ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ನೂತನ ಲೋಕದಲ್ಲಿ ನಿಜ ಸಮೃದ್ಧಿ

ದೇವರ ನೂತನ ಲೋಕದಲ್ಲಿ ನಿಜ ಸಮೃದ್ಧಿ

ದೇವರ ನೂತನ ಲೋಕದಲ್ಲಿ ನಿಜ ಸಮೃದ್ಧಿ

ಕ್ರೈಸ್ತ ಪತಿಯೂ ತಂದೆಯೂ ಆಗಿರುವ ಡೇವಿಡ್‌, * ತಾನು ಸರಿಯಾದದ್ದನ್ನೇ ಮಾಡುತ್ತಿದ್ದೇನೆ ಎಂಬ ಭರವಸೆಯಿಂದ ಕೆಲಸಕ್ಕಾಗಿ ಯುನೈಟೆಡ್‌ ಸ್ಟೇಟ್ಸ್‌ಗೆ ಹೋದನು. ಹೆಂಡತಿ ಮಕ್ಕಳನ್ನು ಬಿಟ್ಟು ಹೋಗಲು ಅವನಿಗೆ ಮನಸ್ಸಿರಲಿಲ್ಲವಾದರೂ, ತಾನು ಹೆಚ್ಚು ಹಣವನ್ನು ಸಂಪಾದಿಸುವುದಾದರೆ ಇಡೀ ಕುಟುಂಬಕ್ಕೆ ಒಳ್ಳೇ ಜೀವನವನ್ನು ಒದಗಿಸಬಲ್ಲೆ ಎಂದು ಅವನು ಭಾವಿಸಿದನು. ಆದುದರಿಂದ ಅವನು ನ್ಯೂ ಯಾರ್ಕ್‌ಗೆ ಬರುವಂತೆ ಸಂಬಂಧಿಕರಿಂದ ಬಂದ ಆಮಂತ್ರಣವನ್ನು ಸ್ವೀಕರಿಸಿ, ಬೇಗನೆ ಅಲ್ಲಿ ಒಂದು ಉದ್ಯೋಗವನ್ನು ಕಂಡುಕೊಂಡನು.

ಆದರೆ ತಿಂಗಳುಗಳು ಕಳೆದಂತೆ ಡೇವಿಡ್‌ನ ಭರವಸಾರ್ಹ ಹೊರನೋಟವು ಮಾಸಿಹೋಗಲಾರಂಭಿಸಿತು. ಆಧ್ಯಾತ್ಮಿಕ ಚಟುವಟಿಕೆಗಳಿಗಾಗಿ ಅವನಲ್ಲಿ ಕೇವಲ ಕೊಂಚವೇ ಸಮಯವಿರುತ್ತಿತ್ತು. ಒಂದು ಸಮಯದಲ್ಲಿ, ಅವನು ದೇವರಲ್ಲಿನ ನಂಬಿಕೆಯನ್ನು ಹೆಚ್ಚುಕಡಿಮೆ ಕಳೆದುಕೊಂಡು ಬಿಟ್ಟನು. ಅನಂತರ ಅವನು ಒಂದು ಅನೈತಿಕ ಶೋಧನೆಗೆ ಒಳಗಾದನು. ಆಗ ಅವನ ಕಣ್ಣುಗಳು ತೆರೆಯಲ್ಪಟ್ಟವು ಹಾಗೂ ಅವನು ತನ್ನ ಪರಿಸ್ಥಿತಿಯನ್ನು ಗ್ರಹಿಸಿಕೊಂಡನು. ಭೌತಿಕ ಸಮೃದ್ಧಿಯನ್ನು ಹೊಂದಬೇಕೆಂಬ ಅವನ ಗುರಿಯು, ಅವನ ಹೃದಯಕ್ಕೆ ಪ್ರಿಯವಾಗಿದ್ದ ಎಲ್ಲ ವಿಷಯಗಳಿಂದ ಅವನನ್ನು ನಿಧಾನವಾಗಿ ದೂರ ತೆಗೆದುಕೊಂಡು ಹೋಗುತ್ತಿತ್ತು. ಅವನು ಬದಲಾವಣೆಗಳನ್ನು ಮಾಡಲೇಬೇಕಾದ ಸಮಯವು ಅದಾಗಿತ್ತು.

ಡೇವಿಡ್‌ನಂತೆ ಇಂದು ಪ್ರತಿ ವರುಷ ಅನೇಕರು ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸುವ ನಿರೀಕ್ಷೆಯಿಂದ ತಮ್ಮ ಬಡದೇಶವನ್ನು ಬಿಟ್ಟು ಬೇರೊಂದು ದೇಶಕ್ಕೆ ಸ್ಥಳಾಂತರಿಸುತ್ತಿದ್ದಾರೆ. ಆದರೆ ಇದಕ್ಕಾಗಿ ಅವರು ಅನೇಕವೇಳೆ ಭೀಕರವಾದ ಆಧ್ಯಾತ್ಮಿಕ ಬೆಲೆಯನ್ನು ತೆರಬೇಕಾಗುತ್ತದೆ. ‘ಒಬ್ಬ ಕ್ರೈಸ್ತನು ಪ್ರಾಪಂಚಿಕ ಐಶ್ವರ್ಯವನ್ನು ಬೆನ್ನಟ್ಟುತ್ತಾ ಅದೇ ಸಮಯದಲ್ಲಿ ದೇವರ ವಿಷಯಗಳಲ್ಲಿಯೂ ಐಶ್ವರ್ಯವಂತನಾಗಿರಲು ಸಾಧ್ಯವಿದೆಯೆ?’ ಎಂದು ಕೆಲವರು ನೆನಸುತ್ತಾರೆ. ಇದು ಸಾಧ್ಯವಿದೆ ಎಂಬುದಾಗಿ ಪ್ರಖ್ಯಾತ ಬರಹಗಾರರೂ ಧಾರ್ಮಿಕ ಬೋಧಕರೂ ತಿಳಿಸುತ್ತಾರೆ. ಆದರೆ ಡೇವಿಡ್‌ ಮತ್ತು ಇತರರು ಅನುಭವದಿಂದ ಕಲಿತಂತೆ, ಒಂದನ್ನು ಕಳೆದುಕೊಳ್ಳದೆ ಇನ್ನೊಂದನ್ನು ಗಳಿಸುವುದು ಕಷ್ಟಕರ ಸಂಗತಿಯಾಗಿದೆ.​—⁠ಲೂಕ 18:24.

ಹಣವು ಕೆಟ್ಟದ್ದಲ್ಲ

ಹಣವು ಮಾನವನ ನಿರ್ಮಾಣವಾಗಿದೆ. ಅನೇಕ ಇತರ ನಿರ್ಮಾಣಗಳಂತೆ ಇದು ಸಹ ತಾನೇ ಕೆಟ್ಟದ್ದಾಗಿ ಅಥವಾ ತಪ್ಪಾಗಿ ಇರುವುದಿಲ್ಲ. ವಾಸ್ತವದಲ್ಲಿ, ಇದೊಂದು ವಿನಿಮಯ ಮಾಧ್ಯಮವಾಗಿದೆ ಅಷ್ಟೆ. ಆದುದರಿಂದ, ಸರಿಯಾಗಿ ಉಪಯೋಗಿಸಲ್ಪಡುವಲ್ಲಿ ಇದು ಒಂದು ಉತ್ತಮ ಉದ್ದೇಶವನ್ನು ಪೂರೈಸಬಲ್ಲದು. ಉದಾಹರಣೆಗೆ, ಬಡತನಕ್ಕೆ ಸಂಬಂಧಿಸಿದ ಸಮಸ್ಯೆಗಳ ವಿರುದ್ಧ “ಧನವು ಆಶ್ರಯ” ಇಲ್ಲವೆ ಸಂರಕ್ಷಣೆಯಾಗಿದೆ ಎಂದು ಬೈಬಲ್‌ ಅಂಗೀಕರಿಸುತ್ತದೆ. (ಪ್ರಸಂಗಿ 7:​12, NIBV) ಕೆಲವರಿಗಾದರೊ, “ಧನವು ಎಲ್ಲವನ್ನೂ ಒದಗಿಸಿ ಕೊಡುವದು” ಎಂಬ ಭಾವನೆಯಿದೆ ಎಂದು ಕಾಣುತ್ತದೆ.​—⁠ಪ್ರಸಂಗಿ 10:19.

ಶಾಸ್ತ್ರವಚನವು ಸೋಮಾರಿತನವನ್ನು ವಿರೋಧಿಸುತ್ತದೆ ಮತ್ತು ಕಠಿನ ಪರಿಶ್ರಮವನ್ನು ಉತ್ತೇಜಿಸುತ್ತದೆ. ನಾವು ನಮ್ಮ ಮನೆಯವರಿಗೆ ಅಗತ್ಯವಿರುವುದನ್ನು ಒದಗಿಸಬೇಕು ಮತ್ತು ಒಂದುವೇಳೆ ನಮ್ಮಲ್ಲಿ ಸ್ವಲ್ಪ ಹೆಚ್ಚಿರುವುದಾದರೆ “ಕಷ್ಟದಲ್ಲಿರುವವರಿಗೆ ಕೊಡುವದಕ್ಕೆ” ನಮ್ಮಿಂದಾಗುವುದು. (ಎಫೆಸ 4:28; 1 ತಿಮೊಥೆಯ 5:⁠8) ಅಷ್ಟುಮಾತ್ರವಲ್ಲದೆ, ಸಂನ್ಯಾಸಿಯಂತೆ ಜೀವಿಸುವ ಬದಲಾಗಿ ನಮ್ಮ ಆಸ್ತಿಪಾಸ್ತಿಗಳನ್ನು ಅನುಭವಿಸುವಂತೆ ಬೈಬಲ್‌ ಉತ್ತೇಜಿಸುತ್ತದೆ. ನಮ್ಮ “ಪಾಲಿಗೆ ಬಂದದ್ದನ್ನು ಹೊಂದಿ,” ನಮ್ಮ ಪ್ರಯಾಸದಲ್ಲಿ ಸಂತೋಷಪಡುವಂತೆ ನಮಗೆ ಹೇಳಲಾಗಿದೆ. (ಪ್ರಸಂಗಿ 5:​18-20) ವಾಸ್ತವದಲ್ಲಿ, ಐಶ್ವರ್ಯವಂತರಾಗಿದ್ದ ಅನೇಕ ನಂಬಿಗಸ್ತ ಸ್ತ್ರೀಪುರುಷರ ಉದಾಹರಣೆಗಳು ಬೈಬಲಿನಲ್ಲಿವೆ.

ಐಶ್ವರ್ಯವಂತರಾಗಿದ್ದ ನಂಬಿಗಸ್ತ ಪುರುಷರು

ದೇವರ ನಂಬಿಗಸ್ತ ಸೇವಕನಾದ ಅಬ್ರಹಾಮನು ಅಸಂಖ್ಯಾತ ದನಕುರಿಗಳನ್ನು, ಬೆಳ್ಳಿಬಂಗಾರಗಳನ್ನು ಮತ್ತು ನೂರಾರು ದಾಸದಾಸಿಯರನ್ನು ಹೊಂದಿದ್ದನು. (ಆದಿಕಾಂಡ 12:5; 13:​2, 6, 7) ನೀತಿವಂತನಾಗಿದ್ದ ಯೋಬನ ಬಳಿಯಲ್ಲಿಯೂ ಬಹಳಷ್ಟು ಐಶ್ವರ್ಯವಿತ್ತು. ಅವನು ಬಹಳಷ್ಟು ಸ್ವಾಸ್ತ್ಯವನ್ನು, ಸೇವಕರನ್ನು ಮತ್ತು ಬೆಳ್ಳಿಬಂಗಾರಗಳನ್ನು ಹೊಂದಿದ್ದನು. (ಯೋಬ 1:3; 42:11, 12) ಇಂದಿನ ಮಟ್ಟಕ್ಕೆ ಹೋಲಿಸುವಾಗಲೂ ಈ ಪುರುಷರು ಐಶ್ವರ್ಯವಂತರಾಗಿದ್ದರು. ಆದರೆ ಅವರು ದೇವರ ವಿಷಯಗಳಲ್ಲಿಯೂ ಐಶ್ವರ್ಯವಂತರಾಗಿದ್ದರು.

ಅಪೊಸ್ತಲ ಪೌಲನು ಅಬ್ರಹಾಮನನ್ನು “ನಂಬುವವರೆಲ್ಲರಿಗೂ . . . ಮೂಲತಂದೆ” ಎಂದು ಕರೆದನು. ಅಬ್ರಹಾಮನು ಜಿಪುಣನಾಗಿರಲಿಲ್ಲ ಇಲ್ಲವೆ ತನ್ನ ಆಸ್ತಿಪಾಸ್ತಿಗಳಿಗೆ ತೀರ ಅಂಟಿಕೊಂಡಿರಲಿಲ್ಲ. (ರೋಮಾಪುರ 4:11; ಆದಿಕಾಂಡ 13:9; 18:1-8) ಅದೇ ರೀತಿಯಲ್ಲಿ, ಸ್ವತಃ ದೇವರೇ ಯೋಬನನ್ನು “ನಿರ್ದೋಷಿಯೂ ಯಥಾರ್ಥಚಿತ್ತನೂ” ಆದ ಮನುಷ್ಯನು ಎಂಬುದಾಗಿ ವರ್ಣಿಸಿದನು. (ಯೋಬ 1:⁠8) ಮಾತ್ರವಲ್ಲದೆ, ಬಡವರಿಗೆ ಮತ್ತು ಗತಿಯಿಲ್ಲದವರಿಗೆ ಸಹಾಯಮಾಡಲು ಯೋಬನು ಯಾವಾಗಲೂ ಸಿದ್ಧನಿದ್ದನು. (ಯೋಬ 29:​12-16) ಅಬ್ರಹಾಮ ಮತ್ತು ಯೋಬ ತಮ್ಮ ಐಶ್ವರ್ಯದ ಮೇಲಲ್ಲ, ದೇವರ ಮೇಲೆ ಭರವಸೆಯಿಟ್ಟಿದ್ದರು.​—⁠ಆದಿಕಾಂಡ 14:​22-24; ಯೋಬ 1:​21, 22; ರೋಮಾಪುರ 4:​9-12.

ರಾಜ ಸೊಲೊಮೋನನು ಇನ್ನೊಂದು ಉದಾಹರಣೆಯಾಗಿದ್ದಾನೆ. ಯೆರೂಸಲೇಮಿನಲ್ಲಿದ್ದ ದೇವರ ಸಿಂಹಾಸನದ ಬಾಧ್ಯಸ್ಥನಾದ ಸೊಲೊಮೋನನು ದೇವರಿಂದ ವಿವೇಕವನ್ನು ಆಶೀರ್ವಾದವಾಗಿ ಪಡೆದುಕೊಂಡಿದ್ದನು, ಮಾತ್ರವಲ್ಲದೆ ಐಶ್ವರ್ಯ ಮತ್ತು ಘನತೆಯನ್ನೂ ಹೇರಳವಾಗಿ ಹೊಂದಿದ್ದನು. (1 ಅರಸು 3:​4-14) ಅವನ ಜೀವನದ ಹೆಚ್ಚಿನ ಸಮಯದಲ್ಲಿ ಅವನು ದೇವರಿಗೆ ನಂಬಿಗಸ್ತನಾಗಿದ್ದನು. ಆದರೆ ಅವನ ಜೀವನದ ಅಂತಿಮ ವರುಷಗಳಲ್ಲಿ ಸೊಲೊಮೋನನು “ಯೆಹೋವನಲ್ಲಿಟ್ಟಿದ್ದ ಯಥಾರ್ಥಭಕ್ತಿಯನ್ನು ಕಳೆದುಕೊಂಡನು.” (1 ಅರಸು 11:​1-8) ಅವನ ದುಃಖಕರ ಅನುಭವವು, ಪ್ರಾಪಂಚಿಕ ಸಮೃದ್ಧಿಯ ಕೆಲವು ಸಾಮಾನ್ಯ ಪಾಶಗಳನ್ನು ದೃಷ್ಟಾಂತಿಸುತ್ತದೆ. ಕೆಲವನ್ನು ಪರಿಗಣಿಸಿರಿ.

ಐಶ್ವರ್ಯದ ಪಾಶಗಳು

ಅತಿ ಗಂಭೀರ ಅಪಾಯವು, ಹಣ ಪ್ರೇಮಿಯಾಗುವುದು ಮತ್ತು ಹಣದಿಂದ ಖರೀದಿಸಬಹುದಾದ ವಸ್ತುಗಳನ್ನು ಪ್ರೀತಿಸುವುದೇ ಆಗಿದೆ. ಐಶ್ವರ್ಯವು, ಎಂದಿಗೂ ತೃಪ್ತಿಪಡಿಸಲಾಗದ ಅಭಿಲಾಷೆಯನ್ನು ಉಂಟುಮಾಡುತ್ತದೆ. ಸೊಲೊಮೋನನು ತನ್ನ ಆಳ್ವಿಕೆಯ ಆರಂಭದಲ್ಲಿ ಇಂಥ ರೀತಿಯ ಮನೋಭಾವವನ್ನು ಇತರರಲ್ಲಿ ಗಮನಿಸಿದ್ದನು. ಅವನು ಬರೆದದ್ದು: “ಬೆಳ್ಳಿಯನ್ನು ಆಶಿಸುವವನಿಗೆ ಎಷ್ಟು ಬೆಳ್ಳಿಯಿಂದಲೂ ತೃಪ್ತಿಯಾಗದು; ಸಮೃದ್ಧಿಯನ್ನು ಬಯಸುತ್ತಲೇ ಇರುವವನಿಗೆ ಆದಾಯವೆಷ್ಟಾದರೂ ಸಾಲದು. ಇದು ಸಹ ವ್ಯರ್ಥ.” (ಪ್ರಸಂಗಿ 5:10) ಅನಂತರ ಯೇಸು ಮತ್ತು ಪೌಲನು, ಈ ಮೋಸಕಾರಕ ಆಶೆಯ ವಿರುದ್ಧ ಕ್ರೈಸ್ತರನ್ನು ಎಚ್ಚರಿಸಿದರು.​—⁠ಮಾರ್ಕ 4:​18, 19; 2 ತಿಮೊಥೆಯ 3:⁠2.

ಹಣವು ವಸ್ತುಗಳನ್ನು ಗಳಿಸಲು ಒಂದು ಮಾಧ್ಯಮವಾಗಿರುವ ಬದಲಿಗೆ ಅದೇ ನಮಗೆ ಸರ್ವಸ್ವವಾದಾಗ, ನಾವು ಎಲ್ಲ ರೀತಿಯ ನೈತಿಕ ಶೋಧನೆಗಳಿಗೆ ಬಲಿಯಾಗುತ್ತೇವೆ. ಇವುಗಳಲ್ಲಿ ಸುಳ್ಳುಹೇಳುವುದು, ಕದಿಯುವುದು ಮತ್ತು ಮೋಸಮಾಡುವುದು ಸೇರಿರುತ್ತವೆ. ಕ್ರಿಸ್ತನ ಅಪೊಸ್ತಲರಲ್ಲಿ ಒಬ್ಬನಾದ ಇಸ್ಕರಿಯೋತ ಯೂದನು ಬರೀ 30 ಬೆಳ್ಳಿ ನಾಣ್ಯಕ್ಕಾಗಿ ತನ್ನ ಯಜಮಾನನಿಗೆ ದ್ರೋಹಬಗೆದನು. (ಮಾರ್ಕ 14:11; ಯೋಹಾನ 12:⁠6) ಹಣದ ಕಡೆಗಿನ ವ್ಯಾಮೋಹದಿಂದಾಗಿ, ಕೆಲವರು ದೇವರಿಗೆ ಬದಲಾಗಿ ಹಣವನ್ನೇ ಆರಾಧಿಸಲಾರಂಭಿಸಿದ್ದಾರೆ. (1 ತಿಮೊಥೆಯ 6:10) ಆದುದರಿಂದ, ಹಣವನ್ನು ಸಂಪಾದಿಸುವುದರ ಹಿಂದಿರುವ ತಮ್ಮ ನಿಜ ಹೇತುವನ್ನು ಕ್ರೈಸ್ತರು ಯಾವಾಗಲೂ ಪ್ರಾಮಾಣಿಕವಾಗಿ ಪರೀಕ್ಷಿಸಿಕೊಳ್ಳುತ್ತಿರಬೇಕು.​—⁠ಇಬ್ರಿಯ 13:⁠5.

ಐಶ್ವರ್ಯದ ಬೆನ್ನಟ್ಟುವಿಕೆಯು ಹೆಚ್ಚು ನವಿರಾದ ಅಪಾಯಗಳನ್ನೂ ತಂದೊಡ್ಡುತ್ತದೆ. ಮೊದಲನೆಯದಾಗಿ, ಬಹಳಷ್ಟು ಐಶ್ವರ್ಯವು ಒಬ್ಬನಲ್ಲಿರುವಾಗ ಅವನು ಸ್ವಾವಲಂಬಿಯಾಗುತ್ತಾನೆ. ‘ಐಶ್ವರ್ಯದಿಂದುಂಟಾಗುವ ಮೋಸದ’ ಕುರಿತು ಯೇಸು ಹೇಳಿದಾಗ ಅವನು ಈ ಅಪಾಯವನ್ನು ಒಳಗೂಡಿಸಿ ಮಾತಾಡಿದ್ದನು. (ಮತ್ತಾಯ 13:22) ವ್ಯಾಪಾರ ಯೋಜನೆಗಳನ್ನು ಮಾಡುವಾಗ ದೇವರನ್ನು ಮರೆತುಬಿಡಬಾರದು ಎಂಬುದಾಗಿ ಬೈಬಲ್‌ ಬರಹಗಾರನಾದ ಯಾಕೋಬನು ಸಹ ಕ್ರೈಸ್ತರನ್ನು ಎಚ್ಚರಿಸಿದನು. (ಯಾಕೋಬ 4:​13-16) ಹಣವು ನಮಗೆ ತಕ್ಕಮಟ್ಟಿನ ಸ್ವಾತಂತ್ರ್ಯವನ್ನು ಒದಗಿಸುವಂತೆ ತೋರುತ್ತದಾದರೂ, ಅದನ್ನು ಹೊಂದಿದವರು ದೇವರಿಗಿಂತ ಹಣದ ಮೇಲೆ ಭರವಸೆಯಿಡುವ ಹೆಚ್ಚಿನ ಅಪಾಯದಲ್ಲಿದ್ದಾರೆ.​—⁠ಜ್ಞಾನೋಕ್ತಿ 30:​7-9; ಅ. ಕೃತ್ಯಗಳು 8:​18-24.

ಎರಡನೆಯದಾಗಿ, ಆರಂಭದಲ್ಲಿ ಉಲ್ಲೇಖಿಸಲಾದ ಡೇವಿಡ್‌ ಕಂಡುಕೊಂಡಂತೆ ಐಶ್ವರ್ಯವನ್ನು ಬೆನ್ನಟ್ಟುವುದು ಒಬ್ಬನ ಸಮಯ ಮತ್ತು ಶಕ್ತಿಯ ಹೆಚ್ಚಿನ ಭಾಗವನ್ನು ಕಸಿದುಕೊಳ್ಳುತ್ತದೆ ಹಾಗೂ ಕ್ರಮೇಣ ಅವನು ಆಧ್ಯಾತ್ಮಿಕ ಬೆನ್ನಟ್ಟುವಿಕೆಯಿಂದ ದೂರಸರಿಯುತ್ತಾನೆ. (ಲೂಕ 12:​13-21) ಐಶ್ವರ್ಯವಂತರಿಗೆ ಇನ್ನೊಂದು ಪ್ರಲೋಭನೆ ಯಾವಾಗಲೂ ಇರುತ್ತದೆ. ಅದು, ತಮ್ಮಲ್ಲಿರುವ ಐಶ್ವರ್ಯವನ್ನು ಆನಂದಕರ ಚಟುವಟಿಕೆಗಳಿಗೆ ಇಲ್ಲವೆ ವೈಯಕ್ತಿಕ ಬೆನ್ನಟ್ಟುವಿಕೆಗಳಿಗೆ ಉಪಯೋಗಿಸುವ ಪ್ರಲೋಭನೆಯೇ ಆಗಿದೆ.

ಐಷಾರಾಮದ ಜೀವನವು ತನ್ನ ಮನಸ್ಸನ್ನು ಮಂಕುಮಾಡುವಂತೆ ಸೊಲೊಮೋನನು ಅನುಮತಿಸಿದ್ದೇ ಅವನ ಆಧ್ಯಾತ್ಮಿಕ ಅವನತಿಗೆ ಕಾರಣವಾಗಿರಬಹುದೊ? (ಲೂಕ 21:34) ಅನ್ಯದೇಶದವರೊಂದಿಗೆ ವೈವಾಹಿಕ ಸಂಬಂಧವನ್ನು ಇಟ್ಟುಕೊಳ್ಳುವುದರ ವಿರುದ್ಧ ದೇವರ ನೇರವಾದ ನಿಯಮವಿದೆ ಎಂಬುದು ಅವನಿಗೆ ತಿಳಿದಿತ್ತು. ಆದರೆ, ಅವನು ಕ್ರಮೇಣ ಹೆಚ್ಚುಕಡಿಮೆ ಒಂದು ಸಾವಿರ ಸ್ತ್ರೀಯರನ್ನು ತನಗಾಗಿ ಒಟ್ಟುಸೇರಿಸಿಕೊಂಡನು. (ಧರ್ಮೋಪದೇಶಕಾಂಡ 7:⁠3) ಅನ್ಯದೇಶದವರಾದ ಆ ತನ್ನ ಪತ್ನಿಯರನ್ನು ಮೆಚ್ಚಿಸುವ ತೀವ್ರಾಶೆಯಿಂದ, ಅವನು ಅವರ ಪ್ರಯೋಜನಾರ್ಥವಾಗಿ ಮಿಶ್ರನಂಬಿಕೆಯ ಏರ್ಪಾಡುಗಳನ್ನು ಮಾಡಿದನು. ಈ ಹಿಂದೆ ಗಮನಿಸಿದಂತೆ, ಸೊಲೊಮೋನನ ಹೃದಯವು ಕ್ರಮೇಣ ಯೆಹೋವನಿಂದ ದೂರಸರಿಯಿತು.

ಈ ಉದಾಹರಣೆಗಳು, “ನೀವು ದೇವರನ್ನೂ ಧನವನ್ನೂ ಕೂಡ ಸೇವಿಸಲಾರಿರಿ” ಎಂಬ ಯೇಸುವಿನ ಸಲಹೆಯ ಸತ್ಯತೆಯನ್ನು ತೋರಿಸಿಕೊಡುತ್ತವೆ. (ಮತ್ತಾಯ 6:24) ಹಾಗಾದರೆ, ಇಂದು ಹೆಚ್ಚಿನವರು ಎದುರಿಸುತ್ತಿರುವ ಆರ್ಥಿಕ ಒತ್ತಡವನ್ನು ಕ್ರೈಸ್ತರು ಹೇಗೆ ಯಶಸ್ವಿಕರವಾಗಿ ನಿಭಾಯಿಸಬಲ್ಲರು? ಮುಖ್ಯವಾಗಿ, ಮುಂದೆ ಒಂದು ಉತ್ತಮ ಜೀವನವನ್ನು ಹೊಂದಬಲ್ಲೆವು ಎಂಬ ಯಾವ ನಿರೀಕ್ಷೆ ನಮಗಿದೆ?

ನಿಜ ಸಮೃದ್ಧಿಯು ನಮ್ಮ ಮುಂದಿದೆ

ಪೂರ್ವಜರಾದ ಅಬ್ರಹಾಮ, ಯೋಬ ಮತ್ತು ಇಸ್ರಾಯೇಲ್‌ ಜನಾಂಗದ ಜನರಂತಿರದೆ, ಯೇಸುವಿನ ಹಿಂಬಾಲಕರಿಗೆ “ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ” ಎಂಬ ಆಜ್ಞೆಯು ಕೊಡಲ್ಪಟ್ಟಿದೆ. (ಮತ್ತಾಯ 28:​19, 20) ಈ ನೇಮಕವನ್ನು ಪೂರೈಸಬೇಕಾದರೆ, ನಾವು ಐಹಿಕ ವಿಚಾರಗಳ ಬೆನ್ನಟ್ಟುವಿಕೆಗೆ ಉಪಯೋಗಿಸಬಹುದಾದ ಸಮಯ ಮತ್ತು ಪ್ರಯತ್ನವನ್ನು ಇದಕ್ಕಾಗಿ ಉಪಯೋಗಿಸಬೇಕಾಗುತ್ತದೆ. ಆದುದರಿಂದ, ಯೇಸು ಹೇಳಿದ್ದನ್ನು ಮಾಡುವುದೇ ಯಶಸ್ಸಿನ ಕೀಲಿಕೈಯಾಗಿದೆ. ಅವನು ಹೇಳಿದ್ದು: “ಹೀಗಿರುವದರಿಂದ, ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು.”​—⁠ಮತ್ತಾಯ 6:33.

ಡೇವಿಡ್‌ ತನ್ನ ಕುಟುಂಬ ಮತ್ತು ಆಧ್ಯಾತ್ಮಿಕತೆಯನ್ನು ಹೆಚ್ಚುಕಡಿಮೆ ಕಳೆದುಕೊಳ್ಳುವ ಹಂತದಲ್ಲಿದ್ದಾಗ, ತನ್ನ ತಪ್ಪುಗಳನ್ನು ಅರಿತುಕೊಂಡು ಸರಿಯಾದ ಮಾರ್ಗಕ್ಕೆ ಹಿಂದಿರುಗಿದನು. ಯೇಸು ವಾಗ್ದಾನಿಸಿದಂತೆ, ಡೇವಿಡ್‌ ಪುನಃ ಬೈಬಲ್‌ ಅಧ್ಯಯನ, ಪ್ರಾರ್ಥನೆ ಮತ್ತು ಶುಶ್ರೂಷೆಗೆ ತನ್ನ ಜೀವಿತದಲ್ಲಿ ಆದ್ಯತೆಯನ್ನು ನೀಡಿದಾಗ ಇತರ ಎಲ್ಲ ವಿಚಾರಗಳು ತಾವಾಗಿಯೇ ಉತ್ತಮಗೊಂಡವು. ಅವನ ಪತ್ನಿ ಮತ್ತು ಮಕ್ಕಳೊಂದಿಗಿನ ಸಂಬಂಧ ಕ್ರಮೇಣ ಸರಿಯಾಯಿತು. ಅವನಿಗೆ ಆನಂದ ಮತ್ತು ಸಂತೃಪ್ತಿಯು ಪುನಃ ದೊರಕಿತು. ಅವನು ಈಗಲೂ ಶ್ರಮಪಟ್ಟು ಕೆಲಸಮಾಡುತ್ತಾನೆ. ಅವನ ಜೀವನವು, ಕೂಡಲೆ ಬಡತನದಿಂದ ಸಿರಿತನಕ್ಕೆ ಏರಿದ ಜೀವನವಾಗಲಿಲ್ಲ. ಆದರೆ ಅವನ ವೇದನಾಭರಿತ ಅನುಭವದಿಂದ ಅನೇಕ ಅಮೂಲ್ಯ ಪಾಠಗಳನ್ನು ಅವನು ಕಲಿತುಕೊಂಡನು.

ಕೆಲಸಕ್ಕಾಗಿ ಯುನೈಟೆಡ್‌ ಸ್ಟೇಟ್ಸ್‌ಗೆ ಹೋಗಲು ತಾನು ಮಾಡಿದ ನಿರ್ಣಯದ ಕುರಿತು ಈಗ ಡೇವಿಡ್‌ ಪುನಃ ಒಮ್ಮೆ ಆಲೋಚಿಸಿದನು ಮತ್ತು ಮುಂದೆಂದೂ ತನ್ನ ನಿರ್ಣಯಗಳಲ್ಲಿ ಹಣವು ಮೇಲುಗೈಹೊಂದದಂತೆ ನೋಡಿಕೊಳ್ಳಲು ದೃಢನಿರ್ಧಾರವನ್ನು ಮಾಡಿದನು. ಒಂದು ಪ್ರೀತಿಪರ ಕುಟುಂಬ, ಒಳ್ಳೇ ಸ್ನೇಹಿತರು, ಮತ್ತು ದೇವರೊಂದಿಗೆ ಉತ್ತಮ ಸಂಬಂಧ ಇವೇ ಜೀವನದ ಅತ್ಯಮೂಲ್ಯ ವಿಷಯಗಳು ಮತ್ತು ಇವನ್ನು ಹಣದಿಂದ ಕೊಂಡುಕೊಳ್ಳಸಾಧ್ಯವಿಲ್ಲ ಎಂಬುದನ್ನು ಅವನೀಗ ಮನಗಂಡನು. (ಜ್ಞಾನೋಕ್ತಿ 17:17; 24:27; ಯೆಶಾಯ 55:​1, 2) ನೈತಿಕ ಸಮಗ್ರತೆಯು ಭೌತಿಕ ಐಶ್ವರ್ಯಕ್ಕಿಂತ ಎಷ್ಟೋ ಹೆಚ್ಚು ಮೌಲ್ಯವುಳ್ಳದ್ದಾಗಿದೆ. (ಜ್ಞಾನೋಕ್ತಿ 19:1; 22:⁠1) ಡೇವಿಡ್‌ ತನ್ನ ಕುಟುಂಬದೊಂದಿಗೆ, ಸರಿಯಾದ ವಿಷಯಕ್ಕೆ ಆದ್ಯತೆಯನ್ನು ಕೊಡಲು ನಿರ್ಧರಿಸಿದನು.​—⁠ಫಿಲಿಪ್ಪಿ 1:10.

ನೈತಿಕ ಮೌಲ್ಯವುಳ್ಳ ಮತ್ತು ಅದೇ ಸಮಯದಲ್ಲಿ ಐಶ್ವರ್ಯವಂತ ಸಮಾಜವನ್ನು ಕಟ್ಟಲು ಮನುಷ್ಯನು ಮಾಡಿದ ಪ್ರಯತ್ನಗಳು ಆಗಿಂದಾಗ್ಗೆ ವಿಫಲವಾಗಿವೆ. ಆದರೆ, ನಾವು ಸಂತೃಪ್ತಿಕರ ಜೀವನವನ್ನು ನಡೆಸಲು ಬೇಕಾಗಿರುವ ಹೇರಳವಾದ ಭೌತಿಕ ಮತ್ತು ಆಧ್ಯಾತ್ಮಿಕ ವಿಷಯಗಳನ್ನು ತನ್ನ ರಾಜ್ಯದ ಮೂಲಕವಾಗಿ ಒದಗಿಸುತ್ತೇನೆಂದು ದೇವರು ವಾಗ್ದಾನಮಾಡಿದ್ದಾನೆ. (ಕೀರ್ತನೆ 72:16; ಯೆಶಾಯ 65:​21-23) ನಿಜ ಸಮೃದ್ಧಿಯು ಆಧ್ಯಾತ್ಮಿಕ ವಿಷಯಗಳನ್ನು ಮೊದಲಾಗಿ ಇಡುವುದರಿಂದ ದೊರಕುತ್ತದೆ. (ಮತ್ತಾಯ 5:⁠3) ಆದುದರಿಂದ ನಾವು ಐಶ್ವರ್ಯವಂತರಾಗಿರಲಿ ಬಡವರಾಗಿರಲಿ, ಆಧ್ಯಾತ್ಮಿಕ ವಿಷಯಗಳನ್ನು ಈಗ ನಮ್ಮ ಜೀವನದಲ್ಲಿ ಮೊದಲಾಗಿ ಇಡುವುದು, ಹೊಸ್ತಿಲಲ್ಲಿರುವ ದೇವರ ನೂತನ ಲೋಕಕ್ಕೆ ನಮ್ಮನ್ನು ಸಿದ್ಧಮಾಡಿಕೊಳ್ಳುವ ಅತ್ಯುತ್ತಮ ವಿಧವಾಗಿದೆ. (1 ತಿಮೊಥೆಯ 6:​17-19) ಅದು, ಭೌತಿಕವಾಗಿಯೂ ಆಧ್ಯಾತ್ಮಿಕವಾಗಿಯೂ ನಿಜ ಸಮೃದ್ಧಿಯುಳ್ಳ ಒಂದು ಸಮಾಜವಾಗಿರುವುದು.

[ಪಾದಟಿಪ್ಪಣಿ]

^ ಪ್ಯಾರ. 2 ಹೆಸರು ಬದಲಾಯಿಸಲ್ಪಟ್ಟಿದೆ.

[ಪುಟ 5ರಲ್ಲಿರುವ ಚಿತ್ರಗಳು]

ಯೋಬನು ತನ್ನ ಐಶ್ವರ್ಯದ ಮೇಲಲ್ಲ, ದೇವರ ಮೇಲೆ ಭರವಸೆಯಿಟ್ಟನು

[ಪುಟ 7ರಲ್ಲಿರುವ ಚಿತ್ರಗಳು]

ಜೀವನದ ಅತ್ಯಮೂಲ್ಯ ವಿಷಯಗಳನ್ನು ಹಣದಿಂದ ಕೊಂಡುಕೊಳ್ಳಸಾಧ್ಯವಿಲ್ಲ