ಹಣ ಮತ್ತು ನೈತಿಕತೆ ಇತಿಹಾಸದಿಂದ ಒಂದು ಪಾಠ
ಹಣ ಮತ್ತು ನೈತಿಕತೆ ಇತಿಹಾಸದಿಂದ ಒಂದು ಪಾಠ
ಇಸವಿ 1630ರ ಏಪ್ರಿಲ್ 7ರಂದು, ಸುಮಾರು ನಾನ್ನೂರು ಮಂದಿ ನಾಲ್ಕು ಹಡಗುಗಳ ಮೂಲಕ ಇಂಗ್ಲೆಂಡ್‌ನಿಂದ ಅಮೆರಿಕಕ್ಕೆ ಪ್ರಯಾಣವೆಸಗಿದರು. ಇವರಲ್ಲಿ ಹೆಚ್ಚಿನವರು ಉಚ್ಚ ಶಿಕ್ಷಣವನ್ನು ಹೊಂದಿದವರಾಗಿದ್ದರು. ಇನ್ನು ಕೆಲವರು ಯಶಸ್ವಿ ವ್ಯಾಪಾರಸ್ಥರಾಗಿದ್ದರು. ಕೆಲವರು ಪಾರ್ಲಿಮೆಂಟಿನ ಸದಸ್ಯರಾಗಿಯೂ ಇದ್ದರು. ಯೂರೋಪಿನಲ್ಲಿನ ಮೂವತ್ತು ವರ್ಷಗಳ (1618-48) ಯುದ್ಧದಿಂದಾಗಿ ಇಂಗ್ಲೆಂಡಿನ ಆರ್ಥಿಕ ಮಟ್ಟವು ತೀರ ಹದಗೆಟ್ಟಿತ್ತು. ಮುಂದಿನ ಪರಿಸ್ಥಿತಿಯು ಅನಿಶ್ಚಿತವಾಗಿದ್ದ ಕಾರಣ ಈ ಜನರು ತಮ್ಮ ಮನೆಗಳನ್ನು, ವ್ಯಾಪಾರಗಳನ್ನು ಮತ್ತು ಸಂಬಂಧಿಕರನ್ನು ಬಿಟ್ಟು, ಉತ್ತಮ ಸದವಕಾಶಗಳನ್ನು ಹುಡುಕುತ್ತಾ ಪರದೇಶಕ್ಕೆ ಹೊರಟರು.
ಆದರೆ ನಿರೀಕ್ಷಾಭರಿತ ಜನರ ಈ ಗುಂಪು, ಸಂದರ್ಭಗಳ ಸದುಪಯೋಗಮಾಡಿಕೊಳ್ಳುವ ವ್ಯಾಪಾರಿಗಳ ಒಂದು ಗುಂಪಾಗಿರಲಿಲ್ಲ. ಅವರು, ಧಾರ್ಮಿಕ ಹಿಂಸೆಯಿಂದಾಗಿ ಆ ಸ್ಥಳವನ್ನು ಬಿಟ್ಟು ಓಡಿಹೋಗುತ್ತಿರುವ ಹುರುಪಿನ ಪ್ಯೂರಿಟನ್‌ರಾಗಿದ್ದರು. * ಅವರ ಮುಖ್ಯ ಗುರಿಯು, ಅವರು ಮತ್ತು ಅವರ ಸಂತತಿಯವರು ಬೈಬಲ್ ಮಟ್ಟಗಳೊಂದಿಗೆ ಯಾವುದೇ ಒಪ್ಪಂದವನ್ನು ಮಾಡಿಕೊಳ್ಳದೆ ಭೌತಿಕವಾಗಿ ಸಮೃದ್ಧಿಯನ್ನು ಹೊಂದಸಾಧ್ಯವಿರುವ ದೇವಭಯವುಳ್ಳ ಒಂದು ಸಮುದಾಯವನ್ನು ಸ್ಥಾಪಿಸಬೇಕೆಂಬುದೇ ಆಗಿತ್ತು. ಅವರು ಮ್ಯಾಸಚೂಸೆಟ್ಸ್‌ನ ಸೇಲಮ್‌ನಲ್ಲಿ ಬಂದು ನೆಲೆಸಿದ ಸ್ವಲ್ಪದರಲ್ಲಿಯೇ, ಕರಾವಳಿ ತೀರದಲ್ಲಿ ಒಂದು ಚಿಕ್ಕ ಜಮೀನನ್ನು ಪಡೆದುಕೊಂಡರು. ತಮ್ಮ ಆ ಹೊಸ ವಾಸಸ್ಥಳಕ್ಕೆ ಬಾಸ್ಟನ್ ಎಂದು ಹೆಸರಿಟ್ಟರು.
ಕಷ್ಟಕರವಾದ ಒಂದು ಸಮತೋಲನ ಕಾರ್ಯ
ಪ್ಯೂರಿಟನ್‌ರ ನಾಯಕನೂ ಅಧಿಕಾರಿಯೂ ಆದ ಜಾನ್ ವಿಂತ್ರಪ್, ಈ ಹೊಸ ವಸಾಹತುವಿನಲ್ಲಿ ಜನರು ತಮ್ಮ ಖಾಸಗಿ ಸಂಪತ್ತನ್ನು ಹೆಚ್ಚಿಸಿಕೊಳ್ಳುವಂತೆ ಮತ್ತು ಸಾರ್ವಜನಿಕ ಒಳಿತನ್ನು ಮುಂದಿಡುವಂತೆ ಅವರನ್ನು ಉತ್ತೇಜಿಸಲು ತನ್ನಿಂದಾದದ್ದೆಲ್ಲವನ್ನು ಮಾಡಿದನು. ಜನರು ಹಣ ಮತ್ತು ನೈತಿಕತೆ ಇವೆರಡನ್ನೂ ಹೊಂದಿರಬೇಕು ಎಂಬುದು ಅವನ ಇಚ್ಛೆಯಾಗಿತ್ತು. ಆದರೆ ಇದು ಕಷ್ಟಕರವಾದ ಒಂದು ಸಮತೋಲನ ಕಾರ್ಯವಾಗಿ ಪರಿಣಮಿಸಿತು. ಎದುರಾಗಬಹುದಾದ ಪಂಥಾಹ್ವಾನಗಳನ್ನು ಮುನ್‌ನೋಡುತ್ತಾ ಅವನು ತನ್ನ ಒಡನಾಡಿಗಳಿಗೆ, ದೇವಭಯವುಳ್ಳ ಸಮಾಜದಲ್ಲಿ ಐಶ್ವರ್ಯದ ಪಾತ್ರವೇನಾಗಿದೆ ಎಂಬುದರ ಬಗ್ಗೆ ಉದ್ದವಾದ ಭಾಷಣವನ್ನು ನೀಡಿದನು.
ಐಶ್ವರ್ಯದ ಬೆನ್ನಟ್ಟುವಿಕೆಯು ತಾನೇ ತಪ್ಪಾದ ಸಂಗತಿಯೇನಲ್ಲ ಎಂದು ಇತರ ಪ್ಯೂರಿಟನ್ ನಾಯಕರಂತೆ ವಿಂತ್ರಪ್ ಸಹ ನಂಬಿದ್ದನು. ಐಶ್ವರ್ಯವನ್ನು ಹೊಂದಿರುವುದರ ಮುಖ್ಯ ಉದ್ದೇಶವು ಇತರರಿಗೆ ಸಹಾಯಮಾಡುವುದೇ ಆಗಿದೆ ಎಂದು ಅವನು ತರ್ಕಿಸಿದನು. ಆದುದರಿಂದ, ಒಬ್ಬ ವ್ಯಕ್ತಿಯು ಎಷ್ಟು ಹೆಚ್ಚು ಐಶ್ವರ್ಯವಂತನಾಗಿರುತ್ತಾನೊ ಅಷ್ಟು ಹೆಚ್ಚು ಉತ್ತಮ ಕಾರ್ಯವನ್ನು ಮಾಡಶಕ್ತನಾಗಿರುತ್ತಾನೆ. ಇತಿಹಾಸಗಾರರಾದ ಪೆಟ್ರಿಶ ಒಟೂಲ್ ತಿಳಿಸುವುದು: “ಪ್ಯೂರಿಟನ್‌ರಿಗೆ, ಐಶ್ವರ್ಯಕ್ಕಿಂತ ಹೆಚ್ಚು ಉದ್ರೇಕವನ್ನು ಉಂಟುಮಾಡುತ್ತಿದ್ದ ವಿಷಯವು ಇನ್ನೊಂದಿರಲಿಲ್ಲ. ಅವರ ಪ್ರಕಾರ ಐಶ್ವರ್ಯವು ದೇವರ ಆಶೀರ್ವಾದದ ಒಂದು ಸಂಕೇತವಾಗಿದೆ ಮತ್ತು ಅದೇ ಸಮಯದಲ್ಲಿ ದುರಹಂಕಾರ ಎಂಬ ಪಾಪಕ್ಕೆ ಹಾಗೂ . . . ಶರೀರಭಾವದ ಕರ್ಮಕ್ಕೆ ಶಕ್ತಿಯುತವಾದ ಪ್ರಲೋಭನೆಯಾಗಿದೆ.”
ಐಶ್ವರ್ಯ ಮತ್ತು ಸಮೃದ್ಧಿಯಿಂದಾಗಿ ಉಂಟಾಗಸಾಧ್ಯವಿರುವ ಪಾಪಗಳನ್ನು ತಡೆಗಟ್ಟಲು, ಮಿತಸ್ವಭಾವ ಮತ್ತು ಸ್ವನಿಯಂತ್ರಣ ಎಂಬ ಗುಣಗಳನ್ನು ಬೆಳೆಸಿಕೊಳ್ಳುವಂತೆ ವಿಂತ್ರಪ್ ಉತ್ತೇಜಿಸಿದನು. ಆದರೆ ಅತಿ ಬೇಗನೆ ಆ ವಸಾಹತುವಿನಲ್ಲಿ ವಾಸಿಸುತ್ತಿದ್ದ ಇತರ ವ್ಯಕ್ತಿಗಳ ವ್ಯಾಪಾರ ಮನೋಭಾವವು, ದೈವಿಕ ಮೂಲತತ್ತ್ವವನ್ನು ಪಾಲಿಸುವಂತೆ ಮತ್ತು ಒಬ್ಬರನ್ನೊಬ್ಬರು ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ ವಿಂತ್ರಪ್‌ನ ಪ್ರಯತ್ನಗಳೊಂದಿಗೆ ಘರ್ಷಿಸಲಾರಂಭಿಸಿತು. ಇವೆಲ್ಲವನ್ನು ಹೇಳುವ ಮೂಲಕ ವಿಂತ್ರಪನು ತಮ್ಮ ಖಾಸಗಿ ವಿಚಾರಗಳಲ್ಲಿ ತಲೆಹಾಕುತ್ತಿದ್ದಾನೆ ಎಂದು ಪರಿಗಣಿಸಿದ ಭಿನ್ನಾಭಿಪ್ರಾಯವುಳ್ಳ ಪ್ಯೂರಿಟನ್‌ರು ಅವನನ್ನು ವಿರೋಧಿಸಲು ತೊಡಗಿದರು. ನಿರ್ಣಯವನ್ನು ಮಾಡುವುದರಲ್ಲಿ ಭಾಗವಹಿಸಬಲ್ಲ ಒಂದು ಚುನಾಯಿತ ಸಭೆಯನ್ನು ಸ್ಥಾಪಿಸುವಂತೆ ಕೆಲವರು ತಮ್ಮ ಅಭಿಪ್ರಾಯವನ್ನು ತಿಳಿಸಿದರು. ಇತರರು ತಮ್ಮ ಸ್ವಂತ ಇಚ್ಛೆಗಳನ್ನು ಬೆನ್ನಟ್ಟುತ್ತಾ ಹೋಗಶಕ್ತರಾಗುವಂತೆ ಆ ಸ್ಥಳವನ್ನು ಬಿಟ್ಟು ಅದರ ಹತ್ತಿರದ ಕನೆಕ್ಟಿಕಟ್‌ಗೆ ಸ್ಥಳಾಂತರಿಸಿದರು.
“ಮ್ಯಾಸಚೂಸೆಟ್ಸ್‌ನಲ್ಲಿದ್ದ ಪ್ಯೂರಿಟನ್‌ರ ಜೀವನದಲ್ಲಿ ಸದವಕಾಶ, ಸಮೃದ್ಧಿ, ಪ್ರಜಾಪ್ರಭುತ್ವ ಈ ಎಲ್ಲ ವಿಚಾರಗಳು ಪ್ರೇರಕ ಶಕ್ತಿಗಳಾಗಿದ್ದವು ಮತ್ತು ಈ ವಿಚಾರಗಳು, ಸಾರ್ವಜನಿಕರ ಒಳಿತಿಗಾಗಿ ಐಶ್ವರ್ಯವನ್ನು ಉಪಯೋಗಿಸಬೇಕೆಂಬ ವಿಂತ್ರಪ್‌ನ ವಿಚಾರವನ್ನು ಕಡೆಗಣಿಸಿ ವ್ಯಕ್ತಿಗತ ಆಕಾಂಕ್ಷೆಗಳನ್ನು ಹೆಚ್ಚಿಸುವಂತೆ ಒತ್ತನ್ನು ನೀಡಿದವು” ಎಂಬುದಾಗಿ ಒಟೂಲ್ ತಿಳಿಸುತ್ತಾರೆ. 1649ರಲ್ಲಿ ವಿಂತ್ರಪ್ 61ವರುಷ ಪ್ರಾಯದವನಾಗಿದ್ದಾಗ, ಹೆಚ್ಚುಕಡಿಮೆ ಬಿಡಿಗಾಸೂ ಇಲ್ಲದಂಥ ಸ್ಥಿತಿಯಲ್ಲಿ ಮೃತಪಟ್ಟನು. ಅನೇಕ ಕಷ್ಟಸಂಕಟಗಳ ಮಧ್ಯದಲ್ಲಿ ಇಂದೊ ನಾಳೆಯೊ ಎಂಬಂತೆ ತೋರುತ್ತಿದ್ದ ವಸಾಹತು ನಾಶವಾಗದೆ ಉಳಿಯಿತಾದರೂ, ಒಂದು ಉತ್ತಮ ಜಗತ್ತನ್ನು ಸ್ಥಾಪಿಸುವ ವಿಂತ್ರಪ್‌ನ ಕನಸು ನನಸಾಗಲಿಲ್ಲ.
ಹುಡುಕಾಟವು ಮುಂದುವರಿಯುತ್ತಿದೆ
ಜಾನ್ ವಿಂತ್ರಪ್ ಕಂಡ ಒಂದು ಉತ್ತಮ ಜಗತ್ತಿನ ಆದರ್ಶ ಕನಸು ಅವನೊಂದಿಗೆ ಮಣ್ಣುಪಾಲಾಗಲಿಲ್ಲ. ಪ್ರತಿ ವರುಷ ನೂರಾರು ಸಾವಿರಗಳಷ್ಟು ಜನರು ಒಂದು ಉತ್ತಮ ಜೀವನವನ್ನು ಕಂಡುಕೊಳ್ಳುವ ನಿರೀಕ್ಷೆಯಿಂದ ಆಫ್ರಿಕ, ದಕ್ಷಿಣ ಏಷಿಯಾ, ಪೂರ್ವ ಯೂರೋಪ್ ಮತ್ತು ಲ್ಯಾಟಿನ್ ಅಮೆರಿಕದಿಂದ ಬೇರೆ ಸ್ಥಳಗಳಿಗೆ ವಲಸೆಹೋಗುತ್ತಿದ್ದಾರೆ. ಇವರಲ್ಲಿ ಕೆಲವರು, ಪ್ರತಿ ವರುಷ ಪ್ರಕಟವಾಗುತ್ತಿರುವ, ಧನಿಕರಾಗುವ ಕೀಲಿಕೈ ತಮ್ಮಲ್ಲಿದೆಯೆಂದು ವಚನಕೊಡುವ ನೂರಾರು ಹೊಸ ಪುಸ್ತಕಗಳು, ಸೆಮಿನಾರ್‌ಗಳು ಹಾಗೂ ವೆಬ್ ಸೈಟ್‌ಗಳಿಂದ ಪ್ರಭಾವಿತರಾಗಿದ್ದಾರೆ. ಇದರರ್ಥ, ಇಂದು ಸಹ—ಆಶಾದಾಯಕವಾಗಿ ತಮ್ಮ ನೈತಿಕ ಮೌಲ್ಯಗಳನ್ನು ಬದಿಗೊತ್ತದೆ—ಅನೇಕರು ಹಣವನ್ನು ಗಳಿಸಲು ಹೆಣಗಾಡುತ್ತಿದ್ದಾರೆ ಎಂಬುದು ಸ್ಪಷ್ಟ.
ಆದರೆ ನಿಜ ಹೇಳಬೇಕೆಂದರೆ, ಪರಿಣಾಮಗಳು ನಿರಾಶಾದಾಯಕವಾಗಿವೆ. ಐಶ್ವರ್ಯವನ್ನು ಬೆನ್ನಟ್ಟುವ ಹೆಚ್ಚಿನವರು ಅನೇಕವೇಳೆ ಅಂತಿಮವಾಗಿ ತಮ್ಮ ಮೂಲತತ್ತ್ವಗಳನ್ನು ತ್ಯಾಗಮಾಡುತ್ತಾರೆ ಮತ್ತು ಕೆಲವೊಮ್ಮೆ ತಮ್ಮ ನಂಬಿಕೆಯನ್ನು ಸಹ ಧನವೆಂಬ ಬಲಿಪೀಠದ ಮೇಲೆ ಅರ್ಪಿಸುತ್ತಾರೆ. ಆದುದರಿಂದ ನೀವು ಹೀಗೆ ಕೇಳಬಹುದು: “ಒಬ್ಬ ವ್ಯಕ್ತಿಯು ನೈತಿಕ ಮೂಲತತ್ತ್ವಗಳಿಗನುಸಾರ ಜೀವಿಸುತ್ತಾ ಅದೇ ಸಮಯದಲ್ಲಿ ಐಶ್ವರ್ಯವಂತನಾಗಿಯೂ ಇರಸಾಧ್ಯವಿದೆಯೊ? ಭೌತಿಕವಾಗಿಯೂ ಆಧ್ಯಾತ್ಮಿಕವಾಗಿಯೂ ಸಮೃದ್ಧವಾಗಿರುವ ದೇವಭಯವುಳ್ಳ ಸಮಾಜವು ಎಂದಾದರೂ ಸ್ಥಾಪಿಸಲ್ಪಡುವುದೊ?” ಮುಂದಿನ ಲೇಖನವು ತೋರಿಸುವಂತೆ, ಈ ಎಲ್ಲ ಪ್ರಶ್ನೆಗಳಿಗೆ ಬೈಬಲ್ ಉತ್ತರಗಳನ್ನು ನೀಡುತ್ತದೆ.
[ಪಾದಟಿಪ್ಪಣಿ]
^ ಪ್ಯಾರ. 3 ತಮ್ಮ ಚರ್ಚನ್ನು ರೋಮನ್ ಕ್ಯಾಥೊಲಿಕರ ಪ್ರಭಾವದಿಂದ ಸಂಪೂರ್ಣವಾಗಿ ಶುದ್ಧೀಕರಿಸಬೇಕೆಂಬ ಇಚ್ಛೆಯಿದ್ದ, ಚರ್ಚ್ ಆಫ್ ಇಂಗ್ಲೆಂಡ್‌ನಲ್ಲಿದ್ದ ಪ್ರಾಟೆಸ್ಟೆಂಟರಿಗೆ 16ನೇ ಶತಮಾನದಲ್ಲಿ ಪ್ಯೂರಿಟನ್‌ರೆಂಬ ಹೆಸರನ್ನು ಕೊಡಲಾಗಿತ್ತು.
[ಪುಟ 3ರಲ್ಲಿರುವ ಚಿತ್ರ ಕೃಪೆ]
ಹಡಗುಗಳು: The Complete Encyclopedia of Illustration/J. G. Heck; ವಿಂತ್ರಪ್: Brown Brothers