ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಸೆರೆಯಲ್ಲಿರುವವರಿಗೆ ಬಿಡುಗಡೆಯನ್ನು ಸಾರಿರಿ’

‘ಸೆರೆಯಲ್ಲಿರುವವರಿಗೆ ಬಿಡುಗಡೆಯನ್ನು ಸಾರಿರಿ’

‘ಸೆರೆಯಲ್ಲಿರುವವರಿಗೆ ಬಿಡುಗಡೆಯನ್ನು ಸಾರಿರಿ’

ತನ್ನ ಶುಶ್ರೂಷೆಯ ಆರಂಭದಲ್ಲಿ ಯೇಸು, ‘ಸೆರೆಯಲ್ಲಿರುವವರಿಗೆ ಬಿಡುಗಡೆಯನ್ನು ಸಾರುವುದು’ ಅವನ ನೇಮಕದ ಒಂದು ಭಾಗವಾಗಿತ್ತು ಎಂದು ತಿಳಿಸಿದನು. (ಲೂಕ 4:​18, NIBV) ತಮ್ಮ ಯಜಮಾನನ ಮಾದರಿಯನ್ನು ಅನುಸರಿಸುತ್ತಾ, ಸತ್ಯ ಕ್ರೈಸ್ತರು ರಾಜ್ಯದ ಸುವಾರ್ತೆಯನ್ನು ‘ಎಲ್ಲ ಮನುಷ್ಯರಿಗೆ’ ಸಾರುತ್ತಾರೆ ಮತ್ತು ಅವರಿಗೆ ಆಧ್ಯಾತ್ಮಿಕ ಸೆರೆಯಿಂದ ಅಥವಾ ಬಂಧಿವಾಸದಿಂದ ಬಿಡುಗಡೆಯನ್ನು ತರುತ್ತಾರೆ ಹಾಗೂ ಅವರು ತಮ್ಮ ಜೀವನವನ್ನು ಉತ್ತಮಗೊಳಿಸುವಂತೆ ಸಹಾಯಮಾಡುತ್ತಾರೆ.​—⁠1 ತಿಮೊಥೆಯ 2:⁠4.

ಇಂದು, ಈ ಕೆಲಸವು ಅಕ್ಷರಾರ್ಥ ಸೆರೆವಾಸಿಗಳಿಗೆ, ಅಂದರೆ ಬೇರೆ ಬೇರೆ ಅಪರಾಧಗಳಿಗಾಗಿ ಸೆರೆಯಲ್ಲಿ ಹಾಕಲ್ಪಟ್ಟಿದ್ದು, ಆಧ್ಯಾತ್ಮಿಕ ಬಿಡುಗಡೆಯನ್ನು ಗಣ್ಯಮಾಡುವಂಥ ಜನರಿಗೆ ಸಾರುವುದನ್ನು ಒಳಗೂಡಿದೆ. ಯುಕ್ರೇನ್‌ನಲ್ಲಿ ಹಾಗೂ ಯೂರೋಪಿನ ಬೇರೆ ಕಡೆಗಳಲ್ಲಿರುವ ಸೆರೆಮನೆಗಳಲ್ಲಿ ಯೆಹೋವನ ಸಾಕ್ಷಿಗಳ ಸಾರುವ ಚಟುವಟಿಕೆಗಳ ಕುರಿತಾದ ಈ ಉತ್ತೇಜನದಾಯಕ ವರದಿಯನ್ನು ಆನಂದಿಸಿರಿ.

ಅಮಲೌಷಧ ವ್ಯಸನಿಗಳಾಗಿದ್ದವರು ಕ್ರೈಸ್ತರಾದದ್ದು

ಸೆರ್‌ಹ್ಯೆ * ಎಂಬವನು ತನ್ನ ಜೀವನದ 38 ವರ್ಷಗಳಲ್ಲಿ 20 ವರ್ಷಗಳನ್ನು ಕಂಬಿಗಳ ಹಿಂದೆ ಕಳೆದಿದ್ದಾನೆ. ಅವನು ಶಾಲೆಯನ್ನು ಮುಗಿಸಿದ್ದೂ ಸೆರೆಮನೆಯಲ್ಲೇ. ಅವನು ಹೇಳುವುದು: “ವರ್ಷಗಳ ಹಿಂದೆ ನಾನು ಕೊಲೆಯ ಕಾರಣದಿಂದಾಗಿ ಸೆರೆಮನೆಗೆ ಹಾಕಲ್ಪಟ್ಟೆ ಮತ್ತು ಇನ್ನೂ ಕೆಲವಾರು ವರ್ಷ ಇಲ್ಲಿಯೇ ಇರಬೇಕಾಗಿದೆ. ಸೆರೆಮನೆಯಲ್ಲಿ ನಾನು ಒಬ್ಬ ಪೀಡಕನಂತೆ ವರ್ತಿಸುತ್ತಿದ್ದೆ ಮತ್ತು ಇತರ ಸೆರೆವಾಸಿಗಳು ನನ್ನನ್ನು ಕಂಡರೆ ಭಯಪಡುತ್ತಿದ್ದರು.” ಇದು ಅವನಲ್ಲಿ ಬಿಡುಗಡೆ ಪಡೆದ ಅನಿಸಿಕೆಯನ್ನು ಉಂಟುಮಾಡಿತೊ? ಇಲ್ಲ. ಅನೇಕ ವರ್ಷಗಳ ವರೆಗೆ ಸೆರ್‌ಹ್ಯೆ ಅಮಲೌಷಧ, ಮದ್ಯಪಾನ ಮತ್ತು ಹೊಗೆಸೊಪ್ಪಿಗೆ ದಾಸನಾಗಿದ್ದನು.

ಆ ಬಳಿಕ ಒಬ್ಬ ಜೊತೆ ಸೆರೆವಾಸಿಯು ಅವನಿಗೆ ಬೈಬಲ್‌ ಸತ್ಯವನ್ನು ತಿಳಿಯಪಡಿಸಿದನು. ಇದು ಅವನಿಗೆ ಕತ್ತಲಿನಲ್ಲಿ ಬೆಳಕಿನ ಕಿರಣವನ್ನು ಕಂಡಂತಿತ್ತು. ಕೆಲವೇ ತಿಂಗಳುಗಳೊಳಗೆ ಅವನು ತನ್ನ ದುಶ್ಚಟಗಳನ್ನು ನಿಲ್ಲಿಸಿದನು, ಸುವಾರ್ತೆಯನ್ನು ಸಾರುವವನಾದನು ಮತ್ತು ದೀಕ್ಷಾಸ್ನಾನ ಪಡೆದುಕೊಂಡನು. ಈಗ ಸೆರ್‌ಹ್ಯೆ ಯೆಹೋವನ ಒಬ್ಬ ಪೂರ್ಣ ಸಮಯದ ಶುಶ್ರೂಷಕನಾಗಿ ಸೇವೆಮಾಡುತ್ತಾ ಸೆರೆಮನೆಯಲ್ಲಿ ಚಟುವಟಿಕೆಭರಿತ ಜೀವನವನ್ನು ನಡಿಸುತ್ತಿದ್ದಾನೆ. ಏಳು ಮಂದಿ ದುಷ್ಕರ್ಮಿಗಳು ತಮ್ಮ ಮಾರ್ಗಗಳನ್ನು ಬದಲಾಯಿಸಿ, ತನ್ನ ಆಧ್ಯಾತ್ಮಿಕ ಸಹೋದರರಾಗುವಂತೆ ಅವನು ಸಹಾಯಮಾಡಿದ್ದಾನೆ. ಅವರಲ್ಲಿ ಆರು ಮಂದಿಗೆ ಬಿಡುಗಡೆಯಾಗಿದೆ, ಆದರೆ ಸೆರ್‌ಹ್ಯೆ ಮಾತ್ರ ಕಂಬಿಗಳ ಹಿಂದೆಯೇ ಇದ್ದಾನೆ. ಇದರಿಂದ ಅವನು ಬೇಸರಗೊಂಡಿಲ್ಲ, ಏಕೆಂದರೆ ಆಧ್ಯಾತ್ಮಿಕ ಸೆರೆಯಿಂದ ಅಥವಾ ಬಂಧಿವಾಸದಿಂದ ಬಿಡುಗಡೆಯನ್ನು ಪಡೆಯುವಂತೆ ಇತರರಿಗೆ ಸಹಾಯಮಾಡಲು ತನಗೆ ಸಾಧ್ಯವಾಗುವುದಕ್ಕಾಗಿ ಅವನು ಸಂತೋಷಪಡುತ್ತಾನೆ.​—⁠ಅ. ಕೃತ್ಯಗಳು 20:⁠35.

ಸೆರೆಮನೆಯಲ್ಲಿದ್ದ ಸೆರ್‌ಹ್ಯೆಯ ವಿದ್ಯಾರ್ಥಿಗಳಲ್ಲಿ ಒಬ್ಬನು ವೇಕ್ಟರ್‌ ಆಗಿದ್ದನು. ಅವನು ಒಬ್ಬ ಮಾಜಿ ಅಮಲೌಷಧ ವ್ಯಾಪಾರಿ ಮತ್ತು ವ್ಯಸನಿಯಾಗಿದ್ದನು. ವೇಕ್ಟರ್‌ ಸೆರೆಮನೆಯಿಂದ ಬಿಡುಗಡೆಹೊಂದಿದ ಬಳಿಕವೂ ಆಧ್ಯಾತ್ಮಿಕ ಪ್ರಗತಿಯನ್ನು ಮಾಡುತ್ತಾ ಮುಂದುವರಿದನು ಮತ್ತು ಕಾಲಕ್ರಮೇಣ ಯುಕ್ರೇನ್‌ನಲ್ಲಿ ‘ಶುಶ್ರೂಷಾ ತರಬೇತಿ ಶಾಲೆ’ಯಿಂದ ಪದವಿಯನ್ನು ಪಡೆದುಕೊಂಡನು. ಈಗ ಅವನು ಮಾಲ್ಡೋವದಲ್ಲಿ ಸ್ಪೆಷಲ್‌ ಪಯನೀಯರನಾಗಿ ಸೇವೆಮಾಡುತ್ತಿದ್ದಾನೆ. ವೇಕ್ಟರ್‌ ಹೇಳುವುದು: “ನಾನು 8 ವರ್ಷದವನಾಗಿದ್ದಾಗ ಧೂಮಪಾನವನ್ನು ಆರಂಭಿಸಿದೆ, 12ರ ಪ್ರಾಯದಲ್ಲಿ ಮದ್ಯವನ್ನು ದುರುಪಯೋಗಿಸತೊಡಗಿದೆ ಮತ್ತು 14ನೇ ವಯಸ್ಸಿನಲ್ಲಿ ಅಮಲೌಷಧಗಳನ್ನು ಉಪಯೋಗಿಸುತ್ತಿದ್ದೆ. ನಾನು ನನ್ನ ಜೀವನವನ್ನು ಬದಲಾಯಿಸಲು ಬಯಸಿದೆ, ಆದರೆ ನನ್ನೆಲ್ಲ ಪ್ರಯತ್ನಗಳು ವಿಫಲಗೊಂಡವು. ತದನಂತರ 1995ರಲ್ಲಿ, ನನ್ನ ಕೆಟ್ಟ ಮಿತ್ರರಿಂದ ದೂರ ಹೋಗಿಬಿಡಬೇಕೆಂದು ನಾನು ಮತ್ತು ನನ್ನ ಪತ್ನಿ ಯೋಜಿಸುತ್ತಿದ್ದೆವು. ಆಗಲೇ ಅವಳು ನರಹತ್ಯೆಯ ಉನ್ಮಾದಗ್ರಸ್ತನೊಬ್ಬನಿಂದ ಇರಿದು ಕೊಲ್ಲಲ್ಪಟ್ಟಳು. ನನ್ನ ಜೀವನವು ಪೂರ್ಣ ರೀತಿಯಲ್ಲಿ ನೀರಸವಾಗಿ ಪರಿಣಮಿಸಿತು. ‘ಈಗ ನನ್ನ ಪತ್ನಿ ಎಲ್ಲಿದ್ದಾಳೆ? ಒಬ್ಬ ವ್ಯಕ್ತಿಯು ಮರಣಪಟ್ಟಾಗ ಏನು ಸಂಭವಿಸುತ್ತದೆ?’ ಎಂಬ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಾ ಇದ್ದೆನಾದರೂ ಯಾವುದೇ ಉತ್ತರಗಳನ್ನು ಕಂಡುಕೊಳ್ಳಲಿಲ್ಲ. ಆ ಶೂನ್ಯಭಾವವನ್ನು ಹೊಡೆದೋಡಿಸಲಿಕ್ಕಾಗಿ ನಾನು ಹೆಚ್ಚೆಚ್ಚು ಅಮಲೌಷಧಗಳನ್ನು ಸೇವಿಸತೊಡಗಿದೆ. ಅಮಲೌಷಧದ ವ್ಯಾಪಾರವನ್ನು ನಡೆಸುತ್ತಿದ್ದಾಗ ನಾನು ಬಂಧಿಸಲ್ಪಟ್ಟೆ ಮತ್ತು ನನಗೆ ಐದು ವರ್ಷಗಳ ಸೆರೆವಾಸದ ಶಿಕ್ಷೆ ವಿಧಿಸಲ್ಪಟ್ಟಿತು. ಅಲ್ಲಿ ನನ್ನ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಲು ಸೆರ್‌ಹ್ಯೆ ನನಗೆ ಸಹಾಯಮಾಡಿದನು. ಅನೇಕಬಾರಿ ನಾನು ಅಮಲೌಷಧ ಸೇವನೆಯನ್ನು ನಿಲ್ಲಿಸಲು ಪ್ರಯತ್ನಿಸಿದ್ದೆ, ಆದರೆ ಈಗ ಮಾತ್ರ ಬೈಬಲಿನಿಂದ ದೊರೆತ ಸಹಾಯದಿಂದ ನಾನು ಇದರಲ್ಲಿ ಸಫಲನಾದೆ. ದೇವರ ವಾಕ್ಯವು ಎಷ್ಟು ಕಾರ್ಯಸಾಧಕವಾದದ್ದಾಗಿದೆ!”​—⁠ಇಬ್ರಿಯ 4:⁠12.

ಕಲ್ಲುಹೃದಯದ ದುಷ್ಕರ್ಮಿಗಳು ಬದಲಾಗುತ್ತಾರೆ

ವೇಸಿಲ್‌ ಎಂಬವನು ಎಂದೂ ಅಮಲೌಷಧಗಳನ್ನು ಉಪಯೋಗಿಸಲಿಲ್ಲ, ಆದರೆ ಅವನು ಸೆರೆವಾಸದಲ್ಲಿದ್ದನು. ಅವನು ವಿವರಿಸುವುದು: “ಕಿಕ್‌ಬಾಕ್ಸಿಂಗ್‌ (ಒದೆತ ಹಾಗೂ ಗುದ್ದುಗಳನ್ನು ಒಳಗೂಡಿರುವ ಬಾಕ್ಸಿಂಗ್‌) ನನ್ನ ಚಟವಾಗಿತ್ತು. ಯಾವುದೇ ಗುರುತುಗಳನ್ನು ಉಳಿಸದೇ ಜನರನ್ನು ಹೊಡೆಯಲಿಕ್ಕಾಗಿ ನಾನು ನನ್ನನ್ನೇ ತರಬೇತಿಗೊಳಿಸಿಕೊಂಡೆ.” ಜನರ ಬಳಿ ಇರುವುದನ್ನು ದೋಚಲಿಕ್ಕಾಗಿ ವೇಸಿಲ್‌ ತನ್ನ ಹಿಂಸಾತ್ಮಕ ವಿಧಗಳನ್ನು ಉಪಯೋಗಿಸಿದನು. “ನಾನು ಮೂರು ಬಾರಿ ಸೆರೆಮನೆಯಲ್ಲಿದ್ದೆ, ಇದು ನನ್ನ ಪತ್ನಿಯು ನನಗೆ ವಿಚ್ಛೇದನ ನೀಡುವಂತೆ ಮಾಡಿತು. ಕೊನೆಯ ಐದು ವರ್ಷಗಳ ಶಿಕ್ಷಾವಧಿಯಲ್ಲಿ ನನಗೆ ಯೆಹೋವನ ಸಾಕ್ಷಿಗಳ ಸಾಹಿತ್ಯದ ಪರಿಚಯವಾಯಿತು. ಇದು ಬೈಬಲನ್ನು ಓದುವಂತೆ ನನ್ನನ್ನು ಪ್ರಚೋದಿಸಿತು, ಆದರೂ ನಾನು ನಿಜವಾಗಿಯೂ ಯಾವುದನ್ನು ಪ್ರೀತಿಸುತ್ತಿದ್ದೆನೋ ಅದರಲ್ಲಿ ಅಂದರೆ ಕಿಕ್‌ಬಾಕ್ಸಿಂಗ್‌ನಲ್ಲಿ ಇನ್ನೂ ಒಳಗೂಡುತ್ತಿದ್ದೆ.

“ಆದರೆ ಆರು ತಿಂಗಳುಗಳ ಬೈಬಲ್‌ ವಾಚನದ ಬಳಿಕ, ನನ್ನೊಳಗೆ ಏನೋ ಬದಲಾವಣೆಯಾಯಿತು. ಈ ಮುಂಚೆ ಒಂದು ಕಾದಾಟದಲ್ಲಿ ಗೆದ್ದಾಗ ನನಗೆ ಸಂತೃಪ್ತಿಯಾಗುತ್ತಿತ್ತು, ಆದರೆ ಈಗ ಹಾಗನಿಸುತ್ತಿರಲಿಲ್ಲ. ಆದುದರಿಂದ ನಾನು ಯೆಶಾಯ 2:4ರ ಸಹಾಯದಿಂದ ನನ್ನ ಜೀವನವನ್ನು ಜಾಗರೂಕತೆಯಿಂದ ಪರಿಶೀಲಿಸಿದೆ ಮತ್ತು ನನ್ನ ಆಲೋಚನೆಯನ್ನು ಸರಿಹೊಂದಿಸಿಕೊಳ್ಳದಿದ್ದರೆ ನನ್ನ ಜೀವನದ ಉಳಿದ ಕಾಲವನ್ನೆಲ್ಲ ಸೆರೆಮನೆಯಲ್ಲಿ ಕಳೆಯಬೇಕಾಗುತ್ತದೆ ಎಂಬುದನ್ನು ಮನಗಂಡೆ. ಆಗ ನನ್ನ ಕಾದಾಟದ ಎಲ್ಲ ಸಾಧನಗಳನ್ನು ಎಸೆದುಬಿಟ್ಟೆ ಮತ್ತು ನನ್ನ ವ್ಯಕ್ತಿತ್ವವನ್ನು ಉತ್ತಮಗೊಳಿಸಿಕೊಳ್ಳಲು ಆರಂಭಿಸಿದೆ. ಇದು ಸುಲಭವಾಗಿರಲಿಲ್ಲ, ಆದರೆ ಧ್ಯಾನ ಮತ್ತು ಪ್ರಾರ್ಥನೆಯು ಕ್ರಮೇಣ ನಾನು ಕೆಟ್ಟ ಹವ್ಯಾಸಗಳನ್ನು ಹೊಡೆದೋಡಿಸುವಂತೆ ಸಹಾಯಮಾಡಿತು. ಕೆಲವೊಮ್ಮೆ ನನ್ನ ಚಟದಿಂದ ಬಿಡಿಸಿಕೊಳ್ಳಲಿಕ್ಕಾಗಿ ಬಲವನ್ನು ದಯಪಾಲಿಸುವಂತೆ ನಾನು ಯೆಹೋವನಿಗೆ ಕಣ್ಣೀರಿಟ್ಟು ಪ್ರಾರ್ಥಿಸಿದೆ. ಕೊನೆಗೂ ನಾನು ಸಫಲನಾದೆ.

“ಸೆರೆಮನೆಯಿಂದ ಬಿಡುಗಡೆಯಾದ ಬಳಿಕ ನನ್ನ ಕುಟುಂಬದೊಂದಿಗೆ ಪುನರೈಕ್ಯಗೊಂಡೆ. ಈಗ ನಾನು ಕಲ್ಲಿದ್ದಲ ಗಣಿಯೊಂದರಲ್ಲಿ ಕೆಲಸಮಾಡುತ್ತಿದ್ದೇನೆ. ಇದು, ನನ್ನ ಪತ್ನಿಯೊಂದಿಗೆ ಸಾರುವ ಕೆಲಸದಲ್ಲಿ ಪಾಲ್ಗೊಳ್ಳಲು ಮತ್ತು ಸಭೆಯಲ್ಲಿ ನನ್ನ ಜವಾಬ್ದಾರಿಗಳನ್ನು ಪೂರೈಸಲು ಸಾಕಷ್ಟು ಸಮಯಾವಕಾಶವನ್ನು ನೀಡುತ್ತದೆ.”

ಮೈಕೊಲಾ ಮತ್ತು ಅವನ ಸ್ನೇಹಿತರು ಯುಕ್ರೇನ್‌ನಲ್ಲಿ ಅನೇಕ ಬ್ಯಾಂಕ್‌ಗಳನ್ನು ದರೋಡೆಮಾಡಿದರು. ಇದರ ಫಲಿತಾಂಶವಾಗಿ ಅವನು ಹತ್ತು ವರ್ಷಗಳ ಸೆರೆವಾಸವನ್ನು ಅನುಭವಿಸಬೇಕಾಯಿತು. ಅವನ ಬಂಧನಕ್ಕೆ ಮುಂಚೆ ಒಮ್ಮೆ ಮಾತ್ರ ಅವನು ಚರ್ಚಿಗೆ ಹೋಗಿದ್ದನು, ಅದು ಕೂಡ ಆ ಚರ್ಚನ್ನು ದರೋಡೆಮಾಡುವ ಸಿದ್ಧತೆಗಾಗಿ. ಮೈಕೊಲಾನ ಪ್ರಯತ್ನವು ವಿಫಲಗೊಂಡಿತಾದರೂ, ಆ ಭೇಟಿಯು ಅವನನ್ನು ಬೈಬಲಿನ ತುಂಬ ಆರ್ತಡಾಕ್ಸ್‌ ಪಾದ್ರಿಗಳು, ಮೋಂಬತ್ತಿಗಳು ಮತ್ತು ಧಾರ್ಮಿಕ ಹಬ್ಬಗಳ ಕುರಿತಾದ ಬೇಸರ ಹಿಡಿಸುವ ಕಥೆಗಳೇ ತುಂಬಿರಬೇಕು ಎಂದು ನಂಬುವಂತೆ ಮಾಡಿತು. ಅವನು ತಿಳಿಸುವುದು: “ನಿರ್ದಿಷ್ಟವಾಗಿ ಯಾವ ಕಾರಣಕ್ಕಾಗಿ ಎಂಬುದು ನನಗೆ ಗೊತ್ತಿಲ್ಲ, ಆದರೆ ನಾನು ಬೈಬಲನ್ನು ಓದಲು ಆರಂಭಿಸಿದೆ. ನಾನು ನೆನಸಿದ್ದಕ್ಕಿಂತಲೂ ಇದು ತೀರ ಭಿನ್ನವಾದದ್ದಾಗಿದೆ ಎಂಬುದನ್ನು ಕಂಡು ನಾನು ಆಶ್ಚರ್ಯಗೊಂಡೆ!” ಅವನು ಒಂದು ಬೈಬಲ್‌ ಅಧ್ಯಯನಕ್ಕಾಗಿ ಕೇಳಿಕೊಂಡನು ಮತ್ತು 1999ರಲ್ಲಿ ದೀಕ್ಷಾಸ್ನಾನ ಪಡೆದುಕೊಂಡನು. ಈಗ ಅವನನ್ನು ನೋಡುವಾಗ, ದೀನಭಾವದ ಈ ಶುಶ್ರೂಷಾ ಸೇವಕನು ಒಂದು ಕಾಲದಲ್ಲಿ ದ್ವೇಷಭರಿತನಾಗಿದ್ದ ಶಸ್ತ್ರಸಜ್ಜಿತ ಬ್ಯಾಂಕ್‌ ದರೋಡೆಗಾರನಾಗಿದ್ದನು ಎಂಬುದನ್ನು ನಂಬುವುದೇ ಕಷ್ಟವಾಗುತ್ತದೆ!

ವ್ಲಾದ್ಯೀಮಿರ್‌ಗೆ ಮರಣದಂಡನೆ ವಿಧಿಸಲ್ಪಟ್ಟಿತ್ತು. ವಧಿಸಲ್ಪಡಲಿಕ್ಕಾಗಿ ಕಾಯುತ್ತಿದ್ದಾಗ ಅವನು ದೇವರಿಗೆ ಪ್ರಾರ್ಥಿಸಿದನು ಮತ್ತು ಒಂದುವೇಳೆ ತಾನು ಉಳಿಸಲ್ಪಟ್ಟರೆ ಆತನ ಸೇವೆಮಾಡುತ್ತೇನೆಂದು ಮಾತುಕೊಟ್ಟನು. ಈ ಮಧ್ಯೆ ಕಾನೂನು ಬದಲಾಯಿತು ಮತ್ತು ಅವನ ಮರಣ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಕಡಿಮೆಮಾಡಲಾಯಿತು. ತಾನು ಮಾತುಕೊಟ್ಟಂತೆಯೇ ನಡೆದುಕೊಳ್ಳಲಿಕ್ಕಾಗಿ, ವ್ಲಾದ್ಯೀಮಿರ್‌ ಸತ್ಯ ಧರ್ಮವನ್ನು ಹುಡುಕಲಾರಂಭಿಸಿದನು. ಅವನು ಒಂದು ಬೈಬಲ್‌ ಅಂಚೆಶಿಕ್ಷಣ ಕೋರ್ಸಿಗೆ ಸೇರಿಕೊಂಡನು ಮತ್ತು ಆ್ಯಡ್‌ವೆಂಟಿಸ್ಟ್‌ ಚರ್ಚಿನಿಂದ ಡಿಪ್ಲೋಮವನ್ನು ಪಡೆದುಕೊಂಡನು. ಆದರೂ ಅವನಿಗೆ ತೃಪ್ತಿಯಾಗಲಿಲ್ಲ.

ಆದರೆ, ವ್ಲಾದ್ಯೀಮಿರನು ಸೆರೆಮನೆಯ ಗ್ರಂಥಾಲಯದಲ್ಲಿ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ಓದಿದ ಬಳಿಕ ಯುಕ್ರೇನ್‌ನಲ್ಲಿದ್ದ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸಿಗೆ ಪತ್ರವನ್ನು ಬರೆದು, ಯಾರಾದರೊಬ್ಬರು ತನ್ನನ್ನು ಭೇಟಿಯಾಗುವಂತೆ ಕೇಳಿಕೊಂಡನು. ಸ್ಥಳಿಕ ಸಹೋದರರು ಅವನನ್ನು ಭೇಟಿಯಾದಾಗ, ಈಗಾಗಲೇ ಅವನು ತನ್ನನ್ನು ಒಬ್ಬ ಸಾಕ್ಷಿಯಾಗಿ ಪರಿಗಣಿಸಿಕೊಂಡು ಸೆರೆಮನೆಯಲ್ಲಿ ಸುವಾರ್ತೆಯನ್ನು ಸಾರುತ್ತಿದ್ದನು. ಒಬ್ಬ ರಾಜ್ಯ ಪ್ರಚಾರಕನಾಗಿ ಅರ್ಹನಾಗಲು ಅವನಿಗೆ ಸಹಾಯ ನೀಡಲಾಯಿತು. ಈ ಲೇಖನವು ಸಿದ್ಧವಾಗುತ್ತಿದ್ದಾಗ ವ್ಲಾದ್ಯೀಮಿರ್‌ ಮತ್ತು ಆ ಸೆರೆಮನೆಯಲ್ಲಿರುವ ಇನ್ನಿತರ ಏಳು ಮಂದಿ ದೀಕ್ಷಾಸ್ನಾನಕ್ಕಾಗಿ ಕಾಯುತ್ತಿದ್ದರು. ಆದರೆ ಅವರಿಗೊಂದು ಸಮಸ್ಯೆಯಿದೆ. ಜೀವಾವಧಿ ಶಿಕ್ಷೆಯನ್ನು ಹೊಂದಿರುವ ಸೆರೆವಾಸಿಗಳು ಅವರವರ ಧಾರ್ಮಿಕ ನಂಬಿಕೆಗಳಿಗನುಸಾರ ಸೆರೆಕೋಣೆಗಳಲ್ಲಿ ಇಡಲ್ಪಡುವುದರಿಂದ, ವ್ಲಾದ್ಯೀಮಿರ್‌ ಮತ್ತು ಅವನ ಜೊತೆಯಲ್ಲಿ ಸೆರೆಕೋಣೆಯಲ್ಲಿ ವಾಸಿಸುತ್ತಿದ್ದವರು ಒಂದೇ ಧರ್ಮಕ್ಕೆ ಸೇರಿದವರಾಗಿದ್ದರು. ಹೀಗಿರುವಾಗ ಅವರು ಯಾರಿಗೆ ಸಾರಸಾಧ್ಯವಿತ್ತು? ಅವರು ಸೆರೆಮನೆಯ ಕಾವಲುಗಾರರೊಂದಿಗೆ ಮತ್ತು ಪತ್ರಗಳನ್ನು ಬರೆಯುವ ಮೂಲಕ ಸುವಾರ್ತೆಯನ್ನು ತಿಳಿಯಪಡಿಸುತ್ತಾರೆ.

ನಸರ್‌ ಎಂಬಾತನು ಯುಕ್ರೇನ್‌ನಿಂದ ಚೆಕ್‌ ರಿಪಬ್ಲಿಕ್‌ಗೆ ಸ್ಥಳಾಂತರಿಸಿ, ಅಲ್ಲಿ ಕಳ್ಳರ ಒಂದು ತಂಡದೊಂದಿಗೆ ಸೇರಿಕೊಂಡನು. ಇದು ಮೂರೂವರೆ ವರ್ಷಗಳ ಸೆರೆವಾಸಕ್ಕೆ ನಡೆಸಿತು. ಸೆರೆಮನೆಯಲ್ಲಿದ್ದಾಗ ಅವನು ಕಾರ್ಲೊವೀ ವಾರೀ ನಗರದಿಂದ ಬಂದ ಯೆಹೋವನ ಸಾಕ್ಷಿಗಳ ಭೇಟಿಗಳಿಗೆ ಪ್ರತಿಕ್ರಿಯೆ ತೋರಿಸಿದನು, ಸತ್ಯವನ್ನು ಕಲಿತನು ಮತ್ತು ಪೂರ್ಣ ರೀತಿಯಲ್ಲಿ ಒಳ್ಳೆಯ ಹೆಸರನ್ನು ಪುನಃಸ್ಥಾಪಿಸಿಕೊಂಡನು. ಅವನಲ್ಲಾದ ಈ ಬದಲಾವಣೆಯನ್ನು ನೋಡಿ ಕಾವಲುಗಾರರಲ್ಲಿ ಒಬ್ಬನು ನಸರ್‌ನ ಜೊತೆ ಸೆರೆಕೋಣೆಯಲ್ಲಿದ್ದವರಿಗೆ ಹೇಳಿದ್ದು: “ನೀವೆಲ್ಲರೂ ಯುಕ್ರೇನ್‌ನ ಆ ವ್ಯಕ್ತಿಯಂತಾಗುವಲ್ಲಿ, ಕೊನೆಗೂ ನಾನು ನನ್ನ ಜೀವನವೃತ್ತಿಯನ್ನು ಬದಲಾಯಿಸಬಹುದು.” ಇನ್ನೊಬ್ಬನು ಹೇಳಿದ್ದು: “ಈ ಯೆಹೋವನ ಸಾಕ್ಷಿಗಳು ನಿಜವಾಗಿಯೂ ತುಂಬ ಪರಿಣತರು. ಸೆರೆಮನೆಗೆ ಒಬ್ಬ ದುಷ್ಕರ್ಮಿ ಬರುತ್ತಾನೆ; ಆದರೆ ಒಬ್ಬ ಸಭ್ಯ ವ್ಯಕ್ತಿಯಾಗಿ ಹೊರಗೆಹೋಗುತ್ತಾನೆ.” ಈಗ ನಸರ್‌ ತನ್ನ ಸ್ವದೇಶಕ್ಕೆ ಹಿಂದಿರುಗಿದ್ದಾನೆ. ಅವನು ಮರಗೆಲಸವನ್ನು ಕಲಿತನು ಮತ್ತು ಮದುವೆಮಾಡಿಕೊಂಡನು. ಈಗ ಅವನು ಮತ್ತು ಅವನ ಪತ್ನಿ ಪೂರ್ಣ ಸಮಯದ ಶುಶ್ರೂಷೆಯನ್ನು ಮಾಡುತ್ತಿದ್ದಾರೆ. ಸಾಕ್ಷಿಗಳು ಸೆರೆಮನೆಗೆ ಭೇಟಿ ನೀಡಿದ್ದಕ್ಕಾಗಿ ಅವನೆಷ್ಟು ಆಭಾರಿಯಾಗಿದ್ದಾನೆ!

ಅಧಿಕೃತ ಮನ್ನಣೆ

ಯೆಹೋವನ ಸಾಕ್ಷಿಗಳಿಂದ ಸಲ್ಲಿಸಲ್ಪಡುವ ಸೇವೆಗೆ ಕೃತಜ್ಞತೆ ತೋರಿಸುವವರು ಕೇವಲ ಸೆರೆವಾಸಿಗಳು ಮಾತ್ರವೇ ಅಲ್ಲ. ಪೋಲೆಂಡ್‌ನ ಸೆರೆಮನೆಗಳಲ್ಲಿ ಒಂದರ ಪ್ರತಿನಿಧಿಯಾಗಿರುವ ಮೇರೊಸ್ಲಾವ್‌ ಕೊವೆಲ್‌ಸ್ಕೀಯವರು ಹೇಳಿದ್ದು: “ನಾವು ಅವರ ಭೇಟಿಗಳನ್ನು ತುಂಬ ಗಣ್ಯಮಾಡುತ್ತೇವೆ. ಕೆಲವು ಸೆರೆವಾಸಿಗಳು ದುಃಖಕರವಾದ ಹಿನ್ನೆಲೆಗಳಿಂದ ಬಂದವರಾಗಿದ್ದಾರೆ. ಬಹುಶಃ ಅವರೆಂದೂ ಮನುಷ್ಯರಂತೆ ಉಪಚರಿಸಲ್ಪಟ್ಟಿರಲಿಲ್ಲ. . . . ಸೆರೆವಾಸಿಗಳಿಗೆ ಸಹಾಯಮಾಡಲಿಕ್ಕಾಗಿ ನಮ್ಮಲ್ಲಿ ಸಿಬ್ಬಂದಿಯ ಮತ್ತು ಶಿಕ್ಷಕರ ಕೊರತೆಯಿರುವುದರಿಂದ, [ಸಾಕ್ಷಿಗಳ] ಸಹಾಯವು ತುಂಬ ಅಮೂಲ್ಯವಾದದ್ದಾಗಿದೆ.”

ಪೋಲೆಂಡ್‌ನಲ್ಲಿರುವ ಇನ್ನೊಂದು ಸೆರೆಮನೆಯ ವಾರ್ಡನ್‌, ತನ್ನ ಸೆರೆಮನೆಯಲ್ಲಿ ಸಾಕ್ಷಿಗಳು ತಮ್ಮ ಚಟುವಟಿಕೆಯನ್ನು ಹೆಚ್ಚಿಸುವಂತೆ ಕೇಳಿಕೊಳ್ಳುತ್ತಾ ಬ್ರಾಂಚ್‌ ಆಫೀಸಿಗೆ ಪತ್ರವನ್ನು ಬರೆದನು. ಏಕೆ? ಅವನು ವಿವರಿಸಿದ್ದು: “ವಾಚ್‌ಟವರ್‌ ಪ್ರತಿನಿಧಿಗಳು ಆಗಿಂದಾಗ್ಗೆ ಭೇಟಿ ನೀಡುವುದು, ಸೆರೆವಾಸಿಗಳು ತಮ್ಮ ನಡುವೆ ಆಕ್ರಮಣಶೀಲತೆಯನ್ನು ನಿಗ್ರಹಿಸಿ, ಸಾಮಾಜಿಕವಾಗಿ ಅಪೇಕ್ಷಣೀಯವಾದ ಗುಣಗಳನ್ನು ಬೆಳೆಸಿಕೊಳ್ಳುವಂತೆ ಸಹಾಯಮಾಡಬಹುದು.”

ಆತ್ಮಹತ್ಯೆಯನ್ನು ಮಾಡಿಕೊಳ್ಳಲು ಪ್ರಯತ್ನಿಸಿದ ಆದರೆ ಯೆಹೋವನ ಸಾಕ್ಷಿಗಳಿಂದ ಸಹಾಯವನ್ನು ಪಡೆದುಕೊಂಡಂಥ ಒಬ್ಬ ಖಿನ್ನ ಸೆರೆವಾಸಿಯ ಕುರಿತು ಯುಕ್ರೇನ್‌ನ ಒಂದು ವಾರ್ತಾಪತ್ರಿಕೆಯು ವರದಿಸಿತು. ಆ ವರದಿಯು ತಿಳಿಸುವುದು: “ಸದ್ಯಕ್ಕೆ ಈ ವ್ಯಕ್ತಿಯು ಭಾವನಾತ್ಮಕವಾಗಿ ಕ್ರಮೇಣ ಚೇತರಿಸಿಕೊಳ್ಳುತ್ತಿದ್ದಾನೆ. ಅವನು ಸೆರೆಮನೆಯ ನಿಯತಕ್ರಮಕ್ಕೆ ಅಧೀನನಾಗಿದ್ದು ಇತರ ಸೆರೆವಾಸಿಗಳಿಗೆ ಒಂದು ಮಾದರಿಯಾಗಿದ್ದಾನೆ.”

ಸೆರೆಮನೆಯ ಹೊರಗಿನ ಜೀವನದಲ್ಲಿಯೂ ಪ್ರಯೋಜನಗಳು

ಯೆಹೋವನ ಸಾಕ್ಷಿಗಳಿಂದ ಮಾಡಲ್ಪಡುವ ಕೆಲಸದ ಪ್ರಯೋಜನಗಳು ಕೇವಲ ಸೆರೆಮನೆಗೆ ಮಾತ್ರ ಸೀಮಿತವಾದದ್ದಲ್ಲ. ಸೆರೆವಾಸಿಗಳು ಬಿಡುಗಡೆಯನ್ನು ಹೊಂದಿದ ಬಳಿಕವೂ ಸಾಕ್ಷಿಗಳಿಂದ ಪ್ರಯೋಜನವನ್ನು ಪಡೆದುಕೊಳ್ಳುತ್ತಾರೆ. ಬ್ರೀಜಿಟ್‌ ಮತ್ತು ರೆನಾಟೆ ಎಂಬ ಇಬ್ಬರು ಕ್ರೈಸ್ತರು, ಕೆಲವು ವರ್ಷಗಳಿಂದ ಈ ರೀತಿಯಲ್ಲಿ ಜನರಿಗೆ ಸಹಾಯಮಾಡುತ್ತಿದ್ದಾರೆ. ಮೈನ್‌-ಈಕೋ ಆಶಾಫ್‌ಅನ್‌ಬುರ್ಕ್‌ ಎಂಬ ಒಂದು ಜರ್ಮನ್‌ ವಾರ್ತಾಪತ್ರಿಕೆಯು ಅವರ ಕುರಿತು ಹೀಗೆ ವರದಿಸುತ್ತದೆ: “ಇವರು, ಸೆರೆವಾಸಿಗಳು ಬಿಡುಗಡೆಯಾದ ಬಳಿಕ ಸುಮಾರು ಮೂರರಿಂದ ಐದು ತಿಂಗಳುಗಳ ವರೆಗೆ ಅವರನ್ನು ನೋಡಿಕೊಳ್ಳುತ್ತಾರೆ, ಜೀವನದಲ್ಲಿ ಒಂದು ಉದ್ದೇಶವನ್ನು ಕಂಡುಕೊಳ್ಳುವಂತೆ ಅವರನ್ನು ಉತ್ತೇಜಿಸುತ್ತಾರೆ. . . . ಅಧಿಕೃತವಾಗಿ ಇವರನ್ನು ಸ್ವಯಂ ಸೇವಕ ಪರೀಕ್ಷಣಾ ಅಧಿಕಾರಿಗಳನ್ನಾಗಿ ಮಾನ್ಯಮಾಡಲಾಗುತ್ತದೆ. . . . ಸೆರೆಮನೆಯ ಸಿಬ್ಬಂದಿಗಳೊಂದಿಗೆ ಸಹ ಇವರು ಸಹಾಯಕರವಾದ ಮತ್ತು ಸಕಾರಾತ್ಮಕವಾದ ವ್ಯವಹಾರಗಳನ್ನು ಇಟ್ಟುಕೊಂಡಿದ್ದಾರೆ.” ಈ ರೀತಿಯ ಸಹಾಯದ ಫಲಿತಾಂಶವಾಗಿ ಮಾಜಿ ಸೆರೆವಾಸಿಗಳು ತಮ್ಮ ಜೀವನವನ್ನು ಯೆಹೋವನಿಗೆ ಸಮರ್ಪಿಸಿಕೊಂಡಿದ್ದಾರೆ.

ಯೆಹೋವನ ಸಾಕ್ಷಿಗಳ ಬೈಬಲ್‌ ಶೈಕ್ಷಣಿಕ ಕೆಲಸದಿಂದ ಸೆರೆಮನೆಯ ಅಧಿಕಾರಿಗಳು ಸಹ ಪ್ರಯೋಜನ ಪಡೆದುಕೊಂಡಿದ್ದಾರೆ. ಉದಾಹರಣೆಗೆ, ರೊಮೇನ್‌ ಎಂಬಾತನು ಯುಕ್ರೇನ್‌ನ ಸೆರೆಮನೆಯೊಂದರಲ್ಲಿ ಮಿಲಿಟರಿ ಮೇಜರ್‌ ಹಾಗೂ ಮನಶ್ಶಾಸ್ತ್ರಜ್ಞನಾಗಿದ್ದನು. ಸಾಕ್ಷಿಗಳು ಅವನ ಮನೆಯನ್ನು ಸಂದರ್ಶಿಸಿದಾಗ ಅವನು ಒಂದು ಬೈಬಲ್‌ ಅಧ್ಯಯನಕ್ಕೆ ಒಪ್ಪಿಕೊಂಡನು. ತಾನು ಕೆಲಸಮಾಡುತ್ತಿರುವ ಸೆರೆಮನೆಯಲ್ಲಿರುವ ಸೆರೆವಾಸಿಗಳನ್ನು ಸಂಪರ್ಕಿಸಲು ಸಾಕ್ಷಿಗಳಿಗೆ ಅನುಮತಿಯಿಲ್ಲ ಎಂಬುದು ಅವನಿಗೆ ತದನಂತರ ತಿಳಿದುಬಂತು. ಆದುದರಿಂದ, ಸೆರೆವಾಸಿಗಳೊಂದಿಗಿನ ತನ್ನ ಕೆಲಸದಲ್ಲಿ ಬೈಬಲನ್ನು ಉಪಯೋಗಿಸಲು ಅನುಮತಿಯನ್ನು ನೀಡುವಂತೆ ಅವನು ವಾರ್ಡನ್‌ನ ಬಳಿ ವಿನಂತಿಸಿಕೊಂಡನು. ಅವನ ಬೇಡಿಕೆಯು ಪೂರೈಸಲ್ಪಟ್ಟಿತು ಮತ್ತು ಸುಮಾರು ಹತ್ತು ಮಂದಿ ಸೆರೆವಾಸಿಗಳು ಆಸಕ್ತಿಯನ್ನು ತೋರಿಸಿದರು. ತನ್ನ ಹೆಚ್ಚುತ್ತಿರುವ ಬೈಬಲ್‌ ಜ್ಞಾನವನ್ನು ರೊಮೇನ್‌ ಈ ಸೆರೆವಾಸಿಗಳೊಂದಿಗೆ ಕ್ರಮವಾಗಿ ಹಂಚಿಕೊಂಡನು ಮತ್ತು ಅವನ ಪ್ರಯತ್ನಗಳು ಅತ್ಯುತ್ತಮ ಫಲಿತಾಂಶಗಳನ್ನು ಉಂಟುಮಾಡಿದವು. ಇವರಲ್ಲಿ ಕೆಲವರು ಬಿಡುಗಡೆಹೊಂದಿದ ಬಳಿಕವೂ ಪ್ರಗತಿಯನ್ನು ಮಾಡುತ್ತಾ ಮುಂದುವರಿದರು ಮತ್ತು ಸ್ನಾತ ಕ್ರೈಸ್ತರಾಗಿ ಪರಿಣಮಿಸಿದರು. ದೇವರ ವಾಕ್ಯದ ಶಕ್ತಿಯನ್ನು ನೋಡಿ ರೊಮೇನ್‌ ತನ್ನ ಅಧ್ಯಯನವನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಿದನು. ಅವನು ಮಿಲಿಟರಿ ಸೇವೆಯನ್ನು ತೊರೆದನು ಮತ್ತು ತನ್ನ ಬೈಬಲ್‌ ಶಿಕ್ಷಣ ಚಟುವಟಿಕೆಗಳಲ್ಲಿ ಮುಂದುವರಿದನು. ಈಗ ಅವನು ಒಬ್ಬ ಮಾಜಿ ಸೆರೆವಾಸಿಯೊಂದಿಗೆ ಸಾರುವ ಕೆಲಸದಲ್ಲಿ ಪಾಲ್ಗೊಳ್ಳುತ್ತಿದ್ದಾನೆ.

“ಇಲ್ಲಿ ನಾವು ಬೈಬಲ್‌, ಬೈಬಲ್‌ ಸಾಹಿತ್ಯಗಳು ಮತ್ತು ಬೈಬಲ್‌ ಅಧ್ಯಯನದ ಸಹಾಯದಿಂದ ಬದುಕುತ್ತೇವೆ” ಎಂದು ಒಬ್ಬ ಸೆರೆವಾಸಿಯು ಬರೆದನು. ಈ ಮಾತುಗಳು, ಬೈಬಲ್‌ ಸಾಹಿತ್ಯಕ್ಕಾಗಿ ಕೆಲವು ಸೆರೆಮನೆಗಳಲ್ಲಿ ಇರುವ ಅಗತ್ಯವನ್ನು ಸೂಕ್ತವಾಗಿಯೇ ವರ್ಣಿಸುತ್ತವೆ. ಯುಕ್ರೇನ್‌ನಲ್ಲಿರುವ ಒಂದು ಸಭೆಯು ಸ್ಥಳಿಕ ಸೆರೆಮನೆಯೊಂದರಲ್ಲಿ ಮಾಡಲಾಗುತ್ತಿರುವ ಬೈಬಲ್‌ ಶಿಕ್ಷಣ ಕೆಲಸದ ಕುರಿತು ಹೀಗೆ ವರದಿಸುತ್ತದೆ: “ನಾವು ಒದಗಿಸುವ ಸಾಹಿತ್ಯಕ್ಕೆ ಸೆರೆಮನೆಯ ಆಡಳಿತವರ್ಗವು ಆಭಾರಿಯಾಗಿದೆ. ನಾವು ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಪ್ರತಿಯೊಂದು ಸಂಚಿಕೆಯ 60 ಪ್ರತಿಗಳನ್ನು ಅವರಿಗೆ ಕಳುಹಿಸುತ್ತೇವೆ.” ಇನ್ನೊಂದು ಸಭೆಯು ಹೀಗೆ ಬರೆಯುತ್ತದೆ: “ನಾವು 20 ಚಿಕ್ಕ ಗ್ರಂಥಾಲಯಗಳನ್ನು ಹೊಂದಿರುವ ಒಂದು ಸೆರೆಮನೆಯನ್ನು ನೋಡಿಕೊಳ್ಳುತ್ತಿದ್ದೇವೆ. ಪ್ರತಿಯೊಂದು ಗ್ರಂಥಾಲಯಕ್ಕೆ ನಾವು ನಮ್ಮ ಮುಖ್ಯ ಪ್ರಕಾಶನಗಳನ್ನು ಕಳುಹಿಸಿಕೊಡುತ್ತೇವೆ. ಇದೆಲ್ಲ ಸೇರಿ ಸುಮಾರು 20 ಬಾಕ್ಸ್‌ಗಳಷ್ಟು ಸಾಹಿತ್ಯವಾಗುತ್ತದೆ.” ಒಂದು ಸೆರೆಮನೆಯಲ್ಲಿ, ನಮ್ಮ ಪತ್ರಿಕೆಯ ಪ್ರತಿಯೊಂದು ಸಂಚಿಕೆಯಿಂದ ಸೆರೆವಾಸಿಗಳು ಪ್ರಯೋಜನ ಪಡೆಯಸಾಧ್ಯವಾಗುವಂತೆ ಗ್ರಂಥಾಲಯದಲ್ಲಿನ ಗಾರ್ಡ್‌ಗಳು ನಮ್ಮ ಪತ್ರಿಕೆಗಳ ಒಂದು ಫೈಲನ್ನು ಇಟ್ಟುಕೊಂಡು ಅದಕ್ಕೆ ಹೊಸ ಪತ್ರಿಕೆಗಳನ್ನು ಸೇರಿಸುತ್ತಾ ಇರುತ್ತಾರೆ.

ಇಸವಿ 2002ರಲ್ಲಿ ಯುಕ್ರೇನ್‌ನ ಬ್ರಾಂಚ್‌ ಆಫೀಸು ‘ಪ್ರಿಸನ್‌ ಡೆಸ್ಕ್‌’ ಎಂಬ ಒಂದು ಇಲಾಖೆಯನ್ನು ಆರಂಭಿಸಿತು. ಇಷ್ಟರ ತನಕ ಈ ಇಲಾಖೆಯು 120 ಸೆರೆಮನೆಗಳನ್ನು ಸಂಪರ್ಕಿಸಿದೆ ಮತ್ತು ಅವುಗಳನ್ನು ನೋಡಿಕೊಳ್ಳುವಂತೆ ಸಭೆಗಳನ್ನು ನೇಮಿಸಿದೆ. ಸೆರೆವಾಸಿಗಳಿಂದ ಪ್ರತಿ ತಿಂಗಳು ಸುಮಾರು 50 ಪತ್ರಗಳು ಬರುತ್ತವೆ, ಮತ್ತು ಇವುಗಳಲ್ಲಿ ಹೆಚ್ಚಿನವು ಸಾಹಿತ್ಯವನ್ನು ವಿನಂತಿಸುತ್ತಾ ಅಥವಾ ಬೈಬಲ್‌ ಅಧ್ಯಯನಕ್ಕಾಗಿ ಕೇಳಿಕೊಳ್ಳುತ್ತಾ ಬರೆದಂಥ ಪತ್ರಗಳಾಗಿವೆ. ಸ್ಥಳಿಕ ಸಹೋದರರು ಅವರನ್ನು ಸಂಪರ್ಕಿಸಲು ಸಾಧ್ಯವಾಗುವ ತನಕ ಬ್ರಾಂಚ್‌ ಅವರಿಗೆ ಪುಸ್ತಕಗಳು, ಪತ್ರಿಕೆಗಳು ಮತ್ತು ಬ್ರೋಷರ್‌ಗಳನ್ನು ಕಳುಹಿಸುತ್ತದೆ.

‘ಸೆರೆಯವರನ್ನು ಜ್ಞಾಪಕಮಾಡಿಕೊಳ್ಳಿರಿ’ ಎಂದು ಅಪೊಸ್ತಲ ಪೌಲನು ತನ್ನ ಜೊತೆ ಕ್ರೈಸ್ತರಿಗೆ ಬರೆದನು. (ಇಬ್ರಿಯ 13:3) ಯಾರು ತಮ್ಮ ನಂಬಿಕೆಯ ನಿಮಿತ್ತ ಸೆರೆವಾಸವನ್ನು ಅನುಭವಿಸುತ್ತಿದ್ದರೋ ಅವರ ಕುರಿತು ಅವನು ಸೂಚಿಸಿ ಮಾತಾಡಿದನು. ಇಂದು ಯೆಹೋವನು ಸಾಕ್ಷಿಗಳು ಸೆರೆಯಲ್ಲಿರುವವರನ್ನು ಜ್ಞಾಪಕಮಾಡಿಕೊಳ್ಳುತ್ತಾರೆ, ಸೆರೆಮನೆಗಳನ್ನು ಸಂದರ್ಶಿಸುತ್ತಾರೆ ಮತ್ತು ‘ಸೆರೆಯಲ್ಲಿರುವವರಿಗೆ ಬಿಡುಗಡೆಯನ್ನು ಸಾರುತ್ತಾರೆ.’​—⁠ಲೂಕ 4:​18, NIBV.

[ಪಾದಟಿಪ್ಪಣಿ]

^ ಪ್ಯಾರ. 5 ಕೆಲವು ಹೆಸರುಗಳು ಬದಲಾಯಿಸಲ್ಪಟ್ಟಿವೆ.

[ಪುಟ 9ರಲ್ಲಿರುವ ಚಿತ್ರ]

ಯುಕ್ರೇನ್‌ನ ಲವೀಫ್‌ನ ಸೆರೆಮನೆ ಗೋಡೆ

[ಪುಟ 10ರಲ್ಲಿರುವ ಚಿತ್ರ]

ಮೈಕೊಲಾ

[ಪುಟ 10ರಲ್ಲಿರುವ ಚಿತ್ರ]

ವೇಸಿಲ್‌ ತನ್ನ ಪತ್ನಿಯಾದ ಐರಿನಾಳೊಂದಿಗೆ

[ಪುಟ 10ರಲ್ಲಿರುವ ಚಿತ್ರ]

ವೇಕ್ಟರ್‌