ನೀವು ಒಂದು ಲಾಗಾನೀ ಔನಾ ಮರದಂತೆ ಇದ್ದೀರೋ?
ನೀವು ಒಂದು ಲಾಗಾನೀ ಔನಾ ಮರದಂತೆ ಇದ್ದೀರೋ?
ಪ್ಯಾಪುವ ನ್ಯೂ ಗಿನೀಯ ಪೋರ್ಟ್ ಮೋರ್ಸ್‌ಬೀಯ ಹೊರವಲಯದಲ್ಲಿರುವ ಒಂದು ಹಳ್ಳಿಯಲ್ಲಿ ಇಬ್ಬರು ಶುಶ್ರೂಷಕರು ಸಾರುವ ಕೆಲಸವನ್ನು ಮುಗಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದರು. ಅವರು ನಡೆದುಹೋಗುತ್ತಿರುವಾಗ ಒಂದು ಸುಂದರವಾದ ಮರವನ್ನು ಕಂಡರು. “ಹಾ, ಲಾಗಾನೀ ಔನಾ!” ಎಂದು ಅವರಲ್ಲಿ ಪ್ರಾಯಸ್ಥ ವ್ಯಕ್ತಿ ಹೇಳಿದನು. ಜೊತೆಯಲ್ಲಿ ನಡೆಯುತ್ತಿದ್ದ ಎಳೆಯ ವ್ಯಕ್ತಿಯ ಕಡೆಗೆ ತಿರುಗಿ ಅವನು ಮುಂದುವರಿಸಿದ್ದು: “ಲಾಗಾನೀ ಔನಾ ಎಂದರೆ ‘ವಾರ್ಷಿಕ ಮರ’ ಎಂದು ಅರ್ಥ. ಉಷ್ಣವಲಯದಲ್ಲಿ ಬೆಳೆಯುವಂಥ ಇತರ ಅನೇಕ ಮರಗಳಿಗೆ ವ್ಯತಿರಿಕ್ತವಾಗಿ ಈ ಮರವು ಪ್ರತಿ ವರ್ಷ ತನ್ನ ಎಲೆಗಳನ್ನು ಕಳೆದುಕೊಳ್ಳುತ್ತದೆ ಮತ್ತು ಒಣಗಿಹೋದಂತೆ ಕಾಣುತ್ತದೆ. ಆದರೂ ಮಳೆಯು ಬಂದ ಕೂಡಲೆ ಇದು ಚೇತರಿಸಿಕೊಳ್ಳುತ್ತದೆ ಮತ್ತು ಹೂವನ್ನು ಬಿಡುತ್ತಾ ತನ್ನ ಸೌಂದರ್ಯವನ್ನು ಪುನಃ ಪ್ರದರ್ಶಿಸುತ್ತದೆ.”
ಲಾಗಾನೀ ಔನಾ ಅಥವಾ ಗುಲ್ ಮೊಹರ್ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಈ ಮರದಿಂದ ನಾವು ಒಂದು ಪಾಠವನ್ನು ಕಲಿಯಬಲ್ಲೆವು. ಪರಿಣತರಿಗನುಸಾರ, ಲೋಕದಲ್ಲಿರುವ ಹೂಬಿಡುವ ಐದು ಅತಿ ಸುಂದರ ಮರಗಳಲ್ಲಿ ಇದು ಒಂದಾಗಿದೆ. ಈ ಮರವು ತನ್ನ ಹೂವು ಮತ್ತು ಎಲೆಗಳನ್ನು ಬೇಸಗೆ ಕಾಲದಲ್ಲಿ ಕಳೆದುಕೊಳ್ಳುವುದಾದರೂ ತನ್ನಲ್ಲಿ ಸ್ವಲ್ಪ ಪ್ರಮಾಣದ ನೀರನ್ನು ಉಳಿಸಿಕೊಳ್ಳುತ್ತದೆ. ಇದರ ಬೇರಿನ ವ್ಯವಸ್ಥೆಯು ಬಲವಾದದ್ದಾಗಿದೆ ಮತ್ತು ನೆಲದಾಳದಲ್ಲಿರುವ ಬಂಡೆಗಳ ಸುತ್ತಲೂ ಇದು ಬೆಳೆಯಸಾಧ್ಯವಿದೆ. ಈ ಮೂಲಕ ಅದು, ಬಲವಾದ ಗಾಳಿಯು ಬೀಸುವಾಗ ಮರಕ್ಕೆ ಒಂದು ಬಲವಾದ ಲಂಗರಿನಂತೆ ಕಾರ್ಯವೆಸಗುತ್ತದೆ. ಸಂಕ್ಷಿಪ್ತವಾಗಿ ಹೇಳಬೇಕಾದರೆ, ಕಷ್ಟಕರ ಪರಿಸ್ಥಿತಿಗಳಿಗೆ ಒಗ್ಗಿಕೊಳ್ಳುವ ಮೂಲಕ ಈ ಮರವು ಹಸನಾಗಿ ಬೆಳೆಯುತ್ತದೆ.
ನಮ್ಮ ನಂಬಿಕೆಯ ಬಲಪರೀಕ್ಷೆಯನ್ನು ಮಾಡುವಂಥ ಪರಿಸ್ಥಿತಿಗಳನ್ನು ನಾವು ಎದುರಿಸಬಹುದು. ಅಂತಹ ಪರಿಸ್ಥಿತಿಗಳನ್ನು ತಾಳಿಕೊಳ್ಳುವಂತೆ ನಮಗೆ ಯಾವುದು ಸಹಾಯಮಾಡಬಲ್ಲದು? ಲಾಗಾನೀ ಔನಾ ಮರದಂತೆ, ನಾವು ದೇವರ ವಾಕ್ಯದಿಂದ ಸಿಗುವ ಜೀವದಾಯಕ ನೀರನ್ನು ಕುಡಿದು ನಮ್ಮಲ್ಲಿ ಉಳಿಸಿಕೊಳ್ಳಸಾಧ್ಯವಿದೆ. ನಾವು ‘ನಮ್ಮ ಬಂಡೆ’ಯಾಗಿರುವ ಯೆಹೋವನಿಗೆ ಹಾಗೂ ಆತನ ಸಂಘಟನೆಗೆ ಸಹ ಬಲವಾಗಿ ಅಂಟಿಕೊಳ್ಳಬೇಕು. (2 ಸಮುವೇಲ 22:2) ನಿಜವಾಗಿಯೂ, ಯೆಹೋವನು ಲಭ್ಯಗೊಳಿಸುವಂಥ ಒದಗಿಸುವಿಕೆಗಳನ್ನು ನಾವು ಸದುಪಯೋಗಿಸಿಕೊಳ್ಳುವುದಾದರೆ, ಪ್ರತಿಕೂಲ ವಾತಾವರಣದಲ್ಲೂ ನಾವು ನಮ್ಮ ಆಧ್ಯಾತ್ಮಿಕ ಶಕ್ತಿ ಹಾಗೂ ಸೌಂದರ್ಯವನ್ನು ಕಾಪಾಡಿಕೊಳ್ಳಬಲ್ಲೆವು ಎಂಬುದಕ್ಕೆ ಈ ಲಾಗಾನೀ ಔನಾ ಮರವು ಒಂದು ಆಕರ್ಷಕ ಮರುಜ್ಞಾಪನವಾಗಿದೆ. ಹೀಗೆ ಮಾಡುವ ಮೂಲಕವಾಗಿ, ನಾವು ಆತನು ಮಾಡಿರುವಂಥ ನಿತ್ಯಜೀವದ ವಾಗ್ದಾನದ ಸಮೇತ ಇನ್ನೆಲ್ಲ ‘ವಾಗ್ದಾನಗಳ ಫಲವನ್ನು ಹೊಂದುವೆವು.’—ಇಬ್ರಿಯ 6:12; ಪ್ರಕಟನೆ 21:4.