ಒಳ್ಳೆಯದು ಕೆಟ್ಟದ್ದರಿಂದ ಆವರಿಸಲ್ಪಟ್ಟಿದೆ
ಒಳ್ಳೆಯದು ಕೆಟ್ಟದ್ದರಿಂದ ಆವರಿಸಲ್ಪಟ್ಟಿದೆ
ಇಂದಿನ ಲೋಕದಲ್ಲಿ, ಕೊಂಚವೇ ಮಂದಿ ಸ್ವತ್ಯಾಗದ ಮನೋಭಾವವನ್ನು ಪ್ರದರ್ಶಿಸುವ ಇಚ್ಛೆಯುಳ್ಳವರಾಗಿದ್ದಾರೆ ಎಂದು ತೋರಬಹುದು. ಆದರೆ, ಇಂದು ಸಹ ಕೆಲವರು “ವ್ಯತ್ಯಾಸವಾಗಿರಲು” ಅಂದರೆ ಯಾವುದಾದರೊಂದು ವಿಧದಲ್ಲಿ ಇತರರಿಗೆ ಒಳ್ಳೇದನ್ನು ಮಾಡಲು ಬಯಸುತ್ತಾರೆ. ಪ್ರತಿ ವರುಷ ಅಸಂಖ್ಯಾತ ಜನರು ತಮಗೆ ಅತ್ಯುತ್ತಮವೆಂದು ತೋರುವ ಧರ್ಮಕಾರ್ಯ ಸಂಸ್ಥೆಗೆ ನೂರಾರು ಕೋಟಿ ರೂಪಾಯಿಗಳನ್ನು ಧನಸಹಾಯವಾಗಿ ನೀಡುತ್ತಿದ್ದಾರೆ. ಉದಾಹರಣೆಗೆ, ಬ್ರಿಟನ್ 2002ನೇ ಇಸವಿಯಲ್ಲಿ ಧರ್ಮಕಾರ್ಯಕ್ಕಾಗಿ 58,500 ಕೋಟಿ ರೂಪಾಯಿಗಳಷ್ಟು ಕಾಣಿಕೆಯನ್ನು ಒಟ್ಟುಸೇರಿಸಿ ಒಂದು ದಾಖಲೆಯನ್ನೇ ಸ್ಥಾಪಿಸಿದೆ. 1999ರಿಂದೀಚೆಗೆ, ಉದಾರಿಗಳಾದ ಹತ್ತು ಲೋಕೋಪಕಾರಿಗಳು 1,71,000 ಕೋಟಿಗಿಂತಲೂ ಹೆಚ್ಚು ಹಣವನ್ನು ಬಡವರ ಸಹಾಯಕ್ಕಾಗಿ ನೀಡಿದ್ದಾರೆ ಅಥವಾ ನೀಡುವುದಾಗಿ ಮಾತುಕೊಟ್ಟಿದ್ದಾರೆ.
ಕಡಿಮೆ ಆದಾಯವಿರುವ ಕುಟುಂಬಗಳ ವೈದ್ಯಕೀಯ ಖರ್ಚನ್ನು ನೋಡಿಕೊಳ್ಳುವುದು, ಒಂಟಿ ಹೆತ್ತವರಿರುವ ಕುಟುಂಬಗಳಲ್ಲಿನ ಮಕ್ಕಳಿಗೆ ವಿದ್ಯಾಭ್ಯಾಸ ಮತ್ತು ಮಾರ್ಗದರ್ಶನವನ್ನು ನೀಡುವುದು, ಪ್ರಗತಿಶೀಲ ದೇಶಗಳಲ್ಲಿ ಸೋಂಕು ರಕ್ಷಣೆಯ ಕಾರ್ಯಕ್ರಮಗಳಿಗೆ ಹಣಕಾಸಿನ ನೆರವನ್ನು ನೀಡುವುದು, ಪ್ರತಿ ತರಗತಿಯ ಆರಂಭದಲ್ಲಿ ಮಕ್ಕಳಿಗೆ ಮೊದಲ ಪುಸ್ತಕವನ್ನು ನೀಡುವುದು, ಮರಿಹಾಕುವಂಥ ಪ್ರಾಣಿಗಳನ್ನು ಬಡ ದೇಶಗಳಲ್ಲಿರುವ ವ್ಯವಸಾಯಗಾರರಿಗೆ ಒದಗಿಸುವುದು ಮತ್ತು ನೈಸರ್ಗಿಕ ವಿಪತ್ತುಗಳಿಗೆ ಬಲಿಯಾದವರಿಗೆ ಪರಿಹಾರವನ್ನು ಒದಗಿಸಿಕೊಡುವುದು ಈ ಮುಂತಾದವುಗಳು ಧರ್ಮಕಾರ್ಯ ಸಂಸ್ಥೆಯಲ್ಲಿ ಕೆಲಸಮಾಡುತ್ತಿರುವವರಿಂದ ಸಾಧಿಸಲ್ಪಡುತ್ತಿರುವ ಕೆಲವು ಒಳ್ಳೇ ಕಾರ್ಯಗಳಾಗಿವೆ.
ಇತರರಿಗೆ ಒಳ್ಳೇದನ್ನು ಮಾಡುವ ಸಾಮರ್ಥ್ಯ ಮಾನವನಿಗಿದೆ ಎಂಬುದನ್ನು ಈ ಎಲ್ಲ ವಿಷಯಗಳು ತೋರಿಸುತ್ತವೆ. ಆದರೆ ದುಃಖಕರವಾದ ಸಂಗತಿಯೇನೆಂದರೆ, ಹೇಳಲಾಗದಷ್ಟು ಕೆಟ್ಟದಾಗಿರುವ ಕೃತ್ಯಗಳನ್ನು ನಡಿಸುವ ಜನರು ಸಹ ಇದ್ದಾರೆ.
ಹೆಚ್ಚುತ್ತಿರುವ ಕೆಟ್ಟತನ
ಎರಡನೇ ಲೋಕ ಯುದ್ಧದ ಅಂತ್ಯದಿಂದೀಚೆಗೆ, ಹತ್ಯಾಕಾಂಡದ ಮತ್ತು ರಾಜಕೀಯದಿಂದ ಪ್ರೇರಿತವಾದ ಸಾಮೂಹಿಕ ಹತ್ಯೆಯ ಸುಮಾರು 50 ದಾಖಲೆಗಳಿವೆ. “ಈ ಘಟನೆಗಳು ಕಡಿಮೆಪಕ್ಷ 1.2 ಕೋಟಿಯಿಂದ 2.2 ಕೋಟಿಯ ವರೆಗೆ ಅಯೋಧರ ಜೀವಗಳನ್ನು ಬಲಿತೆಗೆದುಕೊಂಡವು. ಇದು, 1945ರಿಂದೀಚೆಗೆ ನಡೆದ ಆಂತರಿಕ ಮತ್ತು ಅಂತಾರಾಷ್ಟ್ರೀಯ ಯುದ್ಧಗಳಿಗೆ ಬಲಿಯಾದವರ ಸಂಖ್ಯೆಗಿಂತ ಹೆಚ್ಚಾಗಿದೆ” ಎಂದು ಅಮೆರಿಕದ ರಾಜಕೀಯ ವಿಜ್ಞಾನ ಪರಾಮರ್ಶೆ (ಇಂಗ್ಲಿಷ್) ಎಂಬ ಪತ್ರಿಕೆಯು ತಿಳಿಸುತ್ತದೆ.
ಇಪ್ಪತ್ತನೇ ಶತಮಾನದ ಕೊನೆಯಾರ್ಧದಲ್ಲಿ, ರಾಜಕೀಯ ಕಾರಣಗಳಿಗಾಗಿ ಕ್ಯಾಂಬೋಡಿಯದಲ್ಲಿ ಸುಮಾರು 22 ಲಕ್ಷ ಜನರು ಕೊಲ್ಲಲ್ಪಟ್ಟರು. ರೂಆಂಡದಲ್ಲಿನ ಕುಲಸಂಬಂಧಿತ ದ್ವೇಷವು, 8,00,000ಕ್ಕಿಂತಲೂ ಹೆಚ್ಚು ಗಂಡಸರ, ಹೆಂಗಸರ ಮತ್ತು ಮಕ್ಕಳ ಮರಣಕ್ಕೆ ನಡೆಸಿತು. ಧಾರ್ಮಿಕ ಮತ್ತು ರಾಜಕೀಯ ಪ್ರಚೋದನೆಯಿಂದಾಗಿ ಬಾಸ್ನಿಯದಲ್ಲಿ ಸಂಭವಿಸಿದ ಕಗ್ಗೊಲೆಯಿಂದಾಗಿ 2,00,000ಕ್ಕಿಂತಲೂ ಹೆಚ್ಚು ಜನರು ಮೃತಪಟ್ಟರು.
ಇತ್ತೀಚಿನ ದುಷ್ಕೃತ್ಯಗಳನ್ನು ಗುರುತಿಸುತ್ತಾ, 2004ರಲ್ಲಿ ವಿಶ್ವಸಂಸ್ಥೆಯ ಸೆಕ್ರಿಟರಿ ಜನರಲ್ ಹೇಳಿದ್ದು: “ಇರಾಕ್‌ನಲ್ಲಿ ಅಯೋಧರನ್ನು ಯಾವುದೇ ಕನಿಕರವಿಲ್ಲದೆ ಕೊಲ್ಲಲಾಯಿತು. ಮತ್ತು ಪರಿಹಾರ ಕೆಲಸಗಾರರು, ಪತ್ರಕರ್ತರು ಹಾಗೂ ಇತರ ಅಯೋಧರು ಒತ್ತೆಯಾಳುಗಳಾಗಿ ಕೊಂಡೊಯ್ಯಲ್ಪಟ್ಟು ಅತಿ ಕ್ರೂರ ರೀತಿಯಲ್ಲಿ ಕೊಲ್ಲಲ್ಪಟ್ಟರು. ಅದೇ ಸಮಯದಲ್ಲಿ, ಇರಾಕಿ ಕೈದಿಗಳನ್ನು ಸಹ ದೌರ್ಜನ್ಯದಿಂದ ಉಪಚರಿಸಲಾಯಿತು. ಡಾರ್ಫರ್‌ನಲ್ಲಿ
ಇಡೀ ಜನಸಮೂಹವೇ ತಮ್ಮ ಮನೆಗಳನ್ನು ಬಿಟ್ಟು ಬೇರೊಂದು ಸ್ಥಳಕ್ಕೆ ಓಡಿಹೋಯಿತು. ಅವರ ಮನೆಗಳನ್ನು ಧ್ವಂಸಗೊಳಿಸಲಾಯಿತು. ಉದ್ದೇಶಪೂರ್ವಕವಾಗಿ ಬಲಾತ್ಕಾರ ಸಂಭೋಗವೆಸಗಲಾಯಿತು. ಉತ್ತರ ಯುಗಾಂಡದಲ್ಲಿ ಮಕ್ಕಳನ್ನು ಅಂಗಹೀನಗೊಳಿಸಿ, ಭಯಂಕರವಾದ ಕೃತ್ಯಗಳಲ್ಲಿ ಭಾಗವಹಿಸುವಂತೆ ಒತ್ತಾಯಿಸಲಾಯಿತು. ಬೆಸ್ಲಾನ್‌ನಲ್ಲಿ, ಮಕ್ಕಳನ್ನು ಒತ್ತೆಯಾಳುಗಳಾಗಿ ಕೊಂಡೊಯ್ದು ಕ್ರೂರವಾದ ರೀತಿಯಲ್ಲಿ ಅವರನ್ನು ಕೊಂದದ್ದನ್ನು ನಾವು ನೋಡಿದ್ದೇವೆ.”ಪ್ರಗತಿಶೀಲ ದೇಶಗಳೆಂದು ಕರೆಯಲ್ಪಡುವಲ್ಲಿಯೂ, ಹಗೆತನದಿಂದಾಗಿ ಸಂಭವಿಸುವ ಪಾತಕಗಳ ಸಂಖ್ಯೆಯು ಹೆಚ್ಚುತ್ತಾ ಇದೆ. ಉದಾಹರಣೆಗೆ, ಬ್ರಿಟನ್‌ನಲ್ಲಿ “ಕಳೆದ ಹತ್ತು ವರುಷಗಳಲ್ಲಿ ಕುಲಸಂಬಂಧಿತ ವಿಷಯಗಳಿಂದ ಪ್ರಚೋದಿಸಲ್ಪಟ್ಟ ಹಲ್ಲೆಗೆ ಇಲ್ಲವೆ ದೌರ್ಜನ್ಯಕ್ಕೆ ಬಲಿಯಾದವರ ಸಂಖ್ಯೆಯು ಹನ್ನೊಂದು ಪಟ್ಟು ಹೆಚ್ಚಾಗಿದೆ” ಎಂದು 2004ರಲ್ಲಿ ಇಂಡಿಪೆಂಡೆಂಟ್ ನ್ಯೂಸ್ ಎಂಬ ಪತ್ರಿಕೆಯು ವರದಿಸಿತು.
ಬಹಳಷ್ಟು ಒಳ್ಳೇದನ್ನು ಮಾಡುವ ಸಾಮರ್ಥ್ಯವಿರುವ ಮಾನವರು ಇಂಥ ದುಷ್ಕೃತ್ಯಗಳನ್ನು ನಡೆಸುವುದಾದರೂ ಏಕೆ? ಕೆಟ್ಟ ವಿಷಯಗಳಿಂದ ಎಂದಾದರೂ ನಾವು ವಿಮುಕ್ತರಾಗುವೆವೊ? ಮುಂದಿನ ಲೇಖನವು ತೋರಿಸುವಂತೆ, ಗಲಿಬಿಲಿಗೊಳಿಸುವ ಈ ಪ್ರಶ್ನೆಗಳಿಗೆ ಬೈಬಲ್ ಸಂತೃಪ್ತಿಕರ ಉತ್ತರಗಳನ್ನು ಒದಗಿಸುತ್ತದೆ.
[ಪುಟ 2ರಲ್ಲಿರುವ ಚಿತ್ರ ಕೃಪೆ]
COVER: Mark Edwards/Still Pictures/Peter Arnold, Inc.