ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಬ್ಬ ಮೆಸ್ಸೀಯನ ಅಗತ್ಯ ನಮಗಿದೆಯೊ?

ಒಬ್ಬ ಮೆಸ್ಸೀಯನ ಅಗತ್ಯ ನಮಗಿದೆಯೊ?

ಒಬ್ಬ ಮೆಸ್ಸೀಯನ ಅಗತ್ಯ ನಮಗಿದೆಯೊ?

ನೀವು ಸಹ ಈ ಪ್ರಶ್ನೆಯನ್ನು ಕೇಳಬಹುದು, “ನಮಗೆ ಒಬ್ಬ ಮೆಸ್ಸೀಯನ ಅಗತ್ಯವಿದೆಯೊ?” ಹೌದು, ಒಬ್ಬ ಮೆಸ್ಸೀಯನು ನಿಮ್ಮ ಮೇಲೆ ಯಾವುದೇ ನೈಜ ಪರಿಣಾಮವನ್ನು ಬೀರಸಾಧ್ಯವಿದೆಯೊ ಎಂದು ಪ್ರಶ್ನಿಸಿಕೊಳ್ಳುವುದು ತರ್ಕಸಮ್ಮತವಾಗಿರುವುದು.

ನೀವು ಯಾರ ಅಭಿಪ್ರಾಯವನ್ನು ಗೌರವಿಸಬಹುದೋ ಅಂಥವರಲ್ಲಿ ಕೆಲವರು, ಇದಕ್ಕೆ ಉತ್ತರವು ಸುಸ್ಪಷ್ಟ ಮತ್ತು ಖಂಡಿತ ಎಂಬ ಆಶ್ವಾಸನೆಯನ್ನು ನಿಮಗೆ ಕೊಡಬಹುದು. ಅದೇನೆಂದರೆ, ಬೇರೆ ಎಲ್ಲರಿಗೂ ಹೇಗೆ ಮೆಸ್ಸೀಯನ ಅಗತ್ಯವಿದೆಯೋ ಹಾಗೆಯೇ ನಿಮಗೂ ನಿಶ್ಚಿತವಾಗಿ ಮೆಸ್ಸೀಯನ ಅಗತ್ಯವಿದೆ. ಯೆಹೂದಿ ನಿಯಮದಲ್ಲಿ ಪರಿಣತನಾಗಿದ್ದ ಪ್ರಥಮ ಶತಮಾನದ ಒಬ್ಬನು ಮೆಸ್ಸೀಯನ ಕುರಿತಾಗಿ ಬರೆದುದು: “ನಿಶ್ಚಯವಾಗಿ ದೇವರ ವಾಗ್ದಾನಗಳು ಎಷ್ಟಿದ್ದರೂ ಕ್ರಿಸ್ತನಲ್ಲೇ ದೃಢವಾಗುತ್ತವೆ.” ಹೀಗೆ, ಭೂಮಿಯ ಎಲ್ಲ ಜನಾಂಗಗಳನ್ನು ಆಶೀರ್ವದಿಸುವ ನಮ್ಮ ಸೃಷ್ಟಿಕರ್ತನ ಉದ್ದೇಶದಲ್ಲಿ ಮೆಸ್ಸೀಯನು ವಹಿಸುವ ಪ್ರಮುಖ ಪಾತ್ರವನ್ನು ಅವನು ಎತ್ತಿತೋರಿಸಿದನು. (2 ಕೊರಿಂಥ 1:20) ಮೆಸ್ಸೀಯನ ಪಾತ್ರವು ಎಷ್ಟು ಅತ್ಯಾವಶ್ಯಕವಾದದ್ದಾಗಿದೆ ಎಂದರೆ, ಅವನ ಆಗಮನ ಮತ್ತು ಭೂಮಿಯ ಮೇಲಿನ ಜೀವನವು ಬೈಬಲ್‌ ಪ್ರವಾದನೆಯ ಕೇಂದ್ರಬಿಂದುವಾಗಿದೆ. ಕಳೆದ 70 ವರ್ಷಗಳಲ್ಲಿ ಲಕ್ಷಾಂತರ ಮಂದಿಯಿಂದ ಉಪಯೋಗಿಸಲ್ಪಟ್ಟ ಒಂದು ಕೈಪಿಡಿಯಲ್ಲಿ ಹೆನ್ರಿ ಏಚ್‌. ಹ್ಯಾಲಿ ಒತ್ತಿಹೇಳಿದ್ದು: “ಹಳೆಯ ಒಡಂಬಡಿಕೆಯು [ಮೆಸ್ಸೀಯನ] ಬರೋಣಕ್ಕಾಗಿ ನಿರೀಕ್ಷಣೆಯನ್ನು ಹುಟ್ಟಿಸಲು ಮತ್ತು ಮಾರ್ಗವನ್ನು ಸಿದ್ಧಪಡಿಸಲಿಕ್ಕಾಗಿ ಬರೆಯಲ್ಪಟ್ಟಿತು.” ಆದರೆ ಅವನ ಬರೋಣವು ಅಗತ್ಯವಾದದ್ದಾಗಿದೆಯೊ? ನಾವು ಏಕೆ ಈ ವಿಷಯದಲ್ಲಿ ಆಸಕ್ತಿಯುಳ್ಳವರಾಗಿರಬೇಕು?

ವಾಸ್ತವದಲ್ಲಿ “ಮೆಸ್ಸೀಯ” ಎಂಬುದರ ಅರ್ಥ “ಅಭಿಷಿಕ್ತನು” ಎಂದಾಗಿದೆ ಮತ್ತು “ಕ್ರಿಸ್ತ” ಎಂಬ ಚಿರಪರಿಚಿತ ಪದದ ಸಮನಾರ್ಥಕ ಶಬ್ದವಾಗಿದೆ. ಎನ್‌ಸೈಕ್ಲಪೀಡೀಯ ಬ್ರಿಟ್ಯಾನಿಕದ 1970ರ ಮುದ್ರಣವು ಯಾರನ್ನು “ಸರ್ವೋತ್ಕೃಷ್ಟ ವಿಮೋಚಕ” ಎಂದು ಸೂಚಿಸುತ್ತದೋ ಅವನು, ಪ್ರಥಮ ಮಾನವ ಜೊತೆಯಾದ ಆದಾಮಹವ್ವರ ಭಕ್ತಿರಹಿತ ಕೃತ್ಯಗಳ ಕಾರಣದಿಂದ ಬರಬೇಕಾಯಿತು. ಆದಾಮಹವ್ವರು ಪರದೈಸ್‌ನಲ್ಲಿ ಅನಂತವಾಗಿ ಜೀವಿಸುವ ಆನಂದಕರ ಪ್ರತೀಕ್ಷೆಯೊಂದಿಗೆ ಪರಿಪೂರ್ಣರಾಗಿ ಸೃಷ್ಟಿಸಲ್ಪಟ್ಟಿದ್ದರು, ಆದರೆ ಅವರು ಈ ಪ್ರತೀಕ್ಷೆಯನ್ನು ಕಳೆದುಕೊಂಡರು. ಪಿಶಾಚನಾದ ಸೈತಾನನೆಂದು ತದನಂತರ ಕುಖ್ಯಾತನಾದ ಒಬ್ಬ ದಂಗೆಕೋರ ದೇವದೂತನು, ಅವರ ಸೃಷ್ಟಿಕರ್ತನು ತುಂಬ ಕಟ್ಟುನಿಟ್ಟಿನವನು ಮತ್ತು ಯಾವುದು ಒಳ್ಳೇದು, ಯಾವುದು ಕೆಟ್ಟದ್ದು ಎಂಬುದನ್ನು ಸ್ವತಃ ತಮ್ಮಷ್ಟಕ್ಕೇ ನಿರ್ಧರಿಸುವ ಮೂಲಕ ಅವರು ಹೆಚ್ಚು ಯಶಸ್ಸನ್ನು ಪಡೆಯಸಾಧ್ಯವಿದೆ ಎಂದು ಸೂಚಿಸಿ ಮಾತಾಡಿದನು.​—⁠ಆದಿಕಾಂಡ 3:1-5.

ಹವ್ವಳು ವಂಚನೆಗೊಳಗಾಗಿ ಈ ಸುಳ್ಳನ್ನು ನಂಬಿದಳು. ಆದಾಮನು ದೇವರಿಗೆ ತೋರಿಸಬೇಕಾದ ನಿಷ್ಠೆಗಿಂತಲೂ ಹೆಚ್ಚಾಗಿ ತನ್ನ ಹೆಂಡತಿಯ ಸಾಹಚರ್ಯವನ್ನು ಅಮೂಲ್ಯವಾಗಿ ಪರಿಗಣಿಸುತ್ತಾ, ಪಿಶಾಚನಿಂದ ಚಿತಾಯಿಸಲ್ಪಟ್ಟ ಆ ದಂಗೆಯಲ್ಲಿ ಸಹಾಪರಾಧಿಯಾದನು. (ಆದಿಕಾಂಡ 3:6; 1 ತಿಮೊಥೆಯ 2:14) ತಮ್ಮ ಕೃತ್ಯಗಳಿಂದ ಅವರು, ಪರದೈಸದಂಥ ಪರಿಸರದಲ್ಲಿ ಅನಂತವಾಗಿ ಜೀವಿಸುವ ಸ್ವಂತ ಪ್ರತೀಕ್ಷೆಯನ್ನು ತೊರೆದರು ಮಾತ್ರವಲ್ಲದೆ ತಮ್ಮ ಅಜಾತ ಪೀಳಿಗೆಗೂ ಪಾಪ ಮತ್ತು ಅದರ ಪರಿಣಾಮವಾಗಿರುವ ಮರಣವನ್ನು ಬಿಟ್ಟುಹೋದರು.​—⁠ರೋಮಾಪುರ 5:⁠12.

ಆ ಕೂಡಲೆ ನಮ್ಮ ಸೃಷ್ಟಿಕರ್ತನಾದ ಯೆಹೋವನು, ಈ ದಂಗೆಯಿಂದ ಆರಂಭವಾದ ಘಟನೆಗಳ ಸರಮಾಲೆಯ ಕೆಟ್ಟ ಪರಿಣಾಮಗಳನ್ನು ರದ್ದುಪಡಿಸಲಿಕ್ಕಾಗಿ ಸಾಧನೋಪಾಯವನ್ನು ಕಂಡುಕೊಂಡನು. ಸಮಯಾನಂತರ ಮೋಶೆಯ ಧರ್ಮಶಾಸ್ತ್ರದಲ್ಲಿ ಯಾವುದು ಒಂದು ಕಾನೂನುಬದ್ಧ ಮೂಲತತ್ತ್ವವಾಗಲಿತ್ತೋ ಅದರ ಮೂಲಕ, ಅಂದರೆ ಅನುರೂಪವಾದದ್ದನ್ನು ಒದಗಿಸುವ ಮೂಲಕ, ಆತನು ರಾಜಿಮಾಡಿಕೊಳ್ಳುವಿಕೆಯನ್ನು ಪೂರೈಸಲಿದ್ದನು. (ಧರ್ಮೋಪದೇಶಕಾಂಡ 19:21; 1 ಯೋಹಾನ 3:⁠8) ಸೃಷ್ಟಿಕರ್ತನು ಮಾನವ ಕುಟುಂಬಕ್ಕೆ ಉದ್ದೇಶಿಸಿದ್ದಂತೆ ಆದಾಮಹವ್ವರ ದುರವಸ್ಥೆಗೀಡಾಗಿರುವ ವಂಶಜರಲ್ಲಿ ಯಾರೇ ಆಗಲಿ ಪರದೈಸ್‌ ಭೂಮಿಯಲ್ಲಿ ಅನಂತ ಜೀವನವನ್ನು ಪಡೆದುಕೊಳ್ಳಬೇಕಾದರೆ, ಅನುರೂಪವಾದದ್ದನ್ನು ಒದಗಿಸುವ ಆ ಕಾನೂನುಬದ್ಧ ಮೂಲತತ್ತ್ವವನ್ನು ಕಾರ್ಯರೂಪಕ್ಕೆ ತರಬೇಕಾಗಿತ್ತು. ಇದು ನಮ್ಮನ್ನು ಮೆಸ್ಸೀಯನ ಕಡೆಗೆ ನಡೆಸುತ್ತದೆ.

ಪಿಶಾಚನನ್ನು ಖಂಡಿಸುತ್ತಾ ಯೆಹೋವ ದೇವರು ಪ್ರಥಮ ಬೈಬಲ್‌ ಪ್ರವಾದನೆಯಲ್ಲಿ ಹೀಗೆ ಉದ್ಘೋಷಿಸಿದನು: “ನಿನಗೂ ಈ ಸ್ತ್ರೀಗೂ, ನಿನ್ನ ಸಂತಾನಕ್ಕೂ ಈ ಸ್ತ್ರೀಯ ಸಂತಾನಕ್ಕೂ ಹಗೆತನವಿರುವ ಹಾಗೆ ಮಾಡುವೆನು. ಈಕೆಯ ಸಂತಾನವು ನಿನ್ನ ತಲೆಯನ್ನು ಜಜ್ಜುವದು, ನೀನು ಅದರ ಹಿಮ್ಮಡಿಯನ್ನು ಕಚ್ಚುವಿ.” (ಆದಿಕಾಂಡ 3:15) ಬೈಬಲ್‌ ವಿದ್ವಾಂಸನೊಬ್ಬನು ತಿಳಿಸಿದ್ದೇನೆಂದರೆ, “ಶಾಸ್ತ್ರವಚನಗಳು ಸಾದರಪಡಿಸುವಂತೆ ಮೆಸ್ಸೀಯನಿಗೆ ಸಂಬಂಧಿಸಿದ ವಾಗ್ದಾನಗಳ ಕಥೆಯು [ಈ] ಹೇಳಿಕೆಯೊಂದಿಗೆ ಆರಂಭಗೊಳ್ಳುತ್ತದೆ.” ಇನ್ನೊಬ್ಬ ವಿದ್ವಾಂಸನು ಹೇಳಿದಂತೆ, ಮೆಸ್ಸೀಯನು ಪ್ರಥಮ ಮಾನವರ ಪಾಪದಿಂದ ಉಂಟಾದ “ಸಂಪೂರ್ಣ ವಿಪತ್ತನ್ನು ಸರಿಪಡಿಸುವ” ಮತ್ತು ಅದೇ ಸಮಯದಲ್ಲಿ ಮಾನವಕುಲಕ್ಕೆ ಆಶೀರ್ವಾದಗಳನ್ನು ತರಲಿಕ್ಕಾಗಿ ದೇವರಿಂದ ಉಪಯೋಗಿಸಲ್ಪಡುವ ಸಾಧನವಾಗಿದ್ದಾನೆ.​—⁠ಇಬ್ರಿಯ 2:14, 15.

ಆದರೆ, ಸದ್ಯಕ್ಕೆ ಮಾನವಕುಲವು ನಿಶ್ಚಯವಾಗಿಯೂ ಆಶೀರ್ವಾದಗಳನ್ನು ಪಡೆದುಕೊಳ್ಳುತ್ತಿಲ್ಲ ಎಂಬುದು ನಿಮ್ಮ ಅರಿವಿಗೆ ಬಂದಿರಬಹುದು. ಅದಕ್ಕೆ ಬದಲಾಗಿ, ಮಾನವಕುಲವು ಅತ್ಯಧಿಕ ಆಶಾಹೀನ ಹಾಗೂ ಹತಾಶೆಯ ಸ್ಥಿತಿಯಲ್ಲಿ ಸಿಕ್ಕಿಬಿದ್ದಿದೆ. ಹೀಗಿರುವುದರಿಂದ, ದ ವರ್ಲ್ಡ್‌ ಬುಕ್‌ ಎನ್‌ಸೈಕ್ಲಪೀಡೀಯ ತಿಳಿಸುವಂತೆ, “ಅನೇಕ ಯೆಹೂದ್ಯರು ಒಬ್ಬ ಮೆಸ್ಸೀಯನು ಬರಲಿಕ್ಕಿದ್ದಾನೆಂದು ಈಗಲೂ ನಿರೀಕ್ಷಿಸುತ್ತಿದ್ದಾರೆ” ಮತ್ತು ಅವನು “ಅನ್ಯಾಯವನ್ನು ಸರಿಪಡಿಸುವನು ಹಾಗೂ ಜನರ ವೈರಿಗಳನ್ನು ಸದೆಬಡಿಯುವನು” ಎಂದು ನೆನಸುತ್ತಿದ್ದಾರೆ. ಆದರೆ ಮೆಸ್ಸೀಯನು ಈಗಾಗಲೇ ಬಂದಿದ್ದಾನೆ ಎಂದು ಬೈಬಲ್‌ ತಿಳಿಸುತ್ತದೆ. ಬೈಬಲ್‌ ಏನು ಹೇಳುತ್ತದೋ ಅದನ್ನು ನಂಬಲು ಕಾರಣವಿದೆಯೋ? ಮುಂದಿನ ಲೇಖನವು ಉತ್ತರಿಸುವುದು.