ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಬೈಬಲ್‌ ವಚನಗಳ ಅತ್ಯಾರಂಭದ ಜ್ಞಾತ ಉದ್ಧರಣೆಗಳು’

‘ಬೈಬಲ್‌ ವಚನಗಳ ಅತ್ಯಾರಂಭದ ಜ್ಞಾತ ಉದ್ಧರಣೆಗಳು’

‘ಬೈಬಲ್‌ ವಚನಗಳ ಅತ್ಯಾರಂಭದ ಜ್ಞಾತ ಉದ್ಧರಣೆಗಳು’

ಇಪ್ಪತ್ತೈದು ವರ್ಷಗಳಿಗೆ ಹಿಂದೆ, ಇಸ್ರೇಲಿ ಪ್ರಾಕ್ತನಶಾಸ್ತ್ರಜ್ಞರು ಬೆರಗುಗೊಳಿಸುವಂಥ ಒಂದು ಆವಿಷ್ಕಾರವನ್ನು ಮಾಡಿದರು. ಯೆರೂಸಲೇಮಿನ ಹಿನ್ನೋಮ್‌ ಕಣಿವೆಯ ಇಳುಕಲಿನ ಸಮಾಧಿ ಗುಹೆಯೊಂದರಲ್ಲಿ, ಬೈಬಲ್‌ ವಚನಗಳು ಬರೆಯಲ್ಪಟ್ಟಿದ್ದ ಎರಡು ಚಿಕ್ಕ ಬೆಳ್ಳಿಯ ಸುರುಳಿಗಳನ್ನು ಅವರು ಕಂಡುಹಿಡಿದರು. ಈ ಸುರುಳಿಗಳು ಬಾಬೆಲ್‌ ಯೆರೂಸಲೇಮನ್ನು ನಾಶಮಾಡಿದ ವರುಷವಾದ ಸಾ.ಶ.ಪೂ. 607ಕ್ಕಿಂತ ಹಿಂದಿನ ಕಾಲದವುಗಳಾಗಿದ್ದವು. ಈ ಗ್ರಂಥಪಾಠಗಳಲ್ಲಿ ಅರಣ್ಯಕಾಂಡ 6:​24-26ರಲ್ಲಿರುವ ಆಶೀರ್ವಾದಗಳ ಅಂಶಗಳು ಉಲ್ಲೇಖಿಸಲ್ಪಟ್ಟಿವೆ. ಆ ಎರಡು ಸುರುಳಿಗಳಲ್ಲಿಯೂ “ಯೆಹೋವ” ಎಂಬ ದೇವರ ವೈಯಕ್ತಿಕ ನಾಮವು ಅನೇಕ ಬಾರಿ ಇದೆ. ಈ ಬರಹಗಳನ್ನು, “ಹೀಬ್ರು ಬೈಬಲ್‌ ಭಾಗಗಳು ಬರೆಯಲ್ಪಟ್ಟಿರುವ ಪುರಾತನ ಜಗತ್ತಿನ ಅತ್ಯಾರಂಭದ ಜ್ಞಾತ ಹಸ್ತಕೃತಿಗಳು” ಎಂದು ವರ್ಣಿಸಲಾಗಿದೆ.

ಆದರೆ ಕೆಲವು ಮಂದಿ ವಿದ್ವಾಂಸರು ಅದು ಬರೆಯಲ್ಪಟ್ಟಿದ್ದ ಕಾಲವನ್ನು ಪ್ರಶ್ನಿಸಿ, ಆ ಸುರುಳಿಗಳು ಸಾ.ಶ.ಪೂ. 2ನೆಯ ಶತಮಾನದಲ್ಲಿ ಬರೆಯಲ್ಪಟ್ಟಿದ್ದವೆಂದು ವಾದಿಸಿದರು. ಈ ಅಸಮ್ಮತಿಗಿದ್ದ ಒಂದು ಕಾರಣವು, ಈ ಅತಿ ಚಿಕ್ಕ ಸುರುಳಿಗಳ ಮೂಲ ಫೋಟೋಗಳ ಗುಣಮಟ್ಟದಿಂದಾಗಿ ಅದರ ವಿವರಗಳನ್ನು ಒತ್ತಾಗಿ ಪರೀಕ್ಷಿಸಲು ಸಾಧ್ಯವಾಗದೆ ಇದದ್ದೇ ಆಗಿತ್ತು. ಆದುದರಿಂದ ಈ ಸುರುಳಿಗಳು ಯಾವಾಗ ಬರೆಯಲ್ಪಟ್ಟಿದ್ದವೆಂಬ ವಿವಾದವನ್ನು ಪರಿಹರಿಸಲು, ವಿದ್ವಾಂಸರ ಒಂದು ತಂಡವು ಹೊಸ ಅಧ್ಯಯನವನ್ನು ನಡೆಸಿತು. ಅವರು ಈ ಸುರುಳಿಗಳ ಅಧಿಕ ವೇಗದ ಅಂಕಬಿಂಬಗಳನ್ನು ಉತ್ಪಾದಿಸಲು ಅತ್ಯಾಧುನಿಕವಾದ ಛಾಯಾಚಿತ್ರ ಮತ್ತು ಕಂಪ್ಯೂಟರೀಕೃತ ಬಿಂಬ ಯಂತ್ರಕಲಾಶಾಸ್ತ್ರವನ್ನು ಬಳಸಿದರು. ಈ ಹೊಸ ವಿಶ್ಲೇಷಣೆಗಳ ಫಲಿತಾಂಶಗಳನ್ನು ಇತ್ತೀಚಿಗೆ ಪ್ರಕಟಿಸಲಾಯಿತು. ಈ ವಿದ್ವಾಂಸರ ತಂಡ ಯಾವ ತೀರ್ಮಾನಕ್ಕೆ ಬಂತು?

ಪ್ರಥಮವಾಗಿ, ಪ್ರಾಕ್ತನಶಾಸ್ತ್ರೀಯ ದತ್ತಾಂಶಗಳು ಬಾಬೆಲಿನಲ್ಲಿನ ದೇಶಭ್ರಷ್ಟತೆಗೆ ಮುಂಚಿನ ಕಾಲಕ್ಕೆ ನಿರ್ದೇಶಿಸುತ್ತವೆಂದು ಈ ವಿದ್ವಾಂಸರು ಒತ್ತಿಹೇಳುತ್ತಾರೆ. ಪುರಾತನ ಲಿಪಿಶಾಸ್ತ್ರದ ಅವಲೋಕನಗಳು, ಅಂದರೆ ಅಕ್ಷರಗಳ ಆಕಾರ, ಶೈಲಿ, ಸ್ಥಾನ, ಪ್ರತಿ ಅಕ್ಷರವನ್ನು ಬರೆದಿರುವ ಕ್ರಮ ಮತ್ತು ಅವು ಓಲಿರುವ ದಿಕ್ಕು​—⁠ಇವು ಸಹ ಅದೇ ಕಾಲಾವಧಿಗೆ, ಅಂದರೆ ಸಾ.ಶ.ಪೂ. ಏಳನೆಯ ಶತಮಾನದ ಅಂತ್ಯಕ್ಕೆ ಸೂಚಿಸುತ್ತವೆ. ಮತ್ತು ಕೊನೆಯದಾಗಿ, ಆರ್ತಾಗ್ರಫಿಯನ್ನು ಅಂದರೆ ಅಕ್ಷರ ಜೋಡಣೆಯ ವಿಷಯವನ್ನು ಪರಿಗಣಿಸಿದಾಗ ಆ ತಂಡವು ಈ ತೀರ್ಮಾನಕ್ಕೆ ಬಂತು: “ಆ ಸುರುಳಿಗಳ ಕಾಗುಣಿತ ದತ್ತಾಂಶವು, ಆ ಬರಹಗಳ ಕಾಲಕ್ಕೆ ಸಂಬಂಧಪಟ್ಟ ಪ್ರಾಕ್ತನಶಾಸ್ತ್ರೀಯ ಮತ್ತು ಲಿಪಿಶಾಸ್ತ್ರೀಯ ಸಾಕ್ಷ್ಯಕ್ಕೆ ಹೊಂದಿಕೆಯಲ್ಲಿದೆ.”

ಯಾವುದನ್ನು ಕಟೆಫ್‌ ಹಿನ್ನಮ್‌ ಬರಹಗಳೆಂದೂ ಕರೆಯಲಾಗುತ್ತದೊ ಆ ಬೆಳ್ಳಿಯ ಸುರುಳಿಗಳ ಅಧ್ಯಯನವನ್ನು, ಬುಲೆಟಿನ್‌ ಆಫ್‌ ದಿ ಅಮೆರಿಕನ್‌ ಸ್ಕೂಲ್ಸ್‌ ಆಫ್‌ ಒರಿಯಂಟಲ್‌ ರೀಸರ್ಚ್‌ ಹೀಗೆಂದು ಸಾರಾಂಶಿಸುತ್ತದೆ: “ಈ ಸುರುಳಿಗಳಲ್ಲಿ ಕಂಡುಬರುವ ಬರಹಗಳು ಬೈಬಲ್‌ ವಚನಗಳ ಅತ್ಯಾರಂಭದ ಜ್ಞಾತ ಉದ್ಧರಣೆಗಳಾಗಿವೆ ಎಂಬ ಹೆಚ್ಚಿನ ವಿದ್ವಾಂಸರ ತೀರ್ಮಾನವನ್ನು ನಾವು ಹೀಗೆ ಸ್ಥಿರೀಕರಿಸಬಲ್ಲೆವು.”

[ಪುಟ 32ರಲ್ಲಿರುವ ಚಿತ್ರ ಕೃಪೆ]

ಗುಹೆ: Pictorial Archive (Near Eastern History) Est.; ಬರಹಗಳು: Photograph © Israel Museum, Jerusalem; courtesy of Israel Antiquities Authority