ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಎಲ್ಲಾ ಜನಾಂಗಗಳಿಗೆ ಸಾಕ್ಷಿ”

“ಎಲ್ಲಾ ಜನಾಂಗಗಳಿಗೆ ಸಾಕ್ಷಿ”

“ಎಲ್ಲಾ ಜನಾಂಗಗಳಿಗೆ ಸಾಕ್ಷಿ”

“ನೀವು . . . ಭೂಲೋಕದ ಕಟ್ಟಕಡೆಯವರೆಗೂ ನನಗೆ ಸಾಕ್ಷಿಗಳಾಗಿರಬೇಕು.”​—⁠ಅ. ಕೃತ್ಯಗಳು 1:⁠8.

ಮತ್ತಾಯ 24:14ರಲ್ಲಿ ದಾಖಲಿಸಲ್ಪಟ್ಟಿರುವ ಯೇಸುವಿನ ಮಾತುಗಳು ನಮಗೆ ಎಷ್ಟು ಪರಿಚಿತವಾಗಿವೆಯೆಂದರೆ, ನಮ್ಮಲ್ಲಿ ಹೆಚ್ಚಿನವರು ಅದನ್ನು ಬಾಯಿಪಾಠವಾಗಿ ಹೇಳುತ್ತೇವೆ. ಮತ್ತು ನಿಜಕ್ಕೂ ಅದು ಒಂದು ಗಮನಾರ್ಹವಾದ ಪ್ರವಾದನೆಯಾಗಿದೆ! ಶಿಷ್ಯರು ಅದನ್ನು ಪ್ರಥಮ ಬಾರಿ ಕೇಳಿಸಿಕೊಂಡಾಗ ಅವರಿಗೆ ಯಾವ ಆಲೋಚನೆ ಬಂದಿರಬೇಕು ಎಂದು ಊಹಿಸಿನೋಡಿ! ಅದು ಸಾ.ಶ. 33 ಆಗಿತ್ತು. ಶಿಷ್ಯರು ಸುಮಾರು ಮೂರು ವರ್ಷಕಾಲ ಯೇಸುವಿನೊಂದಿಗೆ ಇದ್ದರು ಮತ್ತು ಈಗ ಅವರು ಅವನೊಂದಿಗೆ ಯೆರೂಸಲೇಮಿಗೆ ಬಂದಿದ್ದರು. ಅವರು ಅವನು ಮಾಡಿದ ಅದ್ಭುತಗಳನ್ನು ನೋಡಿದ್ದರು ಮತ್ತು ಅವನ ಬೋಧನೆಗಳನ್ನು ಕೇಳಿಸಿಕೊಂಡಿದ್ದರು. ಯೇಸು ಅವರಿಗೆ ಬೋಧಿಸಿದ್ದ ಅಮೂಲ್ಯವಾದ ಸತ್ಯಗಳಲ್ಲಿ ಅವರು ಆನಂದವನ್ನು ಕಂಡುಕೊಂಡಿದ್ದರಾದರೂ, ಎಲ್ಲರಿಗೂ ಈ ಸತ್ಯಗಳ ವಿಷಯದಲ್ಲಿ ಆನಂದವಾಗಲಿಲ್ಲ ಎಂಬುದನ್ನು ಅವರು ಚೆನ್ನಾಗಿ ತಿಳಿದವರಾಗಿದ್ದರು. ಯೇಸುವಿಗೆ ಬಲಾಢ್ಯರಾದ ಮತ್ತು ಪ್ರಭಾವಶಾಲಿಗಳಾದ ವೈರಿಗಳಿದ್ದರು.

2 ಎಣ್ಣೆಯ ಮರಗಳ ಗುಡ್ಡದ ಮೇಲೆ ಯೇಸು ಕುಳಿತುಕೊಂಡು ತನ್ನೊಂದಿಗಿದ್ದ ನಾಲ್ಕು ಮಂದಿ ಶಿಷ್ಯರಿಗೆ ಅವರು ಎದುರಿಸಲಿಕ್ಕಿದ್ದ ಅಪಾಯಗಳು ಮತ್ತು ಪಂಥಾಹ್ವಾನಗಳ ಕುರಿತು ತಿಳಿಸುತ್ತಿದ್ದಾಗ, ಅವರು ಯೇಸುವಿಗೆ ತೀವ್ರ ಗಮನವನ್ನು ಕೊಡುತ್ತಿದ್ದರು. ಇದಕ್ಕಿಂತ ಮುಂಚೆ ತಾನು ಕೊಲ್ಲಲ್ಪಡುವುದರ ಕುರಿತು ಯೇಸು ಅವರಿಗೆ ತಿಳಿಸಿದ್ದನು. (ಮತ್ತಾಯ 16:21) ಈಗಲಾದರೋ ಅವರು ಸಹ ಕ್ರೂರವಾದ ವಿರೋಧವನ್ನು ಎದುರಿಸುವರು ಎಂದು ಯೇಸು ಸ್ಪಷ್ಟಪಡಿಸಿದನು. ಜನರು “ನಿಮ್ಮನ್ನು ಉಪದ್ರವಕ್ಕೆ ಒಪ್ಪಿಸಿ ಕೊಲ್ಲುವರು; ನನ್ನ ಹೆಸರಿನ ನಿಮಿತ್ತ ನಿಮ್ಮನ್ನು ಎಲ್ಲಾ ಜನಾಂಗಗಳವರು ಹಗೆಮಾಡುವರು” ಎಂದು ಅವನು ಹೇಳಿದನು. ಅಷ್ಟೇ ಅಲ್ಲ, ಸುಳ್ಳುಪ್ರವಾದಿಗಳು ಅನೇಕರನ್ನು ಮೋಸಗೊಳಿಸುವರು. ಕೆಲವರು ಹಿಂಜರಿದು ಒಬ್ಬರನ್ನೊಬ್ಬರು ಹಿಡುಕೊಡುವರು ಮತ್ತು ದ್ವೇಷಮಾಡುವರು. ಇನ್ನಿತರರು, ವಾಸ್ತವದಲ್ಲಿ ‘ಬಹುಜನರು’ ದೇವರಿಗಾಗಿ ಮತ್ತು ಆತನ ವಾಕ್ಯಕ್ಕಾಗಿರುವ ಪ್ರೀತಿಯು ತಣ್ಣಗಾಗುವಂತೆ ಬಿಟ್ಟುಕೊಡುವರು.​—⁠ಮತ್ತಾಯ 24:9-12.

3 ಈ ಎಲ್ಲ ನಕಾರಾತ್ಮಕ ಪರಿಸ್ಥಿತಿಗಳ ಚಿತ್ರಣವನ್ನು ಕೊಟ್ಟ ಬಳಿಕ ಯೇಸು ಹೇಳಿದ ಮಾತು ಶಿಷ್ಯರಿಗೆ ಆಶ್ಚರ್ಯವನ್ನು ಉಂಟುಮಾಡಿರಬಹುದು. ಅವನು ಹೇಳಿದ್ದು: “ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು.” (ಮತ್ತಾಯ 24:14) ಹೌದು, ಯೇಸು ಇಸ್ರಾಯೇಲಿನಲ್ಲಿ ಆರಂಭಿಸಿದ್ದ “ಸತ್ಯದ ವಿಷಯದಲ್ಲಿ ಸಾಕ್ಷಿಹೇಳುವ” ಕೆಲಸವು ಮುಂದುವರಿದು ಭೌಗೋಳಿಕ ಪ್ರಮಾಣದಲ್ಲಿ ವಿಸ್ತಾರಗೊಳ್ಳಲಿಕ್ಕಿತ್ತು. (ಯೋಹಾನ 18:37) ಅದು ನಿಜಕ್ಕೂ ವಿಸ್ಮಯಗೊಳಿಸುವಂಥ ಪ್ರವಾದನೆಯಾಗಿದೆ! “ಎಲ್ಲಾ ಜನಾಂಗಗಳಿಗೆ” ಆ ಕೆಲಸವನ್ನು ವಿಸ್ತರಿಸುವುದು ಪಂಥಾಹ್ವಾನಕಾರಿಯಾಗಿರುವುದು; ಅದನ್ನು ‘ಎಲ್ಲಾ ಜನಾಂಗಗಳ ಹಗೆಯನ್ನು’ ಎದುರಿಸುತ್ತಾ ಮಾಡುವುದಂತೂ ಒಂದು ಅದ್ಭುತವೇ ಸರಿ. ಈ ಬೃಹತ್‌ ಕೆಲಸವು ಪೂರೈಸಲ್ಪಡುವುದರಿಂದ ಯೆಹೋವನ ಸಾರ್ವಭೌಮತೆ ಮತ್ತು ಶಕ್ತಿಯು ಉನ್ನತಕ್ಕೇರಿಸಲ್ಪಡುವುದರೊಂದಿಗೆ ಆತನ ಪ್ರೀತಿ, ಕರುಣೆ ಮತ್ತು ತಾಳ್ಮೆಯು ಸಹ ಉನ್ನತಕ್ಕೇರಿಸಲ್ಪಡುವುದು. ಅಷ್ಟೇ ಅಲ್ಲ, ಇದು ಆತನ ಸೇವಕರಿಗೆ ತಮ್ಮ ನಂಬಿಕೆ ಮತ್ತು ಭಕ್ತಿಯನ್ನು ತೋರ್ಪಡಿಸುವಂತೆ ಒಂದು ಸಂದರ್ಭವನ್ನೂ ಒದಗಿಸಿಕೊಡುವುದು.

4 ಯೇಸು ತನ್ನ ಶಿಷ್ಯರಿಗೆ ಅತಿ ಪ್ರಾಮುಖ್ಯವಾದ ಒಂದು ನೇಮಕವನ್ನು ಪೂರೈಸಲಿಕ್ಕಿದೆ ಎಂಬುದನ್ನು ತೀರ ಸ್ಪಷ್ಟವಾದ ಮಾತುಗಳಲ್ಲಿ ತಿಳಿಸಿದನು. ಸ್ವರ್ಗಕ್ಕೆ ಹೋಗುವುದಕ್ಕಿಂತ ಮುಂಚೆ ಯೇಸು ಅವರಿಗೆ ಕಾಣಿಸಿಕೊಂಡು ಹೀಗೆ ಹೇಳಿದನು: “ಪವಿತ್ರಾತ್ಮ ನಿಮ್ಮ ಮೇಲೆ ಬರಲು ನೀವು ಬಲವನ್ನು ಹೊಂದಿ ಯೆರೂಸಲೇಮಿನಲ್ಲಿಯೂ ಎಲ್ಲಾ ಯೂದಾಯ ಸಮಾರ್ಯ ಸೀಮೆಗಳಲ್ಲಿಯೂ ಭೂಲೋಕದ ಕಟ್ಟಕಡೆಯವರೆಗೂ ನನಗೆ ಸಾಕ್ಷಿಗಳಾಗಿರಬೇಕು.” (ಅ. ಕೃತ್ಯಗಳು 1:8) ವಾಸ್ತವದಲ್ಲಿ, ಇತರರು ಸಹ ಬೇಗನೆ ಅವರೊಂದಿಗೆ ಸೇರಿಕೊಳ್ಳಲಿಕ್ಕಿದ್ದರು. ಆದರೂ, ಶಿಷ್ಯರು ಕಡಿಮೆ ಸಂಖ್ಯೆಯಲ್ಲಿದ್ದರು. ದೇವರ ಬಲಾಢ್ಯವಾದ ಪವಿತ್ರಾತ್ಮವು ಈ ದೇವದತ್ತ ನೇಮಕವನ್ನು ಪೂರೈಸುವುದರಲ್ಲಿ ತಮಗೆ ಬಲವನ್ನು ನೀಡಲಿದೆ ಎಂಬುದನ್ನು ತಿಳಿದುಕೊಂಡಾಗ ಶಿಷ್ಯರಿಗೆ ಎಷ್ಟು ನೆಮ್ಮದಿಯೆನಿಸಿರಬೇಕು!

5 ಶಿಷ್ಯರು ತಾವು ಸುವಾರ್ತೆಯನ್ನು ಸಾರಬೇಕು ಮತ್ತು “ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ” ಮಾಡಬೇಕು ಎಂಬುದನ್ನು ತಿಳಿದಿದ್ದರು. (ಮತ್ತಾಯ 28:19, 20) ಆದರೆ ಎಷ್ಟು ಕೂಲಂಕಷವಾದ ಸಾಕ್ಷಿಯು ನೀಡಲ್ಪಡುವುದು ಎಂಬುದನ್ನು ಅವರು ತಿಳಿದಿರಲಿಲ್ಲ ಮತ್ತು ಅಂತ್ಯವು ಯಾವಾಗ ಬರುವುದೆಂಬುದು ಸಹ ಅವರಿಗೆ ಗೊತ್ತಿರಲಿಲ್ಲ. ಈ ವಿಷಯಗಳು ನಮಗೆ ಸಹ ತಿಳಿದಿರುವುದಿಲ್ಲ. ಇವು ಯೆಹೋವನು ಮಾತ್ರ ನಿರ್ಧರಿಸಬೇಕಾದ ವಿಷಯಗಳಾಗಿವೆ. (ಮತ್ತಾಯ 24:36) ಯೆಹೋವನಿಗೆ ತೃಪ್ತಿಯಾಗುವಷ್ಟರ ಮಟ್ಟಿಗೆ ಸಾಕ್ಷಿಕಾರ್ಯವು ನಡೆಸಲ್ಪಡುವುದಾದರೆ, ಆತನು ಈ ದುಷ್ಟ ವಿಷಯಗಳ ವ್ಯವಸ್ಥೆಗೆ ಅಂತ್ಯವನ್ನು ತರುವನು. ಆಗ ಮಾತ್ರವೇ ಸಾರುವ ಕೆಲಸವು ಯೆಹೋವನು ಉದ್ದೇಶಿಸಿದಷ್ಟರ ಮಟ್ಟಿಗೆ ನಡೆಸಲ್ಪಟ್ಟಿದೆ ಎಂದು ಕ್ರೈಸ್ತರು ಗ್ರಹಿಸಿಕೊಳ್ಳುವರು. ಈ ಅಂತ್ಯದ ಸಮಯದಲ್ಲಿ ಎಷ್ಟು ವ್ಯಾಪಕವಾಗಿ ಸಾಕ್ಷಿಕಾರ್ಯವು ನಡೆಸಲ್ಪಡುವುದು ಎಂಬುದರ ಬಗ್ಗೆ ಆ ಆದಿ ಶಿಷ್ಯರು ಊಹಿಸಿರಲಿಕ್ಕಿಲ್ಲ.

ಪ್ರಥಮ ಶತಮಾನದಲ್ಲಿ ಮಾಡಲ್ಪಟ್ಟ ಸಾಕ್ಷಿಕಾರ್ಯ

6 ಪ್ರಥಮ ಶತಮಾನದಲ್ಲಿ, ರಾಜ್ಯದ ಕುರಿತು ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸವು ದಿಗ್ಭ್ರಮೆಗೊಳಿಸುವಂಥ ಫಲಿತಾಂಶಗಳನ್ನು ತಂದಿತು. ಸಾ.ಶ. 33ರ ಪಂಚಾಶತ್ತಮದಂದು, 120 ಮಂದಿ ಶಿಷ್ಯರು ಉಪ್ಪರಿಗೆಯ ಒಂದು ಕೋಣೆಯಲ್ಲಿ ಕೂಡಿಬಂದಿದ್ದರು. ಆಗ ದೇವರ ಪವಿತ್ರಾತ್ಮವು ಅವರ ಮೇಲೆ ಸುರಿಸಲ್ಪಟ್ಟಿತು ಮತ್ತು ಅಪೊಸ್ತಲ ಪೇತ್ರನು ಈ ಅದ್ಭುತವನ್ನು ವಿವರಿಸುವ ಉತ್ತೇಜನದಾಯಕವಾದ ಒಂದು ಭಾಷಣವನ್ನು ಕೊಟ್ಟನು. ಅಂದು ಸುಮಾರು 3,000 ಮಂದಿ ನಂಬುವವರಾಗಿ ದೀಕ್ಷಾಸ್ನಾನವನ್ನು ಪಡೆದುಕೊಂಡರು. ಅದು ಕೇವಲ ಆರಂಭವಾಗಿತ್ತಷ್ಟೆ. ಸುವಾರ್ತೆ ಸಾರಲ್ಪಡುವುದನ್ನು ನಿಲ್ಲಿಸುವುದಕ್ಕಾಗಿ ಧಾರ್ಮಿಕ ಮುಖಂಡರು ಎದೆಬೊಗ್ಗಿದ ಪ್ರಯತ್ನವನ್ನು ಮಾಡಿದರಾದರೂ, ಯೆಹೋವನು “ರಕ್ಷಣೆಯ ಮಾರ್ಗದಲ್ಲಿರುವವರನ್ನು ದಿನಾಲು [ಶಿಷ್ಯರ] ಮಂಡಲಿಗೆ ಸೇರಿಸುತ್ತಿದ್ದನು.” ಶೀಘ್ರದಲ್ಲೇ “ಗಂಡಸರ ಸಂಖ್ಯೆ ಸುಮಾರು ಐದುಸಾವಿರ ತನಕ ಬೆಳೆಯಿತು.” ಅದರ ತರುವಾಯ, “ಇನ್ನು ಎಷ್ಟೋ ಮಂದಿ ಗಂಡಸರೂ ಹೆಂಗಸರೂ ಕರ್ತನಲ್ಲಿ ನಂಬಿಕೆಯಿಡುವವರಾಗಿ [ಶಿಷ್ಯರ] ಮಂಡಲಿಯಲ್ಲಿ ಸೇರಿಕೊಳ್ಳುತ್ತಿದ್ದರು.”​—⁠ಅ. ಕೃತ್ಯಗಳು 2:1-4, 8, 14, 41, 47; 4:4; 5:⁠14.

7 ಸಾ.ಶ. 36ರಲ್ಲಿ ಮತ್ತೊಂದು ಗಮನಾರ್ಹವಾದ ಬೆಳವಣಿಗೆಯು ಸಂಭವಿಸಿತು. ಅನ್ಯಜನಾಂಗದವನಾಗಿದ್ದ ಕೊರ್ನೇಲ್ಯನು ಮತಾಂತರ ಹೊಂದಿ ದೀಕ್ಷಾಸ್ನಾನವನ್ನು ಪಡೆದುಕೊಂಡನು. ಅಪೊಸ್ತಲ ಪೇತ್ರನನ್ನು ಈ ದೈವಭಕ್ತ ಮನುಷ್ಯನ ಬಳಿಗೆ ಕಳುಹಿಸುವ ಮೂಲಕವಾಗಿ, “ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ” ಮಾಡಿರಿ ಎಂದು ಯೇಸು ಕೊಟ್ಟಿದ್ದ ಆಜ್ಞೆಯು ಬೇರೆ ಬೇರೆ ದೇಶಗಳಲ್ಲಿ ಜೀವಿಸುತ್ತಿದ್ದ ಯೆಹೂದ್ಯರಿಗೆ ಮಾತ್ರ ಸೀಮಿತವಾಗಿರಲಿಲ್ಲ ಎಂದು ಯೆಹೋವನು ಸೂಚಿಸಿದನು. (ಅ. ಕೃತ್ಯಗಳು 10:44, 45) ಮುಂದಾಳುತ್ವ ವಹಿಸುತ್ತಿದ್ದವರ ಪ್ರತಿಕ್ರಿಯೆ ಏನಾಗಿತ್ತು? ಸುವಾರ್ತೆಯನ್ನು ಇತರ ಜನಾಂಗಗಳಿಗೂ​—⁠ಯೆಹೂದ್ಯೇತರರಿಗೂ​—⁠ಕೊಂಡೊಯ್ಯಬೇಕು ಎಂಬುದನ್ನು ಅಪೊಸ್ತಲರೂ ಯೂದಾಯದಲ್ಲಿದ್ದ ಹಿರೀ ಪುರುಷರೂ ಗ್ರಹಿಸಿಕೊಂಡಾಗ ಅವರು ದೇವರನ್ನು ಕೊಂಡಾಡಿದರು. (ಅ. ಕೃತ್ಯಗಳು 11:1, 18) ಈತನ್ಮಧ್ಯೆ, ಸಾರುವ ಕೆಲಸವು ಯೆಹೂದ್ಯರ ಮಧ್ಯೆ ಪ್ರತಿಫಲವನ್ನು ತರುತ್ತಾ ಇತ್ತು. ಕೆಲವು ವರ್ಷಗಳ ತರುವಾಯ, ಪ್ರಾಯಶಃ ಸಾ.ಶ. 58ರ ಸಮಯದಲ್ಲಿ, ಅನ್ಯಜನಾಂಗಗಳ ವಿಶ್ವಾಸಿಗಳೊಂದಿಗೆ “ಯೆಹೂದ್ಯರಲ್ಲಿ ಯೇಸುವನ್ನು ನಂಬಿರುವವರು ಎಷ್ಟೋ ಸಾವಿರ ಮಂದಿ” ಇದ್ದರು.​—⁠ಅ. ಕೃತ್ಯಗಳು 21:⁠20.

8 ಪ್ರಥಮ ಶತಮಾನದ ಕ್ರೈಸ್ತರ ಮಧ್ಯೆ ಅಂಕಿಸಂಖ್ಯೆಯಲ್ಲಾದ ಅಭಿವೃದ್ಧಿಯು ಮನತಟ್ಟುವಂಥದ್ದಾಗಿರುವುದಾದರೂ, ಈ ಅಂಕಿಸಂಖ್ಯೆಗಳು ನಿಜವಾದ ವ್ಯಕ್ತಿಗಳಿಗೆ ಸೂಚಿಸುತ್ತವೆ ಎಂಬುದನ್ನು ನಾವು ಮರೆಯಬಾರದು. ಅವರು ಕೇಳಿಸಿಕೊಂಡ ಬೈಬಲ್‌ ಸಂದೇಶವು ಶಕ್ತಿಯುತವಾಗಿತ್ತು. (ಇಬ್ರಿಯ 4:12) ಆ ಸಂದೇಶವನ್ನು ಸ್ವೀಕರಿಸಿದವರ ಜೀವನಗಳಲ್ಲಿ ಅದು ಎದ್ದುಕಾಣುವಂಥ ಬದಲಾವಣೆಗಳನ್ನು ತಂದಿತು. ಅವರು ತಮ್ಮ ಜೀವನಗಳನ್ನು ಶುದ್ಧಪಡಿಸಿಕೊಂಡರು, ನೂತನ ವ್ಯಕ್ತಿತ್ವವನ್ನು ಧರಿಸಿಕೊಂಡರು ಮತ್ತು ದೇವರ ಕಡೆಗೆ ತಿರುಗಿಕೊಂಡರು. (ಎಫೆಸ 4:22, 23) ಇಂದು ಸಹ ಇದು ಸತ್ಯವಾಗಿದೆ. ಮತ್ತು ಸುವಾರ್ತೆಯನ್ನು ಸ್ವೀಕರಿಸುವ ಎಲ್ಲರಿಗೂ ನಿತ್ಯಕಾಲ ಜೀವಿಸುವ ಅದ್ಭುತಕರವಾದ ಪ್ರತೀಕ್ಷೆಯಿದೆ.​—⁠ಯೋಹಾನ 3:⁠16.

ದೇವರ ಜೊತೆಕೆಲಸಗಾರರು

9 ಏನು ಸಾಧಿಸಲ್ಪಡುತ್ತಿದೆಯೋ ಅದಕ್ಕೆ ತಾವೇ ಕಾರಣರು ಎಂದು ಆದಿ ಕ್ರೈಸ್ತರು ನೆನಸಲಿಲ್ಲ. ಶುಶ್ರೂಷಕರಾಗಿ ಅವರು ಮಾಡುತ್ತಿದ್ದ ಕೆಲಸವು ‘ಪವಿತ್ರಾತ್ಮದ ಬಲದೊಂದಿಗೆ’ ಮಾಡಲ್ಪಡುತ್ತಿತ್ತು ಎಂಬುದನ್ನು ಅವರು ಗ್ರಹಿಸಿದರು. (ರೋಮಾಪುರ 15:13, 19) ಆಧ್ಯಾತ್ಮಿಕ ಬೆಳವಣಿಗೆಗೆ ಯೆಹೋವನೇ ಕಾರಣನಾಗಿದ್ದನು. ಅದೇ ಸಮಯದಲ್ಲಿ, “ದೇವರ ಜೊತೆಕೆಲಸದವರು” ಆಗಿರುವ ಸದವಕಾಶ ಮತ್ತು ಜವಾಬ್ದಾರಿ ತಮಗಿದೆ ಎಂಬುದನ್ನು ಆ ಕ್ರೈಸ್ತರು ತಿಳಿದಿದ್ದರು. (1 ಕೊರಿಂಥ 3:6-9) ಇದರ ಫಲಿತಾಂಶವಾಗಿ, ಯೇಸುವಿನ ಉತ್ತೇಜನಕ್ಕೆ ಅನುಗುಣವಾಗಿ ಆ ಕ್ರೈಸ್ತರು ತಮಗೆ ನೇಮಿಸಲ್ಪಟ್ಟಿದ್ದ ಕೆಲಸವನ್ನು ಅತ್ಯಂತ ಹುರುಪಿನಿಂದ ಮಾಡಿದರು.​—⁠ಲೂಕ 13:⁠24.

10 “ಅನ್ಯಜನರಿಗೆ ಅಪೊಸ್ತಲನಾಗಿರಲಾಗಿ” ಪೌಲನು ನೆಲ ಮತ್ತು ನೀರಿನ ಮೇಲೆ ಸಾವಿರಾರು ಕಿಲೊಮೀಟರುಗಳು ಪ್ರಯಾಣಿಸುತ್ತಾ ಏಷಿಯಾ ಮತ್ತು ಗ್ರೀಸ್‌ನಲ್ಲಿನ ರೋಮನ್‌ ಪ್ರಾಂತದಲ್ಲಿ ಅನೇಕ ಸಭೆಗಳನ್ನು ಸ್ಥಾಪಿಸಿದನು. (ರೋಮಾಪುರ 11:13) ಅವನು ರೋಮ್‌ಗೆ ಮತ್ತು ಪ್ರಾಯಶಃ ಸ್ಪೆಯಿನ್‌ಗೆ ಸಹ ಪ್ರಯಾಣಿಸಿದನು. ಈತನ್ಮಧ್ಯೆ, “ಸುನ್ನತಿಯಾದವರಿಗೆ ಸುವಾರ್ತೆಯನ್ನು ಸಾರುವ” ಕೆಲಸವನ್ನು ಪಡೆದುಕೊಂಡಿದ್ದ ಅಪೊಸ್ತಲ ಪೇತ್ರನು ಮತ್ತೊಂದು ದಿಕ್ಕಿನಲ್ಲಿ ಸಾಗುತ್ತಾ ಆ ಸಮಯದಲ್ಲಿ ಹೆಚ್ಚಿನ ಯೆಹೂದ್ಯರು ನಿವಾಸಿಸುತ್ತಿದ್ದ ಬಾಬೆಲ್‌ನಲ್ಲಿ ಸೇವೆಮಾಡಲಿಕ್ಕೆ ಹೋದನು. (ಗಲಾತ್ಯ 2:7-9; 1 ಪೇತ್ರ 5:13) ಕರ್ತನ ಕೆಲಸವನ್ನು ಹೆಚ್ಚು ಮಾಡಿದ್ದ ಇತರ ಅನೇಕರಲ್ಲಿ ತ್ರುಫೈನ ಮತ್ತು ತ್ರುಫೋಸ ಎಂಬ ಸ್ತ್ರೀಯರೂ ಇದ್ದರು. ಮತ್ತೊಬ್ಬ ಸ್ತ್ರೀಯಾದ ಪೆರ್ಸೀಸಳು ಸಹ ‘ಕರ್ತನ ಸೇವೆಯಲ್ಲಿ ಬಹಳವಾಗಿ ಪ್ರಯಾಸಪಟ್ಟಳು’ ಎಂದು ಹೇಳಲಾಗಿದೆ.​—⁠ರೋಮಾಪುರ 16:⁠12.

11 ಯೆಹೋವನು ಅವರ ಮತ್ತು ಇತರ ಹುರುಪುಳ್ಳ ಕೆಲಸಗಾರರ ಪ್ರಯತ್ನಗಳನ್ನು ಸಮೃದ್ಧವಾಗಿ ಆಶೀರ್ವದಿಸಿದನು. ಎಲ್ಲಾ ಜನಾಂಗಗಳಿಗೆ ಸಾಕ್ಷಿಯು ನೀಡಲ್ಪಡುವುದು ಎಂದು ಯೇಸು ಹೇಳಿ 30 ವರ್ಷಗಳು ಕಳೆಯುವಷ್ಟರಲ್ಲಿ ‘ಸುವಾರ್ತೆಯು ಆಕಾಶದ ಕೆಳಗಿರುವ ಸರ್ವಸೃಷ್ಟಿಗೆ ಸಾರಲ್ಪಟ್ಟಿದೆ’ ಎಂದು ಪೌಲನು ಬರೆದನು. (ಕೊಲೊಸ್ಸೆ 1:23) ಆಗ ಅಂತ್ಯವು ಬಂತೋ? ಒಂದರ್ಥದಲ್ಲಿ ಹೌದು. ಸಾ.ಶ. 70ರಲ್ಲಿ ರೋಮನ್‌ ಸೈನ್ಯಗಳು ಯೆರೂಸಲೇಮ್‌ ಮತ್ತು ಅದರ ದೇವಾಲಯವನ್ನು ಧ್ವಂಸಮಾಡಿದಾಗ, ಈ ಅಂತ್ಯವು ಯೆಹೂದಿ ವಿಷಯಗಳ ವ್ಯವಸ್ಥೆಯ ಮೇಲೆ ಬಂತು. ಆದರೂ, ಯೆಹೋವನು ಸೈತಾನನ ಭೌಗೋಳಿಕ ವಿಷಯಗಳ ವ್ಯವಸ್ಥೆಯ ಮೇಲೆ ಅಂತ್ಯವನ್ನು ತರುವುದಕ್ಕಿಂತ ಮುಂಚೆ ಹೆಚ್ಚು ವಿಸ್ತಾರವಾದ ಸಾಕ್ಷಿಯು ಕೊಡಲ್ಪಡುವುದು ಎಂದು ಆತನು ನಿಶ್ಚಯಿಸಿಕೊಂಡಿದ್ದನು.

ಇಂದು ಕೊಡಲ್ಪಡುತ್ತಿರುವ ಸಾಕ್ಷಿ

12 ಹತ್ತೊಂಬತ್ತನೇ ಶತಮಾನದ ಅಂತ್ಯಭಾಗದಲ್ಲಿ, ಧರ್ಮಭ್ರಷ್ಟತೆಯು ಮೇಲುಗೈ ಪಡೆದಿದ್ದ ದೀರ್ಘ ಅವಧಿಯ ಬಳಿಕ, ಶುದ್ಧಾರಾಧನೆಯು ಪುನಃಸ್ಥಾಪಿಸಲ್ಪಟ್ಟಿತು. ಬೈಬಲ್‌ ವಿದ್ಯಾರ್ಥಿಗಳು​—⁠ಹಿಂದೆ ಯೆಹೋವನ ಸಾಕ್ಷಿಗಳನ್ನು ಹೀಗೆ ಕರೆಯಲಾಗುತ್ತಿತ್ತು​—⁠ಇಡೀ ಲೋಕದಲ್ಲಿ ಶಿಷ್ಯರನ್ನಾಗಿ ಮಾಡಬೇಕು ಎಂಬ ಆಜ್ಞೆಯನ್ನು ಸ್ಪಷ್ಟವಾಗಿ ಅರ್ಥಮಾಡಿಕೊಂಡರು. (ಮತ್ತಾಯ 28:19, 20) 1914ರಷ್ಟಕ್ಕೆ 5,100 ಮಂದಿ ಸಾರುವ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು ಮತ್ತು ಸುವಾರ್ತೆಯು 68 ದೇಶಗಳನ್ನು ತಲಪಿತ್ತು. ಆದರೂ, ಆರಂಭದ ಆ ಬೈಬಲ್‌ ವಿದ್ಯಾರ್ಥಿಗಳು ಮತ್ತಾಯ 24:14 ಎಷ್ಟು ಪ್ರಾಮುಖ್ಯವಾಗಿದೆ ಎಂಬುದನ್ನು ಗ್ರಹಿಸಿರಲಿಲ್ಲ. 19ನೇ ಶತಮಾನವು ಮುಗಿಯುವಷ್ಟರೊಳಗೆ ಸುವಾರ್ತೆಯನ್ನು ಹೊಂದಿರುವಂಥ ಬೈಬಲು, ಬೈಬಲ್‌ ಸೊಸೈಟಿಗಳಿಂದ ಅನೇಕ ಭಾಷೆಗಳಲ್ಲಿ ಭಾಷಾಂತರಿಸಲ್ಪಟ್ಟಿತ್ತು ಮತ್ತು ಲೋಕವ್ಯಾಪಕವಾಗಿ ವಿತರಿಸಲ್ಪಟ್ಟಿತ್ತು. ಆದುದರಿಂದ ಜನಾಂಗಗಳಿಗೆ ಒಂದು ಸಾಕ್ಷಿಯು ಈಗಾಗಲೇ ನೀಡಲ್ಪಟ್ಟಿದೆ ಎಂದು ಆ ಬೈಬಲ್‌ ವಿದ್ಯಾರ್ಥಿಗಳು ಕೆಲವು ದಶಕಗಳ ವರೆಗೆ ನೆನಸಿದ್ದರು.

13 ಕ್ರಮೇಣ ಯೆಹೋವನು ತನ್ನ ಜನರಿಗೆ ಆತನ ಚಿತ್ತ ಹಾಗೂ ಉದ್ದೇಶದ ಕುರಿತು ಸ್ಪಷ್ಟವಾದ ತಿಳಿವಳಿಕೆಯನ್ನು ನೀಡಿದನು. (ಜ್ಞಾನೋಕ್ತಿ 4:18) 1928, ಡಿಸೆಂಬರ್‌ 1ರ ಕಾವಲಿನಬುರುಜು (ಇಂಗ್ಲಿಷ್‌) ಹೇಳಿದ್ದು: “ಬೈಬಲಿನ ವಿತರಣೆಯು ಮುಂತಿಳಿಸಲ್ಪಟ್ಟ [ದೇವರ] ರಾಜ್ಯದ ಸುವಾರ್ತೆಯ ಸಾರುವಿಕೆಯನ್ನು ಪೂರ್ಣಗೊಳಿಸುತ್ತದೆ ಎಂದು ನಾವು ಹೇಳಸಾಧ್ಯವಿದೆಯೋ? ಖಂಡಿತವಾಗಿಯೂ ಇಲ್ಲ! ಬೈಬಲಿನ ಈ ವಿತರಣೆಯ ಹೊರತಾಗಿಯೂ, ಭೂಮಿಯ ಮೇಲಿರುವ ದೇವರ ಸಾಕ್ಷಿಗಳ ಚಿಕ್ಕ ಗುಂಪು ಆತನ [ಉದ್ದೇಶವನ್ನು] ವಿವರಿಸುವಂಥ ಸಾಹಿತ್ಯವನ್ನು ಮುದ್ರಿಸುವುದು ಮತ್ತು ಈ ಬೈಬಲ್‌ಗಳು ಎಲ್ಲಿ ನೀಡಲ್ಪಟ್ಟಿವೆಯೋ ಆ ಮನೆಗಳನ್ನು ಸಂದರ್ಶಿಸುವುದು ಅಗತ್ಯವಾಗಿದೆ. ಇಲ್ಲವಾದರೆ ನಮ್ಮ ದಿನದಲ್ಲಿ ಮೆಸ್ಸೀಯನ ರಾಜ್ಯವು ಸ್ಥಾಪಿಸಲ್ಪಟ್ಟಿದೆ ಎಂಬ ವಿಚಾರವು ಜನರಿಗೆ ತಿಳಿಯದೆ ಹೋಗುವುದು.”

14ಕಾವಲಿನಬುರುಜು ಪತ್ರಿಕೆಯ ಆ ಸಂಚಿಕೆಯು ಮುಂದುವರಿಸುತ್ತಾ ಹೇಳಿದ್ದು: “1920ರಲ್ಲಿ . . . ಮತ್ತಾಯ 24:14ರಲ್ಲಿ ದಾಖಲಿಸಲ್ಪಟ್ಟಿರುವ ನಮ್ಮ ಕರ್ತನ ಪ್ರವಾದನೆಯನ್ನು ಬೈಬಲ್‌ ವಿದ್ಯಾರ್ಥಿಗಳು ಸರಿಯಾಗಿ ಅರ್ಥಮಾಡಿಕೊಂಡರು. ಸರ್ವಲೋಕದಲ್ಲಿ ಅನ್ಯಜನಾಂಗದವರಿಗೆ ಅಥವಾ ಎಲ್ಲಾ ಜನಾಂಗಗಳಿಗೆ ಸಾರಲ್ಪಡಬೇಕಾಗಿದ್ದ ‘ಸುವಾರ್ತೆಯು,’ ಬರಬೇಕಾಗಿದ್ದ ಒಂದು ರಾಜ್ಯದ ಕುರಿತಾದ ಸುವಾರ್ತೆಯಾಗಿರಲಿಲ್ಲ ಬದಲಿಗೆ ಮೆಸ್ಸೀಯ ರಾಜನು ಭೂಮಿಯ ಮೇಲೆ ತನ್ನ ಆಳ್ವಿಕೆಯನ್ನು ಆರಂಭಿಸಿದ್ದಾನೆ ಎಂದು ಸಾರುವಂಥ ಸುವಾರ್ತೆಯಾಗಿತ್ತು.”

15 ಸಾವಿರದ ಒಂಬೈನೂರ ಇಪ್ಪತ್ತುಗಳಲ್ಲಿದ್ದ ಆ “ಸಾಕ್ಷಿಗಳ ಚಿಕ್ಕ ಗುಂಪು” ಚಿಕ್ಕ ಗುಂಪಾಗಿಯೇ ಉಳಿಯಲಿಲ್ಲ. ಮುಂದಿನ ದಶಕಗಳಲ್ಲಿ ‘ಬೇರೆ ಕುರಿಗಳ’ “ಮಹಾ ಸಮೂಹವು” ಗುರುತಿಸಲ್ಪಟ್ಟು ಅದನ್ನು ಒಟ್ಟುಗೂಡಿಸುವ ಕೆಲಸವು ಆರಂಭವಾಯಿತು. (ಯೋಹಾನ 10:16; ಪ್ರಕಟನೆ 7:9) ಇಂದು, 66,13,829 ಮಂದಿ ಸುವಾರ್ತೆಯ ಪ್ರಚಾರಕರು 235 ದೇಶಗಳಲ್ಲಿದ್ದಾರೆ. ಇದು ಮುಂತಿಳಿಸಲ್ಪಟ್ಟ ಪ್ರವಾದನೆಯ ಎಂತಹ ಅದ್ಭುತಕರ ನೆರವೇರಿಕೆಯಾಗಿದೆ! ಹಿಂದೆಂದೂ “ರಾಜ್ಯದ ಈ ಸುವಾರ್ತೆಯು” ಇಷ್ಟು ವ್ಯಾಪಕವಾಗಿ ಸಾರಲ್ಪಟ್ಟಿರಲಿಲ್ಲ. ಹಿಂದೆಂದೂ ಭೂಮಿಯ ಮೇಲೆ ಯೆಹೋವನ ಇಷ್ಟು ಮಂದಿ ನಂಬಿಗಸ್ತ ಸೇವಕರಿರಲಿಲ್ಲ.

16 ಒಟ್ಟಿಗೆ, ಸಾಕ್ಷಿಗಳ ಈ ಮಹಾ ಸ್ತೋಮವು ಇಸವಿ 2005ರ ಸೇವಾ ವರ್ಷದಲ್ಲೂ ಕಾರ್ಯಮಗ್ನವಾಗಿತ್ತು. 235 ದೇಶಗಳಲ್ಲಿ ಸುವಾರ್ತೆಯನ್ನು ಸಾರುವ ಕೆಲಸದಲ್ಲಿ ನೂರು ಕೋಟಿಗಿಂತ ಹೆಚ್ಚು ತಾಸುಗಳು ವ್ಯಯಿಸಲ್ಪಟ್ಟವು. ಕೋಟ್ಯಂತರ ಸಂಖ್ಯೆಯಲ್ಲಿ ಪುನರ್ಭೇಟಿಗಳು ಮಾಡಲ್ಪಟ್ಟವು ಮತ್ತು ಲಕ್ಷಗಟ್ಟಲೆ ಬೈಬಲ್‌ ಅಧ್ಯಯನಗಳು ನಡೆಸಲ್ಪಟ್ಟವು. ಈ ಕೆಲಸವು, ದೇವರ ವಾಕ್ಯವನ್ನು ಇತರರೊಂದಿಗೆ ಹಂಚಿಕೊಳ್ಳಲಿಕ್ಕಾಗಿ ತಮ್ಮ ಸಮಯ ಮತ್ತು ಸಂಪನ್ಮೂಲಗಳನ್ನು ಉದಾರವಾಗಿ ಉಪಯೋಗಿಸಿದ ಯೆಹೋವನ ಸಾಕ್ಷಿಗಳಿಂದ ಸಾಧಿಸಲ್ಪಟ್ಟಿದೆ. (ಮತ್ತಾಯ 10:8) ಯೆಹೋವನು ತನ್ನ ಚಿತ್ತವನ್ನು ನೆರವೇರಿಸಲಿಕ್ಕಾಗಿ, ತನ್ನ ಬಲಾಢ್ಯವಾದ ಪವಿತ್ರಾತ್ಮದ ಶಕ್ತಿಯನ್ನು ಸದಾ ತನ್ನ ಸೇವಕರಿಗೆ ನೀಡುತ್ತಾ ಬಂದಿದ್ದಾನೆ.​—⁠ಜೆಕರ್ಯ 4:⁠6.

ಸಾಕ್ಷಿಯನ್ನು ನೀಡಲಿಕ್ಕಾಗಿ ಪ್ರಯಾಸಪಡುವುದು

17 ಸುವಾರ್ತೆಯು ಸಾರಲ್ಪಡುವುದು ಎಂದು ಯೇಸು ಹೇಳಿ ಸುಮಾರು 2,000 ವರ್ಷಗಳು ಕಳೆದಿರುವುದಾದರೂ, ದೇವಜನರು ಈ ಕೆಲಸಕ್ಕಾಗಿ ಹೊಂದಿರುವ ಹುರುಪಂತೂ ಕಡಿಮೆಯಾಗಿರುವುದಿಲ್ಲ. ನಾವು ಒಳ್ಳೆಯದನ್ನು ಮಾಡುವುದರಲ್ಲಿ ಸಹನೆಯನ್ನು ತೋರಿಸುವ ಮೂಲಕ ಯೆಹೋವನ ಗುಣಗಳಾದ ಪ್ರೀತಿ, ಕರುಣೆ ಮತ್ತು ತಾಳ್ಮೆಯನ್ನು ಪ್ರತಿಬಿಂಬಿಸುತ್ತೇವೆ. ಆತನಂತೆಯೇ ನಾವು ಸಹ ಯಾರೂ ನಾಶವಾಗುವದರಲ್ಲಿ ಇಷ್ಟಪಡದೆ, ಜನರು ಪಶ್ಚಾತ್ತಾಪಪಟ್ಟು ಯೆಹೋವನ ಬಳಿಗೆ ಹಿಂದಿರುಗಬೇಕು ಎಂದು ಬಯಸುತ್ತೇವೆ. (2 ಕೊರಿಂಥ 5:18-20; 2 ಪೇತ್ರ 3:9) ದೇವರಾತ್ಮದಿಂದ ನವಚೈತನ್ಯವನ್ನು ಹೊಂದಿರುವ ಯೆಹೋವನ ಸಾಕ್ಷಿಗಳು ಭೂಮಿಯ ಕಟ್ಟಕಡೆಯ ವರೆಗೂ ಸುವಾರ್ತೆಯನ್ನು ಹುರುಪಿನಿಂದ ಸಾರುತ್ತಿದ್ದಾರೆ. (ರೋಮಾಪುರ 12:11) ಇದರ ಫಲಿತಾಂಶವಾಗಿ, ಎಲ್ಲೆಲ್ಲೂ ಇರುವಂಥ ಜನರು ಸತ್ಯವನ್ನು ಸ್ವೀಕರಿಸುತ್ತಿದ್ದಾರೆ ಮತ್ತು ಯೆಹೋವನ ಪ್ರೀತಿಭರಿತ ಮಾರ್ಗದರ್ಶನಕ್ಕೆ ತಮ್ಮನ್ನು ಅಧೀನಪಡಿಸಿಕೊಳ್ಳುತ್ತಿದ್ದಾರೆ. ಕೆಲವು ಉದಾಹರಣೆಗಳನ್ನು ಪರಿಗಣಿಸಿರಿ.

18 ಚಾರ್ಲ್ಸ್‌ ಎಂಬವನು ಪಶ್ಚಿಮ ಕೆನ್ಯದ ಒಬ್ಬ ಬೇಸಾಯಗಾರನಾಗಿದ್ದನು. 1998ರಲ್ಲಿ ಅವನು 8,000 ಕೆ.ಜಿ.ಗಿಂತಲೂ ಹೆಚ್ಚಿನ ಹೊಗೆಸೊಪ್ಪನ್ನು ಮಾರಾಟಮಾಡಿದನು. ಇದರಿಂದಾಗಿ ಅವನು, ‘ಹೊಗೆಸೊಪ್ಪಿನ ಸರ್ವಶ್ರೇಷ್ಠ ಬೇಸಾಯಗಾರ’ ಎಂಬ ಯೋಗ್ಯತಾಪತ್ರವನ್ನು ಪಡೆದುಕೊಂಡನು. ಆ ಸಮಯದಲ್ಲಿ ಅವನು ಬೈಬಲನ್ನು ಅಧ್ಯಯನಮಾಡಲು ಆರಂಭಿಸಿದನು. ಹೊಗೆಸೊಪ್ಪನ್ನು ಬೆಳೆಸುವುದರಲ್ಲಿ ತೊಡಗಿರುವ ಒಬ್ಬ ವ್ಯಕ್ತಿ ‘ತನ್ನ ನೆರೆಯವನನ್ನು ಪ್ರೀತಿಸಬೇಕು’ ಎಂಬ ಯೇಸುವಿನ ಆಜ್ಞೆಯನ್ನು ಉಲ್ಲಂಘಿಸುತ್ತಾನೆ ಎಂದು ತಿಳಿದುಕೊಂಡನು. (ಮತ್ತಾಯ 22:39) ‘ಹೊಗೆಸೊಪ್ಪಿನ ಸರ್ವಶ್ರೇಷ್ಠ ಬೇಸಾಯಗಾರನು’ ‘ಸರ್ವಶ್ರೇಷ್ಠ ಕೊಲೆಗಾರನೂ’ ಆಗಿರಬಲ್ಲನು ಎಂದು ತೀರ್ಮಾನಿಸಿಕೊಂಡ ಚಾರ್ಲ್ಸ್‌ ತನ್ನ ಹೊಗೆಸೊಪ್ಪಿನ ಗಿಡಗಳ ಮೇಲೆ ವಿಷವನ್ನು ಸಿಂಪಡಿಸಿದನು. ಅವನು ಸಮರ್ಪಣೆ ಮತ್ತು ದೀಕ್ಷಾಸ್ನಾನವನ್ನು ಪಡೆದುಕೊಳ್ಳುವಷ್ಟು ಪ್ರಗತಿಯನ್ನು ಮಾಡಿದನು ಮತ್ತು ಈಗ ಒಬ್ಬ ರೆಗ್ಯುಲರ್‌ ಪಯನೀಯರ್‌ ಹಾಗೂ ಶುಶ್ರೂಷಾ ಸೇವಕನಾಗಿ ಸೇವೆಸಲ್ಲಿಸುತ್ತಿದ್ದಾನೆ.

19 ಭೌಗೋಳಿಕವಾಗಿ ಕೊಡಲ್ಪಡುತ್ತಿರುವ ಸಾಕ್ಷಿಯ ಮೂಲಕವಾಗಿ ಯೆಹೋವನು ಜನಾಂಗಗಳನ್ನು ನಡುಗಿಸುತ್ತಿದ್ದಾನೆ ಮತ್ತು ಸಮಸ್ತಜನಾಂಗಗಳ ಇಷ್ಟವಸ್ತುಗಳಾಗಿರುವ ಜನರು ಸತ್ಯವನ್ನು ಸ್ವೀಕರಿಸುತ್ತಿದ್ದಾರೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. (ಹಗ್ಗಾಯ 2:7) ಪೋರ್ಚುಗಲ್‌ನಲ್ಲಿ ವಾಸಿಸುವಂಥ ಪೇದ್ರೂ 13 ವರ್ಷ ಪ್ರಾಯದವನಾಗಿದ್ದಾಗ ಒಂದು ಸೆಮಿನೆರಿಯನ್ನು ಸೇರಿಕೊಂಡನು. ಒಬ್ಬ ಮಿಷನೆರಿಯಾಗಿ ಬೈಬಲನ್ನು ಬೋಧಿಸಬೇಕೆಂಬುದು ಅವನ ಗುರಿಯಾಗಿತ್ತು. ಆದರೂ ಸ್ವಲ್ಪ ಕಾಲವಾದ ಮೇಲೆ, ತಾನು ಹಾಜರಾಗುತ್ತಿದ್ದ ತರಗತಿಗಳಲ್ಲಿ ಬೈಬಲಿನ ಕಡೆಗೆ ಎಷ್ಟು ಕಡಿಮೆ ಗಮನವನ್ನು ಕೊಡಲಾಗುತ್ತಿತ್ತು ಎಂಬುದನ್ನು ಕಂಡುಕೊಂಡಾಗ ಅವನು ಸೆಮಿನೆರಿಯನ್ನು ಬಿಟ್ಟುಬಿಟ್ಟನು. ಆರು ವರ್ಷಗಳ ತರುವಾಯ ಅವನು ಲಿಸ್ಬನ್‌ನಲ್ಲಿರುವ ಒಂದು ವಿಶ್ವವಿದ್ಯಾನಿಲಯದಲ್ಲಿ ಮನಶ್ಶಾಸ್ತ್ರವನ್ನು ಓದುತ್ತಿದ್ದನು. ಅವನು ಯೆಹೋವನ ಸಾಕ್ಷಿಯಾಗಿದ್ದ ತನ್ನ ಚಿಕ್ಕಮ್ಮನೊಂದಿಗೆ ಉಳಿಯುತ್ತಿದ್ದನು ಮತ್ತು ಅವಳು ಬೈಬಲನ್ನು ಅಧ್ಯಯನ ಮಾಡುವಂತೆ ಅವನಿಗೆ ಪ್ರೋತ್ಸಾಹಿಸುತ್ತಿದ್ದಳು. ಆ ಸಮಯದಲ್ಲಿ, ಪೇದ್ರೂವಿಗೆ ದೇವರು ಅಸ್ತಿತ್ವದಲ್ಲಿದ್ದಾನೋ ಎಂಬ ಸಂಶಯವಿತ್ತು ಮತ್ತು ಒಂದು ಬೈಬಲ್‌ ಅಧ್ಯಯನವನ್ನು ಸ್ವೀಕರಿಸಬೇಕೋ ಬಾರದೋ ಎಂಬ ವಿಷಯದಲ್ಲಿ ಅವನು ಎರಡು ಮನಸ್ಸುಳ್ಳವನಾಗಿದ್ದನು. ಅವನು ತನ್ನ ಮನಶ್ಶಾಸ್ತ್ರ ಪ್ರೊಫೆಸರನ ಬಳಿ ಅನಿರ್ಧಾರತೆಯ ಕುರಿತು ಮಾತಾಡಿದನು. ಮನಶ್ಶಾಸ್ತ್ರದ ಒಂದು ಸೂತ್ರಕ್ಕನುಸಾರ, ನಿರ್ಧಾರಗಳನ್ನು ಮಾಡಲಶಕ್ತರಾದ ಜನರು ಸ್ವವಿನಾಶ ಪ್ರವೃತ್ತರಾಗಿರುತ್ತಾರೆ ಎಂದು ಆ ಪ್ರೊಫೆಸರನು ಹೇಳಿದನು. ಅದನ್ನು ಕೇಳಿಸಿಕೊಂಡ ಕೂಡಲೆ ಪೇದ್ರೂ ಒಂದು ಬೈಬಲ್‌ ಅಧ್ಯಯನವನ್ನು ಸ್ವೀಕರಿಸಬೇಕು ಎಂದು ನಿರ್ಧರಿಸಿದನು. ಅವನು ಇತ್ತೀಚೆಗೆ ದೀಕ್ಷಾಸ್ನಾನವನ್ನು ಪಡೆದುಕೊಂಡನು ಮತ್ತು ಈಗ ಅವನು ಸಹ ಬೈಬಲ್‌ ಅಧ್ಯಯನಗಳನ್ನು ನಡೆಸುತ್ತಿದ್ದಾನೆ.

20 ಎಲ್ಲಾ ಜನಾಂಗಗಳಿಗೆ ಇನ್ನು ಎಷ್ಟು ವಿಸ್ತಾರವಾಗಿ ಸಾಕ್ಷಿಯು ನೀಡಲ್ಪಡುವುದು ಅಥವಾ ಅಂತ್ಯವು ಯಾವ ದಿನ ಮತ್ತು ಯಾವ ಗಳಿಗೆಯಲ್ಲಿ ಬರುವುದು ಎಂಬುದು ನಮಗೆ ಈಗಲೂ ತಿಳಿದಿಲ್ಲದ ಸಂಗತಿಯಾಗಿದೆ. ಅದು ಬೇಗನೆ ಬರುವುದು ಎಂಬುದು ಮಾತ್ರ ನಮಗೆ ಗೊತ್ತು. ಸುವಾರ್ತೆಯು ಇಷ್ಟು ವಿಸ್ತಾರವಾಗಿ ಸಾರಲ್ಪಡುತ್ತಿರುವುದು, ದೇವರ ರಾಜ್ಯವು ಮಾನವ ಸರಕಾರಗಳನ್ನು ತೆಗೆದುಹಾಕಿ ತನ್ನ ಆಳ್ವಿಕೆಯನ್ನು ನಡಿಸಲಿಕ್ಕಿರುವ ಸಮಯ ಹತ್ತಿರವಿದೆ ಎಂಬುದಕ್ಕೆ ಸೂಚಿಸುವ ಹಲವಾರು ಸೂಚನೆಗಳಲ್ಲಿ ಒಂದು ಸೂಚನೆಯಾಗಿದೆ ಎಂದು ತಿಳಿಯುವುದರಲ್ಲಿ ನಮಗೆ ಸಂತೋಷವಾಗುತ್ತದೆ. (ದಾನಿಯೇಲ 2:44) ಕಳೆದುಹೋಗುತ್ತಿರುವ ಪ್ರತಿಯೊಂದು ವರ್ಷದಲ್ಲಿ ಸುವಾರ್ತೆಗೆ ಪ್ರತಿಕ್ರಿಯೆ ತೋರಿಸುವಂತೆ ಕೋಟ್ಯನುಕೋಟಿ ವ್ಯಕ್ತಿಗಳಿಗೆ ಅವಕಾಶವು ಕೊಡಲ್ಪಡುತ್ತಿದೆ ಮತ್ತು ಇದು ನಮ್ಮ ದೇವರಾದ ಯೆಹೋವನನ್ನು ಮಹಿಮೆಪಡಿಸುತ್ತದೆ. ನಂಬಿಗಸ್ತರಾಗಿ ಉಳಿದು ಲೋಕವ್ಯಾಪಕವಾಗಿರುವ ನಮ್ಮ ಸಹೋದರರ ಸಮೇತ ಎಲ್ಲಾ ಜನಾಂಗಗಳಿಗೆ ಸಾಕ್ಷಿಯನ್ನು ನೀಡುವ ಕೆಲಸದಲ್ಲಿ ಕಾರ್ಯಮಗ್ನರಾಗಿರುವುದು ನಮ್ಮ ದೃಢಸಂಕಲ್ಪವಾಗಿರಲಿ. ಹೀಗೆ ಮಾಡುವ ಮೂಲಕ, ನಾವು ನಮ್ಮನ್ನೂ ನಮಗೆ ಕಿವಿಗೊಡುವಂಥ ಇತರರನ್ನೂ ರಕ್ಷಿಸುವೆವು.​—⁠1 ತಿಮೊಥೆಯ 4:⁠16.

ನಿಮಗೆ ಜ್ಞಾಪಕವಿದೆಯೇ?

ಮತ್ತಾಯ 24:14 ಏಕೆ ತುಂಬ ಗಮನಾರ್ಹವಾದ ಪ್ರವಾದನೆಯಾಗಿದೆ?

• ಆದಿ ಕ್ರೈಸ್ತರು ಸುವಾರ್ತೆಯನ್ನು ಸಾರಲಿಕ್ಕಾಗಿ ಯಾವ ಪ್ರಯತ್ನಗಳನ್ನು ಮಾಡಿದರು, ಮತ್ತು ಇದರ ಫಲಿತಾಂಶವೇನಾಗಿತ್ತು?

• ಎಲ್ಲಾ ಜನಾಂಗಗಳಿಗೆ ಸಾಕ್ಷಿನೀಡಬೇಕು ಎಂಬುದನ್ನು ಬೈಬಲ್‌ ವಿದ್ಯಾರ್ಥಿಗಳು ಅರ್ಥಮಾಡಿಕೊಂಡದ್ದು ಹೇಗೆ?

• ಕಳೆದ ಸೇವಾ ವರ್ಷದಲ್ಲಿನ ಯೆಹೋವನ ಜನರ ಚಟುವಟಿಕೆಯನ್ನು ಪರಿಗಣಿಸುವಾಗ, ನಿಮಗೆ ಯಾವ ವಿಷಯವು ಹಿಡಿಸಿತು?

[ಅಧ್ಯಯನ ಪ್ರಶ್ನೆಗಳು]

1. ಮತ್ತಾಯ 24:14ರಲ್ಲಿ ದಾಖಲಿಸಲ್ಪಟ್ಟಿರುವ ಪ್ರವಾದನೆಯನ್ನು ಶಿಷ್ಯರು ಪ್ರಥಮ ಬಾರಿ ಯಾವಾಗ ಮತ್ತು ಎಲ್ಲಿ ಕೇಳಿಸಿಕೊಂಡರು?

2. ಯಾವ ಅಪಾಯಗಳು ಮತ್ತು ಪಂಥಾಹ್ವಾನಗಳನ್ನು ಶಿಷ್ಯರು ಎದುರಿಸಲಿಕ್ಕಿದ್ದರು?

3. ಮತ್ತಾಯ 24:14ರಲ್ಲಿ ದಾಖಲಿಸಲ್ಪಟ್ಟಿರುವ ಯೇಸುವಿನ ಮಾತುಗಳು ನಿಜಕ್ಕೂ ವಿಸ್ಮಯಗೊಳಿಸುವಂಥವುಗಳಾಗಿವೆ ಏಕೆ?

4. ಸಾಕ್ಷಿಕಾರ್ಯವನ್ನು ಮಾಡುವಂತೆ ಯಾರಿಗೆ ತಿಳಿಸಲ್ಪಟ್ಟಿತು, ಮತ್ತು ಯೇಸು ನೆಮ್ಮದಿದಾಯಕವಾದ ಯಾವ ಮಾತುಗಳನ್ನಾಡಿದನು?

5. ಸಾಕ್ಷಿಕಾರ್ಯದ ಬಗ್ಗೆ ಯೇಸುವಿನ ಶಿಷ್ಯರಿಗೆ ಯಾವ ವಿಷಯಗಳು ತಿಳಿದಿರಲಿಲ್ಲ?

6. ಸಾ.ಶ. 33ರ ಪಂಚಾಶತ್ತಮದಂದು ಮತ್ತು ಅದರ ತುಸು ಅನಂತರ ಏನು ಸಂಭವಿಸಿತು?

7. ಕೊರ್ನೇಲ್ಯನ ಮತಾಂತರವು ಏಕೆ ಒಂದು ಗಮನಾರ್ಹವಾದ ಬೆಳವಣಿಗೆಯಾಗಿತ್ತು?

8. ಸುವಾರ್ತೆಯು ಜನರ ಮೇಲೆ ಹೇಗೆ ಪ್ರಭಾವಬೀರುತ್ತದೆ?

9. ತಮಗೆ ಯಾವ ಸದವಕಾಶ ಮತ್ತು ಜವಾಬ್ದಾರಿ ಇದೆ ಎಂದು ಆದಿ ಕ್ರೈಸ್ತರು ಗ್ರಹಿಸಿದರು?

10. ಎಲ್ಲಾ ಜನಾಂಗಗಳಿಗೆ ಸಾಕ್ಷಿಯನ್ನು ನೀಡಲಿಕ್ಕಾಗಿ ಆದಿ ಕ್ರೈಸ್ತರಲ್ಲಿ ಕೆಲವರು ಯಾವ ಪ್ರಯತ್ನಗಳನ್ನು ಮಾಡಿದರು?

11. ಶಿಷ್ಯರು ಮಾಡಿದ ಪ್ರಯತ್ನಗಳನ್ನು ಯೆಹೋವನು ಹೇಗೆ ಆಶೀರ್ವದಿಸಿದನು?

12. ಸಾರುವಂತೆ ಕೊಡಲ್ಪಟ್ಟಿದ್ದ ಆಜ್ಞೆಯನ್ನು ಆರಂಭದ ಬೈಬಲ್‌ ವಿದ್ಯಾರ್ಥಿಗಳು ಹೇಗೆ ಅರ್ಥಮಾಡಿಕೊಂಡಿದ್ದರು?

13, 14. ಇಸವಿ 1928ರ ಕಾವಲಿನಬುರುಜುವಿನ ಒಂದು ಸಂಚಿಕೆಯಲ್ಲಿ ದೇವರ ಚಿತ್ತ ಮತ್ತು ಉದ್ದೇಶದ ಕುರಿತು ಯಾವ ಸ್ಪಷ್ಟವಾದ ತಿಳಿವಳಿಕೆಯು ನೀಡಲ್ಪಟ್ಟಿತು?

15. ಸಾವಿರದ ಒಂಬೈನೂರ ಇಪ್ಪತ್ತುಗಳಿಂದ ಸಾಕ್ಷಿಕಾರ್ಯವು ಹೇಗೆ ವಿಸ್ತಾರಗೊಂಡಿದೆ?

16. ಕಳೆದ ಸೇವಾ ವರ್ಷದಲ್ಲಿ ಏನನ್ನು ಸಾಧಿಸಲಾಯಿತು? (27-30ನೇ ಪುಟಗಳಲ್ಲಿರುವ ಚಾರ್ಟನ್ನು ನೋಡಿರಿ.)

17. ಸುವಾರ್ತೆಯನ್ನು ಸಾರುವುದರ ಬಗ್ಗೆ ಯೇಸು ಹೇಳಿದ ಮಾತುಗಳಿಗೆ ಯೆಹೋವನ ಜನರು ಹೇಗೆ ಪ್ರತಿಕ್ರಿಯೆಯನ್ನು ತೋರಿಸುತ್ತಿದ್ದಾರೆ?

18, 19. ಸುವಾರ್ತೆಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ತೋರಿಸಿದವರ ಯಾವ ಅನುಭವಗಳನ್ನು ನೀವು ಹೇಳಬಲ್ಲಿರಿ?

20. ಜನಾಂಗಗಳಿಗೆ ಇಷ್ಟು ವಿಸ್ತಾರವಾದ ಸಾಕ್ಷಿಯು ನೀಡಲ್ಪಡುತ್ತಿದೆ ಎಂಬ ವಿಷಯದಲ್ಲಿ ನಾವೇಕೆ ಸಂತೋಷಿತರಾಗಿರಬಲ್ಲೆವು?

[ಪುಟ 27-30ರಲ್ಲಿರುವ ಚಾರ್ಟು]

ಲೋಕವ್ಯಾಪಕವಾಗಿರುವ ಯೆಹೋವನ ಸಾಕ್ಷಿಗಳ 2005ನೇ ಇಸವಿಯ ಸೇವಾ ವರ್ಷದ ವರದಿ

(ಬೌಂಡ್‌ ವಾಲ್ಯುಮ್‌ ನೋಡಿ)

[ಪುಟ 25ರಲ್ಲಿರುವ ಭೂಪಟ/ಚಿತ್ರಗಳು]

ಕೊರ್ನೇಲ್ಯ ಮತ್ತು ಅವನ ಕುಟುಂಬದ ಸದಸ್ಯರಿಗೆ ಸಾಕ್ಷಿಕೊಡುವಂತೆ ಯೆಹೋವನು ಪೇತ್ರನನ್ನು ನಿರ್ದೇಶಿಸಿದನು

[ಪುಟ 24ರಲ್ಲಿರುವ ಚಿತ್ರ]

ಪೌಲನು ಸುವಾರ್ತೆಯನ್ನು ಸಾರಲಿಕ್ಕಾಗಿ ನೆಲ ಮತ್ತು ನೀರಿನ ಮೇಲೆ ಸಾವಿರಾರು ಕಿಲೊಮೀಟರುಗಳು ಪ್ರಯಾಣಿಸಿದನು