ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೇಸುವನ್ನು ದಂಡನೆಗೊಳಪಡಿಸಿದ ಮಹಾ ಯಾಜಕ

ಯೇಸುವನ್ನು ದಂಡನೆಗೊಳಪಡಿಸಿದ ಮಹಾ ಯಾಜಕ

ಯೇಸುವನ್ನು ದಂಡನೆಗೊಳಪಡಿಸಿದ ಮಹಾ ಯಾಜಕ

ಇಸವಿ 1990ರ ನವೆಂಬರ್‌ ತಿಂಗಳಿನಲ್ಲಿ, ಜೆರೂಸಲೇಮಿನ ಹಳೇ ನಗರದಿಂದ ದಕ್ಷಿಣದಿಕ್ಕಿಗೆ ಸುಮಾರು ಒಂದು ಕಿಲೊಮೀಟರ್‌ ದೂರದಲ್ಲಿ, ಉದ್ಯಾನ ಮತ್ತು ರಸ್ತೆಯೊಂದರ ಕೆಲಸಮಾಡುತ್ತಿದ್ದ ಕೆಲವು ಮಂದಿ ಪುರುಷರು ವಿಸ್ಮಯಭರಿತವಾದದ್ದೇನನ್ನೊ ಕಂಡುಹಿಡಿದರು. ಅವರು ಉಪಯೋಗಿಸುತ್ತಿದ್ದ ಒಂದು ಟ್ರ್ಯಾಕ್ಟರ್‌ ಅನಿರೀಕ್ಷಿತವಾಗಿ, ಪ್ರಾಚೀನಕಾಲದ ಹೆಣಹೂಳುವ ಗುಹೆಯೊಂದರ ಛಾವಣಿಯನ್ನು ಕುಸಿದುಬೀಳಿಸಿತು. ಅದರ ಸುತ್ತಮುತ್ತಲಿನ ಕ್ಷೇತ್ರವು ಸಾ.ಶ.ಪೂ. ಮೊದಲನೇ ಶತಮಾನದಿಂದ ಸಾ.ಶ. ಮೊದಲನೇ ಶತಮಾನದ ವರೆಗೆ ಒಂದು ದೊಡ್ಡ ಸ್ಮಶಾನಭೂಮಿಯಾಗಿತ್ತು. ಆ ಸಮಾಧಿಯೊಳಗೆ ಪ್ರಾಕ್ತನಶಾಸ್ತ್ರಜ್ಞರು ಕಂಡುಹಿಡಿದಂಥ ವಿಷಯಗಳು ನಿಶ್ಚಯವಾಗಿಯೂ ವಿಸ್ಮಯಗೊಳಿಸುವಂಥದ್ದಾಗಿವೆ.

ಆ ಗುಹೆಯಲ್ಲಿ, ಮೂಳೆಗಳನ್ನಿಡುವ 12 ಪೆಟ್ಟಿಗೆಗಳು ಇದ್ದವು. ಸತ್ತವರನ್ನು ಸಮಾಧಿಗಳಲ್ಲಿಟ್ಟು ಸುಮಾರು ಒಂದು ವರ್ಷ ಕಳೆದ ಬಳಿಕ ಅಂದರೆ ಅವರ ಮಾಂಸವೆಲ್ಲವೂ ಕೊಳೆತುಹೋದ ನಂತರ ಅವರ ಮೂಳೆಗಳನ್ನು ಅಂತಹ ಪೆಟ್ಟಿಗೆಗಳಲ್ಲಿ ಇಡಲಾಗುತ್ತಿತ್ತು. ಸುಂದರವಾಗಿ ಕೆತ್ತಲ್ಪಟ್ಟಿದ್ದ (ಇಷ್ಟರ ತನಕ ಕಂಡುಹಿಡಿಯಲ್ಪಟ್ಟವುಗಳಲ್ಲೇ ಅತಿ ಸುಂದರವಾದ) ಅಂಥ ಒಂದು ಪೆಟ್ಟಿಗೆಯ ಒಂದು ಬದಿಯಲ್ಲಿ, ಯೆಹೊಸೆಫ್‌ ಬಾರ್‌ ಕಾಯಫಾ (ಕಾಯಫನ ಮಗನಾದ ಯೋಸೇಫ) ಎಂಬ ಕೆತ್ತನೆ ಲಿಪಿಯಿತ್ತು.

ಇದು, ಅತಿ ಮಹತ್ವಪೂರ್ಣವಾದ ಒಂದು ಕೋರ್ಟ್‌ ವಿಚಾರಣೆಯಲ್ಲಿ ಅಂದರೆ ಯೇಸು ಕ್ರಿಸ್ತನನ್ನು ವಿಚಾರಣೆಗೊಳಪಡಿಸಿದ ಸಮಯದಲ್ಲಿ ಅಧ್ಯಕ್ಷತೆ ವಹಿಸಿದ್ದ ಮಹಾ ಯಾಜಕನ ಗೋರಿ ಆಗಿರಬೇಕೆಂದು ಸಾಕ್ಷ್ಯವು ಸೂಚಿಸುತ್ತದೆ. ಯೆಹೂದಿ ಇತಿಹಾಸಕಾರನಾದ ಜೋಸೀಫಸನು, ಈ ಮಹಾ ಯಾಜಕನು “ಕಾಯಫ ಎಂದು ಕರೆಯಲ್ಪಟ್ಟ ಯೋಸೇಫ”ನಾಗಿದ್ದನೆಂದು ಗುರುತಿಸುತ್ತಾನೆ. ಬೈಬಲ್‌ನಲ್ಲಿ ಅವನನ್ನು ಕಾಯಫ ಎಂದು ಮಾತ್ರ ಕರೆಯಲಾಗಿದೆ. ನಾವು ಇವನ ಬಗ್ಗೆ ಏಕೆ ಆಸಕ್ತರಾಗಿರಬೇಕು? ಯೇಸುವನ್ನು ದಂಡನೆಗೊಳಪಡಿಸುವಂತೆ ಅವನನ್ನು ಪ್ರಚೋದಿಸಿದಂಥ ಸಂಗತಿ ಯಾವುದು?

ಅವನ ಕುಟುಂಬ ಮತ್ತು ಹಿನ್ನೆಲೆ

ಕಾಯಫನು, ಇನ್ನೊಬ್ಬ ಮಹಾ ಯಾಜಕನಾದ ಅನ್ನನ ಮಗಳನ್ನು ಮದುವೆಮಾಡಿಕೊಂಡನು. (ಯೋಹಾನ 18:​12, 13) ಈ ಸಂಬಂಧವು ಮದುವೆಗಿಂತ ಹಲವಾರು ವರ್ಷಗಳಿಗೆ ಮುಂಚೆಯೇ ನಿಶ್ಚಯಿಸಲ್ಪಟ್ಟಿರಬಹುದು. ಏಕೆಂದರೆ ಈ ಎರಡು ಕುಟುಂಬದವರು ಒಂದು ಒಳ್ಳೇ ವಿವಾಹದ ನಂಟನ್ನು ರಚಿಸುವುದನ್ನು ಖಾತ್ರಿಪಡಿಸಲು ಬಯಸಿದ್ದಿರಬಹುದು. ತಮ್ಮ ಯಾಜಕವಂಶದ ಶುದ್ಧತೆಯನ್ನು ಕಾಪಾಡಿಕೊಳ್ಳಲಿಕ್ಕಾಗಿ ಅವರು ಪರಸ್ಪರರ ವಂಶಾವಳಿಗಳನ್ನು ಕೂಲಂಕಷವಾಗಿ ಪರೀಕ್ಷಿಸಿರಬೇಕು. ಎರಡು ಕುಟುಂಬಗಳವರು ಧನಿಕರೂ ಕುಲೀನ ವರ್ಗಕ್ಕೆ ಸೇರಿದವರೂ ಆಗಿದ್ದಿರಬೇಕು. ಅವರು ತಮ್ಮ ಐಶ್ವರ್ಯವನ್ನು ಯೆರೂಸಲೇಮಿನ ಕ್ಷೇತ್ರದಲ್ಲಿದ್ದ ದೊಡ್ಡ ದೊಡ್ಡ ಸ್ಥಿರಾಸ್ತಿಗಳಿಂದ ಪಡೆಯುತ್ತಿದ್ದರೆಂದು ತೋರುತ್ತದೆ. ಅನ್ನನು, ತನ್ನ ಅಳಿಯನಾಗುವವನು ಒಬ್ಬ ವಿಶ್ವಾಸಾರ್ಹ ರಾಜಕೀಯ ಮಿತ್ರನಾಗಿರಬೇಕೆಂಬುದನ್ನು ಖಚಿತಪಡಿಸಿಕೊಳ್ಳಲು ಬಯಸಿದ್ದಿರಬಹುದು ಎಂಬುದು ನಿಸ್ಸಂಶಯ. ಅನ್ನ ಮತ್ತು ಕಾಯಫ ಇಬ್ಬರೂ, ಸದ್ದುಕಾಯರು ಎಂಬ ಪ್ರಭಾವಶಾಲಿ ಮತಕ್ಕೆ ಸೇರಿದವರಾಗಿದ್ದರೆಂದು ತೋರುತ್ತದೆ.​—⁠ಅ. ಕೃತ್ಯಗಳು 5:⁠17.

ಒಂದು ಪ್ರತಿಷ್ಠಾವಂತ ಯಾಜಕ ಕುಟುಂಬದ ಸದಸ್ಯನಾಗಿದ್ದ ಕಾಯಫನಿಗೆ, ಹೀಬ್ರು ಶಾಸ್ತ್ರಗಳು ಮತ್ತು ಅವುಗಳ ಅರ್ಥವಿವರಣೆಯಲ್ಲಿ ಶಿಕ್ಷಣ ದೊರೆತಿದ್ದಿರಬೇಕು. ಆಲಯದಲ್ಲಿನ ಅವನ ಸೇವೆಯು 20 ವರ್ಷ ಪ್ರಾಯದಲ್ಲಿ ಆರಂಭವಾಗಿರಬೇಕು. ಆದರೆ ಅವನು ಯಾವಾಗ ಮಹಾ ಯಾಜಕನಾದನೆಂಬುದು ಅಜ್ಞಾತವಾಗಿದೆ.

ಮಹಾ ಯಾಜಕರು ಮತ್ತು ಮುಖ್ಯ ಯಾಜಕರು

ಮಹಾ ಯಾಜಕತ್ವದ ಸ್ಥಾನವು ಮೂಲತಃ ವಂಶಪಾರಂಪರ್ಯವಾಗಿ ಬರುತ್ತಿದ್ದ ಮತ್ತು ಜೀವನಪರ್ಯಂತದ ಒಂದು ನೇಮಕವಾಗಿರುತ್ತಿತ್ತು. ಆದರೆ ಸಾ.ಶ.ಪೂ. ಎರಡನೇ ಶತಮಾನದಲ್ಲಿ ಹಾಸ್‌ಮನೀಯರು ಮಹಾ ಯಾಜಕತ್ವವನ್ನು ಕಸಿದುಕೊಂಡರು. * ಮಹಾ ಹೆರೋದನು ಮಹಾ ಯಾಜಕರನ್ನು ನೇಮಿಸಿದನು ಮತ್ತು ತೆಗೆದುಹಾಕಿದನು. ಹೀಗೆ, ಈ ಸ್ಥಾನದ ಹಿಂದಿರುವ ನಿಜವಾದ ಅಧಿಕಾರಿ ತಾನೆಂಬುದನ್ನು ಸ್ಪಷ್ಟಗೊಳಿಸಿದನು. ಯೂದಾಯದ ರೋಮನ್‌ ಪ್ರಾಂತಾಧಿಪತಿಗಳು ಇದನ್ನೇ ಮಾಡಿದರು.

ಈ ವಿಕಸನಗಳು, ಶಾಸ್ತ್ರವಚನಗಳಲ್ಲಿ “ಮುಖ್ಯ ಯಾಜಕರು” (ಕನ್ನಡ ‘ಸತ್ಯವೇದ’ ಬೈಬಲಿನಲ್ಲಿ ಇವರನ್ನು ಸಹ ‘ಮಹಾ ಯಾಜಕರು’ ಎಂದೇ ಕರೆಯಲಾಗಿದೆ) ಎಂದು ಕರೆಯಲ್ಪಟ್ಟಿರುವ ಒಂದು ಗುಂಪಿನ ರಚನೆಗೆ ನಡಿಸಿದವು. (ಮತ್ತಾಯ 26:​3, 4, NIBV) ಈ ಗುಂಪಿನಲ್ಲಿ ಕಾಯಫನಲ್ಲದೆ, ಮಹಾ ಯಾಜಕನ ಸ್ಥಾನದಿಂದ ತೆಗೆದುಹಾಕಲ್ಪಟ್ಟಿದ್ದರೂ ಇನ್ನೂ ಆ ಬಿರುದನ್ನು ಹಿಡಿದಿಟ್ಟುಕೊಂಡಿದ್ದ ಅನ್ನನಂಥ ಮಾಜಿ ಮಹಾ ಯಾಜಕರು ಸಹ ಸೇರಿದ್ದರು. ಮುಖ್ಯ ಯಾಜಕರು ಎಂಬ ಆ ಗುಂಪಿನಲ್ಲಿ, ಸದ್ಯದ ಮತ್ತು ಮಾಜಿ ಮಹಾ ಯಾಜಕರ ಹತ್ತಿರದ ಕುಟುಂಬ ಸದಸ್ಯರೂ ಇದ್ದರು.

ರೋಮನರು, ಯೂದಾಯದ ದೈನಂದಿನ ಆಡಳಿತವನ್ನು ಮುಖ್ಯ ಯಾಜಕರು ಒಳಗೂಡಿದ್ದ ಯೆಹೂದಿ ಕುಲೀನ ವರ್ಗದ ಕೈಯಲ್ಲೇ ಬಿಟ್ಟಿದ್ದರು. ಹೀಗೆ ಮಾಡುವ ಮೂಲಕ, ರೋಮನ್‌ ಸರಕಾರವು ಹೆಚ್ಚು ಸೈನಿಕರನ್ನು ಕಳುಹಿಸದೇ ಆ ಪ್ರಾಂತವನ್ನು ನಿಯಂತ್ರಿಸಸಾಧ್ಯವಿತ್ತು ಮತ್ತು ಅಲ್ಲಿಂದ ಸುಂಕವಸೂಲಿಮಾಡಲು ಸಾಧ್ಯವಾಗುತ್ತಿತ್ತು. ಯೆಹೂದಿ ಪುರೋಹಿತ ಪ್ರಭುತ್ವವು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವಂತೆ ಮತ್ತು ತನ್ನ ಅಭಿರುಚಿಗಳನ್ನು ಬೆಂಬಲಿಸುವಂತೆ ರೋಮ್‌ ನಿರೀಕ್ಷಿಸಿತು. ಆದರೆ ರೋಮನ್‌ ಪ್ರಾಂತಾಧಿಪತಿಗಳು ಯೆಹೂದಿ ಮುಖಂಡರನ್ನು ಇಷ್ಟಪಡುತ್ತಿರಲಿಲ್ಲ, ಏಕೆಂದರೆ ಈ ಯೆಹೂದಿ ಮುಖಂಡರು ರೋಮನ್‌ ಆಳ್ವಿಕೆಯನ್ನು ದ್ವೇಷಿಸುತ್ತಿದ್ದರು. ಹೀಗಿದ್ದರೂ, ಸರಕಾರವನ್ನು ಸ್ಥಿರಗೊಳಿಸಲಿಕ್ಕಾಗಿ ಪರಸ್ಪರರೊಂದಿಗೆ ಸಹಕರಿಸುವುದರಲ್ಲೇ ಯೆಹೂದಿ ಹಾಗೂ ರೋಮನ್‌ ನಾಯಕರ ಕ್ಷೇಮವು ಒಳಗೂಡಿತ್ತು.

ಕಾಯಫನ ಸಮಯದಷ್ಟಕ್ಕೆ, ಮಹಾ ಯಾಜಕನ ಸ್ಥಾನದಲ್ಲಿದ್ದವನು ವಾಸ್ತವದಲ್ಲಿ ಒಬ್ಬ ಯೆಹೂದಿ ರಾಜಕೀಯ ನಾಯಕನಾಗಿಬಿಟ್ಟಿದ್ದನು. ಸಿರಿಯದ ಪ್ರಾಂತಾಧಿಪತಿ ಕುರೇನ್ಯನು ಅನ್ನನನ್ನು ಮಹಾ ಯಾಜಕನ ಸ್ಥಾನಕ್ಕೆ ಸಾ.ಶ. 6 ಇಲ್ಲವೆ 7ರಲ್ಲಿ ನೇಮಿಸಿದ್ದನು. ದುರಾಶೆ, ಸ್ವಜನಪಕ್ಷಪಾತ, ದಬ್ಬಾಳಿಕೆ ಮತ್ತು ಹಿಂಸಾಚಾರವು, ಯೆಹೂದಿ ಕುಲೀನ ವರ್ಗದ ಪ್ರಮುಖ ಕುಟುಂಬಗಳ ವಿಶಿಷ್ಟ ಗುಣಲಕ್ಷಣವಾಗಿತ್ತೆಂದು ರಬ್ಬಿಗಳ ಪರಂಪರಾಗತ ಉಪದೇಶಗಳು ಸೂಚಿಸುತ್ತವೆ. ಒಬ್ಬ ಲೇಖಕಿಯು ಎಣಿಸುವುದೇನೆಂದರೆ, ಮಹಾ ಯಾಜಕನಾಗಿದ್ದ ಅನ್ನನು ತನ್ನ ಅಳಿಯನು “ಬೇಗನೆ ಆಲಯದ ಪುರೋಹಿತ ವರ್ಗದಲ್ಲಿ ಮೇಲಿನ ಶ್ರೇಣಿಗೆ ಬಡತಿಹೊಂದುವಂತೆ” ನೋಡಿಕೊಂಡಿರಬೇಕು, ಏಕೆಂದರೆ “ಕಾಯಫನ ಸ್ಥಾನವು ಎಷ್ಟು ಹೆಚ್ಚು ಉನ್ನತವಾಗಿರುತ್ತಿತ್ತೊ, ಅವನು ಅನ್ನನಿಗೆ ಅಷ್ಟೇ ಹೆಚ್ಚು ಉಪಯುಕ್ತನಾಗಿರುತ್ತಿದ್ದನು.”

ಯೂದಾಯದ ಪ್ರಾಂತಾಧಿಪತಿಯಾಗಿದ್ದ ವಲೇರ್ಯುಸ್‌ ಗ್ರಾಟುಸ್‌ ಸಾ.ಶ. 15ರಲ್ಲಿ ಅನ್ನನನ್ನು ಪದಚ್ಯುತಿಗೊಳಿಸಿದನು. ಆದರೆ ಒಬ್ಬರ ನಂತರ ಇನ್ನೊಬ್ಬರಂತೆ, ಇತರ ಮೂರು ಮಂದಿ​—⁠ಅನ್ನನ ಒಬ್ಬ ಮಗನು ಸೇರಿ​—⁠ಮಹಾ ಯಾಜಕನ ಸ್ಥಾನವನ್ನು ಪಡೆದುಕೊಂಡರು. ಕಾಯಫನು ಸಾ.ಶ. 18ರಲ್ಲಿ ಮಹಾ ಯಾಜಕನಾದನು. ಸಾ.ಶ. 26ರಲ್ಲಿ ಯೂದಾಯದ ಪ್ರಾಂತಾಧಿಪತಿಯಾಗಿ ನೇಮಿಸಲ್ಪಟ್ಟಿದ್ದ ಪೊಂತ್ಯ ಪಿಲಾತನು, ತನ್ನ ಹತ್ತು ವರ್ಷಗಳ ಪ್ರಾಂತಾಧಿಕಾರದ ಅವಧಿಯಾದ್ಯಂತ ಕಾಯಫನನ್ನು ಆ ಸ್ಥಾನದಲ್ಲಿರಿಸಿದನು. ಕಾಯಫನ ಅಧಿಕಾರದ ಅವಧಿಯಲ್ಲಿ, ಯೇಸುವಿನ ಶುಶ್ರೂಷೆ ಮತ್ತು ಅವನ ಶಿಷ್ಯರ ಆರಂಭದ ಸಾರುವಿಕೆಯು ಒಳಗೂಡಿತ್ತು. ಆದರೆ ಕಾಯಫನಿಗೆ ಕ್ರಿಸ್ತನ ಸಂದೇಶದ ಕಡೆಗೆ ವೈರತ್ವದ ಮನೋಭಾವವಿತ್ತು.

ಯೇಸುವಿನ ಭಯ ಮತ್ತು ರೋಮ್‌ನ ಭಯ

ಕಾಯಫನು ಯೇಸುವನ್ನು ಗಲಭೆಹುಟ್ಟಿಸುವ ಒಬ್ಬ ಅಪಾಯಕಾರಿ ವ್ಯಕ್ತಿಯೆಂಬಂತೆ ದೃಷ್ಟಿಸುತ್ತಿದ್ದನು. ಪುರೋಹಿತ ವರ್ಗದವರು ಸಬ್ಬತ್‌ ನಿಯಮಗಳ ಬಗ್ಗೆ ಕೊಡುತ್ತಿದ್ದ ಅರ್ಥವಿವರಣೆಯ ಕುರಿತು ಯೇಸು ಪ್ರಶ್ನಿಸಿದನು ಮತ್ತು ಆಲಯದಲ್ಲಿದ್ದ ವ್ಯಾಪಾರಿಗಳನ್ನೂ ಚಿನಿವಾರರನ್ನೂ ಹೊರಗಟ್ಟುತ್ತಾ, ಅವರು ಆಲಯವನ್ನು ‘ಕಳ್ಳರ ಗವಿಯನ್ನಾಗಿ’ ಮಾಡಿದ್ದಾರೆಂದು ಹೇಳಿದನು. (ಲೂಕ 19:​45, 46) ಆ ಆಲಯದ ಮಾರುಕಟ್ಟೆಗಳು ಅನ್ನನ ಮನೆತನದ ಒಡೆತನದಲ್ಲಿದ್ದವೆಂಬುದು ಕೆಲವು ಇತಿಹಾಸಕಾರರ ಅಭಿಪ್ರಾಯವಾಗಿದೆ. ಕಾಯಫನು ಯೇಸುವಿನ ಬಾಯಿಮುಚ್ಚಿಸಲು ಪ್ರಯತ್ನಿಸಿದ್ದಕ್ಕೆ ಬಹುಶಃ ಇದು ಇನ್ನೊಂದು ಕಾರಣವಾಗಿತ್ತು. ಆದರೆ ಯೇಸುವನ್ನು ದಸ್ತಗಿರಿಮಾಡಲು ಮುಖ್ಯ ಯಾಜಕರು ಓಲೇಕಾರರನ್ನು ಕಳುಹಿಸಿದಾಗ, ಅವನ ಮಾತುಗಳಿಂದ ಅವರೆಷ್ಟು ವಿಸ್ಮಿತರಾದರೆಂದರೆ ಅವರು ಬರಿಗೈಯಲ್ಲಿ ಹಿಂದಿರುಗಿದರು.​—⁠ಯೋಹಾನ 2:​13-17; 5:​1-16; 7:​14-49.

ಯೇಸು ಲಾಜರನನ್ನು ಪುನರುತ್ಥಾನಗೊಳಿಸಿದ್ದಾನೆಂಬ ಸುದ್ದಿಯು ಈ ಯೆಹೂದಿ ಪುರೋಹಿತ ವರ್ಗದವರ ಕಿವಿಗೆ ಬಿದ್ದಾಗ ಅವರೇನು ಮಾಡಿದರೆಂಬುದನ್ನು ಪರಿಗಣಿಸಿರಿ. ಯೋಹಾನನ ಸುವಾರ್ತಾ ಪುಸ್ತಕವು ವರದಿಸುವುದು: “ಆಗ [ಮುಖ್ಯ] ಯಾಜಕರೂ ಫರಿಸಾಯರೂ ಹಿರೀಸಭೆಯನ್ನು ಕೂಡಿಸಿ​—⁠ನಾವು ಮಾಡುವದು ಇದೇನು? ಈ ಮನುಷ್ಯನು ಬಹು ಸೂಚಕಕಾರ್ಯಗಳನ್ನು ಮಾಡುತ್ತಾನಲ್ಲಾ; ನಾವು ಅವನನ್ನು ಹೀಗೆಯೇ ಬಿಟ್ಟರೆ ಎಲ್ಲರೂ ಅವನನ್ನು ನಂಬಾರು; ಮತ್ತು ರೋಮ್‌ ರಾಜ್ಯದವರು ಬಂದು ನಮ್ಮ ಸ್ಥಾನವನ್ನೂ ಜನವನ್ನೂ ಸೆಳಕೊಂಡಾರು ಅಂದರು.” (ಯೋಹಾನ 11:47, 48) ಹಿರೀಸಭೆಯು ಯೇಸುವನ್ನು, ಆ ಧಾರ್ಮಿಕ ಸಂಘಟನೆಯ ಅಧಿಕಾರಕ್ಕೆ ಮತ್ತು ತಾವು ಯಾವ ವಿಷಯದಲ್ಲಿ ಪಿಲಾತನಿಗೆ ಲೆಕ್ಕಒಪ್ಪಿಸಬೇಕಾಗಿತ್ತೊ ಆ ಸಾರ್ವಜನಿಕ ವ್ಯವಸ್ಥೆಗೆ ಬೆದರಿಕೆಯಾಗಿ ದೃಷ್ಟಿಸಿತು. ಯಾವುದೇ ಜನಪ್ರಿಯ ಚಳವಳಿಯನ್ನು ರೋಮನರು ದೇಶದ್ರೋಹವೆಂದು ಅರ್ಥೈಸಿಕೊಂಡರೆ ಸಾಕು, ಅವರು ಯೆಹೂದಿ ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸಲು ಅದು ಕಾರಣವಾಗಸಾಧ್ಯವಿತ್ತು. ಮತ್ತು ಇದಾಗದಂತೆ ತಡೆಯಲು ಹಿರೀಸಭೆಯು ಏನನ್ನೂ ಮಾಡಲು ಸಿದ್ಧವಿತ್ತು.

ಯೇಸು ಅದ್ಭುತಗಳನ್ನು ನಡೆಸುತ್ತಾನೆಂಬುದನ್ನು ಕಾಯಫನಿಗೆ ಅಲ್ಲಗಳೆಯಲು ಸಾಧ್ಯವಿರಲಿಲ್ಲವಾದರೂ, ತನ್ನ ಸ್ಥಾನಮಾನ ಹಾಗೂ ಅಧಿಕಾರವನ್ನು ಕಾಪಾಡಿಕೊಳ್ಳಲಿಕ್ಕಾಗಿ ಅವನು ಯೇಸುವಿನಲ್ಲಿ ನಂಬಿಕೆಯನ್ನಿಡಲಿಲ್ಲ. ಮತ್ತು ಲಾಜರನು ಸತ್ತವರಿಂದ ಎಬ್ಬಿಸಲ್ಪಟ್ಟನೆಂದು ಅವನು ಒಪ್ಪಿಕೊಳ್ಳುವುದಾದರೂ ಹೇಗೆ? ಪುನರುತ್ಥಾನದಲ್ಲಿ ನಂಬಿಕೆಯಿಡದಿದ್ದ ಸದ್ದುಕಾಯರಲ್ಲಿ ಕಾಯಫನು ಒಬ್ಬನಾಗಿದ್ದನಲ್ಲಾ!​—⁠ಅ. ಕೃತ್ಯಗಳು 23:⁠8.

ಕಾಯಫನು ತನ್ನ ಜೊತೆ ಅಧಿಪತಿಗಳಿಗೆ ಹೀಗೆಂದಾಗ ಅವನ ದುಷ್ಟತನವು ಬಯಲಿಗೆ ಬಂತು: “ನಿಮಗೇನೂ ತಿಳಿಯುವದಿಲ್ಲ; ಜನವೆಲ್ಲಾ ನಾಶವಾಗುವದಕ್ಕಿಂತ ಒಬ್ಬ ಮನುಷ್ಯನು ಜನಕ್ಕೋಸ್ಕರ ಸಾಯುವದು ನಿಮಗೆ ಹಿತವೆಂದು ನೀವು ಆಲೋಚಿಸುವದೂ ಇಲ್ಲ.” ಆ ವೃತ್ತಾಂತವು ಮುಂದುವರಿಸುವುದು: “ಇದನ್ನು ಅವನು ತನ್ನಷ್ಟಕ್ಕೆ ತಾನೇ ಹೇಳಲಿಲ್ಲ; ಆದರೆ ತಾನು ಆ ವರುಷದ ಮಹಾಯಾಜಕನಾಗಿದ್ದದರಿಂದ ದೇವಪ್ರೇರಣೆಯಿಂದ ಮಾತಾಡಿ ಯೇಸು ಆ ಜನಕ್ಕೋಸ್ಕರ ಸಾಯುವದಕ್ಕಿದ್ದನೆಂದು ಹೇಳಿದನು. ಯೇಸು ಆ ಜನಕ್ಕೋಸ್ಕರ ಮಾತ್ರವಲ್ಲದೆ ಚದರಿರುವ ದೇವರ ಮಕ್ಕಳನ್ನು ಒಟ್ಟುಗೂಡಿಸುವದಕ್ಕೆ ಸಹ ಸಾಯುವದಕ್ಕಿದ್ದನು. ಆ ದಿನದಿಂದ [ಯೇಸುವನ್ನು] ಕೊಲ್ಲುವದಕ್ಕೆ ಆಲೋಚಿಸುತ್ತಿದ್ದರು.”​—⁠ಯೋಹಾನ 11:49-53.

ಕಾಯಫನಿಗೆ ತಾನಾಡಿದಂಥ ಮಾತುಗಳ ಪೂರ್ಣ ಅರ್ಥ ತಿಳಿದಿರಲಿಲ್ಲ. ಆದರೆ ಅವನು ಮಹಾ ಯಾಜಕನಾಗಿ ಸೇವೆಸಲ್ಲಿಸುತ್ತಿದುದರಿಂದ ಪ್ರವಾದನೆ ನುಡಿದದ್ದು ನಿಜ. * ಯೇಸುವಿನ ಮರಣವು ಉಪಯುಕ್ತವಾಗಿರಲಿತ್ತು, ಆದರೆ ಯೆಹೂದ್ಯರಿಗೆ ಮಾತ್ರ ಅಲ್ಲ. ಅವನ ವಿಮೋಚನಾ ಮೌಲ್ಯದ ಯಜ್ಞವು, ಎಲ್ಲ ಮಾನವಕುಲವನ್ನು ಪಾಪಮರಣಗಳಿಂದ ಬಿಡಿಸುವ ಮಾಧ್ಯಮವಾಗಿರಲಿತ್ತು.

ಒಂದು ಮಾರಕ ಒಳಸಂಚು

ಯೆಹೂದಿ ಮುಖ್ಯ ಯಾಜಕರು ಮತ್ತು ಹಿರೀಪುರುಷರು, ಯೇಸುವನ್ನು ಹೇಗೆ ಹಿಡಿದು ಕೊಲ್ಲಬೇಕೆಂದು ಚರ್ಚಿಸಲು ಕಾಯಫನ ಮನೆಯಲ್ಲಿ ಸೇರಿಬಂದರು. ಯೇಸುವನ್ನು ಹಿಡಿದುಕೊಡಲಿಕ್ಕಾಗಿರುವ ಬೆಲೆಯನ್ನು ಇಸ್ಕರಿಯೋತ ಯೂದನೊಂದಿಗೆ ಗೊತ್ತುಪಡಿಸುವುದರಲ್ಲಿ ಮಹಾ ಯಾಜಕನ ಕೈವಾಡವೂ ಇದ್ದಿರಬೇಕು. (ಮತ್ತಾಯ 26:​3, 4, 14, 15) ಆದರೆ ಕಾಯಫನ ದುಷ್ಟ ಗುರಿಗಳನ್ನು ಸಾಧಿಸಲು ಕೇವಲ ಒಬ್ಬ ವ್ಯಕ್ತಿಯ ಕೊಲೆ ಸಾಕಾಗುತ್ತಿರಲಿಲ್ಲ. “[ಮುಖ್ಯ] ಯಾಜಕರು ಲಾಜರನನ್ನೂ ಕೊಲ್ಲಬೇಕೆಂದು ಆಲೋಚಿಸಿದರು. ಯಾಕಂದರೆ ಅವನ ದೆಸೆಯಿಂದ ಯೆಹೂದ್ಯರಲ್ಲಿ ಅನೇಕರು ಹೋಗಿ ಯೇಸುವನ್ನು ನಂಬುವವರಾದರು.”​—⁠ಯೋಹಾನ 12:10, 11.

ಕಾಯಫನ ದಾಸನಾಗಿದ್ದ ಮಲ್ಕನು, ಯೇಸುವನ್ನು ಹಿಡಿಯಲು ಕಳುಹಿಸಲ್ಪಟ್ಟ ಜನಸಮೂಹದಲ್ಲಿದ್ದನು. ಸೆರೆಯಾಳಾದ ಯೇಸುವನ್ನು ಮೊದಲು ಅನ್ನನ ಬಳಿ ಮತ್ತು ಅನಂತರ ಕಾಯಫನ ಬಳಿ ವಿಚಾರಣೆಗಾಗಿ ಕಳುಹಿಸಲಾಯಿತು. ಯೇಸು ಕಾಯಫನ ಬಳಿಗೆ ಕರೆದೊಯ್ಯಲ್ಪಡುವಷ್ಟರಲ್ಲಿ ಕಾಯಫನು ಕಾನೂನುಬಾಹಿರವಾಗಿದ್ದ ರಾತ್ರಿ ಸಮಯದ ವಿಚಾರಣೆಗಾಗಿ ಯೆಹೂದಿ ಹಿರೀಪುರುಷರನ್ನು ಆಗಲೇ ಒಟ್ಟುಗೂಡಿಸಿದ್ದನು.​—⁠ಮತ್ತಾಯ 26:57; ಯೋಹಾನ 18:​10, 13, 19-24.

ಸುಳ್ಳು ಸಾಕ್ಷಿಗಳು ಯೇಸುವಿನ ವಿರುದ್ಧ ಕೊಟ್ಟ ಸಾಕ್ಷ್ಯವು ಪರಸ್ಪರ ಹೊಂದಿಕೊಳ್ಳದಿದ್ದರೂ ಕಾಯಫನು ಹಿಮ್ಮೆಟ್ಟಲಿಲ್ಲ. ಸ್ವಘೋಷಿತ ಮೆಸ್ಸೀಯನಾಗಿರುವ ಯಾವನೇ ವ್ಯಕ್ತಿಯ ಬಗ್ಗೆ ತನ್ನ ಜೊತೆ ಸಂಚುಗಾರರ ಅಭಿಪ್ರಾಯವೇನೆಂದು ಅವನಿಗೆ ಗೊತ್ತಿತ್ತು. ಆದುದರಿಂದ, ಯೇಸು ತಾನು ಮೆಸ್ಸೀಯನೆಂದು ಹೇಳಿಕೊಳ್ಳುತ್ತಾನೊ ಎಂದು ಕಾಯಫನು ಬಲವಂತದಿಂದ ಕೇಳಿದನು. ಅದಕ್ಕೆ ಯೇಸು, ತನ್ನ ಅಪವಾದಕರು ತಾನು “ಸರ್ವಶಕ್ತನ ಬಲಗಡೆಯಲ್ಲಿ ಆಸೀನನಾಗಿರುವದನ್ನೂ ಆಕಾಶದ ಮೇಘಗಳ ಮೇಲೆ ಕುಳಿತು ಬರುವದನ್ನೂ” ಕಾಣುವರು ಎಂದು ಉತ್ತರಕೊಟ್ಟನು. ಆಗ ಆ ಮಹಾಯಾಜಕನು ತಾನು ತುಂಬ ಧರ್ಮನಿಷ್ಠನೆಂದು ತೋರಿಸಿಕೊಳ್ಳುತ್ತಾ, “ತನ್ನ ಬಟ್ಟೆಗಳನ್ನು ಹರಕೊಂಡು​—⁠ಇದು ದೇವದೂಷಣೆಯ ಮಾತು; ನಮಗೆ ಸಾಕ್ಷಿಗಳು ಇನ್ನು ಯಾತಕ್ಕೆ ಬೇಕು? ಇವನು ಈಗಲೇ ಆಡಿದ ದೂಷಣೆಯ ಮಾತನ್ನು ಕೇಳಿದಿರಲ್ಲಾ” ಎಂದು ಹೇಳಿದನು. ಯೇಸು ಮರಣಕ್ಕೆ ಅರ್ಹನೆಂದು ಆ ಹಿರೀಸಭೆಯು ತೀರ್ಮಾನಿಸಿತು.​—⁠ಮತ್ತಾಯ 26:64-66.

ಯಾವುದೇ ವಧಿಸುವಿಕೆಗಾಗಿ ರೋಮನರಿಂದ ಒಪ್ಪಿಗೆ ಬೇಕಾಗುತ್ತಿತ್ತು. ಆದುದರಿಂದ, ರೋಮನರ ಮತ್ತು ಯೆಹೂದ್ಯರ ನಡುವೆ ಮಧ್ಯಸ್ಥನೋಪಾದಿ ಬಹುಶಃ ಕಾಯಫನೇ ಈ ಮೊಕದ್ದಮೆಯನ್ನು ಪಿಲಾತನ ಮುಂದಿಟ್ಟನು. ಪಿಲಾತನು ಯೇಸುವನ್ನು ಬಿಡಿಸಲು ಪ್ರಯತ್ನಿಸಿದಾಗ, ‘ಶಿಲುಬೆಗೆ ಹಾಕಿಸು, ಶಿಲುಬೆಗೆ ಹಾಕಿಸು’ ಎಂದು ಕಿರುಚುತ್ತಿದ್ದ ಮುಖ್ಯ ಯಾಜಕರಲ್ಲಿ ಬಹುಶಃ ಕಾಯಫನೂ ಒಬ್ಬನಾಗಿದ್ದನು. (ಯೋಹಾನ 19:​4-6) ಯೇಸುವಿನ ಬದಲಿಗೆ ಒಬ್ಬ ಕೊಲೆಗಾರನನ್ನು ಬಿಡುಗಡೆಮಾಡುವಂತೆ ಒತ್ತಾಯಿಸಲು ಜನರನ್ನು ಬಹುಶಃ ಕಾಯಫನು ಪ್ರೇರಿಸಿರಬೇಕು ಮತ್ತು “ಕೈಸರನೇ ಹೊರತು ನಮಗೆ ಬೇರೆ ಅರಸನಿಲ್ಲ” ಎಂದು ಕಪಟತನದಿಂದ ಘೋಷಿಸಿದ ಮುಖ್ಯ ಯಾಜಕರಲ್ಲೂ ಅವನಿದ್ದಿರಬಹುದು.​—⁠ಯೋಹಾನ 19:15; ಮಾರ್ಕ 15:​7-11.

ಯೇಸುವಿನ ಪುನರುತ್ಥಾನದ ಸಾಕ್ಷ್ಯವನ್ನು ಕಾಯಫನು ತಳ್ಳಿಹಾಕಿದನು. ಅವನು ಪೇತ್ರಯೋಹಾನರನ್ನು ಮತ್ತು ತದನಂತರ ಸ್ತೆಫನನನ್ನೂ ವಿರೋಧಿಸಿದನು. ದಮಸ್ಕದಲ್ಲಿರುವ ಯಾವುದೇ ಕ್ರೈಸ್ತರನ್ನು ಹಿಡಿದುತರುವಂತೆ ಸೌಲನಿಗೆ ಅಧಿಕಾರಕೊಟ್ಟವನೂ ಕಾಯಫನೇ. (ಮತ್ತಾಯ 28:​11-13; ಅ. ಕೃತ್ಯಗಳು 4:​1-17; 6:​8–7:60; 9:​1, 2) ಆದರೆ ಸಾ.ಶ. 36ರಷ್ಟಕ್ಕೆ, ಸಿರಿಯದ ರೋಮನ್‌ ಪ್ರಾಂತಾಧಿಪತಿಯಾಗಿದ್ದ ವಿಟೆಲೀಯುಸ್‌ ಎಂಬವನು ಕಾಯಫನನ್ನು ಪದಚ್ಯುತಿಗೊಳಿಸಿದನು.

ಯೆಹೂದಿ ಬರಹಗಳು ಕಾಯಫನ ಕುಟುಂಬದ ಬಗ್ಗೆ ಅಹಿತಕರವಾದ ರೀತಿಯಲ್ಲಿ ಪ್ರಸ್ತಾಪಿಸುತ್ತವೆ. ಉದಾಹರಣೆಗಾಗಿ ಬಾಬಿಲೋನ್ಯನ್‌ ಟ್ಯಾಲ್ಮುಡ್‌ ಪ್ರಲಾಪಿಸುವುದು: “ಹಾನಿನ್‌ [ಅನ್ನನ] ಮನೆತನದಿಂದಾಗಿ ನನಗೆ ದುರ್ಗತಿಯೇ, ಅವರ ಪಿಸುಗುಟ್ಟುವಿಕೆಗಳಿಂದಾಗಿ (ಇಲ್ಲವೆ ಚಾಡಿಗಳಿಂದ) ನನಗೆ ದುರ್ಗತಿಯೇ.” ಈ ದೂರು, “ದಬ್ಬಾಳಿಕೆಯ ಕ್ರಮಗಳನ್ನು ರೂಪಿಸಲಿಕ್ಕಾಗಿರುವ ರಹಸ್ಯ ಕೂಟಗಳಿಗೆ” ಸೂಚಿಸುತ್ತದೆಂದು ಅಭಿಪ್ರಯಿಸಲಾಗಿದೆ.

ಕಾಯಫನಿಂದ ಕಲಿಯಬಹುದಾದ ಪಾಠ

ಒಬ್ಬ ವಿದ್ವಾಂಸನು ಮಹಾ ಯಾಜಕರನ್ನು, “ಗಡುಸಾದ, ಚುರುಕಾದ ಮತ್ತು ಸಮರ್ಥ​—⁠ಹಾಗೂ ಬಹುಮಟ್ಟಿಗೆ ಗರ್ವಿಷ್ಠ” ಪುರುಷರೆಂದು ವರ್ಣಿಸುತ್ತಾನೆ. ಈ ಗರ್ವವೇ ಕಾಯಫನು ಮೆಸ್ಸೀಯನನ್ನು ಅಂಗೀಕರಿಸದಂತೆ ತಡೆಯಿತು. ಆದುದರಿಂದ ಇಂದು ಜನರು ಬೈಬಲಿನ ಸಂದೇಶವನ್ನು ತಿರಸ್ಕರಿಸುವಾಗ ನಮಗೇನೂ ಆಶ್ಚರ್ಯವಾಗಬಾರದು. ಕೆಲವರು ಶಾಸ್ತ್ರಾಧಾರಿತ ಸತ್ಯದಲ್ಲಿ ಸಾಕಷ್ಟು ಮಟ್ಟಿಗೆ ಆಸಕ್ತರಾಗಿರುವುದಿಲ್ಲ, ಆದುದರಿಂದ ಅವರು ತಮ್ಮ ನೆಚ್ಚಿನ ನಂಬಿಕೆಗಳನ್ನು ತೊರೆಯುವುದಿಲ್ಲ. ಇನ್ನಿತರರು, ತಾವು ಸುವಾರ್ತೆಯ ನಮ್ರ ಪ್ರಚಾರಕರಾಗುವುದು ತಮ್ಮ ಅಂತಸ್ತಿಗೆ ಕುಂದು ತರುತ್ತದೆಂದು ನೆನಸಬಹುದು. ಮತ್ತು ಯಾರು ಅಪ್ರಾಮಾಣಿಕರೂ ದುರಾಶೆಯುಳ್ಳವರೂ ಆಗಿದ್ದಾರೊ ಅಂಥವರಿಗೆ ಕ್ರೈಸ್ತ ಮಟ್ಟಗಳು ಜಿಗುಪ್ಸೆ ಹುಟ್ಟಿಸುತ್ತವೆ.

ಮಹಾ ಯಾಜಕನಾಗಿದ್ದ ಕಾಯಫನು ಜೊತೆ ಯೆಹೂದ್ಯರಿಗೆ ಮೆಸ್ಸೀಯನನ್ನು ಸ್ವೀಕರಿಸುವಂತೆ ಸಹಾಯಮಾಡಬಹುದಿತ್ತು. ಆದರೆ ಅಧಿಕಾರದ ದಾಹವು ಅವನು ಯೇಸುವನ್ನು ದಂಡನೆಗೊಳಪಡಿಸುವಂತೆ ಮಾಡಿತು. ಕಾಯಫನು ಗೋರಿಗೆ ಹೋಗುವವರೆಗೂ ಆ ವಿರೋಧವು ಮುಂದುವರಿಯಿತೆಂದು ತೋರುತ್ತದೆ. ಆದುದರಿಂದ ಅವನ ನಡತೆಯ ಕುರಿತಾದ ದಾಖಲೆಯು, ನಾವು ಸಾಯುವಾಗ ಕೇವಲ ಮೂಳೆಗಳನ್ನು ಬಿಟ್ಟುಹೋಗುವುದಿಲ್ಲ ಬದಲಾಗಿ ಆ ಸಮಯದಷ್ಟಕ್ಕೆ ನಮ್ಮ ಕೃತ್ಯಗಳ ಮೂಲಕ ನಾವು ದೇವರೊಂದಿಗೆ ಒಳ್ಳೇ ಹೆಸರನ್ನು ಇಲ್ಲವೆ ಕೆಟ್ಟ ಹೆಸರನ್ನು ಮಾಡಿಕೊಂಡಿರುತ್ತೇವೆಂಬ ವಿಷಯವನ್ನು ದೃಢೀಕರಿಸುತ್ತದೆ.

[ಪಾದಟಿಪ್ಪಣಿಗಳು]

^ ಪ್ಯಾರ. 9 ಹಾಸ್‌ಮನೀಯರ ಇತಿಹಾಸವನ್ನು ತಿಳಿದುಕೊಳ್ಳಲಿಕ್ಕಾಗಿ ದಯವಿಟ್ಟು 2001, ಜೂನ್‌ 15ರ ಕಾವಲಿನಬುರುಜುವಿನ 27-30ನೇ ಪುಟಗಳನ್ನು ನೋಡಿರಿ.

^ ಪ್ಯಾರ. 19 ಹಿಂದೆ ಯೆಹೋವನು, ಇಸ್ರಾಯೇಲ್ಯರ ಬಗ್ಗೆ ಸತ್ಯಭರಿತ ಪ್ರವಾದನೆಗಳನ್ನು ನುಡಿಯಲು ದುಷ್ಟ ಬಿಳಾಮನನ್ನು ಉಪಯೋಗಿಸಿದ್ದನು.​—⁠ಅರಣ್ಯಕಾಂಡ 23:​1–24:⁠24.

[ಪುಟ 10ರಲ್ಲಿರುವ ಚಿತ್ರ]

ಕಾಯಫನ ಮಗನಾದ ಯೋಸೇಫ

[ಪುಟ 10ರಲ್ಲಿರುವ ಚಿತ್ರ]

ಇತ್ತೀಚಿಗೆ ಕಂಡುಹಿಡಿಯಲ್ಪಟ್ಟ ಮೂಳೆಗಳ ಪೆಟ್ಟಿಗೆ

[ಪುಟ 10ರಲ್ಲಿರುವ ಚಿತ್ರ ಕೃಪೆ]

ಮೂಳೆ ಪೆಟ್ಟಿಗೆ, ಕೆತ್ತನೆಲಿಪಿ ಮತ್ತು ಹಿನ್ನಲೆಯಲ್ಲಿ ಗುಹೆ: Courtesy of Israel Antiquities Authority