆಲ್ಲ ಯೇಹುವಿನ ಸಂಗಡಿಗರು ಹತಿಸಿದರು. ‘ಹೀಗೆ ಯೇಹುವು ಬಾಳನನ್ನು ಇಸ್ರಾಯೇಲಿನಲ್ಲಿಂದ ನಾಶಮಾಡಿಬಿಟ್ಟನು’ (NIBV) ಎಂದು ಹೇಳುತ್ತಾ ಬೈಬಲ್‌ ಆ ವೃತ್ತಾಂತವನ್ನು ಮುಗಿಸುತ್ತದೆ.​—⁠2 ಅರಸುಗಳು 10:​18-28.

19 ಬಾಳನ ಆರಾಧನೆ ಇಸ್ರಾಯೇಲಿನಿಂದ ಕಿತ್ತುಹಾಕಲ್ಪಟ್ಟಿತು. ಅಷ್ಟೇ ಖಂಡಿತವಾಗಿ, ಲೋಕದ ಸುಳ್ಳು ಧರ್ಮಗಳು ಹಠಾತ್ತಾದ ಆಘಾತಕರ ಅಂತ್ಯಕ್ಕೆ ಬರುವವು. ಆ ಮಹಾ ನ್ಯಾಯತೀರ್ಪಿನ ದಿನದಲ್ಲಿ ನೀವು ಯಾರ ಪಕ್ಷದಲ್ಲಿರುವಿರಿ? ಈಗಲೇ ನಿರ್ಣಾಯಕವಾದ ಕ್ರಿಯೆಯನ್ನು ಕೈಗೊಳ್ಳಿರಿ. ಆಗ “ಮಹಾ ಸಂಕಟ”ವನ್ನು (NW) ಪಾರಾಗುವ ಮಾನವರ “ಮಹಾ ಸಮೂಹ”ದಲ್ಲಿ ಸೇರಿಕೊಳ್ಳುವ ಸದವಕಾಶ ನಿಮಗೂ ದೊರಕೀತು. ಆಗ ನೀವು ಗತಕಾಲವನ್ನು ಆನಂದದಿಂದ ಸ್ಮರಿಸುವಿರಿ ಮತ್ತು “ತನ್ನ ಜಾರತ್ವದಿಂದ ಭೂಲೋಕವನ್ನು ಕೆಡಿಸುತ್ತಿದ್ದ ಆ ಮಹಾ ಜಾರಸ್ತ್ರೀಗೆ” ನ್ಯಾಯತೀರಿಸಿದ್ದಕ್ಕಾಗಿ ದೇವರನ್ನು ಕೊಂಡಾಡುವಿರಿ. ಇತರ ಸತ್ಯಾರಾಧಕರೊಂದಿಗೆ ಐಕ್ಯವಾಗಿ, ಸ್ವರ್ಗೀಯ ಸ್ವರಗಳು ಹಾಡುತ್ತಿರುವ ಈ ರೋಮಾಂಚಕ ಪದಗಳೊಂದಿಗೆ ನೀವು ಏಕಾಭಿಪ್ರಾಯದಿಂದಿರುವಿರಿ: “ಹಲ್ಲೆಲೂಯಾ; ಸರ್ವಶಕ್ತನಾಗಿರುವ ನಮ್ಮ ದೇವರಾದ [ಯೆಹೋವನು] ಆಳುತ್ತಾನೆ.”​—⁠ಪ್ರಕಟನೆ 7:​9, 10, 14; 19:​1, 2, 6.

ಧ್ಯಾನಕ್ಕಾಗಿ ಪ್ರಶ್ನೆಗಳು

• ಪುರಾತನ ಇಸ್ರಾಯೇಲ್‌ ಬಾಳನ ಆರಾಧನೆಯ ವಿಷಯದಲ್ಲಿ ಹೇಗೆ ದೋಷಿಯಾಯಿತು?

• ಬೈಬಲ್‌ ಯಾವ ಮಹಾ ಧರ್ಮಭ್ರಷ್ಟತೆಯನ್ನು ಮುಂತಿಳಿಸಿತು, ಮತ್ತು ಆ ಪ್ರವಾದನೆ ಹೇಗೆ ನೆರವೇರಿದೆ?

• ಬಾಳನ ಆರಾಧನೆಯನ್ನು ಯೇಹು ಹೇಗೆ ನಿರ್ಮೂಲಮಾಡಿದನು?

• ದೇವರ ನ್ಯಾಯತೀರ್ಪಿನ ದಿನವನ್ನು ಪಾರಾಗಲು ನಾವೇನನ್ನು ಮಾಡಲೇಬೇಕು?

[ಅಧ್ಯಯನ ಪ್ರಶ್ನೆಗಳು]

1. ನಮ್ಮ ಸಮಯವನ್ನು ಗತಕಾಲಗಳಿಗಿಂತ ಯಾವುದು ಭಿನ್ನವಾಗಿಸುತ್ತದೆ?

2. ರಾಜ ಅಹಾಬನು ಆಳುತ್ತಿದ್ದ ಸಮಯದಲ್ಲಿ ಇಸ್ರಾಯೇಲಿನ ಹತ್ತು ಕುಲಗಳ ರಾಜ್ಯದಲ್ಲಿ ಏನು ಸಂಭವಿಸಿತು?

3. ಬಾಳನ ಆರಾಧನೆಯು ದೇವಜನರ ಮೇಲೆ ಯಾವ ಪರಿಣಾಮವನ್ನು ಬೀರಿತು?

4. ಕ್ರೈಸ್ತರ ನಡುವೆ ಏನಾಗಲಿದೆಯೆಂದು ಯೇಸು ಮತ್ತು ಅವನ ಅಪೊಸ್ತಲರು ಮುಂತಿಳಿಸಿದರು, ಮತ್ತು ಅದು ಹೇಗೆ ನೆರೆವೇರಿದೆ?

5. ಯೆಹೋವನು ತನ್ನ ಮೊಂಡರಾಗಿದ್ದ ಜನರಿಗೆ ಪ್ರೀತಿಭರಿತ ಕಾಳಜಿಯನ್ನು ಹೇಗೆ ತೋರಿಸಿದನು?

6, 7. (ಎ) ಇಸ್ರಾಯೇಲಿನ ಧರ್ಮಭ್ರಷ್ಟತೆಯ ಮೂಲಕಾರಣವನ್ನು ಎಲೀಯನು ಹೇಗೆ ಬಯಲಿಗೆಳೆದನು? (ಬಿ) ಬಾಳನ ಪ್ರವಾದಿಗಳೇನು ಮಾಡಿದರು? (ಸಿ) ಎಲೀಯನು ಏನು ಮಾಡಿದನು?

8. ದೇವರು ಎಲೀಯನ ಪ್ರಾರ್ಥನೆಗೆ ಹೇಗೆ ಉತ್ತರಕೊಟ್ಟನು, ಮತ್ತು ಪ್ರವಾದಿಯು ಯಾವ ಕ್ರಮವನ್ನು ಕೈಕೊಂಡನು?

9. ಸತ್ಯಾರಾಧಕರನ್ನು ಮುಂದೆಯೂ ಹೇಗೆ ಪರೀಕ್ಷಿಸಲಾಯಿತು?

10. (ಎ) ಆಧುನಿಕ ದಿನಗಳಲ್ಲಿ, ಅಭಿಷಿಕ್ತ ಕ್ರೈಸ್ತರು ಏನು ಮಾಡುತ್ತಿದ್ದಾರೆ? (ಬಿ) ಪ್ರಕಟನೆ 18:4ರಲ್ಲಿರುವ ಆಜ್ಞೆಗೆ ವಿಧೇಯರಾಗುವುದರಲ್ಲಿ ಏನು ಒಳಗೂಡಿದೆ?

11. ಯೆಹೋವನ ಒಪ್ಪಿಗೆಗೆ ಯಾವುದು ಅಗತ್ಯ?

12. ಕೆಲವು ಮಂದಿ ಸ್ನಾತ ಕ್ರೈಸ್ತರು ಯಾವ ಅಪಾಯಕರವಾದ ಸ್ಥಿತಿಗೆ ಜಾರಿದ್ದಾರೆ, ಮತ್ತು ಅವರೇನು ಮಾಡಬೇಕು?

13. ಯೇಹು ರಾಜನಾಗಿ ಅಭಿಷೇಕಿಸಲ್ಪಟ್ಟಾಗ ಇಸ್ರಾಯೇಲಿನ ಸ್ಥಿತಿಗತಿ ಹೇಗಿತ್ತೆಂಬುದನ್ನು ವರ್ಣಿಸಿರಿ.

14, 15. ಯೇಹುವಿಗೆ ಯಾವ ಆಜ್ಞೆ ಸಿಕ್ಕಿತು, ಮತ್ತು ಅವನು ಹೇಗೆ ಪ್ರತಿವರ್ತಿಸಿದನು?

16. (ಎ) ಈಜೆಬೆಲಳ ಕಂಚುಕಿಗಳ ಮುಂದೆ ಥಟ್ಟನೆ ಯಾವ ಸನ್ನಿವೇಶ ಒದಗಿಬಂತು? (ಬಿ) ಈಜೆಬೆಲಳ ಕುರಿತು ಹೇಳಲ್ಪಟ್ಟ ಯೆಹೋವನ ಮಾತು ಹೇಗೆ ನೆರವೇರಿತು?

17. ಈಜೆಬೆಲಳ ಮೇಲೆ ಬಂದ ದೇವರ ತೀರ್ಪು ಯಾವ ಭಾವೀ ಘಟನೆಯಲ್ಲಿ ನಮ್ಮ ನಂಬಿಕೆಯನ್ನು ಬಲಪಡಿಸಬೇಕು?

18. ಈಜೆಬೆಲಳ ಮರಣಾನಂತರ ಇಸ್ರಾಯೇಲಿನಲ್ಲಿದ್ದ ಬಾಳನ ಆರಾಧಕರಿಗೆ ಏನಾಯಿತು?

19. ಯೆಹೋವನ ನಿಷ್ಠಾವಂತ ಆರಾಧಕರ ‘ಮಹಾ ಸಮೂಹಕ್ಕೆ’ ಯಾವ ಆಶ್ಚರ್ಯಕರವಾದ ಪ್ರತೀಕ್ಷೆಯು ಕಾದಿದೆ?

[ಪುಟ 25ರಲ್ಲಿರುವ ಭೂಪಟ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಸೋಕೋ

ಅಫೇಕ್‌

ಹೆಲ್ಕತ್‌

ಯೊಕ್ನೆಯಾಮ್‌

ಮೆಗಿದ್ದೋ

ತಾನಾಕ್‌

ದೋತಾನ್‌

ಸಮಾರ್ಯ

ಏಂದೋರ್‌

ಶೂನೇಮ್‌

ಒಫ್ರ

ಇಬ್ಲೆಯಾಮ್‌ (ಗಾತ್‌ರಿಮ್ಮೋನ್‌)

ಇಜ್ರೇಲ್‌

ಬೇತ್‌ಷೆಮೆಷ್‌

ಬೇತ್‌ಷೆಯಾನ್‌

ಯಾಬೇಷ್‌ ಗಿಲ್ಯಾದ್‌?

ತಿರ್ಚ

ಅಬೇಲ್‌ಮೆಹೋಲ

ಬೇತ್‌ಅರ್ಬೇಲ್‌

ರಾಮೋತ್‌ಗಿಲ್ಯಾದ್‌

ಪರ್ವತ ಶಿಖರಗಳು

ಕರ್ಮೆಲ್‌ ಬೆಟ್ಟ

ತಾಬೋರ್‌ ಬೆಟ್ಟ

ಮೋರೆ

ಗಿಲ್ಬೋವ ಬೆಟ್ಟ

[ಜಲಾಶಯಗಳು]

ಮೆಡಿಟರೇನಿಯನ್‌ ಸಮುದ್ರ

ಗಲಿಲಾಯ ಸಮುದ್ರ

[ನದಿ]

ಯೊರ್ದನ್‌ ಹೊಳೆ

[ಬುಗ್ಗೆ ಮತ್ತು ಬಾವಿ]

ಹರೋದಿನ ಬುಗ್ಗೆ

[ಕೃಪೆ]

Based on maps copyrighted by Pictorial Archive (Near Eastern History) Est. and Survey of Israel

[ಪುಟ 26ರಲ್ಲಿರುವ ಚಿತ್ರಗಳು]

ಕ್ರಮವಾಗಿ ರಾಜ್ಯ ಸಾರುವಿಕೆಯಲ್ಲಿ ಭಾಗವಹಿಸುತ್ತ, ಕ್ರೈಸ್ತ ಕೂಟಗಳಿಗೆ ಹಾಜರಾಗುತ್ತ ಇರುವುದು ಸತ್ಯಾರಾಧನೆಯ ಮಹತ್ವದ ಭಾಗಗಳು

[ಪುಟ 28, 29ರಲ್ಲಿರುವ ಚಿತ್ರ]

ಯೆಹೋವನ ದಿನವನ್ನು ಪಾರಾಗಬಯಸುವವರೆಲ್ಲರೂ ಯೇಹುವಿನಂತೆ ನಿರ್ಣಾಯಕವಾದ ಕ್ರಿಯೆಯನ್ನು ಕೈಗೊಳ್ಳಲೇಬೇಕು