ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ತಾಳ್ಮೆಯನ್ನು ಅನುಕರಿಸಿರಿ

ಯೆಹೋವನ ತಾಳ್ಮೆಯನ್ನು ಅನುಕರಿಸಿರಿ

ಯೆಹೋವನ ತಾಳ್ಮೆಯನ್ನು ಅನುಕರಿಸಿರಿ

“ಯೆಹೋವನು ತನ್ನ ವಾಗ್ದಾನದ ವಿಷಯದಲ್ಲಿ ನಿಧಾನಿಯಾಗಿರದೆ . . . ತಾಳ್ಮೆಯುಳ್ಳವನಾಗಿದ್ದಾನೆ.” ​—⁠2 ಪೇತ್ರ 3:⁠9, NW.

ಯೆಹೋವನು ಬೇರೆ ಯಾರಿಂದಲೂ ನೀಡಲಸಾಧ್ಯವಾದ ಒಂದನ್ನು ನಮಗೆ ನೀಡಿದ್ದಾನೆ. ಅದು ಅತಿ ಆಕರ್ಷಣೀಯವಾದದ್ದು ಮತ್ತು ಅತ್ಯಮೂಲ್ಯವಾದದ್ದು ಕೂಡ. ಆದರೆ ಅದನ್ನು ನಮ್ಮಿಂದ ಕೊಂಡುಕೊಳ್ಳಲು ಅಥವಾ ಸಂಪಾದಿಸಿಕೊಳ್ಳಲು ಸಾಧ್ಯವಿಲ್ಲ. ಆತನು ನಮಗೆ ನೀಡುವಂಥದ್ದು ನಿತ್ಯಜೀವವಾಗಿದೆ​—⁠ನಮ್ಮಲ್ಲಿ ಹೆಚ್ಚಿನವರಿಗೆ ಇದು ಪರದೈಸ್‌ ಭೂಮಿಯ ಮೇಲೆ ಅಂತ್ಯವಿಲ್ಲದ ಜೀವನವನ್ನು ಆನಂದಿಸುವುದನ್ನು ಅರ್ಥೈಸುತ್ತದೆ. (ಯೋಹಾನ 3:16) ಅದೆಷ್ಟು ಆಹ್ಲಾದಕರವಾಗಿರುವುದು! ನಮಗೆ ತುಂಬ ವ್ಯಥೆಯನ್ನು ಉಂಟುಮಾಡುವಂಥ ಕಲಹ, ಹಿಂಸೆ, ಬಡತನ, ಪಾತಕ, ಕಾಯಿಲೆ ಮತ್ತು ಮರಣವು ಸಹ ಗತಕಾಲದ ವಿಷಯಗಳಾಗಿರುವವು. ಜನರು ದೇವರ ರಾಜ್ಯದ ಪ್ರೀತಿಭರಿತ ಆಳ್ವಿಕೆಯ ಕೆಳಗೆ ಸಂಪೂರ್ಣ ಶಾಂತಿ ಮತ್ತು ಐಕ್ಯದಿಂದ ಜೀವಿಸುವರು. ನಾವು ಆ ಪರದೈಸ್‌ಗೋಸ್ಕರ ಎಷ್ಟೊಂದು ಹಾತೊರೆಯುತ್ತೇವೆ!​—⁠ಯೆಶಾಯ 9:6, 7; ಪ್ರಕಟನೆ 21:4, 5.

2 ಯೆಹೋವನು ಕೂಡ ಭೂಮಿಯ ಮೇಲೆ ಪರದೈಸನ್ನು ಸ್ಥಾಪಿಸುವ ಆ ಸಮಯಕ್ಕಾಗಿ ಎದುರುನೋಡುತ್ತಿದ್ದಾನೆ. ಏಕೆಂದರೆ ಆತನು ನೀತಿನ್ಯಾಯಗಳನ್ನು ಪ್ರೀತಿಸುವವನಾಗಿದ್ದಾನೆ. (ಕೀರ್ತನೆ 33:5) ತನ್ನ ನೀತಿಯುತ ಮೂಲತತ್ತ್ವಗಳನ್ನು ಉದಾಸೀನಭಾವದಿಂದ ಕಾಣುವ ಅಥವಾ ಅದರ ಬಗ್ಗೆ ಹಗೆತನವನ್ನು ವ್ಯಕ್ತಪಡಿಸುವ ಹಾಗೂ ತನ್ನ ಅಧಿಕಾರವನ್ನು ತುಚ್ಛೀಕರಿಸಿ ಆತನ ಜನರ ಮೇಲೆ ದಬ್ಬಾಳಿಕೆಯನ್ನು ನಡಿಸುವ ಲೋಕವನ್ನು ವೀಕ್ಷಿಸುವುದರಲ್ಲಿ ಆತನಿಗೆ ಸಂತೋಷವಾಗುವುದಿಲ್ಲ. ಆದರೂ, ಆತನು ಸೈತಾನನ ದುಷ್ಟ ವಿಷಯಗಳ ವ್ಯವಸ್ಥೆಯನ್ನು ಇನ್ನೂ ಏಕೆ ತೆಗೆದುಹಾಕಿಲ್ಲ ಎಂಬುದಕ್ಕೆ ಸಕಾರಣಗಳಿವೆ. ಈ ಕಾರಣಗಳಲ್ಲಿ ತನ್ನ ಪರಮಾಧಿಕಾರವನ್ನು ಒಳಗೊಂಡಿರುವ ನೈತಿಕ ವಿವಾದಗಳು ಒಳಗೂಡಿವೆ. ಈ ವಿವಾದಗಳನ್ನು ಇತ್ಯರ್ಥಗೊಳಿಸುವುದರಲ್ಲಿ ಯೆಹೋವನು ಆಕರ್ಷಣೀಯವಾದ ಆದರೆ ಇಂದು ಹೆಚ್ಚಿನ ಜನರಲ್ಲಿ ಕಾಣಸಿಗದ ಒಂದು ಗುಣವನ್ನು ಪ್ರದರ್ಶಿಸುತ್ತಾನೆ​—⁠ಆ ಗುಣ ತಾಳ್ಮೆಯಾಗಿದೆ.

3ನೂತನ ಲೋಕ ಭಾಷಾಂತರದಲ್ಲಿ * ಮೂರು ಬಾರಿ “ತಾಳ್ಮೆ” ಎಂದು ಭಾಷಾಂತರಿಸಲ್ಪಟ್ಟಿರುವ ಒಂದು ಗ್ರೀಕ್‌ ಪದವಿದೆ. ಅದು ವಾಸ್ತವದಲ್ಲಿ, “ದೀರ್ಘ ಮನೋಬಲ” ಎಂಬರ್ಥವನ್ನು ನೀಡುತ್ತದೆ. ಆದುದರಿಂದ ಇದನ್ನು ಅನೇಕಬಾರಿ “ದೀರ್ಘಸೈರಣೆ” ಮತ್ತು ಒಂದು ಬಾರಿ “ತಾಳ್ಮೆ ತೋರಿಸುವುದು” ಎಂದು ಭಾಷಾಂತರಿಸಲಾಗಿದೆ. “ತಾಳ್ಮೆ”ಗಾಗಿರುವ ಗ್ರೀಕ್‌ ಮತ್ತು ಹೀಬ್ರು ಪದಗಳಲ್ಲಿ ಸಹಿಸಿಕೊಳ್ಳುವುದು ಮತ್ತು ಕೋಪಿಸಿಕೊಳ್ಳುವುದರಲ್ಲಿ ನಿಧಾನಿಸುವುದು ಎಂಬ ವಿಚಾರಗಳು ಒಳಗೂಡಿವೆ. ಯೆಹೋವನ ತಾಳ್ಮೆಯು ನಮಗೆ ಹೇಗೆ ಪ್ರಯೋಜನವನ್ನು ತರುತ್ತದೆ? ಯೆಹೋವನ ಹಾಗೂ ಆತನ ನಂಬಿಗಸ್ತ ಸೇವಕರ ತಾಳ್ಮೆ ಮತ್ತು ಸಹನಶೀಲತೆಯಿಂದ ನಾವು ಯಾವ ಪಾಠಗಳನ್ನು ಕಲಿತುಕೊಳ್ಳಸಾಧ್ಯವಿದೆ? ಯೆಹೋವನ ತಾಳ್ಮೆಗೆ ಮಿತಿಯುಂಟು ಎಂಬುದು ನಮಗೆ ಹೇಗೆ ಗೊತ್ತು? ನಾವು ಈ ವಿಷಯಗಳನ್ನು ಪರಿಗಣಿಸಲಿಕ್ಕಿದ್ದೇವೆ.

ಯೆಹೋವನ ತಾಳ್ಮೆಯನ್ನು ಪರಿಗಣಿಸಿರಿ

4 ಯೆಹೋವನ ತಾಳ್ಮೆಯ ಕುರಿತು ಅಪೊಸ್ತಲ ಪೇತ್ರನು ಬರೆದದ್ದು: “ಪ್ರಿಯರೇ, ಕರ್ತನ [“ಯೆಹೋವನ,” NW] ಎಣಿಕೆಯಲ್ಲಿ ಒಂದು ದಿನವು ಸಾವಿರ ವರುಷಗಳಂತೆಯೂ ಸಾವಿರ ವರುಷಗಳು ಒಂದು ದಿನದಂತೆಯೂ ಅವೆ ಎಂಬದನ್ನು ಮಾತ್ರ ಮರೆಯಬೇಡಿರಿ. [ಯೆಹೋವನು] ತನ್ನ ವಾಗ್ದಾನವನ್ನು ನೆರವೇರಿಸುವದಕ್ಕೆ ತಡಮಾಡುತ್ತಾನೆಂಬದಾಗಿ ಕೆಲವರು ಅರ್ಥಮಾಡಿಕೊಳ್ಳುವ ಪ್ರಕಾರ ಆತನು ತಡಮಾಡುವವನಲ್ಲ. ಯಾವನಾದರೂ ನಾಶವಾಗುವದರಲ್ಲಿ ಆತನು ಇಷ್ಟಪಡದೆ ಎಲ್ಲರೂ ತನ್ನ ಕಡೆಗೆ ತಿರುಗಿಕೊಳ್ಳಬೇಕೆಂದು ಅಪೇಕ್ಷಿಸುವವನಾಗಿದ್ದು ನಿಮ್ಮ ವಿಷಯದಲ್ಲಿ ದೀರ್ಘಶಾಂತಿಯುಳ್ಳವನಾಗಿದ್ದಾನೆ” ಅಥವಾ ತಾಳ್ಮೆಯುಳ್ಳವನಾಗಿದ್ದಾನೆ. (2 ಪೇತ್ರ 3:8, 9) ಯೆಹೋವನ ತಾಳ್ಮೆಯನ್ನು ಅರ್ಥಮಾಡಿಕೊಳ್ಳುವಂತೆ ನಮಗೆ ಸಹಾಯಮಾಡುವ ಎರಡು ಅಂಶಗಳು ಈ ವಚನದಲ್ಲಿ ತಿಳಿಸಲ್ಪಟ್ಟಿರುವುದನ್ನು ದಯವಿಟ್ಟು ಗಮನಿಸಿರಿ.

5 ಮೊದಲನೆಯ ಅಂಶವೇನೆಂದರೆ, ಯೆಹೋವನು ಸಮಯವನ್ನು ನಾವು ವೀಕ್ಷಿಸುವ ರೀತಿಯಲ್ಲಿ ವೀಕ್ಷಿಸುವುದಿಲ್ಲ. ಸದಾಕಾಲವೂ ಜೀವಿಸುವಾತನಿಗೆ ಒಂದು ಸಾವಿರ ವರುಷಗಳು ಒಂದು ದಿನದಂತೆ ಇರುತ್ತವಷ್ಟೆ. ಆತನಿಗೆ ಸಮಯದ ಕೊರತೆಯೋ ಒತ್ತಡವೋ ಇಲ್ಲ, ಮತ್ತು ಆತನು ಕ್ರಮ ಕೈಕೊಳ್ಳುವುದರಲ್ಲಿಯೂ ನಿಧಾನಿಸುತ್ತಿಲ್ಲ. ಅಪರಿಮಿತ ವಿವೇಕವನ್ನು ಹೊಂದಿರುವ ಯೆಹೋವನಿಗೆ, ಸಂಬಂಧಪಟ್ಟ ಎಲ್ಲರ ಪ್ರಯೋಜನಾರ್ಥವಾಗಿ ಕ್ರಿಯೆಗೈಯಬೇಕಾದ ಅತ್ಯುತ್ತಮ ಸಮಯ ಯಾವುದು ಎಂಬುದು ತಿಳಿದಿದೆ ಮತ್ತು ಆತನು ಆ ಸಮಯವು ಬರುವುದಕ್ಕಾಗಿ ತಾಳ್ಮೆಯಿಂದ ಕಾಯುತ್ತಾನೆ. ಆದರೂ, ಆತನು ಕಾಯುತ್ತಿರುವ ಈ ಸಮಯದಲ್ಲಿ ತನ್ನ ಸೇವಕರಿಗೆ ಯಾವುದೇ ಕಷ್ಟಸಂಕಟ ಬಂದರೂ ಆತನು ಅದರ ಬಗ್ಗೆ ಚಿಂತಿಸುವುದಿಲ್ಲ ಎಂದು ನಾವು ತೀರ್ಮಾನಿಸಬಾರದು. ಆತನು “ಅತ್ಯಂತಕರುಣೆ”ಯುಳ್ಳ ದೇವರಾಗಿದ್ದಾನೆ ಮತ್ತು ಪ್ರೀತಿಯ ವ್ಯಕ್ತೀಕರಣ ಆಗಿದ್ದಾನೆ. (ಲೂಕ 1:77; 1 ಯೋಹಾನ 4:8) ತಾತ್ಕಾಲಿಕವಾಗಿ ಆತನು ಅನುಮತಿಸಿರುವ ಈ ಕಷ್ಟಸಂಕಟಗಳು ಉಂಟುಮಾಡಿರಬಹುದಾದ ಯಾವುದೇ ಹಾನಿಯನ್ನು ಆತನು ಸಂಪೂರ್ಣವಾಗಿಯೂ ಶಾಶ್ವತವಾಗಿಯೂ ನಿವಾರಿಸಬಲ್ಲನು.​—⁠ಕೀರ್ತನೆ 37:⁠10.

6 ವಾಸ್ತವದಲ್ಲಿ, ಒಬ್ಬನು ಹಾತೊರೆಯುತ್ತಿರುವ ಒಂದು ವಿಷಯಕ್ಕಾಗಿ ಕಾಯುವುದು ಸುಲಭವೇನಲ್ಲ. (ಜ್ಞಾನೋಕ್ತಿ 13:12) ಆದುದರಿಂದ, ಸಾಮಾನ್ಯವಾಗಿ ಜನರು ತಾವು ಕೊಟ್ಟ ಮಾತನ್ನು ಬೇಗನೆ ಪೂರೈಸದಿದ್ದಲ್ಲಿ ಅವರಿಗೆ ಅದನ್ನು ಪೂರೈಸುವುದಕ್ಕೆ ಮನಸ್ಸಿಲ್ಲ ಎಂದು ಇತರರು ತೀರ್ಮಾನಿಸಬಹುದು. ಆದರೆ ದೇವರ ಬಗ್ಗೆ ಹಾಗೆ ನೆನಸುವುದು ಎಷ್ಟು ಅವಿವೇಕಯುತವಾಗಿರುವುದು! ದೇವರು ತೋರಿಸುವ ತಾಳ್ಮೆಯನ್ನು ಆತನು ನಿಧಾನಿಸುತ್ತಿದ್ದಾನೆ ಎಂದು ನಾವು ತಪ್ಪಾಗಿ ತಿಳಿಯುವಲ್ಲಿ, ಸಮಯ ಸಂದಂತೆ ನಾವು ಸುಲಭವಾಗಿ ಸಂದೇಹ ಮತ್ತು ನಿರುತ್ಸಾಹಗಳಿಗೆ ಬಲಿಬೀಳಸಾಧ್ಯವಿದೆ. ಇದು ನಮ್ಮನ್ನು ಆಧ್ಯಾತ್ಮಿಕವಾಗಿ ತೂಕಡಿಸುವ ಅಪಾಯದಲ್ಲಿ ಸಿಕ್ಕಿಸಸಾಧ್ಯವಿದೆ. ಅಥವಾ ಇನ್ನೂ ಕೆಟ್ಟದಾಗಿ, ಪೇತ್ರನು ಯಾರ ಬಗ್ಗೆ ಈ ಮುಂಚೆಯೇ ಎಚ್ಚರಿಸಿದನೋ ಆ ನಂಬಿಕೆಯಿಲ್ಲದ ಕುಚೋದ್ಯಗಾರರಿಂದ ನಾವು ಮೋಸಹೋಗಬಹುದು. ಇಂಥವರು ಅಣಕಿಸುತ್ತಾ, “ಆತನ ಪ್ರತ್ಯಕ್ಷತೆಯ ವಿಷಯವಾದ ವಾಗ್ದಾನವು ಏನಾಯಿತು? ನಮ್ಮ ಪಿತೃಗಳು ನಿದ್ರೆಹೊಂದಿದ ದಿನ ಮೊದಲುಗೊಂಡು ಸಮಸ್ತವೂ ಲೋಕಾದಿಯಿಂದಿದ್ದ ಹಾಗೆಯೇ ಇರುತ್ತದಲ್ಲಾ” ಎಂದು ಹೇಳುತ್ತಾರೆ.​—⁠2 ಪೇತ್ರ 3:⁠4.

7 ನಾವು ಪೇತ್ರನ ಮಾತುಗಳಿಂದ ತಿಳಿದುಕೊಳ್ಳಸಾಧ್ಯವಿರುವ ಎರಡನೆಯ ಅಂಶವು ಯಾವುದೆಂದರೆ, ಎಲ್ಲರೂ ತನ್ನ ಕಡೆಗೆ ತಿರುಗಿಕೊಳ್ಳಬೇಕೆಂದು ಯೆಹೋವನು ಅಪೇಕ್ಷಿಸುವುದರಿಂದ ಆತನು ತಾಳ್ಮೆಯುಳ್ಳವನಾಗಿದ್ದಾನೆ. ಮೊಂಡತನದಿಂದ ತಮ್ಮ ದುರ್ಮಾಗಗಳನ್ನು ಬಿಟ್ಟುಬರಲು ನಿರಾಕರಿಸುವವರು ಯೆಹೋವನಿಂದ ಹತರಾಗುವರು. ಆದರೆ, ದುಷ್ಟರು ನಾಶವಾಗುವುದನ್ನು ನೋಡುವುದರಲ್ಲಿ ದೇವರಿಗೆ ಯಾವುದೇ ಸಂತೋಷವು ಸಿಗುವುದಿಲ್ಲ. ಅದರ ಬದಲಿಗೆ ಜನರು ಪಶ್ಚಾತ್ತಾಪಪಟ್ಟು ತಮ್ಮ ದುರ್ಮಾರ್ಗಗಳಿಗೆ ಬೆನ್ನುಹಾಕಿ ಸದಾ ಜೀವಿಸುವುದನ್ನು ನೋಡುವುದು ಯೆಹೋವನಿಗೆ ಇಷ್ಟ. (ಯೆಹೆಜ್ಕೇಲ 33:11) ಆದುದರಿಂದಲೇ ಆತನು ತಾಳ್ಮೆಯನ್ನು ತೋರಿಸುತ್ತಿದ್ದಾನೆ ಮತ್ತು ಸುವಾರ್ತೆಯನ್ನು ಇಡೀ ಲೋಕದಲ್ಲಿ ಸಾರುವಂತೆ ಮಾಡುವ ಮೂಲಕ ಜನರು ನಾಶನವನ್ನು ಪಾರಾಗಿ ಜೀವಂತವಾಗಿ ಉಳಿಯುವುದನ್ನು ಸಾಧ್ಯಗೊಳಿಸಲಿಕ್ಕಾಗಿ ಸಾಕಷ್ಟು ಅವಕಾಶವನ್ನು ದಯಪಾಲಿಸುತ್ತಿದ್ದಾನೆ.

8 ದೇವರು ಪ್ರಾಚೀನ ಇಸ್ರಾಯೇಲ್‌ ಜನಾಂಗದೊಂದಿಗೆ ವ್ಯವಹರಿಸಿದ ರೀತಿಯಲ್ಲೂ ಆತನ ತಾಳ್ಮೆಯು ಕಂಡುಬರುತ್ತದೆ. ಹಲವಾರು ಶತಮಾನಗಳಿಂದ ಆತನು ಅವರ ಅವಿಧೇಯತೆಯನ್ನು ತಾಳಿಕೊಂಡನು. ತನ್ನ ಪ್ರವಾದಿಗಳ ಮುಖಾಂತರ ಆತನು ಆಗಿಂದಾಗ್ಗೆ, “ನೀವು ನಿಮ್ಮ ದುರಾಚಾರವನ್ನು ಬಿಟ್ಟು ನಾನು ನಿಮ್ಮ ಪಿತೃಗಳಿಗೂ ನನ್ನ ಸೇವಕರಾದ ಪ್ರವಾದಿಗಳ ಮುಖಾಂತರವಾಗಿ ನಿಮಗೂ ಕೊಟ್ಟಂಥ ನನ್ನ ಎಲ್ಲಾ ಆಜ್ಞಾನಿಯಮವಿಧಿಗಳನ್ನು ಕೈಕೊಂಡು ನಡೆಯಿರಿ” ಎಂದು ಉತ್ತೇಜಿಸಿದನು. ಇದರ ಫಲಿತಾಂಶವೇನಾಗಿತ್ತು? ದುಃಖಕರವಾಗಿ, ಆ ಜನರು ಆತನಿಗೆ “ಕಿವಿಗೊಡದೆ ಹೋದರು.”​—⁠2 ಅರಸುಗಳು 17:13, 14.

9 ಅಂತಿಮವಾಗಿ, ಯೆಹೋವನು ತನ್ನ ಮಗನನ್ನು ಕಳುಹಿಸಿಕೊಟ್ಟನು. ಯೆಹೂದ್ಯರು ದೇವರ ಬಳಿಗೆ ಹಿಂದಿರುಗುವಂತೆ ಮಾಡುವುದರಲ್ಲಿ ಯೇಸು ತನ್ನಿಂದಾದ ಎಲ್ಲ ಪ್ರಯತ್ನವನ್ನು ಮಾಡಿದನು. ಯೇಸುವಿನ ತಾಳ್ಮೆಯು ತನ್ನ ತಂದೆಯ ತಾಳ್ಮೆಯನ್ನು ಪರಿಪೂರ್ಣವಾಗಿ ಪ್ರತಿಬಿಂಬಿಸಿತು. ತಾನು ಶೀಘ್ರವೇ ಕೊಲ್ಲಲ್ಪಡಲಿಕ್ಕಿದ್ದೇನೆ ಎಂಬುದನ್ನು ತಿಳಿದ ಯೇಸು ಪ್ರಲಾಪಿಸಿದ್ದು: “ಯೆರೂಸಲೇಮೇ, ಯೆರೂಸಲೇಮೇ, ಪ್ರವಾದಿಗಳ ಪ್ರಾಣ ತೆಗೆಯುವವಳೇ, ದೇವರು ನಿನ್ನ ಬಳಿಗೆ ಕಳುಹಿಸಿಕೊಟ್ಟವರನ್ನು ಕಲ್ಲೆಸೆದು ಕೊಲ್ಲುವವಳೇ, ಕೋಳಿ ತನ್ನ ಮರಿಗಳನ್ನು ರೆಕ್ಕೆಗಳ ಕೆಳಗೆ ಕೂಡಿಸಿಕೊಳ್ಳುವಂತೆ ನಿನ್ನ ಮಕ್ಕಳನ್ನು ಕೂಡಿಸಿಕೊಳ್ಳುವದಕ್ಕೆ ನನಗೆ ಎಷ್ಟೋ ಸಾರಿ ಮನಸ್ಸಿತ್ತು; ಆದರೆ ನಿಮಗೆ ಮನಸ್ಸಿಲ್ಲದೆ ಹೋಯಿತು.” (ಮತ್ತಾಯ 23:37) ಮನಸ್ಪರ್ಶಿಸುವಂಥ ಆ ಮಾತುಗಳು ಜನರನ್ನು ದಂಡಿಸಲಿಕ್ಕಾಗಿ ಹಾತೊರೆಯುವ ಒಬ್ಬ ನ್ಯಾಯಾಧೀಶನ ಬಾಯಿಂದ ಹೊರಟವುಗಳಲ್ಲ, ಬದಲಿಗೆ ಜನರೊಂದಿಗೆ ತಾಳ್ಮೆಯಿಂದ ವರ್ತಿಸುವ ಒಬ್ಬ ಪ್ರೀತಿಭರಿತ ಸ್ನೇಹಿತನ ಬಾಯಿಂದ ಹೊರಟ ಮಾತುಗಳಾಗಿವೆ. ಜನರು ಪಶ್ಚಾತ್ತಾಪಪಟ್ಟು ಪ್ರತಿಕೂಲ ನ್ಯಾಯತೀರ್ಪಿನಿಂದ ತಪ್ಪಿಸಿಕೊಳ್ಳಬೇಕೆಂದು ಬಯಸುವುದರಲ್ಲಿ ಯೇಸು ಸ್ವರ್ಗದಲ್ಲಿದ್ದ ತನ್ನ ತಂದೆಯ ಅನಿಸಿಕೆಯನ್ನೇ ಪ್ರತಿಬಿಂಬಿಸಿದನು. ಕೆಲವರು ಯೇಸು ಕೊಟ್ಟ ಎಚ್ಚರಿಕೆಗಳಿಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು ಮತ್ತು ಸಾ.ಶ. 70ರಲ್ಲಿ ಯೆರೂಸಲೇಮಿನ ಮೇಲೆ ತರಲ್ಪಟ್ಟ ಭಯಂಕರ ನ್ಯಾಯತೀರ್ಪಿನಿಂದ ತಪ್ಪಿಸಿಕೊಂಡರು.​—⁠ಲೂಕ 21:20-22.

10 ದೇವರು ತೋರಿಸುವಂಥ ತಾಳ್ಮೆಯು ವಾಸ್ತವದಲ್ಲಿ ಅತ್ಯುತ್ತಮವಾದ ಒಂದು ವಿಷಯವಾಗಿರುವುದಿಲ್ಲವೇ? ಮಾನವನ ಘೋರವಾದ ಅವಿಧೇಯತೆಯ ಹೊರತಾಗಿಯೂ, ಯೆಹೋವನು ತನ್ನ ಕುರಿತಾಗಿ ತಿಳಿದುಕೊಳ್ಳುವಂತೆ ಮತ್ತು ರಕ್ಷಣೆಯ ನಿರೀಕ್ಷೆಯನ್ನು ಸ್ವೀಕರಿಸುವಂತೆ ನಮ್ಮಲ್ಲಿ ಪ್ರತಿಯೊಬ್ಬರಿಗೆ ಹಾಗೂ ಇತರ ಲಕ್ಷಾಂತರ ಮಂದಿಗೆ ಅವಕಾಶವನ್ನು ಮಾಡಿಕೊಟ್ಟಿದ್ದಾನೆ. ಪೇತ್ರನು ಜೊತೆ ಕ್ರೈಸ್ತರಿಗೆ, “ನಮ್ಮ ಕರ್ತನ ದೀರ್ಘಶಾಂತಿಯು [ತಾಳ್ಮೆಯು] ನಮ್ಮ ರಕ್ಷಣಾರ್ಥವಾಗಿ ಅದೆ ಎಂದು ಎಣಿಸಿಕೊಳ್ಳಿರಿ” ಎಂದು ಬರೆದನು. (2 ಪೇತ್ರ 3:15) ಯೆಹೋವನು ತೋರಿಸಿರುವಂಥ ತಾಳ್ಮೆಯು ನಮಗೆ ರಕ್ಷಣೆಯ ಮಾರ್ಗವನ್ನು ತೆರೆದಿದೆ ಎಂಬುದರ ಬಗ್ಗೆ ನಾವು ಕೃತಜ್ಞರಾಗಿರುವುದಿಲ್ಲವೇ? ಅನುದಿನವೂ ನಾವು ಯೆಹೋವನ ಸೇವೆಯನ್ನು ಮಾಡುವಾಗ ಆತನು ನಮಗೆ ತಾಳ್ಮೆಯನ್ನು ತೋರಿಸುತ್ತಾ ಮುಂದುವರಿಯಬೇಕು ಎಂದು ನಾವು ಪ್ರಾರ್ಥಿಸುವುದಿಲ್ಲವೇ?​—⁠ಮತ್ತಾಯ 6:⁠12.

11 ಯೆಹೋವನು ಏಕೆ ತಾಳ್ಮೆಯಿಂದಿದ್ದಾನೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳುವಾಗ, ಆತನು ತನ್ನ ವಾಗ್ದಾನಗಳನ್ನು ಪೂರೈಸುವುದರಲ್ಲಿ ನಿಧಾನಿಸುತ್ತಿದ್ದಾನೆ ಎಂಬ ತೀರ್ಮಾನಕ್ಕೆ ನಾವೆಂದಿಗೂ ಬಾರದೆ ಆತನು ತರುವಂಥ ರಕ್ಷಣೆಗೆ ತಾಳ್ಮೆಯಿಂದ ಕಾದುಕೊಳ್ಳಲು ನಮಗೆ ಸಹಾಯವು ಸಿಗುತ್ತದೆ. (ಪ್ರಲಾಪಗಳು 3:26) ‘ನಿನ್ನ ರಾಜ್ಯವು ಬರಲಿ’ ಎಂದು ಪ್ರಾರ್ಥಿಸುವುದನ್ನು ನಾವು ಮುಂದುವರಿಸುವಾಗ, ಆ ಪ್ರಾರ್ಥನೆಗೆ ಉತ್ತರ ಕೊಡಬೇಕಾದ ಅತಿ ಸೂಕ್ತವಾದ ಸಮಯ ಯಾವುದೆಂಬುದು ಆತನಿಗೆ ತಿಳಿದಿದೆ ಎಂದು ಸಹ ನಾವು ನಂಬುತ್ತೇವೆ. ಮಾತ್ರವಲ್ಲದೆ, ನಮ್ಮ ಸಹೋದರರೊಂದಿಗೆ ಹಾಗೂ ನಾವು ಸಾರುವಂಥ ಜನರೊಂದಿಗೆ ವ್ಯವಹರಿಸುವುದರಲ್ಲಿ ದೈವಿಕ ತಾಳ್ಮೆಯನ್ನು ತೋರಿಸುವ ಮೂಲಕವಾಗಿ ಯೆಹೋವನನ್ನು ಅನುಕರಿಸುವಂತೆ ನಾವು ಪ್ರೇರಿಸಲ್ಪಡುತ್ತೇವೆ. ನಾವು ಸಹ ಯಾರೂ ನಾಶವಾಗುವುದನ್ನು ನೋಡಲು ಇಷ್ಟಪಡುವುದಿಲ್ಲ, ಬದಲಿಗೆ ಅವರು ಪಶ್ಚಾತ್ತಾಪಪಟ್ಟು ನಮ್ಮ ಹಾಗೆ ನಿತ್ಯಜೀವದ ನಿರೀಕ್ಷೆಯುಳ್ಳವರಾಗುವುದನ್ನು ನೋಡಲು ಅಪೇಕ್ಷಿಸುತ್ತೇವೆ.​—⁠1 ತಿಮೊಥೆಯ 2:3, 4.

ಪ್ರವಾದಿಗಳ ತಾಳ್ಮೆಯನ್ನು ಪರಿಗಣಿಸಿರಿ

12 ಯೆಹೋವನ ತಾಳ್ಮೆಯನ್ನು ಪರಿಗಣಿಸುವ ಮೂಲಕ ನಾವು ಅದನ್ನು ಗಣ್ಯಮಾಡಲು ಮತ್ತು ಅದನ್ನು ಬೆಳೆಸಿಕೊಳ್ಳಲು ಸಹಾಯವನ್ನು ಪಡೆದುಕೊಳ್ಳುತ್ತೇವೆ. ಅಪರಿಪೂರ್ಣ ಮಾನವರು ತಾಳ್ಮೆಯನ್ನು ಬೆಳೆಸಿಕೊಳ್ಳುವುದು ಸುಲಭದ ಸಂಗತಿಯೇನಲ್ಲವಾದರೂ ಅದನ್ನು ಬೆಳೆಸಿಕೊಳ್ಳಸಾಧ್ಯವಿದೆ. ಇದನ್ನು ನಾವು ದೇವರ ಪುರಾತನ ಕಾಲದ ಸೇವಕರಿಂದ ತಿಳಿದುಕೊಳ್ಳುತ್ತೇವೆ. ಅಪೊಸ್ತಲ ಯಾಕೋಬನು ಕ್ರೈಸ್ತ ಸಹೋದರರಿಗೆ ಬರೆದ ಪತ್ರದಲ್ಲಿ, “ಬಾಧೆಯನ್ನು ತಾಳ್ಮೆಯಿಂದ ಸಹಿಸಿಕೊಳ್ಳುವ ವಿಷಯದಲ್ಲಿ ಕರ್ತನ ಹೆಸರಿನಿಂದ ಮಾತಾಡಿದ ಪ್ರವಾದಿಗಳನ್ನೇ ಮಾದರಿಮಾಡಿಕೊಳ್ಳಿರಿ” ಎಂದು ಹೇಳಿದನು. (ಯಾಕೋಬ 5:10) ನಾವು ಇಂದು ಎದುರಿಸುವಂಥ ಸಮಸ್ಯೆಗಳನ್ನು ಇತರರು ಈಗಾಗಲೇ ಯಶಸ್ವಿಕರವಾಗಿ ಎದುರಿಸಿದ್ದಾರೆ ಎಂಬುದನ್ನು ತಿಳಿದುಕೊಳ್ಳುವಾಗ ನಮಗೆ ಅದರಿಂದ ಸಾಂತ್ವನ ಮತ್ತು ಪ್ರೋತ್ಸಾಹ ಸಿಗುತ್ತದೆ.

13 ಉದಾಹರಣೆಗೆ, ಪ್ರವಾದಿಯಾದ ಯೆಶಾಯನಿಗೆ ತನ್ನ ನೇಮಕದಲ್ಲಿ ಉಳಿಯಲು ಖಂಡಿತವಾಗಿಯೂ ತಾಳ್ಮೆಯ ಆವಶ್ಯಕತೆಯಿತ್ತು. ಯೆಹೋವನು ಯೆಶಾಯನಿಗೆ ಹೀಗೆ ಹೇಳಿದಾಗ ಆ ಆವಶ್ಯಕತೆಗೆ ಸೂಚಿಸಿದನು: “ನೀನು ಈ ಜನರ ಬಳಿಗೆ ಹೋಗಿ​—⁠ನೀವು ಕಿವಿಯಾರೆ ಕೇಳಿದರೂ ತಿಳಿಯಬಾರದು, ಕಣ್ಣಾರೆ ಕಂಡರೂ ಗ್ರಹಿಸಬಾರದು ಎಂದು ತಿಳಿಸಿ, ಕಣ್ಣಿನಿಂದ ಕಂಡು ಕಿವಿಯಿಂದ ಕೇಳಿ ಹೃದಯದಿಂದ ಗ್ರಹಿಸಿ ನನ್ನ ಕಡೆಗೆ ತಿರುಗಿಕೊಂಡು ನನ್ನಿಂದ ಸ್ವಸ್ಥತೆಯನ್ನು ಹೇಗೂ ಹೊಂದದ ಹಾಗೆ ಈ ಜನರ ಹೃದಯಕ್ಕೆ ಕೊಬ್ಬೇರಿಸಿ ಕಿವಿಯನ್ನು ಮಂದಮಾಡಿ ಕಣ್ಣಿಗೆ ಅಂಟುಬಳಿ.” (ಯೆಶಾಯ 6:9, 10) ಜನರು ಪ್ರತಿಕ್ರಿಯೆಯನ್ನು ತೋರಿಸದಿದ್ದರೂ, ಯೆಶಾಯನು ಯೆಹೋವನ ಎಚ್ಚರಿಕೆಯ ಸಂದೇಶಗಳನ್ನು ಕಡಿಮೆಪಕ್ಷ 46 ವರ್ಷಗಳ ವರೆಗೆ ತಾಳ್ಮೆಯಿಂದ ಪ್ರಕಟಪಡಿಸಿದನು! ತದ್ರೀತಿಯಲ್ಲಿ, ಅನೇಕರು ಪ್ರತಿಕ್ರಿಯೆಯನ್ನು ತೋರಿಸದಿದ್ದರೂ ಸುವಾರ್ತೆಯನ್ನು ಸಾರುವ ಕೆಲಸದಲ್ಲಿ ಪ್ರಯತ್ನವನ್ನು ಬಿಟ್ಟುಕೊಡದೆ ಮುಂದುವರಿಯುವಂತೆ ತಾಳ್ಮೆಯು ನಮಗೆ ಸಹಾಯಮಾಡುವುದು.

14 ವಾಸ್ತವದಲ್ಲಿ, ಅಂದಿನ ಪ್ರವಾದಿಗಳು ತಮ್ಮ ಶುಶ್ರೂಷೆಯನ್ನು ಮಾಡಿದಾಗ ನಿರಾಸಕ್ತಿಯನ್ನು ಮಾತ್ರವಲ್ಲ ಕೆಡುಕನ್ನೂ ಅನುಭವಿಸಿದರು. ಯೆರೆಮೀಯನನ್ನು ಕೋಳಕ್ಕೆ ಹಾಕಲಾಯಿತು, ಬಂದಿಖಾನೆಯಲ್ಲಿ ಬಂಧಿಸಲಾಯಿತು ಮತ್ತು ಬಾವಿಯಲ್ಲಿ ಹಾಕಲಾಯಿತು. (ಯೆರೆಮೀಯ 20:2; 37:15; 38:6) ತಾನು ಯಾವ ಜನರಿಗೆ ಸಹಾಯವನ್ನು ಮಾಡಲು ಬಯಸಿದನೋ ಅದೇ ಜನರು ಯೆರೆಮೀಯನ ಮೇಲೆ ಈ ಹಿಂಸೆಯನ್ನು ತಂದರು. ಆದರೂ ಯೆರೆಮೀಯನು ಕಹಿಭಾವವನ್ನು ತಾಳಲಿಲ್ಲ, ಅಥವಾ ಅವರಿಗೆ ಸೇಡುತೀರಿಸಲಿಲ್ಲ. ಅವನು ಹಲವಾರು ದಶಕಗಳ ವರೆಗೆ ತಾಳ್ಮೆಯಿಂದ ಸಹಿಸಿಕೊಂಡನು.

15 ಹಿಂಸೆ ಮತ್ತು ಕುಚೋದ್ಯವು ಯೆರೆಮೀಯನ ಬಾಯನ್ನು ಮುಚ್ಚಲಿಲ್ಲ, ಮತ್ತು ಅವು ಇಂದು ನಮ್ಮ ಬಾಯನ್ನು ಸಹ ಮುಚ್ಚಲಾರವು. ಕೆಲವೊಮ್ಮೆ ನಾವು ನಿರುತ್ಸಾಹಗೊಳ್ಳಬಹುದು ನಿಜ. ಯೆರೆಮೀಯನು ಸಹ ಒಮ್ಮೆ ನಿರುತ್ಸಾಹಗೊಂಡಿದ್ದನು. ‘[ನಾನು ಸಾರುವ] ಯೆಹೋವನ ವಾಕ್ಯವು ನನ್ನನ್ನು ಜನರ ದೂಷಣೆಗೂ ಪರಿಹಾಸಕ್ಕೂ ಗುರಿಮಾಡಿದೆ. ನಾನು ಯೆಹೋವನ ವಿಷಯವನ್ನು ಪ್ರಕಟಿಸೆನು, ಆತನ ಹೆಸರಿನಲ್ಲಿ ಇನ್ನು ಮಾತಾಡೆನು ಎಂದುಕೊಂಡೆನು’ ಎಂದವನು ಬರೆದನು. ಅನಂತರ ಏನಾಯಿತು? ಯೆರೆಮೀಯನು ಸಾರುವುದನ್ನು ನಿಲ್ಲಿಸಿಬಿಟ್ಟನೋ? ಅವನು ಮುಂದುವರಿಸಿ ಹೇಳಿದ್ದು: ‘ಉರಿಯುವ ಬೆಂಕಿಯು ನನ್ನ ಎಲುಬುಗಳಲ್ಲಿ ಅಡಕವಾಗಿದೆಯೋ ಎಂಬಂತೆ [ದೇವರ ವಾಕ್ಯವು] ನನ್ನ ಹೃದಯದಲ್ಲಿ ಸಂಕಟವನ್ನುಂಟುಮಾಡುತ್ತದೆ; ತಡೆದು ತಡೆದು ಆಯಾಸಗೊಂಡಿದ್ದೇನೆ, ಸಹಿಸಲಾರೆ.’ (ಯೆರೆಮೀಯ 20:8, 9) ಯೆರೆಮೀಯನು ಜನರು ಮಾಡುತ್ತಿದ್ದ ಕುಚೋದ್ಯದ ಮೇಲೆ ಮನಸ್ಸನ್ನು ಕೇಂದ್ರೀಕರಿಸಿದಾಗ ತನ್ನ ಸಂತೋಷವನ್ನು ಕಳೆದುಕೊಂಡನು ಎಂಬುದನ್ನು ಗಮನಿಸಿದಿರಾ? ಆದರೆ ಅವನು ಸಾರುತ್ತಿದ್ದ ಸಂದೇಶದ ಸೌಂದರ್ಯ ಮತ್ತು ಪ್ರಮುಖತೆಯ ಮೇಲೆ ಗಮನವನ್ನು ಕೇಂದ್ರೀಕರಿಸಿದಾಗ ಅವನ ಸಂತೋಷವು ಅವನಿಗೆ ಮರಳಿ ಸಿಕ್ಕಿತು. ಮಾತ್ರವಲ್ಲದೆ ಯೆಹೋವನು ಯೆರೆಮೀಯನ ಸಂಗಡ “ಭಯಂಕರಶೂರನಾಗಿ” ಇದ್ದುಕೊಂಡು ಆತನ ವಾಕ್ಯವನ್ನು ಹುರುಪು ಮತ್ತು ಧೈರ್ಯದಿಂದ ಪ್ರಚುರಪಡಿಸುವಂತೆ ಅವನನ್ನು ಬಲಪಡಿಸಿದನು.​—⁠ಯೆರೆಮೀಯ 20:⁠11.

16 ಪ್ರವಾದಿಯಾದ ಯೆರೆಮೀಯನು ತನ್ನ ಕೆಲಸದಲ್ಲಿ ಆನಂದವನ್ನು ಕಂಡುಕೊಂಡನೋ? ಖಂಡಿತವಾಗಿಯೂ! ಅವನು ಯೆಹೋವನಿಗೆ ಹೇಳಿದ್ದು: “ನನಗೆ ದೊರೆತ ನಿನ್ನ ಮಾತುಗಳನ್ನು ಆಹಾರಮಾಡಿಕೊಂಡೆನು, ನಿನ್ನ ನುಡಿಗಳು ನನಗೆ ಹರ್ಷವೂ ಹೃದಯಾನಂದವೂ ಆದವು; ಸೇನಾಧೀಶ್ವರನಾದ ದೇವರೇ, ಯೆಹೋವನೇ, ನಾನು ನಿನ್ನ ಹೆಸರಿನವನಲ್ಲವೆ!” (ಯೆರೆಮೀಯ 15:16) ಸತ್ಯ ದೇವರನ್ನು ಪ್ರತಿನಿಧಿಸುವ ಮತ್ತು ಆತನ ವಾಕ್ಯವನ್ನು ಸಾರುವ ಸದವಕಾಶದಲ್ಲಿ ಯೆರೆಮೀಯನು ಆನಂದಿಸಿದನು. ನಾವು ಸಹ ಆನಂದಿಸಬಲ್ಲೆವು. ಮಾತ್ರವಲ್ಲದೆ, ಲೋಕವ್ಯಾಪಕವಾಗಿ ಇಷ್ಟೊಂದು ಮಂದಿ ರಾಜ್ಯ ಸಂದೇಶವನ್ನು ಸ್ವೀಕರಿಸಿ ಪಶ್ಚಾತ್ತಾಪಪಟ್ಟು ನಿತ್ಯಜೀವದ ಮಾರ್ಗದಲ್ಲಿ ನಡೆಯಲು ಆರಂಭಿಸುವುದನ್ನು ನೋಡುವಾಗ ಪರಲೋಕದಲ್ಲಿ ದೇವದೂತರಿಗಾಗುವಂಥ ಸಂತೋಷ ನಮಗೂ ಆಗುತ್ತದೆ.​—⁠ಲೂಕ 15:⁠10.

“ಯೋಬನಲ್ಲಿದ್ದ ಸಹನೆ”

17 ಪುರಾತನ ಕಾಲದ ಪ್ರವಾದಿಗಳ ಕುರಿತು ಹೇಳಿಕೆ ನೀಡಿದ ಬಳಿಕ, ಅಪೊಸ್ತಲ ಯಾಕೋಬನು ಬರೆದದ್ದು: “ನೀವು ಯೋಬನಲ್ಲಿದ್ದ ತಾಳ್ಮೆ [“ಸಹನೆ,” NW]ಯ ವಿಷಯವಾಗಿ ಕೇಳಿ ಕರ್ತನು ಅವನಿಗೆ ಅಂತ್ಯದಲ್ಲಿ ಮಾಡಿದ್ದನ್ನು ನೋಡಿ ಕರ್ತನು ಕರುಣಾಸಾಗರನೂ ದಯಾಳುವೂ ಆಗಿದ್ದಾನೆಂದು ತಿಳಿದಿದ್ದೀರಷ್ಟೆ.” (ಯಾಕೋಬ 5:11) ಇಲ್ಲಿ “ಸಹನೆ” ಎಂದು ಭಾಷಾಂತರಿಸಲ್ಪಟ್ಟಿರುವ ಗ್ರೀಕ್‌ ಪದಕ್ಕೂ ಹಿಂದಿನ ವಚನದಲ್ಲಿ ಯಾಕೋಬನು “ತಾಳ್ಮೆ”ಗೆ ಉಪಯೋಗಿಸಿದ ಪದಕ್ಕೂ ತದ್ರೀತಿಯ ಅರ್ಥವಿದೆ. ಈ ಎರಡೂ ಪದಗಳ ಮಧ್ಯೆಯಿರುವ ವ್ಯತ್ಯಾಸಕ್ಕೆ ಸೂಚಿಸುತ್ತಾ ಒಬ್ಬ ವಿದ್ವಾಂಸನು ಬರೆದದ್ದು: “ಹಿಂದೆ ಉಪಯೋಗಿಸಲ್ಪಟ್ಟಿರುವ ಪದವು ಜನರು ದಬ್ಬಾಳಿಕೆ ಮಾಡುವಾಗ ತೋರಿಸಲ್ಪಡುವ ತಾಳ್ಮೆಗೆ ಸೂಚಿಸುತ್ತದೆ, ಮತ್ತು ಅನಂತರ ಉಪಯೋಗಿಸಲ್ಪಟ್ಟಿರುವ ಪದವು ನಮ್ಮನ್ನು ವ್ಯಥೆಗೊಳಪಡಿಸುವಂಥ ವಿಷಯಗಳನ್ನು ಧೈರ್ಯದಿಂದ ಸಹಿಸಿಕೊಳ್ಳುವುದಕ್ಕೆ ಸೂಚಿಸುತ್ತದೆ.”

18 ಯೋಬನು ತೀವ್ರವಾದ ವ್ಯಥೆಯನ್ನು ಅನುಭವಿಸಿದನು. ಅವನು ಆರ್ಥಿಕ ವಿನಾಶವನ್ನು, ತನ್ನ ಮಕ್ಕಳ ಮರಣವನ್ನು ಮತ್ತು ಯಾತನಾಮಯ ವ್ಯಾಧಿಯನ್ನು ಎದುರಿಸಿದನು. ಯೆಹೋವನು ಅವನನ್ನು ದಂಡಿಸುತ್ತಿದ್ದಾನೆ ಎಂಬ ಸುಳ್ಳು ಅಪವಾದಗಳೊಂದಿಗೂ ಅವನು ಹೋರಾಡಿದನು. ಯೋಬನು ಮೌನವಾಗಿ ಈ ಎಲ್ಲ ಕಷ್ಟಗಳನ್ನು ತಾಳಿಕೊಳ್ಳಲಿಲ್ಲ. ಅವನು ತನ್ನ ಪರಿಸ್ಥಿತಿಯ ಕುರಿತು ಪ್ರಲಾಪಿಸಿದನು ಮತ್ತು ತಾನು ದೇವರಿಗಿಂತ ನೀತಿವಂತನು ಎಂದು ಸಹ ಸೂಚಿಸಿದನು. (ಯೋಬ 35:2) ಆದರೂ ಅವನೆಂದೂ ತನ್ನ ನಂಬಿಕೆಯನ್ನು ಕಳೆದುಕೊಳ್ಳಲಿಲ್ಲ ಅಥವಾ ತನ್ನ ಸಮಗ್ರತೆಯನ್ನು ಬಿಟ್ಟುಕೊಡಲಿಲ್ಲ. ಸೈತಾನನು ಹೇಳಿದ ಹಾಗೆ ಅವನು ದೇವರನ್ನು ದೂಷಿಸಲಿಲ್ಲ. (ಯೋಬ 1:11, 21) ಇದರ ಫಲಿತಾಂಶವೇನಾಗಿತ್ತು? “ಯೆಹೋವನು ಯೋಬನ ಮೊದಲನೆಯ ಸ್ಥಿತಿಗಿಂತಲೂ ಅವನ ಕಡೆಯ ಸ್ಥಿತಿಯನ್ನು . . . ಹೆಚ್ಚಾಗಿ ಆಶೀರ್ವದಿಸಿದನು.” (ಯೋಬ 42:12) ಯೋಬನು ಗುಣಮುಖನಾಗುವಂತೆ ಯೆಹೋವನು ಮಾಡಿದನು, ಅವನ ಆಸ್ತಿಯನ್ನು ಎರಡು ಪಟ್ಟು ಹೆಚ್ಚಿಸಿದನು ಮತ್ತು ಅವನ ಪ್ರಿಯ ವ್ಯಕ್ತಿಗಳೊಂದಿಗೆ ಸಂಪೂರ್ಣವಾದ ಸಂತೋಷಭರಿತ ಜೀವನದಲ್ಲಿ ಆನಂದಿಸುವಂತೆ ಮಾಡಿದನು. ಯೋಬನು ನಂಬಿಗಸ್ತಿಕೆಯಿಂದ ಸಹಿಸಿಕೊಂಡದ್ದು ಯೆಹೋವನನ್ನು ಹೆಚ್ಚು ಪೂರ್ಣವಾಗಿ ಅರ್ಥಮಾಡಿಕೊಳ್ಳುವಂತೆ ಸಹ ಅವನಿಗೆ ಸಾಧ್ಯಮಾಡಿತು.

19 ಯೋಬನು ತಾಳ್ಮೆಯಿಂದ ಸಹಿಸಿಕೊಂಡದ್ದರಿಂದ ನಾವು ಯಾವ ಪಾಠವನ್ನು ಕಲಿಯುತ್ತೇವೆ? ಯೋಬನಂತೆ, ನಾವು ಕಾಯಿಲೆ ಅಥವಾ ಇತರ ಸಂಕಷ್ಟಗಳನ್ನು ಎದುರಿಸಬಹುದು. ನಾವು ಒಂದು ನಿರ್ದಿಷ್ಟ ಪರೀಕ್ಷೆಯನ್ನು ಎದುರಿಸುವಂತೆ ಯೆಹೋವನು ಏಕೆ ಅನುಮತಿಸುತ್ತಾನೆ ಎಂಬುದನ್ನು ನಾವು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳದೆ ಇರಬಹುದು. ಆದರೆ ನಮಗೆ ಒಂದು ವಿಷಯ ಮಾತ್ರ ಖಂಡಿತವಾಗಿಯೂ ಗೊತ್ತು: ನಾವು ನಂಬಿಗಸ್ತರಾಗಿ ಉಳಿಯುವುದಾದರೆ ಆಶೀರ್ವದಿಸಲ್ಪಡುವೆವು. ತನ್ನನ್ನು ಹುಡುಕುವವರಿಗೆ ಯೆಹೋವನು ಖಂಡಿತವಾಗಿಯೂ ಪ್ರತಿಫಲವನ್ನು ಕೊಡುತ್ತಾನೆ. (ಇಬ್ರಿಯ 11:6) ಯೇಸು ಹೇಳಿದ್ದು: “ಕಡೇ ವರೆಗೂ ತಾಳುವವನು ರಕ್ಷಣೆ ಹೊಂದುವನು.”​—⁠ಮತ್ತಾಯ 10:22; 24:⁠13.

‘ಯೆಹೋವನ ದಿನವು ಬರುತ್ತದೆ’

20 ಯೆಹೋವನು ತಾಳ್ಮೆಯಿಂದಿರುವುದಾದರೂ, ಆತನು ನ್ಯಾಯವಂತನೂ ಆಗಿರುವುದರಿಂದ ಸದಾಕಾಲಕ್ಕೂ ದುಷ್ಟತನವನ್ನು ನೋಡಿ ಸುಮ್ಮನಿರುವುದಿಲ್ಲ. ಆತನ ತಾಳ್ಮೆಗೆ ಒಂದು ಮಿತಿಯುಂಟು. ಪೇತ್ರನು ಬರೆದದ್ದು: ‘ದೇವರು ಪುರಾತನರ ಲೋಕವನ್ನು ಸುಮ್ಮನೆ ಬಿಡಲಿಲ್ಲ.’ ನೋಹ ಮತ್ತು ಅವನ ಕುಟುಂಬವು ಜೀವಂತವಾಗಿ ಉಳಿಸಲ್ಪಟ್ಟ ಸಮಯದಲ್ಲಿ, ಆ ಭಕ್ತಿಹೀನ ಲೋಕವು ಜಲಸಮಾಧಿಯಾಯಿತು. ಯೆಹೋವನು ಸೊದೋಮ್‌ ಗೊಮೋರಗಳ ಮೇಲೆಯೂ ನ್ಯಾಯತೀರ್ಪನ್ನು ತಂದನು. ಅವರು ಸುಟ್ಟು ಬೂದಿಯಾದರು. ಈ ನ್ಯಾಯತೀರ್ಪುಗಳು “ಮುಂದೆ ಭಕ್ತಿಹೀನರಾಗಿ ಬದುಕುವವರ ಗತಿ ಇಂಥದೆಂದು ಸೂಚಿಸುವದಕ್ಕಾಗಿ” ಒಂದು ನಿದರ್ಶನವಾಗಿ ಇಡಲ್ಪಟ್ಟಿವೆ. ನಾವಾದರೋ ‘ಯೆಹೋವನ ದಿನವು ಬರುತ್ತದೆ’ ಎಂಬುದರ ಬಗ್ಗೆ ಖಾತ್ರಿಯಿಂದಿರಬಲ್ಲೆವು.​—⁠2 ಪೇತ್ರ 2:5, 6; 3:⁠10.

21 ಆದುದರಿಂದ ನಾವು, ಇತರರು ಪಶ್ಚಾತ್ತಾಪಪಟ್ಟು ರಕ್ಷಣೆಯನ್ನು ಹೊಂದಲು ಸಾಧ್ಯವಾಗುವಂತೆ ಅವರಿಗೆ ನೆರವು ನೀಡುವ ಮೂಲಕ ಯೆಹೋವನು ತೋರಿಸುವ ತಾಳ್ಮೆಯನ್ನು ಅನುಕರಿಸೋಣ. ಮತ್ತು ನಾವು ಯಾರಿಗೆ ಸಾರುತ್ತೇವೋ ಅಂಥ ಜನರು ಪ್ರತಿಕ್ರಿಯೆಯನ್ನು ತೋರಿಸದಿದ್ದರೂ ಸುವಾರ್ತೆಯನ್ನು ತಾಳ್ಮೆಯಿಂದ ಸಾರುತ್ತಾ ಮುಂದುವರಿಯುವ ಮೂಲಕ ಪ್ರವಾದಿಗಳ ಮಾದರಿಯನ್ನು ಅನುಕರಿಸೋಣ. ಮಾತ್ರವಲ್ಲದೆ, ಯೋಬನಂತೆ ನಾವು ಪರೀಕ್ಷೆಗಳ ಕೆಳಗೆ ಸಹನೆಯನ್ನು ತೋರಿಸುವುದಾದರೆ ಮತ್ತು ನಮ್ಮ ಸಮಗ್ರತೆಯನ್ನು ಕಾಪಾಡಿಕೊಳ್ಳುವುದಾದರೆ ಯೆಹೋವನು ನಮ್ಮನ್ನು ಸಮೃದ್ಧವಾಗಿ ಆಶೀರ್ವದಿಸುವನು ಎಂಬ ಖಾತ್ರಿಯಿಂದ ಇರಬಲ್ಲೆವು. ಲೋಕವ್ಯಾಪಕವಾಗಿ ಸುವಾರ್ತೆಯನ್ನು ಸಾರುವುದರಲ್ಲಿ ತನ್ನ ಜನರು ಮಾಡುತ್ತಿರುವ ಪ್ರಯತ್ನಗಳನ್ನು ಯೆಹೋವನು ಹೇಗೆ ಸಮೃದ್ಧವಾಗಿ ಆಶೀರ್ವದಿಸಿದ್ದಾನೆ ಎಂಬುದನ್ನು ನಾವು ಗಮನಿಸುವಾಗ, ನಮ್ಮ ಶುಶ್ರೂಷೆಯಲ್ಲಿ ಆನಂದವನ್ನು ಕಂಡುಕೊಳ್ಳಲು ನಮಗೆ ಸಕಲ ಕಾರಣವೂ ಇದೆ. ಇದನ್ನು ನಾವು ಮುಂದಿನ ಲೇಖನದಲ್ಲಿ ಪರಿಗಣಿಸಲಿಕ್ಕಿದ್ದೇವೆ.

[ಪಾದಟಿಪ್ಪಣಿ]

^ ಪ್ಯಾರ. 5 ಕನ್ನಡದಲ್ಲಿ ಲಭ್ಯವಿಲ್ಲ.

ನಿಮಗೆ ಜ್ಞಾಪಕವಿದೆಯೇ?

• ಯೆಹೋವನು ಏಕೆ ತಾಳ್ಮೆಯನ್ನು ತೋರಿಸುತ್ತಾನೆ?

• ಪ್ರವಾದಿಗಳು ತೋರಿಸಿದ ತಾಳ್ಮೆಯಿಂದ ನಾವು ಏನನ್ನು ಕಲಿಯುತ್ತೇವೆ?

• ಯೋಬನು ಹೇಗೆ ಸಹನೆಯನ್ನು ತೋರಿಸಿದನು, ಮತ್ತು ಅದರ ಫಲಿತಾಂಶ ಏನಾಗಿತ್ತು?

• ಯೆಹೋವನ ತಾಳ್ಮೆಗೆ ಮಿತಿಯುಂಟು ಎಂಬುದು ನಮಗೆ ಹೇಗೆ ಗೊತ್ತು?

[ಅಧ್ಯಯನ ಪ್ರಶ್ನೆಗಳು]

1. ಹೋಲಿಸಲಸಾಧ್ಯವಾದ ಯಾವ ಉಡುಗೊರೆಯನ್ನು ಯೆಹೋವನು ಮಾನವರಿಗೆ ನೀಡಿದ್ದಾನೆ?

2. ಯೆಹೋವನು ಸೈತಾನನ ವಿಷಯಗಳ ವ್ಯವಸ್ಥೆಯನ್ನು ಇನ್ನೂ ಏಕೆ ತೆಗೆದುಹಾಕಿಲ್ಲ?

3. (ಎ) ಬೈಬಲಿನಲ್ಲಿ “ತಾಳ್ಮೆ” ಎಂದು ಭಾಷಾಂತರಿಸಲ್ಪಟ್ಟಿರುವ ಗ್ರೀಕ್‌ ಮತ್ತು ಹೀಬ್ರು ಪದಗಳ ಅರ್ಥವೇನಾಗಿದೆ? (ಬಿ) ನಾವು ಈಗ ಯಾವ ಪ್ರಶ್ನೆಗಳನ್ನು ಪರಿಗಣಿಸಲಿಕ್ಕಿದ್ದೇವೆ?

4. ಯೆಹೋವನ ತಾಳ್ಮೆಯ ಕುರಿತು ಅಪೊಸ್ತಲ ಪೇತ್ರನು ಏನು ಬರೆದನು?

5. ಯೆಹೋವನು ಸಮಯವನ್ನು ವೀಕ್ಷಿಸುವ ರೀತಿಯು ಆತನ ಕ್ರಿಯೆಗಳ ಮೇಲೆ ಹೇಗೆ ಪ್ರಭಾವಬೀರುತ್ತದೆ?

6. ನಾವು ದೇವರ ಕುರಿತು ಯಾವ ತೀರ್ಮಾನಕ್ಕೆ ಬರಬಾರದು, ಮತ್ತು ಏಕೆ?

7. ಯೆಹೋವನ ತಾಳ್ಮೆಯು, ಜನರು ತನ್ನ ಕಡೆಗೆ ತಿರುಗಿಕೊಳ್ಳಬೇಕು ಎಂಬ ಆತನ ಅಪೇಕ್ಷೆಯೊಂದಿಗೆ ಹೇಗೆ ಸಂಬಂಧಿಸಿದೆ?

8. ದೇವರು ಇಸ್ರಾಯೇಲ್‌ ಜನಾಂಗದೊಂದಿಗೆ ವ್ಯವಹರಿಸಿದ ರೀತಿಯಲ್ಲಿ ಆತನ ತಾಳ್ಮೆಯು ಹೇಗೆ ಕಂಡುಬರುತ್ತದೆ?

9. ಯೇಸುವಿನ ತಾಳ್ಮೆಯು ಅವನ ತಂದೆಯ ತಾಳ್ಮೆಯನ್ನು ಹೇಗೆ ಪ್ರತಿಬಿಂಬಿಸಿತು?

10. ದೇವರು ತೋರಿಸಿರುವಂಥ ತಾಳ್ಮೆಯು ಹೇಗೆ ನಮಗೆ ಪ್ರಯೋಜನವನ್ನು ತಂದಿದೆ?

11. ಯೆಹೋವನು ತೋರಿಸುವಂಥ ತಾಳ್ಮೆಯನ್ನು ಅರ್ಥಮಾಡಿಕೊಳ್ಳುವುದು ನಮ್ಮನ್ನು ಏನು ಮಾಡುವಂತೆ ಪ್ರೇರಿಸುವುದು?

12, 13. ಯಾಕೋಬ 5:10ಕ್ಕನುಸಾರವಾಗಿ, ಪ್ರವಾದಿಯಾದ ಯೆಶಾಯನು ಹೇಗೆ ಯಶಸ್ವಿಕರವಾಗಿ ತಾಳ್ಮೆಯನ್ನು ತೋರಿಸಿದನು?

14, 15. ಪ್ರತಿಕೂಲ ಪರಿಸ್ಥಿತಿಗಳು ಮತ್ತು ನಿರುತ್ಸಾಹವನ್ನು ಎದುರಿಸಿ ನಿಲ್ಲುವಂತೆ ಯೆರೆಮೀಯನಿಗೆ ಯಾವುದು ಸಹಾಯಮಾಡಿತು?

16. ಸುವಾರ್ತೆಯನ್ನು ಸಾರುವ ಕೆಲಸದಲ್ಲಿ ನಾವು ಹೇಗೆ ನಮ್ಮ ಆನಂದವನ್ನು ಕಾಪಾಡಿಕೊಳ್ಳಬಲ್ಲೆವು?

17, 18. ಯೋಬನು ಯಾವ ವಿಧದಲ್ಲಿ ಸಹನೆಯನ್ನು ತೋರಿಸಿದನು, ಮತ್ತು ಇದರ ಫಲಿತಾಂಶ ಏನಾಗಿತ್ತು?

19. ಯೋಬನು ತಾಳ್ಮೆಯಿಂದ ಸಹಿಸಿಕೊಂಡದ್ದರಿಂದ ನಾವು ಯಾವ ಪಾಠವನ್ನು ಕಲಿಯುತ್ತೇವೆ?

20. ಯೆಹೋವನ ದಿನವು ಬರುತ್ತದೆ ಎಂಬ ವಿಷಯದಲ್ಲಿ ನಾವೇಕೆ ಖಾತ್ರಿಯಿಂದಿರಬಲ್ಲೆವು?

21. ನಾವು ತಾಳ್ಮೆ ಮತ್ತು ಸಹನೆಯನ್ನು ಹೇಗೆ ತೋರಿಸಸಾಧ್ಯವಿದೆ, ಮತ್ತು ಮುಂದಿನ ಲೇಖನದಲ್ಲಿ ನಾವು ಯಾವ ವಿಷಯವನ್ನು ಪರಿಗಣಿಸಲಿಕ್ಕಿದ್ದೇವೆ?

[ಪುಟ 18ರಲ್ಲಿರುವ ಚಿತ್ರ]

ಯೇಸುವಿನ ತಾಳ್ಮೆಯು ತನ್ನ ತಂದೆಯ ತಾಳ್ಮೆಯನ್ನು ಪರಿಪೂರ್ಣವಾಗಿ ಪ್ರತಿಬಿಂಬಿಸಿತು

[ಪುಟ 20ರಲ್ಲಿರುವ ಚಿತ್ರಗಳು]

ಯೆಹೋವನು ಯೆರೆಮೀಯನ ತಾಳ್ಮೆಗೆ ಯಾವ ಪ್ರತಿಫಲವನ್ನು ಕೊಟ್ಟನು?

[ಪುಟ 21ರಲ್ಲಿರುವ ಚಿತ್ರಗಳು]

ಯೆಹೋವನು ಯೋಬನ ಸಹನೆಗೆ ಯಾವ ಪ್ರತಿಫಲವನ್ನು ಕೊಟ್ಟನು?