ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಧ್ಯಾನಿಸುವುದರಲ್ಲಿ ಆನಂದವನ್ನು ಕಂಡುಕೊಳ್ಳಿರಿ

ಧ್ಯಾನಿಸುವುದರಲ್ಲಿ ಆನಂದವನ್ನು ಕಂಡುಕೊಳ್ಳಿರಿ

ಧ್ಯಾನಿಸುವುದರಲ್ಲಿ ಆನಂದವನ್ನು ಕಂಡುಕೊಳ್ಳಿರಿ

ಧ್ಯಾನಿಸುವುದು ಎಂದು ನೆನಸುವಾಗಲೇ ಕೆಲವರಿಗೆ ಹೆದರಿಕೆಯಾಗುತ್ತದೆ. ಧ್ಯಾನಿಸುವುದೆಂದರೆ, ಗಾಢವಾದ ಏಕಾಗ್ರತೆಯನ್ನು ಕೇಳಿಕೊಳ್ಳುವ ಒಂದು ಕಷ್ಟಕರ ಕೆಲಸ ಎಂದು ಅವರು ವೀಕ್ಷಿಸಬಹುದು. ಧ್ಯಾನಿಸುವುದು ಎಷ್ಟು ಪ್ರಾಮುಖ್ಯವಾಗಿದೆ ಎಂದು ಓದುವಾಗ, ಅದನ್ನು ತಾವು ಅಲಕ್ಷಿಸಿದ್ದೇವೆ ಎಂದು ನೆನಸಿ ಅವರಿಗೆ ದೋಷಿಭಾವನೆಯೂ ಉಂಟಾಗಬಹುದು. (ಫಿಲಿಪ್ಪಿ 4:⁠8) ಆದರೆ ಯೆಹೋವನ, ಆತನ ರಮಣೀಯ ಗುಣಗಳ, ಆಶ್ಚರ್ಯಕರ ಸಾಧನೆಗಳ, ಆತನು ಅಪೇಕ್ಷಿಸುವ ವಿಷಯಗಳ ಮತ್ತು ಆತನ ಮಹಾನ್‌ ಉದ್ದೇಶದ ಕುರಿತು ನಾವು ಕಲಿತುಕೊಂಡಿರುವ ಸತ್ಯಗಳನ್ನು ಮೌನವಾಗಿ ಮೆಲುಕುಹಾಕುವುದು, ಸಮಯವನ್ನು ವಿನಿಯೋಗಿಸಲು ಒಂದು ಆನಂದದಾಯಕ ವಿಧಾನವಾಗಿರಸಾಧ್ಯವಿದೆ ಮತ್ತು ಆಗಿರಬೇಕು. ಏಕೆ?

ಯೆಹೋವ ದೇವರು ವಿಶ್ವದ ಪರಮಾಧಿಕಾರಿಯಾಗಿದ್ದಾನೆ ಮತ್ತು ತನ್ನ ಮಹಾ ಉದ್ದೇಶವನ್ನು ನೆರವೇರಿಸುವುದರಲ್ಲಿ ಆತನು ಕಾರ್ಯಮಗ್ನನಾಗಿದ್ದಾನೆ. (ಯೋಹಾನ 5:17) ಹಾಗಿರುವುದಾದರೂ, ತನ್ನ ಪ್ರತಿಯೊಬ್ಬ ಆರಾಧಕನು ಮೌನವಾಗಿ ಆಲೋಚಿಸುವ ವಿಷಯಗಳ ಕುರಿತು ಆತನು ಕಾಳಜಿ ವಹಿಸುತ್ತಾನೆ. ಕೀರ್ತನೆಗಾರನಾದ ದಾವೀದನಿಗೆ ಇದು ತಿಳಿದಿತ್ತು ಮತ್ತು ದೈವಿಕ ಪ್ರೇರಣೆಯಿಂದ ಅವನು ಬರೆದದ್ದು: “ಯೆಹೋವನೇ, ನೀನು ನನ್ನನ್ನು ಪರೀಕ್ಷಿಸಿ ತಿಳುಕೊಂಡಿದ್ದೀ; ನಾನು ಕೂತುಕೊಳ್ಳುವದೂ ಏಳುವದೂ ನಿನಗೆ ಗೊತ್ತದೆ; ದೂರದಿಂದಲೇ ನನ್ನ ಆಲೋಚನೆಗಳನ್ನು ಬಲ್ಲವನಾಗಿರುತ್ತೀ.”​—⁠ಕೀರ್ತನೆ 139:1, 2.

ಆರಂಭದಲ್ಲಿ, ಕೀರ್ತನೆಗಾರನ ಈ ಮಾತುಗಳನ್ನು ಒಬ್ಬನು ನಕಾರಾತ್ಮಕವಾಗಿ ವೀಕ್ಷಿಸಬಹುದು. ‘ದೇವರು “ದೂರ”ದಲ್ಲಿ ಇರುವುದಾದರೂ ನನ್ನ ಮನಸ್ಸಿನಲ್ಲಿ ಮೂಡುವ ಪ್ರತಿಯೊಂದು ಕೆಟ್ಟ ಆಲೋಚನೆಯನ್ನು ಆತನು ಗಮನಿಸುತ್ತಾನೆ’ ಎಂಬುದಾಗಿ ಅವನು ತರ್ಕಿಸಬಹುದು. ಈ ರೀತಿಯಲ್ಲಿ ನೆನಸುವುದು ಒಂದು ವಿಧದಲ್ಲಿ ಪ್ರಯೋಜನಕಾರಿಯಾಗಿದೆ. ಕೆಟ್ಟ ಆಲೋಚನೆಗಳ ವಿರುದ್ಧ ಹೋರಾಡುವಂತೆ ಇದು ಸಹಾಯಮಾಡಬಲ್ಲದು. ಮಾತ್ರವಲ್ಲದೆ, ಒಂದುವೇಳೆ ನಮ್ಮಲ್ಲಿ ಅಂಥ ಆಲೋಚನೆಗಳಿರುವುದಾದರೆ ಅವುಗಳನ್ನು ದೇವರಿಗೆ ಅರಿಕೆಮಾಡಿ, ಯೇಸುವಿನ ವಿಮೋಚನಾ ಮೌಲ್ಯದ ಯಜ್ಞದಲ್ಲಿನ ನಮ್ಮ ನಂಬಿಕೆಯ ಮೇಲಾಧಾರಿತವಾಗಿ ಆತನು ನಮ್ಮನ್ನು ಕ್ಷಮಿಸುವನು ಎಂಬ ಭರವಸೆಯನ್ನು ಇಡಲು ಸಹ ಇದು ಸಹಾಯಮಾಡಬಲ್ಲದು. (1 ಯೋಹಾನ 1:​8, 9; 2:​1, 2) ಆದರೆ ಅದೇ ಸಮಯದಲ್ಲಿ, ಯೆಹೋವನು ತನ್ನ ಸೇವಕರನ್ನು ಪರೀಕ್ಷಿಸುವುದು ಸಕಾರಾತ್ಮಕ ವಿಧದಲ್ಲಿ ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಆತನ ಕುರಿತು ಗಣ್ಯತಾಭಾವದಿಂದ ನಾವು ಆಲೋಚಿಸುವಾಗ ಆತನು ಗಮನಕೊಡುತ್ತಾನೆ.

“ಯೆಹೋವನು ತನ್ನ ಲಕ್ಷಾಂತರ ಮಂದಿ ಆರಾಧಕರ ಎಲ್ಲ ಒಳ್ಳೇ ಆಲೋಚನೆಗಳನ್ನು ನಿಜವಾಗಿಯೂ ಗಮನಕ್ಕೆ ತೆಗೆದುಕೊಳ್ಳುತ್ತಾನೊ?” ಎಂದು ನೀವು ಕೇಳಬಹುದು. ಖಂಡಿತವಾಗಿಯೂ ತೆಗೆದುಕೊಳ್ಳುತ್ತಾನೆ. ಯೆಹೋವನು ಚಿಕ್ಕ ಗುಬ್ಬಿಗಳನ್ನು ಸಹ ಗಮನಕ್ಕೆ ತೆಗೆದುಕೊಳ್ಳುತ್ತಾನೆ ಎಂಬುದಾಗಿ ಹೇಳುವ ಮೂಲಕ ನಮ್ಮ ಕಡೆಗೆ ಯೆಹೋವನಿಗಿರುವ ಆಸಕ್ತಿಯನ್ನು ಯೇಸು ಒತ್ತಿಹೇಳಿದನು. ಯೇಸು ಕೂಡಿಸಿ ಹೇಳಿದ್ದು: “ಬಹಳ ಗುಬ್ಬಿಗಳಿಗಿಂತ ನೀವು ಹೆಚ್ಚಿನವರು.” (ಲೂಕ 12:​6, 7) ಗುಬ್ಬಿಗಳು ಯೆಹೋವನ ಬಗ್ಗೆ ಆಲೋಚಿಸುವುದಿಲ್ಲ. ಅಂಥ ಗುಬ್ಬಿಗಳ ಬಗ್ಗೆ ಯೆಹೋವನು ಕಾಳಜಿ ವಹಿಸುತ್ತಾನಾದರೆ, ಆತನ ಕುರಿತು ಆಲೋಚಿಸುವ ಪ್ರತಿಯೊಬ್ಬರ ಬಗ್ಗೆ ಆತನು ಎಷ್ಟು ಹೆಚ್ಚು ಕಾಳಜಿ ವಹಿಸಲಿಕ್ಕಿಲ್ಲ? ಹೌದು, ದಾವೀದನಂತೆ ನಾವು ಸಹ ದೃಢಭರವಸೆಯಿಂದ ಹೀಗೆ ಪ್ರಾರ್ಥಿಸಸಾಧ್ಯವಿದೆ: “ಯೆಹೋವನೇ, ನನ್ನ ಶರಣನೇ, ನನ್ನ ವಿಮೋಚಕನೇ, . . . ನನ್ನ ಹೃದಯದ ಧ್ಯಾನವೂ ನಿನಗೆ ಸಮರ್ಪಕವಾಗಿರಲಿ.”​—⁠ಕೀರ್ತನೆ 19:14.

ಯೆಹೋವನು ತನ್ನ ನಿಷ್ಠಾವಂತ ಆರಾಧಕರು ತನ್ನ ಕುರಿತು ಧ್ಯಾನಿಸುವಾಗ ಕಾಳಜಿ ವಹಿಸುತ್ತಾನೆ ಎಂಬುದಕ್ಕಾಗಿರುವ ಹೆಚ್ಚಿನ ರುಜುವಾತು ಪ್ರವಾದಿಯಾದ ಮಲಾಕಿಯನ ಪ್ರೇರಿತ ಮಾತುಗಳಲ್ಲಿ ಕಂಡುಬರುತ್ತದೆ. ನಮ್ಮ ದಿನಗಳ ಕುರಿತು ಮಾತಾಡುತ್ತಾ ಅವನು ಹೇಳಿದ್ದು: “ಇಂಥ ಮಾತುಗಳನ್ನು ಕೇಳಿ ಯೆಹೋವನ ಭಕ್ತರು ಒಬ್ಬರಿಗೊಬ್ಬರು ಮಾತಾಡಿಕೊಳ್ಳಲು ಯೆಹೋವನು ಕಿವಿಗೊಟ್ಟು ಆಲಿಸಿ ಭಯಭಕ್ತಿಯಿಂದ ತನ್ನ ನಾಮಸ್ಮರಣೆಮಾಡುವವರ ಹೆಸರುಗಳನ್ನು ತನ್ನ ಮುಂದೆ ಜ್ಞಾಪಕದ ಪುಸ್ತಕದಲ್ಲಿ ಬರೆಯಿಸಿದನು.” (ಮಲಾಕಿಯ 3:16) ಯೆಹೋವನ ಕುರಿತು ನಾವು ಯೋಚಿಸುವಾಗ ಆತನು ‘ಕಿವಿಗೊಡುತ್ತ’ ಇರುತ್ತಾನೆ ಎಂದು ಜ್ಞಾಪಿಸಿಕೊಳ್ಳುವುದು, ದೈವಿಕ ಧ್ಯಾನವನ್ನು ಆನಂದದಾಯಕವನ್ನಾಗಿ ಮಾಡುತ್ತದೆ. ಆದುದರಿಂದ, ಕೀರ್ತನೆಗಾರನ ಮಾತುಗಳನ್ನು ನಾವು ಪ್ರತಿಧ್ವನಿಸೋಣ: “ನಿನ್ನ ಕಾರ್ಯಗಳನ್ನೆಲ್ಲಾ ಧ್ಯಾನಿಸುವೆನು; ನಿನ್ನ ಪ್ರವರ್ತನೆಗಳನ್ನು ಸ್ಮರಿಸುವೆನು.”​—⁠ಕೀರ್ತನೆ 77:⁠12.