ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮೆಕ್ಸಿಕೊ ದೇಶದಲ್ಲಿ ಚೀನೀ ಜನರಿಗೆ ಸಹಾಯ ನೀಡುವುದು

ಮೆಕ್ಸಿಕೊ ದೇಶದಲ್ಲಿ ಚೀನೀ ಜನರಿಗೆ ಸಹಾಯ ನೀಡುವುದು

ಮೆಕ್ಸಿಕೊ ದೇಶದಲ್ಲಿ ಚೀನೀ ಜನರಿಗೆ ಸಹಾಯ ನೀಡುವುದು

“ಆ ಕಾಲದಲ್ಲಿ ಜನಾಂಗಗಳ ವಿವಿಧಭಾಷೆಗಳವರಾದ ಹತ್ತು ಜನರು ಯೆಹೂದ್ಯನೊಬ್ಬನ ಸೆರಗನ್ನು ಹಿಡಿದುಕೊಂಡು​—⁠ನಾವು ನಿಮ್ಮೊಂದಿಗೆ ಬರುವೆವು, ದೇವರು ನಿಮ್ಮ ಸಂಗಡ ಇದ್ದಾನೆಂಬ ಸುದ್ದಿಯು ನಮ್ಮ ಕಿವಿಗೆ ಬಿದ್ದಿದೆ ಎಂದು ಹೇಳುವರು.” (ಜೆಕರ್ಯ 8:23) ಇಂದು ಈ ಸೊಗಸಾದ ಪ್ರವಾದನೆಯು ಲೋಕಾದ್ಯಂತ ನೆರವೇರುತ್ತಿದೆ. ‘ವಿವಿಧಭಾಷೆಗಳ’ ಜನರು ಯೆಹೋವ ದೇವರನ್ನು ಆರಾಧಿಸುವ ಸಲುವಾಗಿ ಆಧ್ಯಾತ್ಮಿಕ ಇಸ್ರಾಯೇಲ್ಯರಿಗೆ ಅಂಟಿಕೊಂಡಿದ್ದಾರೆ. ಈ ಪ್ರವಾದನೆಯ ನೆರವೇರಿಕೆಯಲ್ಲಿ ಯೆಹೋವನ ಸಾಕ್ಷಿಗಳಿಗೆ ಬಹಳಷ್ಟು ಆಸಕ್ತಿಯಿದೆ. ಆದುದರಿಂದಲೇ, ಅವರಲ್ಲಿ ಅನೇಕರು ಲೋಕವ್ಯಾಪಕವಾಗಿ ನಡೆಯುತ್ತಿರುವ ಸಾರುವ ಕೆಲಸದಲ್ಲಿ ಭಾಗವಹಿಸಲಿಕ್ಕಾಗಿ ಇನ್ನೊಂದು ಭಾಷೆಯನ್ನು ಕಲಿಯುತ್ತಿದ್ದಾರೆ.

ಮೆಕ್ಸಿಕೊ ದೇಶದಲ್ಲಿರುವ ಯೆಹೋವನ ಸಾಕ್ಷಿಗಳು ಸಹ ಇದನ್ನು ಮಾಡುತ್ತಿದ್ದಾರೆ. ಚೀನೀ ಭಾಷೆಯನ್ನಾಡುವ ಸುಮಾರು 30,000 ಮಂದಿ ಅಲ್ಲಿದ್ದಾರೆ. ಅವರಲ್ಲಿ 15 ಮಂದಿ 2003ರಲ್ಲಿ ಮೆಕ್ಸಿಕೊ ಸಿಟಿಯಲ್ಲಿ ಕ್ರಿಸ್ತನ ಮರಣದ ಜ್ಞಾಪಕಾಚರಣೆಗೆ ಉಪಸ್ಥಿತರಿದ್ದರು. ಇದರಿಂದಾಗಿ, ಚೀನೀ ಕ್ಷೇತ್ರದಲ್ಲಿ ಆಧ್ಯಾತ್ಮಿಕ ಬೆಳವಣಿಗೆಯ ಸಾಧ್ಯತೆಯನ್ನು ಅಲ್ಲಿನ ಸಾಕ್ಷಿಗಳು ಮನಗಂಡರು. ಚೀನೀ ಭಾಷೆಯನ್ನಾಡುವ ಈ ಜನರಿಗೆ ಸಹಾಯ ನೀಡಲು ಹೆಚ್ಚು ಸುವಾರ್ತಿಕರನ್ನು ಸಿದ್ಧಗೊಳಿಸುವ ಉದ್ದೇಶದಿಂದ, ಮೆಕ್ಸಿಕನ್‌ ಸಾಕ್ಷಿಗಳಿಗೆ ಮ್ಯಾಂಡರಿನ್‌ ಚೀನೀ ಭಾಷೆಯಲ್ಲಿ ಸರಳವಾದ ನಿರೂಪಣೆಗಳನ್ನು ಕಲಿಸಲಿಕ್ಕಾಗಿ ಮೂರು ತಿಂಗಳುಗಳ ಕೋರ್ಸನ್ನು ಏರ್ಪಡಿಸಲಾಯಿತು. ಒಟ್ಟು 25 ಮಂದಿ ಸಾಕ್ಷಿಗಳು ಇದರಲ್ಲಿ ಭಾಗವಹಿಸಿದರು. ಆ ಕೋರ್ಸ್‌ ಮುಗಿದಾಗ, ಮೆಕ್ಸಿಕೊ ಸಿಟಿಯ ಮ್ಯಾಂಡರಿನ್‌ ಭಾಷೆಯನ್ನಾಡುವ ಸಮಾಜದ ಅಧಿಕಾರಿಯೊಬ್ಬರು ಪದವಿಪ್ರದಾನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮವು, ಚೀನೀ ಭಾಷೆಯನ್ನಾಡುವ ಜನರ ಮೇಲೆ ಆ ಕೋರ್ಸ್‌ ಬೀರಿರುವ ಪರಿಣಾಮವನ್ನು ತೋರಿಸಿತು. ಸ್ಥಳಿಕ ಚೀನೀ ಸಂಸ್ಥೆಯೊಂದು ಆ ಕ್ಲಾಸಿನ ಮೂವರು ವಿದ್ಯಾರ್ಥಿಗಳಿಗೆ ವಿದೇಶಕ್ಕೆ ಹೋಗಿ ತಾವು ಕಲಿತ್ತಿದ್ದ ಚೀನೀ ಭಾಷೆಯನ್ನು ಇನ್ನಷ್ಟು ಉತ್ತಮಗೊಳಿಸಲು ವಿದ್ಯಾರ್ಥಿವೇತನಗಳನ್ನು ನೀಡಿತು.

ಆ ಭಾಷಾ ಕೋರ್ಸ್‌ನಲ್ಲಿ ಪ್ರಾಯೋಗಿಕ ತರಬೇತಿಯೂ ಒಳಗೂಡಿತ್ತು. ಕೆಲವೊಂದು ಮೂಲಭೂತ ವಾಕ್ಸರಣಿಗಳನ್ನು ಕಲಿತ ಬಳಿಕ ವಿದ್ಯಾರ್ಥಿಗಳು ಕೂಡಲೇ ಮೆಕ್ಸಿಕೊ ಸಿಟಿಯ ವ್ಯಾಪಾರ ಕ್ಷೇತ್ರದಲ್ಲಿ ಚೀನೀ ಭಾಷೆಯಲ್ಲಿ ಸಾರಲಾರಂಭಿಸಿದರು. ಈ ಹುರುಪಿನ ವಿದ್ಯಾರ್ಥಿಗಳು 21 ಬೈಬಲ್‌ ಅಧ್ಯಯನಗಳನ್ನು ಆರಂಭಿಸಿದರು. ಪಿನ್ಯಿನ್‌ ಎಂಬ ರೋಮನ್‌ ಲಿಪಿಯಲ್ಲಿ ಬರೆಯಲ್ಪಟ್ಟಿರುವ ಚೀನೀ ಭಾಷೆಯ ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಬ್ರೋಷರ್‌ ಇದಕ್ಕೆ ತುಂಬ ಸಹಾಯವನ್ನು ನೀಡಿತು.

ಚೀನೀ ಭಾಷೆಯನ್ನು ಆಗ ತಾನೇ ಕಲಿಯಲು ಪ್ರಾರಂಭಿಸಿದ್ದ ಸಾಕ್ಷಿಗಳು ಬೈಬಲ್‌ ಅಧ್ಯಯನಗಳನ್ನು ನಡಿಸಿದ್ದಾದರೂ ಹೇಗೆ? ಆರಂಭದಲ್ಲಿ ಅವರು, “ಚಿಂಗ್‌ ಡೂ [ದಯವಿಟ್ಟು ಓದಿ]” ಎಂದಷ್ಟೇ ಹೇಳಿ ಪ್ಯಾರಗ್ರಾಫನ್ನೂ ಪ್ರಶ್ನೆಯನ್ನೂ ತೋರಿಸುತ್ತಿದ್ದರು. ವ್ಯಕ್ತಿಯು ಅದನ್ನು ಚೀನೀ ಭಾಷೆಯಲ್ಲಿ ಓದಿ ಉತ್ತರ ಕೊಟ್ಟ ಬಳಿಕ, ಅವರು “ಷೀ ಷಿ [ಉಪಕಾರ]” ಮತ್ತು “ಹಂಗ್‌ ಹಾವ್‌ [ತುಂಬ ಒಳ್ಳೆಯದು]” ಎಂದು ಹೇಳುತ್ತಿದ್ದರು.

ಇಂತಹ ಒಂದು ಬೈಬಲ್‌ ಅಧ್ಯಯನವು ನಾಮಮಾತ್ರದ ಕ್ರೈಸ್ತಳಾಗಿದ್ದ ಒಬ್ಬಾಕೆಯೊಡನೆ ಆರಂಭಿಸಲ್ಪಟ್ಟಿತು. ಮೂರು ಬಾರಿ ಅಧ್ಯಯನ ನಡೆಸಿದ ಮೇಲೆ ಆ ಸ್ತ್ರೀಗೆ ವಿಷಯವು ನಿಜವಾಗಿ ಅರ್ಥವಾಗುತ್ತದೊ ಇಲ್ಲವೊ ಎಂದು ಸಾಕ್ಷಿ ಸ್ತ್ರೀ ಶಂಕಿಸಿದಳು. ಆದುದರಿಂದ ಚೀನೀ ಭಾಷೆಯನ್ನಾಡುವ ಒಬ್ಬ ಸಹೋದರನನ್ನು ಆಕೆ ಅಲ್ಲಿಗೆ ಕರೆದುಕೊಂಡು ಹೋದಳು. ಅವನು ಆ ಸ್ತ್ರೀಗೆ ಪ್ರಶ್ನೆಗಳೇನಾದರೂ ಇವೆಯೊ ಎಂದು ಕೇಳಲಾಗಿ, ಆಕೆ ಹೇಳಿದ್ದು: “ದೀಕ್ಷಾಸ್ನಾನ ಹೊಂದಲಿಕ್ಕೆ ನನಗೆ ಈಜು ಬರಬೇಕಾ?”

ಸ್ವಲ್ಪದರಲ್ಲಿ, ಒಂದು ಸಭಾ ಪುಸ್ತಕ ಅಧ್ಯಯನವನ್ನು ಏರ್ಪಡಿಸಲಾಯಿತು. ಅಲ್ಲಿ ಸರಾಸರಿ 9 ಮಂದಿ ಚೀನೀ ಭಾಷೆಯನ್ನಾಡುವವರೂ 23 ಮಂದಿ ಸ್ಥಳಿಕ ಮೆಕ್ಸಿಕನ್‌ ಸಾಕ್ಷಿಗಳೂ ಕೂಡಿಬರುತ್ತಿದ್ದರು. ಹಾಗೆ ಕೂಡಿಬರುತ್ತಿದ್ದವರಲ್ಲಿ ಒಬ್ಬನು ಚೀನೀ ವೈದ್ಯನಾಗಿದ್ದನು. ಅವನಿಗೆ ರೋಗಿಯೊಬ್ಬಳು ಸ್ಪ್ಯಾನಿಷ್‌ ಭಾಷೆಯಲ್ಲಿ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ಕೊಟ್ಟಿದ್ದಳು. ಆದರೆ ಅವನಿಗೆ ಸ್ಪ್ಯಾನಿಷ್‌ ಭಾಷೆ ತಿಳಿಯದಿದ್ದುದರಿಂದ, ಅದರ ಕೆಲವು ವಾಕ್ಯಗಳನ್ನು ಭಾಷಾಂತರಿಸುವಂತೆ ಅವನು ಒಬ್ಬ ವ್ಯಕ್ತಿಯನ್ನು ಕೇಳಿಕೊಂಡನು. ಈ ಪತ್ರಿಕೆಗಳು ಬೈಬಲಿಗೆ ಸಂಬಂಧಪಟ್ಟಿವೆ ಎಂದು ತಿಳಿದ ಆ ವೈದ್ಯನು, ಚೀನೀ ಭಾಷೆಯಲ್ಲಿ ಇವು ದೊರೆಯುತ್ತವೊ ಎಂದು ಆ ರೋಗಿಯನ್ನು ಕೇಳಿದನು. ಆಕೆ ಚೀನೀ ಭಾಷೆಯಲ್ಲಿ ಅವನ್ನು ಕೊಟ್ಟ ಬಳಿಕ, ಆ ವೈದ್ಯನನ್ನು ಚೀನೀ ಭಾಷೆ ಮಾತಾಡುವ ಒಬ್ಬ ಸಾಕ್ಷಿಯು ಭೇಟಿಮಾಡುವಂತೆ ಮೆಕ್ಸಿಕೊ ದೇಶದ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸಿನ ಮೂಲಕ ಏರ್ಪಾಡುಮಾಡಲಾಯಿತು. ಚೀನಾ ದೇಶದಲ್ಲಿದ್ದ ಅವನ ತಾಯಿಯ ಬಳಿ ಒಂದು ಬೈಬಲ್‌ ಇತ್ತು ಮತ್ತು ಅದನ್ನು ಅವನು ಓದಿ ಸಂತೋಷಪಟ್ಟಿದ್ದನು. ಅವನು ಮೆಕ್ಸಿಕೊ ದೇಶಕ್ಕೆ ಹೊರಟಾಗ, ಅವನ ತಾಯಿ ಅವನು ಅಲ್ಲಿ ಬೈಬಲನ್ನು ಓದುವುದನ್ನು ನಿಲ್ಲಿಸಬಾರದೆಂದು ಹೇಳಿದ್ದರು. ಇದರಿಂದಾಗಿ ಯಾರಾದರೂ ಬಂದು ತನಗೆ ಬೈಬಲಿನ ದೇವರ ಕುರಿತು ಕಲಿಯಲು ಸಹಾಯಮಾಡಬೇಕೆಂದು ಅವನು ಪ್ರಾರ್ಥಿಸುತ್ತಿದ್ದನು. “ದೇವರು ನನ್ನ ಪ್ರಾರ್ಥನೆಯನ್ನು ಆಲಿಸಿದ್ದಾನೆ!” ಎಂದವನು ಉದ್ಗರಿಸಿದನು.

ಯೆಹೋವನ ಸಾಕ್ಷಿಗಳು ಬೈಬಲ್‌ ಅಧ್ಯಯನ ಮಾಡುತ್ತಿದ್ದ ಒಬ್ಬ ಮೆಕ್ಸಿಕನ್‌ ಸ್ತ್ರೀಯಿಂದ ಮನೆಯನ್ನು ಬಾಡಿಗೆಗೆ ತೆಗೆದುಕೊಂಡಿದ್ದ ಒಂದು ಚೀನೀ ಕುಟುಂಬವೂ ಆ ಪುಸ್ತಕ ಅಧ್ಯಯನಕ್ಕೆ ಹಾಜರಾಗುತ್ತಿತ್ತು. ಆ ಕುಟುಂಬಕ್ಕೆ ಸ್ಪ್ಯಾನಿಷ್‌ ಭಾಷೆ ಸ್ವಲ್ಪ ಮಾತ್ರವೇ ಗೊತ್ತಿದ್ದರೂ ಅವರು ಬೈಬಲ್‌ ಚರ್ಚೆಗಳಲ್ಲಿ ಕುಳಿತುಕೊಳ್ಳುತ್ತಿದ್ದರು. ಸ್ವಲ್ಪ ಸಮಯದ ಬಳಿಕ, ಆ ಮೆಕ್ಸಿಕನ್‌ ಸ್ತ್ರೀಯೊಂದಿಗೆ ಬೈಬಲ್‌ ಅಧ್ಯಯನ ನಡೆಸುತ್ತಿದ್ದ ಸಹೋದರಿಯ ಬಳಿ ಚೀನೀ ಭಾಷೆಯ ಸಾಹಿತ್ಯಗಳಿವೆಯೊ ಎಂದು ಆ ಕುಟುಂಬವು ಕೇಳಿತು. ಬೇಗನೆ ಅವರೊಂದಿಗೆ ಬೈಬಲ್‌ ಅಧ್ಯಯನವನ್ನು ಆರಂಭಿಸಲಾಯಿತು. ಸ್ವಲ್ಪದರಲ್ಲೇ, ಆ ಕುಟುಂಬವು ತಮ್ಮ ದೇಶಸ್ಥರಿಗೆ ಸಾರಲು ಮತ್ತು ತಮ್ಮ ಜೀವನಗಳನ್ನು ಯೆಹೋವನಿಗೆ ಸಮರ್ಪಿಸಲು ತಮಗೆ ಮನಸ್ಸಿದೆ ಎಂಬ ಬಯಕೆಯನ್ನು ವ್ಯಕ್ತಪಡಿಸಿತು.

ಚೀನೀ ಭಾಷೆಯು ಕಲಿಯಲು ಕಷ್ಟಕರವಾಗಿರುವ ಭಾಷೆಯೆಂಬುದೇನೊ ನಿಜ. ಆದರೆ ಮೇಲಿನ ಅನುಭವಗಳು ತೋರಿಸುವಂತೆ, ಯೆಹೋವನ ಸಹಾಯದಿಂದ ಚೀನೀ ಭಾಷೆಯ ಸಮೇತ ಅನೇಕ ಭಾಷೆಗಳ ಜನರು ಮೆಕ್ಸಿಕೊ ದೇಶದಲ್ಲಿ ಹಾಗೂ ಭೂಮಿಯ ಇತರ ಭಾಗಗಳಲ್ಲಿ ದೇವರ ಚಿತ್ತವನ್ನು ಕಲಿತುಕೊಳ್ಳುತ್ತಿದ್ದಾರೆ.

[ಪುಟ 17ರಲ್ಲಿರುವ ಚಿತ್ರ]

ಮೆಕ್ಸಿಕೊ ಸಿಟಿಯಲ್ಲಿ ನಡೆಯುತ್ತಿರುವ ಒಂದು ಚೀನೀ ಭಾಷಾ ಕ್ಲಾಸ್‌

[ಪುಟ 18ರಲ್ಲಿರುವ ಚಿತ್ರ]

ಮೆಕ್ಸಿಕನ್‌ ಸಾಕ್ಷಿಯೊಬ್ಬಳು ಚೀನೀ ಭಾಷೆಯಲ್ಲಿ ಬೈಬಲ್‌ ಅಧ್ಯಯನ ನಡೆಸುತ್ತಿರುವುದು

[ಪುಟ 18ರಲ್ಲಿರುವ ಚಿತ್ರ]

ಮೆಕ್ಸಿಕೊ ಸಿಟಿಯಲ್ಲಿ ಚೀನೀ ಭಾಷೆಯಲ್ಲಿ ಮನೆಮನೆಯ ಸೇವೆ