ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವದೂತರು ಯಾರಾಗಿದ್ದಾರೆ?

ದೇವದೂತರು ಯಾರಾಗಿದ್ದಾರೆ?

ದೇವದೂತರು ಯಾರಾಗಿದ್ದಾರೆ?

ಒಂದು ಪ್ರಬಲವಾದ ಸಾಮ್ರಾಜ್ಯದ ಚಕ್ರಾಧಿಪತಿಗೆ ತನ್ನ ಕಣ್ಮುಂದಿನ ದೃಶ್ಯವನ್ನು ನಂಬಲಿಕ್ಕೇ ಆಗಲಿಲ್ಲ! ಬೆಂಕಿಗೆ ಎಸೆಯಲ್ಪಟ್ಟಿದ್ದ ಮೂವರು ಪುರುಷರು ಸಾವಿನ ದವಡೆಯಿಂದ ರಕ್ಷಿಸಲ್ಪಟ್ಟಿದ್ದರು. ಅವರನ್ನು ರಕ್ಷಿಸಿದವರಾರು? ಆ ಮೂವರಿಗೆ ಸ್ವತಃ ರಾಜನೇ ಹೀಗಂದನು: ‘[ನಿಮ್ಮ] ದೇವರಿಗೆ ಸ್ತೋತ್ರವಾಗಲಿ! ಆತನು ತನ್ನ ದೂತನನ್ನು ಕಳುಹಿಸಿ ತನ್ನಲ್ಲಿ ಭರವಸವಿಟ್ಟ ತನ್ನ ಸೇವಕರನ್ನು ಉದ್ಧರಿಸಿದ್ದಾನಲ್ಲಾ.’ (ದಾನಿಯೇಲ 3:28) ಎರಡು ಸಾವಿರ ವರ್ಷಗಳ ಹಿಂದಿದ್ದ ಬಾಬೆಲಿನ ಈ ಅರಸನು, ದೇವದೂತನೊಬ್ಬನು ನಡೆಸಿದ ವಿಮೋಚನಾ ಕೆಲಸವನ್ನು ಕಣ್ಣಾರೆ ನೋಡಿದನು. ಗತಕಾಲದಲ್ಲಿ ಕೋಟಿಗಟ್ಟಲೆ ಜನರು ದೇವದೂತರನ್ನು ನಂಬುತ್ತಿದ್ದರು. ಇಂದು ಸಹ ಅನೇಕರು ದೇವದೂತರು ಇದ್ದಾರೆಂದು ಮಾತ್ರವಲ್ಲ, ತಮ್ಮ ಜೀವಿತಗಳಲ್ಲಿ ಅವರು ಒಂದಲ್ಲ ಒಂದು ವಿಧದಲ್ಲಿ ಪರಿಣಾಮಬೀರಿದ್ದಾರೆಂದು ನಂಬುತ್ತಾರೆ. ಆದರೆ ದೇವದೂತರು ಯಾರಾಗಿದ್ದಾರೆ, ಮತ್ತು ಅವರ ಮೂಲ ಯಾವುದು?

ಬೈಬಲಿನಲ್ಲಿ ತಿಳಿಸಲ್ಪಟ್ಟಿರುವ ಪ್ರಕಾರ ದೇವದೂತರು ದೇವರಂತೆಯೇ ಆತ್ಮಜೀವಿಗಳಾಗಿದ್ದಾರೆ. (ಇಬ್ರಿಯ 1:14; ಯೋಹಾನ 4:24) ದೇವದೂತರಿರುವ ಈ ಕುಟುಂಬವು ದೊಡ್ಡದಾಗಿದೆ, ಏಕೆಂದರೆ ಅವರು ಕೋಟಿಗಟ್ಟಲೆ ಸಂಖ್ಯೆಯಲ್ಲಿದ್ದಾರೆ. (ಪ್ರಕಟನೆ 5:11) ಅವರೆಲ್ಲರೂ ‘ಪರಾಕ್ರಮಶಾಲಿಗಳು’ ಆಗಿದ್ದಾರೆ. (ಕೀರ್ತನೆ 103:20) ಮಾನವರಂತೆಯೇ ದೇವದೂತರಿಗೆ ಸಹ ವ್ಯಕ್ತಿತ್ವವಿದೆ ಮತ್ತು ಇಚ್ಛಾ ಸ್ವಾತಂತ್ರ್ಯವಿದೆ. ಆದರೆ ಅವರ ಜೀವನದ ಆರಂಭವು ಎಂದೂ ಮಾನವರಾಗಿ ಆಗಲಿಲ್ಲ. ವಾಸ್ತವದಲ್ಲಿ ಮಾನವಕುಲವು, ಅಷ್ಟೇಕೆ ಭೂಗ್ರಹವೇ ಸೃಷ್ಟಿಸಲ್ಪಡುವುದಕ್ಕೆ ಎಷ್ಟೋ ಸಮಯದ ಹಿಂದೆ ದೇವರು ಅವರನ್ನು ಸೃಷ್ಟಿಸಿದನು. ದೇವರು “ಲೋಕಕ್ಕೆ ಅಸ್ತಿವಾರಹಾಕಿದಾಗ,” “ಮುಂಜಾನೆ ನಕ್ಷತ್ರಗಳು [ದೇವದೂತರು] ಒಟ್ಟಾಗಿ ಉತ್ಸಾಹಧ್ವನಿಯೆತ್ತುತ್ತಾ ದೇವಕುಮಾರರೆಲ್ಲರೂ ಆನಂದಘೋಷಮಾಡುತ್ತಾ” ಇದ್ದರೆಂದು ಬೈಬಲ್‌ ಹೇಳುತ್ತದೆ. (ಯೋಬ 38:4, 6) ದೇವದೂತರು ದೇವರ ಸೃಷ್ಟಿಯಾಗಿರುವುದರಿಂದ ಅವರನ್ನು ದೇವಕುಮಾರರು ಇಲ್ಲವೆ ದೇವಪುತ್ರರೆಂದು ಕರೆಯಲಾಗಿದೆ.

ದೇವರು ಯಾವ ಉದ್ದೇಶಕ್ಕಾಗಿ ದೇವದೂತರನ್ನು ಸೃಷ್ಟಿಸಿದನು? ಒಂದುವೇಳೆ ದೇವದೂತರು ಮಾನವ ಇತಿಹಾಸದಲ್ಲಿ ಯಾವುದೇ ಪಾತ್ರವನ್ನು ವಹಿಸಿರುವಲ್ಲಿ ಅದೇನಾಗಿದೆ? ಅವರು ಇಂದು ನಮ್ಮ ಜೀವನದ ಮೇಲೆ ಪರಿಣಾಮಬೀರುತ್ತಾರೊ? ಅವರು ತಮ್ಮ ಸ್ವಂತ ಆಯ್ಕೆಗಳನ್ನು ಮಾಡುವ ಸಾಮರ್ಥ್ಯವುಳ್ಳವರು ಆಗಿರುವುದರಿಂದ, ಅವರಲ್ಲಿ ಯಾರಾದರೂ ಪಿಶಾಚನಾದ ಸೈತಾನನ ಮಾರ್ಗವನ್ನು ಅನುಸರಿಸಿ, ಹೀಗೆ ತಮ್ಮನ್ನೇ ದೇವರ ಶತ್ರುಗಳನ್ನಾಗಿ ಮಾಡಿಕೊಂಡಿದ್ದಾರೊ? ಈ ಪ್ರಶ್ನೆಗಳಿಗೆ ಬೈಬಲ್‌ ಸತ್ಯವಾದ ಉತ್ತರಗಳನ್ನು ಕೊಡುತ್ತದೆ.