ವಾಚಕರಿಂದ ಪ್ರಶ್ನೆಗಳು
ವಾಚಕರಿಂದ ಪ್ರಶ್ನೆಗಳು
ಯೆಹೋವನ ಒಬ್ಬ ನಂಬಿಗಸ್ತ ಸೇವಕನಾಗಿದ್ದ ಯೋಸೇಫನು, ಆದಿಕಾಂಡ 44:5ರಲ್ಲಿ ಸೂಚಿಸಲ್ಪಟ್ಟಿರುವಂತೆ ಶಕುನಹೇಳುವದಕ್ಕಾಗಿ ವಿಶೇಷವಾದ ಒಂದು ಬೆಳ್ಳಿಯ ಪಾನಪಾತ್ರೆಯನ್ನು ಉಪಯೋಗಿಸಿದನೋ?
ಯೋಸೇಫನು ವಾಸ್ತವದಲ್ಲಿ ಯಾವುದೇ ರೀತಿಯ ಕಣಿಹೇಳುವಿಕೆಯನ್ನು ಉಪಯೋಗಿಸಿದನು ಎಂದು ನಂಬಲು ಕಾರಣವಿರುವುದಿಲ್ಲ.
ಭವಿಷ್ಯದ ಕುರಿತು ತಿಳಿಯಲಿಕ್ಕಾಗಿ ಮಾಟಮಂತ್ರಗಳನ್ನು ಉಪಯೋಗಿಸುವುದರ ಬಗ್ಗೆ ಯೋಸೇಫನಿಗಿದ್ದ ನಿಜವಾದ ತಿಳಿವಳಿಕೆಯನ್ನು ಬೈಬಲು ಪ್ರಕಟಪಡಿಸುತ್ತದೆ. ಈ ಮುಂಚೆ ಫರೋಹನ ಕನಸುಗಳ ಅರ್ಥವನ್ನು ವಿವರಿಸುವಂತೆ ಯೇಸೇಫನಿಗೆ ಕೇಳಲ್ಪಟ್ಟಾಗ, ದೇವರು ಮಾತ್ರವೇ ಮುಂಬರುತ್ತಿರುವ ಘಟನೆಗಳನ್ನು “ತಿಳಿಸ”ಬಲ್ಲನು ಎಂದು ಯೋಸೇಫನು ಪುನಃ ಪುನಃ ಒತ್ತಿಹೇಳಿದನು. ಇದರ ಫಲಿತಾಂಶವಾಗಿ, ಯೋಸೇಫನು ಆರಾಧಿಸುತ್ತಿದ್ದ ದೇವರು—ಮಾಂತ್ರಿಕ ಶಕ್ತಿಗಳಲ್ಲ ಬದಲಿಗೆ ಸತ್ಯ ದೇವರು—ಭವಿಷ್ಯದ ಕುರಿತಾದ ವಿವರಗಳನ್ನು ತಿಳಿದುಕೊಳ್ಳುವಂತೆ ಯೋಸೇಫನಿಗೆ ಸಾಧ್ಯಮಾಡುತ್ತಿದ್ದನು ಎಂದು ಸ್ವತಃ ಫರೋಹನೇ ತಿಳಿದುಕೊಂಡನು. (ಆದಿಕಾಂಡ 41:16, 25, 28, 32, 39) ತರುವಾಯ ಮೋಶೆಗೆ ಕೊಡಲ್ಪಟ್ಟ ಧರ್ಮಶಾಸ್ತ್ರದಲ್ಲಿ ಯೆಹೋವನು ಮಾಟಮಂತ್ರವನ್ನು ಅಥವಾ ಕಣಿಹೇಳುವಿಕೆಯನ್ನು ನಿಷೇಧಿಸಿದನು. ಹೀಗೆ ಮಾಡುವ ಮೂಲಕ ತಾನೊಬ್ಬನೇ ಭವಿಷ್ಯವನ್ನು ಮುಂತಿಳಿಸುವವನು ಎಂದು ಆತನು ರುಜುಪಡಿಸಿದನು.—ಧರ್ಮೋಪದೇಶಕಾಂಡ 18:10-12.
ಹಾಗಾದರೆ, ಯೋಸೇಫನು ತಾನು ‘ಶಕುನಹೇಳಲು’ ಬೆಳ್ಳಿಯ ಪಾನಪಾತ್ರೆಯನ್ನು ಉಪಯೋಗಿಸುವುದಾಗಿ ತನ್ನ ಸೇವಕನ ಮೂಲಕ ಹೇಳಿಸಿದ್ದು ಯಾಕೆ? * (ಆದಿಕಾಂಡ 44:5) ಯಾವ ಪರಿಸ್ಥಿತಿಗಳ ಕೆಳಗೆ ಈ ಹೇಳಿಕೆಯನ್ನು ಮಾಡಲಾಗಿತ್ತು ಎಂಬುದನ್ನು ನಾವು ಪರಿಗಣಿಸುವ ಅಗತ್ಯವಿದೆ.
ಅತಿ ಘೋರವಾದ ಒಂದು ಕ್ಷಾಮದಿಂದಾಗಿ ಯೋಸೇಫನ ಸಹೋದರರು ದವಸಧಾನ್ಯವನ್ನು ಕೊಂಡುಕೊಳ್ಳಲಿಕ್ಕಾಗಿ ಐಗುಪ್ತಕ್ಕೆ ಪ್ರಯಾಣಿಸಿದ್ದರು. ಸುಮಾರು ವರ್ಷಗಳ ಹಿಂದೆ ಇದೇ ಸಹೋದರರು ಯೋಸೇಫನನ್ನು ಒಬ್ಬ ದಾಸನಾಗುಂತೆ ಮಾರಿಬಿಟ್ಟಿದ್ದರು. ಈಗ ತಮಗರಿವಿಲ್ಲದೆಯೇ, ಐಗುಪ್ತದ ಆಹಾರ ಮಂತ್ರಿಯಾಗಿದ್ದ ತಮ್ಮ ಸ್ವಂತ ಸಹೋದರನ ಬಳಿ ಅವರು ನೆರವು ನೀಡುವಂತೆ ಬೇಡಿಕೊಂಡರು. ಯೋಸೇಫನು ತನ್ನ ಗುರುತನ್ನು ಬಯಲುಪಡಿಸಲಿಲ್ಲ. ಬದಲಿಗೆ ಅವರನ್ನು ಪರೀಕ್ಷಿಸಲು ತೀರ್ಮಾನಿಸಿದನು. ಸೂಕ್ತವಾಗಿಯೇ, ಯೋಸೇಫನು ಅವರ ಪಶ್ಚಾತ್ತಾಪವು ಯಥಾರ್ಥವಾಗಿದೆಯೋ ಎಂದು ಕಂಡುಹಿಡಿಯಲು ಬಯಸಿದನು. ಮತ್ತು ಅವರಿಗೆ ತಮ್ಮ ತಮ್ಮನಾದ ಬೆನ್ಯಾಮೀನನ ಮೇಲೆ ಹಾಗೂ ಅವನನ್ನು ಅತಿಯಾಗಿ ಪ್ರೀತಿಸುತ್ತಿದ್ದ ತಮ್ಮ ತಂದೆಯಾದ ಯಾಕೋಬನ ಮೇಲೆ ಪ್ರೀತಿಯಿದೆಯೋ—ಮತ್ತು ಎಷ್ಟು ಪ್ರೀತಿಯಿದೆ—ಎಂಬುದನ್ನು ಕಂಡುಕೊಳ್ಳಲು ಅವನು ಬಯಸಿದನು. ಆದುದರಿಂದ ಯೋಸೇಫನು ಒಂದು ಉಪಾಯವನ್ನು ಮಾಡಿದನು.—ಆದಿಕಾಂಡ 41:55–44:3.
ಯೋಸೇಫನು ತನ್ನ ಸೇವಕರಲ್ಲಿ ಒಬ್ಬನಿಗೆ, ತನ್ನ ಸಹೋದರರ ಚೀಲಗಳನ್ನು ಧಾನ್ಯದಿಂದ ತುಂಬಿಸುವಂತೆ ಮತ್ತು ಪ್ರತಿಯೊಬ್ಬನ ಚೀಲದ ಬಾಯಲ್ಲಿ ಅವನವನ ಹಣದ ಗಂಟನ್ನಿಡುವಂತೆ ಹಾಗೂ ಬೆನ್ಯಾಮೀನನ ಚೀಲದ ಬಾಯಲ್ಲಿ ತನ್ನ ಬೆಳ್ಳಿಯ ಪಾನಪಾತ್ರೆಯನ್ನು ಇಡುವಂತೆ ಅಪ್ಪಣೆಕೊಟ್ಟನು. ಈ ಎಲ್ಲ ಪ್ರಸಂಗದಲ್ಲಿ, ಯೋಸೇಫನು ತನ್ನನ್ನು ವಿಧರ್ಮಿ ದೇಶದ ಒಬ್ಬ ಮಂತ್ರಿಯಾಗಿ ಪ್ರತಿನಿಧಿಸುತ್ತಿದ್ದನು. ಅವನು ತನ್ನನ್ನು, ತನ್ನ ಕೃತ್ಯಗಳನ್ನು ಮತ್ತು ತನ್ನ ಭಾಷೆಯನ್ನು ಇಂತಹ ಒಬ್ಬ ಮಂತ್ರಿಯ ಗುಣಲಕ್ಷಣಗಳಿಗೆ ಸರಿಹೋಲುವಂತೆ ಮಾಡಿಕೊಂಡನು. ಅನುಮಾನಪಡದ ಅವನ ಸಹೋದರರ ಕಣ್ಣಿಗೆ ಯೋಸೇಫನು ಐಗುಪ್ತದ ಒಬ್ಬ ಮಂತ್ರಿಯೆಂದೇ ಕಂಡುಬಂದನು.
ಯೋಸೇಫನು ತನ್ನ ಸಹೋದರರನ್ನು ಎದುರುಗೊಂಡಾಗ, ತನ್ನ ಉಪಾಯವನ್ನೇ ಮುಂದುವರಿಸುತ್ತಾ, “ನನ್ನಂಥವನು ಶಕುನ ನೋಡಿ ಗುಟ್ಟನ್ನು ಬಿಚ್ಚುವನೆಂಬದು ನಿಮಗೆ ತಿಳಿಯಲಿಲ್ಲವೋ” ಎಂದು ಕೇಳಿದನು. (ಆದಿಕಾಂಡ 44:15) ಆದುದರಿಂದ ಈ ಪಾನಪಾತ್ರೆಯ ಇಡೀ ಪ್ರಸಂಗವು ಆ ಉಪಾಯದ ಭಾಗವಾಗಿತ್ತು. ಬೆನ್ಯಾಮೀನನು ಆ ಪಾನಪಾತ್ರೆಯನ್ನು ಕದ್ದಿದ್ದಾನೆ ಎಂದು ಹೇಳಿದ್ದು ಹೇಗೆ ಸತ್ಯವಾಗಿರಲಿಲ್ಲವೋ ಹಾಗೆಯೇ ಯೋಸೇಫನು ಆ ಪಾನಪಾತ್ರೆಯನ್ನು ಉಪಯೋಗಿಸುತ್ತಾ ಶಕುನಹೇಳುತ್ತಿದ್ದನು ಎಂಬುದೂ ಸತ್ಯವಾಗಿರಲಿಲ್ಲ.
[ಪಾದಟಿಪ್ಪಣಿ]
^ ಪ್ಯಾರ. 5 ಈ ಪುರಾತನ ರೂಢಿಯನ್ನು ವರ್ಣಿಸುತ್ತಾ, ಎಫ್. ಸಿ. ಕುಕ್‌ನಿಂದ ಪ್ರಕಟಿಸಲ್ಪಟ್ಟ ವಿವರಣಾತ್ಮಕ ಮತ್ತು ವಿಮರ್ಶಾತ್ಮಕ ಹೇಳಿಕೆಯೊಂದಿಗಿನ ಪವಿತ್ರ ಬೈಬಲ್ (ಇಂಗ್ಲಿಷ್) ಹೀಗೆ ವಿವರಿಸುತ್ತದೆ: “ಈ [ಪಾನಪಾತ್ರೆಗಳನ್ನು ಉಪಯೋಗಿಸುತ್ತಾ ಕಣಿಹೇಳುವ] ಆಚರಣೆಯನ್ನು ಬಂಗಾರ, ಬೆಳ್ಳಿ ಅಥವಾ ಆಭರಣಗಳನ್ನು ನೀರಿನಲ್ಲಿ ಹಾಕಿ ಅನಂತರ ಅವುಗಳ ತೋರಿಕೆಯನ್ನು ನೋಡುವ ಮೂಲಕ ಮಾಡಲಾಗುತ್ತಿತ್ತು; ಇಲ್ಲವಾದರೆ ಕನ್ನಡಿಯಲ್ಲಿ ನೋಡುವ ಹಾಗೆ ಬರಿ ನೀರಿನಲ್ಲಿ ನೋಡುವ ಮೂಲಕ ಮಾಡಲಾಗುತ್ತಿತ್ತು.” ಕ್ರಿಸ್‌ಟಫರ್ ವರ್ಡ್ಸ್‌ವರ್ತ್ ಎಂಬ ವಿಮರ್ಶಕನು ಹೇಳುವುದು: “ಕೆಲವೊಮ್ಮೆ ಪಾನಪಾತ್ರೆಯನ್ನು ನೀರಿನಿಂದ ತುಂಬಿಸಲಾಗುತ್ತಿತ್ತು ಮತ್ತು ಆ ನೀರಿನ ಮೇಲೆ ಸೂರ್ಯನು ಉಂಟುಮಾಡುವಂಥ ಚಿತ್ರಣಗಳ ಮೂಲಕ ಉತ್ತರವು ಕೊಡಲ್ಪಡುತ್ತಿತ್ತು.”