ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೆಹೆಮೀಯ ಪುಸ್ತಕದ ಮುಖ್ಯಾಂಶಗಳು

ನೆಹೆಮೀಯ ಪುಸ್ತಕದ ಮುಖ್ಯಾಂಶಗಳು

ಯೆಹೋವನ ವಾಕ್ಯವು ಸಜೀವವಾದದ್ದು

ನೆಹೆಮೀಯ ಪುಸ್ತಕದ ಮುಖ್ಯಾಂಶಗಳು

ಬೈಬಲಿನ ಎಜ್ರ ಪುಸ್ತಕದಲ್ಲಿ ದಾಖಲಿಸಲ್ಪಟ್ಟಿರುವ ಕೊನೆಯ ಘಟನೆಯು ಸಂಭವಿಸಿ ಹನ್ನೆರಡು ವರುಷಗಳು ದಾಟಿವೆ. ಮೆಸ್ಸೀಯನಲ್ಲಿಗೆ ನಡೆಸುವ, ವರುಷಗಳಲ್ಲಿರುವ 70 ವಾರಗಳ ಆರಂಭವನ್ನು ಗುರುತಿಸುವ ಘಟನೆಯಾದ ‘ಯೆರೂಸಲೇಮು ಜೀರ್ಣೋದ್ಧಾರವಾಗಿ ಕಟ್ಟಲ್ಪಡಲಿ ಎಂಬ ದೈವೋಕ್ತಿಯು ಹೊರಡಲು’ ಸಮಯವು ಈಗ ಹತ್ತಿರವಾಗಿದೆ. (ದಾನಿಯೇಲ 9:​24-27) ನೆಹೆಮೀಯ ಪುಸ್ತಕವು, ಯೆರೂಸಲೇಮಿನ ಗೋಡೆಗಳನ್ನು ಪುನಃ ಕಟ್ಟುವ ಕೆಲಸದಲ್ಲಿ ಒಳಗೂಡಿದ ದೇವಜನರ ಇತಿಹಾಸವಾಗಿದೆ. ಇದರಲ್ಲಿ, 12ಕ್ಕಿಂತಲೂ ಹೆಚ್ಚಿನ ನಿರ್ಣಾಯಕ ವರುಷಗಳು, ಅಂದರೆ ಸಾ.ಶ.ಪೂ. 456ರಿಂದ ಸಾ.ಶ.ಪೂ. 443ರ ನಂತರ ಸ್ವಲ್ಪ ಸಮಯದ ವರೆಗೆ ಆವರಿಸಿದೆ.

ದೇಶಾಧಿಪತಿಯಾದ ನೆಹೆಮೀಯನಿಂದ ಬರೆಯಲ್ಪಟ್ಟ ಈ ಪುಸ್ತಕವು, ದೃಢನಿಶ್ಚಯದಿಂದ ಕೂಡಿದ ಕೃತ್ಯ ಮತ್ತು ಯೆಹೋವ ದೇವರ ಮೇಲಣ ಸಂಪೂರ್ಣ ಅವಲಂಬನೆಯಿಂದ ಸತ್ಯ ಆರಾಧನೆಯು ಹೇಗೆ ಘನತೆಗೇರಿಸಲ್ಪಡುತ್ತದೆ ಎಂಬ ಆಸಕ್ತಿಕರ ವೃತ್ತಾಂತವಾಗಿದೆ. ಯೆಹೋವನು ತನ್ನ ಚಿತ್ತವನ್ನು ನೆರವೇರಿಸಲು ವಿಷಯಗಳನ್ನು ಹೇಗೆ ನಡೆಸುತ್ತಾನೆ ಎಂಬುದನ್ನು ಈ ಪುಸ್ತಕವು ಸ್ಪಷ್ಟವಾಗಿ ತೋರಿಸುತ್ತದೆ. ಮಾತ್ರವಲ್ಲದೆ, ಇದೊಂದು ಬಲಶಾಲಿ ಹಾಗೂ ಧೀರ ನಾಯಕನ ಕಥೆಯೂ ಆಗಿದೆ. ನೆಹೆಮೀಯ ಪುಸ್ತಕದಲ್ಲಿರುವ ಸಂದೇಶವು ಇಂದಿರುವ ಎಲ್ಲ ಸತ್ಯಾರಾಧಕರಿಗೆ ಅತ್ಯಮೂಲ್ಯ ಪಾಠಗಳನ್ನು ಒದಗಿಸುತ್ತದೆ, ಏಕೆಂದರೆ “ದೇವರ ವಾಕ್ಯವು ಸಜೀವವಾದದ್ದು, ಕಾರ್ಯಸಾಧಕವಾದದ್ದು” ಆಗಿದೆ.​—⁠ಇಬ್ರಿಯ 4:12.

“ಗೋಡೆಯು [ಕಟ್ಟಲ್ಪಟ್ಟು] ತೀರಿತು”

(ನೆಹೆಮೀಯ 1:​1–6:19)

ನೆಹೆಮೀಯನು ಶೂಷನ್‌ ಪಟ್ಟಣದ ಅರಮನೆಯಲ್ಲಿ, ರಾಜ ಅರ್ತಷಸ್ತ ಲಾಂಜೀಮೆನಸ್‌ನ ಸೇವೆಮಾಡುತ್ತಾ ಒಂದು ಭರವಸಾರ್ಹ ಸ್ಥಾನದಲ್ಲಿದ್ದಾನೆ. ತನ್ನ ಜನರು “ಮಹಾ ಕಷ್ಟನಿಂದೆಗಳಿಗೆ ಒಳಗಾಗಿದ್ದಾರೆ; ಯೆರೂಸಲೇಮಿನ ಪೌಳಿಗೋಡೆಯು ಕೆಡವಲ್ಪಟ್ಟಿರುತ್ತದೆ; ಅದರ ಬಾಗಲುಗಳು ಬೆಂಕಿಯಿಂದ ಸುಡಲ್ಪಟ್ಟಿರುತ್ತವೆ” ಎಂಬ ವರ್ತಮಾನವನ್ನು ಕೇಳಿಸಿಕೊಂಡಾಗ ಅವನು ಬಹು ಕಳವಳಗೊಳ್ಳುತ್ತಾನೆ. ಮಾರ್ಗದರ್ಶನಕ್ಕಾಗಿ ಅವನು ದೇವರನ್ನು ಹಗಲಿರುಳು ವಿಜ್ಞಾಪಿಸುತ್ತಾನೆ. (ನೆಹೆಮೀಯ 1:​3, 4) ತಕ್ಕ ಸಮಯದಲ್ಲಿ, ರಾಜನು ನೆಹೆಮೀಯನ ದುಃಖವನ್ನು ಗಮನಿಸುತ್ತಾನೆ ಮತ್ತು ಯೆರೂಸಲೇಮಿಗೆ ಹೋಗಲು ಅವನಿಗೆ ಮಾರ್ಗವು ತೆರೆಯಲ್ಪಡುತ್ತದೆ.

ಯೆರೂಸಲೇಮನ್ನು ತಲಪಿದೊಡನೆ, ರಾತ್ರಿಯಲ್ಲಿ ನೆಹೆಮೀಯನು ಅದರ ಗೋಡೆಯನ್ನು ಪರೀಕ್ಷಿಸುತ್ತಾನೆ ಮತ್ತು ಅದನ್ನು ಪುನಃ ಕಟ್ಟುವ ತನ್ನ ಯೋಜನೆಯನ್ನು ಯೆಹೂದ್ಯರಿಗೆ ತಿಳಿಸುತ್ತಾನೆ. ಕಟ್ಟುವ ಕೆಲಸವು ಆರಂಭಗೊಳ್ಳುತ್ತದೆ. ಅದೇ ಸಮಯದಲ್ಲಿ ವಿರೋಧವೂ ಬರುತ್ತದೆ. ಆದರೆ ನೆಹೆಮೀಯನ ಧೀರ ನಾಯಕತ್ವದ ಕೆಳಗೆ ‘ಗೋಡೆಯು [ಕಟ್ಟಲ್ಪಟ್ಟು] ತೀರುತ್ತದೆ.’​—⁠ನೆಹೆಮೀಯ 6:15.

ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:

1:1; 2:1​—⁠ಈ ಎರಡು ವಚನಗಳಲ್ಲಿ ತಿಳಿಸಲಾದ “ಇಪ್ಪತ್ತನೆಯ ವರುಷ,” ಒಂದೇ ಬಿಂದುವಿನಿಂದ ಲೆಕ್ಕಿಸಲ್ಪಡುವ ಸಮಯವಾಗಿದೆಯೊ? ಹೌದು, ಇದು ರಾಜನಾದ ಅರ್ತಷಸ್ತನ ಆಳ್ವಿಕೆಯ 20ನೇ ವರುಷವಾಗಿದೆ. ಆದರೆ, ಈ ಎರಡು ವಚನಗಳಲ್ಲಿ ಉಪಯೋಗಿಸಿದ ಎಣಿಕೆಯ ವಿಧಾನವು ವ್ಯತ್ಯಾಸವಾಗಿದೆ. ಸಾ.ಶ.ಪೂ. 475ನೇ ವರುಷವು ಅರ್ತಷಸ್ತನು ಪಟ್ಟಕ್ಕೆ ಬಂದ ವರುಷ ಎಂದು ಇತಿಹಾಸವು ರುಜುಪಡಿಸುತ್ತದೆ. ಬಾಬೆಲಿನ ಬರಹಗಾರರು ರೂಢಿಯಂತೆ, ಪರ್ಷಿಯನ್‌ ರಾಜರ ಆಳ್ವಿಕೆಯ ವರುಷಗಳನ್ನು ಒಂದು ನೈಸಾನ್‌ನಿಂದ (ಚೈತ್ರ ಮಾಸದಿಂದ) (ಮಾರ್ಚ್‌/ಏಪ್ರಿಲ್‌) ಇನ್ನೊಂದು ನೈಸಾನ್‌ನ ವರೆಗೆ ಲೆಕ್ಕಿಸುತ್ತಿದ್ದರು. ಆದುದರಿಂದ, ಅರ್ತಷಸ್ತನ ಆಳ್ವಿಕೆಯ ಮೊದಲನೆಯ ವರುಷವು ಸಾ.ಶ.ಪೂ. 474ರಲ್ಲಿ ಆರಂಭವಾಯಿತು. ಹೀಗಾಗಿ, ನೆಹೆಮೀಯ 2:1ರಲ್ಲಿ ಸೂಚಿಸಿದ 20ನೇ ವರುಷವು ಸಾ.ಶ.ಪೂ. 455ರ ನೈಸಾನ್‌ ತಿಂಗಳಿನಲ್ಲಿ ಆರಂಭವಾಯಿತು. ಆದರೆ, ನೆಹೆಮೀಯ 1:1ರಲ್ಲಿ ಉಲ್ಲೇಖಿಸಲಾಗಿರುವ ಚಿಸ್ಲೆವ್‌ ತಿಂಗಳು (ಮಾರ್ಗಶೀರ್ಷ ಮಾಸವು) (ನವೆಂಬರ್‌/ಡಿಸೆಂಬರ್‌) ಹಿಂದಿನ ವರುಷದ, ಅಂದರೆ ಸಾ.ಶ.ಪೂ. 456ರ ಚಿಸ್ಲೆವ್‌ ತಿಂಗಳಾಗಿದೆ. ಈ ತಿಂಗಳನ್ನು ಸಹ ನೆಹೆಮೀಯನು ಅರ್ತಷಸ್ತನ ಆಳ್ವಿಕೆಯ 20ನೇ ವರುಷ ಎಂಬುದಾಗಿ ಉಲ್ಲೇಖಿಸುತ್ತಾನೆ. ಒಂದುವೇಳೆ ಈ ಸಂದರ್ಭದಲ್ಲಿ, ರಾಜನು ಪಟ್ಟಕ್ಕೆ ಬಂದ ತಾರೀಖಿನಿಂದ ಅವನು ವರುಷವನ್ನು ಲೆಕ್ಕಿಸುತ್ತಿದ್ದಿರಬೇಕು. ಅಥವಾ, ಇಂದು ಯೆಹೂದ್ಯರು ವ್ಯಾವಹಾರಿಕ ವರ್ಷ ಎಂದು ಕರೆಯುವ ವರ್ಷಕ್ಕನುಸಾರ ನೆಹೆಮೀಯನು ಲೆಕ್ಕಿಸುತ್ತಿದ್ದಿರಲೂ ಸಾಧ್ಯವಿದೆ. ಈ ವರ್ಷವು, ಸೆಪ್ಟೆಂಬರ್‌/ಅಕ್ಟೋಬರ್‌ ತಿಂಗಳಿಗೆ ಸರಿಹೊಂದುವ ತೀಶ್ರಿ ತಿಂಗಳಿನಿಂದ ಆರಂಭವಾಗುತ್ತದೆ. ಏನೇ ಆಗಿರಲಿ, ಯೆರೂಸಲೇಮ್‌ ಜೀರ್ಣೋದ್ಧಾರವಾಗಿ ಕಟ್ಟಲ್ಪಡಲಿ ಎಂಬ ದೈವೋಕ್ತಿಯು ಹೊರಟ ವರುಷವು ಸಾ.ಶ.ಪೂ. 455 ಆಗಿತ್ತು.

4:​17, 18​—⁠ಪುನರ್ನಿರ್ಮಾಣ ಕಾರ್ಯವನ್ನು ಒಬ್ಬ ವ್ಯಕ್ತಿಯು ಬರೀ ಒಂದು ಕೈಯಿಂದ ಹೇಗೆ ಮಾಡಸಾಧ್ಯವಿತ್ತು? ಹೊರೆಹೊರುವವರಿಗೆ ಇದು ಒಂದು ಕಷ್ಟಕರ ಕೆಲಸವಾಗಿರಲಿಲ್ಲ. ಹೊರೆಯನ್ನು ಒಮ್ಮೆ ಅವರ ತಲೆಯ ಇಲ್ಲವೆ ಭುಜಗಳ ಮೇಲೆ ಇರಿಸಿದರೆ, ಅದು ಬೀಳದಂತೆ ಬರೀ ಒಂದು ಕೈಯಿಂದ ಅದನ್ನು ಹಿಡಿದುಕೊಂಡು ‘ಇನ್ನೊಂದು ಕೈಯಿಂದ ಈಟಿಹಿಡಿದುಕೊಳ್ಳಲು’ ಅವರು ಶಕ್ತರಾಗಿದ್ದರು. ಆದರೆ, ಕಟ್ಟುವವರಿಗೆ ಎರಡೂ ಕೈಗಳ ಅಗತ್ಯವಿದ್ದ ಕಾರಣ, ಅವರು ‘ತಮ್ಮ ತಮ್ಮ ಕತ್ತಿಯನ್ನು ಸೊಂಟಕ್ಕೆ ಬಿಗಿದುಕೊಂಡು ಕಟ್ಟುತ್ತಿದ್ದರು.’ ಒಂದುವೇಳೆ ವೈರಿಗಳು ಆಕ್ರಮಣಮಾಡಿದರೆ, ಕೂಡಲೆ ಹೋರಾಟಕ್ಕೆ ಅವರು ಸಿದ್ಧರಿದ್ದರು.

5:​7, NIBV​—⁠ಯಾವ ಅರ್ಥದಲ್ಲಿ ನೆಹೆಮೀಯನು ‘ಶ್ರೀಮಂತರನ್ನೂ ಅಧಿಕಾರಿಗಳನ್ನೂ ಖಂಡಿಸಿದನು’? ಈ ಜನರು ತಮ್ಮ ಜೊತೆ ಯೆಹೂದ್ಯರಿಂದ ಬಡ್ಡಿ ತೆಗೆದುಕೊಳ್ಳುತ್ತಿದ್ದರು. ಇದು ಮೋಶೆಯ ಧರ್ಮಶಾಸ್ತ್ರಕ್ಕೆ ವಿರುದ್ಧವಾಗಿತ್ತು. (ಯಾಜಕಕಾಂಡ 25:36; ಧರ್ಮೋಪದೇಶಕಾಂಡ 23:19) ಮಾತ್ರವಲ್ಲದೆ, ಅವರು ತೆಗೆದುಕೊಳ್ಳುತ್ತಿದ್ದ ಬಡ್ಡಿಯು ತೀರ ವಿಪರೀತವಾಗಿತ್ತು. ಒಂದುವೇಳೆ ಅವರು ಪ್ರತಿ ತಿಂಗಳೂ ಬಡ್ಡಿಯನ್ನು ತೆಗೆದುಕೊಳ್ಳುತ್ತಿದ್ದರೆ, ತಿಂಗಳಿಗೆ ತೆಗೆದುಕೊಳ್ಳುತ್ತಿದ್ದ “ನೂರರ ಒಂದಂಶ” ಹಣವು ವರುಷಕ್ಕೆ 12 ಪ್ರತಿಶತವಾಗುತ್ತಿತ್ತು. (ನೆಹೆಮೀಯ 5:​11, NW) ಈಗಾಗಲೇ ತೆರಿಗೆ ಮತ್ತು ಆಹಾರದ ಕೊರತೆಯಿಂದಾಗಿ ಖಿನ್ನರಾಗಿದ್ದ ಜನರಿಗೆ ಈ ರೀತಿ ಹೊರೆಹೊರಿಸುವುದು ಕ್ರೂರತನವಾಗಿತ್ತು. ಆದುದರಿಂದ, ದೇವರ ಧರ್ಮಶಾಸ್ತ್ರವನ್ನು ಉಪಯೋಗಿಸುತ್ತಾ ನೆಹೆಮೀಯನು ಅವರನ್ನು ಖಂಡಿಸಿ ತಿದ್ದಿದನು ಮತ್ತು ಅವರ ತಪ್ಪು ಕೃತ್ಯಗಳನ್ನು ಬಯಲಿಗೆ ತಂದನು.

6:5​—⁠ಗೋಪ್ಯವಾದ ಪತ್ರಗಳನ್ನು ಸಾಮಾನ್ಯವಾಗಿ ಮುದ್ರೆಹಾಕಿದ ಚೀಲದಲ್ಲಿ ಇಟ್ಟುಕಳುಹಿಸಲಾಗುತ್ತಿತ್ತು. ಹಾಗಿರುವಾಗ, ಸನ್ಬಲ್ಲಟನು ನೆಹೆಮೀಯನಿಗೆ “ಮುಚ್ಚದಿರುವ ಒಂದು ಪತ್ರವನ್ನು” ಕಳುಹಿಸಿದ್ದೇಕೆ? ನೆಹೆಮೀಯನ ಮೇಲೆ ಹೊರಿಸಲ್ಪಟ್ಟ ಸುಳ್ಳು ಆರೋಪಗಳು ಎಲ್ಲರಿಗೂ ತಿಳಿದುಬರಬೇಕೆಂದು ಸನ್ಬಲ್ಲಟನು ಉದ್ದೇಶಿಸಿದ್ದಿರಬಹುದು. ಈ ಕಾರಣದಿಂದ ಮುಚ್ಚದಿರುವ ಒಂದು ಪತ್ರದಲ್ಲಿ ಅವನು ಆ ಆರೋಪಗಳನ್ನು ಬರೆದು ಕಳುಹಿಸಿದ್ದಿರಬಹುದು. ಇದರಿಂದಾಗಿ ನೆಹೆಮೀಯನು ಬಹು ಕೋಪಗೊಂಡು ಕಟ್ಟುವ ಕೆಲಸವನ್ನು ನಿಲ್ಲಿಸಿ ತನ್ನನ್ನು ಸಮರ್ಥಿಸಿಕೊಳ್ಳಲು ಬರಬಹುದೆಂದು ಸನ್ಬಲ್ಲಟನು ಒಂದುವೇಳೆ ನೆನಸಿದ್ದಿರಬಹುದು. ಅಥವಾ, ಪತ್ರದಲ್ಲಿರುವ ವಿಚಾರಗಳು ಯೆಹೂದ್ಯರಲ್ಲಿ ಗಲಿಬಿಲಿಯನ್ನು ಉಂಟುಮಾಡಿ ಅವರು ಒಟ್ಟಾಗಿ ಕೆಲಸಮಾಡುವುದನ್ನು ನಿಲ್ಲಿಸಬಹುದೆಂದು ಸನ್ಬಲ್ಲಟನು ಭಾವಿಸಿದ್ದಿರಬಹುದು. ಆದರೆ ನೆಹೆಮೀಯನು ಇದಕ್ಕೆ ಪ್ರತಿಕ್ರಿಯೆಯನ್ನು ತೋರಿಸದೆ, ದೇವದತ್ತ ಕೆಲಸವನ್ನು ಶಾಂತಭಾವದಿಂದ ಮುಂದುವರಿಸಿದನು.

ನಮಗಾಗಿರುವ ಪಾಠಗಳು:

1:4; 2:4; 4:​4, 5. ಯಾವುದೇ ಕಷ್ಟಕರ ಸನ್ನಿವೇಶವನ್ನು ಎದುರಿಸುವಾಗ ಇಲ್ಲವೆ ಪ್ರಾಮುಖ್ಯ ನಿರ್ಣಯಗಳನ್ನು ಮಾಡುವಾಗ, ನಾವು ‘ಪಟ್ಟುಹಿಡಿದು ಪ್ರಾರ್ಥಿಸಬೇಕು’ ಮತ್ತು ದೇವಪ್ರಭುತ್ವಾತ್ಮಕ ಮಾರ್ಗದರ್ಶನಕ್ಕೆ ಹೊಂದಿಕೆಯಲ್ಲಿ ಕ್ರಿಯೆಗೈಯಬೇಕು.​—⁠ರೋಮಾಪುರ 12:​12, NW.

1:​11–2:8; 4:​4, 5, 15, 16; 6:16. ಯೆಹೋವನು ತನ್ನ ಸೇವಕರ ಯಥಾರ್ಥವಾದ ಪ್ರಾರ್ಥನೆಗಳಿಗೆ ಕಿವಿಗೊಡುತ್ತಾನೆ.​—⁠ಕೀರ್ತನೆ 86:​6, 7.

1:4; 4:​19, 20; 6:​3, 15. ನೆಹೆಮೀಯನು ಒಬ್ಬ ಸಹಾನುಭೂತಿಯುಳ್ಳ ಮನುಷ್ಯನಾಗಿದ್ದರೂ, ನೀತಿಗಾಗಿ ಸ್ಥಿರತೆಯಿಂದ ಕ್ರಿಯೆಗೈಯುವ ವಿಷಯದಲ್ಲಿಯೂ ಅವನು ಉತ್ತಮ ಮಾದರಿಯನ್ನಿಟ್ಟನು.

1:​11–2:⁠3. ನೆಹೆಮೀಯನ ಆನಂದದ ಮೂಲವು, ಪಾನಸೇವಕನಾಗಿ ಅವನಿಗಿದ್ದ ಗೌರವಯುತ ಸ್ಥಾನವಾಗಿರಲಿಲ್ಲ. ಸತ್ಯಾರಾಧನೆಯ ಪ್ರವರ್ಧನೆಯೇ ಆಗಿತ್ತು. ನಮ್ಮ ಮುಖ್ಯ ಚಿಂತೆಯೂ ನಮ್ಮ ಆನಂದದ ಮುಖ್ಯ ಮೂಲವೂ ಯೆಹೋವನ ಆರಾಧನೆ ಮತ್ತು ಅದನ್ನು ಪ್ರವರ್ಧಿಸುವಂಥ ಎಲ್ಲ ವಿಷಯಗಳೇ ಆಗಿರಬೇಕಲ್ಲವೆ?

2:​4-8. ಯೆರೂಸಲೇಮಿನ ಗೋಡೆಯನ್ನು ಪುನಃ ಕಟ್ಟುವಂತೆ ಅರ್ತಷಸ್ತನು ಅನುಮತಿಯನ್ನು ನೀಡುವಂತೆ ಯೆಹೋವನು ಅವನನ್ನು ಪ್ರೇರೇಪಿಸಿದನು. “ರಾಜನ ಸಂಕಲ್ಪಗಳು ಯೆಹೋವನ ಕೈಯಲ್ಲಿ ನೀರಿನ ಕಾಲಿವೆಗಳಂತೆ ಇವೆ; ತನಗೆ ಬೇಕಾದ ಕಡೆಗೆ ತಿರುಗಿಸುತ್ತಾನೆ” ಎಂದು ಜ್ಞಾನೋಕ್ತಿ 21:1 ತಿಳಿಸುತ್ತದೆ.

3:​5, 27. ಸತ್ಯಾರಾಧನೆಯ ಹಿತಾಸಕ್ತಿಯಿಂದ ಮಾಡಲ್ಪಡುವ ಶಾರೀರಿಕ ಶ್ರಮದ ಕೆಲಸವನ್ನು ಕೀಳಾದ ಕೆಲಸವೆಂದು ತೆಕೋವದ ‘ಶ್ರೀಮಂತರು’ ನೆನಸಿದಂತೆ ನಾವು ನೆನಸಬಾರದು. ಬದಲಾಗಿ, ತಮ್ಮನ್ನು ಇಚ್ಛಾಪೂರ್ವಕವಾಗಿ ನೀಡಿಕೊಂಡ ತೆಕೋವದ ಸಾಮಾನ್ಯ ಜನರನ್ನು ನಾವು ಅನುಕರಿಸಬೇಕು.

3:​10, 23, 28-30. ನಮ್ಮಲ್ಲಿ ಕೆಲವರು, ರಾಜ್ಯ ಪ್ರಚಾರಕರ ಅಗತ್ಯವು ಎಲ್ಲಿ ಹೆಚ್ಚಿದೆಯೊ ಅಂಥ ಕಡೆಗೆ ಸ್ಥಳಾಂತರಿಸಲು ಶಕ್ತರಾಗಿದ್ದಾರೆ. ಆದರೆ ಅನೇಕರು ತಮ್ಮ ಸ್ಥಳದಲ್ಲಿಯೇ ಇದ್ದುಕೊಂಡು ಸತ್ಯಾರಾಧನೆಯನ್ನು ಬೆಂಬಲಿಸುತ್ತಾರೆ. ಇದನ್ನು ನಾವು, ರಾಜ್ಯ ಸಭಾಗೃಹ ನಿರ್ಮಾಣ ಯೋಜನೆ ಮತ್ತು ವಿಪತ್ತು ಪರಿಹಾರ ಯೋಜನೆ ಮುಂತಾದವುಗಳಲ್ಲಿ ಭಾಗವಹಿಸುವ ಮೂಲಕ ಮಾಡಸಾಧ್ಯವಿದೆ. ಆದರೆ ಮುಖ್ಯವಾಗಿ, ರಾಜ್ಯ ಸಾರುವ ಕೆಲಸದಲ್ಲಿ ಭಾಗವಹಿಸುವ ಮೂಲಕ ಇದನ್ನು ಮಾಡಬಲ್ಲೆವು.

4:14. ವಿರೋಧವು ಎದುರಾದಾಗ, ನಾವು ಸಹ “ಮಹೋನ್ನತನೂ ಭಯಂಕರನೂ” ಆಗಿರುವಾತನನ್ನು ನೆನಪುಮಾಡಿಕೊಂಡು ನಮ್ಮ ಭಯವನ್ನು ಹೋಗಲಾಡಿಸಬಲ್ಲೆವು.

5:​14-19. ಕ್ರೈಸ್ತ ಮೇಲ್ವಿಚಾರಕರಿಗೆ, ದೇಶಾಧಿಪತಿಯಾದ ನೆಹೆಮೀಯನು ದೀನತೆ, ನಿಸ್ವಾರ್ಥಭಾವ ಮತ್ತು ಜಾಣ್ಮೆಗೆ ಅತ್ಯುತ್ತಮ ಮಾದರಿಯಾಗಿದ್ದಾನೆ. ದೇವರ ನಿಯಮವನ್ನು ಸ್ಥಾಪಿಸುವುದರಲ್ಲಿ ಬಹಳ ಹುರುಪುಳ್ಳವನಾಗಿದ್ದರೂ, ತನ್ನ ಸ್ವಾರ್ಥ ಲಾಭಕ್ಕಾಗಿ ಇತರರ ಮೇಲೆ ಅವನು ದಬ್ಬಾಳಿಕೆ ಮಾಡಲಿಲ್ಲ. ಬದಲಾಗಿ, ದಬ್ಬಾಳಿಕೆಗೆ ಒಳಗಾದವರಿಗೆ ಮತ್ತು ಬಡವರಿಗೆ ಅವನು ಕಾಳಜಿಯನ್ನು ತೋರಿಸಿದನು. ಮಾತ್ರವಲ್ಲದೆ, ಉದಾತ್ತ ಗುಣವನ್ನು ತೋರಿಸುವುದರಲ್ಲಿ ನೆಹೆಮೀಯನು ದೇವರ ಎಲ್ಲ ಸೇವಕರಿಗೆ ಒಂದು ಎದ್ದುಕಾಣುವ ಮಾದರಿಯಾಗಿದ್ದಾನೆ.

“ನನ್ನ ದೇವರೇ, ನನ್ನ ಹಿತಕ್ಕಾಗಿ ಇದನ್ನು ನೆನಪುಮಾಡಿಕೋ”

(ನೆಹೆಮೀಯ 7:1–13:31)

ಯೆರೂಸಲೇಮಿನ ಗೋಡೆಯನ್ನು ಕಟ್ಟಿಮುಗಿಸಿದ ಕೂಡಲೆ, ನೆಹೆಮೀಯನು ಕದಗಳನ್ನು ಹಚ್ಚಿಸುತ್ತಾನೆ ಮತ್ತು ಪಟ್ಟಣದ ಭದ್ರತೆಗಾಗಿ ಬೇಕಾದ ಏರ್ಪಾಡುಗಳನ್ನು ಮಾಡುತ್ತಾನೆ. ಜನರ ವಂಶಾವಳಿಯ ಪಟ್ಟಿಯನ್ನು ಮಾಡುತ್ತಾನೆ. ಎಲ್ಲ ಜನರು “ನೀರುಬಾಗಲಿನ ಮುಂದಿನ ಬೈಲಿನಲ್ಲಿ ಒಟ್ಟಾಗಿ” ಕೂಡಿಬಂದಾಗ, ಧರ್ಮೋಪದೇಶಕನಾದ ಎಜ್ರನು ಮೋಶೆಯ ಧರ್ಮಶಾಸ್ತ್ರದ ಗ್ರಂಥವನ್ನು ಓದುತ್ತಾನೆ ಮತ್ತು ನೆಹೆಮೀಯನೂ ಲೇವಿಯರೂ ಧರ್ಮಶಾಸ್ತ್ರವನ್ನು ಜನರಿಗೆ ವಿವರಿಸಿ ಹೇಳುತ್ತಾರೆ. (ನೆಹೆಮೀಯ 8:⁠1) ಪರ್ಣಶಾಲೆಗಳ ಜಾತ್ರೆಯ ಕುರಿತು ಕಲಿತುಕೊಂಡ ಕಾರಣ ಆನಂದದಿಂದ ಆ ಹಬ್ಬವನ್ನು ಅವರು ಆಚರಿಸಲಾರಂಭಿಸಿದರು.

ಇನ್ನೊಮ್ಮೆ ಜನರೆಲ್ಲರು ಕೂಡಿಬರುತ್ತಾರೆ. ಈ ಸಮಯದಲ್ಲಿ, “ಇಸ್ರಾಯೇಲ್‌ ಸಂತಾನದವರು” ಜನಾಂಗೀಯ ಪಾಪಗಳನ್ನು ನಿವೇದನೆಮಾಡುತ್ತಾರೆ, ಲೇವಿಯರು ಇಸ್ರಾಯೇಲ್ಯರೊಂದಿಗೆ ದೇವರ ವ್ಯವಹಾರವನ್ನು ವಿಮರ್ಶಿಸುತ್ತಾರೆ ಮತ್ತು ಜನರೆಲ್ಲರು ‘ದೇವರ ಧರ್ಮೋಪದೇಶವನ್ನು ಅನುಸರಿಸಿ ನಡೆಯುವುದಾಗಿ’ ಆಣೆಯಿಡುತ್ತಾರೆ. (ನೆಹೆಮೀಯ 9:​1, 2; 10:29) ಯೆರೂಸಲೇಮ್‌ನಲ್ಲಿ ಜನಸಂಖ್ಯೆಯು ಕಡಿಮೆಯಿದ್ದ ಕಾರಣ, ನಗರದಿಂದ ಹೊರಗೆ ವಾಸಿಸುತ್ತಿದ್ದ ಪ್ರತಿ 10 ಮಂದಿಯಲ್ಲಿ ಒಬ್ಬನಿಗೆ ಒಳಗೆ ಬರಸಾಧ್ಯವಾಗುವಂತೆ ಚೀಟುಹಾಕಲಾಗುತ್ತದೆ. ನಂತರ, ಬಹು ಆನಂದದಿಂದ ಗೋಡೆಯು ಪ್ರತಿಷ್ಠಿಸಲ್ಪಡುತ್ತದೆ. ‘ಯೆರೂಸಲೇಮಿನ ಉತ್ಸವದ ಹರ್ಷಧ್ವನಿಯು ಬಹುದೂರದ ವರೆಗೂ ಕೇಳಿಸುತ್ತದೆ.’ (ನೆಹೆಮೀಯ 12:43) ನೆಹೆಮೀಯನು ಯೆರೂಸಲೇಮಿಗೆ ಬಂದು ಹನ್ನೆರಡು ವರುಷಗಳು ದಾಟಿದ ಬಳಿಕ ಪುನಃ ಅರ್ತಷಸ್ತನ ಬಳಿಗೆ ತನ್ನ ನೇಮಕಕ್ಕೆ ಹಿಂದಿರುಗುತ್ತಾನೆ. ಅತಿ ಬೇಗನೆ ಅಶುದ್ಧತೆಯು ಯೆಹೂದ್ಯರ ಮಧ್ಯೆ ತೋರಿಬರುತ್ತದೆ. ಯೆರೂಸಲೇಮಿಗೆ ಹಿಂದಿರುಗಿದ ಕೂಡಲೆ ಪರಿಸ್ಥಿತಿಯನ್ನು ಸರಿಪಡಿಸಲು ನೆಹೆಮೀಯನು ನಿರ್ಣಾಯಕ ಕ್ರಮವನ್ನು ಕೈಗೊಳ್ಳುತ್ತಾನೆ. ಮತ್ತು ಅವನು ತನಗಾಗಿ ಯೆಹೋವನಲ್ಲಿ ಈ ದೀನ ಬಿನ್ನಹವನ್ನು ಮಾಡುತ್ತಾನೆ: “ನನ್ನ ದೇವರೇ, ನನ್ನ ಹಿತಕ್ಕಾಗಿ ಇದನ್ನು ನೆನಪುಮಾಡಿಕೋ.”​—⁠ನೆಹೆಮೀಯ 13:⁠31.

ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:

7:​6-67​—⁠ಜೆರುಬ್ಬಾಬೆಲನೊಂದಿಗೆ ಯೆರೂಸಲೇಮಿಗೆ ಹಿಂದಿರುಗಿದ ಜನಶೇಷದ ಕುರಿತು ನೆಹೆಮೀಯನು ಮಾಡಿದ ಪಟ್ಟಿಗೂ ಎಜ್ರನು ತಿಳಿಸಿದ ಪ್ರತಿಯೊಂದು ಗೋತ್ರದವರ ವೈಯಕ್ತಿಕ ಸಂಖ್ಯೆಗೂ ಏಕೆ ವ್ಯತ್ಯಾಸವಿದೆ? (ಎಜ್ರ 2:​1-65) ಈ ವ್ಯತ್ಯಾಸಕ್ಕೆ, ಎಜ್ರ ಮತ್ತು ನೆಹೆಮೀಯರು ಬೇರೆ ಬೇರೆ ವಿಷಯವಸ್ತುವಿನ ಮೂಲವನ್ನು ಉಪಯೋಗಿಸಿದ್ದೇ ಕಾರಣವಾಗಿದ್ದಿರಬಹುದು. ಉದಾಹರಣೆಗೆ, ಹಿಂದಿರುಗಿ ಹೋಗಬೇಕೆಂದು ಖಾನೇಷುಮಾರಿ ಮಾಡಿಸಿಕೊಂಡವರ ಸಂಖ್ಯೆಯು ನಿಜವಾಗಿ ಹಿಂದಿರುಗಿದವರ ಸಂಖ್ಯೆಗಿಂತ ವ್ಯತ್ಯಾಸವಾಗಿರಬಹುದು. ಎರಡು ದಾಖಲೆಗಳು ವ್ಯತ್ಯಾಸವಾಗಿರಲು ಇನ್ನೊಂದು ಕಾರಣವು, ಆರಂಭದಲ್ಲಿ ತಮ್ಮ ವಂಶಾವಳಿಯನ್ನು ದಾಖಲಿಸಲು ಅಶಕ್ತರಾಗಿದ್ದ ಕೆಲವು ಯೆಹೂದ್ಯರು ಆಮೇಲೆ ಅದನ್ನು ದಾಖಲಿಸಿದ್ದಿರಬಹುದು. ಆದರೆ ಎರಡೂ ದಾಖಲೆಗಳು ಒಂದು ಅಂಶವನ್ನು ಒಪ್ಪುತ್ತವೆ: ದಾಸರನ್ನೂ ಗಾಯಕರನ್ನೂ ಬಿಟ್ಟು, ಆರಂಭದಲ್ಲಿ ಹಿಂದಿರುಗಿದವರ ಸಂಖ್ಯೆಯು 42,360 ಆಗಿತ್ತು.

10:34​—⁠ಜನರು ಕಟ್ಟಿಗೆಯನ್ನು ಒದಗಿಸುವಂತೆ ಏಕೆ ಕೇಳಿಕೊಳ್ಳಲ್ಪಟ್ಟರು? ಮೋಶೆಯ ಧರ್ಮಶಾಸ್ತ್ರದಲ್ಲಿ ಕಟ್ಟಿಗೆಯನ್ನು ದಾನಮಾಡುವಂತೆ ಆಜ್ಞಾಪಿಸಿರಲಿಲ್ಲ. ಈ ನಿಯಮವು, ಅಗತ್ಯಕ್ಕೆ ಅನುಗುಣವಾಗಿ ಜಾರಿಗೆ ಬಂದಿದೆ. ಯಜ್ಞವೇದಿಯಲ್ಲಿ ಪ್ರಾಣಿಗಳನ್ನು ಸುಡಲು ದೊಡ್ಡ ಮೊತ್ತದ ಕಟ್ಟಿಗೆಯ ಅಗತ್ಯವಿತ್ತು. ಮಾತ್ರವಲ್ಲದೆ, ದೇವಸ್ಥಾನದಾಸರಾಗಿ ಸೇವೆಸಲ್ಲಿಸುತ್ತಿದ್ದ ಇಸ್ರಾಯೇಲ್ಯೇತರ ನೆಥಿನಿಮರು (ದೇವಸ್ಥಾನದಾಸರು) ಸಾಕಷ್ಟಿರಲಿಲ್ಲ. ಆದುದರಿಂದ, ಕ್ರಮವಾಗಿ ಕಟ್ಟಿಗೆಯು ಒದಗಿಸಲ್ಪಡುವಂತೆ ಚೀಟುಹಾಕಲಾಯಿತು.

13:​6​—⁠ಎಷ್ಟು ಕಾಲದ ವರೆಗೆ ನೆಹೆಮೀಯನು ಯೆರೂಸಲೇಮಿನಲ್ಲಿ ಇರಲಿಲ್ಲ? “ಕಾಲಾಂತರದಲ್ಲಿ” ನೆಹೆಮೀಯನು ಅರಸನಿಂದ ಅಪ್ಪಣೆಪಡಕೊಂಡು ತಿರಿಗಿ ಯೆರೂಸಲೇಮಿಗೆ ಹೋದನು ಎಂಬುದಾಗಿ ಬೈಬಲ್‌ ತಿಳಿಸುತ್ತದೆ. ಆದುದರಿಂದ, ಅವನು ಯೆರೂಸಲೇಮಿನಲ್ಲಿ ಎಷ್ಟು ಕಾಲ ಇರಲಿಲ್ಲ ಎಂಬುದನ್ನು ತಿಳಿದುಕೊಳ್ಳುವುದು ಅಸಾಧ್ಯ ಸಂಗತಿ. ಆದರೆ ನೆಹೆಮೀಯನು ಯೆರೂಸಲೇಮಿಗೆ ಹಿಂದಿರುಗಿದಾಗ, ಅಲ್ಲಿ ಯಾಜಕತ್ವವು ಬೆಂಬಲಿಸಲ್ಪಡದೆ ಇದ್ದದ್ದನ್ನೂ ಸಬ್ಬತ್‌ ನಿಯಮವು ಅನುಸರಿಸಲ್ಪಡದೆ ಇದ್ದದ್ದನ್ನೂ ಅವನು ಗಮನಿಸಿದನು. ಮಾತ್ರವಲ್ಲದೆ, ಅನೇಕರು ಅನ್ಯಜನಾಂಗದ ಸ್ತ್ರೀಯರನ್ನು ಮದುವೆಮಾಡಿಕೊಂಡಿದ್ದರು ಮತ್ತು ಅವರ ಮಕ್ಕಳು ಯೂದಾಯ ಭಾಷೆಯಲ್ಲಿ ಮಾತಾಡಲು ಅರಿಯದೆ ಇದ್ದರು. ಪರಿಸ್ಥಿತಿ ಇಷ್ಟೊಂದು ಕೆಟ್ಟದ್ದಾಗಿತ್ತೆಂದರೆ, ನೆಹೆಮೀಯನು ಬಹಳ ಕಾಲದ ವರೆಗೆ ಯೆರೂಸಲೇಮಿನಿಂದ ದೂರವಿದ್ದಿರಬೇಕು.

13:​25, 28​—⁠ಅವನತಿಗೊಂಡಿದ್ದ ಯೆಹೂದ್ಯರ ಮೇಲೆ ‘ಕೋಪಗೊಂಡದ್ದಲ್ಲದೆ’, ಇನ್ನಾವ ತಿದ್ದುಪಡಿ ಕ್ರಮಗಳನ್ನು ನೆಹೆಮೀಯನು ಕೈಗೊಂಡನು? ನೆಹೆಮೀಯನು ‘ಅವರನ್ನು ಶಪಿಸಿದನು’ ಅಂದರೆ ದೇವರ ಧರ್ಮಶಾಸ್ತ್ರದಲ್ಲಿ ಕಂಡುಬರುವ ಪ್ರತಿಕೂಲ ತೀರ್ಪುಗಳನ್ನು ಅವರಿಗೆ ತಿಳಿಸಿದನು. ಒಂದುವೇಳೆ ಅವರ ವಿರುದ್ಧ ನ್ಯಾಯಸ್ಥಾನವು ಕಾರ್ಯವೆಸಗುವಂತೆ ಕೇಳಿಕೊಳ್ಳುವ ಮೂಲಕ ಅವರಲ್ಲಿ ‘ಕೆಲವರನ್ನು ಹೊಡೆದಿರಬಹುದು.’ ಅವನ ಧರ್ಮಕ್ರೋಧದ ಸಂಕೇತವಾಗಿ ಅವನು ‘ಅವರ ಕೂದಲುಗಳನ್ನು ಕಿತ್ತುಹಾಕಿದನು.’ ಮಾತ್ರವಲ್ಲದೆ, ಹೊರೋನ್ಯನಾದ ಸನ್ಬಲ್ಲಟನ ಮಗಳನ್ನು ಮದುವೆಯಾದ ಮಹಾಯಾಜಕ ಎಲ್ಯಾಷೀಬನ ಮೊಮ್ಮಗನನ್ನೂ ಅವನು ಓಡಿಸಿಬಿಟ್ಟನು.

ನಮಗಾಗಿರುವ ಪಾಠಗಳು:

8:⁠8. ದೇವರ ವಾಕ್ಯದ ಬೋಧಕರಾದ ನಾವು, ಉತ್ತಮ ಉಚ್ಚಾರಣೆಯನ್ನು ಉಪಯೋಗಿಸುವ, ಮೌಖಿಕವಾಗಿ ಒತ್ತುಕೊಡುವ ಮತ್ತು ಶಾಸ್ತ್ರವಚನಗಳನ್ನು ಸರಿಯಾಗಿ ವಿವರಿಸಿ ಅದರ ಅನ್ವಯವನ್ನು ಸ್ಪಷ್ಟಪಡಿಸುವ ಮೂಲಕ ದೇವರ ವಾಕ್ಯದ “ತಾತ್ಪರ್ಯವನ್ನು” ತಿಳಿಸುತ್ತೇವೆ.

8:10. ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರಾಗಿರುವ, ಅದನ್ನು ಪೂರೈಸಿಕೊಳ್ಳುವ ಹಾಗೂ ದೇವಪ್ರಭುತ್ವಾತ್ಮಕ ಮಾರ್ಗದರ್ಶನವನ್ನು ಅನುಸರಿಸುವ ಮೂಲಕ ‘ಯೆಹೋವನ ಆನಂದವು’ ಲಭಿಸುತ್ತದೆ. ಆದುದರಿಂದ, ಶ್ರದ್ಧಾಪೂರ್ವಕವಾಗಿ ಬೈಬಲನ್ನು ಅಧ್ಯಯನಮಾಡುವುದು, ಕ್ರಮವಾಗಿ ಕ್ರೈಸ್ತ ಕೂಟಗಳಿಗೆ ಹಾಜರಾಗುವುದು ಮತ್ತು ರಾಜ್ಯ ಸಾರುವ ಹಾಗೂ ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಹುರುಪಿನಿಂದ ಭಾಗವಹಿಸುವುದು ಎಷ್ಟು ಪ್ರಾಮುಖ್ಯವಾಗಿದೆ!

11:⁠2. ಪಿತ್ರಾರ್ಜಿತ ಆಸ್ತಿಪಾಸ್ತಿಯನ್ನು ಬಿಟ್ಟು ಯೆರೂಸಲೇಮಿಗೆ ಸ್ಥಳಾಂತರಿಸುವುದರಲ್ಲಿ ವೈಯಕ್ತಿಕ ಖರ್ಚು ಮತ್ತು ಕೆಲವು ಅನಾನುಕೂಲತೆಗಳು ಒಳಗೂಡಿದ್ದವು. ಸ್ವೇಚ್ಛೆಯಿಂದ ಹೀಗೆ ಮಾಡಲು ಬಯಸಿದವರು ಸ್ವತ್ಯಾಗದ ಮನೋಭಾವವನ್ನು ಪ್ರದರ್ಶಿಸಿದರು. ನಾವು ಸಹ, ಅಧಿವೇಶನಗಳಲ್ಲಿ ಮತ್ತು ಇತರ ಸಂದರ್ಭಗಳಲ್ಲಿ ಇತರರ ಪರವಾಗಿ ಸ್ವಯಂಸೇವೆಯನ್ನು ಮಾಡಲು ನೀಡಿಕೊಳ್ಳುವ ಮೂಲಕ ಅಂಥ ಮನೋಭಾವವನ್ನು ತೋರಿಸಸಾಧ್ಯವಿದೆ.

12:​31, 38, 40-42. ಗಾಯನವು ಯೆಹೋವನನ್ನು ಸ್ತುತಿಸಲು ಮತ್ತು ಆತನಿಗಾಗಿನ ನಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಲು ಅತ್ಯುತ್ತಮ ಮಾರ್ಗವಾಗಿದೆ. ಕ್ರೈಸ್ತ ಒಕ್ಕೂಟಗಳಲ್ಲಿ ನಾವು ಪೂರ್ಣಹೃದಯದಿಂದ ಹಾಡಬೇಕು.

13:​4-31. ಪ್ರಾಪಂಚಿಕತೆ, ಭ್ರಷ್ಟಾಚಾರ ಮತ್ತು ಧರ್ಮಭ್ರಷ್ಟತೆಯು ಕ್ರಮೇಣವಾಗಿ ನಮ್ಮ ಜೀವನದಲ್ಲಿ ಒಳಪ್ರವೇಶಿಸದಂತೆ ನಾವು ಎಚ್ಚರವಹಿಸಬೇಕು.

13:22. ತಾನು ದೇವರಿಗೆ ಲೆಕ್ಕಒಪ್ಪಿಸಬೇಕಾಗಿದೆ ಎಂಬುದು ನೆಹೆಮೀಯನಿಗೆ ಚೆನ್ನಾಗಿ ತಿಳಿದಿತ್ತು. ನಾವು ಸಹ ಯೆಹೋವನಿಗೆ ಲೆಕ್ಕಒಪ್ಪಿಸಬೇಕೆಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

ಯೆಹೋವನ ಆಶೀರ್ವಾದವು ಅತ್ಯಗತ್ಯ!

“ಯೆಹೋವನು ಮನೇ ಕಟ್ಟದಿದ್ದರೆ ಅದನ್ನು ಕಟ್ಟುವವರು ಕಷ್ಟಪಡುವದು ವ್ಯರ್ಥ; ಯೆಹೋವನು ಪಟ್ಟಣವನ್ನು ಕಾಯದಿದ್ದರೆ ಕಾವಲುಗಾರರು ಅದನ್ನು ಕಾಯುವದು ವ್ಯರ್ಥ” ಎಂಬುದಾಗಿ ಕೀರ್ತನೆಗಾರನು ಹಾಡಿದನು. (ಕೀರ್ತನೆ 127:1) ಈ ಮಾತುಗಳ ಸತ್ಯತೆಯನ್ನು ನೆಹೆಮೀಯ ಪುಸ್ತಕವು ಎಷ್ಟು ಸುಂದರವಾಗಿ ದೃಷ್ಟಾಂತಿಸುತ್ತದೆ!

ನಮಗಿರುವ ಪಾಠವು ಸ್ಪಷ್ಟವಾಗಿದೆ. ನಾವು ಮಾಡುವ ಯಾವುದೇ ಕೆಲಸದಲ್ಲಿ ಯಶಸ್ಸನ್ನು ಕಾಣಬೇಕಾದರೆ ಯೆಹೋವನ ಆಶೀರ್ವಾದವು ಅತ್ಯಗತ್ಯ. ಆದರೆ, ನಮ್ಮ ಜೀವನದಲ್ಲಿ ಸತ್ಯಾರಾಧನೆಗೆ ಮೊದಲ ಸ್ಥಾನವನ್ನು ನೀಡದೆ, ಯೆಹೋವನು ನಮ್ಮನ್ನು ಆಶೀರ್ವದಿಸಬೇಕೆಂದು ನಾವು ಎದುರುನೋಡಸಾಧ್ಯವಿದೆಯೊ? ಆದುದರಿಂದ, ನೆಹೆಮೀಯನಂತೆ ನಾವು ಸಹ ಯೆಹೋವನ ಆರಾಧನೆ ಮತ್ತು ಅದರ ಪ್ರವರ್ಧನೆಯನ್ನು ನಮ್ಮ ಪ್ರಾಮುಖ್ಯ ಚಿಂತನೆಯನ್ನಾಗಿ ಮಾಡೋಣ.

[ಪುಟ 8ರಲ್ಲಿರುವ ಚಿತ್ರ]

“ರಾಜನ ಸಂಕಲ್ಪಗಳು ಯೆಹೋವನ ಕೈಯಲ್ಲಿ ನೀರಿನ ಕಾಲಿವೆಗಳಂತೆ ಇವೆ”

[ಪುಟ 9ರಲ್ಲಿರುವ ಚಿತ್ರ]

ಕಾರ್ಯನಿಷ್ಠ ಮತ್ತು ಸಹಾನುಭೂತಿಯುಳ್ಳ ಮನುಷ್ಯನಾದ ನೆಹೆಮೀಯನು ಯೆರೂಸಲೇಮಿಗೆ ಬರುತ್ತಾನೆ

[ಪುಟ 10, 11ರಲ್ಲಿರುವ ಚಿತ್ರಗಳು]

ದೇವರ ವಾಕ್ಯದ “ತಾತ್ಪರ್ಯವನ್ನು” ಹೇಗೆ ತಿಳಿಸುವುದೆಂದು ನಿಮಗೆ ತಿಳಿದಿದೆಯೊ?