ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸೈತಾನನನ್ನು ಎದುರಿಸಿರಿ, ಅವನು ಓಡಿಹೋಗುವನು!

ಸೈತಾನನನ್ನು ಎದುರಿಸಿರಿ, ಅವನು ಓಡಿಹೋಗುವನು!

ಸೈತಾನನನ್ನು ಎದುರಿಸಿರಿ, ಅವನು ಓಡಿಹೋಗುವನು!

“ದೇವರಿಗೆ ಒಳಗಾಗಿರಿ. ಸೈತಾನನನ್ನು ಎದುರಿಸಿರಿ. ಅವನು ನಿಮ್ಮನ್ನು ಬಿಟ್ಟು ಓಡಿಹೋಗುವನು.” ​—⁠ಯಾಕೋಬ 4:⁠7.

ಪಿಶಾಚನು ದುರಹಂಕಾರದ ಸಾಕಾರರೂಪವಾಗಿದ್ದಾನೆ. ದೇವರ ಪ್ರವಾದಿಯಾದ ಯೆಶಾಯನು ದಾಖಲಿಸಿದ ಮಾತುಗಳಲ್ಲಿ ಅವನ ಅಹಂಕಾರ ತೋರಿಬರುತ್ತದೆ. ಬಾಬಿಲೋನ್ಯವು ಲೋಕಶಕ್ತಿಯಾಗಿ ಪರಿಣಮಿಸುವುದಕ್ಕೆ ಒಂದು ಶತಮಾನಕ್ಕಿಂತಲೂ ಹೆಚ್ಚು ಸಮಯಕ್ಕೆ ಮೊದಲು, ದೇವಜನರು “ಬಾಬೆಲಿನ ರಾಜನಿಗೆ” ವಿರುದ್ಧವಾಗಿ ಹೀಗೆ ಹೇಳಿದರೆಂದು ನಿರೂಪಿಸಲಾಗಿದೆ: “ನೀನು ನಿನ್ನ ಮನಸ್ಸಿನಲ್ಲಿ​—⁠ನಾನು ಆಕಾಶಕ್ಕೆ ಹತ್ತಿ ಉತ್ತರದಿಕ್ಕಿನ ಕಟ್ಟಕಡೆಯಿರುವ ಸುರಗಣ ಪರ್ವತದಲ್ಲಿ ನನ್ನ ಸಿಂಹಾಸನವನ್ನು ದೇವರ ನಕ್ಷತ್ರಗಳಿಗಿಂತ [ದಾವೀದನ ರಾಜವಂಶದ ಅರಸರುಗಳಿಗಿಂತ] ಮೇಲೆ ಏರಿಸಿ ಆಸೀನನಾಗುವೆನು; . . . ಉನ್ನತೋನ್ನತನಿಗೆ ಸರಿಸಮಾನನಾಗುವೆನು ಅಂದುಕೊಂಡಿದ್ದೆಯಲ್ಲಾ!” (ಯೆಶಾಯ 14:​3, 4, 12-15; ಅರಣ್ಯಕಾಂಡ 24:17) ‘ಬಾಬೆಲಿನ ರಾಜನ’ ಅಹಂಕಾರವು “ಈ ಪ್ರಪಂಚದ ದೇವರು” ಆಗಿರುವ ಸೈತಾನನ ಮನೋಭಾವವನ್ನು ಹೋಲುತ್ತಿತ್ತು. (2 ಕೊರಿಂಥ 4:⁠4) ಆದರೆ ಬಾಬೆಲಿನ ರಾಜವಂಶ ಅವಮಾನಕರವಾಗಿ ಅಂತ್ಯಗೊಂಡಂತೆಯೇ ಸೈತಾನನ ದುರಹಂಕಾರವು ಸಹ ಅಂತ್ಯಗೊಳ್ಳುವುದು.

2 ಆದರೆ ಪಿಶಾಚನು ಇರುವಷ್ಟು ಸಮಯ, ಇಂತಹ ಪ್ರಶ್ನೆಗಳ ಚಿಂತೆ ನಮಗಿರಬಹುದು: ನಾವು ಸೈತಾನನಿಗೆ ಹೆದರಬೇಕೊ? ಕ್ರೈಸ್ತರನ್ನು ಹಿಂಸಿಸುವಂತೆ ಅವನು ಜನರನ್ನು ಪ್ರೇರಿಸುವುದೇಕೆ? ನಾವು ಪಿಶಾಚನ ಹಿಡಿತಕ್ಕೊಳಗಾಗದಂತೆ ಹೇಗೆ ತಪ್ಪಿಸಿಕೊಳ್ಳಬಲ್ಲೆವು?

ನಾವು ಪಿಶಾಚನಿಗೆ ಹೆದರಬೇಕೊ?

3 ಯೇಸು ಕ್ರಿಸ್ತನ ಈ ಮಾತುಗಳು ಅಭಿಷಿಕ್ತ ಕ್ರೈಸ್ತರಿಗೆ ಅತಿ ಬಲವರ್ಧಕವಾಗಿವೆ: “ನಿನಗೆ ಸಂಭವಿಸುವದಕ್ಕಿರುವ ಬಾಧೆಗಳಿಗೆ ಹೆದರಬೇಡ. ಇಗೋ ನೀವು ದುಷ್ಪ್ರೇರಣೆಗೆ ಒಳಗಾಗುವಂತೆ ಸೈತಾನನು ನಿಮ್ಮಲ್ಲಿ ಕೆಲವರನ್ನು ಸೆರೆಮನೆಯೊಳಗೆ ಹಾಕುವದಕ್ಕಿದ್ದಾನೆ; ಮತ್ತು ಹತ್ತು ದಿವಸಗಳ ತನಕ ನಿಮಗೆ ಸಂಕಟವಿರುವದು. ನೀನು ಸಾಯಬೇಕಾದರೂ ನಂಬಿಗಸ್ತನಾಗಿರು; ನಾನು ನಿನಗೆ ಜೀವವೆಂಬ ಜಯಮಾಲೆಯನ್ನು ಕೊಡುವೆನು.” (ಪ್ರಕಟನೆ 2:10) ಅಭಿಷಿಕ್ತ ಕ್ರೈಸ್ತರು ಮತ್ತು ಭೂನಿರೀಕ್ಷೆಯಿರುವ ಅವರ ಸಂಗಾತಿಗಳು ಪಿಶಾಚನಿಗೆ ಹೆದರುವುದಿಲ್ಲ. ಆದರೆ ಅವರು ಹೀಗೆ ಭಯರಹಿತರಾಗಿರುವುದು ಸ್ವಾಭಾವಿಕವಾಗಿ ಬಂದಿರುವ ಧೈರ್ಯದ ಕಾರಣದಿಂದಲ್ಲ. ಪೂಜ್ಯಭಾವದ ದೇವಭಯ ಅವರಿಗಿರುವುದರಿಂದ ಮತ್ತು ಅವರು ದೇವರ ‘ರೆಕ್ಕೆಗಳ ಮರೆಯಲ್ಲಿ ಆಶ್ರಯವನ್ನು’ ಪಡೆಯುವುದರಿಂದ ಹೀಗೆ ಭಯರಹಿತರಾಗಿದ್ದಾರೆ.​—⁠ಕೀರ್ತನೆ 34:9; 36:⁠7.

4 ಭಯರಹಿತರಾಗಿದ್ದ ಯೇಸು ಕ್ರಿಸ್ತನ ಆದಿ ಶಿಷ್ಯರು ಕಷ್ಟಾನುಭವಿಸಿದರೂ ಮರಣಪರ್ಯಂತ ನಂಬಿಗಸ್ತರಾಗಿ ಉಳಿದರು. ಪಿಶಾಚನಾದ ಸೈತಾನನು ತಮಗೇನು ಮಾಡಬಹುದು ಎಂಬ ಭಯಕ್ಕೆ ಅವರು ಮಣಿಯಲಿಲ್ಲ. ಏಕೆಂದರೆ ಯೆಹೋವನಿಗೆ ಯಾರು ನಿಷ್ಠರಾಗಿ ಉಳಿಯುತ್ತಾರೊ ಅವರನ್ನು ಆತನು ಎಂದಿಗೂ ಕೈಬಿಡುವುದಿಲ್ಲವೆಂದು ಅವರಿಗೆ ತಿಳಿದಿತ್ತು. ತದ್ರೀತಿಯಲ್ಲಿ ಸದ್ಯದ ದಿನದ ತೀವ್ರ ಹಿಂಸೆಯ ಎದುರಿನಲ್ಲೂ ಅಭಿಷಿಕ್ತ ಕ್ರೈಸ್ತರು ಮತ್ತು ಅವರ ಸಮರ್ಪಿತ ಒಡನಾಡಿಗಳು ದೇವರ ಕಡೆಗಿನ ತಮ್ಮ ಸಮಗ್ರತೆಯನ್ನು ಸದಾ ಕಾಪಾಡಿಕೊಳ್ಳಲು ದೃಢನಿರ್ಧಾರವುಳ್ಳವರಾಗಿದ್ದಾರೆ. ಆದರೆ ಪಿಶಾಚನು ಮರಣಕ್ಕೂ ಕಾರಣನಾಗಬಲ್ಲನೆಂದು ಅಪೊಸ್ತಲ ಪೌಲನು ಸೂಚಿಸಿದನು. ಅದು ನಾವು ಹೆದರುವಂತೆ ಮಾಡಬೇಕೊ?

5 ಯೇಸು, “ತನ್ನ ಮರಣದಿಂದಲೇ ಮರಣಾಧಿಕಾರಿಯನ್ನು ಅಂದರೆ ಸೈತಾನನನ್ನು ಅಡಗಿಸಿಬಿಡುವದಕ್ಕೂ, ಮರಣಭಯದ ದೆಸೆಯಿಂದ ತಮ್ಮ ಜೀವಮಾನದಲ್ಲೆಲ್ಲಾ ದಾಸತ್ವದೊಳಗಿದ್ದವರನ್ನು ಬಿಡಿಸುವದಕ್ಕೂ ಅವರಂತೆ ರಕ್ತಮಾಂಸಧಾರಿಯಾದನು” ಎಂದು ಪೌಲನು ಹೇಳಿದನು. (ಇಬ್ರಿಯ 2:​14, 15) ಸೈತಾನನು “ಮರಣಾಧಿಕಾರಿ” ಆಗಿದ್ದುದರಿಂದಲೇ ಯೇಸುವನ್ನು ವಧಿಸಲು ಇಸ್ಕರಿಯೋತ ಯೂದನನ್ನು ವಶೀಕರಿಸಿಕೊಂಡನು, ಬಳಿಕ ಯೆಹೂದಿ ನಾಯಕರು ಮತ್ತು ರೋಮನರನ್ನು ಉಪಯೋಗಿಸಿದನು. (ಲೂಕ 22:3; ಯೋಹಾನ 13:​26, 27) ಆದರೂ, ತನ್ನ ಮರಣಯಜ್ಞದ ಮೂಲಕ ಯೇಸು ಪಾಪಿಗಳಾದ ಮಾನವರನ್ನು ಸೈತಾನನ ಹಿಡಿತದಿಂದ ಬಿಡಿಸಿ, ಅವರು ನಿತ್ಯಜೀವ ಪಡೆಯುವುದನ್ನು ಸಾಧ್ಯಗೊಳಿಸಿದ್ದಾನೆ.​—⁠ಯೋಹಾನ 3:16.

6 ಪಿಶಾಚನು ಎಷ್ಟರ ಮಟ್ಟಿಗೆ ಮರಣಕ್ಕೆ ಕಾರಣನಾಗಸಾಧ್ಯವಿದೆ? ಸೈತಾನನ ಕೆಟ್ಟ ಕಾರ್ಯಗಳ ಆರಂಭದಿಂದ, ಅವನ ಸುಳ್ಳುಗಳು ಮತ್ತು ಮಾರ್ಗದರ್ಶನೆಗಳು ಮಾನವರ ಮರಣಕ್ಕೆ ಕಾರಣವಾಗಿವೆ. ಆದಾಮನು ಪಾಪಮಾಡಿ ಮಾನವ ಕುಟುಂಬಕ್ಕೆ ಪಾಪಮರಣಗಳನ್ನು ದಾಟಿಸಿದ್ದರಿಂದ ಹೀಗಾಗಿದೆ. (ರೋಮಾಪುರ 5:12) ಇದಲ್ಲದೆ, ಯೇಸು ಕ್ರಿಸ್ತನಿಗೆ ಮಾಡಿದಂತೆಯೇ, ಸೈತಾನನ ಭೂಸೇವಕರು ಯೆಹೋವನ ಆರಾಧಕರನ್ನು ಕೆಲವು ಬಾರಿ ಮರಣದ ತನಕವೂ ಹಿಂಸಿಸಿದ್ದಾರೆ.

7 ಆದರೂ, ತಾನು ಕೊಲ್ಲಬಯಸುವ ಯಾವನಿಗೇ ಆಗಲಿ ಪಿಶಾಚನು ಮರಣವನ್ನು ತರಬಲ್ಲನೆಂದು ನಾವು ನೆನಸಬಾರದು. ತನಗೆ ಸೇರಿದವರನ್ನು ದೇವರು ಕಾಪಾಡುತ್ತಾನೆ ಮತ್ತು ಸೈತಾನನು ಭೂಮಿಯಲ್ಲಿರುವ ಸಕಲ ಸತ್ಯಾರಾಧಕರನ್ನು ನಿರ್ಮೂಲಗೊಳಿಸುವಂತೆ ದೇವರು ಎಂದಿಗೂ ಬಿಡನು. (ರೋಮಾಪುರ 14:⁠8) ಹಿಂಸೆಯು ತನ್ನ ಜನರೆಲ್ಲರ ಮೇಲೆ ಬರುವಂತೆ ಯೆಹೋವನು ಅನುಮತಿಸುವುದು ನಿಜ ಮತ್ತು ಪಿಶಾಚನ ಆಕ್ರಮಣಗಳ ಫಲವಾಗಿ ನಮ್ಮಲ್ಲಿ ಕೆಲವರಿಗೆ ಮರಣವು ಬರುವಂತೆಯೂ ಆತನು ಬಿಡುತ್ತಾನೆ. ಹೀಗಿದ್ದರೂ ಶಾಸ್ತ್ರಗಳು, ಯಾರ ಹೆಸರುಗಳು ದೇವರ “ಜ್ಞಾಪಕದ ಪುಸ್ತಕದಲ್ಲಿ” ಇವೆಯೊ ಅವರಿಗೆ ಪುನರುತ್ಥಾನದ ಆಶ್ಚರ್ಯಕರವಾದ ನಿರೀಕ್ಷೆಯನ್ನು ನೀಡುತ್ತವೆ ಮತ್ತು ಈ ಪುನರುಜ್ಜೀವನವಾಗುವುದನ್ನು ತಡೆದುಹಿಡಿಯಲು ಪಿಶಾಚನಿಂದ ಖಂಡಿತವಾಗಿ ಏನನ್ನೂ ಮಾಡಲು ಸಾಧ್ಯವಿಲ್ಲ!​—⁠ಮಲಾಕಿಯ 3:16; ಯೋಹಾನ 5:​28, 29; ಅ. ಕೃತ್ಯಗಳು 24:15.

ಸೈತಾನನಿಂದ ಹಿಂಸೆಯೇಕೆ?

8 ನಾವು ದೇವರ ನಿಷ್ಠಾವಂತ ಸೇವಕರಾಗಿರುವಾಗ, ಪಿಶಾಚನಿಗೆ ನಮ್ಮ ಮೇಲೆ ಹಿಂಸೆಯನ್ನು ಬರಮಾಡಲು ಒಂದು ಮೂಲಕಾರಣವಿದೆ. ನಮ್ಮ ನಂಬಿಕೆಗೆ ವಿರುದ್ಧವಾಗಿ ನಾವು ವರ್ತಿಸುವಂತೆ ಮಾಡುವುದೇ ಅವನ ಗುರಿಯಾಗಿದೆ. ನಮಗೆ ನಮ್ಮ ಸ್ವರ್ಗೀಯ ಪಿತನೊಂದಿಗೆ ಒಂದು ಅಮೂಲ್ಯವಾದ ಸಂಬಂಧವಿದೆ, ಮತ್ತು ಅದನ್ನು ನಾಶಗೊಳಿಸುವುದೇ ಸೈತಾನನ ಬಯಕೆ. ಇದು ನಮ್ಮನ್ನು ಅಚ್ಚರಿಗೊಳಿಸಬಾರದು. ಯೆಹೋವನು, ತನ್ನ ಸಾಂಕೇತಿಕ “ಸ್ತ್ರೀ,” ಮತ್ತು “ಸರ್ಪ” ಹಾಗೂ ಅವುಗಳ “ಸಂತಾನ”ಗಳ ಮಧ್ಯೆ ಹಗೆತನವಿರುವುದನ್ನು ಏದೆನಿನಲ್ಲಿ ಮುಂತಿಳಿಸಿದ್ದನು. (ಆದಿಕಾಂಡ 3:​14, 15) ಶಾಸ್ತ್ರಗಳು ಪಿಶಾಚನನ್ನು “ಪುರಾತನ ಸರ್ಪ”ವೆಂದು ಗುರುತಿಸಿ, ಈಗ ಅವನಿಗಿರುವ ಸಮಯವು ಕೊಂಚವೆಂದು ಮತ್ತು ಕೋಪವು ಅಧಿಕವೆಂದು ತಿಳಿಯಪಡಿಸುತ್ತವೆ. (ಪ್ರಕಟನೆ 12:​9, 12) ಈ ಎರಡು ‘ಸಂತಾನಗಳ’ ಮಧ್ಯೆ ಹಗೆತನವು ಮುಂದುವರಿಯುವಾಗ, ಯೆಹೋವನನ್ನು ನಂಬಿಗಸ್ತಿಕೆಯಿಂದ ಸೇವಿಸುವವರು ಹಿಂಸಿಸಲ್ಪಡುವುದನ್ನು ನಿರೀಕ್ಷಿಸಸಾಧ್ಯವಿದೆ. (2 ತಿಮೊಥೆಯ 3:12) ಆದರೆ ಸೈತಾನನು ತರುವ ಇಂತಹ ಹಿಂಸೆಗೆ ನಿಜ ಕಾರಣ ಯಾವುದೆಂದು ನಿಮಗೆ ತಿಳಿದಿದೆಯೆ?

9 ಪಿಶಾಚನು ವಿಶ್ವ ಪರಮಾಧಿಕಾರದ ವಿವಾದಾಂಶವನ್ನು ಎಬ್ಬಿಸಿದ್ದಾನೆ. ಈ ವಿವಾದಾಂಶಕ್ಕೆ ಸಂಬಂಧಿಸಿ, ಮಾನವರು ತಮ್ಮ ಸೃಷ್ಟಿಕರ್ತನಿಗೆ ತೋರಿಸುವ ಸಮಗ್ರತೆಯ ಬಗ್ಗೆಯೂ ಅವನು ಸವಾಲೆಸೆದಿದ್ದಾನೆ. ಸೈತಾನನು ಯಥಾರ್ಥಚಿತ್ತನಾಗಿದ್ದ ಯೋಬನ ಮೇಲೆ ಹಿಂಸೆಯನ್ನು ಬರಮಾಡಿದನು. ಕಾರಣವೇನು? ಯೋಬನು ಯೆಹೋವನಿಗೆ ತೋರಿಸುತ್ತಿದ್ದ ಸಮಗ್ರತೆಯನ್ನು ಮುರಿಯಲಿಕ್ಕಾಗಿಯೇ. ಯೋಬನ ಹೆಂಡತಿ ಮತ್ತು ‘ಬೇಸರಿಕೆಹುಟ್ಟಿಸುವ ಅವನ ಆದರಣೆಯವರು’ ಆ ಸಮಯದಲ್ಲಿ ಪಿಶಾಚನ ಉದ್ದೇಶವನ್ನು ಪೂರೈಸುವವರಾದರು. ಯೋಬನ ಪುಸ್ತಕ ತೋರಿಸುವಂತೆ ಪಿಶಾಚನು ದೇವರಿಗೆ, ತನಗೆ ಮಾನವರನ್ನು ಪರೀಕ್ಷಿಸುವಂತೆ ಅನುಮತಿ ನೀಡುವಲ್ಲಿ ಯಾವ ಮಾನವನೂ ಆತನಿಗೆ ನಂಬಿಗಸ್ತನಾಗಿರನು ಎಂದು ಹೇಳಿ ಸವಾಲೆಸೆದನು. ಆದರೆ ಯೋಬನು ತನ್ನ ಸಮಗ್ರತೆಗೆ ಅಂಟಿಕೊಂಡನು ಮತ್ತು ಹೀಗೆ ಸೈತಾನನು ಸುಳ್ಳುಗಾರನೆಂದು ರುಜುಪಡಿಸಿದನು. (ಯೋಬ 1:​8–2:9; 16:​2; 27:5; 31:⁠6) ಪಿಶಾಚನು ಇಂದು ನಮ್ಮ ಸಮಗ್ರತೆಯನ್ನು ಮುರಿಯುವ ಮತ್ತು ತಾನು ಯಾವುದರ ಬಗ್ಗೆ ಸವಾಲೆಸೆದನೊ ಅದು ಸರಿಯೆಂದು ರುಜುಪಡಿಸುವ ಪ್ರಯತ್ನದಲ್ಲಿ ಯೆಹೋವನ ಸಾಕ್ಷಿಗಳನ್ನು ಹಿಂಸೆಗೊಳಪಡಿಸುತ್ತಾನೆ.

10 ದೇವರ ಕಡೆಗಿನ ನಮ್ಮ ಸಮಗ್ರತೆಯನ್ನು ಹೇಗಾದರೂ ಮಾಡಿ ಮುರಿಯುವ ಉದ್ದೇಶದಿಂದ ಪಿಶಾಚನು ನಮ್ಮ ಮೇಲೆ ಹಿಂಸೆಯನ್ನು ಬರಮಾಡುತ್ತಾನೆಂಬುದನ್ನು ತಿಳಿದಿರುವುದು, ನಾವು ಶೂರರೂ ಧೈರ್ಯಶಾಲಿಗಳೂ ಆಗಿರುವಂತೆ ಸಹಾಯಮಾಡಬಲ್ಲದು. (ಧರ್ಮೋಪದೇಶಕಾಂಡ 31:⁠6) ನಮ್ಮ ದೇವರು ವಿಶ್ವದ ಪರಮಾಧಿಕಾರಿಯಾಗಿದ್ದಾನೆ ಮತ್ತು ನಮ್ಮ ಸಮಗ್ರತೆಯನ್ನು ಕಾಪಾಡಿಕೊಳ್ಳುವಂತೆ ಆತನು ನಮಗೆ ಸಹಾಯ ನೀಡುವನು. ಆದಕಾರಣ, ನಾವು ಸಮಗ್ರತೆಪಾಲಕರಾಗಿರುವ ಮೂಲಕ ಯೆಹೋವನ ಹೃದಯವನ್ನು ಯಾವಾಗಲೂ ಹರ್ಷಪಡಿಸಲು ಪ್ರಯತ್ನಿಸಿ, ಹೀಗೆ ಆತನು ಮಹಾ ದೂರುಗಾರನಾಗಿರುವ ಪಿಶಾಚನಾದ ಸೈತಾನನಿಗೆ ಉತ್ತರಕೊಡುವಂತೆ ಸದಾ ಸಂದರ್ಭವನ್ನು ಒದಗಿಸುವಂತಾಗಲಿ.​—⁠ಜ್ಞಾನೋಕ್ತಿ 27:11.

‘ಕೆಡುಕನಿಂದ ನಮ್ಮನ್ನು ತಪ್ಪಿಸು’

11 ಸಮಗ್ರತೆಪಾಲಕರಾಗಿರುವುದು ಸರಳವಾದ ವಿಷಯವಲ್ಲ; ಇದಕ್ಕೆ ಶ್ರದ್ಧಾಪೂರ್ವಕವಾದ ಪ್ರಾರ್ಥನೆಯು ಅಗತ್ಯ. ಮಾದರಿ ಪ್ರಾರ್ಥನೆಯ ಮಾತುಗಳು ಇದಕ್ಕೆ ವಿಶೇಷವಾಗಿ ಸಹಾಯಕರವಾಗಿವೆ. ಆ ಪ್ರಾರ್ಥನೆಯಲ್ಲಿ ಯೇಸು ಹೇಳಿದ್ದು: “ನಮ್ಮನ್ನು ಶೋಧನೆಯೊಳಗೆ ಸೇರಿಸದೆ, ಕೇಡಿನಿಂದ ನಮ್ಮನ್ನು ತಪ್ಪಿಸು.” (ಮತ್ತಾಯ 6:​13) ಪಾಪಮಾಡುವಂತೆ ಯೆಹೋವನು ನಮ್ಮನ್ನು ಶೋಧನೆಗೊಳಪಡಿಸುವುದಿಲ್ಲ. (ಯಾಕೋಬ 1:13) ಆದರೂ ಶಾಸ್ತ್ರಗಳು ಕೆಲವುವೇಳೆ, ಆತನು ಕೇವಲ ಅನುಮತಿಸುವ ವಿಷಯಗಳನ್ನು, ಆತನೇ ಮಾಡುತ್ತಿದ್ದಾನೊ ಎಂಬಂತೆ ಅಥವಾ ಅದಕ್ಕೆ ಆತನೇ ಕಾರಣನೊ ಎಂಬಂತೆ ಮಾತಾಡುತ್ತವೆ. (ರೂತಳು 1:​20, 21) ಆದುದರಿಂದ, ನಾವು ಯೇಸು ಸೂಚಿಸಿದಂತೆ ಪ್ರಾರ್ಥಿಸುವಾಗ, ಯೆಹೋವನು ನಮ್ಮನ್ನು ಶೋಧನೆಗೆ ಬಲಿಬೀಳುವಂತೆ ಬಿಡಬಾರದೆಂದು ಕೇಳಿಕೊಳ್ಳುತ್ತೇವೆ. ಆತನು ಹಾಗೆ ಎಂದಿಗೂ ಬಿಟ್ಟುಬಿಡುವುದೂ ಇಲ್ಲ, ಏಕೆಂದರೆ ನಮಗೆ ಶಾಸ್ತ್ರದಲ್ಲಿ ಈ ಆಶ್ವಾಸನೆಯಿದೆ: “ದೇವರು ನಂಬಿಗಸ್ಥನು; ನಿಮ್ಮ ಶಕ್ತಿಯನ್ನು ಮೀರುವ ಶೋಧನೆಯನ್ನು ನಿಮಗೆ ಬರಗೊಡಿಸದೆ ನೀವು ಅದನ್ನು ಸಹಿಸುವದಕ್ಕೆ ಶಕ್ತರಾಗುವಂತೆ ಶೋಧನೆಯಾಗುತ್ತಲೇ ತಪ್ಪಿಸಿಕೊಳ್ಳುವ ಮಾರ್ಗವನ್ನು ಸಿದ್ಧಮಾಡುವನು.”​—⁠1 ಕೊರಿಂಥ 10:13.

12 ಮಾದರಿ ಪ್ರಾರ್ಥನೆಯಲ್ಲಿ ಯೇಸು ಶೋಧನೆಯ ಕುರಿತು ತಿಳಿಸಿದ ಬಳಿಕ, “ಕೇಡಿನಿಂದ ನಮ್ಮನ್ನು ತಪ್ಪಿಸು” ಎಂದು ಹೇಳಿದನೆಂದು ಕನ್ನಡ ‘ಸತ್ಯವೇದ’ ಬೈಬಲ್‌ ತಿಳಿಸುತ್ತದೆ. ಆದರೆ ಅದೇ ಬೈಬಲಿನ ರೆಫರೆನ್ಸ್‌ ಎಡಿಷನ್‌ನಲ್ಲಿರುವ ಪಾದಟಿಪ್ಪಣಿಗನುಸಾರ ವಾಸ್ತವದಲ್ಲಿ ಇದು, ‘ನಮ್ಮನ್ನು ಕೆಡುಕನಿಂದ, ಅಂದರೆ ಸೈತಾನನಿಂದ ತಪ್ಪಿಸು’ ಎಂದಾಗಿದೆ. ಬೈಬಲು ‘ತಪ್ಪಿಸು’ ಎಂಬ ಅಭಿವ್ಯಕ್ತಿಯನ್ನು ಮುಖ್ಯವಾಗಿ ಜನರಿಂದ ತಪ್ಪಿಸುವ ಸಂಬಂಧದಲ್ಲಿ ಉಪಯೋಗಿಸುತ್ತದೆ ಮತ್ತು ಮತ್ತಾಯನ ಸುವಾರ್ತೆಯು ಪಿಶಾಚನನ್ನು “ಶೋಧಕನು” ಎಂದು ಕರೆಯುವ ಮೂಲಕ ಒಬ್ಬ ವ್ಯಕ್ತಿಗೆ ಸೂಚಿಸುತ್ತದೆ. (ಮತ್ತಾಯ 4:​3, 11) ಆದುದರಿಂದ, “ಕೆಡುಕ”ನಾಗಿರುವ ಪಿಶಾಚನಾದ ಸೈತಾನನಿಂದ ನಮ್ಮನ್ನು ತಪ್ಪಿಸಲಿಕ್ಕಾಗಿ ನಾವು ದೇವರಿಗೆ ಪ್ರಾರ್ಥಿಸುವುದು ಪ್ರಾಮುಖ್ಯ. ಏಕೆಂದರೆ ನಾವು ದೇವರಿಗೆ ವಿರೋಧವಾಗಿ ಪಾಪಮಾಡುವಂತೆ ಅವನು ಪ್ರಯತ್ನಿಸುತ್ತಾನೆ. (1 ಥೆಸಲೊನೀಕ 3:⁠5) ‘ಕೆಡುಕನಿಂದ ನಮ್ಮನ್ನು ತಪ್ಪಿಸು’ ಎಂದು ವಿಜ್ಞಾಪಿಸುವಾಗ, ನಾವು ಪಿಶಾಚನ ಹಿಡಿತಕ್ಕೊಳಗಾಗದಂತೆ ನಮ್ಮ ಸ್ವರ್ಗೀಯ ತಂದೆಯು ನಮ್ಮನ್ನು ನಡೆಸಿ ಸಹಾಯಮಾಡುವಂತೆ ಕೇಳಿಕೊಳ್ಳುತ್ತಿದ್ದೇವೆ.

ಪಿಶಾಚನ ಹಿಡಿತಕ್ಕೊಳಗಾಗಬೇಡಿ

13 ಕೊರಿಂಥದ ಕ್ರೈಸ್ತರು ಕ್ಷಮಾಭಾವದವರಾಗಿರಬೇಕೆಂದು ಪೌಲನು ಪ್ರೋತ್ಸಾಹಿಸಿದಾಗ, ಅವನು ಬರೆದುದು: “ನೀವು ಯಾರಿಗೆ ಯಾವದನ್ನು ಮನ್ನಿಸುತ್ತೀರೋ ನಾನು ಸಹ ಮನ್ನಿಸುತ್ತೇನೆ. ನಾನು ಯಾವದನ್ನಾದರೂ ಮನ್ನಿಸಿದ್ದರೆ ಕ್ರಿಸ್ತನ ಸನ್ನಿಧಾನದಲ್ಲಿ ನಿಮ್ಮ ನಿಮಿತ್ತವೇ ಮನ್ನಿಸಿದೆನು. ಸೈತಾನನು ನಮ್ಮನ್ನು ವಂಚಿಸಿ ನಷ್ಟಪಡಿಸಬಾರದು; ಅವನ ಯೋಚನೆಗಳನ್ನು ನಾವು ಅರಿಯದವರಲ್ಲವಲ್ಲಾ.” (2 ಕೊರಿಂಥ 2:​10, 11) ಪಿಶಾಚನು ನಮ್ಮನ್ನು ಅನೇಕ ವಿಧಗಳಲ್ಲಿ ತನ್ನ ಹಿಡಿತಕ್ಕೊಳಪಡಿಸಸಾಧ್ಯವಿದೆ. ಹೀಗಿರುವಾಗ, ಈ ಮೇಲೆ ಕೊಡಲ್ಪಟ್ಟಿರುವ ಮಾತುಗಳನ್ನು ಪೌಲನು ನುಡಿದದ್ದೇಕೆ?

14 ನೈತಿಕ ದುರಾಚಾರಿಯಾಗಿದ್ದ ಒಬ್ಬನು ಸಭೆಯಲ್ಲಿ ಉಳಿಯುವಂತೆ ಕೊರಿಂಥದವರು ಬಿಟ್ಟದ್ದಕ್ಕಾಗಿ ಪೌಲನು ಅವರನ್ನು ಖಂಡಿಸಿದ್ದನು. ಅವರು ಹಾಗೆ ಮಾಡಿದ್ದು ಸೈತಾನನನ್ನು ಸಂತೋಷಪಡಿಸಿದ್ದಿರಬೇಕು, ಏಕೆಂದರೆ ‘ಅನ್ಯಜನರಲ್ಲಿಯೂ ಇಲ್ಲದ ಜಾರತ್ವವನ್ನು’ ಆ ಸಭೆ ಸಹಿಸಿಕೊಂಡಿದ್ದುದರಿಂದ ಅದರ ಮೇಲೆ ಕಳಂಕಬಂತು. ಕಟ್ಟಕಡೆಗೆ, ಆ ತಪ್ಪಿತಸ್ಥನನ್ನು ಬಹಿಷ್ಕರಿಸಲಾಯಿತು. (1 ಕೊರಿಂಥ 5:​1-5, 11-13) ಆ ಬಳಿಕ ಆ ಮನುಷ್ಯನು ಪಶ್ಚಾತ್ತಾಪಪಟ್ಟನು. ಈಗ ಕೊರಿಂಥದವರು ಆ ಮನುಷ್ಯನನ್ನು ಕ್ಷಮಿಸಿ ಪುನಸ್ಸ್ಥಾಪಿಸಲು ನಿರಾಕರಿಸುವಲ್ಲಿ ಪಿಶಾಚನು ಅವರನ್ನು ಇನ್ನೊಂದು ವಿಧದಲ್ಲಿ ತನ್ನ ಹಿಡಿತಕ್ಕೊಳಪಡಿಸಿಕೊಳ್ಳುವನು. ಅದು ಹೇಗೆ? ಹೇಗೆಂದರೆ ಆ ಸಭೆಯವರು ಸೈತಾನನಂತೆಯೇ ನಿಷ್ಠುರರೂ ಕರುಣಾರಹಿತರೂ ಆಗಿರುವರು. ಒಂದುವೇಳೆ ಆ ಪಶ್ಚಾತ್ತಾಪಿಯು “ಅಧಿಕವಾದ ದುಃಖದಲ್ಲಿ ಮುಳುಗಿ” ದೇವಾರಾಧನೆಯನ್ನು ಪೂರ್ತಿಯಾಗಿ ಬಿಟ್ಟುಬಿಟ್ಟರೆ ಆಗ ಕರುಣಾಮಯಿ ದೇವರಾದ ಯೆಹೋವನ ಎದುರಿನಲ್ಲಿ, ವಿಶೇಷವಾಗಿ ಹಿರಿಯರು ಸ್ವಲ್ಪಮಟ್ಟಿಗಾದರೂ ಉತ್ತರವಾದಿಗಳಾಗುವರು. (2 ಕೊರಿಂಥ 2:7; ಯಾಕೋಬ 2:13; 3:⁠1) ಯಾವ ಸತ್ಯ ಕ್ರೈಸ್ತನೂ ಕ್ರೂರಿ, ನಿಷ್ಠುರ ಮತ್ತು ಕರುಣಾರಹಿತನಾಗಿದ್ದು ಸೈತಾನನನ್ನು ಅನುಕರಿಸಲು ಮನಸ್ಸುಮಾಡಲಿಕ್ಕಿಲ್ಲವೆಂಬುದು ಖಂಡಿತ.

ದೇವರು ದಯಪಾಲಿಸುವ ರಕ್ಷಾಕವಚದಿಂದ ಸುರಕ್ಷಿತರು

15 ನಾವು ಪಿಶಾಚನಿಂದ ರಕ್ಷಿಸಲ್ಪಡಬೇಕಾದರೆ, ದುರಾತ್ಮಸೇನೆಗಳ ವಿರುದ್ಧ ಆಧ್ಯಾತ್ಮಿಕ ಯುದ್ಧವನ್ನು ಮಾಡಬೇಕಾಗಿದೆ. ಅಷ್ಟು ಬಲಾಢ್ಯವಾದ ಸೈನ್ಯದ ಮೇಲೆ ಜಯಗಳಿಸುವುದು “ದೇವರು ದಯಪಾಲಿಸುವ ಸರ್ವಾಯುಧಗಳನ್ನು” ಇಲ್ಲವೆ ರಕ್ಷಾಕವಚವನ್ನು ಧರಿಸುವುದರ ಮೇಲೆ ಹೊಂದಿಕೊಂಡಿದೆ. (ಎಫೆಸ 6:​11-18) ಈ ರಕ್ಷಾಕವಚದಲ್ಲಿ, “ನೀತಿಯೆಂಬ ವಜ್ರಕವಚ” ಸೇರಿದೆ. (ಎಫೆಸ 6:14) ಪುರಾತನ ಇಸ್ರಾಯೇಲಿನ ರಾಜನಾದ ಸೌಲನು ದೇವರಿಗೆ ಅವಿಧೇಯನಾಗಿ ಪವಿತ್ರಾತ್ಮವನ್ನು ಕಳೆದುಕೊಂಡನು. (1 ಸಮುವೇಲ 15:​22, 23) ಆದರೆ ನಾವು ನೀತಿಯನ್ನು ಆಚರಿಸಿದರೆ ಮತ್ತು ನಮ್ಮ ಸಂಪೂರ್ಣ ಆಧ್ಯಾತ್ಮಿಕ ರಕ್ಷಾಕವಚವನ್ನು ಧರಿಸಿಕೊಂಡರೆ, ನಮಗೆ ದೇವರ ಪವಿತ್ರಾತ್ಮದ ಸಹಾಯ ಮತ್ತು ಸೈತಾನನನ್ನು ಹಾಗೂ ಅವನ ದುಷ್ಟ ದೂತರಾದ ದೆವ್ವಗಳನ್ನು ಎದುರಿಸಲು ಅಗತ್ಯವಿರುವ ಸಂರಕ್ಷಣೆಯು ದೊರೆಯುವುದು.​—⁠ಜ್ಞಾನೋಕ್ತಿ 18:10.

16 ದುರಾತ್ಮ ಸೇನೆಗಳ ವಿರುದ್ಧ ನಿರಂತರ ಸಂರಕ್ಷಣೆಗಾಗಿ ಬೇರೆ ವಿಷಯಗಳಲ್ಲದೆ, ನಾವು ದೇವರ ವಾಕ್ಯವಾದ ಬೈಬಲನ್ನು ಕ್ರಮವಾಗಿ ಓದುವ ಮತ್ತು ‘ನಂಬಿಗಸ್ತನಾದ ಮನೆವಾರ್ತೆಯವನು’ ಒದಗಿಸುವ ಪ್ರಕಾಶನಗಳನ್ನು ಸದುಪಯೋಗಿಸುತ್ತಾ ಅದನ್ನು ಅಧ್ಯಯನಮಾಡುವ ಅಗತ್ಯವಿದೆ. (ಲೂಕ 12:42) ಹೀಗೆ ನಾವು, ಪೌಲನ ಸಲಹೆಗೆ ಹೊಂದಿಕೆಯಲ್ಲಿ ನಮ್ಮ ಮನಸ್ಸುಗಳನ್ನು ಹಿತಕರವಾದ ಆಧ್ಯಾತ್ಮಿಕ ವಿಷಯಗಳಿಂದ ತುಂಬಿಸಿಕೊಳ್ಳುವೆವು: “ಸಹೋದರರೇ, ಯಾವಾವದು ಸತ್ಯವೂ ಮಾನ್ಯವೂ ನ್ಯಾಯವೂ ಶುದ್ಧವೂ ಪ್ರೀತಿಕರವೂ ಮನೋಹರವೂ ಆಗಿದೆಯೋ, ಯಾವದು ಸದ್ಗುಣವಾಗಿದೆಯೋ, ಯಾವದು ಕೀರ್ತಿಗೆ ಯೋಗ್ಯವೋ, ಅವೆಲ್ಲವುಗಳನ್ನೂ ಲಕ್ಷ್ಯಕ್ಕೆ ತಂದುಕೊಳ್ಳಿರಿ.”​—⁠ಫಿಲಿಪ್ಪಿ 4:⁠8.

17 ನಾವು “ಸಮಾಧಾನದ ವಿಷಯವಾದ ಸುವಾರ್ತೆಯನ್ನು ತಿಳಿಸುವದರಲ್ಲಿ ಸಿದ್ಧವಾದ ಮನಸ್ಸೆಂಬ ಕೆರಗಳನ್ನು ಮೆಟ್ಟಿಕೊಂಡು” ನಿಲ್ಲುವಂತೆ ಯೆಹೋವನು ನಮ್ಮನ್ನು ಶಕ್ತರನ್ನಾಗಿ ಮಾಡುತ್ತಾನೆ. (ಎಫೆಸ 6:15) ಕ್ರೈಸ್ತ ಕೂಟಗಳಲ್ಲಿ ಕ್ರಮವಾದ ಭಾಗವಹಿಸುವಿಕೆಯು, ದೇವರ ರಾಜ್ಯದ ಸುವಾರ್ತೆಯನ್ನು ಘೋಷಿಸಲು ನಮ್ಮನ್ನು ಸನ್ನದ್ಧರನ್ನಾಗಿ ಮಾಡುತ್ತದೆ. ದೇವರ ಸತ್ಯವನ್ನು ಇತರರು ಕಲಿಯುವಂತೆ ಮತ್ತು ಆಧ್ಯಾತ್ಮಿಕ ಸ್ವಾತಂತ್ರ್ಯವನ್ನು ಅನುಭವಿಸುವಂತೆ ಸಹಾಯಮಾಡುವಾಗ ನಾವು ಅದೆಷ್ಟು ಹರ್ಷವನ್ನು ಪಡೆಯುತ್ತೇವೆ! (ಯೋಹಾನ 8:32) ‘ಪವಿತ್ರಾತ್ಮವು ಕೊಡುವ ದೇವರ ವಾಕ್ಯವೆಂಬ ಕತ್ತಿಯು,’ ಸುಳ್ಳು ಬೋಧನೆಗಳಿಂದ ನಾವು ತಪ್ಪಿಸಿಕೊಳ್ಳುವಂತೆ ಮತ್ತು “ಕೋಟೆಗಳನ್ನು” ಅಂದರೆ ಬಲವಾಗಿ ಬೇರೂರಿರುವಂಥ ವಿಷಯಗಳನ್ನು ‘ಕೆಡವಿ’ ಹಾಕುವಂತೆ ಮಾಡಲು ಅವಶ್ಯವಾಗಿ ಬೇಕಾಗಿರುವ ಆಯುಧವಾಗಿದೆ. (ಎಫೆಸ 6:17; 2 ಕೊರಿಂಥ 10:​4, 5) ದೇವರ ಲಿಖಿತ ವಾಕ್ಯವಾದ ಬೈಬಲಿನ ಕೌಶಲಭರಿತ ಉಪಯೋಗವು, ಸತ್ಯವನ್ನು ಇತರರಿಗೆ ಕಲಿಸುವಂತೆ ನಮಗೆ ಸಹಾಯಮಾಡುತ್ತದೆ ಮತ್ತು ಪಿಶಾಚನ ತಂತ್ರಗಳಿಗೆ ತುತ್ತಾಗದಂತೆ ನಮ್ಮನ್ನು ಕಾಪಾಡುತ್ತದೆ.

18 ನಮ್ಮ ಆಧ್ಯಾತ್ಮಿಕ ರಕ್ಷಾಕವಚದ ಕುರಿತಾದ ಚರ್ಚೆಯನ್ನು ಪೌಲನು ಹೀಗೆ ಹೇಳುತ್ತ ಆರಂಭಿಸಿದನು: “ನೀವು ಕರ್ತನನ್ನೂ ಆತನ ಅತ್ಯಧಿಕವಾದ ಶಕ್ತಿಯನ್ನೂ ಆಶ್ರಯಿಸಿಕೊಂಡವರಾಗಿ ಬಲಗೊಳ್ಳಿರಿ. ಸೈತಾನನ ತಂತ್ರೋಪಾಯಗಳನ್ನು ನೀವು ಎದುರಿಸಿ ನಿಲ್ಲುವದಕ್ಕೆ ಶಕ್ತರಾಗುವಂತೆ ದೇವರು ದಯಪಾಲಿಸುವ ಸರ್ವಾಯುಧಗಳನ್ನು [“ಸಂಪೂರ್ಣ ರಕ್ಷಾಕವಚವನ್ನು,” NW] ಧರಿಸಿಕೊಳ್ಳಿರಿ.” (ಎಫೆಸ 6:​10, 11) “ಎದುರಿಸಿ ನಿಲ್ಲು” ಎಂದು ಭಾಷಾಂತರಿಸಲ್ಪಟ್ಟಿರುವ ಗ್ರೀಕ್‌ ಪದವು ಒಬ್ಬ ಸೈನಿಕನು ತನಗೆ ಕೊಡಲ್ಪಟ್ಟಿರುವ ಸ್ಥಾನದಲ್ಲಿ ಭದ್ರವಾಗಿ ನಿಲ್ಲುವುದನ್ನು ಸೂಚಿಸುತ್ತದೆ. ಆಧ್ಯಾತ್ಮಿಕ ಯುದ್ಧದಲ್ಲಿ ಸೈತಾನನು ನಮ್ಮ ಏಕತೆಯನ್ನು ಭಂಗಗೊಳಿಸಲು, ನಮ್ಮ ಬೋಧನೆಗಳನ್ನು ಕಲುಷಿತಗೊಳಿಸಲು ಇಲ್ಲವೆ ದೇವರಿಗೆ ನಾವು ತೋರಿಸುವ ಸಮಗ್ರತೆಯನ್ನು ಮುರಿಯಲು ವಿವಿಧ ರೀತಿಯ ತಂತ್ರೋಪಾಯಗಳನ್ನು ಉಪಯೋಗಿಸುತ್ತಾನೆ. ಆದರೆ ಪಿಶಾಚನ ಈ ಆಕ್ರಮಣಗಳು ಇದುವರೆಗೆ ಜಯಹೊಂದಿಲ್ಲ ಮತ್ತು ಎಂದಿಗೂ ಜಯಹೊಂದಲಾರವು! *

ಪಿಶಾಚನನ್ನು ಎದುರಿಸಿರಿ, ಅವನು ಓಡಿಹೋಗುವನು

19 ಪಿಶಾಚನು ಮತ್ತು ಅವನ ದುರಾತ್ಮಸೇನೆಗಳ ವಿರುದ್ಧ ನಡೆಯುತ್ತಿರುವ ನಮ್ಮ ಆಧ್ಯಾತ್ಮಿಕ ಯುದ್ಧದಲ್ಲಿ ನಾವು ಜಯಗಳಿಸಬಲ್ಲೆವು. ಸೈತಾನನ ಎದುರು ಭಯಭೀತರಾಗಲು ಯಾವುದೇ ಕಾರಣವು ನಮಗಿಲ್ಲ, ಏಕೆಂದರೆ ಶಿಷ್ಯ ಯಾಕೋಬನು ಬರೆದುದು: “ದೇವರಿಗೆ ಒಳಗಾಗಿರಿ. ಸೈತಾನನನ್ನು ಎದುರಿಸಿರಿ. ಅವನು ನಿಮ್ಮನ್ನು ಬಿಟ್ಟು ಓಡಿಹೋಗುವನು.” (ಯಾಕೋಬ 4:⁠7) ಸೈತಾನನನ್ನೂ ಅವನ ಪಕ್ಷದವರಾದ ದುಷ್ಟಾತ್ಮ ಜೀವಿಗಳನ್ನೂ ಎದುರಿಸಲು ಬಲಾಢ್ಯವಾದ ಕ್ರಮವನ್ನು ಕೈಕೊಳ್ಳುವ ಒಂದು ವಿಧವು, ಅತೀಂದ್ರಿಯ ಅಥವಾ ಮಾಂತ್ರಿಕ ಆಚಾರಗಳಲ್ಲಿ ಮತ್ತು ಅವುಗಳಲ್ಲಿ ಭಾಗವಹಿಸುವವರೊಂದಿಗೆ ಯಾವುದೇ ರೀತಿಯಲ್ಲಿ ಒಳಗೂಡದಿರುವುದೇ ಆಗಿದೆ. ಶಕುನನೋಡುವುದು ಇಲ್ಲವೆ ಜ್ಯೋತಿಶ್ಶಾಸ್ತ್ರ, ಭವಿಷ್ಯಜ್ಞಾನ ಮತ್ತು ಪ್ರೇತವ್ಯವಹಾರಗಳಲ್ಲಿ ಯೆಹೋವನ ಸೇವಕರು ಕೈಹಾಕಲೇಬಾರದೆಂದು ಶಾಸ್ತ್ರಗಳು ಸ್ಪಷ್ಟವಾಗಿ ಹೇಳುತ್ತವೆ. ನಾವು ಆಧ್ಯಾತ್ಮಿಕವಾಗಿ ಸಕ್ರಿಯರೂ ಬಲಾಢ್ಯರೂ ಆಗಿರುವಲ್ಲಿ, ಯಾರಾದರೂ ನಮ್ಮ ಮೇಲೆ ಮಂತ್ರಮಾಡಿ ವಶೀಕರಿಸಿಯಾರೊ ಎಂದು ನಾವು ಭಯಪಡುವ ಅಗತ್ಯವಿಲ್ಲ.​—⁠ಅರಣ್ಯಕಾಂಡ 23:23; ಧರ್ಮೋಪದೇಶಕಾಂಡ 18:​10-12; ಯೆಶಾಯ 47:​12-15; ಅ. ಕೃತ್ಯಗಳು 19:​18-20.

20 ಬೈಬಲ್‌ ಮಟ್ಟಗಳಿಗೆ ಮತ್ತು ಸತ್ಯಗಳಿಗೆ ಅಂಟಿಕೊಳ್ಳುವ ಮೂಲಕ ಹಾಗೂ ಪಿಶಾಚನಿಗೆ ವಿರುದ್ಧವಾಗಿ ಸ್ಥಿರವಾದ ನಿಲುವನ್ನು ತೆಗೆದುಕೊಳ್ಳುವ ಮೂಲಕ ನಾವು ‘ಪಿಶಾಚನನ್ನು ಎದುರಿಸುತ್ತೇವೆ.’ ಈ ಲೋಕವಾದರೊ ಸೈತಾನನಿಗೆ ಅನುರೂಪವಾಗಿದೆ, ಏಕೆಂದರೆ ಅವನೇ ಅದರ ದೇವರು. (2 ಕೊರಿಂಥ 4:⁠4) ಆದುದರಿಂದಲೇ ಹೆಮ್ಮೆ, ಸ್ವಾರ್ಥ, ಲೈಂಗಿಕ ದುರಾಚಾರ, ಹಿಂಸಾಕೃತ್ಯ ಮತ್ತು ಪ್ರಾಪಂಚಿಕತೆಯಂಥ ಲೋಕದ ಸ್ವಭಾವಲಕ್ಷಣಗಳನ್ನು ನಾವು ತ್ಯಜಿಸುತ್ತೇವೆ. ಯೇಸು ಅರಣ್ಯದಲ್ಲಿ ಶೋಧನೆಗೊಳಗಾದಾಗ ಮತ್ತು ಶಾಸ್ತ್ರವನ್ನು ಉಪಯೋಗಿಸಿ ಪಿಶಾಚನನ್ನು ಪ್ರತಿಭಟಿಸಿದಾಗ, ಅವನು ಓಡಿಹೋದನೆಂದು ನಮಗೆ ತಿಳಿದಿದೆ. (ಮತ್ತಾಯ 4:​4, 7, 10, 11) ಅದೇ ರೀತಿ, ನಾವು ಯೆಹೋವನಿಗೆ ಪೂರ್ಣವಾಗಿ ಅಧೀನರಾಗಿದ್ದು, ಆತನ ಮೇಲೆ ಪ್ರಾರ್ಥನಾಪೂರ್ವಕವಾಗಿ ಹೊಂದಿಕೊಂಡಿರುವಲ್ಲಿ ಸೈತಾನನು ಸೋತು “ಓಡಿಹೋಗುವನು.” (ಎಫೆಸ 6:18) ಯೆಹೋವ ದೇವರ ಮತ್ತು ಆತನ ಪ್ರಿಯ ಕುಮಾರನ ಬೆಂಬಲವಿರುವಾಗ, ಯಾವನೂ, ಪಿಶಾಚನು ಸಹ ನಮಗೆ ಕಾಯಂ ಹಾನಿಯನ್ನು ಮಾಡಲಾರನು!​—⁠ಕೀರ್ತನೆ 91:​9-11.

[ಪಾದಟಿಪ್ಪಣಿ]

^ ಪ್ಯಾರ. 25 ದೇವರು ದಯಪಾಲಿಸುವ ಆಧ್ಯಾತ್ಮಿಕ ರಕ್ಷಾಕವಚದ ಕುರಿತಾದ ಹೆಚ್ಚಿನ ಮಾಹಿತಿಗಾಗಿ, 1992, ಆಗಸ್ಟ್‌ 15ರ ಕಾವಲಿನಬುರುಜುವಿನ 21-23ನೇ ಪುಟಗಳನ್ನು ನೋಡಿ.

ನಿಮ್ಮ ಉತ್ತರವೇನು?

• ನಾವು ಪಿಶಾಚನಾದ ಸೈತಾನನಿಗೆ ಹೆದರಬೇಕೊ?

• ಸೈತಾನನು ಕ್ರೈಸ್ತರ ಮೇಲೆ ಹಿಂಸೆಯನ್ನು ತರುವುದೇಕೆ?

• ನಮ್ಮನ್ನು ‘ಕೆಡುಕನಿಂದ ತಪ್ಪಿಸುವಂತೆ’ ಏಕೆ ಪ್ರಾರ್ಥಿಸುತ್ತೇವೆ?

• ಆಧ್ಯಾತ್ಮಿಕ ಯುದ್ಧವನ್ನು ಮಾಡುವುದರಲ್ಲಿ ನಾವು ಹೇಗೆ ಜಯಶಾಲಿಗಳಾಗಬಲ್ಲೆವು?

[ಅಧ್ಯಯನ ಪ್ರಶ್ನೆಗಳು]

1, 2. (ಎ) ಯೆಶಾಯ 14ನೆಯ ಅಧ್ಯಾಯದಲ್ಲಿ ದಾಖಲಿಸಲ್ಪಟ್ಟಿರುವ ಒಂದು ಘೋಷಣೆಯಲ್ಲಿ ಪಿಶಾಚನ ಯಾವ ಗುಣ ತೋರಿಬರುತ್ತದೆ? (ಬಿ) ನಾವು ಯಾವ ಪ್ರಶ್ನೆಗಳನ್ನು ಚರ್ಚಿಸಲಿರುವೆವು?

3, 4. ಅಭಿಷಿಕ್ತ ಕ್ರೈಸ್ತರು ಮತ್ತು ಅವರ ಸಂಗಾತಿಗಳು ಪಿಶಾಚನಿಗೆ ಹೆದರುವುದಿಲ್ಲವೇಕೆ?

5. ಇಬ್ರಿಯ 2:​14, 15ರಿಂದ ನಾವೇನನ್ನು ಕಲಿಯುತ್ತೇವೆ?

6, 7. ಪಿಶಾಚನು ಎಷ್ಟರ ಮಟ್ಟಿಗೆ ಮರಣಕ್ಕೆ ಕಾರಣನಾಗಸಾಧ್ಯವಿದೆ?

8. ಪಿಶಾಚನು ದೇವರ ಸೇವಕರ ಮೇಲೆ ಹಿಂಸೆಯನ್ನು ಬರಮಾಡುವುದೇಕೆ?

9, 10. ಪಿಶಾಚನು ಯಾವ ವಿವಾದಾಂಶವನ್ನು ಎಬ್ಬಿಸಿರುತ್ತಾನೆ, ಮತ್ತು ಮಾನವರ ನಡತೆಯು ಅದರೊಂದಿಗೆ ಹೇಗೆ ಸಂಬಂಧಿಸುತ್ತದೆ?

11. ‘ನಮ್ಮನ್ನು ಶೋಧನೆಯೊಳಗೆ ಸೇರಿಸಬೇಡ’ ಎಂಬ ಬಿನ್ನಹದ ಅರ್ಥವೇನು?

12. ‘ಕೆಡುಕನಿಂದ ನಮ್ಮನ್ನು ತಪ್ಪಿಸು’ ಎಂದು ನಾವು ಏಕೆ ಪ್ರಾರ್ಥಿಸುತ್ತೇವೆ?

13, 14. ಕೊರಿಂಥದವರು ಸಭೆಯಲ್ಲಿದ್ದ ಒಬ್ಬ ನೈತಿಕ ದುರಾಚಾರಿಯೊಡನೆ ವ್ಯವಹರಿಸಿದ ರೀತಿಯಲ್ಲಿ ಏಕೆ ಬದಲಾವಣೆಮಾಡುವ ಅಗತ್ಯವಿತ್ತು?

15. ನಾವು ಯಾವ ಯುದ್ಧವನ್ನು ಮಾಡುತ್ತಿದ್ದೇವೆ, ಮತ್ತು ವಿಜಯವು ಯಾವುದರ ಮೇಲೆ ಹೊಂದಿಕೊಂಡಿದೆ?

16. ದುರಾತ್ಮ ಸೇನೆಗಳ ವಿರುದ್ಧ ನಮಗೆ ನಿರಂತರ ಸಂರಕ್ಷಣೆ ಹೇಗೆ ದೊರೆಯಸಾಧ್ಯವಿದೆ?

17. ಸುವಾರ್ತೆಯ ಪರಿಣಾಮಕಾರಿ ಘೋಷಕರಾಗಲು ನಮಗೆ ಯಾವುದು ಸಹಾಯಮಾಡುವುದು?

18. ಪಿಶಾಚನ ‘ತಂತ್ರೋಪಾಯಗಳನ್ನು ಎದುರಿಸಿ ನಿಲ್ಲಲು’ ನಾವು ಹೇಗೆ ಶಕ್ತರಾಗಬಲ್ಲೆವು?

19. ಪಿಶಾಚನನ್ನು ಎದುರಿಸಲು ನಾವು ಕ್ರಮ ಕೈಕೊಳ್ಳಬೇಕಾದ ಒಂದು ವಿಧವು ಯಾವುದು?

20. ನಾವು ಪಿಶಾಚನನ್ನು ಹೇಗೆ ಎದುರಿಸಬಲ್ಲೆವು?

[ಪುಟ 26ರಲ್ಲಿರುವ ಚಿತ್ರ]

ಭಯರಹಿತರಾಗಿದ್ದ ಕ್ರಿಸ್ತನ ಆದಿ ಹಿಂಬಾಲಕರು ಮರಣಪರ್ಯಂತ ನಂಬಿಗಸ್ತರಾಗಿದ್ದರು

[ಪುಟ 27ರಲ್ಲಿರುವ ಚಿತ್ರ]

ಯೆಹೋವನ ಸ್ಮರಣೆಯಲ್ಲಿರುವವರ ಪುನರುತ್ಥಾನವನ್ನು ಪಿಶಾಚನು ತಡೆದುಹಿಡಿಯಲಾರನು

[ಪುಟ 28ರಲ್ಲಿರುವ ಚಿತ್ರ]

ನಿಮ್ಮನ್ನು ‘ಕೆಡುಕನಿಂದ ತಪ್ಪಿಸುವಂತೆ’ ಪ್ರಾರ್ಥಿಸುತ್ತೀರೊ?

[ಪುಟ 29ರಲ್ಲಿರುವ ಚಿತ್ರ]

ನೀವು ‘ದೇವರು ದಯಪಾಲಿಸುವ ಸಂಪೂರ್ಣ ರಕ್ಷಾಕವಚವನ್ನು’ ಧರಿಸುತ್ತಿದ್ದೀರೊ?